ಈ ಹೊತ್ತಿಗೆ ರಚನೆಯ ಕಾರ್ಯವನ್ನು ಕೈಗೆತ್ತಿಕೊಳ್ಳಲು ಪ್ರೇರಕ ಮತ್ತು ಪೋಷಕರಾದವರು ಅನೇಕ ಮಂದಿ. ಇದು ಒಟ್ಟಾರೆಯಾಗಿ ಕನ್ನಡ, ತಮಿಳು, ತೆಲುಗು ಮತ್ತು ಆಂಗ್ಲ ಭಾಷೆಯಲ್ಲಿ ಬರಬೇಕೆಂದು ನಿಶ್ಚಯಿಸಿದ ನಂತರ ಈ ಕೆಲಸವನ್ನು ಆದಷ್ಟು ಬೇಗ ಮಾಡಿ ಮುಗಿಸಲು ಪ್ರೋತ್ಸಾಹಿಸಿದವರು, ಆ ಮುಖೇನ ಈ ಹೊತ್ತಿಗೆಯನ್ನು ಪ್ರಕಟಿಸಲು ತಮ್ಮ ಇಚ್ಛೆ ವ್ಯಕ್ತಪಡಿಸಿದವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎ. ಮುರಿಗೆಪ್ಪನವರು. ಅವರಿಗೆ ನಾವು ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಈ ಕಾರ್ಯದಲ್ಲಿ ತಮ್ಮ ಉತ್ಸಾಹವನ್ನು ಪ್ರಕಟಿಸುತ್ತಾ ದ್ರಾವಿಡ ಭಾಷೆಗಳಲ್ಲಿ ಇಂತಹ ಕೆಲಸವನ್ನು ನಡೆಸಲು ಉತ್ಸುಕರಾದವರು ದ್ರಾವಿಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕಡಪ ರಮಣಯ್ಯನವರು. ಅವರಿಗೆ ನಮ್ಮ ಸವಿನಯ ವಂದನೆ.

ಯಾವುದೇ ಕೆಲಸಕ್ಕಾದರೂ ಕಾರ್ಯಕಾರಣ ಸಂಬಂಧವಿರಬೇಕು. ಸ್ಫೂರ್ತಿ ಇರಬೇಕು. ಇಂತಹ ಸ್ಫೂರ್ತಿಯನ್ನು ನೀಡುತ್ತಾ ನಿರಂತರ ಭಾಷೆಗಳ ಉಳಿವಿಗೆ ಶ್ರಮಿಸುತ್ತಿರುವ ಹಾಗೂ ದ್ರಾವಿಡ ಭಾಷೆಗಳಿಗಾಗಿ ವಿಭಾಗಗಳನ್ನು ತೆಗೆದು, ಆ ಮುಖೇನ ದ್ರಾವಿಡ ಭಾಷಾಪ್ರೇಮ ಮೆರೆದ ಸ್ಫೂರ್ತಿದಾಯಕ ಚಿಲುಮೆ, ದ್ರಾವಿಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಗಂಗಿಶೆಟ್ಟಿ ಲಕ್ಷ್ಮೀನಾರಾಯಣ ಅವರಿಗೆ ನಮ್ಮ ಸವಿನಯ ವಂದನೆ.

ಇಷ್ಟೇ ಅಲ್ಲದೆ, ಈ ಕಾರ್ಯವನ್ನು ಕೈಗೊಂಡಾಗಿನಿಂದ ನಿರಂತರವಾಗಿ ನಮ್ಮೊಂದಿಗೆ ತಮ್ಮ ಸಂವಹನವನ್ನು ಇಟ್ಟುಕೊಂಡು ಅದಕ್ಕೆ ನೀರೆರೆದು, ಪರ್ಯಾಯ ಆಲೋಚನೆಗಳನ್ನು ನಮ್ಮಲ್ಲಿ ಹರಿಯುವಂತೆ ಮಾಡಿದ ಹೈದರಾಬಾದ್ ವಿಶ್ವವಿದ್ಯಾಲಯದ ಪ್ರೊ. ಉಮಾಮಹೇಶ್ವರರಾವ್ ಅವರಿಗೆ, ಮದ್ರಾಸ್ ವಿಶ್ವವಿದ್ಯಾಲಯದ ಪ್ರೊ. ರಾಮಸ್ವಾಮಿಯವರಿಗೆ, ಅಣ್ಣಾಮಲೈ ವಿಶ್ವವಿದ್ಯಾಲಯದ ಪ್ರೊ. ರಾಜಶೇಖರ್‌ ನಾಯರ್ ಅವರಿಗೆ, ರೇಣುಕಾಚಾರ್ಯ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೊ. ಸಿ.ಯು. ಮಂಜುನಾಥ್ ಅವರಿಗೆ ನಾವು ಆಜೀವ ಚಿರಋಣಿಗಳು.

ಈ ಹೊತ್ತಿಗೆಯನ್ನು ಏಕಕಾಲದಲ್ಲಿ ತಮಿಳಿನಲ್ಲಿ ಡಾ. ಗಣೇಶನ್ ಅಂಬೇಡ್ಕರ್, ತೆಲುಗಿನಲ್ಲಿ ಡಾ. ಚೆನ್ನಕೇಶವಮೂರ್ತಿ ತರಲು ನಿಶ್ಚಯಿಸಿದ್ದಾರೆ. ಇನ್ನು ಈ ಕನ್ನಡದ ಹೊತ್ತಿಗೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳ ಕಾರಣದಿಂದ ಪ್ರಕಟಗೊಳ್ಳುತ್ತಿದೆ. ಇಂತಹ ಆಲೋಚನೆಗೆ ಮತ್ತು ಯೋಜನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾದ ಎಲ್ಲಾ ಸಹೃದಯರಿಗೆ, ವ್ಯಕ್ತಿಗತವಾಗಿ ಸಹಕಾರ ನೀಡಿದ ಟಿ.ಎಸ್. ನರಸಿಂಹ ಪ್ರಸಾದ್ ಅವರಿಗೆ ನಮ್ಮ ಧನ್ಯವಾದಗಳು.

ಡಾ. ಎಸ್. ಲಕ್ಷ್ಮೀದೇವಿ
ಡಾ. ಗಣೇಶನ್ ಅಂಬೇಡ್ಕರ್