lipi_loka1ಆಗಿನ್ನು ಪ್ರಪಂಚ ನಾಗರೀಕತೆಯ ಹೊಸಿಲನ್ನು ದಾಟಲು ಉಪಕ್ರಮಿಸುವ ಸಂಕ್ರಮಣದ ಕಾಲ. ಧಾರ್ಮಿಕವಾಗಿ ಬೌದ್ಧ ಧರ್ಮ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡು ಜನ ಮಾನಸವನ್ನು ಬಡಿದೆಬ್ಬಿಸಿ ಶಾಂತಿಯನ್ನು ಸ್ಥಾಪಿಸುವ ಧರ್ಮ ಬೋಧನೆಯೊಂದಿಗೆ ಜನರಿಗೆ ನಿಕಟವಾಗುತ್ತಿದ್ದ ಕಾಲವದು. ರಾಜಕೀಯ ಪ್ರಬುದ್ಧತೆ ಇದ್ದರೂ ರಾಜಕೀಯವೇ ಸರ್ವಸ್ವ ಎನ್ನುವ ಪರಿಸ್ಥಿತಿ ಇರಲಿಲ್ಲವಾಗಿತ್ತು. ಧರ್ಮದ ಹೆಸರಿನಲ್ಲಿ ಅನೇಕ ಅವ್ಯವಹಾರವೂ ತಾಂಡವವಾಡುತ್ತಿತ್ತು. ಬೌದ್ಧಧರ್ಮ ಆ ಕಾರಣಕ್ಕಾಗಿ ಮತ್ತು ಜನರಿಗೆ ಸುಲಭದಲ್ಲಿ ಅರ್ಥವಾಗುವ ರೀತಿಯಲ್ಲಿ ಬೋಧನೆಯನ್ನು ಹೊಂದಿದ್ದರಿಂದ ಬಹು ಬೇಗ ವಿಸ್ತಾರಗೊಂಡಿತು. ಆ ರೀತಿ ವಿಸ್ತಾರ ಪಡೆಯಲು ರಾಜಾಶ್ರಯದ ಜೊತೆಗೆ ಭಾಷೆಯಲ್ಲಿನ ಸಡಿಲಿಕೆ ಕಾರಣವಾಯ್ತು.
ಬೌದ್ಧ ಧರ್ಮ ತನ್ನ ಆಶಯಗಳನ್ನು ಮತ್ತು ಶಾಂತಿ ಸಂದೇಶಗಳನ್ನು ಜನರಿಗೆ ತಲುಪಿಸಲು ಆಯ್ದುಕೊಂಡ ಮಾರ್ಗ ಅತ್ಯಂತ ಸೂಕ್ತವಾಗಿತ್ತು. ಉಳಿದ ಧರ್ಮಗಳಂತೆ ಅದು ಸಾಹಿತ್ಯದ ಕಡೆಗೆ ಗಮನ ಕೊಡದೆ ಹಳ್ಳಿಯ ಜನರಾಡುವ ಗ್ರಾಮ್ಯ ಭಾಷೆಗಳನ್ನೇ ತನ್ನ ಬಂಡವಾಳ ಮಾಡಿಕೊಂಡಿತು. ಪ್ರಾಕೃತ ಮತ್ತು ಪಾಲಿ ಅಂದು ಸಾಮಾನ್ಯ ಜನರಾಡುವ ಭಾಷೆಯಾಗಿದ್ದುದರಿಂದ ಆ ಭಾಷೆಯಲ್ಲಿ ತಮ್ಮ ಸಂದೇಶ ಸಾರಿದರೆ ಅದು ಎಲ್ಲರನ್ನೂ ತಲುಪುತ್ತದೆ ಎನ್ನುವುದು ಭದ್ರ ನಂಬಿಕೆ ಮತ್ತು ಸರಳ ಉಪಾಯವಾಗಿತ್ತು. ಅದಕ್ಕಾಗಿ ಮೊದಲು ಆಯ್ದು ಕೊಡದ್ದು ಸಾರ್ವಜನಿಕರಿಗೆ ಹತ್ತಿರವಿರುವ ಸಾಮಾನ್ಯವಾಗಿ ಎಲ್ಲರೂ ಗಮನಿಸುವ ಹೆಬ್ಬಂಡೆಗಳನ್ನು ಆಯ್ದುಕೊಳ್ಳುವುದಾಗಿತ್ತು. ಬೌದ್ಧ ಧರ್ಮ ಪ್ರಸಾರಕ್ಕೆ ಹೆಬ್ಬಂಡೆಯಾಯ್ತು ಇನ್ನು ಭಾಷೆಯಂತೂ ಪ್ರಾಕೃತ ಎನ್ನುವುದು ತಿಳಿದಂತಾಯ್ತು ಲಿಪಿ ಬಹಳ ಮುಖ್ಯವಾಗಿತ್ತು. ಆಡುಮಾತಿನಲ್ಲಿ ಪ್ರಾಕೃತವನ್ನು ತಿಳಿಸುವುದು ಸುಲಭ ಆದರೆ ಅದನ್ನೇ ಸಾರ್ವಜನಿಕವಾಗಿ ದಾಖಲಿಸುವ ಕಾರ್ಯ ಮಹತ್ವ ಆಗ ಆಯ್ದುಕೊಂಡದ್ದು ಬ್ರಾಹ್ಮಿ ಲಿಪಿಯನ್ನು.

ಅದಾಗಲೇ ಬ್ರಾಹ್ಮಿಯೊಂದಿಗೆ ಪ್ರಾಕೃತವನ್ನು ಕಲಿತಿದ್ದ ವಿದ್ವಾಂಸನೊಬ್ಬ ಸಂಸ್ಕೃತದ ಜೊತೆಗೆ ಬಲದಿಂದ ಎಡಕ್ಕೆ ಬರೆದುಕೊಂಡು ಹೋಗುವ ಕರೋಷ್ಠಿಯಲ್ಲೂ ಪಾಂಡಿತ್ಯ ಹೊಂದಿದ್ದ. ಜೊತೆಗೆ ಕಲೆಯ ಬಗೆಗೆ ಅಪಾರವಾದ ಆಸಕ್ತಿಯನ್ನೂ ಸಹ ಹೊಂದಿದ್ದ. ಆತ ತಾನು ಕಲೆಯನ್ನು ಆರಾಧಿಸುತ್ತಾ ದೂರದ ಗಾಂಧಾರ(ಇಂದಿನ ಕಂದಹಾರ್)ದಿಂದ ನಲಂದಾದಲ್ಲಿ ಕಲೆಗೆ ಆಶ್ರಯ ಸಿಗಬಹುದು. ಕಲೆಯನ್ನು ಅಲ್ಲಿ ಅಭ್ಯಸಿಸಬಹುದೆನ್ನುವ ಮಹತ್ವಾಕಾಂಕ್ಷೆಯಿಂದ ಬಂದ. ಆದರೆ ಹಾಗೆ ಬಂದವನಿಗೆ ಇಲ್ಲಿ ಬೌದ್ಧ ಧರ್ಮದ ಪ್ರಭಾವ ಹೆಚ್ಚಾಗಿದ್ದ ಕಾರಣ ಮತ್ತು ಕಲೆಗೆ ಅಲ್ಲಿ ಯಾವುದೇ ಆಸ್ಪದವಿಲದೆ ನಿರಾಶೆಗೊಂಡಿದ್ದ. ಹಾಗೆ ಬಂದವನಿಗೆ ರಾಜಾಶ್ರಯ ನೀಡಿ ಅವನನ್ನು ಬಳಸಿಕೊಂಡವ ಮೌರ್ಯ ಚಕ್ರವರ್ತಿ ದೇವಾನಾಂಪ್ರಿಯ. ಆ ಕಾಲಕ್ಕೆ ಅಂದರೆ ಕ್ರಿಸ್ತ ಪೂರ್ವದ 3ನೇ ಶತಮಾನಕ್ಕೆ ಬಹುಭಾಷಾ ವಿದ್ವಾಂಸನೊಬ್ಬ ಸಿಕ್ಕಿದ್ದು ಅಶೋಕನಿಗೆ ಅನುಕೂಲವಾಗಿ ಪರಿಣಮಿಸಿತು. ಈತ ಸಿಕ್ಕಿದ್ದರಿಂದಲೇ ಬೌದ್ಧ ಧರ್ಮದ ಪ್ರಸಾರಕ್ಕೆ ಲಿಪಿಯ ಸಹಾಯ ದೊರಕಿತು.

ಚಪಡ : ದೂರದ ಗಾಂಧಾರದ ಲಿಪಿ ತಜ್ಞ ಬೇರಾರೂ ಆಗಿರದೆ ಇಂದು ನಾವು ಆಯುರ್ವೇದದ ಸಂಹಿತಾ ಕರ್ತ ಎಂದು ಗೌರವಿಸುವ ಚರಕನ ಮೊಮ್ಮಗ ಎನ್ನುವ ವಾದವೂ ಬಲವಾಗಿದೆ. ಇದು ಇದ್ದರೂ ಆಶ್ಚರ್ಯವಿಲ್ಲ. ಈತ ಖರೋಷ್ಠೀ ಅಕ್ಷರ ಶೈಲಿಯ ಸಂಸ್ಕೃತಿಗೆ ಹೊಂದಿಕೊಂಡವ. ಅತ್ಯಂತ ಸಂಯಮದಿಂದ ಅಶೋಕನ ಆಜ್ಞೆಗಳನ್ನು ಪಾಲಿಸುತ್ತಿದ್ದ ಚಪಡ ನಮ್ಮ ಚರಿತ್ರೆಗೆ ಕಲಾ ಇತಿಹಾಸವನ್ನು ದಯಪಾಲಿಸಲು ಕಾರಣೀಭೂತನಾದ. ಈತ ಪಾಟಲೀಪುತ್ರದಿಂದ ದಕ್ಷಿಣಕ್ಕಿರುವ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ಧಾಪುರ, ಮತ್ತು ಜಟಿಂಗ ರಾಮೇಶ್ವರಗಳಲ್ಲಿನ ಹೆಬ್ಬಂಡೆಗಳನ್ನು ಗುರುತಿಸಿಕೊಂಡು ಅಲ್ಲಿ ಅಶೋಕನ ಸಂದೇಶಗಳನ್ನು ಬ್ರಾಹ್ಮಿ ಲಿಪಿಯಲ್ಲಿ ಪ್ರಾಕೃತ ಭಾಷೆಯಲ್ಲಿ ಎಡದಿಂದ ಬರೆದನು. ಆದರೆ ಆ ಕಾಲಕ್ಕೆ ಅಶೋಕ ತನ್ನ ಪರಿವಾರದ ಯಾರೊಬ್ಬರ ಹೆಸರನ್ನೂ ಹೊರಗೆ ಹೋಗದಂತೆ ಕಟ್ಟಾಜ್ಞೆ ಮಾಡಿದ್ದರೂ ದೂರದ ಊರಿಗೆ ಅಶೋಕನಂತೂ ಬರಲಿಕ್ಕಿಲ್ಲ ಎನ್ನುವ ಧೈರ್ಯ ಮತ್ತು ಬಂದರೂ ಓದಲಾಗದಂತೆ ಲಿಪಿಕರೇಣ ಎನ್ನುವ ಸಂಸ್ಕೃತದ ಪದವನ್ನು ಕರೋಷ್ಠಿಯಲ್ಲಿ ಬರೆದು(ಬಲದಿಂದ ಎಡಕ್ಕೆ) ತನ್ನ ಹೆಸರನ್ನು ಬರೆದನು. ಹೀಗೆ ಬರೆಯದೇ ಹೋಗಿದ್ದರೆ ನಮಗೆ ಲಿಪಿಯ ಇತಿಹಾಸಕ್ಕೆ ಆರಂಭಿಗನಾರು ಎನ್ನುವುದೇ ತಿಳಿಯುತ್ತಿರಲಿಲ್ಲ. ಈತ ಹೀಗೆ ಬರೆದು ಕೊಂಡಿರುವುದರಿಂದ ಭಾರತದ ಇತಿಹಾಸ ಪರಂಪರೆಯಲ್ಲಿ ಅಕ್ಷರ ಸಂಸ್ಕೃತಿಗೆ ಮೊದಲಿಗನಾದ ಮತ್ತು ಲಿಪಿಕಾರರ ಇತಿಹಾಸಕ್ಕೆ ಚಪಡ ಪಿತಾಮಹನೆನಿಸಿದ.

ಲಿಪಿಕಾರ : ಚಪಡನ ಕಾಲಕ್ಕೆ ಲಿಪಿಯ ಬಳಕೆ ಬಂಡೆಗಳ ಮೇಲೆ ಆಗುತ್ತಿದ್ದ ಕಾಲವದು. ಆ ಕಾಲಕ್ಕೆ ಅಕ್ಷರ ಬಲ್ಲವನಿಗೆ ಮತ್ತು ಕಂಡರಣೆ ಮಾಡುವವನಿಗೆ ಲಿಪಿಕಾರ ಎಂದೂ, ಬರವಣಿಗೆಯನ್ನು ಪ್ರಾಕೃತದಲ್ಲಿ ಲೇಖಾಪಿತ ಎಂತಲೂ ಕರೆಯಲಾಗುತ್ತಿತ್ತು. ದೇಶದ ದಕ್ಷಿಣ ಭಾಗದ ಅಕ್ಷರ ಇತಿಹಾಸದ ಮೊದಲ ನೋಟ ಕರ್ನಾಟಕ ಮತ್ತು ಕರ್ನಾಟಕ – ಆಂಧ್ರದ ಗಡಿಯಾಗಿರುವುದರಿಂದ, ಇದನ್ನು ಬರೆದವನು ಮತ್ತು ಬರೆಸಿದವನು ಮತ್ತು ಬರೆದ ಸ್ಥಳಗಳು ಲಿಪಿಯ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿವೆ. ಭಾರತದ ಲಿಪಿಕಾರರ ಇತಿಹಾಸದ ಆರಂಭವೇ ಇಲ್ಲಿಂದ. ಆದರೆ ನಮ್ಮಲ್ಲಿ ವಿಷಯದ ಬಗೆಗೆ ಹೆಚ್ಚು ಒತ್ತು ಕೊಡುವುದರಿಂದಾಗಿ ಲಿಪಿಯ ಬಗೆಗೆ ಅಂತಹ ಆಸಕ್ತಿಯನ್ನು ಯಾರೂ ಸಹ ಮನಗಾಣದೇ ನಿರ್ಲಕ್ಷಿಸಿದರು. ಒಂದಂತೂ ನಿಜ ಒಂದು ಕಾಲಕ್ಕೆ ಅತ್ಯಂತ ಬಲಿಷ್ಠ ಸಾಮ್ರಾಜ್ಯವನ್ನು ಕಟ್ಟಿದ. ದೇಶದೆಲ್ಲೆಡೆ ಶಾಂತಿ ಸೌಹಾರ್ದತೆಯ ಮಂತ್ರವನ್ನು ಸಾಧ್ಯವಾದಷ್ಟು ಪ್ರಚಾರಗೊಳಿಸಿದ. ತನ್ನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿರುವಂತೆ ಮಾಡಿಕೊಂಡ ಮೌರ್ಯ ವಂಶದ ದೊರೆ ಅಶೋಕ ಬಹುಕಾಲ ತನ್ನ ನೆಲವನ್ನು ಅನುಭವಿಸಲು ಆಗಲೇ ಇಲ್ಲ ಆತ ಕಟ್ಟಿ ಬೆಳೆಸಿದ ಸಾಮ್ರಾಜ್ಯ ಶತಮಾನದಷ್ಟೂ ನೆಲೆಗೊಳ್ಳಲಿಲ್ಲ. ಶತಮಾನದ ಅಂಚಿಗೆ ನೇಪಥ್ಯಕ್ಕೆ ಸರಿದು ನಾಶವಾಯ್ತು. ಆತ ಕೊಟ್ಟ ಧರ್ಮ ಈ ನಮ್ಮ ನೆಲದಲ್ಲಿ ನೆಲೆಗೊಳ್ಳದೇ ಅದೂ ಕೂಡಾ ಅಷ್ಟೇ ವೇಗದಲ್ಲಿ ಕಳಚಿಕೊಂಡಿತು. ಆದರೆ ಆತ ಕೊಟ್ಟ ಅಕ್ಷರ ಸಾಮ್ರಾಜ್ಯ ಇಂದಿಗೂ ವಿಕಸಿಸುತ್ತಾ ಸಾಗಿದೆ. ಒಂದು ದೃಷ್ಟಿಯಲ್ಲಿ ಜನಸಾಮಾನ್ಯರನ್ನೂ ಅಕ್ಷರಸ್ಥರನ್ನಾಗಿಸುವಲ್ಲಿ. ನಮಗೆ ಅಕ್ಷರದ ಪರಿಚಯವನ್ನು ಮಾಡಿಕೊಡುವಲ್ಲಿ ಈ ಸಾಮ್ರಾಟ ಇಂದಿಗೂ ಚಿರಸ್ಥಾಯಿಯಾಗಿ ನೆನಪಿಟ್ಟುಕೊಳ್ಳಬೇಕಾದವನು ಅನ್ನುವುದು ಅತಿಶಯ ಅನ್ನಿಸುವುದಿಲ್ಲ. ಚಪಡ ನಮಗೆ ಲಿಪಿಕೊಟ್ಟ ಪಿತಾಮಹನಂತೂ ಹೌದು.

ಕವಲೊಡೆದ ಲಿಪಿ – ವಿಕಾಸದ ಹಂತ : ತಮ್ಮ ವ್ಯವಹಾರಗಳನ್ನು ಮತ್ತು ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವ ಸಲುವಾಗಿ ಹುಟ್ಟಿದ ಭಾಷೆಗೆ ಲಿಪಿ ಹುಟ್ಟಿದ್ದು ಅದೆಷ್ಟೋ ಸಹಸ್ರಮಾನಗಳಾಗಿರಬಹುದು. ಬೌದ್ಧಿಕ ಕೌಶಲತೆಯ ಜೊತೆಗೆ ಕಲಾಸಕ್ತಿ ಮಾನವನಲ್ಲಿ ಜಾಗ್ರತಗೊಂಡಾಗಲೇ ಭಾಷೆ ಲಿಪಿಯ ರೂಪ ಪಡೆಯಿತು. ಮೊದಲಿಗೆ ಚಿತ್ರಗಳಲ್ಲೇ ಅನೇಕ ವಿಷಯಗಳನ್ನು ಹಿಡಿದಿಟ್ಟು ಅವುಗಳನ್ನು ಮಣ್ಣಿನ ಮಡಕೆಗಳಲ್ಲಿ ಹಾಗೂ ಕಲ್ಲಿನ ಹಲಗೆಗಳಲ್ಲಿ ಪ್ರಕಟಗೊಳಿಸುತ್ತಿದ್ದರು ಆದರೆ ಮುಂದೆ ಅದು ಲೋಹಗಳಲ್ಲೂ ಬರೆಯುವ ಹಂತಕ್ಕೆ ಬಂತು. ಅಕ್ಷಪಾದದಂತಹ ಚಿತ್ರಲಿಪಿಗಳಿಂದ ಸಿಂಧೂ ನದಿಯತಟದ ಜನರು ಅನೇಕ ವಿಷಯಗಳನ್ನು ಹಂಚಿಕೊಂಡರೋ ಗೊತ್ತಿಲ್ಲ ಆದರೆ ಅದೆಷ್ಟೋ ಕಾಲದ ಮೇಲೆ ಅದೇ ಲಿಪಿಯಿಂದ ವಿಕಾಸಗೊಂಡು ಪರಿಷ್ಕೃತ ಬ್ರಾಹ್ಮಿ ಎನ್ನುವ ಲಿಪಿ ಹುಟ್ಟಿಕೊಂಡಿತು. ಆದರೆ ಅದಕ್ಕೂ ಮೊದಲು ಖರೋಷ್ಠೀ ಬಂದಾಗಿತ್ತು. ಕೇವಲ ರೇಖೆಗಳಂತೆ ಕಾಣಿಸಿಕೊಳ್ಳುವ ಬ್ರಾಹ್ಮಿಯನ್ನು ಸಂಸ್ಕೃತದ ಛಂದಸ್ಸಿನ ಸೂತ್ರಗಳಿಂದ ದೂರವಾದ ಗ್ರಾಮ್ಯ ಸೊಗಡನ್ನು ಹೊಂದಿರುವ ಪ್ರಾಕೃತಕ್ಕೆ ಅಳವಡಿಸಿಕೊಂಡರು. ಆದರೆ ಬ್ರಾಹ್ಮಿ ಮತ್ತು ಪ್ರಾಕೃತಗಳು ದಕ್ಷಿಣದ ಪ್ರಾದೇಶಿಕತೆಗೆ ಒಗ್ಗದೇ ಅವುಗಳು ದಕ್ಷಿಣದಲ್ಲಿ ನೆಲೆಗೊಳ್ಳಲಿಲ್ಲ. ಇಂತಹ ಬ್ರಾಹ್ಮಿಯಿಂದ ಚಿಗುರೊಡೆದ ಕವಲು ಕನ್ನಡವಾಗಿ ಮಾರ್ಪಟ್ಟಿತು. ಅತ್ಯಂತ ಸುಂದರ ಮತ್ತು ಸ್ಪಷ್ಟವಾದ ಅಕ್ಷರಗಳು ದಕ್ಷಿಣದಲ್ಲಿ ಅಭಿವೃದ್ಧಿಗೊಂಡವು. ಮುಂದೆ ಕನ್ನಡವು ಪ್ರದೇಶದಿಂದ ಪ್ರದೇಶಕ್ಕೆ ಮತ್ತು ಶತ ಶತಮಾನಗಳಿಗೂ ರಾಜ ವಂಶಗಳ ಬೇರುಗಳಾಗಿ, ಅವರವರದ್ದೇ ಶೈಲಿ ಪಡೆಯಿತು. ಹೋಗೆ ಲಿಪಿಯೊಂದು ವಿಕಾಸದ ಪಥವನ್ನು ಬದಲಿಸುತ್ತಾ ಹೊಸತನಕ್ಕೆ ಹೊಸ ಪೀಳಿಗೆಗೆ ಅವಕಾಶಮಾಡಿಕೊಡುತ್ತಾ ಸಮೃದ್ಧವಾಗಿ ಬೆಳೆದು ಬರುತ್ತಿದೆ. ಕನ್ನಡ ಲಿಪಿಯ ಇತಿಹಾಸಕ್ಕೆ ತಾಮ್ರಪಟ ಶಾಸನಗಳು ಮತ್ತು ಶಿಲಾಲೇಖಗಳ ಜೊತೆಗೆ ತಾಳೆಗರಿಯ ಲಿಪಿಗಳೂ ಅನೇಕ ಮಹತ್ವದ ಆಕರಗಳಾಗಿವೆ.

ಲಿಪಿಕಾರನ ಗೊಂದಲಗಳು : ಲಿಪಿಕಾರರೆಲ್ಲರೂ ವಿದ್ವಾಂಸರಾಗಿರುತ್ತಿರಲಿಲ್ಲ. ಮೊತ್ತಮೊದಲ ಅಂದರೆ ಇತಿಹಾಸ ಕಣ್ಣು ಬಿಡಬೇಕಾದರೆ ಅಥವಾ ಆರಂಭಿಕ ಹಂತದ ಅಕ್ಷಪಾದ ಲಿಪಿ ಎಂದು ಕರೆಸಿಕೊಂಡ ಲಿಪಿಯ ಕಾಲಕ್ಕೆ ನೋಡಿದರೆ ಆಗ ಚಿತ್ರಗಳನ್ನು ಸಂಕೇತದ ಮೂಲಕ ಬರೆಯುತ್ತಿದ್ದುದರಿಂದ ಅಲ್ಲಿ ಅದನ್ನು ತಿಳಿದುಕೊಳ್ಳುವವನು ಶ್ರಮ ಪಡಬೇಕಾಗಿತ್ತು ಆದರೆ ಆಮೇಲೆ ಬಂದ ಲಿಪಿಗಳು ಸುಸಂಬದ್ಧವಾಗಿದ್ದವು. ಆದರೆ ಲಿಪಿಯನ್ನು ಬಲ್ಲವನು ವಿದ್ವಾಂಸನಾಗಿದ್ದಿರಲಿಕ್ಕಿಲ್ಲ. ವಿದ್ವಾಂಸನೂ ಸಹ ಲಿಪಿಕಾರನಾಗಿದ್ದಿರಬಹುದು. ನಮ್ಮಲ್ಲಿ ದೊರೆತ ಅನೇಕ ಶಾಸನಗಳು ಇದನ್ನು ಪ್ರತಿಬಿಂಬಿಸುತ್ತವೆ. ವಾಚಕನೊಬ್ಬ ಹೇಳಿದ್ದನ್ನು ಕಂಡರಿಸುವ ಕಲೆಯನ್ನು ಹೊಂದಿದವರೂ ಸಹ ಶಾಸನ ಬರೆದ ಉದಾಹರಣೆ ಇವೆ. ಅವರಿಗೆ ವಿಷಯದ ಜ್ಞಾನವಿರದೇ ಹೋದರೂ ಬರವಣಿಗೆಯ ಕಲೆ ಗೊತ್ತಿತ್ತು.

ಕನ್ನಡ ಮತ್ತು ಲಿಪಿ : ಲಿಪಿಯ ಕುರಿತಾಗಿ, ಲಿಪಿಕಾರರ ಕುರಿತಾಗಿ, ಲಿಪಿಯನ್ನು ಉಳಿಸಿ ಬೆಳೆಸಿದ ಮತ್ತು ಪ್ರಚುರಗೊಳಿಸಿದ ವೈಜ್ಞಾನಿಕ ವಿಧಾನದ ಬಗ್ಗೆ, ತನ್ನನ್ನು ತಾನು ಆಳವಾಗಿ ತೊಡಗಿಸಿಕೊಂಡ ರಾಜ ಅಶೋಕನನ್ನು ಹೊರತಾಗಿ ಈ ದೇಶದ ಇತಿಹಾಸದಲ್ಲಿ ಇನ್ನೊಬ್ಬ ಬರಲಿಲ್ಲ. ಬ್ರಾಹ್ಮೀಲಿಪಿಯನ್ನು ತನ್ನ ಶಾಂತಿ ಸಂದೇಶಗಳಿಗೆ ಬಳಸಿಕೊಂಡು ಬ್ರಾಹ್ಮಿಯನ್ನು ದೇಶಾದ್ಯಂತ ಪರಿಚಯಿಸಿದ ಮೌರ್ಯ ವಂಶಸ್ಥ ರಾಜ ಅಶೋಕನು ಭಾರತೀಯ ಲಿಪಿಯ ಜನಕ ಎಂದು ನಾವು ಗೌರವಿಸಬೇಕಾಗಿದೆ. ಇದು ಸಂಭವಿಸಿ ಅನೇಕ ಶತಮಾನಗಳ ತರುವಾಯ, ಬ್ರಾಹ್ಮೀ ಲಿಪಿಯಿಂದ ಬೇರ್ಪಟ್ಟು, ತನ್ನದೇ ರೂಪ ಪಡೆದು ವಿಕಾಸ ಹೊಂದತೊಡಗಿದ ಕನ್ನಡ ಲಿಪಿಯ ಪಿತಾಮಹನೂ ಸಹ ಅಶೋಕನೇ ಎಂದು ನಾವು ಒಪ್ಪಿಕೊಳ್ಳಬೇಕು. ಕನ್ನಡದ ಜನರಿಗೆ ಲಿಪಿಯ ಬಳಕೆಯನ್ನು ತೋರಿಸಿಕೊಡುವಲ್ಲಿ ಮಹತ್ತರ ಪಾತ್ರ ಬ್ರಾಹ್ಮಿಯದ್ದು.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]