ದಾವಿಡ ಭಾಷೆ ಮನೆತನದಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿರುವ, ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ತಮಿಳಿನ ನಂತರ ಶಾಸ್ತ್ರೀಯ ಸ್ಥಾನಮಾನಕ್ಕೆ ಪಾತ್ರವಾದ ಕನ್ನಡ ಭಾಷೆಯ ಅಧ್ಯಯನದ ದೃಷ್ಟಿಯಿಂದ ಹಾಗೂ ಅದರ ಆಳದ ನೆಲೆಯಿಂದ ಮಹತ್ತರವಾದ ಸ್ಥಾನವನ್ನು ಪಡೆದಿದೆ. ಇಂತಹ ಕನ್ನಡದ ಪ್ರಾಚೀನತೆಯು ಸುಮಾರು ೨೦೦೦ ವರ್ಷಗಳ ಹಿಂದಿನದೆಂದು ವಿದ್ವಾಂಸರ ಸಾಕ್ಷ್ಯಾಧಾರಗಳಿಂದ ತಿಳಿದುಬಂದಿದೆ.

ಅಶೋಕನ ಬ್ರಹ್ಮಗಿರಿ ಶಿಲಾಶಾಸನದಲ್ಲಿ ಕ್ರಿ.ಪೂ. ೨೫೨ರಲ್ಲಿ ಅಂದರೆ ಕ್ರಿ.ಪೂ. ೩ನೇ ಶತಮಾನದಲ್ಲಿ ಕಂಡ ‘ಇಸಿಲ’ ಎಂಬ ಪದ ಕನ್ನಡದ ಪ್ರಾಚೀನತೆಯನ್ನು ಹೇಳುತ್ತದೆ. ಇದಲ್ಲದೆ ಮಹಾಕಾವ್ಯವಾದ ‘ಮಹಾಭಾರತ’ದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳಿವೆ. ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗ ಇಲ್ಲವೆ ಶ್ರೀವಿಜಯ ವಿರಚಿತವೆಂದು ಹೇಳಲ್ಪಡುವ ‘ಕವಿರಾಜಮಾರ್ಗ’ದಲ್ಲಿ ‘ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕರುನಾಡು’ ಎಂದು ಸೂಚಿಸಲ್ಪಟ್ಟರೆ, ೯ನೇ ಶತಮಾನದ ಶಿವಕೋಟ್ಯಾಚಾರ್ಯ ತನ್ನ ‘ವಡ್ಡಾರಾಧನೆ’ಯ ಕಥೆಗಳಲ್ಲಿ ಕರುನಾಡಿನ ಸಾಮಾಜಿಕ, ಧಾರ್ಮಿಕ ಮತ್ತು ಆಡಳಿತಾತ್ಮಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾನೆ.

ಇತ್ತೀಚೆಗಷ್ಟೇ ಕನ್ನಡದ ಪ್ರಾಚೀನತೆಯ ಬಗ್ಗೆ ಮಾತನಾಡುತ್ತಾ, ತಮಿಳಿನ ಭಾಷಾ ವಿದ್ವಾಂಸರಾದ ಡಾ. ಐರಾವತಂ ಮಹಾದೇವನ್ ಕ್ರಿ.ಪೂ. ೨ನೇ ಶತಮಾನದಿಂದ ಕ್ರಿ.ಶ. ೪ನೇ ಶತಮಾನದವರೆಗೆ ಹೇಗೆ ತಮಿಳು ಭಾಷೆಯ ಮೇಲೆ ಹಳಗನ್ನಡ ಪದಗಳ ಪ್ರಭಾವವಿದೆ ಎಂಬುದನ್ನು ಗುರುತಿಸಿದ್ದಾರೆ. ಅಲ್ಲದೆ ೨ನೇ ಶತಮಾನದ ಗ್ರೀಕ್ ದಾಖಲೆಗಳಲ್ಲೂ ಸಹಾ ಲೇಸು, ಆಡಿಸು, ಕುಡಿಸು, ಲಲ್ಲೆ ಮುಂತಾದ ಪದಗಳ ಬಳಕೆ ಇರುವುದನ್ನು ಕಾಣಬಹುದು. ಇದಲ್ಲದೆ, ಐಗುಪ್ತ ದೇಶದ ಭೂಗೋಲ ಶಾಸ್ತ್ರಜ್ಞ ಪ್ತೊಲೆಮಿ ಬಳಸಿದ ‘ಕಲ್ಲಿಗೇರಿಸ್’ ಎಂಬ ಶಬ್ದದಲ್ಲಿ, ೨ನೇ ಶತಮಾನದ ಹಾಲನ ‘ಗಾಥಾ ಸಪ್ತಶತಿ’ಯಲ್ಲಿ ಬಳಕೆಯಾದ ‘ತುಪ್ಪ’ ಮತ್ತು ‘ಪೊಟ್ಟೆ’ ಇತ್ಯಾದಿ ಪದಗಳಲ್ಲಿ, ತೊಲ್ಗಾಪ್ಪಿಯಂನಲ್ಲಿ ‘ಅವೈಯಾರ್’ ಬಳಸಿದ ‘ಕರುನಾಟರ್’ ಎಂಬ ಪದದ ಬಳಕೆಯಲ್ಲಿ ಕನ್ನಡದ ಪ್ರಾಚೀನತೆಯನ್ನು ಗುರುತಿಸಬಹುದಾಗಿದೆ.*

ಹೀಗೆ ಕನ್ನಡದ ಭಾಷೆ ಹಾಗೂ ವರ್ಣಮಾಲೆಗಳ ಬಳಕೆ ಕ್ರಿಸ್ತ ಪೂರ್ವದಿಂದಲೇ ಬಳಕೆಯಾಗುತ್ತಿತ್ತು ಎಂಬುದಕ್ಕೆ ನಮಗೆ ಅನೇಕ ಆಧಾರಗಳು ದೊರೆಯುತ್ತವೆ. ಇಂಥ ವರ್ಣಮಾಲೆಯನ್ನು ಬಳಸಿ ಅದೆಷ್ಟೋ ಕೆಲಸಗಳು ನಮ್ಮಲ್ಲಿ ಆಗುತ್ತಿವೆ. ಈ ವರ್ಣಮಾಲೆ ಕಾಲ ಕಳೆದಂತೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅಸ್ತಿತ್ವದಲ್ಲಿದೆ.

ಇಂತಹ ಕನ್ನಡ ಭಾಷೆ ಮತ್ತು ಕನ್ನಡ ವರ್ಣಮಾಲೆಯನ್ನು ಬಳಸಿಕೊಂಡು ಬೋಧನಾ ತತ್ತ್ವಕ್ಕೆ ಅನುಗುಣವಾಗಿ ಮಕ್ಕಳ ಮನಸ್ಸನ್ನು ಸುಲಭವಾಗಿ ನಾಟುವ ಹಾಗೂ ವಿಭಿನ್ನ ರೀತಿಯಲ್ಲಿ ಮಕ್ಕಳಲ್ಲಿ ‘ವರ್ಬಲ್ ರೀಸನಿಂಗ್’ ಅನ್ನು ಬೆಳೆಸುವ, ಒಂದು ವಿಶಿಷ್ಟ ಪ್ರಯೋಗಕ್ಕೆ ಈ ಹೊತ್ತಿಗೆಯಲ್ಲಿ ಕೈ ಹಾಕಲಾಗಿದೆ.

ಇದು ಕೇವಲ ಕನ್ನಡ ವರ್ಣಮಾಲೆಯನ್ನು ವಿಭಿನ್ನವಾಗಿ ಬಳಸುವ ಹಾಗೂ ಕನ್ನಡ ಭಾಷೆಯ ಉನ್ನತಿಗಾಗಿ ಅಥವಾ ಬಡ್ತಿಗಾಗಿ ನಡೆಸಿರುವ ಒಂದು ಪ್ರಯತ್ನವಷ್ಟೇ. ಕನ್ನಡ ವರ್ಣಮಾಲೆಯನ್ನು ಬಳಸಿ ರಚಿಸಿರುವ ಈ ಕೃತಿ ವಿದ್ವತ್ ಪ್ರಪಂಚಕ್ಕಲ್ಲ, ಸಾಮಾನ್ಯ ಜನರಿಗೆ.

ಇಲ್ಲಿ ರಚಿಸಲ್ಪಟ್ಟಿರುವ ‘ವರ್ಬಲ್ ರೀಸನಿಂಗ್’ ಕೇವಲ ವರ್ಣಮಾಲೆಯನ್ನಷ್ಟೇ ಬಳಸಿ ರಚಿಸಲ್ಪಟ್ಟಿರುವುದಿಲ್ಲ. ಇದನ್ನು ಮೀರಿ ಮುಂದೆ ಇದು ಅನೇಕ ಸಾಧ್ಯತೆಗಳನ್ನು ಪಡೆಯುತ್ತದೆ. ಅಲ್ಲದೆ ಅಂಥ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತದೆ. ಇದು ಕೇವಲ ಒಂದು ಬಗೆಯ ಆಲೋಚನಾ ವಿಧಾನವಷ್ಟೇ. ಇಂತಹ ಅನೇಕ ಆಲೋಚನೆಗಳಿಗೆ ದೀವಿಗೆಯಷ್ಟೇ ಎಂಬುದು ನಮ್ಮ ಸವಿನಯ ಬಿನ್ನಪ.

ಇಲ್ಲಿ ಪ್ರಮುಖವಾಗಿ ಐದು ಅಭ್ಯಾಸಗಳನ್ನು ನೀಡಲಾಗಿದೆ. ಈ ಅಭ್ಯಾಸಗಳೆಲ್ಲಾ ವರ್ಣಮಾಲೆ, ಸಂಖ್ಯೆ ಮತ್ತು ದೇಶ್ಯ-ಅನ್ಯದೇಶ್ಯ ಪದಗಳನ್ನು ಒಳಗೊಂಡಿದೆ. ಅವುಗಳನ್ನು ಸೂಕ್ಷ್ಮವಾಗಿ ಸ್ವರಗಳು, ಯೋಗವಾಹಗಳು, ವರ್ಗೀಯ, ಅವರ್ಗೀಯ ವ್ಯಂಜನಗಳು ಮತ್ತು ಗುಣಿತಾಕ್ಷರ ಅಥವಾ ಕಾಗುಣಿತಗಳೆಂದು ವಿಂಗಡಿಸಿಕೊಂಡು ಈ ಅಭ್ಯಾಸಗಳನ್ನು ರಚಿಸಲಾಗಿದೆ. ಇಲ್ಲಿಯೂ ಒಳವಿನ್ಯಾಸದಲ್ಲಿ ಬರುವ ಹ್ರಸ್ವಸ್ವರ, ದೀರ್ಘಸ್ವರ, ಅನುಸ್ವಾರ, ವಿಸರ್ಗ, ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕಗಳನ್ನು ಗಮನಿಸಿ ಅದನ್ನು ಬಳಸಿಕೊಳ್ಳುವಾಗ ಜತನ ವಹಿಸಲಾಗಿದೆ.

ಈ ಅಭ್ಯಾಸವನ್ನು

೧. ಅಕ್ಷರ ಅಥವಾ ವರ್ಣಮಾಲೆ
೨. ದೇಶ್ಯ ಹಾಗೂ ಅನ್ಯದೇಶ್ಯ
೩. ಕಾಗುಣಿತ ಮತ್ತು ಸ್ವರ
೪. ಪುನರಾವೃತ್ತಿ ಮತ್ತು ಅಕ್ಷರಲೋಪ
೫. ಸಂಖ್ಯೆಗಳು ಮತ್ತು ಕಾಗುಣಿತ

ಹೀಗೆ ಐದು ಪ್ರಧಾನ ಭಾಗದಲ್ಲಿ ವರ್ಗೀಕರಿಸಿಕೊಳ್ಳಲಾಗಿದೆ. ಪ್ರತಿಭಾಗವೂ ೪೦ ಅಭ್ಯಾಸ ಪ್ರಶ್ನೆಗಳನ್ನು ಒಳಗೊಂಡಿದ್ದು, ಈ ಪ್ರಶ್ನೆಗಳನ್ನು ೪ ಪ್ರಶ್ನೆ = ೧ ಭಾಗದಂತೆ, ೧೦ ಉಪಭಾಗದಲ್ಲಿ ವಿಂಗಡಿಸಿಕೊಳ್ಳಲಾಗಿದೆ. ಮುಂದೆ ಇದನ್ನು ಅಭ್ಯಾಸದ ಅನುಕೂಲಕ್ಕಾಗಿ ಮೊದಲಿಗೆ ಚರ್ಚಿಸುತ್ತಾ ಆನಂತರ ಅಭ್ಯಾಸವನ್ನು ಕ್ರಮವಾಗಿ ನೀಡಲಾಗಿದೆ. ವಿಶೇಷವಾಗಿ ದೇಶ್ಯ, ಅನ್ಯದೇಶ್ಯ ಪದಗಳು, ಕಾಗುಣಿತ ಮತ್ತು ಸ್ವರಗಳು, ಸಂಖ್ಯೆಗಳನ್ನು ಬಳಸಿ ಈ ಭಾಗಗಳು ರಚನೆಯಾಗಿವೆ. ಇದು ಬುದ್ಧಿವಂತ ವಿದ್ಯಾರ್ಥಿಗಳ ಭಾಷಾವಿಜ್ಞಾನ ಬೆಳೆಯಲು ಉಪಯುಕ್ತ ಅಂಶವೆಂದು ಭಾವಿಸುತ್ತೇವೆ.

ಇದು ನಮ್ಮ ಮೊದಲ ಪ್ರಯತ್ನವಷ್ಟೇ. ವರ್ಣಮಾಲೆಯನ್ನು ಬಳಸಿ ಕನ್ನಡದಲ್ಲಿ ಒಂದು ಹೊತ್ತಿಗೆಯನ್ನು ತಯಾರಿಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ಅದನ್ನು ಸಾಧನ ಸಾಮಗ್ರಿಯಾಗಿ ಬಳಸಲು ಇಲ್ಲಿ ಆಲೋಚಿಸಲಾಗಿದೆ. ಈ ಹೊತ್ತಿಗೆಯಲ್ಲಿ ಕನ್ನಡ ವರ್ಣಮಾಲೆಯ ಸಾಧ್ಯತೆಗಳನ್ನು ತಿಳಿಸಲು ಪ್ರಯತ್ನಿಸಲಾಗಿದೆ. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಆಡಳಿತಾತ್ಮಕವಾಗಿ ಇದು ಬಳಸಲ್ಪಟ್ಟರೆ ಇದರ ಸಾರ್ಥಕ್ಯತೆ ಇದೆ ಎಂಬುದು ನಮ್ಮ ಕಳಕಳಿ. ಇದು ಒಂದು ಸಾಧನ ಸಾಮಗ್ರಿಯಾಗಿ ಮುಂದೆ ಬಳಸಲ್ಪಡುವ ಸಾಧ್ಯತೆಗಳು ಹೇರಳವಾಗಿದೆ.

ಇದರ ಮುಖ್ಯ ಗುರಿ ಕನ್ನಡ ಭಾಷೆಯಲ್ಲೇ ಕನ್ನಡ ಪತ್ರಿಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಳಸುವುದು ಮತ್ತು ಕನ್ನಡ ವರ್ಣಮಾಲೆಯ ಸಾಧ್ಯತೆಯನ್ನು ಮುಂದಿನ ಪೀಳಿಗೆಗೆ ತಿಳಿಸುವುದಾಗಿದೆ. ಯಾರು ಕನ್ನಡ ಭಾಷೆಯನ್ನು ಅರ್ಥೈಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಪ್ರಯತ್ನಿಸುತ್ತಾರೋ ಅಂತಹ ವ್ಯಕ್ತಿಗಳಿಗೆ ಈ ಹೊತ್ತಿಗೆ.

ಭಾಷೆ ಬಹಳ ವಿಸ್ತಾರವಾದುದು, ಪ್ರಯೋಗಗಳು ಅಗಣಿತವಾದುದು. ಇದರಲ್ಲಿ ವೈಗುಣ್ಯಗಳು ಅಪ್ಪಿ ತಪ್ಪಿ ಉಳಿದಿದ್ದರೆ, ಅದನ್ನು ಸಹೃದಯರು ತಿಳಿಸಿದರೆ, ಪುನಃ ಪರಿಶೀಲಿಸಿ ಆ ತಪ್ಪುಗಳನ್ನು ಸರಿಪಡಿಸಲಾಗುವುದು.

* Expert’s Report submitted to the Government of Karnataka on the subject of the Recognition of Kannada as a Classical Language. Dept. of Kannada and Culture. Govt of Karnataka.