ಮುನಿಚರಣಕಮಲದೊಳ್‌ ನಿಜ |
ವಿನತಶಿರಃಪದ್ಮವಿನುತಲೀಲಾಕಳಕಭೃಂ ||
ಗನಿಕಾಯಮೆಱಗಿ ತುಱುಗಿರೆ |
ವಿನಯಾನ್ವಿತನಾಗಿ ತನ್ನೃಪಂ ತತ್ಕ್ಷಣದಿಂ || ೩೬ ||

ವಿಷಮವಿಷಸದೃಶವಿಷಯಾ |
ಮಿಷಕಾಂಕ್ಷೆಯೆ ತಿಣ್ಣಮಾಗೆ ಮತಿಗೆಟ್ಟು ಮಳೀ ||
ಮಸನಾದೆನಿನ್ನೆಗಂ ನಿ |
ರ್ವಿಷನಾಗಿಪುದೆನ್ನನುರುತಪಃಪ್ರತಿವಿಷದಿಂ || ೩೭ ||

ಎಂದು ನಿಜಾತ್ಮಜಂಗೆ ಜಿತಶತ್ರುಗೆ ರಾಜ್ಯಮನಿತ್ತು ಚಂದ್ರಿಕಾ |
ನಂದನನಾಗಳಂತೆ ತಱೆಸಂದು ಮನೋವಚನಾಂಗಶುದ್ಧಿಯಿಂ |
ಸಂದಿಸಿ ಶಲ್ಯದಂಡಮನಡಂಗಿಸಿ ಗೌರವಮಂ ಕೞಲ್ಚಿ ಜೀ |
ಯೆಂದು ಸಭಾಸದರ್ಪೊಗೞೆ ಕೊಂಡನಖಂಡಿತ ಜೈನದೀಕ್ಷೆಯಂ || ೩೮ ||

ಪುರಜನಮುಂ ಪರಿಜನಮುಂ |
ನೆರೆದು ಮನಂಗೊಂಡು ಕೂರ್ತು ಕೀರ್ತಿಸೆ ಧರಣೀ ||
ಶ್ವರರಯ್ನೂರ್ವರ್ಚಂಪಾ |
ಪುರವರನೊಡನಂದು ದೀಕ್ಷೆಯಂ ಕೈಕೊಂಡರ್‌ || ೩೯ ||

ಮುನ್ನಿನ ತನ್ನ ಜನ್ಮನಿವಹಂ ತದುಮಾಡೆ ಪದಾರ್ಥನಿಶ್ಚಯಂ |
ತನ್ನ ಮನಕ್ಕೆ ತೀಡೆ ಖಳಸಂಸರಣಕ್ಕೆ ವಿರಕ್ತೆಯಾಗಿ ವಿ |
ದ್ವನ್ನಿಕರಂ ಮನದೆಗೊಳ್ವಿನಮೊಂದಿದಘಂ ಸುರುಳ್ವಿನಂ |
ಕನ್ನೆಯುಮಾ ಮುನೀಶ್ವರರ ಪಕ್ಕದೆ ತಾಳ್ದಿದಳಂದು ದೀಕ್ಷೆಯಂ || ೪೦ ||

ನಾಗಶ್ರಿ ಜಿನದೀಕ್ಷಿತೆ |
ಯಾಗಲೊಡಂ ನಾಗರ್ಶಮನುಂ ಪರಮತಪಃ ||
ಶ್ರೀಗೆ ಬಸಮಾದನಾರ |
ಯ್ವಾಗಳವಾಙ್ಮಾನಸಗೋಚರಂ ಪರಿಣಾಮಂ || ೪೧ ||

ವಂಶಸ್ಥ || ವಿವಿಕ್ತಪಾಣಿಗ್ರಹಣಾಧೀಶನೊಳ್‌ |
ಭವಾಬ್ದಿಯಂ ದಾಂಟುವೆ ಮತ್ತನೂಜೆಯೊಳ್‌ |
ಕವಲ್ತ ಮೋಹಂ ತದುಮಾಡೆ ಚಿತ್ತಮಂ |
ತ್ರಿವೇದಿಯುಂ ತಾಳ್ದಿದಳಂದು ದೀಕ್ಷೆಯಂ || ೪೨ ||

ವ || ಮತ್ತಮಲ್ಲಿ ಕೆಲರ್ಮಿಥ್ಯಾತ್ವಮಂ ಪತ್ತುಮಿಟ್ತು ಸಮ್ಯಕ್ತ್ವ ಪೂರ್ವಕ ಮಣುವ್ರತಂಗಳಂ ಕೈಕೊಂಡು ದೃಢವ್ರತರಾದರಿಂತೀ ಮುನೀಶ್ವರರಲ್ಲಿ ಧರ್ಮಪ್ರಭಾವನೆಯಂ ಮಾಡಿ ಮುನಿನಿಕಾಯಂ ಬೆರಸು ಮತ್ತಮಾ ವಾಸುಪೂಜ್ಯ ಭಟ್ಟಾರಕರ ಪರಿನಿರ್ವಾಣಕ್ಷೇತ್ರಮನೆಯ್ದೆವಂದು

ಪರಮಾನಂತಗುಣಪ್ರಣೂತಪರಿನಿರ್ವಾನೋರ್ವಿಯಂ ಘೋರಸಂ |
ಸರಣಾಂಭೋಧಿಪರಾಯಣಪ್ರಥಿತಕಲ್ಯಾಣೋರ್ವಿಯಂ ಮುಕ್ತಿಸಂ |
ಭರಮಂ ಭಕ್ತಯಿನಂದು ವಂದಿಸಲೊಡಂ ಶ್ರೀಸೂರ್ಯಮಿತ್ರವ್ರತೀ |
ಶ್ವರನೊಳ್‌‍ ಪುಟ್ಟಿದುದಾಗಳಪ್ರತಿಹತಜ್ಞಾನಂ ಮನಃ ಪರ್ಯಯಂ || ೪೩ ||

ಅಭಿವಿನುತಮನಃಪರ್ಯ |
ವಿಭೂತಿ ದೊರೆಕೊಂಡುದೆಂಬುದಾವುದು ಚೋದ್ಯಂ ||
ಶುಭಭಾವನೆಯಿಂ ಕೇವಲ |
ವಿಭೂತಿ ದೊರೆಕೊಳ್ಗುಮೆಂದೊಡಿದು ಪಿರಿದಾಯ್ತೆ || ೪೪ ||

ಸತತಂ ನಿಶ್ಚಳಶುದ್ಧಭಾವನೆಗಳಂ ಭಾವಾತ್ಮಕಂ ತಾಳ್ದೆ ಬು |
ದ್ಧಿತಪೋವಿಕ್ರಿಯಮೌಷಧಂ ರಸಬಳಾಕ್ಷೀಣಾಭಿಧಾನೋರ್ಜಿತೋ |
ರ್ಜಿತಸಪ್ತರ್ಧಿಗಳುಂ ಕ್ರಮಕ್ರಮದಿನಾ ವರ್ಣಿಶ್ವರಂಗಾದುವ |
ನ್ವಿತಸದ್ಧ್ಯಾನಮದೇನನಾಗಿಸದೊ ಸನ್ಮಾರ್ಗಪ್ರಭಾವೋದಯಂ || ೪೫ ||

ಆ ಕ್ಷಣದೊಳಗ್ನಿಬೂತಿ ಮು |
ಮುಕ್ಷುಗೆ ಮೂಱನೆಯ ದಿವ್ಯಸರ್ವಾವಧಿ ಪು ||
ಣ್ಯಕ್ಷೇತ್ರ ಶುಭಸ್ಥಾನ ಸ |
ಮಕ್ಷದೊಳಾದುದು ವಿಶುದ್ಧಿಯಿಂದಾಗದುದೇಂ || ೪೬ ||

ವ || ಅಂತು ಸಮ್ಮಜ್ಞಾನಲಬ್ಧಿಯಿನಲ್ಲಿಂ ತಳರ್ದ ಧಮೋಪದೇಶಾರ್ಥದಿಂ ಧರ್ಮಕ್ಷೇತ್ರಂಗಳಂ ಸಮುದಾಯಸಹಿತಂ ವಿಹಾರಿಸುತ್ತುಂ ಬಂದು ಮಗಧದೇಶದ ರಾಜಹೃಹಪುರದ ಬಹಿರ್ಭಾಗದ ಮನೋಹರೋದ್ಯಾನದೊಳಾ ಮುನಿಕುಂಜರಂ ಮುನಿಯೂಧಪರಿವೃತನಾಗಿರ್ಪುದುಮಾಪ್ರಸ್ತಾವದೊಳ್‌ ತದಾಗಮನಕಾರ್ಯಮಂ ತದುದ್ಯಾನಪಾಲಕನಪ್ಪ ರಿಷಿನಿವೇದಕಂ ತತ್ಪುರಾಧೀಶ್ವರನಪ್ಪ ಸುಬಳಮಹಾರಾಜಂಗೆ ಬಿನ್ನಪಂಗೆಯ್ವುದುಮಾ ಧರಿತ್ರಿನಾಥನತ್ಯಂತಹರುಷಾಂತರಂಗನಾಗಿ ಸಿಂಹಾಸನದಿಂದಿೞೆದು ಮುಂದನೇೞಡಿಯಂ ನಡೆದು

ಅವರಿರ್ದದೆಸೆಗೆ ಪೊಡೆವ |
ಟ್ಟು ವಿವಿಧಮಣಿಭೂಷಣಣೋತ್ಕರಂಗಳನೊಸೆದಿಂ ||
ತವಯವದಿಂದಾಗಳ್‌ ಋಷಿ |
ನಿವೇದಕಂಗಿತ್ತನಂಗಚಿತ್ತಮನರಸಂ || ೪೭ ||

ವ || ಅಂತು ಋಷಿನಿವೇದಕಂಗಂಗಚಿತ್ತಮಂ ತುಷ್ಟಿದಾನಮನಿತ್ತು ಬೞೆಯ ಮಾನಂದದಿನಾನಂದಭೇರಿಯಂ ಪೊಯ್ಸಿದಾಗಳ್‌

ಅವನೀಶಂ ಭಕ್ತಿಯಿಂ ಶ್ರೀಮುನಿಚರಣಸರೋಜಾತಮಂ ಕಾಣಲತ್ಯು |
ತ್ಸವದಿಂ ಪೋದಪ್ಪನೀಂ ಬರ್ಪುದು ತಡೆದಿರವೇಡೆಂದು ನಿರ್ಯಾಜದಿಂ ಸಾ |
ಱುವವೊಲ್‌ ಭೋರೆಂಬಿನಂ ಪೊಣ್ಮಿದುದಖಿಲದಿಶಾರಂಧ್ರಸಂದೋಹಮಂ ತೀ |
ವುವಿನಂ ಸಾನಂದಮಂ ಪುಟ್ಟಿಸೆ ಪುರದೊಳಗಾನಂದಭೇರಿನಿನಾದಂ || ೪೮ ||

ವ || ಆಗಳ್‌ ಸುಬಳಧರಾಧೀಶ್ವರಂ ಮಂಗಳಪ್ರಸಾಧನಂ ಗೆಯ್ದು ನಾನಾವಿಧ ಪೂಜಾಪುರಸ್ಸರಂ ಸುಪ್ರಭಾದೇವಿವೆರಸು ಸಮಸ್ತಸೇನಾಸಮೇತನಾಗಿ ಮುನ್ನೆ ಪೇೞ್ದ ವತ್ಸವಿಷಯಾಧಿಪತಿಯಪ್ಪತಿಬಳನಾತ್ಮೀಯಬಂಧುತ್ತ ಸಂಬಂಧದಿಂ ತನ್ನಲ್ಲಿಗೆ ವಂದಿರ್ದೊಡಾತನುಮನೊಡಗೊಂಡು ರಾಜಗೃಹಮಂ ಪೊಱಮಟ್ಟು ಪಟ್ಟಮಾರ್ಗಂ ಬಿಡಿದು ಪಾದಮರ್ಗದಿಂ ಸನ್ಮಾರ್ಗಮಾರ್ಗಿಗಳನೆಯ್ದೆವಂದು ದೀಪ್ತತಪಃ ಪ್ರಭಾವ ದಿನಾತ್ಯಂತಿಕರೂಪಪರಾವರ್ತನೋಪಲಬ್ಢಿಯಿಂ ವಿಶುದ್ಧಸ್ಪಟಿಕಮಣಿಮಯ ಧರಾವರಾಂತ ರ್ಗತಸಹಸ್ರಕಿರಣದೇದೀಪ್ಯಮಾನಪ್ರಭಾಭಾಸುರ ಗಾತ್ರಂ ಚತುಜ್ಞಾನನೇತ್ರಂ ಬೋಂಕನೆ ಕಂಡು ರಹರಹಪರಿಣಾಮಪರಿಣತನಾಗಿ ಸಮುದಾಯಮಂ ಬಂದಿಸಿ ಸಮುತೋದ್ದೇಶ ದಾಸನದೊಳ್‌ ಕುಳ್ಳಿರ್ದುಮುಕುಳೀಕೃತಕರಮಲಯುಗಲನಾಗಿ

ಮುನಿಪತಿ ನಿಜಚಕಣಾಳೋ |
ಕನಮಾತ್ರದೆ ಮನದೊಳಾದಮಾನುಂ ಸ್ನೇಹಂ ||
ಜನಿಯಿಸಿದಪುದೇಕಾರಣ |
ಮೆನಗಿದನೞೆಪುವುದುಗಾಧಬೋಧಪಯೋಧೀ || ೪೯ ||

ಎನೆ ಮುನಿಪತಿ ನೀನೆನಗರ |
ಸನೆಯಾದುದಱೆಂದೆನಗತಿಸ್ನೇಹಭರಂ ||
ಮನದೊಳ್‌ ಪುಟ್ಟಿದುದೆನೆ ಕೇ |
ಳ್ದು ನೃಪತಿ ಬೆಱಗಾಗಿ ವಿಸ್ಮಯಾಕುಳಚಿತಂ || ೫೦ ||

ಶ್ರೀಮದಭಿವಿನುತ ಭವ್ಯ |
ಸ್ವಾಮಿಯೆ ನೀಂ ಬಗೆದು ನೋಡೆ ಕುತ್ಸಿತಮರ್ತ್ಯ ||
ಸ್ವಾಮಿಯೆ ನಾಂ ನಿಮಗೆ ಕುಲ |
ಸ್ವಾಮಿಯೆನಾದಂದಮೇನು ಭುವನಸ್ವಾಮೀ || ೫೧ ||

ವ || ಎಂಬುದುಮಾ ಮುನಿನಾಯಕಂ ಮಗಧನಾಯಕನ ಮೊಗಮಂ ನೋಡಿ

ಕ್ಷಿತಿಪತಿ ಸೂರ್ಯಮಿತ್ರನೆನಿಳಾಮರೆನೆಂಬ ಭವದೀಯ ಮಂತ್ರಿಯೆಂ |
ವಿತತಮರೀಚಿಮೇಚಕಿತನೂತ್ನ ವಿರಾಜಿತ ರತ್ನ ಮುದ್ರಿಕಾ |
ವ್ಯತಿಕರದಿಂ ತಪಕ್ಕೆ ತಱೆಸಂದೆನನಾರತಮೆಂದು ಪೂರ್ವಸೂ |
ಚಿತನಯಮಾರ್ಗದಿಂ ತಿಳಿಪಿದಂ ಮುನಿನಾಥನಿಳಾಧಿನಾಥನಂ || ೫೨ ||

ವ || ಆಗಳದುವೆ ನಿರ್ವೇಗಕಾರಣಮಾಗೆ ರಾಜ್ಯಶ್ರೀಗೆ ವಿರಕ್ತನುಂ ಮುಕ್ತಿ ಶ್ರೀಗನುರಕ್ತನುಮಾಗಿ ತನ್ನ ಮಗಂ ಮಘವಂಗೆ ರಾಜ್ಯಪಟ್ಟಮಂ ಕಟ್ಟಿ ಸರ್ವಸಂಗ ಪರಿತ್ಯಾಗಂ ಗೆಯ್ದು

ತೊಡರ್ದಿರ್ದ ಮೋಹಪಾಶದ |
ತೊಡರಂ ಪಱೆಪಡಿಸಿ ಬಿಡಿಸಿ ಮಗಧಾದಿಪನಾ ||
ಗಡೆ ಪರಮಜೈನದೀಕ್ಷೆಗೆ |
ತಡೆಯದೆ ಮೆಯ್ದಂದನೇಕೆ ತಡೆಗುಮೊ ಭವ್ಯಂ || ೫೩ ||

ನಯಗುಪ್ತನಿಷ್ಟಶರ್ಮಂ |
ಜಯಂತನೆನೆ ನೆಗೞ್ದಮೂವರುಂ ಮಂತ್ರಿಗಳುಂ ||
ಪ್ರಿಯಲಲನೆ ಸುಪ್ರಭಾದೇ |
ವಿಯುಮಾಂತರ್‌ಜೈನದೀಕ್ಷೆಯಂ ತಕ್ಕ್ಷಣದೊಳ್‌ || ೫೪ ||

ಎಮಗಿರ್ಪುದು ಸೂೞಲ್ತೆಂ |
ದು ಮಕ್ಕಳಂ ನಿಱೆಸಿ ನೆಲೆಗಳೊಳ್‌ ಸ್ವಾಮಿಯ ಚಂ ||
ದಮೆ ಚಂದಮೆಂಬುದಂ ನಿರ್ಣ |
ಯಮಾಡಿ ಕೆಲರಲ್ಲಿ ಸುಬಳನಾದುದನಾದರ್ || ೫೫ ||

ವ || ಆಗಳಾವ್ಯತಿಕರದೊಳತಿಬಳಮಹಾರಾಜನುಮತಿನಿರ್ವೇಗಪರಾಯಣನಾಗಿ

ಶಠವಿರಹಿತಾಂತರಂಗಂ |
ಕಠೋರಸಂಸಾರಭೋಗವೈರಾಗ್ಯಪರಂ ||
ಕಠಿನಬಲಕರ್ಮಭೂರುಹ |
ಕುಠಾರಸನ್ನಿಧಿಯೊಳಮಳದೀಕ್ಷೆಯನಾಂತಂ || ೫೬ ||

ನೂರ್ವರ್‌ನಿಜಸುತರಂ ಸಾ |
ಸಿರ್ವರ್‌ನೃಪಸುತರುಮಾಗಳೊದವಿದ ಪಿರಿದುಂ ||
ನಿರ್ವೇಗದಿಂದಮಂದು ತ |
ದುರ್ವೀಶ್ವರನೊಡನೆ ದೀಕ್ಷೆಯಂ ಕೈಕೊಂಡರ್ || ೫೭ ||

ಶ್ರೀಯಂ ಜವ್ವನಮುಂ ಮನೋಜಸುಖಮುಂ ಸೌಂದರ್ಯಮುಂ ಶೌರ್ಯಮುಂ
ಮಾಯಂ ಭಾವಿಸುವಂದಪಾಯಮೆನುತುಂ ನಿರ್ವಣನಿಶ್ರೇಯಸ |
ಶ್ರೀಯೊಳ್ ಶಾಶ್ವತದೊಳ್‌ ಸುಖಾಸ್ಪದದೊಳಿರ್ಪುದ್ಯೋಗದಿಂದಂ ತಪಃ |
ಶ್ರೀಯೊಳ್ ಕೂಡಿದುದೊಂದು ಪೆಂಪತಿಬಳಂಗಗಕ್ಕುಂ ಪೆಱರ್ಗಕ್ಕುಮೇ || ೫೮ ||

ವ || ಅಂತಲ್ಲಿಂ ತಳರ್ದು ವಿಹರಣಕ್ರಮದಿಂ ವಾರಣಾಸೀಪುರದದೂರಾಂತ ರಾವಾಸನೊಳಶೋಕವನಕ್ಕೆವಂದು ಋಷಿಸಮುದಾಯಂ ಸ್ವಾಧ್ಯಾಯೋಪಾಧ್ಯಾಯಪದ – ನಿಷ್ಠಿತಾರ್ಥನುಂ ಸಮಸ್ತಾಗಮಪದಾರ್ಥಾವಧಾರಣ ಗುಣಸಮೇತನುಮಪ್ಪಗ್ನಿಭೂತಿ ಸಂಯತಂಗೆ ಸಮರ್ಪಣಂಗೆಯ್ದು ಸೂರ್ಯಮಿತ್ರ ಭಟ್ಟಾರಕರಾವನಾಂತರಾಳದೊಳ್ ವಿಶಾಲಮಪ್ಪುದೊಂದಶೋಕಾನೋಕಹದ ಮೊದಲೊಳ್‌ ನಿರ್ಜಂತುಕ ಪ್ರದೇಶದೊಳಿರ್ದ ಶಿಳಾಪಟ್ಟಕದ ಮೇಲೆ ಪೂರ್ವಾಭಿಮುಖನಾಗಿ

ಎರಡುಂ ಮಡಂಗಳೆಡೆ ನಾ |
ಲ್ವೆರಳುಂಗುಷ್ಠಂಗಳೆರಡಱೆಡೆಯೊರ್ಗೇಣಾ ||
ಗಿರೆ ತನ್ಮುನೀಂದ್ರನನುಪಮ |
ಸುರರಾಜಾದ್ರೀಂದ್ರದಂದದಿಂದಂ ನಿಂದಂ || ೫೯ ||

ಯೋಗಸ್ಥಿತಿಯಿಂ ಪ್ರತಿಮಾ |
ಯೋಗದೊಳತ್ಯಂತ ಬಾಹ್ಯಸಾಮಗ್ರಿಯೊಳಾ ||
ಯೋಗೀಶ್ವರನಿಂ ಪೊಣ್ಮಿದು |
ದಾಗಳೆ ಶಾಂತರಸಮಾವನಾಂತದೊಳೆತ್ತಂ || ೬೦ ||

ಉರಗಂಗಳ್‌ ಗಿಡಿಗಂಗಳಿರ್ದೆಡೇಗಳೊಳ್ ಬಂದಿರ್ದ್ದುವಾನಂದದಿಂ |
ಹರಿಣಂಗಳ್‌ ನಲಿದಾಡುತಿರ್ದುವು ಕರಂ ವ್ಯಾಘ್ರಂಗಳಂ ಪೊರ್ದಿಕೇ |
ಸರಿಗಳ್‌ ಮತ್ತಗಜೇಂದ್ರದತ್ತ ಜಳಮಂ ಕೊಂಡುಂಡುವಾರಯ್ವೊಡ |
ಚ್ಚರಿಯುಂ ಪಾವನಮಾಯ್ತು ತನ್ಮುನಿತಪೋಮಾಹಾತ್ಮ್ಯದಿಂದಾ ವನಂ || ೬೧ ||

ಚರಿಯಿಪ ಖಗಮೃಗಕುಳಮಾ |
ಪರಮಮುನೀಶ್ವರತಪಃಪ್ರಭಾವದಿನತ್ಯಾ ||
ದರಮಂ ತಾಳ್ದಿ ಪರಸ್ಪರ |
ವಿರೋಧಮಂ ಬಿಸುಟವೇಂ ಮಹಾತ್ಮನೊ ಮುನಿಪಂ || ೬೨ ||

ವ || ಆಗಲಳಾ ಮುಮುಕ್ಷುಪತಿಯುಂ ಮೋಕ್ಷಪದದೊಳ್‌ ಮನಮಿಟ್ಟಧ್ಯಾತ್ಮಧ್ಯಾನಾಧೀನನನಿತ್ಯಾದಿ ದ್ವಾದಶಾನುಪ್ರೇಕ್ಷಗಳೊಳನುಪ್ರೇಕ್ಷೆಗೆಯ್ಯುತ್ತು ಮಾಜ್ಞಾಪಾಯವಿಪಾಕಸಂಸ್ಥಾನವಿಚಯಮೆಂಬ ನಾಲ್ಕುಂ ತೆಱದ ಧರ್ಮಧ್ಯಾನಮಂ ಧ್ಯಾನಿಸುತ್ತುಮತಿವಿಶುದ್ಧ ಲೇಶ್ಯಾತ್ಮಕತನಧಃಪ್ರವೃತ್ತಾ ಪೂರ್ವನಿವೃತ್ತಿಪರಿಣಾಮತ್ರಿತಯದಿನ – ನಂತಾನುಬಂಧಿ ಕ್ರೋಧಮಾನಮಾಯಾಲೋಭ ಕಷಾಯಚತುಷ್ಕಂ ಮಿಥ್ಯಾತ್ವ – ಸಮ್ಯಗ್‌ಮಿಥ್ಯಾತ್ವಸಮ್ಯುಕ್ತ್ವ ಪ್ರಕೃತಿಯೆಂಬ ದರ್ಶನಮೋಹನೀಯತ್ರಯಮುಮಂ ಬೇಱೆವೇಱೆ ಪರಿವಿಡಿಯಿಂ ಪಡಲ್ವಡಿಸಿ ತದೀಯ ಸಪ್ತಪ್ರಕೃತಿಕ್ಷಯದಿಂ ಕ್ಷಾಯಿಕಸಮ್ಯಕ್ತ್ವಮಂ ಪಡೆದು ತದನಂತರಮಂತರ್ಮೂಹೂರ್ತ ಕಾಲಂಪ್ರಮತ್ತಾಪ್ರಮತ್ತಗುಣಸ್ಥಾನ – ಪರಾವರ್ಥನಶಸಹಸ್ರದಿಂ ಕ್ಷಪಕಶ್ರೇಣ್ಯಾರೋಹಣಾ ಭಿಮುಖಂ ತಥಾಪ್ರಯೋಗಸಮಯ ಪ್ರತಿ ಸಮಯಂಗಳನಂತರಗುಣಹಾನಿ ರೂಪನಿರ್ಜರಾವಿಧಿಯಿನಾಯುಃ ಕರ್ಮಮುೞೆಯಲುೞೆದ ಕರ್ಮಂಗಳ ಪ್ರಕೃತಿಸ್ಥಿತ್ಯನು ಭಾಗಂಗಳಂ ಕೞಲ್ಚಿ ಕಳೆಯುತ್ತಂ ಅನಂತಗುಣಶಕ್ತಿಚೈತ್ಯೇಕಪರಿಣಾಮ ಪೂರ್ವಕಕರಣಗುಣಸ್ಥಾನ ನಿಷ್ಕ್ರಾಂತಂ ತತ್ಸ ಮಯದೊಳನಿವೃತ್ತಿಬಾದರಸಾಂ ಪರಾಯಕ್ಷ ಪಕಗುಣಸ್ಥಾನಸ್ಥಿತನಾಗಿ ಬೞೆಮಯಮಂತರ್ಮುಹೂರ್ತಾಂಂತರದೊಳ್‍ ನಿದ್ರಾನಿದ್ರಾದಿ ಷೋಡಶಪ್ರಕೃತಿಗಳುಮನ – ಪ್ರತ್ಯಾಖ್ಯಾನ ಕ್ರೋಧಮಾನಮಾಯಾ ಲೋಭಮೆಂಬೆಂಟುಂ ಕಷಾಯಮುಮಂ ನವನೋಕಷಾಯಮುಮಂ ಸಂಜ್ವಲನ ಕ್ರೋಧಮಾನಮಾಯಾತ್ರಯಮುಮ – ನೆಡೆಯುಡುಗದೆ ಕಿಡಿಸಿ ಸಾಮಾಯಿ ಕಚ್ಛೇದೋಪಸ್ಥಾಪನಾಪರಿಹಾರವಿಶುದ್ಧಿಚಾರಿತ್ರಾನುಗತಾನಿವೃತ್ತಿಬಾದರ ಸಾಂಪರಾಯಗುಣಸ್ಥಾನ ನಿವೃತ್ತನಾಗಿ ಕಿಱೆದು ಬೇಗದಂ ಸೂಕ್ಷ್ಮಸಾಂಪರಾಯಚಾರಿತ್ರ ಸಂಪನ್ನಂ ಸೂಕ್ಷ್ಮಸಾಂಪರಾಯಗುಣಸ್ಥಾನಕ್ಷಪಕಂ ತಥೋಕ್ತಪರಿಣಾಮದಿಂ ಸೂಕ್ಷ್ಮಲೋಭಮಂ ನೆಱೆಯೆ ಪಱೆಪಡಿಸಿ ಯಥಾಖ್ಯಾತಚಾರಿತ್ರಸಂಪನ್ನನಾಗಿ ಪೃಥಕ್ತ್ವವಿತರ್ಕವೀಚಾರಮೆಂಬ ಪ್ರಥಮಶುಕ್ಲಧ್ಯಾನಪರಿಣತಿಯಿಂ ಕ್ಷೀಣಕಷಾಯ ವೀತರಾಗಛದ್ಮಸ್ಥಗುಣಸ್ಥಾನವ್ಯವಸ್ಥಿತನಾಗಿ ಬೞೆಯಮಂತರ್ಮುಹೂರ್ತದಿನೇಕತ್ವ ವಿತರ್ಕವೀಚಾರದ್ವಿತೀಯಶುಕ್ಲಧ್ಯಾನದಿಂ ಬಹುತರಾಸ್ರವಸಂವರಕರ್ಮನಿರ್ಜರನಾಗಿ ತದುಪಾಂತ್ಯ ಚರಮಸಮಯದೊಳ್‌ ಜ್ಞಾ ನಾವರಣಪಂಚಕಮುಮಂ ದರ್ಶನಾವ ರಣಚತುಷ್ಕಮುಮಂತರಾಯಪಂಚಕಮುಮಂ ನಿರ್ಮೂಲಮಪ್ಪಂತೊರ್ಮೊದಲೊಳೆ ಕಿಡಿಸಿದಾಗಳ್‌

ಖ್ಯಾತಿ ಧರಿತ್ರಿಗಾಗೆ ಕುಮತಾರ್ಕ್ಷಗಣಂಗಳಡಂಗಿ ಪಿಂಗೆ ತ |
ದ್ಘಾತಿತಮಸ್ತಮಂ ಬೆದಱೆ ಪೋಗೆ ವಿನೇಯಜನಾಂಬುಜಾಕರ |
ವ್ರಾತಮಲಂಪಿನಿಂದಲರೆ ಕೇವಲಬೋಧದಿನೇಶಬಿಂಬಮು |
ದ್ಯೋತಿಸಿತಾಗಳಾಕ್ಷಣದೊಳಾ ಮುನಿನಾಥಮಹೋದಯಾದ್ರಿಯೊಳ್‌ || ೬೩ ||

ವ || ಆ ಪ್ರಸ್ತಾವದೊಳ್‌

ಪ್ರೀತಿಮಿಗೆ ಶಂಖಪಟಹವಿ |
ನೂತೋದ್ಧುರಸಿಂಹಘಂಟಕಾಸ್ವನಸಂ ||
ಕೇತದೆ ಭಾವನಭೌಮ |
ಜ್ಯೋತಿಷವೈಮಾನಿಕಾಮರರ್ನೆತಂದರ್‌ || ೬೪ ||

ರೋದೋಂತರ್ಭಾಗಮೆಲ್ಲಂ ಮಣಿಮಯರುಚಿಯಿಂ ಚಿತ್ರಸಂಕಾಶಮಾದ |
ತ್ತಾದಂ ದಿಗ್ಭಾಗಮೆಲ್ಲಂ ಪಟಹರವದಿನೆತ್ತೆತ್ತಮಾವಿದ್ಧಮಾದ |
ತ್ತಾದಿವ್ಯಸ್ತ್ರೀನಟೀನರ್ತನದೊಳೆ ಗಗನಾಭೋಗಮೆಲ್ಲಂ ಕರಂ ಚೆ |
ಲ್ವಾದತ್ತೆಂಬಂದದೇಂ ಬಂದುದೊ ಚಟುಲತೆಯಿಂ ದೇವದೇವೀನಿಕಾಯಂ || ೬೫ ||

ಅಂಚಿರಮಲ್ಲದೆ ಬೆಳಗುವ |
ಚಂಚದ್ಘೂಷಣಮಣಿಪ್ರಭಾವಪ್ರಚುರತೆಯಿಂ ||
ಸಂಚಳಿಸಿ ಪೊಳೆವ ಮಿಂಚಿನ |
ಗೊಂಚಲ್‌ ಬರ್ಪಂತೆ ಬಂದರಮರಾಂಗನೆಯರ್ || ೬೬ ||

 ವ || ಇಂತಸುರನಾಗವಿದ್ಯುತ್‌ಸುಪರ್ಣಾಗ್ನಿ ವಾತಸ್ತತೋದಧಿದ್ವೀಪದಿಕ್ಕು ಮರಭೇದದಿಂ ದಶಭೇದಮಪ್ಪ ಭವನವಾಸಿಗರುಂ ಕಿನ್ನರಕಿಂಪುರುಷಮಹೋದರಗ ಗಂಧರ್ವಯಕ್ಷಸಭೂತಪಿಶಾಚಾಭಿಧಾನದಿನಷ್ಟವಿಧರಪ್ಪ ವಾನಬ್ಯಂತರರುಂ ಚಂದ್ರಾದಿತ್ಯರೆಂಬಿರ್ಬರ್ಜೋತಿಷ್ಕರುಂ ಸೌಧರ್ಮೇಶಾನಸನತ್ಕುಮಾರಮಾಹೇಂದ್ರ ಬ್ರಹ್ಮ ಬ್ರಹ್ಮೋತ್ತರಲಾಂತವಕಾಪಿಷ್ಠ ಶುಕ್ರಮಹಾಶುಕ್ರಶತಾರಸಹಸ್ರಾರಾನತಪ್ರಾಣ ತಾರಣಾಚ್ಯುತವಿಕಲ್ಪದಿಂ ದ್ವಾದಶವಿಕಲ್ಪಮಪ್ಪ ಕಲ್ಪವಾಸಿಕಾಮರೇಂದ್ರಮಂತು ಮೂವತ್ತಿರ್ವರುಂ ಚರ್ತುರ್ನಿಕಾಯ ದೇವನಾಯಕರುಮೆಲ್ಲಮೊಂದಾಗಿ ಹಸ್ತ್ಯಶ್ವರಥಪದಾತಿ ವೃಷಭಗಂಧರ್ವನರ್ತಕಪ್ರಭೃತಿ ಸಪ್ತಾನೀಕಸಮೇತರಾಗಿ ಗಗನತಳಮನಲಂಕರಿಸಿ ಬಂದು ದೂರೋತ್ಸಾರಿತವಾಹನರಾಗಿ ಸೂರ್ಯಮಿತ್ರಜಿನೇಂದ್ರನಂ ತ್ರಿಃಪ್ರದಕ್ಷಿಣಂ ಗೆಯ್ದು ಭಕ್ತಿಭರವಿನಮಿತ್ತೋತ್ತಮಾಂಗನಿಬಿಡನಿಬದ್ಧಾಂಜಳಿಗಳಾಗಿ

ಪದ್ದಳಿ || ಜಯಜಯ ಭುವನತ್ರಯಪರಮದೇವ |
ದೇವೇಂದ್ರಾಭ್ಯರ್ಚಿತಚರಣಕಮಲ ||
ಕಮಲವಿರಹಿತನಿರುಪಮದೇಹ |
ದೇಹಾಶ್ರಿತಶುಭಲಕ್ಷಣವಿನೂತ ||
ನೂತನಸಂಗತಕೈವಲ್ಯ ಬೋಧ |
ಬೋಧಪ್ರಕಾಶವಸ್ತುಸ್ವರೂಪ ||
ರೂಪಾತಿಶಯಾನ್ವಿತವಿತತವಿಭವ |
ಭವನಿವಹಪಟಳನಿರ್ಮುಕ್ತಜೀವ ||
ಜೀವಾಜೀವಾದಿಪದಾರ್ಥನಿಳಯ |
ಲಯವರ್ಜಿತಗುಣಮಣಿಗಣವಿಭೂಷ ||
ಭೂಷಾದಿರಹಿತಸೌಂದರ್ಯಸಹಿತ |
ವಿನಿಹಿತಶ್ರುತಪರಮಸಯ ||
ಮಯಜನ್ಮಜರಾಮಯ ಭಯವಿನಾಶ |
ನಾಶೀಕೃತವಿಷಯಕಷಾಯನಿಕರ ||
ಕರಣಾಪಗಮಧ್ಯಾನೋಪಯೋಗ |
ಯೋಗೀಶ್ವರವಂದಿತಪಾದಪೀಠ |
ಪೀಠಪ್ರವಿರಾಜಿತ ಗಗನಮನ |
ಮನಸಿಜಘನದರ್ಪೋದ್ಧುರವಿದೂರ ||
ದೂರಸ್ಥಿತದುಷ್ಕರದೋಷಸರ್ವ |
ಸರ್ವಸರ್ವಜಿನೇಶ್ವರವೀತರಾಗ ||
ರಾಗಾನುಗತಾನತಭವ್ಯಲೋಕ |
ಲೋಕಾಂತ ವ್ಯಾಪ್ತಯಶಃ ಪ್ರಸಿದ್ಧ ||
ಸಿದ್ಧಾತ್ಮೈಶ್ವರ್ಯವಿಶುದ್ಧ ಬುದ್ಧ |
ಬದ್ಧ್ಯಾದಿಗತಪ್ರಾವೀಣ್ಯಪರಮ ||
ರಮಣೀಯಮೋಕ್ಷಲಕ್ಷ್ಮೀನಿವಾಸ |
ವಾಸವಕೃತಕವಿದ್ಯಾತಿಶಯವಿಸರ ||
ಶರಣಾಗೆಮಗುಗ್ರಕೃತಾಂತವಿಜಯ || ೬೭ ||

ಕಿವಿಗಳ್‌ ನಿನ್ನ ಮೃದೂಕ್ತಿಯಂ ಬಯಸಿ ಕೇಳುತ್ತಿರ್ಕೆ ಕಣ್ಗಳ್‌ ಮಹೋ
ತ್ಸವದಿಂ ನಿನ್ನನೆ ನೋಡುತಿರ್ಕೆ ಸಲೆ ಕೈಗಳ್‌ ನಿನ್ನ ಪಾದಾರವಿಂ
ದಮನೋತರ್ಚಿಸುತಿರ್ಕೆ ಸಂದ ಮನವೆಂದುಂ ನಿನ್ನ ದಿವ್ಯಸ್ವರೂ
ಪಮನಾರಾಧಿಸುತಿರ್ಕೆ ವಿಶ್ರುತವಿನೇಯಸ್ವಾರ್ಥಚಿಂತಾಮಣೀ || ೬೮ ||

ವ || ಎಂದನೇಕಸ್ತುತಿಗಳಿಂ ಜಗತ್ರಯಸ್ವಾಮಿಯಂ ಸ್ತುತಿಯಿಸಿ ದಿವ್ಯದ್ರವ್ಯಾರ್ಚ ನೆಗಳಿನರ್ಚಿಸಿದಾಗಳ್‌‍

ವಿಬುಧಪತಿನಿವಹವಂದಿತ
ನಿಬಿಡಪದಾಂಬುರುಹನಂ ಸಮುತ್ತೀರ್ಣಭವ
ಪ್ರಬಲಾರ್ಣವನಂ ಕೈವ
ಲ್ಯಬೋಧಬೋಧಿತವಿನೇಯಜನನಂ ಜಿನನಂ || ೬೯ ||

ಅಭಿವಿನುತಭಕ್ತಿಯಿಂದ
ಗ್ನಿಭೂತಿಮೊದಲಾದ ಮುನಿಪರುಂ ನಾಗಶ್ರೀ
ಪ್ರಭೃತಿ ಸಮಸ್ತಾರ್ಜಿಕೆಯರು
ಮಭೀಕ್ಷಪರಿಣಾಮಶುದ್ಧಿಯಿಂ ವಂದಿಸಿದರ್ || ೭೦ ||

ವ || ತದನಂತರಮಾ ಜಿನೇಶ್ವರನನಂತಚತುಷ್ಟಯೈಶ್ವರ್ಯಸಮೇತನುಂ ಸಮಪ್ರಸಿದ್ಧನಖಕೇಶತ್ವವಿರಾಜಮಾನನುಂ ಚತುರಾಸ್ಯನುಮಚ್ಛಾಯನುಮಕ್ಷಿಸ್ಪಂ ದವ್ಯಪೇತನುಂ ಭುಕ್ತ್ಯುಪಸರ್ಗಾದಿ ದೋಷವಿರಹಿತನುಂ ದೇವಮಾನನವಸಬಾಪರಿವೃತನುಂ ಸುಕುಮಾರಕರತಳಕಳಿತನವಸುಧಾಧವವಳೈಕಾತಪತ್ರಚಾರುಚಾಮರಚತುಷ್ಟಯಭ್ರಾಜಿತನುಂ ದಿವಿಜಪಟುಪಟಹವಿವಿಧವಾದ್ಯ ನಿನದಬಧಿರಿತ ನಿಜಸಭಾಂತರಾಳನುಂ ನಿಳಿಂಪನಿವಹಸ್ತುತಜಯಜಯಧ್ವಜನಿಸ್ತನಿತ ಸಕಳದಿಗಂತರಾಳನುಂ ಕುಸುಮಾ ಸಾರತಾರಕಿತಗಗನತಳವಿಲಸಿತನುಂ ಸಿಂಹಾಸನಾಸೀನನುಂ ಗಗನಗಮನಮಾಗಿ

ಜಸಮಂ ತಾಳ್ದಿರ್ದ ಕರ್ನಾಟಕ ಖಸ ಕರಹಾಟಾಂಗ ಕಾಶ್ಮೀರ ಸೌರಾ
ಷ್ಟ್ರ ಸುರಾಷ್ಟಾವಂತಿ ವಂಗ ದ್ರವಿಡ ಮಗಧ ಪಾಂಚಾಳ ಬಾಹ್ಲೀಕ ನೇಪಾ
ಳ ಸಂವಸ್ತಾಭೀರ ಕಚ್ಛಪ್ರಭೃತಿ ವಿವಿಧ ದೇಶಂಗಳೋಳ್‍ ಕೂಡೆ ವಿಭ್ರಾ
ಜಿಸಿದಂ ಸನ್ಮಾರ್ಗಸಾರಂ ಪರಮಜಿನಮತಾಂಬೋಜಿನೀರಾಜಹಂಸಂ || (?)

ಇದು ಸಮಸ್ತವಿನೇಯಜನವಿನುತ ಶ್ರೀವರ್ಧಮಾನಮುನೀಂದ್ರ
ವಂದ್ಯ ಪರಮಜಿನೇಂದ್ರ ಶ್ರೀಪಾದಪದ್ಮವರಪ್ರಸಾದೋ
ತ್ಪನ್ನ ಸಹಜಕವೀಶ್ವರ ಶ್ರೀಶಾಂತಿನಾಥ ಪ್ರ
ಣೀತಮಪ್ಪ ಶ್ರೀಸುಕುಮಾರಸ್ವಾಮಿ
ಚರಿತ ಪುರಾಣದೊಳ್‌
ಸೂರ್ಯಮಿತ್ರಾಚಾರ್ಯ
ಕೇವಲಜ್ಞಾನಪ್ರಭಾವ
ವರ್ಣನಂ
ಅಷ್ಟಮಾಶ್ವಾಸಂ ||