ಶಂಕೆ ಬೆಂಕಿಯ ದಾರಿಯನು ತುಳಿದು,
ಅರಮನೆಯ ಹೆಬ್ಬಾಗಿಲನು ಹೊಸ ಮದುವೆ ಹೆಣ್ಣು ದಾಟಿ
ಜ್ವಲಿಸುವಾಸ್ಥಾನದಲಿ ಬಂದು ನಿಂತಾಗ
ಪರಿಚಿತದ ಮುಖದಲಿ ಪ್ರಶ್ನೆಗಳ ಕೊಂಕು !
ಕರೆತಂದ ಪರಿಜನಕೆ ಬೆರಗಿನ ಮುಳ್ಳು ;
ಕೈಹಿಡಿದು ಮರೆತವನ ಎದೆಯಲೇನೋ ಕೊರಗು.
ಯಾರಿವಳು? ಪ್ರಶ್ನೆಗುತ್ತರದ ಬೆಳಕಿಲ್ಲ.
ಹೊಗೆ ಕವಿದ ಕಾಳ್ಕಿಚ್ಚಿನಡವಿಯ ನಡುವೆ
ಹೋಮಧೂಮ !

ಉಂಗುರದ ಬೆರಳನು ಸವರಿ ಬೆಚ್ಚಿದಳಬಲೆ :
ಇದ್ದ ಸೇತುವೆ ಮುರಿದು ದಾರಿಯಿಲ್ಲ.
ಭೋರ್ಗರೆವ ಹೊನಲನೀಸುವುದೆ ನೆನಪಿನ ದೋಣಿ ?
ಕೊಂಕು ನಗೆಗಳ ಮೊಳಗು ಸುತ್ತಮುತ್ತ.

ಸುತ್ತ ಕಣೆ ಹೂಡಿರಲು, ದಿಕ್ಕು ತಪ್ಪಿದ ಜಿಂಕೆ ;
ದೇಗುಲದ ಮೂಲೆಯಲಿ ದೀಪವಾರಿದ ಮೇಲೆ
ನಿಂತ ದೀಪದ ಮಲ್ಲಿ !
ಹಿಂದು ಮುಂದಿನ ಕೊಂಡಿ ಕಳಚಿ ಜಾರಿದ ಮುತ್ತು,
ಎತ್ತಿ ಕಟ್ಟುವರುಂಟೆ ಹಾರದಲ್ಲಿ ?

ಪ್ರಶ್ನೆಗುತ್ತರವೆಲ್ಲಿ?
ನಗರದಿಂದ ಕಣ್ವಾಶ್ರಮದ ತನಕ ಸಂಶಯರಾತ್ರಿ ;
ತೌರೂರ ದಾರಿಯಲಿ ಕಲ್ಲು ಮುಳ್ಳು !
ಆ ಶಚೀತೀರ್ಥದಲಿ ಮಾತ್ರ, ಮತ್ಸ್ಯಪ್ರಪಂಚದಲಿ
ಎಂಥದೋ ಕುಡಿಮಿಂಚು ಒಳಗು ಹೊರಗೂ !