ಶ್ರೀಮನ್ನಾಕಾಧಿನಾಥಾನತ ಮಕುಟಮಣಿದ್ಯೋತಿ ತಾಂಘ್ರಿದ್ವಯಂ ನಿ
ಷ್ಕಾಮಂ ಶ್ರೀವರ್ಧಮಾನಪ್ರವರ ಮುನಿಜನಾನಂದ ಸಂಸ್ತುತ್ಯ ಸಿಂಧು
ಸ್ತೋಮಾಳಂಕಾರಿತಾಂಭೋನಿಧಿ ನಿರುಪಮ ಬೋಧಾಕರಂ ಮೋಕ್ಷಲಕ್ಷ್ಮೀ
ಧಾಮಂ ತ್ರೈಳೋಕ್ಯನಾಥಂ ಕುಡುಗೆಮಗಮೃತಾವಾಸಮಂ ವೀರನಾಥಂ || ೦೧ ||

ಪರಮಾನಂತ ಚತುಷ್ಟಯೈಕ ನಿಳಯರ್‌ ಲೋಕೈಕ ಪೂಜ್ಯರ್‌ ಪ್ರಸಿ
ದ್ದರಮೂರ್ತರ್‌ ನಿರಪಾಯರಕ್ಷರರಜೇಯರ್‌ ನಿಷ್ಠಿತಾತ್ಮರ್‌ ಜಗ
ದ್ಗುರುಗಳ್‌ ಕರ್ಮಕಳಂಕಪಂಕರಹಿತರ್‌ ತಾಮೆಂಬಿನಂ ಸಂದ ಸಿ
ದ್ದರನಂತರ್‌ ದಯೆಗೆಯ್ವರಕ್ಕೆಮಗಮಂತೋದಾತ್ತ ಸಂಸಿದ್ಧಿಯಂ || ೦೨ ||

ಇರೆ ಷಟ್ತ್ರಿಂಶದ್ಗುಣಂಗಳ್‌ ತಮಗಮರ್ದಿರಲಾಚಾರಮಯ್ದುಂ ಬೆಡಂಗಿಂ
ದೊರೆವೆತ್ತತ್ಯಂತಮಾಗುತ್ತಿರಲಧಿಗಮ ಶಿಷ್ಯೋತ್ಕರಾನುಗ್ರಹತ್ವಂ
ನಿರುತಂ ಕೈಗಣ್ಮಿಪೊಣ್ಮುತ್ತಿರಲೆಸಗುವ ಚಾರಿತ್ರ ಸಂಶುದ್ಧರೀ ದು
ಸ್ತರ ಸಂಸಾರಾಬ್ಧಿಯಿಂದಂ ಪೊೞಮಡಿಸುಗೆ ಸದ್ಧರ್ಮರಾಚಾರ್ಯರೆಂದಂ || ೦೩ ||

ನಡೆಯಿಂ ಧರ್ಮದ ಬಟ್ಟೆಯೊಳ್‌ ಬಿಸುಡಿಮಾ ದುಷ್ಪಾಪ ದುರ್ಮಾರ್ಗಮಂ
ಕಿಡಿಸಿಂ ಶಲ್ಯಕಷಾಯವರ್ಗರಿಪುಂ ರತ್ನತ್ರಯಜ್ಯೋತಿಯಂ
ಪಡೆಯಿಂ ನೀಮೆನುತಂ ವಿನೇಯಜನಮಂ ಕಲ್ಪಿಪ್ಪುಪಾಧ್ಯಾಯರಾ
ಗಡುಮೆಮ್ಮಂ ಮನಮೊಲ್ದು ಕಲ್ಪಿಸುಗೆ ಸನ್ಮಾರ್ಗೋಪದೇಶಂಗಳಂ || ೦೪ ||

ಪಗೆ ಕರ್ಮಂ ಪೆೞವಲ್ಲವೆಂದಘಕುಲಪ್ರಧ್ವಂಸನೋಪಾಯಮಂ
ಬಗೆಯುತ್ತುಂ ಸಮಸಂದ ಮೂಲಗುಣಮಿರ್ಪತ್ತೆಂಟುಮಂ ತಾಳ್ದಿ ನಂ
ಬುಗೆಯಂ ಮಿಕ್ಕೞೆವಿಂ ಸದಾಚರಿತದಿಂ ಸನ್ಮಾರ್ಗದಿಂ ಸಲ್ವ ಸಾ
ಧುಗಳೆಮ್ಮಂ ದಯೆಯಿಂದೆ ಬೋಧಿಸುತಮಿರ್ಕೆಂದುಂ ಜಿನೇಂದ್ರೋಕ್ತಿಯಂ || ೦೫ ||

ವರಪುಣ್ಯೋದಯಹೇತು ಶಾಶ್ವತಮಹಿಂಸಾಲಕ್ಷಣಂ ಸದ್ಗುಣಾ
ಕರಮೊಳ್ಪಿಂಗೆೞೆವಟ್ಟು ನೆಟ್ಟನೆ ಪುನರ್ಚಾತಕ್ಷಯಶ್ರೀಗೆ ತಾ
(ಯ್ಗ)ರು ರತ್ನತ್ರಿತಯಾವಭಾವಿ ಬಹುಬಂಧಚ್ಛೇದಿ ಸಂಸಾರ ಸಂ
ಹರಣಂ ಧರ್ಮಮದಾರ್ಮಮಕ್ಕೆಮಗೆ ಸಂಸಾರಾಬ್ಧಿತೀರಂಬರಂ || ೦೬ ||

ಸುದತೀಸದ್ರೂಪಮಂ ತಾಳ್ದಿದ ವನಜಭವಪ್ರೇಯಸೀನಾಮಮಂ ತಾ
ಳ್ದಿದ ದುಗ್ಧಾಂಬೋಧಿಯೊಳ್ಪುಟ್ಟಿದ ಜಿನವಚನೋದ್ಬೂತೆ ಸನ್ಮಾರ್ಗದಿಂ ಕಂ
ದದ ಮೆಯ್ಯಿಂ ಮಂಡನಾಳಂಕರಣ ವಚನದಿಂ ವೃತ್ತವಕ್ಷೋಜದಿಂ ಸ
ತ್ಪದದಿಂದೊಪ್ಪಿರ್ದ ವಾಕ್ಸುಂದರಿ ಪರಮವಚೋವೃದ್ಧಿಯಂ ಮಾಡುಗೆಮ್ಮೊಳ್‌ || ೦೭ ||

ವಿಕಚೇಂದ್ರೀವರವಕ್ತ್ರೆ ಸನ್ಮರಕತಚ್ಛಾಯಾಂಗಿ ರಾಮಾಂಗೆ ವೃ
ತ್ತಕುಚದ್ವಂದ್ವೆ ವಿನೀಳಕುಂತಳೆ ವಿನೇಯಾಧಾರೆ ಸಂಪದ್ಗುಣಾ
ಧಿಕೆ ಸಿಂಹಾಸನೆ ಜೈನಶಾಸನ ವಿಶೇಷೋದ್ಭಾಸೆ ಕೂಷ್ಮಾಂಡಿಯಂ
ಬಿಕೆ ಯಕ್ಷೇಶ್ವರಿ ಕೂರ್ತು ರಕ್ಷಿಸುಗೆ ಭವ್ಯಾನೀಕಮಂ ಸಂತತಂ || ೦೮ ||

ಕನಕಚ್ಛಾಯನಜೇಯಸಂಹನನನೂನಸ್ವಾಪದೇಯಾದಿ ನಾ
ಥನಭೀರಸ್ವಗಿತಂ ಜಿನೇಂದ್ರಪದಪದ್ಮಾರಾಧಕಂ ಸಿಂಧುರಾ
ಸನನಬ್ಜಾಯತನೇತ್ರನೀಗಭಿಮತಂ ಸರ್ವಾಹ್ಣಯಕ್ಷಂ ವಿನೇ
ಯನಿಕಾಯಕ್ಕಭಿವೃದ್ಧಿಯಂ ಕೃತಿಗೆ ನಿರ್ವಿಘ್ನೋದಾತ್ತಸಂಸಿದ್ಧಿಯಂ || ೦೯ ||

ಪುರುಪರಮಜಿನಾದಿ ಪರಂ
ಪರೆಯಿಂ ಶ್ರೀವರ್ಧಮಾನಜಿನಪರ್ಯಂತಂ
ಬರಮರ್ಹದ್ದೀಕ್ಷಿತರಾ
ದರ ಚರಣ ಸರೋಜಮೆಮಗೆ(ಶ)ರಣಕ್ಕೆಂದುಂ || ೧೦ ||

ಶ್ರುತಕೈವಲ್ಯ ವಿಭೂತಿಯಂ ತಳೆದು ಶಿಷ್ಯಾನುಗ್ರಹೈಕಾರ್ಥನಿ
ಷ್ಠಿತರಾ ಮೋಕ್ಷುಗಳಾ ಮುನಿಪ್ರವರರಾ ಯೋಗೀಂದ್ರರಾ ಸಂಶ್ರಿತ
ಬ್ರತರಾ ಸಾಧುಗಳೆಂಬಿನಂ ವಸುಧೆಯೊಳ್‌ ಶ್ರೀ ವಿಷ್ಣುನಂದ್ಯಾಪರಾ
ಜಿತ ಗೋವರ್ಧನ ಭದ್ರಬಾಹುಮುನಿನಾಥರ್ಖ್ಯಾತಿಯಂ ತಾಳ್ದಿದರ್ || ೧೧ ||

ಜಯಭದ್ರಾಖ್ಯ ಸುಭದ್ರ ಪಾಂಡುಯತಿ ಕಂಸಾಚಾರ್ಯ ಲೋಹಾರ್ಯ ಸ
ಜ್ಜಯಪಾಳಾರ್ಯ ವಿಶಾಖದತ್ತ ಜಯಬಾಹ್ವಾದಿ ವ್ರತ್ತೀಕರ್ ತಪೋ
ನಿಯತರ್ ಚಾರುಚರಿತ್ರರೂರ್ಜಿತಯಶರ್ ನಿರ್ಮತ್ಸರರ್ ನಿರ್ಮಳರ್
ನಿಯಮಜ್ಞರ್ ಸರಳಾಗಮಜ್ಞರಮಳರ್ ಸಂದರ್ ಧರಾಚಕ್ರದೊಳ್‌ || ೧೨ ||

ಧೈರ್ಯಪರರ್ಸ್ವಪರತಪ
ಸ್ಕಾರ್ಯರ್‌ ತತ್ತ್ವಾರ್ಥಕರ್ತೃಗಳ್‌ ಜಿನಮತತಾ
ತ್ಪರ್ಯರೆನೆ ಗೃದ್ಧ್ರಪಿಂಛಾ
ಚಾರ್ಯರನಾಚಾರ್ಯವರ್ಯರೆನ್ನದರೊಳರೆ || ೧೩ ||

ಶ್ರೀ ಮಂದರಸೇನ ಮುನಿ
ಸ್ವಾಮಿಗಳ ಮುನೀಂಧ್ರವಂದ್ಯಪದ ಭೂತಬಲಿ
ಸ್ವಾಮಿಗಳ ಪುಷ್ಪದಂತ
ಸ್ವಾಮಿಗಳ ಸಮಾನರೊಳರೆ ಬಗೆವೊಡೆ ಜಗದೊಳ್‌ || ೧೪ ||

ಚತುರಂಗುಲಪ್ರಮಾಣೋ
ಛ್ಭ್ರಿ ತಋದ್ಧಿಪ್ರಾಪ್ತರಮಳಚಾರಿತ್ರ ಸಮ
ನ್ವಿತ ಗುಪ್ತಿಗುಪ್ತರತ್ಯೂ
ರ್ಜಿತಧೈರ್ಯರ್‌ ನೆಗೞ್ದಕೊಂಡುಕುಂದಾಚಾರ್ಯರ್‌ || ೧೫ ||

ಅವನೀತಳದೊಳ್‌ ಕವಿ ಗಮ
ಕಿ ವಾದಿ ವಾಗ್ಮಿತ್ವ ತತ್ತ್ವಪರಗರೆಂದೇ
ನವಯವದಿಂ ಬಣ್ಣಿಸುವುದೊ
ಭುವನಂ ಶ್ರೀ ಪೂಜ್ಯಪಾದಭಾಟ್ಟಾರಕರಂ || ೧೬ ||

ಆಚಾರಾಂಬುಧಿಪಾರಗರ್‌ ಜಿತಮದರ್‌ ಜ್ಞಾನರ್ಧಿಸಂಪನ್ನರು
ರ್ವೀಚಕ್ರಸ್ತುತಪಾದಪಂಕಜರುಪೇಕ್ಷಾಸಂಯತರ್‌ ನಿಷ್ಠಿತಾ
ಳೋಚಜ್ಞರ್‌ ಜಿನತತ್ತ್ವತತ್ಪರರಜೇಯರ್‌ ಶ್ರೀ ಜತಾಸಿಂಹನಂ
ದ್ಯಾಚಾರ್ಯರ್‌ ನೆಗೞ್ದ ಪಯೋನಿಧಿಪರೀತಾಶೇಷ ಭೂಭಾಗದೊಳ್‌ || ೧೭ ||

ಪರಮೇಷ್ಠಿ ಸ್ವಾಮಿಗಳೀ
ಭರತಾವನಿಯೊಳಗೆ ನೋೞ್ಪೂಡಿವರೆಂದಿಂತೀ
ಧರೆ ಬಣ್ಣಿಸೆ ನೆಗೞ್ದರ್‌ ಕವಿ
ಪರಮೇಷ್ಠಿ ಸ್ವಾಮಿಗಳ್ ಸಮಸ್ತಾವನಿಯೊಳ್‌ || ೧೮ ||

ಯಮಿನಾಥೋತ್ತಮ ಸಿಂಹನಂದಿಜಯನಂದ್ಯಾಚಾರ್ಯಪಾದಾರವಿಂ
ದಮನೋರಂತೆ ನಿರಂತರಮ್ನೆನೆವ ಚಿತ್ತಂ . . . . . . . . . . . . . . . .
. . . . . . . . . . . . . . . . . . . . . . . . . . . . . . . . . . . . . . . . . . . .
. . . . . . . . . . . . . . . . . . . . . . . . . ನಿಲ್ಕೆ ಮಚ್ಚಿತ್ತದೊಳ್‌ || ೧೯ ||

ಸದಮಳಚರಿತರನುದ್ಧೂ
ತದೋಷರಂ ವಿಗತರೋಷರಂ ಸಕಳಕಲಾ
ವಿದರಂ ನೆಟ್ಟನೆ ಮಲಧಾ
ರಿದೇವಂ ದೇವರೆಂದು ಬಣ್ಣಿಪುದು ಜಗಂ || ೨೦ ||

ಪರಮಪ್ರಭಾವರಂ ಶ್ರೀ
ಧರ ದೇವರನನುಪಮಾನಜಿನಸಮಯಸಮು
ದ್ಧರಣ ಪರಿಣತ ನಿಜಾಂತಃ
ಕರಣರನಖಿಳಾವನೀತಳಂ ಕೀರ್ತಿಸುಗುಂ || ೨೧ ||

ಭೂರಿಕಳಾವಿಬೋಧಿತ ಸುಧಾಕರರೂರ್ಜಿತ ಸಾಧು ಸಂಘನಿ
ಸ್ತಾರಕರಂಗಜಾತ ಮಹಿಜಾತ ವಿದಾರಕರುಗ್ರ ಕರ್ಮಸಂ
ಹಾರಕರತ್ಯುದಾರಕರ ನೂತನಗುಣಾನ್ವಿತ ಚಂದ್ರಕೀರ್ತಿಭ
ಟ್ಟಾರಕರೆಂದು ಬಣ್ಣಿಪುದು ವಾರಿಧಿವೇಷ್ಠಿತ ಭೂರಿಭೂತಳಂ || ೨೨ ||

ಮದಹರರೆಂಬುದೂರ್ಜಿತ ಬಹುಶ್ರುತರೆಂಬುದು ಸಾಧುಸಂಗರೆಂ
ಬುದು ಸುಚರಿತ್ರೆರೆಂಬುದು ಜಿತೇಂದ್ರಿಯರೆಂಬುದು ನಿಷ್ಕಷಾಯರೆಂ
ಬುದು ಗುರುಭಕ್ತರೆಂಬುದು ಗುಣಾನ್ವಿತರೆಂಬುದು ಗುಪ್ತಿಗುಪ್ತರೆಂ
ಬುದು ನಯನಂದಿ ದೇವರನಗಾಧಪಯೋಧಿಪರೀತಭೂತಳಂ || ೨೩ ||

ಅಮಿತಜಿನಮಾಳೆಯೊಳ್‌ ವ
ರ್ಧಮಾನಜಿನನೆಂತುಪಾಂತ್ಯದೊಳ್‌ ನೆಗೞ್ದವೊಲ
ಪ್ರಮಿತ ಮುನಿಮಾಳೆಯೊಳ್‌ ವ
ರ್ಧಮಾನಮುನಿ ನೆಗೞ್ದನೀ ಧರಿತ್ರೀತಳದೊಳ್‌ || ೨೪ ||

ಸಮತಾಭಾವನೆ ವರ್ಧಮಾನಮುಚಿತಧ್ಯಾನಕ್ರಮಂ ವರ್ಧಮಾ
ನಮೆ ಮಾನೋನ್ನತಿ ವರ್ಧಮಾನಮಮಳಜ್ಞಾನೋದಯಂ ವರ್ಧಮಾ
ನಮಶೇಷಂ ದಯೆ ವರ್ಧಮಾನಮಖಿಲಸ್ವಾಧ್ಯಾಯಮುಂ ವರ್ಧಮಾ
ನಮೆನಲ್‌ ತಾಂ ದೊರೆ ವರ್ಧಮಾನಮುನಿಯೊಳ್‌ ಶ್ರೀವರ್ಧಮಾನಾಹ್ವಯಂ || ೨೫ ||

ಕ್ಷಮೆ ಮೆಯ್‌ ಮಾರ್ದವಮೋಜೆ ಸಾಜಮಳವಟ್ಟಿರ್ದಾಜವಂ ಸೈಪುಶೌ
ಚಮುದಾತ್ತಸ್ಥಿತಿ ಸತ್ಯಮೊಂದಿದೞೆತಂ ತ್ಯಾಗಂ ಲಸತ್ಕೀರ್ತಿ ಸಂ
ಯಮಮಾಚಾರಗುಣಂ ತಪಂ ಛಲಮಕಿಂಚನ್ಯಂ ನಯಂ ಬ್ರಹ್ಮಚ
ರ್ಯ(ಮೆ) ಮಾನೋನ್ನತಿ ವರ್ಧಮಾನಮುನಿಗ್ಕಕುಂ ಪೆಱರ್ಗಕ್ಕುಮೇ || ೨೬ ||

ಕಾರ್ಯಮಿವೆ ಸತತಮೆಮಗೆ ಸ
ಪರಯಮಿದೇ ಮುಕ್ತಿಪದಮನೆಯ್ದುವಿನಂ ತಾ
ತ್ಪರ್ಯಮಿದೆ ವರ್ಧಮಾನಾ
ಚಾರ್ಯ ಮಹೈಶ್ವರ್ಯಕರಣ ಚರಣಂ ಶರಣಂ || ೨೭ ||

ವಿದಿತವ್ಯಾಕರಣದ ತ
ರ್ಕದ ಸಿದ್ಧಾಂತದ ವಿಶೇಷದಿಂ ತ್ರೈವಿದ್ಯಾ
ಸ್ಪದರೆಂದೀ ಧರೆ ಬಣ್ಣಿಪು
ದು ದಿವಾಕರನ ನಂದಿದೇವ ಸೈದ್ಧಾಂತಿಗಳಂ || ೨೮ ||

ಅನುಪಮ ಗುಣರನುಪಮ ತಪ
ರನುಪಮ ಸಿದ್ಧಾಂತ ವಾರ್ಧಿಪಾರಗರೆಂದೀ
ವನಧಿಪರೀವೃತ ಸಕಳಾ
ವನಿ ಪೊಗೞ್ವುದು ಸಕಳಚಂದ್ರಸೈದ್ಧಾಂತಿಗಳಂ || ೨೯ ||

ಸಂತತಮೊಂದಿ ನಿಂದ ತಪದೊಳ್‍ ಶ್ರುತದೊಳ್‍ ಗುಣದೊಳ್‌ ವಿಶೇಷದಿಂ
ದಿಂತಿವರೆಲ್ಲರಿಂ ಪಿರಿಯರಿಂತಿವರ್ಗಗ್ಗಳದಗ್ರಗಣ್ಯರಾ
ರಿಂತಿವರೆಂದು ಕೀರ್ತಿಪುದು ನೋಡು ದಿವಾಕರ ನಂದಿದೇವ ಸೈ
ದ್ಧಾಂತಿ ಮುನೀಂದ್ರರಂ ನತನರೇಂದ್ರರನಬ್ಢಿಪರೀತ ಭೂತಳಂ || ೩೦ ||

ಕಂತುಮದಾಪಹರ್‌ ತಪದೊಳಿಂತಿವರೆಂದು ಮಹಾಪ್ರಸಿದ್ಧ ಸಿ
ದ್ಧಾಂತಪಯೋಧಿಗಳ್‌ ಶ್ರುತದೊಳಿನ್ನಿವರೆಂದು ವಿಶೇಷ ಭಕ್ತಿಯಿಂ
ಸಂತತಮಿಂತು ಬಣ್ಣಿಸುತಮಿರ್ಪುದು ನೆಟ್ಟನೆ ಮಾಘಣಂದಿ ಸೈ
ದ್ಧಾಂತಿ ಮುನಿಂದ್ರರಂ ಲವಣವಾರಿಧಿವೇಷ್ಟಿತ ಭೂರಿಭೂತಳಂ || ೩೧ ||

ಎನೆ ನೆಗೞ್ದ (ಭ್ಯು)ದಯನಿಕಾ
ಯನಿರತ ಯತಿ ವೃಷಭಚರಣನಳಿನಂಗಳ್‌ ಪಾ
ವನಚರಿತಂಗಳ್‌ ಮಾೞ್ಕೆಮ
ಗನೂನದಯೆಯಿಂದಗಾಧ ಬೋಧೋದಯಮಂ || ೩೨ ||

ಪರಮತಪೋಧನರಾರೊ
ರ್ವರಿನೊರ್ವರೆ ವಿತಾಂತೇಷಮನುಪಮರತ್ನಂ (? )
ಧರೆಯೊಳಗೊಂದೊಂದಱೆನೊಂ
ದು ರಂಜಿಪಂತಿರೆ ಸಮಗ್ರತಾಗುಣದಿಂದಂ || ೩೩ ||

ಪ್ರಕಟಯಶೋನಿಳಯರ್‌ ತಾ
ರ್ಕಿಕಚೂಡಾಮಣಿಗಳಮಳ ಜಿನಶಾಸನದೀ
ಪಕಾರಾರಯ್ವಡೆ ಸರ್ವ
ಜ್ಞಕಲ್ಪರಕಳಂಕದೇವರೆಂದಪುದು ಜಗಂ || ೩೪ ||

ದೊರೆವೆತ್ತ ತರ್ಕಶಾಸ್ತ್ರದ
ಪರಿಗಣತಿಗಂ ನೆಗೞ್ದ ಚಕ್ರವರ್ತಿ ಸಭೆಯೊಳ್‌
ಬೆರಲೆತ್ತಿದ್ದರೆಂದೊಡೆ ವಾ
ದಿಜಿರಾಜದೇವರ ಸಮಾನಮಾರೀ ಧರೆಯೊಳ್‌ || ೩೫ ||

ಯಮಕದ ಗಮಕದ ಬಿನ್ನಣ
ಮಮರ್ವಿನೆಗಂ ತತ್ತ್ವಮುಂ ಕವಿತ್ವಮುಮೆತ್ತಂ
ಸಮಸಸಂದಿರೆ ಪೇೞ್ವೋಜೆಗೆ
ಸಮನಿಲ್ಲ ಧನುಂಜಯಂಗೆ ಕವಿತಾಗಮಿಕರ್‌ || ೩೬ ||

ರವಿಯಿಂದೆಂತು ತಮಂ ಮೃಗಧಿಪನಿನೆಂತುಗ್ರದ್ವಿಪಂ ತೀವ್ರವಾ
ಯುವಿನೆಂತಭ್ರುಕುಳಂಂ ತೆರಳ್ವ ತೆಱದಿಂ ಮಿಥ್ಯಾರಜಂ ತೂಳ್ದು ಪಾ
ಱುವಿನಂ ನಿರ್ಮಳಧರ್ಮಮೊಂದಿ ನಿಲೆ ಪೇೞ್ದಂ ಪಂಪನತ್ಯಂತ ಸೌ
ಷ್ಠವದಿಂ (ದಾದಿ) ಪುರಾಣಮಂ ಬುಧಜನಪ್ರಸ್ತುತ್ಯ ಕಲ್ಯಾಣಮಂ || ೩೭ ||

ನಿರುಪಮ ನವರಸ ರಸಿಕತೆ
ದೊರೆವೆತ್ತಿರೆ ದೇಸೀ ದೇಸೆವೆತ್ತಿರೆ ಪರಮಾ
ದರದಿಂ ಶಾಂತಿಜಿನೇಶ್ವರ
ಪುರಾಣಮಂ ಪೇೞ್ದ ಪೊನ್ನನಂ ಪೊಗೞದರಾರ್‌ || ೩೮ ||

ಜಾಣಿನ ಬೆಡಂಗು ವಿಬುಧ
ಪ್ರೀಣನಕರಮೆನಿಸಿ ನೇರ್ಪುನೇರ್ವೋಡೆ ಪೇೞ್ದಂ
ಪ್ರಾಣಿಹಿತಾರ್ಥದಿನಜಿತ ಪು
ರಾಣಮನಳವಟ್ಟ ಕವಿತೆಯಿಂ ಕವಿರತ್ನಂ || ೩೯ ||

ಅವಿರಳ ಸಮ್ಯಕ್ತದೊಳಂ
ಕವಿತೆಯ ಬಲ್ಮೆಯೊಳಮೀ ಮಹೀಮಂಡಲದೊಳ್‌
ಕವಿ ಪಂಪನ ಕವಿ ಪೊನ್ನನ್ನ
ಕವಿರತ್ನನ ದೊರೆಗಮೊರೆಗಮೇಂ ಬಂದಪರೇ || ೪೦ ||

ಕವಿಪರಮೇಶ್ವರನೆನಿಸಿದ
ಕವೀಂದ್ರ ಚೂಡಾಮಣಿಯ ಕವಿತ್ವಂ ತತ್ವ
ಕ್ಕವಳಂಬನಮಾದುದು ಸ
ತ್ಕವಿಗಳ್‌ ಪೆಱರೊಳಕೆ ಕವಿಗಳಾದಿತ್ಯನವೊಲ್‌ || ೪೧ ||

ಸುಕರ ರಸಭಾವದಿಂ ಸಾ
ತ್ವಿಕ ಸೌಂದರ್ಯದಿನಪೂರ್ವ ಪದಗತಿಯಿಂದಾ
(ರ್ಯ) ಕೆಯ ದೊರೆಯೆನಿಸಿ ಕೃತಿ ಚತು
ರ ಕವಿಕದಂಬಕದ ಬಗೆಯನುಗಿಯಲ್ವೇಡಾ || ೪೨ ||

ವಿಪುಲ ಪದರಚನೆ ಪದರಚ
ನೆ ಪೊಚ್ಚ ಪೊಸದೇಸೆ ದೇಸೆ ಪೊಸ ಬಗೆ ಬಗೆ ರಂ
ಜಿಪ ರಸಿಕತೆ ರಸಿಕತೆ ಕುಸಿ
ವ ಪಸರಿಸುವ ರೀತಿ ರೀತಿಯೆನೆ ಮೆಚ್ಚದರಾರ್‌ || ೪೩ ||

ರಸದೊಳಮರ್ಕೆ ಬಿನ್ನಣದೊಳೊಟ್ಟಜೆ ಮಾತಿನ ರೀತಿಯೊಳ್‌ ಚಲಂ
ಕುಸಿವ ನಿಮಿರ್ಚುವೋಜೆಯೊಳುದಾತ್ತತ್ತೆ ಸೂಕ್ತಿಯೊಳರ್ಥಯುಕ್ತಿ ಕಾ
ಳಸೆಯೊಳ ಪೂರ್ವಭಂಗಿ ಪೊಸದೇಸೆಯೊಳೊಂದಿದ ಮಾರ್ಗಮೊಳ್ಪಿವೆ
ತ್ತೆಸೆದಿರೆ ಪೇೞ್ದು ರಂಜಿಸದೆ ಕೆಮ್ಮನೆಬಲ್ಮೆಗೆ ಮುಯ್ಯುನಾಂಪುದೇ || ೪೪ ||

ಪ್ರತಿಭಾ ಸಂಸ್ಕೃತಿಯಿಂದಳಂಕೃತಿಯನರ್ತ್ಥ ವ್ಯಕ್ತಿಯಿಂ ಸೂಕ್ತಮೀ
ಕೃತಿ ಪುಣ್ಯಕೃತಿ ತಾ ಚಮತ್ಕೃತಿವಿಲಾಸಾವಾಸಮೆಂದೆಂದು ಪಂ
ಡಿತರೆಲ್ಲಂ ಬಗೆಗೊಂಡು ಕೊಂಡು ಕೊನೆಯುತ್ತಿರ್ಪನ್ನೆಗಂ ಪೇೞದು
ದ್ಧತ ಚಾಪಲ್ಯನ ಪೇೞ್ದ ಕಾವ್ಯಮನದಂ ಕೈಕೊಳ್ವರಾರ್‌ ಕೇಳ್ವರಾರ್‌ || ೪೫ ||

ಸುಕಥಾಳಾಪಮನೋತು ಪೇೞ್ವುದು ಪದಾರ್ಥಾರ್ಥೋಕ್ತಿಯಿಂ ಶಾಸ್ತ್ರವ
ಸ್ತುಕವೀಂದ್ರರ್ಬಗೆಗೊಳ್ವಿನಂ ಬಿಸುಟು ಮಿಥ್ಯಾಮಾರ್ಗಮಂ ಮಾಯೆ ಲೌ
ಕಿಕಮಂ ತತ್ತ್ವವಿರುದ್ಧಮಂ ಕುಮತಮಂ ಕುಶ್ಪಷ್ಟ ಕುಹೇ
ತುಕ ದೃಷ್ಟಾಂತ ಕುಮಾರ್ಹ ಕುತ್ಸಿಕ ಕುಭಾಷಾದ್ಯಾದಿ ದೋಷಂಗಳಂ || ೪೬ ||

ಭಾಷಾ ಸಂಸ್ಕರಣಮಣಾನಯನನಿಕ್ಷೇಪರ್‌ ಜಿನೇಂದ್ರಾಗಮಾ
ಶೇಷಜ್ಞರ್‌ ನಿಕಷಜ್ಞರಪ್ಪುದುಚಿತಂ ವಿದ್ವತ್ಸಭಾಮದೊಳ್‌
ಕಾಳೋಗ್ರೋರಗನಂತೆ ದಾರುಣಮುಖರ್‌ ದುಷ್ಟರ್‌ ಖಳರ್‌ ದುರ್ಮುಖರ್‌
ದೋಷಾನ್ವೇಷಣರಪ್ಪವರ್‌ ಪೞೆದೊಡೇನಂ ಮಾೞ್ಪರೇಗೇಯ್ಯರೋ || ೪೭ ||

ಗುಣದೊಷಮಿದೆಂದೞೆಯರ್‌
ಗುಣಂಗಳಂ ದೋಷಮೆಂದು ದೋಷಂಗಳುಮಂ
ಗುಣಮೆಂದು ಪೞೆವ ಪೊಗೞ್ವವ
ಗುಣಿಗಳ ಗುಣಮಂ ಗುಣಜ್ಞನೇನೆಣಿಸುವುದೇ || ೪೮ ||

ಜಿನಮಾರ್ಗಂ ಸ್ವೈರಮಾರ್ಗಂ ಜಿನಮತಮೆ ಮತಂ ಜೈನಧರ್ಮಂ ಸ್ವಧರ್ಮಂ
ಜಿನತತ್ತ್ವಂ ಸೂಕ್ತತತ್ತ್ವಂ ಜಿನಚರಿತಮೆ ನಿರ್ಣೀತ ಚಾರಿತ್ರಮಾದ
ತ್ತೆನಸುಂ ವಿದ್ವಜ್ಜನಂ ಬಣ್ಣಿಸೆ ನೆಗೞ್ದುದಂದೀತನತ್ಯಂತ ವಿದ್ವ
ಜ್ಜನಸಂದೋಹ ಪ್ರಣೂತಂ ಪರಮಜಿನಮತಾಂಬೋಜಿನೀರಾಜಹಂಸಂ || ೪೯ ||

ಜಿನವಚನವಿನಿರ್ಗತ ವಾ
ಗ್ವನಿತೆಗೆ ಮಾಂಗಲ್ಯಕಾರಣಂ ಮಂಡನಮೀ
ತನ ವಾಗ್ವಿಲಾಸಮಾದ
ತ್ತೆನಿಸಿದನೀತನೆ ಸರಸ್ವತೀ ಮುಖಮುಕುರಂ || ೫೦ ||

ಕ್ಷಯವೃಜಿನಂ ಜಿನಸಮಯಂ
ಸಂಯರಹಿತಂ ಹಿತವಚಃಪ್ರಿಯಂ ಪ್ರಿಯ ಧರ್ಮಂ
ಪ್ರಯತಯುತಂ ಸದ್ವಿನಯಂ
ನಯವಾಕ್ಟ್ರಸರಂ ಸರಸ್ವತೀ ಮುಖಮುಕುರಂ || ೫೧ ||

ಸಹಜಕವಿ ಚತುರಕವಿ ನಿ
ಸ್ಸಹಾಯಕವಿ ಸುಕವಿ ಸುಕರಕವಿ ಮಿಥ್ಯಾತ್ವ
ಪ್ರಹರಕವಿ ಸುಭಗಕವಿ ನುತ
ಮಹಾಕವೀಂದ್ರಂ ಸರಸ್ವತೀ ಮುಖಮುಕುರಂ || ೫೨ ||

ಅಸಹಾಯನಾಗಿಯೂ ಸುಜ
ನ ಸಹಾಯಂ ಮದವಿಹೀನನಾಗಿಯುಮೂರ್ತಿ
ಪ್ರಸರೋತ್ಕಟ್ಯನಾದಿಕನಂ
. . . . . . . . . . . . . . . . . . . . . . || ೫೩ ||

. . . . . . . . . . . . .. . . . . . . . . . . . . . . . . . . . . . . .
. . . . . . . . . . . . . . . . . . . . . . . . . . . . . . . . . . . .
ಪ್ರಕಟಯಶಂ ಜೈನೇಂದ್ರಾಂ
ಘ್ರೀಕಮಲಭ್ರೃಂಗಂ ಸರಸ್ವತಿ ಮುಖ ಮುಸುಕಂ || ೫೪ ||

ಜನಕಂ ಶ್ರೀ ಜೈನಭಾಸ್ವತ್ಕ್ರ ಮಯುಗಲಸರೋಜಾತಭೃಂಗಂ ವಿಶಿಷ್ಟೇ
ಷ್ಪವಿದಾನಂ ಸತ್ಯರತ್ನಾಕರನೆನಿಸಿದ ಗೋವಿಂದರಾಜಂ ಮುನೀಂದ್ರಾ
ಭಿನುತ ಶ್ರೀವರ್ಧಮಾನಬ್ರತಿ ಪತಿಗಳುಪಾಧ್ಯಾಯರಾರ್ಹಂತ್ಯ ಧರ್ಮಂ
ತನಗಾರ್ಮಂ ಭೂಷೆ ರತ್ನತ್ರಯಮೆನೆ ನೆಗೞ್ದ ಧಾತ್ರಿಯೊಳ್‌ ಶಾಂತಿನಾಥಂ || ೫೫ ||

ಸುಂದರ ತುಹಿನಾಚಳ ಸಂ
ಕ್ರಂದನಗಜ ಶಾರದಾಭ್ರ ತಾರಾದ್ರಿ ಪಯಃ
ಕುಂದೇಂದು ಯಶೋಭಾಸುರ
ನೆಂದು ಮನಂಗೊಂಡು ಕೊಂಡುಕೊನೆದಾದರದಿಂ || ೫೬ ||

ಮಿಗಿಲಾಗಿರ್ದಭಿದಾನಸಂಹತಿಗಳಂ ಮೆಯ್‌ಮೆಯ್ಯೊಳಿಟ್ಟೞ್ಕಱೆಂ
ಪೊಗೞ್ದೋರಂತೆ ಸಮಸ್ತ ವಸ್ತುಕವಿಗಳ್‌ ಚೆಲ್ವಪ್ಪಿನಂ ಬಂಧುರೋ
ಕ್ತಿಗಳಿಂ ನೀನಭಿವರ್ಣಿಸಿಂತಿದನೆನಲ್‌ ಕೈಕೊಂಡು ತಾತ್ಪರ್ಯದಿಂ
ಬಗೆದೆಂ ಬಣ್ಣಿಸಲುಂತೆ ಮೊಗ್ಗೆ ಜಿನಧರ್ಮಖ್ಯಾತಿಯಂ ಬಣ್ಣಿಸಲ್‌ || ೫೭ ||

ಅಮಳಕೃತಿ ತಾಯೆತ್ತಭ್ರ(?)
ಸಮಾಲ್ಪಮತಿಯೆತ್ತ ಪೇೞ್ವೆನಾಂ ಗಡಮೇಂ ಚಿ
ತ್ರಮೊ ಬಹುಳ ಬಹಳ ಗಗನ
ಪ್ರಮಾಣಮಂ ತಳದೊಳಳೆದು ಕಂಡರುಮೊಳರೇ || ೫೮ ||

ಭುವನಸ್ತುತ್ಯಜಿನಸ್ತವಂಗಳಗೊಂದಂ ಚಿತ್ತದೊಳ್ಮೆಚ್ಚಿ ಬೆ
ಚ್ಚವೊಲೆತ್ತಾನುಮೊೞಲ್ದು ಚಿಂತಿಸಿದವಂಗಂ ಸಾರ್ವ ಪುಣ್ಯಾಸ್ರವಂ
ಪವಣಿಲ್ಲೆಂದೊಡೆ ಮೇರೆಯಿಲ್ಲದ ಜೀನೋಕ್ತಾರ್ಥೋಕ್ತಿಯಂ ವ್ಯಕ್ತಮಾ
ಗೆ ವಲಂ ಭಕ್ತಿಯಿನೋತು ಪೇೞ್ವವನ ಪುಣ್ಯಪ್ರಾಪ್ತಿ ಸಾಮಾನ್ಯಮೇ || ೫೯ ||

ಪರಮಾತ್ಮಂ ನಿಷ್ಠಿತಾತ್ಮಂ ಜಿನಪತಿ ಪರಮಸ್ವಾಮಿ ಸದ್ಧರ್ಮಮಾರ್ಮಂ
ಗುರು ವಂದ್ಯಂ ವರ್ಧಮಾನ ಪ್ರತಿಪತಿ ಸುಕುಮಾರಂ ಕಥಾನಾಯಕಂ ತ
ಚ್ಚರಿತಂ ಕಾವ್ಯಂ ಮದೀಯಾನುಜನನುಬಲಮೆಂದಂದೆ ದಲ್‌ ಮದ್ವಚೋವಿ
ಸ್ತರ ವಿನ್ಯಾಸಂ ಬಲಂಬೆತ್ತುದು ಪೆೞರ್ಗದನಿಂತಂತೆನಲ್ಕೆಂತು ತೀರ್ಗುಂ || ೬೦ ||

ಈ ಕೃತಿ ಕೇಳ್ದ ಭವ್ಯನಿವಹಕ್ಕೆ ಚಮತ್ಕೃತಿ ಮೆಚ್ಚುವೊಂಗೆ ಪು
ಣ್ಯಾಕೃತಿ ಭಾರತೀಸತಿಗೆ ಮಾಡಿದಳಂಕೃತಿ ಪುಷ್ಪಚಾಪ ಬಾ
ಣಾಕೃತಿ ಬಾಜಿಪೊಂಗೆ ಮುಕುರಾಕೃತಿ ಭಾವಿಸುವಂಗಗಾಧ ಬೋ
ಧಾಕೃತಿಯಿಂದೊಡಾರ್ಗಮಿದನಂತೆನಲುಂತೆನಲೆಂತು ತೀರ್ಗುಮೊ || ೬೧ ||

ಸುಕವೀಂದ್ರರುಂ ವಿನೇಯ
ಪ್ರಕರಣಮುಮೞೊಳೇನನಿಂ ನೋಡುವರೀ
ಸುಕುಮಾರಚರಿತದೊಳ್‌ ನೋ
ೞ್ಕು ಕಾವ್ಯಧರ್ಮಮುಮನಮಳಜಿನಧರ್ಮಮುಮಂ || ೬೨ ||

ನಿಯತಂ ಚತುರನುಯೋಗ
ಪ್ರಯೋಗ ಪೂರ್ವಾನುಯೋಗ ಸಾಗರವೀಚೀ
ಚಯದಿಂ ಪೊಱಪೊಣ್ಮಿದುದತಿ
ಶಯ ಸುಕಥಾನೂತ್ನ ರತ್ನ ರಶ್ಮಿ ಕಳಾಪಂ || ೬೩ ||

ಶ್ರೀಮದಘಾರೀ ವೀರಜಿಸನ್ನಿಧಿಯೊಳ್‌ ವಿಪುಲಾದ್ರಿಯೊಳ್‌ ಜಿನ
ಸ್ವಾಮಿಮತೋಕ್ತಿಯಂ ಮಗಧನಾಯಕನಂ ತಿಳಿವಂತು ಗೌತಮ
ಸ್ವಾಮಿಗಳೞ್ಕಿಱೆಂ ತಿಳಿಯೆ ಪೇೞ್ದುದನೂರ್ಜಿತಮಾಗೆ ಪೇೞ್ವೆನು
ದ್ದಾಮಕವಿತ್ವತತ್ವರುಚಿಯಿಂ ಸುಕುಮಾರ ಕಥಾಪ್ರಬಂಧಮಂ || ೬೪ ||

ಮ || ಅದೆಂತೆಂದೊಡಖಿಲ ಕರಿಮಕರದಂತಘಾತೋಚ್ಚಲಚ್ಛೀಕರೋತ್ಪುಂಗ ಭುಂಗುರತರತ್ತರಂಗಮಾಲಾಕೀರ್ಣ ಲವಣಾರ್ಣವ ಪರಿವೃತಮುಮೇಕ ಲಕ್ಷ ಪರಿಮಾಣ ಯೋಜನ ಶುಂಭದ್ವಿಷ್ಕಂಭಮುಂ ಸಮವೃತ್ತಾಕಾರಪ್ರಕಾರಮುಂ ಪೂರ್ವಾಪರಾಯತ ಹಿಮವನ್ಮಹಾಹಿಮವನ್ನಿಷಧನೀಲರುಕ್ಮಿಶಿಖರಿ ನಾಮಾಭಿರಾಮರ್ಷ ಧರ ಧರಾಧರಾವಭಾಸಿಯಂ ಭರತ ಹೈಮವತ ಹರಿವರ್ಷ ವಿದೇಹ ರಮ್ಯಕ ಹೈರಣ್ಯ ವತೈರಾವತಾಭಿದಾನ ಕ್ಷೇತ್ರಸಪ್ತಕ ವಿರಾಜಿತಮುಂ ಗಂಗಾ ಸಿಂಧು ರೋಹಿದ್ರೋಹಿ ತಾಸ್ಯಾ ಹರಿದ್ಧರಿಕಾಂತಾ ಸೀತಾಸೀತೋದಾನಾರೀ ನರಕಾಂತಾ ಸುವರ್ಣಮಾಲಾ ರೂಪ್ಯ ಕೂಳಾರಕ್ತಾರಕ್ತೋದಾಪ್ರಭೃತಿ ಚತುರ್ದಶ ಮಹಾನದೀಪ್ರವಾಹಕಮಯಮುಂ ಜಂಬೂವೃಕ್ಷಲಾಂಛನರಮಣೀಯಮುವಾಗಿ ನೆಗೞ್ತೆಗಂ ಪೊಗೞ್ತೆಗುಮಗುಂದಲೆಯಾದ ಜಂಬೂದ್ವೀಪದ ನಟ್ಟನಡುವೆ

ಇಳೆಯಂ ಸಾಸಿರಯೋಜನಂಬರೆಗಮಾನುರ್ಚ್ಚಿರ್ದೆನಿರ್ದುಂ ಮಹೀ
ತಳ ಮಧ್ಯಸ್ಥನೆನಂತುಮಲ್ಲದೆಯುಮಿಂದ್ರಾವಾಸಮಂ ಮುಟ್ಟಿದೆಂ
ಬೆಳಗುತ್ತಿರ್ಪ್ಪವು ತಾರತಾಪ್ರಭೃತಿಗಳ್ತಾವೆನ್ನನೆಂಬೊಂದು ಪೆಂ
ಪಳವಟ್ಟಿರ್ಪಿನಮಂತದೇನೆಸೆದುದೋ ತನ್ಮಂದರೋರ್ವೀಧರಂ || ೬೫ ||

ಅನಿಮೇಷಾವಳಿ ಮಾಳೆಗಟ್ಟಿ ತರದಿಂ ದುಗ್ಧಾಬ್ದಿಯಂ ಮುಟ್ಟಿ ಕಾಂ
ಚನರೂಪ್ಯಂಗಳ ಕುಂಭದಿಂ ಮೊಗೆದು ಜೈ ಜೈಯೆಂಬಿನಂ ಪಾಕಶಾ
ಸನ ಹಸ್ತಾಗ್ರದೊಳೆತ್ತಿ ತಂದು ಕುಡೆ ಕೊಂಡಿಂದ್ರಂ ಜಿನೇಂದ್ರಂಗೆ ಮ
ಜ್ಜನಮಂ ಕುಂದದೆ ಮಾೞ್ಪನೆಂದೊಡದಱೊಳ್ಪಂ ಬಣ್ಣಿಸಲ್ಬರ್ಕುಮೇ || ೬೬ ||

ಒಗೆದುಚ್ಚೋನ್ನತಿಯೊಂದು ಪೆಂಪು ಸಲೆ ಸೂರ್ಯೇಂದುಗ್ರಹಾನೀಕಮೋ
ಲಗಿಸುತ್ತುಂ ಬಲವರ್ಪ ಪೆಂಪು ಜಿನನಾಥಸ್ನಾನಕಲ್ಯಾಣದಿಂ
ಜಗದೊಳ್ಪೊಂಪುೞೆವೋದ ಪೆಂಪು ಸುರಕೇಳೀಲೀಲೆಯಿಂ ತಳ್ತ ಪೆಂ
ಪು ಗಿರೀಂದ್ರಾಹ್ವಯಮಾದ ಪೆಂಪು ಮಿಗೆ ಪೆಂಪಂ ಪೆತ್ತುದಾ ಪರ್ವತಂ || ೬೭ ||

ಮಹಿಮೆವಡೆದಿಂತು ಸೊಗಯಿಸು
ವ ಹೇಮಕುತ್ಕೀಳದಿಂದೆ ತೆಂಕಣದೆಸೆಯೊಳ್‌
ಮಹಿ ಭರತಂ ಷಟ್ಖಂಡಾ
ವಹಮಲ್ಲಿ ಶುಭಾವಹಂ ವನೀತಾಖಂಡಂ || ೬೮ ||

ಅದು ಪೆಂಪಿಂಗೆ ತವರ್‌ ಸುಖಕ್ಕೆ ಕಣಿ ಸೌಖ್ಯಕ್ಕಾಗರಂ ಲೀಲೆಗಾ
ಸ್ಪದಮಾಯಕ್ಕೆಱೊವಟ್ಟು ಭೋಗದ ನೆಲಂ ಸದ್ಧರ್ಮದಾರ್ಮಂ ವಿಲಾ
ಸದ ತಾಣಂ ಚದುರಿಂಗೆ ತಾಯ್‌ ಗುರು ವಿನೋದಕ್ಕಾದಿ ತನ್ಮಧ್ಯಸಂ
ಪದಮಾಗಿರ್ದುದು ವತ್ಸಮೆಂಬುದು ಜನಾಂತಂ ಸಂತತೋತ್ಸಾಹದಿಂ || ೬೯ ||

ಆ ವತ್ಸವಿಷಯಮಖಿಲೋ
ರ್ವೀವದನಾಳಂಕೃತಂ ಧರಿತ್ರೀಕಾಂತಾ
ಲಾವಣ್ಯಹೇತು ಭೂಲಲ
ನಾವದನಲಲಾಮಮೆಂಬಿನಂ ಸೊಗಯಿಸುಗುಂ || ೭೦ ||

ಬಳಸಿರ್ದುದ್ಯಾನಮುದ್ಯಾನದೊಳೊದವಿದ ಪದ್ಮಾಕರಂ ಪದ್ಮಷಂಡಂ
ಗಳೊಳೆತ್ತಂ ಸುತ್ತುಗೊಂಡಿರ್ದಳಿಕುಳಮಳಿನೀಗೆಯದೊಳ್ಕೂಡಿ ತಳ್ತಿಂ
ದೊಳಮಿಂದೋಳಕ್ಕಳಂಕಾರ ಮನೋದವಿಸುವುತ್ಕೋಕಿಲಂ ಕೋಕಿಲಾಳೀ
ಕುಳನಾದಕ್ಕಾದಮೊಳ್ಪಂ ಪಡೆವ ಶುಕನಿಕಾಯಂ ಕರಂ ರಯ್ಯಮೆತ್ತಂ || ೭೧ ||

ಬಗೆಗೊಳಿಸಿರ್ದ್ಧ ಮಾಧುಫಲಮುಣ್ಮುವ ಕಂಪನೆ ಬೀಱುತಿರ್ಪ ಸಂ
ಪಗೆ ಕರಮೊಪ್ಪಿ (ತೋರ್ಪ) ವಕುಳಂ ದೊರೆವೆತ್ತು ಮಡಲ್ತ ಬಳ್ಳಿಮ
ಲ್ಲಿಗೆಗಳ ಬಳ್ಳಿಮಾವುಗಳ ಬಳ್ಳಗವುಂಗಿನ ಬಳ್ಳವಳ್ಳಿಯೊಂ
ದಗಣಿತಲೀಲೆ ನೋೞ್ಪ ಜನಮಾಳೆಗೆ ಸೋಲಮನುಂಟುಮಾಡುಗುಂ || ೭೨ ||

ಮೊರೆವುನ್ಮತ್ತಮಧುಬ್ರಜಂ ಸುಳಿವಕಾದಂ(ಬಂ) ತೆಱಂಬೊಯ್ದು ಭೋ
ರ್ಗರೆದೆತ್ತಂ ಪುಗಲೆಂಬ ಕೋಕಿಲೆ ಸಮಂತಾದೞ್ಕಱೆಂ ಕೊಡುತಿ
ರ್ಪ ರಥಾಂಗಂ ನಲಿದಾಡಿ ನರ್ತಿಪ ನವಿಲ್‌ ಬಂಡುಂಬ ಪೆಣ್ದುಂಬಿ ಸು
ಸ್ವರದಿಂದೋದುವ ಕೀರಮಾರ ಬಗೆಗಂ ಸಮ್ಮೋಹಮಂ ಮಾಡವೇ || ೭೩ ||

ನವಗಂಧೋದ್ಗಮಗಂಧಶಾಳಿ ಶುಕಲೀಲಾಳಾಪದಿಂದಾದಮೊ
ಪ್ಪುವ ಚೆನ್ದಲ್‌ ಸಹಕಾರಪಕ್ವರಸಸಾರಾಸಾರಪಾನೀಯದಿಂ
ಸವಿಶೇಷಂ ಬೆಳದೊಪ್ಪಿ ತೋರ್ಪ್ಪ ಕಳಮಂ ತಾನೆಲ್ಲಿಯುಂ ಚೆಲ್ವು ಪೊ
ಣ್ಮುವಿನಂ ದೇಸೆಗೆ ದೇಸೆವೆತ್ತು ಬಹುಪೊಸಂ ಮಾಸಂ ದೇಶದೊಳ್‌(?) || ೭೪ ||

ಎಡೆವಱೆಯ (ಯದೊಳ್ಪದೊಡಂ)
ಬಡೆ ಬೆಡಂಗು ಪಿಂಗದೆ ವಿಲಾಸಮೋಸರಿಸದೆ ನೇ
ರ್ವೊಡೆ ನಗರ ಖೇಡ ಖರ್ವಡ
ಮಡಂಬ ಪತ್ತನಮವೆತ್ತಲುಂ ಸುತ್ತಿಱೆಗುಂ || ೭೫ ||

ಅತಿಶಯಮಾದ ದೇವಗೃಹಸಂಕುಳದಿಂದ ಕರಮೊಪ್ಪುವಪ್ಸರಃ
ಪ್ರತತಿವಿಲಾಸದಂ ವಿಭುಧಸಂತತಿಯಿಂ ದಿವಿಜಾವನೀಕ ಸಂ
ಹತಿಯಿನಿದೊಂದು ಕಲ್ಪಮವಿಕಲ್ಪದಿನುರ್ವಿಯೊಳಾದುದೆಂಬ ವಿ
ಶ್ರುತವಚನಂಗಳಿಂ ನಿಖಿಲಶೋಭೆಯನಾಂತುದು ತನ್ಮಹೀತಳಂ || ೭೬ ||

ಇಳಿತಂದತ್ತಿಂದ್ರಲೋಕಂ ಗಗನವಲಯದಿಂ ಮಧ್ಯಲೋಕಕ್ಕೆ ಧಾತ್ರೀ
ತಳದೊಳ್‌ ಭೋಗೀದ್ರಲೋಕಂ ರಸೆಯಿನೊಗೆದು ನಿಂದತ್ತು ವಿದ್ಯಾಧರೋರ್ವೀ
ವಳಯಂ ತದ್ರಜತಾದ್ರೀಂದ್ರದಿನನುನಯದಿಂ ಬಂದು ಬೇಱೊಂದು ಪೆಂಪಂ
ತಳೆದತ್ತೆಂಬಂದದಿಂದಂ ಸೊಗಯಿಸುಗುಮಿಳಾಚಕ್ರದೊಳ್‌ ವತ್ಸದೇಶಂ || ೭೭ ||

ವ || ಇಂತು ಮದನಮಂಗಳ ವೀರಲಕ್ಷ್ಮೀವಿಲಾಸನಿಳಯಮೆನಿಸಿದ ವತ್ಸಜನ ಪದವನಿತೆಗೆ ವದನಮೆನಿಸಿ

ಆಡುವವಹಿವಿಲಾಸದಿಂ
ದೆಡೆಯುಡುಗದೆ ರತ್ನದಿನನೂನ ಗಾಂಭೀರ್ಯದಿನಾ
ಕಡಲವಗಯಿಸಿ ತೋರ್ಪುದು
ವಿಡಂಬಿ ಮಹಿಮಾವಳಂಬಿ ಕೌಶಂಬಿಪುರಂ || ೭೮ ||

ಅಂಬುಧಿವೇಷ್ಟಿತಾಖಿಳಧರಾತಳದೊಳ್‌ ಪುರಮಿನ್ನದಿನ್ನುಮಿ
ಲ್ಲೆಂಬ ಪೊಗೞ್ತೆಗತ್ತಳಗಮೆಂಬ ನಗೆೞ್ತೆಗೆ ಜನ್ಮಭೂಮಿ ತಾ
ನೆಂಬ ಜಸಕ್ಕೆ ತಾಯ್ಗುರುವಿದೆಂಬ ವಿಭೂತಿಯನಾಂತುದಿಂತು ಕೌ
ಶಂಬಿಪುರಂ ಜಿತಾಮರಪುರಂ ಕಮನೀಯ ಚತುಷ್ಕಗೋಪುರಂ || ೭೯ ||

ವ || ಅದನಾಳ್ವನವನತಾರತಿನೃಪ ಮಣಿಮಯ ಕೀರಿಟ ಪ್ರಭಾಲೀಢಚಳನ ನಳಿನಯುಗ್ಮನುದಾತ್ತ ವೀರಲಕ್ಷ್ಮೀಲತಾರ್ಪಣದ್ರುಮಾಯಿತಾಯತೋತ್ತುಂಗಾತ್ಮ ಕೌಕ್ಷೇಯಕಸ್ತಂಭವಧಃ ಕೃತಾನಂತ ಚಿರಂತನ ಜಗತ್ಪ್ರಣೂತ ಭೂತಳಾಧಿನಾಥನರ್ಥಿ ಸಂಘತಾನವಬರ್ಹಿಣಾನಂದಕರಣ ಪ್ರತ್ಯಗ್ರಜಲಧರಾಗಮಂ ನಿರಂತರ ದಿಗಂತರಾಳ ಸ್ಥಿತದಂತಿ ಸಂತಾನದಂತಾಂತರೋಪಾಂತಪರಿ ಚುಂಬಮಾನ ಯಶಃ ಕಾಂತಾಕಾಂತನು ತ್ತುಂಗಭಂಗುರತರತ್ತರಂಗ ಸಂಘಾತಾರ್ಣನವ ಪರೀತಾಶೇಷಕ್ಷ್ಮಾಚಕ್ರಸಂರಕ್ಷಣದಕ್ಷ ದಕ್ಷಿಣ ಭುಜೋತ್ಖಡ್ಗನುದ್ದಾಮ ದಾರುಣ ಪ್ರತಾಪಕೋಪ ಪಾವಕ ಕಬಳಿಕಾರಾತಿ ಬಳನತಿಬಳನೆಂಬೊಂ

ಆ ಹಿರಿವಿಭವನ ನಯನಮ |
ನೋಹರಿ ಹರಿಣಾಕ್ಷಿ ಹಂಸಗಾಮಿನಿ ಮಧುಪ ||
ವ್ಯೂಹನಿಭ ಕುಟಿಳಚಿಕುರಮ |
ನೋಹರೆ ಮನಸಿಜನ ಕಣೆಗೆ ದೊಣೆಯೆನೆ ನೆಗೞ್ದಿಳ್‌ || ೭೯ ||

ವ || ಅಂತು ಮನೋಹರಿ ಮಹಾದೇವಿಯೊಳಾ ಧರಾಧೀಶ್ವರನಿಷ್ಟವಿಷಯ ಕಾಮಭೋಗಂಗಳನನವರತಮನುಭವಿಸುತ್ತುಂ ಸುಖಸಂಕಥಾವಿನೋದದಿಂ ರಾಜ್ಯಂ ಗೆಯ್ಯುತ್ತಮಿರೆಯಿರೆ

ಮಲೆಪರ್‌ ಮಾಱಾಂಪರಿಲ್ಲಕ್ರಮದಿನದಟರಾಟಂದರಿಲ್ಲುರ್ಕಿ ಬೇಡ |
ರ್ಚಲದಿಂ ಮಾರ್ಕೊಂಡರಿಲ್ಲೊಟ್ಟಜೆವೆರಸು ಕಱುಂಬರ್ತಱುಂಬಿರ್ದ್ದರಿಲ್ಲೆ
ತ್ತಲುಮುದ್ದಂ ಬಂದು ದಳ್ಳೆಂದುರಿವ ರಿಪುಗಳಿಲ್ಲಳ್ಕಿಬಿರ್ಕ್ಕುರ್ತ್ತು ಭೂಪುಂ |
ಡಳಮಾಜ್ಞಾಸಿದ್ಧಮಾದತ್ತತಿಬಳವಿಭುಗಂ ಭೋಧಿಪರ್ಯಂತಮಾಗಳ್‌ || ೮೦ ||

ಜಿನಪಾದಪಂಕಜಭ್ರಮ |
ರನೆನಿಸಿ ಜಿನಸಮಯದಿವ್ಯ ಭವನೋತ್ತಮಕಾಂ ||
ಚನಕಳಶನೆನಿಸಿ ಜಿನಶಾ |
ಸನದೀಪಕನೆನಿಸಿ ನೆಗೞ್ದಿನಾ ಧರಣೇಶಂ || ೮೧ ||

ದಯೆಯಿಂ ಮರ್ಯಾದೆಯಿಂ ಮೇರೆಯಿನನುಪನ ಸನ್ಮಾನದಿಂ ದಾನದಿಂ ಸ |
ತ್ಪ್ರಿಯದಿಂದಂ ಸಂತತೋಹ್ಸಾಹಮನನವರತಂ ಮಾಡುತಂ ನೂತ್ನ ರತ್ನ ||
ತ್ರಯಭೂಷಾಭೂಷಿತಾಂಗಂ ಸುಖದಿನರಸುಗೈಯುತ್ತಮೊಪ್ಪಿರ್ದ ಕೌಶಂ |
ಬಿಯೊಳತ್ಯುತ್ಸಾಹದಿಂದಂ ಪರಮಜಿನಮತಾಂಭೋಜಿನೀ ರಾಜಹಂಸಂ || ೮೨ ||

ಗದ್ಯ || ಇದು ಸಮಸ್ತ ವಿನಯಜನವಿನುತ ಶ್ರೀವರ್ಧಮಾನ ಮುನೀಂದ್ರ
ವಂದ್ಯ ಪರಮ ಜಿನೇಂದ್ರ ಶ್ರೀಪಾದಪದ್ಮ ವರಪ್ರಸಾದೋತ್ಪನ್ನ
ಸಹಜಕವೀಶ್ವರ ಶ್ರೀಶಾಂತಿನಾಥ ಪ್ರಣೀತಮಪ್ಪ
ಸುಕುಮಾರಚರಿತ್ರದೊಳ್‌ ಪೀಠಿಕಾಪರಕರಣಂ
ಪ್ರಥಮಾಶ್ವಾಸಂ