ಶ್ರೀ ದೊರೆಕೊಳ್ಗೆಂದು ವಚ |
ಶ್ರೀ ದೊರೆಕೊಳ್ಗೆಂದು ಸೌಖ್ಯಸಂಪದಮುಕ್ತಿ ||
ಶ್ರೀ ದೊರೆಕೊಳ್ಗೆಂದಾಶೀ
ರ್ವಾದಂಗೊಟ್ಟಂ ಸರಸ್ವತೀಮುಖಮುಕುರಂ || ೦೧ ||

ವ || ಎಂಬುದುಮಾ ಕೊಲ್ಲದವ್ರತಮೊಂದುಮುೞೆಯೆ ಬೞೆಯಮುೞೆದ ವ್ರತಂಗಳೆಲ್ಲಮನಾ ನಾಣಿಲಿ ಸವಣಂಗೆ ಕೊಟ್ಟು ಬರ್ಪಂ ಬಾಯೆಂದು ಕಿಱೆದಂತರಂ ಬರ್ಪನ್ನೆಗಂ

ಕವಿತರ್ಪ ನೆರವಿಯಂ ಕನ |
ಲವೋರಿಗಳ್ಕಂಡು ಬೆರ್ಚಿ ಕೆಂಗೋಲ್ಗೊಂಡೋ ||
ಡುವುದನಿದೇನೆಂದಾ ಕೊ |
ಡವಿ ಬೆಸಗೊಳೆ ನಾಗಶರ್ಮನದನಱೆದೆಂದಂ || ೦೨ ||

ಎನಗಾರ್ ಬಲ್ಲಿದರೆಂದು ವಂಗವಿಷಯಾಧೀಶಂ ಭರಂಗೆಯ್ದು ಭೋಂ |
ಕೆನೆ ಮೇಲೆತ್ತಿ ಕಱುತ್ತು ಮಾಣದೆನಸುಂ ವಜ್ರಾಯುಧಂ ಚಂದ್ರವಾ ||
ಹನನೊಳ್‌ ಕಾದಲೊಡರ್ಚಿ ಬಂದು ವಿಷಯಾಂತರ್ಭಾಗದೊಳ್ಬಿಟ್ಟು ತೊ |
ಟ್ಟನೆ ಬೂತಟ್ಟಿದೊಡಟ್ಟಿದಂ ಬಳನನಿಂತೀ ಭೂಪನಾಕ್ಷೇಪದಿಂ || ೦೩ ||

ವ || ಅಂತು ಮೇಲೆವಂದು ಬೂತಟ್ಟಿದ ವಜ್ರಾಯುಧನ ಮೇಲೆ ಹಸ್ತ್ಯಶ್ವ ರಥ ಪದಾತಿ ಚಾತುರ್ವಳಸಹಿತಂ ಬಳನೆಂಬ ದಂಡಾದಿನಾಥನನೀತನಟ್ಟಿದೊಡಾ ಇರ್ವರ್ಗಂ ಸಮರಾಡಂಬರಮಳುಂಬಮಾಗೆಯುಭಯ ಬಲಂಗಳುಂ ಮಲಮಲ್ಲಾ ಮಲ್ಲಿಯಾಗಿ ಕಾದುವಾಗಳ್‌ ತಕ್ಷಕನೆಂಬಾಪ್ತಚರನಲ್ಲಿ ತಲ್ಲಣಿಸಿ ನಿಲಲಾಱದೊಲ್ಲನುಲಿದೋಡೈತಂದಲ್ಲಿಗೆ ವಂದು ಚಂದ್ರವಾಹನನರೇಂದ್ರನಂ ಕಂಡು

ಬಳನಂ ವಜ್ರಾಯುಧಾಂಕಂ ದ್ವಿರದಘಟೆಯನೊಡ್ಡೊಡ್ಡಿ ತಳ್ತಿರ್ದ ಮೇಘಾ |
ವಲಿಯಂ ಪರ್ಬಿರ್ದರಮ್ಯಪ್ರಕರಮನಖಿಳಧ್ವಾಂತದುರ್ಕ್ಕಂ ಸ್ವಬಾಹಾ ||
ಬಲದಿಂ ಪಂಚಾಸ್ಯನೆಂತಾ ಪ್ರಳಯದವನನೆಂತುಗ್ರದಾವಾಗ್ನಿಯೆಂತು |
ತ್ಪಳಜಾಳಾರಾತಿಯೆಂತಂತಿರೆ ಸಮರದೊಳೋರಂತೆ ಮಾಱೂಂತು ಗೆಲ್ದಂ || ೦೪ ||

ವ || ಎಂದು ಬಿನ್ನಪಂಗೆಯ್ದ ಚರನ ಬಿನ್ನಪದಿಂ ಬಿನ್ನನೆ ಮೊಗಮಂಮಾಡಿಬಿಲ್ಲುಂ ಬೆಱಗುಮಾಗಿರ್ಪ್ಪುದುಮಾ ಪ್ರಸ್ತಾವದೊಳ್‌

ಅನುವರದೊಳ್‌ ವಜ್ರಾಯುಧ |
ನನಿಕ್ಕಿ ವಿಕ್ರಾಂತದಿಂದೆ ವಿಜಯಧ್ವಜಮಂ ||
ತನಗೆತ್ತಿಸಿದಂ ದಂಡಾ
ಧಿನಾಯಕಂ ಬಳನಜೇಯ ನಿಜಶೌರ್ಯಬಳಂ || ೦೫ ||

ವ || ಎಂದು ಲೇಖವಾಹನಂ ಚಂದ್ರವಾಹನಂಗುತ್ಸಾಹದಿಂ ವಾರ್ತೆಯಂ ಪೇೞ್ವುದುಮಂಗಚಿತ್ತಮಂ ಕೊಟ್ಟುಂ ಮುನ್ನೆ ಬಂದೀತನೆನಗೆ ಸೇನಾಭಂಗಮುಂ ಮನೋಭಂಗಮುಮಪ್ಪಂತು ಪುಸಿವಾರ್ತೆಯಂ ಪೇೞ್ದನೀ ಪುಸಿವನಂ ಕುಸಿಯೊತ್ತಿ ಬಟ್ಟೆಯೊಳ್‌ ಪೆಟ್ಟಮೆೞೆದು ಬಳಸಿದ ದಸಿಯೊಳ್ತೆಗೆಯಿಮೆಂದು ಚಂದ್ರವಾಹನ ನರೇಂದ್ರಂ ಪೇೞೆ ತಳಾಱರ್ತಕ್ಷಕನಂ ಕನಲವೋರಿಗಳ್‌ ಪೂಡಿ ಪೆಟ್ಟಮೆೞೆದಪರೆಂಬುದುಂ ನಾಗಶ್ರೀಕನ್ಯಕೆ ಕರ್ಣರಸಾರ್ದ್ರಹೃದಯೆಯಾಗಿ ಋಷಿಯರ್ಕೊಟ್ಟ ಪುಸಿಯದ ವ್ರತಮಂ ಬಿಸುಟೆನಪ್ಪೊಡೆ ಪುಸಿಯದಿರಲ್ಬಾರದು ಪುಸಿದೆನಪ್ಪೊಡೆನ್ನುಮನಸೆಯೊಳೆ ಪೂಡಿ ಪೆಟ್ಟಮೆೞೆದು ಕೊಲ್ವರೆಂಬುದುಮಂತಾದೊಡಾ ವ್ರತಮುಮಿರ್ಕೆ ಮತ್ತಿನ ಜೊತ್ತಿಸಿ ಕೊಟ್ಟಸಿತ ವ್ರತಂಗಳನಾಜಿನಮುನಿಗೆ ಕೊಟ್ಟು ಬರ್ಪುಮೆಂದು ಕಿೞೆದಂತರಂ ಬರ್ಪಾಗಳ್‌

ದಬ್ಬಳಮಂ ಬೆರಲ್ಗಳೊಳಡಂಗುವಿನಂ ನಡೆಪೊಯ್ದು ಮೂಳೆಯಂ |
ದಬ್ಬುಕದಿಂದೆ ನುಗ್ಗುನುಱೆಯಪ್ಪಿನೆಗಂ ಬಿಡೆ ಬೀಸಿ ಪೊಯ್ದು ಕ |
ಣ್ಗುಬ್ಬೆಯ ಗುಳ್ಳೆಯಂತೆ ಪೊಱಪಾಯ್ವಿನಮಟ್ಟಳೆವೊಯ್ದೊಡೊರ್ವನಂ |
ಬೊಬ್ಬಿೞೆದಾರ್ದು ಕೊಲ್ವ ಕೊಲೆಯಂ ಹರಿಣೇಕ್ಷಣೆ ಕಂಡು ಭೀತಿಯಿಂ || ೦೬ ||

ತಂದೆಯನೆಂಸಳ್ವೇೞೆಮಿ |
ಮಂದಿರ್ನೆರೆದಿವನನಿಂತು ನಾನಾವಿಧದಿಂ |
ಕೊಂದಪರಿದಾವಕಾರಣ |
ದಿಂದಮೊ ಬೆಸಗೊಳ್ಳಿಮೆಂಬುದುಂ ವಿಪ್ರವರಂ || ೦೭ ||

ವ || ತಲಾಱರಂ ಬೆಸಗೊಂಡು ಬಂದು ಮಗಳಿಂತೆಂದು ಪೇೞಲ್‌ ತಗಳ್ದಂ

ನೆಗೞ್ದ ಸುಮಿತ್ರನೆಂಬ ಪರದಂಗೆ ಮಗಳ್ವಸುಕಾಂತೆಯೆಂಬೊಳೆ |
ವೊಗೞ್ವುದೇಷ ರೂಪತಿ ಮೆಲ್ಲಗೆ ತನ್ನಯ ಕನೆ ಮಾಡದಿಂ
ಮೃಗಶಿಶುನೇತ್ರೆ ತಾಂ ಪುಗುವ ಬೇಗದಿನೊಯ್ಯನೆ ಬಂದು ಬಾಗಿಲಂ
ನುಗುಳ್ವಳ ನೆತ್ತಿಯಂ ಪಿಡಿದುದಾಕ್ಷಣದೊಳ್ಮುಳಿಸಿಂ ಮಹೋರಗಂ || ೦೮ ||

ವ || ಆಗಳಾ ಸುಮಿತ್ರಂ ಮಿತ್ರಕಳತ್ರ ಸಹಿತಮಾಗಳ್ಬಾಯೞೆದು ತತ್ಸತಿ ಪರಾಸುವಾದಳೆಗೆತ್ತು ಪರೇತವನಕ್ಕೆ ಕೊಂಡುಪೋಪುದುಮಲ್ಲಿಯೊರ್ವಂ ಗರುಡ ನಾಭಿಯೆಂಬ ಗಾರುಡಿಗಂ ತತ್ಕನ್ಯಕೆಯಾಯುಷ್ಯಂ ಬರ್ಪಂತೆ ಬಂದೀ ಬಿಂಬೋಷ್ಠೆಯಂ ಸರ್ಪದಷ್ಟೆಯನೆನಗೆ ಮದುವೆಮಾೞ್ಪಿರಪ್ಪೊಡೆ ನಾಳೆ ನೇಸರ್ಮೂಡದ ಮುನ್ನಮೆ ವಿಷಾಪಹಾರಂ ಮಾಡಿದಪ್ಪೆನಿಂದಿನೊಂದು ರಾತ್ರಿಯಮಂ ಪರೇತವನಸ್ಥಾನದಿಂ ಗೊಲಗಲೀಯದೆ ಕಾಪಂ ಸುವಿಧಾನಮಾಗೆ ಮಾಡಿಮೆಂಬುದುಂ ಸುಮಿತ್ರನಂತೆ ಗೆಯ್ವೆನೆಂದು ನಾಲ್ವರ್‌ ಸಾಹಸ ಭಟರಪ್ಪ ಸುಭಟರ್ಗೆ ನಾಲ್ಸಾಸಿರ ಪೊನ್ನಂ ನುಡಿದು ಜಾವಮಿರಿ(ಸಿ) ಸಾಸಿರದೀನಾರದ ಸಮಕಟ್ಟಿನ ನಾಲ್ಕು ಪೊಟ್ಟಳಿಗೆಯನೊಂದಮಾಡಿ ನಾಲ್ವರ ನಡುವಿರಿಸಿ ಮನೆಗೆ ಪೋಪುದುಮವರೊಳೊರ್ವನಾ ಮೂವರುಮಂ ಬಂಚಿಸಿ ಬಿಟ್ಟು ನೋಡಿದಯೊಂದು ಪೊಟ್ಟಣಮನಡಗಿಸಿರ್ಪುದುಂ ಮಱುದಿವಸಂ ಗರುಡನಾಭಿ ಬಂದು ಕನ್ನೆಯಂ ಸಚೇತನೆಮಾಡಿ ಮದುವೆನಿಲ್ವುದುಂ ನುಡಿದನಲ್ಲದೆ ಪೊನ್ನಂ ಮುನ್ನಮೆ ಕೊಟ್ಟೆನಿಲ್ಲ ಇವರೀಯರ್ಥಮಂ ತಮ್ಮೊಳೋರೊರ್ವರ ವಂಚಿಸಿಯಮೆಲ್ಲಮೊಂದಾಗಿ ಛಿದ್ರಿಸಲಱಿಯರೆಂದುವಾನವರ ಮನದ ಪುೞುವಗೆಯನಱಿಯದೆ ಲೋಗರೆ ವಂಚಿಸಿದರಾಗಲೆವೇೞ್ಕುಮೆಂದರಸರ್ಗೆ ಬಿನ್ನಪಂಗೆಯ್ವುದುಮರಸಂ ತನ್ನ ತಳಾಱನಪ್ಪ ಚಂಡಕೀರ್ತಿಯಂ ಬರಿಸಿ ಮೂಱು ನಾಲ್ಕು ದಿವಸದೊಳೀ ಪೊನ್ನ ನಾವಪ್ರಕಾರದೊಳ – ಮಾಗಿಯುಮಾರಯ್ದು ತಂದು ಕುಡುವುದಂತಲ್ಲದೊಡೆ ಕಳ್ಳಂಗೆ ಮಾೞ್ಪ ನಿಗ್ರಹಮಂ ನಿನಗೆ ಮಾೞ್ಪೆನೆಂದರಸನಾಗ್ರಹಿಸಿ ನುಡಿವುದುಂ ಚಂಡಕೀರ್ತಿಯಾ ನಾಲ್ವರುಮಂ ತನ್ನ ಮನೆಗೊಡಗೊಂಡು ಪೋಗಿ ಬಿನ್ನನಾಗಿರ್ಪುದುಮಾತನ ಮಗಳ್‌ ಸುಮತಿಯೆಂಬ ಗಣಿಕೆ ಕಂಡಿದೇನೆಂದು ಬೆಸಗೊಂಡೊಡೆ ಚಂಡಕೀರ್ತಿಯದೆಲ್ಲಮಂ ಜಲಕ್ಕನಱಿಪೆ

ಏಳಿದನಂತೆ ಬಾಯೞೆದು ಚಿಂತಿಸುವಂದಮಿದಾವುದುರ್ವರಾ |
ಪಾಳನಿನಿಟ್ಟ ವಾಸರಚತುಸ್ತ್ರಿಕ ಮಾತ್ರದೊಳಾವುಪಾಯದಿಂ |
ಮೇಳಿಸಿ ತಂದುಕೊಂಡು ಕುಡುವೆಂ ನಿನಗರ್ಥಮನೆಂದು ಲೋಳನೀ |
ಳಾಳಕಿ ಪೂಣ್ದು ತಂದೆಯ ಮನಃಕ್ಷತಮಂ ಮನದಿಂದಗಲ್ಚಿದಳ್‌ || ೦೯ ||

ವ || ಅಂತೇಕಾಂತದೊಳ್‌ ತಮ್ಮತಂದೆಯ ಮನೋಗ್ಲಾನಿಯಂ ಪಱೆವಡೆ ನುಡಿದು

ಮನಮೊಲ್ದು ತನ್ನ ಗುಣಣೆಯ |
ಮನೆಯಂ ಗಜಗಮನೆ ಪೊಕ್ಕು ತದ್ಭಟರಂ ಮೆ ||
ಲ್ಲನೆ ಬೇಱೆವೇಱೆ ಬರವೇ |
ೞ್ದೆನಿತಾನುಂ ತೆಱದ ಲಲ್ಲೆಯಿಂ ಜೊತ್ತಿಸಿದಳ್‌ || ೧೦ ||

ಪದೆಪಂ ಕೆಯ್ತದೊಳುಂಟುಮಾಡಿ ನಯಮಂ ವಾಗ್ವೃತ್ತಿಯೊಳ್‌ ತೋಱೆ ನೋ |
ಟದೊಳಾದೞ್ಕಱನಪ್ಪುಕೆಯ್ದೆಸಕದೊಳ್‌ ಮೆಲ್ಪಂ ಪಳಂಚಲ್ವಿ ಕ |
ಣ್ಬದಿರೊಳ್‌ ಕಾಮಿನಿ ಕಾಮರಾಗರಸಮಂ ತೞ್ಕೈಸಿ ತಳ್ಪೊಯ್ದು ಮೇ |
ಳದೊಳಂ ಪೊಕ್ಕೆನಸುಂ ಮನಂಗೊಳಿಸಿದೊಳ್‌ ನಾನಾಪ್ರಕಾರಂಗಳಿಂ || ೧೧ ||

ಎನಗೆನಗೆ ಸೋಲ್ತಳೆಂಬಂ |
ತೆ ನೋಡಿ ನೋಟದೊಳಲಂಪನಾರ್ಜಿಸಿ ಕಾ ||
ಮಿನಿ ಕಾಮಪಾಶದಂತೆಯಿ |
ರೆ ನಾಲ್ವರುಂ ಭಟರ ಮನಮನುಱೆ ಸೆಱೆವಿಡಿದಳ್‌ || ೧೨ ||

ಅಕ್ಕರ || ನೋಡದನ್ನೆಗಂ ನೋ(ವ)ಕ್ಕುಮಲ್ದೆ ನುಡಿಯದಿರ್ಪೆನ್ನೆಗಂ ಧೈರ್ಯಮಕ್ಕುಂ |
ಕೂಡದನ್ನೆಗಂ ಕೂಡದಂ(ತಿ)ರಲಕ್ಕುಂ ಬಸಮಾಗದನ್ನೆಗಂ ಬಳಸಲಕ್ಕುಂ |
ನೋಡಿ ನೋಯದೆ ನುಡಿದು ಕಾತರಿಸದೆ ಕೂಡೆ ಲಲ್ಲಿಯಿಸದೆ |
ನೋಡ ಬಸಮಾಗಿ ಬಸಮೞೆದು ಬಳಸದೆ ಬೞೆಕೆಯ್ದು ನದ್ದೆಯನೊಲಿಪನಾವಂ || ೧೩ ||

ವ || ಎಂಬುದುಂ ನಿತಂಬಿನಿ ನಾನಾಪ್ರಕಾರದ ತತ್‌ಉಪಣಂಗಲಿಂ ಜೊತ್ತಿಸಿ ವಶೀಕೃತಂ ಮಾಡಿ ಮಱುದಿವಸಂ ಆ ನಾಲ್ವರುಮನೊಂದೆಡೆಗೆ ವರಿಸಿ ಕುಳ್ಳಿರಿಸಿ

ಧನಮಂ ನೀಮೆಲ್ಲಮಿರ್ದಂತಿರೆ ಪೊಱಗಣವರ್ಬಂದು ಕೊಳ್ವಂದು ವಿಶ್ವಾ |
ವನಿಚಕ್ರಕ್ಕಕ್ಕುಮತ್ಯದ್ಭುತತರಮಿದಱೊಳ್‌ ತೊಟ್ಟ ವ್ರತ್ತಾಂತಮಂ ನೀ |
ಮೆನಗೀಗಳ್ಬೇೞೆಮಾರಾರ್ತೊಲಗಿದರದನಾರ್ಮುನ್ನ ಕೈಕೊಂಡಿರಾ ಕಾ |
ಪಿನೊಳಿರ್ದರ್ವಂದು ನಿಮ್ಮೊಳ್‌ ನುಡಿದ ಮನಜರಾರೆಂಬುದಂ ನೀಮಮೊಘಂ || ೧೪ ||

ಅಕ್ಕರ || ನುಡಿದ ಸಮತಿಯ ನುಡಿಯನಿಂಬಿನೆ ಕೇಳ್ದು ದಷ್ಟೆಯಂ ಕಾದಿರ್ದೆ ನೆಂದನೊರ್ವಂ |
ನಡುವಿರುಳ್ಪೋಗಿ ವಣಿಜರನೊಟ್ಟಯ್ಸಿ ವಂಚಿಸಿ ಕುಱೆದಂದೆನೆಂದನೊರ್ವಂ |
ಪಿಡಿದು ತಂದಿತ್ತ ಕುಱೆಯನಾಮಱೆ ಕೊಂದು ಪಿಶಿತಮಂ ಮಾಡಿದೆನೆಂದನೊರ್ವಂ |
ನುಡಿಗೆ ಮೆೞ್ಪಟ್ಟು ನೋಟಕ್ಕೆ ಬಸಮಾಗಿ ಮಡದಿಯೊಡವೞ್ದೆನೆಂದನೊರ್ವಂ || ೧೫ ||

ವ || ಅಂತಾ ನಾಲ್ವರುಂ ನಾೞ್ವರ್ತನಮಿಲ್ಲದುಳ್ಳುದನುಳ್ಳಂದದೊಳಱೆಪುವುದು ಮಾಗಳಾ ಸುಮತಿ ತಾಂ ಸುಮತಿಯಪ್ಪುದಱೆನವರ ಬಗೆಯನಱೆನವರ ಬಗೆಯನಱೆದುಪಾಯಮನಾಗಳೆ ಚರ್ಚಿಸಿ

ಇಂದೆನಗೆ ನಿದ್ದೆ ಬಾರದು |
ಬಂದಪುದಾಲಸ್ಯಮಸದಳಂ ನೀಮೆನಗೊಂ |
ದೊಂದು ಕಥೆಗಳನಪೂರ್ವಮ |
ನಂದಮಗುಂದಲಿಸೆ ಪೇೞ್ದು ಪೊತ್ತಂ ಕಳೆಯಿಂ || ೧೬ ||

ಎಂಬುದುಮಾವಾವ ಕಥೆಗಳನಱೆವೆವಲ್ಲೆವು ನೀಂ ಪೇೞ್ವೊಡೆ ಕೇಳಲ್ಬಲ್ಲೆವು ಎಮಗೆ ನೀನೆ ಪೇೞಲ್‌ವೇೞ್ಕುಮೆಂಬುದುಂ ಸಮತಿ ಚಿತ್ರಕಥೆಯನಿಂತೆಂದು ಪೇೞಲ್ತಗುಳ್ದಳ್‌ ಪಾಟಳೀಪುತ್ರಮೆಂಬ ಪೊೞಲೊಳ್‌ ವಸುದತ್ತನೆಂಬ ಪರದನಾತನ ಮಗಳ್‌ ಸುದಾಮೆಯೆಂಬ ಕನ್ಯೆಯತ್ಯಂತರೂಪ ಲಾವಣ್ಯಭಾಗ್ಯಸಂಗೆ(ಗ)ಗೆಯಂ ಮೀವಾಗಳ್‌ ನೆಗೞ್‌ ಬಂದು ಕಾಲಂ ಪಿಡಿದೊಡೆ ಬಿಡಿಸಲಱೆಯದೆ ಸಿಡಿಮಿಡಿವಂದು ತಡಿಯೊಳ್‌ ಮೀಯುತ್ತಿರ್ದ ತಮ್ಮ ಭಾವನಂ ಧನದೇವನಂ ಕರೆದೀ ನೆಗೞಂ ಬಿಡಿಸೆಂಬದುಮಾಕೆ ತನಗೆ ನಾದುನಿಯಪ್ಪುದಱೆಂ ನಗೆಮಾಡಿ ನಿನ್ನ ವಿವಾಹದಿವಸದ ಪ್ರಥಮ ಪ್ರಸಾಧಮನೆನಗೆ ತೋಱುವೆಯಪ್ಪೊಡೆ ಬಿಡಿಸುವೆನೆಂದೊಡಂಬಡಿಸಿ ಬಿಡಿಸಿದಿಂ ಬೞೆಯಂ ಕತಿಪಯದಿನಂಗಳ್‌ ಕಱೆಯೆ ಸುಧಾಮೆಗೆ ಪರಿಣಯನ ಪ್ರಾರಂಭಮಾಗೆ ವಿವಿಧ ಮಣಿಭೂಷಣಾಲಂಕರಣೆಯಾಗಿ ತನ್ನ ಪ್ರತಿಜ್ಞೆಯಂ ನೆನೆದು ಬಯ್ಗಿನ ಬೇಗಂ ಮೆಯ್ಗರೆದು ಭಾವನಿರ್ದ ಭವನಕ್ಕಾಗಿ ಬರ್ಪಾಗಳ್‌

ಪಸಿದೊಡೆ ಕಂದಿ ಕುಂದಿ ದೆಸೆಗವ್ವಳಿಸುತ್ತುಮಿದಿರ್ಚಿ ಸಾರ್ಚಿ ರಾ |
ಗಿಸಿ ಪಿರೊದೊಂದು ವಸ್ತು ದೊರೆಕೊಂಡುದು ಬಾಱ್ಪುರೆ ಬರ್ದೆನೆಂದು ರ |
ಕ್ಕಸನಿದಿರಿರ್ದು ಕೊಲ್ವಪದದೊಳ್‌‍ ನಿಜವೃತ್ತಕಂ ಸಮಂತು ಸೂ |
ಚಿಸಿ ಮುಗುಳ್ದಿಲ್ಲಿಗಾಂ ಬೞೆಕೆ ಬಂದಪನೀಗಳೆ ನಂಬು ನಿಶ್ಚಯಂ || ೧೭ ||

ವ || ಎಂಬುದಮಾ ಬ್ರಹ್ಮರಾಕ್ಷಸನಿವಳ ಮಾತಂ ನಂಬಿ ನಂಬುಗೆಯಂ ಕೊಂಡು ಬೆಂಬೞೆಯನೆ ತಗಳ್ದು ಪೋಪೆಂ ನುಡಿದು ತಪ್ಪಿದೊಡೆ ಪಿಡಿದು ನುಂಗ ಲಱೆಯದೊನಲ್ಲೆನೆಂದು ರೂಪುಗರೆದು ಪೆಱಪೆಱಗನೆ ಬರುತಿರ್ದ (ನ ) ನ್ನೆಗಂ ಮುಂದೊಂದೆಡೆಯೊಳ್‌

ಎನಗಿಂದಿಗಾಱುತಿಂಗಳ್‌ ಸಮನಿಸದಪುದಿಲ್ಲೆಲ್ಲಿಯುಂ ಬಂದಿಮಂಚಲ್‌ |
ಖನನಪ್ರಾರಂಭ ಚೌರ್ಯಾದಿಗಳನಶಮಿಗಳ್‌ ಚರುರ್ವಾಸರಂ ಭೋ | ಜನಮಾತ್ರಂ
ಬಂದೊಂಡಿಂದಾಂ ಸಕಲವಿಭಮಂ ಪೆತ್ತೆನೆಂದೆಂದು ತನ್ನೊಳ್‌ |
ನೆನೆಯುತ್ತುಂ ಬರ್ಪಿನಂ ತಸ್ಕರನನಧನನಂ ನೀಡಱೆಂ ನೋಡಿ ಕಂಡಳ್‌ || ೧೮ ||

ವ || ಅಂತು ಗೆಂಟಱೊಳ್‌ ನೋಡಿ ಕಂಡು ತೊಲಗಿ ಪೋಪುದುಂ ಮಿಂಚಿನ ಗೊಂಚಲನೆಸಂಚಳಿಸಿ ಪೊಳೆವ ರತ್ನಾಭರಣಗಳ ಪೊಎಳೆಪಂ ಕಂಡಿದೇನಾ ನುಮೋಂದಾಶ್ಚರ್ಯಮಾಗಲ್ವೇೞ್ಕುಮೀಗಳಿನ ಪೊತ್ತಪ್ಪುದು ಖೇಚರ ನಿಶಾಚರ ದ್ಯುಚರ ಸಂಚಾರಮಲ್ಲದೆ ಭೂಚರಗೋಚರಮಲ್ಲೆಂದು ಮುಟ್ಟೆವರ್ಪುದುಮಾ ಕನ್ನೆ ತನ್ನ ಪ್ರತಿಜ್ಞಾ ಪ್ರಚಂಚಮಂ ಪೇೞ್ದು

ಎಡೆಮಡಗದಿಂದೆ ನಿನ್ನಿ |
ರ್ದೆಡೆಗೀಗಳೆ ಬರ್ಪೆನೆಂದು ನಂಬುಗೆಗೊಟ್ಟಾ ||
ಎಡೆಯಿಂದೆ ತಳರ್ದು ಕಿಱೆದೆಡೆ |
ನಡೆವುದುಮಡಹಡಿಸಿ ಮಸಗಿ ಬಿಡೆ ಜಡಿಯತ್ತುಂ || ೧೯ ||

ವ || ಬೀದಿ ಬೀದಿಗಳೊಳ್‌ ಸೋದಿಸಿ ಕಾವ ತಳಾಱಂ ಕಂಡು

ಈ ಪೊತ್ತಿನೊಳೀ ಪೆಣ್ಗೂ |
ಸೀ ಪಸದನಮೆಸೆಯೆ ಪೋಪೊದೆಲ್ಲಮಿದಘಟ ||
ವ್ಯಾಪಾರಮಿವಳ್‌ ಪರಪುರು |
ಷಾಪೇಕ್ಷಣೆಯಕ್ಕುಮೆನುತುಮಂತಂತರ್ಗತದೊಳ್‌ || ೨೦ ||

ಏನೀ ಪೊತ್ತೆತ್ತವೋಪೈ ಸಿತಗೆ ಮುಗುಳೆ ಮಗುಳೆನುತ್ತೆಯ್ದೆವಂದಾಗಳೆಂದಳ್‍ |
ನೀನೆನ್ನಂ ಕಾಡವೇಡಾಂ ತೊಡರ್ದವಸರದೊಳ್‌ ಪ್ರತ್ಯಯಂಗೆಯ್ದೆನೊರ್ವಂ |
ಗೇನುಂ ತಳ್ವಿಲ್ಲದಾನೀಗಳೇ ಚಟುಲತೆಯಿಂ ನಿನ್ನನೆಯ್ತರ್ಪೆನೆಂ ದೇ |
ನಾನುಂ ಸೂರುಳ್ಗಳಿಂ ನಂಬಿಸಿದೊಡನುಚರಂ ಕೇಳ್ದಿನಂ ತನ್ನೊಳೆಂಗಗುಂ || ೨೧ ||

ವ || ಆನೀಗಳೀಕೆಯಂ ಬಿಡೆ ಜಡಿದೊಡಗೊಂಡುಯ್ದೆನಪ್ಪೊಡೆ ತುಡುಗೆಗಾಟಿಸಿ ಜಡಿದನೆಂಬ ಕಳಕಳದಿಂದೆನಗೆ ಕಳವು ಪೊರ್ದುಗುಮೆಂದಿವಳೆಲ್ಲಿಗೆ ವೋದಪಳೆಂಬುದಂ ಬೆನ್ನನೆ ಪೋಗಿ ನೋೞ್ಪೆನೆಂದು ಬೞೆಯನುೞೆಯದೆ ಬಂದಿಂತಾ ಮೂವರುಂ ನೋಡುತ್ತುಮಿರ್ದನ್ನೆ ಗಮಾ ಕನ್ಯೆ ಧನದೇವನ ಪಡುವೋವರಿಯ ಮನೆಯನೆಯ್ದಿ ಪಡಿಯಂ ಮಿಡಿದೊಡೆಚ್ಚತ್ತು ಪಡಿಯಂ ತೆಱೆದು ನೋಡಿ ಸುದಾಮೆಯಪ್ಪುದನಱೆದು

ಮಣಿಭೂಷಣಂ || ಸದಮಳಮಣಿಭೂಷಿತೆ ನೀನೀ ನಟ್ಟನಡುವಿರಳ್‌ |
ಕುದುಗುಳಿತನದಿನೀ ಯೆಡೆಗೆ ಪೊಲ್ಲದು ವಂದೆ ಎಂಬುದುಂ |
ಮದುವೆಯ ದಿವಸದಂದು ಬರವೇೞ್ಪುದು ನೀನೆಂದೆನ್ನನಂದು ನೀಂ |
ಚದುರ್ಗಿಡೆ ನುಡಿದೊಡಾಂ ನುಡಿದ ನನ್ನಿಗೆ ವಂದೆಂ || ೨೨ ||

ವ || ನಿನ್ನ ಮೆಚ್ಚಿದು ಗೆಯ್‌ ಎಂದು ಪರಿಚ್ಛೇದಿಸಿ ನುಡಿವುದುಂ

ಸೋದರಮಾವನ ಮಗಳೆನೆ |
ನಾದುಯೆಂದಂದು ನಿನ್ನಾನಾಂ ಕಾದಿದೆನಿಂ ||
ತೀ ದೊರೆಯ ನ್ನಿ ಸನ್ನುತ |
ಮಾದುದನಾನಿಂತು ನನ್ನ ಮೆಯ್ಯೊಲೆ ಕಂಡೆಂ || ೨೩ ||

ತಳವಱ ಕಳ್ಳರ ಬಾರಿಯೊ |
ಳೊಳಗಾಗದೆ ನಿನ್ನ ಬರ್ದುಕಿ ಬಂದಂದಮಿದಾ ||
ರಳವೀಗಳುಂಬಮಂಬುಜ |
ದಳಾಕ್ಷಿ ಪೋಗಬ್ಬೆ ಬೇಗಮೆಂಬುದುಮಾಗಳ್‌ || ೨೪ ||

ವ || ಸುದಾಮೆ ವಿಸ್ಮಯಂಬಟ್ಟು ಧನದೇವನ ಮುನ್ನಿನ ಲಂಪಳಿಕೆಯುಮನೊಲ್ದು ಬಂದೆಡೆಯೊಳೊಲ್ಲದೆ ಮೆಚ್ಚಿ ಪೊಗಱ್ದು ಬೋಗಲ್ವೇೞ್ದುದುಮಂ ನೆನೆಯುತ್ತ ಬರ್ಪಾಗಳಾ ಮೂವರುಮಾಕೆಯ ಸತ್ಯಮುಮನಾತನ ಶೌಚಮುಮಂ ಮೆಚ್ಚಿ ಪೊಗೞುತ್ತುಂ ಪೋಗಿ ಮುನ್ನಮಿರ್ಪೆಡೆಗಳೊಳಿರ್ದರನ್ನೆಗಮಾ ಸುಧಾಮೆಯುಂ ತಳಾಱನನಱಸುತ್ತಂ ಬಂದು ನನ್ನಿಯಂ ಕೊಟ್ಟುದಱೆಂ ನಿನ್ನಲ್ಲಿಗೆ ವಂದೆ ನೀನಿನ್ನೆನ್ನಂ ಮೆಚ್ಚುಕೆಯಿಮೆಂಬುದುಂ ಮುನ್ನಮಾಂ ನಿನ್ನನ್ನೆನ್ನಳೆಂದೞೆಯದೆ ಪೊಲ್ಲಮಾನಸೆಯದೆ ಬಗೆದು ಪಿಡಿದೆಂ ನಿನ್ನನ್ನರ್ಮಹಾಸತಿಯರಾರುಮಿಲ್ಲ ಬೇಗಂ ಪೋಗೆಂಬುದುಮಲ್ಲಿಂ ಬಂದು ಕಳ್ಳನಂ ಕಂಡು

ಇವು ಲಕ್ಕೆ ಕೋಟೆ ಬೆಲೆಕೆ |
ಯ್ವ ದಿವ್ಯಾಭರಣಮಿಂತಿವಂ ನೀಂ ಕೊಳ್ಳೆಂ ||
ದವಯವದಿಂ ನುಡಿದೋಡೆ ನೀಂ ಸ |
ತ್ಯವಾದಿಯೈಯೆಂದು ಪೊಗೞ್ದು ಪೋಗಲ್ವೇೞ್ಧಂ || ೨೫ ||

ವ || ಅಂತಾಯೆಡೆಯಿಂ ರಕ್ಕಸನಿರ್ದೆಡೆಗೆವಂದು ನೀನೆನ್ನಂ ತಿನ್ನೆಂಬುದುಮಾ ರಕ್ಕಸಂ ಬೆಕ್ಕಸಂಬಟ್ಟು

ನೀಂ ನಿನ್ನ ನುಡಿದ ನಿಡಿವಳಿ |
ಯಂ ನೆಱಪಿದೆ ನಿನ್ನ ನನ್ನಿ ನಿನ್ನಯ ಮೆಯ್ಯೊಳ್‍ ||
ಸನ್ನಿದಮಾದುದು ಪೋಗೆನೆ |
ಕನ್ನೆಯುಮಾತ್ಮಾಲಯಕ್ಕೆ ಬೇಗಂ ಪೋದಳ್‌ || ೨೬ ||

ವ || ಇಂತಾ ಕನ್ನೆಯಂ ಬೇಗಂ ಕಾದು ಕೞಿಪಿದ ನಾಲ್ವರೊಳಗೆ

ಧನದೇವನೊಳ್ಳಿದನೊ ಕ |
ಳ್ಳನೊಳ್ಳಿದನೊ ತಳಱನೊಳ್ಳಿದನೊ ರಕ್ಕಸನೀ ||
ತನೆ ಕಡೆಯಲೊಳ್ಳಿದನೊ ನಿ |
ಮ್ಮನಿರುವೊಳ್ಳಿದರನುಳ್ಳ ತೆಱದಿಂ ಪೇೞೆಂ || ೨೭ ||

ವ || ಎಂಬುದುಮವರೊಳ್‌ ಇರುಳ್‌ ತೊೞಲ್ದೆಣಿಲ್ಗೋತ್ತೆಯಿಟ್ಟು ಪಟ್ಟಾತನೇಕಾಂತದೊಳ್‌ ದಿನಾಂತದೊಳಗಣ್ಯ ಪುಣ್ಯಲಾವಣ್ಯಸಂಪನ್ನೆಯಪ್ಪ ಕನ್ನೆಯಂ ತನಗಾಟಿಸಿ ಬಂದೊಡಮೊಲ್ಲದೆ ಮೊಱೆಗೊಂಡು ಕೞೆಪಿದ ಧನದೇವನ ಸಮಾನ ಮಾವನುಮಿಲ್ಲೆಂದಂ ತಂದ ಕುಱೆಯನಂದಿರಳೊಳ್ಕೊಂದು ತಿಂದಾತಂ ಪಸಿದು ದೆಸೆದೆಸೆಗವ್ವಳಿಸಿ ಹಾಹಾಭೂತಚೇತಸನಾಗಿರ್ದ ಮೃದುಪಿಶಿತಾಹಾರಮಂ ಪಡೆದುಂ ಮೆಚ್ಚಿ ಕರುಣಿಸಿ ತಿನಲ್ಲೊಲ್ಲದೆ ಕಾದು ಕೞೆಪಿದ ರಕ್ಕಸಂಗೆ ಮಿಕ್ಕವರುಳ್ಳೊಡೆ ಪೇೞೆಮೆಂದಂ ಸರ್ಪದಸಷ್ಟೆಯಂ ಕಾದುಕೊಂಡು ಜಾವೆಮಿರ್ದ್ದಾತಂ ನಿರ್ದೋಷಿಗಳ ಮೈಯೊಳಿಲ್ಲದ ದೋಷಂಗಳನಿಟ್ಟು ಕಟ್ಟಿ ಪಿಡಿದುಯ್ದರಸರಲ್ಲಿ ನಿಚ್ಚಂ ಮೆಚ್ಚುವಡೆವವನ ಮೂಲ್ಯಮಣಿಗಣಭೂಷಿತೆಯಾಗಿ ನಡುವಿರುಳ್‌ ಬರ್ಪ ಕೊಡಸೂಸಂ ಜಡಿದು ಪಿಡಿತಂದೊಪ್ಪಿಸದೆ ಕೞೆಪಿ ಜಸಮಂ ತಳೆದ ತಳಾಱನ ದೊರೆಗೆ ವರಲಾರುಮಾಱರೆಂದಂ ಕುಱಂಬರ ಪಳ್ಳಿಗೆವೋಗಿ ಕಱೆಯಂ ಕಳ್ದು ತಂದಾತನಱುದಿಂಗಳರೆಯೇಱೆ ಹಱೆದು ಪಱೆದ (?) ಪರುಣೆಯಂ ಪಡೆದೊಡಂ ಕುಱುವಡಿಯಂ ಪಡೆದೆನೆಂದಿರ್ಪ ಕಳ್ಳನಂತಪ್ಪರೀ ದಿವ್ಯವಸ್ತ್ರಾಭರಣಂಗಳಂ ಕೊಳ್ಳೆಂದು ಮುಂದಿಕಿದೊಡವಱೊಳೊಂದುಮಂ ಕೊಳ್ಳದೆ ಪೋಗಲ್ವೇೞ ಕಳ್ಳನಂತ ಮೂಱುಂ ಲೋಕದೊಳೊಳ್ಳಿದರಾರಾನುಮುಳ್ಳೊಡೆ ನೀಮೆ ಪೇೞೆಮೆಂದನಿಂತಾ ನಾಲ್ವರುಂ ತಂತಮ್ಮ ಮನಕ್ಕನುಸಾರಿಯಾಗಿ ನೆಗೞ್ವ ನೆಗೞ್ತೆಗಳಂ ನುಡಿವುದುಮವಂದಿರು (ಗ)ಳಾಡಿ -ದಾಟಮುಮಂದಿನಕೂಟಮುಮಂ ಕೂಡಿ ಬಂದೊಡೆ ಸುಮತಿ ಸುಮತಿವಿಕಾಸದಿಂ ಕಳ್ಳನೊಳ್ಳಿದನೆಂದವನನೆ ಕಳ್ಳನೆಂದಱೆದು

ಅವರೆಲ್ಲರುಮಂ ಪೋಗ |
ಲ್ಕೆವೇೞ್ದು ಬೞೆಕ್ಕಂತೆ ಕಳ್ಳನೊಳ್ಳಿದನೆಂದಿ ||
ರ್ದವನನಿರವೇೞ್ದು ಪಲತೆಱ |
ದ ವಿಮೋಹಮಮನುಂಟು ಮಾಡಿ ಕೃತ್ರಿಮದಿಂದಂ || ೨೮ ||

ವ || ನಿನಗಮೆನಗಮೆನಿತು ಕಾಲಮಿರ್ಪೊಡಂ ಧನಮನೂನಮುಂಟು ಪೋಪಂ ಬಾಯೆಂದು ತನ್ನ ಮನೆಯ ಕಡಾರದ ಪೊನ್ನಂ ತಂದು ಮುಂದಿೞೆಪುವುದುಂ ಭೃತಕಂ ಕೃತಕಪ್ರಣಯಮೆಂದಱೆಯದೆ ನೆಱೆ ಕೂರ್ತಳೆಗೆತ್ತು ಮೆಯ್ಯಱೆಯದೆನ್ನ ಕಯ್ಯೊಳಂ ಕಿಱೆದರ್ಥಮಿರ್ದಪುದದುವನಿಲ್ಲಿಕ್ಕೆಂದು ತನ್ನ ಕಯ್ಯೊಳಿರ್ದ ಸಾಸಿರಗದ್ಯಾಣದ ಪೊಟ್ಟಣಮಂಸುಮತಿಯ ಕಯ್ಯೊಳ್‌ ಕೊಟ್ಟಾಗಳಾಕೆಯುಮದಂ ಕಳೆದುಕೊಂಡು ಕಿಱೆದುಬೇಗಮಾತನಂ ನಿದ್ರೆಗೆಯ್ಯಲ್ವೇಡಿ ಪುಸಿನಿದ್ರೆಗೆಯ್ದೆರ್ದು ಪೋಗಿ ಚಂಡಕೀರ್ತಿಗಾ ವೃತ್ತಾಂತಮನಱೆಪಿ ದೊಡಾತನವನಂ ಪಿಡಿದು ಚಂದ್ರವಾಹನಂಗೆ ತೋಱೆ ಕಳ್ಳನಂ ಕಿಱೆದನೆ ಕುಱೆದಱೆ ದಱೆಪಲ್ವೇಱ್ದೊಡಾತನನೊಯ್ದಪರೆಂದು ಪೇೞ್ದ ತಂದೆಯ ಮಾತಂ ಕನ್ಯೆ ನಿರ್ಣಯಮಾಗಿ ಅರವಕರ್ನೀಸಿ ನೀಮೆನ್ನ ಕೈಕೊಂಡ ಕಳ್ಳದ ಬ್ರತಮಂ ಬಿಸುಡಲ್ವೇೞ್ದೆರ್‌ ಬಿಸುಟೆನಪ್ಪೊಡೆನಗಂ ಕಳಲ್ವೇೞ್ಕುಂ ಕಳ್ದೆನಪ್ಪೊಡೆನ್ನುಮನೀ ಮಾರ್ಗದ ಕೊಲೆಯೊಳಲೆದು ಕೊಲ್ಲರೆಂಬುದುಮಂತಾದೊಡಾ ತಪಮಿರ್ಕ್ಕೆ ಮತ್ತಿನ ಬ್ರತಂಗಳನುೞೆದು ಪುೞೆಲೊಳೆ ಬರ್ಪಂ ನ ಡೆಯೆಂದು ಕಿಱೆದೆಡೆಯಂ ನಡೆವುದುಂ ಮುಂದೊಂದೆಡೆಯೊಳ್‌

ನಯಹೀನರ್ಪಿಡಿದೊತ್ತಿ ಕೆನ್ನೆವರೆಗಂ ಕರ್ಣಂಗಳಂ ಕೊಯ್ದು ನಿ |
ಎರ್ದಯದಿಂ ಪೀಡಿಸಿ ಬಳ್ಳುವೋಪಿನೆಗಮೆಲ್ವಂ ತಾಪಿನಂ ಮೇಗೆ ಮೂ |
ಗಿಯ ಮೂಗಂ ತಲೆವಾರಕೌಯ್ದು ತಲೆಯೊಂದಂ ಕಂಠದೊಳ್ಕಟ್ಟಿ ಪಾ |
ೞೆಯನೊಕ್ಕಾಕೆಯನಂದು ಬಂಧುಜನಮೆಲ್ಲಂ ನಿಂದು ನೋೞ್ಪಾಕೆಯಂ || ೨೯ ||

ವ || ತನಗಿದಿರಾಗಿ ಬರ್ಪ ಪಾಣ್ಬೆಯಂ ದುಂದುಱುಂಬೆಯಂ ಕಂಡೀಕೆ ಗೆಯ್ದು ದೋಷಮಾವುದೆಂದು ಬೆಸಗೊಳ್ಳಿಮೆಂಬುದುಂ ನಾಗಶರ್ಮಂ ತಳಾಱನಂ ಬೆಸಗೊಂಡು ನಾಗಶ್ರೀಗೆ ಪೇೞ್ಗುಮೀ ಚಂಪಾನಗರನಿಕಟೋದ್ದೇಶದೊಳ್‌ ಶ್ವೇತಪುರಮೆಂಬ ಪುರಮುಂಟಲ್ಲಿ

ಅನುಪಮ ಸಶ್ರೀಕಂ ಮ |
ತ್ಸ್ಯನೆಂಬ ಪರದಂತೆ ಜೈನಯೆಂಬಳ್‌ ಕುಲಮಾ ||
ನಿನಿ ತದ್ಯುಗಕ್ಕೆ ಪೆಸರಿಂ |
ದೆ ನಂದನುಂ ಭದ್ರಮುಮಿ ತನೂಭವರಿರ್ವರ್‌ || ೩೦ ||

ವ || ಜೈನೆವೊಡೆವುಟ್ಟದಂ ಸೂರಸೇನನೆಂಬ ಪರದನಾತನ ಛಾರ್ಯೆ ಸುಮಿತ್ರೆಯೆಂಬಖವರ್ಗೆ ಮದಾಳಿಯೆಂಬ ಮಗಳ್ಪುಟ್ಟಿ ಬಳೆಯುತ್ತಿರೆ ನಂದನೊಂದು ದಿವಸಂ ಸುವರ್ಣ್ನದ್ವೀಪಕ್ಕೆ ಪರದುವೋಗುತ್ತಂ ಪನ್ನೆರಡು ವರುಷಕ್ಕಾಂ ಬಾರದೆ ತಡೆದೆನಪ್ಪೊಡೆ ಕನ್ನೆಯನೆನ್ನ ತಮ್ಮಂ ಭದ್ರಂಗೆ ಕುಡಿಮೆಂದು ತಮ್ಮ ಮಾವನಪ್ಪ ಸೂರಸೇನಂಗಂ ಸುಮಿತ್ರೆಗಮಪ್ಪಯಿಸಿ ಪೋಪುದುಮಿತ್ತಲಾ ಮದಾಳಿಯಂ ವಿವಾಹ ಪ್ರಾಪ್ತೆಯಾಗಿ ಬಳೆಯವಳೆಯೆ

ಪನ್ನೆರಡು ವರುಷದವಧಿಯ |
ಮಿನ್ನೆಱೆದುದು ಕೂಸು ಕೞೆಯೆ ತಬಳೆದುದು ನಂದಂ ||
ತನ್ನೆಂದವಧಿಗೆ ಬಾರಂ |
ಕನ್ನೆಯನಿನ್ನಿರಿಸಲಾಗ ಭದ್ರಂಗೀವಂ || ೩೧ ||

ವ || ಎಂದು ಸೂರಸೇನಂ ಮದಾಳಿಯುಂ ಭದ್ರಂಗೆ ಕುಡುವೆನೆಂದು ಪಸೆಯೊಳಿರಿಸಿ

ನೆಱೆ ಸಂತೋಷದಿಂ ಕೈನೀ |
ರೆಱೆಯಲ್ಕೆಂದಿರ್ಪ ಪದದೊಳತ್ಯಾಶ್ಚರ್ಯಂ |
ನೆಱೆದಿರೆ ಮದಾಳಿಗಯಸಂ |
ಪಱೆಪಡೆ ಬರ್ಪಂದದಿಂದೆ ನಂದಂ ಬಂದಂ || ೩೨ ||

ಬಂದ ನಂದನಂ ತಂದೆಯುಂ ಮಾವನುಂ ಕಂಡು ಮದಾಳಿಯೊಳ್ಮದುವೆ ನಿಲ್ಲೆಂಬುದಂ ಭದ್ರಂಗೆ ಕುಡಲ್ವೇಡಿರ್ದ ಕೂಸನೆನಗೆ ಮದುವೆಯಾಗೆಂಬುದುಂ ಭದ್ರನುಂ ನಂದಗೆಂದು ಬಳೆದ ಕೂಸೆನಗೆ ಮೊಱೆಯಲ್ಲಳೆಂದಿರ್ವರುಮೋರೋರ್ವರ ಮೇಲೆ ನೆವಮಿಟ್ಟು ಮಾಣ್ಪುದುಂ ಮುದಾಳಿಯುಂ ನಂದನ ವನದಿಂ ಸರೋಜವನದಿಂದಮಗಲ್ದ ಮದಾಳಿಯಂತೆ ಮಱುಗಿ ತನ್ನ ತವರ್ಮನೆಯಲ್ಲಿ ರ್ಪುದುಮಲ್ಲಿಯೊರ್ವಂ ನಾಗಸೂರನೆಂಬ ಪರದನೊಳನವಂಗೆಣ್ಬರ್‌ – ಪೆಂಡಿರೊಳರವರೊಳಂ ತಣಿಯದತಿ ವಿಷಯಕಾಂಕ್ಷೆಯಿಂ ಮದಾಳಿಗೆ ಬಸಮಾಗಿ ಮಱೆವಾೞುತ್ತಿರ್ಪುದುಂ ತಳಾಱನಱೆದು ಪಿಡಿದಾ ಪಾಣ್ಬನಂ ಕೊಂಡು ತಲೆಯನಱೆದೀಕೆಯ ಕೊರಲೊಳ್ಕಟ್ಟಿ ಕಿವಿಮೂಗನಱೆದೊಂದೆವಱೆಗುಟ್ಟುತಂ ಪೋಗುತಿರ್ದಪರೆಂಬುದುಂ

ಜಸಮೞೆವಂತರೀ ಬ್ರತಮನಾ ಬ್ರತಿಗೊಪ್ಪಿಸಿ ಬಂದೆನಪ್ಪೊಡಾ |
ನಸತಿಯೆನಾಗಿ ದುಶ್ಚರಿತ ವೃತ್ತಿಯೊಳಗ್ಗಲಿಸಲ್ಕೆವೇೞ್ಕುಮಂ |
ತೆಸಗಿದೆನಪ್ಪೊಡೋವದೆ ಖಳರ್ನ್ನೇರೆ ತಂದು ಕಱತ್ತು ಪೂಣ್ಕೆವೆ |
ತ್ತೋಸೆದೊಳಗಾಗಿ ಮೂಗನರಿದೀ ವಿಧಿಯಾಗಿರೆ ಮಾಡದಿರ್ಪ್ಪರೇ || ೩೩ ||

ಅಂ ತಾದೊಡೆನಗೆ ನೀವೞಲುಂ ನೀರಿೞೆಯಲುಮಣ್ಮದ ಸಾವು ಸಮನಿಸುಗುಮದು ಕಾರಣದಿಂ

ಇನಿತೊಂದು ಪರಾಭವಪದ |
ಮನೆಯ್ದುವರ್‌ ಪಾರದೊಳೆಂದಾಂ ಪರದಾ |
ರ ನಿವೃತ್ತಿಗೆಯ್ದೆನೆನೆ ಪೇ |
ೞ್ದ ನಾಲ್ಕುಮಂ ತಳೆದು ಮಗಳೆ ತೊೞೆ ನೀಂ ಪೆಱವಂ || ೩೪ ||

ಎಂದು ಮತ್ತಮಂತೆ ಬರ್ಪಾಂಗಳ್‌

ಕಿವಿಯಂ ಕೀಲ್‌ಕೊಳ್ವಿನಂ ಕರ್ಬುನದ ಸಲಗೆಯೊಳ್‌ ಬೆಟ್ಟ ನಿಟ್ಟೆಲ್ವುಗಳ್‌ ತೋ |
ಱುವಿನಂ ಕಾಯ್ದಿರ್ಕುೞೆಂದಿರ್ಕುೞೆಸೆ ಕುರವದಿಂ ಕೂಡೆ ನೆತ್ತರ್‌ತೆರಳ್ದು
ಣ್ಮುವಿನಂ ಮೈಯೆಲ್ಲಮಂ ಜರ್ಜರಿಸಿ ಜವಜಾಗಿರ್ದನಂ ಗುರ್ದಿ ಹಾಹಾ
ರವದಿಂ ಶೂಲಾಗ್ರದೊಳ್‌ ಬಯೞೆದೊಳಱುವಿನಂ ಕೊಲ್ವುದಂ ಕನ್ನೆ ಕಂಡಳ್‌ || ೩೫ ||

ಕಂಡೀ ಪ್ರಚಂಡತುಂಡನ ಮಾಡಿದ ದೋಷಮಾವುದಾಗಿ ನಾನಾ ವಿಧದ ವಧೆಗಳಂ ಮಾಡಿದಪರಿದಂ ಬೆಸಗೊಂಡು ಪೇೞೆಮೆಂಬುದುಂ ನಾಗರ್ಶನಾ ಪ್ರಪಂಚಮೆಲ್ಲಮಂ ತಲಾಱನಂ ಬೆಸಗೊಂಡು ತಿಳಿಯೆ ಪೇೞ್ಗುಮೀ ಕೊಲೆಪಡೆವಾತಂ ಚಂದ್ರವಾಹನನ ಕೀಲಾರಿಗಂ ವೀರಪೂರ್ಣನೆಂಬನೊಂದು ದಿವಸಮಲ್ಲಿಯ ತುಱು ಪಳ್ಳಿಯ ಗೋವುಳಿಗ ರೊಳ್ತೋಟಿಗೆಯ್ದಿಱೆದಾಡುವ ಬೀಡಿನೆರ್ಮ್ಮೆಗಳಂ ಪಿಡಿತಂದರಸರ್ಗೊಪ್ಪಿ ಸುವುದುಮರಸನೀತನ ಭಕ್ತಿಗಂ ವ್ಯವಸಾಯಕ್ಕಂ ಮೆಚ್ಚಿ ತನ್ನ ತಂದೆರ್ಮ್ಮೆಗಳೊಂದುಮಂ ಕೊಳ್ಳದೆ ನೀನೇ ಕೊಳ್ಳೆಂದು ಕೊಟ್ಟೊಡಾ ದಯೆಗೆ ನಯಂಬಡೆದೆನೆಂದು ತಲೆಕೆೞಗಾಗಿ ಮೇಗುಗಾಣದೆ ಮತ್ತಂ ಪೆಱರ ಪುಲವುಂ ಜೀವಧನಂಗಳನರಸರ ಕಾಪಿನ ಪೊಲನಂ ಪೊಕ್ಕುವೆಂದುಂಡಿಗೆಯೊತ್ತಿಕೊಳು – ತ್ತುವೂೞೆಗವಾದೆಡೆಗಳೊಳ್‌ ಝಾಳೆಯಂಗೊಳುತ್ತು ಮನಿತಱೊಳಂ ತಣಿಯದೆ ಚಂದ್ರಮತೀ ಮಹಾದೇವಿಯ ಕೀಲಾರದ ಧೇನುಗಳಂ ಸೂಱೆಗೊಳ್ವಂತೆ ಕೊಂಡುಪೋದೊಡೆ ಚಂದ್ರಮತಿ ಚಂದ್ರವಾಹನನಲ್ಲಿಗೆ ವಂದು