ಶ್ರೀಮಹಿತನಹಿತಸಕಲಮ
ಹೀಮಹಿತಪಯೋಧರಪ್ರಭಂಜನನನ್ವೀ
ತಾಮರವಿಲಾಸನೆಸೆದನಿ
ಳಾಮಂಡಳದೊಳ್‌ ಸರಸ್ವತೀಮುಖಮುಕ ರಂ || ೦೧ ||

ಆತಂಗೆ ವಿಜಯಲಕ್ಷ್ಮೀ
ಪ್ರೀತಂಗೆ ದಯಾನ್ವಿತಂಗೆ ನಿರುಪಮಗಣನಿ
ಖ್ಯಾತಂಗೆ ವಿಜಿತಶತ್ರು
ವ್ರಾತಂಗೆ ಪುರೋಹಿತಂ ನಿಜ ಸ್ವಾಮಿಹಿತಂ || ೦೨ ||

ಕುಶಲಮತಿ ವಿಶ್ವವಿದ್ಯಾ
ವಿಶದಂ . . . . . . . . . . . . ಮಹೋದಾರಗುಣಂ
ವಿಶದಯಶೋನಿಳಯಂ ಸೋ
ಮಶರ್ಮನೆಂಬೊಂ ದ್ವಿಜನ್ಮವಂಶಲಲಾಮಂ || ೦೩ ||

ಆ ವಸುಧ ಆಮರಾಗ್ರಣಿಗೆ ಕಾಶ್ಯಪಿಯೆಂಬೊಳುದಾತ್ತ ಕೀರ್ತಿಲ
ಕ್ಷ್ಮೀವಿಭವಾಭಿರಾಮೆ ಗುಣಧಾಮೆ ಕುಲಾಂಗನೆ ಹಾವಭಾವಶೋ
ಭಾವಹರೂಪವಿಭ್ರಮವಿಲಾಸ ಸಮನ್ವಿತೆ ಕೋಮಳಾಸಿತೇಂ
ದೀವರಲೋಳನೇತ್ರೆಯೆನೆ ಸಂತೋಸದಿಂ ಸುಖಮಿರ್ದರಿರ್ಪಿನಂ || ೦೪ ||

ಅಭಿನುತಮಂ ಶ್ರೀಮಹತ್ತರ
ವಿಭೂತಿಯಂ ತಳೆದ ಸೋಮಶರ್ಮಂಗಂ ಶ್ರೀ
ನಿಭೆ ಕಾಶ್ಯಪಿಗಂ ಸುತರ
ಗ್ನಿ ಭೂತಿಯುಂ ವಾಯುಭೂತಿಯುಂ ಪೆಸರಿಂದಂ || ೦೫ ||

ವ || ಆ ಬಾಲಕರ್‌ ಬಾಲ್ಯದಿಂತೊಟ್ಟು ಗೋಳಾಂಗೂಳರಂತೆ ಸಹಜಚಾಪಲ್ಯರುಂ ಜಳೂಕಾಮುಖರಂತೆ ದೋಷಗ್ರಾಹಿಗಳುಂ ಸುರಶರಾಸನದಂತೆ ನಿರ್ಗುಣರುಂ ತೀಕ್ಷ್ಣ ಕೌಕ್ಷೇಯದಂತೆ ನಿಸ್ತ್ರಿಂಶಭಾವರುಂ ಶಿಶಿರಕರನಿಕರದಂತೆ ಕುಮುದ ಪ್ರಕಾಶಕರರುಂ ಖರಕರನಂತೆ ಖರದಂಡಪ್ರಿಯರುಂ ಉದಧಿಯಂತೆ ಜಡಸ್ವಭಾವರುಂ ವಿಷೋರಗನಂತೆ ದ್ವಿಜಿಹ್ವರುಂ ಸಾರ್ವಭೌಮೋಪಜೀವಿಗಳಂತೆ ವಿಷಯಾಸಕ್ತರುಮೆನಿಸಿ ಮಾತಾಪಿತೃಗಳ ಮಾತುಗಳಂ ಕೈಕೊಳ್ಳದೆ ಸರ್ವಸ್ವಮಂ ಕೊಂಡು ಕೇಡಾಳಿಗಳಾಗೆ

ತಿಱೆಕಲ್ಲಾಡುವ ಬೊಟ್ಟುವೊರಿಸುವ ಸೆಂಡಂ ಪೊಯ್ವು ಬಾದಿಂಗೆ ಕೈ
ನಿಱೆದೆರ್ದಾಡುವ ಕೋೞೆಲಾವಗೆತಗರ್ಕೋಣಂ ವಿದಿಕೌಂಚಿಂಬಿವಂ (?)
ಸೆಱೆಗೆಯ್ದೆಕ್ಕೆಗೆ ಪೂಣ್ದು ಪೋರಿಸುವ ನಾನಾ ಕ್ರೀಡೆಯಿಂದಿರ್ವರುಂ
ತಱೊಸಂದುದ್ಧತ ಭಾವದುಬ್ಬರದಿನೇನುದ್ವೃತ್ತರಾಗಿರ್ದರೋ || ೬ ||

ವ || ಅಂತುಮಲ್ಲದೆಯುಂ

ನಗರಾಭ್ಯಂತರ ದೇವತಾಭವನದೊಳ್‌ ಚೌವಟ್ಟದೊಳ್‌ ಬೀದಿವೀ
ದಿಗಳೊಳ್‌ ಜೂಜಿನದಿಂಡೆಯೊಳ್‌ ತಗರಕೇಳೀ ವಿದ್ಯೆಯೊಳ್‌ ದುರ್ಜನೋ
ಪಗತೋದ್ದೇಶದೊಳಂ ಪಣ್ಯವರ್ಮವೀಧಿವ್ರಾತದೊಳಂ ಆವಗಂ
ತಗುಣಾತ್ಮರ್‌ ವಿನಯಪ್ರಹೀಣರವಿನೀತರ್‌ ನೀತಿಗೆಟ್ಟಾಡುವರ್‌ || ೭ ||

ತಂದೆ ಕಡಂಗಿ ಕಲ್ಪಿಸುವ ಕಲ್ಪಯನೊಲ್ಲದೆ ತಾಯ್ಮಗುೞ್ದು ನಿ
ರ್ವಂದದಿನೆಯ್ದೆ ಬಗ್ಗಿಸುವ ಬಗ್ಗಣೆಗಳ್ಕದೆ ಮಿತ್ರವರ್ಗಮೇ
ನೆಂದೊಡಮೆಂದುದಂ ನೆಗೞದುದ್ಧತಿಯಿಂದಮವಂದಿರುರ್ಕ್ಕಿ ದ |
ಕ್ಕುಂದಲೆವಾಯ್ವರಂತುಟೆ ಬಹುವ್ಯಸನಾರ್ತರನಾರೊ ಬಾರಿಪರ್‌ || ೮ ||

ಹರಿಣಿ || ಸಿರಿಯ ತವಿಲಿಂ ಮಕ್ಕಳ್‌ಕೈ ಮಿಕ್ಕು ಪೇೞ್ದುದು ಗೆಯ್ಯದಿ
ರ್ಪಿರ ವನವನೀದೇವಾಮ್ನಾಯಕ್ಕೆ ನೊಚ್ಚಿದನಾಗಿ ಮೆ
ಯ್ಗರೆವೆಸಕದಿಂ ನಿಚ್ಚಂ ಬೆಂಬಿರ್ದು ಚಿಂತಿಸಿ ದುಃಖದೊಳ್‌
ಪಿರಿದುಮವರಿಂ ಕಣ್ಗೆಟ್ಟಂ ಭಟ್ಟಂ ನಿಕೃಷ್ಟರ ದೂಸಱೆಂ || ೯ ||

ಕಲ್ಮಿಷಿಕವಾಗಿ ತನ್ನೊ
ಕ್ಕಲ್ಮಕ್ಕಳಿನೆಕ್ಕಸಿರ್ಕಮಾದೊಡೆ ಪಾರ್ವಂ
ಮಲ್ಮಲನೆ ಮಱುಗಿ ಕೂಡೆಯೊ
ಡಲ್ಮಸಿಯಪ್ಪಿನೆಗಮೆಯ್ದೆ ಬೆದವೆದ ಬೆಂದಂ || ೧೦ ||

ವ || ಇಂತಾತ್ಮೀಯಾತ್ಮಜರಿನಾದ ಕುಲಾಪವಾದ ಪರಾಭವದ ದಾವಾನಳದಿಂ ದ(ಂ)ದಹ್ಯಮಾನಮಾನಸನುಮಸಹ್ಯಮಾನ ಚಿಂತಾಂತರಂಗನುಮಾಗಿ ಕೆಲವು ವರಿ ಸಮಿರ್ಪವಸರದೊಳವಸರಂಬಡೆದನೆಂಬಂತೆ

ತೆಱಪುವಡೆದಡಸಿ ರುಜೆ ಮೆ
ಯ್ಮಱುಗುವಿನಮಪುಂಕಿ ಸೋಂಕಿ ನಿಃಕರುಣತೆಯಿಂ
ಕಱುತು ಜವನೆಂಬ ಬಱಸಿಡಿ
ಲೆಱಗಿದುದೆಱಗುವ ವೊಲಹಿಯನಹಿಗರಳಹರಂ || ೧೧ ||

ವ || ಅಂತು ಸೋಮಶರ್ಮಂ ಲೋಕಾಂತರಿತ (ನಾದ)ನೆಂಬುದನತಿಬಲಮ ಹಾರಾಜಂ ಕೇಳ್ದು

ವೇದವಿದಂ ಸಕಳಕಳಾ
ವೇದಿ ಸಮಸ್ತಾಧಿಕಾರ ಪರಿಚಿತನಾಶೀ
ರ್ವಾದಪ್ರಿಯಂ ಪರಿಮೃತ
ನಾದನೆ ವಿಶ್ರುತ ಬಹುಶ್ರುತೋದಾತ್ತಯಶಂ || ೧೨ ||

ಆ ದೊರೆಯ ಹಿತಪುರೋಹಿತ
ನಾದೊರೆಯ ಸುಮಂತ್ರಿ ಕೞೆದನೆಂದೊಡೆ ಪೆಱದೇ
ನೀ ದೊರೆಯ ರಾಜ್ಯಮೆನಗಿದ
ನಾದರಮಶ್ಲಾಘನೀಯಮಫಳಮಸೇವ್ಯಂ || ೧೩ ||

ವ || ಎಂದು ಪಿರಿದುಂ ಕಟ್ಟು ಕಡೆದು ಸೋಮಶರ್ಮನ ಮಕ್ಕಳಪ್ಪಗ್ನಿಭೂತಿಯಂ ವಾಯುಭೂತಿಯುಮಂ ತನ್ನಲ್ಲಿಗೆ ವರಸಿ ತದೀಯ ಹೃದಯಾಂತರ್ಗತ ಶೋಕಾಗ್ನಿ ಜ್ವಾಲಾಕಲಾಪಮನಾತ್ಮೀಯವಚೋ ವಿಸ್ತರಸಾರವಾರಿ ಪ್ರವಾಹದಿಂ ಪ್ರಶಮಿಸಿ ತಾಂಬೂಲಾದಿ ರಾನಸನ್ಮಾನಪುರಸ್ಸರಮವರ ಪೂರ್ವವೃತ್ತಿಯುಮಂ ಕಮ್ಮವಟ್ಟಿಯುಮನಿತ್ತು ಬೀಡಿಂಗೆವೋಗಿಮೆಂಬುದುಂ

ಅವರನುನಯದಿಂ ಮನೆ
ವಂದು ಕಾಶ್ಯಪಿಯ ದುಃಖಮಂ ಕಳೆದು ಮಹೋ
ವಮಪ್ಪಂತಿರೆ ಸಂತೋ
ವಾರ್ತೆಯಂ ಪೇೞ್ದು ಸಂತಮಿರೆ ಕೆಲದಿವಸಂ || ೧೪ ||

ವ || ಒಂದು ದಿನಮಾ ನರೇಂದ್ರಂ ಲೀಲೆಯಿಂದೊಡ್ಡೋಲಗಂಗೊಟ್ಟಿರ್ದಶೇಷ ವಿದ್ವಜ್ಜನ ಭಾಭ್ಯಂತರ ಮೃಗೇಂದ್ರವಿಷ್ಟರಾರೂಢನಾಗಿರ್ಪುದುಂ ಪರನೃಪಾಸ್ಥಾನದಿಂ ದಯಜಿಹ್ವನೆಂಬೊನೊರ್ವ ವಾದಿ ಸಕಲಕಲಾವೇದಿ ಸಂವಾದಾರ್ಥಿಯಾಗಿ ಬಂದು ನಿಜ ವ್ಯಾಡಂಬರಮಂ ಮೆಱೆಯಲೆಂದರಮನೆಯ ಬಾಗಿಲೊಳ್‌ ನಿಂದು ಪತ್ರಾಲಂಬನಂ ಎಡಿರ್ಪುದುಂ ತದ್ವೃತ್ತಾಂತಮೆಲ್ಲಮನರಸನಱೆದು ಬರಮೇೞ್ವುದುಮ-ಪೂರ್ವಮಪ್ಪ ಲ್ಲೇಕಸೂನ್ಯಾಸಸಮಾಸಸಂಸಾರವಚನ ರಚನೆಗಳಿನತಿಬಳನುಮಂ ತತ್ಸಭಾಜನಮುಮಂ ನಂಗೊಳಿಸಿ

ಪದವಿದ್ಯಾಮಾರ್ಗದೊಳ್‌ ವ್ಯಾಕರಣಪರಿಣತಾಳಾಪದೊಳ್‌ ಮಿಕ್ಕಷಟ್ತ
ರ್ಕದೊಳಾರ್ಗಂ ದುರ್ಗಮೆಂಬಂತಿರೆ ವಿಲಸದಲಂಕಾರದಿಂ ತಳ್ತುಪನ್ಯಾ
ಸದ ವಿನ್ಯಾಸಂ ಬಲಂಬೆತ್ತೆಸೆಯೆ ನೃಪಸಭಾಮಧ್ಯದೊಳ್‌ ಪೆರ್ಚಿ ವಾಗ್ಗುಂ
ಫದೊಳಾಗಳ್‌ ಬೆಟ್ಟಿನಲ್ಪಿಟ್ಟೆನಲೆಡೆ ಗುಡದಾಶ್ಚರ್ಯಮಂ ತಾಳ್ದಿ ನಿಂದಂ || ೧೫ ||

ವ || ಅಂತುತ್ತರೋತ್ತರೋಪನ್ಯಾಸನವೃತ್ತಿ ಸಂಪತ್ತಿಯಂ ತಾಳ್ದಿದ ಪರವಾದಿಗೆ ಪ್ರತ್ಯುತ್ತರಂಗುಡುವನ್ನರಾರುಮಿಲ್ಲದಿರ್ಪುದಂ ಕಂಡು ತಲೆಯಂ ತೂಗಿದೂಗಿ ವಿಸ್ಮಯೋದಾತ್ತಚಿತ್ತನಾಗಿ ಸೋಮಶರ್ಮಾಪತ್ಯರಂ ಬರವೇೞೆಮೆಂಬುದುಮಲ್ಲಲ್ಲಿ ಗೆಲ್ಲರುಂ ಪರಿತಂದಗ್ನಿಭೂತಿಯುಮಂ ಪಕ್ಕದೊಳಿರ್ದ ವಾಯುಭೂತಿಯುಮಂ ಕಂಡು ವಿಜಯಜಿಹ್ವವಾದಿಯಿನಾದ ವೃತ್ತಾಂತಮೆಲ್ಲಮಂ ಸವಿಸ್ತರಮಱೆಪಿ

ನಡೆಯಿಂ ತೊಡರ್ದವನೊಳ್ಗೆಲೆ
ನುಡಿಯಿಂ ನೀಮೆಂದು ಬಂದವರ್ನುಡಿವುದುಮಾ
ಜಡರಳ್ಕಿ ಬಳ್ಕಿ ನಡನಡ
ನಡುಗಿ ಸುರಳ್ದುಗಿದು ಸುಗಿದು ಬಂದತಿಭಯದಿಂ || ೧೬ ||

ವ || ತನ್ನೃಪೇಂದ್ರಭವನೋಚಿತೋದ್ದೇಶದೊಳ್‌

ಇಕ್ಕಿದ ಲೋಹಾಸನದೊಳ್‌
ತಕ್ಕರ್‌ ಮಾನ್ಯರ ವಿಶಿಷ್ಟರಂದದಿನೊಳಗಂ
ಪೊಕ್ಕು ಸಭಾಸಂಯೋಗ್ಯರ
ಪಕ್ಕದೆ ಕುಳ್ಳಿರ್ದೊಡತಿಬಲಕ್ಷ್ಮಾಪಾಲಂ || ೧೭ ||

ಪೃಥ್ವಿ || ನಿರೀಕ್ಷಿಸಿ ನಿಕೃಷ್ಟದುಷ್ಟಗಣರಂ ಗತಪ್ರಜ್ಞ(ರ)೦
ನಿರಂತರ ದಿಗಂತರೋಪಗತ ದುರ್ಯಶಃಪ್ರಾಪ್ತರಂ
ದುರಾತ್ಮರನಖಲ್ಯರಂ ಬೞೆಕ ಸೋಮಶರ್ಮಾತ್ಮಜಾ
ತರಂ ಖಳವಿನೀತರಂ ವಿಕೃತಮಾರ್ಗ ವಿಖ್ಯಾತರಂ || ೧೮ ||

ಆಗ್ರಹಿಸಿ ತರ್ಕಶಾಸ್ತ್ರಸ
ಮಗ್ರತೆಯಂ ತೋರ್ಪುದಿಲ್ಲಿ ನೀಮೆನೆ ಕುಳಿಕಾ
ಹಿಗ್ರಸ್ತರಂತೆ ನುಡಿವುದ
ವಗ್ರಹಮೆಂದುರ್ಗುಗೊಂಡರಂತೆ ನಿತಾಂತಂ || ೧೯ ||

ವ || ಮೂಗುವಟ್ಟು ಬಾಯ್ವಿಟ್ಟು ನೀರೊಳ್‌ ಮುೞುಗಿದರಂತುಸಿರ್ಮಿಡಿವರಂತು(ಂ) ಪಾವಡರ್ದರಂತುಂ ಮೆಯ್‌ಬೆಮರುತ್ತುಮಿದಿರೊಳ್‌ ಕುಳ್ಳಿರ್ದ ವಿಜಯ ಜಿಹ್ವವಾದಿಯಂ ಭೋಂಕನೆ ಕಂಡು

ಬೆಕ್ಕಂ ಕಂಡಿಲಿಯಂತಿರು
ಸಿರ್ಕುಸಿದು ಕುನುಂಗಿ ತತ್ಸಭಾಭ್ಯಂತರದೊಳ್‌
ಮಾರ್ಕೊಳ್ಳದೆ ಮಾರ್ನುಡಿಯದೆ
ಬಿಕ್ಕೆನ್ನದೆ ಮಿಡುಕದಿರ್ದರಂತಿರ್ಪಿನೆಗಂ || ೨೦ ||

ವೇದವಿದಂ ಸಕಳಕಳಾ
ವೇದಿ ಸಮಸ್ತಾಧಿಕಾರ ಪರಿಚಿತನಾಶೀ
ರ್ವಾದ ಪ್ರಿಯಂ ಪರಿಮೃತ
ನಾದನೆ ವಿಶ್ರುತ ಬಹುಶ್ರುತೋದಾತ್ತಮತಂ || ೨೧ ||

ಅಯಶೋಮೂರ್ತಿಗಳತಿ ದು
ರ್ನಯವರ್ತಿಗಳನೂನಸಪ್ತವ್ಯಸನಾ
ಶ್ರಯರೆಂದಿರ್ದಪರಿರ್ದ
ಲ್ಲಿಯೆ ನುಡಿದ(ಂ) ಸಭೆಗೆ ಸೋಮಶರ್ಮಾತ್ಮಜರಂ || ೨೨ ||

ಅೞೆಯುತ್ತಂ ಕಲ್ಲೊಳ್‌ ನಾ
ರೞಸುವುದುಂ ಪಾಪಸೂತ್ರದೊಳ್‌ ಧರ್ಮಮನೋ
ರ(ೞೆ) ಸುವುದುಮಿವರೊಳಕ್ಕರ
ರುೞಸುವುದುಂ ಭಾವಿಪಂದು ನಿಷ್ಫಳಮಲ್ತೇ || ೨೩ ||

ಬೀಣೆಯ ಕೊೞಲ ಬೆದಂಡೆಯ
ಗಾಣರ ಬೞೆವಿಡಿದು ಸುೞೆದು ಕುಂ(ದಿಂ)ಕಥಕ
ಶ್ರೇಣೆಯೊಡನೆಳಸಿ ಬಳಸುವ
ನಾಣಿಲಿಗಳನೀ ಬುಧಾಳಿಯೊಳ್‌ ಪುಗಿಸುವುದೆ || ೨೪ ||

ಈ ಜಡರನತರ್ಕಿತಬುಧ
ರಾಜಸಭಾಸದರೊಳಿರಿಸಿ ರಿಪುನೃಪಮಕುಟ
ವ್ರಾಜಿತಪದಾಬ್ಜ ವಿಭುದಸ
ಮಾಜದೊಳಾದತ್ತು ಹಾಸ್ಯರಸಮಪ್ರತಿಮಂ || ೨೫ ||

ವ || ಎಂದಿಂತು ನಾನಾಪ್ರಕಾರದಿಂ ತಿರಸ್ಕರಿಸಿ ನುಡಿವುದಮತಿಬಳನತಿಲಜ್ಜಾಭರದಿಂ ಸಿಗ್ಗಾಗಿ

ಎನಗೆ ಹಿತಂ ಪುರೋಹಿತನನೂಗುಣಾಗ್ರಣಿ ಸೋಮಶರ್ಮನಾ
ತನ ತನುಜಾತರಪ್ರಮಿತಶಾಶ್ತ್ರವಿಶಾರಸರಾದೊರಕ್ಕುಮೆಂ
ಬಿನಿತನೆ ಮೆಚ್ಚಿ ಬಿಚ್ಚತಿಕೆಯಿಂ ಪರಿಭಾವಿಸದೀ ದುರಾತ್ಮದು
ರ್ಜನರ್ಗೆ ನಿಕೃಷ್ಟದುಷ್ಟರಿವರ್ಗಾನೊಸೆದಿತ್ತೆನುದಾತ್ತ ವೃತ್ತಿಯಂ || ೨೬ ||

ಗುಪ್ತಾಳೋಚನಾಕಾರು
ಕಾಪರ್‌ ವಿದ್ಯಾಬ್ಢಿಪಾರಗರ್‌ ಸಕಲಗುಣ
ಪ್ತಾಪ್ತರಿವರೆಂದು ಬಗೆದೆಂ
ಸಪ್ತವ್ಯಸನಾಭೀತರಪ್ಪುದನೞೆಯೆಂ || ೨೭ ||

ನೆರದೀ ಸಭೆಯೊಳ್‌ ಲಜ್ಜಾ
ಭರದಿಂ ತಲೆಯೆಱಕಮಾದುದಿಂದೆನಗೀ ದು
ಶ್ಚರಿತರನಿವಂದಿರಂ ಪರಿ
ಹರಿಸಿಮಯೋಗ್ಯರನಖಲ್ಯರಂ ನಿರ್ಗುಣರಂ || ೨೮ ||

ಪೞೆಯರಿವರೆನ್ನ ವಂಶಾ
ವೞೆಯಿಂದಂ ಬಂದರೆಂದು ಮನ್ನಿಸದೆ ಮಹೀ
ತಳನಾಥಂ ಮುನಿಸಿಂದಂ
ಕಳೆದಂ ನಿರುಗಾರನಾರುಮೇಂ ಮಂನೀಪ(ರೆ) || ೨೯ ||

ವ || ಅಂತವರನರಮನೆಯಿಂ ಪೊಱಮಡಿಸಿ ಕಳೆದು ಪರವಾದಿಯಂ ದಾನ ಸನ್ಮಾನಾದಿಗಳಿಂ ಸಂತೋಷಂಬಡಿಸಿ ಸೋಮರ್ಶನ ದಾಯಿಗಪ್ಪ ಸೋವಿಲನೆಂ ಬೊಂಗೆ ತನ್ಮಂತ್ರಿಪದವಿಯಮ್ ದಯಂಗೆಯ್ವುದುಮಾಪೆಪಂಚಮನೆಲ್ಲಮನಗ್ನಿ ಭೂತಿಯುಂ ವಾಯುಭೂತಿಯುಮಱೆದು ಚಿಂತಾಕ್ರಾಂತರಾಗಿ ತಮ ಮನೆಗೆವಂದು

ಜನನಿಯ ಮೊಗವಂ ನೋಡ
ಲ್ಕೆ ನಣ್ಚಿ ಸಿಗ್ಗಾಗಿ ಬಾಗಿ ತಲೆಯಂ ಚಿಂತಾ
ಭ್ಧಿನಿಮಗ್ನರಾಗಿ ಕಣ್ಣೀ
ರನಿಕ್ಕುತಿರೆ ನೋಡಿ ಕಂಡು ಕ್ಶಾಶ್ಯಪಿ ಭರದಿಂ || ೩೦ ||

ಇದು ದಲ್‌ ವಿಸ್ಮಯಮಾಗಿ ತೋಱೆದಪುದೆನಿಂತೀ ಗಳೆನ್ನಿಂದಮಾ
ದುದೊ ಮೇಣಲ್ಲದೊಡಾಳ್ವನಿಂ ತೊಡಗೊತೋ ಮೇಣಾಪ್ತರಿಂದಿಂತು ಪು
ಟ್ಟಿದುದೋ ಮೇಣ್ಪರಿವಾರದಿಂ ಜನಿಯಿಸಿತ್ತೋ ಪೇೞೆಮೆಂದೆಂದು ಗ
ದ್ಗದಕಠಸ್ಥಿತೆಯಾಗಿ ತನ್ನ ಮನದೊಳ್‌ ವಿಭ್ರಾಂತಿಯಂ ತಾಳ್ದಿದಳ್‌‍ || ೩೧ ||

ವ || ಅಂತು ಪಿರಿದುಮುಬ್ಬೆಗದಿಂ ನಿಮಗಿನಿವಿರಿದು ಕೌತೂಹಳಮಾರಿಂದ ಮಾಯ್ತೆಂದು ಬೆಸಗೊಳ್ವುದುಮಗ್ನಿಭೂತಿ ವಿಜಯಜಿಹ್ವವಾದಿಯಿನಾದ ವೃತ್ತಕುಮುಮಂ ಸಬಾಸದರ್ತಮ್ಮನವವರ್ಕಿಸಿ ಕ್ಡೆನುಡಿದುದುಮನತಿಬಳನೇಱೊದು ಕಳೆದುಮಂ ಸೋವಿಲಂಗೆ ಮಂತ್ರಿಮಹತ್ತರವೃತ್ತಿ ಸಾರ್ದು ದುಮಂ ಸವಿಸ್ತರಮಱೆಪುವುದುಂ

ಮನದೊಳ್‌ ಪೆರ್ಚಿದ ಶೋಕಮುಣ್ಮೆ ತನುವಿಂ ಕೈಣ್ಮೆದುಃಖಂ ವಿಲೋ
ಚನದಿಂದಂ ಪೊಱಪೊಣ್ಮೆ ಬಾಷ್ಪ ಜಲಮಂದುದ್ವೇಗದಿಂದೀಗಳಿಂ
ತಿನಿಯೊಂದಾದ ವಿಷಾದಮುಂ ಕುದಿ(ಪ) ಮುಂಮಾತೇಂ ಪೊದಳ್ದೆನ್ನ ಮು
ನ್ನಿನ ಕರ್ಮೋದಯಮೆಂದು ಬಾಯೞೆದು ಚಿಂತಾಕ್ರಾಂತಿಯಾಗಿರ್ಪುದುಂ || ೩೨ ||

ವ || ಆಗಳವರ್‌ ತಾಯ ಮೊಗಮನಾವ ಮೊಗದೊಳ್‌ ನೋಡುವಮೆಂದು ನಾಣ್ಚಿಚಿಂತಿಸುವ ಚಿಂತೆಯೊಳತಿಬಲಾನೃಪಾಸ್ಥಾಯಿಕೆಯೊಳ್‌ ಪುಲ್ಲಿಂ ನೊಚ್ಚಿದರಾದೆವೆಂಬೇವದೊಳಂ ತಮ್ಮಱೆಗೆಯ್ದು ತಮ್ಮ ಕಮ್ಮವಟ್ಟೆಯಂ ತಮ್ಮದಾಯಿಗಂಗೆ ಕೊಟ್ಟರೆಂಬ ಮಚ್ಚರದೊಳಂ ಸಕಳ ಕಲಾಕುಶಲಂಗೆವುಟ್ಟಿಯುಮನಕ್ಷರ ಜಠರರೇವಂದೆವೆಂಬ ಕಷ್ಟತೆಯೊಳಂ ನಿರ್ಮಳಮಪ್ಪ ನಿಚಾನ್ವಯಕ್ಕೆ ಕಳಾಂಕಪಂಕಾವ್ಯ ನೇಕಾಪವಾದವಾದುದೆಂಬ ಮಱುಕದೊಳು ಮಲ್ಮಲಂ ಮಱುಗಿ ಕಾಸ್ಯಪಿಯ ಮೊಗಮಂ ನೋಡಿ

ಅಂಘಾಬಳದಿಂ ದುರ್ವ್ಯಸ
ನಂ ಘಟಿಯಿಸೆ ಸುಪೂಜಿತಾರ್ಥ ಶಾಸ್ತ್ರಗಳನು
ಲ್ಲಂಘಿಸಿ ಕಠೋರವಾಣಿಗ
ಳಿಂ ಘಾತಿಸುತಿರ್ದೆವಿನ್ನೆವರೆಗಂ ನಿಮ್ಮಂ || ೩೩ ||

ನಿಮಗೆ ಸುತರಾಗಿ ವೇದಾ
ಗಮಂಗಳಂ ಕಲ್ತು ರಾಜಸಭೆಯೊಳ್‌ ವಿದ್ಯೋ
ತ್ತಮರೆನಿಸಿ ಸುಖಮಿರಲ್ಪಡೆ
ನೆಮೆಂಬುದಿದು ಪೂರ್ವಜನ್ಮಕ್ಷೃತಕರ್ಮಫಳಂ || ೩೪ ||

ಅವಿವೇಕಂ ದೊರೆಕೊಂಡು ಪೋದುವಿನುತಂ ಕಾಲಂಗಳಂತುಂ ಪರಾ
ಭವಭಾರಂ ಪಿರಿದಂತಱೆಂ ಬಹುಕಳಾಳಾಪಂಗಳಂ ಕಲ್ತು ಬ
ರ್ಪೆವಮೋಘಂ ಬಿಡಿಮೆಂಬುದುಂ ಗಳಿತಬಾಷ್ಪಾಂಭಃಕಣಂ ಬೇಗಮು
ಣ್ಮುವಿನಂ ಪೊಣ್ಮುವಿನಂ ವಿಷಾದದೊದವಿಂದೆಂದಳ್‌‍ ನಿಜಾಪತ್ಯರಂ || ೩೫ ||

ಪಿತೃವಿರ್ದೋದಿಸುವಂದು ಶುದ್ಧಗೆಯೊಳಾ ಸಿದ್ಧಂ ನಮೋಯೆಂಬ ವಿ
ಶ್ರುತವರ್ಣಂಗಳನಾದೊಡಂ ಬರೆದಿರಿಲ್ಲೋಂ ಭೂರ್ಭುವಸ್ವಾದಿಪ
ದ್ಧತಿಯುಂ ಕಲ್ತಿರುಮಿಲ್ಲಮಾವಿಚಿತಿಯೊಳ್‌ ನೀಮಗ್ನಿಮೀಳೇಪೊರೋ
ಹಿತಮೆಂದೋದಿದಿರಿಲ್ಲ ಶಿಕ್ಷೆಯೆಡೆಯೊಳ್‌ ಕೈಕೊಂಡಿರಿಲ್ಲೊಂದುಮಂ || ೩೬ ||

ಆ ದೊರೆಯ ತಂದೆ ತಾನಿ
ರ್ದೋದಿಸೆ ಕೈಕೊಳ್ಳದವರುಮಿನ್ನೋದುವಿರೇ
ಬಾದೇನೋ ನೀಮುಮಿನ್ನಿ
ನ್ನೋದಿದಿರೋದಿದಿರಿಮಿನ್ನು ಸುಮ್ಮನಿರೆಂದಳ್‌ || ೩೭ ||

ವ || ಎಂದು ನೊಂದು ನುಡಿದ ತಾಯ ನುಡಿಯೆ ತಮ್ಮಪರಾಭವಮನಱೆಯೆ ತೆಱೆಯೆ ನೆಱನೆತ್ತಿ ಮೂದಲಿಸಿದಂತಾಗಿ ಪಿರಿದಾದುಮ್ಮಳಿಕೆಯಿಂದಲ್ಲಿವೊಕ್ಕು ವಿದ್ಯಾಭ್ಯಾಸಂಗೆಯ್ದು ಬಂದಲ್ಲದೆ ನಿಮ್ಮ ಮೊಗಮಂ ನೋಡೆವೆಂದು ಪೊಡೆವಟ್ಟು ಪೋಪ ಮಾಣಿಗಳನಿಸಾನುಂಮಾಣಿಮೆಂದು ಕಾಸ್ಯಪಿಯಿಂತೆಂದಳ್‌ ನಿಮಗಿನಿತೊಂದು ನಿರ್ವೆಗಮುಂ ವಿದ್ಯೋದ್ಯೋಗಮಪ್ಪುದೆಂಬುದೆಲ್ಲಮೆನ್ನ ಪುಣ್ಯಮಾದೊಡಂ ಪರದೇಶಕ್ಕೆ ದೇಸಿಗಮಾರ್ಗದಿಂ ಪೋಗಿ ಸೇದೆಗಿಡಲ್ವೇಡ ಮಗಧ ದೇಶದ ರಾಜಗೃಹಾಧಿಸ್ಥಾನಾಧಿಪತಿಯಪ್ಪ ಸುಬಳಮಹಾರಾಜನ ರಾಜ್ಯಲಕ್ಷ್ಮೀಸಮುದ್ಧರಕರಣ ಪರಿಣತಾಂತಃಕರಣನೆನ್ನಿಸಿ

ಸಕಲವ್ಯಾಕರಣಾರ್ಥನಿಶ್ಚಿತಮನಂ ಸಾಹಿತ್ಯವಿದ್ಯಾಭ್ದಿ ವೈ
ದಿಕ ಸಂವೇದಿ ಮಹಾನುಭಾವನಖಿಳೋರ್ವಿಸ್ತುತ್ಯನಾತ್ಯತ್ಮಪ್ರಸಿ
ದ್ಧ ಕವೀಂದ್ರಾಗ್ರಣಿ ಚಾರು ಭಾಸುರಯಶಃ ಶ್ರೀ ಭಾಸಿ ಭೂಬೂತಭುಂ
ಭುಕವಾಗ್ಮಿಪ್ರವರಂ ವರೇಣ್ಯನವನೀದೇವಾನ್ವಯಕ್ಕುತ್ತಮಂ || ೩೮ ||

ದ್ವಿಜವಂಶಾಂಬರತಿಗ್ಮರೋಚಿ ಸುಬಳಕ್ಷ್ಮಾಪಾಲಣಿಗ್ರಹ
ವ್ರಜಸಂರಕ್ಷಣದಕ್ಷನಾಸ್ರೀತಜನಾಧಾರಂ ಸಮಸ್ತಾಧಿಕಾ
ರಿ ಜಿತಾತ್ಮಂ ಸುಚರಿತ್ರನಪ್ರತಿಮಶುಂಭದ್ಭಾಗಧೇಯಂ ಮದ
ಗ್ರಜನುರ್ಮಿಲಲನಾಲಲಾಟ ತಿಲಕಂ ವಿದ್ವಜ್ಜನಾಳಂಕೃತಂ || ೩೯ ||

ಅಮಿತಗುಣಾಧಾರಂ ನಿ
ಮ್ಮ ಮಾವನುದ್ದಾಮಧಾಮನನುಪಮಮಹಿಮೋ
ತ್ತಮನರಿಬಳಜೈತ್ರಂ ಸೂ
ರ್ಯಮಿತ್ರನಾತ್ಮೀಯಗೋತ್ರಪಾತ್ರ ಪವಿತ್ರಂ || ೪೦ ||

ಸುಖಸಂಕಥಾವಿನೋದದಿ
ನಖಿಳಸುಖೋಪಬೋಗಮಂ ಭೋಗಿಸುತಂ
ನಿಖಿಳಬಳ ಸುಬಳನೃಪತಿಗೆ
ನಖಮಾಂಶಪ್ತ್ರಿತಿಯಿಂದೊಡಂಬಡೆ ನೆಗೞ್ದಂ || ೪೧ ||

ಅಱುವತ್ತು ನಾಲ್ಕು ಕಳೆಗಳೊ
ಳಱೆಯದುದಿಲ್ಲವರನೆಯ್ದು ದಿಙ್ಮೂಢತೆಯಂ
ಮಱೆದು ಸಕಲಾಗಮಂಗಳ
ನಱೆದೊಳ್ಪಂ ಮೆಱೆದುಬಂದು ನಿಶ್ಚಿಂತಮಿರಿಂ || ೪೨ ||

ಅವಧರಿಸಿಂ ನಿಮ್ಮಯ್ಯಂ
ಗವರಜೆತತ್ಸೂರ್ಯ ಮಿತ್ರಸಹಧರ್ಮಿಣಿ ಚಾ
ರುವಿಲೋಲೆಯಾಕೆ ಪೆಸರೊಳ್‌
ಸುವೇದಿ ನಿಮ್ಮತ್ತೆ ವಿನಯದಿಂ ಬೆಸಕೆಯ್ಯಿಂ || ೪೩ ||

ವ || ಎಂದು ತನಗೆ ಪರಮ ವಿಶ್ವಾಸಮುಳ್ಳ ಲೇಖಕನಿಂ ಸೂರ್ಯಮಿತ್ರಂಗೆ ವಿನಯಪತ್ರಮಂ ಬರೆಯಿಸಿ ತದಗ್ನಿಭೂತಿಯ ಕೈಯೊಳ್‌ ಕೊಟ್ಟು ತದನಂತರ ಮಾತ್ಮೀಯಾತ್ಮಜರ ಮೊಗಮಂ ನೋಡಿ

ಮಱೊಯದೆ ಸೂರ್ಯಮಿತ್ರನ ಪದಾಂಬುದ ಭಕ್ತಿಯನೆಂದುಮೊಜೆಯಂ
ಮಱೊಯದೆ ಬುದ್ಧಿಯಂ ಮಱೊಯದಾಚರಣೋಕ್ತಿಯನುಕ್ತಮಾರ್ಗಮಂ
ಮಱೊಯದೆ ದಾಯಿಗಂಗೆ ವರಮಂತ್ರಿಪದಂ ನೃಪನೀಯೆ ಸಾರ್ದುದಂ
ಮಱೊಯದೆ ಸಂತತಂ ಬಸನಮಂ ಮಱೊದಿರ್ಪುದು ಬೇಡಿಕೊಂಡಪೆಂ || ೪೪ ||

ವ || ಎಂದು ನುಡಿದ ಜನನಿಯ ನುಡಿಯನವಧಾರಿಸಿ |

ಬೆಸಸಿದ ನಿಮ್ಮವಚೋವ
ಸ್ತುಸಾರಮಂ ಕೇಳ್ದು ಮನದೆಗೊಂದೆವಮೋಘಂ
ಬೆಸಕೆಯ್ವೆಮೆಂಬುದುಂ ಕಾ
ರ್ಯಸಿದ್ಧಿಯಕ್ಕೆಂದು ಪರಸಿ ನಲ್ವರಕೆಗಳಿಂ || ೪೫ ||

ವ || ಅಂತವರಿರ್ವರುಂ ನಾನಾ ನದೀನದಾಂತರಾಳ ಸಂಪಜ್ಜನಪದಂಗಳಂ ಕಳೆದು ಕತಿಪಯಪ್ರಯಾಣಂಗಳಿಂ

ಖಚರಪ್ಲುತ || ಸಲ್ಲತಾಭವನಂಗಳೊಳಂ ಜಲಂಗಳೊಳಂ ಸಹಕಾರ ಕಂ
ಕೆಲ್ಲಿ ಪಲ್ಲವರಾಜಿತ ಶೈತ್ಯಸ್ಥಾನದೊಳಂ ಶ್ರಮಮಾಱೊ ಬಂ
ದಲ್ಲಿಗಲ್ಲಿಗೆ ವಿಶ್ರಮಿಸುತ್ತುಂ ಪೋಗಿ ಧರಾಮರರೆಯ್ದಿದರ್‌
ಮಲ್ಲಿಕಾಕುಸುಮೋದ್ಗತಸೌರಭೋದ್ಗಮ ರಾಜಗೃಹಾಖ್ಯಮಂ || ೪೬ ||

ತ್ರಿವದಿ || ಪುರಬಹಿರ್ಭಾಗ ವಿಸ್ತರಿತ ನಂದನದೊಳಂ
ಕುರಿತ ಪಲ್ಲವಿತ ಮುಕುಳಿತ ಕುಸುಮಿತಾ
ಪರಿಮಿತ ಫಲಿತ ತರುಗಳೆ || ೪೭ ||

ವ || ಇಂತಶಿಯವಿಲಾಸಕ್ಕೆ ನಿವಾಸಮುಂ ವಿಭೂತಿಗೆ ನಿಕೇತನಮುಂ ಪೆರ್ಮೆಗೆ ತವರ್ಮನೆಯುಂ ಧರ್ಮಕ್ಕಾರ್ಮಮುಮೆನಿಸಿದ ರಾಜಗೃಹ ಪುರವರ ಶ್ರೀಯನ (ೞ್ತೆ) ವಟ್ಟು ನೋಡಿ ಮೆಚ್ಚುತಂ ಬಂದು ಸೂರ್ಯಮಿತ್ರ ಮಹತ್ತರೋ ದಾತ್ತಸೌಂದರ್ಯಭವನದ್ವಾರಮಂ ದ್ವಾರಪಾಲಕರ್‌ ಪುಗಿಸೆ ಪೊಕ್ಕು ವಿದ್ವಜ್ಜನ ಸಭಾಭಿರಾಮನಪ್ಪ ತಮ್ಮ ಮಾವನಂ ಕಂಡು ಸರ್ವಾಂಗಾಲಿಂಗೊತೋರ್ವಿತಳರಾಗಿ

ಆಭಿವಾದಮೆಂದು ನಿಂದ
ಗ್ನಿಬೂತಿಯುಂ ವಾಯುಭೂತಿಯಂ ವಿಪ್ರವರಂ
ಗಭಿಮುಖದೊಳಿರ್ಪುದುಂ ಕಂ
ಡಭಿನವರಿವರೆಂದು ಸೂರ್ಯಮಿತ್ರಂ ತನ್ನೊಳ್‌ || ೪೮ ||

ವ || ವಿಸ್ಮಯಂಬಟ್ಟು ನೀರ್ಮಾರ್ಗಾವದೆಶಾದವರಿರಾರಮಕ್ಕಳಿರೆತ್ತವೋದಪ್ಪಿರೇನಿಮಿತ್ತದಿನಿಲ್ಲಿಗೆ ವಂದಿರೆಂಬುದುಂ ವತ್ಸವಿಷಯದ ಕೌಶಂಬೀನಗರಮ ನಾಳ್ವತಿಬಳಮಹಾರಾಜನ ಪುರೋಹಿತ ಪ್ರಧಾನಂ ಸೋಮಶರ್ಮನೆಂಬೊಂ ವಿಪ್ರಕುಲೋತ್ತಮನ ಪತ್ನಿ ಕಾಶ್ಯಪಿಯೆಂಬೋಳವರ ಮಕ್ಕಳಗ್ನಿಭೂತಿಯುಂ ವಾಯು ಬೂತಿಯುಮೆಂಬೆವವೇಷ ವಿದ್ಯಾಭ್ಯಾಸ ನಿಮ್ಮಿತ್ತದಿಂ ಭವದಂಘ್ರಿಸ್ಮರಣಪರಿಣತಾಂತಃ ಕರಣರಾಗಿ ಬಂದೆವೆಂದಾತ್ಮೀಯಪ್ರಪಂಚಮನಱೆಪಿ ನಿಜಭಗಿನೀದತ್ತ ವಿಜ್ಞಾಪನ ಪತ್ರಮನವಧಾರಿಸಿಮೆಂದು ಪಾದಪೀಠೋದೊಳಿಕ್ಕುವುದುಂ

ಸುತ್ತಾಱುಂ ಸುತ್ತಿಲ್ಲದೆ
ಸುತ್ತೞೆದಿರ್ದೊಂದು ವಿನಯವತ್ತಳೆಯಂ ವಿ
ಪ್ರೋತ್ತಮನದನಂತರ್ಗತ
ಚಿತ್ತದೊಳಿತೆಂದು ತನ್ನೊಳನುವಾಚಿಸಿದಂ || ೪೯ ||

ಸ್ವಸ್ತಿ ಸಮಸ್ತ ಧರಾಮರ
ವಿಸ್ತಾರಕನಮಳಗುಣಗಣಾಂಬುಧಿ ವಿಬುಧ
ಪ್ರಸ್ತುತಪರಂಗೆ ಕಾಶ್ಯಪಿ
ವಿಸ್ತರಮೆನಿಸಿರ್ದ (ವಿ) ನಯದಿಂ ಬಿನ್ನವಿಕುಂ || ೫೦ ||