ಶ್ರೀಸುಕುಮಾರನಾದಾರಂ
ವಾಸವಮಹಿಮಾವಿಲಾಸನನುಪಮಸೌಖ್ಯಾ
ವಾಸಂ ರೂಪಮನೋಜಂ
ಭಾಸುರತೇಜಂ ಸರಸ್ವತೀಮುಖಮುಕುರಂ       || ೧ ||

ಜಗತೀನಾಥನನಾ ಕುಮಾರನೊಸೆದಾಕರ್ಣಾಂತವಿಶ್ರಾಂತ ದೃ
ಷ್ಟಿಗಳಿಂ ನೋಡುತುಮೆಯ್ದೆ ವರ್ಪುದುಮಪೂರ್ವಾಲೋಕದಿಂದಾಗಳಾ
ಮೃಗರಾಜಾಸನದಿಂದಮೆರ್ದು ಮುದದಿಂದಂ ದ್ರಾಘಿಮಶ್ಲಾಘಿಬಾ
ಹುಗಳಿಂದಂ ತೆಗೆದಪ್ಪಿಕೊಂಡನರಸಂ ಶ್ರೀರೂಪಕಂದರ್ಪನಂ          || ೨ ||

ವ || ಆಗಳಾ ಯಶೋಭದ್ರಾಂಬಿಕೆ ನಿಜನಂದನನ ಮುಖಾರವಿಂದಮನಾನಂದಂ ಬೆರಸು ನೋಡಿ

ಪುದಿದೞ್ತಿಯಿಂದೆ ಪೊಡೆಮಡು
ವುದು ದಯೆಗೆಯ್ ಮಹಾಪ್ರಸಾದಮೆಂಬುದು ಜೀಯೆಂ
ಬುದು ದೇವೆಂಬುದು ಮಹಿಮಾ
ಸ್ಪದ ಬೆಸನೇನೆಂಬುದೀಗಳೀಯವಸರದೊಳ್    || ೩ ||

ನಮ್ಮಾಳ್ದಂ ಸ್ವಾಮಿ ನರೇಂ
ದ್ರಂ ಮಗನೆ ಕೂರ್ಮೆಯಿಂದೆ ನಿನ್ನಂ ನೋಡಲ್
ತಾಮ್ಮನೆಗೆ ಬಂದನದಱಿಂ
ನೀಮ್ಮೆಱೆವುದು ನಿನ್ನ ಭಕ್ತಿಯಂ ಶಕ್ತಿಯುಮಂ || ೪ ||

ವ || ಎಂಬುದುಮರಸನೀಗಳಿದಱೊಳೆಲ್ಲಮೇನುಸಿರದಿರಿಮೆಂದು ಕುಮಾರನಂ ತನ್ನೇಱೆದ ಮಣಿಮಯಸುಖಾಸನದೊಳರ್ಧಾಸನಮಿರಿಸುವುದುಂ

ಸಾರತರರತ್ನಮಯಕೇ
ಯೂರಂ ಕರ್ಣಾಂತದೊಳ್ಪಳಂಚಲೆಯೆ ಮಹೋ
ದಾರಗುಣಂ ವೃಷಾಭಾಂಕನೊ
ಳೋರಾಸನಮಿರ್ದನಾಗಳಾಸ್ತಾಯಿಕೆಯೊಳ್      || ೫ ||

ವ || ಆ ಪ್ರಪ್ರಸ್ತಾವದೊಳ್

ಅತಿಸಿತಸರ್ಷಪಶೇಷಾ
ಕ್ಷತಂಗಳಂ ಮಂಗಳಾರ್ಥದಿಂ ಪೆರ್ವೆಂಡಿರ್
ಸತತೋತ್ಸವದಿಂದಂ ಪರ
ಸಿ ತಳಿದರಾನಂದಪಟಹಮೊಡನೆಸೆವಿನೆಗಂ         || ೬ ||

ಮೊೞಗುವ ಬದ್ದವಣಂ
ಗಳ ಬೆಳಗುವ ಸೊಡರ್ಗಳ ತಗುಳ್ದು ದೆಸೆದೆಸೆಗೆತ್ತಂ
ಮಿಳಿರ್ವ ದುಕೂಲದ ಗುಡಿಗಳ
ವಿಳಾಸಮೊಪ್ಪಿದುದು ತನ್ನಿವಾಸಾಂತರದೊಳ್  || ೭ ||

ವ || ಆಗಳಾಳೋಕನಕುತೂಹಳದಿಂ ಮನೋಜರಾಜಾವೇಶಮಂತ್ರದಿಂ ಸ್ತೋಭಂಗೊಂಡಂತೆ ಪುರಕ್ಷೋಭಮಾಗೆ ಪೌರವಾರವಿಲಾಸಿನಿಯರಾತ್ಮೀಯಭವನ ವ್ಯಾಪಾರ ಚಿಂತಾಂತರಾಳಾಪಂಗಳಂ ಮಱೆದು ಸುಕುಮಾರಗೃಹದ್ವಾರ ಗೋಪುರಾಟ್ಟಾಳ ಕಪ್ರಾಸಾದಕೂಟಕೋಟಿಗಳನೇಱಿ ನೋೞ್ಪಲ್ಲಿ

ಮುಡಿವ ನೆವದಿಂದೆ ತನ್ನಯ
ಮುಡಿಯಂ ಮೇಲ್ಕೊಳ್ವ ನೆವದೆ ಮೊಲೆಯಂ ಪೆಱರೊಳ್
ನುಡಿವ ನೆವದಿಂದೆ ಪಲ್ಗಳ
ಬೆಡಂಗನೊರ್ವಳ್ ವಿಲಾಸದಿಂದಂ ಮೆಱೆದಳ್   || ೮ ||

ವ || ಮತ್ತಮೊರ್ವಳ್

ಧವಳಾಕ್ಷಿ ಸುಧಾಧವಳಿತ
ಗವಾಕ್ಷಜಾಳಾಂತರಂಗಳೊಳ್ ವದನಮನಿ
ಟ್ಟವಳೋಕಿಸುವವಳಿಂದಂ
ಧವಳಿಸಿದುವೊ ಕಣ್ಣವೆಳ್ಪು ದಿಗುಭಿತ್ತಿಗಳಂ     || ೯ ||

ಅಮಿತಗುಣಾಧಾರನನಾ
ಕುಮಾರನಂ ದೂರದಿಂದೆ ಕಾಣಲೊಡಂ ತ
ನ್ನುಮನೇನೆಂದೆಱಿಯದೆ ವಿ
ದ್ರುಮೆಯೋಷ್ಟೋಷ್ಠೆಮು………..  || ೧೦ ||

ವ || ಮತ್ತಮೊರ್ವಳ್ ವಿದಗ್ಧವಿಲಾಸಿನಿ

ನೆಲೆಮೊಲೆಗಳ್ ಕದಕ್ಕದಿಸೆ ಮೆಲ್ಲಡಿಗಳ್ ತಡಮಾಗಿ ತೋಱೆ ಬೆ
ಬ್ಬಳ ನಡುಬಳ್ಕೆ ವೃತ್ತಕಟಿ ಕೆತ್ತೆ ಬೞಲ್ಮುಡಿ ಜೋಲ್ದು ನೇಲೆ ಸಂ
ಚಳದಳಕಾಳಿಗಳ್ ಮಿಳಿರ್ದು ನರ್ತಿಸೆ ನರ್ತಕಿವೋಲ್ ನಿಕಾಮಕೋ
ಮಳೆ ಪರಿತಂದು ದಂಗದೊಳೆ ನಿಂದು ಕುಮಾರನನಂದು ನೋಡಿದಳ್            || ೧೧ ||

ತಳದಂದಂ ಕೆಂದಳಿರೆನೆ
ಪೊಳೆವಲರ್ಗಣ್ ಬಾಸಿಗಂಗಳೆನೆ ಕುಚಕಲಶಂ
ಕಳಶಮೆನೆ ನೋಡಿದಳ್ ಮಂ
ಗಳಲಕ್ಷ್ಮೀಲೀಲೆಯಿಂ ಕುಮಾರನನೊರ್ವಳ್      || ೧೨ ||

ಆಳುಕುವ ನಡು ಘನಕುಚಯುಗ
ನೊಳು ನಸುಸೆಳೆಯುತ್ತಮಿರ್ಪಿನಂ ರಾಗದಿನಾ
ಗಳು ನೀಡುಂ ಪರಿತಂದೋ
ರ್ವಳು ನೋಡಿದಳೊಲ್ದು ರೂಪವಿದ್ಯಾಧರನಂ || ೧೩ ||

ತಳ್ಪೊಯ್ದು ತರಳನಯನದ
ಬೆಳ್ಪು ತಳತ್ತಳಿಸಿ ಮಿಳಿರ್ದು ಪೊಳೆಯೆ ಗವಾಕ್ಷಂ
ಗಳ್ಪಜ್ಜಳಿಪಿನಮಂದೊ
ರ್ವಳ್ಪರಿಕಿಸಿ ತೋರ್ದಳಭಿನವಾಂಗೋದ್ಭವನಂ  || ೧೪ ||

ಪೆಱಳೊರ್ವಳ್ ನೋೞ್ಪೆಡೆಯೊಳ್
ಪೆಱಳೊರ್ವಳ್ ನಿಲೆ ಕುಮಾರನಂ ನೆಱೆ ನೋಡಲ್
ಪೆಱದೆಸೆವ ಮೀನಲೋಚನೆ
ಮಱುಗಿದಳಱುನೀರ ಮೀನ ತೆಱದಿಂದಾಗಲ್    || ೧೫ ||

ವ || ಮತ್ತೋರ್ವಳಭಿನವಯೌವ್ವನಮದಾವಷ್ಟಂಭೆಯುಂ ಕುಚಯುಗಕುಂಭ ಸಂಭೃತಕುಂಕುಮಪಂಕಾಂಕಿತೆಯುಂ ನಿರತಿಶಯರೂಪವಿಲಾಸನಿರಂಕುಶೆಯುಂ ಕರ್ಪೂರಧೂಲೀಧೂಸರಿತಶರೀರೆಯುಂ ಕಾಮಿಜನಸೇನಾಮನೋಮರ್ದನಪರಿಣತೆ ಯುಮೆನಿಸಿ

ವಿನುತ ಜಘನಾಶ್ರಯಂ ಜೋ
ಲ್ದು ನಿಲೆ ಕಿಱುದೊಡೆಗೆ ನಿಗಳಮಿಕ್ಕಿದ ಗಜಮೆಂ
ಬಿನೆಗಂ ಗಜಗಾಮಿನಿ ಬಂ
ದು ನೋಡಿದಳ್ ಭವ್ಯಸೇವ್ಯಚಿಂತಾಮಣಿಯಂ  || ೧೬ ||

ವ || ಮತ್ತೊರ್ವಳತಿಗರ್ವಪರ್ವತಾರೂಢೆ

ಮನಸಿಜನಂ ಮರುಳ್ಚುವೆನನಂಗನನಂಜಿಸುವೆಂ ಮನೋಜನಂ
ಮನೆವೆಸಕೆಯ್ಸುವೆಂ ಮದನನಂ ಮದಗರ್ವದಿನಾಳ್ವೆನೆಂಬ ತ
ಕ್ಕಿನ ಸೊಬಗಿಂಗಿಮಿಕ್ಕೆನೆಲೆಯಾದ ವಿಲಾಸಿನಿ ಬಂದು ನಿಂದು ಭೋಂ
ಕೆನೆ ನೆಱೆ ಸೋಲ್ತು ಮೆಯ್ಮಱೆದು ಮೆಲ್ಲನೆ ನೋಡಿದಳಾ ಕುಮಾರನಂ       || ೧೭ ||

ವ || ಮತ್ತಮೊರ್ವಳ್ ಕಂದರ್ಪವಿಜಯಕದಲಿಕಾವಿಲಾಸಮಂ ತಾಳ್ದಿ

ನುತಕಾಂಚೀದಾಮಮಂ ಕೋಮಲ ಕರಯುಗಳಂ ಕೆನ್ನೆಯಂ ವಿಭ್ರಮಭ್ರೂ
ಲತೆ ಬೆನ್ನಂ ಕೇಶಪಾಶಂ ನೊಸಲನೆಸೆವ ನೀಲಾಲಕಂ ಮೇಲುದಂ ವಿ
ಶ್ರುತಲಕ್ಷ್ಮೀಪೂರ್ಣ್ನಕುಂಭೋಪಮಕುಚಮಲೆಯುತ್ತಿರ್ಪಿನಂ ವೈಶ್ಯವಂಶೋ
ರ್ಜಿತನಂ ಶ್ರೀರೂಪಕಂದರ್ಪನನನುನಯದಿಂ ನೋಡಲೆಯ್ತಂದಳೊರ್ವಳ್      || ೧೮ ||

ವ || ಮತ್ತಮೊರ್ವಳ್ ವಿಮುಗ್ಧೆ ರೂಪವಿದ್ಯಾಧರನ ರೂಪಾತಿಜಶಯವಿಲೋಕ ನಮಾತ್ರದಿಂ ನೇತ್ರಾಂಬುಜಪತ್ರಂಗಳಂ ಕರತಳಪಲ್ಲವಂಗಳಿಂ ಮುಚ್ಚಿ ಮನಃಸಂ ಕಲ್ಪಸಂಪರ್ಕಸಂಭೋಗಸುಖಾಸಕ್ತೆಯಾಗಿರ್ಪುದುಮಾಕೆಯ ಕೆಳದಿ ಕಂಡು ವಿಸ್ಮಯಾಪನ್ನಮಾನಸೆಯಾಗಿ

ಸುದತೀ ಕಣ್ಗಳನೇಕೆ ಕೈಯತಳದಿಂ ಮುಚ್ಚಿರ್ಪೆಯೆಂದಾಗಳೀ
ಮದನಂ ಪೊಕ್ಕು ಮದೀಯ ನೇತ್ರಯುಗಳ ದ್ವಾರಂಗಳಿಂ ಚಿತ್ತಗೇ
ಹದೊಳೋತಿರ್ದವನೆನ್ನ ಕಣ್ದೆಱೆಯೆ ತದ್ವಾರಂಗಳಿಂ ಪೋಕುಮೆಂ
ಬುದನೆನ್ನೊಳ್ ಬಗೆದೀಗಳಕ್ಷಿಯುಗಮಂ ಮುಚ್ಚಿರ್ದೆನುಂತಿರ್ಪೆನೇ  || ೧೯ ||

ವ || ಎಂದು ತನ್ನ ವಿಮುಗ್ಧಸ್ವಭಾವಮಂ ನಲ್ಮೆಯಳಿಪಿನಲಂಪಲಿಕೆಯುಮಂ ತೋಱಿ ನುಡಿವುದುಂ ಮತ್ತೊರ್ವಳ್

ಮಣಿಮಯಭಿತ್ತಿಯೊಳ್ಪೊಳೆದು ತೋರ್ಪ ಕುಮಾರನ ರೂಪನಾಗಳಾ
ಕ್ಷಣದೊಳೆ ನೋಡಿ ಪೊರ್ದಿದೊಡೆ ತನ್ನಯ ರೂಪಿದಿರಾಗಿ ಭಿತ್ತಿಯೊ
ಳ್ಮಣಿಯದೆ ಭಿತ್ತಿವೆತ್ತೆಸೆದು ತೋರ್ಪುದುಮೆನ್ನಸಮಾನಮಪ್ಪವಳ್
ಸೆಣಸಿದೊಳೆನ್ನೊಳೆಂಬ ಭಯದಿಂದಮೆ ಪೊರ್ದಳೆ ರತ್ನಭಿತ್ತಿಯಂ    || ೨೦ ||

ಕೆಲ್ಲಯಿಸಿ ಕೆಲಕೆ ತೊಲಗುತು
ಮಲ್ಲಲ್ಲಿಗೆ ನಿಂದು ತತ್ಕುಮಾರಕನಂ ನೋ
ೞ್ಪಲ್ಲಿ ಮನೋಜನ ದೀವದ
ಪುಲ್ಲೆಗಳೆನಿಸಿದವು ನೆರೆದ ಪೆಂಡಿರ ತಂಡಂ         || ೨೧ ||

ಮಱುಗಿ ಕುಸುಮಾಸ್ತ್ರನಿಚಯಂ
ನೆಱೆಗೊಳೆ ನೆಱೆ ಸೋಲ್ತು ಕಾಮಪರಿತಾಪಂ ಕ
ಣ್ದೆಱೆದಂತಾಗೆ ಕುಮಾರನ
ನೊಱಲ್ದು ನೋಡಿದರನಂಗನೆಂದಂಗನೆಯರ್    || ೨೨ ||

ವ || ಇಂತು ನಗರನಾರೀಜನಂ ಕೌವ್ವರೆಗೊಂಡು ನೆರದು ನೋಡುತ್ತಿರ್ಪುದುಮನ್ನೆಗಂ ಯಶೋಭದ್ರಾಂಬಿಕೆ ರಾಜಾಧಿರಾಜಂಗೆ ವಿನಯವಿನಮಿತೋತ್ತಮಾಂಗೆಯಾಗಿ ಕೈಗಳಂ ಮುಗಿದು ನಿಂದಿರ್ದು ದೇವರಿಂದು ನಿಮ್ಮ ತಮ್ಮನಗೋಷ್ಠಿಯೊಳಾ ರೋಗಿಸಲ್ಬಿಜಯಂಗೆಯ್ಯಿಮೆಂದೊಡಂಬಡಿಸಿದಾಗಳ್

ನರಪತಿ ಬಿರ್ದಿನನೆಂದಾ
ದರದಂ ಗೃಹಲಕ್ಷ್ಮೀ ಬೋನಮೆತ್ತಿದುದೆಂಬಂ
ತಿರೆ ಚೋದ್ಯಮಪ್ಪಿನಂ ಬಿ |
ತ್ತರದೆತ್ತಿದ ಬೋನದಿರವು ಚೆಲ್ವಾಯ್ತಾಗಳ್    || ೨೩ ||

ಅನತಿಶಯಭೋಜನಾಂಗಾ
ವನಿಜದ ವಿರಚನೆಯಿನೆಸೆದ ತೆಱದಿಂದೆ ಕನ
ತ್ಕನಕಮಿರಜತಮಯಭಾ
ಜನಂಗಳೆಸೆದವು ವಿಚಿತ್ರತರಮಪ್ಪಿನೆಗಂ            || ೨೪ ||

ಪರಿವ ಕರೆವೆರೆವ ಸೂೞೌ
ಯ್ತರ ಸೂಳುಗಳ್ತುಱುಂಗಿದಚ್ಚುಳಾ
ಯ್ತರ ಕಳಕಳರವದಿಂ ಭೋ
ರ್ಗರೆದುಲಿವಂಬುಧಿಯನಂತದೇಂ ಮಸುಳಿಸಿತೋ           || ೨೫ ||

ಎಡೆವಟ್ಟಲ್ಗಡ್ಡಣಿಗೆಗೆ
ಪಡಿಗಕ್ಕೆ ತಗುಳ್ದ ಪೞಿಯ ಬಿತ್ತರಿಗೆಗೆ ತ
ಕ್ಕೆಡೆಯಱಿದು ಪಂತಿಕಾಱರ
ನೆಡೆಯಱಿದು ವಿಲಾಸದಿಂದಮಿರಿಸಿದರಾಗಳ್    || ೨೬ ||

ತರತರದಿಂ ತುಱಿಗಿದ ವಿವಿ
ಧರತ್ನಮಯಮಪ್ಪ ಪೊನ್ನ ಕುಳಿವಟ್ಟುಗಳಿಂ
ನಿರುಪಮ ಕನಕ ಸರೋಜಾ
ಕರಮಲರ್ದಂತಿರ್ದುದನ್ನವಾಸವಿಲಾಸಂ          || ೨೭ ||

ಕನಕಲತಾ ಕೋಮಲೆಯರ್
ಕನಕದ ಬಟ್ಟಲ್ಗಳೊಳಗೆ ತಂದೆಱೆದರ್ ತೊ
ಟ್ಟನೆ ಪೊಂಗೆ ಕಂಪು ಪುಟ್ಟಿ
ತ್ತೆನೆ ಸುರಭೀಕೃತಮಲಮಲ ಸುರಭೀಘೃತಮಂ            || ೨೮ ||

ಅಪರಿಮಿತಮೆನಿಸೆ ಚೆಂಬೊ
ನ್ನ ಪರಿಯಣದ ಬಳಸಿ ಬಣ್ಣವಣ್ಣಿಗೆಗಳೊಳಾ
ದುಪದಂಶಂಗಳ್ ತುಱುಗಿದ
ವು ಪತ್ರ ಶಾಕಂಗಳಿಷ್ಟತುಷ್ಟಿಕರಂಗಳ್            || ೨೯ ||

ವ || ಅಂತು ಪೊನ್ನಡ್ಡಣಿಗೆಗಳ ಮೇಲಳಂಕರಿಸಿದ ಚೆಂಬೊನ್ನ ಪಿರಿಯ ಪರ್ಯಣಂಗಳಿಂ ಪೊಂದಾವರೆಗೊಳನಲರ್ದಂತೆ ವಿರಾಜಿಸುತಿರ್ದ ಭೋಜನಲಕ್ಷ್ಮೀವಿಳಾಸ ಭವನಕ್ಕಾ ರಾಜಹಂಸನುಂ ಪರಮಜಿನಮತಾಂಭೋಜಿನೀ- ರಾಜಹಂಸನುಂ ರಾಜಹಂಸ ಲೀಲೆಯಿಂ ಬಿಜಯಂಗೆಯ್ದು ಮಣಿಕುಟ್ಟಿಮತಳ- ದೆಡೆಯಱಿದಿರಿಸಿದ ಕನಕ ಭಾಜನಂಗಳ ಪೊರೆಯೊಳಾ ಸೌಖ್ಯಭಾಜನಂಗಳ ಪೞಿಯಿಲ್ಲದ ಪೞಿಯ ಬಿತ್ತರಿಗೆಗಳ ಮೇಲೆ ಕುಳ್ಳಿರ್ಪುದುಂ ಬಾಣಸಿಗೆಯರ್ ಪಿಂಡುಗಂಕಣಂಗಲಂ ನೂಂಕಿ ನೂಲ ತೊಂಗಲನೆತ್ತಿ ಪೊನ್ನಸಟ್ಟುಗಮಂ ಮುತ್ತಿನ ಪಡಲಿಗೆಗಳುಮಂ ಪಿಡಿದಮೃತರಸ ಪೂರಂಗಳೆನಿಸುವ ಘೃತಪೂರಂ ಗಳುಮನಮರ್ದಿನುಂಡಿಗೆಗಳೆನಿಸುವ ಪಾಲುಂಡೆಗಳುಮನತಿಮೃದುಲಲಿತ- ಕೋಮಲತಲ ಸಂಗಮಾತ್ರದ್ರಾವಣಿಯಪ್ಪ ಶಾಕವರ್ತಿಗೆಗಳುಮಂ ಪಾಲ್ಗಡಲನೊರೆಯ ಪೊರೆಯ ತೆರೆಯನನುಕರಿಸಿ- ಯುಮಲ್ಪದಶನದಂಶ ಮಾತ್ರಖಂಡನೀಯಕರಂಗಳೆನಿಸಿದ ಮಂಡಕಂಗಳುಮಂ ತವರಾಜಬಂಧದೊಳಂದಂಬೆತ್ತ ಲಡ್ಡುಗೆಗಳುಮಂ ಸುಗಂಧಿಪರಿಮಳಾನೂನಮಪ್ಪ ಹಯ್ಯಂಗವೀನಮುಮನರಸಂಗಂ ಪಂಕ್ತಿಯೊಳುಣ್ಬ ಪರಿಜನಕ್ಕೆಲ್ಲಂ ಬಡ್ಡಿಸಿದಾಗಳ್

ಎಳಮಾವಿನ ಮಿಡಿ ಮಾಗುಳಿ
ಮೆೞಸಿನ ಕರೆಬೆತ್ತಲಟ್ಟೆಯೀಳೆಯಗೊಲೆಯಿಂ
ದಳವಟ್ಟಿರೆ ಲಾವಣಕಂ
ಗಳನಿಕ್ಕಿದರಾಗಳೞ್ತುಯಿಂದಂಗನೆಯರ್          || ೩೦ ||

ಇದು ಬಾಱ್ಮೊಸರಿದು ಕೞಲಿಂ
ತಿದು ರುಚಿವೆತ್ತಿರ್ದ ಪಾನಮಿದು ಮಜ್ಜಿಗೆ ತಾ
ನಿದು ಶಿಖರಿಣಿಯೆನುತುಂ ತಿಂ
ಬಿದಿಂಬಿ ತಂದೆಱೆದರಬಲೆಯರ್ ಸಿರ್ಪ್ಪುಂಗಳಿಂ  || ೩೧ ||

ವಿಲಸತ್ಪ್ರತಿಭಾತೇಜೋ
ಬಲಾಯುರಾರೋಗ್ಯ ಪುಷ್ಟಿಬಹುತುಷ್ಟಿಕರಂ
ಗಳನಮೃತಸಮಾನಾನ್ನಂ
ಗಳನೞ್ತಿಯೊಳಾಗಳರಸನಾರೋಗಿಸಿದಂ           || ೩೨ ||

ಮ || ಅಂತು ನಾನಾವಿಧಭಕ್ಷ್ಯೋಪದಂಶಾನ್ನದಾನಂಗಳನಮೃತೋಪಮಾನಂಗಳನಾರೋಗಿಸಿದಿಂ ಬೞಿಕ್ಕೆ ಕರಗವಳನೆಱೆದ ಚಂದ್ರಕಾಂತದ ಕರಗದ ಹಿಮಶಿಶಿರಸುರಭಿವಾರಿಯಿಂ ಕರತಲಪ್ರಕ್ಷಾಲನಂಗೆಯ್ದು ಸುಗಂಧಭಂಡಾರಿಗರ್ ವಿರಚಿಸಿ ತಂದು ಮುಂದಿಟ್ಟ ಘನಸಾರ ಗೋಶೀರ್ಷ ಚಂದನಸಾರ ಕಾಶ್ಮೀರ ಕಾಲಾಗರು ಕಸ್ತೂರಿ ಕಾಸಾರ ವಿವಿಧವಿಲೇಪನಂಗಳಿಂ ಮೆಯ್ಯಂ ತಿಮಿರ್ದ್ದು ಯಕ್ಷಕರ್ದಮದ ಕೈಘಟ್ಟ ಯೊಳಂಗಯ್ಯಂ ತಿಮಿರ್ದು ಮಾಲೆಗಾಱರ್ ತಂದವಟ್ಟೈಸಿದ ಸುರಭಿಪರಿಮಳಾಸವಾಸಕ್ತ ಭ್ರಮದ್ಭ್ರಮರಮಾಲಾವಿರಾಜಿತ ಸುಮನೋಹರಸುಮನೋಮಾಲೆಗಳಂ ತುಱುಂಬಿಕೊಂಡು ಅಡಪವಳ್ಳಂ ನೀಡಿದಾರ್ದ್ರಪೂಗೀಫಲಂಗಳುಮಂ ಮೃಗಮದಮಿಲಿತ ಖದಿರ ಗುಲಿಕಾಬಹುಲಕರ್ಪೂರಪರೀತ ಮುಖವಾಸಂಗಳುಮಂ ಕರ್ಪೂರ ನಾಗವಲ್ಲೀ ಧವಲ ಲಲಿತಂಗಳುಂಮಂ ದಿಕ್ಕರಿಕರಾನುಕಾರಿ ಕಮನೀಯಂಗಳುಮಂ ವೀರಲಕ್ಷ್ಮೀನಿವಾಸ ತೋರಣಸ್ತಂಭಾಯಮಾನಂಗಳುಮಪ್ಪ ಸುಕೃತಿಜನಸುಕರಕರಂಗಳುಮಂ ಸೂೞ ಸೂೞದೆ ನೀಡೆ ತಂಬುಲಂಗೊಂಡು ತಾಂಬೂಲಂಗುಡಲ್ವೇೞ್ದು ಕಂತುಕೈಗೆಯ್ವಂತೆ ನೆಱೆ ಕೈಗೆಯ್ದು ಮದನಮೂರ್ತಿ ಕತಿಪಯಪದಂಗಳಿಂ ವಿಹರಿಸಿ ದೂಕೂಲ ಪ್ರಚ್ಛದಾಚ್ಛಾ ದಿತಸುಖಾಸನಾಸೀನಂ ಮಣಿಮಯಾಸನಮನವಷ್ಠಂಭಿಸಿ ಸಮುಚಿತ ಪ್ರದೇಶದೊಳ್ ಕುಳ್ಳಿರ್ದು ಯಶೋಭದ್ರಾಂಬಿಕೆಯ ಮೊಗಮಂ ನೋಡಿ

ಎಮ್ಮನುಜನ ದಿವ್ಯಾಕೃತಿ
ಯುಮ್ಮಹಿಮೆಯುಮಖಿಲಸೌಖ್ಯಮುಂ ಭೋಗಮುಮೆಂ
ದುಮ್ಮನುಜರಳವಿಯಲ್ತೆಂ
ತುಮಲ್ತೆಂಬುಂತುಟಾದುದಿದು ಚಿಂತೆವೊಲಂ    || ೩೩ ||

ವ || ಸಂಪೂರ್ಣಚಂದ್ರಂಗೆ ಕಳಂಕಮಾದಂತೆ ನಿಜಕುಲಗಗನಶರಚ್ಚಂದ್ರಂ ಗಾತಂಕಕಲಂಕ ಮಾದತ್ತದೆಂತೆನೆ

ಪದುಳಂ ಪೀಠಾಗ್ರದೊಳ್ಕುಳ್ಳಿರಲಱೆಯದುದುಂ ಕಣ್ಣನೀರಾಗಳುಂ ಸೋ
ರ್ವುದುಮಂತುಂಬಾಗಳೊಂದೊಂದಗುೞನುಗುೞುತುಂ ನುಂಗುತುಂ ಕ್ಲೇಶದಿಂದು
ಣ್ಬುದುಮುಂತುಂ ಬೆರ್ಚಿದೊಂದಂದದೊಳೆರಸದುದುಂ ವ್ಯಾಧಿಯಾದಂದಮಾಗಿ
ರ್ದುದಿದಂ ಸದ್ವೈದ್ಯರಿಂ ನೋಡಿಸಿ ಪಱಿಪಡಿಸಿಂ ನಿಶ್ಚಯಂ ಬೇಗಮೀಗಳ್   || ೩೪ ||

ಎಳವೆಯೊಳೆ ತನ್ನ ವೈರಿಯ
ಮೊಳೆಯುಮನೊಗೆತಪ್ಪ ರುಜೆಯ ಮೊಳೆಯುಮನೊಗೆದಾ
ಗಳೆ ಕಳೆಗೆ ಗೆಡ್ಡೆಗಟ್ಟಿದ
ಬೞಿಕ್ಕೆ ಕಳೆಯಲ್ಕೆ ಬಾರದೆಂಬುದುಮಾಗಳ್    || ೩೫ ||

ವ || ಯಶೋಭದ್ರೆ ದರಹಸಿತವದನಸರಸಿರುಹೆಯಾಗಿ ದೇವ ನಿಮ್ಮ ತಮ್ಮ ನಂದಮಂ ಬಿನ್ನಪಂಗೆಯ್ವೆನವಧಾರಿಸಿಮೆಂತೆಂದೊಡೀತಂ ಪುಟ್ಟಿದಂದು ಮೊದಲಾಗಿಂದು- ವರಂ ಸ್ವಾಮಿಭೃತ್ಯಸಂಬಂಧದಂದಮುಮನೊಡೆಯರ್ ಬಡವರೆಂಬ ದೇಶ ಭಾಷೆಯುಮಂ ಪಗಲಿರುಳೆಂಬ ಭೇದಮುಮನಾಶಬ್ದಮೆಂಬುದುಮಂ ದುಃಖಶೋಕಮೆಂಬ ಪಂಬಲುಮಂ ಮನೆಮನೆವಾರ್ತೆಯೆಂಬ ಚಿಂತೆಯುಮಂ ಚಾಮರದ ಗಾಳಿಯಲ್ಲದೆ ಗಾಳಿಯುಮನೇನೆಂದು ಮಱಿಯದ ಪರಮ ಗರ್ಭಸುಖಿ ಸುಖಸಂಕಥಾ ವಿನೋದಂಗಳಿಂ ಮಣಿಮಾಡದ ನೆಲೆಯನಿೞಿಯದೆ ನಿಶ್ಚಿಂತಮಿರ್ಪನಿಂದು ನೀಮೀಲ್ಲಿವರಂ ಬಂದೊಡೆ ತಾನಿಲ್ಲಿವರಂ ಬಂದನಿಂತು ನಿಮ್ಮಾಬಂದೞ್ತೆಯೊಳೞ್ತಿಯಿಂ ಮಂಗಳಾರ್ಥಮೆಂದು ಸಿದ್ಧಾರ್ಥದ ಸೇಸೆಗಳನಿಕ್ಕಿದೊಡೆತ್ತಾನುಮುದಿರ್ದು ಬಿರ್ದ ಸಿತಸರ್ಷಪಸ್ಪರ್ಶನಿಘರ್ಷಣದಿಂ ಪದುಳಮಿರಲಱೆಯದೆ ಚಲಾಸನನಾಗಿರ್ಕ್ಕುಂ ದೀಪ್ಯಮಾನಾನೂನಶೋಣಮಾಣಿಕ್ಯದೀಪಂ- ಗಳ ಬೆಳಗನಲ್ಲದೆ ದೀಪಂಗಳ ಬೆಳಗಿನ ರೂಪಂ ಕಂಡಱಿಯದನಿಂದು ದೇವರ್ ಬಂದೊಸಗೆಯೊಳ್ ಮಂಗಳಾರತಿಗಳಂ ಬೆಳಗಿದೊಡವಱ ಬೆಂಕೆಗೆ ಕಣ್ಣನೀರ್ ಸುರಿಯುತ್ತಿರ್ಕ್ಕುಂ ಚಂದ್ರಕಾಂತ ಪಾಷಾಣ ನಾಲಿಕೇರಸಹಕಾರೇಕ್ಷುರಸಪ್ರವಾಹದಿಂ ಬೆಳೆದು ಮಗಮಗಿಪ ಕರ್ಪೂರಗಂಧಶಾಲ್ಯಕ್ಷತಂಗಳಂ ಮುನ್ನಿನ ದಿವಸಮೆಮ್ಮ ಗೃಹೋದ್ಯಾನವನದ ಕನಕ ಸರೋರುಹಂಗಳೆಸೞ್ಗಳೊಳಗೆ ತೀವಿ ಪೊಯ್ದು ಸೂತ್ರಾವೇಷ್ಟಿತ ಮಾತ್ರಂಗಳಾಗಿ ಮಾಡಿ ಮಱುದಿವಸಂ ಪುಷ್ಪವಾಸನೆಯ ಮೆಲ್ಪಿನ ತಣ್ಪಿನ ಕಂಪಿನಲ್ ಪೊಂಪುೞಿವೋಗು- ತ್ತಿರ್ದ ತಂಡುಲಂಗಳಂ ಕಳೆದುಕೊಂಡು ಬಾಗಿದೋಗರಮನಾರೊಗಿಸುವಂ ನೀಮಿಂದು ಬಂದೊಡವು ನೆಱೆಯವಾಗಿ ಮುತ್ತಿನೋಗರದಕ್ಕಿಯಂ ಬೆರಸಿ ಬಾಗಿದ ಕಾರಣದಿಂ ಪೂರ್ವವಾಸನಾಗುಣದಿಂ ಪುಷ್ಪವಾಸನೆಯಕ್ಕಿಯಕೂೞನುಣ್ಗುಮುೞಿದಕ್ಕಿಯ ಕೂೞನುಗುೞುತ್ತಿರ್ಕ್ಕುಂ ತನ್ನ ಪರಿಚಾರಕಜನದ ವಧೂಜನದ ಪ್ರಸಂಗಮನಲ್ಲದುೞಿದ ಜನದ ಸೋಂಕುಮಂ ಪ್ರಸಂಗಮುಮಂ ಎಂತುಟೆಂದಱಿದವನಲ್ಲಂ ದೇವರಿಂದಿಲ್ಲಿಗೆ ಬಿಜಯಂಗೆಯ್ದೊಡೆ ಜನಸಂಕೀರ್ಣ್ನಪ್ರಸಂಗಮಾಗಿರ್ದುದಱಿಂದಿನಿಸಾನುಂ ಬೆರ್ಚಿದಂತೆ ರಸದಂತಾಗಿರ್ಕ್ಕುಮಿಂತಾವತೆಱದೊಳಂ ಕಲ್ಯಾಣಶರೀರಿಯೆಂಬುದು ಮರಸನಾತನ ವಿಭೂತಿಗಾಶ್ಚರ್ಯಂಬಟ್ಟು

ಸುಕುಮಾರನೆಂಬ ಪೆಸರೀ
ಸುಕುಮಾರಂಗೀಸಮಸ್ತಧಾರಿಣಿಯೊಳ್ ಸಾ
ರ್ಥಕಮಾದುದೆಂದು ನಾನಾ
ಪ್ರಕಾರದಿಂದಂ ಪ್ರಶಂಸೆಗೆಯ್ದಂ ಭೂಪಂ          || ೩೬ ||

ವ || ಆ ಪ್ರಸ್ತಾವದೊಳ್ ಯಶೋಭದ್ರಾಂಬಿಕೆ ದಿವ್ಯಮಣಿಗಣಾಭರಣಂಗಳಂ ದಿವ್ಯವಸ್ತ್ರಂಗಳುಮಂ ತಂದು ಮುಂದಿಟ್ಟು ನಿಂದು ನಿಮ್ಮ ತಮ್ಮನ ಭಕ್ತಿಯನವಧಾರಿಸಿಮೆಂಬುದುಮರಸನವರ ಶಕ್ತಿಗಂ ಭಕ್ತಿಗಂ ಮೆಚ್ಚಿ ತನ್ನರಮನೆಯೊಋಳಗನೇಕವಸ್ತು ವಾಹನಂಗಳನಾಗಳೆ ತರಿಸಿಕೊಟ್ಟು ಸುಕುಮಾರಂಗೆ ತಾನವಂತೀಶ್ವರನಪ್ಪುದಱಿನ ವಂತಿಸುಕುಮಾರನೆಂದು ಪೆಸರಿನಿಟ್ಟು ಪೂಜಿಸಿ ಪಿರಿದುಬೇಗಮಿದೋಡೆ ತಮ್ಮಂ ಗುಮ್ಮಳಿಕೆಯಕ್ಕುಮೊಳಗಣ್ಗೆ ಪೋಗವೇೞಿಮಂದು ತಾನಾತ್ಮೀಯರಾಜಭವನಕ್ಕೆ ಪೋದನಿಂತು

ದಿವಿಜೇಂದ್ರಂಗೆತ್ತಲುಂ ವೈಭವದೊಳತನುವಿಂಗೆತ್ತಲುಂ ರೂಪಿನೊಳ್ ಕೈ
ರವಮಿತ್ರಂಗೆತ್ತಲುಂ ಕಾಂತಿಯೊಳುರಗವರಂಗೆತ್ತಲುಂ ಭೋಗದೊಳ್ ವೈ
ಶ್ರವಣಂಗೆತ್ತೆತ್ತಲುಂ ವಿತ್ತದೊಳಧಿಕನೆನುತ್ತಿರ್ಪಿನಂ ಸಂದನಿಂತೀ
ಲವಣಾಂಭೋರಾಶಿವೇಳಾವಲಯಿತಧರಣೀಚಕ್ರದೊಳ್ ತತ್ಯುಮಾರಂ        || ೩೭ ||

ವ || ಇಂತು ಪಲವುಕಾಲಮಿಷ್ಟವಿಷಯಮಕಾಭೋಗಂಗಳನನವರತಮನುಭ- ವಿಸುತ್ತುಂ ಸುಖಮಿರ್ಪುದುಮಿತ್ತಲೊಂದುದಿವಸಮಾಷಾಢಮಾಸದ ಶುಕ್ಲಪಕ್ಷದ ಚತುರ್ದಶಿ ಯೊಳಪರಾಹ್ಣವೇಳೆಯೊಳ್ ಸುಕುಮಾರಸ್ವಾಮಿಗೆ ಮಾವಂದಿರಪ್ಪ ವಿಶದಯಶೋ ಭದ್ರರೆನಿಸಿದ ಯಶೋಭದ್ರಾಸ್ವಾಮಿಗಳೆಂಬ ಪರಮಾವಧಿಜ್ಞಾನಿಗಳಾ ಭವ್ಯವರಪುಂಡರೀಕನ ಭವ್ಯತೆಯ ಕಾಲಮನಱಿದಾತನ ಪೂರ್ವೋಪಾರ್ಜಿತ ಪುಣ್ಯ ಸಂಪದಮೆ ಸಾರ್ಚಿದಂತೆ ಯೋಗಸಾರ್ಚಿತಬಂದು [?] ತತ್‌ಗೃಹೋದ್ಯಾನವನಮಧ್ಯ ಪ್ರದೇಶದೊಳ್ ನಿತ್ಯಪೂಜಾ ಖಂಡಿತಮಪ್ಪಪ ನಿತ್ಯಮಂಡಿತಜಿನಾಲಯಮಂ ಕಂಡು ಬಲಗೊಂಡು ದರ್ಶನಸ್ತುತಿಗೆಯ್ದು ಯೋಗಂಗೊಂಡಿರ್ಪುದುಂ ತದಾಗಮನವೃತ್ತಾಂತಮಂ ತದ್ವನಪಾಲಕರಱಿಪೆ ಕೇಳ್ದು ಯಶೋಭದ್ರೆ ನಾನಾವಿಧಾರ್ಚನೆಗಳ್ವೆರಸು ಬಂದು ದೇವರನರ್ಚಿಸಿ ಭಟ್ಟಾರಕರಂ ಬಂದಿಸಿ ಮುನ್ನೆ ತನಗೆ ತನಯೋತ್ಪತ್ತಿಯನಱಿಪಿದಭಿನಂದನ ಮುನೀಶ್ವರರಾದೇಶಮನಱಿವಳಪ್ಪು ದಱಿಂ ಋಷಿರೂಪಕಮಾ ಪ್ರವೇಶದಳಿರ್ಪ್ಪಿರವನಿಚ್ಛಯ್ಸದೆ ಭಟ್ಟಾರಕರೆ ನೀಮಿಲ್ಲಿರಲ್ವೇಡ ಮತ್ತೊಂದೆಡೆಗೆ ಬಿಜಯಂಗೆಯ್ಯಿಮೆಂಬುದುಮಾ ಮಹಾಮುನೀಶ್ವರರ್

ಯೋಗಿನ ದಿವಸಂ ಸಾರ್ಚಿದು
ದಾಗಿ ಜಿನೇಂದ್ರಾಗಮೋಕ್ತಿಯಿಂದಾಮೀಗಳ್
ಬೇಗಂ ಚಾತುರ್ಮಾಸದ
ಯೋಗಂ ಕೈಕೊಂಡೆಮೆಂತು ಪೊಪೆಮೊ ಪೇೞಿಂ || ೩೮ ||

ವ || ಎಂಬುದುಮಾ ಕಾಂತೆ ಚಿಂತಾಕ್ರಾಂತೆಯಾಗಿ ತಾನಧಿಗಮಸಮ್ಯಗ್ಧೃಷ್ಟಿಯಪ್ಪುದಱಿನದರ್ಕ್ಕೇನುಮೆನಲಱಿಯದೆ ನಿಮ್ಮಡಿ ನೀಮೀ ಚಾತುರ್ಮಾಸಮಿಲ್ಲಿರ್ಪನ್ನೆಗಂ ಸ್ವಾಧ್ಯಾಯಾಧ್ಯಯನಾನುಷ್ಠಾನನಿಯಮದಿಂ ಮೋನಂಗೊಂಡಿರ್ಪುದಿದಂ ನಿಮ್ಮನಾಂ ಕಯ್ಯನೊಡ್ಡಿ ಬೇಡಿದೆನೆಂಬುದುಂ ಮುನೀಶ್ವರರೇಗೊಂಬುದುಂ ಯಶೋಭದ್ರೆಯುಂ ನಿಶ್ಚಿಂತಾಂತರಂಗೆಯಾಗಿ ಸಂತೊಸದಿಂ ನಿಜಾವಾಸಕ್ಕೆವೋದಳಿತ್ತಲಾ ಮುನಿಜನವನಕೋಕಿಳನಾ ಗೃಹೋದ್ಯಾನವನದೊಳ್ ಮೇಘಾಗಮ ಕೋಕಿಲಮೆಂತಂತಾ ಮೇಘಾಗಮದೊಳ್ ಮೌನವ್ರತದೊಳಿರ್ದು ಕಾರ್ತಿಕ ಮಾಸದ ಪೌರ್ಣಮೀದಿನದೊಳ್ ಸುಕುಮಾರನ ಮೋಹಬಂಧದ ಬಳ್ಳವಳ್ಳಿಯ ತೊಡರ್ಪಂ ಪಱಿಪಡೆ ಬಿಡಿಸುವಂತೆ ಯೋಗವಿಡಿಸಿ ತಜ್ಜಿನೇಂದ್ರಗೇಹದೊಳರ್ಧ ರಾತ್ರದೊಳ್ ಸ್ವಾಧ್ಯಾಯಂಗೊಂಡು ತ್ರಿಲೋಕ ಪ್ರಜ್ಞಪ್ತಿಯಂ ಪರಿವಡಿಗೆಯ್ವಾಗಳ್

ಅಂಬುದನಿನದಾಡಂಬರ
ಮಂಬರದೊಳಳುಂಬಮಾಗಳೆಸೆದಪುದೆನೆ ಬೇ
ಗಂ ಬಳ್ವಳನೆಸೆದುದು ಭೋ
ರೆಂಬಿನಮಾ ಮುನಿಮುಖಾಭ್ರವಿಭ್ರಮನಿನದಂ    || ೩೯ ||

ಎಸೆದಿರೆ ಲೋಕವಿಭಾಗ
ಪ್ರಸರಪ್ರವಿಭಾಗಮಂ ಸವಿಸ್ತರಮಭಿವ
ರ್ಣಿಸಲಸದಳಮಿನಿಸಂ ಸೂ
ಚಿಸುವೆಂ ಕರಣಾನುಯೋಗಸಾಗರಲವಮಂ      || ೪೦ ||

ನುತವೇತ್ರಾಸನಝಲ್ಲರೀಮೃದಂಗಾಭಂ ತ್ರಿವಾತಾಭಿವೇ
ಷ್ಟಿತಮುತ್ಪತ್ತಿಲಯೇತರಂ ಸಕಲಜೀವೋತ್ಪತ್ತಿಸಂಸ್ಥಾನಮೂ
ರ್ಜಿತಮತ್ಯಾಯಮಪ್ರಮೇಯಕಮಧೋಮಧ್ಯೋರ್ಧ್ವಭೇದಂ ಜಗ
ತ್ತ್ರಿತಯಂ ನಿಂದುದು ತಾನನಾದ್ಯನಿಧನಂ ಸ್ವಾಭಾವಿಕ ನ್ಯಾಯದಿಂ  || ೪೧ ||

ವ || ಇಂತಕೃತ್ರಿಮಮುಂ ಷಡ್ದ್ರವ್ಯಸಂಕೀರ್ಣಮುಂ ಚತುರ್ದಶರಜ್ಜೂತ್ಸೇಧಮುಮಪ್ಪುದದಱೊಳಧೋಲೋಕಮೆಂಬುದು ಚಿತ್ತೆಯೆಂಬ ಧಾತ್ರಿಮೊದಲ್ಗೊಂಡು ಕೆೞಗತೀತಸಹಸ್ರೋತ್ತರಲಕ್ಷ ಯೋಜನಬಾಹುಲ್ಯಮನಾಂತು ರತ್ನಪ್ರಭೆಯೆಂಬ ಪೃಥ್ವಿಯಿರ್ಕ್ಕುಮಾ ಪೃಥ್ವಿ ವಜ್ರಖರ ಪಂಕ ಜಲಬಹುಳಭಾಗದಿಂ ತ್ರಿವಿಧಮಕ್ಕುಮಲ್ಲಿ ಖರಭಾಗಂ ಪದಿನಾಱುಸಾಸಿರಯೋಜನಂ ಪಂಕಭಾಗಮೆಣ್ಬತ್ತನಾಲ್ಕು ಸಾಸಿರಯೋಜ ನಂ ಜಲಬಹುಲಭಾಗಮೆಣ್ಬತ್ತುಸಾಸಿರಯೋಜನಮಕ್ಕುಮವಱೊಳ್ ಖರಭಾಗ ಪಂಕಭಾಗದೊಳಗೆ ಭವನಾಮರಲೋಕಮಿರ್ಕ್ಕುಮಲ್ಲಿಯ ಸುರನಾಗವಿದ್ಯುತ್ಸುಪರ್ಣಾಗ್ನಿ ವಾತಸ್ತನಿತೋದಧಿದ್ವೀಪದಿಕ್ಕುಮಾರರೆಂದು ಭವ ನಾಮರರ್ದಶವಿಕಲ್ಪಮಪ್ಪರ್ ಅವರ್ಗೇೞುಕೋಟಿಯುಮೆೞ್ಪತ್ತೆರಡುಲಕ್ಕೆಭವನಂಗಳುಮಕ್ಕುಮಲ್ಲಿ ಖರಭಾಗದೊಳ್ ನಾಗಕುಮಾರರ್ಗೆ ಮೂಱುಪಳಿತೋಪಮಮುಂ ಸುಪರ್ಣ ಕುಮಾರರ್ಗೆರ ಡುವರೆಪಳಿತೋಪಮಮುಂ ದ್ವೀಪದಿಕ್ಕುಮಾರರ್ಗೆರಡು ಪಳಿತೋಪಮ ಮುಮುೞಿದವರ್ಗೆಲ್ಲಮೊಂದುವರೆ ಪಳಿತೋಪಮಮುತ್ಕೃಷ್ಟಸ್ಥಿತಿಯಿನಾಯುಷ್ಯಪ್ರಮಾಣಮವರ್ಗೆಲ್ಲಂ ದಶಧನೂತ್ಸೇಧಂಗಳಕ್ಕುಂ ದ್ವಿತೀಯಭಾಗದೊಸುರಕುಮಾರರ್ಗೆ ಅಱುವತ್ತುನಾಲ್ಕುಲಕ್ಕೆ ಭವನಂಗಳಕ್ಕುಂ ಪಂಚವಿಂಶತಿಚಾಪೋತ್ಸೇಧಮು ಮೇಕಸಾಗರೋಪಮಾಯುಷ್ಯಮಕ್ಕುಮಲ್ಲಿಂ ಕೆೞಗೆಣ್ಬತ್ತು ಸಾಸಿರಯೋಜನಾಂತರದೊಳ್ ಜಲಬಹುಳಭಾಗದೊಳ್ ಮೊದಲ ನರಕಮಲ್ಲಿಂ ಕೆೞಗೇಕರಜ್ವಂತರದೊಳ್ ಮೂವತ್ತಿರ್ಚ್ಛಾಸಿರಯೋಜನಬಾಹಲ್ಯದಿಂ ಶರ್ಕರಾಪ್ರಭೆಯೆಂಬೆರಡನೆಯ ನರಕಮಲ್ಲಿಂ ಕೆೞಗೇಕರಜ್ವಂತರದೊಳಷ್ಟ ವಿಂಶತಿಸಹಸ್ರಯೋಜನಬಾಹಲ್ಯದಿಂ ವಾಳುಕಾಪ್ರಭೆಯೆಂಬ ಮೂಱನೆಯ ನರಕಮಲ್ಲಿಂದತ್ತಲೇಕರಜ್ವಂತರದೊಳಿರ್ಪತ್ತು ನಾಲ್ಕು ಸಾಸಿರಯೋಜನಬಾಹಲ್ಯದಿಂ ಪಂಕಪ್ರಭೆಯೆಂಬ ನಾಲ್ಕನೆಯನರಕಮಲ್ಲಿಂದತ್ತಲೇಕರಜ್ವಂತರ ದೊಲಿರ್ಪತ್ತುಸಾಸಿರ ಯೋಜನಬಾಹಲ್ಯದಿಂ ಧೂಮಪ್ರಭೆಯೆಂಬಯ್ದನೆಯನರಕ ಮಲ್ಲಿಂದತ್ತಲೇಕರಜ್ವಂತರದೊಳ್ ಪದಿನಾಱುಸಾಸಿರಯೋಜನಬಾಹಲ್ಯದಿಂ ತಮಃಪ್ರಭೆಯೆಂಬಾಱನೆಯನರಕಮಲ್ಲಿಂದತ್ತಲೇಕರಜ್ವಂತರದೊಳಷ್ಟಸಹಸ್ರಯೋ ಜನಬಾಹುಲ್ಯದಿಂ ಮಹಾತಮಃಪ್ರಭೆಯೆಂಬೇೞನೆಯನರಕಮಿರ್ಕ್ಕುಮಲ್ಲಿ ಮೇಗಣ ನಾಲ್ಕುವರೆನರಕಂಗಳತ್ಯುಷ್ಣಂಗಳ್ ಕೆೞಗೆರಡುವರೆನರಕಂಗಳತಿಶೀತಲಂಗಳಕ್ಕುಮವಱೊಳೆ ಯಥಾಕ್ರಮದಿಂ ತ್ರಿಂಶಲ್ಲಕ್ಷಮುಂ ಪಂಚವಿಂಶತಿಲಕ್ಷಮುಂ ಪಂಚದಶಲಕ್ಷಮುಂ ದಶಲಕ್ಷಮುಂ ತ್ರಿಲಕ್ಷಮುಂ ಪಂಚೋನೈಕಲಕ್ಷಮುಂ ಪಂಚಲಕ್ಷಮುಂ ಬಿಲಂಗಳಕ್ಕುಮಾ ನರಕಬಿಲಂಗಳೆಲ್ಲಮೆಣ್ಬತ್ತುನಾಲ್ಕುಲಕ್ಷ ಪರಿಪ್ರಮಾಣಮಾಗಿಯುಮಿಂದ್ರಕ ಶ್ರೇಣಿಬದ್ಧ ಪ್ರಕೀರ್ಣಕಂಗಳೆಂದು ಮೂಱು ತೆಱನಕ್ಕುಮವಱ ಮೇಗಳಟ್ಟುಗಳೊಲಿಟ್ಟ ಜೇನಪುಟ್ಟಿಗಳುಮಂ ಕಾಕೋಳೂಕಸೃಗಾಲಶಾರ್ದೂಲೋಷ್ಟ್ರಖರಮುಖಂಗಳನನುಕರಿಸುವ ಮಹಾಭೀಭತ್ಸು ಕುತ್ಸಿತೋತ್ಪತ್ತಿಸ್ಥಾನಂಗಳೊಳುತ್ಕೃಷ್ಟ ಕೃಷ್ಣನೀಲಕಪೋತಲೇಸ್ಯಾನುಬಂಧ ರೌದ್ರ ಪರಿಣಾಮಪರಿಣತರುಂ ಬಹ್ವಾರಂಭಪರಿಗ್ರಹಗ್ರಸ್ತರುಮನಂತಾನುಬಂಧಿಕ್ರೋಧ ಮಾನಮಾಯಾಲೋಭಾಭಿಭೂತರುಮಪ್ಪ ಮಹಾಪಾಪಿಜೀವಂಗಳ್ ಕಾಲು ಮೇಲಾಗಿ ನೆಲಸಿದಂತರ್ಮುರ್ಹೂರ್ತಮಾತ್ರದೊಳಗೆ ಷಟ್ಪರ್ಯಾಪ್ತಿಗಳ್ನೆಱೆದು ವಿವಿಧನಿಶಿತ ನಿಸ್ತ್ರಿಂಶಂಗಳ ಮೇಗೆ ಪಱಿವಱಿಯಾಗಿ ಬಿರ್ದು ಸೇದೆವಟ್ಟ ನವನಾರಕರಂ ಪುರಾಣ ನಾರಕರ್ಕಂಡು

ಇಱಿಇಱಿ ಕಡಿಕಡಿ ಸುಡುಸುಡು
ಕೊಱೆ ಕೊಱೆ ಸೀಳ್ಸೀಳೆನುತ್ತೆ ನಾರಕರೈತಂ
ದಿಱಿವರ್ಕಡಿವರ್ಸುಡುವ
ರ್ಕೊಱೆವರ್ಸೀಱಳ್ವರ್ತಗುಳ್ದು ನವನಾರಕರಂ   || ೪೧ ||

ವ || ಆಂತತಿ ಕಠೋರನಿಷ್ಠುರವನಂಗಳಿಂ ಗಜಱಿ ಗರ್ಜಿಸುತ್ತುಂ ಸುತ್ತಿಮುತ್ತಿಪತ್ತಿದಾಗಳ್ ದೆಸೆಗಳೆ ನುಂಗುವಂತಾಗೆ ಆಗಸಮೆ ಮೇಲೆ ಕೆಡೆವಂತೆ ನೆಲಂ ಪೆಡಂಮಗುೞ್ದು ಕವಿದಿಕ್ಕಿದಂತೆ ತೊಟ್ಟನೆ ಪುಟ್ಟಿದತಿಭಯದಿಂ ವಿಭಂಗಮನರಾಗಿ ಪೂರ್ವಭವಪ್ರತ್ಯಯದಿಂ ಪುಟ್ಟಿದ ವಿಭಂಗಜ್ಞಾನದಿಂದವಗತನರಕ ಲೋಕವೃತ್ತಾಂತರಾದಿಂಬೞಿಯಮೊರೊರ್ವರ ನೆಱಂಗಳುಮನನ್ಯೋನ್ಯ ಬದ್ಧವೈರಕಾರಣಂ ಗಳುಮಂ ಮೂದಲಿಸುತ್ತುಂ

ಅಡಗಿನ ಕಡುವೆಸನಿಗ ತಿ
ನ್ನಡಗಂ ನಿನ್ನಡಗನೆಂದು ಪೇಸೇೞ್ವಿನೆಗಂ
ಸಿಡಿಖಂಡಂಗೊಂಡುಗಿಬಗಿ
ದಿಡಿದಿಡಿದೆಡೆವಿಡದೆ ಕೂಱುಗೊಳ್ವರ್ ಬಾಯೊಳ್          || ೪೨ ||

ಅಪ್ಪಲೆ ನೀಂ ಪರವೆಣ್ಗಳ
ನಪ್ಪುವುದನೆ ಬಯಸುತಿರ್ಪೆಯಪ್ಪೆಂದು ಕರಂ
ಚಪ್ಪರಿಸಿ ನಾರಕರ್ ತಂ
ದಪ್ಪಿಸುವರ್ ಕಾಯ್ದಲೋಹಮಯಪುತ್ರಿಕೆಯಂ           || ೪೩ ||

ಚುೞ್ಚಿದ ತೆಱದಿಂ ಪುಸಿಗಳ
ನುೞ್ಚುವನಿವನೆಂದು ಕಾಯ್ದ ಕರ್ಬುನದಿಂದಂ
ಚುೞ್ಚಿ ಪೆಡತಲೆಯ ತೂಂತಿಂ
ದುೞ್ಚುವರಿಕ್ಕುೞಿಸಿ ನಾರಕರ್ ನಾಲಗೆಯಂ     || ೪೪ ||

ಮಧುಮದ್ಯದ ಬಸನಿಗ ಕುಡಿ
ಮಧುಮದ್ಯಮನೆಂದು ಸಪ್ತಧಾತುದ್ರವಮಂ
ವಿಧಿಯಿಂ ತಂದೆಱೆವರ್ ಸ
ಪ್ತಧಾತುಗಳ್ ಕರಗುವಿನೆಗ ವಿಕ್ರೆಯೆಯಿಂದಂ     || ೪೫ ||

ಮೇಳಿಸಿ ಜೀವಾವಳಿಗಳ
ತಾಳಿಸುವರನಚ್ಚಗೆಂಡದೊಳ್ ಕಾವಲಿಯೊಲ್
ತಾಳಿಸುವರ್ ಸಲೆ ಕಳ್ಳಂ
ಗಾಳಿಸುವರ ನೆಣದ ನೆತ್ತರಂ ಗಾಳಿಸುವರ್        || ೪೬ ||

ಪೆಱರಂ ಛಿದ್ರಿಸುವವರಂ
ಕೊಱೆಕೊಱೆದೆರ್ದೆಗಬ್ಬಲಪ್ಪಿನಂ ಛಿದ್ರಿಸುವರ್
ಮಱುಗುವ ತೃಷ್ಣಾತುರರಂ
ಮಱುಗಿಸುವರ್ ನೆಱೆಯೆ ಮಱುಗಿ ಕುದಿವೆಣ್ಣೆಗಳೊಳ್   || ೪೭ ||

ಮ || ಮತ್ತಮತಿವಿಕಟಶಾಲ್ಮಲಿವಿಟಪಿಯೊಳಿದಿರುಂ ಬೞಿಯುಮುರ್ಚ್ಚುವುದುಂ ಕೊಳ್ಳಿಯೊಳ್ ಪಿರಿದುಂ ಚುಚ್ಚುವುದುಂ ಕಾಯ್ದೋಡಿನೊಳ್ಪುರಿವುದುಂ ಮೊರ್ಮರಾಗಿ ಕರಿವುದುಂ ಚಿಮಿಚಿಮಿಸೆ ತಾಳಿಸುವುದುಂ ಇಕ್ಷುಯಂತ್ರಂಗಳಿಂ ಪಿೞಿವುದುಂ ಬಸಿದ ದಸಿಯೊಳ್ ತೆಗೆವುದುಂ ಕಬ್ಬುವನದ ದಬ್ಬಣಂಗಳಂ ದಬ್ಬುಕದ ಡಂಗೆಗಳಿಂ ಬೆರಲ್ಗಳೊಳಡಂಗೆ ಬೆಟ್ಟುವುದುಂ ಪಲ್ಗಳಂ ನುರ್ಗ್ಗುಗುಟ್ಟುವುದುಂ ಕೈಗಳಂ ಗೊಟ್ಟಂಗೊಱೆವುದುಂ ಬಾಯಂ ಬಳ್ಳಂಗೊಱೆವುದುಂ ಕಯ್ಗಾಣದೊಳಿಕ್ಕಿ ಗಾಣವಾಡುವುದುಂ ಕರುಳಂ ತೋಡುವುದುಂ ಸುಱ್ಱಸುಱ್ಱನೆ ಬಡಿತಂ ಗಾಸುವುದುಂ ಕರ್ಕಶ ಕ್ಷಾರವಾರಿಯಂ ತಂದು ಸಱ್ಱಸಱ್ಱನೆ ಪೂಸುವುದುಂ ಮಿಡುಕೆಮಿಡುಕೆ ಪುಟಪಾಕದಿಂ ಸುಡುವುದುಂ ಮುಂಬರಂಬರಂಗುಂಗಮಿಡುವುದುಂ ತಳ್ತಳಗುದಿದೆಣ್ಣೆಯೊಳ್ ಬೞಲೆತೆಗೆವುದುಂ ಕೈದುಗಳೊಳುಱಿ ನೆಗಪುಪುದುಂ ಸಂಧಿಸಂಧಿಗಳಂ ಗಂಟುಗಡಿವುದುಂ ತಡಂಗಡುವುದುಂ ಅಸಿಪತ್ರವನದೊಳೊಳಿಕ್ಕೆ ಗುರ್ದುವುದುಂ ಪರಿವ ವೈಕರಣಿಯ ಮಡುಗಳೊಳ್ ಪುಡುಕುನೀರರ್ದುವುದುಂ ಮಗುೞ್ದುಪೂೞುವುದುಂ ಸೌಳನೆ ಸೀಳ್ವುದುಂ ಕುಕ್ಕುೞಗುದಿವ ವಜ್ರದ ಮೂಷೆಯೊಳಿಕ್ಕಿ ಕರಗಿಸುವುದುಂ ನಟ್ಟು ಪರಗುವುದುಂ ಕೊಂದು ಕೂಗುವುದುಂ ತಿಂದುತೇಗುವುದುಂ ಎಂದಿವು ಮೊದಲಾದ ಪಲವುಂ ತೆಱದ ದಾರುಣೋದಗ್ರನಿಗ್ರಹವಿಗ್ರಹಕ್ಕೆ ತಮ್ಮ ವಿಗ್ರಹಂಗಳನೊಡ್ಡಿ ಶಾರೀರಂ ಮಾನಸಂ ಕ್ಷೇತ್ರಜಂ ಪರಸ್ಪರೋದೀರಿತಂ ಸಂಕ್ಷಿಷ್ಟಾಸುರೋದೀರಿತಂಗಳೆಂಬಪಂಚಪ್ರಕಾರ ದುಃಖಂ ಗಳನನೇಕ ಪ್ರಕಾರದಿನನುಭವಿಸುತ್ತಮರ್ಧ ನಿಮಿಷಮಾತ್ರಮಪ್ಪೊಡಮುಸಿರ್ಪ [ತ್ತಂ] ಬಡೆಯದೆ ಮುನ್ನೆ ತಮ್ಮ ನೆರಪಿದಾಯುಷ್ಯಾಂತಂಬರಂ ಸಣ್ಣಿಗೆಯೊಳ್ ಸಣ್ಣ ಮಾಗರದೆಯು ಸಣ್ಣಿಸಿದೊಡಮವಂದಿರ ವೈಕ್ರಿಯಕಶರೀರಂಗಳ್ ಪಾದರಸದ ಮಾರ್ಗದಿಂ ಪತ್ತು ತ್ತುಮಿರ್ಕುಂ ಮೊದಲನಾರಕರ ದೇಹೋತ್ಸೇಧಮೇೞುಬಿಲ್ಲು ಮೂಱುಮೊೞನು ಮಾಱಂಗಲುಲಮುಮಕ್ಕುಮಲ್ಲಿಂದತ್ತಲ್

ಕ್ರಮದಿಂ ತದ್ವಿಗುಣದ್ವಿಗು
ಣಮವರ ದೇಹಪ್ರಮಾಣದುತ್ಸೇದಂ ದುಃ
ಖಮನಂತಗುಣಂ ಕೇಳ
ಲ್ಕಮಾನುಷಂ ನೆಱೆಯೆ ಪೇೞಲದನಾನಱಿಯೆಂ            || ೪೮ ||

ವ || ಮತ್ತಮಾ ನಾರಕರೆಲ್ಲರಂ ಹುಂಡಮಂಡಸಂಸ್ಥಾನರುಮತಿ ವಿರೂಕ್ಷಕೃಷ್ಣವರ್ಣ ರುಮತಿದುರ್ಗಂಧರುಂ ನಪುಂಸಕರುಂ ಜಘನ್ಯದಿಂ ದಶಸಹಸ್ರವರುಷಾಯುಷ್ಯಮು ಮುತ್ತರಾನುಕ್ರಮೋತ್ಕೃಷ್ಟದಿಂ

ಕ್ರಮದಿಂದೇೞುಂ ನರಕದೊ
ಳಮೊಂದು ಮೂಱೇಳುಪತ್ತು ಪದಿನೇೞುನಿತಾಂ
ತಮಿದಿರ್ಪ್ಪತ್ತೆರಡು ಮೂವ
ತ್ತಮೂಱು ಸಂಖ್ಯಂಗಳಾಯುರಂಭೋನಿಧಿಯೊಳ್         || ೪೯ ||

ತರದಿಂದಮಸಂಜ್ಞಿಯುಮಾ
ಸರೀಸೃಪಮುಂ ವಿಹಗಮುಂ ಭುಜಂಗಮಮುಂ ಕೇ
ಸರಿಯುಂ ಸ್ತ್ರೀಯುಂ ಮೀನುಂ
ಪುರುಷನುಮುದಯಿಸುಗುಮೇಱು ನರಕಂಗಳೊಳಂ        || ೫೦ ||

ವ || ಆ ನರಕಭೂಮಿಗಳೇೞಱಿಂ ಕೆೞಗೇಕ ರಜ್ವತಂರದೊಳನೇಕದುಃಖನಿ ಗೋದಮಪ್ಪ ನಿತ್ಯನಿಗೋದಂ ತಮೋಮಯಮಾಗಿರ್ಕ್ಕುಮಲ್ಲಿ ಸೂಕ್ಷ್ಮಬಾದರ ಪರ್ಯಾಪ್ತಕಾಪರ್ಯಾಪ್ತಕಭೇದದಿಂ ಸೂಕ್ಷ್ಮವನಸ್ಪತಿಕಾಯಂಗಳಂತರ್ಮುಹೂರ್ತ ದೊಱುವತ್ತಸು ಸಾಸಿರದ ಮೂನೂಱಮೂವತ್ತಾಱುಸೂೞಲ್ಲಿಯೆ ಪುಟ್ಟುತ್ತುಂ ಸಾವುತ್ತು ಮಿರ್ಕ್ಕುಮವಱೊಳೇಕೇಂದ್ರಿಯಂಗಳಲ್ಲದೆ ವಿಕಳೇಂದ್ರಿಯಂಗಳುಂ ಸಕಳೇಂದ್ರಿಯಂಗಳುಂ ಪುಟ್ಟುವದಲ್ಲವು ಮತ್ತಮೀ ಮಧ್ಯಮಲೋಕದ ಮಧ್ಯಮಭಾಗದೊಳ್ ಜಂಬೂದ್ವೀಪ ಮಿರ್ಕುಮದೊಂದು ಲಕ್ಷಯೋಜನವಿಸ್ತಾರಮದಱ ನಡುವೆ ಮೂಱುಲೋಕಕ್ಕಂ ನಾಭಿಯಾಗಿರ್ದ ಮೇರುಪರ್ವತಂ ಚೆಲ್ವಿಂಗೆ ತಾನೆ ನಾಭಿಯಂತಿರ್ದುದದು ಸಹಸ್ರಯೋಜನಬಾಹುಲ್ಯಮಂ ತಾಳ್ದಿದ ಚಿತ್ರಾವನಿಯನುರ್ಚ್ಚಿಪೋಗಿ ವಜ್ರೆಯೆಂಬ ಪೃಥ್ವಿಯತಳದೊಳ್ ಕಾಳಸೆಗೊಂಡು ನವನವತಿಸಹಸ್ರಯೋಜನ ಬಾಹಲ್ಯನೋತ್ಸೇಧಂ ಮೇಗೆ ನೀಳ್ದು ಸರ್ವರತ್ನಮಯ ಮೇಖಳೋಪವನಜಿನಭವನ ನಿತ್ಯಪೂಜಾಮರಜನ ಮನೋಹರಮಾಗಿರ್ಕುಂ ಗಜದಂತಾದ್ರಿಗಳುಮವಱೆಡೆ ಯೊಡೆಯೊಳ್ ವ್ಯಂತರಾವಾಸಂಗಳುಂ ಭೋಗ ಭೂಮಿಗಳುಂ ವಿದೇಹಂಗಳುಂ ವಿಜಯಾರ್ಧ ಪರ್ವತಂಗಳುಂ ನಿರಂತರಮವರಂತರಾಂತರಂಗಳೊಲೆಡೆವೆಚ್ಚುತೋರ್ಕುಂ ಭರತಕ್ಷೇತ್ರದ ವಿಷ್ಕಂಭಂ ಜಂಬೂದ್ವೀಪದ ನವತಿಶತಭಾಗಪ್ರಮಾಣಮಕ್ಕುಮಿಂತು ವರುಷಧರವಿದೇಹಂ ಗಂಗಾ ಸಿಂಧು ಪ್ರಭೃತಿ ಕುಲನದಿಪರಿಭ್ರಾಜಿತಮಪ್ಪ ಜಂಬೂದ್ವೀಪಮನೆರಡುಲಕ್ಷ ಯೋಜನದಗಲದಿಂ ಪರಿವೇಷ್ಠಿಸಿರ್ದುದು ಲವಣಸಮುದ್ರಮದಂ ನಾಲ್ಕುಲಕ್ಷ ಯೋಜನದಗಲದಿಂ ಸುತ್ತಿರ್ದುದು ಕಾಳೋದಕಸಮುದ್ರಮದಂ ಪದಿನಾಱುಲಕ್ಷಯೋಜನ ಮಗಲದಿಂ ಪರಿವೃತಮಾಗಿರ್ದುದು ಪುಷ್ಕರವರದ್ವೀಪಮಾ ದ್ವೀಪಾರ್ಧದೊಳ್ ಮನುಷ್ಯಕ್ಷೇತ್ರಕ್ಕೆ ಮೇರೆಯಾಗಿ ಮಾನುಷೋತ್ತರಮಹೀಧರಮಿರ್ಕ್ಕುಮಾದ್ವೀಪಮಂ ಮೂವತ್ತೆರಡು ಲಕ್ಷಯೋಜನಮಗಲದಿಂ ಸುತ್ತಿರ್ದುದು ಪುಷ್ಕರ ವರಸಮುದ್ರಮನಱುವತ್ತು ನಾಲ್ಕು ಲಕ್ಷ ಯೋಜನಮಗಲದಿಂ ಸುತ್ತಿರ್ದುದು ವಾರುಣೀವರದ್ವೀಪಮದನೊಂದು ಕೋಟಿಯುಮಿರ್ಪ್ಪತ್ತೆಂಟುಲಕ್ಷ ಯೋಜನಮಗಲದಿಂ ಬಳಸಿರ್ದುದು ವಾರುಣಾರ್ಥ ವಮದನೆರಡು ಕೋಟಿಯುಮೈವತ್ತಾಱುಲಕ್ಷ ಯೋಜನಮಗಲದಿಂ ಸುತ್ತಿರ್ದುದು ಕ್ಷೀರವರದ್ವೀಪಮದನೈದುಕೋಟಿಯುಂ ಪನ್ನೆರಡು ಲಕ್ಷ ಯೋಜನಮಗಲದಿಂ ಸುತ್ತಿರ್ದುದು ಘೃತವರದ್ವಿಪಮದನಿರ್ಪ್ಪತ್ತುಕೋಟಿಯುಂ ನಾಲ್ವತ್ತೆಂಟುಲಕ್ಷ ಯೋಜನಮಗಲದಿಂ ಬಳಸಿರ್ದುದು ಘೃತವರಮಹಾರ್ಣವಮದಂ ನಾಲ್ವತ್ತುಕೋಟಿಯು ತೊಂಭತ್ತಾಱು ಲಕ್ಷಯೋಜನಮಗಲದಿಂ ಬಳಸಿರ್ದುದಿಕ್ಷುವರದ್ವೀಪಮದನೆಣ್ಬತ್ತೊಂದು ಕೋಟಿಯುಂ ತೊಂಭತ್ತೆರಡು ಲಕ್ಷಯೋಜನಮಗಲದಿಂ ಸುತ್ತಿರ್ದುದಿಕ್ಷುವರಮಕರಾಕರಮದಂ ನೂಱಱುವತ್ತಮೂಱುಕೋಟಿಯುಮೆಣ್ಬತ್ತನಾಲ್ಕು ಲಕ್ಷಯೋಜನಮಗಲದಿಂ ಸುತ್ತಿರ್ದುದು ಸುಂದರ ಸುರೇಂದ್ರವೃಂದವಂದಿತ ಸಂದೀಶ್ವರವರದ್ವೀಪಮದಱನಾಲ್ಕುಂ ದೆಶೆಯೊಳ್ ನಾಲ್ಕಂಜನಪರ್ವತಂಗಲುವಮಱ ನಾಲ್ಕುಂ ದೆಶೆಯೊಳ್ ಸಮಚತುರಸ್ರಂಗಳಪ್ಪ ದಿವ್ಯಸರೋವರಂಗಳ್ಪದಿನಾಱಪ್ಪುವವಱ ನಡುವೆ ದಧಿಮುಖಶಿಖರಿಗಲುಮಾ ಸರೋಜಾಕರದ ಪೊಱಗಣಕೋಣೆಯೊಳಗೆರಡೆರಡು ರತಿಕರಂಗಳಾಗಿ ನಾಲ್ಕುಂ ದಿಶಾಭಾಗದೊಳ್ಕೂಡಿ ಮೂವತ್ತೆರಡು ರತಿಕರಂಗಳಾಗುತ್ತಿರಲಿಂತವೆಲ್ಲಂ ನಾಲ್ಕಂ ಜನಾದ್ರಿಗಳುಂ ಪದಿನಾಲ್ಕು ದಧಿಮುಖಂಗಳುಂ ಮೂವತ್ತೆರಡು ರತಿಕರಂಗಳೊಳ ಮೋರೊಂದಱೊಳೊಂದುಗೆಯಾಗಿ