ಶ್ರೀ ಮತ್ಸುಧರ್ಮಮುನಿಪ |
ಸ್ವಾಮಿ ಮಹಾಗಾಧಬೋಧಬೋಧಿತಭವ್ಯ ||
ಸ್ತೋಮಂ ದರಹಸಿತದಿನಂ |
ದಾ ಮುನಿಗೆಂದಂ ಸರಸ್ವತೀಮುಖಮುಕುರಂ || ೦೧ ||

ಇದು ಮುನ್ನಂ ನಿನ್ನ ಕೆಟ್ಟುಂಗುರದೆಡೆಯನದಂ ಪೇೞ್ದ ಸದ್ವಿಧ್ಯೆ ತಾನಿಂ |
ತಿದುಮುನ್ನಂ ನಿನ್ನನೆನ್ನಲ್ಲಿಗೆ ಬರಿಸಿದ ದಿವ್ಯೋಪದೇಶಂ ಸಮಂ |
ತಿದು ಮುನ್ನಂ ನಿನ್ನ ತತ್ತ್ವಕ್ಕೆಳಸಿದ ಹಿತಮಂ ಮಾಡಿದಾ ಜೋಯಿಸಂ ಬಂ |
ದುದು ಕೈಕೊಳ್‌ ನಿನ್ನ ಚಿತ್ತಂ ಬಯಸುವ ವಿಲಸನ್ನೂತ್ನಸಜ್ಞಾನರತ್ನಂ || ೦೨ ||

ವ || ಎಂಬುದಮೀ ದಯೆಗೆ ಮಹಾಪ್ರಸಾದಮೆಂದು ಆಭಿವಂದನಮ್ಗೆಯ್ದು ತದೀಯ ಗುರುಪಾದಪದ್ಮ ಪಾದಚ್ಛಾಯಾಸನ್ನವರ್ತಿಗಳಾಗಿರ್ದು ಬೀೞ್ಕೊಂಡು ನಾನಾಜನಪದಂಗಳಂ ಯಥಾಕ್ರಮೋಕ್ತಕ್ರಮದಿಂ ವಿಹಾರಿಸುತ್ತಂ ಕತಿಪಯ ಸಂವತ್ಸ ರಂಗಳಂ ಕಳೆವುದುಮೊಂದು ದಿವಸಂ ಸುಧರ್ಮಾಚಾರ್ಯರುಜಯಂತ ಪರ್ವತದೊಳಧ್ಯಾತ್ಮ ಧ್ಯಾನಾಧೀನಮಾನಸರಾಗಿ ಘಾತಿ ಕರ್ಮಂಗಳಂ ಘತಿಸಿ ಕೇವಲವಿಭೂತಿಯಂ ಪಡೆದು

ಕುಪಿತಬಹುಬಂಧಮಂ ಪೞೆ |
ದು ಪಾಯ್ದು ಮುನಿಕುಂಜರಂ ತದೇಕಾಂತದಿನಿಂ ||
ತಪವರ್ಗ ಮಾರ್ಗದೊಳ್‌ ನಡೆ |
ದು ಪರಮಸುಖಮೆಂಬ ವನಮನೆಯ್ದಿದನಾಗಳ್‌ || ೦೩ ||

ವ || ಇತ್ತಲಾ ಮುನೀಂದ್ರನೇಕ ವಿಹಾರತ್ವದಿನನಶನಾದಿ ದ್ವಾದಶವಿಧ ತಪೋನುಷ್ಠಾನ ನಿಷ್ಟಿತನಾಗಿ

ಉಪವಾಸಪ್ರಚುರತೆಯಿಂ |
ವಪು ಗಿಡಿಗಿಡಿಜಂತ್ರಮಾದುದೆಂಬನ್ನೆವರಂ ||
ಕ್ಷಪಿಯಿಸಿ ಮುನೀಂದ್ರನನಶನ |
ತಪದೊಳ್‌ ತಱೆಸಂದ ಸಲವದೊಂದಾಶ್ಚರ್ಯಂ || ೦೪ ||

ಪಾರಣೆಯ ದಿನಂಗಳೊಳವ |
ಧಾರಿಸಿ ಜಠರಾಗ್ನಿ ನಂದದಂದದಿನರ್ಧಾ ||
ಹಾರಮನಾರೋಗಿಸುವಾ |
ಚಾರದಿನಳವಟ್ಟುದವರೊಳವಮೋದರ್ಯಂ || ೦೫ ||

ಆನಿನಿತು ಭೋಜ್ಯದಿಂ ಪೆಱ |
ತೇನುಮನುಣವೊಲ್ಲೆನೆಂದೆನೆಂದುಣ್ಬೆಡೆಯೊಳ್‌ ||
ತಾನಱೆದು ವೃತ್ತಿಪರಿಸಂ |
ಖ್ಯಾನತಪೋಯುಕ್ತನಾಗಿ ಸಂಯಮಿ ನೆಗೞ್ದಂ || ೦೬ ||

ಪರಿಹರಿಸಿದೆ ನಾಂ ವೃಷ್ಯೇ |
ಷ್ಟರಸಂಗಳನೆಂದು ನಿರ್ಮಳಾಚಾರಪುರ ||
ಸ್ಸರಮಾ ಮುನೀಂದ್ರನಾರ್ತೆಸ
ಗಿ ರಸಪರಿತ್ಯಾಗಮೆಂಬ ತಪಮಂ ತಳೆದಂ || ೦೭ ||

ವನಿತಾ ಪಶು ಪಂಡಕವ |
ರ್ಜ್ಯನಿವಾಸೋದ್ದೇಶದೆಡೆಗಳೊಳ್‌ ಚರಿಯಿಸುತುಂ ||
ಮುನಿಪತಿ ವಿವಿಕ್ತಶಯ್ಯಾ |
ಸನಮೆಂಬಯ್ದನೆಯ ತಪದೊಳುಪಗತನಾದೊಂ || ೦೮ ||

ವ || ತದನಂತರಂ ಕಾಯಕ್ಲೇಶಮೆಂಬಾಱನೆಯ ತಪಮನೆತ್ತಿಕೊಂಡು

ಮೞೆ ಭೋರ್ಭೋರೆಂದಹೋರಾತ್ರಮುಮುಡುಗದೆ ಕೊಳ್ವಲ್ಲಿ ಪೋೞಲ್ಗಳಿಂದ
ವ್ವಳಿಸುತ್ತುಂ ಬಂದು ಪೆರ್ವಾವುಗಳುಗಿಬಗಿಮಾೞ್ಪಿಲ್ಲಿ ಮೆಯ್ಯಂ ಜಳೂಕಾ |
ವಳಿಗಳ್‌‍ ಪೀರ್ವಲ್ಲಿ ಮರ್ವುರ್ವಿಸೆ ಸಿಡಿದು ಸಿಡಿಲ್‌ ಬಂದು ಪೊಯ್ವಲ್ಲಿ ಹೈಮಾ |
ಚಳಮಿರ್ಪ್ಪಂತಾಗಳಿರ್ದಂ ಮರಮೊದಲೊಳಭೀತಾತ್ಮಕಂ ಯೋಗಿನಾಥಂ || ೦೯ ||

ಆಳ್ಕದೆ ಬೆಚ್ಚದೆ ಬೆದಱದೆ |
ಬೆಳ್ಕುತ್ತಡಹಡಿಸಿ ಕುಸಿದು ಕುಂದಿರದೆ ಕೊರ ||
ಲ್ಮುೞ್ಕೆ ಪರಿವುದಕದೊಳ್‌ ಮನ |
ಮುೞ್ಕದೆಯೆರ್ಜಂಬರಂ (?) ದಿಗಂಬರನಿರ್ದಂ || ೧೦ ||

ಇನನಿಂದುಜ್ಯೋತ್ಸ್ನೆಯಂ ತಾಳ್ದಿದನನಲನನವಷ್ಪಂಭಮೋಡಿತ್ತು ಮರ್ತ್ಯಾಂಗ
ನಿಕಾಯಂ ಬಿಬ್ಬಿನಂ ಬೆಕ್ಕನೆ ಬಿರಿದಪುದೇಗೆಯ್ವಮೀ ಲೀಕಮಂ ಹೈ |
ಮನಗಂ ಕೈಕೊಂಡುದೆಂಬನ್ನೆಗಮೊದದವಶ್ಯಾಯದೊಳ್‌ ನಿಂದನೇಕಾಂ |
ತನಿವಾಸಂ ಬೆಳ್ಳವಾಸಂ ನಿಶೆಯೊಳೆಸೆಯೆ ನೆರ್ವಾಣದೊಳ್‌ ಯೋಗಿನಾಥಂ || ೧೧ ||

ಕೈಕಾಲ್‌ ಸುರುಳ್ದು ನಡುಗದೆ |
ಸೈಕಾಗ್ರಮನಸ್ಕನಾಗಿ ಭರವಸದಿಂ ಬ ||
ಪ್ಪಯ್ಕಿಲ್ಗಳ್ಕದೆ ಪಲ್ಯಂ |
ಕೈಕಾಸನದಿರ್ಪ್ಪ ಸಾಹಸಂ ಪೆಱರ್ಗುಂಟೇ || ೧೨ ||

ನದನದ್ಯುದ್ಭೂತವಾರಿ ಪ್ರಸರಮೆಸರನೀರಂದದಿಂ ಕಾಯ್ದುದಾಕಾ |
ಶದಿಶೌಘಂ ತೀವ್ರದಾವಾಗ್ನಿವೊಲುರಿದಪುದುರ್ಬೀತಳಂ ಕಾಯ್ದಲೋಹ |
ಕ್ಕಿದು ಮೇಲೆಂಬಂದಮಾದತ್ತ ಹಿಮಕಿರಣಸಂತಾಪದಿಂದೆಂಬ ವೈಶಾ
ಖದೊಳಾ ಯೋಗಿಶ್ವರಂ ಕಲ್ನೆಲೆ ನೆಲಸಿ ಹಿಮಾದ್ರೀಂದ್ರಮಿರ್ಪಂತಿರಿರ್ದಂ || ೧೩ ||

ಶಿರಮನಿನರಶ್ಮಿ ಪದತಳ |
ಸರೋಜಮಂ ತಪನತಪ್ತ ಶಿಖರಾಗ್ನಿ ತನೂ |
ದರಮಂ ಕ್ಷುಧಾನಳಂ ಸುಡೆ |
ಕರಿಂಕುವರಿದಗಮಘವಿಘಾತಂ ಪೋಲ್ತಂ || ೧೪ ||

ವ || ಅಂತು ಬಾಹ್ಯತಪದೊಳಸಹ್ಯಮಾನ ಸಾಹಸನಾಗಿ ಮತ್ತಮುತ್ತರ ತಪದೊಳುತ್ತರೋತ್ತರಂ ನೆಗೞ್ದು

ಪರಮಾಳೋಚನದೊಳ್‌ ಪ್ರತಿಕ್ರದೊಳ್ತದ್ದ್ವೌವಿನೇಕತ್ವದೊಳ್‌ |
ಪರಿಹಾರಕ್ರಿಯೆಯೊಳ್‌ ವಿನಿರ್ಮಳತಪಸ್ಯೋಪಸಾನದ್ವಂದ್ವದೊಳ್‌ |
ನಿರುತಂ ಛೇದವಿಕಲ್ಪದೊಳ್‌ ನಿಬಿಡ ಕಾಯೋತ್ಸರ್ಗದೊಳ್‌ ಶುದ್ಧಿತ |
ಳ್ತಿರೆ ದೋಷಪ್ರತಿಕಾರ ಸಾರತಪಮಂ ತತ್ತಾಪಸಂ ತಾಳ್ದಿದಂ || ೧೫ ||

ಸುಚರಿತದರ್ಶನಬೋಧೋ |
ಪಚಾರಮೆಂಬಿಬಱೊಳುಚಿತ ವಿನಯದಿನಾದಂ |
ರಚಿಯಿಸಿ ವಿನಯಸಮನ್ವಿತ |
ನಚಾಲ್ಯಮನನಖಿಳವಿನಯಮಂ ಪ್ರಕಟಿಸಿದಂ || ೧೬ ||

ಗುರುಶೈಕ್ಷ್ಯಗ್ಲಾನ ಸಂಘಪ್ರವಣಗಣ ತಪೋನಿಷ್ಠಿತಾನೀತಸಾಧೂ |
ತ್ಕರದೊಳ್‌ ಮತ್ತಂ ಮನೋಜ್ಞಪ್ರತತಿಕುಳದೊಳಾದೊಂದವಸ್ಥಾವಿಚಿಂತಾಂ |
ತರದೊಳ್‌ ಕೈಕೊಂಡು ಪರ್ಯಷ್ಠಿಯನನವರತಂ ಮಾೞ್ದ ಶೀಲೋತ್ಕರಂ ಕೂ |
ಡಿರೆ ವೈಯ್ಯಾಪೃತ್ಯಮೆಂಬೀ ತಪದೊಳೆಸಗಿದಂ ಸೂರ್ಯಮಿತ್ರಬ್ರತೀಂಧ್ರಂ || ೧೭ ||

ಮುನಿಪತಿ ವಾಚನೆಯಿಂ ಪೃ |
ಚ್ಛನೆಯಿನನುಪ್ರೇಕ್ಷೆಯಿಂ ತದಾಮ್ನಾಯದಿನೊ ||
ಯ್ಕನೆ ಧರ್ಮಕಥನದಿಂದಂ |
ವಿನುತಸ್ವಾಧ್ಯಾಯಮೆಂಬ ತಪಮಂ ತಳೆದಂ || ೧೮ ||

ದೊರೆಯಲ್ಲದ ಬಾಹ್ಯಾಭ್ಯಂ |
ತರೋಪಧಿಯಮುಳ್ಚೆ ದನಾತರಂ ವ್ಯುತ್ಸರ್ಗೋ ||
ತ್ತರತಪದೊಳತಿವಿಶುದ್ದಾಂ |
ತರಂಗನೆನಿಸಿದನಮಾನುಷಂ ಮುನಿತಿಲಕಂ || ೧೯ ||

ಖಳರೌದ್ರಾರ್ತಧ್ಯಾನಂ |
ಗಳೆಂಬೆರಡುಮಂ ಬಿಸುಟು ಧರ್ಮಶುಕ್ಲಧ್ಯಾನಂ ||
ಗಳೊಳಾಜ್ಞಾಪಾಯವಿಪಾ |
ಕಳೋಕ ವಿಚಯಮನನಾಕುಲಂ ಮುನಿ ತಳೆದಂ || ೨೦ ||

ವ || ಇಂತಭ್ಯಂತರಪದೊಳಂತರಂಗ ಸಂಶುದ್ಧನಾಗಿ ಸಮಾಚರಿಸಿ ಜಿನಕಳ್ಪಿತಾ ಚರಣಮಾರ್ಗದಿಂ ಗ್ರಾಮನಗರ ಖೇಡಖರ್ವಡಮಡಂಬ ಪಟ್ಟಣ ದ್ರೋಣಾಮುಖ ಸಂವಾಹಗೊಳ್‌ ವಿಹಾರಿಸುತ್ತುಂ ವಿಹರಣಕ್ರಮದಿಂ ವತ್ಸವಿಷಯದ ಕೌಶಂಬೀ ನಗರಕ್ಕೆ ವಂದದಱ ಪೂರ್ವೋತ್ತರದ ದಿಶಾಭಿರಾಮಮಪ್ಪುದಯವಾತಪರ್ವತದ ಸಿದ್ಧಕ್ಷೇತ್ರಂಗಳುಮಂ ಚೈತನ್ಯನಿಕೇತನಂಗಳುಮಂ ತ್ರಿಃಪ್ರದಕ್ಷಿಣಂಗೆಯ್ದು

ಪರಮಮುನೀಶ್ವರನರ್ಹ |
ತ್ಪರಮೇಶ್ವರಚರಣಕಮಲಯುಗಳಕ್ಕತಿ ನಿ ||
ರ್ಭರ ಭಕ್ತಿಭರದಿನತ್ಯಾ |
ದರದಿಂ ಪರಿಣಾಮಶುದ್ಧಿಯಿಂ ವಂದಿಸಿದಂ || ೨೧ ||

ವ || ಅಂತಲ್ಲಿಯ ಚೈತ್ಯಾಲಯಂಗಳಂ ವಂದಿಸಿ ತದ್ವಾಸರದೊಳ್‌ ತೀರ್ಥೋಪವಾಸಂಗೆಯ್ದು ಪಾರಾಣಾದಿನದೊಳ್‌ ಚರ್ಯಾಮಾರ್ಗದಿಂ ಕೌಶಂಬೀನಗರಾಭಿಮುಖಂ ಸತ್ವಗುಣಾಧಿಕಕ್ಲಿಶ್ಯಮಾನಾವಿನಯರೊಳ್‌ ಮೈತ್ರೀಪ್ರಮೋದ- ಕಾರುಣ್ಯ ಮಾಧ್ಯಸ್ಥ ವೃತ್ತಿಯಂ ಭಾವಿಸುತ್ತುಮತಿವಿಲಂಬಿತಗತಿವ್ಯಪೇತನುಂ ಯುಗದಪ್ರಮಾಣಮೇದಿನೀತಳ ನಿರೀಕ್ಷಣನುಮಾಗಿ ಪುಗಲ್‌ತಕ್ಕ ಮನೆಗಳೊಳ್‌‍ ಚಂದ್ರಗತಿಯಿಂ ಚರಿಗೆವುಗುತ್ತುಂ ಕಾಶ್ಸ್ಯಪಿತನೂಜನಪ್ಪಗ್ನಿಬೂತಿಯ ಮನೆಯಂ ಭೂಮಿದೇವಾವಾವಾಸಮಪ್ಪುದಱೆಂ ಪುಗುವುದುಮಾಗಳವರ ಬರವನಾ ವಿಪ್ರವರಂ ಕಂಡು ಸೂರ್ಯಮಿತ್ರೋಪಾಧ್ಯಾಯರಪ್ಪರೇನುಂ ತಪ್ಪಿಲೆಂದು ಪಿರಿದುಮನುರಾಗದಿಂ ರಾಗಸಿ ಪರಿತಂದು

ಇದಿರ್ಗೊಂಡುದ್ದದೊಳೇಱಲಿಕ್ಕಿ ಚರಣಪ್ರಕ್ಷಾಳನಂಗೆಯ್ದಸ |
ನ್ಮುದದಿಂದರ್ಚಿಸಿ ಭಕ್ತಿಯಿಂದೆ ಪೊಡೆವಟ್ಟಾಗಳ್‌‍ ಮನಶ್ಯುದ್ಧಿಯಿಂ |
ಮೃದುವಾಕ್‌ ಶುದ್ಧಿಯಿನನ್ನ ಶುದ್ಧಿಯಿನೊಱಲ್ದಾಹಾರಮಂ ಶುದ್ಧಮ |
ಪ್ಪುದನಾತಂ ನವಪುಣ್ಯಮೊಂದಿರೆ ಮಹಾಪುಣ್ಯಾಸ್ಪದಂಗಿಕ್ಕಿದಂ || ೨೨ ||

ಪುದಿದೞ್ತೆಭಕ್ತಿದಯೆಯಿಂ |
ದುದಾತ್ತಶೀಲ ಕ್ಷಮಾಗುಣಂ ಶೌಚಮೆನಿ ||
ಪ್ಪುದಿತೋದಿತಮೇೞೞೊ |
ಳುದಾತ್ತಮತಿ ಕೂಡಿ ಮುನಿಗೆ ದಾನಮನಿತ್ತಂ || ೨೩ ||

ವ || ಅಗಳಾ ಪರಮಮುನೀಶ್ವರಂ ಕಾಯಸ್ಥಿತಿಯುಂ ನಿರ್ವರ್ತಿಸಿ ಪೋಪಾಗಳಗ್ನಿ ಬೂತಿ ಮನದೆಱಕದಿನೆಱಗಿ ಪೊಡೆವಟ್ಟು ನಿಮ್ಮ ಪ್ರಸಾದದಿನೆಮಗಿನಿತು ಮಹಾ ವಿಭೂತಿಯುಂ ಖ್ಯಾತಿಯುಮಾಯ್ತು ನಿಮ್ಮ ಕಿಱೆಯ ಗುಡ್ಡಂ ವಾಯುಭೂತಿಯಾಯಿರ್ದನೆ ಪರಸಿ ಪೋಪಿರ್‌ ಬಿಜಯಂಗೆಯ್ಯಿಮೆಂದು ನಿಜಾನುಜನ ಮನೆಗೊಡಗೊಂಡು ಬರ್ಹುದುಮಾತನುಮವರಂ ಕಾಣಲೊಡನಱೆದುಮವಿನಯ ಸ್ವಭಾವದಿನುಱದೆ ನಿಜ ಸಬಾಭ್ಯಂತರಲೋಹಸನಾರೂಢಂ ಗರ್ವಪರ್ವತಾರೂಢನಾಗಿ

ಅಸಹಿಷ್ಣು ದೆಸೆಗೆ ಬೆಬ್ಬೆಸೆ |
ವೆಸೆದಿರ್ದೆಡೆಯಿಂದಮೇೞಲೆಸಗದವಷ್ಪಂ |
ಭಿಸಿ ವಿಪ್ರಸಭೆಗೆ ವಕ್ಖಾ |
ಣಿಸುತ್ತುಮುದ್ಗೀವನವರನವಮಾನಿಸಿದಂ || ೨೪ ||

ವ || ನಿಜಾಗ್ರಜಂಗೆ ಮೊದಲಾಗಿಯುಮೇಱಲಿಕ್ಕದೆಯು ಮಾದರಿಸದೆಯುಂ ಮೂಗಂ ಮೇಲೆತ್ತಿಕೊಂದೊರ್ಪುಮಗ್ನಿಣೂತಿ ತನ್ನ ತಮ್ಮನುಱದಿರ್ದುದನಱೆದು ಕರಮೆ ಸಿಗ್ಗಾಗಿ ಮುಂದೆ ನಿಂದಿರ್ದು

ಜನನಿಯೊಡವುಟ್ಟದಂ ಮಾ |
ವನುಪಾಧ್ಯಾಯಂ ಮುನೀಶ್ವರಂ ದಯೆಯಿಂ ನಿ |
ನ್ನನೆ ಪರಸಲ್ಬಿಜಯಂಗೆಯೆ |
ನೀನುದಾಸೀನನಾಗಿ ಕಡೆಗಣಿಸುವುದೇ || ೨೫ ||

ವ || ಎಂಬುದು ವಾಯುಭೂತಿ ಸೂರ್ಯಮಿತ್ರ ಭಟ್ಟಾರಕರ ಮೊಗಮಂ ನೋಡಿ

ಮನೆಯೊಳ್ಮಯ್ಮೆಗೆ ಬಾತುಕೊಂಡು ಸಿರಿಯೊಳ್ಕಣ್ಗಾಣದೊಡ್ಡಯ್ಸುವಂ |
ದಿನ ನೀರ್ಮಾರ್ಗೆಲಗೆ ನಿಮ್ಮನಾವಱೆಯೆಮೆಂದೆಮ್ಮಂ ತೊಡಂಕಿಕ್ಕುವಂ |
ದಿನ ಭಿಕ್ಷಾನ್ನಮನಿಕ್ಕುವಲ್ಲಿ ಸತಿಯಂ ಬೇಡೆಂದು ಕಣ್ಕೆತ್ತುವಂ |
ದಿನ ಸೊರ್ಕ್ಕಕ್ಕಟ ಮುಕ್ಕುವೋಗಿ ಕಡೆಯೊಳ್‌ ಭೈಕ್ಷಕ್ಕೆ ಪಕ್ಕಾದಿರೇ || ೨೬ ||

ಎಮಗಾವುದು ತೀರದ ವ
ಸ್ತು ಮಾವನಿಂದೆಂದು ನಚ್ಚಿ ಬಂದೊಡೆ ನೀನ |
ಶ್ರಮದೊಡ್ದಿದ ಗೊಡ್ಡಮ |
ನೆಮ್ಮಲೆ ನಲಿದಾಡಿ ಕಾಡಿದುದನದಱೆವೋ || ೨೭ ||

ವ || ಅಂತುಮಲ್ಲದೆಯುಂ

ನೀಂ ಬೇವಾದೊಡೆ ನಿನ್ನ ಕು |
ಟುಂಬಿನಿಯುಂ ಕಯ್ಪೆ ಸೊರೆಯ ಕುಡಿಯೇಂ ಮಿಡಿಯೇ |
ನೆಂಬಂತೆ ದರಸಿಯಾದಳಿ |
ದೇಂ ಬಳ್ವಳಬಳೆದ ಬಂಧುತನಮಿನಿದಾಯ್ತೋ || ೨೮ ||

ವ || ಎಂದು ಬಾಯ್ಗೆವಂದದಂದದೊಳಾ ದುರಾತ್ಮನಾ ಮಹಾತ್ಮನನಪ್ರತ್ಯಾಖ್ಯಾನ – ಕ್ರೋಧಕಷಾಯೋದಯಮಾನ ಗರ್ವದಿನವಮಾನಿಸಿ ತಿರಸ್ಕರಿಸಿಯುಮಗ್ನಿ ಭೂತಿಯನುಭೂತಂ ಮಾಡಿ

ನಮಗೀ ಸಂಯಮಿ ಮಾವನೋದಿಸಿದುಪಾಧ್ಯಾಯಂ ಗುಣಾಧೇಯನು
ತ್ರಮನುರ್ಬಿಸುತನೆಂದು ಬಣ್ಣಿಸಿ ಕರಂ ಕಯ್ಕೊಂಡು ನೀಂ ಪೇೞವೇ |
ೞ್ಕುಮೆ ನಾಮೀತನ ಕೈಯ್ಯೊಳಂದು ಪರಿಭವಂಬಟ್ಟಂದು ಮುಂ ಭಿಕ್ಷುಕ |
ಕ್ರಮದಿಂದೇಳಿದರಾಗಿ ಭಾರದ ಭವಂ ಬಂದಂದಮೇಂ ಪೇೞದೇ || ೨೯ ||

ತಿರಿದುಂಡು ಕಚ್ಚುಟಮನು |
ಟ್ಟು ರಚ್ಚೆಯೊಳ್ಪಟ್ಟುಮುಟ್ಟುಗೆಟ್ಟುಬ್ಬೆಗಮು ||
ಬ್ಬರಿಸಿ ನಮೆದುದನದಂ ಮಱೆ |
ದಿರೆ ಮಾವಂ ದೇವನಾದೊನೇ ನಮಗೀಗಳ್‌‍ || ೩೦ ||

ನೀರುಂ ನೇಣುಮನಾವಗಂ ತೊಱೆದುದಂ ಮೇಣ್ಕಾಣೆಯೋ ಬ್ರಾಹ್ಮಣಾ |
ಚಾರಪ್ರಕ್ರಿಯೆಯಿಲ್ಲದಿರ್ದಿರವನೇನಾರಯ್ಯೆಯೋ ಕಂಡಗಂ
ಡಾರುಂ ನಾಣ್ಚುವ ಮಾರ್ಗದೊಳ್‌ ನಡೆಯುತಂ ನಾಣ್ಗೆಟ್ಟದಂ ನೋಡೆಯೋ |
ಪಾರಿಬ್ರಾಜಕಮೆಂದಭಿಷ್ಟುತೆ ಗೆಯಲ್‌ ನಿನ್ನೊಲ್ಗುಣಂ ಮಾಸದೇ || ೩೧ ||

ಪಡೆಯಲ್‌ ಬಾರದ ಕುಲಮಂ |
ಪಡೆದು ಬೞೆಕ್ಕದನೆ ನೀರೊಳರ್ದಿದೆ ನೀನುಂ ||
ಪಡೆವೈ ಪ್ರಾಯಶ್ಚಿತ್ತಮ |
ನೆಡಂಬಡಿವರಿಂದಮಿಂದು ನಿನಗಾದುದಱೆಂ || ೩೨ ||

ವ || ಅದಲ್ಲದೆಯುಂ

ಸವಣನಾದರಿಪುದು ಕರ |
ಮವಿರುದ್ಧಂ ಕೞ್ತೆಯಾಗಿ ನಾಯಾಗಿ ಬೞೆ ||
ಕ್ಕ ವರಾಹನಾಗಿ ಚಾಂಡಾ |
ಲವಂಶದೊಳ್‌ ಪುಟ್ಟುವುಜ್ಜುಗಂ ನಿಮಗಾಯ್ತೇ || ೩೩ ||

ವ || ಎಂದು ನುಡಿವುದುಮಾ ಪಾಪಾಶ್ರಯ ಪರಿಣಾಮ ಪರಿಣತಿಯಿಂ ತನಗಾ ಕಾಷ್ಟಯೋನಿ ಚತುಷ್ಟಯದೊಳಾಯುಷ್ಯಂ ಕಟ್ಟುವುದುಮಾ ಪ್ರಸ್ತಾವದೊಳಾ ಮಹಾಮುನೀಶ್ವರನುತ್ತಮ ಕ್ಷಮಾಸ್ವರೂಪಮೆ ರೂಪುಗೊಂಡಂತೆ ಪರಮೋಪಶಮಚಿತ್ತನಾಗಿ

ಗಾಹೆ || ಣಿಂದಂತಂ ಸಿಳಹಂತಂ ಸುತ್ತುಂ ಮಿತ್ತುಂ ತಹೇವ ಸುಹದುಖ್ಖಂ
ಜೋಸಮಬಾವಾಇ ಪೆಚ್ಛಾಇ ಸೋಸಮಣೋ ಸೋಯ ಪಚ್ಛಾಇಯೊ || ೩೪ ||

ಕ್ಷಮೆಯ ಮೊದಲ್‌ ಸಮತೆಯ ಬಿ |
ತ್ತು ಮೊದಲ್‌ ಸೈರಣೆಯ ಮೊತ್ತಮೊದಲೆನೆ ನೆಗೞ್ದೆ ||
ರ್ದ ಮನುಷ್ಯನಾವನಾತನೆ |
ಸಮಾನನಾತನೆ ಮುನೀಂದ್ರನಾತನೆ ದೇವಂ || ೩೫ ||

ಪಗೆಯಾವುದು ಕೆಳೆಯಾವುದು |
ಬಗೆವೊಡೆಭಾವಿಸುವೊಡೆಂದು ನೋಡುವೊಡೆಂದುಂ |
ಪಗೆ ಕರ್ಮಮೆ ಕೆಳೆ ಧರ್ಮಮೆ |
ಜಗದೊಳ್ಮುನಿಪತಿಗೆ ಪರಮಜಿನಪತಿಮತದಿಂ || ೩೬ ||

ಮುನಿವವರುಂ ಕೂರ್ಪವರುಂ
ಮುನಿಸುಂ ಕೂರ್ಮೆಯುಮನುಂಟುಮಾಡುವ ಪದದೊಳ್‌
ಮುನಿಯದ ಕೂರದ ಮುನಿಸದ
ಮುನಿಪತಿ ಭಾವಿಪೊಡೆ ತಾನೆ ಜಿನಪತಿಯಲ್ತೆ || ೩೭ ||

ವ || ಎಂದು ವಿಶುದ್ಧಾಂತರಂಗದಿಂ ವಿವಕ್ಷೆಯ್ಯುತ್ಯುಂ

ಒಸೆಯದೆ ಬೆಸೆಯದೆ ಪರಿಭಾ
ವಿಸುತ್ತಮಿಂತಗ್ನಿ ವಾಯು ಭೂತಿಗಳ ಗುಣ ||
ಕ್ಕೆ ಸಮಾನಚಿತ್ತನಾಗಿಯು
ಮಸಮಾನಮನಸ್ಕನಾದನೆನಗಿದು ಚೋದ್ಯಂ || ೩೮ ||

ವ || ತದನಂತರಂ ಸೂರ್ಯಮಿತ್ರಾಚಾರ್ಯರಲ್ಲಿಂ ಪೊಱಮಟ್ಟುದಯವಾತ ಪರ್ವತಕ್ಕಾಗಿ ನಡೆವುದುಮಗ್ನಿಬೂತಿಯುಮವರ ಬೆಂಬೞೆಯನೆ ತಗುಳ್ದು ಪೋಗಿ ತನ್ನಹೀಂದ್ರೋಪಕಂಟದೊಳ್ಮೊೞ್ಗೆ ಪೊಡೆವಟ್ಟು ನಿಮ್ಮಡಿ ನಿಮ್ಮನಾ ಪಂಚಮಹಾಪಾತಕನ ಮನೆಗೊಡಗೊಂಡುಯ್ವನೇಕಾಪವಾದೋಪಸರ್ಗಂಗಳಂ ಮಾಡಿದೆನಾ ದೋಷಮುಂ ಪ್ರಾಯಶ್ಚಿತ್ತದೊಳೇಗೆಯ್ದು ತಿರ್ವುದಲ್ತೆನಗೆ ನಿಮ್ಮಡಿ ದೀಕ್ಷೆಯಂ ದಯಂಗೆಯ್ಯಿಮೆಂದು ತತ್ಕಾಳಿಕಕಾಲಬ್ಧಿಯಿಂ ಸಂವೇಗವೈರಾಗ್ಯಪರನಾಗಿ ಪಿರಿದುಮಾಗ್ರಹದಿಂ ಕೀಱೆ ಮೀಱೆ ಬೇಡಿದೊಡಲ್ಪಾಯಷಮಾಸನ್ನಭವ್ಯನಪ್ಪುದಂ ಜಲಕ್ಕನಱೆದು ಶುಭ ಲಗ್ನದೊಳ್‌ ಜಾತರೂಪಧರನಂ ಮಾಡಿ

ಇವು ಗುಪ್ತಿಗಳಿವು ಸಮಿತಿಗ
ಳಿವು ನೆಗೞ್ದಾವಶ್ಯಕಂಗಳಿವು ಶಿಕ್ಷೆಗಳಿಂ
ತಿವು ಭಾವನೆಗಳ್‌ ಭಾವಿಪೊ |
ಡಿವು ಚಾರಿತ್ರಂಗಳೆಂದನೇಕೋಕ್ತಿಗಳಿಂ || ೩೯ ||

ವ || ನಿಯಮಚಾರ ಪ್ರಭೃತಿ ಪರಮಾಗಮಂಗಳನೋದಿಸುತ್ತಂ ನಾನಾ ಜನಪದಸ್ಥಾನೀಯಂಗೊಳ್‌ ಸದ್ಧರ್ಮಪ್ರತಿಭೋದನಾರ್ಥಂ ವಿಹಾರಸುತ್ತಂ ವಿನಯ ಜನಾಂತರಂಗೋಚಿತಮಮಪ್ಪಂಗ ವಿಷಯಮಂ ವಿಷಯಮುಕ್ತರ್ಪೊಕ್ಕು ತನ್ನಹೀಮಂಡಳ ಮಂಡನಮೆನಿಸಿದ ಚಂಪಾನಗರ ಮನೆಯ್ದಿದರಲ್ಲಿ

ಬೆಳಗೆಯ್ಗಳ ಕುಳಿರ್ಪ ಪುೞೆ |
ಲ್ಗಳ ತುೞುಗಿ ತಳಿರ್ತ್ತ ನಂದನಂಗಳ ಪೆಂಪಂ ||
ತಳೆದು ಸೊಗಯಿಸುವ ಕೃತಕಾ
ಚಳತತಿಗಳ ಸಿರಿ ಕರಂ ಮನೋಹರಮದೞೊಳ್‌‍ || ೪೦ ||

ಪುದಿದ ತಮಾಲಮಿಲ್ಲದ ಲತಾಲಯಮಿಲ್ಲದ ಚಂಪಕಂಗಳಿ |
ಲ್ಲದ ಸಹಕಾರಮಿಲ್ಲದ ಸರೋವರಮಿಲ್ಲದ ರಾಜಹಂಸಮಿ |
ಲ್ಲದ ಶುಕರಾಜಿಯಿಲ್ಲದ ಮದಾಳಗಲಿಲ್ಲದ ತಣ್ಬುೞೆಲ್ಗಳಿ |
ಲ್ಲದ ಪುಳಿನಂಗಳಿಲ್ಲದೆಡೆಯಿಲ ತದುರ್ಬಿಯೊಳೆಲ್ಲಿ ನೋೞ್ಯೊಡಂ || ೪೧ ||

ತರುನಿವಹಕ್ಕೆ ತಮ್ಮದಟೆ ತಮ್ಮ ವಿಲಾಸಮೆ ತಮ್ಮ ಚೆಲ್ವೆ ತ |
ಮ್ಮರಸೆ ಪೊದಳ್ದಸಲ್ಗೆ ಸಲೆ ತಮ್ಮ ವಿಭೂತಿಯಪೆರ್ಚೆ ಕೋರಕಾರಂ |
ಕುರ ವರಪತ್ರ ಪುಷ್ಪ ಫಳಪಕ್ವಚಯಂಗಳಿನೆಂತು ನೋೞ್ಪಡಂ |
ನಿರುಪಮಮಾಗಿ ಕಣ್ಗೆ ಕರಮೊಪ್ಪಿದವಾಮ್ರಮಹೀಜರಾಜಿಗಳ್‌ || ೪೨ ||

ಪ್ರವರೋದ್ಯಾನವನಂಗಳಿಂ ಪ್ರವಿಲಚಚ್ಛಾಳೀವನಕ್ಕಾಗಿ ಪಾ |
ಱುವ ಕೀರಾವಲಿ ಪುಷ್ಪವಾಟದಿನಗಲ್ದಬ್ಚಾಕರಕ್ಕಾಗಿ ಪೊ |
ರ್ದುವ ಮತ್ತಭ್ರಮರಾಲಿ ಪೇರ್ಗೆಱೆಗಳಿಂ ಪುಂಡ್ರೇಕ್ಷುವಾಟಕ್ಕೆ ಪೊ |
ಣ್ಮುವ ಪೇರರ್ಬ್ಬಿಗಳೆತ್ತಲುಂ ಸೊಗಯಿಕುಂ ಚಂಪಾಪುರೋಪಾಂತದೊಳ್‌ || ೪೩ ||

ವ || ಅಂತಾ ಪುರೋಪಾಂತದ ನಂದನವನಪ್ರದೇಶಮನೆಯ್ದೆವರ್ಪಾಗಳ್‌‍

ಅರವಿಂದೋತ್ಪಲ ಮಲ್ಲಿಕಾಪ್ರಸವವಸೌರಭ್ಯಂಗಳಂ ಪೇಱೆ ಬ |
ರ್ಪೆಲರುಂ ನಿರ್ಭರಭಕ್ತಿಯಿಂದಮಿದಿರ್ವರ್ಪ್ಪಂತಾಯ್ತು ಕಾದಂಬ ಭೃಂ |
ಗರವಂ ಕೀರ ಚಕೋರ ಸಾರ ಸಮಯೂರಾರಾವದಿಂ ಬನ್ನಿಮಿ |
ತ್ತಿರಿಮೆಂಬಂತೆವೊಲಾಯ್ತು ತನ್ಮುನಿಯುಗಕ್ಕಾನಂದಂ ನಂದನಂ || ೪೪ ||

ವ || ಆ ಪ್ರಸ್ತಾವದೊಳ್‌

ವನಜಾತಾಕರಶೀಕರಪ್ರಕರ ಸಾರಾರದಿಂ ನಾಂದು ನಂ |
ದನನಾನಾಪ್ರಸವ ಪ್ರಭೂತಮಕರಂದಾಮೋದಮಂಮ್‌ ತಂದು ನೂ |
ತನಚೂತಾವನಿಜಾತಗುಚ್ಛನಿವಹವ್ಯಾಜಂಗಳೊಳ್‌ ನಿಂದು ಮೆ |
ಲ್ಲನೆ ತಣ್ಪಂ ತನಿಗಂಪುಮಂ ಪದೆದು ತೀಡಿತ್ತೊಂದು ಮಂದಾನಿಲಂ || ೪೫ ||

ವ || ಅಲ್ಲಿಂ ಬೞೆಕ

ಇದು ಪುಣ್ಯಕ್ಷೇತ್ರಮಿ ಇರ್ದುದೆ ದುರಿತಹರಕ್ಷೇತ್ರಮೀ ಮೆಯ್ಯೊಳೀ ತೋ |
ರ್ಪುದೆ ಸಿದ್ಧ ಕ್ಷೇತ್ರಮೆಂದಾದರದಿನಿವರ್ಗೆ ತೋರ್ಪಂತುಟಾಗಿರ್ದುದಾ ಬೇ
ಗದೊಳೆತ್ತಂ ವಂದನಾ ಭಕ್ತಿಯಿನನವರತಂ ಬಂದು ಬಂದಾಗಳುಂ ಕುಂ |
ದದೆ ನಿರ್ವಾಣೋರ್ವಿಯಂ ಪೂಜಿಸುವಖಿಳವಿನೇಯೋತ್ಕರಾಶೇಶಲೋಕಂ || ೪೬ ||

ವ || ಅಂತಶೇಷ ಕರ್ಮನಿರ್ಮೂಲನಕರಮಂ ದ್ವಾದಶ ತೀರ್ಥಕರನುಂ ಪರಿತ್ಯಕ್ತ ಸಕಲ ವಸುಂಧರಾತಳಾಧಿರಾಜ್ಯನುಂತ್ರಿಜಗತ್ಪೂಜ್ಯನೆನಿಸಿದ ಶ್ರೀವಾಸುಪೂಜ್ಯ ಭಟ್ಟಾರಕರ ಪರಿನಿರ್ನಾಣ ಕ್ಷೇತ್ರಮಂ ಕಂಡು ಮೂಱುಸೂೞ್ ಬಲವಂದು ಕೈಗಳಂ ಮುಗಿದು

ಜಯಮದನಮದವಿಮರ್ದನ |
ಜಯ ಸಕಳವಿನೇಯನಿವಹಸಖ ಜಯ ಭುವನ ||
ತ್ರಯಶಿಖರಶಿಖರಶೇಖರ |
ಜಯ ನತಸುರಖಚರದನುಜಮನುಜಾಧೀಶಾ || ೪೭ ||

ಜಯಜಯ ವಾಸುಪೂಜ್ಯ ಸುರಪೂಜ್ಯ ದೀನೇಶ್ವರ ವೀತರಾಗ ನಿ |
ಭಯ ನಿರವದ್ಯ ನಿರ್ಜಿತ ನಿರಂಜನ ನಿರ್ಮಲ ನಿಷ್ಕಲಂಕ ನಿ
ರ್ನಯ ನಿರಪಾಯ ನಿರ್ಜನನ ನಿಸ್ಪೃಹ ನಿರ್ಮಮ ನಿರ್ವಿಕಲ್ಪ ನಿ |
ಷ್ಕ್ರಿಯ ನಿರಪೇಕ್ಷ ನಿನ್ನ ಚರಣಂ ಶರಣಕ್ಕೆಮಗಿಂ ಜಿನೇಶ್ವರಾ || ೪೮ ||

ಭವದೀಯ ವಿಮಳರೂಪ |
ಸ್ತವ ವಸ್ತುಸ್ತವ ಗುಣಸ್ತವಂಗಳನಿತೆಂ ||
ದವನೆಣಿಸಲಶಕ್ಯಂ ನತ |
ದಿವಿಜೇಂದ್ರಾಹೀಂದ್ರ ವಾಸುಪೂಜ್ಯ ಜಿನೆಂದ್ರಾ || ೪೯ ||

ನುತಪುಷ್ಪಾಸಾರಮುದ್ಯದ್ದಿವಿಜ ಜಯನಿನಾದಂ ನವಾಶೋಕವೃಕ್ಷಂ |
ಸಿತಚಂಚಚ್ಚಾಮರಂ ಬೆಳ್ಗೊಡೆ ಸೊಗಯಿಪ ಭಾಮಂಡಳಂ ದೇವತೂರ್ಯೋ ||
ದಿತನಾದಂ ಚಾರುಸಿಂಹಾಸನಮೆನೆ ನೆಗೞ್ದೀ ಪ್ರಾತಿಹಾರ್ಯಷ್ಟಕಂ ವಿ |
ಶ್ರುತಮಾಗಿರ್ಕ್ಕುಂ ಸುರೇಂದ್ರೋಪಕ್ಕೈತಮೆನಿಸಿ ನಿಮ್ಮೊಳ್‌ ತ್ರಿಲೋಕೈಕಬಂಧೂ ||

ಭುವನತ್ರಯಂಗಳೊಳಗು |
ಳ್ಳ ವಸ್ತುಗಳ್‌ ದೇವ ಕರತಳಾಮಳಕ ಸಮಾ ||
ನವೆ ನಿಶ್ಚಯಮಾದವು ನಿನ |
ಗೆ ವಿಮಲಕೇವಲವಿಲೋಚನಾಲೋಕನದಿಂ || ೫೧ ||

ದುರಿತಾರಾತಿಯನಿಕ್ಕಿ ಗೆಲ್ವುದುಮನಂತಜ್ಞಾನಮುಂ ತಾನಿದ |
ಚ್ಚರಿಯೆಂಬಂತಿದನಂತದರ್ಸಾನಮುಮವ್ಯಾಬಾಧಶೋಭಾಕರಾ |
ಕ್ಷರ ನಿರ್ವ್ಯಾಕುಲಮಪ್ಪನಂತಸುಕಮುಂ ಮೆಯ್ವೆತ್ತು ನಿನ್ನೊಳ್ಕರಂ |
ದೊರೆವೆತ್ತಿರ್ದುದನಂತವೀರ್ಯಮುಮನಂತಾನಂತಸೌಖ್ಯಾಸ್ಪದಂ || ೫೨ ||

ದಯೆಯಿಂದ ಭಾವಿಯಂ ಭಾ |
ವಿಯಮೆಂದುಂ ಭಾವಿಯನ್ನಭಾವಿಯನೆಂಬೀ ||
ನಯವಂ ಮಾಡುವುದೆಮಗ |
ಕ್ಷಯಸೌಖ್ಯಾನಂತ ಮೋಕ್ಷಲಕ್ಷ್ಮೀಕಾಂತಾ || ೫೩ ||

ವಸುವೂಜ್ಯಂ ತಂದೆ ಸಂದೊಪ್ಪುವ ಜಯವತಿತಾಯ್‌ ನೀಳಮೆೞ್ಪತ್ತು ಬಿಲ್‌ಶೋ
ಭಿಸುವಂಗಂ ಬಾಳಭಾನುಚ್ಛವಿ ನೆಗೞ ಕದಂಬದ್ರುಮಂ ತಾನಶೋಕಂ |
ಪೆಸರಿಂದಂ ಲಾಂಚನಂ ಸೈರಿಭಮನುಪಮಚಂಪಾಪುರಂ ತನ್ನ ನಿರ್ವಾ |
ಣ ಸುಸೇವ್ಯಸ್ಥಾನಮಾರ್ಗಿರ್ದಘರಿಪು ಕುಡಗುಷ್ಟಾರ್ಥಮಂ ವಾಸುಪೂಜ್ಯಂ || ೫೪ ||

ವ || ಎಂದನೇಕ ಸ್ತುತಿಶತ ಸಹಸ್ರಂಗಳಿಂ ಸ್ತುತಿಯಿಸಿ ದೇಶಾವಧಿಜ್ಞಾನಿಯಪ್ಪ ಸೂರ್ಯಮಿತ್ರಮುನುನಾಥನತಿವಿಶುದ್ಧ ಪರಿಣಾಮದಿಂ ಸರ್ವಾವಧಿಜ್ಞಾನಲೋಚನ ನಾಗಿ ನಿರ್ವಾಣೋರ್ವರಾಂತರ್ಭಾಗದಿಂ ಪೊಱಮಟ್ಟು

ಅಮಿತಗುಣಾಬ್ಧಿವಿಶ್ರುತಬಹುಶ್ರುತಪಾರಗನಪ್ರಮತ್ತನ
ಪ್ರಮಿತ ಸುರಾಸುರೋರಗ ವಿಯಚ್ಚರ ರಾಜ ಕಿರೀಟ ತಾಟಿತ
ಕ್ರಮಕಕಮಲದ್ವಯಾನತ ಮಧುಬ್ರತನೆಯ್ದಿದನಗ್ನಿಭೂತಿ ಸಂ
ಯಮಿವೆರಸಾಗಳಾ ಪರಮಸಂಯಮಿ ಸಂಬರನಾಗಥಾಣಮಂ || ೫೫ ||

ವ || ಅಂತು ಪೊರೋಪಾಂತವನಾಂತರಾಳಸಂಸ್ಥಿತಮಪ್ಪ ಸಂಬರಕಂಬಳ ಪಾಂಡುರ ತ್ರಿತಯಾಭಿಧಾನಾಭಿರಾಮಮಪ್ಪ ನಾಗಮಂಟಪಂಗಳೊಳ್‌ ಸಂಬರನಾಗಡಾಣದೊಳ್‌ ಯೋಗನಿಯೋಗಪ್ರದೇಶದೊಳಿರ್ದಂದಿನ ದಿವಸಂ ತೀರ್ಥೋಪವಾಸಪ್ರ ತ್ಯಾಖ್ಯಾನದಿಂ ಪರಮಾರ್ಥಂಗಳಂ ಭಾವಿಸುತ್ತುಮಿರ್ದು ಮಱುದಿವಸಂ ಮಧ್ಯಾಹ್ನ ಕಾಲದೊಳಗ್ನಿ ಭೂತಿಋಷಿಯರ್‌ ಗುರುಗಳನುಮತದಿಂ ಚಂಪಾನಗರಕ್ಕೆ ಚರ್ಯಾಮಾರ್ಗದಿಂ ಬರುತ್ತಮಾ ಪುರೋಪಾಂತದುಪವನಾಂತರಾಳದೊಳ್‌

ಮಾತಂಗಿಯನತಿಶೋಕಾ
ನ್ವೀತೆಯನಪರಿಮಿತದುಃಖಿತಾಂಧಕೆಯಂ ತೃ
ಷ್ಣಾತುರ ಗದ್ಗದ ಕಾಂತೆಯ
ನಾ ತಾಪಸನಾಗಳವಳನಿದಿರೊಳೆ ಕಂಡಂ || ೫೬ ||

ತಲೆರೋಮಂ ಜೆಡೆಗಟ್ಟಿ ಪೇನಿೞಿದು ಬಾಯೊಳ್ತೀವೆ ಮೆಯ್‌ ಬಾತ ಬಾ
ವಲನಾತಕ್ಕೆಣೆಯಾಗಿ ನಾಱೆ ಪಲರುಂ ಚೀಯೆಂಬಿನಂ ಸೂಸಿದೆಂ
ಜಲವುೞ್ಗಳನಾವಗಂ ಬೆದಕಿ ತಿಂದಾ ಬಟ್ಟೆಯೊಳ್‌ ಬಟ್ಟನೇ
ಱೆಲ ಚೆಂಗಾರೆಯ ಮೆಲ್ದುಗುೞ್ದ ಸಹಕಾರೋಚ್ಛಿಪಕ್ವಂಗಳಂ || ೫೭ ||

ತಡವಡಿಸಿ ಪುಡುಕಿಪಂಜಿನ
ನಡು ಬೀದಿಯೊಳಿರ್ದು ಮಱುಗುತಿರೆ ಕಂಡು ಕೆಲ ||
ರ್ಬಡಿದೆಡೆಯೊಳೊಡೆದ ಪುಣ್ಗಳಿ
ನೆಡೆಯುಡುಗದೆ ರುಧಿರಮೊಱೆತು ಕಱೆಗಟ್ಟುವಿನಂ || ೫೮ ||

ಮೀಂಬೋಲಸು ನಾರ್ಪ ಮೆಯ್ಗಮ
ಳುಂಬಂ ತೂಂಬುರ್ಚಿದಂತೆ ಸುರಿವರುಣಜಳ ||
ಕ್ಕಂ ಬಿಡದೆ ಕಾಗೆಯಂ ಪ
ರ್ದುಂ ಬಳಸುವವೆಂದೊಡಿಂತು ಕಿಸುಗುಳೆಯೊಳರೇ || ೫೯ ||

ಕೆಲಬರ್ಕರುಣಿಸೆ ಕೆಲಬ
ರ್ಪಲತೆಱದಿಂ ಜಡಿಯೆ ಕಂಡು ಕೆಲಬರ್ತ್ತಮ್ಮೆಂ ||
ಜಲನೂಡೆ ದುಃಖದತಿಶಯ
ಬಲೆಯೊಳ್‌ ಮಲುಮಲನೆ ಮಱುಗಿ ಸಿಲ್ಕಿರ್ದವಳಂ || ೬೦ ||

ವ || ಕಂಡು ಕರುಣಸಾರ್ದ್ರಹೃದಯಂ ಮನ್ಯು [ಗ] ದ್ಗದಂಠನುಮಾಗಿ ನೀಡುಂ ಭಾವಿಸಿ ನೋಡಿ ತಲೆಯಂ ತೂಗಿದೂಗಿ

ಇದೇಂ ಬಹುವಿಚಿತ್ರಮೋ ಭವವಿಕಲ್ಪವೈಚಿತ್ರ್ಯಮಿಂ |
ತಿದೇನಘಟಮಾನಮೋ ವಿಕೃತಘೋರಸಂಸಾರಮಿಂ ||
ತಿದೇಂ ವೃಜಿನಬಂಧಮೋ ಕುಸೃತಿಬಂಧಸಂಬಂಧಮೆಂ |
ದದೇಂ ತಳೆದನೋ ಮುನಿಪ್ರವರನಾಗಳುದ್ವೇಗಮಂ || ೬೧ ||

ವ || ಅಂತು ಸಂಸಾರದ ಸ್ವರೂಪಕ್ಕೆ ಚೋದ್ಯಂಬಟ್ಟು

ಆ ದುಃಖಜೀವಿಯಂ ಕಂ |
ಡಾದೊರೆಯ ಮುಮುಕ್ಷುಗಂ ನಿರೀಕ್ಷಿಸಲೊಡನಂ ||
ದಾದುದು ಬಾಷ್ಪಪ್ರಸರಂ |
ಸೋದರ್ಯ ವಿಮೋಹ ಮಾರ್ಗಮೇನಾಗಿಸದೋ || ೬೨ ||

ವ || ಅಂತು ಪರವಶದೊಳ್‌ ಮನ್ಯುಮಿಕ್ಕು ಸೈರಿಸಲಾಱದೆ

ಬಳೆದ ವಿಮೋಹದಿಂ ಪಿಡಿದ ಕುಂಚದ ಕಾವಿನೊಳಂದು ಪಕ್ವಸಂ
ಕುಳಮನದೊಂದೆರೞ್ಛಳಿಗೆ ಪೋಪಿನಮಲ್ಲಿಯೆ ನಿಂದು ದುಃಖ ವಿ
ಹ್ವಳನೆಡೆದೋಱೆ ನೂಂಕಿ ಕುಡುತುಂ ಕರುಣಂ ಪಿರಿದಾಗಿ ಪಿಂಬಗಲ್‌
ಕಳೆವಿನಮಿರ್ದನಾ ಪರಮಯೋಗಿಗಮಂತುಟು ಮೋಹಮಾಗದೇ || ೬೩ ||

ವ || ಇಂತು ಪಕ್ಷಿ ಪಕ್ಷ ಚಂಚು ಚರಣಾಭಿಗಾತದೊಳಂ ಶಿಶು ಜನನಾನು ಪಾತ ದಂಡ ಖಂಡಾಘಾತದೊಳುಮುದಿರ್ದು ನೆಲದೊಳ್‌‍ ಬಿರ್ದ ನೇಱೆಲಪಣ್ಗಳನಾ ಕೂಸಿನ ಪಕ್ಕಕ್ಕಾಗಿ ಸಾರ್ಚಿ ಕೊಟ್ಟು ತದನಂತರದ ವ್ಯತಿಕರನಂತರಾಯಮಾದಿ ಮುಗಳ್ದು ಬಂದು ನಾಗಸ್ಥಾನಂಮಂ ಪೊಕ್ಕು

ಪರಮ ಶ್ರೀ ಜೈನಧರ್ಮಾಂಬರಖರಕರನಂ ನಿರ್ಮಲಧ್ಯಾನಣೀರಾ |
ಕರನಂ ಸಜ್ಞಾನಸೋಭಾಕರನನನುಪಮೋದಾತ್ತಚಾರಿತ್ರರತ್ನಾ |
ಕರನಂ ಸಂದಗ್ನಿ ಭೂತಿಬ್ರತಿ ಸವಿನಯದಿಂ ಭಕ್ತಿಯಿಂ ಬಂದುಕಂಡಂ |
ಪಿರಿದೊಂದಾನಂದದಿಂದಂ ಪರಮಜಿನಮತಾಂಬೋಜಿನೀ ರಾಜಹಂಸಂ || ೬೪ ||

ಇದು ಸಮಸ್ತ ವಿನಯಜನವಿನುತ ಶ್ರೀವರ್ಧಮಾನಮುನಿಂದ್ರ
ವಂದ್ಯ ಪರಮಜಿನೇಂದ್ರ ಶ್ರೀಪಾದಪದ್ಮವರ ಪ್ರಸಾದೋತ್ಪನ್ನ
ಸಹಜ ಕವೀಶ್ವರ ಶ್ರೀ ಶಾಂತಿನಾಥಂಪ್ರಣೀತಮಪ್ಪ ಸುಕು
ಮಾರ ಚರಿತದೊಳ್‌ ಚತುರ್ಥಾಶ್ವಾಸಂ ||