ಶ್ರೀಯಂ ಪದಾಬ್ಜದೊಳ್‌ ವಾಕ್‌ |
ಶ್ರೀಯಂ ಮುಖಕಮಲದೊಳ್‌ ವಿರಾಜಿತಕೀರ್ತಿ ||
ಶ್ರೀಯಂ ದಿಕ್ತಟದೊಳ್‌ ತಳೆ |
ದಾ ಯತಿವೃಷಭಂ ಸರಸ್ವತೀಮುಖಮುಕುರಂ

ವ || ನಿರ್ವರ್ತಿತ ಪಂಥಾತಿಚಾರ ನಿಯಮನಾಗಿರ್ಪುದುಂ ಕನ್ಯಾರತ್ನಸಂಸ್ತ್ಯಾಯಕ್ಕೆ ನಾಯಕರತ್ನಮೆನಿಸಿದ ನಾಗಶ್ರೀಕನ್ಯಕೆ

ಗುರುಚರಣಯುಗಲಭಕ್ತಿಯ |
ಭರದಿಂದಿರ್ದಗ್ನಿ ಭ್ತಿಮುನಿಪನನತ್ಯಾ ||
ದರದಿಂದೆ ನೋಡಿ ಜಾತಿ |
ಸ್ಮರೆಯಾದಳ್‌ ಪುಣ್ಯವಶದಿನಾರೇನಾಗರ್‌

ವ || ಅಂತು ಮುನ್ನಿನಭವದೊಳ್‌ ತನ್ನಂ ಪ್ರತಿಭೋಧಿಸಿದ ಮಹಾಪುರುಷನಪ್ಪುದನಱೆದು

ಅವರ ಚರಣಾಬ್ಬಯುಗಳ |
ಕ್ಕವನತೆಯಾಗಿರ್ದ ಕನ್ನೆಯ ಮಾನ್ಯೆಯನಂ ||
ದವಳೋಕಿಪುದುಂ ವ್ಯಾಮೋ |
ಹವಶೀಕೃತನಾದನಗ್ನಿ ಭುತಿಮುನಿಂದ್ರಂ || ೦೩ ||

ವ || ಅಂತತಿ ಸ್ನೇಹಮುಂ ವ್ಯಾಮೋಹಮುಂ ಕೈಮಿಗೆ ಮನ್ಯುಮಿಕ್ಕು ಭಾಟ್ಟಾರಕರ ಮೊಗಮಂ ನೋಡಿ

ಎಮಗೀ ಕೂಸಂ ಕಾಣಲೊ
ಡಮತಿಸ್ನೇಹಂ ಮನಕೆ ತೀಡಿದಪುದು ಬೋ ||
ಧಮರೀಚೆಯಿನೆನ್ನ ಮನಸ್ತ |
ಮಮಂ ಬಿಡೆ ಬೆದಱೆಸಮಳ ಸುಜ್ಞಾನನಿಧೀ || ೦೪ ||

ವ || ಎಂಬುದುಮಾ ಮಹಾಮುನೀಶ್ವರನುಂ ತದೀಯ ಭಾವಾವಳೀ ಸಂಬಂಧಮಂ ಪೂರ್ವೋಕ್ತಕ್ರಮದಿಂ ಸವಿಸ್ತ್ರಮಾಗೆ ತಿಳಿಯೆ ಪೇೞ್ದಾಗಳ್

ತರದಿಂದಾಲಿಸಿ ವಾಯುಭೂತಿ ಮೊದಲಾಗುತ್ತಿರ್ದ ಜನ್ಮೋತ್ಕರಾಂ |
ತರ ವೃತ್ತಂತಮನೆಯ್ದು ಕೇಳ್ದು ಮನದೊಳ್‌ ತದ್ವೃತ್ತಕಂ ಶಾಸನಂ |
ಬರೆದಿರ್ದಂತೆ ಜಲಕ್ಕನಾಗೆ ಮುದದಿಂದಾ ಕನ್ನೆ ಕಯ್ಗಣ್ಮಿದಾ
ದರದಿಂ ನಿರ್ಭರಭಕ್ತಿಯಿಂದೆಱಗಿದಳ್‌ ಯೋಗೀಂದ್ರಪಾದಾಬ್ದದೊಳ್‌ || ೦೪ ||

ವ || ಅಂತೆಱಗಿ ಪೊಡೆವಟ್ಟು ನಾಗಶ್ರೀಕನ್ಯೆಕೆಯ ಮನದೊಳಾದುಪಶಮ ಮನುಪಲಕ್ಷಿಸಿ ಸಂಸಾರ ಸ್ವರೂಪಮನಿಂತೆಂದು ಬೆಸಸಿದರ್‌

ಪ್ರಕಟಿತ ಜಿನಪ್ರವಚನ |
ಪ್ರಕಾರದೊಳ್‌‍ ಸಾರಘೋರ ಸಂಸಾರಂ ಕೌ ||
ಕುಕರೂಪಂ ದ್ರವ್ಯ ಕ್ಷೇ |
ತ್ರ ಕಾಲ ಭವ ಭಾವಭೇದದಿಂ ಪಂಚವಿಧಂ || ೦೬ ||

ವ || ಅವಱೊಳಗೆ ಷಟ್ಟರ್ಯಾಪ್ತಿಯೋಗ್ಯಪುಧಲ ದ್ರವ್ಯಂಗಳನೊಂದು ಜೀವನೊಂದು ಸಮಯದೊಳ್‌ ಕೈಕೊಂಡು ದ್ವಿತೀಯಾದಿ ಸಮಯಂಗಳೊಳ್‌ ಮುನ್ನೆ ಕೊಂಡ ಪುದ್ಗಲಂಗಳಂ ಬಿಸುಟ್ಟು ಪೆಱವುಂ ಸ್ನಿಗ್ಧರೂಕ್ಷಾದಿ ವಿಕಲ್ಪಂಗಳಂ ಜನ್ಮಜನ್ಮಾಂತರಂಗಳೊಳ್‌ ಕೊಳುತ್ತುಮಿಂತು ಮೂಱುಂ ಲೋಕದೊಳುಳ್ಳ ರೂಪದ್ರವ್ಯಂ ಳೆಲ್ಲಮಂ ನಿರವಶೇಷಮಾಗೆ ಕೈಕೊಳ್ವುದು ದ್ರವ್ಯಪರಾವರ್ತನಮೆಂಬುದು ಜಗತ್ರಯ ಮಧ್ಯ ಪ್ರದೇಶದೊಳತೀವ ಜಘನ್ಯಶರೀರಮಂ ಕೈಕೊಂಡು ಪುಟ್ಟಿ ಮತ್ತ ಮಾಯೆದೇಯೊಳ್‌ ಪಲವುಂ ಸೂೞ್ ಲಘುಜನ್ಮಾವಗಾಹದಿಂ ಪುಟ್ಟಿ ಸತ್ತು ತದನಂ ತರಮಾಯೆಡೆಗತ್ತಲೇಕೈಕಪ್ರದೆಶೋತ್ತರಮಾಗೆ ಮೂಱುಂ ಲೋಕದ ಸರ್ವಕ್ಷೇತ್ರಂಗಳ ನಿತಱೊಳಮಾ ಮಾರ್ಗದಿಂದ್ದೆಯುಡುಗದೆ ಕೂಡಿ ಪುಟ್ಟುವುದು ಕ್ಷೇತ್ರಪರಾವರ್ತನಮೆಂಬುದು ಭರತೈರಾವತ ಕ್ಷೇತ್ರಂಗಳಂದುಂ ಕುಂದದೆ ಪರಿವರ್ತಿಸುವುತ್ಸರ್ಪಿಣ್ಯವಸರ್ಪಿಣೀ ಕಾಲಂಗಳೊಳ್‌ ತದಾದಿ ಪ್ರವೇಶ ಸಮಯದೊಳ್ಪುಟ್ಟಿ ಕಟ್ಟಿದಾಯುಷ್ಯದ ವಿರಾಮದೊಳ್‌ ಸತ್ತು ನಾನಾಭ್ರಮಣದಿಂ ಬಂದು ಪೂರ್ವೋಕ್ತ ಸಮಯದ ತದ್ವಿತೀಯಾದಿ ಸಮಯದೊಳ್‌ ಪುಟ್ಟುತ್ತುಂ ಸಾವುತ್ತುಮೆರಡು ಕಾಲಮುಮನೀ ಮಾರ್ಗದಿಂ ಸಯಯೋತ್ತವೃದ್ಧಿಯಿಂ ಪರಿಸರಮಾಪ್ತಮಾಗೆ ನೆಱಮೆಯ್ದಿಸುವುದು ಕಾಲಪರಿರ್ವನಮೆಂಬುದು ಚತುರ್ಗತಿಗಳೊಳಂ ಸರ್ವಜಘನ್ಯಮಪ್ಪಾಯುಷ್ಯದೊಳ್‌ ತೊಡಗಿ ಸಮಯಧಾಕಾನುಕ್ರಮದಿಂದನೇಕ ಭವಪರ್ಯಾಯ ಪರಿಭ್ರಮಣದಿಂ ಬಂದು ಪುಟ್ಟುತ್ತಂ ಕಡೆಯೊಳ್ಳುತ್ಕಷ್ಟಾಯುಷ್ಯಮನೆಯ್ದೆ ನೆಱೆಯಿಸುವ ನೆಱವಿಭವಪರಿವರ್ತನಮೆಂಬುದು ಮೂಲೋತ್ತರಪ್ರಕೃತಿಗಳೊಳ್‌ ಸರ್ವಘನ್ಯಸ್ಥಿತಿಯಂ ಮೊದಲ್ಕಟ್ಟಿತತ್ಸಾದೃಶ್ರುಸಂಪಾರಾಯ – ವ್ಯವಸ್ಥಾಯಯೋಗದಿಂ ಪ್ರಪ್ರದೇಶಾನುಭಾಗ ಬಂಧಸ್ಥಾನಂಗಳೊಗಲಿಸಿ ಸಮಯೋತ್ತರಾನು – ಕ್ರಮದಿನುತ್ಕೃಷ್ಟಸ್ಥಿತಿವರಂ ಪರಿವಡಿದಪ್ಪದೆ ಕಿಟ್ಟುವುದಂ ಭಾವ ಪರಿವರ್ತನಮೆಂಬುದು ಜೀವಂ ಕರ್ಮಯೋಗಂಗಳಪ್ಪ ಪುದ್ಗಲಮನೊಂದು ಕ್ಷೇತ್ರಪ್ರದೇಶದೊಳೊಂದು ಕಾಲದ ಸಮಯದೊಳೊಂದು ಜಘನ್ಯಾಯುಷ್ಯದೊಳೊಂದು ಕರ್ಮದ ಸ್ಥಿತಿಯೊಳ್‌ ಸಮಕಟ್ಟಿಕೊಂಡು ದ್ವಿತೀಯಾದಿ ಸಮಯಾಂತರಂಗಳೊಳ್‌ ಮುನ್ನಮೆ ಕೈಕೊಂಡ ದ್ರವ್ಯಕ್ಷೇತ್ರಕಾಲ – ಭವಭಾಬಂಗಳೊಳ್‌ ಮಱೆದಪ್ಪೊಡಂ ಪರಿವರ್ತಿಸದೆ ಬೇಱೆವೇಱೆ ಬಹುದುಃಕಾವರ್ತನಮೆಂದಿಂತಸಾರ ಸಂಸಾರ ಚಕ್ರಪರಿವರ್ತನದೊಳಗೆ

ಖಳ ತಿರ್ಯಗ್ಗತಿಯೊಳ್‌ ಮನುಷ್ಯಭವದೊಳ್‌ ದೇವರ್ಕಳೊಳ್‌ ನಾರಕ
ರ್ಕಳೊಳೋರಂತಿರೆ ಪುಟ್ಟಿ ಚಿತ್ರವಿಧರೂಪಾಟೋಪ ವಿಭ್ರಾಂತಿಯಂ
ತಳೆದಲ್ಲಲ್ಲಿಗೆ ಬೇಱೆವೇಱೆ ಬಹುದುಃಖಾವರ್ತಸಂದೋಹದೊಳ್‌
ಸುೞೆಗುಂ ಮಾಣದೆ ಮಾಯ್ದ ಕರ್ಮವಶದಿಂ ಜೀವಂ ಭವಾಂಭೋಧಿಯೊಳ್‍ || ೦೭ ||

ಉಂಡ ಮೊಲೆವಾಲ ಪವಣಂ
ಕೊಂಡು ಬಿಸುಟ್ಟೊಡಲ ಪವಣನಿದು ಪವಣೆಂದಾರ್‌
ಕಂಡು ಮನಂಗೊಂಡು ಪವ
ಣ್ಗೊಂಡಱೆಪುವ ಉಡರನಾದಿಕಾಲಸ್ಥಿತಿಯಿಂ || ೦೮ ||

ವ || ಅಂತು ಪಂಚ ಪ್ರಕಾರದಿನನೇಕ ಪ್ರಕಾರಮಪ್ಪ ಸಂಸಾರ ಚಕ್ರಪರಾವರ್ತನ ಸ್ವರೂಪಮಂ ಸಂಕ್ಷೇಪಸ್ವರೂಪದಿಂ ಸವಿಸ್ತರಾರ್ಥ ಸ್ವರೂಪಮಾಗಿ ತಿಳಿಯಪೇೞ್ವುದುಂ ನಾಗಶ್ರೀಕನ್ಯಕೆ ಸಂವೇಗ ಪರಾಯಣೆಯಾಗಿ ಧರ್ಮ ಸ್ವರೂಪಮಂ ಸವಿಸ್ತರಂ ಬೆಸಸಿ ಮೆಂಬುದುಮಾ ಮುನೀಂದ್ರನಿಂತೆಂದು ಬೆಸಸಿದಂ ನಿನ್ನ ಬೆಸಗೊಂಡ ಸದ್ಧರ್ಮ ಸನ್ಮಾರ್ಗಂ ಸಮ್ಯಗ್ಧರ್ಶನ ಜ್ಞಾನಚಾರಿತ್ರ ಮಾರ್ಗದಿಂ ತ್ರಿಭೇದಮಾಗಿರ್ಕುಮಲ್ಲಿ ಜೀವಾದಿ ಪದಾರ್ಥತತ್ವಂಗಳಂ ನಿಸರ್ಗಾಧಿಗಮದ್ವಿಪ್ರಕಾರದಿನಾವುದೊಂದು ಪ್ರಕಾರದಿನಕ್ಕೆ ಪಿರಿದುಮೞ್ಕಱೊಳ್‌ ನಿಶ್ಚಯಂಗೆಯ್ದು ನಂಬುವುದು ಸಮ್ಯಗ್ದರ್ಶನಮೆಂಬುದಕ್ಕುಂ ಪ್ರಮಾಣ ನಯ ನಯನಿಕ್ಷೇಪಂಗಳಿಂ ಯಥಾವಸ್ಥಿತಿ ಸಮಸ್ತವಸ್ತು ಸ್ವರೂಪಮಂ ನಿಶ್ಚಯಮಾಗಿರಲಱೆವುದು ಸಮ್ಯಜ್ಞಾನಮೆಂಬುದಕ್ಕುಂ ಹಿಂಸಾಧ್ಯಶೇಷಸಾವಸದ್ಯ ಕ್ರಿಯಾನಿವೃತ್ತಿಗೆಯ್ದು ಕಾಯ ವಾಜ್ಮನಃಕರ್ಮ ಯೋಗತ್ರಯ ವಿಶುದ್ಧಿಯಿಂದೆಸಗುವೆಸಕಂ ಸಮ್ಯಕ್ಚಾರಿತ್ರಮೆಂಬುದಕ್ಕುಮಾ ಚಾರತ್ರಮುಂ ಸಕಲವರತಿಲಕ್ಷಣದಿಂದನಗಾರ ಧರ್ಮಮೆಂದುಂ ಏಕದೇಶವಿರತಿಲಕ್ಷಣದಿಂ ಸಾಗಾರಧರ್ಮಮೆಂದೆರೞ್ತೆಱನಕ್ಕು ಮವಱೊಳ್‌ ಪಂಚಮಹಾವ್ರತ ಪಂಚಸಮಿತಿತ್ರಿಗುಪ್ತಿಗಳಿಂ ನೆಱೆದು ಯತಿಧರ್ಮಂ ತ್ರಯೋದಶ ಭೇದ ಮಕ್ಕುಮಣುಬ್ರತಗುಣಬ್ರತಜಶಿಕ್ಷಾಬ್ರವಿಕಲ್ಪದಿಂ ಗೃಹಸ್ಥಧರ್ಮಂ ತ್ರಿಃಪ್ರಕಾರಮಕ್ಕುಮಂತವು ತಮ್ಮೊಳ್‌ ಪ್ರತ್ಯೇಕದಿನನುಕ್ರಮದಿಂ ಪಂಚ ತ್ರಿ ಚತುರ್ಭೇದದಿಂ ದ್ವಾದಶಭೇದಮಕ್ಕುಮಲ್ಲಿ

ಆರಯ್ಯಲ್ಚೀವಹಿಂಸಾವಿರತಿ ವಿತಥವಾಕ್ಯಂ ಪರಾರ್ಥಾಪಹಾರ
ಪ್ರಾರಂಭಾನಾದರತ್ವಂ ಪರಯುವತಿರತಾನಾಭಿಲಾಷೋದ್ಯಮಂ ಬ
ಹ್ವಾರಂಭಾಕಾಂಕ್ಷೆಯೆಂದಿಂತಿವು ಜಿನಗದಿತಾಣುಬ್ರತಂಗಳ್‌ ವಿನೇಯಾ
ಧಾರಂಗಳ್‌ ಭಾಗಧೇಯಪ್ರಕೃತಿಗಳಮೃತಾವಾಸನಿಶ್ಶ್ರೇಣಿಕಂಗಳ್‌ || ೦೯ ||

ದೇಸೆಗಳ್ಗೀ ಮೇರೆಯಿಂದಂ ಪೊಱಗೆ ನಡೆಯೆನಾನೆಂದು ಕೈಕೊಳ್ವುದುಂ ಸಂ
ತೊಸದಿಂ ತಾಳ್ದಿರ್ದ ಶೇಷಪ್ರಮಿತನಿಯಮಮುಂ ಮಂಡಳಾಗ್ರಾದ್ಯನರ್ಥ
ಪ್ರಸರಾಸ್ತ್ರೌಘಂಗಳೊಳ್‌ ತತ್ಪ್ರಮಿತಮೆನಿಸಿ ಕೈಕೊಂಡುಮೊಲ್ದೀಯದಿರ್ಪೊಂ
ದಸಮತ್ವೀಭಾವಮುಂ ಭಾವಿಪೊಡತಿಶಯಂಗಳ್ಗುಣಾಖ್ಯಬ್ರತಂಗಳ್‌ || ೧೦ ||

ಸಮತಾ ಸದ್ಭಾವದಿಂ ಪೂಜಿಸಿ ಪರಮಜಿನಾರಾಧನಂಗೆಯ್ವುದುಂ ಸಂ
ಯಮಿಗಳ್ಗುತ್ಕೃಷ್ಟದಿಂ ದಾನಮನತಿಮುದದಾರ್ತೀವುದುಂ ಪ್ರೋಷಧ ಪ್ರ
ಕ್ರಮದಿಂ ಪರ್ವಂಗಳಂ ನೋಂಪುದುಮಭಿಮತ ಭೋಗೋಪಭೋಗಂಗಳಂ ತ
ತ್ಪ್ರಮಿತಂ ಮಾಡಿಟ್ಟು ಕೈಕೊಂಡೆಸಗುವುದಮಿದಾರಯೈ ಶಿಕ್ಷಾಬ್ರತಂಗಳ್‌ || ೧೧ ||

ವಿತತಮಣುಗಣಸುಶಿಕ್ಷಾ
ವ್ರತಗಳೊಳ್‌ ಕ್ರಮದೆ ನೋಡಲೊಂದೊಂದಱೊಳ
ಯ್ದತಿಚಾರಮಾಗೆ ಪೋಗು
ತ್ತೆ ತುದಿಯೊಲಾರಯ್ಯಲವೆಲ್ಲಮಱುವತ್ತಕ್ಕುಂ || ೧೨ ||

ಅತಿಭಾರಾರೋಹಣಮು
ದ್ಗತಬಂಧಚ್ಛೇದಮನ್ನಪಾನನಿರೋಧಂ
ಕತಪೀಡೆಯಿಂದೆ ಹಿಂಸಾ
ಪ್ರತಕ್ಕೆ ಪಂಚಪ್ರಕಾರಮಿಂತತಿಚಾರಂ || ೧೩ ||

ನಾನಾಮಿಥ್ಯೋಪದೆಶಂ ಪುದಿದೊದವಿದ ಸಾಕಾರಮಂತ್ರಂ ರಹೋವ್ಯಾ
ಖ್ಯಾನ ನ್ಯಾಸಾಪಹಾರಕ್ರಮಮನುಗತಿಯಿಂ ಕೂಟಲೇಖಕ್ರಿಯಾ ವಿ
ಜ್ಞಾನಂ ಸತ್ಯವ್ರತಕ್ಕಿಂತಿವು ಪರಿವಿಡಿಯಿಂದಯ್ದತೀಚಾರಮಕ್ಕುಂ
ಜೈನೇಂದ್ರಶ್ರೀಮತಾನುಕ್ರಮವಿರಚನೆಯಿಂ ನಂಬು ನೀನಂಬುಜಾಕ್ಷೀ || ೧೪ ||

ಹೀನಾಧಿಕ ವಿನಿಮಾನ
ಸ್ಥೇನಾ (ಹೃತ)ದಾನಸದೃಶಮಿಶ್ರವಿಲೋಪ
ಸ್ತೇನ ಪ್ರಯೋಗಮೆಂದಿವು
ತಾನಸ್ತೇಯಮವ್ರತಕ್ಕತಿಕ್ರಮಮಕ್ಕುಂ || ೧೫ ||

ಪರವೈವಾಹಿತ್ವರಿಕಾ
ಪರಿಹರಿತಾಗಮನಮಪರಿಹರಿತಾಗಮನಂ
ಸ್ಮರಕೇಳಿ ಮದನತೀವ್ರಾ
ತುರತೆ ಚತುರ್ಥವ್ರತಕ್ಕತಿಕ್ರಮಮಕ್ಕುಂ || ೧೬ ||

ಇರೆ ಕುಪ್ಯನಿವೇಶನ ಧನ
ವರಧಾನ್ಯ ಕ್ಷೇತ್ರಮುಖ್ಯಮೆಂಬಿವು ಪವಣಿಂ
ದಿರದೇಱೆಸುವುದು ಮತ್ತಂ
ಪರಿಮಾಣ ಪರಿಗ್ರಹವ್ರತಕ್ಕತಿಚಾರಂ || ೧೭ ||

ಅತಿಶಯತರಮೆನಿಪ ಗುಣ
ವ್ರತದೊಳ್‌ ದಿಗ್ವಿರತಿಗಕುಮತಿಚಾರಮನಾ
ರತಮೂರ್ಧ್ವಾಧಃಸ್ತಿರ್ಯ
ಗ್ವ್ಯತಿಕ್ರಮಕ್ಷೇತ್ರವೃದ್ಧಿ ವಿಸ್ಮರಣಂಗಳ್‌ || ೧೮ ||

ಕಪಟದೊಳೇಂ ಪ್ರೇಷಣ ಶ
ಬ್ದಪುದ್ಗಲಕ್ಷೇಪಸಮುದಿತಾನಯನಂ ತಾ
ವಪಚಾರಂಗಳ್‌ ರೂಪಾ
ನುಪಾತಮುಂ ಪ್ರಮಿತದೇಶನಿಯಮವ್ರತದೊಳ್‌ || ೧೯ ||

ಪುದಿದಸಮೀಕ್ಷಾದಿ ಕರಣ
ಮುದಯಿಪ ಕಂದರ್ಪಮಂತೆ ಕೌತ್ಕುಚ್ಯಂ ಪೆ
ರ್ಚಿದ ಮೌಖರ್ಯ್ಯಮನರ್ಥ
ಕ್ಯದೊಳ್‌ ವ್ಯತಿಕ್ರಮಮತಿಪ್ರಸಾ(ಧ)ನಸಹಿತಂ || ೨೦ ||

ಪರಿಕಿಪೊಡಸ್ಮರಣಮನಾ
ದರಂ ಮನೋವಾಕ್ಯರೀರ ದುಷ್ಟ್ರಣಿಧಾನಂ ||
ನಿರುಪಮ ಶಿಕ್ಷಾವ್ರತದೊಳ್‌ |
ನಿರುದ್ಧ ಸಾಮಾಯಿಕವ್ರತಕ್ಕತಿಚಾರಂ || ೨೧ ||

ಕ್ರಮದೆ ಪರವ್ಯಪದೇಶಂ |
ಸಮತ್ಸರತ್ವಂ ಸಚಿತ್ತನಿಕ್ಷೇಪ ವಿಧಾ
ನಮತಿಕ್ರಮ ಕಾಲಮತಿ |
ಕ್ರಮಮಕ್ಕುಂ ಪಾತ್ರದಾನಮಂ ಕುಡುವೆಡೆಯೊಳ್‌ || ೨೨ ||

ನೋಡದೆ ಪ್ರತಿಲೇಪನೆಯಂ |
ಮಾಡದೆ ಮಡಗಿಡುವ ಕೊಳ್ವ ಪಾಸುವುದುಂ ಕೊಂ ||
ಡಾಡದುದುಂ ನೆನೆಯದುದುಂ |
ಕೇಡಿನಿತುಂ ಪ್ರೋಷಧೋಪವಾಸವ್ರತದೊಳ್‌ || ೨೩ ||

ಕ್ರಮದಿಂ ಸಚಿತ್ತಸಂಬಂ |
ಧಮಂತೆ ಸಮ್ಮಿಶ್ರಮಭಿಷವಂ ದುಃಪಕ್ವಾ |
ನ್ನಮಿವಯ್ದನ್ನಂಗಳತಿ |
ಕ್ರಮಮಾ ಭೋಗೋಪಭೋಗಪರಿಮಿತಗತಿಯೊಳ್‌ || ೨೪ ||

ನುತಪಂಚಾಣುವ್ರತಂ ಮೂಱೆನಿಸುವ ಗುಣನಾಮವ್ರತಂ ನಾಲ್ಕು ಶಿಕ್ಷಾ |
ಬ್ರತಮಿಂತೀ ಸುವ್ರತಂ ದ್ವಾದಶಮಿದಮಿವನೋರಂತತೀಚಾರನಿಃಪೀ |
ಡಿತಮಾಗಲ್‌ ತಾಳ್ದಿ ಕೈಕೊಂಡೆಸಗೆ ನಿಖಿಳಸಂಸಾರಗಂಭೀರ ಕೂಪಾ |
ರತಟೋದ್ದೇ ಶಾವಲಗ್ನಸ್ತಿತಮೆನಿಸುಗುಮ ವ್ಯಾಕುಳಂ ಭವ್ಯಜೀವಂ || ೨೫ ||

ವ || ಇಂತೀ ಸಮೀಚೀನ ಶ್ರಾವಕಾಚಾರಂಗಳಂ ನರತಿಚಾರಮಾಗೆ ತಾಳ್ದಿದ ದೇಶವಿರತಂಗಿಚ್ಛೆ ವಾರ್ತೆ ದತ್ತಿ ಸ್ವಾಧ್ಯಾಯ ಸಂಯಮ ತಪಮೆಂದಾರ್ಯಕರ್ಮಮಾಱು ತೆರನಕ್ಕುಮಲ್ಲಿ ವರಷ ವರುಷಾಂತರಂಗಳೊಳಾಷಾಢ ಕಾರ್ತಿಕ ಪಾಲ್ಗುಣ ಮಾಸಂಗಳ ನಂದೀಶ್ವರಪರ್ವದಿನಂಗೊಳೊಳಂ ತೀರ್ಥಕರಪರಮದೇವರ್ಗೆ ಪಂಚ ಮಹಾ ಕಲ್ಯಾಣ ವಿಭೂತಿಗಳೊಳಂ ಸೌಧರ್ಮೇಂದ್ರಂ ಮಾೞ್ಪಿ ಮಹಾಮಹಮೆಂಬ ಪೂಜೆಯಂ ಚತುರ್ನಿಕಾಯಾಮರರ್ಮಾೞ್ಪ ಸರ್ವತೋಭದ್ರಮೆಂಬ ಪೂಜೆಯಂ ಯಾಚಕ ವಾಚಕ ನರ್ತನ ಕಥಕ ಪುಣ್ಯಾಪಾಠಕ ಪ್ರಭೃತಿ ಸಮಸ್ತ ಜನಕ್ಕಂ ಬೇಡಿದುದಂ ಕೊಟ್ಟು ಚಕ್ರವರ್ತಿಗಳ್‌ ಮಾೞ್ಪ ಕಲ್ಪವೃಕ್ಷಮೆಂಬ ಪೂಜೆಯುಂ ಅರ್ಧ ಚಕ್ರವರ್ತಿಗಳ್‌ ಮಾೞ್ಪ ಚತುರ್ಮುಖಮೆಂಬ ಪೂಜೆಯುಂ ವಿದ್ಯಾಧರರ್ಮಾೞ್ಪ ರಥಾವರ್ತಮೆಂಬ ಪೂಜೆಯುಂ ಮಹಾಮಂಡಳೇಶ್ವರ ರ್ಮಾೞ್ಪ . . . . . ಪೂಜೆಯಂಬ ಪೂಜೆಯುಂ ಅರ್ಧಮಂಡಳೇಶ್ವರರ್ಮಾೞ್ಪ ಮಹಿಮೆಯೆಂಬ ಪೂಜೆಯುಂ ನಾನಾರ್ಚನೋಪಕರಣಸಮೇತಮಾಗಿ ಜಿನೇಂದ್ರಮಹಾಭಿಷೇಕದೊಳ್‌ ನಾಳಿಕೇರೇಕ್ಷುರಸಾಮ್ರರಸಘೃತಕ್ಷೀರವದಧಿ ಕಷಾಯೋದಕ ಚತುಷ್ಕುಂಭೋದಕ ಗಂಧೋದಕಸವನಮಂ ತಂತಮ್ಮ ಚಿತ್ತಾನುಸಾರವೃತ್ತಿಯಿಂ ಸಕಲ ವಿನೇಯ ಜನಂಗಳ್‌ ಮಾೞ್ಪ ಮಹಮೆಂಬ ಪೂಜೆಯುಮನುಳ್ಳುದೆಂಬುದಿಚ್ಛೆಯೆಂಬ ಮೊದಲಾರ್ಯಕರ್ಮಂ ಅಸಿಮಸಿಕೃಷಿವಾಣಿಜ್ಯಶಿಲ್ಪಪಶು ಪಾಲ್ಯಮೆಂಬ ಷಟ್ಕರ್ಮಂಗಳೊಳ್‌ ನ್ಯಾಯದಿನರ್ಥೋಪಾರ್ಜನಂಗೆಯ್ದುದು ವಾರ್ತೆಯೆಂಬೆರಡನೆಯಾರ್ಯಕರ್ಮಂ ಕಾರುಣ್ಯಭಾವದಿಂ ಜೀವನಿಕಾಯಮನೋವಿ ಕಾವಭಯದತ್ತಿಯುಂ ಪಾತ್ರ ವಿಶೇಷಕ್ಕಹಾರೌಷಧೋಪಕರಣಾ ವಾಸಂಗಳನೀವ ಪಾತ್ರ ದತ್ತಿಯುಂ ತನ್ನ ಸಮಾನಮಪ್ಪ ಕುಲಶೀಲಂಗಳ ವ್ರತಸಂಪನ್ನರ್ಗೆ ಕರಿತುರಗಮಣಿ ಭೂಷಣಹಿರಣ್ಯಭೂಮಿಕನ್ಯಾದಿ ವಸ್ತುಗಳಂ ಕುಡುವ ಸಮದತ್ತಿಯುಂ ಆತ್ಮೀಯಾನ್ವಯೋದ್ದರಣಸಮರ್ಥ್ಭನಪ್ಪ ನಿಜಾತ್ಮಜಂಗೆ ಸಮಸ್ತಗೃಹಪರಿಚ್ಛೇದಮನೊಪ್ಪಿಸುವ ಸಕಳದತ್ತಿಯುಮನುಳ್ಳದು ದತ್ತಿಯೆಂಬ ಮೂಱನೆಯಾರ್ಯಕರ್ಮಂ ಪರಮಾಗಮಂಗಳನೋದುವೋದಿಸುವೆಡೆಯೊಳಾದೊಂದು ವ್ಯವಸಾಯ ಸ್ವಾಧ್ಯಾಯಮೆಂಬ ನಾಲ್ಕನೆಯಾರ್ಯಕರ್ಮಂಮಂ ದ್ವಾದಶವಿಧೋಪಾಸಕ ವ್ರತಂಗಳಂ ನಿರತಿಚಾರವೃತ್ತಿಯಿಂ ಕೈಕೊಂಡೆಸಗುವ ತಾತ್ಪರ್ಯಂ ಸಂಯಮಮೆಂಬ ಯ್ದನೆಯಾರ್ಯಕರ್ಮಂ ಅಣುವ್ರತ ಮಹಾ ವ್ರತ ಪರಿಕಲ್ಪಿತಮಪ್ಪನಶನಾದಿಗಳನನುಷ್ಠಿಸಿ ಶಕ್ತಿಯಂ ಮಱಸದೆ ನೆಗೞ್ವುದು ತಪಮೆಂಬಾಱನೆಯಾರ್ಯ ಕರ್ಮಮಿಂತೀಯಾರ್ಯ ಕರ್ಮಂಗಳಂ ನೆಗೞ್ದ ಗೃಹಸ್ಥಾಶ್ರಮವ್ರತಿಗನುಕ್ರಮದಿನನುಪಮಾನ ಗುಣ ಪ್ರವರ್ಧಮಾನಮ ಪ್ಪೇಕಾದಜಶಸ್ಥಾನಂಗಳಕ್ಕುಮವಾವುವೆಂದೊಡೆ

ಅಪುನರ್ಭವನಾಪ್ತಂ ತ
ಲ್ಲಪನೋದಿತಮಾಗಮಂ ತದಾಗಮದರ್ಥೋ
ಕ್ತಿ ಪದಾರ್ಥಮೆಂದು ನಿಶ್ಚಯಿ
ಪ ಪರಮದರುಶನಿಕನಂತವಂ ಪ್ರಾಥಮಿಕಂ || ೨೬ ||

ವರ ಪಂಚಾಣುವ್ರತಮಂ
ನಿರತಿಕ್ರಮಮಾಗೆ ತಾಳ್ದಿ ಪರಮದಯಾ ತ
ತ್ಪರನೆನಿಸಿದ ಶಲ್ಯತ್ರಯ
ವಿರಹಿತನೆರಡನೆಯ ನೆಲೆಯವಂ ತಾಂ ವ್ರತಿಕಂ || ೨೭ ||

ನಿತಯಂ ತ್ರಿಸಂಧ್ಯೆಯೊಳ್‌ ಸಮ
ತೆಯಿರನರುಹತ್ಪೂಜೆಯಿಂದಮಿರ್ಪ್ಪಾತಂ ನಿ
ಶ್ಚಯದಿಂ ಮೂಱನೆಯಂ ಸಾ
ಮಯಿಕ ವ್ರತಧಾರಿ ಪೆಸರೊಳಂ ಸಾಮಯಿಕಂ || ೨೮ ||

ಅನಶನ ವಿಧಿಯಿಂ ತಿಂಗಳಿ
ನ ನಾಲ್ಕು ಪರ್ವದೊಳಮಾಪ್ತ ಪೂಜಾವಿಧಿಯಂ
ಮನಮೊಸೆದಿರ್ಪಂ ನಾಲ್ಕನೆ
ಯ ನೆಲೆಯವಂ ಪ್ರೊಷಧೋಪವಾಸಿಯೆನಿಕ್ಕುಂ || ೨೯ ||

ಕುಸುಮ ಫಳ ಕಂದ ಮೂಲ |
ಪ್ರಸರಂಗಳನಗ್ನಿಪಕ್ವಮಲ್ಲದುವನಪೇ ||
ಕ್ಷಿಸಿಕೊಳ್ಳದನಯ್ದನೆಯಂ |
ಪೆಸರಿಂದಾತಂ ಸಚಿತ್ತವಿರತನೆನಿಕ್ಕುಂ || ೩೦ ||

ದಿವದೊಳ್‌ ಸುರತವ್ಯಾಪಾ |
ರವಿನೋದಮನ್ನಪಾನಮಂ ರಾತ್ರಿಯೊಳಾ ||
ಸೆವಡುವುದಮನೞಿದೆಸಗು |
ವ ವಿವೇಕಿಯಾಱನೆಯ ರಾತ್ರಿಭುಕ್ತವ್ರತಿಕಂ || ೩೧ ||

ಸಹಜಾಶುಚಿದೇಹಂ ಪ್ರಾ |
ಣಿಹತಿ ಪ್ರಾರಂಭಮೆಂದು ವನಿತಾರತಿ ನಿ ||
ಸ್ಪೃಹನಾಗಿ ತೊಱೆದು ನೆಗೞ್ವಿ |
ಗೃಹಸ್ಥರೊಳ್‌ ಬ್ರಹ್ಮಚಾರಿಯೇೞನೆಯಾತಂ || ೩೨ ||

ಘನತರಸಾವದ್ಯಕರಂ |
ನೆನೆವೊಡೆ ಷಟ್ಕರ್ಮಮೆಂದವಂ ತೊಱೆದವನೆಂ ||
ಟನೆಯ ನೆಲೆಯಾತನಾರಂ |
ಭನಿವೃತ್ತನೆನಿಕು ಮನುಪಮೋದ್ಧಾಮ ಗುಣಂ || ೩೩ ||

ಧನಧಾನ್ಯಾದಿ ಪರಿಗ್ರಹ |
ಮನಾವಗಂ ತೊಱೆದು ನೆಗೞದ್ದುಪಾಸಕನೊಂಬ ||
ತ್ತನೆಯ ಪರಿಮಿತಪರಿಗ್ರಹ |
ವಿನಿವೃತ್ತನುದಾತ್ತಧರ್ಮನಿರ್ಮಲಚಿತ್ತಂ || ೩೪ ||

ತನಗೆಂದು ಮಾಡಿಸುತ್ತಂ |
ತನಗೆಲ್ಲಂ ತನ್ನನಱೆಪಿ ಮಾಡಿದುದಂ ಕೊ ||
ಳ್ಳೆನೆನಿಪ್ಪನಾತನನುಮೋ |
ದನವಿರತಂ ದೇಶವಿರತರೊಳ್ಪತ್ತನೆಯಂ || ೩೫ ||

ವಿಶದಯಶೋನಿಳಯಂ ವಿಮ |
ಳಶೀಳಸಂಪನ್ನನುಚಿತಭೈಕ್ಷಾನೀಕಂ ||
ನಿಶಿತಮತಿಯುಕ್ತನೇಕಾ |
ದಶಸ್ಥನುದ್ದಿಷ್ಟದೇಶವಿರತಂ ಪೆಸರಿಂ || ೩೬ ||

ವ || ಇಂತು ದರ್ಶನಿಕಂ ವ್ರತಿಕಂ ಸಾಮಯಿಕಂ ಪ್ರೋಷಧೋಪವಾಸಿಕಂ ಸಚಿತ್ತವರತಂ ರಾತ್ರಿಭುಕ್ತವ್ರತಂ ಬ್ರಹ್ಮಚಾರಿ ಆರಂಭಕಂ ಪರಿಗ್ರಹವಿರತಂ ಅನುಮತಿವಿರತಂ ಉದ್ದಿಷ್ಟವಿರತನೆಂದಿಂತು ಪನ್ನೊಂದು ವಿಕಲ್ಪಮನುಳ್ಳ

ಶ್ರಾವಕರೊಳನುಕ್ರಮದಿಂ |
ಭಾವಿಪೊಡೆ ಜಘನ್ಯರಱುವರಲ್ಲಿಂದತ್ತ ||
ಲ್ಮೂವರ್ಮಧ್ಯಮರತ್ತಲ್‌ |
ತಾವುತ್ತಮರಿರ್ಪರಮಳ ಚಾರುಚರಿತ್ರರ್‌ || ೩೭ ||

ವ || ಇಂತು ನೆಗೞ್ತೆವೆತ್ತೇಕಾದಶಸ್ಥಾನಂಗೊಳೊಳಾ ನಿರತಿಚಾರವ್ರತಶೀಲ ಸಂಪನ್ನನುಂ ನಿರಸ್ತ ಮಿಥ್ಯಾತ್ವನುಂ ನಿಷ್ಕಷಾಯನುಮಾಗಿ ಸಮಾಚರಿಸಿ ಚರಮ ಕಾಲದೊಳ್‌

ಪರಕಾಲಂ ಪುಟ್ಟಿ ಕುತ್ತಂ ಕಡುಪುಡುಗದೆ ಬೆನ್ನಟ್ಟೆ ರೌದ್ರೋಪಸರ್ಗ |
ಪ್ರಸರಂ ಕೈಗಣ್ಮೆ ಮುಪ್ಪಾವರಿಸಿದ ಬಳದಿಂ ಪೊಣ್ಮೆ ಕಾಲಾಂತರದೊಳ್‌ ಭಾ |
ವಿಸಿ ತನ್ನಂ ತಾನನಿತ್ಯಾದಿಗಳನಱೆ ದನುಪ್ರೇಕ್ಷೆಗೆಯ್ಯುತ್ತಮಾರ್ತ |
ಣ್ಮಿ ಸಮತ್ವೀಭಾವದಿಂದಂ ಬಿಡುವುದೊಡಲವ್ಯಾಕುಲಂ ಭವ್ಯಜೀವಂ || ೩೮ ||

ಕೃತಮಿತ್ರಪ್ರಣಯಂ ಜೀ |
ವಿತಮರಣಾಶಂಸೆ ವಿಭವಸೌಖ್ಯನಿದಾನಂ ||
ವ್ಯತಿಪಾತಮಕ್ಕುಮತ್ಯೂ |
ರ್ಜಿತಮಾಗುತ್ತಿರ್ದ ಚರಮಸಲ್ಲೇಖನೆಯೊಳ್‌ || ೩೯ ||

ಇದು ದೈವಮಿದಾಗಮವಿಂ |
ತಿದು ತಪಮಿದು ಧರ್ಮಮೆಂಬ ನಿರುಪಮಸಮ್ಯ ||
ಕ್ತ್ವದ ತೆಱನಂ ನಾಗಶ್ರೀ
ಗೆ ದಿವ್ಯಮುನಿನಾತನಱೆಯೆ ಬೆಸಸಿದನಾಗಳ್‌ || ೪೦ ||

ಧರ್ಮಮೆ ಪರಮಪದಕ್ಕಾ |
ಶರ್ಮಂ ಧರ್ಮಮೆ ಸಮಸ್ತಸೌಖ್ಯಕ್ಕಾರ್ಮಂ ||
ಧರ್ಮಮೆ ದೇಹಿಗೆ ಶರಣಂ |
ಧರ್ಮಮೆ ಸಂಸಾರಿಗಖಿಳಸಂಸೃತಿಹರಣಂ || ೪೧ ||

ಧರ್ಮಂ ವಿಶ್ರುತಸಶ್ರುತಾತಿಶಯಮಂ ಧರ್ಮಂ ಬೃಹದ್ಭಾಗ್ಯಮಂ |
ಧರ್ಮಂ ನಿರ್ಭರಸಾರ್ವಭೌಮಪದಮಂ ಧರ್ಮಂ ಸುರೇದ್ರತ್ವಮಂ ||
ಧರ್ಮಂ ನಿರ್ಮಲದಸದ್ಗುಣಪ್ರಕರಮಂ ಧರ್ಮಂ ತಪಃಖ್ಯಾತಿಯಂ |
ಧರ್ಮಂ ಧಾರ್ಮಿಕನಪ್ಪವಂಗೆ ಕುಡುಗುಂ ನಿರ್ವಾಣ ಕಲ್ಯಾಣಮಂ || ೪೧ ||

ವ || ಎಂದು ಸದ್ಧರ್ಮ ಸ್ವರೂಪಮುಮಂ ತತ್ಫಳಪ್ರಭಾವಮುಮಂ ಸೂರ್ಯಮಿತ್ರ ಭಟ್ಟಾರಕರ್‌ ತಿಳಿಯೆ ಪೇೞುತ್ತುಂ ಸಮ್ಯಕ್ತ್ವಪೂರ್ವಕಮಣುವ್ರತಂಗಳನೇಱಿಸಿ

ನಿಂಬದ ಕುಸುಪುಂಗಳನೌ |
ದುಂಬರ ಪಂಚಕಮನಂತೆ ನವನೀತಮನಾ ||
ಣಂಬೆಯನನಾರತಂ ಬೆ |
ಳ್ಗುಂಬಳಮಂ ಗಿಣ್ಣನುಣ್ಣದಿರ್ಪುದಮೋಘಂ || ೪೩ ||

ಕೃತಕಾರಿತಾನುಮೋದದಿ |
ನತಿಸಾವದ್ಯಾದಿ ದೋಷಮಿಲ್ಲೆನಿಸಿದಣು ||
ವ್ರತಮಂ ತಾಳ್ದಿದ ಮನುಜರ್‌ |
ಕೃತಾರ್ಥರಾಗರೆ ಜಗತ್ತ್ರಯಾಭ್ಯಂತರದೊಳ್‌ || ೪೪ ||

ಭಯಮಖಿಲಕಾಂಕ್ಷೆ ವಿಚಿಕಿ |
ತ್ಸೆಯನ್ಯದೃಷ್ಟಿಪ್ರಶಂಸೆ ಸಂಸ್ತವನಮೆಂಬೀ ||
ಕ್ರಿಯೆ ಸಮ್ಯಗ್ದೃಷ್ಟಿಗೆ ನೋ |
ಡೆ ಯಥಾಕ್ರಮದಿಂ ವ್ಯತಿಕ್ರಮಂ ತಾನಕ್ಕುಂ || ೪೫ ||

ಒಳಕೊಂಡ ಪಂಚವಿಂಶತಿ |
ಮಳದಿಂದಂ ಪಿಂಗಿ ತತ್ವರುಚಿಯಂ ತಾಳ್ದು ||
ಜ್ವಳಗುಣಗಂಣಂಗಳಿಂದಂ |
ಬೆಳಗುಗುಮೀ ತೆಱದೆ ನಿನ್ನ ದರ್ಶನರತ್ನಂ || ೪೬ ||

ವ || ಎಂದು ಸಂಬೋಧಿಸಿ ನಮ್ಮಯ್ಯಂ ನಾಗಶರ್ಮನೆನ್ನ ಕೊಟ್ಟ ವ್ರತಂಗಳಂ ಬಿಸುಡೆಂದು ನುಡಿಯದೆ ಮಾಣಂ ನೀನಲ್ಲಿಯೆ ಬಿಸುದವೇಡ ಎನಗೆ ವ್ರತಂಗಳಂ ಕೊಟ್ಟ ವ್ರತಿಗಳ್ಗೆ ಮಗುಳೆ ಕುಡುವೆಮೆಂಬುದೆನೆ ನಾಗಶ್ರೀಯಂತೆ ಗೆಯ್ವೆನೆಂದು ಗುರುಗಳಂ ಗುರುಭಕ್ತಿಪೂರ್ವಕಂ ವಂದಿಸಿ ತನ್ನ ಮನೆಗೆ ಪೋಪುದುಂ ತಮ್ಮೊಡನೆಯ ಕೂಸುಗಳ್‌ ತನ್ನಿಂ ಮುನ್ನಮೆ ನಾಗಶರ್ಮನಿರ್ದ್ದಲ್ಲಿಗೆ ವಂದು ನಿಮ್ಮ ಮಗಳ್‌ ಋಷಿಯರಲ್ಲಿ ಶ್ರಾವಕವ್ರತಂಗಳಂ ಕೈಕೊಂಡು ಬಂದಳೆಂದು ಪೇೞ್ವುದುಂ ಮಗಳ ಮೊಗಮಂ ನೋಡಿ

ಧರಣೀ ಚಕ್ರದೊಳಾರ್ಗಮಗ್ಗಳಮೀಳಾದೇವಾನ್ವವಾಯಂ ನರೇ |
ಶ್ವರಸಂಪೂಜ್ಯನೆ ನಾನಿದಂ ಮಗಳೆ ನೀಂ ಕಂಡಿರ್ದುಮಪ್ರೌಢರಂ ||
ತಿರೆ ಕಾಷ್ಠಾಂಬರನಾಗಿ ಮುಟ್ಟುಗಿಡೆ ವಂಶಂಗೆಟ್ಟು ನಾಣ್ಗೆಟ್ಟ ದು |
ಶ್ಚರಿತಂಗಾನತೆಯಾಗಿ ನಮ್ಮ ಕುಲಮಂ ನೀಂ ನೀರೊಳಿಂತರ್ದುವೋ || ೪೭ ||

ಕ್ಷಿತಿಯೊಳ್‌ ಪೂಜ್ಯದ್ವಿಜಸಂ |
ತತಿಯೆಂಬುದನಱಿಯದಿಂತು ನೀನೀಗಳ್‌ ದು ||
ರ್ಮತಿಯಾದೈ ನಾಮುಂತು |
ವ್ರತಸ್ಥರಾ ವ್ರತಮನೇಕ ನೀಂ ಕೈಕೊಂಡೈ || ೪೮ ||

ಕೂಸಿನ ವಿಚಾರಬುದ್ಧಿ |
ನ್ಯಾಸಂ ನಿನಗಿಲ್ಲ ಮಱೆದು ಕೈಕೊಂಡುದುವೇಂ ||
ದೋಸಮದೇಂ ಬನ್ನಂ ಬಿಸು |
ಡಾ ಸವಣನ ಪೇೞ್ದ ಜೈನಮತಮಂ ಬ್ರತಮಂ || ೪೯ ||

ವ || ಎಂದು ನುಡಿದ ತಂದೆಯ ನುಡಿಯಂ ಕೇಳ್ದವಧಾರಿಸಿ

ಪದಪಿಂ ಧರ್ಮಮನೊಪ್ಪಿ ನಿಂದೆನಗಘಪ್ರಧ್ವಂಸನೋಪಾಯಸಂ |
ಪದಮಂ ತನ್ಮುನಿಪೇೞ್ದಣು ವ್ರತಮನಾನೀಗಳ್‌ ಬಿಸುೞ್ಪಾಗಳೇಂ |
ತೊದಳಿಲ್ಲಂ ನುಡಿವಂದವಿಂತೆ ಕಿಱುಗೂಸೆಂಬೊಂದು ಮಾತೆನ್ನೊಳಂ |
ತದು ತಾಂ ನಿಕ್ಕುವಮಾದೊಡಾ ನುಡಿಯನ್ನೇತಱೆಂ ನೀಗುವೆಂ || ೫೦ ||

ಎನಿತೆನ್ನನಾಗ್ರಹಂಗೆ |
ಯ್ದು ನುಡಿದೊಡಂ ಬಿಸುಡಲೊಲ್ಲೆನೆನಗಾ ವ್ರತಮಂ ||
ಮುನಿಪರೊಸೆದಿತ್ತರಾನವ |
ರನೆಯ್ದಿದಂ ಬೞಿಯಮವರ್ಗೆ ಮಗುಳೊಪ್ಪಿಸುವೆಂ || ೫೧ ||

ವ || ಎಂಬುದಮಂತಾದೊಡೆ ಕರಮೊಳ್ಳಿತ್ತು ನಡೆ ನಿನ್ನ ನಚ್ಚಿನ ಋಷಿಯಲ್ಲಿಗೆಂದು ಮಗಳನೊಡಗೊಂಡು ನಾಗಸ್ಥಾನಕ್ಕಾಗಿ ಮಹಾರಾಜವೀಧೀ ಮಾರ್ಗದಿಂ ಬಪ್ಪಾಗಳ್‌ ತೊಟ್ಟನೆ ಕಟ್ಟಿದಿರೊಳ್‌

ಪಿಡಿ ಬಡಿ ಕಟ್ಟು ನೂಂಕು ತೆಗೆ ಸೂಲದೊಳಿಕ್ಕುೞೊಳಿಕ್ಕು ಕೈಗಳಂ |
ಕಡಿ ಪಡಿದೊತ್ತಿ ಮೂಗನರಿ ಗಾಣದೊಲಿಕ್ಕು ಬಿಗುರ್ತು ಬೀಗಿ ಬೆ |
ನ್ನೊಡವಿನಮೊಡ್ಡೆ ಕಾಸು ಪಿಡಿ ಕೆಂಡದೆಳಿಂಡೆಯನಾಡು ಚುರ್ಚು ಮಾ |
ರ್ನುಡಿಯದೆ ಗಾಣದೊಳ್‌ ಪಿೞಿ ಪಸುರ್ದೇೞಿ (ಪೋ)ೞಿಸು ಪಿಂಡಿವಾಳದೊಳ್‌ || ೫೨ ||

ಅಪದೋಷನನೇಳಿಸಿ ಕೊಂ |
ದ ಪಾಪಿಯಂ ಪಲವುತೆಱದ ಕೊಲೆಗಳಿನೀ ನಿ ||
ಷ್ಕೃಪನಂ ಕೊಲ್ಲೆನುತುಂ ಬ |
ರ್ಪ ಪುರಜನಂಗಳ ರವಂಗಳಂ ಸತಿ ಕೇಳ್ದಳ್‌ || ೫೩ ||

ವ || ಅಂತೊರ್ವನಂ ಪೆಡಂಗೆಯ್ಯುಡಿಯಲ್ಕಟ್ಟಿ ಪೊೞಲ ಜನಂಗಳೆಲ್ಲಂ ನೆರೆದು ನುಡಿಯುತ್ತುಂ ಗೞೆವೞಿಯ ಪಾವಿನಂತೆ ಬೆಂಬೞಿಯಂ ತಗಳ್ದು ಪರಿತರೆ ಪರೇ ತವನಕ್ಕಾಗಿ ಕೊಂಡು ಪೋಪುದಂ ನಾಗಶ್ರೀ ಕಂಡು ನಾಗಶರ್ಮಭಟ್ಟನನೆನ್ಗುಮೀಸುಭಗ ಸುಂದರಾ ಕಾರನಪ್ಪಕುಮಾರನನೇಕೆ ಕೊಲಲಲೊಯ್ದಪರ್ಬೆಸಗೊಂಡು ಬನ್ನಿ ಮೆಂಬುದುಂ ನಾಗಶರ್ಮನಾ ಪ್ರಪಂಚಮನೆಲ್ಲಮಂ ತಳಾಱನಂ ಬೆಸಗೊಂಡು ಬಂದು ತಿಳಿಯೆ ಪೇೞ್ಗುಮೀ ಪೊೞಲೊಳಾರ್ಗಮಗ್ಗಳಂ ಪದಿನಾಱಕೋಟಿ ದ್ರವ್ಯಮನುಳ್ಳ ಸುದತ್ತನೆಂಬ ಪರದನ ಮಗನೀತಂ ನರಸೇನನೆಂಬಂ ಸಪ್ತವ್ಯವಸನವಶವರ್ತಿಯಾಗಿ ಅಕ್ಷಧೂರ್ತನೆಂಬ ಮಾಣಿಯೊಡನಕ್ಷಕ್ರೀಡೆಯಾಡಿ ಲಕ್ಷದ್ರವ್ಯಮಂ ಸೊಲ್ತೊಡಕ್ಷಧೂರ್ತ ನಾ ದ್ರವ್ಯಮಂ ಕೊಟ್ಟಲ್ಲದೆ ಪೋಗದಿರೆಂದರಸನಾಣೆಯಿಟ್ಟೊಡಾಜ್ಞಾಲಂಘನಂ ಗೆಯ್ದು ದಲ್ಲದಾತನಂ ಕೊಂದೋಡೀತನನರಸಂ ಕೊಲಲ್ವೆೞ್ದೊಡೆ ತಳಾಱಂ ಕೊಲಲುಯ್ದಪನೆಂದು ಪೇೞ್ವುದುಮಂತಾದೊಡಾನೀ ವ್ರತಮನಾವ್ರತಿಗೆ ಮಗುಳೊಪ್ಪಿಸಿದೆನಪ್ಪೊಡೇಗೆಯ್ದುಮಾಂ ಪ್ರಾಣಿಗಳಂ ಕೊಲಲ್ವೇೞ್ಕುಂ ಕೊಂದೊಡೆನ್ನುಮನೀ ಮಾರ್ಗದಿಂ ಪೆಡಂಗೆಯ್ಯುಡಿಯೆ ಕಟ್ಟಿ ಪುರಜನಮುಂ ಪರಿಜನಮುಂ ಬಂಧುಜನಮುಂ ನೆರೆದು ಬರೆ ಬಾೞೆವಾೞೆ ಕೊಲ್ಲದೆ ಮಾಣರದು ಕಾರಣದಿಂ

ಕೊಲೆಯಂ ಮಾಣ್ಕೊಲ್ಕರೊಳ್ಕೂಡದಿರು ಕೊಲಸದಿರ್‌ ಜೀವಸಂಘಾತಮಂ ನಿ |
ರ್ಮಳಸದ್ಧರ್ಮಾನುರಾಗೋನ್ನತ ವಿನುದಯಾಮೂಲಸಮ್ಯಕ್ತ್ವ ಮಂ ನಿ |
ಶ್ಚಳಮಿಂಬಿಂ ತಾಳ್ದು ನೀನೆಂದೆನಗಭಿನುತಮಂ ಪೇೞ್ದನಾ ಕೀರ್ತಿಲಕ್ಷ್ಮೀ |
ನಿಳಯ ಯೋಗೀಂದ್ರಹಂಸಂ ಪರಮಜಿನಮತಾಂಭೋಜಿನೀರಾಜಹಂಸಂ || ೫೪ ||

ಇದು ಸಮಸ್ತ ವಿನೇಯ ಜನವಿನುತ ಶ್ರೀವರ್ಧಮಾನ ಮುನೀಂದ್ರ ವಂದ್ಯ
ಪರಮಜಿನೇಂದ್ರ ಶ್ರೀಪಾದಪದ್ಮವರಪ್ರಸಾದೋತ್ಪನ್ನ
ಸಹಜಕವೀಶ್ವರ ಶ್ರೀಶಾಂತಿನಾಥ ಪ್ರಣೀತಮಪ್ಪ
ಸುಕುಮಾರಚರಿತದೊಳ್‌ ನಾಗಶ್ರೀ
ಪಂಚಾಣು ವರ್ಣನಂ
ಷಷ್ಠಮಾಶ್ವಾಸಂ