ಶಾಂಭವಾನಂದರುಇಪ್ಪತ್ತೇಳನೆಯ ವಯಸ್ಸಿಗೆ ಸಂನ್ಯಾಸಿ ದೀಕ್ಷೆ ಪಡೆದ ಶಾಂಭವಾನಂದರು ವಿದ್ಯಾರ್ಥಿ ಗಳು, ತರುಣ ಪೀಳಿಗೆಯವರು, ಬಡವರು ಇವರ ಸೇವೆಗಾಗಿ ಬದುಕಿದರು. ಪೊನ್ನಂ ಪೇಟೆಯ ‘‘ಶ್ರೀರಾಮಕೃಷ್ಣ- ಶಾರದಾಶ್ರಮ  ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿ ನಿಲಯ ಎಲ್ಲ ಅವರ ಸಾಹಸ, ತಪಸ್ಸುಗಳ ಪ್ರತೀಕಗಳಾಗಿವೆ.

 ಶಾಂಭವಾನಂದರು

‘ಓ! ಎಷ್ಟೊಂದು ಭವ್ಯವಾದ ಕಟ್ಟಡ! ಎಂತಹ ಪ್ರಶಾಂತ ವಾತಾವರಣ!’ ಎಂದರು ಪ್ರೇಕ್ಷಕರೊಬ್ಬರು. ಅವರೊಡನಿದ್ದವರೊಬ್ಬರು, ‘‘ಈ ಕಟ್ಟಡದ ವಿಸ್ತಾರವೆಷ್ಟಿರಬಹುದು? ಇದನ್ನು ಕಟ್ಟಲು ಖರ್ಚೆಷ್ಟಾಗಿರಬಹುದು?’’ ಎಂದು ಪ್ರಶ್ನಿಸಿದರು. ಒಂದು ಲಕ್ಷ ಚದರಡಿ ಇರುವ ಈ ಕಟ್ಟಡಕ್ಕೆ ಇಪ್ಪತ್ತೇಳೂವರೆ ಲಕ್ಷ ರೂಪಾಯಿಗಳು ಮಾತ್ರ ಖರ್ಚಾಗಿವೆ ಎಂದು ಕೇಳಿ ಬೆಕ್ಕಸ ಬೆರಗಾದರು!

ದೇಶವಿದೇಶಗಳ ಪ್ರವಾಸಿಗರನ್ನೂ ಮುಖ್ಯವಾಗಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ತಜ್ಞರನ್ನೂ ಧಾರ್ಮಿಕ ಶ್ರದ್ಧಾಳುಗಳನ್ನೂ ಆಕರ್ಷಿಸುತ್ತಿರುವ ಮೈಸೂರಿನ ‘ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ’ ಎಂಬ ಅಂಕಿತವನ್ನುಳ್ಳ ಈ ಸಂಸ್ಥೆ ಮತ್ತು ಇದರ ಭವ್ಯವಾದ ಕಟ್ಟಡ-ಇವು ಸ್ವಾಮಿ ಶಾಂಭವಾನಂದಜಿಯವರ ತುಂಬು ಜೀವನವೃಕ್ಷದ ಕಟ್ಟಕಡೆಯ ಫಲ.

ಜಗದ್ವಂದ್ಯರಾದ ಶ್ರೀರಾಮಕೃಷ್ಣ ಪರಮಹಂಸರು, ಜಗತ್ಪ್ರಸಿದ್ಧರಾದ ಸ್ವಾಮಿ ವಿವೇಕಾನಂದರು ಇವರ ಹೆಸರನ್ನು ಕೇಳದವರಾರು? ಇವರ ಜೀವನ, ಉಪದೇಶಗಳನ್ನು ಸರಳ ಕನ್ನಡ ಭಾಷೆಯಲ್ಲಿ ನೂರಾರು ಹೊತ್ತಗೆಗಳ ಮೂಲಕ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿರುವ ಸಂಸ್ಥೆ ಮೈಸೂರಿನ ಶ್ರೀರಾಮಕೃಷ್ಣಾಶ್ರಮ. ಈ ಆಶ್ರಮಕ್ಕೆ ಮೂವತ್ತೊಂದು ವರ್ಷಗಳಷ್ಟು ದೀರ್ಘಕಾಲ ಅಧ್ಯಕ್ಷರಾಗಿದ್ದು ಅದರ ಉನ್ನತಿಗೆ ಕಾರಣರಾದ ಧೀರ ಸಂನ್ಯಾಸಿ ಸ್ವಾಮಿ ಶಾಂಭವಾನಂದರು. ಒಂದು ವರ್ಷ ಹಿಡಿಯುವ ಕೆಲಸವನ್ನು ಒಂದು ತಿಂಗಳಲ್ಲಿ, ಒಂದು ತಿಂಗಳು ಹಿಡಿಯುವ ಕೆಲಸವನ್ನು ಕೆಲವೇ ದಿನಗಳಲ್ಲಿ, ನಾಳೆ ಆಗುವುದನ್ನು ಇಂದೇ ಮಾಡಬೇಕು ಎಂಬ ಛಲ, ಹಟ ಅವರದ್ದು. ಅವರ ನಿಘಂಟಿನಲ್ಲಿ ‘ನಾಳೆ’, ‘ಅಸಾಧ್ಯ’ ಎಂಬ ಪದಗಳಿಗೆ ಅವಕಾಶವೇ ಇರಲಿಲ್ಲ! ಕೆಲವು ಕೆಲಸ ಸುಲಭ, ಇನ್ನು ಕೆಲವು ಕೆಲಸ ಕಷ್ಟಸಾಧ್ಯ, ಅಷ್ಟೇ ಹೊರತು ಅಸಾಧ್ಯವಾದದ್ದು ಯಾವುದೂ ಇಲ್ಲ! ಇಂತಹ ಕೆಚ್ಚು ಅವರಲ್ಲಿ ಇದ್ದದ್ದರಿಂದಲೇ ಅಸ್ತಿಭಾರ ಹಾಕಿ ಅನೇಕ ವರ್ಷಗಳಾಗಿದ್ದರೂ ಇತರರು ಪೂರಯಿಸಲಾಗದಿದ್ದ ಆಶ್ರಮದ ಪ್ರಾರ್ಥನಾಮಂದಿರವನ್ನು ಬೇಗ ಕಟ್ಟಿ ಪೂರೈಸಿದರು. ಸ್ವತಃ ಬೃಹದ್ ಯೋಜನೆಗಳನ್ನು ಹಾಕಿಕೊಂಡು ಅವನ್ನು ಪೂರೈಸಿದರು. ರಜತಮಹೋತ್ಸವವನ್ನು ಆಚರಿಸಿ ಉತ್ತಮ ಶಾಲೆಯೆಂದು ಪ್ರಸಿದ್ಧವಾಗಿರುವ ‘‘ಶ್ರೀರಾಮಕೃಷ್ಣ  ವಿದ್ಯಾಶಾಲೆ’ ಮತ್ತು ಮೈಸೂರಿನ ಜನರಲ್ಲಿ ‘ವೇದಾಂತ ಕಾಲೇಜ್’ ಎಂದೇ ಹೆಚ್ಚು ಪ್ರಸಿದ್ಧವಾಗಿರುವ ‘ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ’ ಇವೆರಡೂ ಅವರ ಹೆಸರನ್ನು ಚಿರಸ್ಥಾಯಿಯಾಗಿ ಮಾಡಿವೆ.

ಜನನ, ಬಾಲ್ಯ, ವಿದ್ಯಾಭ್ಯಾಸ

ಕೊಡಗಿನ ಮುಖ್ಯ ಪಟ್ಟಣವಾದ ಮಡಿಕೇರಿಗೆ ಸುಮಾರು ಹದಿಮೂರು ಮೈಲಿ ದೂರದಲ್ಲಿ ಕಾವೇರಿ ನದಿಯ ದಂಡೆಯ ಮೇಲೆ ಹಾಲಗುಂದ ಎಂಬ ಸಣ್ಣ ಗ್ರಾಮವೊಂದಿದೆ. ಈ ಗ್ರಾಮದ ‘ತೇಲಪಂಡ’  ಮುತ್ತಣ್ಣ ಮತ್ತು ಚಿನ್ನವ್ವ ಎಂಬ ದಂಪತಿಗಳ ಮಗನಾಗಿ ಕ್ರಿ.ಶ. ೧೮೯೪ ರ ಉತ್ತರಾರ್ಧದಲ್ಲಿ ಜನಿಸಿದರು ಶಾಂಭವಾನಂದಜಿ. ಆಜಾನುಬಾಹುವೂ ಸುಂದರರೂ ಆದ ತಂದೆ ರೆವೆನ್ಯೂ ಇಲಾಖೆಯ ಅಧಿಕಾರಿ. ತಾಯಿ ಚಿನ್ನವ್ವ ದೈವಭಕ್ತೆ, ದಾನಶೀಲೆ ಮತ್ತು ವ್ಯವಹಾರದಲ್ಲಿ ಚತುರೆ. ಮಗನಿಗೆ ಚೆಂಗಪ್ಪ ಎಂದು ಹೆಸರಿಟ್ಟರು.

ಚಿಕ್ಕಂದಿನಿಂದಲೂ ಬಾಲಕ ಚೆಂಗಪ್ಪನಿಗೆ ತನ್ನ ಕೈಯಿಂದಲೇ ಏನನ್ನಾದರೂ ತಯಾರಿಸಬೇಕೆಂಬ ಕುತೂಹಲ. ಸಣ್ಣಪುಟ್ಟ ನೇಗಿಲುಗಳನ್ನು ತಯಾರಿಸುವುದು, ಬಿದಿರಿನ ಕೊಡೆ ಗೂಡೆಗಳನ್ನು ಮಾಡುವುದು ಎಂದರೆ ಚೆಂಗಪ್ಪನಿಗೆ ತುಂಬ ಇಷ್ಟ. ಇದರ ಫಲವಾಗಿ ಆಗಾಗ ಕೈ ಗಾಯ ಮಾಡಿಕೊಳ್ಳುವುದು, ಓದುಬರಹಕ್ಕಿಂತ ಹೆಚ್ಚಾಗಿ ಇವುಗಳಲ್ಲೇ ಕಾಲ ಕಳೆದು ತಾಯಿಯ ಕೈಯಲ್ಲಿ ಬೈಸಿಕೊಳ್ಳುವುದು-ಇದು ಅವನ ಪಾಲಿಗೆ ಆಗಾಗ ಬರುತ್ತಿದ್ದ ಅನುಭವ. ಮನೆಯ ಆಳುಗಳಿಗೆ, ಕೇರಿಯ ಕಮ್ಮಾರರಿಗೆ, ಚಾಪೆ ಹೆಣೆಯುವ, ಬುಟ್ಟಿ ತಯಾರಿಸುವ ಮೇದರರಿಗೆ ಚೆಂಗಪ್ಪನು ‘ತಮ್ಮ’! ಇವನಿಂದ ಇವನ ತಾಯಿಗೆ ‘ತಮ್ಮಂಡವ್ವ’ ಎಂದೇ ನಾಮಧೇಯ!

ಹಾಲುಗುಂದದಲ್ಲಿದ್ದ ಜಿಲ್ಲಾಬೋರ್ಡಿನ ಶಾಲೆ ಹೇಳಿಕೊಳ್ಳುವಂಥದ್ದೇನೂ ಆಗಿರಲಿಲ್ಲ. ಆದುದರಿಂದ ತಂದೆ ಈ ‘ತಮ್ಮ’ನನ್ನು ತಮ್ಮೊಡನೆ ಭಾಗಮಂಡಲಕ್ಕೊಯ್ದರು. ಭಗಂಡೇಶ್ವರ ದೇವಾಲಯದಲ್ಲಿಯೇ ನಡೆಯುತ್ತಿದ್ದ ಶಾಲೆಗೆ ಸೇರಿಸಿದರು. ತಾವೂ ಬಿಡುವು ಮಾಡಿಕೊಂಡು ಸಾಧ್ಯವಾದಷ್ಟು ಕಲಿಸುತ್ತಿದ್ದರು. ಲೋಯರ್ ಸೆಕೆಂಡರಿ ವರೆಗಿನ ಮುಂದಿನ ವಿದ್ಯಾಭ್ಯಾಸ ವೀರರಾಜ ಪೇಟೆಯಲ್ಲಿ ಆಯಿತು. ಈ ನಡುವೆ ತಂದೆ ಮುತ್ತಣ್ಣನವರು ಕಾಲವಾದರು. ಆದರೂ ಕಂಗೆಡದೆ ತಾಯಿ ಚಿನ್ನವ್ವ ಅವನನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಯಿಂಟ್ ಜೋಸೆಫ್ಸ್ ಪ್ರೌಢಶಾಲೆಗೆ ಸೇರಿಸಿದರು. ಅಲ್ಲಿಯೇ ಎಸ್.ಎಸ್.ಎಲ್.ಸಿ. ಮುಗಿಸಿ ಚೆಂಗಪ್ಪನು ಅದೇ ಕಾಲೇಜಿಗೂ ಸೇರಿದನು.

ಅವನು ಕಾಲೇಜಿನಲ್ಲಿ ಕಲಿಯುತ್ತಿದ್ದ ಕಾಲದಲ್ಲಿ ಆಂಧ್ರದ ಸ್ಯಾಂಡೊ ಎಂದು ಪ್ರಸಿದ್ಧರಾಗಿದ್ದ ಪ್ರೊಫೆಸರ್ ರಾಮಮೂರ್ತಿಯವರು ಬೆಂಗಳೂರಿಗೆ ಬಂದರು. ಅವರ ಬಲವಾದ ಮೈಕಟ್ಟಿನಿಂದ ಪ್ರಭಾವಿತನಾದ ಚೆಂಗಪ್ಪನು ಅವರಲ್ಲಿ ಮೂರು ತಿಂಗಳ ಶಿಕ್ಷಣವನ್ನು ಪಡೆದು ತೃಪ್ತಿಕರವಾಗಿಯೇ ತನ್ನ ಶರೀರವನ್ನು ಬಲಪಡಿಸಿಕೊಂಡನು.

ಶ್ರೀರಾಮಕೃಷ್ಣಮಠದ ಸಂಪರ್ಕ ಮತ್ತು ಸಂನ್ಯಾಸ ಸ್ವೀಕಾರ

ಒಂದು ದಿನ ಸಂಜೆ ವಾಯುವಿಹಾರಕ್ಕೆಂದು ಚೆಂಗಪ್ಪ ಅಡ್ಡಾಡುತ್ತಿರುವಾಗ ಭಾಷಣ ಮಂದಿರವೊಂದರಲ್ಲಿ ಜನ ಕಿಕ್ಕಿರಿದಿದ್ದುದನ್ನು ಕಂಡನು. ಕುತೂಹಲದಿಂದ ಒಳಗೆ ಪ್ರವೇಶಿಸಿದಾಗ ಗಂಭೀರವದನರಾದ ಯೋಗೀಶ್ವರಾನಂದ ಎಂಬ ಸಂನ್ಯಾಸಿಯೊಬ್ಬರು ಇಂಗ್ಲಿಷಿನಲ್ಲಿ ಗೀತೆಯನ್ನು ಕುರಿತು ಉಪನ್ಯಾಸ ಮಾಡುತ್ತಿದ್ದರು. ಚೆಂಗಪ್ಪನಿಗೆ ಅವರ ಉಪನ್ಯಾಸ ತುಂಬ ಹಿಡಿಸಿತು. ಉಪನ್ಯಾಸದ ಕೊನೆಯಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ ಚೆಂಗಪ್ಪ. ಸ್ವಾಮಿಗಳು ಕೊಟ್ಟ ಉತ್ತರ ಸ್ವಾರಸ್ಯವಾಗಿತ್ತು. ಹೀಗೆ ಮೊದಲಾಯಿತು ಅವರ ಸಂಪರ್ಕ. ಅಂದಿನಿಂದ ಪ್ರತಿ ಶನಿವಾರವೂ ತಪ್ಪದೆ ಅವರ ಉಪನ್ಯಾಸಗಳಿಗೆ ಹೋಗುತ್ತಿದ್ದ. ಅಲ್ಲದೆ ಅಲಸೂರಿನಲ್ಲಿದ್ದ ಅವರ ಆಶ್ರಮಕ್ಕೂ ಆಗಾಗ ಭೇಟಿ ಕೊಡುತ್ತಿದ್ದ. ಕ್ರಮೇಣ ರಾಮಕೃಷ್ಣ ಮಠದ ಶಾಖೆಯಾಗಿ ಬೆಂಗಳೂರಿನ ಬಸವನಗುಡಿಯಲ್ಲಿ ೧೯೦೨ರಲ್ಲೇ ಸ್ಥಾಪಿತವಾಗಿದ್ದ ಶ್ರೀರಾಮಕೃಷ್ಣ ಆಶ್ರಮದ ಸಂಪರ್ಕವಾಯಿತು. ಆಗ ಅದರ ಅಧ್ಯಕ್ಷರಾಗಿದ್ದ ಸ್ವಾಮಿ ನಿರ್ಮಲಾನಂದಜಿಯವರ ನಿಕಟ ಪರಿಚಯವೂ ಆಯಿತು. ಇದರ ಪರಿಣಾಮವಾಗಿ ಯುವಕ ಚೆಂಗಪ್ಪನಿಗೆ ವೈರಾಗ್ಯ ಉಂಟಾಯಿತು. ಪ್ರೀತಿಯಿಂದ ಒತ್ತಾಯಮಾಡಿ ತಾಯಿಯನ್ನು ಒಪ್ಪಿಸಿ, ೧೯೨೦ ರಲ್ಲಿ ಬೆಂಗಳೂರಿನ ಶ್ರೀರಾಮಕೃಷ್ಣ ಆಶ್ರಮಕ್ಕೆ ಬ್ರಹ್ಮಚಾರಿಯಾಗಿ ಸೇರಿದ್ದೂ ಆಯಿತು. ಶ್ರೀರಾಮಕೃಷ್ಣರ ಶಿಷ್ಯರೂ ಸ್ವಾಮಿ ವಿವೇಕಾನಂದರ ಗುರುಭಾಯಿಗಳೂ ಆದ ಶ್ರೀ ರಾಮಕೃಷ್ಣ ಮಠಗಳ ಪ್ರಪ್ರಥಮ ಅಧ್ಯಕ್ಷ ಸ್ವಾಮಿ ಬ್ರಹ್ಮಾನಂದರು ೧೯೨೧ರಲ್ಲಿ ಬೆಂಗಳೂರಿಗೆ ಆಗಮಿಸಿದರು. ಚೆಂಗಪ್ಪ ಅವರಿಂದ ದೀಕ್ಷೆಯನ್ನೂ ಪಡೆದದ್ದಾಯಿತು. ೧೯೨೪ರಲ್ಲಿ ಸ್ವಾಮಿ ನಿರ್ಮಲಾನಂದಜಿಯವರೇ ಸ್ವತಃ ಸಂನ್ಯಾಸ ದೀಕ್ಷೆಯನ್ನಿತ್ತು ‘ಸ್ವಾಮಿ ಶಾಂಭವಾನಂದ’ ಎಂಬ ಹೊಸ ಹೆಸರನ್ನು ದಯಪಾಲಿಸಿದರು.

ಪೊನ್ನಂಪೇಟೆಯಲ್ಲಿ ಆಶ್ರಮ ಸ್ಥಾಪನೆ

ಸ್ವಾಮಿ ನಿರ್ಮಲಾನಂದಜಿ ಗುಡುಗಿನಂಥ ಸಿಡಿಲಿನಂಥ ವ್ಯಕ್ತಿ. ಅವರು ಶಾಂಭವಾನಂದಜಿಯವರೊಡನೆ ೧೯೨೭ ರಲ್ಲಿ ಧರ್ಮಪ್ರಚಾರಕ್ಕಾಗಿ ಕೊಡಗಿಗೆ ಆಗಮಿಸಿದರು. ಭವ್ಯ ವ್ಯಕ್ತಿತ್ವ, ಸೊಗಸಾದ ಉಪನ್ಯಾಸ. ಸರಳ ಹೃದಯದ ಕೊಡಗಿನ ಜನ ಪ್ರಭಾವಿತರಾಗದೆ ಇನ್ನೇನು? ಕೊಡಗಿನ ಪೊನ್ನಂಪೇಟೆಯಲ್ಲಿ ರಾಮಕೃಷ್ಣಮಠದ ಶಾಖೆಯೊಂದನ್ನು ತೆರೆಯಬೇಕೆಂದು ಜನರು ಆಗ್ರಹ ಮಾಡಿದರು. ಅದಕ್ಕೆ ಬೇಕಾಗುವ ಎಲ್ಲ ಸಹಾಯವನ್ನೂ ನೀಡುವ ಭರವಸೆಯನ್ನಿತ್ತರು. ನಿರ್ಮಲಾನಂದಜಿ ಇದಕ್ಕೊಪ್ಪಿದರು. ಹೊಸ ಆಶ್ರಮವನ್ನು ಸ್ಥಾಪಿಸುವ ಮಹತ್ತರ ಹೊಣೆಗಾರಿಕೆ ಶಾಂಭವಾನಂದಜಿಯವರ ಹೆಗಲ ಮೇಲೆ ಬಿತ್ತು. ಬೇಗನೆ ಅವರು ಜನರಿತ್ತ ಜಾಗವೊಂದರಲ್ಲಿ ಹುಲ್ಲು ಛಾವಣಿಯ ಮನೆಯೊಂದನ್ನು ಕಟ್ಟಿಸಿ ವಾಸಿಸಲು ಪ್ರಾರಂಭಿಸಿದರು. ತಮ್ಮ ಅಡಿಗೆಯನ್ನು ತಾವೇ ಮಾಡಿಕೊಳ್ಳುತ್ತ, ಆಶ್ರಮದ ಕಟ್ಟಡಕ್ಕಾಗಿ ದ್ರವ್ಯಸಂಗ್ರಹ ಮಾಡಲು ತೊಡಗಿದರು. ಹಣ ಬಂದಹಾಗೆಲ್ಲ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರು.

ಅವರ ಅವಿರತ ಶ್ರಮದ ಫಲವಾಗಿ ೧೯೨೮ ರಲ್ಲೇ ಕಟ್ಟಡವೂ ಸಿದ್ಧವಾಯಿತು. ಆಶ್ರಮವನ್ನು ತೆರೆದದ್ದೂ ಆಯಿತು. ಹೊಸ ಆಶ್ರಮಕ್ಕೆ ‘‘ಶ್ರೀರಾಮಕೃಷ್ಣ-ಶಾರದಾಶ್ರಮ’’ ಎಂಬ ಹೆಸರನ್ನು ಕೊಡಲಾಯಿತು. ಈ ಹೊಸ ಆಶ್ರಮವನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯೂ ಶಾಂಭವಾನಂದಜಿಯವರ ಪಾಲಿಗೇ ಬಂತು. ಕೊಡಗಿನ ಜನರಿಗೆ, ಅದರಲ್ಲೂ ಪೊನ್ನಂಪೇಟೆಯವರಿಗೆ, ಇದರಿಂದ ತುಂಬ ಸಂತೋಷವಾಯಿತು.

ಮಲೇರಿಯಾ ನಿರೋಧ ಕಾರ್ಯ

ಆ ಕಾಲದಲ್ಲಿ ಪೊನ್ನಂಪೇಟೆಯ ಆಶ್ರಮದಲ್ಲಿ ಅವರೊಬ್ಬರೇ. ಪೂಜೆ, ಭಜನೆ, ಭಕ್ತರೊಡನೆ ಸಂದರ್ಶನ, ಆಹ್ವಾನ ಬಂದೆಡೆಯಲ್ಲೆಲ್ಲ ಭಾಷಣ-ಎಲ್ಲವನ್ನೂ ಅವರೊಬ್ಬರೇ ನಿಭಾಯಿಸಬೇಕಾಗಿತ್ತು. ಧರ್ಮ ಪ್ರಚಾರಕ್ಕಾಗಿ ಕೊಡಗಿನ ಹಳ್ಳಿಗಳಲ್ಲಿ ಊರುಗಳಲ್ಲಿ ಬಹಳವಾಗಿ ಸಂಚಾರ ಮಾಡಬೇಕಾಗುತ್ತಿತ್ತು. ಆಗ ಅವರ ಕಣ್ಣಿಗೆ ಬಿದ್ದದ್ದೇನು? ಎಲ್ಲೆಲ್ಲೂ ಮಲೇರಿಯಾ ರೋಗ! ಆ ಕಾಲದಲ್ಲಿ ಇದು ಭಯಂಕರ ರೋಗವಾಗಿತ್ತು. ಕೋಮಲ ಹೃದಯದ ಸ್ವಾಮಿಗಳು ಜನರ ಈ ಕಷ್ಟವನ್ನು ನೋಡಲಾರದಾದರು. ಇದಕ್ಕೆ ಪರಿಹಾರವನ್ನು ಕುರಿತು ತೀವ್ರವಾಗಿ ಯೋಚಿಸಲಾರಂಭಿಸಿದರು. ಮಲೇರಿಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಧ್ಯಯನ ಮಾಡಿದರು. ಜನರ ಜೀವನಕ್ರಮ, ಪರಿಸರಗಳನ್ನು ಸೂಕ್ಷ್ಮವಾಗಿ ಗಮನಿಸಲಾರಂಭಿಸಿದರು.

ಮಲೇರಿಯವು ಸೊಳ್ಳೆಗಳಿಂದ ಹರಡುವ ರೋಗ. ಆದುದರಿಂದ ಶಾಂಭವಾನಂದಜಿ ಕೊಡಗಿನ ಬಳಕೆಯ ‘ಕೊಡವ’ ಭಾಷೆಯಲ್ಲಿ ‘ಸೊಳ್ಳೆಪಾಟ’ ಎಂಬ ಲಾವಣಿಯನ್ನು ತಾವೇ ರಚಿಸಿದರು. ಇದರಲ್ಲಿ ರೋಗಕ್ಕೆ ಕಾರಣವಾದ ಕ್ರಿಮಿಗಳ, ರೋಗವನ್ನು ಹರಡುವ ಸೊಳ್ಳೆಗಳ ವಿವರಣೆಯಿಂದ ಹಿಡಿದು ಅವು ವಾಸಿಸುವ ಸ್ಥಾನ, ಅವು ಜ್ವರವನ್ನು ಹರಡುವ ರೀತಿ, ಜ್ವರವು ಬರದಂತೆ ಮಾಡಬೇಕಾದ ಮುನ್ನೆಚ್ಚರಿಕೆಯ ಕ್ರಮಗಳು, ಜ್ವರ ಬಂದರೆ ಚಿಕಿತ್ಸೆ ಇವೆಲ್ಲವನ್ನೂ ಸೊಗಸಾಗಿ ಮನಮುಟ್ಟುವಂತೆ ವಿವರಿಸಿದರು. ಈ ಲಾವಣಿಯನ್ನು ಹಾಡುವುದು ಹಾಡಿಸುವುದು, ಜೊತೆಜೊತೆಯಲ್ಲಿಯೇ ಮಾಯಾಲಾಂದ್ರದ ಮೂಲಕ ಚಿತ್ರಪ್ರದರ್ಶನ-ಇದು ಅವರ ಪ್ರಚಾರವೈಖರಿ. ಈ ಲಾವಣಿ ಬಹುಬೇಗ ಎಲ್ಲರ ಬಾಯಲ್ಲೂ ನಲಿಯತೊಡಗಿತು. ‘ಜ್ಞಾನವೇ ಶಕ್ತಿ’ ಅಲ್ಲವೇ? ಆದುದರಿಂದ ಜನಸಾಮಾನ್ಯರೂ ಇದರ ಫಲವಾಗಿ ಎಚ್ಚೆತ್ತು ಮಲೇರಿಯಾ ನಿರೋಧ ಕಾರ್ಯದಲ್ಲಿ ಯಶಸ್ವಿಯಾಗಿ ಸಹಕರಿಸಿದರು. ಸ್ವಾಮಿಗಳು ಬಡಜನರಿಗೆ ಸೊಳ್ಳೆ ಪರದೆಗಳನ್ನು ಹಂಚುವುದು, ಖಾಯಿಲೆ ತಗಲಿದವರಿಗೆ ಕ್ವಿನೈನ್‌ಗುಳಿಗೆ ಕೊಡುವುದು, ಅಲ್ಲದೆ ಜನರ ಸಹಾಯದಿಂದ ಸೊಳ್ಳೆಗಳ ವಾಸಸ್ಥಾನಗಳ ಮೇಲೆ ಡಿ.ಡಿ.ಟಿ. ಆಕ್ರಮಣ ನಡೆಸಿ ಅವುಗಳ ಸಂತಾನವನ್ನೇ ನಿರ್ನಾಮ ಮಾಡಿದರು.

ಜೇನುಸಾಕಣೆ, ಜೇನುವ್ಯವಸಾಯ

ಜಗತ್ಪ್ರಸಿದ್ಧರೂ ಜಗದ್ವಂದ್ಯರೂ ಆದ ವಿವೇಕಾನಂದ ಸ್ವಾಮಿಗಳು ತಮ್ಮ ಉಪನ್ಯಾಸಗಳಲ್ಲಿ ಮತ್ತು ಪತ್ರಗಳಲ್ಲಿ ವಿದ್ಯಾವಂತ ಭಾರತೀಯ ತರುಣರಿಗೆ ಹೀಗೆ ಕರೆಯಿತ್ತಿದ್ದಾರೆ: ‘ಮಾಯಾಲಾಂದ್ರ, ಚಿತ್ರಪಟ, ನಕಾಶೆ, ಭೂಪಟಗಳು, ರಾಸಾಯನಿಕ ವಸ್ತುಗಳು ಇತ್ಯಾದಿ ಸಲಕರಣೆಗಳ ಸಮೇತ ಹಳ್ಳಿಹಳ್ಳಿಗೂ ಹೋಗಿ ನಮ್ಮ ಜನಗಳಿಗೆ ಆಧುನಿಕ ವೈಜ್ಞಾನಿಕ ವಿಚಾರಗಳನ್ನು ಕಲಿಸಿಕೊಡಿ! ಇದರಿಂದ ಅವರ ಇಹಲೋಕದ ಬಾಳು ಹಸನಾಗಲಿ! ಹಸಿದ ಹೊಟ್ಟೆಗೆ ವೇದಾಂತದ ಉಪದೇಶ ಮಾಡುವುದು ಮಹಾಪಾಪ!’ ಈ ವಾಕ್ಯಗಳು ಶಾಂಭವಾನಂದಜಿಯವರ ಮನದಲ್ಲಿ ಸದಾ ಮೊಳಗುತ್ತಿದ್ದುವು. ಇದರ ಫಲವಾಗಿಯೇ ಅವರು ಮಲೇರಿಯದ ವಿರುದ್ಧ ಯುದ್ಧ ಹೂಡಿದ್ದು. ಇಷ್ಟರಲ್ಲೇ ವಿವೇಕಾನಂದರ ಈ ಉಪದೇಶವನ್ನು ಕಾರ್ಯಗತ ಮಾಡುವ ಮತ್ತೊಂದು ಅವಕಾಶ ಅವರಿಗೆ ಸಿಕ್ಕಿತು. ಇದು ಕೊಡಗಿನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆಯಿತು.

ಒಂದು ದಿನ ಸಂಜೆ ಆಶ್ರಮದ ತೋಟದಲ್ಲಿ ಓಡಾಡುತ್ತಿದ್ದಾಗ ಸಣ್ಣ ಜೇನುಗೂಡೊಂದು ಶಾಂಭವಾನಂದರ ಕಣ್ಣಿಗೆ ಬಿತ್ತು. ಅದೇಕೋ ಏನೋ, ಅದನ್ನು ಆಶ್ರಮದ ಒಳಗೆ ತಂದು ಹುಲ್ಲು ಛಾವಣಿಯ ಬದಿಯಲ್ಲಿರಿಸಿದರು. ಕ್ರಮೇಣ ಗೂಡು ಬೆಳೆಯುತ್ತಾ ಹೋಯಿತು. ಸ್ವಾಮೀಜಿಯವರಿಗೆ ಅದರಲ್ಲಿ ಮಮತೆಯೂ ಹೆಚ್ಚುತ್ತಾ ಹೋಯಿತು. ಸಕಾಲದಲ್ಲಿ ಅದರಿಂದ ಜೇನನ್ನು ತೆಗೆದು ಗಾಜಿನ ಸೀಸೆಯಲ್ಲಿ ತುಂಬಿಸಿ ಬೆಳಕಿನ ಕಡೆಗೆ ಹಿಡಿದಾಗ ಅದರ ಬಂಗಾರದ ಬಣ್ಣವನ್ನು ನೋಡಿ ಮಾರುಹೋದರು. ಒಮ್ಮೆಗೇ ಮನಸ್ಸಿಗೆ ಹೊಳೆಯಿತು: ಈ ಬಂಗಾರದ ಜೇನು ಕೊಡಗಿನ ಬಡವರ ಬಾಳನ್ನು ಬಂಗಾರವಾಗಿ ಮಾಡಲೊಲ್ಲದೇಕೆ? ಸಾಮಾನ್ಯ ಜನರೂ, ಹೆಂಗಸರೂ ಮಕ್ಕಳೂ ಸಹ, ಮಾಡಬಹುದಾದ ಗೃಹಕೈಗಾರಿಕೆಯಾಗಲಾರದೇ ಇದು? ಖಂಡಿತ ಸಾಧ್ಯವಿದೆ! ಹಲವು ವಿಧದ ಸಸ್ಯಸಂಪದ್ಭರಿತವಾದ ಕೊಡಗಿಗೆ ಇದೊಂದು ವರವಾಗಬಲ್ಲುದು!

ಅವರ ಮನಸ್ಸಿಗೆ ಏನಾದರೊಂದು ಹಿಡಿಸಿತೆಂದರೆ ಅದರ ಬಗ್ಗೆ ಹುಚ್ಚು ಹಿಡಿದಹಾಗೆಯೇ! ಕೂಡಲೇ ಶುರು ಮಾಡಿದರು ಜೇನು ವ್ಯವಸಾಯದ ಬಗ್ಗೆ ಆಳವಾದ ಅಧ್ಯಯನವನ್ನು. ಅಮೆರಿಕ ದೇಶವು ಈ ದಿಸೆಯಲ್ಲಿ ತುಂಬ ಮುಂದುವರಿದಿದೆ ಎಂಬುದು ತಿಳಿದ ಕೂಡಲೇ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅತ್ಯಾಧುನಿಕ ಉಪಕರಣಗಳನ್ನು ತರಿಸಿದರು. ಸ್ವಾಮಿ ವಿವೇಕಾನಂದರ ಪಾಶ್ಚಾತ್ಯ ಶಿಷ್ಯೆ ಮಿಸ್ ಮೆಕ್ಲೌಡರು ಇದಕ್ಕೆ ಎಲ್ಲಾ ಸಹಾಯವನ್ನೂ ಇತ್ತರು. ಪುಸ್ತಕಗಳನ್ನು ಅಧ್ಯಯನ ಮಾಡಿ ಅನೇಕ ಪ್ರಯೋಗಗಳನ್ನು ನಡೆಸಿದರು.

ಆಗ ಕೊಡಗಿನಲ್ಲಿ ಜೇನುವ್ಯವಸಾಯ ಹೆಚ್ಚು ಬಳಕೆಯಲ್ಲಿರಲಿಲ್ಲ. ಅದರಲ್ಲಿ ತೊಡಗಿದ್ದವರು ರಂಧ್ರಗಳನ್ನುಳ್ಳ ಮಡಕೆಗಳನ್ನು ಜೇನುಗೂಡು ಕಟ್ಟುವುದಕ್ಕಾಗಿ ಉಪಯೋಗಿಸುತ್ತಿದ್ದರು. ಗೂಡನ್ನು ಕೈಯಲ್ಲಿ ಹಿಂಡಿ ಜೇನು ತೆಗೆಯುತ್ತಿದ್ದರು. ಇದು ಅಸಹ್ಯ ಪದ್ಧತಿಯಾಗಿತ್ತು. ಹುಳುಗಳು ಕೂಡ ಅನ್ಯಾಯವಾಗಿ ಸಾಯುತ್ತಿದ್ದವು. ಇವನ್ನೆಲ್ಲ ಗಮನಿಸಿದ್ದ ಸ್ವಾಮಿಜಿ ಕೊಡಗಿನ ಸನ್ನಿವೇಶಕ್ಕೆ ತಕ್ಕಂತೆ ಗೂಡೊಂದನ್ನು ತಾವೇ ತಯಾರಿಸಿದರು. ಹಾಗೆಯೇ ಜೇನುಹುಟ್ಟುಗಳ ಅಡಿಪಾಯವನ್ನು ತಯಾರಿಸುವ ಯಂತ್ರವೊಂದನ್ನು ಅಮೆರಿಕದಿಂದ ತರಿಸಿ ಅದನ್ನು ಉಪಯೋಗಿಸುವ ಬಗ್ಗೆ ಶಿಕ್ಷಣವನ್ನೂ ಕೊಟ್ಟರು. ಅಷ್ಟೇ ಅಲ್ಲ; ಇಡೀ ಜೇನು ಕೈಗಾರಿಕೆಯ ವಿಷಯದಲ್ಲಿ ಸ್ವತಃ ಕೆಲವು ಯುವಕರಿಗೆ ತರಬೇತಿಯನ್ನು ಕೊಟ್ಟರು.

ತಮ್ಮ ಪ್ರಯೋಗದ ಫಲಗಳು ನಿಜವಾಗಿಯೂ ಜನರಿಗೆ ತಲಪಬೇಕಾದರೆ ಸಹಕಾರ ಪದ್ಧತಿಯಿಂದ ಮಾತ್ರ ಸಾಧ್ಯ ಎಂದರಿತು ೧೯೩೬ರಲ್ಲಿ ‘ಕೊಡಗಿನ ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘ’ ವನ್ನು ಸ್ಥಾಪಿಸಿದರು. ಅದರ ಮುಖ್ಯ ಕಚೇರಿಯನ್ನು ವೀರರಾಜಪೇಟೆಯಲ್ಲಿ ತೆರೆಯಲಾಯಿತು. ಸ್ವಾಮಿಗಳ ಈ ಪರಿಶ್ರಮದಲ್ಲಿ  ಪಿ.ಎಂ. ಚೆಂಗಪ್ಪನವರೂ ಪಿ.ಎಂ.ಉತ್ತಪ್ಪನವರೂ ತುಂಬ ನೆರವಾಗಿದ್ದರು.

ಸಹಕಾರ ಸಂಘವು ಸ್ವಾಮೀಜಿಯವರ ಅವಿರತ ದುಡಿತದ ಫಲವಾಗಿ ಇಡೀ ಭಾರತದಲ್ಲೇ ಪ್ರಸಿದ್ಧವಾಯಿತು. ಕೊಡಗಿನ ಜೇನು ಪರದೇಶದ ಜೇನಿಗಿಂತಲೂ ಉತ್ತಮವೆಂಬುದು ಮೈಸೂರಿನ ಕೇಂದ್ರ ಆಹಾರ ಸಂಶೋಧನಾ ಸಂಸ್ಥೆಯಲ್ಲಿ ಮಾಡಿದ ಪರೀಕ್ಷೆಗಳಿಂದ ತಿಳಿದುಬಂತು.

ನಲವತ್ತಮೂರು ವರ್ಷ ತುಂಬಿರುವ ಈ ಸಂಸ್ಥೆಯು ಈಗ ಸುಭದ್ರವಾದ ತಳಹದಿಯ ಮೇಲೆ ನಿಂತಿದ್ದರೆ ಅದಕ್ಕೆ ಶಾಂಭವಾನಂದಜಿಯವರ ಕೊಡುಗೆ ಅತ್ಯಮೂಲ್ಯ.

ಮೈಸೂರಿಗೆ

ಪೊನ್ನಂಪೇಟೆಯ ಆಶ್ರಮವನ್ನು ಕಟ್ಟಿ ಅದರ ಕೆಲಸ ಕಾರ್ಯಗಳಿಗೆ ಒಂದು ಸ್ಥಿರ ರೂಪವನ್ನು ಕೊಟ್ಟ ಸ್ವಾಮೀಜಿಯವರ ದಕ್ಷತೆ ಶ್ರೀರಾಮಕೃಷ್ಣ ಮಠದ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಯಿತು. ಆದುದರಿಂದ ಅವರು ಇವರನ್ನು  ಮೈಸೂರಿನ ಶ್ರೀರಾಮಕೃಷ್ಣಾ ಶ್ರಮಕ್ಕೆ ಅಧ್ಯಕ್ಷರನ್ನಾಗಿ ನಿಯಮಿಸಿ ೧೯೪೧ ರಲ್ಲಿ ವರ್ಗಾಯಿಸಿದರು. ಇದರಿಂದ ಕೊಡಗಿನ ಜನ ಕಣ್ಣೀರು ಕರೆದರೂ ಸ್ವಾಮಿಗಳ ಕಾರ್ಯಕ್ಷೇತ್ರವು ವಿಸ್ತಾರ ಹೊಂದಿ ದೇಶಕ್ಕೆ ಇನ್ನೂ ಹೆಚ್ಚು ಉಪಕಾರವಾಗುವುದನ್ನು ಗಮನಿಸಿ ಪ್ರೀತಿಯಿಂದ ಬೀಳ್ಕೊಟ್ಟರು.

‘ಸ್ವಾಮಿ ವಿವೇಕಾನಂದರು ಅನೇಕ ವರ್ಷಗಳ ಮುನ್ನವೇ ಮೈಸೂರು ನಮ್ಮ ರಾಮಕೃಷ್ಣ ಮಠದ ಪ್ರಬಲ ಆಶ್ರಮವಾಗುತ್ತದೆ’ ಎಂದು ನುಡಿದಿದ್ದರು. ೧೯೨೫ರಲ್ಲಿ ಮೈಸೂರಿನಲ್ಲಿ ಸ್ಥಾಪಿತವಾದ ‘ಶ್ರೀರಾಮ ಕೃಷ್ಣಾಶ್ರಮ’ವು ೧೯೩೦ರಲ್ಲಿ ತನ್ನದೇ ಆದ ಜಾಗ ಕಟ್ಟಡಗಳನ್ನು ಹೊಂದಿ ಸ್ವಲ್ಪಸ್ವಲ್ಪವಾಗಿ ಬೆಳೆಯಲು ಆರಂಭಿಸಿತು. ೧೯೩೬ರಲ್ಲಿ ಶ್ರೀರಾಮಕೃಷ್ಣ ಪರಮ ಹಂಸರ ಶತಮಾನೋತ್ಸವದ ಸಂದರ್ಭದಲ್ಲಿ ಮೈಸೂರಿನ ಭಕ್ತಾದಿಗಳ ಆಶಯದಂತೆ ಹೊಸ ಪ್ರಾರ್ಥನಾಮಂದಿರವೊಂದಕ್ಕೆ ಶಂಕುಸ್ಥಾಪನೆಯೂ ಆಯಿತು. ಆದರೆ ಹಲವು ರೀತಿಯ ತೊಂದರೆಗಳಿಂದ ಕಟ್ಟಡವು ೧೯೪೧ರಲ್ಲೂ ಮೇಲೆದ್ದಿರಲಿಲ್ಲ. ೧೯೩೨ ರಲ್ಲೇ ಪ್ರಾರಂಭಿಸಿದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಆಟವಾಡಲು ಸಾಕಷ್ಟು ಮೈದಾನವಾಗಲಿ, ಪ್ರಾರ್ಥನೆ ಓದು ಬರಹಗಳಿಗೆ ತಕ್ಕ ಸನ್ನಿವೇಶ ಅನುಕೂಲಗಳಾಗಲಿ ಇರಲಿಲ್ಲ. ಈ ಎರಡು ಕೊರತೆಗಳನ್ನು ಹೋಗಲಾಡಿಸುವುದೇ ತಮ್ಮ ಪ್ರಥಮ ಕರ್ತವ್ಯವೆಂದು ಭಾವಿಸಿ ಶಾಂಭವಾನಂದಜಿಯವರು ಕೂಡಲೇ ಕಾರ್ಯರಂಗಕ್ಕಿಳಿದರು.

ಶ್ರೀರಾಮಕೃಷ್ಣ ವಿದ್ಯಾಶಾಲೆ ನಿರ್ಮಾಣ

ಮುಂಬಯಿ ನಗರದ ‘ಮಾಸ್ಟರ್, ಸಾಠೆ ಮತ್ತು ಭೂತ’ ಎಂಬ ಪ್ರಸಿದ್ಧ ವಾಸ್ತುಶಿಲ್ಪಿಗಳಿಂದ ಆಶ್ರಮದ ಪ್ರಾರ್ಥನಾ ಮಂದಿರದ ನಕ್ಷೆಯನ್ನು ತಯಾರಿಸಿದರು. ಅದೇ ಕಾಲದಲ್ಲಿಯೇ ಮಾತ್ರೆ ಎಂಬವರ ಸಹಾಯದಿಂದ ವಿಸ್ತೃತವಾದ ವಿದ್ಯಾರ್ಥಿನಿಲಯವೊಂದನ್ನು ಕಟ್ಟಲು ಯೋಜನೆಗಳನ್ನು ಹಾಕಿಕೊಂಡರು. ‘ನಮ್ಮ ದೇಶದ ಮತ್ತು ಜನರ ಎಲ್ಲ ರೀತಿಯ ಸಮಸ್ಯೆಗಳಿಗೂ ವಿದ್ಯಾಭ್ಯಾಸವೇ ರಾಮ ಬಾಣದಂಥ ಮದ್ದು’ -ಇದು ವಿವೇಕಾನಂದರ ಮಾತು. ಈ ಮಾತು ಶಾಂಭವಾನಂದಜಿಯವರ ಮನಸ್ಸಿನಲ್ಲಿ ಸದಾ ಮೊಳಗುತ್ತಿದ್ದುದರಿಂದ ವಿದ್ಯಾಕ್ಷೇತ್ರದಲ್ಲಿ ತಮ್ಮ ಕೈಯಲ್ಲಾದಷ್ಟು ಸೇವೆ ಸಲ್ಲಿಸಬೇಕೆಂದು ಅವರಿಗೆ ಅನಿಸಿದ್ದು ಸಹಜವೇ.

ವಿದ್ಯಾರ್ಥಿಗಳ ಊಟವಸತಿಗಳಿಗೆ ಉತ್ತಮವಾದ ಮತ್ತು ನಿರ್ಮಲವಾದ ಕಟ್ಟಡವಿರಬೇಕು. ಸೊಗಸಾದ ಪ್ರಾರ್ಥನಾಲಯವಿರಬೇಕು. ಆಡಲು ವಿಶಾಲವಾದ ಆಟದ ಬಯಲುಗಳಿರಬೇಕು. ಈಜಲು ಒಳ್ಳೆಯ ಕೊಳವಂತೂ ತುಂಬ ಆವಶ್ಯಕ. ಹಾಗೆಯೇ, ತರಕಾರಿ ತೋಟ ಹೂದೋಟ ಸಹ ಇರಬೇಕಲ್ಲವೇ? ಗೋಶಾಲೆಯಿದ್ದರೆ ಮತ್ತೂ ಚೆನ್ನ! ಇದು ಅವರ ಕನಸಿನ ಸಾಮ್ರಾಜ್ಯದಲ್ಲಿ ಹೊಳೆಯುತ್ತಿದ್ದ ಯೋಜನೆ!

ಈ ಕನಸನ್ನು ನನಸಾಗಿಸಬೇಕಾದರೆ ಹಣ ಬೇಕು, ಜಾಗ ಬೇಕು, ಹತ್ತಾರು ಜನರ ಸಹಾಯ, ಸಹಕಾರ ಬೇಕು. ದೇವರಲ್ಲಿ ಅಗಾಧ ಶ್ರದ್ಧೆಯುಳ್ಳ ಸ್ವಾಮಿಗಳು ಆ ದೇವರ ಮೇಲೆಯೇ ಭಾರ ಹಾಕಿ ಕೆಲಸವನ್ನು ಪ್ರಾರಂಭಿಸಿದರು. ಬೃಹದ್ ಯೋಜನೆಗೆ ಬೃಹತ್ ಪ್ರಮಾಣದಲ್ಲಿಯೇ ಧನಸಹಾಯ ದೊರಕಬೇಕಾದ್ದರಿಂದ ಅದರ ಸಂಗ್ರಹಕ್ಕಾಗಿ ಕೆಲವು ಮಿತ್ರರ ಮೂಲಕ ಮುಂಬಯಿ ನಗರದಲ್ಲಿ ಆ ಕಾರ್ಯವನ್ನು ಕೈಗೊಂಡರು. ನಿಧಾನವಾಗಿ ಬೊಕ್ಕಸ ತುಂಬುತ್ತ ಬಂತು. ಆಗಿನ ಮೈಸೂರು ರಾಜ್ಯ ಸರಕಾರವೂ ಸಹ ಇವರ ಯೋಜನೆಯನ್ನು ಅಂಗೀಕರಿಸಿ ಸಹಾಯ ಮಾಡಲು ಮುಂದೆ ಬಂತು. ಕನ್ನಡ ನಾಡಿನ ಭಕ್ತರೂ ಸಹ ಸಹಕರಿಸಿದರು.

ಅವರಿಗೆ ಹಣಸಂಗ್ರಹಣ ಕಾರ್ಯ ಎಷ್ಟು ತ್ರಾಸದಾಯಕವಾಗಿತ್ತೊ ಅದಕ್ಕಿಂತಲೂ ಹೆಚ್ಚು ತ್ರಾಸದಾಯಕವಾಗಿತ್ತು ನಿವೇಶನಕ್ಕಾಗಿ ಜಾಗವನ್ನು ಸಂಪಾದಿಸುವುದು. ಒಂಟಿಕೊಪ್ಪಲಿನ ರೈಲ್ವೆ ಕಾಲೊನಿಯ ಸಮೀಪದಲ್ಲಿ, ಅವರು ಆರಿಸಿಕೊಂಡ ಸ್ಥಳದಲ್ಲಿ, ಸ್ವಲ್ಪ ಭಾಗವನ್ನು ಮೈಸೂರು ನಗರ ಮುನಿಸಿಪಾಲಿಟಿಯವರು ಕೊಟ್ಟಿದ್ದರು. ಆದರೆ ಉಳಿದ ಜಮೀನೆಲ್ಲ ಖಾಸಗಿ ವ್ಯಕ್ತಿಗಳ ಆಸ್ತಿಯಾಗಿತ್ತು. ಇವರಲ್ಲಿ ಎಲ್ಲೋ ಕೆಲವರು ಮಾತ್ರ ಸ್ವಾಮಿಗಳ ಯೋಜನೆಯ ಮಹತ್ತ್ವವನ್ನು ಅರ್ಥ ಮಾಡಿಕೊಂಡು ಸಹಕರಿಸಿದರು. ಇನ್ನು ಕೆಲವರು ಆದಷ್ಟು ಹೆಚ್ಚಿನ ರೊಕ್ಕಕ್ಕೆ ಮಾರಿದರು. ಕೆಲವರಂತೂ ಜಗಳಕ್ಕೇ ನಿಂತರು! ಏನೇ ಆಗಲಿ ಶಾಂಭವಾನಂದಜಿ ಇದಾವುದಕ್ಕೂ ಜಗ್ಗದೆ ನಿರಂತರ ಪ್ರಯತ್ನ ನಡೆಸಿ, ಯೋಜನೆಯನ್ನು ಪೂರ್ಣಗೊಳಿಸಲು ಬೇಕಾದ ಜಮೀನನ್ನೆಲ್ಲ ಕ್ರಮೇಣ ಸಂಗ್ರಹಿಸಿದರು.

ಈ ಜಮೀನಿನಲ್ಲಿ ಹರಿಜನರ ಬಡಾವಣೆಯೊಂದಿತ್ತು. ಸ್ವಾಮಿಗಳು ಅವರನ್ನೆಲ್ಲ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಕೂಲಿಯಾಳುಗಳನ್ನಾಗಿ ನೇಮಿಸಿಕೊಂಡರು. ಅವರಿಗೆ ಬೇರೊಂದು ಕಡೆ ಸರ್ಕಾರದಿಂದ ಸ್ವಂತ ಜಮೀನನ್ನು ಕೊಡಿಸಿ, ತಾವೇ ಖುದ್ದಾಗಿ ನಿಂತು ಇಟ್ಟಿಗೆ ಮನೆಗಳನ್ನು ಕಟ್ಟಿಸಿಕೊಟ್ಟರು. ಈ ಹೊಸ ಬಡಾವಣೆಗೆ ಒಂದು ಶಾಲೆಯನ್ನು ಮತ್ತು ಭಜನಾಮಂದಿರವನ್ನು ಸಹ ಕಟ್ಟಿಸಿಕೊಟ್ಟರು.

ಸುಮಾರು ೧೯೪೩-೪೪ರಲ್ಲಿ ಪ್ರಾರಂಭವಾದ ಕಟ್ಟಡದ ಕೆಲಸ ೧೯೪೯ರಲ್ಲಿ ಹೆಚ್ಚು ಕಡಿಮೆ ಪೂರ್ಣಗೊಂಡಿತು. ಬೇರೊಂದು ಮನೆಯಲ್ಲಿದ್ದ ವಿದ್ಯಾರ್ಥಿನಿಲಯದ ಹುಡುಗರನ್ನು ಹೊಸ ಕಟ್ಟಡಕ್ಕೆ ವರ್ಗಾಯಿಸಿದ್ದೂ ಆಯಿತು. ೧೯೪೯ನೇ ಇಸವಿ ಅಕ್ಟೋಬರ್ ೨೨ ರಂದು ಹೊಸ ಕಟ್ಟಡವನ್ನು ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರು ಉದ್ಘಾಟಿಸಿದರು. ಮೈಸೂರಿನ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭ ವಿಜೃಂಭಣೆ ಯಿಂದ ನಡೆಯಿತು.

ಆಗ ವಿದ್ಯಾಶಾಲೆಯಲ್ಲಿ ಊಟ ವಸತಿಗಳ ವ್ಯವಸ್ಥೆ ಮಾತ್ರ ಇತ್ತು. ಪೆಮರಿ ಶಾಲೆಯಿಂದ ಕಾಲೇಜಿನವರೆಗೆ ಓದುತ್ತಿದ್ದ ಹಲವು ರೀತಿಯ ವಿದ್ಯಾರ್ಥಿಗಳಿದ್ದರು. ಈ ವಿದ್ಯಾರ್ಥಿಗಳು ಹೊರಗಣ ಶಾಲಾ ಕಾಲೇಜುಗಳಿಗೆ ಹೋಗಿಬರುತ್ತಿದ್ದರು. ಆದರೆ ಪೋಷಕರ ಮತ್ತು ರಾಮಕೃಷ್ಣ ಮಠದ ಭಕ್ತರ ಒತ್ತಾಯಕ್ಕೆ ಮಣಿದು ಸ್ವಾಮಿಗಳು ೧೯೫೩ ರಲ್ಲಿ ಅಲ್ಲಿಯೇ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ಪ್ರಾರಂಭಿಸಬೇಕಾಯಿತು. ತತ್ಫಲವಾಗಿ ಕಾಲೇಜು ವಿದ್ಯಾರ್ಥಿಗಳ ವಿಭಾಗವನ್ನು ಮುಚ್ಚಬೇಕಾಯಿತು. ಪ್ರಾಚೀನ ಗುರುಕುಲಗಳ ಮಾದರಿಯಲ್ಲಿ ಶಾಲೆಯನ್ನು ನಡೆಸಬೇಕೆಂಬ ಅಭಿಲಾಷೆಯಿದ್ದದ್ದರಿಂದ ಶ್ರೀರಾಮಕೃಷ್ಣ ವಿದ್ಯಾಶಾಲೆಯನ್ನು ರೆಸಿಡೆನ್ಸಿಯಲ್ ಶಾಲೆಯನ್ನಾಗಿ ಮಾಡಿದರು. ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಅಲ್ಲೇ ವಾಸಿಸಬೇಕಾಗಿದ್ದುದರಿಂದ ಕಟ್ಟುನಿಟ್ಟಿನ ಶಿಸ್ತಿನಿಂದ ಕೂಡಿದ, ವಿದ್ಯಾರ್ಥಿಗಳ ಸರ್ವತೋಮುಖ ಉನ್ನತಿಗೆ ಸಹಾಯಕವಾಗುವಂಥ ಶಿಕ್ಷಣವನ್ನು ಕೊಡಲು ಸಾಧ್ಯವಾಯಿತು.

ವಿದ್ಯಾಶಾಲೆಯ ಅಭಿವೃದ್ಧಿಗಾಗಿ ಸ್ವಾಮಿ ವೇದಾನಂದಜಿ ಮತ್ತು ಸ್ವಾಮಿ ಪ್ರಸನ್ನಾನಂದಜಿ, ಹಾಗೂ ಪ್ರಥಮ ಮತ್ತು ದ್ವಿತೀಯ ಮುಖ್ಯೋಪಾಧ್ಯಾಯರಾಗಿದ್ದ  ಪಿ.ಎಂ.ಉತ್ತಪ್ಪ ಮತ್ತು ಕೆ.ಜಗನ್ನಾಥ್ ತುಂಬ ಶ್ರಮಿಸಿದರು.

ಶ್ರೀ ರಾಮಕೃಷ್ಣ ವಿದ್ಯಾಶಾಲೆಯು ಪ್ರಗತಿಪಥದಲ್ಲಿ ಬೇಗ ಬೇಗ ಮುಂದುವರಿಯುತ್ತ ಹೋಯಿತು. ಆಟದ ಬಯಲುಗಳು, ಕ್ರೀಡಾಂಗಣ, ಹೂವಿನ ಮತ್ತು ತರಕಾರಿಯ ತೋಟಗಳು, ಗೋಶಾಲೆ-ಎಲ್ಲವೂ ಒಂದೊಂದಾಗಿ ಬಂದವು. ೧೯೫೭ ರಲ್ಲಿ ಸೊಗಸಾದ ಈಜು ಕೊಳ ನಿರ್ಮಿತವಾಯಿತು. ಅದು ಪ್ರಧಾನಿ ಜವಹರಲಾಲ್ ನೆಹರೂ ಅವರಿಂದ ಉದ್ಘಾಟಿತವಾಯಿತು.

ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವ ೧೯೬೩-೬೪ ರಲ್ಲಿ ಪ್ರಪಂಚದಲ್ಲೆಲ್ಲ ಆಚರಿಸಲ್ಪಟ್ಟಿತಷ್ಟೆ. ಇದರ ನೆನಪಿಗಾಗಿ ಶಾಂಭವಾನಂದಜಿ ಇನ್ನೂ ಕೆಲವು ಯೋಜನೆಗಳನ್ನು ಹಾಕಿಕೊಂಡರು. ವಿದ್ಯಾಶಾಲೆಯಲ್ಲಿ ಪ್ರಿಯುನಿವರ್ಸಿಟಿ ವಿಭಾಗವನ್ನು ತೆರೆದರು. ಅದರ ಅಂಗವಾಗಿ ಹೊಸ ಲ್ಯಾಬೊರೇಟರಿಗಳ ನಿರ್ಮಾಣವಾಯಿತು. ವಿಸ್ತಾರವಾದ ಮತ್ತೊಂದು ‘ಡಾರ್ಮಿಟರಿ’ ಯನ್ನು ಸಹ ನಿರ್ಮಿಸಲಾಯಿತು. ಊಟದ ಮನೆಯನ್ನೂ ಹೊಸದಾಗಿ ಕಟ್ಟಿ ಅಡಿಗೆ ಮನೆಯನ್ನು ಸುಧಾರಿಸಲಾಯಿತು. ಶಾಲೆಯ ಉಪಾಧ್ಯಾಯರ ವಸತಿಗಾಗಿ ಎಂಟು ಮನೆಗಳನ್ನೂ ಕಟ್ಟಲಾಯಿತು.

೧೯೬೪ ರ ಪ್ರಾರಂಭದಲ್ಲಿ ಭಾರಿ ಪ್ರಮಾಣದಲ್ಲಿ ಶತಮಾನೋತ್ಸವವನ್ನು ಆಚರಿಸಲಾಯಿತು. ಇದರ ಅಂಗವಾಗಿ ಮೈಸೂರು ರಾಜ್ಯದ ಪ್ರೌಢ ಶಾಲೆಗಳ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಿ ಅನೇಕ ಬಹುಮಾನಗಳನ್ನೂ ವಿತರಣೆ ಮಾಡಲಾಯಿತು.

ಆಶ್ರಮದ ಬೆಳವಣಿಗೆ

ಆಶ್ರಮದ ಪ್ರಾರ್ಥನಾಮಂದಿರಕ್ಕೆ ೧೯೩೭ ರಲ್ಲೇ ಆಸ್ತಿಭಾರ ಹಾಕಿದ್ದರೂ ಕಟ್ಟಡವು ಮೇಲೆದ್ದಿರಲಿಲ್ಲವೆಂದು ಹಿಂದೆಯೇ ಹೇಳಿತಷ್ಟೆ. ಹೊಸದಾಗಿ ತಯಾರಿಸಿದ ನಕ್ಷೆಯ ಪ್ರಕಾರ ಈ ಕೆಲಸವೂ ವಿದ್ಯಾಶಾಲೆಯ ಕೆಲಸದೊಂದಿಗೇ ಭರದಿಂದ ಸಾಗಿತು. ವಿದ್ಯಾಶಾಲೆಯ ಕಟ್ಟಡದ ಪ್ರಾರಂಭೋತ್ಸವದ ಸಮಯದಲ್ಲಿಯೇ ಪ್ರಾರ್ಥನಾ ಮಂದಿರವನ್ನೂ ಉದ್ಘಾಟಿಸಲಾಯಿತು. ಇದು ರಾಮಕೃಷ್ಣ ಮಠದ ಮತ್ತು ಮಿಷನ್ನಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಸ್ವಾಮಿ ಮಾಧವಾನಂದಜಿ ಅವರಿಂದ ನೆರವೇರಿತು. ಸುಂದರವೂ ಪ್ರಶಾಂತವೂ ಆಗಿದ್ದ ಈ ಪ್ರಾರ್ಥನಾಮಂದಿರವು ನೆರದಿದ್ದ ಭಕ್ತರೆಲ್ಲರ ಮನಸ್ಸನ್ನೂ ಸೂರೆಗೊಂಡಿತು.

ಧರ್ಮಪ್ರಚಾರ ಕಾರ್ಯವೂ ಭರದಿಂದ ಸಾಗಿತು. ಶಾಂಭವಾನಂದಜಿಯವರ ಸಹಾಯಕರಾಗಿದ್ದ ಸೋಮನಾಥಾನಂದಜಿಯವರ ನೇತೃತ್ವದಲ್ಲಿ ಆಶ್ರಮದ ಪುಸ್ತಕ ಪ್ರಕಟನ ವಿಭಾಗವು ತೀವ್ರಗತಿಯಿಂದ ಬೆಳೆಯುತ್ತಾ ಹೋಯಿತು. ೧೯೬೬ ರಲ್ಲಿ ಆಶ್ರಮದ ಪುಸ್ತಕಭಂಡಾರಕ್ಕಾಗಿ ಹೊಸ ಕಟ್ಟಡವೂ ನಿರ್ಮಿತವಾಯಿತು. ಪುಸ್ತಕ ಭಂಡಾರವನ್ನೂ ವಿಸ್ತರಿಸಲಾಯಿತು.

ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ

ಗುರುಕುಲ ಮಾದರಿಯ ಶಿಕ್ಷಣವನ್ನು ಕೊಡುವುದಕ್ಕೆ ಸಹಕಾರಿಯಾದೀತೆಂಬ ಆಶೆಯಿಂದ ವಿದ್ಯಾಶಾಲೆಯನ್ನು ಪ್ರಾರಂಭಿಸಿದ್ದರೂ ಶಾಂಭವಾನಂದಜಿಯವರಿಗೆ ಪೂರ್ಣ ತೃಪ್ತಿ ದೊರಕಲಿಲ್ಲ. ಪರೀಕ್ಷೆಯೇ ಪ್ರಧಾನವಾದ ಈಗಿನ ಪದ್ಧತಿಯನ್ನು ಅಲ್ಲಿಂi ಅನುಸರಿಸಬೇಕಾಗಿದ್ದುದರಿಂದ ಅವರ ಆದರ್ಶಯೋಜನೆಗಳಿಗೆ ಹೆಚ್ಚು ಅವಕಾಶ ದೊರಕುತ್ತಿರಲಿಲ್ಲ. ಹಿಂದೆ ೧೯೩೮ ರಿಂದ ೧೯೪೭ ರವರೆಗೆ ರಾಮಕೃಷ್ಣಮಠದ ಅಂಗವಾಗಿ ಬೆಂಗಳೂರಿನಲ್ಲಿ ಮತ್ತು ಉದಕಮಂಡಲದಲ್ಲಿ ನಡೆಸಲಾಗಿದ್ದ ಎರಡು ವರ್ಷದ ವೇದಾಂತಕಾಲೇಜನ್ನು ಪುನರುಜ್ಜೀವನಗೊಳಿಸಬಾರದೇಕೆ? ಎಂಬ ಪ್ರಶ್ನೆಯು ಅವರನ್ನು ಆಗಾಗ್ಗೆ ಕಾಡುತ್ತಿತ್ತು.

೧೯೬೫ ರಲ್ಲಿ ದೇಶಾದ್ಯಂತ ಆದ ವಿದ್ಯಾರ್ಥಿ ಗಲಭೆಗಳಿಂದ ಮನನೊಂದ ಅವರು, ಮೊದಲು ವಿದ್ಯಾರ್ಥಿಗಳಿಗಾಗಿ ಬೇಸಗೆಯ ರಜದಲ್ಲಿ ಒಂದು ಆಧ್ಯಾತ್ಮಿಕ ಶಿಕ್ಷಣ ಶಿಬಿರವನ್ನು ನಡೆಸುವ ಪ್ರಯೋಗವನ್ನು ಕೈಗೊಂಡರು. ಹದಿನೈದು ದಿನಗಳ ಈ ಶಿಬಿರವು ೧೯೬೫ ರ ಮೇ ತಿಂಗಳಲ್ಲಿ ವಿದ್ಯಾಶಾಲೆಯ ಕಟ್ಟಡದಲ್ಲೇ ನಡೆಯಿತು. ಅವರ ನಿರೀಕ್ಷೆಯನ್ನು ಮೀರಿದಷ್ಟು ಸಂಖ್ಯೆಯಲ್ಲಿ ಕಾಲೇಜು ಹುಡುಗರು ಅರ್ಜಿ ಹಾಕಿದರು. ಉತ್ಸಾಹದಿಂದ ಬಂದರು. ಜಗತ್ತಿನ ಪ್ರಮುಖ ಧರ್ಮಗಳು, ಉಪನಿಷತ್ತುಗಳು, ಗೀತೆ, ಯೋಗ ಮೊದಲಾದ ವಿಷಯಗಳನ್ನು ಕುರಿತ ಉಪನ್ಯಾಸಗಳನ್ನು ಹುರುಪಿನಿಂದ ಕೇಳಿದರು. ಧ್ಯಾನ, ಜಪ, ಭಜನೆ, ಮೌನ ಮೊದಲಾದುವನ್ನು ಶಿಸ್ತಿನಿಂದ ನೆರವೇರಿಸಿದರು. ಜಗತ್ತಿನ ಜಂಜಡದಲ್ಲಿ ಶಾಂತಿಯನ್ನುಳಿಸಿ ಕೊಳ್ಳುವ, ಬೆಳೆಸಿಕೊಳ್ಳುವ ಹಾದಿಯನ್ನರಿತರು. ಶಿಬಿರವನ್ನು ಬಿಟ್ಟು ಹೋಗುವಾಗ ಅವರೆಲ್ಲರಿಗೆ ತುಂಬಾ ದುಃಖ.

ಈ ಶಿಬಿರದ ಯಶಸ್ಸಿನಿಂದ ಸ್ವಾಮಿಗಳಿಗೆ ಉತ್ತೇಜನವುಂಟಾಯಿತು. ಮುಂದಿನ ವರ್ಷ ಶಿಬಿರವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆಸಿದರು. ಜೊತೆಜೊತೆಗೇ ಇಂಥ ಶಿಬಿರಗಳನ್ನು ವರ್ಷದುದ್ದಕ್ಕೂ ಬೇರೆ ಬೇರೆ ವರ್ಗದ ಜನಗಳಿಗಾಗಿ ನಡೆಸಲೆಂದೇ ದೊಡ್ಡ ಯೋಜನೆಯೊಂದನ್ನು ರೂಪಿಸಿಕೊಂಡರು. ಭಾರಿ ಕಟ್ಟಡದ ನಕ್ಷೆಯನ್ನು ಮುಂಬಯಿಯ ಪ್ರಸಿದ್ಧ ವಾಸ್ತುಶಿಲ್ಪಿ ಶ್ರೀ ಡಿ.ಆರ್. ಚೌಧರಿಯವರ ಸಹಾಯದಿಂದ ತಯಾರಿಸ ಲಾಯಿತು. ಹಿಂದಿನಂತೆ ನಿಧಿಸಂಗ್ರಹಣದ ಕಾರ್ಯವನ್ನು ಪ್ರಾರಂಭಿಸಿದರು.

ಮೈಸೂರು-ಮಹಾರಾಷ್ಟ್ರಗಳ ನಡುವೆ ಗಡಿ ವಿವಾದವು ಬಹು ತೀವ್ರವಾಗಿದ್ದ ಕಾಲವದು. ಮುಂಚಿನ ಯೋಜನೆಗಳಿಗೆ ಉದಾರ ಸಹಾಯವನ್ನು ನೀಡಿದ ಮುಂಬಯಿ, ಪೂನಾಗಳಲ್ಲಿನ ಕೆಲವು ಮಹನೀಯರನ್ನು ಈ ಸಲವೂ ಬಳಿಸಾರಿದಾಗ ಅವರಿತ್ತ ಉತ್ತರದಿಂದ ಸ್ವಾಮೀಜಿಯವರಿಗೆ ಸಿಡಿಲು ಬಡಿದಂತಾಯಿತು! ‘ನೀವು ಪೂನಾದಲ್ಲಿ ಕಟ್ಟಿ ಬೇಕಾದರೆ, ಹಣ ಕೊಡುತ್ತೇವೆ. ಮೈಸೂರಿನಲ್ಲಿ ಕಟ್ಟಿದರೆ ಖಂಡಿತ ಕೊಡಲಾರೆವು!’ ನಾವೆಲ್ಲ ಭಾರತೀಯರೇ ಆದರೂ ಪ್ರಾಂತೀಯ ಭಾವನೆಯನ್ನು ಎಷ್ಟು ದೂರ ಬೆಳಿಸಿಕೊಂಡಿದ್ದೇವೆ! ನೆರೆಹೊರೆಯ ಪ್ರಾಂತದ ಜನ ಶತ್ರುರಾಷ್ಟ್ರಗಳ ಜನದಂತೆ ಪರಸ್ಪರ ದ್ವೇಷಿಸುತ್ತಿದ್ದೇವಲ್ಲ ಎಂದು ಅವರು ತುಂಬ ದುಃಖಪಟ್ಟುಕೊಂಡರು.

ಇದು ರಾಷ್ಟ್ರಹಿತದ ಯೋಜನೆಯಾದುದರಿಂದ ಕೇಂದ್ರ ಸರಕಾರವನ್ನು ಪ್ರಾಂತೀಯ ಸರಕಾರಗಳನ್ನು ಕೋರಿದರೆ ಸಹಾಯ ಬಂದೀತೆಂಬ ಆಶೆಯಿಂದ ಸ್ವಾಮೀಜಿಯವರು ಪ್ರಯತ್ನಿಸಿದರು. ಅವರ ನಿರೀಕ್ಷೆ ಸಫಲವಾಯಿತು.ಕೇಂದ್ರ ಸರಕಾರವು ಉದಾರವಾಗಿ ದ್ರವ್ಯ ಸಹಾಯ ನೀಡಿತು. ಮೈಸೂರು ಸರಕಾರ ಹಿಂದೆ ಬೀಳಲಿಲ್ಲ. ಆಂಧ್ರ, ಮಹಾರಾಷ್ಟ್ರ, ಗುಜರಾತ್ ಸರಕಾರಗಳೂ ಸಹಾಯ ಮಾಡಿದವು. ದೇಶದ ವಿವಿಧ ಭಾಗಗಳಿಂದ ಭಕ್ತರೂ ದಾನಿಗಳೂ ಉದಾರವಾಗಿಯೇ ನೆರವಿಗೆ ಬಂದರು.

೧೯೬೮ ನೆಯ ಜನವರಿ ೨೧ ರಂದು ಬೆಳಿಗ್ಗೆ ಹೊಸ ಕಟ್ಟಡದ ಶಂಕುಸ್ಥಾಪನೆಯಾಯಿತು. ಶಂಕುಸ್ಥಾಪನೆ ಮಾಡಿದವರು ಮುಂದೆ ಭಾರತದ ಪ್ರಧಾನಮಂತ್ರಿಯಾದ ಮೊರಾರ್ಜಿ ದೇಸಾಯ್. ಆಗ ಮೈಸೂರಿನ ಮುಖ್ಯ ಮಂತ್ರಿಯಾಗಿದ್ದ ನಿಜಲಿಂಗಪ್ಪನವರು ಅಧ್ಯಕ್ಷತೆ ವಹಿಸಿದ್ದರು. ‘ಶ್ರೀರಾಮಕೃಷ್ಣ ವೇದಾಂತ ಕಾಲೇಜ್’ ಎಂಬ ನಾಮಕರಣವೂ ಆಯಿತು. ವಿದ್ಯಾಶಾಲೆಯ ಬದಿಗೇ ಇದ್ದ ಜಮೀನನ್ನು ಮೈಸೂರು ನಗರಾಭಿವೃದ್ಧಿ ಸಮಿತಿಯ ಸಹಾಯದಿಂದ ಪಡೆದು ಕಟ್ಟಡವನ್ನು ಪ್ರಾರಂಭಿಸಿದ್ದೂ ಆಯಿತು.

ಈಗಾಗಲೇ ೭೩ನ್ನು ದಾಟಿದ್ದ ಸ್ವಾಮಿಗಳ ಅಂತರ್ವಾಣಿ ಹೇಳುತ್ತಿತ್ತು, ‘ಯೋಜನೆಯನ್ನು ಬೇಗ ಮುಗಿಸು!’ ಎಂದು. ವಯಸ್ಸಿನ ಪ್ರಭಾವವು ದೇಹದ ಮೇಲೆ ಈಗಾಗಲೇ ತೋರಿತ್ತು. ಇದಕ್ಕೆ ಮುಂಚೆ ೧೯೬೬ರಲ್ಲೇ ಆಗಿದ್ದ ಹೃದಯಾಘಾತವು ಅವರ ಆರೋಗ್ಯವನ್ನು ಕುಂಠಿತಗೊಳಿಸಿತ್ತು. ಆದರೂ ಅವರು ಏಕೈಕ ಮನಸ್ಸಿನಿಂದ ಕಾರ್ಯರಂಗಕ್ಕೆ ಧುಮುಕಿದರು. ಸತತವಾಗಿ ದುಡಿದರು. ತತ್ಫಲವಾಗಿ ೧೯೭೦ರ ಅಕ್ಟೋಬರಿನಲ್ಲಿ ಮತ್ತೊಮ್ಮೆ ಹೃದಯಾಘಾತವಾಗಿ ಹಾಸಿಗೆಯನ್ನೇ ಹಿಡಿದರು. ಇದೇ ಅವರ ಅಂತಿಮ ಕಾಯಿಲೆಯಾಯಿತು. ಮಧ್ಯೆ ಮಧ್ಯೆ ಚೇತರಿಸಿಕೊಂಡಂತೆ ಕಂಡರೂ, ಉತ್ತಮ ಔಷಧೋಪಚಾರಗಳ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದರೂ ಸಫಲವಾಗದೆ ೧೯೭೨ರ ಫೆಬ್ರವರಿ ೨೬ ರಂದು ರಾತ್ರಿ ಮಹಾಸಮಾಧಿಯ್ನು ಪಡೆದರು. ತಮ್ಮ ಅಚ್ಚುಕಟ್ಟಿನ ಕೊನೆಯ ಯೋಜನೆಯನ್ನು ತಮ್ಮ ಜೀವಿತ ಕಾಲದಲ್ಲಿ ಅವರಿಗೆ ಪೂರಯಿಸಲಾಗಲಿಲ್ಲ.

ಮುಂದಿನ ಅಧ್ಯಕ್ಷರಾಗಿ ನೇಮಕಗೊಂಡ ಸ್ವಾಮಿ ಸೋಮನಾಥಾನಂದಜಿಯವರು ಬಹು ಧೈರ್ಯದಿಂದ ಈ ಅಪೂರ್ಣಕಾರ್ಯಕ್ಕೆ ಹೆಗಲು ಕೊಟ್ಟು ಶ್ರಮಿಸಿ ೧೯೭೪ರ ಮೇ ತಿಂಗಳಿಗೆ ಕಟ್ಟಡದ ಕೆಲಸವನ್ನು ಪೂರೈಸಿದರು. ರಾಮಕೃಷ್ಣ ಮಠದ ಮತ್ತು ಮಿಷನ್ನಿನ ಅಧ್ಯಕ್ಷರಾದ ಸ್ವಾಮಿ ವೀರೇಶ್ವರಾನಂದಜೀ ಮಹಾರಾಜರು ಮೇ ೨೩ ರಂದು ಕಟ್ಟಡವನ್ನು ಉದ್ಘಾಟಿಸಿದರು. ಕೆಲವು ವಿಶೇಷ ಕಾರಣಗಳಿಂದ ಹಿಂದೆ ಕೊಟ್ಟಿದ್ದ ಹೆಸರನ್ನು ಬದಲಾಯಿಸಿ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಎಂದು ಪುನರ್ನಾಮಕರಣ ಮಾಡಲಾಯಿತು. ಕಟ್ಟಡಕ್ಕಾಗಿ ಹತ್ತಿರ ಹತ್ತಿರ ಮೂವತ್ತು ಲಕ್ಷ ರೂಪಾಯಿಗಳು ಖರ್ಚಾದವು.

ವಿದ್ಯಾರ್ಥಿಗಳಿಗೆ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಕೊಡುವುದನ್ನೇ ಮುಖ್ಯವಾದ ಗುರಿಯಾಗಿಟ್ಟುಕೊಂಡಿರುವ ಈ ಸಂಸ್ಥೆಯಲ್ಲಿ ಈಗ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ವಿಷಯಗಳನ್ನು ಹೊಂದಿರುವ ವಿಶೇಷ ಬಿ.ಎಡ್.ಕೋರ್ಸನ್ನೂ, ಈಗಾಗಲೇ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿರುವವರಿಗಾಗಿ ಇದೇ ವಿಷಯದ ಡಿಪ್ಲೊಮಾ ಕೋರ್ಸನ್ನೂ ನಡೆಸಲಾಗುತ್ತಿದೆ. ಇದಲ್ಲದೆ ವಿದ್ಯಾರ್ಥಿಗಳ ಸಲುವಾಗಿ ಮತ್ತು ಮಹಾಜನರ ಸಲುವಾಗಿ ಸಹ ಅಲ್ಪಾವಧಿಯ  ಆಧ್ಯಾತ್ಮಿಕ ಶಿಕ್ಷಣ ಶಿಬಿರಗಳನ್ನು ನಡೆಸಲಾಗುತ್ತಿದೆ. ಪ್ರಪಂಚದ ಮುಖ್ಯ ಧರ್ಮಗಳಿಗೆ ಸಂಬಂಧಿಸಿದಂತೆ ವಸ್ತುಪ್ರದರ್ಶನಾಲಯವೊಂದನ್ನು ತೆರೆಯಲಾಗಿದೆ.

ವ್ಯಕ್ತಿತ್ವ

ಸೇನಾಪಡೆಗೆ ಉತ್ತಮ ಅಧಿಕಾರಿಗಳನ್ನು ಒದಗಿಸಿಕೊಟ್ಟಿರುವ ಕೊಡಗು ಜಿಲ್ಲೆಯ ಜನ ಸಹಜವಾಗಿಯೇ ಕ್ಷಾತ್ರ ತೇಜಸ್ವಿಗಳು. ಕಾವಿ ಬಟ್ಟೆಗಳನ್ನು ಧರಿಸದೆ ಇದ್ದಿದ್ದರೆ ಶಾಂಭವಾನಂದಜೀಯವರನ್ನು ಕಂಡವರೆಲ್ಲ ಅವರೊಬ್ಬ ಸೇನಾಧಿಕಾರಿ ಎಂದೇ ಹೇಳಬಹುದಿತ್ತು! ದೀರ್ಘಕಾಯರೂ ಆಜಾನುಬಾಹುಗಳೂ ಆದ ಅವರಲ್ಲಿ ರಾಜಠೀವಿಯಿತ್ತು. ಸಹಜವಾಗಿಯೇ ಅವರ ಬಗ್ಗೆ ಗೌರವವೂ, ಸ್ವಲ್ಪ ಭಯವೂ ಸಹ, ಉಂಟಾಗುತ್ತಿದ್ದವು. ಆದರೆ ಹೊರನೋಟಕ್ಕೆ ಹೀಗೆ ಕಂಡರೂ ಅವರ ಹೃದಯ ಮಾತ್ರ ತುಂಬ ಮೃದು! ವ್ಯಕ್ತಿತ್ವವೇ ಆಕರ್ಷಕ.

ಅವರಿಗೆ ದೇಹದಾರ್ಢ್ಯವಿತ್ತು. ದೃಢ ಮನಸ್ಸಿತ್ತು. ತಮಗೆ ಮೆಚ್ಚಿಗೆಯಾದ ಕಾರ್ಯರಂಗಕ್ಕಿಳಿದರೆ ಹಗಲಿರುಳೆನ್ನದೆ ದುಡಿಯುತ್ತಿದ್ದರು. ಅಷ್ಟೇ ಅಲ್ಲ, ತಮ್ಮೊಡನೆ ಕೆಲಸ ಮಾಡುತ್ತಿದ್ದವರಿಂದಲೂ ಚೆನ್ನಾಗಿಯೇ ಕೆಲಸ ಮಾಡಿಸುತ್ತಿದ್ದರು. ಅವರಿಗೆ ಸೋಮಾರಿಗಳನ್ನು ಕಂಡರಾಗದು. ಅಂಥವರು ಸ್ವಾಮಿಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ, ಇಲ್ಲವೇ ಉತ್ತಮ ಕೆಲಸಗಾರರಾಗಬೇಕಾಗಿತ್ತು. ಅಥವಾ ಓಡಿ ಹೋಗಬೇಕಾಗಿತ್ತು. ಆದರೆ ನಿರ್ವಂಚನೆಯಿಂದ ಕೆಲಸ ಮಾಡುವವರನ್ನು ಕಂಡರೆ ಅವರಿಗೆ ಪ್ರಾಣ. ಅವರಿಗಾಗಿ ಏನು ಉಪಕಾರವನ್ನು ಬೇಕಾದರೂ ಮಾಡಲು ಸಿದ್ಧ.

ಒಮ್ಮೆ ಗಾರೆಯ ಕೆಲಸದವನೊಬ್ಬನು ಕಟ್ಟಡದ ಮೇಲೆ ಕೆಲಸಮಾಡಲು ಬಿಟ್ಟಿದ್ದಾಗ, ಕೆಲಸಮಾಡದೆ ಸುಮ್ಮನೆ ಕರಿಣೆಯನ್ನು ಆಚೀಚೆಗೆ ಆಡಿಸುತ್ತಿದ್ದನು. ಸ್ವಾಮಿಗಳು ದುರ್ಬೀನಿನಿಂದ ಅದನ್ನು ನೋಡಿ ಅವನನ್ನು ಕೂಡಲೇ ಕೆಲಸದಿಂದ ವಜಾಮಾಡಿದರು. ಅಡ್ಡಾದಿಡ್ಡಿಯ ಕೆಲಸವನ್ನು ಮಾಡುತ್ತಿದ್ದವರು ಸ್ವಾಮಿಗಳ ವಾಕಿಂಗ್ ಸ್ಟಿಕ್ಕಿನ ಪೆಟ್ಟಿನ ರುಚಿಯನ್ನೂ ಕೆಲವೊಮ್ಮೆ ನೋಡಿದ್ದುಂಟು! ಸಾಮಾನುಗಳನ್ನು ಕದ್ದು ಸಿಕ್ಕಿಹಾಕಿಕೊಂಡವರಿಗೆ ಶಿಕ್ಷೆಯನ್ನಿತ್ತರೂ ಅನುಕಂಪದಿಂದ ಅವರನ್ನು ಕ್ಷಮಿಸಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡ ಉದಾಹರಣೆಗಳೆಷ್ಟೊ!

ದೀನ ದಲಿತರನ್ನು ಕಂಡರೆ ಸ್ವಾಮಿಗಳ ಹೃದಯ ಕರಗಿ ನೀರಾಗಿಹೋಗುತ್ತಿತ್ತು. ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಕೂಲಿಯವರಾಗಲಿ, ಹತ್ತಿರದಲ್ಲಿದ್ದ ಹರಿಜನ ಕಾಲೊನಿಯವ ರಾಗಲಿ, ಅಥವಾ ಸಹಾಯ ಬೇಡಿ ಬಂದ ಮತ್ತಾರೇ ಆಗಲಿ ತಮ್ಮ ಕಷ್ಟದ ಸಮಯದಲ್ಲಿ ಅವರಿಂದ ಧಾರಾಳವಾಗಿಯೇ ಸಹಾಯವನ್ನು ಪಡೆಯುತ್ತಿದ್ದರು. ಅವರ ಹೃದಯದ ಔದಾರ್ಯವನ್ನರಿತ ಹಲವರು ಚಾಲಾಕಿಗಳು ಅದರ ದುರುಪಯೋಗವನ್ನು ಕೆಲವು ಸಲ ಮಾಡಿಕೊಂಡದ್ದುಂಟು!

ಸ್ವಾಮಿಗಳ ಹೃದಯವು ವಿಶಾಲವಿದ್ದಂತೆ ಅವರು ಹಾಕಿಕೊಳ್ಳುತ್ತಿದ್ದ ಯೋಜನೆಗಳು ಸಹ ಭೂಮವೇ! ಅವರ ವಿದ್ಯಾಶಾಲೆಯ ಯೋಜನೆಯನ್ನು ನೋಡಿ ಸೋಮನಾಥಾ ನಂದಜಿ, ಇದೊಂದು ‘ಆಕಾಶನಗರ’  ಎಂದು ಹಾಸ್ಯಮಾಡಿದಾಗ ಅವರಿತ್ತ ಉತ್ತರ: ‘ಯೋಜನೆಯ ಹಂತದಲ್ಲಿ ಎಲ್ಲವೂ ಆಕಾಶನಗರಗಳೇ! ಸಾಕಷ್ಟು ಕಷ್ಟಪಟ್ಟರೆ ಅವು ಘನೀಭೂತವಾಗಿ ಕೆಳಕ್ಕೆ ಇಳಿಯುತ್ತವೆ!’’ ಇಂಥ ಯೋಜನೆಗಳನ್ನು ಅವರು ಪ್ರಾರಂಭಿಸುತ್ತಿದ್ದದ್ದು ಕೂಡ ಹೇಗೆ? ಕೈಯಲ್ಲಿ ಕಾಸಿಲ್ಲದೆ! ಇದನ್ನು ಕಂಡವರಿಗೆ ಅವರು ಪುರುಷ ಸಿಂಹರು ಎನ್ನಿಸುತ್ತಿತ್ತು. ಯಾವ ಕೆಲಸ ಮಾಡಬೇಕಾ ದರೂ-ಸಣ್ಣ ಆಹ್ವಾನ ಪತ್ರಿಕೆಯನ್ನು ಪ್ರಿಂಟು ಮಾಡುವುದಾಗಲಿ, ಭಾರಿ ಕಟ್ಟಡ ಕಟ್ಟುವುದಾಗಲಿ-ಅದರಲ್ಲಿ ರಾಜಠೀವಿ, ದೊಡ್ಡಸ್ತಿಕೆ, ಇತರರಿಂದ ಹಣ ಬೇಡುವಾಗಲೂ ಹಾಗೆಯೇ. ರಾಜ ಗಾಂಭೀರ್ಯದ ಈ ‘ಭಿಕ್ಷುಕ’ ಬೇಡಿದಾಗ ಇಲ್ಲವೆನ್ನಲು ಯಾರಿಗೂ ಧೈರ್ಯ ಬರುತ್ತಿರಲಿಲ್ಲ.

ಸ್ವಾಮಿಗಳು ಕೆಲಸ ಮಾಡುತ್ತಿದ್ದ ರೀತಿಯೂ ಗಮನಾರ್ಹ. ಕೆಲಸವನ್ನು ಪ್ರಾರಂಭಿಸುವ ಮುನ್ನ ತುಂಬ ಆಲೋಚನೆ ಮಾಡಿ ವಿವರವಾದ ಯೋಜನೆ ಹಾಕಿಕೊಳ್ಳುತ್ತಿದ್ದರು. ಅವಶ್ಯವಿದ್ದ ಸಾಮಾನು ಸರಂಜಾಮುಗಳನ್ನು ಮುಂಚಿನಿಂದಲೇ ಕೂಡಿಹಾಕುತ್ತಿದ್ದರು. ಹಾಗೆಯೇ ಜನರನ್ನು ಕೂಡ ನಿಯಮಿಸಿಕೊಳ್ಳುತ್ತಿದ್ದರು. ಅವರ ಜೀವನದ ಬಹು ಭಾಗ ಭಾರಿ ಕಟ್ಟಡಗಳ ನಿರ್ಮಾಣದಲ್ಲೇ ವ್ಯಯವಾಗಿತ್ತು. ಸಹಜವಾಗಿಯೇ ಇದಕ್ಕೆ ಬೇಕಾದ ವಸ್ತುಗಳನ್ನೂ ಕುಶಲ ಕೆಲಸಗಾರರನ್ನೂ ಅವರು ಒಟ್ಟು ಮಾಡಬೇಕಾಗಿತ್ತು. ವೇದಾಂತ ಕಾಲೇಜಿನ ಕಟ್ಟಡವನ್ನು ಅವರು ಕಟ್ಟಿದ ವೈಖರಿಯಿಂದಲೇ ಅವರ ದೂರಾಲೋಚನೆ, ನಾಯಕತ್ವದ ಹಿರಿಮೆ ನಮಗೆ ಅರಿವಾಗುತ್ತದೆ. ಕಟ್ಟಡದ ಕೆಲಸ ೧೯೬೯ ರಲ್ಲಿ ಪ್ರಾರಂಭವಾದರೂ ೧೯೬೬ ರಿಂದಲೇ ಜಲ್ಲಿ, ಮರಳು, ಸುಣ್ಣಕಲ್ಲು, ಇಟ್ಟಿಗೆಯ ಮಣ್ಣು, ಮರ ಮೊದಲಾದುವನ್ನು ಸಂಗ್ರಹಿಸಲು ಮೊದಲು ಮಾಡಿದ್ದರು. ವಿದ್ಯಾಶಾಲೆಯ ಆಟದ ಬಯಲೊಂದರಲ್ಲಿ ಬೆಟ್ಟದಂತೆ ರಾಶಿರಾಶಿಯಾಗಿ ಬಂದು ಬೀಳುತ್ತಿದ್ದ ಈ ಸಾಮಾನುಗಳನ್ನು ಕಂಡವರು ‘ಓಹೋ! ಸ್ವಾಮೀಜಿ ಭಾಕ್ರಾನಂಗಲ್ ಪ್ರಾಜೆಕ್ಟನ್ನು ಮೀರಿಸುತ್ತಾರೆ ಈ ಯೋಜನೆಯಿಂದ!’ ಎಂದು ಹಾಸ್ಯ ಮಾಡುತ್ತಿದ್ದದ್ದುಂಟು! ಆದರೆ ಅವರು ಈ ರೀತಿ ಮುಂದಾಲೋಚನೆ ವಹಿಸಿದ್ದರಿಂದಲೇ ಅಷ್ಟು ಭಾರೀ ಕಟ್ಟಡವನ್ನು ಅಷ್ಟು ಕಡಮೆ ಖರ್ಚಿನಲ್ಲಿ ಕಟ್ಟಲು ಸಾಧ್ಯವಾದದ್ದು.

ಕಟ್ಟಡ ನಿರ್ಮಾಣದ ಬಗ್ಗೆ ಅವರಿಗಿದ್ದ ಪ್ರಾಯೋಗಿಕ ಜ್ಞಾನ, ನುರಿತ ಎಂಜಿನಿಯರುಗಳನ್ನೂ ದಂಗು ಬಡಿಸುವಂತಿತ್ತು.

ಅವರು ವಿದ್ಯಾಶಾಲೆಯ ವಾರ್ಷಿಕೋತ್ಸವಗಳನ್ನು ನಡೆಸುತ್ತಿದ್ದ ರೀತಿಯೂ ನೋಡಬೇಕಾದಂಥದ್ದು. ಕಾರ್ಯಕ್ರಮದ ಪ್ರತಿಯೊಂದು ಅಂಶಕ್ಕೂ ಕಾಲವನ್ನು ನಿಗದಿ ಮಾಡಿ, ಗಡಿಯಾರವನ್ನು ಎದುರಿಗಿಟ್ಟುಕೊಂಡು ಗಂಟೆಗಟ್ಟಲೆ ಅಭ್ಯಾಸ ಮಾಡಿಸುತ್ತಿದ್ದರು. ಈ ಅಭ್ಯಾಸಗಳ ಸಮಯದಲ್ಲಿ ಶಾಲೆಯ ಮಕ್ಕಳಿಗೂ ಮತ್ತು ಉಪಾಧ್ಯಾಯರಿಗೂ ಸಾಕುಸಾಕಾಗಿ ಹೋಗುತ್ತಿತ್ತು ಸ್ವಾಮಿಗಳ ಸಹವಾಸ! ಆದರೆ ಇಷ್ಟೆಲ್ಲ ಕಷ್ಟಪಟ್ಟುದರ ಫಲವಾಗಿ ವಾರ್ಷಿಕೋತ್ಸವವು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಾಲಕ್ಕೆ ಸರಿಯಾಗಿ ನಡೆಯುತ್ತಿತ್ತು.

ಕಾಲನಿಷ್ಠೆ ಸ್ವಾಮಿಗಳಲ್ಲಿದ್ದ ಮತ್ತೊಂದು ದೊಡ್ಡ ಗುಣ. ಕಾಲದ ಬೆಲೆಯನ್ನರಿತಿದ್ದ ಅವರಿಗೆ ಪ್ರತಿಯೊಂದು ಕಾರ್ಯವೂ ಕಾಲಕ್ಕೆ ಸರಿಯಾಗಿ ನಡೆಯಲೇಬೇಕಿತ್ತು. ನಡೆಯದಿದ್ದರೆ ಅದಕ್ಕೆ ಜವಾಬ್ದಾರರಾದವರಿಗೆ ಗ್ರಹಚಾರ ಬಿಡಿಸಿಬಿಡುತ್ತಿದ್ದರು! ವಿದ್ಯಾಶಾಲೆಯ ವಾರ್ಷಿಕೋತ್ಸವಕ್ಕೆ ಕೆಲವು ನಿಮಿಷಗಳು ತಡವಾಗಿ ಬಂದ ಮುಖ್ಯ ಅತಿಥಿಗಳೊಬ್ಬ ರಿಗೂ ಒಮ್ಮೆ ಸ್ವಾಮಿಗಳು ನೇರವಾಗಿ ಹೇಳಿಯೇ ಬಿಟ್ಟರು: ನೀವು ‘ತಡಮಾಡಿ ಬಂದಿದ್ದೀರಿ!’ ಇದರಿಂದಲೇ ಏನೋ ಮುಂದಿನ ವರ್ಷಗಳಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಹನೀಯರೊಬ್ಬರು ಸ್ವಾಮಿಗಳ ಗಡಿಯಾರದೊಂದಿಗೆ ತಮ್ಮ ಗಡಿಯಾರವನ್ನು ತಾಳೆನೋಡಿ ಸಮಯ ತಿದ್ದಿಕೊಂಡದ್ದೂ ಉಂಟು!

ಮುಕ್ಕಣ್ಣನಾದ ಶಿವನಿಗೆ ಕೋಪ ಹೆಚ್ಚಲ್ಲವೆ? ಶಂಭು ಎಂದರೆ ಶಿವನೂ ಹೌದು. ಅವನ ಹೆಸರನ್ನು ಹೊತ್ತಿದ್ದ ಶಾಂಭವಾನಂದಜಿಯವರೂ ಮುಂಗೋಪಿಗಳು. ಆದರೆ ರಾಮಾಯಣದ ಲಕ್ಷ್ಮಣನಂತೆ ಶೀಘ್ರವಾಗಿ ಕೋಪ ಬಂದಂತೆ ಶೀಘ್ರವಾಗಿ ಮಾಯವೂ ಆಗುತ್ತಿತ್ತು ಆ ಕೋಪ! ಇದರ ಪರಿಚಯ ಇಲ್ಲದಿದ್ದವರು ಅವರನ್ನು ಕಂಡರೆ ನಡುಗುತ್ತಿದ್ದುದುಂಟು. ಆದರೆ ಅವರ ಸ್ವಭಾವವನ್ನು ಅರಿತವರಿಗೆ ಅವರ ಕೋಪವೂ ಪ್ರಸಾದ. ಎಷ್ಟೋ ಸಲ ಕೋಪ ಹೋದ ಮೇಲೆ ಅವರು ತುಂಬ ಪಶ್ಚಾತ್ತಾಪ ಪಡುತ್ತಿದ್ದದ್ದೂ ಉಂಟು.

ಅವರ ವೈಯಕ್ತಿಕ ಜೀವನ ತುಂಬ ಸರಳವಾಗಿತ್ತು. ಶರೀರ ಧಾರಣೆಗೆ ಅವಶ್ಯವಾದ ಕೆಲವು ವಸ್ತುಗಳನ್ನುಳಿದು ಯಾವುದನ್ನೂ ಅವರು ಸಂಗ್ರಹಿಸುತ್ತಿರಲಿಲ್ಲ. ಭಕ್ತರು, ಮಿತ್ರರು ಕೊಡುವ ರೇಡಿಯೋ ಗಡಿಯಾರ ಪೆನ್ನು ಮೊದಲಾದ ಬೆಲೆ ಬಾಳುವ ವಸ್ತುಗಳನ್ನು ಆದಷ್ಟು ಬೇಗ ಇತರರಿಗೆ ದಾನ ಮಾಡಿಬಿಡುತ್ತಿದ್ದರು. ಒಮ್ಮೆ ಅವರ ಮಿತ್ರರೊಬ್ಬರು ಅವರ ಸ್ವಂತ ಆವಶ್ಯಕತೆಗಳ ಸಲುವಾಗಿ ಎಂದು ನಾಲ್ಕು ಸಾವಿರ ರೂಪಾಯಿಗಳನ್ನು ದಾನ ಮಾಡಲು ಬಂದರು. ಸ್ವಾಮಿಗಳು ನಯವಾಗಿಯೇ ಅದನ್ನು ತಿರಸ್ಕರಿಸಿಬಿಟ್ಟರು!

ತಮ್ಮ ವೈಯಕ್ತಿಕ ಸೇವೆಗಾಗಿ ಅವರು ಇತರರಿಗೆ ಎಂದೂ ತೊಂದರೆ ಕೊಟ್ಟವರಲ್ಲ. ಪ್ರೀತಿಯಿಂದ ಸೇವೆ ಮಾಡಲು ಬಂದವರನ್ನೂ ಮಧುರವಾಗಿ ನಿರಾಕರಿಸುತ್ತಿದ್ದರು. ಕಡೆಗಾಲದಲ್ಲೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಪ್ರಯತ್ನಿಸಿ ಕೆಳಗೆ ಬಿದ್ದ ಪ್ರಸಂಗಗಳೂ ಉಂಟು.

ಅವರಿಗೆ ಪರಮಹಂಸರಲ್ಲಿ ತುಂಬ ಭಕ್ತಿ, ಶ್ರದ್ಧೆ. ಶರೀರದಲ್ಲಿ ಶಕ್ತಿಯಿರುವವರೆಗೂ ತಮ್ಮ ವೈಯಕ್ತಿಕ ಪ್ರಾರ್ಥನಾದಿಗಳನ್ನು ಬಿಟ್ಟವರಲ್ಲ. ಆಶ್ರಮದಲ್ಲಿ ಸಂಜೆ ನಡೆಯುತ್ತಿದ್ದ ಆರತಿ ಭಜನೆಗಳಿಗೆ ಹಾಜರಾಗುವುದನ್ನು ಎಷ್ಟೇ ಕೆಲಸವಿದ್ದರೂ ತಪ್ಪಿಸುತ್ತಿರಲಿಲ್ಲ. ಯಾವ ಹೊಸ ಕೆಲಸ ಪ್ರಾರಂಭಿಸಬೇಕಾಗಿದ್ದರೂ ಮೊದಲು ದೇವರ ಪೂಜೆ ಆಗಲೇಬೇಕು.

ವಿದ್ಯಾಶಾಲೆಯ ಕಟ್ಟಡ ಕಟ್ಟುತ್ತಿದ್ದಾಗ ಒಮ್ಮೆ ಕೈಯಲ್ಲಿ ಹಣವಿರಲಿಲ್ಲ. ಮಾರನೆಯ ದಿನ ಸಾವಿರಾರು ರೂಪಾಯಿಗಳ ಬಟವಾಡೆ ಆಗಬೇಕಿತ್ತು. ‘ಹೇಗೆ ನಿಭಾಯಿಸುತ್ತೀರಿ?’ ಎಂದು ಯಾರೋ ಕೇಳಿದಾಗ ‘ನಮೇ ಭಕ್ತಃ ಪ್ರಣಶ್ಯತಿ! ದೇವರಿದ್ದಾನೆ!’ ಎಂದುಬಿಟ್ಟರು. ರಾತ್ರಿ ಆರಾಮವಾಗಿ ನಿದ್ರಿಸಿದರು. ಮಾರನೆಯ ದಿನ ಅನಿರೀಕ್ಷಿತವಾಗಿ ಸಹಾಯ ಒದಗಿಬಂತು!

ಆಶ್ರಮಕ್ಕೆ ಬಂದ ಅತಿಥಿಗಳಂತೂ ಅವರನ್ನೆಂದೂ ಮರೆಯಲಾಗುತ್ತಿರಲಿಲ್ಲ. ಅತಿಥಿಗಳಿಗೆ ಹೊಟ್ಟೆತುಂಬ ತಿಂಡಿತಿನಿಸುಗಳನ್ನು ಬಡಿಸುವುದರಲ್ಲಿ ಅವರಿಗೆ ತುಂಬ ಆನಂದ. ಮೈಸೂರಿಗೆ ಮೊದಲಸಲ ಬಂದವರಿಗಂತೂ ಊರು ಸುತ್ತಿಸಿ ತೋರಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದರು.

ಸ್ವಾಮಿಗಳು ಉಪನ್ಯಾಸಕಾರರಲ್ಲ, ಬರಹಗಾರರಲ್ಲ. ಆದರೆ ಅವರು ಶಾಸ್ತ್ರಗಳನ್ನಾಗಲಿ ತತ್ತ್ವಗ್ರಂಥಗಳನ್ನಾಗಲಿ ಓದಿರಲಿಲ್ಲ ಎಂದಲ್ಲ. ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿ ಟಿಪ್ಪಣಿಗಳನ್ನು ಸಂಗ್ರಹಿಸಿದ್ದರು. ತಮ್ಮ ಜ್ಞಾನವನ್ನು ಹೊರಗೆ ಪ್ರದರ್ಶಿಸುತ್ತಿರಲಿಲ್ಲ, ಅಷ್ಟೆ. ೧೯೬೮ರಲ್ಲಿ ಭಾರತೀಯ ವಿದ್ಯಾಭವನದವರು ಮುಂಬಯಿಯಲ್ಲಿ ಏರ್ಪಡಿಸಿದ್ದ ಸಮ್ಮೇಳನವೊಂದರಲ್ಲಿ ಭಾಗವಹಿಸಿ ಚೆನ್ನಾಗಿಯೇ ಮಾತನಾಡಿದ್ದರು.

ಅವರಿಗೆ ಕ್ರಿಶ್ಚಿಯನ್ ಕ್ಯಾಥೊಲಿಕರ ಮಠವ್ಯವಸ್ಥೆ ತುಂಬ ಹಿಡಿಸಿತ್ತು. ಅದರ ಬಗ್ಗೆ ಬಹು ಆಳವಾದ ಅಧ್ಯಯನ ಮಾಡಿದ್ದರು. ಅವರ ಸೆಮಿನರಿಗಳಂಥ ಸೆಮಿನರಿಯೊಂದನ್ನು ಹಿಂದೂಗಳಿಗಾಗಿ ಮಾಡಬಾರದೇಕೆ ಎಂದು ಹಲವು ಬಾರಿ ಯೋಚಿಸಿದ್ದುಂಟು.

ರಾಜಾಜಿಯವರು ಒಮ್ಮೆ ಎಂದಿದ್ದರು: ‘ವೃತ್ತ ಪತ್ರಿಕೆಗಳಲ್ಲಿ ಭಾವಚಿತ್ರ ಮತ್ತು ಭಾಷಣ ಪ್ರಕಟವಾದರೆ ಮಾತ್ರ ಆ ವ್ಯಕ್ತಿ ನಾಯಕ ಎಂದು ಭಾವಿಸಬಾರದು!’ ತಮ್ಮ ತಮ್ಮ ಕ್ಷೇತ್ರದಲ್ಲಿ ಹಿರಿಯ ಆದರ್ಶವನ್ನಿಟ್ಟುಕೊಂಡು ದುಡಿದು ಇತರರಿಗೆ ದಾರಿ ಬೆಳಕಾಗುವವರೆಲ್ಲ ನಾಯಕರೇ. ಹೊರಗಿನ ಪ್ರಪಂಚಕ್ಕೆ ಹೆಚ್ಚು ಪ್ರಸಿದ್ಧರಲ್ಲದಿದ್ದರೂ ಸ್ವಾಮಿ ಶಾಂಭವಾನಂದಜಿ ಇಂಥ ನಾಯಕರಾಗಿದ್ದರು. ಅವರು ಕಟ್ಟಿ ಪೋಷಿಸಿದ ವಿದ್ಯಾಸಂಸ್ಥೆಗಳೆರಡೂ ಇಂದು ನೂರಾರು ಜನರಿಗೆ ಮಾರ್ಗದರ್ಶನ ಮಾಡುತ್ತಿವೆ.