ಶ್ರೀಗಧಿಪತಿ ವಿಸ್ಮಯಮನ |
ನಾಗಿ ಬೆರಲ್ಮಿಡಿದು ವಿಪ್ರತನಯರ ವಿದ್ಯೋ ||
ಧ್ಯೋಗಕ್ಕೆ ಮೆಚ್ಚಿ ತಲೆಯಂ |
ತೂಗಿದನಾಗಳ್‌ ಸರಸ್ವತೀ ಮುಖಮುಕುರಂ || ೦೧ ||

ವ || ತದನಂತರಮವರನುಚಿತದರದಿನಾದರಸಿ ನಿಜಾನ್ವಯಾಗತ ಪುರೋಹಿತಾಸ್ಪದಮಂತ್ರಿಪದಮಂ ದಯಂಗೆಯ್ದು

ತುರಗವ್ರಾತಂಗಳಂ ವೇಸರಿಗಳನುಚಿತಾನರ್ಘ್ಯರತ್ನಂಗಳಾಂ ಕುಂ |
ಜರ ಸಂಗತಂಗಳಂ ತಾನತಿಶಯಪರಮಾನಂದ ವಸ್ತ್ರಂಗಳಂ ಭಾ ||
ಸುರನಾನಾ ರಾಜ್ಯಜಿಹ್ನಂಗಳನನುಪಮಮಾದಗ್ರಹಾರಂಗಳಂ ನೀ |
ಡಿರದಾಗಳ್‌ ಕೊಟ್ಟನುತ್ಸಾಹ ದಿನತಿಬಳಭೂ ರಾಜನಾದಿತ್ಯತೇಜಂ || ೦೨ ||

ವ || ಅಗಳವರ್‌ ಮಹಾಪ್ರಸಾದಮೆಂದು ಕೈಕೊಂಡು ಬೀಡಿಂಗೆ ವಂದು ಸಕಲಶಾಸ್ತ್ರಂಗಳಂ ಪಲಗ್ರಂ ವಕ್ಖಾಣಿಸುತ್ತಂ ಭುವನೊದಳಂ ರಾಜಭವದೊಳು ಮಾನ್ಯರುಂ ಧನ್ಯರುಮಾಗಿ ಸಕಲಸಂಸಾರ ಸುಖಸರ್ವಸ್ವಮಂ ವೃಥೆಯಾಗದಂತನು ಭವಿಸುತ್ತುಮಿರ್ದರಿತ್ತಲಾ ಮಗಧದೇಶದ ರಾಜಗೃಹಾಧಿರಾಜಂ ಸುಬಳ ಮಹಾರಾಜ ನೊಂದು ದಿವಸಂ ಸೂರ್ಯಮಿತ್ರನುಂ ನಯಗುಪ್ತನುಂ ಇಷ್ಟಶರ್ಮನುಂ ಜಯಂ ತನುಮೆಂಬಾತ್ಮೀಯ ಪರಮವಿಶ್ವಾಸ ಭೂಮಿಗಳಪ್ಪನಾಲ್ವರ್‌ ಮಂತ್ರಿಗಳ್ವೆರಸು ಮಂತ್ರ ಮೇಳಾಪಕದೊಳಿರ್ದು ತತ್ಕಾರ್ಯಳೋಚನ ತಾತ್ಪರ್ಯಪರ್ಯವಸಾನದೊಳ್‌ ಮಜ್ಜನಂಬುಗುತ್ತುಂ

ಬೆಲೆಗೆಯ್ದೆವಾರವೀ ಜಗ |
ದೊಳುಳ್ಳ ವಸ್ತುಗಳದರ್ಕ್ಕೆ ನಿಶ್ಚಯಮೆಂಬು ||
ಜ್ವಲವಿಲಸದರುಣತ್ನಾಂ
ಗುಲೀಯಮಂ ಕಳೆದು ತನ್ನ ಬೆರಲಿಂದರಸಂ || ೦೩ ||

ವ || ಕೆಲದೊಳಿರ್ದ ಸೂರ್ಯಮಿತ್ರ ಮಂತ್ರಿಯ ಕಯ್ಯಲ್ಕುಡುವುದುಮಾತನುಮದಂ ತನ್ನ ಬೆರಲೊಳಿಟ್ಟುಕೊಂಡು ಮಱುದಿವಸಂ ಪ್ರಭಾತಸಮಯದೊಳ್‌ ಪುರಬಹಿರುಪವನೋದ್ದೇಶೋಚಿತಾಂಭೋರುಹವನಕ್ಕೆ ವಂದು ಸಂಧ್ಯವಂದನ ಕ್ರಿಯಾನಿಮಿತ್ತಸ್ನಾನಾನಂತರಂ

ಅರ್ಘ್ಯಮನೆತ್ತಿ ದಿನೇಶಂ |
ಗರ್ಘೀಸಿ ಪೊಡೆವಟ್ಟು ಸೂಸಿ ನೀರಂ ಮಂತ್ರಾಂ ||
ತರ್ಘಟನೆಯಿಂದೆ ಬಿರ್ದ್ದುದ |
ನರ್ಘ್ಯಾತಿಶಯಾಂಗುಲೀಯಮಂಗುಲಿಯಿಂದಂ || ೦೪ ||

ವ || ಆಗಳ್ ಸೂರ್ಯಮಿತ್ರಂ ನಿರ್ವರ್ತಿತಸಂಧ್ಯಾನಿಯನ ಕ್ರಿಯಾಯೋಗ ನಾಗಿ ರತ್ನಾಂಗುಲೀಯಮಂಗುಳಿಯಿಂದುರ್ಚಿ ಬಿರ್ದುದನಱೆಯದೆ ಗಂಧಾಕ್ಷತ ಕುಸುಮತಾಂಬೂಲಸ್ರಗ್ವಿಳಾಸಾಲಂಕೃತನಾಗಿ

ಇಂ ಮನೆಗೆವೋಪೆನೆಂದಾ |
ತಂ ಮಹಿಮೋಪೇತನಾಗಿ ಮೆಲ್ಲನೆ ಬರುತಂ ||
ಕೆಮ್ಮನೆ ಬೆರಲಂ ನೋಡಿಯೆ |
ಭಮ್ಮೆಂದೆರ್ದೆಱೆದು ಮಱುಗಿ ಬಾಯಂ ಬಿಟ್ಟಂ || ೦೫ ||

ವ || ಅಂತು ತನ್ನ ಬೆರಲೊಳುಂಗುರಮಂ ಕಾಣದೆ ತನ್ನ ಪರಿಜನಮುಂ ತಾನುಮಾಕುಲವ್ಯಾಕುಲಚಿತ್ತರಾಗಿ ಪೋದ ಬಂದ ನಿಂದೆಡೆಗಳೊಳೆಲ್ಲಮಱುಸಿ ಕಾಣದೆ ಚಿಂತ್ರಾಕ್ರಾಂತರಾಗಿ ಸುಬಳಮಹಾರಾಜನೆನ್ನಂ ಪರಮ ವಿಶ್ವಾಸ ಭೂಮಿ ತನ್ನ ಬೆರಲೊಳಿರ್ದನರ್ಘ್ಯಮಪ್ಪ ರತ್ನ ಮುದ್ರಿಕೆಯಂ ಪಿಡಿದಿರಿಮೆಂದು ಕೊಟ್ಟ ನಿನ್ನೆನ್ನ ನಿರ್ವಾಹಮುಮರಸನದೆಸೆಯೊಳಾದ ಮೋಹಮುಮೞೆದುದೆಂದು ಮಲಮಲ ಮಱುಗುತ್ತುಂ ಮನೆಗೆವಂದು ತನ್ನಱೆವ ನಿಮ್ಮಿತ್ತಂಗಳೊಳ್‌ ನೋಡಿಮಂ ನಿಟ್ಟಿಸಲಾಱದೆ

ಸುಬಳಂ ನಚ್ಚುವನಾನುಮೊಂದೆರಡು ದೃಷ್ಟಂಗಂಡೆನಸ್ಮನ್ಮನ |
ಶ್ಯಬಳಂ ತೀರ್ವಡೆ ತೀರ್ವಮಾ ಪರಮಹಂಸಸ್ವಾಮಿಯಿಂದೆಂದು ವಿ |
ಕ್ಲಬದಿಂ ತಾಂ ಬರವೇೞ್ವುದುಂ ಪರಮಹಂಸಂ ಬಂದು ಕುಳ್ಳಿರ್ದೊಡಿ |
ತ್ತು ಬೞೆಕ್ಕರ್ಘ್ಯಮನೆಯ್ದೆ ನೀಮೆಮಗೆ ಪೇೞೆಂ ಸ್ವೇಚ್ಛೇಯಿಂ ಪೃಚ್ಛೆಯಂ || ೦೬ ||

ವ || ಎಂಬುದಮಾ ಪಂಡಿತಂ ಕನ್ನಗಳ್ಳನಂತೆ ಬಳಪಮಂ ತೆಗೆದು ಕಬ್ಬಿಗನಂತೆ ಗೋಮೂತ್ರಕವೃತ್ತಾಳಂಕೃತನಾಗಿ ಭಾಂಡರಿಗನಂತಾಯಮಂ ಪಿಡಿದು ಜೂದುಗಾಱನಂತೆ ಕವಡಿಕೆಯಂ ತೆಗೆದು ತುರಗಾರೋಹಕನಂತಾರೂಢಕ್ರಮಮಱೆದು ವೈದ್ಯನಂತೆ ಪಂಚಾಂಗಶುದ್ಧಿಯಂ ನೋಡಿ ಮಂತ್ರವಾದಿಯಂತೆ ಗ್ರಹಗತಿಯಂ ಕಂಡು ತಥಾಗತತೋಪಾಸಕನಂತೆ ತಾರಾಪಥಕ್ಕೆಱಗಿ ಕೃಷಿನಿರತನಂತೆ ರಾಸಿಯಂ ನಿಲಿಸಿ ವಿಹಗದಂತೆ ಖೇಚಕ್ರಮಂ ವರ್ತಿಸಿ ಮತ್ತಮಕ್ಷರಕೇವಳಿ ದೂತ ಚೇಷ್ಟೆ ಮೊದಲಾಗಿರಲಾ ಬಿಚ್ಚುವಂ ವಿದ್ಯೆಗಳೊಳೆಲ್ಲಮೊಚ್ಚತಂ ನೋಡಿದೊಡೊಂದೊಂದರ್ಕೆ ಮಚ್ಚರಿಸಿದಂತೆ ಪಚ್ಚು ಪಸರಿಸಿ ನಿಚ್ಚಯ್ಸಲಾಱದುಮ್ಮಚ್ಚದೊಳಚ್ಚಿಗಂಗೊಂಡು ಮೂರ್ಛೆಯಿಂದೆರ್ಚ್ಚತ್ತಂತೆ ಬೆಚ್ಚನೆ ಸುಯ್ದು ತುಚ್ಛನಾಗಿರ್ದೀತಂ ತನ್ನಾಳ್ದನಲ್ಲಿ ನಿಚ್ಚಂ ಮೆಚ್ಚುವಡೆವುದುಂಟು ಪೇೞಲಱೆಯದೊಡೆನ್ನಜ್ಞಾನಿಯೆಂದು ಮನ್ನಿಸಲಱೆಯನೆಂದು ತನ್ನೋಳವಧಾರಿಸಿ

ಇದು ಚಿಂತಾನಷ್ಟಮುಷ್ಟಿಯ್ತಿಯದೊಳಱೆದೆಂ ಚಿಂತೆ ತಚ್ಚಿಂತೆಯಾಗಿ |
ರ್ದುದು ಜೀವಾಜೀವಮೂಳತ್ರಯದೊಳನುಪಮಂ ಜೀವಮಾ ಜೀವಮುಂ ತ |
ಪ್ಪದೆ ನಾನಾಭೇದಸತ್ವವ್ರಜದೊಳಿದು ಚತುಷ್ಟಾದಿ ತದ್ಭೇದದೊಳ್‌ ತಾ |
ನಿದು ಶುಂಡಾಳಂ ನರೇಂದ್ರಂ ನಿಮಗೆ ಕುಡುವಮಾಗಿರ್ದಪಂ ನೋಡೆ ದೃಷ್ಟಂ || ೦೭ ||

ವ || ಎಂಬುದಂ ಸೂರ್ಯಮಿತ್ರನಾತನ ಪಸರಂಡೆದು ಕುಸುಮಿಸಿದ ಸಿಕತೆವೆತ್ತೆಸವ (?) ಪುಸಿಯ ಮಿಸುಪಂ ಕಂಡು ಕೆಟ್ಟದಱೆಂ ಕೆಟ್ಟು ಕೆಳೆಯಿಂಗಿಡಲಾಱದಿವರಱೆಯರೆಂದು ಪಱೆಯೆ ನುಡಿವುದು ಪುರುಷಾರ್ಥಂಮಲ್ಲೆಂದು ಪೊಗೞ್ದು ಪರಿದುಮ್ಮಳಿಕೆಯಿಂ ಮನೆಯಂ ಪೊಱಮೊಟ್ಟು ಪೊಱವೊೞಲೊಳಱಸುತ್ತಂ ಬರ್ಪನ್ನೆಗಂ ಗ್ರಾಮೇಕರಾತ್ರಾಂ ನಗರೇ ಪಂಚರಾತ್ರಂ ಆಟವ್ಯಾಂ ದಶರಾತ್ರಮೆಂಬೀ ನ್ಯಾಯದಿಂ ವಿಹಾರಿಸುತ್ತುಂ ಪರಮಜಿನಧರ್ಮಕೀರ್ತಿಯೆ ಮೂರ್ತಿಯಾದಂತುಗ್ರೋಗ್ರತಪಶ್ಚರಣ ನಿರತರಾಗಿಯುಮತ್ಯಂತ ಶಾಂತರಸ ಸ್ವರೂಪಮಂ ತಾಳ್ದಿ ಪಂಥಾತಿಚಾರ ನಿಯಮದಿಂ

ತನಗನತಿದೂರದೊಳ್‌ ನಂ |
ದನವನದೊಳ್‌ ಸ್ಫಟಿಕಮಯಶಿಲಾತಳದೊಳ್‌ ಯೋ
ಗನಿಯೋಗದಿಂದಮಿರ್ದರ್ |
ಮುನೀಂದ್ರರೊರ್ವರ್ ಸುಧರ್ಮನಾಮಾಚಾರ್ಯರ್ || ೦೮ ||

ವ || ಆಗಳಾ ದಿವ್ಯಾವಧಿ ಜ್ಞಾನಿಗಳಂ ನಿಧಾನಮಂ ಕಾಣ್ಬಂತೆ ಭೋಂಕನೆ ಕಂಡೀ ತಪೋಧನರೇನಾನುಂ ನಿಮಿತ್ತಂಗಳನಱೆವರಕ್ಕುಮುಂತುಂ ಪುತ್ತುಂ ಬತ್ತಲೆಯುಂ ಬಱೆದಿಲ್ಲೆಂಬ ನಾೞ್ನುಡಿಯುಂಟೆಂದವರನೆಯ್ದಿವರಕ್ಕುಮುಂತುಂ ಪುತ್ತುಂ ಬತ್ತಲೆಯುಂ ಬಱೆದಿಲ್ಲೆಂಬನಾೞ್ನುಡಿಯುಂಟೆಂದವರನೆಯ್ದಿ ಬರ್ಪ್ಪಾಗಳಾ ಪರಮಯೋಗಿಯುಂ ಪಂಥಾತಿಚಾರ ನಿಯಮನಿರ್ವರ್ತಿತ ಯೋಗನಿಯೋಗರಾಗಿ ತಮಗಿದಿರಂ ಬರ್ಪ ಸೂರ್ಯಮಿತ್ರನಂ ಕಂಡು ತದಾಕಾರೋಪಲಕ್ಷಿತದಿಂದತ್ಯಾಸನ್ನಭವ್ಯನೆಂದು ನಿಶ್ಚಯ್ಸಿ ದಿವ್ಯಾವಧಿಯಂ ಪ್ರಯೋಗಿಸಿ ನೋಡಿ

ಧರಣೀ ಚಕ್ರಾದಿನಾಥಂ ಸುಬಳನೃಪತಿ ವಿಶ್ವಾಸದಿಂ ತನ್ನ ಕಯ್ಯುಂ |
ಗುರುಮಂ ವಸ್ತೂತ್ಕರಾಳಂಕೃತಮನನುಪಮೋದಾತ್ತರತ್ನಪ್ರಭಾಭಾ |
ಸುರಮಂ ಭಾನೂಗ್ರತೇಜಂ ಕುಡೆ ಕಿಡಿಸಿ ತೊೞಲ್ದಾಕುಳವ್ಯಾಕುಲಾಂತಂಹ |
ಕರಣಂ ತಾನಾಗಿ ತಾತ್ಪರ್ಯದಿನೆಮಗಿದಿರಂ ಬಂದಪಂ ನಿರ್ವಿಕಲ್ಪಂ || ೦೯ ||

ಆಕ್ಷೂಣ ಪರಮಲಕ್ಷಣ |
ಲಕ್ಷಿತನೀ ಬರ್ಪ ಪಾರ್ವನೀ ಭವದೊಳೆ ಕ
ರ್ಮಕ್ಷಯ ಭಾಗಿಯೆನಿಕ್ಕುಂ
ಸಾಕ್ಷಾಜ್ಜಿನಶಾಸನಪ್ರದೀಪಕನಕ್ಕುಂ || ೧೦ ||

ಅಭಿಭವಿಸುವ ಶುಭಕಮಂ |
ಪ್ರಭಾವದಿಂದೀತನಿನ್ನೆಗಂ ಮಿಥ್ಯಾತ್ವಾ
ನುಭವಿಯೆನಿಸಿರ್ದನಾಸ |
ನ್ನ ಭವ್ಯನವ್ಯಾಕುಲಾತ್ಮಕಂ ನಿರ್ವ್ಯಾಜಂ || ೧೧ ||

ವ || ಎಂಬನ್ನೆಗಂ ಸೂರ್ಯಮಿತ್ರಂ ಜಗನ್ಮಿತ್ರನನೆಯ್ದೆವಂದು ನಿಂದಿರ್ಪುದುಂ

ಸುಬಳಮಹೀನಾಥನ ಕ
ಯ್ಯ ಬೆರಲ ರತ್ನಾಂಗುಳಿಯಮಂ ಮಱವೆಯೊಳ |
ತ್ತ ಬಿಸುಟ್ಟು ನೀಮಿದೇಕಿ |
ತ್ತ ಬಂದಿರೆನೆ ಕೇಳ್ದು ವಿಸ್ಮಯಸ್ಮಿತಚಿತ್ತಂ || ೧೨ ||

ವ || ಸಾಷ್ಟಾಂಗಪ್ರಣತನಾಗಿ

ವನಧಿಪ್ರಾವೃತಧಾರಿಣೀತಳದೊಳಿಂತೀಯಂದದಿಂ ಪೇೞ್ವನೊ |
ರ್ವನುಮಂ ಕಾಣೆನೆ ಬಂದು ನಿಂದನಿತೞೊಳ್‌ ನಾಮಗ್ರಹಂ ಮಾಡಿ ಮ |
ತ್ಸ್ವನಿತಂತರ್ಗತ (?) ಕಾರ್ಯಮಂ ನುಡಿದೆ ನಿನ್ನಿಂ ಬಿಟ್ಟು ದೈವಜ್ಞನಾ |
ವನುಮಿಲ್ಲಾಂ ಕೃತಕೃತ್ಯಾನಾದೆನದಱೊಂದೀಗಳ್‍ ಮುನೀಂದ್ರೋತ್ತಮಾ || ೧೩ ||

ವ || ಎಂಬನ್ನೆಗಂ ಸೂರ್ಯಮಿತ್ರಂ ಜಗನ್ಮಿತ್ರನನೆಯ್ದೆವಂದು ನಿಂದಿರ್ಪುದುಂ

ವ || ನಿಮ್ಮಡಿ ನಿಮ್ಮ ಬೆಸಸಿದುಂಗುರಮನಾನೆಲ್ಲಿ ಕಿಡಿಸಿದೆನಾರ ಕಯ್ವಿರ್ದುದಾವತೆಱದೊಳಱಸಿ ಕಾಣಲಕ್ಕುಮದಂ ಸವಿಸ್ತರಂ ಬೆಸಸಿಮೆಂಬುದುಂ ಸರ್ವಾವಧಿ ಜ್ಞಾನಲೋಚನಂ ದಿವ್ಯಾವಧಿಯ ಪ್ರಯೋಗಿಸಿ ನೋಡಿ

ಸಕಲೋರ್ವಿಪತಿ ಮಜ್ಜನಂಬುಗುತುಮಿರ್ದಾವೇಷ್ಟಕಾಖ್ಯಂ ತದೀ |
ಯ ಕರಾಂಗುಲ್ಯದೊಳಿರ್ದು ಬಿರ್ದು ಸಲಿಲಾಂತರ್ಬಾಗದೊಳ್‌ ಪದ್ಮಿನೀ
ಮುಕುಲಾಲಂಕೃತಮಾಗಿ ಬಾಳರವಿರೋಚಿಸ್ಪರ್ದ್ಥಿಯಾಗಿರ್ಕುಮು |
ತ್ಪಿಕಕೇಕಿಶುಕಭೃಂಗನಿಸ್ವನವನೋದ್ದೇಶಾಬ್ಜಿನೀಷಂಡದೊಳ್‌ || ೧೪ ||

ವ || ಇಂದು ನೀಮಾ ಸರೋರುಹಾಕರದೊಳ್‌ ಮಿಂದಾದಿತ್ಯಂಗರ್ಘ್ಯಮನೆತ್ತು ವಾಗಳ್‌ ಬೆರಲಿಂ ಸಡಿಲ್ದು ಬಿೞ್ದಿ ತತ್ಸರೋರುಹಾಕರದೊಳಾಗಣ ಸರೋಜಕುಟ್ಮಲದೊಳ್‌ ಸಿಲ್ಕಿರ್ದುದಾ ಮುಗುಳ್‌ ನಾಳೆ ನೇಸರ್ಮೂಡುವಾಗಳ್‌ ನೀರ ಮೇಲೆ ನಾಲ್ದೆ ರಲಂತರಂ ಮೇಲೆ ಬೆಳಗಿರ್ದಾಗಳುಂಗುರಮಂ ಕಾಣ್ಬಿರೆಂಬುದುಂ ಹರ್ಷೋತ್ಕರ್ಷಿತಾಂತರಂಗನಾಗಿ ನಮಸ್ಕಾರಂಗೆಯ್ದಂದಿನ ದಿನಮೆಲ್ಲಂ ನಂದನವನಕ್ಕಂ ಕಮಲ ವನಕ್ಕಂ ಕಾಪಂ ಪೇೞ್ದು ತಾನುಮಾ ರಾತ್ರಿಯೊಳಾ ಸರಸಿಯ ಸಮೀಪದೊಳ್‌ ಜಾವಮಿರ್ದು ಆದಿತ್ಯೋದಯ ದೊಳ್‌ ಕೊಳದ ತಡಿಯೊಳ್‌ ಬಂದು ನಿಂದಿರ್ಪುದುಂ

ಮಿಹಿರಪ್ರದ್ಯೋತಿ ಸಂಧ್ಯಾಭವನ ಸಮಯದೊಳ್‌ ಪದ್ಮಿನೀ ಷಂಡದೊಳ್‌ಪೊದ
ಳ್ದು ಹಬಿರ್ವೆರ್ದುಂಗುರಂ(?) ನೀರೊಳಗಣ ಮುಗುಳೊಳ್‌ ಸಿಲ್ಕಿ ನಿರ್ನಿಕ್ತ ಸತ್ಯಂ
ಸಹಕೃತ್ಯಂ ಸೂರ್ಯಮಿತ್ರಾಹ್ವಯದಿನೆನಗೆ ತಾನೆಂದು ಪೇೞ್ವಂತಿರಿರ್ದ
ತ್ತು ಹಟನ್ನೀರೇಜನಾಳಂನಿಮಿರ್ದುದನಿದಿರೊಳ್‌ ಪೊತ್ತು ತೋರ್ಪಂದದಿಂದಂ || ೧೫ ||

ವ || ಆಗಳಾ ರತ್ನ ಮುದ್ರಿಕೆಯನತ್ಯಂತ ಸಂತುಷ್ಟಾಂತರಂಗಸಂಗತನಾಗಿ ಕಂಡು ಕಳೆದುಕೊಂಡು ಸುಬಳಮಹಾರಾಜನ ಕೈಯೊಳ್‌ ಕೊಟ್ಟು ಬೞೆಕ್ಕೆ ತನ್ನ ಮನೆಗೆ ವಂದು ನಿಜಾಂಗನಾಮುಖವಿಲೋಕನಂಗೆಯ್ದು

ನೋಡೆಗೆ ನಿನ್ನೆ ಮುದ್ರಿಕೆಯ ಚಿಂತೆಯಿನೊಯ್ಯನೆ ಬೀದಿವೀದಿಯೊಳ್‌ |
ನೋಡುತ ಪೋಗೆವೋಗೆ ಪುರಬಾಹಿರದೊಳ್‌ ಮುನಿನಾಥನೊರ್ವನ
ಳ್ಳಾಡದೆ ನಿಂದೊಡುಂಹುರದ ಕೇಡಿನೊಳಾದೞಲೞ್ವೆ ವಿದ್ಯೆಯಂ |
ನೋಡುವೆನೀತಳ್ನುಡಿವೆನೆಂದಿರಾದ ವಿಷಾದಚಿತ್ತಂ || ೧೬ ||

ಪೋಗಿ ದಿಗಂಬರನಂ ಪರ |
ಮಾಗಮ ಕೋವಿದನನಮಿತಗುಣವಾರಿಧಿಯಂ
ರಾಗದ್ವೇಷಂಗಳ್ತನ |
ಗಾಗದನಂ ಕಂಡು ನಿಲ್ವುದುಂ ತನ್ಮುನಿಪಂ || ೧೭ ||

ಮುನ್ನ ಕಂಡಱೆವಂತೆ ಮೇಣ್ಕಿಱೆಯಂದೆ ತೊಟ್ಟೊಡನಾಡಿದಂ
ತೆನ್ನನಾಗಳೆ ಕಾಣುತುಂ ಪ್ರಿಯದಿಂದೆ ನೋಡುತುಮಿದೊಡಾಂ ||
ತನ್ನನೆನ್ನಯ ಚಿಂತೆಯಂ ಬೆಸಗೊಳ್ವೆನೆಂಬಿನಮನ್ನೆಗಂ |
ರನ್ನದುಂಗುರಮಿರ್ದ ತಾಣ ಮನಾಗಳಾ ಮುನಿ ತೋಱೆದಂ || ೧೮ ||

ಪಿರಿದುಂ ತಾತ್ಪರ್ಯದಿಂದಾ ಮುನಿಪನೆನಗೆ ಪೇೞ್ದಂದದಿಂ ತತ್ಸರೋಜಾ |
ಕರಹೇಮಾಂಭೋಜಿನೀಕುಟ್ಮಲವಿಲಸದಳಂಕಾರಮಾಗಿರ್ದುದಂ ಭಾ ||
ಸುರತೇಜೋ ರೂಪಮಾಗಿರ್ದದನಹಿಮಕರ ಸ್ಪರ್ಧಿಯಾಗಿರ್ದು ನಿ |
ರ್ಭರ ಚಿಂತಾಕ್ರಾಂತನೆಂ ಮುದ್ರಿಕೆಯನಕುಟಿಳಸ್ವಾಂತನೆಂ ನೋಡಿ ಕಂಡೆಂ || ೧೯ ||

ಪಾದಚ್ಛಾಯೆಯನಿಟ್ಟು ಜೋಯಿಸದಭಿಪ್ರಾಯಂಗಳಿಂ ಹೋರೆಯಿಂ |
ದೋದಿಂ ಪೃಚ್ಛಕಲಗ್ನದಿಂ ಸರುತದಿಂದಾರೂಢದಿಂ ನೋಡಿದಾ ||
ಬೋಧಂ ನಚ್ಚಿನ ನಮ್ಮ ಜೋಯಿಸಿಗನೇನಂ ಪೇೞ್ವಿನೇನೆಂಬೆನಾ |
ಬೋಧಂ ಭೋಂಕನೆ ಪೇೞ್ವ ಜೋಯಿಸಮದಾರ್ಗಂ ಮರ್ತ್ಯರೊಳ್‌ ದುರ್ಲಭಂ || ೨೦ ||

ಶಕುನಂಜೋಯಿಸಮಾದಿಯಾಗಿ ಪೆಱವುಂ ವಿಜ್ಞಾನವಿದ್ಯಾವಿಶೇ |
ಷಕಳಾಳಾಪದೊಳಾಂ ಸಮಗ್ರನೆನಿದೊಂದಾಶ್ಚರ್ಯಮಂ ನೋಡ ಕೌ ||
ತುಕಮಂ ಜ್ಞಾನವಿಶೇಷಮಂ ಸಕಳವಿದ್ಯಾರತ್ನ ಶುಂಬತ್ಕರಂ |
ಡಕಮಂ ಕಂಡೆನಿದೊಂದಪೂರ್ವಮನಿಳಾಲೋಲೈಕಸಂಪೂಜ್ಯಮಂ || ೨೧ ||

ಆ ವಿಜ್ಞಾನವಿಶೇಶ ಕ |
ಳಾವಳಿಗಳೊಳೆಲ್ಲ ಪರಮಹಂಸನ ದೊರೆಯಂ ||
ದೈವಜ್ಞನಱೆಯನೆಂದೊಡೆ |
ದೇವಂ ಪೆಱನಾವನಾತನಿರೆ ಭೂತಳದೊಳ್‌ || ೨೨ ||

ಆ ಮಹಾನುಭಾವಂ ಮುನ್ನಮೆನ್ನನಱೆಯದೆಯುಂ ತನ್ನಱೆತಮಂ ಪ್ರಭಾವಿಸಿದನಾ ವಿಜ್ಞಾನಮನೇನದನವಶ್ಯಂ ಕುಡುಗುಮದು ಕಾರಣದಿನಾನಾ ಮುನೀಶ್ವರ ನಲ್ಲಿಗೆವೋಗಿ ಪೊದ ಮುಹೂರ್ತಮಾತ್ರದೊಳ್‌ ಕಲ್ತು ಬರ್ಪೆನೆನ್ನಱಿಯದ ನಿಮಿತ್ತ ಮಾಮವುದುಮಿಲ್ಲಿಲ್ಲಿ ಯೇನಾನುಮುಪಾಧ್ಯಾಯ ರಹಸ್ಯಮಕ್ಕುಮದುವಂ ಸೂಚನಾ ಮಾತ್ರದೊಳೆ ವಿದಿತಮಕ್ಕುಮದಲ್ಲದೆಯುಂ

ಉಪದೇಶಂ ದೊರೆಕೊಂಡುದಪ್ಪೊಡೆನಗೀ ತ್ರೈಲೋಕ್ಯ ಸಾಮ್ರಾಜ್ಯರಾ |
ಜ್ಯಪದಂ ಸಾರ್ದನಿತುಂ ಮಹಾಮಹಿಮೆ ಸಾರ್ಗ್ಗುಂ ವಿದ್ಯೆಯಂ ಕೊಂಡು ಬಂ |
ದಪೆನಾನೀಗಳೆ ಬರ್ಪ್ಪಿನಂ ಮನೆಗೆ ನೀನಿಂ ಪಯ್ತಮಾಗೆಂದು ಪೇ |
ೞ್ದು ಪುರಾಭ್ಯಂತರದಿಂದಮಂದು ಪೊಱಮಟ್ಟಂ ಸೂರ್ಯಮಿತ್ರದ್ವಿಜಂ || ೨೩ ||

ವ || ಅಂತು ತನ್ನ ಪರಿಜನಕ್ಕಂ ಸ್ವಜನವರ್ಗಕ್ಕಮಱೆಪದೆ ತನ್ನ ರೂಪನಱೆಪದೆ ರೂಪಗರೆದು ತಾನೊರ್ವನೆ ನಟ್ಟನಡುವಿರುಳಪ್ಪಾಗಳ್‌ ರಾಜಗೃಹಾಧಿಸ್ಥಾನದಿಂ ಪೊಱಮಟ್ಟು ಬಂದು ಸುಧರ್ಮಾರ್ಚಾಯರನಾವನೋದ್ದೇಶದೊಳ್‌ ಕಾಣದೆ ವನಪಾಲರ್ಕಳನುಚರರಿಂ ನಿವೇದಿತಮಪ್ಪ ದಿಶಾಮಾರ್ಗದಿಂ ತಗುಲ್ದು ಪೋಗಿಪೆಱತೊಂದೂರ ಪೊಱವೊೞಲೊಳೆಱಗಿ ತುಱುಗಿ ನೆಱಿ ಸೊಗಯಿಸುವುದ್ಯಾನಮಧ್ಯ ಪ್ರದೇಶದ ಶಾಲದ್ರುಮಾಧಃ ಸ್ಥಳ ನಿವಾಸಿಗಳಾಗಿರ್ದ ಸುಧರ್ಮಮುನಿಮುಖ್ಯರಂ ಕಂಡು ಮೂಱುಸೂೞ್‌ ಬಲಗೊಂಡು ಭಕ್ತಿಭರವಿನಮಿತ ಮಸ್ತಕನ್ಯಸ್ತಹಸ್ತಪುಟನಾಗಿ ಯೋಗೀಂದ್ರವೃಂದ ವಂದ್ಯ ಪಾದಾರವಿಂದದ್ವಂದ್ವನ ಮುಖಾರವಿಂದಮಂ ನೋಡಿ

ಯಮಿವೃಷಭ ನಿಮ್ಮಬೆಸಸಿದ |
ಕಮಲಾಕರದೊಳ್‌ ಸರೋಜಕಟ್ಮಲದೊಳ್‌ ಸಂ ||
ಕ್ರಮಿಸಿ ವಿರಾಜಿಸಿ ಬೆಳಗು |
ತ್ತುಮಿರ್ದುದಂ ನೋಡಿ ಕಂಡನಾನುಂಗುರಮಂ || ೨೪ ||

ವೃ || ಎನಗತಿಶಯಮಾಯ್ತು ಪುಂಡರೀಕೋ |
ದ್ಯಾನದೊಳಿರ್ದಪುದೆಂದು ಪೇೞ್ದ ದಿವ್ಯ |
ಜ್ಞಾನಮಹಿಮಾಪ್ರಭಾವವೀರ್ಯಾ |
ನೂನಗುಣಾ ಧಾರಣೀಸ್ತುತಂ ಮುನೀಂದ್ರಾ (?) || ೨೫ ||

ಉಮ್ಮಚ್ಚದೊಳಱೆವೆನ್ನೆಂ |
ದೊಮ್ಮನದೊಳ್‌ ಬಗೆದ ಕಾರ್ಯಮಂ ಕ್ಷನದಿಂದಂ ||
ನಿಮ್ಮಡಿ ನೀಮೆನಗಱೆಪಿದ |
ಸಮ್ಮತಮಂ ಬೆಸಸಿಮಖಿಳಧಾತ್ರೀಹಿತಮಂ || ೨೬ ||

ಎನಗೆ ಕಳತ್ರಮಿತ್ರ ಬಹುಪುತ್ರ ಕುಟುಂಬಮಳುಂಬಮೆನ್ನ ಮಾ |
ತಿನಿತೆ ಮುನೀಂದ್ರ ನಿಮ್ಮಱೆವ ಜೋಯಿಸಮಂ ದಯೆಗೆಯ್ದಿರಪ್ಪೊಡೆ ||
ನ್ನನಿತು ಕೃತಾರ್ಥರುಂ ಸುಚರಿತಾರ್ಥರುಮೆಯ್ದೆ ಸಮರ್ಥರುಂ ಮಹಾ |
ವನಿಯೊಳಗಿಲ್ಲ ನೀವೆ ಶರಣಿಂ ಶರಣಾಗತಕಲ್ಪಭೂರುಹಾ || ೨೭ ||

ವ || ಎಂದು ನಾನಾಪ್ರಕಾರದ ಮಿಥ್ಯಾವಿನಯಂಗಳಿಂ ಸೂರ್ಯಮಿತ್ರಂ ಸುಧರ್ಮಾಚಾರ್ಯರ ಕಾಲಮೇಲೆ ಕವಿದು ಪಡುವುದುಂ

ಉತ್ತಮ ಮುನೀಶ್ವರಂ ವಿ |
ಪ್ರೊತ್ತಮನಂ ಪ್ರೀತಿಯಿಂದೆ ನುಡಿದಂ ನಾನಾ ||
ಭಿತ್ತಿಗಳಿಂದೆತ್ತಂ ದಿ |
ಗ್ಭಿತ್ತಿಗಳಂ ದಂತಕಾಂತಿ ಧವಳಿಸುವಿನೆಗಂ || ೨೮ ||

ವ || ಅಮ್ಮ ನಿಮ್ಮ ಮನದೊಳಱೆವ ಬಗೆಯುಳ್ಳೊಡೆ ಪೇೞ್ವೆಮೀ ಜ್ಯೋತಿ ಜ್ಞಾನಮಪ್ಪೊಡೆಮ್ಮನ್ನರಪ್ಪ ಋಷಿರೂಪಕರ್ಗಲ್ಲದೆ ಕಲಲುಂ ಕಲಿಸಲುಂ ಬಾರದೆಂಬುದುಂ ಭಟ್ಟಂ ಬೆಕ್ಕಸಂಬಟ್ಟು ತನ್ನಂತರ್ಗದೊಳ್‌

ತಲೆವಱೆದುಟ್ಟುದಂ ಬಿಸುಟು ಮೀಯದೆ ಮೇಕದೆ ದಂತಪಂಕ್ತಿಯಂ |
ಸುಲಿಯದೆ ಸಂಯಮೋಪಕರಣಂಗಳನಿಂಬಿನೆ ತಾಳ್ದಿ ದೇಹದೊಳ್‌ ||
ಮಲಮನನಾರತಂ ತಳೆದುಪಾಸಕವಾಸದೊಳೇಕಭುಕ್ತಮಂ |
ಸಲಿಸುವ ಘೋರವೀರತಪಮೀ ತಪಮಾತಪದಿಂದಮಗ್ಗಳಂ || ೨೯ ||

ದ್ವಿಜಕುಲನೆನಿಸುವನೀ ಪ್ರ |
ವ್ರಜಿತದೊಳೆಸಗಿದೊಡೆ ದೋಷಮುಂಟೆಂದು ಮನು ||
ವ್ರಜವಾಕ್ಯಮುಂಟು ಲ |
ಜ್ಜಿಸದೆ ಲಜ್ಜೆಗೆಟ್ಟಿಂತು ಮೆಯ್ಯನೋಡ್ದುವೆನಿದಱೊಳ್‌ || ೩೦ ||

ವ || ಎಂದು ವಿವಕ್ಪೆಗೆಯ್ದು ಮತ್ತಂ

ಮತಿಗೆಟ್ಟಿದುವೆ ಪರತ್ರೆಗೆ |
ಹಿತಮೆಂದೀ ಸಮಯದತ್ತಲೆಱಗಿದೊಡೆ ಕುಲ ||
ಕ್ಷತಿಯಕ್ಕುಂ ಜೋಯಿಸಮಱೆ |
ವ ತಕ್ಕಿನೊಳ್‌ ತಪಸಿಯಾದೊಡಾವುದು ದೋಷಂ || ೩೧ ||

ಆನೀಗಳೀವಿದ್ಯೆಯನಾಜ್ಞೆಯಿಂದಂ |
ಏನಾಗಿಯುಂ ಸಾಧಿಸಿಕೊಳ್ವೆನುಂತುಂ |
ಕೇನಾಪ್ಯುಪಾಯೇನ ಫಳಂಹಿಸಾಧ್ಯಂ ||
ತಾನೆಂಬುದುಂಟಲ್ತೆ ಪುರಾಣವಾಕ್ಯಂ || ೩೨ ||

ಮೇಲ್ಮಲೆಗೆಯ್ಯದೆ ಸವಣನ |
ಬಲ್ಮೆಯನಱೆಯಲ್ಕೆ ದೀಕ್ಷೆಯಂ ಕೊಂಡಪೆನ ||
ತ್ತಲ್ಮತ್ತಮೆನ್ನ ತಲೆಯೊಳ್‌
ಪುಲ್ಮೊಳೆತಪ್ಪುದೆ ಮುನೀಂದ್ರನೆಂಬುದನೆಂಬೆಂ || ೩೩ ||

ಪೆಱತೇನೊ ಪರಿಜ್ಞಾನಮ |
ನಱೆವಿನಮಿವರೇನನೆಂದರೆಂದಂದೊಳಾಂ |
ಪೆಱಪಿಂಗದೆ ಪೆಱತೊಂದ |
ಕ್ಕೆಱಗದೆ ಕೈಕೊಂಡು ವಿನಯಮಂ ಪ್ರಕಟಿಸುವೆಂ || ೩೪ ||

ವೃ || ಎಂದು ಮಾಯಾವಿಕೃತಿಯಿಂ ದೀಕ್ಷಾಪ್ರಸಾದಮೆಂದು

ದ್ರವ್ಯತಪದಿಂದಮಲ್ಲದೆ |
ನಿರ್ವ್ಯಾಕುಳಭಾವತಪಮುಮಂ ತಳೆಯಂ ತಾಂ ||
ನಿರ್ವ್ಯಾಜಮೀತನೆಂದಾ |
ದಿವ್ಯಾವಧಿಬೋಧಱೆದು ತಪಮಂ ಕೊಟ್ಟರ್‌ || ೩೫ ||

ವ || ಅಂತು ಪರಮದೀಕ್ಷಾ ಮಾರ್ಗದೊಳ್‌ ದೀಕ್ಷೆಯಂ ದಯೆಗೆಯ್ದು ಪ್ರತಿ ಕ್ರಮಣಮಂ ಪೇೞ್ದುದುಂ ಮಾಯಾತಪಸ್ವಿ ಜೋಯಸಮಂ ವಕ್ಖಾಣಿಸಿಮೆಂದು ಕಯ್ಗಳಂ ಮುಗಿದು ಮುಂದೆ ಕುಳ್ಳಿರ್ಪ್ಪುದುಂ ಕ್ರಿಯಾರ್ಪ್ಪುದುಂ ಕ್ರಿಯಾಪೂರ್ವಕ ನಮಸ್ಕಾರಂಗಳುಮಂ ನಿಯಾಮಳೋಚನ ಕ್ರಿಯೆಗಳನಱೆದೊಡಲ್ಲದೆ ನಿಮಿತ್ತಮನಱೆಯಲ್ಬಾರದೆಂಬುದಂ ತನಗಾವ ಶಾಸ್ತ್ರಂಗಳಾದೊಡಮೇಕ ಸಂಧಿಯಳೆ ಬರ್ಪುವಪ್ಪುದಱಿಂ ಕೆಲವು ದಿವಸದೊಳಮೆಲ್ಲಮನೋದಿ ನಿಮ್ಮಡಿ ನಿಮ್ಮ ಬೆಸಸಿದೋದುಗಳನೆಲ್ಲಮನೋದಿದೆಂ ಜೋಯಿಸಮಂ ಕಲಿಸಿಮೆಂಬುದು ಪ್ರಥಮ ಕರಣ ಚರಣಾನುಯೋಗಂಗಳಂ ನಿರವಶೇಷಂ ಕಲ್ತೊಡಲ್ಲದೆ ಜೋಯಿಸಮಂ ಕಲಲ್ಬಾರದೆಂಬುದುಂ

ಸರ್ಥಂ ಕೈಸಾರ್ಗುಮಿಂತೀಸಮಯದ ತೆಱನುಂ ವ್ಯಕ್ತಮಾಗಿರ್ಕುಮಾಜ್ಞಾ |
ನಾರ್ಥಂ ಮುನ್ನೋದಿದೋದಿಂದೆನಗಿದು ಪಿರದಲ್ತೆಂದು ಪೂಣ್ದೋದಿದಂ ಗ್ರಂ ||
ಥಾರ್ಥಂ ನಿರ್ನಿಕ್ತಮಾಗಲ್‌ ಚರಣಕರಣ ರತ್ನತ್ರಯಾರಾಧನಾ ತ |
ತ್ವಾರ್ಥಾಚಾರಾನುಯೋಗಪ್ರಭೃತಿ ಸಕಲಶಾಸ್ತ್ರಂಗಳಂ ಸೂರ್ಯಮಿತ್ರಂ || ೩೬ ||

ಅನಿತುಮನಱಿದಱೆಪುವು |
ದೆನೆಗೆ ನಿಮ್ಮಡಿ ನಿಮ್ಮ ವಿದ್ಯೆಯಂ ದಯೆಯಿಂದೆಂ ||
ದೊನನವಧಿಜ್ಞಾನವಿಲೋ |
ಚನವಿಭವಂ ವಿಶ್ರುತಶ್ರುತ್ರಂ ಮುನಿ ನುಡಿಗಂ || ೩೭ ||

ವ || ನೀನೀಗಳ್‌ ಸಮಸ್ತಾಗಮಪದಾರ್ಥತತ್ತ್ವಂಗಳಂ ಸವಿಸ್ತರಮೋದಿದಯ್‌ ಕಿಱೆದುಮೊಂದಧಿಕಾರದಿಂ ದ್ರವ್ಯಾನುಯೋಗಮೆಂಬುದುಂಟದು ನಿಮ್ಮನ್ನರಪ್ಪ ನಿಶಿತಮತಿಗಳ್ಗೆ ಪಂಚರಾತ್ರಿಯೊಳೆ ಪ್ರತೀತಯಕ್ಕುಮದಲ್ಲದೊಡಂ ಜಿನಶಾಸನಮೆಂಬ ಚೈತ್ಯನಿಕೇತನಕ್ಕೆ ಸಿದ್ಧಾಂತಮೆಂಬಧಿಕಾರಂ ಸಾರರತ್ನಮಯಕಳಶಮಿರ್ಪ್ಪಂತಿರ್ದುದದು – ಕಾರಣದಿಂದಾ ಕಳಶದಿಂ ಮೇಲೆ

ಒಂದು ಬೆಸನಿಲ್ಲದನಱೆ
ದಂದೆಮ್ಮಱೆ ವಱೆಕಮಱೆಯಲಕ್ಕುಂ ನಿಮಗಿ ||
ನ್ನೆಂದಾಗಳ್‌ ಸಂತೊಸದಿಂ |
ದಂದೀ ತ್ರಿಜಗಮುಮನಾಗಳಾಲ್ದಂತಾದಂ || ೩೮ ||

ವ || ಅಂತತ್ಯಂತಸಂತುಷ್ಟಸ್ವಾಂತನಾಗಿ ಗುರುಚರಣಕಮಲಕ್ಕೆಱಗಿ ಪೊಡೆವಟ್ಟು

ದಯೆಯಿಂ ಬೆಸಸಿಂ ದ್ರವ್ಯಾ |
ನುಯೋಗಮಂ ಕೇಳ್ವೆನೆಂದು ಮಯಾಋಷಿ ತಾಂ ||
ಪ್ರಿಯದಿಂದ ಬೆಸಗೊಳೆ ದಿ |
ವ್ಯಯೋಗ ಶುಭದಿಂ ಮುಹೂರ್ತ ಲಗ್ನೋದಯದೊಳ್‌ || ೩೯ ||

ವ || ಸಿದ್ಧಾಂತಮಂ ಮೊದಲ್ಗೊಳಿಸುವುದುಮಲ್ಲಿನಿರ್ದೇಶ ಸ್ವಾಮಿತ್ವಸಾಧನಾಧಿಕರಣ ಸ್ಥಿತಿಧಾನದಿಂ ಸತ್ಸಂಖ್ಯಾಕ್ಷೇತ್ರಸ್ಪರ್ಶನ ಕಲಾಂತರ ಭಾವಾಲ್ಪ ಬಹುತ್ವ ಸ್ಥಿತಿಯಿಂ ಸಾಮಾನ್ಯ ವಿಶೇಷಾವ್ಯಾವೃತ್ತ ವಿರುದ್ದಾ ವಿರುದ್ದ ಧರ್ಮಕ್ರಮದಿಂ ಸ್ಯಾದಸ್ತಿ ಸ್ಯಾನ್ನಾಸ್ತಿ ಸ್ಯಾದಸ್ತಿನಾಸ್ತಿ ಸ್ಯಾದವಕ್ತವ್ಯಂ ಸ್ಯಾದಸ್ತ್ಯವಕ್ತವ್ಯಂ ಸ್ಯಾನ್ಯಾಸ್ತ್ಯವಕ್ತವ್ಯಂ ಸ್ಯಾದಸ್ತಿನಾಸ್ತ್ಯವಕ್ತವ್ಯಂ ಎಂಬ ಸಪ್ತ ಭಂಗಿಯಿಂ ನೈಗಮಸಂಗ್ರಹ ವ್ಯವಹಾರ ಋಜುಸೂತ್ರ ಶಬ್ದ ಸಮಭಿರೂಢೈವಂಭೂತಾದಿ ನಯವಿಭೇದದಿಂ ನಾಮಸ್ಥಾಪನಾದ್ರವ್ಯಭಾವದಿಂ ಜೀವತತ್ತ್ವಂ ಮೋಕ್ಷತತ್ತ್ವಮೆಂಬ ಸಪ್ತತತ್ತ್ವ ರೂಪಮುಮಂ ಜೀವಪದಾರ್ಥಮಜೀವಪದಾರ್ಥಂ ಮೋಕ್ಪಪದಾರ್ಥಂ ಆಸ್ರವ ಪದಾರ್ಥಂ ಸಂವರಪದಾರ್ಥಂ ನಿರ್ಜರಪದಾರ್ಥಂ ಬಂಧಪದಾರ್ಥಂ ಮೋಕ್ಷಪದಾರ್ಥಂ ಪುಣ್ಯಪದಾರ್ಥಂ ಪಾಪಪದಾರ್ಥಮೆಂಬ ನವಪದಾರ್ಥಮುಮಂ ಜೀವದ್ರವ್ಯ ಪುದ್ಗಲ ದ್ರವ್ಯ ಧರ್ಮ ದ್ರವ್ಯ ಅಧರ್ಮ ದ್ರವ್ಯ ಆಕಾಶದ್ರವ್ಯ ಕಾಲ ದ್ರವ್ಯಮೆಂಬ ಷಡ್ದ್ರವ್ಯಂಗಳ ಗುಣಪರ್ಯಾಯಮುಮಂ ಜೀವಾಸ್ತಿಕಾಯಂ ಪುದ್ಗಲಾಸ್ತಿಕಾಯ ಧರ್ಮಾಸ್ತಿಕಾಯಂ ಅಧರ್ಮಾಸ್ತಿಕಾಯಂ ಆಕಾಶಾಸ್ತಿಕಾಯಮೆಂಬ ಪಂಚಾಸ್ತಿಕಾಯ ನಿಕಾಯಮುಮಂ ಮತಿಜ್ಞಾನಾವರಣೀಯಂ ಶ್ರುತಜ್ಞಾನಾವರಣೀಯಂ ಅವಧಿಜ್ಞಾನಾವರಣೀಯಂ ಮನಃಪರ್ಯಯಜ್ಞಾನಾವರಣೀಯಂ ಚಕ್ಷುದರ್ಶಜ್ಞಾನಾವರಣೀಯ ಮಚಕ್ಷುರ್ದರ್ಶನಾ ವರಣೀಯಮವಧಿದರ್ಶನಾವರಣೀಯ ಕೇವಲದರ್ಶನಾವರಣೀಯಂನ ನಿದ್ರಾ ನಿದ್ರಾನಿದ್ರಾ ಪ್ರಚಲಾ ಪ್ರಚಲಾಪ್ರಚಲಾ ಸ್ತ್ಯಾನಗೃದ್ಧಿಭೇದದಿಂ ನವ ವಿಧಭೇದಮಪ್ಪ ದರ್ಶನಾವರಣೀ ಯಮುಮಂ ಸಾತಾಸತಸಂವಿಭಾಗದಿನಿರ್ತ್ತೆಱನಪ್ಪ ವೇದನೀಯಮುಮಂ ದರ್ಶನ ಮೋಹದೊಳಂ ಚಾರಿತ್ರ ಮೋಹದೊಳಂ ಯಥಾಕ್ರಮದಿಂ ಸಮ್ಯಕ್ತ್ವ ಮಿಥ್ಯಾತ್ವ ಸಮ್ಯಕ್‌ ಮಿಥ್ಯಾತ್ವ ಹಾಸ್ಯ ರತ್ಯರತಿ ಶೋಕ ಭಯ ಜುಗುಪ್ಸಾ ಸ್ತ್ರೀಪುನ್ನಪುಂಸ ವೇದಮೆನಿಸಿ ಯಮನಂತಾನುಬಂಧಿ ಅಪ್ರತ್ಯಾಖ್ಯಾನ ಪ್ರತ್ಯಾಖ್ಯಾನ ಸಂಜ್ವಲನ ಕ್ರೋಧಮಾನಮಾಯಾ ಲೋಭಕಷಾಯ ವೇದನೀಯಮೆನಿಸಿಯುಮಿರ್ಪ್ಪತ್ತೆಂಟು ತೆಱನಪ್ಪ ಮೋಹನೀಯಮುಮಂ ನರಕತಿರ್ಯಗ್ಮನುಷ್ಯ ದೇವಾಯುಷ್ಯ ಚತುಷ್ಕಮಪ್ಪಾಯುಷ್ಯಮುಮಂ ಗತಿಜಾತಿಶರೀರಾಂ ಗೋಪಾಂಗ ನಿರ್ಮಾಣಬಂಧನಸಂಘಾತಸಂಸ್ಥಾನ ಸಂಹನನ ಸ್ಪರ್ಶರಸಗಂಧ ವರ್ಣ್ನಾನುಪೂರ್ವ್ಯ ಗುರುಲಘೂಪಘಾತಪರಘಾತ ತಪೋದ್ಯೋತೋಚ್ಛ್ವಾ ಸವಿಹಾಯಯೋಗತಿ ತ್ರಸಸ್ಥಾವರ ಬಾದರಸೂಕ್ಷ್ಮ ಪರ್ಯಾಪ್ತಕಾಪರ್ಯಾಪ್ತಕ ಪ್ರತ್ಯೇಕಶರೀರ ಸಾಧಾರಣಶರೀರ ಸ್ಥಿರಾಸ್ಥಿರ ಶುಭಾಶುಭ ಸುಭಗದುರ್ಭಗ ಸುಸ್ವರದುಸ್ವರಾದೇಯಾನದೇಯ ಯಶಃ ಕೀರ್ತಿ ಆಯುಶಃ ಕೀರ್ತಿನಿರ್ಮಾಣ ತೀರ್ಥಕರತ್ವಮೆಂದಿಂತು ನಾಲ್ವತ್ತೆರಡು ಭೇದ ಮನುಳ್ಳ ನಾಮಮುಮಂ ಉಚ್ಛೈಗೋತ್ರ ನೀಚ್ಛೈಗೋತ್ರಭೇದದಿಂ ದ್ವಿವಿಧಮಪ್ಪ ಗೋತ್ರಮುಮಂ ದಾನಲಾಭ ಭೋಗೋಪ ಭೋವೀರ್ಯಾಂತರಾಯ ಭೇದದಿನಯ್ದು ವಿಕಲ್ಪಮಪ್ಪಂತ ರಾಯಪ್ರಕೃತಿಯಮಂ ಪ್ರಕೃತಿಸ್ಥಿತ್ಯನುಭಾಗಪ್ರದೇಶಮೆಂದು ಬಂಧಂ ಮಿಥ್ಯಾತ್ವಾ ಸಂಯಮ (ಪ್ರಮಾದ) ಕಷಾಯಯೋಗಮೆಂದು ಬಂಧಕಾರಣಮನಂತ ಜ್ಞಾನಮನಂತದರ್ಶನ ಮನಂತವೀರ್ಯಮನಂತ ಸುಖಮೆಂದು ಮೋಕ್ಷಂ ಸಮ್ಯಗ್ದರ್ಶನ ಜ್ಞಾನಚಾರಿತ್ರ ತಪಮೆಂದು ಮೋಕ್ಷಕಾರಣಮಿಂತು ಬಂಧಂ ಬಂಧಕಾರಣಂ ಮೋಕ್ಷಂ ಮೋಕ್ಷಕಾರಣಮೆಂಬ ಪರಮ ಚತುಷ್ಟಯಮುಮಂ ಆರ್ತ ರೌದ್ರ ಧರ್ಮ ಶುಕ್ಲಾಭಿಧಾನಧ್ಯಾನಚತುಷ್ಟಯಮುಮಂ ಕಾಲಲಬ್ಧಿ ಕರಣಲಬ್ಧಿ ಉಪಶಮಲಬ್ಧಿ ಕ್ಷಯೋಪಶಮಲಬ್ಧಿ ಪ್ರಾಯೋಗ್ಯತಾಲಬ್ಧಿಯೆಂಬ ಲಬ್ಧಿಪಂಚಕಮುಮಂ ಸಮುಚ್ಚಯಾಕ್ಷೇಪವಚನದಿಂ ದ್ರವ್ಯೋತ್ಪತ್ತಿವ್ಯಯಾತ್ಮಕ ಸ್ವರೂಪದಿಂ ಸಂಶಯಾದಿ ನಿವೃತ್ತಿ ರತ್ರಾಹ ಸ್ವದ್ರವ್ಯಾದಿರೂಪೇಣಾಸ್ತಿ ಪರದ್ರವ್ಯಾದಿವರೂಪೇಣನಾಸ್ತಿ ಸ್ವರಪದ್ರವ್ಯಾದಿ ರೂಪೇಣಾಸ್ತಿನಾಸ್ತಿ ಸಹಾನುರಕ್ತೇರವಾಚ್ಯಂ ಸ್ವದ್ರವ್ಯಾದಿ ಸಹಾನುಕ್ತೇರಸ್ಯವಾಚ್ಯಂ ಪರದ್ರವ್ಯಾದಿ ಸಹಾನುಕ್ತಿರ್ನಾಸ್ತ್ಯಪ್ರಮೇಯತ್ವ ಪ್ರಮೇಯತ್ವಾದಿ ಬಹುಭೇದ ವಿಭಿನ್ನ ದಿನೇಕಜೀವಾಪೇಕ್ಷೆ ನಾನಾಜೀವಾಪೇಕ್ಷೆಯಿಂ ಯೋಜಿಸಿ ನಾನಾ ಪ್ರಕಾರಹೇತು ಧೃಷ್ಟಾಂತಗಳಿಂ ದ್ವಾದಶಾಂಗ ಚತುರ್ದಶಪೂರ್ವೋಕ್ತಕ್ರಮಮಂ ರ್ವೋಕ್ತಕ್ರಮದಿಂದಾ ಸುಧರ್ಮಾಚಾರ್ಯರಾ ಸೂರ್ಯಮಿತ್ರ ಮುನಿಗತಿವ್ಯಕ್ತಮುಮನತಿರಿಕ್ತ ಮುಮತಿಸ್ಪುಟಮುಮ ವ್ಯಾಕುಲಮುಮಪ್ಪಂತತಿಮೃದು ಮಧುರಗಂಭೀರೋದಾರಸಾರ ತರವಚನರಚನೆಗಳಿಂ ವ್ಯಾಖ್ಯಾನಂಗೆಯ್ಯಲೆನಿತೆನಿತಂ ಕೇಳ್ಗುಮನಿತನಿತೆ ವಿಶುದ್ಧ ಪರಿಣಾಮಮನನಾಗಿ ಜಗತ್ಯಾಯಸ್ವಭಾವಂಗಳೋಳಾಸಂವೇಗವೈರಾಗ್ಯ ಪರಾಯಣನಾಗುತ್ತುಮನಿತ್ಯಾ ಶರಣಸಂಸಾರೈ ಕತ್ವಾನ್ಯತ್ವಾ ಶುಚಿತ್ವಾಸ್ರವಸಂವರನಿಜರಲೋಕ ಬೋಧಿದುರ್ಲಭ ಧರ್ಮಮೆಂಬೀ ದ್ವಾದಶಾನುಪ್ರೇಕ್ಷೆಗೆಯ್ಯುತ್ತುಂ ಭಗವದರ್ಹತ್ಪರ ಮೇಶ್ವರಸ್ವರೂಪಮುಮಂ ಗುಣಂಗಳುಮನಱೆದು ಮೂಱುಮೂಢದಿನಾಱನಾಯ ತನಸೇವೆಯಿನೆಂಟುಮದದಿನೆಂಟು ಮಳದಿನಿರ್ಪತ್ತಯ್ದು ಮಳದಿಂ ಪಿಂಗಿದ ನಿರ್ಮಳಮಪ್ಪ ಸಮ್ಯಕ್ತ್ವರತ್ನಮಂ ಕೈಕೊಂಡು

ಇದು ಜೀವಾಜೀವಭೇದಕ್ರಮಮಿದು ಸಕಷಾಯಾಕಷಾಯೋದಯಂ ತಾ |
ನಿದು ಧರ್ಮಾಧರ್ಮತತ್ತ್ವಾಗಮಮಿದು ನಿಖಿಲಧ್ಯಾನ ಸಜ್ಞಾನಮಿಂತೆಂ |
ಬುದನಾಗಳ್‌ ಸೂರ್ಯಮಿತ್ರಂ ಬಗೆದು ಬಗೆದಿರ್ದೇಂ ಕರ್ಮಮೋ ಘೋರಸಂಸಾ |
ರದುರಂತಾಭೀಳದಾವಾನಲನಳುರ್ವಿನಮಾನಿನ್ನೆಗಂ ಬರ್ದುತಿರ್ದೆಂ || ೪೦ ||

ಖಳರ್ಮೋದಯದಿಂದಿಮಿನ್ನೆವರೆಗಂ ಜನ್ಮಾಬ್ಢಿಯೊಳ್ಮೂಡುತುಂ |
ಮುೞುಗುತ್ತುಂ ನಮೆಯುತ್ತಮಿರ್ದ್ದು ಪಲಕಾಲಂ ಪೋದುದತ್ಯಂತ ನಿ |
ರ್ಮಳಸನ್ಮಾರ್ಗ ಬಹಿತ್ರಮಿಲ್ಲಿ ದೊರೆಕೊಂಡತ್ತೀಗಳೆನ್ನಂತು ಕೇ |
ವಲಪುಣ್ಯಾನ್ವಿತರಾರುಮಿಲ್ಲ ಮನುಜರ್‌ ವಿಶ್ವಾವನೀಭಾಗದೊಳ್‌ || ೪೧ ||

ಆನೆತ್ತಾ ಕೊಳನೆತ್ತಲುಂಗುರದ ಕೇಡೇತ್ತೀ ಮುನೀಂದ್ರೋತ್ತಮಂ |
ತಾನೆತ್ತಿರ್ದೆಡೆವೇೞ್ವುದೆತ್ತೆನಗೆ ವಿದ್ಯಾಕಾಂಕ್ಷೆಯೆತ್ತೊಂದಿದ ||
ಜ್ಞಾನಪ್ರವೃತಮಾಯೆಯಿಂದೆ ತಪಮಂ ಕೈಕೊಳ್ವುದೆತ್ತಿಗಳ |
ಜ್ಞಾನಂ ಪಿಂಗಿ ಸುತತ್ತ್ವಮಂ ತಿಳಿದೆತ್ತಾರಯ್ವೊಡೇಂ ಚಿತ್ರಮೋ || ೪೨ ||

ವೇದಾಗಂ ಸ್ಮೃತಿವೇದಮೆಂದಿನಿತುಮಂ ಪೂಣ್ದೋದಿದೆಂ ಸತ್ಕಲಾ |
ಭೇದಂಗಳ್‌ ಪದಿನೆಂಟುಮಂ ತಿಳಿದೆನಾಪ್ತೋದ್ದೇಶದಿಂ ತರ್ಕದೊಳ್‌ ||
ಬಾದುಂ ಬರ್ಕುಡಿಗುಟ್ಟಿ ಪೊಟ್ಟುವಡೆದೆಂ ದುರ್ವಾದದಿಂದಿನ್ನೆಗಂ |
ಭೇದಂಬಟ್ಟೆರ್ದೆಗೆಟ್ಟು ಕೆಟ್ಟೆನಿತುಂ ಕಾಲಂಗಳೇಂ ಕರ್ಮಮೋ || ೪೩ ||

ನೆಗೞ್ದ ಜಿನತತ್ತ್ವಮಿರೆ ಬಗೆ |
ಮಿಗುವಿಗೆಗಂ ಪ್ರಾಣಮೊಡಲೊಳುಳ್ಳಿನೆಗಂ ನಾ ||
ಲಗೆಯುಂ ಪಲ್ಲುಂ ತ್ರಟವ |
ನ್ನೆಗಮೋದಿದೊಡಾಂ ಕುತತ್ತ್ವದೊಳ್‌ ಪುರುಳುಂಟೆ || ೪೪ ||

ವ || ಎಂದು ಮಿಥ್ಯಾಮತಮಪ್ಪ ಕುತತ್ತ್ವಮಂ ನಿರಾಕರಿಸಿ ವಿದ್ಯಾಮೋಹದಿಂದಂ ಸಂಧಿಸಿನಿಂದ ಮಾಯಾತಪಮಂ ಪತ್ತುವಿಟ್ಟುತ್ತಮಕ್ಷಮಾ ಮಾರ್ದವಾರ್ಜವ ಶೌಚ ಸತ್ಯ ಸಂಯಮ ತಪಸ್ತ್ವಾಗಾಂಕಿಚನ್ಯ ಬ್ರಹ್ಮಚರ್ಯಾಭಿದಾನ ದಶಕುಲ ಧರ್ಮನಿರ್ಮಳರೆನಿಸಿದ ಸುಧರ್ಮಾಚಾರ್ಯರ ಪಾದಪದ್ಮಮಂ ನಿಜೋತ್ತಂಸಂಗಳಂ ಮಾಡಿ ತದೀಯ ಪಾದಪದ್ಮಂಗಳಂ ಕರಪಲ್ಲವಂಗಳಿನೊತ್ತುತ್ತುಂ ಅಪಗತಮತಿಯಿಂ

ಕಟಪಪ್ರಾಚಂಚಜಾಳಾವೃತನೆನದಿಕ ಮೋಹಾಂಧನೆಂ ಮಾಯ್ದಮಾಯಾ
ತಪದೊಳ್‌ ಮಿಥ್ಯಾಪ್ರಪಂಚಪ್ರಬಳನೆನಿಸಿ ಸಂದಿರ್ದೆನಾನಿನೆಗಂ ನಿ |
ಸ್ತಪನೆಂದುಂ ಮಾರ್ಗಮಂ ಪೊರ್ದ್ಧಿದೆನೆನಗೆ ಶರಣ್‌ ಧರ್ಮದಿಂದತ್ತ ಮತ್ತಿ |
ಲ್ಲ ಪುನರ್ದ್ಧಿಕ್ಷಾಪ್ರಸಾದಂ ಸದಮಳನಿಖಿಳಾನೂನ ಸಜ್ಞಾನಚಕ್ಷೂ || ೪೫ ||

ವ || ಎಂದುಂ ತನ್ನಂ ತಾನೇ ನಿಂದಿಸಿ ಗುರುಗಳಂ ಗುರುಭಕ್ತಿಪೂರ್ವಕಂ ಬಂದಿಸಿ ಪರಮದೀಕ್ಷೆಯಂ ಕೈಕೊಂಡು ಪರಮಾರ್ಥನಿಷ್ಠಿತಾರ್ಥ ತಪೋರೂಪಮಂ ತಾಳ್ದಿ

ನಿಯತಂ ಪಂಚಮಹಾಬ್ರತಂ ಸಮಿತಿಯೆಂಬಯ್ದುಂ ಷಡಾವಶ್ಯಕ |
ಕ್ರಿಯೆ ಪಂಚೇಂದ್ರಿಯನಿಗ್ರಕ್ರಿಯೆ ಸಮಂತೊಳ್ಪೋತ್ತು ನಿಂದಣ್ಬುದಾ |
ರಯಮಸ್ನಾನಮಚೇಳಸಂಯಮಮದಂತೋನ್ಮಾರ್ಜನಂ ಧಾರಿಣೀ |
ಶಯನಂ ರೋಜೆನಿಸಿರ್ದ ಮೂಲಗುಣಮಿಪ್ಪರ್ತ್ತೆಂಟುಮಂ ತಾಳ್ದಿದಂ || ೪೬ ||

ವ || ಮತ್ತಂ ತ್ರಿದಂಡ ತ್ರಿಶಲ್ಯ್ಯ ತ್ರಿಗಾರವಂಗಳಂ ಕ್ರಮಕ್ರಮದಿಂ ಕೞಲ್ಚಿ ಕಳೆಯುತ್ತುಂ ಕ್ಷಿತ್ತಿಪಾಸಾ ಶೀತೋಷ್ಣದಂಶಮಶಕನಾಗ್ನಾಯರ್ತಿ ಸ್ತ್ರೀಚರ್ಯಾನಿಷದ್ಯಾ ಶಯ್ಯಾ ಕ್ರೋಶವಧಯಾಚನಾಲಾಭರೋಗ ತೃಣ ಸ್ಪರ್ಶಮಳಸತ್ಕಾರ ಪುರಸ್ಕಾರ ಪ್ರಜ್ಞಾಜ್ಞಾನಾದರ್ಶನಮೆಂಬ ದ್ವಾವಿಂಶತಿ ಪರೀಷಹಮುಮಂ ತನ್ನಂ ಮಿಗಲೀಯದೆ ತಳೆದುದೇವರೊಳಂ ಗುರುಗಳೋಳಮಾರ್ಗಗಮದೊಳಂ ನಂಬುಗೆಯುಂ ನಲ್ಮೆಯುಂ ಭಕ್ತಿಯು ಮನೂನಮಾಗೆ ಘೋರವೀರತಪೋನಿಯಮ ನಿಷ್ಠಿತನಾಗಿ ಗುರುಗಳನಗಲದೆ ಕೆಲವು ದಿವಸಮಿರೆಯಿರೆ

ಮಾನಿತ ತತ್ರಾರ್ಥಶ್ರಾ |
ದ್ಧಾನದಿನಾ ಸೂರ್ಯಮಿತ್ರಮುನಿಪತಿಗವಧಿ ||
ಜ್ಞಾನಂ ತೊಟ್ಟನೆ ಪುಟ್ಟಿದು |
ದೇನಂ ಪುಟ್ಟಿಸದು ತತ್ವರುಚಿ ಪುಟ್ಟಲೊಡಂ || ೪೭ ||

ವ || ಆ ಪ್ರಸ್ತಾವದೊಳ್‌

ಬುಧಸಂಘಾತಾರ್ಚಿತಾಂಘ್ರಿದ್ವಯ ಸತಸಿರುಹಂಗಪ್ರಮತ್ತಂಗೆ ಬೋಧಾಂ |
ಬುಧಿಗಂತಾ ಸೂರ್ಯಮಿತ್ರಬ್ರತಿಪತಿಗವಧಿಜ್ಞಾನಮೊಪ್ಪಿರ್ದುದಂ ಕಂ
ಡು ಧರಿತ್ರೀಸ್ತುತ್ಯತ್ಯುಜ್ವಲನಿರುಪದೇಹಪ್ರಭಾದಿವ್ಯಸರ್ವಾ |
ವಧಿಬೋಧಂ ತುಷ್ಟನಾದಂ ಪರಮಜಿನಮತತಾಂಭೋಜಿನೀರಾಜಹಂಸಂ || ೪೮ ||

ಇದು ಸಮಸ್ತ ವಿನಯಜನವಿನುತ ಶ್ರೀವರ್ಧಮಾನಮುನಿಂದ್ರ
ವಂದ್ಯ ಪರಮಜಿನೇಂದ್ರ ಶ್ರೀಪಾದಪದ್ಮವರ ಪ್ರಸಾದೋತ್ಪನ್ನ
ಸಹಜ ಕವೀಶ್ವರ ಶ್ರೀ ಶಾಂತಿನಾಥಂಪ್ರಣೀತಮಪ್ಪ
ಸುಕುಮಾರ ಚರಿತದೊಳ್‌ ಸೂರ್ಯಮಿತ್ರಾ
ಚಾರ್ಯಾವಧಿಜ್ಞಾನವರ್ಣ್ನನಂ.
ತೃತೀಯಾಶ್ವಾಸಂ