ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ-ಕನ್ನಡಿಗ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡದ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ. ಕರ್ನಾಟಕತ್ವದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ, ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಿಸಿ ವಿವರಿಸಬೇಕಾಗಿದೆ. ಅಂದರೆ : ದೇಸಿ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿ ರೂಪುಗೊಂಡಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಇದು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲ ವಲಯಗಳಲ್ಲಿ ಕನ್ನಡದ ಅನುಷ್ಠಾನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾದರಿ’ಯ ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್‌ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲಿಕ್ಕೆ ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನಾರು ವರ್ಷಗಳಿಂದ ಈ ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತಾ, ವಿವರಿಸುತ್ತಾ ಬಂದಿದೆ. ಅಂದರೆ:ಕನ್ನಡದ ಅರಿವಿನ ವಿಕೇಂದ್ರೀಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಕನ್ನಡದ ಹತ್ತಾರು ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಕುರಿತು ಸಾಮಾನ್ಯ ಓದುಗರಿಗೆ ಅರಿವನ್ನು ನೀಡಲು ಮಂಟಪಮಾಲೆಯಲ್ಲಿ ಕಿರುಪುಸ್ತಕಗಳನ್ನು ಪ್ರಕಟಿಸುತ್ತಿದೆ.

ಶಾಬ್ದಿಕ ತರ್ಕ (ವರ್ಬಲ್ ರೀಸನಿಂಗ್) ಎಂಬುದು ಬುದ್ಧಿಗೆ ಹಾಗೂ ಮಾನಸಿಕ ಜಾಗೃತಿಕ ಸಂಬಂಧಿಸಿದ ಸಂಗತಿ. ಭಾಷಾ ಘಟಕಗಳ ಸಾಹಚರ್ಯ ಹಾಗೂ ಸಂಬಂಧವನ್ನು ತಾರ್ಕಿಕವಾಗಿ ಗುರುತಿಸುವ ಕ್ರಿಯೆಗೆ ಇದನ್ನು ಸಂಬಂಧಿಸಬಹುದಾಗಿದೆ. ವಿವಿಧ ಘಟಕಗಳ ನಡುವಿನ ಸಾಮ್ಯ ಅಥವಾ ವೈಷಮ್ಯವನ್ನು ಗುರುತಿಸುವಲ್ಲಿ ಮನಸ್ಸನ್ನು ಕ್ರಿಯಾಶೀಲವಾಗಿಸುವ ಪ್ರಕ್ರಿಯೆ ಶಾಬ್ದಿಕ ತರ್ಕ. ಪರೀಕ್ಷೆಯ ಸಂದರ್ಭದಲ್ಲಿ ಅದರಲ್ಲಿಯೂ ವಸ್ತುನಿಷ್ಠ ಪರೀಕ್ಷೆಯಲ್ಲಿ ಶಾಬ್ದಿಕ ತರ್ಕ ಪ್ರಮುಖ ಪಾತ್ರ ವಹಿಸುತ್ತದೆ. ನಾಲ್ಕಾರು ಐಚ್ಛಿಕಗಳ ನಡುವಿನ ಸಂಬಂಧವನ್ನು ನಿರ್ಧರಿಸಿ ಉತ್ತರಿಸುವಲ್ಲಿ ಶಾಬ್ದಿಕ ತರ್ಕ ಸಮರ್ಥ ಸಾಧನವಾಗಿದೆ. ಸಂಬಂಧಗಳನ್ನು ಗುರುತಿಸುವಲ್ಲಿ ಖಚಿತತೆ ಅಗತ್ಯ. ತೀರ ಸಮೀಪ ಐಚ್ಛಿಕಗಳಲ್ಲಿ ಕರಾರುವಕ್ಕಾಗಿ ಸಂಬಂಧಿಸಿದ ಘಟಕವನ್ನು ಗುರುತಿಸುವಲ್ಲಿ ಮಾನಸಿಕ ಪ್ರಕ್ರಿಯೆಗೆ ತಯಾರಿ ಅತ್ಯಗತ್ಯ. ಇಂತಹ ಅಗತ್ಯವನ್ನು ಪೂರೈಸುವಲ್ಲಿ ಪ್ರಸ್ತುತ ಕೃತಿ ಸಹಾಯಕವಾಗಬಲ್ಲುದು. ಕನ್ನಡ ಭಾಷಾ ಘಟಕಗಳನ್ನು ಕೇಂದ್ರೀಕರಿಸಿ ಪ್ರಸ್ತುತ ಪಠ್ಯವನ್ನು ತಯಾರಿಸಲಾಗಿದೆ.

ಕನ್ನಡದ ಅಕ್ಷರ ಮಾಲೆಯನ್ನು, ಕನ್ನಡದ ಪದಗಳು ಮತ್ತು ಸ್ವೀಕೃತಿ ಪದಗಳನ್ನು ಬಳಸಿ ಅಭ್ಯಾಸ ಪಠ್ಯವನ್ನು ಈ ಕೃತಿಯಲ್ಲಿ ಅಣಿಗೊಳಿಸಲಾಗಿದೆ.

ಟ-ಡ, ಢ-ತ, ಥ-ದ, ನ-ಹ ಅಕ್ಷರಗಳು ಒಂದೇ ಗುಂಪಿಗೆ ಸೇರಿದ ಅಕ್ಷರ ಜೋಡಿಗಳು. ಈ ಜೋಡಿಗಳ ನಡುವೆ ಒಂದಕ್ಷರ ಅಂತರವಿದೆ. ಈ ಅಕ್ಷರ ಜೋಡಿಗಳ ಸಾಮ್ಯತೆಗೆ ಕಾರಣ ಅವುಗಳು ನಡುವಿನ ಒಂದಕ್ಷರದ ಅಂತರ. ಆದರೆ ಬ-ಭ ಅಕ್ಷರ ಜೋಡಿ ಈ ಗುಂಪಿಗೆ ಸೇರದು. ಅವೆರಡರ ನಡುವೆ ಅಂತರವಿಲ್ಲ. ಇವೆರಡೂ ಒಂದರ ನಂತರ ಇನ್ನೊಂದು ಬರುವ ಅಕ್ಷರಗಳ ಜೋಡಿ.

ಇದರಂತೆ ಟ ಠ ಡ ಢ ಣ ಕ್ರಮಾಗತ ಅಕ್ಷರಗಳ. ಇವುಗಳೊಡನೆ ಯ ರ ಲ ವ ಶ ಷ ಸ ಹ ಳ ಅಕ್ಷರಗಳನ್ನು ಹಿಮ್ಮುಖವಾಗಿ ಬಳಸಿದರೆ ಟ-ಳ, ಠ-ಹ, ಡ-ಸ, ಢ-ಷ, ಣ-ಶ ಎಂಬ ಅಕ್ಷರ ಜೋಡಿ ನಿರ್ಮಾಣವಾಗಬೇಕು. ಒಂದು ವೇಳೆ ಟ-ಳ, ಠ-ಹ, ಡ-ಷ, ಢ-ಶ, ಣ-ವ ಎಂದು ಜೋಡಿಸಿದರೆ ಟ-ಣ, ಠ-ಹ ಬರುವುದು ಸರಿ ಆದರೆ ಡ-ಷ ಜೋಡಿ ಗುಂಪಿಗೆ ಹೊಂದದ ಅಕ್ಷರ ಜೋಡಿ. ಈ ರೀತಿ ಸರಿ ಹೊಂದದ ಘಟಕವನ್ನು ಗುರುತಿಸುವ ಪ್ರಕ್ರಿಯೆ ಶಾಬ್ದಿಕ ತರ್ಕ.

ಪ್ರಸ್ತುತ ಕೃತಿಯ ಲೇಖಕರು ಬುದ್ಧಿಯನ್ನು ಚುರುಕುಗೊಳಿಸುವ ಶಾಬ್ದಿಕ ತರ್ಕ ಪ್ರಕ್ರಿಯೆಯನ್ನು ಪ್ರಚುರಗೊಳಿಸುವ ಪ್ರಯತ್ನ ಮಾಡಿದ್ದಾರೆ. ಇದರೊಂದಿಗೆ ಕನ್ನಡ ಭಾಷೆಯ ಅಕ್ಷರ ವ್ಯವಸ್ಥೆ, ಅವುಗಳ ಜೋಡಣೆ, ಕನ್ನಡ ಪದಗಳ ಪ್ರಜ್ಞೆಯನ್ನು ಉತ್ತೇಜಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕನ್ನಡ ಕಲಿಕೆಗೆ ಇದೊಂದು ಸೇರ್ಪಡೆ ಎಂದು ಭಾವಿಸಿದ್ದೇನೆ.

‘ಶಾಬ್ದಿಕ ತರ್ಕ’ ಎಂಬ ಕಿರುಹೊತ್ತಿಗೆಯನ್ನು ಈ ಮಾಲೆಗಾಗಿ ಬರೆದುಕೊಟ್ಟಿರುವ ಡಾ. ಎಸ್. ಲಕ್ಷ್ಮೀದೇವಿ, ಡಾ. ಗಣೇಶನ್ ಅಂಬೇಡ್ಕರ್ ಅವರಿಗೆ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಡಾ. . ಮುರಿಗೆಪ್ಪ
ಕುಲಪತಿ