ಜಿತಕೋಪಂ ಚಾರುರೂಪಂ ನಿರುಪಮತರಸೂತ್ರಾರ್ಥತತ್ವಪ್ರವೀಣಂ
ಕೃತಕೃತ್ಯಂ ಸೂಕ್ತಸೂತ್ಯಂ ಪರಹಿತಚರಿತೋದಾತ್ತಕೀರ್ತಿಪ್ರಭಾವಂ
(ಮಿತವಾ)ಕ್ಯಂ ಸದ್ಗುಣೈಕ್ಯಂ ಪ್ರಕಟಿತ ವಿಜಯ ಶ್ರೀನಿವಾಸಂ ವಿಶೇಷಾ
ರ್ಜಿತಪುಣ್ಯಂಮದ್ವರೇಣ್ಯಂ ನೆಗೞ್ದತಿಬಳಭೂಪಾಲಮಂತ್ರಿಪ್ರದಾನಂ || ೫೧ ||

ವಿನಯಾಳಂಕರಣಂ ವಿಶಿಷ್ಟಕರಣಂ ಕುಂದೇಂದುನೀಹಾ
ರನಿಭಾನೂನಯಶಂ ಧರಾಮರಚರಿತ್ರಾಂಭೋಧಿ ವಿಶ್ವಾವನೀ
ವಿನುತಂ ಭೂರಿವಿಭೂತಿಯಂ ತಳೆದು ಕರ್ಮಾಯತ್ತದಿಂ ತನ್ನ ಮ
ಯ್ದನನಾಭೀಳಕೃತಾಂತ ದಂತವಿವರೋಪಾಂತಾಂತಮಂ ಪೊರ್ದಿದಂ || ೫೨ ||

ವ || ತದನಂತರಂ ತತ್ಪರಿಜನಂ ವಿಧುವರಹಿತಮಾದ ರಾತ್ರಿಯ ಕುಮುದವನದಂತೆ ಕರಂ ಕುಮುದರಾಗಿ ಕೊರಗಿ ಪರಾಗದಂತೆ ದೆಸೆದೆಸೆಗೆ ಪರೆದುಪೋಪುದುಂ ತ್ವದೀಯ ಭಾಗಿನೇಯಂ ಮುನ್ನಮುಳ್ಳ ಭಾಗಾಂಶಮೆಲ್ಲಮಂ ತ್ಯಾಗಭೋಗೋಪಭೋಗಾದಿ ವ್ಯಸನಕ್ಕಸದ್ವ್ಯಯಂ ಮಾಡಿ ಕಿಡಿಸಿಯುಂ ಶೈಶವಭಾವದಿಂ ತಾಳ್ದಿನ್ನೆಗಂ ಸುವಿದ್ಯಾಭ್ಯಾಸಭಾಗ್ಯಮುಂ ಭಾಗ್ಯಮುಮಿಲ್ಲದೆನಸುಂ ರಾಜಯೋಗ್ಯರಾಗದುದಂ ಕಂಡತಿಬಳಮಹಾರಾಜಂ ತದೀಯಾನ್ವಯಾಗತಮಂ ಪುರೋಹಿತಾಸ್ಪದಮಂ ಮಂತ್ರಿಪದಮುಮಂ ದಾಯಿಗರ್ಗೆ ಕುಡುವುದುಂ ಮತ್ಪುತ್ರರಗ್ನಿಭೂತಿಯುಂ ವಾಯುಭೂತಿಯುಂ ಸಿಗ್ಗಾಗಿ ವಿದ್ಯಾಕಾಂಕ್ಷಿತರಾಗಿರ್ಪುದಂ ಕಂಡವರಂ ತಮ್ಮಲ್ಲಿ ಗಟ್ಟಿದೆನವರಂ ತಾವು ಕೈಕೊಂಡು ಸಕಲಕಲಾಕುಶಲರಾಗಿ ಮಾೞ್ಪುದೆಂದು ಬಂದ ವಿನಯವತ್ತಳೆಯ ಪದಕಮಂ ಪರಿಭಾವಿಸಿ ನೋಡಿ ಮಯ್ದುನನ ಮರಣಕ್ಕೆ ಕಟ್ಟುವಡೆದು ಮನದೊಳೆ ಸೈರಿಸಿ ತನ್ನೊಳಿಂತೆಂಬು ಮಾನಿವಂದಿರನಾದರಿಸಿ ಪಸರಂಗೊಟ್ಟೆನಪ್ಪೊಡೆನಗೆ ಸುಸರಮಾಗಿ ಬೆಸಕೆಯ್ಯಲಱೆಯಱೆಯದಂದದಿನುಱೊ ಸೆಱೊಗಯ್ದು ಪೆಱರ ಮಾರ್ಗದೊಳಿರ್ದಡಲ್ಲದೆ ತಱೆಸಂದು ನೆಗೞರೆಂದು ಮೇಲ್ಮಲೆಗೆಯ್ಯದೆ ಬಲ್ಮೊಗಂ ಮಾಡಿ ತನ್ನಳಿಯಂದಿರ ಮೊಗಮಂ ನೋಡಿ

ಇದಱಂದಂ ಬಿಸವಂದಮಾಗಿ ಪಿರಿದುಂ ವಿಭ್ರಾಂತಿಯಂ ಮಾಡಿದ
ಪ್ಪುದು ಮುನ್ನಿಲ್ಲದ ತನ್ನ ವರ್ತನಮಿದೊಂದಾಶ್ಚರ್ಯಮಂ ತೋಱೆದ
ಪ್ಪುದು ಮಿಥ್ಯಾವಿನಯಪ್ರಂಪಂಚನಂ ಕೈಮಿಕ್ಕು ಠಕ್ಕಿಕ್ಕಿದ
ಪ್ಪುದು ಪುತ್ರಂ ಬಹು ಚಿತ್ರಮಪ್ಪುದಿದು ಮಚ್ಚಿತ್ತಕ್ಕಿದೇಂ ಚಿತ್ರಮೋ || ೫೩ ||

ವ || ಅದಲ್ಲದೆಯುಂ

ಅನುಜೆಯರೊಳ್‌ ಕಾಶ್ಯಪಿ ಮ
ಯ್ದನರ್ಕಳೊಳ್‌ ಸೋಮಶರ್ಮನಳಿಯಂದಿರ ಮಾ
ತಿನೊಳಗ್ನಿವಾಯುಭೂತಿಗೆ
ಳೆನಿಸಿದರಂ ಕಥೆಯೊಳಾದೊಡಂ ಕೇಳ್ದಱೊಯೆಂ || ೫೪ ||

ಎಮಗೆ ಜಗದ್ವಿದಿತಂ ಸೂ
ರ್ಯಮಿತ್ರವೆಸರುಂಟು ಮಱಸಲಾಗದಮೋಘಂ
ನಿಮಗದಱೊಳೆಲ್ಲಮೇಂ ನಿ
ಮ್ಮ ಮಾವನೆನಿಸಿರ್ದ ಸೂರ್ಯಮಿತ್ರನೆನಲ್ಲೆಂ || ೫೫ ||

ವ || ಎಂತುಂ ನಿಮಗೆ ವಿದ್ಯಾಭ್ಯಾಸಂಗೆಯ್ವ ತಾತ್ಪರ್ಯಮುಳ್ಳೊಡೆ ನಿರ್ಮಾರ್ಗಾದೊಡಮಕ್ಕೆ ನಿರಾಲಸ್ಕದಿಂ ನಿರ್ಬಂಧದಿಂ ನಿರ್ವಿಕಲ್ಪದಿಂ ನೀಮಿರ್ಮರುಂ ನಿಶ್ಚಯಮೋದುವೊಡಾವುಮಾ ಮಾರ್ಗದಿಂದೋದಿಸಿ ಪಂಡಿತರಾಗೆ ಮಾೞ್ಪೊವಾಹಾರಾಚ್ಛಾದನಂಗಳಂ ನಿಮ್ಮಮೆಚ್ಚಿದೆಡೆಯೊಳ್‌ ಎಡೆಮಾಡಿಕೊಂಡು ನೀಡಿದರದೋದಿಮೆಂಬುದುದುವರೊರ್ವರ ಮೊಗಮಂ ನೋಡಿ ನಾವುಂತುಂ ವಿದ್ಯಾರ್ಥಿಗಳಾಗಿ ಗುರುಶುಶ್ರೂಷಾದಿ ವ್ಯಾಪಾರದಿಂ ಭರವಸಂಗೆಯ್ದು ಸಕಲಶಾಸ್ತ್ರಾಸವಂ ಗೆಯ್ವಮೆಂದಿರ್ಪಮಿವರ್‌ ನಮ್ಮನತ್ಯಾಗ್ರಹದಿಂ ಶಿಕ್ಷಿಸಿ ಸಾಕ್ಷರಿಕರಂ ಮಾೞ್ಪೊಡೆ ನಮ್ಮೊಲ್ಲದುದಾವುದೆಂದು ತಮ್ಮಿರ್ವರುಮೇಕಸ್ಥರಾಗಿ ಸೂರ್ಯಮಿತ್ರನ ನುಡಿಗೊಡಂಬಟ್ಟು ಪೊಡೆವಟ್ಟು

ಎಮಗೀ ಪೊೞಲೊಳ್‌ನಿಚ್ಚಂ
ಭ್ರಮಿಯಿಸಿ ಮಜ್ಜೀವರಕ್ಷಣಾರ್ಥಂ ಶಾಸ್ತ್ರ
ಕ್ರಮಮನಱೆವನ್ನೆಗಂ ಗ್ರಾ
ಸಮಾತ್ರಮಿಲ್ಲಾಯ್ತೆ ಸೂರ್ಯಮಿತ್ರಸ್ವಾಮೀ || ೫೬ ||

ವ || ಎಂಬುದಮವರ ಮನದ ಪರಿಚ್ಛೇದಮಱೆದು ಕೆಲವು ದಿವಸಕ್ಕೆ

ವಿಲಸದ್ವಾಪರ ವಾರಯೋಗ ಗುಣಮುಂ ಸಲ್ಲಗ್ನಮುಂ ತಾರಕಾ
ಬಲಮುಂ ಕೂಡೆ ನವಗ್ರಹೋತ್ತಮಬಳಂ ಕೈಗಣ್ಮೆಧಾತ್ರಿಹಿತಂ
ಗಳನವ್ಯಾಕುಲಮೋಕ್ಷಸಾಧನಗಳಂ ಸಿದ್ಧಂನಮಾದ್ಯಕ್ಷರಂ
ಗಳನಿಷ್ಟಾರ್ಥಕರಂಗಳ ಸಕಲವಿದ್ಯಾಭೀಜಪುಂಜಂಗಳಂ || ೫೭ ||

ವ || ಮೊದಲ್‌ ತೊಡಗಿಸಿ ನಿರ್ಬಂಧದಿಂದಮೋದಿಸುತ್ತುಮವಂದಿರ ತಿರಿದು ತಂದ ಕೂೞಮೇಗಣ್ಗೆಂದಾಗಿಯುಮಿನಿಸೆಣ್ಣೆಯುಮನುಪ್ಪುಮಂ ಮೊದಲಾಗಿಯು ಮೆಱೊಯಲುಮೆಕ್ಕಲುಂಬೇಡೆದು ತನ್ನ ಮನೆಯ ಬಾಣಸಿಗರ್ಗೆ ಪೇೞ್ದು ತಾನುಮಾ ಮಾರ್ಗದೊಳತಿ ನಿಷ್ಠರತೆಯಿಂ ಶಿಕ್ಷೆಗೆಯ್ಯುತ್ತುಂ ಕತಿಪಯ ಸಂವತ್ಸರಂಗಳ್‌ ಪೋಪುದಮಗ್ನಿಭೂತಿಯುಂ ವಾಯುಭೂತಿಯುಂ ವೇದವೇದಾಂತ ತರ್ಕ ವ್ಯಾಕರಣಾದಿ ಸಕಲವಿದ್ಯಾಪಾರಗರಾಗಿರ್ದಲ್ಲಿ ಪರಿಯಾತಂ ಸ್ವಭಾವದಿಂ ಋಜಮಾರ್ಗ ವೃತ್ತಿಯಂ ತಳೆದು ವಿನಯ ವಿಭೂಷಣನಾದಂ ಕಿಱೆಯಾತಂ ನಿಸರ್ಗದಿಂ ವಕ್ರಗತಿ ಪರಿಣಾಮದಿನು ದ್ವೃತ್ತಚಿತ್ತದಿನುನ್ಮತ್ತ್ರನಾದ ನಿಂತವರಿರ್ವರುಮೊಂದು ದಿವಸಂ ಸೂರ್ಯಮಿತ್ರಂಗೆ ಲಲಾಟತಟನಿಹಿತಕರಕಮಳ ಮುಕುಳರಾಗಿ ನಿಂದಿರ್ದಗ್ನಿ ಭೂತಿ ನಿರ್ಭರಭಕ್ತಿಭರದಿಂ

ನಿಮ್ಮದಯೆಯಿಂದಮನುಪಮ
ಸಮ್ಮತಮಂ ಹಿತಮನಖಿಳಶಾಸ್ತ್ರಾಗಮಮಂ
ನಿಮ್ಮಿಂದಮಱೆದೆವದಱೆಂ |
ನಿಮ್ಮುಪಕಾರಮನದೇತಱೆಂ ನೀಗುವೆಮೋ || ೫೮ ||

ಮಣಿಭೂಷಣ | ದೇಸಿಗರ್ಕಳನಖಲ್ಯರನೆಮ್ಮನೊಱಲ್ದು ವಿ
ದ್ಯಾ ಸಭಾನಿತರತರಾಗಿಸಿದಿರ್‌ ನಿಮಗಂ ಸಮಂ
ತೀ ಸುವೇದಿಗಮುದಾತ್ತತೆಯಿಂದಮೆ ಗಡ್ಡಮುಂ
ಮೀಸೆಯುಂ ಬೆರಸು ಪುಟ್ಟದೆವೆಂದವಧಾರಿಸಿಂ || ೫೯ ||

ವ || ಎಂದು ಬೀೞ್ಕೊಳ್ವುದುಮವರ್ಗೆ ತನ್ನನಱೆಪುವುಜ್ಜುಗದಿಂ ಮಜ್ಜನಂಬುಗಿಸಿ ದಿವ್ಯವಸ್ತ್ರಾಭರಣಂಗಳನುಡಲುಂ ತುಡಲುಮಿತ್ತು ತನ್ನ ಪಂತಿಯೊಳುಣಲಿಕ್ಕಿಸಿ ಕಪ್ಪುರಂ ಬೆರಸು ತಂಬುಲವಂ ಕೊಟ್ಟು ನಡೆಗೞ್ತೆಗಳನಿರ್ಬರ್ಗಮೇೞಲ್‌ ಕೊಟ್ಟು ಪಿರಿದಾಳಂ ನೆರಂ ಬೇೞ್ದು ಕಿಱಿದಂತರಂ ಕೞೆಪುತ್ತುಂ ಬಂದು ಪುರಬಹಿರುಪವನೋದ್ದೇಶದೊಳ್‌ ನಿಂದು

ನಿಮಗಾಂ ಪರ್ವದಿನಂಗಳೊ
ಳಮಾಗಿಯುಂ ಕಿಂಚಿದನ್ನಮಂ ಕಿಂಚಿತ್ತೈ
ಲಮನಕ್ಕೆಮೆೞೊಯಿಮೆಂದೆ(ಂ)
ದುಮಱೆಯೆನೇನೆಂಬೆನೆನ್ನ ನಿಷ್ಕರುಣತೆಯಂ || ೬೦ ||

ಆಂ ನಿಮಗೆ ಮಾವನೆಂ ನೀ
ಮೆನ್ನನುಜೆಯ ತನುಜರಪ್ಪಿರಿದು ನಿಶ್ಚಯಮಾಂ
ಮುನ್ನಮೊಸೆದೆನ್ನನಱೆಪಿದೊ
ಡೆನ್ನನಣಂ ಬಗೆಯಿರೆಂಬ ಬಗೆಯನೆ ಬಗೆದೆಂ || ೬೧ ||

ಕಿಱೆಯಂದು ತಂದೆ ಬಗ್ಗಿಸ
ಲಱೆಯನೆ ತಾಯ್‌ ಜಡಿದು ತಿಳಿಪಲಱೆಯಳೆ ವಿಷಯ
ಕ್ಕೆಱಗಿದರಂ ತಲೆಗೇಱೆಸೆ
ಕೊಱಚಾಡುವರೆಂದುಪಾಯದಿಂದೋದಿಸಿದೆಂ || ೬೨ ||

ವ || ಎಂದು ತನ್ನುಕೈವತನದಿನೋದಿಸಿದ ವೃತಾಂತಮನಾದ್ಯಂತಮಱೆಯೆ ಪೇೞ್ದೆನ್ನೆಮ್ಮೊಳಪ್ಪ ಬಂಧುತ್ವಮನೆಂದು ಮಱೊಯದಿರ್ಪುದೆಂದು ಬುದ್ಧಿವೇೞ್ದು ಪರಸಿ ಪೋದನಿತ್ತಲಾ ವಾಯುಭೂತಿ ಮಹಾಪ್ರಳಯಕಾಲದ ವಾಯುವಿನಂತೆ ಮಾಮಸಕಂ ಮಸಗಿ

ಅಗಣಿತಪುಣ್ಯನಬ್ಬೆಯೊಡಪುಟ್ಟಿದ ಮಾವನಶೇಷಶಾಸ್ತ್ರಪಾ
ರಗನತಿ ಧನ್ಯನೆಂದು ಪರಿಭಾವಿಸಿ ಬಂದೊಡವಜ್ಞೆಗೆಯ್ದು ನಾ
ಯ್ವುಗದೆಡೆಯೆಲ್ಲಮಂ ಪುಗಿಸಿ ಬಯ್ಕದ ಭಾಜನಮಾಗೆ ಮಾಡಿ ತೊ
ಟ್ಟಗೆ ವಿಭು ಸಾಯೆ ಪೊಯ್ದು ಕಿವಿಯಂ ಪಿಡಿದೂಡಲೊಡರ್ಚಿ ಬಂದನೇ || ೬೩ ||

ತಾಂ ಗಡ ನಮಗೀಗಳೇ ಮಾ
ವಂ ಗಡ ನಾಮುಂ ಗಡೀಗಳಳಿಯಂದಿರೆವಿ
ನ್ನುಂ ಗಡ ನಮಗಂ ತಮಗಂ
ಸಂಗತಸಬಂಧಬಂಧುರಂ ಬಂಧತನಂ || ೬೪ ||

ಪಸಿದಿರ್‌ ನೀರಡಸಿದಿರೆಂ
ದು ಸೇದೆಯಂ ಶ್ರಮಮನಱೆವುದೆನಸುಂ ಗೆಂಟಾ
ಬಿಸಿಲೊಳ್‌ ನಿಂದೊಡೆ ನೆೞಲ
ತ್ತ ಸಾರಿಮೆಂದೆಂದುಮಱೆವನಲ್ಲಂ ನಮ್ಮಂ || ೬೫ ||

ವ || ಎಂಬುದುಮಗ್ನಿಭೂತಿ ವಾಯುಭೂತಿಯಂ ಬಿಡೆ ಜಡಿದು

ಮುನ್ನವತಿವ್ಯಸನಪರ
ರ್ಗೆನ್ನಂ ಪೇೞ್ಧಂದು ಬಗೆಯಲಱೆಯಲೆನುತ್ತುಂ
ತನ್ನಂ ಪೇೞದೆ ಪೇೞ್ದಂ
ಸನ್ನುತ ವೇದಾದಿ ಶಾಸ್ತ್ರಮಂ ದಯೆಯಿಂದಂ || ೬೬ ||

ಮತಿಗೆಟ್ಟು ಬಾಯ್ಗೆವಂದಂ
ತೆ ತಿರಸ್ಕರಿಸುವುದು ಪುರುಷಕಾರಮೆ ಗುರುವಂ
ಶ್ರುತಹೀನರಂತೆ ಕೆಮ್ಮನೆ
ಕೃತಘ್ನರಾದಂದು ನಮಗಿಹಂ ಪರಮುಂಟೇ || ೬೭ ||

ಎಂಬುದುಂ ವಾಯುಭೂತಿ ಕಿನಿಸಿ ಕಿಂಕಿ(ರಿ)ವೋಗಿ ||

ಅವನುಪಕಾರಮನಾಂ ಪೇ
(ೞ)ವೇೞ್ವುದೆ ನಮ್ಮತಿರಿದು ತಂದುಣ್ಬಶನ
ಕ್ಕವ(ರ)ಣ್ಣೆ ಸೂಜಿಮೊನೆಯೆನಿ
ಸುವೆಣ್ಣೆಯುಂ ಬಂಗುಮಾದ ಕೞೆಯುಂ ಪೇೞ್ಗುಂ || ೬೮ ||

ಪದೆಪುಗೆಡ(ಲ)ಬ್ಬೆಯೊಡವು
ಟ್ಟಿದ ಮಾವನ ಮನೆಯೊಳುಂಡುಟ್ಟುಂ ನೀ
ಮೊದೆದೊಡೆಗೆಯ್ವೆಯೊ ನಾಯು
ಣ್ಣದ ದೋಣಿಯೊಳೂಡಿದೊಂಗೆ ಪದಯಿದನೆ ಕರಂ || ೬೯ ||

ವ || ಅಲ್ಲದೆಯುಂ ದುರಾತ್ಮನಾತ್ಮೀಯ ಭವನದೊಳ್‌ ಸದಾಕಾಲಂ ಮಹಾಜನಕ್ಕೆ ಸಹಸ್ರಭೋಜನಮನಿಕ್ಕುವಂ ಗ್ರಹಣ ಸಂಕ್ರಮಣ ಪುಣ್ಯತಿಥಿಗಳೊಳಂ ಮೊದಲಾಗಿಯಂ ನಮಗಕ್ಷಮಾಪ್ರಾಹಾರಮಂ ಬಿಂದುಮಾತ್ರ ತೈಲಮುಮನಿಕ್ಕುವುದುಮೆಱೊವುದು (ಮಿ)ನಿಸಾನುಂಗೆಂಟು

ತನಗಿಕ್ಕುವೆಱೆವ ಕರುಣಂ
ಮನದೊಳಮಿನಿತಿಲ್ಲ ಪಾಪಕರ್ಮನವಂ ಮಾ
ವನೆ ನಮ್ಮ ಕರಕೆಯೊಳ್‌ ಕ
ಲ್ಲನಿಕ್ಕುವಂ ನಿಕ್ಕುವಂ ಪ್ರಭಾಕರಮಿತ್ರಂ || ೭೦ ||

ವ || ಎಂದು ನುಡಿದ ನಿಜಾನುಜನ ಪರುಷತರವಚನವ್ರಾಂತಗಳಂ ಕೇಳ್ದು ಮಱುಮಾತುಗುಡದೆ

ಎನಿತಖಿಳಕಳಾಕೋವಿದ
ನೆನಿಸಿದೊಡಂ ಪಾಪಿ ಧರ್ಮದತ್ತೆಸಗನದೆಂ
ತೆನೆ ಸಂಸ್ಕಾರ ಶತೇನಾ
ಪಿ ನಗೂಧಃ ಕುಂಕುಮಾಯತೇಯೆಂಬುದಱೆಂ || ೭೧ ||

ವ || ಎಂಬಿದಂ ತನ್ನಂತರ್ಗತದೊಳೆ ಬಗೆದು ಪೆಱಪೆಱದು ವಾರ್ತೆಗಳನೆ ನುಡಿಯುತ್ತುಂ ಪಯಣದ ಮೇಲೆ ಪಯಣಂ ಬಂದು ಕೆಲವು ದಿವಸಕ್ಕೆ ಕೌಶಂಬಿ ಯನೆಯ್ದೆವಂದು ಶುಭದಿನಮುಹೂರ್ತದೊಳ್‌ ನಿಜಾಂಬಿಕಾನಿವಾಸಕ್ಕಾಗಿ ಬರ್ಪಾಗಳ್‌

ತ್ರಿಪದಿ || ಬಡವಂ ನಿದಾನಮಂ ಪಡೆದಂತೆ ಕುರುಡಂ ಕ
ಣ್ಬಡೆದಂತೆ ಮನದೊಳ್‌ ಪಿರಿದುಮುತ್ಸಾಹಮಂ
ಪಡೆದಳಾತ್ಮಜರ ಬರವಿಂದೆ || ೭೨ ||

ವ || ಆ ಪ್ರಸ್ತಾವದೊಳ್‌

ಅಪರಿಮಿತಭಕ್ತಿಯಿಂ ತ
ನ್ನ ಪದಾಂಭೋಜಕ್ಕೆ ವಿನತರಾಗಲೊಡಂ ಕಾ
ಶ್ಯಪಿ ಸಂತೊಸದಿಂ ತೞ್ಕೈ
ಸಿ ಪರಸಿದಳ್‌ ಪಲವು ಪರಕೆಗಳಿಂದಂ || ೭೩ ||

ವ || ತದನಂತರಮವರ್‌ ತಮ್ಮ ಪೋದ ಬಂದ ವೃತ್ತಾಂತಮೆಲ್ಲಮಂ ಸವಿಸ್ತರಂ ಪೇೞ್ದು ಪ್ರಶಸ್ತಲಗ್ನದೊಳಾತ್ಮೀಯ ಸ್ವಾಮಿಯಪ್ಪತಿಬಳ ಮಹಾರಾಜನನುಚಿತ ಪ್ರತಿಪತ್ತಿಗಳಿಂ ಕಂಡು

ಶ್ಲೋಕರ್ಥೋಪನ್ಯಾಸ
ಶ್ಲಾಘ್ಯನಿನಾದ ಮುದಮಾಗಳ್‌ ನವಮಾರ್ಗೀ
ಶ್ಲೇಷಂ ಮಿಗೆ ತೋಱಲುಪ
ಶ್ಲೋಕಿಸಿ (ದಿಂ) ಬೞೆಕೆ ಕೊಟ್ಟು ಶೇಷಾಕ್ಷತಮಂ || ೭೪ ||

ವ || ಮತ್ತಂ ಸಮಸ್ತ ಕಲಾಕಲಾಪಾಡಂಬರಮಂ ಮೆಱೋದು
ಸದಳಂಕಾರೋಕ್ತಿಯುಂ ಸೂಕ್ತಿಯುಮ್ರೆಸೆಯಲುಪನ್ಯಾಸವಿನ್ಯಾಸಮಂ ತೋ |
ರ್ಪುದುಮಿಂತಾರ್‌ ಬಲ್ಲರಿಂತಾರ್‌ ಪರಿಣತರೆನುಂತು ತತ್ಸಭಾಮಧ್ಯದೊಳ್‌ ತ
ದ್ವಿದರೆಲ್ಲಂ ಕೀರ್ತಿಸುತ್ತಿರ್ಪುದುಮದನೆ ಮನಂಗೊಂಡು ಚಿತ್ತೋದಿತಾನಂ
ದದಿನಿರ್ದಂ ಪ್ರೋನ್ನತಾಂಸಂ ಪರಮಜಿನತಾಂಭೋಜಿನೀರಾಜಹಂಸಂ || ೭೫ ||

ಇದು ಸಮಸ್ತ ವಿನಯಜನವಿನುತ ಶ್ರೀವರ್ಧಮಾನಮುನಿಂದ್ರ
ವಂದ್ಯ ಪರಮಜಿನೇಂದ್ರಪಾದಪದ್ಮವರ ಪ್ರಸಾದೋತ್ಪನ್ನ
ಸಹಜ ಕವೀಶ್ವರ ಶ್ರೀ ಶಾಂತಿನಾಥಂಪ್ರಣೀತಮಪ್ಪ
ಸುಕುಮಾರಚರಿತದೊಳಗ್ನಿ ಭೂತಿ ವಾ
ಯುಭೂತಿವಿದ್ಯಾಭ್ಯಾಸಕಥನಂ
ದ್ವಿತೀಯಾಶ್ವಾಸಂ