ಶ್ರೀ ಮನ್ಮುನೀಂದ್ರವಂದಿತ |
ಕೋಮಲ ಕರಚರಣಭಕ್ತಿಯಿಂದಂ ಬಂದು ||
ದ್ಗಾಮಗುಣಂ ವಂದಿಸೆ ಕಂ |
ಡಾ ಮುನಿಮುಖ್ಯಂ ಸರಸ್ವತೀ ಮುಖಮುಕುರುಂ || ೦೧ ||

ಜ್ಞಾನದಿನಱೆದೆಂದಂ ನೀ |
ಮೀ ನಗರಕ್ಕಾಗಿ ಚರಿಗೆವೋಗುತ್ತುಂ ನಾ ||
ನಾನೂನ ದುಃಖಪೀಡಿತ |
ಮಾನಸೆಯಾಗುತ್ತುಮಿರ್ದ ಪೊಲವಾನಸೆಯಂ || ೦೨ ||

ಕರಣಂ ಕೈಮಿಗೆ ಕಂಡಾ |
ದರದಿಂದಂ ಮನ್ಯುಮಿಕ್ಕು ನಯನಜಲಂಗಳ್‌ ||
ಸುರಿದಿನ್ನೆಗಮಲ್ಲಿರ್ದಂ
ತರಾಯದಿಂ ಬಂದಿರೀಗಳೆಂಬುದುಮಾಗಳ್‌ || ೦೩ ||

ವ || ಅಘ್ನಿಭೂತಿಮುಣೀಶ್ವರನತ್ಯಾಶ್ಚರ್ಯಂಬಟ್ಟು

ಎನ್ನೊಡನೆ ಬಂದಿರೋ ಮೇ
ಣ್ಮುನ್ನಾ ಕೂಸಿಂಗೆ ಬುದ್ಧಿಗಲಿಸಿದಿರೋ ಪೇ ||
ೞ್ನೆಮ್ಮಡಿಗಳ್‌ ನಿಶ್ಚಯದಿಂ |
ದೆನ್ನರುಮೀ ಜಗದೊಳಿಂತು ಪೇೞ್ದರುಮೊಳರೇ || ೦೪ ||

ವ || ಎಂಬುದುಂ ದರಹಸಿತವದನಾರವಿಂದರಾಗಿ

ನಿನ್ನೊಡನೆ ಬಂದೆಮೀಗ
ಳ್ಮುನ್ನಾ ಕೂಸಿಂಗೆ ಬದ್ಧಿಗಲಿಸಿದೆಮದಱೆಂ ||
ನಿನ್ನೆಂದಮಾರ್ಗಮೆಂದು ಜ |
ಗನ್ನುತ ಚಾತುರ್ಯವಚನರಚನೆಗಳಿಂದಂ || ೦೫ ||

ವ || ಭಟ್ಟರಕರ್ಬೆಸಸುವುದುಂ ತದಂತೇವಾಸಿ ವಿಸ್ಮಯೋದಾತ್ತಚಿತ್ತನಾಗಿ

ನಾನಾವಿಧದುಃಖಾನ್ವಿತೆ |
ತಾನೆತ್ತ ವಿವಿಕ್ತಮೋಹಪಾಶನೆಗಾಗಿ ||
ರ್ದಾನೆತ್ತುಂತುಂ ಮೋಹಂ |
ತಾನನುಬಂಧಿಸಿದುದಿದಱ ಕಾರಣಮೇನೋ || ೦೬ ||

ಬೆಸಸಿಮಿದನೆನ್ನ ಮನದೊಂ |
ದು ಸಂಶಯಂ ಪತ್ತುವಿಡುವಿನಂ ವ್ಯಾಮೋಹಂ ||
ಪ್ರಶಮಿಸುವಿನಮೆಂಬುದುಮಂ |
ದೆಸೆದುದು ವಾಕ್ಪ್ರಸರಮಾಗಳಾ ಯತಿಪತಿಯಾ || ೦೭ ||

ವ || ನಿಮ್ಮಾವಾಸದೊಳಾಮಂದು ಚರಿಗೆನಿಂದಂದು ನೀನೆಮ್ಮಂ ನಿಮ್ಮ ತಮ್ಮನಪ್ಪ ವಾಯುಭೂತಿ ಯಿರ್ದಲ್ಲಿಗೊಡಗೊಂಡೊಯ್ದಾಗಳಾ ಪುರುಷನತಿಪರುಷ ವಚನಂಗಳಿಂ ತಿರಸ್ಕರಿಸಿ ನುಡಿದೊಡದುವೆ ನಿರ್ವೆಗದಿಂ ಸಂವೇಗಂ ಪುಟ್ಟ ನೀಮೀ ಯತಿಸ್ವರೂಪಮಂ ಕೈಕೊಂಡ ವಾರ್ತೆಯಂ ನಿಮ್ಮ ಮುನ್ನಿನ ಧರ್ಮಪತ್ನಿಯಪ್ಪ ಸೋಮದತ್ತೆ ನಿರ್ಣಯಮಾಗಿ ಕರ್ಣಪರಂಪರೆಯಿನಱೆ ತನ್ನ ಮೈದುನಶೈಶ್ವರ್ಯಗರ್ವದೊಳಂ ವಿದ್ಯಾಗರ್ವದೊಳಂ ನಿಮ್ಮ ಮಾವನಂ ನೀಂ ನಿರಾಕರಿಸಿ ನುಡಿದೊಡೆನ್ನ ಭರ್ತಾರಂ ನಿನ್ನನೇನುಮೆನಲಱೆಯದೆ ತನ್ನಂ ತಾನೆ ನಿಂದಿಸಿಕೊಂಡು ಸಿಗ್ಗಾಗಿ ಪೋಗಿ ತಪಂಬಟ್ಟನೆನ್ನ ಮಕ್ಕಳುಮಾನುಂ ದುಃಖಾಗ್ನಿಯೋಳ್‌ಪುಡುಪುಡನೆ ನಮೆವ ಪಾಪದ ಫಲಮಂ ನೀನಮೋಘಮುಣ್ಬೆಯೆಂದು ಮೂದಲಿಸಿ ನಿಡಿವುದುಮುರ್ವರಾಮರ ಸಭಾಭ್ಯಂತರ ಲೋಹಾಸನಸ್ಥಿತಂ ತದಾಸನದಿನಿೞೆದು ಮುಳಿದು ಪಿಡಿದೆೞೆದು ನಿನ್ನಾಣ್ಮನಪ್ಪ ನಾಣಿಲಿ ಸವಣನನೊಡಗೊಂಡು ಭಾ ಪೋಗೆಂದು ಪೊಱಮಡೆ ನೂಂಕುವುದುಮ ಪ್ರತ್ಯಾಖ್ಯಾನ ಕ್ರೋಧಕಷಾಯೋದದಿಂ ಪರಿಭವಾನಳನಳವಲ್ಲದಳುರೆ ಸೋಮದತ್ತೆ ಸೈರಿಸಲಾಱದೆ ||

ಮುಳಿದೆನ್ನನನಪರಾಧೆಯ |
ನೞಲ್ದ ವಳನಿಂತನಾಥೆಯಂ ಮೋದಿದ ಕಾ ||
ಲ್ಗ ಳನಾವ ಜನ್ಮಜನ್ಮಂಗ |
ಳೊಳಗಾಗಿಯುಮಕ್ಕೆ ಮುಂದೆ ಕೇಳ್ತಿನ್ನದಿರೆಂ || ೦೮ ||

ವ || ಎನ್ನನೊದೆದ ನಿನ್ನ ಕಾಲ್ಗಳನೆನ್ನ ಮಕ್ಕಳುಮಾನುಮೊಂದಾಗಿಯು ಮೇನಾಗಿಯುಂ ಸೀಳ್ದು ಪೋೞ್ದು ತಿಂಬೆವೆಂದಾರ್ತಧ್ಯಾನದಿಂ ನಿದಾನಂಗೆಯ್ದು ಸತ್ತು ಸಂಸಾರಕಾಂತಾರಾಂತರಾಳದೊಳ್‌‍ ತೀರ್ಯಗ್ಜಾತಿಯಾಗಿ ಪುಟ್ಟ ತಿರಿಯುತ್ತು ಮಿರ್ದುಪ್ಪಳಿತ್ತಲಾ ಸೋಮದತ್ತೆಯ ಮನೆಯೊಳುಳ್ಳ ಸರ್ವಸ್ವಮಂ ಸೂಱೆಗೊಂಡು

ತದ್ವಾಯುಭೂತಿ ವಿಭವ ಸ |
ಮುದ್ವೃತ್ತಂ ವಚನದಂಡಪರುಷತೆಯಿಂ ಸಂ ||
ಪದ್ವಶದಿನುರ್ಕಿದಂ ತೃಣ |
ವದ್ವಸುಮತಿಯೆನಿಸಿರ್ದ ವಿಶ್ವವಿಶ್ವಂಭರೆಯೊಳ್‍ || ೦೯ ||

ಪುದಿದೈಶ್ವರ್ಯದಿನಗ್ಗದಳಿಕೆಯಿಂ ಚಾತುರ್ಯದಿಂ ಶೌರ್ಯದಿಂ |
ಮುದದಿಂ ಭೋಗದಿನುತ್ಯಾದಾತ್ತ ಮಹಿಮಾವಷ್ಟಂಭದಿಂ ಸದ್ವಿಲಾ |
ಸದಿನಾವಾಸವವಾಸುಕಿಪ್ರಭೃತಿಗಳ್ ತಾವೆಯ್ದಿದಂದೇನನೆ |
ಯ್ದಿದರೀ ಮಾನವಲೋಕದೊಳ್‌ ಜನಿಯಿಸಿರ್ದನ್ಯಾವನೀಪಾಳಕರ್‌ || ೧೦ ||

ವ || ಎನಿಸಿದುದ್ಧತಿಯೊಳುದ್ದಂ ಬಂದು ದಳ್ಳೆಂದು ನಿಂದುರಿದಂದಿನೇೞನೆಯ ದಿವಸಕ್ಕೆ

ಔದುಂಬರಕುಷ್ಠಂ ನೆಗೆ |
ದೌದಾರ್ಯಕಳೇವರಂ ಪಳಾಳಂಬಿತಮಾ ||
ದೌದುಂಬರಮೆನಿಪಂತೆವೊ |
ಲಾ ದೊರೆಯಂಗಾಯ್ತು ಖಳಕಳಂಕಾತಂಕಂ || ೧೧ ||

ವ || ಇಂತಪ್ರತ್ಯಾಖ್ಯಾನ ಕಷಾಯೋದಯದಿಂದೆಮ್ಮನವಮಾನಿಸಿ ನುಡಿದ ಪಾಪದ ಫಲದಿನೌದುಂಬರಕುಷ್ಟಮಾಗಿ ಸರ್ವಾಂಗೋಂಪಾಂಗಾವ ಯವಪ್ರದೇಶಂಗಳೆಲ್ಲಂ ರೂಪಱೆಯಲಾಗದಂತು ಜರ್ಜರಮಾಗಿ ಜರಿಯೆ ||

ಅತಿಬಳನಾತ್ಮರಾಜಗೃಹಮಂ ಪುಗಲೀಯನೆ ಕಂಡರಾರುಮ |
ನ್ವಿತರುಜನೆನ್ದು ಸಾರಲಣಮೀಯರೆ ಮುನ್ನೊಡವೞ್ದು ತನ್ನ ಪೆಂ |
ಡತಿ ಮೊದಲಾಗಿ ಪೂರ್ದಲಣಮೀಯಳೆ ಮಿತ್ರಜನಂಗಳೆಲ್ಲಮು |
ದ್ಧತನಿವನೆಂದು ಮನ್ನಿಸರೆ ಪಾಪಿಯನಾರೊಳಕೊಂಡು ಮನ್ನಿಪರ್‌ || ೧೨ ||

 ವ || ಅಂತು ಪೆಂಡಿರ್ಪೇಸೆಯುಂ ಕಂಡವರೇವಯ್ಸೆಯುಂ ಪಲವುದಿವಸ ಮಾಯಾಸಂಬಟ್ಟು ಬತ್ತಿದ ಬಾಯ್ಗಂ ಪೊತ್ತಿದನೆತ್ತಿಗಮಂತೇನುಮಂ ಪಡೆಯದೆ ಬಡತನಮಡಿಸಿ ಬಳಮೞಿದು ಪುೞಿತು ನಮೆದು ಸತ್ತುಮಾ ಕೌಶಂಭೀಪುರದೊಳ್‌ ಬಹುಕರ್ಮಿಯಂಬ ದೊಂಬನಮನೆಯೊಳ್‌ ಸ್ತ್ರೀವೇದದಿಂ ಬೆಳ್ಗತ್ತೆಯಾಗಿ ಪುಟ್ಟಿ

ಜನಪದವೆನಿತೊಲವನಿತಱೊ |
ಳೆನಿತೂರೊಳವನಿತುಮಂ ಪಲರ್ಮೆಯಮದು ತಿ ||
ಟ್ಟನೆ ತಿರಿದು ಮಾಯ್ದ ಡೊಂ |
ಬಲ ಮನೆಯೊಳ್‌ ಮಲುಮಲನೆ ಮಱುಗಿ ನಮೆಯುತ್ತಿರ್ಕುಂ || ೧೩ ||

ಕಡುವಿರಿಯವು ಪೊಱೆಗಳನೆಡೆ |
ಮಡಗದೆ ಮೇಲೊಟ್ಟಿ ಮತ್ತೆ ಮೆಲ್ಪರಮುಮನಾ ||
ಗಡೆ ಕಟ್ಟಿ ಕುಸಿದು ಕುಸಿದಡಿ |
ಮಿಡುಕದೆ ಸುಗಿದಗಿದು ಮುರ್ಗಿ ತರ್ಗುವ ಪದದೊಳ್‌ || ೧೪ ||

ಬಡಿವ ಬಡಿಗೆಗಳ ಕೋಳೊಳ್‌ |
ತೊಡೆಯದು ಸಲೆ ಪೊಟ್ಟಗೊಡೆದು ಕಡಿವಡೆದೆತ್ತಂ ||
ಪುಡುಪುಡನೆ ಪುರ್ಗಿ ಜೋಲ್ದೆೞ |
ಲ್ವಡಗಾಗಿ ಸುರುಳ್ದು ಸುರುಳ್ದು ಬಾಯ್ವಿಟ್ಟಿರ್ಕುಂ || ೧೫ ||

ಆಱದಿದಾರ್ಪುದೆನ್ನದೆ ತಗಳ್ದು ಮರಂಗಳನೊಟ್ಟಿ ಕೀೞನಿ |
ಟ್ಟೇಱೆ ನೞಲ್ವಿನಂ ಬಡಿದು ಗೋವುಗಳಿಂತಿರೆ ಪೇಱೆ ದುಃಖಮಂ |
ಪೀಱೆ ಬಿಗುರ್ತು ಬೀಗಿ ನಡುವೆನ್ನೊಡೆದಿರ್ಬಗಿಯಾಗಿ ಪೋೞ್ದು ನೀ |
ರೇಱೆದ ನಾಳಿಪುಣ್ಣೊಡೆದು ಸೌಳೆನೆ ಸೀಳ್ದುಡು ದೋಣಿವೋಪಿನಂ || ೧೬ ||

ಈ ತೆಱದಿನಾದ ಪಲವುಂ |
ಯಾತನೆಗಳನೆಯ್ದಿ ಪುೞೆತು ಸತ್ತಾ ಪುರದೊಳ್‌ |
ಪೋತಜಗರ್ಭೋದ್ಭೂತನಿ |
ಪಾತಂ ಪೇಪಂದಿಯಾದುದಘವಶದಿಂದಂ || ೧೭ ||

ತೊಲಗದೆ ಗೋವುಗಳ್‌ ನೆರೆದು ನಾಯ್ಗಳನುರ್ಚ್ಚುವ ಕಂಡು ಗುಂಡುಗೊಂ |
ಡಲಸದೆ ನಿಚ್ಚಮಾರ್ದಿಡುವ ತಕ್ಕಿನ ಕರ್ಕ್ಕಡೆಗೊಂಡು ಮಿಂಡು ಮಾ |
ರ್ಮಲೆದಿದಿರಾಂತು ನಿಂದಡಸಿ ಸುತ್ತುವ ಬಾರಿಗೆ ಮೆಯ್ಯನೊಡ್ಡಿ ಕೋ |
ಟಲೆಗೊಳಗಾಗಿ ಪಂದಿ ನಮೆವಂದಮದಾರ್ಗಮಸೇವ್ಯವರ್ಣನಂ || ೧೮ ||

ಅನಿವಿರಿದು ದುಃಖದೊಳ್‌ ನಮೆ |
ದು ನಾರುಗಿದು ಪೊಗೆದು ಸತ್ತಲ್ಲಿ ನಿಷಾ ||
ದನ ಮನೆಯೊಳ್ಪೆಣ್ನಾಯಾ |
ಯ್ತು ನೆನೆದೊಡಾಶ್ಚರ್ಯಮಲ್ತೆ ಸಂಸೃತಿಚಕ್ರಂ || ೧೯ ||

ಮುಳಿಸಿಂ ಮಾಣದೆ ಗೋವುಗಳ್‌ ತಗುಳೆ ಕಾಯ್ಪಿಂದೆತ್ತಲುಂ ನಾಯ್ಗಳ |
ವ್ವಳಿಸುತ್ತುಂ ಪರಿದೆಯ್ದೆ ಸೀಳ್ದು ತಿನೆ ನಾನಾವೇದನೋದ್ರೇಕಮಂ |
ತಳೆದಾ ನಾಯ್‌ ಬಡಪಟ್ಟು ದುಃಖದೊದವಿಂ ಬಾಯ್ವಿಟ್ಟು ಗೋಳಿಟ್ಟು ಪೇ |
ಕುಳಿಗೊಂಡಾದ ವಿಷಾದದಿಂ ಪುೞಿತು ಸತ್ತಿತ್ತಂತೆ ಕಾಲಾಂತದೊಳ್‌ || ೨೦ ||

ವ || ಮತ್ತಮೀ ಚಂಪಾನಗರದೊಲ್‌

ಅಕುಲೀನ ಪ್ರಾಪ್ತರೊಳ್‌ ದುಶ್ಚರಿತರೆನಿಪ ಮಾತಂಗರೊಳ್‌ ಪುಟ್ಟಿ ಮತ್ತಂ
ವಿಕಟಾಂಗೋಪಾಂಗೆ ಘಾತಿಪ್ರಚುರೆ ಪೆೞವಿ ದುರ್ಗಂಧೆ ದುರ್ವರ್ಣೆ ಜಾತ್ಯಂ
ಧಕಿ ಗೋಳಾಂಗೂಳಲೋಳಾನನೆಯೆನಿಸಿದ ಪಾಪಕ್ಕೆ ಪಕ್ಕಾಗಿ ದುಃಖಾ
ಧಿಕೆಯಿಂ ಸಂಸಾರಕೂಪಾರದೊಳನವರತಂ ನೀಡುಮೋಲಾಡುತಿರ್ದಳ್‌ || ೨೧ ||

ವ || ಇಂತು ನೀಳನೆಂಬ ಮಾದೆಗಂಗಂ ಕೌಶಂಬಿಯೆಂಬ ಮಾದೆಂಗಿಗಂ ಮಗಳಾಗಿ ಪೂರ್ವೋಪಾರ್ಜಿತ ಶುಭಾನುಪೂರ್ವಿನಾಮ ಕರ್ಮೋರ್ವೀರುಹ ಪರಿಪಾಕ ಫಳಮನನುಭವಿಸುತ್ತುಮೊಂದು ಪೊತ್ತಪ್ಪಡಂ ಸುಖಂಗಾಣದೆ ಹಾಹಾಭೂತಚೇ ತಸ್ಕೆಯಾಗಿರ್ದಳಂ ನೀಮೀಗಳ್‌ ಕಂಡಿರಾ ದುಃಖಜೀವಿ ನಿಮ್ಮ ತಮ್ಮನಪ್ಪ ವಾಯುಭೂತಿಯಪ್ಪುದಱೆನೆ ನೀಮಿಂತಱೆಯದೊಡಂ ಸೌಧರ್ಮಿಕೆ ಮಿಕ್ಕು ಬರ್ಕುಮೆಂಬಂತೆ ನಿಮಗತಿಸ್ನೇಹಮುಂ ವ್ಯಾಮೋಹಮುಂ ಕಯ್ಮಿಕ್ಕುಬಂದುದೆಂಬುದುಂ.

ಮನದೊಳ್‌ ಸಂವೇಗಂ ನೆ
ಟ್ಟನೆ ಪುಟ್ಟಿರೆ ವಾಯುಭೂತಿಚರನಪ್ಪಾ ಜೀ
ವನೀಗಳಭವ್ಯನೋ ಭ
ವ್ಯದೊ ಮತ್ತಂ ದೂರಭವ್ಯನೋ ಬೆಸಸಿಮಿದಂ || ೨೨ ||

ವ || ಎಂಬುದಮಾ ಜೀವನಭವ್ಯನಲ್ಲ ಪ್ರತ್ಯಾಸನ್ನಭವ್ಯಂ ನೀಮೀಗಳೆ ಪೋಗಿ ವಾಯುಭೂತಿ ಮೊದಲಾದ ಭವಪಂಚಕಂಗಳಂ ಪಂಚಾಣುವ್ರತಂಗಳಂ ಪೇೞೆ ಕೇಳ್ದು ಕೈಕೊಳ್ಗುಮದರ್ಕಾಯು ರವಧಿಯುಮಿಂದಿನೊಂದೆ ದಿವಸಮದುಕಾರಣದಿಂ.

ನಿನ್ನೊಡವುಟ್ಟಿ ನಿನ್ನೊಡನೆ ಶಾಸ್ತ್ರವಿಶಾರದನಾಗಿಯುಂ ಸ್ವಮಾ |
ನೋನ್ನತಚಿತ್ತನಾಗಿ ಋಷಿದೂಷಕನಾದುದು ಕಾಲಲಬ್ಧಿ ಸಾ |
ರ್ವನ್ನೆವರಂ ಭವಾಟವಿಗಳೊಳ್‌ ದುರಿತಾನಳನೞ್ವೆ ಬೆಂದನಂ |
ನಿನ್ನ ವಚಸ್ಸುಧಾರಸ ಸುವರ್ಷಗದಿನಾಱೆಸು ವಾಯುಭೂತಿಯಂ || ೨೩ ||

ವ || ಎಂಬುದುಂ ಮಹಾಪ್ರಸಾದಮೆಂದಾ ದ್ವಿತೀಯಮುನೀಶ್ವರನಗ್ರಮು ನೀಶ್ಚರಾದೇಶದಿಂ ನಂದನವನೋದ್ದೇಶದೊಳಿರ್ದ ಜನ್ಮಾಂಧಕಿಯಲ್ಲಿಗ ಬಂದು ಮುಂದೆ ನಿಂದು

ನಿಯತಂ ಭಾವಿಸು ಚಿತ್ತದೊಳ್‌ ಬೆದಱದೊಲ್ದಾರಯ್ತು ಕೇಳಗ್ನಿಭೂ |
ತಿಯೆ ನಾನಗ್ರಜನೆಂ ಕನೀಯನೆ ಕಳಾಸಂಪನ್ನೈ ವಾಯುಭೂ |
ತಿಯೆ ಯೋಗೀಂದ್ರರನಂದಕಾರಣದೆ ಬಯ್ದಾ ದೋಷದಿಂ ದುಃಖಭಾ |
ಗಿಯೆ ನೀಂ ಮುೞ್ಗಿದೆ ಘೋರಸಂಸರಣ ಪಾರಾವಾರಗಂಭೀರದೊಳ್‌ || ೨೪ ||

ಜನನಾಥಂ ಪಿತೃಸಾಯೆ ನಮ್ಮನಪದಸ್ಥರ್ಮಾಡಿಬೋಡಾದುದಂ
ಜನನೀಯಗ್ರಜನಲ್ಲಿಗೆಯ್ದಿ ಬಹುಶಾಸ್ತ್ರಾರ್ಥೋಕ್ತಿಯಂ ಕಲ್ತುದಂ |
ಪನಿಗೊಂಡುಂಡುದನೋದಿ ಬಂದೊಡರಸಂ ಮಂತ್ರಿತ್ವಮಂ ಕೊಟ್ಟದಂ |
ನೆನೆವೋ ಮಾವನರೂಪುಗಂಡು ಕಾದುಪಿಂ ನೀಂ ಕಾಯ್ದುದಂ ಬಯ್ದುದಂ || ೨೫ ||

ಬೋಧನಿರಾಕೃತಿಯಿಂ ಭವ |
ಬಾಧಾಪೀಡಿತಶರೀರಿಯಾದೈ ಗುರುಸಂ |
ಬೋಧನೆಯಿಂ ನಿನ್ನಂ ಪ್ರತಿ |
ಬೋಧಿಸಲಾಂ ಬಂದೆನಗ್ನಿಬೂತಿಯನಱೆವೋ || ೨೬ ||

ಅಕ್ಕರ || ಮುಳಿಸಿಂ ನೀನಂದು ಮುನಿಪರಂ ಪೞಿದೊಡೆ ಮೆಯ್ಯೊಳೌದುಂಬರ ಕುಷ್ಠಂ ವುಟ್ಟಿ | ಪುೞಿತು ನಾರುಗಿದು ಕೌಶಂಬಿಯೊಳ್‌ ಸತ್ತಲ್ಲಿ ಬೆಳ್ಗತ್ತೆಯಾಗಿಪುಟ್ಟಿ | ಕೞೆದು ಮತ್ತಮಾ
ಪುರದೊಳ್‌ ಪೇಪಂದಿಯಾಗಿ ಬಂದಲ್ಲಿ ನಾಯಾಗಿ ಪುಟ್ಟಿ | ಬೞಿಕೆ ನೀಳಂಗಳಂ ಪುಟ್ಟಿ
ಮಗಳೆ ನೀನಿಂತು ಮಾದಂಗಿಯಾದೈ || ೨೭ ||

ಮುನಿಪತಿಯನಂದು ನೀಂ ಕೆ |
ಮ್ಮನೆ ಮುಳಿಸಿನೊಳೆಯ್ದೆ ಬಯ್ದು ಪಾಪದ ಫಲದಿಂ |
ದಿನಿವಿರಿದು ದುಃಖಮಂ ನೆ |
ಟ್ಟನೆಯ್ದಿದೈ ಮಾನಗರ್ವಮೇನಾಗಿಸದೋ || ೨೮ ||

ಅನಿತುಮಹಾ ಸ್ಪದಕ್ಕನಿತು ಸದ್ವಿಭವಕ್ಕ ನಿತೊಂದು ಸಂಪದ
ಕ್ಕನಿತು ವಿಲಾಸದೇೞ್ಬೆಗೆಱೆವಟ್ಟಿನಿಸಿರ್ದು ಅೞಿಕ್ಕೆ ಪಾಪದಿಂ
ದಿನಿತು ನಿಕೃಷ್ಟದುರ್ಗತಿಗಳೊಳ್‌ ಬಲವಂದುದನೀಗಳಾಗಿಯುಂ
ನೆನೆದು ನಿರಾಕುಳಂ ಬಗೆಯ ಭಾವಿಸು ನಿನ್ನ ಭವಾಂತರಂಗಳಂ || ೨೯ ||

ಅದು ಪುಣ್ಯದ ಫಲಮಿದು ಪಾ
ಪದ ಫಲಮದು ಸೌಖ್ಯಮಿದುವೆ ದುಃಖಮದಂತ
ಭ್ಯುದಯಕರಮಿದು ಮಹಾಭ್ಯುದ
ಯದೂರಮೆಂದದುವನಿದುವನರಯ್‍ ಮನದೊಳ್‌ || ೩೦ ||

ಎನೆ ಎನೆ ತನ್ನ ಮುನ್ನಿನ ಭಾವಾಂತರದೊಳ್‌ ಪುದಿದಿರ್ದ ಮಾತುಗಳ್‌
ಕನಸಿನ ಮಾರ್ಗಮಾಗಿ ಮನದೊಳ್‌ ನಿಲೆ ಪುಟ್ಟಿದ ಕಾಲಲಬ್ದಿಯಿಂ
ವಿನಯಸಮೇತೆಯಾಗಿ ಪೊಡೆವಟ್ಟು ಮನೋಮುದದಿಂದಮಿರ್ಪುದುಂ
ಮುನಿಪತಿ ಪೇೞ್ದನಾ ಕೆಱೆಯವಳ್ಗೆ ಹಿತೋಪದೇಶಮಂ || ೩೧ ||

ನೆಲಸದ ಯೋನಿ ಮುಟ್ಟದೆಡೆ ಕಾಣದ ಕಾಲಮತತ್ವದೊಳ್‌ ಮನಂ
ನಿಲಿಸದ ಭಾವಮಱೆಸದ ಪುದ್ಗಳಮಿಲ್ಲೆನೆ ಕರ್ಮಬಂಧದಿಂ
ಬಲವರುತಿರ್ಪ ಱೂಟಣದ ಗುಂಡಿಗೆಯಂತಿರೆ ಮೂಡಿ ಮೞ್ಕಿ ಕೋ
ಟಲೆಗೊಳುತಂ ಭವಾಂಬುನಿಧಿಯೊಳ್‌ ತಿರಿತಪ್ಪುವು ಜೀವರಾಶಿಗಳ್‌ || ೩೨ ||

ವ || ಇಂತು ಸಚಿತ್ತಾಚಿತ್ತ ಶೀತೋಷ್ಣ ನಿವೃತಸಂವೃತಾದಿ ಭೇದದಿಂ ಚತುರ ಶೀಲಕ್ಷಪ್ರಮಾಣ ಯೋನಿಮುಖಂಗಳೊಳಾವರ್ತನ ಪರಿವರ್ತನದಿಂ ದುರಿತವರ್ತಿ ಯಾಗಿ ನಮೆವ ಸಂಸಾರಿ ಜೀವಕ್ಕೆ

ಆಮಿತಾಂಬೋನಿಧಿ ವಾಳುಕುಪ್ರಕರಮಂ ಪುಂಜೀಕೃತಂ ಮಾಡಿ ಚೋ |
ದ್ಯಮದಾಗಲ್‌ ಮೞಲೊಂದನಲ್ಲಿ ಕಱೆಪಂ ಮಾಡಿಟ್ಟು ಚೈರಂತನ |
ಕ್ರಮದಿಂದಾ ಮಣಲೆಲ್ಲಮಂ ಮಗುಳೆ ಪಾರಾವಾರದೊಳ್‌ ಪೊಯ್ದು ಮ |
ತ್ತಮದಂ ಸೋದಿಸಿ ಕಾಣ್ಬವೊಲ್‌ ನೃಗತಿ ನೋಡಲ್‌ ನಾಡೆಯುಂ ದುರ್ಲಭಂ || ೩೩ ||

ವ || ಅಂತುಮಲ್ಲದೆಯುಂ

ಬೆಳೆದೆಳ್ಳಂ ಬಿರ್ಚಿ ರಾಶಿಸ್ಥಿತಿಯಿನಿರಿಸಿ ತದ್ರಾಶಿಯಂ ಮತ್ತಮೋರಂ
ತಳವಟ್ಟಿರ್ದಂದದಿಂದಾ ಕೊದಳಿಯ ಮಣಿಯೊಳ್‌ ತೀವುತಿರ್ಪಾಗಳುರ್ವೀ |
ವಳೆಯಕ್ಕಾಶ್ಚರ್ಯಮಪ್ಪಂದ ದಿನನುದಿನಮೆಂದಾಗಿಯುಂ ಮುನ್ನಿನಂತಾ |
ತಿಳಮಾ ಕಾಯೊಳ್‌ ಕ್ರಮಂದಪ್ಪದೆ ನೆಲಸುವವೊಲ್‌ ದುರ್ಲಭಂ ಮರ್ತ್ಯಜನ್ಮಂ || ೩೪ ||

ಸಮವಾಯಂ ಮನುಜತ್ವಮಾದೊಡಮಘ ವ್ಯಾಪಾರದಿಂ ನೀಚಗೋ |
ತ್ರಮುಮಾಕ್ರಂದನಮುಂ ಕ್ಷುಧಾದಿ ಬಹುದುಃಖೋದ್ರೇಕಮುಂ ಕುತ್ಸಿತ |
ತ್ವಮುಮುದ್ವೇಗಮುಮಪ್ರಗಲ್ಭತೆಯುಮಲ್ಪಾ ಯುಷ್ಯಮುಂ ದುರ್ಭಗ |
ತ್ವಮುಮಾಂತಂಕಕಳಂಕಮುಂ ಸಮನಿಕುಂ ಸಂಸಾರಿವ್ಯಾಕುಲಂ || ೩೫ ||

ವ || ಇಂತಪಾರಾಸಾರ ಸಂಸಾರಕಾಂತಾರದೊಳುಂತು ದುರಿತೊಗ್ರದಾವಾನಳಾ ಟೋಪದಿಂ ಬೆದಬೆದ ಬೆಂದ ಜೀವಕ್ಕೆಂತಾನುಂ ಕ್ಷಯೋಪಶಮನಿಮಿತ್ತದಿಂ ಸದ್ಧರ್ಮಾಮೃತಲವಂ ದೊರೆಕೊಂಡುದಪ್ಪೊಡೆ

ಅನುಲೇಪಾತಿಶಯ ಪ್ರಬಾವದಿನಿತಾಂಗೋಪಾಂಗಮುತ್ಕೋಕಿಲ |
ಸ್ವನಾ ಲೀಲಾಲಲಿತೋರುಚಾರುನಿನದಂ ಶ್ರೀವೃಕ್ಷಸಂಪೂರ್ಣಲಾಂ |
ಛನವಕ್ಷಂ ಕರಮೊಪ್ಪಿ ತೋರ್ಪ ಧವಳಾಕ್ಷಂ ಶೋಭಿತಾಂಗಂ ಭುಜಾ |
ನನಮೆಂದಿಂತಿವಗಣ್ಯಪುಣ್ಯಜನಿತಂ ಜೀವಕ್ಕೆ ನಿರ್ವ್ಯಾಕುಲಂ || ೩೬ ||

ಕರಿತುರಗಾದಿ ವಾಹನಮುಮುತ್ಸವ ಹೇತುಕಮಪ್ಪ ಛತ್ರ ಚಾ |
ಮರ ಪರಿಶೋಭಿತಾತಿಶಯಮುಂ ಭುವನಸ್ತುಮಪ್ಪ ಕೀರ್ತಿಯುಂ |
ನಿರುಪಮ ಮೂರ್ತಿಯುಂ ಸಮುಚಿತಾಸ್ಪದಮಂ ಮಹಿಮಾವಿಲಾಸಮುಂ
ನರರ್ಗೆ ಸಮಂತು ಪೂರ್ವಕೃತ ಪುಣ್ಯದಿನಪ್ಪುದುದಿದಾವ ವಿಸ್ಮಯಂ || ೩೭ ||

ಅದೞೆಂ ನೀನಾಪ್ತಾಗಮ |
ಪದಾರ್ಥ ಸಮ್ಯಕ್ತ್ವ ಮಾರ್ಗಮಂ ಕೇಳ್ದು ಮನೋ ||
ಮುದದಿಂ ಕೈಕೊಳ್‌ ನಿನಗದು |
ತುದಿಯೊಳ್‌ ಮಾಡುಗುಮನಂತ ಮುಕ್ತಿಶ್ರೀಯಂ || ೩೮ ||

ಮಾತೇನುದ್ಘಾತ ದೋಷಪ್ರಕರರಹಿತನೆನಿಪನಾಪ್ತಂ ತದಾಪ್ತಾನನಪ್ರೋ |
ದ್ಭೂತಂ ಸಿದ್ಧಾಂತಮಾರ್ಗಂ ತದುವಿರಚನೆ ಸದ್ದರ್ಮಮಾ ಧರ್ಮಮುಂಹಿಂ |
ಸಾತೀತಂ ತದ್ದಯಾಮೂಲಮುಮುಪಶಮ ಧರ್ಮನುರಾಗಾನುತತ್ವೋ |
ಪೇತಂ ತತ್ಸಿದ್ಧಮಾಗಿರ್ದುದು ನಿರುಪಮ ಸಮ್ಯಕ್ವ ಸನ್ಮಾರ್ಗ ಮಾರ್ಗಂ || ೩೯ ||

ಕೊಲ್ಲದುದು ಪುಸಿಯದುರು ಕಳ |
ವಿಲ್ಲದುದುಂ ತ್ರಿಕರಣತ್ವದಿಂ ಪಾದರದೊಳ್‌‍ ||
ಸಲ್ಲದುದು ಕಾಂಕ್ಷೆಯೊಳ್‌ ತಱೆ
ಸಲ್ಲದುದೆಂದಯ್ದಣುಬ್ರತಂ ಜನಮತದೊಳ್‌ || ೪೦ ||

ಮದ್ಯ ಮಧು ಮಾಂಸಮೆಂಬಿವ |
ನಾದ್ಯಂತಂ ತೊಱೆವುದಾವತೆಱದಿಂದಂ ಸಾ ||
ವದ್ಯಮಣಮಾಗದಿರ್ಪುದು
ಸದ್ಯೋಗದೊಳಿರ್ಪುದಿದುವೆ ಪುನ್ಯಮಗಣ್ಯಂ || ೪೧ ||

ವ || ಎಂದು ಪರಮಶ್ರಾವಕ ವ್ರತಪ್ರಾಸಾದಕ್ಕಧಿಷ್ಠಾನ ಸೋಪಾನ ಪಂಕ್ತಿಗಳಾಗಿ ನೆಗೞ್ತೆವೆತ್ತ

ವಿಮಳಾಣುಬ್ರತ ಪಂಚಕ |
ಮುಮಂತೆ ಮಧುಮದ್ಯ ವಿವಿಧ ಮಾಂಸ ಪರಿತ್ಯಾ ||
ಗಮುಮೆಂಬ ಮೂಲಗುಣಮೆಂ |
ಟುಮನಾ ಮುನಿಪುಂಗವಂ ಪ್ರಸಾದಂಗೆಯ್ದುಂ || ೪೨ ||

ಕೊಲಿಸುವ ಕೊಲ್ವ ಶಾಠ್ಯಪರವಾಗಿಸುವಾಗ ಕಳ್ವ ಕಳ್ವರೊಳ್‌ |
ಸಲೆ ಪುದುಗೊಳ್ವ ಪಾದರಮನಾಡಿಸುವಾಡುವ ಕಾಂಕ್ಷೆಯೊಳ್‌ ಮನಂ |
ಸಲಿಸುವ ಸ್ಪಲ್ಪಪಾಪಪರನುಂ ಶಠನುಂ ಖಳನುಂ ಕೃತಘ್ನನುಂ |
ಕಲಿಷಿಯುಮಾೞುಮುಗ್ರನರಕಾಬ್ದಿ ಗಭಿರಮನೆಯ್ದು ವನ್ನೆಗಂ || ೪೩ ||

ಎಂದು ಸಂಕ್ಷೆಪದಿಂ ಸನ್ಮಾರ್ಗಸ್ವರೂಪ ನಿರೂಪಣಂಗೆಯ್ದು ವಿಷಮ ವಿಷಧರವಿಷಘಾತದಿಂ ನಿನಗಾಯುರವಧಿಯುಮಿಂದಿನನಿತೆ, ದರ್ಸಾನವಿಶುದ್ಧೆಯಾಗೆಂದು ಪರಮತಪಸ್ವಿ ಪರಸಿ ಗುರುಸಮೇತಂ ಸದ್ಧರ್ಮಕ್ಷೇತ್ರಂಗಳೊಳ್‌ ವಿಹಾರಿಸುತ್ತಿರ್ದರಿತ್ತಲಾ ಕೂಸುಮಣಿಬ್ರತಧಾರಿಯಾಗಿ ಬರ್ಪ ನೆರವಿಯ ರಭಸಮಂ ಭೋಂಕನೆ ಕೇಳ್ದಿದೇನೆಂದು ಬೆಸಗೊಳೆ ತನ್ನೊಡನಾಡಿಗಳಪ್ಪ ಚಂಡಾಲಶಿಶುಗಳಾ ಪ್ರಪಂಚಮೆಲ್ಲಮನವರಂ ಬೆಸಗೊಂಡು ಬಂದೀ ಚಂಪಾಪುರವರೇಶ್ವರನಪ್ಪ ಚಂದ್ರವಾಹನನರೇಶ್ವರ ಪುರೋಹಿತಂ ನಾಗಶರ್ಮನಾತನ ಭಾರ್ಯೆ ತ್ರಿವೇದಿಯುಮಗಣ್ಯಪುಣ್ಯಲಕ್ಷ್ಮಿ ಭಾಜನರಾಗಿಯೂ ಸಂತಾನಮಿಲ್ಲದುಬ್ಬೆಗದಿಂ ಪುತ್ರಾರ್ಥಿಗಳಾಗಿ ನಾಗಸ್ಥಾನದ ನಾಗರ್ಗೆ ಪರಸಲ್ಪೋದರವರೆಂದು ಪೇೞೆ ಕೇಳ್ದು ಭೋಗಾಸಕ್ತೆಯಾಗಿರ್ಪಾಗಳ್‌

ಇದಿರೊಳ್‌ ಪಟ್ಟರೆಯಿಕ್ಕುತಿರ್ಪ ಪದದೊಳ್‌ ತ್ರೀಬ್ರಕ್ಷುಧಾಗ್ರಾಗ್ನಿ ತ |
ನ್ನುದರಾವಾಸಮನುರ್ವುತಿರ್ಪ ಪದದೊಳ್‌ ದುರ್ಗಂಧಿ ಜಾತ್ಯಂಧೆ ಮೆ |
ಟ್ಟಿದೊಡಾಗಳ್ಮುಳಿಸುಣ್ಮಿ ಪೊಣ್ಮಿ ಗರಳಂ ಕೈಗಣ್ಮೆ ಬಂದೆಯ್ದಿ ಕೊಂ |
ಡುದು ಕೃಷ್ಣೋರಗನಾ ಮತಂಗಶಿಶುವಂ ಕಾಲೋರಗಂ ಕೊಳ್ವವೊಲ್‌ || ೪೪ ||

ವ || ಆಪ್ರಸ್ತಾವದೊಳ್‌

ಅಗಣಿತ ಭಾಗಧೇಯಕೃತಮೂಲಗುಣಂಗಳಣಂದಣುಬ್ರತಾ |
ದಿನಗಳನಾಕುಲಂ ಬೆಸಸಿದಂ ಮುನಿಪುಂಗವನಾವಂ ಮನಂ |
ಬುಗಿಸಿದೆನರ್ವರಾಧಿಪ ಪುರೋಹಿತಭಾರ್ಯೆ ಸುತಾರ್ಥಿ ತತ್ರಿವೇ |
ದಿಗೆ ಮಗಳಪ್ಪೆನಕ್ಕೆ ಫಲಮುಳ್ಳೊಡೆ ನೆಟ್ಟನಣುವ್ರತಂಗಳಾ || ೪೫ ||

ಸದಮಳಚರಿತರ್ಪೇೞ್ದಂ |
ದದಿಂದೆ ಸಾವಿಂದೆ ಬಂದುದೆನುತಂ ಭೋಗಾ ||
ಸ್ಪದದೊಳ್‌ ಚಿತ್ತಂ ಬೆಚ್ಚಂ |
ದದಿಂದೆ ಮನವಿಟ್ಟವಳ್‌ ನದಾನಂಗೆಯ್ದಳ್‌ || ೪೬ ||

ವಿಕಟಾಂಗೋಪಾಂಗೆ ಜಾತ್ಯಂಧಕಿಯೆನಿಸಿದ ಮಾತಂಗಿ ತಾನೆತ್ತಲಾತ್ಯಂ
ತಿಕ ಸದ್ಧರ್ಮೋಪದೇಶಂ ಸಮನಿಸುವುದೆತ್ತಂತೆ ಭೋಗೋಪಬೋಗಾ
ಧಿಕಚಿತ್ತಂ ಸಾವುದೆತ್ತಾರಯಲಣಮು ಸಾಧರಾಣಂ ಭಾವಿಸಲ್ಕೌ
ತುಕಮೇನಂ ಮಾಡದೇನಂ ದೊರೆಕೊಲಿಸದೊ ಸಂಸಾರಿಗೇನನೇನಂ || ೪೭ ||

ವ || ಇಂತು ವಿಗತಜೀವಿತೆಯಾಗಿ ನಿದಾನಫಲದಿಂದಾ ತ್ರಿವೇದಿಯ ಗರ್ಭದೊಳ್‌ ನೆಲಸುವುದದುಂ

ನವಮಾಸವಿರಾಮದೊಳ |
ಬ್ಜವದನೆ ಶುಭದಿನಮುಹೂರ್ತದೊಳ್‌ ಮಂಗಳ ತೂ |
ರ್ಯನಿನಾದಮೆಸೆಯಲಿಂತಾ |
ತ್ರಿವೇದಿ ಪಡೆದಳ್ಸುರೂಪವತಿಯಂ ಸುತೆಯಂ || ೪೮ ||

ನಾಗಸ್ಥಾನದ ಶಂಬರ |
ನಾಗಕುಮಾರಂಗೆ ಪರಸಿ ಪಡೆದೆಂ ಪೆಱದೇಂ |
ಪೋಗೆಂದು ನಾಗಶರ್ಮಂ
ನಾಗಶ್ರೀಯೆಂದು ನಾಮಕರಣಂ ಗೆಯ್ದು || ೪೯ ||

ವ || ಅಂತು ಜಾತಕರ್ಮ ನಾಮಕರಣಾನ್ನಪ್ರಾಶನ ಚೌಲೋಪನಯನಾದಿ ಸಮುಚಿತಕ್ರಿಯೆಗಳಿಂ ಕ್ರಿಯೆವಡೆದು ವಿಶುದ್ಧರತ್ನದಂತಾ ಸ್ತ್ರೀರತ್ನಂ ಕ್ರಮಕ್ರಮದಿಂ ಬಲೆಯೆವಲೆಯೆ

ರಗಳೆ || ಲಲಿತೆಯ ಶ್ರೀಪದತಳಶೋಕೆಯ
ತಳಿರಂ ಪೋಲ್ವುವು ಭಾವಿಪೊಡಾಕೆಯ
ಚರಣಾಂಗುಳಿಗಳಮರ್ಕ್ಕೆಯಿನಪ್ಪಿದ
ಸುರ ದಂಪತಿಗಳಪೋಲ್ವೆಯನೊಪ್ಪಿದ
ವಿಳಿಲೆಯ ಪದಯುಗನಖದಾಕೃತಿಗಳ್‌
ಕೂರ್ಮೋನ್ನತಮೆನಿಸಿರ್ದ ಪದಂಗಳ್‌
ನರ್ಮಮನಾದರಿಸಿಸಿದವು ಮಡಂಗಳ್‌
ಪರಡು ನಿಗೂಢಂ ಲಲಿತ ಲತಾಂಗಿಯ
ವರ ಜಂಘಾಯುಗಲಂಗಳ ಭಂಗಿಯ
ನಱೆಯೆಂ ಪೊಗೞಲ್‌ ನೆಕ್ಕೊರವಟ್ಟೆಯ
ತೆಱನೇನಲ್ಲದೆ ಬಣ್ಣಿಪ ಬಟ್ಟೆಯ
ನಂಭೋಜಾನನೆಯೂರು ಯುಗಂಗಲ್‌
ರಂಭಾಸ್ತಂಭ ಯುಗ ಪ್ರತಿಮಂಗಳ್‌
ವನಿತೆಯ ಪುಲಿನ ನಿತಂಬೋದ್ದೇಶಂ
ಮನಸಿಜಮದಗಜ ಕುಂಭನಿಕಾಶಂ
ಲಾವಣ್ಯಾಂಬು ರಸದ್ರವ ರೂಪಂ
ಭಾವಿಪೊಡಾಕೆಯ ನಾಭೀ ಕೂಪಂ
ನೋಡೆ ಕುಮಾರಿಯ ಬಳ್ಕುವ ಮಧ್ಯಂ
ನಾಡೆ ಮನೋಜ್ಞಂ ಪೊಗೞಲಸಾಧ್ಯಂ
ಕುಚಯುಗವಿಲ್ಲದೆ ಶೋಭಿಪ ವಕ್ಷಂ

. . . . . . . . . . . . . . . . . .
. . . . . . . . . . . . . . . . . .

ಸುಲಲಿತಮಾಗಿರೆ ತೀವಿದಕಕ್ಷಂ
ಸುದತಿಯ ತೊಳಗುವ ತೋಳಮೊದಲ್ಗಳ್‌
ಲಲನಾರತ್ನದ ಬಾಹುಯುಗಂಗಳ್‌
ಲಲಿತ ಲತಾಶಾಖಾ ಸದೃಶಂಗಳ್‌
ಸುರುಚಿರತರ ಮೃದುಪಲ್ಲವದಂತಿರೆ
ಕರತಳಮೊಪ್ಪುಗುಮೆಸೆದೋರಂತಿರೆ
ಕರಶಾಕೆಗಳತನುಕ್ಷುರದಂದಂ
ಕರನಖಮವು ಕೇದಗೆಯೆಸೞಂದಂ
ವಸುಧಾಮರವರ ಕನ್ನೆಯ ಕಂಧರ
ಸಮದೃಶಮದು ಕಂಬುಪ್ರತಿಬಂಧುರ
ಮವಳ ಪೊಳೆವ ರುಚಿರೋಷ್ಠಾಳಂಕೃತಿ
ಪವಳದ ದಳದಂತಾರಕ್ತಾಕೃತಿ
ದಂತಪಂಕ್ತಿ ದಾಡಿದು ಬೀಜಾಕೃತಿ
ಕಾಂತ ಕಪೋಲಂ ನವಮುಕುರಾಕೃತಿ
ಮೂಗು ಸುರಭಿಕರ ಪರಿಮಳದಂದಮೆ
ನಾಗಸಂಪಗೆಯ ಬಿರಿಮುಗುಳಂದಮೆ
ಜಳಜದಳಾಕ್ಷಿಯ ಕಣ್ಮಲರಂದಂ
ಪೊಳೆಜಳ ಮೀಂಗಳ ಪೊರ್ಣಗಳ ಚಂದಂ
ಭ್ರೂಲತಿಕೆಗಳಳ್ಳಿಱೆವುವು ಕನ್ನೆಯ
ಅರವಿಂದಾಸ್ಯೆಯ ನೊಸಲಸಮಾನಂ
ನಿರುಪಮಮರ್ಧೇಂದು ಪ್ರತಿಮಾನಂ
ಕಿವಿಯ ಪಾಲೆ ನೀಲಾಂಬುಜನಾಳಮ
ನವಟಯ್ಸುಗುಮಂಗಜನಿಂದೋಳಮ
ನಳಿಕುಳ ಸನ್ನಿಭ ಮನಸಿಜಗೋಳಕ
ವಿಳಸದಳಂಕೃತಿ ಕುಟಿಳಚಳಾಳಕ
ಮಂಗಜ ಮಕರ ಪತಾಕಾಭಾಸಂ
ತುಂಗಕುಚೋದ್ಬಂಧನ ವಿನ್ಯಾಸಂ
ದೊರೆಗೆ ವಾರದೀಕೆಗೆ ಕನ್ಯಾತತಿ
ಕರಮೆ ಬಣ್ಣಿಸಲ್ಕಱೆಯಂ ಫಣಿಪತಿ
ವಿಭವ ವಿಲಾಸನಿವಾಸದ ಭಂಗಿಯ
ನಭಿನವ ಕೋಮಳಕನಕ ಲತಾಂಗಿಯ
ನಗಣಿತಗುಣಿಯಂ ವಿಬುಧನಿಕಾಯಂ
ಪೊಗೞಲ್‌ ನೆಱೆವರೆ ನಾಗಶ್ರೀಯಂ || ೫೦ ||

ಕಮಳಂ ಪಗಲೊಳ್‌ (ಶಶಿ) ಬಿಂ
ಬವಿರುಳೊಳೆಸೆದಿರ್ಪುವಲ್ತೆಯದೞೆಂದಿವಱೊಳ್‌
ಸಮನೆನಲಕ್ಕುಮೆ ಮದಗಜ
ಗಮನೆಯವಕ್ತ್ರಮನಹರ್ನಿಶಂ ತೊಳಗುವುದಂ || ೫೧ ||

ನಯನಂ ನೀಳಸರೋಜಭಾಸಿ ರದನಂ ಮುಕ್ತಾಫಳಸ್ಪರ್ಧಿ ಬಾ
ಹುಯುಗಂ ಮನ್ಮಥಪಾಶಹಾಸಿ ನಿಟಿಳಂ ರುಂದ್ರಾರ್ಧಚಂದ್ರಾಭಮಾ
ರಯೆ ದಂತಾವರಣಂ ಪ್ರವಾಲರುಚಿರಚ್ಛಾಯಾರುಣಾಕ್ಷೇಪಿ ನಿ
ರ್ಮಯಭಾವಂ ರಸಭಾವಮೇದೊರೆ ಸುರೂಪಾಶ್ವರ್ಯಮಾ ಕನ್ನೆಯಾ || ೫೨ ||

ಮನಸಿಜನಂಬು ಮನ್ಮತನ ಕಯ್ಪಿಡಿ ಕಾಮನ ಕೈದು ಕಂತುರಾ |
ಜನ ಕರವಾಳ್‌ ಮನೋಭವನ ವಿದ್ಯೆ ಮನೋಜನಟ್ಟಮಿಕ್ಷುಚಾ |
ಪನ ಧನು ಮೀನಕೇತನನ ಕೇತನಮಂಗಜಚಕ್ರಿಯ ಚಕ್ರಮೆಂಬುದಂ |
ತಿನಿತತನೆನಲ್ಕೆ ಬಲ್ಲೆನಱೆಯೆಂ ಪೊಗೞಲ್‌ ದ್ವಿಜರಾಜ ಕನ್ಯೆಯಂ || ೫೩ ||

ವಿಕಸಿತಶಾತಕುಂಭ ಸರಸೀರುಹವಕ್ತ್ರೆಯನುನ್ಮುದಾಳಿನೀ
ಚಿಕುರೆಯನಂಗ ಜಾತಮದವಾರಣಯಾನ ಸಮಾನ ಯಾನೆಯಂ
ಸುಕರನಿದಾನೆಯಂ ಖಚರದಾರಕಿ ನಾಗಕುಮಾರಿ ದಿವ್ಯಕ
ನ್ಯಕೆಯೆನಲಲ್ಲದಾನಱೆ ಯೆನಂತೆನಲುಂತೆನಲಾ ಮೃಗಾಕ್ಷಿಯಂ || ೫೪ ||

ಬರೆವವರಿಲ್ಲ ಪೋಲ್ವೆ ಬರೆಯಲ್‌ ಮೃದುಕರ್ಮದೊಳೋಜೆವೆತ್ತು ಕಂ
ಡರಿಸುವ ವಿಶ್ವಕರ್ಮನೆಣೆಯಾಗಿರೆ ಕಂಡರಿಸಲ್ವಿಳಾಸದಿಂ
ಕರುವನೊಡರ್ಚ್ಚಿ ಬರ್ಚಿಸುವ ಬಲ್ಮೆಗೆ ಬೀಗುವ ಚೀರಘಟ್ಟಿ ತಾಂ
ಸರಿಯೆನಿಪಂದದಿಂ ಕರುವಿಡಲ್‌ ನೆಱೆಯಂ ದ್ವಿಜರಾಜಕನ್ನೆಯಂ || ೫೫ ||

ವದನಶ್ರೀವಿಭ್ರಮಂ ನಿರ್ಮಳಹಿಮಕರನಾಕಾರಮಕ್ಷಿದ್ವಯಂ ಕಂ
ಜದಳಾಕಾರಂ ಲಸದ್ಬ್ರೂ ಮನಸಿಜಧನುರಾಕಾರಮತ್ಯಂತ ಶೋಭಾ
ಸ್ಪದಲೀಲಾಭಾ ಸುರಾಂಗಂ ಮೃದುಲಲಿತಲತಾಕಾರಮಾರಯ್ವೊಡೆಂದಂ
ದದಿನೇಕಾಕಾರೆಯಲ್ಲಳ್‌ ದ್ವಿಜಸುತೆ ಗುಣಿಯಾದಂದಂಮಾಶ್ಚರ್ಯ ಭೂತಂ || ೫೬ ||

ಸುರ ಗಂಧರ್ವ ಸುಪರ್ಣ ಕಿನ್ನರ ಖಗ ಸ್ತ್ರೀಸದ್ಮದೊಳ್ಮುನ್ನಮಾ
ದೊರೊಳಿನ್ನಪ್ಪರೊಳೀಗಳುಳ್ಳವರೊಳಿಲ್ಲೀ ಹಾವವೀ ಭಾವಮೀ
ಪರಿಜೀ ವಿಭ್ರಮಮೀ ವಿಲಾಸಮೆಸೆವೀ ಸೌಂದರ್ಯಮೆಂಬನ್ನಮೀ
ಧರಣೀಚಕ್ರದೊಳೇಂ ಜಸಂಬಡೆದಳೋ ಬೇಱೊಂದು ಸೌಂದರ್ಯದಿಂ || ೫೭ ||

ಸುರಕನ್ಯಕೆ ಮನುಜಸತಿ |
ಪರಮಾಕಾರತ್ವಮಂ ಪ್ರಯೋಗಿಸಿ ದಿವದಿಂ
ಧರೆಗವತರಿಸಿದಳೆಂದೀ
ಧರೆ ಪೊಗೞ್ವುದು ರುಚಿರಪಕ್ವಬಿಂಬಾಧರೆಯಾ || ೫೮ ||

ಒದವಿ ಬಸಂತದೊಳ್ಬಯಸಿದಂದದ ತೆಂಬೆಲರೊಂದು ತೀಟಮಿ
ಲ್ಲದ ಸಹಕಾರವಲ್ಲರಿಯ ತೋರ್ಕೆಗಮೊಪ್ಪುವ ಭೃಂಗಸಂಗಮಿ
ಲ್ಲದ ನವಪದ್ಮಿನೀಮುಕುಳದಿಕ್ಕೆಗಮೆನೆ ನೆಱೆಯಾಗಿ ಶೋಭೆವೆತ್ತುದೊ
ಪರಿಶೋಭೆವೆತ್ತಿರೆ ವಿಲಾಸದ ವಿಭ್ರಮದೇೞ್ಗೆ ಕನ್ನೆಯಾ || ೫೯ ||

ವ || ಒಂದು ದಿವಸಮಾ ಕನ್ನೆ ತನ್ನೊಡನಾಡಿಗಳಪ್ಪ ಕನ್ನೆಯರ್ವೆರಸು ಮಹಾವಿಭೂತಿಯಿನಾ ನಾಗಸ್ಥಾನಕ್ಕೆ ವಂದು ನಾಗರನರ್ಚಿಸುವಲ್ಲಿ

ಕಲಶಂ ಜಾಗಂ ಧ್ವಜಂ ಕನ್ನಡಿ ಗುಡಿ ಸಮನೋಮಾಳೆ ಶುಭ್ರಾಕ್ಷತಂ ಪೊಂ |
ಬಳೆ ತೂರ್ಯಂ ತೋರಣಂ ಬೆಳ್ಗೊಡೆ ಚಮರರುಹಂ ಚಂದನಂ ಸ್ವಸ್ತಿಕಂ ಸು |
ಲ್ವಲಮೆಂಬೀ ಮಂಗಳದ್ರವ್ಯದ ರಚನೆಯಿನಂದೇಂ ಮನಂಗೊಂಡುದೋ ಮಂ |
ಗಲಶೋಭಾ ಭೂಷಣಾಂಶು ಪ್ರಸರಮೆಸೆವಿನಂ ಧನ್ಯ ಕನ್ಯಾಕದಂಬಂ || ೬೦ ||

ವ || ಆನ್ನೆಗಮಿತ್ತಲಾ ಸೂರ್ಯಮಿತ್ರಾಚಾರ್ಯರಗ್ನಿಭೂತಿ ಋಷಿವೆರಸಿ ನಾನಾ ಜನಪದಂಗಳಂ ವಿಹಾರಿಸಿ ಮತ್ತಮಾ ಚಂಪಾಪುರಕ್ಕೆವಂದು

ತರದಿಂ ತಳ್ತಿರ್ದ ಧ್ವಜ ಸಮುದಯಮಂ ಚಿತ್ರಶೋಭಾಭಿರಾಮಾ |
ಜಿರಮಂ ಪ್ರೋತ್ರುಂಗೋದಾಮುಖಮನನುಪಮಾವೇಷ್ಟಿತೋದ್ಯಾನಮಂ ಶಂ |
ಬರನಾಗಸ್ಥಾನಮಂ ಪ್ರಕ್ಷುಭಿತ ಬಹುಜನ ಧ್ವಾನಮಂ ಪೊಕ್ಕನಾಶಾಂ |
ಬರವಿಖ್ಯಾತಪ್ರಶಂಸಂ ಪರಮಜಿನಮತಾಂಭೋಜಿನೀರಾಜಹಂಸಂ || ೬೧ ||

ಇದು ಸಮಸ್ತವಿನೇಯ ಜನವಿನುತ ಶ್ರೀವರ್ಧಮಾನಮುನೀಂದ್ರ ವಂದ್ಯ
ಪರಮಜಿನೇಂದ್ರ ಶ್ರೀಪಾದಪದ್ಮವರಪ್ರಸಾದೋತ್ಪನ್ನ
ಸಹಜಕವೀಶ್ವರ ಶ್ರೀಶಾಂತಿನಾಥಂಪ್ರಣೀತಮಪ್ಪ
ಸುಕುಮಾರಚರಿತದೊಳ್‌ ನಾಗಶ್ರೀ
ರೂಪವರ್ಣನಂ ಪಂಚಮಾಶ್ವಾಸಂ