ಇಪ್ಪತ್ತೆಂಟು ವರ್ಷದ ಯುವಕ.

ವಿಜ್ಞಾನದಲ್ಲಿ ಪ್ರತಿಭಾವಂತ. ಲಂಡನ್ ವಿಶ್ವವಿದ್ಯಾನಿಲಯದಲ್ಲಿ “ಡಾಕ್ಟರ್ ಆಫ್ ಸೈನ್ಸ್” ಪ್ರಶಸ್ತಿಯನ್ನು ಆಗಲೇ ಗಳಿಸಿದ್ದ.

ವಾರಣಾಸಿಯ ಹಿಂದು ವಿಶ್ವವಿದ್ಯಾನಿಲಯದಲ್ಲಿ ರಸಾಯನ ಶಾಸ್ತ್ರದ “ಪ್ರೊಫೆಸರ್” ಮತ್ತು ಇಲಾಖೆಯ ಮುಖ್ಯಾಧಿಕಾರಿಯಾಗಿ ಆತನ ನೇಮಕವಾಯಿತು.

ಅಧಿಕಾರ ವಹಿಸಿಕೊಳ್ಳಲು ಬಂದ.

ಆವರೆಗೆ ಮುಖ್ಯಾಧಿಕಾರಿಯಾಗಿದ್ದವರು ಆತನಿಗೆ ಅಧಿಕಾರ ವಹಿಸಿಕೊಡಬೇಕಾಯಿತು. ಅವರಿಗೆ ಐವತ್ತೈದು ವರ್ಷ.

ಆ ಸಮಯದಲ್ಲಿ ಹುದ್ದೆಯನ್ನು ವರ್ಗಾಯಿಸಿಕೊಡುತ್ತಾ ರಸಾಯನ ಶಾಸ್ತ್ರ ಪ್ರಾಧ್ಯಾಪಕರು, “ಇಷ್ಟು ವರ್ಷಗಳವರೆಗೆ ನಾನು ಈ ವಿಭಾಗದ ಮುಖ್ಯಸ್ಥನಾಗಿ ಇದ್ದೆ. ಇಂದಿನಿಂದ ಆ ಗೌರವ, ಗುರುತರವಾದ ಹೊಣೆ ನಿಮ್ಮ ಮೇಲಿದೆ” ಎಂದು ಹೇಳಿ ವಿಭಾಗಕ್ಕೆ ಸಂಬಂಧಪಟ್ಟ ಬೀಗದ ಕೈಗಳನ್ನು ಯುವಕ ವಿಜ್ಞಾನಿಗೆ ಕೊಟ್ಟರು. ಅವರ ಕಣ್ಣು ತುಂಬ ನೀರು. ಹೊಸದಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದ ಯುವಕನ ಮನಸ್ಸು ಕಲಕಿತು. ಸುಮಾರು ಐವತ್ತೈದು ಪ್ರಾಯದ ಹಿರಿಯ ಪ್ರಾಧ್ಯಾಪಕರು ತನ್ನ ಕೈಕೆಳಗೆ ಕೆಲಸ ಮಾಡಬೇಕಲ್ಲ ಎಂಬ ಭಾವನೆ ಆತನಲ್ಲಿ ಮೂಡಿತು. ತಕ್ಷಣ, “ಈ ಬೀಗದ ಕೈಗಳು ನಿಮ್ಮಲ್ಲಿಯೇ ಇರಲಿ, ನಾನು ನಿಮ್ಮ ಕೈಕೆಳಗೆ ಕೆಲಸ ಮಾಡುತ್ತೇನೆ” ಎಂದ.

ಹಿರಿಯ ಪ್ರಾಧ್ಯಾಪಕರು ಬೆರಗಾದರು. ಅವರಿಗೆ ಆಗ ಸಂತೋಷವೂ ಆಯಿತು. ವಿಶ್ವವಿದ್ಯಾನಿಲಯದ ಮುಖ್ಯಸ್ಥರೊಂದಿಗೆ ಯುವಕನು ಮಾತುಕತೆ ನಡೆಸಿ, ಆ ಪ್ರಾಧ್ಯಾಪಕರು ಅದೇ ವಿಭಾಗದಲ್ಲಿ ಹಿಂದಿದ್ದ ಸ್ಥಾನದಲ್ಲಿಯೇ ಮುಂದುವರಿಯುವಂತೆ ಆಯಿತು.

ಇಂತಹ ಔದಾರ್ಯ ತೋರಿಸಿದ ಯುವಕ ವಿಜ್ಞಾನಿ ಶಾಂತಿಸ್ವರೂಪ ಭಾಟ್ನಗರ್.

ಶಾಲೆಗೆ

ತಾತ ಹೊರಗೆ ಎಲ್ಲಿಗೋ ಹೊರಟಿರುವುದನ್ನು ಕಂಡ ಸುಮಾರು ಐದು ವರ್ಷದ ಹುಡುಗ ವಾಡಿಕೆಯಂತೆ ತಕ್ಷಣ ಹತ್ತಿರ ಓಡಿಬಂದು, “ನಾನೂ ಬರಲಾ ತಾತಾ?” ಎಂದ. ಬಾಲಕನ ಮುಗ್ಧ ಮುಖದಲ್ಲಿ ಎದ್ದು ಕಾಣುತ್ತಿದ್ದ ಕಾತರವನ್ನು ಗಮನಿಸಿ ತಾತ ಮುಗುಳ್ನಗುತ್ತಾ, “ನಿನ್ನನ್ನು ಜೊತೆಯಲ್ಲಿ ಕರೆದುಕೊಂಡೇ ಹೋಗಲು ಹೊರಟಿದ್ದೇನೆ” ಎಂದರು.

 

‘ಈ ಬೀಗದ ಕೈಗಳು ನಿಮ್ಮಲ್ಲಿಯೇ ಇರಲಿ.’

ಬಾಲಕ ಸಂತೋಷದಿಂದ ಉಬ್ಬಿಹೋದ. ತಾಯಿಯ ಬಳಿ ಓಡಿಬಂದು ಲಗುಬಗೆಯಿಂದ ಒಳ್ಳೆಯ ಬಟ್ಟೆಯನ್ನು ಧರಿಸಿಕೊಂಡ. ತನಗಾಗಿ ಕಾಯುತ್ತಿದ್ದ ತಾತನ ಜೊತೆಯಲ್ಲಿ ಠೀವಿಯಿಂದ ನಡೆದ. ಶಾಲೆಗೆ ಅವನನ್ನು ಸೇರಿಸಲು ತಾತ ಆ ದಿನ ಹೊರಟಿದ್ದರು. ಶಾಲೆಯ ಅಧ್ಯಾಪಕರು “ನಿನ್ನ ಹೆಸರೇನು ಮಗು?” ಎಂದಾಗ, ಗೆಲುವಿನಿಂದ “ಶಾಂತಿಸ್ವರೂಪ” ಎಂದ. ಅಧ್ಯಾಪಕರು ಅವನ ಉತ್ತರದಿಂದ ಸಂತೋಷಗೊಂಡು, “ನಿನ್ನ ತಂದೆಯ ಹೆಸರೇನು ಮಗು?” ಎಂದಾಗ ಹುಡುಗನಿಗೆ ಉತ್ತರಿಸಲು ಬರಲಿಲ್ಲ. ಏನೂ ಮಾಡಲೂ ತಿಳಿಯದೆ ತಾತನ ಕಡೆ ಬೆರಳುಮಾಡಿ ತೋರಿಸುತ್ತಾ ಜೋರಾಗಿ ಅಳುವುದಕ್ಕೆ ಪ್ರಾರಂಭಿಸಿದ. ಮುಗ್ಧ ಮನಸ್ಸಿನ ಆ ಪುಟ್ಟ ಹುಡುಗನಿಗೆ ಸಮಾಧಾನಪಡಿಸಬೇಕಾದ ತಾತನಿಗೂ ಅಧ್ಯಾಪಕರಿಗೂ ಸಾಕು ಸಾಕಾಗಿ ಹೋಯಿತು.

ಹೀಗೆ ಸುಮಾರು ೧೯೦೦ರಲ್ಲಿ ಶಾಂತಿಸ್ವರೂಪ ಶಾಲೆಗೆ ಸೇರಿದ; ಕೇವಲ ಮೂರು ದಶಕಗಳಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದ.

ಬಾಲ್ಯದ ವರ್ಷಗಳು

ಪರಮೇಶ್ವರಿ ಸಹಾಯ್ ಎಂಬುವರು ಶಾಂತಿ ಸ್ವರೂಪರ ತಂದೆ. ಒಂದು ಶಾಲೆಯ ಅಧ್ಯಾಪಕರಾಗಿದ್ದರು. ಸ್ವತಂತ್ರ ದೃಷ್ಟಿಯುಳ್ಳ ನಿರ್ಭೀತ ಅಧ್ಯಾಪಕರಾಗಿದ್ದುದರಿಂದ ಬಹುಜನರ ಮೆಚ್ಚುಗೆಯನ್ನು ಗಳಿಸಿದ್ದರು. ಸಂಘಟನಾ ಸಾಮರ್ಥ್ಯ ಇವರಲ್ಲಿ ಇತ್ತು. ಪಾರ್ವತಿದೇವಿ ಶಾಂತಿಸ್ವರೂಪರ ತಾಯಿ. ಆಕೆ ಕಾವ್ಯ ಪ್ರಿಯರಾದ, ಶಿಲ್ಪ ವಿಜ್ಞಾನದಲ್ಲಿ ಅತೀವ ಆಸಕ್ತಿಯನ್ನು ತಳೆದಿದ್ದ ಮುನ್ಶಿ ಪ್ಯಾರೇಲಾಲರ ಹಿರಿಯ ಮಗಳು; ಪ್ಯಾರೇಲಾಲರೇ ಅಚ್ಚುಮೆಚ್ಚಿನ ತಾತ. ಈಗ ಪಾಕೀಸ್ತಾನಕ್ಕೆ ಸೇರಿರುವ ಶಾಹಪುರ ಜಿಲ್ಲೆಗೆ ಸೇರಿದ ಒಂದು ಸಣ್ಣ ಊರು ಭೇಡ ಎಂಬಲ್ಲಿ ೧೮೯೪ ಫೆಬ್ರವರಿ ೨೧ರಂದು ಶಾಂತಿಸ್ವರೂಪರು ಜನಿಸಿದರು. (ಇದೇ ಸ್ಥಳದಲ್ಲಿ ಕೇವಲ ಮೂರು ವರ್ಷಗಳ ಮುಂಚೆ ವಿಶ್ವವಿಖ್ಯಾತ ಸಸ್ಯ ವಿಜ್ಞಾನಿ ಬೀರಬಲ್ ಸಹಾನಿ ಜನಿಸಿದ್ದರು). ತಂದೆಯ ಕಡೆಯಿಂದ ನಿರ್ಭೀತ, ಸ್ವತಂತ್ರ ಮನೋಭಾವ ಹಾಗೂ ತಾಯಿಯ ಕಡೆಯಿಂದ ಕಾವ್ಯಾಸಕ್ತಿ ಮತ್ತು ವಿಜ್ಞಾನದ ಬಗ್ಗೆ ಸದಭಿರುಚಿ ಶಾಂತಿಸ್ವರೂಪರಿಗೆ ಅನುವಂಶಿಕವಾಗಿ ಬಂದವೆನ್ನಬಹುದು.ಇನ್ನೂ ಎಳೆಯ ಹುಡುಗನಾಗಿದ್ದಾಗಲೇ ತಾತನ ಮನೆಯಲ್ಲಿ ಆಗಾಗ್ಗೆ ನಡೆಯುತ್ತಿದ್ದ ಕವಿಗೋಷ್ಠಿಯಲ್ಲಿ ಆತನಿಗೆ ಸಹಜ ಆಸಕ್ತಿ; ಅದೇ ಕಾಲದಲ್ಲಿ ಹಲವಾರು ಸಣ್ಣಪುಟ್ಟ ಯಂತ್ರಗಳನ್ನು ಕೈಗೆ ಸಿಕ್ಕಿದ ಬಿಡಿವಸ್ತುಗಳನ್ನು ಸೇರಿಸಿ ತಯಾರಿಸಿದ್ದನಂತೆ! ಎಳೆಯ ವಯಸ್ಸಿನಲ್ಲಿಯೇ ಕಂಡು ಬರುತ್ತಿದ್ದ ಈ ಪ್ರತಿಭೆಯನ್ನು ಗಮನಿಸಿದಾಗ ತಾಯಿಗೂ, ತಾತನಿಗೂ ಆಗುತ್ತಿದ್ದ ಸಂತೋಷ ಅಷ್ಟಿಷ್ಟಲ್ಲ.

ಶಾಂತಿಸ್ವರೂಪ ಒಂಬತ್ತು ತಿಂಗಳ ಮಗುವಾಗಿದ್ದಾಗಲೇ ತಂದೆ ತೀರಿಕೊಂಡರು. ಅವನ ತಾಯಿ ತೌರುಮನೆಯಾದ ಸಿಕಂದರಾಬಾದಿಗೆ ಬಂದು ತನ್ನ ತಂದೆಯೊಡನೆ ಇರಲಾರಂಭಿಸಿದಳು. ಆಗ ಆಕೆಗೆ ಕೇವಲ ೨೧ ವರ್ಷ ಪ್ರಾಯ. ಅವರಿಗೆ ಯೋಚನೆಯಾಗದಂತೆ, ಬೇಸರವಾಗದಂತೆ ಆಕೆಯ ತಂದೆ ಮುನ್ಶಿ ಪ್ಯಾರೇಲಾಲರು ನೋಡಿಕೊಳ್ಳುತ್ತಿದ್ದರು.

ಒಂದು ರೀತಿಯಲ್ಲಿ ಶಾಂತಿಸ್ವರೂಪನಿಗೆ ಪ್ರೀತಿ ವಾತ್ಸಲ್ಯವೆಲ್ಲ ತನ್ನ ತಾತನಿಂದಲೇ ದೊರೆಯಿತು ಎಂದು ಹೇಳಬಹುದು. ತಾತನಿಗೆ ಮೊಮ್ಮಗನಲ್ಲಿ ತುಂಬ ಪ್ರೀತಿ. ಆದರೆ ಅವರು ಹುಡುಗನಿಗೆ ವಿಧಿಸುತ್ತಿದ್ದ ನಿಯಮಗಳೂ ಹೆಚ್ಚು. ಇದರಿಂದ ಅವನಿಗೆ ಬಹುಮಟ್ಟಿಗೆ ಬೇಸರದೊಂದಿಗೆ ಅಳುವೂ ಬರುತ್ತಿತ್ತು. ತನ್ನ ಬೇಸರವನ್ನು ತಾಯಿಯ ಹತ್ತಿರ ಹೇಳಿದರೆ, “ನಿನ್ನ ತಾತನಿಗೆ ಹೋಗಿ ಹೇಳು” ಎನ್ನುತ್ತಿದ್ದಳು. ತಾತನ ಬಳಿ ಹೋಗಿ ಕೇಳಲು ಏನೋ ಒಂದು ಬಗೆಯ ಹೆದರಿಕೆ. ಕೆಲವು ವರ್ಷಗಳ ಕಳೆದಂತೆ ಶಾಂತಿಸ್ವರೂಪನಿಗೆ ತಾತನೊಂದಿಗೆ ಸಲಿಗೆ ಮೂಡಿತು. ತನ್ನ ಬೇಸರದ ಕಾರಣವನ್ನು ತಾತನಲ್ಲಿ ಹೇಳಿಕೊಂಡ (ಬೇಸರದ ಕಾರಣವಿಷ್ಟೆ: ತಾತ ಯಾರೊಂದಿಗೂ ಆಟವಾಡಲು ಬಿಡುತ್ತಿರಲಿಲ್ಲ. ತನ್ನ ಇಷ್ಟ ಬಂದಂತೆ ಎಲ್ಲ ಹುಡುಗರೊಂದಿಗೆ ಬೆರೆಯಲು ಅವಕಾಶ ಇರಲಿಲ್ಲ!) ಕಾರಣವನ್ನು ಅರಿತ ತಾತ ನಕ್ಕು, ನಿರ್ಬಂಧವನ್ನು ಸಡಿಲಗೊಳಿಸಿ, ಬೇರೆಯವರೊಂದಿಗೆ ಬೆರೆಯಲು ಅವಕಾಶವಿತ್ತರು.

ರಘುನಾಥ ಸಹಾಯ್

“ಬೆಳೆಯುವ ಗಿಡ ಮೊಳಕೆಯಲ್ಲಿ ನೋಡು” ಎಂಬ ಗಾದೆಯಂತೆ ಶಾಂತಿಸ್ವರೂಪನಲ್ಲಿದ್ದ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿದ ಮತ್ತೊಬ್ಬ ವ್ಯಕ್ತಿ ಹುಡುಗನ ತಂದೆಯ ಆಪ್ತಸ್ನೇಹಿತರಾದ ರಘುನಾಥ ಸಹಾಯ್, ಸುಮಾರು ಎಂಟು ವರ್ಷದವರೆಗೆ ಶಾಂತಿಸ್ವರೂಪ ತಾತನ ಆರೈಕೆಯಲ್ಲಿ ಬೆಳೆದ. ಬುದ್ಧಿ ಅರಳಿದ ಹಾಗೆ ಹೆಚ್ಚು ಸ್ವತಂತ್ರ ಆಲೋಚನೆಗಳು ಹೊಳೆಯಲಾರಂಭವಾದವು. ಈ ದಿಸೆಯಲ್ಲಿ ತಂದೆಯ ಸ್ನೇಹಿತ ರಘುನಾಥರ ನೆರವು. ನಿರ್ದೇಶನ, ಬುದ್ಧಿವಾದ ಅವನಿಗೆ ಬಹಳವಾಗಿ ಸಿಕ್ಕುತ್ತಿದ್ದವು. ರಘುನಾಥ ಸಹಾಯ್ ಅವರು ಲಾಹೋರಿನಲ್ಲಿದ್ದ ದಯಾಲ್‌ಸಿಂಗ್ ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯರಾಗಿದ್ದರು. ಸ್ವತಃ ಅಧ್ಯಾಪಕರಾಗಿದ್ದ ಅವರಿಗೆ ಶಾಂತಿಸ್ವರೂಪನಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸರಿಯಾದ ಅವಕಾಶವನ್ನು ಕಲ್ಪಿಸಿಕೊಡಲು ಕಷ್ಟವಾಗಲಿಲ್ಲ. ಮೇಲಾಗಿ ತನ್ನ ಪ್ರಿಯ ಮಿತ್ರನ ಮಗನಾಗಿದ್ದುದರಿಂದ, ಶಾಂತಿಸ್ವರೂಪನ ಏಳಿಗೆಯಲ್ಲಿ ಅವರು ವಿಶೇಷ ಆಸಕ್ತಿಯನ್ನು ವಹಿಸಿದ್ದರು. ಶಾಂತಿಸ್ವರೂಪನ ಆರಂಭಿಕ ಓದು ಮುಗಿಯಿತು. ರಘುನಾಥ ಸಹಾಯ್ ಅವರು ತಾವಿದ್ದ ಶಾಲೆಯಲ್ಲಿಯೇ ಶಾಂತಿಸ್ವರೂಪ ವ್ಯಾಸಂಗವನ್ನು ಮುಂದುವರಿಸಲು ಸೇರಿಕೊಂಡರು.

ಬಂಗಾಳದಲ್ಲಿ ರಾಜಾ ರಾಮಮೋಹನರಾಯ್ “ಬ್ರಹ್ಮ ಸಮಾಜ” ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದರ ಸದಸ್ಯರು ಯಾವುದನ್ನೂ ಯೋಚಿಸದೆ ಒಪ್ಪಬಾರದು, ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂಬುದು ರಾಮಮೋಹನರ ಆಶಯವಾಗಿತ್ತು. ರಘುನಾಥ ಸಹಾಯ್ ಬ್ರಹ್ಮ ಸಮಾಜಕ್ಕೆ ಸೇರಿದವರು. ಹುಡುಗ ಶಾಂತಿಸ್ವರೂಪನಿಗೂ ತಾನೇ ಸ್ವತಂತ್ರವಾಗಿ ಯೋಚನೆ ಮಾಡಲು ಪ್ರೋತ್ಸಾಹ ಕೊಟ್ಟರು. ಸಮಾಜಸೇವೆ ಮಾಡಬೇಕು ಎಂಬ ಆದರ್ಶವನ್ನು ಅವನ ಮುಂದಿಟ್ಟರು.

ಮೌಲ್ವಿ ತಾಲಿಬ ಅಲಿಪಾಬಂದ್ ಎಂಬುವರು ಈ ಹುಡುಗನಿಗೆ ಮೊಟ್ಟ ಮೊದಲನೆಯ ಬಾರಿ ವಿಜ್ಞಾನವನ್ನು ಹೇಳಿಕೊಟ್ಟ ಅಧ್ಯಾಪಕರು. ಶಾಲೆಯಲ್ಲಿ ವಿದ್ಯುತ್‌ಶಕ್ತಿಯ ಮೂಲ ಸಿದ್ಧಾಂತಗಳನ್ನು ಕಲಿತುಕೊಂಡ ನಂತರ ತಾನೇ ಸ್ವತಃ ಸಣ್ಣ ಸಣ್ಣ ಬ್ಯಾಟರಿಗಳನ್ನು ಮತ್ತು ಸಣ್ಣ ಪ್ರಮಾಣದಲ್ಲಿ ಕರೆಗಂಟೆ ಇತ್ಯಾದಿಗಳನ್ನು ತಯಾರಿಸುತ್ತಿದ್ದನಂತೆ! ಪ್ರಯೋಗಗಳಲ್ಲಿ ಇಷ್ಟೊಂದು ಆಸಕ್ತಿ-ಹುಡುಗ ಶಾಂತಿಸ್ವರೂಪನಿಗೆ. ತನ್ನ ಶಾಲಾಜೀವನ ಅಂದರೆ ಹೈಸ್ಕೂಲು ಮಟ್ಟದ ವ್ಯಾಸಂಗ ಮುಗಿಸುವ ಹೊತ್ತಿಗೆ ಅಲಹಾಬಾದಿನಿಂದ ಪ್ರಕಟವಾಗುತ್ತಿದ್ದ “ಲೀಡರ್” ಎಂಬ ಪತ್ರಿಕೆಯಲ್ಲಿ ಒಂದು ವೈಜ್ಞಾನಿಕ ಲೇಖನವನ್ನು ಬರೆದ. ಆ ಲೇಖನದಲ್ಲಿ ಸಾಧಾರಣವಾಗಿ ಉಪಯೋಗಿಸುವ ಬ್ಯಾಟರಿಗಳಲ್ಲಿ ಕಾರ್ಬನ್ ಜನಿತವಾದ “ಎಲೆಕ್ಟ್ರೋಡ್‌”ಗಳ ಬದಲು ಒತ್ತಡ ಹಾಗೂ ಶಾಖದ ಆವರಣದಲ್ಲಿ ಕಾರ್ಬನ್ ವಸ್ತು (ಇದ್ದಲು) ಹಾಗೂ ಕಾಕಂಬಿಯನ್ನು ಉಪಯೋಗಿಸಬಹುದು ಎಂದು ಸೂಚಿಸಿದ್ದನು. (೧೯೪೨ರಲ್ಲಿ, ಅಂದರೆ ಈ ಬಗೆಯ ಸೂಚನೆ ನೀಡಿದ ಸುಮಾರು ಮೂವತ್ತು ವರ್ಷಗಳ ಅನಂತರ, ಪ್ರಯೋಗ ಶಾಲೆಯಲ್ಲಿ ಇಂತಹುದೇ ಬ್ಯಾಟರಿಯನ್ನು ಶಾಂತಿಸ್ವರೂಪರು ನಿರ್ಮಿಸಿದರು.)

ಶಾಂತಿಸ್ವರೂಪ ಪ್ರತಿಭಾವಂತ ವಿದ್ಯಾರ್ಥಿ. ಅಧ್ಯಾಪಕರು ಪಾಠ ಮಾಡುತ್ತಿದ್ದಾಗ ಅನೇಕ ಸಂದೇಹಗಳು, ಯೋಚನೆಗಳು ತಲೆಯಲ್ಲಿ ಸುಳಿಯುತ್ತಿದ್ದವು. ಆದುದರಿಂದ ಯೋಚನೆಗಳು ತಲೆಯಲ್ಲಿ ಸುಳಿಯುತ್ತಿದ್ದವು. ಆದುದರಿಂದ ಹುಡುಗ ಪ್ರಶ್ನೆಗಳನ್ನು ಕೇಳುತ್ತಿದ್ದ. ಅವರ ಉತ್ತರಗಳನ್ನು ಸುಲಭವಾಗಿ ಒಪ್ಪುತ್ತಿರಲಿಲ್ಲ. ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದ, ಚರ್ಚೆ ಮಾಡುತ್ತಿದ್ದ. ಇದೆಲ್ಲ ಕೆಲವರು ಅಧ್ಯಾಪಕರಿಗೆ ಬೇಕಿರಲಿಲ್ಲ. ಅಸಮಾಧಾನವಾಗುತ್ತಿತ್ತು. ಆಗಾಗ್ಗೆ ಇವರ ಬಗ್ಗೆ ಎಷ್ಟೋ ದೂರುಗಳು ಶಾಲೆಯ ಮುಖ್ಯ ಅಧ್ಯಾಪಕರಾಗಿದ್ದ ರಘುನಾಥ ಸಹಾಯ್ ಅವರಿಗೆ ಬರುತ್ತಿದ್ದವು. ಶಾಂತಿಸ್ವರೂಪನ ಬುದ್ಧಿ ಶಕ್ತಿ ಅವರಿಗೆ ಚೆನ್ನಾಗಿ ತಿಳಿದಿತ್ತು. ಅವರು ಈ ಬಗೆಯ ದೂರುಗಳಿಗೆ ಕಿವಿಗೊಡದೆ ಆತನಲ್ಲಿ ಇದ್ದ ವಿಚಾರ ಶಕ್ತಿಯ ಬೆಳವಣಿಗೆಗೆ ಪ್ರೋತ್ಸಾಹ ಕೊಡುತ್ತಿದ್ದರು.

ಒಳ್ಳೆಯ ಪಾಠಪ್ರವಚನ, ಅನುಭವಿ ಅಧ್ಯಾಪಕರ ನಿರ್ದೇಶನ ಎರಡೂ ಸೇರಿ ಹುಡುಗನ ಪ್ರತಿಭೆಗೆ ಕಳಶವಿಟ್ಟಂತೆ ಆಯಿತು; ಶಾಂತಿಸ್ವರೂಪ ಎನ್‌ಟ್ರೆನ್ಸ್ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣನಾದ. ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬನಾದ ಈತನಿಗೆ ಲಾಹೋರಿನ ದಯಾಲ್‌ಸಿಂಗ್ ಕಾಲೇಜಿನಲ್ಲಿ ಪ್ರವೇಶ ಸುಲಭವಾಗಿ ದೊರೆಯಿತು. ೧೯೦೮ರಲ್ಲಿ ಶಾಂತಿಸ್ವರೂಪ ಲಾಹೋರಿಗೆ ಬಂದ.

ಇನ್ನೂ ಹದಿನಾಲ್ಕುವರ್ಷದ ಹುಡುಗ, ಪರೀಕ್ಷೆಯಲ್ಲಿ ಮೊದಲನೆಯ ತರಗತಿ ಪಡೆದು ವಿದ್ಯಾರ್ಥಿವೇತನವನ್ನೂ ಪಡೆದವನು; ಆದುದರಿಂದ ಓದು ತೊಂದರೆ ಇಲ್ಲದೆ ಮುಂದುವರಿಯಿತು. ಲಾಹೋರಿಗೆ ಬಂದನಂತರ ಬ್ರಹ್ಮಸಮಾಜದ ಇಬ್ಬರು ಸದಸ್ಯರ ಪ್ರಭಾವ ಹುಡುಗನ ಮೇಲಾಯಿತು. ಪಂಡಿತ ಶಿವನಾಥಶಾಸ್ತ್ರಿ ಮತ್ತು ಬಾಬು ಅವಿನಾಶಚಂದ್ರ ಮಜುಂದಾರ್ ಎಂಬ ಈ ಇಬ್ಬರೂ ಬ್ರಹ್ಮಸಮಾಜದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವರು. ಇವರ ಪ್ರಭಾವದಿಂದ ಶಾಂತಿಸ್ವರೂಪನಿಗೆ ತನ್ನ ಬುದ್ಧಿಶಕ್ತಿಯಲ್ಲಿ ಹೆಚ್ಚು ನಂಬಿಕೆ ಬಂದಿತು; ಜೊತೆಗೆ ಸಮಾಜಸೇವೆ ಮಾಡಬೇಕೆಂಬ ಆದರ್ಶ ಗಟ್ಟಿಯಾಯಿತು.

ಕಾಲೇಜಿನಲ್ಲಿ

ಕಾಲೇಜಿನಲ್ಲಿ ವಿಜ್ಞಾನ ಪ್ರಾಧ್ಯಾಪಕರಾಗಿದ್ದ ರುಚಿ ರಾಂ ಸುಹಾನಿ ಹಾಗೂ ಡಾಕ್ಟರ್ ಜಗದೀಶಚಂದ್ರಬೋಸ್ ಅವರ ಪ್ರಭಾವಕ್ಕೆ ಹುಡುಗ ಒಳಗಾದ. ಇದರಿಂದ ವಿಜ್ಞಾನ ಅಭ್ಯಾಸದ ಕಡೆ ಹೆಚ್ಚು ಗಮನಹರಿಯಿತು. ಈ ಅಧ್ಯಾಪಕರ ಸಂಪರ್ಕದಿಂದ ಯಾವುದೇ ವಿಷಯದ ಬಗ್ಗೆ ಗಹನವಾಗಿ ಚಿಂತಿಸುವುದು ಅಭ್ಯಾಸ ಮಾಡಿಕೊಂಡ. ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳುವಾಗಲೇ ಲಲಿತ ಕಲೆಗಳ ಬಗ್ಗೆ ಇದ್ದ ಆಸಕ್ತಿಯನ್ನೂ ಬೆಳೆಸಿಕೊಂಡ. ಅಲ್ಲದೆ ಹಲವು ವಿದ್ಯಾರ್ಥಿಗಳನ್ನು ಸಂಘಟಿಸಿ ಸಮಾಜ ಸೇವೆ ಮಾಡುವುದರಲ್ಲಿ ಯಶಸ್ವಿಯಾದ. ತಾನು ವಿದ್ಯಾರ್ಥಿಯಾಗಿದ್ದಾಗ ದಯಾಲ್‌ಸಿಂಗ್ ಕಾಲೇಜಿನಲ್ಲಿ ನಾಟಕ ಬರವಣಿಗೆ ಸ್ಪರ್ಧೆ ನಡೆಸಿದಾಗ ಶಾಂತಿಸ್ವರೂಪ ಸ್ವತಃ ಕ್ರಾಂತಿಕಾರಕ ವಿಷಯವುಳ್ಳ, ವ್ಯಂಗ್ಯ ತುಂಬಿದ “ಕರಾಮತ್” ಎಂಬ ನಾಟಕವನ್ನು ಆಡಿಸಿಯೂ ಇದ್ದ. ಹುಡುಗ ಸ್ವತಃ ಒಳ್ಳೆಯ ನಟ. ಈತ ತನ್ನ ನಟನೆಯಲ್ಲಿ ಹಲವಾರು ಅಧ್ಯಾಪಕರನ್ನು ಅನುಕರಣೆ ಮಾಡುತ್ತಾನೆ ಎಂಬ ದೂರು ಬಂದಿತ್ತು. ಇದರಿಂದ ಕಾಲೇಜಿನಲ್ಲಿ ಆತನಿಗೆ ಸ್ವಲ್ಪ ಮಟ್ಟಿಗೆ ಬೇಸರವುಂಟಾಗಿತ್ತು.

ವಿಜ್ಞಾನದ ಬಗ್ಗೆ ಸಹಜವಾದ ಆಸಕ್ತಿ ಬೆಳೆಯುತ್ತಿದ್ದಂತೆ ಶಾಂತಿಸ್ವರೂಪನಿಗೆ ಸ್ವತಂತ್ರವಾಗಿ ಯೋಚಿಸುವ ಶಕ್ತಿ ಮತ್ತು ಅಭ್ಯಾಸಗಳೂ ಬೆಳೆದವು. ಕ್ರಮೇಣ ತಾನಿರುವ ಕಾಲೇಜು ತೀರ ಸಂಪ್ರದಾಯಿಕ ಎನ್ನಿಸಿತು. ಬೇಸರಗೊಂಡು ದಯಾಲ್‌ಸಿಂಗ್ ಕಾಲೇಜನ್ನು ಬಿಟ್ಟು ಫೋರ‍್ಮನ್ ಕಾಲೇಜನ್ನು ಸೇರಿದ.

ಈ ಕಾಲೇಜಿನಲ್ಲಿ ಇಬ್ಬರು ಪ್ರಾಧ್ಯಾಪಕರು-ಕಾರ‍್ಟರ್ ಸ್ಪೀಯರ‍್ಸ್ ಮತ್ತು ಬೆನಾಡೇ. ಇವರು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಯಬೇಕು ಎಂಬ ಆಸೆಯನ್ನು ಬೆಳೆಸುತ್ತಿದ್ದರು. ಬೆನಾಡೇ ಅವರ ಸಂಪರ್ಕ ಶಾಂತಿಸ್ವರೂಪನಿಗೆ ಕ್ರಮೇಣ ಒದಗಿತು. ತರಗತಿಯಲ್ಲಿ ಅಭ್ಯಾಸ ಮಾಡಬೇಕು ಎಂದು ನಿಯಮಿಸಿರುವಷ್ಟನ್ನೆ ಅಲ್ಲದೆ, ಅದರಾಚೆಯ ವಿಷಯಗಳನ್ನೂ ಓದಬೇಕು ಎಂಬ ಕುತೂಹಲ ಶಾಂತಿಸ್ವರೂಪನಲ್ಲಿ ಬೆಳೆಯಿತು. ಜೊತೆಗೆ ಹೊಸ ಹೊಸ ವಿಷಯಗಳನ್ನು ಹೇಳಿಕೊಡುವ ಪ್ರಾಧ್ಯಾಪಕರೂ ಸಿಕ್ಕರು. ಅಲ್ಲದೆ ವಿಜ್ಞಾನದ ಅಭ್ಯಾಸ ಯಾವ ರೀತಿ ಮಾಡಬೇಕು ಎನ್ನುವುದರ ಅರಿವೂ ಬರಲು ಸಾಧ್ಯವಾಯಿತು. ಬಿ.ಎಸ್‌.ಸಿಯಲ್ಲಿ ತೇರ್ಗಡೆ ಆಗುವುದಕ್ಕೆ ಮುಂಚೆಯೇ ಒಂದು ಕೈಗಾರಿಕ ಸಮಸ್ಯೆಯನ್ನು ಬಗೆಹರಿಸಿ ಸುಮಾರು ಐವತ್ತು ರೂಪಾಯಿ ಗಳಿಸಿದ.

ಶಾಂತಿಸ್ವರೂಪ ಇನ್ನೂ ವಿದ್ಯಾರ್ಥಿ ತಾನೆ; ಕಾಲೇಜಿನಲ್ಲಿ ನಿಯಮಿಸಿದಂತೆ ವಿಷಯಗಳನ್ನು ಅಧ್ಯಯನ ಮಾಡಬೇಕಾಗಿತ್ತು. ಆತ ಹಾಗೆ ಮಾಡದೆ ಇದ್ದುದರಿಂದ ಅಭ್ಯಾಸ ಮಾಡಬೇಕಿದ್ದ ವಿಷಯಗಳಲ್ಲಿ ಹಿಂದೆ ಬೀಳಲಾರಂಭಿಸಿದ. ಇಷ್ಟಾದರೂ ಆತನ ವಿಜ್ಞಾನದ ಆಸಕ್ತಿಗೇನೂ ಯಾವ ರೀತಿಯಲ್ಲೂ ಭಂಗ ಬಂದಿರಲಿಲ್ಲ.

ರಸಾಯನ ಶಾಸ್ತ್ರದಲ್ಲಿಯೇ ಅಂಕಗಳು ಸಾಲದು!

ಭಾಟ್ನಗರ್ ಬಿ.ಎಸ್‌.ಸಿ. ಪರೀಕ್ಷೆಗೆ ಕುಳಿತಾಗ ಒಂದು ಸ್ವಾರಸ್ಯವಾದ ಸಂಗತಿ ನಡೆಯಿತು.

ಮುಂದೆ ಭಾಟ್ನಗರ್ ರಸಾಯನ ಶಾಸ್ತ್ರದಲ್ಲಿ ಸಂಶೋಧನೆ ಮಾಡಿ ಭಾರತದಾಚೆಯೂ ಕೀರ್ತಿ ಪಡೆದರು.

ಬಿ.ಎಸ್‌.ಸಿ. ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗದೇ ಹೋದದ್ದು ರಸಾಯನ ಶಾಸ್ತ್ರದಲ್ಲಿಯೇ!

ಆಶ್ಚರ್ಯ ಅಲ್ಲವೇ? ಹೀಗೇಕಾಯಿತು?

ಅವರು ಉತ್ತೀರ್ಣರಾಗದೆ ಹೋದುದಕ್ಕೆ ಕಾರಣ ಇಷ್ಟೆ: ಅವರು ಪರೀಕ್ಷೆಯಲ್ಲಿ ಉತ್ತರವನ್ನು ಕೇವಲ ಪರೀಕ್ಷೆಯ ದೃಷ್ಟಿಯಿಂದ, ತರಗತಿಯಲ್ಲಿ ಹೇಳಿದುದಷ್ಟನ್ನೇ ಬರೆದಿದ್ದರೆ ಒಳ್ಳೆಯದಾಗಿತ್ತು. ವಿಜ್ಞಾನದ ಬಗ್ಗೆ ಹೊಸದಾಗಿ ನಡೆಯುತ್ತಿದ್ದ ಸಂಶೋಧನೆಗಳ ಪರಿಚಯವನ್ನೆಲ್ಲಾ ಇಟ್ಟುಕೊಂಡಿದ್ದ ಅವರು ಉತ್ತರ ಪತ್ರಿಕೆಯಲ್ಲೂ ಆ ವಿಷಯವನ್ನೆಲ್ಲಾ ಬರೆದುಹಾಕಿದ್ದರು. ಆಗಿನ ಕಾಲಕ್ಕೆ ರಸಾಯನ ಶಾಸ್ತ್ರದ ಪಠ್ಯಪುಸ್ತಕವೆನಿಸಿದ್ದ ಮಿಲ್ಲರ್ ಅವರ “ಇನ್‌ಆರ್ ಗ್ಯಾನಿಕ್ ಕೆಮಿಸ್ಟ್ರಿ”ಯಲ್ಲಿ ಕ್ಷ-ಕಿರಣಗಳು ಪ್ರತಿಬಿಂಬಿಸುವುದಿಲ್ಲ ಎಂದಿತ್ತು. ಶಾಂತಿಸ್ವರೂಪರು ರಸಾಯನ ಶಾಸ್ತ್ರದಲ್ಲಿ ಕಂಡುಹಿಡಿದಿದ್ದ ಹೊಸ ವಿಷಯಗಳನ್ನು ತಿಳಿದುಕೊಂಡಿದ್ದರು. ಪ್ರತಿಬಿಂಬಿಸುವುದಲ್ಲದೆ ವಕ್ರೀಭವನ ಆಗುವ ಗುಣವನ್ನೂ ಸಾಧಾರಣ ಕಿರಣಗಳಂತೆ, ಕ್ಷ-ಕಿರಣಗಳಲ್ಲೂ ಕಾಣಬಹುದು ಎಂದು ಬರೆದಿದ್ದರು. ಈ ಉತ್ತರದಿಂದ ಅವರು ಅನುತ್ತೀರ್ಣರಾಗಬೇಕಾಯಿತು!

ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಹೋದ ಮೇಲೆ ಭಾಟ್ನಗರ್ ತಮ್ಮ ಸ್ವತಂತ್ರ ವಿಚಾರವನ್ನು ಕೊಂಚ ಮಟ್ಟಿಗೆ ತಡೆದರು; ತಮ್ಮ ಜವಾಬ್ದಾರಿಯನ್ನು ಅರಿತು ಓದಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದರು.

ಮದುವೆ-ನೌಕರಿ

೧೯೧೫ರ ಮೇ ೩೧ರಂದು ಶಾಂತಿಸ್ವರೂಪರ ಮದುವೆಯಾಯಿತು. ರಘುನಾಥ ಸಹಾಯ್ ಎಂಬುವರು, ಇವರ ತಂದೆಯ ಸ್ನೇಹಿತರು, ಇವರಿಗೆ ಬಹಳ ನೆರವಾಗಿದ್ದರಲ್ಲವೆ? ಅವರ ಹಿರಿಯ ಮಗಳು ಲಾಜವಂತಿಯೇ ಇವರ ಹೆಂಡತಿ.

ಕಾಲೇಜಿನಲ್ಲಿ ಅಧಿಕಾರಿಗಳಿಗೆ ಶಾಂತಿಸ್ವರೂಪರ ಪ್ರತಿಭೆಯ ವಿಷಯ ತಿಳಿದೇ ಇತ್ತಲ್ಲವೆ? ಅವರು ಬಿ.ಎಸ್‌.ಸಿ ಪದವೀಧರರಾದ ನಂತರ ಅದೇ ಕಾಲೇಜಿನಲ್ಲಿ ಡೆಮಾನ್‌ಸ್ಟ್ರೇಟರ್ ಕೆಲಸ ಸಿಕ್ಕಿತು. ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ಎರಡು ವಿಭಾಗಗಳಲ್ಲಿಯೂ ಅವರು ಡೆಮಾನ್‌ಸ್ಟ್ರೇಟರ್ ಆಗಿದ್ದರು. ಡೆಮಾನ್‌ಸ್ಟ್ರೇಟರ್ ಆಗಿದ್ದುಕೊಂಡೇ ಅವರು ಸಂಶೋಧನೆ ಮುಂದುವರಿಸಿದರು. ೧೯೧೯ರಲ್ಲಿ ಸಂಶೋಧನಾ ಲೇಖನವನ್ನು ಒಪ್ಪಿಸಿ ಎಂ.ಎಸ್‌.ಸಿ ಡಿಗ್ರಿಯನ್ನು ಪಡೆದರು.

ವಿದೇಶಕ್ಕೆ

ಒಬ್ಬ ಮನುಷ್ಯನಿಗೆ ಪ್ರತಿಭೆ ಇರಬಹುದು. ಆದರೂ ಅದು ಪ್ರಕಾಶಕ್ಕೆ ಬರಬೇಕಾದರೆ ಸರಿಯಾದ ಅವಕಾಶ ಮತ್ತು ತಕ್ಕ ಶಿಕ್ಷಣ ದೊರೆಯಬೇಕು. ಅವರು ದಯಾಲ್‌ಸಿಂಗ್ ಕಾಲೇಜಿನಲ್ಲಿಯೇ ಓದಿದರಲ್ಲವೆ? ೧೯೧೯ರಲ್ಲಿ ಅವರಿಗೆ ಆ ಕಾಲೇಜಿನ ವಿದ್ಯಾರ್ಥಿವೇತನ ದೊರೆಯಿತು. ಲಂಡನ್ ವಿಶ್ವವಿದ್ಯಾನಿಯಲಕ್ಕೆ ಸೇರಿದ ವಿಲಿಯಂ ರ‍್ಯಾಮ್‌ಸನ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನೆ ನಡೆಸುವ ಅವಕಾಶ ದೊರೆಯಿತು. ೧೯೧೯ರ ಆಗಸ್ಟ್ ನಾಲ್ಕರಂದು ಅವರು ವಿದೇಶಕ್ಕೆ ಹೊರಟರು. ಸಂಶೋಧನೆ ನಡೆಸಬೇಕೆಂಬ ಹಂಬಲ ಅವರಿಗೆ ಬಹಳವಾಗಿತ್ತು. ಆದರೆ ಅವರಿಗೆ ಸರಿಯಾದ ಅವಕಾಶ ಸಿಕ್ಕುವುದು ಕಷ್ಟವಾಯಿತು. ಅವರ ಹಿಂದಿನ ಪ್ರಾಧ್ಯಾಪಕರಾಗಿದ್ದ ಪ್ರೊಫೆಸರ್ ಎಂ.ಬಿ. ಜೋನ್ಸ್ ಅವರನ್ನು ಭೇಟಿ ಮಾಡಿದರು. ಅವರು ಲಂಡನ್ನಿನ ಇಂಪೀರಿಯಲ್ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿದ್ದ ಜೆ.ಸಿ. ಫಿಲಿಪ್ಸ್ ಅವರಿಗೆ ಪರಿಚಯ ಮಾಡಿಸಿದರು. ಶಾಂತಿಸ್ವರೂಪರಿಗೆ ಆರಂಭದಿಂದಲೂ ಒಂದು ಆಸೆ-ಲಂಡನ್ನಿನಲ್ಲಿದ್ದ ಪ್ರೊಫೆಸರ್ ಜಿ. ಡೋನನ್‌ಅವರ

ಭಾಟ್ನಗರರು-ವಿದೇಶಗಳ ವಿಜ್ಞಾನಿಗಳೊಡನೆ.

ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಬೇಕು ಎಂದು. ಆ ಆಸೆಯನ್ನು ಎಂ.ಬಿ.ಜೋನ್ಸ್‌ಅವರಲ್ಲಿ ಕೇಳಿಕೊಂಡರು. ಆದರೆ ಹೆಚ್ಚು ಉಪಯೋಗವೇನೂ ಆಗಲಿಲ್ಲ.

ಸಂಶೋಧನೆಯ ಜಗತ್ತಿನಲ್ಲಿ

ಒಂದು ದಿನ ಶಾಂತಿಸ್ವರೂಪರು ಪ್ರೊಫೆಸರ್ ಡೋನನ್ ಅವರು ಇದ್ದ ವಿಜ್ಞಾನ ಪ್ರಯೋಗಾಲಯಕ್ಕೆ ಹೋದರು; ತಮ್ಮನ್ನು ತಾವೇ ಪರಿಚಯ ಮಾಡಿಕೊಂಡರು. “ನಿಮ್ಮ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಬೇಕೆಂಬ ಆಸೆ ಇದೆ” ಎಂದು ಹೇಳಿದರು. ತಮ್ಮ ಕೈಕೆಳಗೆ ಕೆಲಸ ಮಾಡಬೇಕೆಂಬ ಅಭಿಲಾಷೆಯಿಂದ ನೇರವಾಗಿ ಬಂದ ಯುವಕನನ್ನು ಕಂಡು ಡೋನನ್ ವಿಸ್ಮಿತರಾದರು. ಒಂದು ಸಣ್ಣ ಸಮಸ್ಯೆಯನ್ನು ಬಗೆಹರಿಸಲು ಕೊಟ್ಟರು. ಶಾಂತಿಸ್ವರೂಪರು ತುಂಬಾ ಆಸಕ್ತಿಯಿಂದ ಆ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರು. ತಾವು ಆಗಲೇ ಪ್ರಕಟಿಸಿದ್ದ ವೈಜ್ಞಾನಿಕ ಲೇಖನಗಳನ್ನು ಡೋನನ್ ಅವರಿಗೆ ಕೊಟ್ಟರು. ಡೋನನ್ ಕೂಲಂಕುಷವಾಗಿ ಅವರು ಹಿಂದೆ ನಡೆಸಿದ್ದ ಸಂಶೋಧನೆಗಳನ್ನು ಗಮನಿಸಿದರು. ಯುವಕ ಪ್ರತಿಭಾವಂತ, ಸಂಶೋಧನೆ ಮಾಡಬಲ್ಲ ಎಂದು ಅವರಿಗೆ ನಂಬಿಕೆಯಾಯಿತು. ಶಾಂತಿಸ್ವರೂಪರಿಗೆ ಡಾಕ್ಟರೇಟ್ ಪ್ರಶಸ್ತಿಗಾಗಿ ಸಂಶೋಧನೆ ನಡೆಸಲು ಅವಕಾಶವನ್ನು ಪ್ರೊಫೆಸರ್ ಡೋನನ್ ಕಲ್ಪಿಸಿದರು. ಶಾಂತಿಸ್ವರೂಪರ ಮೆಚ್ಚಿಗೆಯ ವಿಷಯವಾದ “ಕಲಾಯ್ಡ್ ವಿಜ್ಞಾನ”ದ ಬಗ್ಗೆ ಸಂಶೋಧನೆ ನಡೆಸಲು ತಿಳಿಸಿ, ಈ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟರು. ಶಾಂತಿಸ್ವರೂಪರ ಮೊದಲ ಸಂಶೋಧನೆಗಳು ಪಿ.ಎಚ್.ಡಿ. ಪ್ರಶಸ್ತಿಗೆ ಬಹುಮಟ್ಟಿಗೆ ಸಮಾನವಾದುದರಿಂದ ಡಿ.ಎಸ್‌.ಸಿ ಪ್ರಶಸ್ತಿಗಾಗಿ ಸಂಶೋಧನೆ ನಡೆಸಲು ಸೂಚಿಸಿದರು.

ಸಂಶೋಧನಾ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿಯೇ ಶಾಂತಿಸ್ವರೂಪರಿಗೆ ಮತ್ತೊಂದು ರೀತಿಯಲ್ಲಿ ಅದೃಷ್ಟ ಒಲಿಯಿತು. ಸಂಶೋಧನೆ ನಡೆಸುತ್ತಿರುವ ತರುಣ ವಿಜ್ಞಾನಿಗೆ ಬೇರೆ ಬೇರೆ ದೇಶಗಳ ಒಳ್ಳೆಯ ವಿಜ್ಞಾನ ಸಂಶೋಧನಾ ಸಂಸ್ಥೆಗಳಿಗೆ ತಾನೇ ಹೋಗಿ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾದರೆ ಎಷ್ಟು ಅನುಕೂಲ ಅಲ್ಲವೆ? ಜೊತೆಗೆ, ಆ ದೇಶಗಳ ಮುಖ್ಯ ವಿಜ್ಞಾನಿಗಳನ್ನು ಕಂಡು ತನ್ನ ಅಭಿಪ್ರಾಯಗಳನ್ನು ಅವರ ಮುಂದಿಟ್ಟು ವಿಜ್ಞಾನದ ವಿಷಯಗಳನ್ನು ಅವರೊಡನೆ ಚರ್ಚೆ ಮಾಡಲು ಸಾಧ್ಯವಾಗುವುದಾದರೆ? ತಾನೇ ಯಾವುದಾದರೊಂದು ಪ್ರಸಿದ್ಧ, ಶ್ರೇಷ್ಠ ಸಂಶೋಧನಾಲಯವನ್ನು ಆರಿಸಿಕೊಂಡು ಅಲ್ಲಿ ಸಂಶೋಧನೆ ಮಾಡುವಂತಾದರೆ? ಒಂದಕ್ಕಿಂತ ಒಂದು ಅನುಕೂಲವಾದ ಸಂಗತಿ; ಮೂರೂ ಸಾಧ್ಯವಾದರೆ? ಶಾಂತಿಸ್ವರೂಪರಿಗೆ ಇನ್ನೊಂದು ವಿದ್ಯಾರ್ಥಿವೇತನ ದೊರೆಯಿತು. ಇದರಿಂದ ಅನೇಕ ದೇಶಗಳಲ್ಲಿರುವ ಉನ್ನತವಾದ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನಾಲಯಗಳನ್ನು ನೋಡಲು ಅವಕಾಶವಾಯಿತು ಹಾಗೂ ಖ್ಯಾತ ವಿಜ್ಞಾನಿಗಳನ್ನು ಸಂದರ್ಶಿಸಲು ಅವಕಾಶವಾಯಿತು. ಅವರು ಇಷ್ಟಪಟ್ಟ ಸಂಶೋಧನಾಲಯದಲ್ಲಿ ಯಾವುದಾದರೂ ವಿಷಯದ ಬಗ್ಗೆ ಕೆಲವು ಸಮಯದವರೆಗೆ ಸಂಶೋಧನೆಯನ್ನು ನಡೆಸಲೂ ಅವಕಾಶವಿತ್ತು. ಪ್ರತಿಭಾವಂತ ತರುಣ ವಿಜ್ಞಾನಿಗೆ ಇದು ವರವೇ ಎನ್ನುವಂತಾಯಿತು. ಈ ಸದಾವಕಾಶದಲ್ಲಿ ಅವರು ಹಲವಾರು ವಿಜ್ಞಾನಿಗಳನ್ನು ಭೇಟಿ ಮಾಡಿದ್ದರು. ಹಾಗೆ ಭೇಟಿ ಮಾಡಿದ ವಿಜ್ಞಾನಿಗಳ ಪೈಕಿ, ರೇಡಿಯಂ ಕಂಡುಹಿಡಿದು ನೊಬೆಲ್ ಬಹುಮಾನ ಪಡೆದ, ಮದಾಂ ಕ್ಯೂರಿಯವರೂ ಒಬ್ಬರು. ಇದೇ ಪ್ರವಾಸದ ಸಮಯದಲ್ಲಿ ಜರ್ಮನಿಯ ವಿಲ್‌ಹೆಲ್ಮ್ ಇನ್‌ಸ್ಟಿಟ್ಯೂಟ್ ಹಾಗೂ ಪ್ಯಾರಿಸ್‌ನ ಸಾರ್‌ಬನ್‌ವಿಜ್ಞಾನ ಸಂಸ್ಥೆಯಲ್ಲಿ ಶಾಂತಿಸ್ವರೂಪರು ಕೆಲವು ಸಮಯ ಸಂಶೋಧನೆ ನಡೆಸಿದರು.

ಶಾಂತಿಸ್ವರೂಪರು ಡಾಕ್ಟರ್ ಪ್ರಶಸ್ತಿಗಾಗಿ ನಡೆಸಿದ ಸಂಶೋಧನಾ ಫಲಿತಾಂಶ ಕುರಿತು ಒಮ್ಮೆ ಒಂದು ಗೋಷ್ಠಿ ನಡೆಯಿತು.

ಅಲ್ಲಿ ಒಂದು ವಿಶೇಷ ಸಂಗತಿ ನಡೆಯಿತು. ಆ ಗೋಷ್ಠಿಯಲ್ಲಿ ಹಲವಾರು ಪ್ರಾಧ್ಯಾಪಕರಿದ್ದರು. ಶಾಂತಿಸ್ವರೂಪರ ಸಂಶೋಧನೆಯಲ್ಲಿ ಬಹಳ ಆಸಕ್ತಿ ವಹಿಸಿದ್ದ ಡೋನನ್ ಅವರೂ ಅಲ್ಲಿದ್ದರು.

ಶಾಂತಿಸ್ವರೂಪರು ಸಂಶೋಧನೆಯ ವಿಷಯವಾಗಿ ತಾವು ಕಂಡಿದ್ದ ಎಲ್ಲಾ ವಿವರಗಳನ್ನು ಹಂತಹಂತವಾಗಿ ತಿಳಿಸಿದರು. ಅನಂತರ ಪ್ರೊಫೆಸರ್ ಡೋನನ್ ಮಾತನಾಡಲು ಎದ್ದರು. ಅವರು ಮಾಡಿದ್ದು ಶಾಂತಿಸ್ವರೂಪರ ಸಂಶೋಧನೆಯನ್ನು ಕುರಿತು ಬಹಳವಾಗಿ ಟೀಕೆ! ಅಲ್ಲಿ ನೆರೆದಿದ್ದ ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಒಂದು ರೀತಿ ಆಶ್ಚರ್ಯವೇ ಆಯಿತು. “ಇದೇನು, ಡೋನನ್ ಅವರೇ ಶಾಂತಿಸ್ವರೂಪರ ಸಂಶೋಧನೆಯ ಫಲಿತಾಂಶವನ್ನು ಹೀಗೆ ಟೀಕೆ ಮಾಡುತ್ತಿದ್ದಾರೆ!” ಎನ್ನಿಸಿತು. ಶಾಂತಿಸ್ವರೂಪರು ತಮ್ಮ ನಿಲುವು ಸರಿ ಎಂದು ಸಮರ್ಥಿಸಿಕೊಂಡರು. ಡೋನನ್ ಅವರಿಗೆ ತುಂಬಾ ಸಂತೋಷವಾಯಿತು. ಬಂದು ಶಾಂತಿಸ್ವರೂಪರ ಕೈಕುಲುಕಿ ಆಲಂಗಿಸಿಕೊಂಡರು. ಅಧ್ಯಕ್ಷತೆ ವಹಿಸಿದ್ದ ವಿಲಿಯಂ ಬ್ರಾಗ್ ಅವರು ಶಾಂತಿಸ್ವರೂಪರ ಬೆನ್ನನ್ನು ತಟ್ಟಿ ಅವರ ಸಮರ್ಥನೆ ಸೊಗಸಾಗಿತ್ತೆಂದು ಹೇಳಿದರು. ಡಾಕ್ಟರೇಟ್ ಪಡೆಯಲು ಇದಕ್ಕಿಂತ ಹೆಚ್ಚು ಅರ್ಹತೆ ಬೇಕಿಲ್ಲ ಎಂದರು. ೧೯೨೧ರಲ್ಲಿ ಶಾಂತಿಸ್ವರೂಪರಿಗೆ ಲಂಡನ್‌ವಿಶ್ವವಿದ್ಯಾನಿಲಯದ ಡಾಕ್ಟರ್ ಪದವಿ ದೊರೆಯಿತು.

 

‘ಇದೇನು, ಡೋನನ್ ಅವರೇ ಹೀಗೆ ಟೀಕೆಮಾಡುತ್ತಿದ್ದಾರೆ!’

ಕಾಶಿ ಹಿಂದು ವಿಶ್ವವಿದ್ಯಾನಿಲಯದಲ್ಲಿ

ಕಾಶಿ ಹಿಂದು ವಿಶ್ವವಿದ್ಯಾನಿಲಯದಲ್ಲಿ ಪಂಡಿತ ಮದನ ಮೋಹನ ಮಾಳವೀಯರು ಉಪಕುಲಪತಿಗಳು. ಅವರಿಗೆ ಶಾಂತಿಸ್ವರೂಪರು ಪ್ರತಿಭೆಯ ಪರಿಚಯ ಸಾಕಷ್ಟು ಇದ್ದಿತು. ಶಾಂತಿಸ್ವರೂಪರು ಉನ್ನತ ವ್ಯಾಸಂಗವನ್ನು ಮುಗಿಸಿ ಡಾಕ್ಟರ್ ಪದವೀಧರರಾಗಿ ಭಾರತಕ್ಕೆ ಹಿಂತಿರುಗುವ ಮುಂಚೆಯೇ ಮಾಳವೀಯರು ಅವರನ್ನು “ನಮ್ಮ ವಿಶ್ವವಿದ್ಯಾನಿಲಯಕ್ಕೆ ಬಂದು ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸ್ಥಾನವನ್ನು ಸ್ವೀಕರಿಸಿ” ಎಂದು ಕೇಳಿಕೊಂಡರು. ಶಾಂತಿಸ್ವರೂಪರು ಆ ಕರೆಯನ್ನು ಮನ್ನಿಸಿ ಕಾಶಿ ಹಿಂದು ವಿಶ್ವವಿದ್ಯಾನಿಲಯವನ್ನು ಸೇರಿದರು.

ಈ ಪುಸ್ತಕದ ಪ್ರಾರಂಭದಲ್ಲಿ, ಇಪ್ಪತ್ತೆಂಟು ವರ್ಷದ ಯುವಕ ವಿಜ್ಞಾನಿ, ಹೊಸ ಅಧಿಕಾರಕ್ಕೆ ಬಂದಾತ, ತನಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದವರಿಗೆ ತೋರಿಸಿದ ಔದಾರ್ಯದ ಘಟನೆಯ ವಿಷಯ ಓದಿದೆವು, ಅಲ್ಲವೆ?

ಶಾಂತಿಸ್ವರೂಪರು ಕಾಶಿ ಹಿಂದು ವಿಶ್ವವಿದ್ಯಾನಿಲಯಕ್ಕೆ ಬಂದ ಸಂದರ್ಭದಲ್ಲಿ ನಡೆಯಿತು ಈ ಪ್ರಸಂಗ.

ಈ ಘಟನೆಯಿಂದ ಆಗ ತಾನೇ ವಿಶ್ವವಿದ್ಯಾನಿಲಯ ಸೇರಿದ್ದ ಶಾಂತಿಸ್ವರೂಪರ ಖ್ಯಾತಿ ಎಲ್ಲೆಡೆ ಪಸರಿಸಿತು. ಅವರು ಅತ್ಯಂತ ಜನಪ್ರಿಯ ವ್ಯಕ್ತಿಯಾದರು. ವಿದ್ಯಾರ್ಥಿಗಳಿಗಂತೂ ಬಹು ಜನಪ್ರಿಯ ಪ್ರಾಧ್ಯಾಪಕರಾದರು. ಅವರ ಜನಪ್ರಿಯತೆ ಎಷ್ಟರ ಮಟ್ಟಿಗಾಯಿತೆಂದರೆ ಹಿಂದು ವಿಶ್ವವಿದ್ಯಾನಿಲಯವು ಅವರು ಬರೆದ ಒಂದು ಪ್ರಾರ್ಥನಾ ಗೀತೆಯನ್ನು ವಿಶ್ವವಿದ್ಯಾನಿಲಯದ ಮುಖ್ಯ ಗೀತೆಯಾಗಿ ಸ್ವೀಕರಿಸಿತು.

ಕಾಶಿ ವಿಶ್ವವಿದ್ಯಾನಿಲಯವು ಬುದ್ಧಿವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವುದಕ್ಕೆ ಹೆಸರಾಗಿತ್ತು. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡುವ ಆಸೆ ಮತ್ತು ಶಕ್ತಿ ಇದ್ದವು. ಶಾಂತಿಸ್ವರೂಪರು ಇಂತಹ ವಿದ್ಯಾರ್ಥಿಗಳು ಮುಂದೆ ಬರಲು ಸಹಾಯ ಮಾಡಿದರು. ಮಾತಪ್ರಸಾದ್ ಮತ್ತು ಎಸ್‌.ಎಸ್‌.ಜೋಷಿ ಎಂಬ ಇಬ್ಬರು ಇಂತಹ ವಿದ್ಯಾರ್ಥಿಗಳು. ಮುಂದೆ ಇಬ್ಬರ ಕೀರ್ತಿಯೂ ಭಾರತದಾಚೆ ಹಬ್ಬಿತು. ಮಾತಪ್ರಸಾದರು ಮುಂಬಯಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಂಶೋಧನೆ ಮಾಡಿದರು. ಡಾಕ್ಟರ್ ಜೋಷಿಯವರ ಪ್ರಯೋಗ “ಜೋಷಿ ಪ್ರಭಾವ” ಎಂದೆ ಹೆಸರಾಯಿತು.

ಪಂಜಾಬ್ ವಿಶ್ವವಿದ್ಯಾನಿಲಯ

ಶಾಂತಿಸ್ವರೂಪರು ಕಾಶಿ ಹಿಂದು ವಿಶ್ವವಿದ್ಯಾನಿಲಯದಲ್ಲಿ ಸಂತೊಷವಾಗಿದ್ದರು. ಎಲ್ಲಾ ವಿಷಯಗಳಲ್ಲಿ ಅವರಿಗೆ ಅನುಕೂಲಗಳಿದ್ದವು. ಆದರೆ ಮೂಲಭೂತವಾದ ಕೆಲವು ಸಂಶೋಧನೆಗಳನ್ನು ನಡೆಸಲು ಹಲವು ಬಗೆಯ ತಾಂತ್ರಿಕ ತೊಂದರೆಗಳಿದ್ದವು. ಪಂಜಾಬ್ ವಿಶ್ವವಿದ್ಯಾನಿಲಯದವರು ರಸಾಯನ ಶಾಸ್ತ್ರದ ಪ್ರಾಧ್ಯಾಪಕ ಹಾಗೂ ಆ ವಿಭಾಗದ ನಿರ್ದೇಶಕ ಹುದ್ದೆಗಾಗಿ ಶಾಂತಿಸ್ವರೂಪರನ್ನು ನೇಮಕ ಮಾಡಿದರು. ಕಾಶಿ ವಿಶ್ವವಿದ್ಯಾನಿಲಯದ ಉಪಕುಲಪತಿ ಮದನಮೋಹನ ಮಾಳವೀಯ ಅವರಿಗೆ ಶಾಂತಿಸ್ವರೂಪರನ್ನು ಕಳುಹಿಸಲು ಮನಸ್ಸೇ ಇರಲಿಲ್ಲ. ಆದರೂ ಅವರಿಗೂ, ಭಾರತದಲ್ಲಿ ವಿಜ್ಞಾನ ಕ್ಷೇತ್ರಕ್ಕೂ ಒಳ್ಳೆಯದಾಗಲಿ ಎಂದು ಕಳುಹಿಸಿಕೊಟ್ಟರು; ಶಾಂತಿಸ್ವರೂಪರಿಗೆ ಹೆಚ್ಚು ವ್ಯಾಪಕವಾಗಿ ತಮ್ಮ ಸಂಶೋಧನೆ ನಡೆಸಲು ಹಾಗೂ ವಿಚಾರ ಮಾಡಲು ಒಳ್ಳೆಯ ಅವಕಾಶ ದೊರೆಯಲಿ ಎಂದು ಮನಸಾರೆ ಹರಸಿದ್ದರು. ಶಾಂತಿಸ್ವರೂಪರು ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ೧೯೨೪ರಲ್ಲಿ ಬಂದು ಸೇರಿದರು. ಅನಂತರ ಬಹುಮಟ್ಟಿಗೆ ಅವರು ಕಶ್ಮಲ ಹಾಗೂ ಪ್ರಕಾಶ ರಸಾಯನ ಶಾಸ್ತ್ರ (ಕಲಾಯಿಡ್ಸ್ ಮತ್ತು ಫೋಟೋ ಕೆಮಿಸ್ಟ್ರಿ) ವಿಷಯದ ಸಂಶೋಧನೆಯ ಕಡೆ ಗಮನ ಕೊಡಲಾರಂಭಿಸಿದರು. ಎಷ್ಟೋ ಜನರಿಗೆ ಸುಲಭ ಬೆಲೆಗೆ, ಚೆನ್ನಾಗಿ ಕಾಣುವ ಕೃತಕ ಒಡವೆಗಳ ಆಸೆ, ನಾಟಕಗಳಲ್ಲಿ, ಇತರ ಕೆಲವು ಸಂದರ್ಭಗಳನ್ನು ಇವು ಬೇಕಾಗುತ್ತವೆ. ಇಂತಹ ಒಡವೆಗಳನ್ನು ಮಾಡಲು ಬೇಕಾದ ವಸ್ತುಗಳ ಬಗ್ಗೆ ಹೆಚ್ಚು ಸಂಶೋಧನೆ ಪ್ರಾರಂಭಿಸಿದರು.

ಕೈಗಾರಿಕೆಗಳ ನೆರವಿಗೆ ವಿಜ್ಞಾನಿ

ಇದೇ ಹೊತ್ತಿಗೆ ರಾವಲ್ಪಿಂಡಿಯ ಹತ್ತಿರವಿದ್ದ ಅಟಾಕ್ ಆಯಿಲ್ ಕಂಪೆನಿ ಎಂಬ ತೈಲ ಶುದ್ಧೀಕರಣ ಮಾಡುವ ಕಾರ್ಖಾನೆಯಲ್ಲಿ ಒಂದು ಬಗೆಯ ತಾಂತ್ರಿಕ ತೊಂದರೆಯಾಯಿತು. ಅಟಾಕ್‌ನಲ್ಲಿ ಎಣ್ಣೆ ಸೇರಿದೆ ಎಂಬ ಕಡೆ ಬಾವಿಗಳನ್ನು ತೋಡುವಾಗ ಹಲವು ಲವಣಗಳಿರುವಂತಹ ವಸ್ತುಗಳು ತೈಲಾಂಶದೊಡನೆ ಸೇರಿಬಿಡುತ್ತಿದ್ದವು. ಎಣ್ಣೆ ಗಟ್ಟಿಯಾಗಿ ಬಿಡುತ್ತಿತ್ತು. ಸುಲಭವಾಗಿ ಎಣ್ಣೆಯನ್ನು ಪಡೆಯಲು ಆಗುತ್ತಿರಲಿಲ್ಲ. ಆ ಸ್ಥಳದಲ್ಲಿ ಎಣ್ಣೆ ಅಧಿಕ ಪ್ರಮಾಣದಲ್ಲಿ ಸಿಕ್ಕುತ್ತದೆ ಎಂಬುದು ತಿಳಿದಿದ್ದರೂ ತಾಂತ್ರಿಕ ತೊಂದರೆಯಿಂದ ಎಣ್ಣೆಯನ್ನು ತೆಗೆಯುವುದನ್ನು ನಿಲ್ಲಿಸಬೇಕಾಗಿ ಬಂತು. ಒಂದು ಖಾಸಗಿ ಕಂಪೆನಿಯವರು ಶಾಂತಿಸ್ವರೂಪರಿಗೆ ಈ ವಿಷಯದಲ್ಲಿ ಸಂಶೋಧನೆ ನಡೆಸಿ ತಮ್ಮ ಈ ತೊಂದರೆಯನ್ನು ಪರಿಹರಿಸಬೇಕೆಂದು ಕೇಳಿಕೊಂಡರು. ಶಾಂತಿಸ್ವರೂಪರು ಈ ಸಮಸ್ಯೆಯನ್ನು ಸಂಶೋಧನಾ ವಿಷಯವಾಗಿ ತೆಗೆದುಕೊಂಡರು. ತಮ್ಮ ಸಹೋದ್ಯೋಗಿಗಳ ಹಾಗೂ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಅಭ್ಯಾಸ ಮಾಡಲಾರಂಭಿಸಿದರು. ಡಾಕ್ಟರ್ ಮಾಥೂರ್ ಎಂಬುವರ ಸಹಕಾರದಿಂದ ೧೯೨೮ರಲ್ಲಿ ಒಂದು ಯಂತ್ರವನ್ನು ಸಿದ್ಧಪಡಿಸಿದರು. ಆ ಯಂತ್ರವನ್ನು ಲಂಡನ್ನಿನ ಖಾಸಗಿ ಸಂಸ್ಥೆಯೊಂದು ಶಾಂತಿಸ್ವರೂಪರ ನಿರ್ದೇಶದ ಪ್ರಕಾರ ನಿರ್ಮಿಸಿತು. ಈ ಯಂತ್ರವನ್ನು ಮಾಡಿದ್ದರಿಂದ ತೈಲ ಕಂಪೆನಿಯವರ ಸಮಸ್ಯೆ ದೂರವಾಯಿತು. ಲವಣಗಳು ಸೇರದ ಹಾಗೆ ತೈಲವನ್ನು ಯಾವ ಸ್ಥಳದಲ್ಲಿ ತೆಗೆಯಬಹುದು ಎಂಬುದನ್ನು ಈ ಯಂತ್ರ ಚೆನ್ನಾಗಿ ಸೂಚಿಸುತ್ತಿತ್ತು. ಅಲ್ಲದೆ ಈ ಯಂತ್ರದ ಸಹಾಯದಿಂದ ತೈಲದೊಂದಿಗೆ ಮಿಶ್ರಣ ಹೊಂದಬಹುದಾದಂತಹ ಲವಣಗಳು ಪರಸ್ಪರ ಸೇರದಂತೆ ತಡೆಯಬಹುದಾಗಿತ್ತು. ಈ ಯಂತ್ರವನ್ನು ಯೋಜಿಸಿ ಸಿದ್ಧಮಾಡಿದ್ದು ಶಾಂತಿಸ್ವರೂಪರ ಮಹತ್ವದ ಶೋಧವಾಗಿದೆ.

ಶಾಂತಿಸ್ವರೂಪರು ನಡೆಸಿದ ಈ ಸಂಶೋಧನೆಗಳಿಂದ ತೈಲ ನಿಕ್ಷೇಪದ ಕಂಪೆನಿಯವರಿಗೆ ತುಂಬ ಸಹಾಯವಾಯಿತು. ಸಂತೋಷವಾಯಿತು. ಅವರು ತೈಲ ಸಂಶೋಧನೆಗಾಗಿಯೇ ಆರು ವಿದ್ಯಾರ್ಥಿ ವೇತನಗಳನ್ನು ಕೊಡಲು ತೀರ್ಮಾನ ಮಾಡಿದರು. ಒಂದೂವರೆ ಲಕ್ಷ ರೂಪಾಯಿಗಳನ್ನು ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ದೇಣಿಗೆಯಾಗಿ ಕೊಟ್ಟರು. ಈ ವಿದ್ಯಾರ್ಥಿವೇತನ ಪಡೆದ ತರುಣರಿಗೆ ಶಾಂತಿಸ್ವರೂಪರೇ ಗುರುಗಳಾಗಿ ಮಾರ್ಗದರ್ಶನ ಮಾಡಿದರು.

ಶಾಂತಿಸ್ವರೂಪರ ಗಮನ ಈಗ “ಚುಂಬಕೀಯ ರಸಾಯನಶಾಸ್ತ್ರ” ಎಂಬ ವಿಭಾಗಕ್ಕೆ ಹರಿಯಿತು. ೧೯೩೫ರಲ್ಲಿ ಅವರ ಸಹೋದ್ಯೋಗಿ ಕೆ.ಎನ್.ಮಾಥೂರ್ ಅವರ ಜೊತೆಗೆ ಇಂಗ್ಲಿಷಿನಲ್ಲಿ “ಫಿಸಿಕಲ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಷನ್ ಆಫ್ ಮ್ಯಾಗ್ನೆಟೊ ಕೆಮಿಸ್ಟ್ರಿ” ಎಂಬ ಒಂದು ಪುಸ್ತಕವನ್ನು ಬರೆದರು. ಈ ವಿಷಯವಾಗಿ ಆವರೆಗೆ ಯಾರೂ ಪುಸ್ತಕವನ್ನೇ ಬರೆದಿರಲಿಲ್ಲ.  ಇದೇ ಪ್ರಥಮ ಪುಸ್ತಕವಾದುದರಿಂದ ಆ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದ ದೇಶ ವಿದೇಶಗಳ ವಿಜ್ಞಾನಿಗಳು ಆದರದ ಸ್ವಾಗತವನ್ನು ನೀಡಿದರು. ಭಾರತದ ಹಿರಿಯ ವಿಜ್ಞಾನಿಗಳಲ್ಲಿ ಒಬ್ಬರಾದ ಆಚಾರ್ಯ ಪ್ರಫುಲ್ಲಚಂದ್ರ ರಾಯ್ ಅವರು ಆ ಪುಸ್ತಕದ ವಿಚಾರದ ಬಗ್ಗೆ ತಿಳಿದು ಶಾಂತಿಸ್ವರೂಪರಿಗೆ ಪತ್ರ ಬರೆದು ಅಭಿನಂದಿಸಿದರು.

ಶಾಂತಿಸ್ವರೂಪರ ಕೀರ್ತಿ ಭಾರತದಾಚೆಯೂ ಬೆಳೆಯುತ್ತಿತ್ತು. ಕೈಗಾರಿಕೆಗಳವರಿಗೆ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಹೊಸ ವಸ್ತುಗಳನ್ನು ತಯಾರಿಸಲು ರಸಾಯನಿಕ ವಸ್ತುಗಳನ್ನು ಹೇಗೆ ಬೆರೆಸಬೇಕು, ಅವನ್ನು ಬೆರೆಸಿದಾಗ ಬೇರೆ ಪರಿಣಾಮಗಳು ಆಗದ ಹಾಗೆ ನೋಡಿಕೊಳ್ಳುವುದು ಹೇಗೆ, ಮಾಡುವ ವಸ್ತುಗಳ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆ, ಹೊಸ ಕೆಲಸ ಕಾರ್ಯಗಳಿಗೆ ಯಾವ ಬಗೆಯ ಯಂತ್ರಗಳು ಬೇಕು ಹೀಗೆ ಹತ್ತಾರು ಸಮಸ್ಯೆಗಳಿರುತ್ತವೆ. ಇವನ್ನು ವಿಜ್ಞಾನಿಗಳೇ ಪರಿಹರಿಸಬೇಕು. ಹಲವು ಸಮಸ್ಯೆಗಳನ್ನು ಪರಿಹರಿಸಲು ಶಾಂತಿಸ್ವರೂಪರ ನೆರವನ್ನು ಕೇಳುತ್ತಿದ್ದವು. ಸ್ಟೀಲ್ ಬ್ರದರ್ಸ್ ಎಂಬುದು ಇಂಗ್ಲೆಂಡಿನ ಖಾಸಗಿ ಕೈಗಾರಿಕಾ ಸಂಸ್ಥೆ. ಹಲವು ದೇಶಗಳಲ್ಲಿ ಅದರ ಕಾರ್ಖಾನೆಗಳಿದ್ದವು. ಆ ಕಾರ್ಖಾನೆಗಳಲ್ಲಿ ಕೆಲವು ತೊಂದರೆಗಳಿದ್ದವು. ಇವನ್ನು ಪರಿಹರಿಸಲು ಅದು ಶಾಂತಿಸ್ವರೂಪರ ಸಹಾಯವನ್ನು ಬೇಡಿತು. ಅದು ಇಂಗ್ಲೆಂಡ್, ಪೋಲೆಂಡ್ ಮತ್ತು ಜರ್ಮನಿಗಳಲ್ಲಿರುವ ತನ್ನ ಕಾರ್ಖಾನೆಗಳಿಗೆ ಭೇಟಿ ಕೊಡಲು ಶಾಂತಿಸ್ವರೂಪರನ್ನು ಆಮಂತ್ರಿಸಿತು. ಶಾಂತಿಸ್ವರೂಪರು ಆ ಕಾರ್ಖಾನೆಗಳ ಹಲವು ಸಮಸ್ಯೆಗಳನ್ನು ಸಮರ್ಥವಾಗಿ ಬಗೆಹರಿಸಿಕೊಟ್ಟರು. ಸ್ಟೀಲ್ ಬ್ರದರ್ಸ್ ಸಂಸ್ಥೆ ಅವರಿಗೆ ನಾಲ್ಕುಲಕ್ಷ ರೂಪಾಯಿಗಳನ್ನೂ ಕೈಗಾರಿಕಾ ಕ್ಷೇತ್ರದಲ್ಲಿ ಕೆಲವು ವಿದ್ಯಾರ್ಥಿ ವೇತನಗಳನ್ನೂ ಕೊಟ್ಟು, ಸಂಶೋಧನೆ ನಡೆಸಲು ಕೇಳಿಕೊಂಡಿತು. ಈ ಬಗೆಯ ಸಂಶೋಧನೆಗಳ ಪರಿಣಾಮವಾಗಿ ಬಂದ ಲಾಭಕ್ಕೆ ಶಾಂತಿಸ್ವರೂಪರು ಹಾಗೂ ಸ್ಟೀಲ್ ಬ್ರದರ್ಸ್ ಅವರು ಪಾಲುದಾರರರೆಂದು ತಿಳಿಸಿತು.

ಈ ಒಪ್ಪಂದದ ಪ್ರಕಾರ ಶಾಂತಿಸ್ವರೂಪರಿಗೆ ಸ್ವಂತಕ್ಕೆ ಹೇರಳವಾಗಿ ಹಣ ಬಂದಿತು. ಈ ಹಣವನ್ನು ಅವರು ತಮ್ಮ ಸ್ವಂತ ಖರ್ಚುಗಳಿಗೆ ಉಪಯೋಗಿಸಬಹುದಾಗಿತ್ತು; ತಮ್ಮ ಬುದ್ಧಿಶಕ್ತಿ ಮತ್ತು ಶ್ರಮಗಳಿಂದ ಸಂಪಾದಿಸಿದ ಹಣ ಅದು. ಆದರೆ ಅವರು ಅದನ್ನು ಸಂಶೋಧನೆಗಾಗಿಯೇ ಪಂಜಾಬ್ ವಿಶ್ವವಿದ್ಯಾನಿಲಯದ ರಸಾಯನಿಕ ಸಂಘಕ್ಕೆ ಕೊಟ್ಟುಬಿಟ್ಟರು.

ಗೌರವ-ಹೊಣೆ

ಶಾಂತಿಸ್ವರೂಪರ ಪ್ರತಿಭೆ ಬೆಳಕಿಗೆ ಬಂದಂತೆ ಅವರಿಗೆ ಹಲವು ಗೌರವಗಳು ಸಂದವು. ಹೊಸ ಹೊಸ ಪದವಿಗಳು-ಹೊಣೆಗಳು ಅವರ ಪಾಲಿಗೆ ಬಂದವು.

೧೯೩೮ರಲ್ಲಿ ಕಲ್ಕತ್ತೆಯಲ್ಲಿ ಜರುಗಿದ “ಇಂಡಿಯನ್‌ಸೈನ್ಸ್ ಕಾಂಗ್ರೆಸ್” ಅಧಿವೇಶನದಲ್ಲಿ ರಸಾಯನ ವಿಜ್ಞಾನ ವಿಭಾಗದ ಅಧ್ಯಕ್ಷರಾಗಿದ್ದರು. ೧೯೪೫ರಲ್ಲಿ ಇದೇ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೩೯ ಡಿಸೆಂಬರ್‌ನಲ್ಲಿ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಪ್ರಯೋಗಶಾಲೆಗೆ ವೈಸರಾಯ್ ಅವರ ವಿಶೇಷ ಪ್ರತಿನಿಧಿ ಸರ್.ಎ. ರಾಮಸ್ವಾಮಿ ಮೊದಲಿಯಾರ್ ಅವರು ಭೇಟಿ ನೀಡಿದರು. (ಆಗ ಭಾರತಕ್ಕಿನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ. ಬ್ರಿಟಿಷ್ ಸರ್ಕಾರದ ಪರವಾಗಿ ಇಲ್ಲಿ ಆಡಳಿತ ನಡೆಸುತ್ತಿದ್ದ ಅಧಿಕಾರಿಯನ್ನು ವೈಸರಾಯ್ ಎಂದು ಕರೆಯುತ್ತಿದ್ದರು. ಆಗ ಭಾರತದಲ್ಲಿ ಅತಿ ಹೆಚ್ಚಿನ ಪದವಿ, ಅಧಿಕಾರ ಇದ್ದದ್ದು ವೈಸರಾಯರಿಗೆ). ಶಾಂತಿಸ್ವರೂಪರು ನಡೆಸುತ್ತಿದ್ದ ಸಂಶೋಧನೆಗಳನ್ನು ಕಂಡು ಅವರಿಗೆ ಬಹಳ ಮೆಚ್ಚಿಗೆಯಾಯಿತು. ಕೈಗಾರಿಕಾ ಹಾಗೂ ಸಂಶೋಧನಾ ವಿಭಾಗಕ್ಕೆ ಅಧ್ಯಕ್ಷರಾಗಿರಲು ಶಾಂತಿಸ್ವರೂಪರೇ ತಕ್ಕವರೆಂದು ವೈಸರಾಯರಿಗೆ ತಿಳಿಸಿದರು. ಆಗ ಕೈಗಾರಿಕಾ ಸಂಶೋಧನಾ ವಿಭಾಗದ ಪ್ರಧಾನ ಕಚೇರಿ ಕಲ್ಕತ್ತದಲ್ಲಿತ್ತು. ಶಾಂತಿಸ್ವರೂಪರು ಕಲ್ಕತ್ತದಲ್ಲಿ ಸಂಶೋಧನೆ ನಡೆಸಲು ಸರ್ಕಾರ ಅವಕಾಶವನ್ನು ಕಲ್ಪಿಸಿಕೊಟ್ಟಿತು.

ಶಾಂತಿಸ್ವರೂಪರಿಗೆ ಈ ಹೊಸ ಹುದ್ದೆ ಬಂದಾಗ ಜಗತ್ತಿನಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಗಿತ್ತು. ಎಲ್ಲ ಕಡೆ  ಅಶಾಂತಿ ತುಂಬಿತ್ತು. ಬೇರೆ ದೇಶಗಳಿಂದ ಸಾಮಾನುಗಳು ಬರುವುದು ಕಷ್ಟವಾಗಿತ್ತು. ಆ ಸಮಯದಲ್ಲಿ ಅವರು ಬಹುಮಟ್ಟಿಗೆ ರಾಷ್ಟ್ರಕ್ಕೆ ತುರ್ತಾಗಿ ಬೇಕಾಗುವಂತಹ ವಸ್ತುಗಳ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದರು. ಉದಾಹರಣೆಗೆ, ಆಗ ಭಾರತಕ್ಕೂ ಶತ್ರುಗಳಿಂದ ಅಪಾಯವಿದೆ ಎನ್ನುವಂತಿತ್ತು. ಶತ್ರುಗಳು ಹರಡುವ ವಿಷದ ಅನಿಲಗಳನ್ನು ಉಪಯೋಗಿಸಿದರೆ ಎಷ್ಟು ಅಪಾಯ! ಅದನ್ನು ತಡೆಯಲು ಮುಖ್ಯವಾಗಿ ಬೇಕಾದಂತಹ ವಸ್ತುಗಳನ್ನು ಶಾಂತಿಸ್ವರೂಪರು ಕಂಡುಹಿಡಿದರು. ಅಲ್ಲದೆ ಅನೇಕ ಬಗೆಯ ಕೃತಕ ವಸ್ತುಗಳನ್ನು ಕಂಡುಹಿಡಿದಿದ್ದರು. ಕೆಲವು ಬಗೆಯ ಮಿಶ್ರ ಪದ್ಧತಿಯಿಂದ ಬೇಕ್‌ಲೈಟ್, ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ತಯಾರಿಸಿದ್ದರು. ಅವರ ಕೆಲಸವನ್ನು ಮೆಚ್ಚಿ ಬ್ರಿಟಿಷ್‌ಸರ್ಕಾರವು ೧೯೪೧ರ ಹೊಸ ವರ್ಷದ ದಿನ ಅವರಿಗೆ “ನೈಟ್‌ಹುಡ್” ಅನ್ನು ಕೊಟ್ಟಿತು; ಎಂದರೆ ಅಂದಿನಿಂದ ಅವರ ಹೆಸರಿಗೆ ಮೊದಲು “ಸರ್” ಶಬ್ದ ಸೇರಿ ಅವರು ಸರ್ ಶಾಂತಿಸ್ವರೂಪ ಭಾಟ್ನಗರ್ ಆದರು. ೧೯೪೧ರಲ್ಲಿ ಅವರು ಸೈನ್ಸ್ ಅಕಾಡೆಮಿ ಅಧಿವೇಶನದ ಅಧ್ಯಕ್ಷರಾಗಿದ್ದರು.

ಲಂಡನ್ನಿನಲ್ಲಿ “ರಾಯಲ್ ಸೊಸೈಟಿ” ಎಂಬ ಪ್ರಸಿದ್ದ ವೈಜ್ಞಾನಿಕ ಸಂಸ್ಥೆ ಇದೆ. ಈ ಸಂಸ್ಥೆ ಪ್ರತಿಭಾವಂತ ವಿಜ್ಞಾನಿಗಳನ್ನು ಮಾತ್ರ “ಫೆಲೊ” (ಸದಸ್ಯ) ಆಗಿ ಆರಿಸುತ್ತದೆ. ಹೀಗೆ ಆಯ್ಕೆ ಆಗುವುದೇ ಒಂದು ಗೌರವ. ೧೯೪೩ರ ಮಾರ್ಚ್‌ತಿಂಗಳಲ್ಲಿ ಶಾಂತಿಸ್ವರೂಪರನ್ನು ಈ ಸಂಸ್ಥೆ ತನ್ನ ಸದಸ್ಯನನ್ನಾಗಿ ಮಾಡಿಕೊಂಡಿತು. ಭಾರತದಲ್ಲಿ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಮಾಡಿ ಈ ಗೌರವವನ್ನು ಪಡೆದವರಲ್ಲಿ ಇವರೇ ಮೊದಲನೆಯವರು. ವಿಶ್ವದ ವಿಖ್ಯಾತ ಪತ್ರಿಕೆ ಹಾಗೂ ಲಂಡನಿನ ವೈಜ್ಞಾನಿಕ ಪತ್ರಿಕೆಯಾದ “ನೇಚರ್”, ಶಾಂತಿಸ್ವರೂಪರು ರಾಯಲ್ ಸೊಸೈಟಿಯ ಸದಸ್ಯರಾದುದ್ದರಲ್ಲಿ ಆಶ್ಚರ್ಯವೇ ಇಲ್ಲ, ಈ ಬಗೆಯ ಗೌರವಕ್ಕೆ ಅವರು ಖಂಡಿತ ಅರ್ಹರು ಎಂದು ಬರೆಯಿತು.

ಭಾರತ ಅಭಿವೃದ್ಧಿ ಹೊಂದಬೇಕು ಎಂಬುದು ಶಾಂತಿಸ್ವರೂಪರ ತೀವ್ರ ಬಯಕೆ. ಹಾಗಾಗಬೇಕಾದರೆ ಈ ದೇಶದಲ್ಲಿ ಯಾವ ಯಾವ ಕಚ್ಚಾ ವಸ್ತುಗಳು ದೊರೆಯುತ್ತವೆ, ಎಲ್ಲೆಲ್ಲಿ ಎಷ್ಟೆಷ್ಟು ದೊರೆಯುತ್ತವೆ, ಇವನ್ನು ಹೇಗೆ ಬಳಸಬೇಕು-ಇವೆಲ್ಲ ವಿವರಗಳನ್ನು ಸಂಗ್ರಹಿಸಬೇಕು. ಈ ಎಲ್ಲ ಕಚ್ಚಾ ಸಾಮಗ್ರಿಗಳನ್ನು ಜಾಣತನದಿಂದ ಕೈಗಾರಿಕೆಗಳಿಗೆ ಉಪಯೋಗಿಸಿಕೊಳ್ಳಬೇಕು ಎಂಬುದು ಶಾಂತಿಸ್ವರೂಪರ ಅಭಿಪ್ರಾಯ. ಕಚ್ಚಾ ವಸ್ತುಗಳನ್ನು ಜನರ ಉಪಯೋಗಕ್ಕಾಗಿ ಸಂಶೋಧನೆಗಳಲ್ಲಿ ಬಳಸುವಂತಹ ಯಾವ ಸಂಶೋಧನಾಲಯವೂ ಭಾರತದಲ್ಲಿ ಆಗ ಇರಲಿಲ್ಲ. ಶಾಂತಿಸ್ವರೂಪರು ಭಾರತದ ವಿವಿಧ ಸ್ಥಳಗಳಲ್ಲಿ ಪ್ರಯೋಗ ಶಾಲೆಗಳ ಒಂದು ಸರಣಿಯನ್ನು ಆರಂಭಿಸುವ ಯೋಜನೆಯನ್ನು ಹಾಕಿ, ಸರ್ಕಾರಕ್ಕೆ ಕಾರ್ಯಗತಗೊಳಿಸಲು ಕೇಳಿಕೊಂಡಿದ್ದರು. ಸರ್ಕಾರ ಹಣವನ್ನು ಕೊಡುವುದೋ ಇಲ್ಲವೋ ಎಂಬ ಅನುಮಾನ ಅವರಿಗೆ ಇದ್ದೇ ಇತ್ತು. ಆದುದರಿಂದ ಪ್ರಯೋಗ ಶಾಲೆಗಳ ನಿರ್ಮಾಣಕ್ಕಾಗಿ ದಾನ ರೂಪದಲ್ಲಿ ಶ್ರೀಮಂತರಿಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಲಾರಂಭಿಸಿದರು. ಉದಾಹರಣೆಗೆ, ಪೂನಾದಲ್ಲಿರುವ ರಸಾಯನಿಕ ಪ್ರಯೋಗ ಶಾಲೆಗಾಗಿ ತಾತಾ ಅವರಿಂದ ಎಂಟು ಲಕ್ಷ ಮೂವತ್ತು ಸಾವಿರ ರೂಪಾಯಿ ದಾನ ಪಡೆದರು!

ಸ್ವತಂತ್ರ ಭಾರತಕ್ಕೆ ಪ್ರತಿಭೆಯ ಮುಡಿಪು

೧೯೪೭ರಲ್ಲಿ ಭಾರತ ಸ್ವತಂತ್ರವಾಯಿತು. ಅನಂತರ ರಾಷ್ಟ್ರ ನಿರ್ಮಾಣಕ್ಕಾಗಿ ನಿಂತ ಹಲವಾರು ವಿಜ್ಞಾನಿ ಶಿಲ್ಪಿಗಳಲ್ಲಿ ಶಾಂತಿಸ್ವರೂಪರೂ ಒಬ್ಬರು. ಯಾವ ದೇಶದಲ್ಲಿಯೇ ಆಗಲಿ ಕೈಗಾರಿಕೆ ಬೆಳೆಯಬೇಕಾದರೆ ವೈಜ್ಞಾನಿಕ ಸಂಶೋಧನೆ ನಿಲ್ಲದೆ ನಡೆಯುತ್ತಲೇ ಇರಬೇಕು. ಇಂತಹ ಸಂಶೋಧನೆಗಳಿಗೆ ಶಾಂತಿಸ್ವರೂಪರು ಭದ್ರವಾದ ಅಡಿಪಾಯ ಹಾಕಿದರು. ಇವರಲ್ಲಿದ್ದ ರಾಷ್ಟ್ರಪ್ರೇಮ, ಸಂಘಟನಾ ಸಾಮರ್ಥ್ಯ ಮತ್ತು ಸಂಶೋಧನಾ ಪ್ರವೃತ್ತಿಯ ಫಲವಾಗಿ ಭಾರತದಲ್ಲಿ ಸುಮಾರು ಹನ್ನೊಂದು ಪ್ರಮುಖವಾದ ಸಂಶೋಧನಾ ಕೇಂದ್ರಗಳನ್ನು ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿ ಆರಂಭಿಸಿದರು. ಮೈಸೂರಿನಲ್ಲಿರುವ ಕೇಂದ್ರ ಆಹಾರ ಸಂಶೋಧನಾಲಯ, ಜಮ್‌ಷೆಡ್‌ಪುರದಲ್ಲಿರುವ ಕೇಂದ್ರ ಧಾತು ಸಂಶೋಧನಾಯಲಯ, ಮದರಾಸಿನಲ್ಲಿರುವ ಕೇಂದ್ರ ಚರ್ಮ ಸಂಶೋಧನಾಲಯ-ಇವೆಲ್ಲ ಶಾಂತಿಸ್ವರೂಪರ ಪ್ರಯತ್ನಗಳ ಫಲಗಳೇ.

ಭಾರತದ ಪ್ರಥಮ ಪಂಚವಾರ್ಷಿಕ ಯೋಜನೆಯ ಅವಧಿ ೧೯೫೧ರಿಂದ ೧೯೫೬. ಆಗ ಭಾರತದಲ್ಲಿ ಹಲವಾರು ಸಂಶೋಧನಾಲಯಗಳನ್ನು ಪ್ರಾರಂಭಿಸಬೇಕೆಂದು ಪ್ರಧಾನಿ ನೆಹರೂ ಅವರು ಬಯಸಿದರು. ಶಾಂತಿಸ್ವರೂಪರಂತಹ ಮೇಧಾವಿಗಳ ಸಹಕಾರ ಹಾಗೂ ಅಭಿಪ್ರಾಯ ಸರ್ಕಾರಕ್ಕೆ ಅಮೂಲ್ಯವಾಗಿತ್ತು. ಈ ವಿಷಯ ಆಗಿನ ಎಲ್ಲಾ ರಾಜಕಾರಣಿಗಳಿಗೆ ತಿಳಿದಿತ್ತು. ಶಾಂತಿಸ್ವರೂಪರಲ್ಲಿ ಆರಂಭದಿಂದಲೂ ಬೆಳೆದು ಬಂದಿದ್ದ ಸಂಘಟನಾ ಶಕ್ತಿ, ಸಂಶೋಧನಾ ಪ್ರವೃತ್ತಿ ಹಾಗೂ ರಾಷ್ಟ್ರಪ್ರೇಮಗಳಿಂದ ಭಾರತದ ಕೈಗಾರಿಕಾ ಹಾಗೂ ವೈಜ್ಞಾನಿಕ ಸಂಶೋಧನಾ ಕ್ಷೇತ್ರ ಚೆನ್ನಾಗಿ ಬೆಳೆಯಲು ಅವಕಾಶ ಸಿಕ್ಕಿತು.

ಕವಿ ಶಾಂತಿಸ್ವರೂಪರು

ಶಾಂತಿಸ್ವರೂಪರು ಬಹುದೊಡ್ಡ ವಿಜ್ಞಾನಿ. ಅವರ ಸಂಘಟನಾ ಸಾಮರ್ಥ್ಯ ವಿಶಿಷ್ಟವಾದದ್ದು. ಅವರು ವಿನೋದಪ್ರಿಯರೂ ಆಗಿದ್ದರು. ಅಲ್ಲದೆ ಬಾಲ್ಯದಲ್ಲಿ ತಾತನ ಮನೆಯಲ್ಲಿ ರೂಢಿಸಿಕೊಂಡಿದ್ದ ಕಾವ್ಯಪ್ರಿಯತೆ ಅವರಲ್ಲಿ ಹಸಿರಾಗಿಯೇ ಇತ್ತು. ತಮ್ಮ ಹೆಂಡತಿ ಲಾಜವಂತಿ ಅವರು ತೀರಿಕೊಂಡ ನಂತರ ಅವರ ನೆನಪಿನಲ್ಲಿ ಶಾಂತಿಸ್ವರೂಪರು ಹಲವು ಕವನಗಳನ್ನು ಬರೆದು “ಲಾಜವಂತಿ” ಎಂಬ ಹೆಸರಿನ ಕವನ ಸಂಕಲವನ್ನು ಪ್ರಕಟಿಸಿದರು. ಉರ್ದು ಭಾಷೆಯಲ್ಲಿ ಅವರು ಬರೆದ ಕವನಗಳಿಂದ ಜನಪ್ರಿಯ ಕವಿಯಾಗಿದ್ದರು.

ಕೀರ್ತಿಕಾಯ ಭಾಟ್ನಗರ್

೧೯೫೫ರ ಹೊಸ ವರ್ಷದ ಪ್ರಾರಂಭದ ದಿನವೇ ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಕೆಟ್ಟ ಸುದ್ದಿಯನ್ನು ಹೊತ್ತು ತಂದಿತು. ಶಾಂತಿಸ್ವರೂಪರು ಆ ದಿನ ನಿಧನರಾದರು. ಪ್ರಥಮ ಪಂಚವಾರ್ಷಿಕ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎರಡನೆಯ ಪಂಚವಾರ್ಷಿಕ ಯೋಜನೆಯ ರೂಪುರೇಷೆಯನ್ನು ರಚಿಸಬೇಕಾದ ಸಮಯದಲ್ಲಿ ಭಾರತವು ಡಾಕ್ಟರ್ ಶಾಂತಿಸ್ವರೂಪರನ್ನು ಕಳೆದುಕೊಂಡಿತು. ಬಹು ಉನ್ನತ ಮಟ್ಟದ ಸಂಶೋಧನೆ ನಡೆಸುತ್ತಿದ್ದ ಭಾಟ್ನಗರ್ ಅವರು ಜನ ಹಿತದೃಷ್ಟಿಯನ್ನು ಎಂದೂ ಮರೆಯಲಿಲ್ಲ. ಕೆಲಸಕ್ಕೆ ಬಾರದವು ಎನಿಸಿಕೊಂಡ ವಸ್ತುಗಳಿಂದ ಉಪಯೋಗಕರವಾದ ವಸ್ತುಗಳನ್ನು ಮಾಡಲು ಸತತವಾಗಿ ಪ್ರಯತ್ನಿಸುತ್ತಿದ್ದರು. ಸೆಣಬಿನ ಕಸ, ತೆಂಗಿನ ಪರಟೆ ಮೊದಲಾದವುಗಳನ್ನು ಬಳಸಿ ಪ್ರಯೋಜನಕ್ಕೆ ಬರುವ ವಸ್ತುಗಳ ನಿರ್ಮಾಣಕ್ಕೆ ಯತ್ನಿಸಿದರು. ಕಬ್ಬಿನ ಕಸದ ಗಸಿಯಿಂದ ದನಗಳಿಗೆ ಹಿಂಡಿಯನ್ನು ತಯಾರಿಸಿದರು. ವನಸ್ಪತಿಗಳ ನಾರಿನ ವಿಷಯವಾಗಿ ಅಧ್ಯಯನ ಮಾಡಿದರು.

ಭಾರತ ಸರ್ಕಾರ ಈ ಮಹಾ ಪ್ರತಿಭಾವಂತನ ಹೆಸರು ಚಿರಸ್ಮರಣೀಯವಾಗುವಂತೆ ಮಾಡಲು ತೀರ್ಮಾನಿಸಿದತು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರದವರು (ಸಿ.ಎಸ್‌.ಐ.ಆರ್,) ಭಾರತದಲ್ಲಿ ಸಂಶೋಧನೆ ನಡೆಸುವ ಪ್ರತಿಭಾವಂತ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರ ಸಂಶೋಧನೆಯನ್ನು ಗುರುತಿಸಲು ಆರು ಕ್ಷೇತ್ರಗಳಲ್ಲಿ ಹತ್ತು ಸಾವಿರ ರೂಪಾಯಿ ಮೊತ್ತದ ಅತಿ ಶ್ರೇಷ್ಠ ಪುರಸ್ಕಾರವನ್ನು ಕೊಡಲು ೧೯೫೭ರಲ್ಲಿ ತೀರ್ಮಾನಿಸಿದರು. ಪ್ರಪ್ರಥಮವಾಗಿ ಈ ಪುರಸ್ಕಾರ ೧೯೫೮ರಲ್ಲಿ ಡಾಕ್ಟರ್ ಕೃಷ್ಣನ್‌ಗೆ ಲಭಿಸಿತು. ಆನಂತರ ಈವರೆಗೆ ಪ್ರೊಫೆಸರ್ ಕೆ.ಚಂದ್ರಶೇಖರ್, ಪ್ರೊಫೆಸರ್ ಟಿ.ಎಸ್. ಸದಾಶಿವನ್, ಡಾಕ್ಟರ್ ಎಂ.ಎಸ್.ಸ್ವಾಮಿನಾಥನ್, ಡಾಕ್ಟರ್ ವಿಕ್ರಮ್ ಸರಾಭಾಯ್, ಪ್ರೊಫೆಸರ್ ಜಿ.ಎನ್.ರಾಮಚಂದ್ರನ್ ಮೊದಲಾದ ಹಲವಾರು ಪ್ರಮುಖ ವಿಜ್ಞಾನಿಗಳಿಗೆ ಈ ಪುರಸ್ಕಾರ ದೊರೆತಿದೆ.