ಆರೊಳಮೆಂದುಮಿಲ್ಲದ ಪರಾಭವಮಿಂದೆನಗಾಯ್ತು ನಿನ್ನ ಕೀ
ಲಾರಿಗ ವೀರಪೂರ್ಣ ಭಟನಳ್ಕುಱದೊಟ್ಟಜೆಯಿಂದಮೆನ್ನನಾ
ರ್ಬಾರಿಪರೆಂದು ಗೋವುಮನನಾಕುಲಮಿೞ್ಕುಳಿಗೊಂಡು ಪೋದನೇ
ಕಾರಣದಿಂದೆ ಪೇೞೆನಗೆ ನೀಂ ದಯಗೆಟ್ಟೆ ಪುರಾಧಿನಾಯಕಾ || ೩೬ ||

ಎಂದು [ಪೇೞೆ] ಕ್ರೋಧಾನಳಾರಕ್ತೆನೇತ್ರನಾಗಿ ವೀರಪೂರ್ಣನಂ ತನ್ನಲ್ಲಿಗೆ ವರಿಸುವುದುಂ

ಬೆದೞೆ ಪುಲಿ ಬಾವಿಯೊಳ್‌ ಬಿ |
ರ್ದುದನಱೆದೊಡೆ ಗುಂಡುಗೊಂಡು ಕೊಂದಿಕ್ಕುಗುಮ |
ಲ್ಲದೆ ಪಿಡಿದು ತೆಗೆವರಾರೆಂ |
ಬುದನೆನಿಸಿ ಜನಂ ತಗುಳ್ದು ತನತನಗೆಂಗುಂ || ೩೭ ||

ವ || ಈತನಿನಿತಱೊಳಗೆ ಮಾಣ್ದನಲ್ಲ ಎಮ್ಮೆಮ್ಮ ಜೀವಧನಂಗಳನಾಯಿಲಂ ಗೊಂಡಿರ್ದಪನೆಂಬುದುಮೆನ್ನ ಕೊಟ್ಟನಿತಱೊಳಂ ತಣಿಯದೆ ಮತ್ತೆ ಯತಿಕಾಂಕ್ಷೆಯಿಂ ಲೋಗರೊಡವೆಯಂ ಝೂಳೆಯಂಗೊಂಡನಿವನಂ ಪಲವುದಿವಸಂ ನಮೆಯಿಸಿ ಕೊಲ್ಲಿಮೆಂಬುದುಂ ತಳಾಱರೀತನನತಿದುಃಖಾಕ್ರಂದನಮುಣ್ಮೆಗೋಣ್ಮುರಿಗೊಂಡು ಕೊಂದು ಕೂಗಿದಪರೆಂಬುದಂ ನಾಗಶ್ರೀ ತನ್ನ ತಂದೆಯನೆಂದಳೆಂದುವುಮಿಂತಪ್ಪ ಸಾವುಂ ನೋವುಮಾಗದಿರ್ಕ್ಕೆಂದು ಗುರುಗಳಲ್ಲಿ ಕೊಲ್ಲದ ಪುಸಿಯಾದ ಕಳದ ಪರದಾರಗಮ ನಂಗೆಯ್ಯದ ಪರಿಗ್ರಹಕಾಂಕ್ಷೆಗೆಯ್ಯದಯ್ದುಮಣುವ್ರತಂಗಳಂ ಕೈಕೊಂಡೆನೀಗಳವಂ ಮಗುಳೊಪ್ಪಿಸಿದೆನಪ್ಪೊಡೆ ಇಂತೀ ಇನಿಬರುಮೆಯ್ದಿದ ದುಃಖಗಳನೆಯ್ದಿ ಮೇಗೆ ನರಕಂಬುಗುವೆನೆಂಬುದುಂ ತಾನುಮಾಸನ್ನಭವ್ಯನಪ್ಪುದುಕಾರಣಂ

ಕೊಲೆಯೆಂದಸತ್ಯಮೆಂದ |
ಗ್ಗಲಿಸಿದ ಕಳವೆಂದುಂ ಪಾದರಮೆಂದು ಪಳಂ ||
ಚಲವೆ ಪರಿಗ್ರಹಮೆಂದಿವ |
ಱೆಱೂಳಾದಪೇಕ್ಷೆಯನುಪೇಕ್ಷೆಯನುಪೇಕ್ಷಿಸಬ್ಜದಳಾಕ್ಷೀ || ೩೮ ||

ವ || ನೀನೀ ಬ್ರತಂಗಳಂ ನಿಶ್ಚಳಮಾಗೆ ತಾಳ್ದುವುದು ನಿನಗೆ ದರ್ಪದಿಂ ಬ್ರತಂಗಳಂ ಕೊಟ್ಟ ವ್ರತಿಯನಾದರ್ಪಿಸಿ ಬರ್ಪಂ ಬಾಯೆಂದು ನಾಗಶರ್ಮಂ ನಾಗಶ್ರೀಯನೊಡಗೊಂಡು ಬಂದು ನಾಗಸ್ಥಾನದ ಪ್ರಥಮದ್ವಾರದೊಳ್‌ ನಿಂದು ಸೂರ್ಯಮಿತ್ರಾಚಾರ್ಯರಂ ಕಂಡು

ಅನವದ್ಯ || ಕ್ಷಿತಿಯೊಳಾನಭಿವಂದಿತನೆಂ ವಿಪ್ರೋತ್ತಮನೆಂ ಸಕಳೋರ್ವರಾ |
ಪತಿಕಿರೀಟಾರ್ಚಿತಪಾದದ್ವಂದ್ವನೆನಪ್ರತಿಮಪ್ರಜಾ
ಪತಿಸಮಾನನೆನೆನ್ನಮಗಳ್ಗೇ ನಾನುಮುಪಾಯದ ಮಾಯೆಯಿಂ |
ವ್ರತಮನಾಗ್ರಹದಿಂದಮೆ ನೀವಿಂತೀವುದಿದಾವುದು ಸಂಮದಂ || ೩೯ ||

ವ || ಎಂಬುದುಮಾ ಮುನೀಂದ್ರರ್ ನಾಗಶರ್ಮನ ಭವ್ಯತೆಯ ಕಾಲಲಬ್ಧಿಯು ಮನಲ್ಲಿಯ ವಿನೇಯಜನಂಗಳೆಲ್ಲಮಿಂತಲ್ಲದೆ ಸದ್ಧರ್ಮಕ್ಕೆ ಬಾರರೆಂಬ ಮಾರ್ಗಪ್ರಭಾವಮುಮಂ ದಿವ್ಯಜ್ಞಾನದಿಂದಮುಪಲಕ್ಷಿಸಿ ಕೂಸಪ್ಪೊಡೆ ಎಮ್ಮ ಕೂಸು ನಿನಗೆತ್ತಣ ಮಗಳೆಂಬುದುಮಾ ಕನ್ನೆ ತನ್ಮುನೀಂದ್ರಪಾದಾರವಿಂದದ್ವಂದ್ವದೊಳ್‌ ನಿರ್ದ್ವಂದ್ವಭಾವದಿಂ ವಿನೀತೋತ್ತಮಾಂಗೆ ಕೆಲದೊಳ್‌ ಕುಳ್ಳಿರ್ಪುದುಮವರ ಮಹಾ ತಪಃಪ್ರಭಾವದಿಂದಾಜ್ಞಾಮಾಹಾತ್ಮ್ಯದಿಂದೇನುಮೆನಲಣ್ಮದೆ ಬಾಯ್‌ಬಿಟ್ಟು ಕೀಲಿಸಿದಂತಲ್ಲಿ ತಳರದಿರ್ಪುದುಂ

ಅಮಿತಾಳಾಪಂಗಳಿಂ ದೊಮ್ಮಳಿಸಿ ಕಿನಿಸಿ ಕೊಟ್ಪೂಳ್ವ ತಾತ್ಪರ್ಯಮೇನೆ |
ಮ್ಮಮಗಳ್‌ಬಂದೆಮ್ಮ ಕೈಯೊಳ್‌ ಬ್ರತಮನೊಸೆದು ಕೈಕೊಂಡೇನಾಯ್ತು ಪೇೞೆ |
ನ್ನೆಮಗೀ ಕೂಸಾರ್ಗೆ ನೀರ್ಮಾರ್ಗಿದು ಗುಣದೊಳಗಲ್ಲಿಲ್ಲಿರಲ್ವೇಡ ನಿಮ್ಮಾ |
ಶ್ರಮದತ್ತಲ್ಪೋಗಿರ್ದಂದರಸರ ದೆಸೆಯಿಂ ನಿಕ್ಕುವಂ ಪೊಲ್ಲದಕ್ಕಂ || ೪೦ ||

ಈಯೆಡೆಯಿಂ ಪೊಗಲೆ ಪಾ |
ರ್ವಾಯೆನೆ ತಲ್ಲಸ್ಣಿಸಿ ಪಾರ್ವನಬ್ರಾಹ್ಮಣ್ಯಂ ||
ಭೋಯೆಂದು ಪುಯ್ಯಲಿಡುತುಂ |
ಬಾಯಂಬಿಡುತುಂ ನೃಪೇಂದ್ರಸಭೆಯಂ ಪೊಕ್ಕಂ || ೪೧ ||

ವ || ಅಂತು ತಮ್ಮಾಳ್ದನಪ್ಪ ಚಂದ್ರವಾಹನನರೇಂದ್ರನಂ ಕಂಡು

ಎನಗಾರ್ಬಲ್ಲಿದರೆಂದು ಗಂಡುಗೆಡದೊರ್ವಂ ದೇವ ಠಕ್ಕಿಕ್ಕಿ ಸಾ |
ಧನಸಂಮೋಹದಿಂದಮೆನ್ನ ಮಗಳಂ ಬಲ್ಲಾಳ್ತನಂಗೆಯ್ದು ನಿ |
ನ್ನ ನರಾಧೀಶ್ವರನಕ್ಕೆ ಬರ್ಕ್ಕೆ ಕುಡೆನೆಂದೊಟ್ಟೈಸಿ ಕೈಕೊಂಡು ನಿಂ |
ದನಿದಂ ನೀನವಧಾರಿಸೆಂದು ತೊವಲಂ ಮುಂದಿಕ್ಕಿದಂ ಭೂಪವಾ || ೪೨ ||

ವ || ಆಗಳಾ ಮಹೀವಲ್ಲಭನತ್ಯಾಶ್ಚರ್ಯಂಬಟ್ಟು ರಿಷಿಯರಿಂತೊಟ್ಟ ಕೌತುಕಮಂ ನೋೞ್ಪ ಕುತೂಹಳದಿನಾತ್ಮೀಯ ಪ್ರಾಣೇಶ್ಚರಿಯಪ್ಪ ಚಂದ್ರಮತಿ ಮಹಾದೇವಿವೆರಸು ಆಶೇಷಸಾಮಂತಮಹಾಸಾಮಂತಮಂಡಳೇಶ್ವರಶ್ರೇಷ್ಠಿ ಸಚಿವಪ್ರಧಾನ ಪಂಡಿತಪ್ರಕರಪ್ರಭೃತಿಪರಿಜನನಾಣ್ವಿತನಾಗಿ ನಾಗಸ್ಥಾನಕ್ಕೆ ವಂದು ಯತಿಪತಿಗಳಂ ಕಂಡು ವಿನಯದಿಂ ಬಂದಿಸಿ ತದಾಸನ್ನಪ್ರದೇಶದೊಳ್ಕುಳ್ಳಿರ್ದು

ಮುನಿವೃಂದಾಕರವಂದ್ಯ ಪೆೞೆಮಿನಿತೊಂದಾಕ್ರೋಶಮಿ ನಾಗಶ
ರ್ಮನೊಳೇ ಕಾರಣದಿಂದಮಿಂದು ದೊರೆಕೊಂಡತ್ತಾವ ತಾತ್ಪರ್ಯದಿಂ |
ವಿನಯೋಲ್ಲಘನಮಂ ಪ್ರಭಾವಿಸಿದನೀ ಸಂಬಂಧದೊಂದಂದಮೆಂ
ತತೆನೆ ಭೂಭೃತ್ಪತಿಗಾ ಜಗತ್ಪತಿ ಸಮಂತಿಂತೆಂಗುಮೀಯಂದದಿಂ || ೪೩ ||

ಜಗತೀವಲಯಮುಮೞೆವ |
ನ್ನೆಗಮೆಮ್ಮ ಮಗಳ್‌ ಬ್ರತಂಗಳಂ ಕೇಳ್ದು ಮನಂ ||
ಬುಗಿಸಿದೊಡೆಂತಬಳೆಗೆ ತಾ |
ಳಗೊಟ್ಟೆಯೆಂದೆಮ್ಮೊಳಿಂತು ತೋಟಿಗೆ ವಂದಂ || ೪೪ ||

ಎನೆ ನಾಗಶರ್ಮನೆಂದಂ |
ಜನಪತಿ ನೀನಾದಿಯಾಗಿ ನೆೞೆ ನೆರೆದಿರ್ದೀ ||
ಜನಮೆಲ್ಲಮಱೆವಿದಾನೀ |
ತನುಜೆಯನೀ ಘಣಿಗೆ ಪರಸಿ ಪಡೆದ ಸ್ಥಿತಿಯಂ || ೪೫ ||

ವ || ಎಂಬುದುಮಾ ಮುನೀಂದ್ರರೀ ಕನ್ನೆ ನಿಮ್ಮ ತನುಜೆಯಪ್ಪುದನೆಲ್ಲರು ಮಱೆವರಪ್ಪೊಡೆ ನಾಲ್ಕು ವೇದಮಮನಾಱಂಗಮುಮಂ ಅಱು ತರ್ಕಮುಮಂ ಪದಿನೆಂಟು ಧರ್ಮಶಾಸ್ತ್ರಂಗಳಂ ವ್ಯಾಕರಾಣಕಾವ್ಯನಾಟಕ ಛಂಧೋಲಂಕಾರಗ್ರಹ ಗಣಿತವೈದ್ಯಾದಿ ಶಾಸ್ತ್ರಂಗಳೊಳ್‌ ಪರಿಣತರ್‌ ನೀಮುಮಪ್ಪಿರಂತನಿತುಮನೀ ಕೂಸಿಂಗೋದಿಸಿ ಶಿಕ್ಷಿಸಿದುದಂ ತೋಱೆದಿರಪ್ಪೊಡೆ ಕೂಸು ನಿಮ್ಮ ಮಗಳಪ್ಪುದು ನಿಶ್ಚಯಮೆಂಬುದುಮದೆಲ್ಲಮಂ ನಾಗಶರ್ಮನವಧಾರಿ.

ಇನಿತುಮನಾನಾವಗಱೆ |
ವೆನಲ್ಲೇನೀ ಕನ್ನೆಯಂ ಮನೋಮುದದಿಂದಾ ||
ನನಿತಱೊಳೊಂದುಮನೋದಿಸಿ |
ದೆನಲ್ಲೆನಿಲ್ಲದುದನೆಂತು ಪುಸಿದುಂಟೆಂಬೆಂ || ೪೬ ||

ವ || ಎಂಬುದುಮಾ ಮುನೀಶ್ವರರಾ ಧರಾಧೀಶ್ವರನ ಮೊಗಮಂ ನೋಡಿ

ಮಾಲಿನಿ || ಅಸದೃಶಮೆನೆ ಮುನ್ನಂ ಶಬ್ಧಶಾಸ್ತ್ರಾದಿ ವಿದ್ಯಾ |
ವಿಸರಮನುಚಿತಾಳಾಪಂಗಳಿಂ ಪಾಂಗುವೆತ್ತೋ |
ದಿಸಿದೆಮಱೆನೀ ಕೂಸೆಮ್ಮ ಕೂಸೆಂಬುದುಂ ವಾ |
ಕ್ಷ್ರಸರಮೆಸೆಯೆ ಪಾಪಾಕ್ಷೇಪನಂ ಭೂಪನೆಂಗುಂ || ೪೭ ||

ವ || ನಿಮ್ಮಡಿ ನೀಮಾ ಕನ್ನೆಯಂ ಮುನ್ನನೋದಿಸಿದರಪ್ಪೊಡಿನ್ನುಮೆನ್ನ ಮುಂದೆಯೋದಿಸಿಂ ಕೇಳ್ವ ಜನದ ಮನದ ಸಂಶಯಂ ಬಿಡಿಸಿಮೆಂಬುದುಮಾ ಕನ್ಯಕೆಯ ಮಸ್ತಕಾಗ್ರದೊಳಾತ್ಮೀಯ ದಕ್ಷಿಣಹಸ್ತಪಲ್ಲವಮನಳಂಕರಿಸಿದಾಗಳ್‌

ಶ್ರೀಗಂ ವಾಕ್ಯ್ರೀಗಮಿಂತೀಕೆಯೆ ಮಿಗಿಲೆನಿಪೈಶ್ಚರ್ಯ ಸಂಪನ್ನೆಯಂ ಸಂ |
ವೇಗವ್ಯುತ್ಪನ್ನೆಯಂ ದುರ್ಧರಕುಮತನಗೋದ್ಭಿನ್ನೆಯಂ ವಿಪ್ರವಂಶ |
ಶ್ರೀಗರ್ಭೋತ್ಪನ್ನೆಯಂ ವಿಹ್ವಳವಿಷಯಲತಾಚ್ಛಿನ್ನೆಯಂ ಬೇಗಮೆಂದರ್‌ |
ನಾಗಶ್ರೀ ಕನ್ನೆಯಂ ಚಿನ್ನೆಯಮೃತಪದಾಸನ್ನೆಯಂ ವರ್ಣಿನಾಥ‌ರ್‌ | || ೪೮ ||

ಮೊದಲೊಳ್‌ ನಿನ್ನಯ ವಾಯುಭೂತಿಯೆನಿಸಿರ್ದಾ ಜನ್ಮದೊಳ್‌ ಸನ್ಮನೋ
ಮುದದಿಂ ರಾಜಗೃಹಾಭಿಧಾನಪುರದೊಳ್‌ ತಾತ್ಪರ್ಯವೆಂದೋದಿದಂ
ದದೆ ಲೋಕಕ್ಕೆ ವಿಚಿತ್ರಮಾಗೆ ಮಗಳೇ ಸಂದೀ ನೃಪಾಸ್ಥಾನಮ
ಧ್ಯದೊಳೆಮ್ಮೋದಿಸಿದೋದನೋದಿ ಮೆಱೆ ನೀಂ ನಿನ್ನೊಂದು ವಾಗ್ಗುಂಫಮಂ || ೪೯ ||

ಎನಲೊಡಮಾ ಭವದೊಳ್‌ ತೊ |
ಟ್ಟಿನಿತುಂ ವೃತ್ತಾಂತಮಂತರಂಗದೊಳಾಗಳ್‍ ||
ಜನಿಯಿಸೆ ಮ್ರುದುಮಧುರ ಗಭೀ |
ರ ನಿನದಮೆಸೆದುದು ಮಹಾದ್ಭುತಾಂಡಂಬರದಿಂ || ೫೦ ||

ದೆಸೆದೆಸೆಗೆ ಸುಧಾಪ್ರಸರಂ |
ಪಸರಿಸಿ ಭೋರ್ಗರೆದು ಕೂಡೆ ಕವಿದಪುದೆನಿಸಿ ||
ತ್ತಸದಳಮಾಗಿರೆ ಕನ್ನೆಯ |
ಮಿಸುಗುವ ಮುಖಚಂದ್ರ ಚಂದ್ರಿಕಾವಾಕ್ಷ್ರಸರಂ || ೫೧ ||

ಹೃದ್ಯವ್ಯಾಕರಣಪ್ರಸನ್ನ ತರಪೂರ್ವಾಭ್ಯಾಸವಿನ್ಯಾಸ ತ |
ದ್ವಿದ್ಯಾಸಂಪದಮಾಗಳಾಕ್ಷಣದೊಳಾದಾಶ್ಚರ್ಯಮಪ್ಪನ್ನ ಮೇಂ |
ಸದ್ಯಂ ಸಾರ್ದುದೊ ತತ್ಕುಮಾರಿಕೆಗೆ ಸಯ್ಪಿಂ ಸಪ್ತಭಿರ್ಜಾಯತೇ |
ವಿದ್ಯಾಯೆಂಬುದು ತಪ್ಪದಾಯ್ತೆನೆ ತದೀಯಾಸ್ಥಾನ ಭೂಮಧದೊಳ್‌ || ೫೨ ||

ಪ್ರತಿಭಾಸಂಸ್ಕೃತಿಯಿಂ ಸಲಕ್ಷಣತರಂಗೋಪಾಂಗದಿಂ ವಿಶ್ವವಿ |
ಶ್ರುತವರ್ನಾರ್ಥದಿನರ್ಥದೃಷ್ಟಿಯಿನಳಂಕರೋಕ್ತಿಯಿಂ ನಿರ್ಣಯೋ |
ಚಿತವಿನ್ಯಾಸದಿನತ್ಯುದಾತ್ತರಸದಿಂದಾ ಕನ್ಯೆ ಸಾಕ್ಷಾತ್ಸರ |
ಸ್ವತಿ ತಾನೆಂಬಿನಮೇಂ ಪ್ರಭಾವಿಸಿದಳೋ ನಾನಾ ಕಳಾಳಾಪಮಂ || ೫೩ ||

ನೆರೆದಾ ರಾಜಸಬಾಂತರಾಳದೊಳುದಾತ್ತಾರ್ಥೋಕ್ತಿಯಿಂ ತನ್ನೊಳಾ |
ರ್ದೋರೆಯೆಂಬನ್ನೆಗಮುದ್ಗತಪ್ರಥಿತಶಬ್ದಾರ್ಥೋಕ್ತಿಯಿಂ ವ್ಯಕ್ತಮಾ |
ಗಿರೆ ವಕ್ಖಾಣಿಸಿ ತದ್ವಿದರ್ಪೊಗೞ್ದು ಭಾಪ್ಪೆಂಬನ್ನೆಗಂ ತತ್ಪತಿಂ |
ವರೆ ವೇದಾದಿ ಕಳಾಕಳಾಪಮನಶೇಷಾಳಾಪದಿಂದೋದಿದಳ್‌ || ೫೪ ||

ಸಕಲವ್ಯಾಕರಣಾರ್ಥಶಾಸ್ತ್ರನಿಪುಣರ್ಮಾರ್ಕೋಂಡರಿಲ್ಲುರ್ಕಿ ತಾ |
ರ್ಕಿಕರೊಟ್ಟೈಸಿದರಿಲ್ಲ ಸತ್ಕವಿಗಳಡ್ಡಂ ಬಂದರಿಲ್ಲುಂತೆ ಭುಂ |
ಭುಕಮೀ ಲೋಕದಳಾರೊಳಂ ಜನಿಯಿಸಿತ್ತಿಲ್ಲೆಂಬಿನಂ ವಿಪ್ರಕ |
ನ್ಯಕ್ಕೆ ವಿದ್ವಜ್ಜನದಿಂದಮಂದು ಪಡೆದಳ್‌ ಪಾಂಡಿತ್ಯ ಸೌಂದರ್ಯಮಂ || ೫೫ ||

ಇದು ದಲ್‌ ಕೌತುಕಮಿಂತಿದದ್ಭುತಮಿದೊಂದಾಶ್ಚರ್ಯಮೀ ಬೋಧಮೀ |
ಚದುರೀ ವಾಗ್ವಿಭವಪ್ರಪಂಚಮಬಳಾ ಸಂದೋಹದೊಳ್‌ ಮುನ್ನಮಾ |
ಗದುದಿನ್ನೆಯ್ದದುದೀಗಳಿಲ್ಲದುದು ಪೇೞೀ ಕನ್ಯೆ ತಾನೆಂದು ಪು |
ಟ್ಟದಳೆಂ ದೋದಿದಳೆಂದು ಕಲ್ತಳೊ ಕಳಾಕೌತೂಹಳಾಳಾಪಮಂ || ೫೬ ||

ವ || ಎಂದು ಸಭಾಸದರ್ಮೆಚ್ಚಿ ಬಿಚ್ಚಳಿಸಿ ಪೊಗೞ್ವೆನಮಾ ಕನ್ನೆ ವಾಯುಭೂತಿಯಾದ ಭವದೊಳ್‌ ತಾಂ ಮುನ್ನೋದಿದೋದುಗಳನಿತುಮನತಿರುಚಿರಮೃದು ಮಧುರ ವಚನರಚನೆಗಳಿನೋದಿ ವಾಕ್ಪ್ರಭಾವಮಂ ಪ್ರಕಟಿಸುವುದುಂ ಚಂದ್ರವಾಹನ ನರೇಂದ್ರನಾ ಮುನೀಂದ್ರರ ಮೊಗಮಂ ನೋಡಿ

ಜಗಮಱೆಯಲೀ ದ್ವಿಜನ್ಮನ |
ಮಗಳಂತೀ ಕನ್ನೆ ಮುನ್ನಮೋದಿದ ವೇದಾ ||
ದಿಗಳನೊಱಲ್ದೀಗಳುದಾ |
ತ್ತ ಗೀತದಿಂದೋದಿದಂದಮಿದು ಬಿಸವಂದಂ || ೫೭ ||

ನೆನೆದೊಡೆ ವಿಸ್ಮಯಮಾದಪು |
ದು ನಾಗಶರ್ಮಂಗೆವುಟ್ಟಿ ನಾಗಶ್ರೀ ತೊ ||
ಟ್ಟನೆ ನಿಮ್ಮ ಮುಂದೆ ವಾಕ್ಯ್ರೀ |
ಯೆನಿಸಿದ ತೆಱನೆನಗೆ ವಿಮಳಚಾರುಚರಿತ್ರಾ || ೫೮ ||

ಮನದೊಲ್‌ ಕೌತೂಹಳಂ ಪುಟ್ಟಿದಪುದಿದಱ ವೃತ್ತಾಂತದೊಂದಮಂ ನೀ |
ಮೆನಗೀಗಳ್‌ ವ್ಯಕ್ತಮಾಗಲ್‌ ಬೆಸಸಿಮೆನೆ ಮುನೀಂದ್ರಾಭಿವಂದ್ಯಂ ಜಗದ್ವಂ |
ದ್ಯನನಿಂದ್ಯಂ ಜ್ಞಾನಶೋಭಾಕರನಮಳಿನ ಚಾರಿತ್ರರತ್ನಾಕರಂ ಭ |
ವ್ಯನಿಧಾನಂ ಪಾಪೀನಂ ಪರಮಜಿನಮತಾಂಭೋಜಿನೀ ರಾಜಸಂಹಂ || ೫೯ ||

ಇದು ಸಮಸ್ತವಿನೇಯಜನವಿನುತ ಶ್ರೀವರ್ಧಮಾನಮುನೀಂದ್ರವಂದ್ಯ
ಪರಮಜಿನೇಂದ್ರಶ್ರೀಪಾದಪದ್ಮವರಪ್ರಸಾದೋತ್ಪನ್ನ ಪ್ರಸನ್ನ
ಸಹಜಕವೀಶ್ವರ ಶ್ರೀ ಶಾಂತಿನಾಥಪ್ರಣೀತಮಪ್ಪ
ಶ್ರೀ ಸುಕುಮಾರಚರಿತಪುರಾಣ
ದೊಳ್‌ ನಾಗಸ್ರೀಯ ಭವ
ಸ್ಮರಣ ವರ್ಣ್ನನಂ
ಸಪ್ತಮಾಶ್ವಾಸಂ