ಧರಣೀಧರಂಗಳೈವತ್ತೆರ
ಡಱೊಳಂ ಚೆಲ್ವುವೆತ್ತ ಜಿನಗೃಹಮೈವ
ತ್ತೆರಡೊಂದೊಂದಱೊಳಕ್ಕುಂ
ವರಜಿನಬಿಂಬಂಗಳಷ್ಟ ಸಹಿತಶತಂಗಳ್           || ೫೧ ||

ಬರಿಸಕ್ಕೆ ಮೂಱು ನಂದೀ
ಶ್ವರಯಾತ್ರೋತ್ಸಾಹದಿಂದಮಷ್ಟಾಹ್ನಿಕಮಂ
ಸುರರಾಜಂ ಸುರವೃಂದಂ
ಬೆರಸು ಮಹಾಮಹಮನಂತದೇಂ ಮಾಡುವನೋ          || ೫೨ ||

ದೆಸೆಗಳನ್ನಾನಾವಿಮಾನಂಗಳ ಬೆಳಗುಗಳಿಂ ತೀವೆ ಗೋತ್ರಾಚಲಂಗಳ್
ರಸವತ್ಸಂಗೀತನಾನಾಪಟುಪಟಹನಿನಾದಂಗಳಿಂ ತೀವೆ ಚೈತ್ಯಾ
ವಸಥಂಗಳ್ಕೂಡೆ ನಾನಾವಿಧಪರಿಕರದಿವ್ಯಾರ್ಚನಾನೀಕದಿಂ ತೀ
ವೆ ಸುರೇಂದ್ರಂ ಸಂದ ನಂದೀಶ್ವರಮಹಿಮೆಯನಾನಂದದಿಂ ಮಾಡುತಿರ್ಪಂ    || ೫೩ ||

ಜಿನಪಾದಾಂಬುಜಯುಗ್ಮಭಕ್ತಿಭರದಿಂದಂ ಕಾರ್ತಿಕಾಷಾಡಫಾ
ಲ್ಗುನಮಾಸಂಗಳ ಜೊನ್ನದಷ್ಟಮಿಗಳೊಳ್ಕೈಕೊಂಡು ತತ್ಪೌರ್ಣಮೀ
ದಿನಮಂತಾರ್ಪಿನೆಗಂ ಮಹಾಮಹಮನೆಂದುಂ ಮಾೞ್ಪನಿಂದ್ರಂ ಸುರೇಂ
ದ್ರನಿಕಾಯಂ ಬೆರಸೆಂದೊಡಿನ್ನದಱ ಪೆಂಪಂ ಬಣ್ಣಿಸಲ್ಬರ್ಕುಮೇ     || ೫೪ ||

ವ || ಆ ನಂದೀಶ್ವರದ್ವೀಪಮಂ ತದ್ವಿಗುಣಯೋಜನವಿಸ್ತಾರದಿಂ ಸುತ್ತಿರ್ದುದು ನಂದೀಶ್ವರಸಮುದ್ರಮಿಂತು ದ್ವಿಗುಣದ್ವಿಗುಣವಿಸ್ತಾರದಿಂ ಪಂಚವಿಂಶತಿಕೋಟಿ ಕೋಟ್ಯುದ್ಧಾರ ಪಲ್ಯೋಪಮರೇಣುಸಂಖ್ಯಂಗಳಾಗಿ ಶುಭನಾಮಾಭಿರಾಮದ್ವೀಪಸಾ ಗರಂಗಳಸಂಖ್ಯಾತಂ ಪೋಗೆ ಕಟ್ಟಕಡೆಯಲ್ ಸ್ವಯಂಭೂರಮಣದ್ವೀಪಮಿರ್ಕುಮಾ ದ್ವೀಪಮಧ್ಯಪ್ರದೇಶದೊಳ್ ಸ್ವಯಂಪ್ರಭಾಚಲಮಿರ್ಕುಮಿಂತಾ ಮಾನುಷೋತ್ತರ ಪರ್ವತಂ ಮೊದಲಾಗಿ ಸ್ವಯಂಪ್ರಭಾಚಲಂಬರಮೆಡೆಯೆಡೆಯೊಳಿರ್ಪ ದ್ವೀಪ ಸಮುದ್ರಂಗಳ ಕಲ್ಪವೃಕ್ಷವನಾಕೀರ್ಣಂಗಳಾಗಿ ಪುಟ್ಟಿ ಜಘನ್ಯಭೋಗಭೂಮಿಪ್ರಭಾ ಗಂಗಳಾಗಿರ್ಕ್ಕುಂ ಮತ್ತಮಲ್ಲಿ ಸರ್ವರತ್ನಮಯ ಪ್ರಾಸಾದಂಗಳಿನಸಂಖ್ಯಾತಯೋಜನ ವಿಸ್ತೀರ್ಣಂಗಳಾಗಿ ವ್ಯಂತರದೇವಪುರಂಗಳಿರ್ಕ್ಕುಮಲ್ಲಿ ಶಸ್ತ್ರಘಾತಪಾಶಬಂಧನಮಿಷ ಭಕ್ಷಣಾಗ್ನಿಪ್ರವೇಶಾನ್ಯ ಸಮಾಧಿಯಿಂ ಸತ್ತಮನುಷ್ಯರುಂ ವ್ಯಂತರರಾಗಿ ಪುಟ್ಟಿ ಪದ್ಮಾದಿಸರೋವರಂಗಳೊಳಂ ಶಾಲ್ಮಲ್ಯಾದಿ ವೃಕ್ಷಂಗಳೊಳಂ ಹಿಮವದಾದಿ ಪರ್ವತಂಗಳೊಳಂ ಕ್ರೀಡಿಸುತ್ತಿರ್ಪರ್ ಮತ್ತಮಲ್ಲಿ ನಿಃಶೀಲವ್ರತಮನುಷ್ಯತಿರ್ಯಗ್ಜೀವಂಗಳ್ ದಾನಾನುಮೋದನದಿಂ ಪರಸ್ಪರ ವಿರೋಧವಿರಹಿತಪಂಚೇಂದ್ರಿಯತಿರ್ಯ್ಗಗ್ಜಾತಿಗಳಾಗಿ ಪುಟ್ಟಿ ಪಲ್ಯೋಪಮಾಯುಷ್ಯಂಗ ಳಾಗಿರ್ಕುಮಾ ಸ್ವಯಂಭೂರಮಣದ್ವೀಪಮಂ ಬಳಸಿ ಮಹಾಸ್ವಯಂಭೂರಮಣಾಂ ಭೋರಾಶಿಯಿರ್ಕ್ಕುಂ

ಅದಱೊಳಗಿರ್ಪ ಮಹಾಮ
ತ್ಸ್ಯದಗಲಮೈನೂಱುಯೋಜನಂ ನೀಳ ಮ
ತ್ತದಱಿರ್ಮ್ಮಡಿಯೋಜನಮಿ
ನ್ನದಱರ್ಧಾರ್ಧಪ್ರಮಾಣಮದಱುತ್ಸೇದಂ      || ೫೫ ||

ಅದಱೊಳ್ ದ್ವಾದಶಯೋಜನಂ ವಿಕಸಿತಾಂಭೋಜಾತಷಂಡಂಗಳಂ
ತದೞೊಳ್ನೋಡೆ ಸಹಸ್ರಯೋಜನಮನಿಕ್ಕುಂ ಪದ್ಮನಾಳಂಗಳಂ
ತದಱೊಳ್ ತುಂಬಿಗಳೊಂದುಯೋಜನಮದಿರ್ಕುಂ ಭಾವಿಪಂಗೆಂದೊಡಿ
ನ್ನದಱೊಂದಂಮನಂತುಟಿಂತುಟೆನಲೆಂತುಂ ಮಾನವರ್ಬಲ್ಲರೇ    || ೫೬ ||

ಅಕ್ಕರ || ಲವಣಕಾಳೋದಕಸ್ವಯಂಭೂರಮಣಂಗಳೊಳ್ಜಲಚರಂಗಳ್ ಪುಟ್ಟುಗುಂ
ಲವಣವಾರುಣಿಕ್ಷೀರಘೃತಾಂಭೋಧಿಜಲಮೆಲ್ಲಂ ತಂತಮ್ಮ ಸವಿಗಳಕ್ಕುಂ
ಪ್ರವರಪುಷ್ಕರಕಾಳೋದಕ ಸ್ವಯಂಭೂರಮಣಂಗಳಚ್ಛಜಲಂ
ವಿವಿಧಭೇದಪಾರಾವಾರಂಗಳ ನೀರೆಲ್ಲಮಿಕ್ಷುರಸೋಪಮಾನಂ      || ೫೭ ||

ಸಮವೃತ್ತಮಾ ಸ್ವಯಂಭೂ
ರಮಣಮಹಾಂಭೋಧಿವರೆಗಮೆಸೆದಿರ್ದೀ ಮ
ಧ್ಯಮಲೋಕಮೇಕರಜ್ಜು
ಪ್ರಮಾಣಮಕ್ಕುಂ ಪ್ರಣೂತಜಿನಪತಿಮತದಿಂ    || ೫೮ ||

ಅತ್ತಲಲೋಕಾಕಾಶಂ
ಸುತ್ತಿರ್ದುದನಂತಮಲ್ಲಿ ಲೋಕದೊಳೊಂದುಂ
ಸುತ್ತಿಲ್ಲ ಭಾವಿಪಾಗಳ್
ಮತ್ತೇನುಂ ತಮ್ಮೊಳಿಲ್ಲ ತನ್ಮಯರೂಪಂ       || ೫೯ ||

ವ || ಮತ್ತಮೀ ಮಧ್ಯಮಲೋಕದ ಪ್ರತಿಬದ್ಧಮಾಗಿ ಚಿತ್ತೆಯೆಂಬ ನೆಲದಿಂ ಮೇಗೇೞ್ನೂಱುತೊಂಬತ್ತುಯೋಜನಾಂತರದೊಳ್ ನೂಱುಪತ್ತುಯೋಜನಬಾಹುಲ್ಯ ವಿಸ್ತಾರದಿಂ ಮಂದರಮಹೀಧರದ ನಂದನಮೆಂಬ ಮೇಖಳೆಯಿಂ ಸಾಸಿರದ ನೂಱಿಪ್ಪತ್ತೊಂದುಯೋಜನಮಗಲದಿಂತಾರಾಗಣವಿಮಾನಂಗಳಿರ್ಕ್ಕುಮಲ್ಲಿಂ ಮೇಲೆ ದಶಯೋಜನಾಂತರದೊಳ್ ಕಿಂಚಿನ್ಯೂನಯೋಜನವಳಯದಿಂ ಸೂರ್ಯಕಾಂತ ಮಣಿಮಯವಾಗಿ ಸೂರ್ಯವಿಮಾನಮುಮಲ್ಲಿಂ ಮೇಗಶೀತಿಯೋಜನಾಂತರದೊಳದಱಿನಿನಿಸಗ್ಗಳಂ ಚಂದ್ರಕಾಂತಮಣಿಮಯಮಪ್ಪಚಂದ್ರವಿಮಾನಮುಮಲ್ಲಿಂ ಮೇಗೆ ನೆಗೆ ದತ್ತ ನಾಲ್ಕುಯೋಜನಾಂತರದೊಳ್ ಅಶ್ವಿನ್ಯಾದಿ ನಕ್ಷತ್ರಂಗಳಲ್ಲಿಂ ಮೇಗೆಯನಿತೆ ಯೋಜನಾಂತರದೊಳ್ ಬುಧನ ವಿಮಾನಮಲ್ಲಿಂದತ್ತಲ್ ಯೋಜನತ್ರಿತಯಾಂತರದೊಳ್ ಶುಕ್ರ ವಿಮಾನಮುಮಲ್ಲಿಂ ಮೇಲೆ ಯೋಜನತ್ರಯಾಂತರದೊಳ್ ಬೃಹಸ್ಪತಿಯ ವಿಮಾನಮುಮಲ್ಲಿಂದತಲೇ ಮೂಱುಯೋಜನಂದಂತರದೊಳ್ ಮಂಗಳನ ವಿಮಾನಮಲ್ಲಿಂ ಮೇಗನಿತೆ ಯೋಜನಾಂತರದೊಳ್ ಶನಿಯ ವಿಮಾನಮಿರ್ಕ್ಕುಂ ಚಂದ್ರಂಗೆ ಲಕ್ಷಸಂವತ್ಸರಾದಿಕಪಲ್ಯೋಪಮಮುಂ ಬೃಹಸ್ಪತಿಗೆ ಪಲ್ಯೋಪಮಮುೞಿದ ಗ್ರಹಂಗಳ್ಗೆಲ್ಲಂ ಪಲ್ಯೋಪಮಾರ್ಧಂ ನಕ್ಷತ್ರತಾರಾಗಣಕ್ಕೆ ಯುತ್ಕೃಷ್ಟದಿಂ ಪಲ್ಯೋಪಮಚತುರ್ಥಾಂಶಂ ಜಘನ್ಯದಿಂ ಪಲ್ಯೋಪಮಪಾಷ್ಟಮ ಭಾಗಮಕ್ಕುಮಂತಾ ಜ್ಯೋತಿರ್ಲೋಕಜನಿತರೆಲ್ಲರುಮಯೋನಿಜನಿತರುಂ ಸಪ್ತಚಾಪೋತ್ಸೇಧರುಮಣಿ ಮಾದಿಗುಣಗಣಾನ್ವಿತರುಮಪ್ಪರ್ ಚಂದ್ರಾದಿತ್ಯವಿಮಾನಂಗಳ್ ತಮ್ಮಿರ್ದಲ್ಲಿಂ ಕೆೞಗೆ ಸಾಸಿರದೆಂಟುನೂಱು ಯೋಜನಂಬರಂ ಕೆಲದೊಳೈವತ್ತು ಸಾಸಿರ ಯೋಜನಂಬರಂ ಮೇಲೆ ನೂಱುಯೋಜನಂಬರಂ ಆತ್ಮೀಯಸಹಸ್ರಕರಾಳಂಬನ ದಿನಂಬರಾಂತರದೊಳಿರ್ದ ಳುಂಬಮಾಗೆ ಬೆಳಗುತ್ತಿರ್ಕ್ಕುಮಲ್ಲದೆಯುಂ

ದಿನಕರಹಿಮಕರನಕ್ಷ
ತ್ರಿನಿಖಿಲತಾರಾಗ್ರಹಂಗಳತ್ಯಾಗ್ರಹದಿಂ
ಕನಕಮಹೀಧರಮಂ ನಿ
ಚ್ಚನಿಚ್ಚಮೋರಂತೆ ಸಂತತಂ ಬಲವರ್ಕುಂ        || ೬೦ ||

ವ || ಮತ್ತಮಾ ಮಹೀಧರದ ಚೂಲಿಕಾಗ್ರದಿಂ ವಾಲಾಗ್ರಮಾತ್ರಾಂತರಿತಮಾಗಿ ಸಾರ್ಧರಜ್ವಭ್ಯಂತರದೊಳ್ ಸೌಧಮೇಂದ್ರನ ಋತುವಿಮಾನಂ ನಡುವಾಗೆ ಸಂಖ್ಯಾತಾ ಸಂಖ್ಯಾತಯೋಜನ ವಿಸ್ತೀರ್ಣಂಗಳ್ ವಿಚಿತ್ರ ಮಣಿಮಯಮರೀಚಿಮಂಜರೀರಂಜಿತಾ ನೂನವಿಮಾನಂಗಳ್ ಕಿಕ್ಕಿಱಿಗಿಱಿದಿರೆ

ಮಾಧುರ್ಯಗೀತನಿನದಾ
ಗಾಧಂಗಳ್ ಕಲ್ಪವಲ್ಲರೀಲಲಿತಾವ್ಯಾ
ಬಾಧಂಗಳ್ ಕರಮೆಸೆವುವು
ಸೌಧರ್ಮೇಶಾನಮೆಂಬ ಕಲ್ಪಯುಗಂಗಳ್        || ೬೧ ||

ವ || ಆ ಕಲ್ಪಂಗಳೆರಡಕ್ಕಂ ಸೌಧರ್ಮೇಂದ್ರನುಮೀಶಾನೇಂದ್ರನುಮೆಂದಿರ್ವ ರಿಂದ್ರರಪ್ಪರವೆರಡಱೊಳಂ ಯಥಾಕ್ರಮದಿಂ ಮೂವತ್ತೆರಡುಲಕ್ಕೆಯುಮಿರ್ಪತ್ತೆಂಟ ಲಕ್ಕೆಯುಂ ವಿಮಾನಂಗಳಕ್ಕುಮಲ್ಲಿಯ ವೈಮಾನಿಕರೆಲ್ಲಂ ಸಪ್ತಹಸ್ತೋತ್ಸೇಧಶರೀರರುಮುತ್ಕೃಷ್ಟದಿಂ ದ್ವಿಸಾಗರೋಪಮಾಯುಷ್ಯರುಂ ಕಾಯಪ್ರವೀಚಾರರುಮಪ್ಪರಲ್ಲಿಂ ಮೇಲೆ ಸಾರ್ಧರಜ್ವಂತರಾಭ್ಯಂತರದೊಳ್

ಸುಮನೋಹರಮೆನಿಪ ಸನ
ತ್ಕುಮಾರಮಾಹೇಂದ್ರಕಲ್ಪರುದ್ರಕಲ್ಪಂಗಳ್ ಸಂ
ದಮರಪಟುಪಟಹನಿನದದಿ
ನಮರೀಜನಗೀತವಾದ್ಯದಿಂ ಕರಮೆಸೆಗುಂ         || ೬೨ ||

ವ || ಆ ಕಲ್ಪಂಗಳೆರಡಕ್ಕಂ ಸನತ್ಕುಮಾರೇಂದ್ರನುಂ ಮಾಹೇಂದ್ರನುಮೆಂದಿರ‍್ವರಿಂದ್ರರಪ್ಪಂತಾಯೆರಡಱೊಳಮನುಕ್ರಮದಿಂ ಪನ್ನೆರಡುಲಕ್ಕೆಯುಮೆಂಟುಲಕ್ಕೆಯುಂ ವಿಮಾನಮಕ್ಕುಮಲ್ಲಿಯನಿಳಿಂಪರೆಲ್ಲಂ ಷಡ್ರತ್ನಿಪ್ರಮಾಣದೇಹರುಂ ಸಪ್ತಸಮುದ್ರೋಪಮಾಯುಷ್ಯರುಂ ಸ್ಪರ್ಶಪ್ರವೀಚಾರರುಮಪ್ಪರಲ್ಲಿಂ ಮೇಲೆಯರ್ಧರಜ್ವಭ್ಯಂತರದೊಳ್

ಸುತ್ತಲುಮೆಸೆವ ಪತಾಕೆಗೆ
ಳೆತ್ತಂ ಮಿಳಿರ್ದೆಸೆಯೆ ಮಣಿವಿಮಾನಾವಳಿಯೊಳ್
ಪ್ರೋತ್ತುಂಗಬ್ರಹ್ಮಬ್ರ
ಹ್ಮೋತ್ತರಕಲ್ಪಂಗಳಿರ್ಕುಮತಿನಿಬಿಡಂಗಳ್      || ೬೩ ||

ವ || ಆ ಕಲ್ಪಂಗಳೆರಡಕ್ಕುಂ ಬ್ರಹ್ಮೇಂದ್ರನಿಂದ್ರನಕ್ಕುಮಂತವೆರಡಱೊಳಂ ನಾಲ್ಕುಲಕ್ಕೆ ವಿಮಾನಮಕ್ಕುಮಲ್ಲಿಯ ದಿವಿಜರೆಲ್ಲಂ ಪಂಚರತ್ನಿಪ್ರಮಾಣರುಂ ದಶಪಾರಾವಾ ರೋಪಮಾಯುಷ್ಮರುಂ ರೂಪಪ್ರವೀಚಾರರಪ್ಪರಾ ಬ್ರಹ್ಮಕಲ್ಪದಲ್ಲಿ ಸಾರಸ್ವತಾದಿತ್ಯ ವಹ್ನ್ಯರುಣಗರ್ದತೋಯತುಷಿತಾವ್ಯಾಬಾಧಾರಿಷ್ಟರೆಂಬೆಣ್ಬರುಂಲೋಕಾಂತಿಕದೇವರ್ ವಸಿಯಿಸುವರೆಲ್ಲರುಮಷ್ಟಸಾಗರೋಪಮಾಯುಷ್ಯರುಂ ವಿಶುದ್ಧಲೇಶ್ಯಾ ಪರಿಣಾಮರು ಮಪ್ಪರಲ್ಲಿಂದತ್ತಲರ್ಧರಜ್ಜಭ್ಯಂತರದೊಳ್

ಅವಿರಳಮಣಿಮಯಭಾಸುರ
ದಿವಿಜವಿಮಾನಪ್ರತಾನಲಲಿತಂಗಳ್ ಲಾಂ
ತವಕಾಪಿಷ್ಠಂಗಳ್ ಕ
ಲ್ಪವಿಶ್ರುತಂಗಳ್ ಸುರೇಂದ್ರಸುಖನಿಲಯಂಗಳ್ || ೬೪ ||

ವ || ಆ ಕಲ್ಪಗಳೆರಡಕ್ಕಂ ಲಾಂತವೇಂದ್ರನಿಂದ್ರನಕ್ಕುಮವೆರಡಱೊಳಂ ಲಕ್ಷಾರ್ಧವಿಮಾನಮಕ್ಕುಮಲ್ಲಿಯ ದಿವಿಜರೆಲ್ಲಂ ಪಂಚರತ್ನಿಪ್ರಮಾಣರುಂ ಚತುರ್ದಶ ಸಮುದ್ರೋಪಮಾಯುಷ್ಯರುಂ ರೂಪಪ್ರವೀಚಾರರುಮಪ್ಪರಲ್ಲಿಂದತ್ತಲರ್ಧರಜ್ವಭ್ಯಂ ತರದೊಳ್

ಮಂಗಳಸುರಲಕ್ಷ್ಮೀಸದ
ನಂಗಳ್ ಮದನಪ್ರಸಾಧನೋಚಿತಸಂಸ್ಥಾ
ನಂಗಳ್ ಶುಕ್ರಮಹಾಶು
ಕ್ರಂಗಳ್ ಕಲ್ಪಂಗಳಿರ್ಕುಮವಿಕಲ್ಪಂಗಳ್           || ೬೫ ||

ವ || ಆ ಕಲ್ಪಂಗಳೆರಡಕ್ಕಂ ಶುಕ್ರೇಂದ್ರನಿಂದ್ರನಕ್ಕುಮಂತಾ ಎರಡಱೊಳಮಾಗಿ ನಾಲ್ವತ್ತುಸಾಸಿರವಿಮಾನಮಕ್ಕುಮಲ್ಲಿಯ ದಿವಿಜರೆಲ್ಲಂ ಪಂಚರತ್ನಿಪ್ರಮಾಣರುಂ ಚತುರ್ದಶ ಸಮುದ್ರೋಪಮಾಯುಷ್ಯರುಂ ರೂಪಪ್ರವೀಚಾರುರಮಪ್ಪರಲ್ಲಿಂದತ್ತಲರ್ಧರಜ್ವಭ್ಯಂತರದೊಳ್

ಮಂಗಳಸುರಲಕ್ಷ್ಮೀಸದ
ನಂಗಳ್ ಮದನಪ್ರಸಾಧನೋಚಿತಸಂಸ್ಥಾ
ನಂಗಳ್ ಶುಕ್ರಮಹಾಶು
ಕ್ರಂಗಲ್ ಕಲ್ಪಂಗಳಿರ್ಕುಮವಿಕಲ್ಪಂಗಳ್          || ೬೬ ||

ವ || ಆ ಕಲ್ಪಂಗಳೆರಡಕ್ಕಂ ಶುಕ್ರೇಂದ್ರನಿಂದ್ರನಕ್ಕುಮಂತಾ ಎರಡಱೊಳಮಾಗಿ ನಾಲ್ವತ್ತುಸಾಸಿರವಿಮಾನಮಕ್ಕುಮಲ್ಲಿಯ ದಿವಿಜರೆಲ್ಲಂ ಹಸ್ತಚತುಷ್ಟಯೋತ್ಸೇಧ ದೇಹರುಂ ಷೋಡಶಸಮುದ್ರೋಪಮಾಯುಷ್ಯರುಂ ಶಬ್ದಪ್ರವೀಚಾರರುಮಪ್ಪರಲ್ಲಿಂ ದತ್ತಲರ್ಧರಜ್ವಭ್ಯಂತರದೊಳ್

ಓರಂತೆ ತೊಳಗಿ ಪೊಳೆವ ಶ
ತಾರಸಹಸ್ರಾರಕಲ್ಪಯುಗಳಂಗಳ್ ಶೋ
ಭಾರಮಣೀಯಂಗಳ್ ಸುರ
ನಾರೀಕೇಳೀವಿಲಾಸವಿಸ್ಫುರಿತಂಗಳ್   || ೬೭ ||

ವ || ಆ ಕಲ್ಪಂಗಲೆರಡಕ್ಕಂ ಶತಾರೇಂದ್ರನಿಂದ್ರನಕ್ಕುಮಂತವೆರಡಱೊಳಮಱು ಸಾಸಿರವಿಮಾನಂಗಳಕ್ಕುಮಲ್ಲಿಯ ವೃಂದಾರಕರೆಲ್ಲಂ ಹಸ್ತಚತುಷ್ಟಯೋತ್ಸೇಧರುಂ ಅಷ್ಟಾದಶರತ್ನಾಕರೋಪಮಾಯುಷ್ಯರುಂ ಶಬ್ದಪ್ರವೀಚಾರರುಮಪ್ಪರಲ್ಲಿಂ ಮೇಗರ್ಧ ರಜ್ವಭ್ಯಂತರದೊಳ್

ಅತಿವಿಶ್ರುತಾನತಪ್ರಾ
ಣತಾಭಿಧಾನಾಭಿರಾಮಮೆನಿಸಿದ ಕಲ್ಪ
ದ್ವಿತಯಂಗಳ್ ಸುರಜನಕರ
ಹತದುಂದುಭಿಮೃದುರವಂಗಳಿಂ ರಂಜಿಸುಗುಂ  || ೬೮ ||

ವ || ಆ ಕಲ್ಪಂಗಲೆರಡಕ್ಕಂ ಯಥಾಕ್ರಮದಿಂದಾನತೇಂದ್ರನುಂ ಪ್ರಾಣತೇಂದ್ರನು ಮೆಂದಿರ್ವರಿಂದ್ರರಪ್ಪರಲ್ಲಿಯ ಸುರರೆಲ್ಲಂ ಸಾರ್ಧತ್ರಿತಯ ಹಸ್ತೋತ್ಸೇಧರುಂ ವಿಂಶತಿ ಸಾಗರೋಪಮಾಯುಷ್ಯರುಂ ಮನಃಪ್ರವೀಚಾರರುಮಪ್ಪರಲ್ಲಿಂದತ್ತಲರ್ಧರಜ್ವಭ್ಯಂ ತರದೊಳ್

ತಳ್ಪತಲಶೋಭಿತಂಗಳ
ನಲ್ಪಸುಖೈಕಾಸ್ಪದಂಗಳತಿಲೀಲಾಸಂ
ಕಲ್ಪಂಗಳಾರಣಾಚ್ಯುತ
ಕಲ್ಪದ್ವಿತಯಂಗಳಿರ್ಕುಮಮರನುತಂಗಳ್       || ೬೯ ||

ವ || ಆ ಕಲ್ಪಂಗಳೆರಡಕ್ಕಮನುಕ್ರಮದಿಂದಾರಣೇಂದ್ರನುಮಚ್ಯುತೇಂದ್ರನು ಮೆಂದಿರ್ವರಿಂದ್ರರಪ್ಪರಂತಾ ನಾಲ್ಕುಂ ಸ್ವರ್ಗಂಗಳೊಳಮೇೞುನೂಱುವಿಮಾನಮಕ್ಕುಮಾಕಲ್ಪದ್ವಯದ ಕಲ್ಪವಾಸಿಗರೆಲ್ಲಂ ತ್ರಿಹಸ್ತೋತ್ಸೇಧರುಂ ದ್ವಾವಿಂಶತಿಸಾಗರೋಪಮಾಯುಷ್ಯರುಂ ಮನಃಪ್ರವೀಚಾರದಿವ್ಯಸುಖರುಮಪ್ಪರಲ್ಲಿಂ ಮೇಗೇಕರಜ್ವಭ್ಯಂ ತರದೊಳ್

ಎತ್ತಂ ಗ್ರೈವೇಯಕಮೊಂ
ಬತ್ತುಂ ರಮಣೀಯಮೆನಿಸಿದನುದ್ದಿಶೆಗಳುಮೊಂ
ಬತ್ತುಮಣೂತ್ತರೆಯಯ್ದುಂ
ಪ್ರೋತ್ತುಂಗ ವಿಮಾನರಾಜಿಯಿಂ ರಂಜಿಸುಗುಂ   || ೭೦ ||

ವ || ಅಂತಾ ನವಗ್ರೈವೇಯಕಂಗಳ ಪೂರ್ವತ್ರಯಂಗಳೊಳಪೂರ್ವಮಣಿ ವಿಮಾನಂಗಳ್ ನೂಱುಪನ್ನೊಂದಕ್ಕುಮಲ್ಲಿಯಹಮಿಂದ್ರರೆಲ್ಲಂ ಸಾರ್ಧದ್ವಿಹಸ್ತೋ ತ್ಸೇಧರುಂ ಯಥಾಕ್ರಮದಿನೇಕೈಕ ನೀರಾಕರೋಪಮಪ್ರವೃದ್ಧಿಯಿಂ ತ್ರಿಚತುಃ ಪಂಚೋತ್ತರ ವಿಂಶತಿಸಾಗರೋಪಮಾಯುಷ್ಯರುಂ ನಿಷ್ಪ್ರವೀಚಾರಸುಖರುಮಪ್ಪರ್ ಮಧ್ಯತ್ರಯದೊಳ್ ಸುರೇಂದ್ರಲಕ್ಷ್ಮೀಮಧ್ಯವಿರಾಜಮಾನಂಗಳ್ ನೂಱೇೞಕ್ಕುಮಲ್ಲಿಯಹಮಿಂದ್ರರೆಲ್ಲಂ ದ್ವಿಹಸ್ತೋತ್ಸೇಧರುಂ ಯಥಾಕ್ರಮದಿಂ ಷಟ್ಸಪ್ತಾಷ್ಟೋತ್ತರ ವಿಂಶತಿಸಮುದ್ರೋಪಮಾ- ಯುಷ್ಯರುಂ ನಿಷ್ಪ್ರವೀಚಾರರುಮಪ್ಪರುತ್ತರೋತ್ತರಾನೂನ ವಿಮಾನಂಗಳ್ ತೊಂಬತ್ತೊಂದಕ್ಕುಮಲ್ಲಿಮಯಹಮಿಂದ್ರರೆಲ್ಲರಂ ಸಾರ್ಧಹಸ್ತೋತ್ಸೇಧರುಂ ಯಥಾಕ್ರಮದಿನೇಕೋನತ್ರಿಂಶತ್ ತ್ರಿಂಶದೇಕತ್ರಿಂಶತ್ಸಾಗರೋಪಮಾಯುಷ್ಯರುಂ ನಿಷ್ಪ್ರವೀಚಾರರುಮಪ್ಪರಲ್ಲಿಂದತ್ತ ಚಂಚತ್ಪಂಚರತ್ನಮಯಮಪ್ಪ ಪಂಚಾಣೂತ್ತರೆಗಳೊಳ್ ವಿಜಯವೈಜಯಂತ ಜಯಂತಾಪರಾಜಿತಸರ್ವ್ಗಾರ್ಥ್ದಸಿದ್ಧಿ ಶೋಭಾಭಿಧಾನ ವಿಮಾನಂಗಳೈದಕ್ಕುಮಲ್ಲಿಯ ಹಮಿಂದ್ರರೆಲ್ಲಂ ಏಕಹಸ್ತೋತ್ಸೇಧರುಂ ತ್ರಯಸ್ತ್ರಿಂಶತ್ಸಾಗರೋಪಮಾಯುಷ್ಯರುಂ ನಿಷ್ಪ್ರವೀಚಾರರುಂ ನಿರತಿಶಯಸುಖ ರುಮಪ್ಪರಲ್ಲದೆಯುಂ

ಎನಿತು ಸಮುದ್ರೋಪಮಮಂ
ತನಿತೆ ಸಹಸ್ರಾಬ್ದಸಂಖ್ಯೆಗಮೃತಾನ್ನಮನೊ
ಯ್ಕನೆ ದಿವಿಜರೆಲ್ಲರೆಂದುಂ
ಮನದೊಳ್ ಮನಮೊಸೆದು ನೆನೆದು ತಣ್ಣನೆ ತಣಿವರ್     || ೭೧ ||

ಪರಮಾಯುಃಪರಿಮಿತಸಾ
ಗರೋಪಮಾರ್ಧಪ್ರಮಾಣಮಾಸಾವಧಿಯಿಂ
ಸುರರೆಲ್ಲಂ ನಸುಸುಯ್ವ
ರ್ಸುರಭಿಶ್ವಾಸಪ್ರಕಾಶನಾಸಾಪುಟದಿಂ  || ೭೨ ||

ಮ || ಅಂತಾ ಸ್ವರ್ಗಸಂಭವರೆಲ್ಲಮಯೋನಿಸಂಭವರುಂ ನಿದ್ರಾಲಸ್ಯಾದಿ ಬಾಧಾವಿದೂರರುಂ ನಿತ್ಯಯೌವನರುಂ ನಿರತಿಶಯಸುಭಗಮೂರ್ತಿಗಳುಂ ಸಹಜ ಮಣಿಭೂಷಣಾಂಬರರುಂ ಸಹಜಸುರಭಿಗಂಧರುಮಪ್ಪರಲ್ಲಿ ಸೌಧರ್ಮೇಂದ್ರನುಂ ಆತನ ಪಟ್ಟಮಹಾದೇವಿಯುಂ ಆತನ ಭೋಗಲೋಕಪಾಲಕರುಂ ದಕ್ಷಿಣೇಂಧ್ರರುಂ ಲೋಕಾಂತಿಕ ದೇವರುಂ ವಿಜಯಾದ್ಯಹಮಿಂದ್ರರುಂ ದ್ವಿಚರಮರಪ್ಪರಿಂದ್ರಪ್ರತೀಂದ್ರ ಸಾಮಾನಿಕ ಪ್ರಭೃತಿ ಮಹರ್ಧಕಸ್ಥಾನಂಗಳೊಳಂ ನವಾಣೂತ್ತರೆ ಪಂಚಾಣೂತ್ತರೆಗಳೊಳಂ ಸಮ್ಯಗ್ದೃಷ್ಟಿಗಳಲ್ಲದೆ ಪುಟ್ಟುವರಲ್ಲರ್ ಜಿನವಚನಮಂ ಕೈಕೊಂಡನಶನಾದಿ ಕ್ರಿಯೆಗಳಿನಿಂದ್ರಿಯ ವಿಷಯ ನಿಗ್ರಹದಿನಭವ್ಯಜೀವಮುತ್ಕೃಷ್ಟದಿನುಪರಿಮಗ್ರೈವೇಯಕಂಬರಂ ಸಲ್ಗುಂ ಸ್ತ್ರೀಜನ ಮುಮೇಕಾದಶವಿಧೋಪಾಸಕಜನಮುಮಚ್ಯುತ ಕಲ್ಪಂಬರಂ ಸಲ್ವರ್ ಗತಿಶರೀರ ಪರಿಗ್ರಹಾಭಿಮಾನಂಗಳ್ ಪೋಗೆವೋಗೆ ಹೀನಂಗಳ…….. ಸ್ಥಿತಿಪ್ರಭಾವಸುಖದ್ಯುತಿ ಲೇಶ್ಯಾವಿಶುದ್ಧೇಂದ್ರಿಯಾವಧಿವಿಷಯಂಗಳ್ ಕ್ರಮಕ[ಮದಿ]….. ನಧಿಕಂಗಳಕ್ಕು ಮಲ್ಲದಲ್ಲದೆಯುಂ

ಸುರನಾರಿಯರೆಲ್ಲರಂ ಮೊದ
ಲೆರಡುಂ ಕಲ್ಪದೊ….. ತಾ
ವರಷೋಡಶಕಲ್ಪದೊಳಂ
ಚರಿಯಿಸುವರ್ತಂಮತಂಮ ಮಚ್ಚರಿಯಾಗಲ್  || ೭೩ ||

ಸುರ…………… ರಮುಂ
ಪರಿವಾರಮುಮಾ ವಿಹಾರಮುಂ ಕಲ್ಪಜರೊಳ್
ದೊರೆಕೊಳ್ಗುಂ ಕಲ್ಪಾತೀತರೊ
ಳೆ……….. ಮೊಂದುಮಣವಿಲ್ಲೆಂದುಂ            || ೭೪ ||

ವ || ಮತ್ತಮಾ ಸಮಸ್ತಕಲ್ಪೋತ್ಪನ್ನತ ಕಲ್ಪಾತೀತಂಗಳ ವಿಮಾನ……… ದ್ರಕಶ್ರೇಣೀಬದ್ಧಪ್ರಕೀರ್ಣಕ ವಿಕಲ್ಪಮಾಳ್ಗಿಯುಂ ಗಣನಾಪ್ರಮಾಣದಿಂದಮೆಣ್ಬತ್ತ…… ಲಕ್ಕೆಯೆಂಬತ್ತೇೞುಸಾಸಿರದಿರ್ಪ್ಪತ್ತು ಮೂಱು ವಿಮಾನಮಕ್ಕುಮಿಂತು

ಓರೊಂದು ಸುರವಿಮಾನದೊ
ಳೋರೋಂದೆಸೆದಿರ್ಪುದಿಂತಕೃತ್ತ್ರಿಮಚೈತ್ಯಾ
ಗಾರಂಗಳ್ ಭವ್ಯಜನಾ
ಧಾರಂಗಳ್ ಸಕಲ ದುರಿತನಿವಹ ಹರಂಗಳ್       || ೭೫ ||

ಅತಿಭಾಸುರಂಗಳತಿ ವಿ
ಶ್ರುತಂಗಳತಿ ಸುಂದರಂಗಳತಿಲಲಿತಂಗ
ಳುತವಹನಯನಾಂಬರಪ
ಕ್ಷತ ಈಷತ್ಪ್ರಾಗ್ಭಾರಮೆಂಬ ಭೂಮಿಯ ಮಧ್ಯದಲ್ಲಿ     || ೭೬ ||

ವ || ತ್ರಿಭುವನಭವನಕಲಶಾಯಮಾನಮುಂ ಯೋಜನದ್ವಿತಯಾಂತ್ಯ ಬಾಹಲ್ಯಮುಮಷ್ಟಯೋಜನ ಮಧ್ಯಬಾಹಲ್ಯಮುಂ ನಾಲ್ವತ್ತೈದುಲಕ್ಕೆಯೋಜನ ಸಮವೃತ್ತಪ್ರಕಾರಮುಂ ಶ್ವೇತಾತಪತ್ರಾಕಾರಮುಮಸೀತಾವನಿಯೆಂಬ ಶಿಷ್ಫಾಟಿಕಶಿಲಾತಲ ದ ಮೇಗರ್ಧಯೋಜನಬಾಹಲ್ಯದಿಂ ಘನೋದದಿಯಿರ್ಕ್ಕುಮದಱರ್ಧಬಾಹಲ್ಯದಿಂ ಘನಾನಿಲಮಿರ್ಕುಮಲ್ಲಿಂದತ್ತಲ್ ನಾಲ್ನೂಱಿರ್ಪ್ಪತ್ತೈದುಬಿಲ್ಗುಂದಿದೊಂದು ಕ್ರೋಶ ಬಾಹಲ್ಯಮಾಗಿರ್ದ ತನುವಾತದ ಮೇಗಳ ಭಾಗದೊಳಷ್ಟಕರ್ಮನಿರ್ಮೂಲಕರ ರುಮಪ್ಪ…… ಲಯರುಮಪ್ಪ ಸಿದ್ಧಪರಮೇಷ್ಟಿಗಳಿಮ್ ಸಿದ್ಧಕ್ಷೇತ್ರಮದಕ್ಷಯಮ ನಂತಮವ್ಯಾ [ಭಾಧಮಪು] ನರ್ಜಾತಮಕ್ಕುಂ

ನಿರುಪಾಯಂ ನಿರ್ವಿಕಲ್ಪಂ ನಿರುಪಮವಿಭವಂ ನಿಶ್ಚಲಂ ನಿ……….
ನಿರಪೇಕ್ಷಂ ನಿರ್ಮಮತ್ವಂ ನಿರವಧಿವಿಷಯಂ ನಿಷ್ಕಲಂಕಂ ………..
………………………..ತಶ್ರೀ ನಿರಘನಿಖಿಲನಿರ್ವಾಣನಿರ್ವ್ಯಾಕುಲಶ್ರೀ
ನಿರುತಶ್ರೀ ನಿವೃತಿಶ್ರೀ ನಿರತಿಶಯನಿರಾ……..ಶ್ರೀ            || ೭೭ ||

ಜಿನಪೂಜಾವಿಧಿಯಿಂದಮಾಚರಿತದಿಂ ಸದ್ಧ್ಯಾನದಿಂ ತತ್ವಭಾವ
………………………………ತ್ತಮದಾನಪಲದಿಂ ಸಮ್ಯಗ್ವ್ರತವ್ರಾತದಿಂ
ತನುವಂ ದಂಡಿಸಿ ನೋಂತು ದಿವ್ಯತಪದಿಂ ಸ್ವರ್ಗಂಗಳೊಳ್ಪುಟ್ಟಿಭ
ವ್ಯನಿಕಾಯಂ ಕ್ರಮದಿಂದನಂತಸುಖಮುಕ್ತಿಸ್ಥಾನಮಂ ಪೊರ್ದುವರ್            || ೭೮ ||

ವ || [ಎಂದಿಂ]ತಾ ತ್ರಿಲೋಕೈಕವಂದ್ಯಂ ತ್ರಿಲೋಕಪ್ರಜ್ಞಪ್ತಿಯಂ ಪರಿವಡಿ ದಪ್ಪದೆ ಪರಿವಡಿಗೆಯ್ವುದುಮಿತ್ತಲನ್ನೆಗಂ ಮಣಿಮಾಡದ ನೆಲೆಯೊಳಮಲಮಳ ಯಜಚ್ಚಟಾಲಿಪ್ತಂ ಪದ್ಮರಾಗಮಣಿಕುಟ್ಟಿಮಪ್ರಕೀರ್ಣಮಾದ ಚಂಚಚ್ಚಂಚರೀಕ ನಿಕುರುಂಬ ಶಬಲವಿಚಕಿಲ ಕುಟ್ಮಲದೊಳವಿರಳಾಲಂಬಮಾನಮುಕ್ತಾದಾಮಸಂತಾನರಮಣೀಯಾವದಾತವಿತಾನದೊಳುದಾತ್ತ ಭಿತ್ತಿ ರಶ್ಮಿಜಾಲಜಟಿಲತಬಹಲಮಣಿ [ದೀ] ಪ್ರಿದೀಪ್ತಿಕಾಪ್ರಸರಪ್ರಭಾಭಾಸುರದೊಳಖಿಲಸುರಭಿಪರಿಮಲಾಮೋದಕಾಲಾಗರುಧೂಪಿ ತಧೂಮೋದ್ಗಾರಿ ಮರಕತಗವಾಕ್ಷಜಾಲಪರಿಶೋಭಿತದೊಳತ್ಯಂತ ಚಂದ್ರಕಾಂತ ಮಣಿಪೀಠಿಕಾಧಿಷ್ಟಿತಪರ್ಯಂಕದೊಳ್ ಪಯಃಪಯೋಧಿಡಿಂಡೀರಪಿಂಡಪಾಂಡುರೋ ಪಹಾಸಿಧವಳದುಕೂಲಾಚ್ಛದಾಚ್ಚಾದಿತ ಮೃದುತಲ್ಪದೊಳ್ ಸೂೞ್ಗೆವಂದ ನಿಜಮನೋವಲ್ಲಭೆಯೊಡನನ್ಯೋನ್ಯಾಂಗಸ್ಪರ್ಶನಾಲಿಂಗನಸುಖೋನ್ಮೀಲಿತಲೋಚನನಾಗಿ ಪರಮೋತ್ಸವದಿಂ ಪವಡಿಸಿ ಸುಖನಿದ್ರನಾದ ಸುಕುಮಾರಂ ತನ್ನಿಚ್ಛೆಯಿಂ ಮುನ್ನಮುನ್ನಿದ್ರಿತನಾಗಿ ತದೀಯ ಮನೀಶ್ವರಮುಖಕಮಲ ವಿಗಲಿತ ಮೃದುಮಧುರ ಗಂಭೀರಧ್ವನಿಯನಾಲಿಸಿ ಕೇಳುತ್ತಮಚ್ಯುತಕಲ್ಪದೊಳ್ ಮುನ್ನೆ ತನ್ನಪುಟ್ಟಿ ಬ[೦ದಪದ್ಮಗು]ಲ್ಮ ವಿಮಾನ ವ್ಯಾವರ್ಣನಾಕರ್ಣನದಿಂ ಜಾತಿಸ್ಮರನಾಗಿ ಲೋಕತ್ರಯಸ್ಥಿತಿವಿನಿ….. ತ್ಮೀಯಾಂತ ರಂಗದೊಳ್ ಸಮ್ಯಗ್ನಿಶ್ಚಯಸ್ವರೂಪದಿಂ ಭಾವಿಸಿ ನೋಡಿನೋಡಿ

ದಿಟ……………………ರಟಮೀ ಸಂಸಾರಿಜೀವಂಗಳು
ತ್ಕುಟನಾನಾಪರಿಣಾಮದಿಂ ಭ್ರಮಿಯಿಸುತ್ತಿರ್ಪ ……… ಡಂ
ತುಟಮುಂನಿಂತುಟನಿಂತುಟೆಂದಱಿಯದೀ ದುರ್ಮೋಹದೊಳ್ ಸಿಲ್ಕಿನಿ
ಸ್ಫುಟ…….ಮಱೆದಿರ್ದೆನೆನ್ನ ತನುವಾರ್ಗಾನಾರ್ಗೆ ಪೇೞಕ್ನಿಕ್ಕುವಂ ||           || ೭೯ ||

ಪೃಥ್ವಿ || ಕ್ಷಯಪ್ರತಥಿಯಿಂದನಾದ್ಯನಿದ ……….ವಾತ್ಮಿಕ
ತ್ರಮೀಭುವನಮಧ್ಯದೊಳ್ ಚತುರಶೀತಿಲಕ್ಷಪ್ರಮಾ
ಣಯೋನಿಮುಖದೊಳ್ಪಲೋ…… ಯಮನಂತಕಾಲಂ ನಿರಾ
ಶ್ರಯಂ ತೊೞಲುತಿರ್ದೆನಿನ್ನೆವರೆಗಂ ಭವಾರಣ್ಯದೊಳ್    || ೮೦ ||

ಅನುಪಮದಿವಿಜಸುಖಾಮೃತ
ವನನಿಧಿಯಂ ಪೀರ್ದು ತೃಷ್ಣೆ ಪೋಗದೆ ಮಾಯ್ದೀ
ಮನುಜಸುಖಮೆಂಬ ಮಂಜಿನ
ಪನಿಪುಲ್ಲಂ ನಕ್ಕೆ ತೃಷ್ಣೆ ತಾಂ ಪೋದಪುದೇ     || ೮೧ ||

ಕಡೆಯಿಲ್ಲದ ಸಂಸಾರದ
ಕಡೆಯಂ ಕಡೆಯೆಯ್ದೆ ಕಟ್ಟಿ ತಡೆಮಾೞ್ಪ ಗುಣಂ
ಕಡೆಗೋಡಿವರಿಯೆ ಮೋಕ್ಷದ
ಕಡೆಯಿಲ್ಲದ ಪರಮಸುಖಮನೀಗಳೆ ಪಡೆವೆಂ   || ೮೨ ||

ಪುಟ್ಟಿದ ಲೋಕಮಿಲ್ಲ ನಸುಪೊಂದದ ತಾಣಮದೊಂದುಮಿಲ್ಲ ಮೆ
ೞ್ಪಟ್ಟಗಪಟ್ಟುಕೂಡೆ ಮತಿಗೆಟ್ಟೆರ್ದೆಗೆಟ್ಟು ಬೞಲ್ದೞಲ್ದು ಬಾ
ಯ್ವಿಟ್ಟು ಕುಯೋನಿಯೊಳ್ತಿರಿದು ಪೋದುವು ಕಾಲಮನಂತಮಂತಱಿಂ
ಪುಟ್ಟದೆ ಪೋದದಿರ್ಪ ಬಗೆಯಂ ಬಗೆದಂದು ಕೃತಾರ್ಥನಾಗೆನೇ      || ೮೩ ||

ವ || ಎಂದು ಪರಮವೈರಾಗ್ಯಭಾವನೆಗಳಂ ಭಾವಿಸುವಾಗಳ್

ಪರಮಾಯು ಮೂಱುದಿವಸಂ
ಚರಿತಂ ಚರಿತಾರ್ಥನಾಗು ನೀ ನೆಂಬವೊಲಾ
ಪುರದೊಳಗೆ ಮೂಱುಜಾವಂ
ಪರಿವಡಿಸಿತ್ತೋತು ತನಗೆ ಪೇೞ್ವಂತಾಗಳ್       || ೮೪ ||

ವ || ತದನಂತರಮಾ ಮಹಾತ್ಮಂ ಸಕಳದುರಿತಹರಣಕರಣಕಾರಣತಪಶ್ಚರಣ ಪರಿಣತಾಂತರಂಗನಾಗಿ ತದ್ಗೃಹಾಂತರಾಳದಿಂ ಪೊಱಮಟ್ಟು ಪೋದೊಡೆ ರಕ್ಷ ಪಾಳಾನುಚರರಿ……………. ಯಮಕ್ಕುಮೆಂದು ಮೋಹನೀಯ ಬಂಧದ ತೊಡರ್ಪಂ ಪತ್ತುವಿಡಿಸುವಂದದಿಂ ……. ತೊಡರ್ಪಂ ಪತ್ತುವಿಡಿಸಿ ರತ್ನತ್ರಯದ ಭಂಡಾರಮಂ ತೆಱೆವಂತೆ ಪಟ್ಟಿಸಭಂಡಾರ ….. ಸಮ್ಯಗ್ವ್ರತಂಗಳುವುಂ ತೆಗೆದುಕೊಳ್ವಂತೆ ವಿಚಿತ್ರವಸ್ತ್ರಂಗಳಂ ತೆಗೆದುಕೊಂಡು ತನ್ನ….. ಇಕ್ಕುವಂತೊಂದನೊಂದಱೊಳ್ ಗಂಟಕ್ಕಿ ವಿಷಮವಿಷಯಮದೇಭಮನಾಳಿಸಿ ಕಟ್ಟುವಂತೆ ಮೆ…… ೦ದಾಕಂಬದೊಳ್ ಬಲ್ಲಿತ್ತುಗಟ್ಟಿ ಬೞಿಯಮದನಾ ಮಾಡದ ಪೆಱಗಣ್ಗಿೞಿಯಲಿಕ್ಕಿ ಪರೀಷಹ [ಭ]ಟರಂ ಬಂಚಿಸುವಂತೆ ಕಾಪಿನ ಬಂಟರಂ ಬಂಚಿಸಿ ಪರಾರ್ಧ್ಯಗುಣಮಾಲೆಯಂ ಪಿಡಿವಂತಾ ವಸ್ತ್ರಮಾಲೆಯಂ ಪಿಡಿದು ಸಂಸಾರ ಮಹಾಪರ್ವತದಿನಿೞಿವಂತೆ ಕರುಮಾಡದಿನಿೞಿದು ತಪೋವನಮಂ ಪುಗುವಂತಾಬನಮಂ ಪೊಕ್ಕು

ಮಣಿಕೂಟಾಟೋಪದಿಂದಂ ಮಣಿಮುಕುರವಿಲಾಸಗಳಿಂದಂ ಸಮುದ್ಯ
ನ್ಮಣಿಘಂಟಾಮಾಲೆಯಿಂದಂ ಮಣಿಕನಕಸಮೂಹಂಗಳಿಂದಂ ಬೆಡಂಗಿಂ
ಗೆಣೆಯಿಲ್ಲೆಂಬಂದದಿಂ ಕರಮೆಸೆವ ಜಿನಾಗಾರಮಂ ಭವ್ಯಚಿಂತಾ
ಮಣಿಗೇಹಂ ಬಂದು ಕಂಡಂ ಪರಮಜಿನಮತಾಂಭೋಜಿನೀರಾಜಹಂಸಂ        || ೮೫ ||

ಇದು ಸಮಸ್ತವಿನೇಯಜನವಿನಮಿತ ಶ್ರೀವರ್ಧಮಾನಮುನೀಶ್ವರವಂದ್ಯ
ಪರಮಜಿನೇಂದ್ರಶ್ರೀಪಾದಪದ್ಮವರಪ್ರಸಾದೋತ್ಪನ್ನ ಪ್ರಸನ್ನ ಸಹಜಕವೀಶ್ವರ
ಶ್ರೀ ಶಾಂತಿನಾಥಪ್ರಣೀತಮಪ್ಪ ಸುಕುಮಾರಚರಿತದೊಳ್
ಸುಕುಮಾರಸ್ವಾಮಿಯ ಜಿನಭವನದರ್ಶನಂ
ಏಕಾದಶಾಶ್ವಾಸಂ