ಈ ಎರಡನೇ ಭಾಗವನ್ನು ದೇಶ್ಯ ಹಾಗೂ ಅನ್ಯದೇಶ್ಯ ಶಬ್ದಗಳನ್ನು ಅನುಸರಿಸಿ ರಚಿಸಲಾಗಿದೆ. ಯಾವುದೇ ದೇಶದ ಭಾಷೆಯಾಗಲಿ ಅದು ತನ್ನ ಸುತ್ತಮುತ್ತಲ ಬೇರೆ ಬೇರೆ ಭಾಷೆಗಳ ಸಂಬಂಧವನ್ನು ಪಡೆಯುತ್ತಾ, ಆಯಾಯ ಭಾಷೆಯ ಶಬ್ದಗಳನ್ನು ತನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತಿದೆ. ಕನ್ನಡ ಭಾಷೆಯಲ್ಲೂ ಇಂಥ ಅನೇಕ ಶಬ್ದಗಳು ಸೇರಿವೆ.

ಹೀಗೆ ಕೊಡು ಕೊಳ್ಳುವ ವ್ಯವಹಾರ ಇಂದಿಗೂ ಹೊಸತೇನಲ್ಲ, ಹಳೆಯ ಬೇರಲ್ಲಿ ಹೊಸ ಚಿಗುರನ್ನು ಕಾಣುವ ಪ್ರಯತ್ನ ಇಂದಿಗೂ ನಿರಂತರವಾಗಿ ನಡೆದಿದೆ. ಈ ಭಾಗದಲ್ಲಿ ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಇಲ್ಲಿನ ಮೊದಲ ನಾಲ್ಕು ಪ್ರಶ್ನೆಗಳಲ್ಲಿ ನಾಲ್ಕು ಬಗೆಯ ಉದಾಹರಣೆಗಳಿವೆ. ಅವು ಅಂತೆಯೇ ಮುಂದಿನ ಪ್ರಶ್ನೆಗಳಲ್ಲಿ ಪುನರಾವೃತ್ತಿಯಾಗುತ್ತವೆ.

ಒಟ್ಟು ನಲವತ್ತು ಪ್ರಶ್ನೆಗಳುಳ್ಳ ಈ ಭಾಗವನ್ನು ಹತ್ತು ಭಾಗಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ. ಈ ಹತ್ತು ಭಾಗಗಳೂ ತಲಾ ನಾಲ್ಕು ನಾಲ್ಕು ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಈ ನಾಲ್ಕು ಪ್ರಶ್ನೆಗಳೂ ನಾಲ್ಕು ಬಗೆಯಲ್ಲಿ ಅಂದರೆ ಮೊದಲ ಪ್ರಶ್ನೆ ಸಂಸ್ಕೃತ-ಕನ್ನಡದಲ್ಲಿ ಎರಡನೇ ಪ್ರಶ್ನೆ ಹಿಂದೂಸ್ಥಾನಿ-ಕನ್ನಡದಲ್ಲಿ, ಮೂರನೇ ಪ್ರಶ್ನೆ ಇಂಗ್ಲಿಷ್-ಕನ್ನಡದಲ್ಲಿ ಹಾಗೂ ನಾಲ್ಕನೇ ಪ್ರಶ್ನೆ ಹೊಸಗನ್ನಡ-ಹಳಗನ್ನಡದಲ್ಲಿದೆ. ಹೀಗೆ ಇದೇ ವಿಧಾನವನ್ನು ಹತ್ತೂ ಭಾಗಗಳೂ ಒಳಗೊಂಡಿದೆ.

[1] ಪ್ರತಿ ಪ್ರಶ್ನೆಯೂ ಐದು ಒಳವಿಂಗಡನೆಯನ್ನು ಹೊಂದಿದೆ. ಅವುಗಳಲ್ಲಿ ನಾಲ್ಕು ಉತ್ತರಗಳು ಸರಿಯಾಗಿದ್ದು ಒಂದು ತಪ್ಪಾದ ಉತ್ತರವಿರುತ್ತದೆ.

ಮೊದಲ ಭಾಗದ ಪ್ರಶ್ನೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಪದಗಳು ಸಂಸ್ಕೃತ ಪದಗಳಾಗಿದ್ದು ಕೇವಲ ಒಂದು ಪದವಷ್ಟೇ ಕನ್ನಡದ ಪರವಾಗಿದ್ದು ಅದು ಗುಂಪಿಗೆ ಸೇರದ ಪದವಾಗಿದೆ. ಮೊದಲ ಪ್ರಶ್ನೆಯನ್ನು ಉದಾಹರಣೆಗೆ ತೆಗೆದುಕೊಂಡರೆ,

  1. a) ನಕ್ಷತ್ರ b) ಅವು c) ಅನ್ನ d) ತೀರ್ಥ e) ವಿದ್ಯಾರ್ಥಿ ಇಲ್ಲಿ a) c) d) e) ಸಂಸ್ಕೃತ ಪದಗಳಾಗಿದ್ದು b) ‘ಆವು’ ಒಂದೇ ಕನ್ನಡ ಪದವಾಗಿದೆ. ಹಾಗಾಗಿ ಇದು ಗುಂಪಿಗೆ ಸೇರದ ಪದ.

ಎರಡನೇ ಪ್ರಶ್ನೆಯಲ್ಲಿ ಎಲ್ಲಾ ಪದಗಳು ಹಿಂದೂಸ್ಥಾನಿ ಪದಗಳೇ ಆಗಿದ್ದು ಗುಂಪಿಗೆ ಸೇರದ ಪದ ಕನ್ನಡದ್ದಾಗಿದೆ. ಉದಾಹರಣೆಗೆ a) ಅಸಲಿ b) ಬದಲ್ c) ಕರು d) ನಕಲಿ e) ತಯಾರ್ ಇಲ್ಲಿ c) ಕರು ಕನ್ನಡದ ಪದ, ಉಳಿದಂತೆ ಎಲ್ಲವೂ ಹಿಂದೂಸ್ಥಾನಿ ಪದಗಳಾಗಿವೆ. ಹಾಗಾಗಿ ‘c’, ಗುಂಪಿಗೆ ಸೇರದ ಪದವಾಗಿದೆ.

ಇದರಂತೆಯೇ ಪ್ರಶ್ನೆ ಮೂರರಲ್ಲಿ ಎಲ್ಲಾ ಪದಗಳೂ ಇಂಗ್ಲಿಷ್ ಪದಗಳಾದ್ದು ಗುಂಪಿಗೆ ಸೇರದ ಪದ ಕನ್ನಡವಾಗಿದೆ.

ಉದಾಹರಣೆ : a) ಫೀಸ್ b) ಆಸಿಡ್ c) ಲೈಟ್ d) ನೆರೆ e) ಪೆಟ್ರೋಲ್ ಇಲ್ಲಿ d, ನೆರೆ ಎಂಬುದು ಕನ್ನಡದ ಪದ. ಉಳಿದಂತೆಲ್ಲವೂ ಇಂಗ್ಲಿಷ್ ಭಾಷೆಯಿಂದ ಬಂದ ಪದಗಳೇ ಆಗಿವೆ.

ಆದರೆ ನಾಲ್ಕನೇ ಪ್ರಶ್ನೆಯಲ್ಲಿ, ವಿಶೇಷವಾಗಿ ಹೊಸಗನ್ನಡ ಪದಗಳನ್ನು ಕೊಟ್ಟು ಗುಂಪಿಗೆ ಸೇರದ ಪದವಾಗಿ ಹಳಗನ್ನಡ ಪದವನ್ನು ನೀಡಲಾಗಿದೆ.

ಉದಾಹರಣೆ : a) ತುರು b) ಆಕಳು c) ಸೇರು d) ಬೆಲ್ಲ e) ಪಣ್ ಇಲ್ಲಿ e) ಪಣ್ ಗುಂಪಿಗೆ ಸೇರದ ಪದ. ಕಾರಣ ಹಳಗನ್ನಡದಲ್ಲಿನ ಅನೇಕ ಪದಗಳು, ಶಬ್ದಗಳು ಈಗಿನ ಹೊಸಗನ್ನಡಕ್ಕೆ ರೂಪಾಂತರ ಹೊಂದಿ ಪ್ರಯೋಗಗೊಳ್ಳುತ್ತಿವೆ. ಅಂತಹ ಪದಗಳನ್ನು ಗುರುತಿಸಿ ಇಲ್ಲಿ ಹಳಗನ್ನಡ ರೂಪವನ್ನು ನೀಡಲಾಗಿದೆ. ಹೀಗೆ ಸಂಸ್ಕೃತ. ಹಿಂದೂಸ್ಥಾನಿ, ಇಂಗ್ಲಿಷ್ ಮತ್ತು ಹೊಸಗನ್ನಡ ಪದಗಳಲ್ಲಿ ಕನ್ನಡ ಮತ್ತು ಹಳಗನ್ನಡ ಪದಗಳನ್ನು ಬೆರೆಸಿ ಗುಂಪಿಗೆ ಸೇರದ ಪದಗಳನ್ನು ಗುರುತಿಸಲು ತಿಳಿಸಲಾಗಿದೆ.

ದೇಶ್ಯ ಹಾಗೂ ಅನ್ಯದೇಶ್ಯ ಶಬ್ದಗಳನ್ನು ಅನುಸರಿಸಿ ರಚಿಸಲ್ಪಟ್ಟ ಪ್ರಶ್ನೆಗಳು

ಅಭ್ಯಾಸ2

1. a) ಭೂಮಿ b) ಪರಿಚ್ಛೇದ c) ಪೃಥ್ವಿ d) ಪ್ರಕರಣ e) ಮನೆ
2. a) ಅರ್ಜಿ b) ಕಿಲ್ಲಾ c) ಬೆಲ್ಲ d) ಕಚೇರಿ e) ಮಹಲ್
3. a) ರೋಡ್ b) ಲಾಯರ್ c) ಟಿಕೆಟ್ d) ತಿನ್ನು e) ಮಾರ್ಕ್ಸ್
4. a) ನೂರು b) ಪೆಣ್ c) ಅರಸು d) ಬಾಯಿ e) ಸಣ್ಣ
5. a) ನದಿ b) ಅಧ್ಯಾಯ c) ಆರ‍್ಯ d) ಹೊಲ e) ವಿಷಯ
6. a) ತಯಾರ್ b) ಜನಾಬ್ c) ಬದಲ್ d) ಖಾವಂದ್ e) ಜೋಳ
7. a) ಸ್ಪೀಡ್ b) ಸೇರು c) ಪಿಟೀಲ್ d) ಹೊಟೇಲ್ e) ಪಾಸ್
8. a) ಹೆಚ್ಚು b) ಹುಡುಕು c) ಹಣ್ d) ಕಣ್ಣು e) ದೊಡ್ಡ
9. a) ಆರ‍್ಯ b) ನರಕ c) ಗದ್ದೆ d) ಅನಾರ‍್ಯ e) ಸ್ವರ್ಗ
10. a) ಕಾರ್ಖಾನೆ b) ಹುಜೂರ್ c) ಬಂದೂಕ d) ರಾಗಿ e) ಸರ‍್ಕಾರ
11. a) ಸ್ವಿಚ್ b) ಆಳು c) ಹಾರ‍್ಮೋನಿಯಂ d) ಚೇರ‍್ಮನ್ e) ಬಾಟಲ್
12. a) ಕಡಮೆ b) ಅಗಿ c) ತಲೆ d) ಬಿಳಿದು e) ಪಾಲ್
13. a) ರಾತ್ರಿ b) ಹಿತ್ತಿಲು c) ಮೋಕ್ಷ d) ದಿವಸ e) ಧರ್ಮ
14. a) ರೈತ b) ಕಾಗದ c) ಸಲಾಮು d) ದವಾಖಾನೆ e) ಹುಲ್ಲು
15. a) ತೆಂಕಣ b) ಲೈಟ್ c) ಪ್ಲೇಗು d) ರೂಂ e) ಇಂಕ್
16. a) ಮಲ್ಲಿಗೆ b) ಅಲರು c) ಕಿವಿ d) ಕರಿದು e) ಪೊರಳ್
17. a) ಕದ b) ಮತ c) ಸಂಧ್ಯಾ d) ಸಂಪುಟ e) ಸಂಸ್ಥಾ
18. a) ಸಲಾಮು b) ಹುರುಳಿ c) ಸವಾರ d) ಕಾನೂನು e) ಜಮೀನು
19. a) ಬಲ್ಬ್ b) ಬೆಂಜ್ c) ನೆರೆ d) ಸ್ಕೂಲ್ e) ಪೆನ್
20. a) ಚೆನ್ನಾಗಿ b) ಅರೆ c) ಮೂಗು d) ಹಿರಿದು e) ಪರ್ಬು
21. a) ರಾಮ b) ಗ್ರಂಥ c) ಲಕ್ಷ್ಮಣ d) ವಾಕ್ಯ e) ಮರ
22. a) ಬದಲಾವಣೆ b) ಅಮಲ್ದಾರ c) ಹುಳಿ d) ಚುಣಾವಣೆ e) ದುಕಾನ್
23. a) ರೈಲ್ b) ಮೆಲು c) ತುರು d) ಕಾಲೇಜ್ e) ಪೆನ್ಸಿಲ್
24. a) ತಿಳಿವಳಿಕೆ b) ನುರಿ c) ಕೆನ್ನೀರು d) ಜೇನು e) ಪೆರ್ಚು
25. a) ಭರತ b) ಗಿಡ c) ಪ್ರಕೃತಿ d) ಶತ್ರುಘ್ನ e) ಪದ
26. a) ದಾಖಲ್ b) ಮಂಜೂರು c) ಹವಾಲ್ದಾರ್ d) ಸಾರು e) ಹುಕುಂ
27. a) ಕೋರ್ಟ್ b) ಆಕಳು c) ಪೊಲೀಸ್ d) ಲೈಬ್ರರಿ e) ಮಿಲ್
28. a) ನೀರು b) ಉಡು c) ಬೆನ್ನೀರು d) ತುಪ್ಪ e) ಪೊಗು
29. a) ಅಕ್ಷರ b) ಮಹಾಭಾರತ c) ಶಬ್ದ d) ನೆಲ e) ಚಕ್ರಾಧಿಪತ್ಯ
30. a) ದಫೇದಾರ b) ದರ್ಬಾರು c) ಸೋರು d) ಸುಬೇದಾರು e) ಅಸಲಿ
31. a) ಮೂಡಣ b) ಬ್ಯಾಂಕ್ c) ಪೋಸ್ಟ್ d) ಪ್ರೆಸ್ e) ಸೊಸೈಟಿ
32. a) ಮೀನು b) ಪಕ್ಷಿ c) ಹಾಲು d) ಬೆಚ್ಚಗೆ e) ತೊಡು
33. a) ಕುಮಾರ b) ಪಿತೃ c) ಸಾಮ್ರಾಜ್ಯ d) ಮಾತೃ e) ಬೆಣ್ಣೆ
34. a) ನಕಲಿ b) ಖಾಜಿ c) ರಸ್ತೆ d) ಗುಲಾಮ e) ಹೀರು
35. a) ಚಕ್ b) ಕಾರ್ಡ್ c) ಶತ d) ಡ್ರೈವರ್ e) ಸರ್ಕಲ್
36. a) ಬಾನು b) ಕೈ c) ತಣ್ಣಗೆ d) ಪನಿ e) ಮೊಸರು
37. a) ಸಹೋದರ b) ಮಂಡಲೇಶ್ವರ c) ಸಹೋದರಿ d) ಸಾಮಂತ e) ಎಣ್ಣೆ
38. a) ಜಮೀನ್‌ದಾರು b) ಕುರ್ಚಿ c) ಕಾರು d) ಕುರ್ಚಿ e) ಸಲಾಮು
39. a) ಚಲನ್ b) ಕವರು c) ನಂಬರ್ d) ಪಡುವಣ e) ಡಿಸ್ಟ್ರಿಕ್ಟ್
40. a) ಪಳ್ಳ b) ಬೋನ c) ಕಾಲು d) ಕಮ್ಮಗೆ e) ಮಜ್ಜಿಗೆ

[1] ನಾಲ್ಕು ಪ್ರಶ್ನೆಗಳನ್ನು ಸೇರಿಸಿದರೆ ಒಂದು ಭಾಗ ಎಂದು ಪರಿಗಣಿಸುವುದು