ಎಲೆಮರೆಯ ಕಾಯಿಯಂತೆ, ದೂರದ ವೀನಾ ಧ್ವನಿಯಂತೆ ಎನ್ನುವ ಮಾತನ್ನು ನೀವು ಕೇಳಿದ್ದಿರಾ? ಎಲೆಯ ಮರೆಯಲ್ಲಿರುವ ಕಾಯಿ ನೋಟಕರಿಗೆ ತಾನಾಗಿ ಕಾಣಿಸುವುದಿಲ್ಲ. ಯತ್ನಿಸಿದರೆ ಕಂಡೀತು. ದೂರದ ವೀಣೆಯ ಧ್ವನಿಯೂ ಹಾಗೆಯೇ, ಕಿವಿಗೊಟ್ಟು ಆಲಿಸದಿದ್ದರೆ ಕೇಳಿಸದು. ಕೆಲವರು ಮೌನವಾಗಿದ್ದುಕೊಂಡು ಸದಾ ಒಳ್ಳೆಯ ಕಾರ್ಯಗಳಲ್ಲೇ ಮಗ್ನರಾಗಿರುತ್ತಾರೆ. ಅವರು ಎಲೆಮರೆಯ ಕಾಯಿಯಂತೆ, ದೂರದ ವೀಣಾ ಧ್ವನಿಯಂತೆ, ಅಮಥವರು ಸಾಮಾನ್ಯವಾಗಿ ಹೆಚ್ಚು ಪ್ರಸಿದ್ಧಿಗೆ ಬಂದಿರುವುದಿಲ್ಲ. ಜನರ ಕಣ್ಣಿಗೂ ಹೆಚ್ಚಾಗಿ ಬೀಳುವುದಿಲ್ಲ. ಇವರು ತಮ್ಮ ಬದುಕನ್ನು ಜನಸೇವೆ, ಲೋಕ ಕಲ್ಯಾಣ ಕಾರ್ಯಕ್ಕೆ ಅರ್ಪಿಸಿಕೊಂಡಿರುತ್ತಾರೆ. ಅವರ ಜೀವನವನ್ನು ಹತ್ತಿರದಿಂದ ಪರಿಶೀಲಿಸಿದಾಗ ಮಾತ್ರ ಅವರ ಮಹತ್ವ, ವೈಶಿಷ್ಟ್ಯ ಅರ್ಥವಾಗುತ್ತದೆ. ಆಗ ಅಂಥವರ ಜೀವನ ನಮ್ಮ ಮೇಲೆ ತನ್ನ ಪ್ರಭಾವವನ್ನು ಬೀರುವುದು. ನಮ್ಮನ್ನು ಸತ್ಕರ್ಮದಲ್ಲಿ ಪ್ರೇರಿಸುವುದು. ಇಂತಹ ಮಹಾ ಪುರುಷರಲ್ಲಿ ಶಾರದಾನಂದರು ಒಬ್ಬರು.

ಕಳೆದ ಶತಮಾನದ ಅಂತ್ಯಭಾಗದಲ್ಲೇ ದಕ್ಷಿಣೇಶ್ವರದ ದೇವ-ಮಾನವರೆಂದು ಪ್ರಸಿದ್ಧರಾದವರು ಶ್ರೀ ರಾಮಕೃಷ್ಣ ಪರಮಹಂಸರು. ಅವರ ಸಂನ್ಯಾಸಿ ಶಿಷ್ಯರಲ್ಲಿ ಜಗತ್ಪ್ರಸಿದ್ಧರಾದವರು ಸ್ವಾಮಿ ವಿವೇಕಾನಂದರು. ಪರಮಹಂಸರ ಸಂನ್ಯಾಸಿ ಶಿಷ್ಯರಲ್ಲಿ ಸ್ವಾಮಿ ಶಾರದಾನಂದರು ಪ್ರಮುಖರು. ಸ್ವಾಮಿ ವಿವೇಕಾನಂದರಿಗೆ ಶಾರದಾನಂದರು ಬಲಗೈಯಂತಿದ್ದರು. ವಿವೇಕಾನಂದರು ನಂಬಿ ಸಾಧಿಸಿ ಬೋಧಿಸಿದ ತ್ಯಾಗ ಮತ್ತು ಸೇವೆಯ ಆದರ್ಶಗಳನ್ನು ಕಾರ್ಯ ರೂಪಕ್ಕೆ ತರಲು ನಿಷ್ಠೆಯಿಂದ ದುಡಿದವರು. ರೋಗಿಗಳ, ದೀನ-ದಲಿತರ, ಅನಾಥ ಅಸಹಾಯಕರ ಸಂಕಟವನ್ನು ದೂರ ಮಾಡಲು ಶ್ರಮಿಸಿದವರು. ಧ್ಯಾನ ಪರಾಯಣರು. ಶ್ರೇಷ್ಠ ಭಗವದ್ಭಕ್ತರು. ತಪಸ್ವಿಗಳು. ವಿದ್ವಾಂಸರು, ಜವಾಬು ದಾರಿ ಸ್ಥಾನವನ್ನು ವಹಿಸಿಕೊಂಡು ಸದಾ ಕಾಯಮಗ್ನರು, ಪರಮ ಶಾಂತರು. ಕ್ಷಮೆ, ಕರುಣೆ, ಸಹಿಷ್ಣುತೆ – ಈ ಗುಣಗಳ ಸಾಕಾರಮೂರ್ತಿ. ದುಃಖತಪ್ತರಿಗೆ ಸೇವೆ ಸಹಾಯ ಮತ್ತು ಸಾಂತ್ವನದ ಸವಿನುಡಿಗಳಿಂದ ಸಮಾಧಾನದ ಅಮೃತ ರಸವನಿತ್ತವರು. ಎಂತಹ ಸಂಕಟ ಪರಿಸ್ಥಿತಿಯಲ್ಲೂ ವಿಚಲಿತರಾಗದವರು. ಆದುದರಿಂದಲೇ ಅವರನ್ನು ಕೆಲವರು ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದ ಸ್ಥಿತಪ್ರಜ್ಞನಿಗೆ ಹೋಲಿಸುತ್ತಿದ್ದರು.

ಬೆಳೆಯ ಗುಣ ಮೊಳಕ್ಕೆಯಲ್ಲಿ

ಶಾರದಾನಂದರಿಗೆ ಸಂನ್ಯಾಸಕ್ಕೆ ಮೊದಲಿನ ಹೆಸರು ಶರಚ್ಚಂದ್ರ ಚಕ್ರವರ್ತಿ. ಅವರ ತಂದೆ ಗಿರೀಶಚಂದ್ರ ಚಕ್ರವರ್ತಿ. ಕಲ್ಕತ್ತ ನಗರದಲ್ಲಿ ಔಷಧಿ ಅಂಗಡಿಯ ಪಾಲುದಾರರು. ವ್ಯವಹಾರ ಚತುರರು. ಗಿರೀಶಚಂದ್ರರು ಶ್ರೀಮಂತರಾಗಿದ್ದರೂ ಧಾರ್ಮಿಕರೂ ಉದಾರಿಗಳೂ ನಿಷ್ಠಾವಂತರೂ ಆಗಿದ್ದರು. ಶರಚ್ಚಂದ್ರರ ತಾಯಿಯ ಹೆಸರು ನೀಲಮಣಿದೇವಿ. ಅವರಿಗೆ ದೇವರಲ್ಲಿ ವಿಶೇಷ ಭಕ್ತಿ, ಪೂಜೆಯಲ್ಲಿ ಆಸಕ್ತಿ. ಈ ದಂಪತಿಗಳಿಗೆ ಹಿರಿಯ ಮಗನೇ ಶರಚ್ಚಂದ್ರ, ೧೮೬೫ ನೇ ಇಸವಿ ಡಿಸೆಂಬರ್ ೨೩ನೇ ತಾರೀಕಿನ ದಿನ ಶರಚ್ಚಂದ್ರನು ಜನಿಸಿದರು.

ಬೆಳೆಯ ಗುಣ ಮೊಳಕೆಯಲ್ಲಿ ಎಂಬ ಮಾತನ್ನು ನೀವು ಕೇಳಿರಬಹುದು. ಶಿಶುವು ತೋರಿಸುವ ಒಲವು ಆಸಕ್ತಿಗಳು ಅವನ ಮುಂದಿನ ನಡತೆಯನ್ನು ಸೂಚಿಸುತ್ತವೆ ಎನ್ನುವುದು ಆ ಮಾತಿನ ಅರ್ಥ. ಸಾಮಾನ್ಯವಾಗಿ ಮಕ್ಕಳು ಚಂಚಲರಾಗಿರುತ್ತಾರೆ. ಚಿಕ್ಕಂದಿನಲ್ಲಿ ಕೂತಲ್ಲಿ ಕೂತಿರಲಾರರು. ನಿಂತಲ್ಲಿ ನಿಲ್ಲಲಾರರು. ಎಲ್ಲವೂ ಬೇಕು, ಯಾವುದೂ ಬೇಡ. ಒಂದು ಆಟದ ಸಾಮಾನಿಗಾಗಿ ಬಹಳ ಆತುರ. ಅದು ಕೈಗೆ ಸಿಕ್ಕಿದ ಸ್ವಲ್ಪ ಹೊತ್ತಿನಲ್ಲಿ ಅದನ್ನು ಎಸೆದೂ ಆಯಿತು. ಇದು ಮಕ್ಕಳಲ್ಲಿ ಕಾಣುವ ಸಹಜ ಗುಣ. ಆದರೆ ಶರತ್ ಬಾಲ್ಯದಿಂದಲೇ ಗಂಭೀರ ಪ್ರಕೃತಿಯವನು. ಮಾತು ಮಿತ, ಶಾಂತ ಸ್ವಭಾವ. ಮೊದಲ ಸಲ ಅವನನ್ನು ಕಂಡಾಗ ಅಧ್ಯಾಪಕರು ಅವನನ್ನು ದಡ್ಡ ಹುಡುಗನೆಂದೇ ಭಾವಿಸಿದ್ದರು. ಆದರೆ ಎಲ್ಲ ಪರೀಕ್ಷೆಗಳಲ್ಲೂ ಪ್ರಥಮ ಅಥವಾ ದ್ವಿತೀಯ ಸ್ಥಾನ ಅವನಿಗೇ ಮೀಸಲು. ಶರತ್ ಎಂದೂ ಗೆಳೆಯರೊಡನೆ ಜಗಳ ಬಡಿದಾಟ ಮಾಡಿದವನಲ್ಲ. ಅವರ ಕೆಣಕು ಮಾತುಗಳಿಗೆ ತಲೆ ಕೆಡಿಸಿ ಕೊಳ್ಳುತ್ತಿರಲಿಲ್ಲ. ಎಲ್ಲರೊಡನೆ ಅವನದು ಪ್ರೀತಿಯ ವ್ಯವಹಾರ. ಸಿಹಿ-ತಿಂಡಿ ಕೈಗೆ ಸಿಕ್ಕಿದರೆ ಎಲ್ಲರಿಗೂ ಹಂಚಿಯೇ ತಿನ್ನುತ್ತಿದ್ದ. ತನ್ನ ಸಹಪಾಠಿಗಳಲ್ಲಿ ಅನೇಕರ ಬಳಿ ಪುಸ್ತಕ ಪೆನ್ಸಿಲುಗಳಿಲ್ಲದಿದ್ದುದನ್ನು ಕಮಡು ಅವರಿಗೆ ಸಹಾಯ ಮಾಡುತ್ತಿದ್ದ. ತಂದೆ ತಿಂಡಿಗಾಗಿ ಕೊಟ್ಟ ಹಣವನ್ನು ಶರತ್ ಕಷ್ಟದಲ್ಲಿರುವವರಿಗೆ ಕೊಟ್ಟುಬಿಡುತ್ತಿದ್ದ. ಪರಿಚಿತರಿರಲಿ, ಅಪರಿಚಿತರಿರಲಿ, ಇತರರ ದುಃಖವನ್ನು ಕಂಡು ಮರುಗುತ್ತಿದ್ದ. ಮರುಗಿ ಕೊರಗಿ ಸುಮ್ಮನಿರುತ್ತಿರಲಿಲ್ಲ. ಅವರ ದುಃಖವನ್ನು ದೂರ ಮಾಡಲು ತನ್ನ ಕೈಲಾದುದನ್ನು ಮಾಡಿಯೇ ಮಾಡುತ್ತಿದ್ದ. ಇತರರಿಗೆ ಸೇವೆ, ಸಹಾಯ ಮಾಡುವುದು ಎಂದರೆ ಅವನಿಗೆ ಬಹು ಪ್ರಿಯವಾದ ಕೆಲಸ.

ಒಮ್ಮೆ ಅವನ ನೆರಮನೆಯಲ್ಲಿ ವಾಸವಾಗಿದ್ದ ಮನೆ ಕೆಲಸದ ಮುದುಕಿಗೆ ಕಾಲರಾ ರೋಗ ತಗಲಿತು. ಮನೆ ಮಂದಿಗೂ ಆ ರೋಗ ಸೋಕಬಹುದೆಂದು ಮನೆಯ ಯಜಮಾನ ಶಂಕಿಸಿದ. ಅವಳನ್ನು ಮಹಡಿಯ ಮೂಲೆಯಲ್ಲಿ ಬಿಟ್ಟುಬಿಟ್ಟ ಅವಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಔಷಧೋಪಚಾರ ನೀಡಲಿಲ್ಲ. ಶರತ್ ಈ ವಿಚಾರ ತಿಳಿದೊಡನೆಯೇ ಸೇವೆಗೆ ಸಿದ್ಧನಾದ. ಅಲ್ಲಿಗೆ  ಹೋಗಿ ಮುದುಕಿಗೆ ಔಷಧವನ್ನು ತಂದು ಕೊಟ್ಟ. ಉಪಚಾರ ಮಾಡಿದ. ರಾತ್ರಿಯೆಲ್ಲ ನಿದ್ದೆಬಿಟ್ಟು ಅವಳನ್ನು ಉಳಿಸಲು ಯತ್ನಿಸಿದ. ಆದರೆ ಮಾರನೆ ದಿನ ಮುದುಕಿ ತೀರಿಕೊಂಡಳು. ಅವಳ ಶವದಹನದ ಕೆಲಸವನ್ನೂ ಯಾರೋ ಹಿರಿಯರನ್ನು ಕಂಡು ಅವನೇ ಮಾಡಿಸಿದ. ಹೀಗೆ ಮಾಡುವಂತೆ ಅವನನ್ನು ಯಾರೂ ಪ್ರೇರಿಸಿದವರಲ್ಲ. ಅವನಲ್ಲಿ ಸಹಜವಾಗಿ ಬೆಳೆದು ಬಂದ ಗುಣ – ಪರದುಃಖ ಕಾತರತೆ ಮತ್ತು ಸೇವಾ ಪರಾಯಣತೆ.

ರಾತ್ರಿಯೆಲ್ಲಾ ಮುದುಕಿಗೆ ಶುಶ್ರೂಷೆ ಮಾಡಿದ

ಅರಿವಿನ ಹಂಬಲ

ಸೇವಾ ಪರಾಯಣತೆಯೊಂದಿಗೆ ಅವನಲ್ಲಿ ಬೆಳೆದು ಬಂದ ಇನ್ನೊಂದು ಗುಣ ಜ್ಞಾನಾಭಿವರದ್ಧಿಯ ಹಂಬಲ. ಪಠ್ಯಪುಸ್ತಕಗಳ ಓದಿನಿಂದ ಅವನಿಗೆ ತೃಪ್ತಿಯಿಲ್ಲ. ವಿವಿಧ ವಿಷಯಗಳನ್ನು ಓದಿ ಸರಿಯಾಗಿ ತಿಳಿದುಕೊಳ್ಳುವ ಆಸೆ ಅವನದು. ಆದ್ದರಿಂದಲೇ ಪ್ರತಯೊಂದು ವಿಷಯವನ್ನೂ ಓದಿ ಚರ್ಚಿಸಿ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದ. ಚರ್ಚಾ ಕೂಟ, ಸಭೆ-ಸಮಾರಂಭಗಳಲ್ಲಿ ಶರತ್ ಮಾತನಾಡುತ್ತಾನೆಂದಾದರೆ ವಿದ್ಯಾರ್ಥಿಗಳು ಉತ್ಸಾಹದಿಂದ ನೆರೆಯುತ್ತಿದ್ದರು.

ಶರತ್ನ ಬಂದು ಶಶಿಭೂಷಣ ಮತ್ತು ಆ ಮೊಹಲ್ಲೆಯ ಇತರ ಮಿತ್ರರು ಸೇರಿ ಒಂದು ಸಮಿತಿಯನ್ನು ರಚಿಸಿದರು. ಒಳ್ಳೆಯ ಗ್ರಂಥಗಳ ಅಧ್ಯಯನ, ಒಳ್ಳೆಯ ಗುಣಗಳನ್ನು ಕುರಿತು ಚರ್ಚೆ, ತಿಳಿದವರಿಂದ ಉಪನ್ಯಾಸ, ವ್ಯಾಯಾಮ, ಅಭ್ಯಾಸ, ರೋಗಿಗಳ ಸೇವೆ – ಇವು ಆ ಸಮಿತಿಯ ಮುಖ್ಯ ಉದ್ದೇಶಗಳು. ವೇಳೆ ವ್ಯರ್ಥವಾಗದಂತೆ ನೋಡಿಕೊಳ್ಳಲು ಸಮಯದ ಸದುಪಯೋಗ ಮಾಡಿಕೊಳ್ಳಲು ಒಳ್ಳೆಯ ಅವಕಾಶ. ಈ ದಿನಗಳಲ್ಲೇ ಶರತ್ ಬ್ರಹ್ಮಸಮಾಜದ ಮುಖಂಡರಾಗಿದ್ದ ಶ್ರೇಷ್ಠ ವಾಗ್ಮಿ ಕೇಶವಚಂದ್ರಸೇನರಿಂದ ಪ್ರಭಾವಿತನಾದ. ಬ್ರಹ್ಮ ಸಮಾಜ ಪ್ರಕಟಿಸುತ್ತಿದ್ದ ಗ್ರಂಥಗಳನ್ನು ಓದಿದ. ಅವರು ಹೇಳಿದ ರೀತಿಯಲ್ಲಿ ಧ್ಯಾನದ ಅಭ್ಯಾಸವನ್ನು ಮಾಡುತ್ತಿದ್ದ.

೧೮೮೨ ರಲ್ಲಿ ಶರತ್ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾದ. ಅನಂತರ ಹೆಚ್ಚಿನ ಅಧ್ಯಯನಕ್ಕಾಗಿ ಸೇಂಟ್ ಕ್ಸೇವಿಯರ್ ಕಾಲೇಜನ್ನು ಸೇರಿದ. ಶಿಷ್ಟನೂ, ಸತ್ಯನಿಷ್ಠನೂ, ಮೃದುಭಾಷಿಯೂ ಆದ ಆತನನ್ನು ಕಂಡರೆ ಅಧ್ಯಾಪಕರಿಗೂ, ಸಹಪಾಠಿಗಳಿಗೂ ಬಹು ಪ್ರೀತಿ. ಕಾಲೇಜಿನ ಪ್ರಿನ್ಸಿ ಪಾಲ್ ಪಾದ್ರಿ ಲ್ಯಾಫ್ರೆಂಟ್ ಅವರು ಶರತ್ನ ಧರ್ಮನಿಷ್ಠೆಯನ್ನು ಮೆಚ್ಚಿ ಆತನಿಗೆ ಬೈಬಲ್ ಪಾಠ ಹೇಳಿದರು. ಇದೇ ಸಮಯದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರನ್ನು ಕುರಿತು ಕೇಶವಚಂದ್ರಸೇನರು ಇಂಡಿಯನ್ ಮಿರರ್ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಅವುಗಳನ್ನು ಶರತ ಮತ್ತು ಶಶಿ ತಪ್ಪದೇ ಓದುತ್ತಿದ್ದರು. ಪರಮಹಂಸರ ವ್ಯಕ್ತಿತ್ವ ಮತ್ತು ಅವರ ಸಾಧನೆ ಬೋಧನೆಗಳು ಅವರ ಮೇಲೆ ತುಂಬ ಪ್ರಭಾವ ಬೀರಿದವು. ಜತೆಗೆ ಅವರಲ್ಲಿ ಪರಮಹಂಸರನ್ನು ಕಾಣುವ ತೀವ್ರ ಹಂಬಲ ಉದಿಸಿತು.

ಶ್ರೀಗುರುದರ್ಶನ

೧೮೮೩ನೇ ಅಕ್ಟೋಬರ್ ತಿಂಗಳ ಒಂದು ದಿನ. ಶಶಿ ಮತ್ತು ಶರತ್ ಇಬ್ಬರು ಜೊತೆಗೂಡಿ ಪರಮಹಂಸರ ದರ್ಶನ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ಪರಮ ಹಂಸರು ಅವರನ್ನು ಮೊದಲೇ ಪರಿಚಯವಿದ್ದವರಂತೆ ಪ್ರೀತಿಯಿಂದ ಬರಮಾಡಿಕೊಂಡರು. ಅವರ ಸಮಾಚಾರವನ್ನು ಕೇಳಿ ತಿಳಿದುಕೊಂಡರು. ಬ್ರಹ್ಮಸಮಾಜಕ್ಕೆ ಹೋಗಿ ಬರುತ್ತಿದ್ದಾರೆಂಬುದನ್ನು ಕೇಳಿ ಆನಂದಿಸಿದರು. ಪರಮ ಹಂಸರು ಶಶಿಯನ್ನು ಪ್ರಶ್ನಿಸಿದರು, ’ನಿನಗೆ ದೇವರ ಸಾಕಾರದಲ್ಲಿ ನಂಬಿಕೆಯೇ? ಅಥವಾ ಆತನ ನಿರಾಕಾರದಲ್ಲೇ?’ (’ಸಾಕಾರ’ ಎಂದರೆ ಒಂದು ರೂಪ ಇರುವುದು, ’ನಿರಾಕಾರ’ ಎಂದರೆ ನಿರ್ದಿಷ್ಟ ರೂಪ ಇಲ್ಲದಿರುವುದು.) ಶಶಿ ಹೇಳಿದ : ’ದೇವರು ಇದ್ದಾನೆಂಬ ವಿಚಾರದಲ್ಲೇ ನನಗೆ ದೃಢನಂಬಿಕೆ ಇಲ್ಲ. ಇನ್ನು ಸಾಕಾರನೋ ನಿರಾಕಾರನೋ ಎಂದು ಹೇಗೆ ಹೇಳಲಿ?’ ಶಶಿಯ ನೇರವೂ ನಿಸ್ಸಂಕೋಚವೂ ಆದ ಉತ್ತರವನ್ನು ಕೇಳಿ ಪರಮಹಂಸರಿಗೆ ಸಂತೋಷವಾಯಿತು. ಸ್ವಲ್ಪ ಹೊತ್ತು ಸುಮ್ಮನಿದ್ದು ಅನಂತರ ಹೇಳಿದರು, “ಬಾಲ್ಯದಲ್ಲಿ ಮಕ್ಕಳ ಮನಸ್ಸು ಶುದ್ಧವಾಗಿರುತ್ತದೆ. ಆಗ ಅದಕ್ಕೊಂದು ಆಕಾರ ಕೊಡಬಹುದು. ಆಗಲೇ ದೈವಭಕ್ತಿಯನ್ನು ಸಂಪಾದಿಸಬೇಕು. ಹಾಗೆ ಸಂಪಾದಿಸಿಕೊಂಡರೆ ಅದು ಜೀವನಪರ್ಯಂತ ದೃಢವಾಗಿ ನೆಲೆನಿಲ್ಲುವುದು. ವಯಸ್ಸಿಗೆ ಬಂದ ಮೇಲೆ ಮನಸ್ಸನ್ನು ಬಗ್ಗಿಸುವುದು ಕಷ್ಟ. ಅದು ನಾನಾಮುಖವಾಗಿ ಹರಿಯುತ್ತದೆ. ಕೆಲವೊಮ್ಮೆ ಚೆಲ್ಲಾಪಿಲ್ಲಿಯಾಗಿ ಹರಿಯುತ್ತದೆ. ತಾಪತ್ರಯ ಮತ್ತು ಸಂಶಯಗಳ ಸುಳಿಯಲ್ಲಿ ಸಿಲುಕಿದ ಮನಸ್ಸನ್ನು ದೇವರೆಡೆಗೆ ತಿರುಗಿಸುವುದು ಕಷ್ಟ.”

ಇದನ್ನು ವಿವರಿಸಲು ಶ್ರೀರಾಮಕೃಷ್ಣರು ಒಂದು ಉದಾಹರಣೆಯನ್ನು ನೀಡಿದರು. ’ಇಟ್ಟಿಗೆ, ಹೆಂಚುಗಳನ್ನು ಸುಡುವುದಕ್ಕೆ ಮೊದಲು ಅವುಗಳ ಮೇಲೆ ಮುದ್ರೆಯನ್ನು ಒತ್ತಿದರೆ ಅವು ಸ್ಥಿರವಾಗಿ ಉಳಿಯುತ್ತವೆ. ಅದೇ ರೀತಿ ಸಂಸಾರವನ್ನು ಪ್ರವೇಶಿಸುವುದಕ್ಕೆ ಮೊದಲು ಭಗವದ್ಭಕ್ತಿಯನ್ನು ಬೆಳೆಸಿಕೊಂಡರೆ ಅದು ನಾಶವಾಗುವುದಿಲ್ಲ. ಮಕ್ಕಳು ಇನ್ನೂ ಯುವಕರಾಗುತ್ತಿರುವಾಗಲೇ (ಇದು ಆಗಿನ ಕಾಲದಲ್ಲಿ) ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಮದುವೆ ಮಾಡಿ ಬಿರುತ್ತಾರೆ. ಅವರು ಶಾಲಾಕಾಲೇಜುಗಳನ್ನು ಬಿಟ್ಟು ಹೊರಬರುವ ಹೊತ್ತಿಗೆ ತಂದೆ ತಾಯಿಗಳಾಗಿರುತ್ತಾರೆ. ಸಂಸಾರದ ಹೊರೆ ಬೀಳುತ್ತದೆ. ಆಗ ಕುಟುಂಬದ ಪೋಷಣೆಗಾಗಿ ಹೋರಾಟ ಪ್ರಾರಂಭವಾಗುತ್ತದೆ. ನೌಕರಿಗಾಗಿ ಅಲೆದಾಟ ಶುರುವಾಗುತ್ತದೆ’ ಎಂದರು.

ಶ್ರೀ ರಾಮಕೃಷ್ಣರ ಪ್ರೀತಿ, ಸರಳತೆ ಉದಾತ್ತ ವ್ಯಕ್ತಿತ್ವ ಶಶಿ, ಶರತ್ರನ್ನು ಮುಗ್ಧರನ್ನಾಗಿಸಿತು. ಅವರ ವೈರಾಗ್ಯ ಬೋಧಕವಾದ ಮಾತುಗಳು ಇಬ್ಬರ ಮನಸ್ಸನ್ನೂ ಚೆನ್ನಾಗಿ ಕಲಕಿದವು. ಮೊದಲ ಭೇಟಿಯಲ್ಲೇ ಇವರೊಬ್ಬ ಅಸಾಮಾನ್ಯ ಸಂತರು ಎಂಬುದನ್ನು ಅವರು ತಿಳಿದುಕೊಂಡರು. ಬೀಳ್ಕೊಡುವ ವೇಳೆಯಲ್ಲಿ ಶ್ರೀರಾಮಕೃಷ್ಣರು ಇವರನ್ನುದ್ದೇಶಿಸಿ ’ಇನ್ನೊಮ್ಮೆ ಬನ್ನಿ’ ಎಂದರು. ’ಒಬ್ಬೊಬ್ಬರೇ ಬನ್ನಿ, ಧರ್ಮ ಜಗತ್ತಿನಲ್ಲಿ ಒಬ್ಬೊಬ್ಬನ ದಾರಿ ಒಂದೊಂದು ರೀತಿ. ಕೆಲವು ವಿಚಾರಗಳಲ್ಲಿ ಸಮಾನತೆ ಇದೆ. ಇನ್ನು ಕೆಲವು ವಿಚಾರಗಳಲ್ಲಿ ವ್ಯತ್ಯಾಸವಿದೆ’ ಎಂದರು. ಪ್ರತಿಯೊಬ್ಬರು ತಮ್ಮ ಗುರಿ ಮತ್ತು ದಾರಿಯ ಬಗೆಗೆ ಸ್ಪಷ್ಟವಾಗಿ ತಿಳಿದಿರಬೇಕು ಎಂದರು. ಶ್ರೀ ರಾಮಕೃಷ್ಣನರು ಶರಶ್ಚಂದ್ರರ ಸದ್ಗುಣಗಳನ್ನು ಮೊದಲು ನೋಟದಲ್ಲೇ ಗುರುತಿಸಿದ್ದರು. ’ಆಹಾ! ಶರತ್ಗೆ ಯಾವ ಸುಖ-ಸೌಕರ್ಯಗಳಿಗೂ ಕೊರತೆ ಇಲ್ಲ. ಆದರೆ ಅವನಿಗೆ ಪ್ರಾಪಂಚಿಕ ಸುಖದ ಕಡೆಗೆ ಸ್ವಲ್ಪವೂ ಗಮನವಿಲ್ಲವಲ್ಲ. ಅವನು ದೇವರಿಗಾಗಿ ವ್ಯಾಕುಲನಾಗಿದ್ದಾನೆ’ ಎಂದರು.

ಗುರುವಿನ ಸಮೀಪದಲ್ಲಿ

ಶ್ರೀ ರಾಮಕೃಷ್ಣರ ಜೀವನವನ್ನು ಶರತ್ ಹತ್ತಿರದಿಂದ ಪರಿಶೀಲಿಸಿದರು. ಅವರ ಮಾತುಗಳನ್ನು ವಿಚಾರದ ಒರೆಗಲ್ಲಿನಲ್ಲಿ ತಿಕ್ಕಿ ನೋಡಿದರು. ತನ್ನ ಸಂದೇಹಗಳಿಗೆ ಸರಿಯಾದ ಉತ್ತರ ಸಿಗುವುದೇ ಎಂದು ಪರೀಕ್ಷಿಸಿದರು. ಪರಮಹಂಸರ ಉಪದೇಶಗಳು ಅವರ ಅನುಭವದಿಂದ ಹೊರಹೊಮಮಿದವು ಎಂಬುದನ್ನು ತಿಳಿದುಕೊಂಡರು. ಅಸಾಮಾನ್ಯ ಸಂತರೂ, ಮಹಾತ್ಮರೂ, ದೈವೀ ಪುರುಷರೂ ಆದ ವ್ಯಕ್ತಿಯೊಡನೆ ತಾನು ಇದ್ದೇನೆಂಬುದನ್ನು ಮೆಲ್ಲ ಮೆಲ್ಲನೆ ಅರಿತುಕೊಳ್ಳತೊಡಗಿದರು. ಪರಮಹಂಸರು ದೈವೀ ಆನಂದದಲ್ಲಿ ಮುಳುಗಿದವರು. ಇತರರಿಗೂ ಆ ಆನಂದವನ್ನು ನೀಡಲು ಸದಾ ಸಿದ್ಧರಾಗಿ ನಿಂತಿದ್ದಾರೆ. ಇವರಲ್ಲಿ ಸ್ವಾರ್ಥ ಲೇಶವೂ ಇಲ್ಲ. ಇವರಿಗೆ ಈ ಜಗತ್ತಿನಿಂದ ಜನರಿಂದ ಏನೂ ಬೇಕಿಲ್ಲ. ಸದಾಕಾಲವೂ ಜನರು ಒಳ್ಳೆಯ ಮಾರ್ಗದಲ್ಲಿ ನಡೆದು ದಿವ್ಯ ಆನಂದವನ್ನು ಪಡೆಯಬೇಕು ಎಂಬುದೇ ಅವರ ಇಚ್ಛೆ. ಅವರ ಉಪದೇಶಕ್ಕನುಗುಣವಾಗಿ ತನ್ನ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಶರತ್ ದೃಢನಿಶ್ಚಯ ಮಾಡಿದರು. ತಮಗೆ ರಜೆ ಸಿಕ್ಕಿದಾಗಲೆಲ್ಲ ದಕ್ಷಿಣೇಶ್ವರಕ್ಕೆ ಹೋಗುತ್ತಿದ್ದರು. ಒಂದು ದಿನ ಶ್ರೀ ರಾಮಕೃಷ್ಣರು ಶರಚ್ಚಂದ್ರರನ್ನು ಹತ್ತಿರ ಬರೆದು ಧ್ಯಾನ ಮಾಡಲು ಸಹಕಾರಿಯಾದ ಆಸನವನ್ನು ಹೇಳಿಕೊಟ್ಟರು. ಭಗವಂತನ ನಿರಾಕಾರ ಸ್ವರೂಪವನ್ನು ಧ್ಯಾನ ಮಾಡಲು ಯಾವ ಆಸನ ಅನುಕೂಲ, ಹೇಗೆ ಕುಳಿತುಕೊಳ್ಳಬೇಕು, ಕೈಗಳನ್ನು ಹೇಗೆ ಇಟ್ಟಿರಬೇಕು, ದೃಷ್ಟಿಯನ್ನು ಹುಬ್ಬುಗಳ ನಡುವೆ ಹೇಗೆ ಏಕಾಗ್ರಗೊಳಿಸಬೇಕು ಎಂಬುದನ್ನೆಲ್ಲ ತಾವೇ ಮಾಡಿ ತೋರಿಸಹೊರಟು ಗಾಢವಾದ ಧ್ಯಾನದಲ್ಲಿ ಮುಳುಗಿದರು. ಬಹು ಹೊತ್ತಿನ ಮೇಲೆ ಧ್ಯಾನದಿಂದ ಸಾಮಾನ್ಯ ಸ್ಥಿತಿಗೆ ಬಂದು ಸಾಕಾರ ಧ್ಯಾನದ ವಿಚಾರ ಹೇಳಹೊರಟು ತಿರುಗಿ ಧ್ಯಾನದಲ್ಲಿ ಮುಳುಗಿದರು. ಅವರಿಗೆ ಧ್ಯಾನ ಸಮಾಧಿಗಳು ಅಷ್ಟೊಂದು ಸಹಜವಾಗಿದ್ದವು.

ಇನ್ನೊಂದು ದಿನ ಮಣಿಮಲ್ಲಿಕಸೇನ ಎಂಭ ಭಕ್ತನ ಮನೆಯಲ್ಲಿ ಶ್ರೀ ರಾಮಕೃಷ್ಣರು ಕೀರ್ತನೆಯ ಆನಂದದಲ್ಲಿ ಮೈಮರೆತು ದಿವ್ಯ ಸುಂದರ ನರ್ತನ ಮಾಡಿದರು. ದೇವರನ್ನು ಇಷ್ಟೊಂದು ಗಾಢವಾಗಿ ಪ್ರೀತಿಸಿ ಮೈಮರೆಯಲು ಸಾಧ್ಯವೇ ಎಂದು ಶರತ್ ಚಕಿತರಾದರು. ಜೀವನವೆಲ್ಲ ಆ ಮಧುರ ಸ್ಮೃತಿ ಅವರ ಮನಸ್ಸಿನಿಂದ ಮಾಸಲಿಲ್ಲ.

ಬೇರೆ ಮತಿ, ಬೇರೆ ಮತ

ಪರಮಹಂಸರು ತಮ್ಮ ಶಿಷ್ಯರಿಗೆ ಅವರವರ ಶಕ್ತಿ, ಸಂಸ್ಕಾರ, ಒಲವುಗಳಿಗನುಗುನವಾಗಿ ಉಪದೇಶಗಳನ್ನು ನೀಡುತ್ತಿದ್ದರು. ಗೃಹಸ್ಥರಿಗೆ ಸಂಸಾರದಲ್ಲಿದ್ದುಕೊಂಡು ದೇವರನ್ನು ಪಡೆಯುವ ವಿಧಾನವನ್ನೇ ಹೇಳುತ್ತಿದ್ದರು. ಸಂನ್ಯಾಸದ ಒಲವಿರುವವರಿಗೆ ತ್ಯಾಗ – ವೈರಾಗ್ಯಗಳ ಅವಶ್ಯಕತೆ ಮತ್ತು ಮಹತ್ವವನ್ನು ಹೇಳುತ್ತಿದ್ದರು. ತೀವ್ರ ಸಾಧನೆಯಲ್ಲಿ ಮುಳುಗಬಲ್ಲ ಆಪ್ತಶಿಷ್ಯರಿಗೆ ಸಾಧನೆಗಳ ರಹಸ್ಯಗಳನ್ನೆಲ್ಲ ಗಂಟೆಗಳ ಕಾಲ ವಿವರಿಸುತ್ತಿದ್ದರು. ಬೇರೆ ಬೇರೆ ಧರ್ಮದ ಅನುಯಾಯಿಗಳಿಗೆ ಅವರವರ ಪಥದಲ್ಲಿ ಮುನ್ನಡೆಯುವಂತೆ ಮಾರ್ಗದರ್ಶನ ಮಾಡುತ್ತಿದ್ದರು. ಅವರು ಯಾರ ಧಾರ್ಮಿಕ ಭಾವನೆಗಳನ್ನೂ ನೋಯಿಸುತ್ತಿರಲಿಲ್ಲ. ಮನುಷ್ಯನು ನಿಂತ ನೆಲದಿಂದ ಮೇಲಕ್ಕೇರಬೇಕು ಎನ್ನುತ್ತಿದ್ದರು. ಎಲ್ಲರನ್ನೂ ದಿವ್ಯ ಆನಂದದ ಅಧಿಕಾರಿಗಳನ್ನಾಗಿ ಮಾಡುವ ಒಂದೇ ಒಂದು ಆಸೆ ಅವರದು. ಸತ್ಯನಿಷ್ಠೆ, ತೀವ್ರ ಹಂಬಲವಿದ್ದರೆ ಎಲ್ಲ ಪಥಗಳಿಂದಲೂ ದೈವೀ ಆನಂದವನ್ನು ಪಡೆಯಬಹುದೆಂದು ಅವರು ಹೇಳುತ್ತಿದ್ದರು. ಯಾರ ಪೂಜಾ ವಿಧಾನಗಳನ್ನೂ ಅವರು ನಿಂದಿಸುತ್ತಿರಲಿಲ್ಲ. ಪರಮಹಂಸರ ಪದತಲದಲ್ಲಿ ಕುಳಿತು ಏಕಾಗ್ರತೆಯಿಂದ ಅವರ ಉಪದೇಶಗಳನ್ನೆಲ್ಲ ಕೇಳಿದ ಶರತ್ ಮುಂದೆ ಸಂನ್ಯಾಸಿಯಾದ ಮೇಲೆ ಬಂಗಾಳಿ ಭಾಷೆಯಲ್ಲಿ ದೊಡ್ಡ ಗ್ರಂಥವನ್ನೇ ರಚಿಸಿದರು. ಅದರ ಹೆಸರು ಶ್ರೀ ರಾಮಕೃಷ್ಣ ಲೀಲಾ ಪ್ರಸಂಗ. ಸಾವಿರಾರು ಪುಟಗಳ ಈ ಗ್ರಂಥದಲ್ಲಿ ಪರಮಹಂಸರ ಜೀವನ ಸಾಧನೆಗಳನ್ನು ಕೂಲಂಕಷವಾಗಿ ವಿಮರ್ಶಿಸಿ ವಿವರಿಸಿದ್ದಾರೆ. ಅದು ಕನ್ನಡಕ್ಕೂ ಭಾಷಾಂತರವಾಗಿದೆ.

ನರೇಂದ್ರನನ್ನು ನೋಡು

ಒಂದು ದಿನ ಶ್ರೀ ರಾಮಕೃಷ್ಣರು ಮುಂದೆ ವಿವೇಕಾನಂದರೆಂದು ಪ್ರಸಿದ್ಧರಾದ ಕಾಲೇಜಿನ ತರುಣ ನರೇಂದ್ರನನ್ನು ವಿಶೇಷವಾಗಿ ಪ್ರಶಂಸಿಸಿದರು. ’ಆತನಂಥ ತೇಜಸ್ವಿಯಾದ ಹುಡುಗನನ್ನು ಈವರೆಗೂ ನೋಡಿಲ್ಲ. ಅವನು ಓದುಬರಹ, ಕೆಲಸ ಕಾರ್ಯಗಳಲ್ಲಿ ಚುರುಕು; ಅವನ ಮನಸ್ಸು ಬಹು ಶುದ್ಧ, ಅವನು ಚೆನ್ನಾಗಿ ಧ್ಯಾನ ಮಾಡಬಲ್ಲ. ಧ್ಯಾನದಲ್ಲಿ ಮುಳುಗಿ ಮೈಮರೆಯುತ್ತಾನೆ. ಹಾಡಿದನೆಂದರೆ ಕೇಳುವರಿಗೆ ರಸದೌತಣ; ವಾದ್ಯಗಳನ್ನು ಬಾರಿಸಬಲ್ಲ. ವಾದ ಮಾಡಿದನೆಂದರೆ ಎದುರಾಳಿಗಳು ನಿರುತ್ತರ. ತುಂಬ ಓದಿದ್ದಾನೆ; ಬಹಳ ವಿಚಾರ ತಿಳಿದುಕೊಂಡಿದ್ದಾನೆ. ಅವನಿಗೆ ಬಹಳ ವಿಶಾಲವೂ ಭಾವಪೂರ್ಣವೂ ಆದ ಕಣ್ಣುಗಳಿವೆ. ಆಹಾ, ನನ್ನ ನರೇಂದ್ರನಲ್ಲಿ ಎಷ್ಟೊಂದು ಗುಣಗಳು! ಶರತ್ ನೀನು ಅವನನ್ನು ನೋಡಿ ಮಾತನಾಡಿಕೊಂಡು ಬಾ, ಆ ಬಳಿಕ ಅವನ ಬಗೆಗೆ ನಿನ್ನ ಅಭಿಪ್ರಾಯವನ್ನು ತಿಳಿಸು’ ಎಂದರು.

೧೮೮೪ರ ಚಳಿಗಾಲ, ಶರತ್ ನರೇಂದ್ರನಾಥರನ್ನು ನೋಡಲು ಅವರ ಮನೆಗೆ ಹೋದರು. ಪರಮಹಂಸರು ತನ್ನನ್ನು ಕಾಣಲು ಶರತ್ರನ್ನು ಕಳುಹಿಸಿದ್ದಾರೆ ಎಂಬುದು ನರೇಂದ್ರರಿಗೆ ತಿಳಿಯಿತು. ಪ್ರಥಮ ಭೇಟಿಯಲ್ಲೇ ಇಬ್ಬರೂ ಆಪ್ತಗೆಳೆಯರಾದರು. ವಿವಿಧ ವಿಷಯಗಳನ್ನು ಕುರಿತು ಅನೇಕ ಗಂಟೆಗಳ ಕಾಲ ಚರ್ಚಿಸುತ್ತಿದ್ದರು. ಕೆಲವೊಮ್ಮೆ ಶರತ್ರನ್ನು ಮನೆಯ ತನಕ ಕಳುಹಿಸಿಕೊಡಲು ನರೇಂದ್ರರೂ ಹೊರಡುವರು. ಮನೆಯನ್ನು ಸಮೀಪಿಸಿದರೂ ಅವರ ಮಾತು ಮುಗಿದಿರುತ್ತಿರಲಿಲ್ಲ. ನರೇಂದ್ರರು ಹಿಂದಿರುಗುವಾಗ ಅವರ ಜತೆಯಲ್ಲಿ ಶರತ್ ಹೊರಡುವರು. ಹೀಗೆ ಅವರ ಓಡಾಟದ ಕಾಲದಲ್ಲಿ ಹತ್ತಾರು ವಿಚಾರಗಳು ಚರ್ಚೆಗೆ ಬರುತ್ತಿದ್ದವು. ಶರತರು ಕೆಲವು ವರ್ಷಗಳ ಬಳಿಕ ಆ ದಿನಗಳನ್ನು ನೆನೆಯುತ್ತಾ ಹೀಗೆನ್ನುತ್ತಿದ್ದರು : ’ನಾನು ನರೇಂದ್ರರೊಡನೆ ಎಷ್ಟೊಂದು ಸಲಿಗೆಯಿಂದ ನಡೆದು ಕೊಂಡಿದ್ದರೂ ಅವರೊಬ್ಬ ಮಹಾವ್ಯಕ್ತಿ ಎಂಬುದನ್ನು ಮೊದಲಿನಿಂದಲೂ ತಿಳಿದುಕೊಂಡಿದ್ದೆ. ಶ್ರೀ ರಾಮಕೃಷ್ಣರ ಮಹಿಮೆಯನ್ನು ಸ್ವಲ್ಪಮಟ್ಟಿಗೆ ಸರಿಯಾಗಿ ತಿಳಿದು ಕೊಂಡವರು ಇಬ್ಬರು – ಸ್ವಾಮಿ ವಿವೇಕಾನಂದರು ಮತ್ತು ನಾಗಮಹಾಶಯರು. ನಾನಾದರೋ ಪರಮಹಂಸರ ಆಜ್ಞೆಯನ್ನು ಪಾಲಿಸಲು ಯತ್ನಿಸುತ್ತಿದ್ದೇನೆ ಅಷ್ಟೇ’. ಅವರದು ಅಂಥ ನಮ್ರತೆಯ ನಿಲುವು.

ಒಂದು ದಿನ ಶ್ರೀರಾಮಕೃಷ್ಣರು ಧ್ಯಾನಸ್ಥಿತಿಯಲ್ಲಿ ಇದ್ದಾಗಲೇ  ಶರತ್ರ ಮಡಿಲಲ್ಲಿ ಕ್ಷಣಕಾಲ ಕುಳಿತರು. ಧ್ಯಾನದಿಂದ ಎಚ್ಚೆತ್ತ ಮೇಲೆ ಹೀಗೆಂದರು: ’ಇವನಿಂದ ಎಷ್ಟು ಭಾರ ಹೊರಲು ಸಾಧ್ಯ ಎಂಬುದನ್ನು ಪರೀಕ್ಷೆ ಮಾಡಿ ನೋಡಿದೆ’. ಅದು ಅರ್ಥಪೂರ್ಣ ಭವಿಷ್ಯ ಸೂಚಕ ಪರೀಕ್ಷೆ. ಮುಂದೆ ಶರತ್ ಶಾರದಾನಂದರಾಗಿ ಸಂಘದ ಮುಖ್ಯಕಾರ್ಯದರ್ಶಿಯಾಗಿ ಮೂವತ್ತು ವರ್ಷಗಳ ಕಾಲ ಸಂಘದ ಗುರುತರ ಕಾರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. ಮಹಾಮಾತೆ ಶ್ರೀ ಶಾರದಾದೇವಿಯವರ ಏಕನಿಷ್ಠ ಸೇವಕರಾಗಿಯೂ ದುಡಿದರು. ರೋಗಿಗಳ ಆರೈಕೆಯನ್ನೂ ಮಾಡಿದರು. ಗ್ರಂಥರಚನೆ, ಪ್ರವಚನಾ ಕಾರ್ಯಕ್ರಮಗಳನ್ನು ಕೈಗೊಂಡರು.

ಶ್ರೀ ರಾಮಕೃಷ್ಣ ಪರಮಹಂಸರೊಡನೆ

ನಿನಗೇನು ಬೇಕು?

ಪರಮಹಂಸರು ಕೆಲವೊಮ್ಮೆ ತಮ್ಮ ಶಿಷ್ಯರನ್ನು ’ನಿನಗೇನು ಬೇಕು?’ ಎಂದು ಕೇಳುತ್ತಿದ್ದರು. ’ನಿನಗೆ ದೇವರನ್ನು ಯಾವ ದಿವ್ಯರೂಪದಲ್ಲಿ ಕಾಣಲು ಆಸೆ?’ ಎಂಬುದು ಪ್ರಶ್ನೆಯ ಅರ್ಥ. ಶರತ್ ’ಎಲ್ಲೆಲ್ಲೂ, ಎಲ್ಲ ಜೀವಿಗಳಲ್ಲೂ ಸೂಕ್ಷ್ಮನಾಗಿದ್ದು ಕೊಂಡಿರುವ ಭಗವಂತನನ್ನು ಕಾಣಬೇಕು ಎಂಬ ಆಸೆ ನನಗೆ. ಕೇವಲ ರೂಪದರ್ಶನ ಮಾಡಬೇಕೆಂಬುದೇ ನನ್ನ ಬಯಕೆಯಲ್ಲ’ ಎಂದ. ಪರಮಹಂಸರು ನಸುನಕ್ಕು ಹೇಳಿದರು: ’ಅಯ್ಯಾ, ಅದು ಸಾಧನೆಯ ಕೊನೆಯ ಸ್ಥಿತಿ. ಅತ್ಯುಚ್ಛ ಸ್ಥಿತಿ. ಅದು ಥಟ್ಟನೇ ದೊರೆತೀತೇ?’ ಶರತ್ ಉತ್ತರಿಸಿದರು, ’ತಡವಾದರೂ ಚಿಂತೆಯಿಲ್ಲ. ಅದಕ್ಕಿಂತ ಕಿರಿದಾದ ಅನುಭವ ನನ್ನ ಮನಸ್ಸಿಗೆ ತೃಪ್ತಿಯನ್ನು ತಾರದು. ಅದು ದೊರೆಯುವವರೆಗೂ ನಾನು ಆ ದಾರಿಯಲ್ಲೇ ನಡೆಯುತ್ತಾ ಹೋಗುವೆ.’ ಶರತ್ರ ತಾಳ್ಮೆ ಮತ್ತು ಉಚ್ಚ ಆದರ್ಶ, ಸಾಧಿಸುವ ಕೆಚ್ಚನ್ನು ಸೂಚಿಸುವ ಉತ್ತರ ಶ್ರೀ ರಾಮಕೃಷ್ಣರಿಗೆ ವಿಶೇಷ ಆನಂದವನ್ನುಂಟುಮಾಡಿದವು. ಅವರು ’ಅದು ನಿನಗೆ ಸಾಧ್ಯವಾಗುತ್ತದೆ’ ಎಂದು ಹರಸಿದರು.

ಶಿವನು ನಿನ್ನ ಆದರ್ಶ

ವಿಘ್ನನಿವಾರಕ ವಿಘ್ನೇಶ್ವರನ ಜ್ಞಾನ-ಭಕ್ತಿ ವೈರಾಗ್ಯವೇ ಮೊದಲಾದ ಗುಣಗಳನ್ನು ಒಂದು ದಿನ ಪರಮಹಂಸರು ಕೊಂಡಾಡಿದರು. ವಿನಾಯಕ ಮೂರು ಲೋಕದ ಎಲ್ಲ ಸ್ತ್ರೀಯರಲ್ಲೂ ಜಗನ್ಮಾತೆಯ ಸ್ವರೂಪವನ್ನೇ ಕಂಡವನು. ಆದುದರಿಂದಲೇ ಅವನು ವಿವಾಹವಾಗದೇ ಉಳದಿವನು. ಎಲ್ಲರಲ್ಲೂ ಜಗನ್ಮಾತೆಯನ್ನು ಕಂಡವನು ಯಾರನ್ನು ಮದುವೆಯಾಗುವುದು? ಗಣೇಶನ ಗುಣವೈಭವವನ್ನು ಕೇಳಿದ ಶರತ್ “ಗಣೇಶನೇ ನನ್ನ ಇಷ್ಟ ದೇವತೆ” ಎಂದ. ಪರಮಹಂಸರು ಥಟ್ಟನೇ ಶರತ್ರನ್ನು ತಿದ್ದಿದರು. ’ಶಿವನು ನಿನ್ನ ಇಷ್ಟದೇವ. ನಿನ್ನಲ್ಲಿ ಶಿವನ ಗುಣಗಳಿವೆ’ ಎಂದರು. ಲೋಕನಾಶಕವಾದ ವಿಷವನ್ನು ಸ್ವೀಕರಿಸಿದ ಕರುಣಾಳು ಶಿವ. ಲೋಕದುಃಖದಿಂದ ವ್ಯಥಿತರಾಗಿ ತಮಗೆಷ್ಟೇ ಕಷ್ಟವಾದರೂ ಸದಾ ಇತರರ ಸಂಕಟವನ್ನು ದೂರ ಮಾಡಲು ಯತ್ನಿಸಿದವರು ಶಾರದಾನಂದರು. ಅವರ ಈ ಗುಣವನ್ನೇ ಸೂಕ್ಷ್ಮವಾಗಿ ಸೂಚಿಸಿದ್ದರು ಶ್ರೀ ರಾಮಕೃಷ್ಣರು.

ತ್ಯಾಗದ ದಾರಿಯಲ್ಲಿ

೧೮೮೫ ರಲ್ಲಿ ಶರತ್ ವಿಶ್ವವಿದ್ಯಾನಿಲಯದ ಫಸ್ಟ್ ಆರ್ಟ್ಸ್ಪರೀಕ್ಷೆಯನ್ನು ಪಾಸು ಮಾಡಿದರು. ಅವನ ತಂದೆಗೆ ಮಗನು ಡಾಕ್ಟರ್ ಆಗಬೇಕೆಂಬ ಹಂಬಲ. ಆದರೆ ಶರತ್ಗೆ ಡಾಕ್ಟರನಾಗಲು ಅಷ್ಟೊಂದು ಆಸಕ್ತಿ ಇರಲಿಲ್ಲ. ಆಪ್ತಮಿತ್ರರಾದ ನರೇಂದ್ರರ ಒತ್ತಾಯಕ್ಕೆ ಮಣಿದು ಕಲ್ಕತ್ತ ಮೆಡಿಕಲ್ ಕಾಲೇಜನ್ನೇನೋ ಸೇರಿದ. ಆದರೆ ಅಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಶ್ರೀರಾಮಕೃಷ್ಣರಿಗೆ ಅನಾರೋಗ್ಯವಾದಾಗ ಗುರುಸೇವೆಯ ಕಾರ್ಯಕ್ಕಾಗಿ ಶಿಷ್ಯರೆಲ್ಲರೂ ಕಾಶೀಪುರದ ತೋಟದ ಮನೆಯಲ್ಲಿ ಸೇರಿದರು. ಅಧ್ಯಯನಕ್ಕೆ ತಿಲಾಂಜಲಿಯನ್ನಿತ್ತು ತನ್ನ ಪಾಲಿಗೆ ಬಂದ ಸೇವೆಯನ್ನು ಮಾಡಲು ಶರತ್ ಹಿಂಜರಿಯಲಿಲ್ಲ. ಶ್ರೀ ರಾಮಕೃಷ್ಣರ ಸೇವೆಯಲ್ಲಿ ಶರತ್ ತಮ್ಮನ್ನು ಪೂರ್ಣವಾಗಿ ಸಮರ್ಪಿಸಿಕೊಂಡರು. ಇದರಿಂದ ಅವರ ತಂದೆಗೆ ಆಶಾಭಂಗವಾಯಿತು. ಏನಾದರೂ ಮಾಡಿ ಮಗನನ್ನು ಪರಮಹಂಸರ ಆಕರ್ಷಣೆಯಿಂದ ಬಿಡಿಸಬೇಕೆಂದು ಪ್ರಯತ್ನಿಸಿದರು. ಅದಕ್ಕಾಗಿ ಅವರು ತಮ್ಮ ಕುಲಗುರುವೂ ಮಹಾ ಪಂಡಿತರೂ ಆದ ಜಗನ್ನಾಥ ತರ್ಕಾಲಂಕಾರರೊಡನೆ ಮಗನನ್ನು ವಾಪಸಲು ಕರೆದುಕೊಂಡುಬರಲು ದಕ್ಷಿಣೇಶ್ವರಕ್ಕೆ ಹೋದರು.ಅಲ್ಲಿ ಶ್ರೀರಾಮಕೃಷ್ಣರ ಹತ್ತಿರ ವಾದ ಮಾಡಿ ಅವರನ್ನು ಸೋಲಿಸಿ  ಮಗನನ್ನು ಹಿಂದಿರುಗಿಸಬೇಕೆಂದು ಅವರ ಯೋಚನೆ. ಆದರೆ ಶ್ರಿ ರಾಮಕೃಷ್ಣರು ಒಂದೆರಡು ಮಾತನಾಡುತ್ತಲೆ ಪಂಡಿತನಿಗೆ ಅವರ ಮಹಿಮೆ ತಿಳಿಯಿತು. ತಾನೊಂದು ಪುಟ್ಟ ದೀಪ ವಾದರೆ ಪರಮಹಂಸರೋ ಧಗಧಗಿಸುವ ಮಹಾಜ್ವಾಲೆ ಎಂದು ಆತನೆಂದು ಕೊಂಡ. ’ಶರತ್ ಮಹಾಗುರುವಿನ ಸಾನ್ನಿಧ್ಯದಲ್ಲಿದ್ದಾನೆ, ಜೀವನ ಸಾರ್ಥಕ ಮಾಡಿಕೊಳ್ಳುತ್ತಿದ್ದಾನೆ. ತಾನು ದೇವರ ಕೃಪೆಯನ್ನು ಪಡೆದು ಎಲ್ಲರಿಗೂ ಶಾಂತಿ ಸಮಾಧಾನ ನಿಡುತ್ತಾನೆ’ ಎಂದು ತಂದೆ ಗಿರೀಶಚಂದ್ರರನ್ನು ಸಮಾಧಾನ ಮಾಡಿದರು.

ವಿರಕ್ತಿಯ ಪಥದಲ್ಲಿ

ಶ್ರೀ ರಾಮಕೃಷ್ಣರು ನಿಧನರಾದ ನಂತರ ಶರತ್ರು ಕೆಲವು ದಿನಗಳ ಕಾಲ ಮನೆಗೆ ಹಿಂದಿರುಗಿದ್ದರು. ಆದರೆ ಆಗಾಗ ಪರಮಹಂಸರ ಶಿಷ್ಯರು ವಾಸವಾಗಿದ್ದ ವರಾಹ ನಗರದ ಮಠಕ್ಕೆ ಹೋಗಿ ಬರುತ್ತಿದ್ದರು. ಮನೆಗೆ ಬಂದ ಮಗನನ್ನು ಕಂಡು ಅವನ ತಂದೆ ತಾಯಿಗಳಿಗೆ ಆನಂದ. ಆದರೆ ಆತನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರು ತಿಳಿಯಲಿಲ್ಲ. ಶರಚ್ಚಂದ್ರರ ಮನಸ್ಸಿನಲ್ಲಿ ಗುರುವಿನ ವಾಣಿ ಗುಣುಗುಟ್ಟುತ್ತಿತ್ತು. ತೀವ್ರ ತಪಸ್ಸಿನಲ್ಲಿ ಮುಳುಗಲು ಹಂಬಲಿಸುತ್ತಿತ್ತು. ಆದರೆ ತಂದೆ ಮಗನನ್ನು ಮನೆಯಲ್ಲಿ ಉಳಿಸಿಕೊಂಡು ಲೋಕಜೀವನ ನಡೆಸಲು ಒತ್ತಾಯಿಸುತ್ತಿದ್ದರು. ಅವನು ತಮ್ಮ ಮಾತನ್ನು ಒಪ್ಪುವಂತೆ ಮಾಡಲು ಹಲವು ರೀತಿಗಳಲ್ಲಿ ಅವನೊಡನೆ ವಾದಮಾಡಿದರು. ಅದು ಸಾಧ್ಯವಾಗದಿದ್ದಾಗ ಬಲಪ್ರಯೋಗವನ್ನೂ ಮಾಡಿದರು. ಅವನನ್ನು ಕೋಣೆಯಲ್ಲಿ ಕೂಡಿಹಾಕಿ ಬಾಗಿಲಿಗೆ ಬೀಗಮುದ್ರೆ ಮಾಡಿದರು. ಆದರೆ ಶರತ್ ಇದಾವುದಕ್ಕೂ ಜಗ್ಗಲಿಲ್ಲ. ತಮ್ಮ ಸ್ವಭಾವಸಿದ್ದ ಗುಣ ಬಿಡಲಿಲ್ಲ. ತಮ್ಮ ಗುರಿಯಿಂದ ವಿಚಲಿತರಾಗಲಿಲ್ಲ. ಜಪ, ಪ್ರಾರ್ಥನೆ, ಧ್ಯಾನಗಳಲ್ಲೇ ಸದಾ ಮಗ್ನರಾಗಿರುತ್ತಿದ್ದರು. ಶರತ್ನ ಕಿರಿಯ ಸಹೋದರ ಅಣ್ಣನ ಮೇಲಿನ ಪ್ರೇಮದಿಂದ ಬಾಗಿಲನ್ನು ತೆಗೆಯುತ್ತಿದ್ದ. ಶರತ್ ಮಠಕ್ಕೆ ಹೊರಟು ಬಿಡುತ್ತಿದ್ದರು.

೧೮೮೬ ನೇ ಇಸವಿ ಡಿಸೆಂಬರ್ ತಿಂಗಳ ಕೊನೆಯಲ್ಲಿ ವಿವೇಕಾನಂದರ ನೇತೃತ್ವದಲ್ಲೇ ಶರತ್ ಸಂನ್ಯಾಸ ಸ್ವೀಕರಿಸಿ ಶಾರದಾನಂದರಾದರು. ತಂದೆತಾಯಿಯರಿಗೆ ಮಗನು ಸಂನ್ಯಾಸಿಯಾದ ವಿಚಾರ ತಿಳಿಯಿತು. ಆದರೆ ಈ ಬಾರಿ ಅವರು ಶರತ್ನನ್ನು ಮನೆಗೆ ಹಿಂದಿರುಗುವಂತೆ ಕೇಳಿಕೊಳ್ಳಲಿಲ್ಲ. ಬದಲಾಗಿ ಹಿಡಿದ ದಾರಿಯಲ್ಲಿ ಮುನ್ನಡೆದು ಗುರಿ ಸೇರುವಂತಾಗಲಿ ಎಂದು ಹಾರೈಸಿದರು.

ತಪಸ್ಸು ಮತ್ತು ಸಂಚಾರ

ಸಂನ್ಯಾಸ ಸ್ವೀಕರಿಸಿದ ನಂತರ ಸ್ವಾಮಿ ಶಾರದಾನಂದರು ಮಠದಲ್ಲಿ ಧ್ಯಾನಸಾಧನೆಯಲ್ಲಿ ನಿರತರಾದರು. ಅನ್ನ ಆಹಾರದ ಪರಿವೆಯಿರುತ್ತಿರಲಿಲ್ಲ ಅವರಿಗೆ. ಆತ್ಮ ಸಾಕ್ಷಾತ್ಕಾರ ಅವರ ಧ್ಯೇಯವಾಗಿತ್ತು. ಅದನ್ನು ಪಡೆದರೆ ದಿವ್ಯ ಆನಂದ ಮಾತ್ರವಲ್ಲ, ಸರ್ವವಿಧ ಬಂಧನಗಳಿಂದ ಮುಕ್ತಿ ಪಡೆಯಬಹುದು ಎಂಬುದು ಅವರಿಗೆ ಗುರುವಿನಿಂದ ತಿಳಿದಿತ್ತು. ಶ್ರೀಗುರುವು ಅವರಿಗೆ ದಾರಿಯನ್ನು ತೋರಿಸಿದ್ದರು. ಶಾರದಾನಂದರು ಆ ದಾರಿಯಲ್ಲಿ ಮುನ್ನಡೆಯಲು ದೃಢಸಂಕಲ್ಪ ಮಾಡಿದ್ದರು. ಕೆಲವೊಮ್ಮೆ ಧ್ಯಾನದಿಂದ ಎಚ್ಚೆತ್ತು ತಮ್ಮ ಮಧುರಕಂಠದಿಂದ ದೇವರ ಸ್ತೋತ್ರಗಳನ್ನು ಹಾಡುತ್ತಿದ್ದರು. ಅವರ ಹಾಡನ್ನು ಕೇಳಿದಾಗ ಅಲ್ಲಿದ್ದ ಉಳಿದ ಸಾಧುಗಳು ಭಕ್ತಿ ಪರವಶರಗುತ್ತಿದ್ದರು. ಕಾಲೇಜಿನ ದಿನಗಳಲ್ಲಿ ವಿವೇಕಾನಂದರಿಂದ ತಬಲಾವಾದನ ಮತ್ತು ಹಾಡುಗಾರಿಯನ್ನು ಕಲಿತಿದ್ದರು.

ಸಂನ್ಯಾಸಿಗಳು ಕೈಯಲ್ಲಿ ಕಾಸನ್ನಿಟ್ಟುಕೊಳ್ಳದೆ ನಾಳಿನ ಭೋಜನ ಎಲ್ಲಿ ಎಂಬುದನ್ನು ಯೋಚಿಸದೆ ದೇವರನ್ನೇ ನೆಚ್ಚಿ ಸಂಚರಿಸುವ ಸಂಪ್ರದಾಯವಿದೆ. ದೇವರಲ್ಲಿ ತಮ್ಮ ಶರಣಾಗತಿಯ ಪರೀಕ್ಷೆಗೊಂದು ಅವಕಾಶವದು ಎಂದವರು ತಿಳಿಯುತ್ತಾರೆ. ಜೊತೆಗೆ ಪವಿತ್ರಕ್ಷೇತ್ರಗಳ ಸಂದರ್ಶನ ಮತ್ತು ಮಹಾತ್ಮರ ಸಂಪರ್ಕ – ಇವೂ ಸಾಧ್ಯವಾಗುತ್ತವೆ. ಸ್ವಾಮಿ ಶಾರದಾನಂದರು ೧೮೯೦ ರಲ್ಲಿ ಪುರಿ, ವಾರಣಸಿ, ಅಯೋಧ್ಯೆ, ಹೃಷಿಕೆಶ, ಹರಿದ್ವಾರ, ಕೇದಾರನಾಥ, ಬದರಿ, ನಾರಾಯಣ, ಗಂಗೋತ್ರ, ಮಥುರಾ, ವೃಂದಾವನ, ಅಲಹಾಬಾದ್ ಮೊದಲಾದ ಸ್ಥಾನಗಳನ್ನು ಕಾಲ್ನಡಿಗೆಯಲ್ಲೆ ಸಂಚರಿಸಿದರು. ಕಾಶಿಯಲ್ಲಿ ಅವರು ವಿಶೇಷ ಸಾಧನೆ- ಭಜನೆಗಳಲ್ಲಿ ಮಗ್ನರಾಗಿದ್ದರು. ಅವರು ತಪೋಮಯ ಜೀವನ ಮತ್ತು ನಡೆನುಡಿಗಳನ್ನು ಹತ್ತಿರದಿಂದ ಪರಿಶೀಲಿಸಿದ ಸಾಧಕನೊಬ್ಬ ಅವರಿಂದ ವಿಶೇಷ ರೀತಿಯಲ್ಲಿ ಪ್ರಭಾವಿತನಾದ. ಆತ ಸ್ವಾಮಿ ಶಾರದಾನಂದರಿಂದಲೇ ಸಂನ್ಯಾಸ ಸ್ವೀಕರಿಸಿ ಅವರ ಶಿಷ್ಯನಾದ. ಸ್ವಾಮಿ ಶಾರದಾನಂದರು ಗಾಢ ಧ್ಯಾನದಲ್ಲಿ ಮುಳುಗಿದಾಗ ಅವರ ಮುಖಮಂಡಲದಲ್ಲಿ ವಿಶೇಷ ಶಾಂತಿ, ತೇಜಸ್ಸುಗಳು ಕಾಣಿಸುತ್ತಿದ್ದವು. ಅವರು ಯಾವುದೇ ಕೆಲಸದಲ್ಲಿ ಮಗ್ನವಾಗಿದ್ದರೂ ಅವೇ ಶಾಂತಿ-ಕಾಂತಿ ತೇಜಸ್ಸುಗಳು  ಮುಖದಲ್ಲಿ ಹೊರ ಹೊಮ್ಮುತ್ತಿದ್ದವು.

ಕೊಠಡಿಯಲ್ಲಿ ಶರತ್ ಧ್ಯಾನಮಗ್ನ

ವಿದೇಶಗಳಿಗೆ ಪಯಣ

೧೮೯೩ ರಲ್ಲಿ ವಿವೇಕಾನಂದರು ಅಮೆರಿಕದ ಷಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ವಿಜಯ ಧ್ವಜವನ್ನು ಹಾರಿಸಿದರು. ಅವರ ಅಮೃತವಾಣಿಯನ್ನು ಕೇಳಲು ಅಲ್ಲಿನ ಜನ ಉತ್ಸುಕರಾದರು. ವಿವಿಧ ಕಡೆಗಳಿಂದ ಅವರಿಗೆ ಆಹ್ವಾನ ಬರತೊಡಗಿತ. ಅವಿರತವಾಗಿ ಕೆಲಸದ ಒತ್ತಡ ಅವರ ಮೇಲಿತ್ತು. ಅವರಿಗೊಬ್ಬ ಯೋಗ್ಯ ಸಹಾಯಕನ ಆವಶ್ಯಕತೆ ಇತ್ತು. ವಿವೇಕಾನಂದರು ಶಾರದಾನಂದರನ್ನು ತಮ್ಮ ಕಾರ್ಯದಲ್ಲಿ ನೆರವಾಗಲು ಕರೆದುರ. ಅವರ ಕರೆಗೆ ಓಗೊಟ್ಟು ಶಾರದಾಗಲು ಕರೆದರು. ಅವರ ಕರೆಗೆ ಓಗೊಟ್ಟು ಶಾರದಾನಂದರು ೧೮೮೬ನೇ ಇಸವಿ ಏಪ್ರಿಲ್ ತಿಂಗಳಲ್ಲಿ ಇಂಗ್ಲೆಂಡಿಗೆ ಹೋದರು. ವಿವೇಕಾನಂದರು ಶಾರದಾನಂದರಿಗೆ ಭಾಷಣ ಕಲೆಯಲ್ಲಿ ಸ್ವತಃ ತಾವೇ ತರಬೇತಿಯನ್ನು ನೀಡಿದರು. ಶಾರದಾನಂದರು ಕೆಲವು ತಿಂಗಳುಗಳ ಕಾಲ ಲಂಡನ್ನಿನಲ್ಲಿ ಪ್ರವಚನಗಳನ್ನು ನೀಡಿ ಮುಂದೆ ನ್ಯೂಯಾರ್ಕ್ನಗರಕ್ಕೆ ಹೋದರು. ಅಲ್ಲಿ ಅವರು ಹೆಚ್ಚು ಜನಪ್ರಿಯರಾದರು. ಅವರ ಗಾಂಭೀರ್ಯ, ವಿನಯ, ಪ್ರೀತಿಯಿಂದ ಕೂಡಿದ ಸರಳವಾದ ವ್ಯವಹಾರ, ಪಾಂಡಿತ್ಯ ಪೂರ್ಣ ಪ್ರವಚನ -ಇವು ಅನೇಕಮಂದಿ ಭಕ್ತರನ್ನೂ ಸ್ನೇಹಿತರನ್ನೂ ಅವರೆಡೆಗೆ ಸೆಳೆದವು. ನ್ಯಾಯಾರ್ಕ್ನರಗದಲ್ಲಿ ವೇದಾತ ಸಂಘವನ್ನು ಸ್ಥಾಪಿಸಿಅಲ್ಲೇ ಕೆಲಕಾಲ ಭಾರತೀಯ ದರ್ಶನಗಳ ಬಗ್ಗೆ ಪ್ರವಚನಗಳನ್ನು ನೀಡಿದರು.

ಮರಳಿ ಸ್ವದೇಶಕ್ಕೆ

ಸ್ವಾಮಿ ವಿವೇಕಾನಂದರು ವಿದೇಶದಿಂದ ಭಾರತಕ್ಕೆ ಮರಳಿದಾಗ ಎಲ್ಲೆಲ್ಲೂ ಜನರು ಅವರಿಗೆ ವಿಶೇಷ ಉತ್ಸಾಹ ಮತ್ತು ಸಂಭ್ರಮದ ಸ್ವಾಗತವನ್ನಿತ್ತರು. ಕೊಲಂಬೊದಿಂದ ಅಲ್ಮೋರದವರೆಗೆ ವೇದಾಂತಕೇಸರಿ ವಿವೇಕಾನಂದರ ’ಎದ್ದೇಳಿ, ಎಚ್ಚರಗೊಳ್ಳಿ, ಗುರಿಮುಟ್ಟುವವರೆಗೆ ನಿಲ್ಲದಿರಿ’ ಎಂಬ ವೀರಗರ್ಜನೆ ಮೊಳಗಿತು. ವಿವೇಕಾನಂದರು ರಾಷ್ಟ್ರದ ಹಿತಕ್ಕಾಗಿ, ಬಹು ಜನರ ಹಿತಕ್ಕಾಗಿ ವಿದ್ಯಾವಂತರು, ಸಮಾಜದ ಮೆಲಿನ ಹಂತದಲ್ಲಿರುವವರು ದುಡಿಯ ಬೇಕೆಂದು ಕರೆಯಿತ್ತರು. ಭಾರತದ ನೆಲವನ್ನು ಕಾರ್ಮೋಡದಂತೆ ಆವರಿಸಿದ ಆಜ್ಞಾನರೋಗ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಆಸಕ್ತರಾದ ಯುವಕರು ತ್ಯಾಗ ಮತ್ತು ಸೇವೆಯಲ್ಲಿ ದೀಕ್ಷಿತರಾಗಬೇಕೆಂದು ಹೇಳಿದರು. ಅದಕ್ಕಾಗಿಯೇ ಶ್ರೀ ರಾಮಕೃಷ್ಣ ಮಿಷನ್ ಹಸರಿನ ಸಂಸ್ಥೆಯನ್ನು ಸ್ಥಾಪಿಸಿದರು. ಆ ಸಂಘದ ಮುಖ್ಯಕಾರ್ಯದರ್ಶಿಯಾಗಿ ಯಾರನ್ನು ಆರಿಸಬೇಕು ಎಂಬ ಪ್ರಶ್ನೆ ಬಂದಾಗ ವಿವೇಕಾನಂದರ ಮನಸ್ಸಿಗೆ ಮೊದಲು ಬಂದುದು ಶಾರದಾನಂದರ ಹೆಸರು. ವಿವೇಕಾನಂದರು ಭಾರತಕ್ಕೆ ಹಿಂದಿರುಗುವಂತೆ ಶಾರದಾನಂದರನ್ನು ಕೇಳಿಕೊಂಡರು. ಅವರ ಕರೆಯನ್ನು ಮನ್ನಿಸಿ ಶಾರದನಂದರು ೧೮೯೮ನೇ ಇಸವಿ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಮರಳಿದರು.

ಕರ್ಮಯೋಗಿ

ಸಂಘದ ಕಾರ್ಯದರ್ಶಿಯಾಗಿ ಶಾರದಾನಂದರು ಮೂವತ್ತು ವರ್ಷಗಳ ಕಾಲ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಂಸ್ಥೆಗೆ ಬಂದೊದಗಿದ ನಾನಾ ತೆರನಾದ ವಿಘ್ನ ವಿಪತ್ತುಗಳನ್ನು ಪರಿಹರಿಸುವಲ್ಲಿ ಅವರು ತೋರಿದ ಅಪಾರ ಪರಿಶ್ರಮ ಮತ್ತು ದಕ್ಷತೆಗಳು ಅನುಕರಣೀಯ ವಾದವು. ಸಂಸ್ಥೆಯು ಮುಗ್ಗರಿಸದೇ ಮುನ್ನಡೆಯುವಂತೆ ಅವರು ವಿಶೇಷ ಶ್ರಮವಹಿಸಿದರು. ಮಾಡುವ ಕೆಲಸವನ್ನು ಎಷ್ಟೇ ಚಿಕ್ಕದಾಗಿದ್ದರೂ ದೇವರ ಕೆಲಸವೆಂದು ಮಾಡುತ್ತಿದ್ದರು. ಮಾಡಿ ಎಂದವರು ಹೇಳಿ ಸುಮ್ಮನಾಗುತ್ತಿರಲಿಲ್ಲ, ಸ್ವತಃ ತಾವೇ ಮಾಡಿ ಮೌನವಾಗಿಯೂ ಬೋಧಿಸುತ್ತಿದ್ದರು.

ಸಂಸ್ಥೆಯ ಕೆಲಸದ ಜೊತೆಗೆ ಕ್ಷಾಮ ಪರಿಹಾರದ ಕಾರ್ಯವನ್ನೂ ಬೇರೆಬೇರೆ ಕಡೆಗಳಲ್ಲಿ ಧಾರ್ಮಿಕ ಪ್ರವಚನವನ್ನೂ ಕೈಗೊಂಡರು. ಅವರಿಗೆ ಅತ್ಯಂತ ಪ್ರಿಯವಾದ ರೋಗಿಗಳ ಸೇವೆಯ ಕೆಲಸವೂ ನಡೆದಿತ್ತು. ರಾಜಸ್ಥಾನದ ಕಿಷನ್ಗಢ ಎಂಬಲ್ಲಿ ಕ್ಷಾಮ ಉಂಟಾದಾಗ ಸಂತ್ರಸ್ಥರಿಗೆ ನೆರವಾಗಲು ಧನಿಕರಿಂದ ಧನ ಸಹಾಯ ಸಿಗಲಿಲ್ಲ. ಶಾರದಾನಂದರು ಈ ಸೇವಾಕಾರ್ಯಕ್ಕಾಗಿ ಸಾಲವನ್ನು ಮಾಡಲು ಹಿಂಜರಿಯಲಿಲ್ಲ.

ಹೊಸದಾಗಿ ಮಠಕ್ಕೆ ಸೇರಿದ ಕಿರಿಯ ಬ್ರಹ್ಮಚಾರಿಗಳಲ್ಲಿ ಪೂರ್ಣವಿಶ್ವಾಸವನ್ನು ಇಟ್ಟು ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳುತ್ತಿದ್ದರು.ಯಾರಲ್ಲೇ ಆಗಲಿ, ಪೂರ್ಣ ವಿಶ್ವಾಸವಿಟ್ಟರೆ ಅವರು ದ್ರೋಹ ಮಾಡಲರರು ಎಂದವರು ಹೇಳುತ್ತಿದ್ದರು. ಹೊಸದಾಗಿ ಮಠವನ್ನು ಸೇರಿದ ಒಬ್ಬ ಯುವಕನ ಕೈಯಲ್ಲಿ ಒಮ್ಮೆ ಅವರು ಮೂರು ಸಾವಿರ ರೂಪಾಯಿಗಳನ್ನು ಕೊಟ್ಟು ಅದನ್ನು ಸೇವಾಕೇಂದ್ರಕ್ಕೆ ಕೊಟ್ಟು ಬರುವಂತೆ ಹೇಳಿದ್ದರು. ಆತನೂ ಹಣವನ್ನು ತಲುಪಿಸಿದ್ದ. ಆಶ್ರಿತ ವಾತ್ಸಲ್ಯ ಅವರ ಇನ್ನೊಂದು ಮಹಾಗುಣ. ತನ್ನ ಸಮೀಪದಲ್ಲಿದ್ದು ತನ್ನ ಕೈ ಕೆಳಗೆ ಕೆಲಸ ಮಾಡುತ್ತಿದ್ದವರನ್ನು ಅವರು ವಿಶೇಷ ಪ್ರೀತಿ ವಿಶ್ವಾಸಗಳಿಂದ ನೋಡಿಕೊಳ್ಳುತ್ತಿದ್ದರು. ಅಪಾರ ತಾಳ್ಮೆಯಿಂದ ಅವರ ತಪ್ಪನ್ನು ತಿದ್ದುವರು. ಅವರು ಎಷ್ಟೇ ತಪ್ಪು ಮಾಡಿದರೂ ಕ್ಷಮಿಸಿ ಅವರನ್ನು ಮೇಲಕ್ಕೆ ಎತ್ತುವ ಹಂಬಲ. ಈ ವಿಚಾರದಲ್ಲಿ ಅವರದು ತಾಯಿಯ ಎದೆಯೊಲುಮೆ.

ನಮ್ಮ ದೇಶದ ಜನರಿಗೆ ಸಂಘಟಿತರಾಗಿ ದುಡಿಯಲು ತಿಳಿದಿಲ್ಲ.ನಾಲ್ಕು ಜನ ಸೇರಿಕೊಂಡು ಒಂದು ಸಂಸ್ಥೆಯನ್ನು ಕಟ್ಟಿ ರಚನಾತ್ಮಕ ಕಾರ್ಯ ಮಾಡುವ ಸಾಮರ್ಥ್ಯವಿಲ್ಲ. ಕೂಡಿ ದುಡಿಯುವ ಕಲೆ ಕರಗತವಾಗಿಲ್ಲ, ಇದೊಂದು ದೊಡ್ಡ ಶಾಪ. ಸಂಸ್ಥೆಯನ್ನು ಕಟ್ಟಿದ ನಾಲ್ಕು ದಿನಗಳಲ್ಲೇ ತಮ್ಮ ಹೆಸರು, ಲಾಭ – ಇವೇ ಸ್ವಾರ್ಥ ಸಾಧನೆಗೆ ಹೋರಾಡುತ್ತಾರೆ. ಜಗಳವಾಡಲು ಶುರು ಮಾಡುತ್ತಾರೆ. ಉದ್ದೇಶವನ್ನು ಮರೆತು ಪರಸ್ಪರ ಸಂದೇಹವನ್ನು ಬೆಳೆಸಿಕೊಳ್ಳುತ್ತಾರೆ. ಅಸೂಯೆಗೊಳಗಾಗಿ ದೋಷಾರೋಪಣೆ ಮಾಡಿ ದ್ವೇಷ ಸಾಧಿಸುತ್ತಾರೆ. ಒಂದು ಸಾರ್ವಜನಿಕ ಸೇವಾಸಂಸ್ಥೆ ಬಹಳಷ್ಟು ಗದ್ದಲ ಪ್ರಚಾರಗಳಿಂದ ಪ್ರಾರಂಭವಾಗಿ, ಕೆಲವೇ ದಿನಗಳಲ್ಲಿ ಅದರ ಕಾರ್ಯಕರ್ತರೊಳಗೆ ಜಗಳ ಗುದ್ದಾಟ ಪ್ರಾರಂಭವಾಯಿತು. ಶಾರದಾನಂದರು ಆಮಂತ್ರಿತರಾಗಿ ಅಲ್ಲಿಗೆ ಹೊದರು. ಅವರೆಲ್ಲರನ್ನೂ ಸೇರಿಸಿ ನಾಲ್ಕು ಒಳ್ಳೆಯ ಮಾತುಗಳ್ನು ಹೇಳಿದರು. ಕೇಳುಗರ ಮೇಲೆ ಅದೆಂಥ ಪರಿಣಾಮ ಬೀರಿತೆಂದರೆ ಸಂಸ್ಥೆಯ ಸದಸ್ಯರೆಲ್ಲ ಒಂದು ಗೂಡಿ ಸಂಸ್ಥೆಯು ಸ್ಥಿರವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡಿದರು. ಬಹುಜನರಿಗೆ ಉಪಕಾರವಾಗುವ ಕೆಲಸಗಳನ್ನು ನಡೆಯಿಸಿದರು.

ಪರಮ ಶಾಂತಮೂರ್ತಿ

ಒಮ್ಮೆ ಶಾರದಾನಂದರು ಉತ್ತರ ಭಾರತದಲ್ಲಿ ಸಂಚಾರ ಮಾಡುತ್ತಿದ್ದರು. ಆಗ ವಿವೇಕಾನಂದರು ಶ್ರೀನಗರದಲ್ಲಿದ್ದರು. ಅವರ ಅನಾರೋಗ್ಯದ ಬಗ್ಗೆ ಶಾರದಾನಂದರಿಗೆ ತಂತಿ ಸಂದೇಶ ತಲುಪಿತು. ತಕ್ಷಣ ಅವರು ಶ್ರೀನಗರಕ್ಕೆ ಹೊರಟರು. ರಾವಲ್ಪಿಂಡಿ ಮತ್ತು ಶ್ರೀನಗರಗಳ ಮಾರ್ಗದಲ್ಲಿನ ಒಂದು ಊರಿನಲ್ಲಿ ಒಂದು ದುರ್ಘಟನೆ ನಡೆಯಿತು. ಅವರು ಕುಳಿತಿದ್ದ ಗಾಡಿಯನ್ನು ಎಳೆಯುತ್ತಿದ್ದ ಕುದುರೆ ಯಾವುದೋ ಭಯದಿಂದ ರಸ್ತೆಯನ್ನು ಬಿಟ್ಟುಬೆಟ್ಟದ ಇಳಿಜಾರು ಪ್ರದೇಶದೆಡೆಗೆ ತಿರುಗಿತು. ಸವಾರನು ಭಯದಿಂದ ತಲೆ ತಪ್ಪಿಸಿಕೊಂಡ. ಸ್ವಲ್ಪ ದೂರ ವೇಗವಾಗಿ ಸಾಗಿ ಗಾಡಿಯು ಒಂದು ಮರಕ್ಕೆ ಡಿಕ್ಕಿ ಹೊಡೆಯಿತು. ಗಾಡಿಯು ಮರಕ್ಕೆ ತಾಗುತ್ತದೆ ಎನ್ನುವಾಗಲೇ ಶಾರದಾನಂದರು ಕೆಳಗಿಳಿದು ನಿಂತಿದ್ದುರ. ಅಷ್ಟರಲ್ಲೆ ಒಂದು ದೊಡ್ಡ ಬಂಡೆ ಬೆಟ್ಟದ ಮೇಲಿನಿಂದ ಉರುಳಿ ಬಂದು ಗಾಡಿ ಮತ್ತು ಕುದುರೆಯನ್ನು ಅಪ್ಪಳಿಸಿತು. ಕುದುರೆ ಅಲ್ಲೇ ಸತ್ತುಬಿದ್ಇದತು. ಶಾರದಾನಂದರೂ ಇಂಥ ಪರಿಸ್ಥಿತಿಯಲ್ಲಿಯೂ ಪರಮ ಶಾಂತರಾಗಿದ್ದರು.ಭಯದಿಂದ ನಡುಗುತ್ತಿದ್ದ ಸವಾರನನ್ನು ಕಂಡು ಸಮಾಧಾನದ ಮಾತುಗಳಿಂದ ಸಾಂತ್ವನಗೊಳಿಸಿದರು. ಅವರು ಗಾಡಿಯಿಂದ ಇಳಿಯುವುದು ಸ್ವಲ್ಪ ತಡವಾಗಿದ್ದರೂ ಅಪಾಯವಾಗುತ್ತಿತ್ತು. ಅಂಥ ಪ್ರಸಂಗಾವಧಾನತೆ ಅವರದು.

ಶಾರದಾನಂದರು ತಮ್ಮ ಸದ್ಗುಣಗಳಿಂದ ಹಿರಿಯ-ಕಿರಿಯರೆಲ್ಲರ ಗೌರವಾದರಕ್ಕೆ ಪಾತ್ರರಾದವರು. ಆದರೆ ಜಗತ್ತಿನಲ್ಲಿ ನಿಸ್ವಾರ್ಥ ದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡೆಇದವರೂ ಕೆಲವೊಮ್ಮೆ ನಿಂದನಗೆ ಒಳಗಾಗಬೇಕಾಗುತ್ತದೆ. ಕೆಲವೊಮ್ಮೆ ಸಹಾಯ ಪಡೆದವರೆ ಸಹಾಯ ಮಾಡಿದವರನ್ನು ನಿಂದಿಸುತ್ತಾರೆ. ಕೆಲವರು ಉದ್ದೇಶ ಪೂರ್ವಕವಾಗಿ ನಿಂದಿಸಿದರೆ ಕೆಲವರು ತಿಳಿವಳಿಕೆ ಇಲ್ಲದೆ ನಿಂದಿಸುತ್ತಾರೆ. ಮನಸ್ಸು, ಮಾತು, ಕೃತಿಗಳಿಂದ ಎಲ್ಲರ ಶುಭಚಿಂತನೆ ಮಾಡಿದ ಶಾರದಾನಂದರೂ ನಿಂದೆಯ ಮಾತನ್ನು ಕೇಳಬೇಕಾಯಿತು. ಆದರೆ ಎಂದಾದರೂ ಅದಕ್ಕಾಗಿ ಅವರು ಬೇಸರಿಸಿದವರಲ್ಲ. ನಿಂದಿಸಿದ ವ್ಯಕ್ತಿಯನ್ನೂ ಮೊದಲಿನಂತೆಯೇ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ನಿಂದಿಸಲಿ ಸುತ್ತಿಸಲಿ ಸಜ್ಜರನು ಸತ್ಕರ್ಮದ ಪಥವನ್ನು ಬಿಡುವುದಿಲ್ಲ ಎಂಬುದಕ್ಕೆ ಅವರು ಜೀವಂತ ಉದಾಹರಣೆಯಗಿದ್ದರು.

ಎಂಥ ಹಠಮಾರಿ ರೋಗಯನ್ನಾದರೂ ಶಾರದಾ ನಂದರು ಸಮೀಪಿಸಿ ಎರಡು ಸಾಂತ್ವನದ ನುಡಿಗಳನ್ನು ಹೇಳಿದರೆ ಅವನು ಶಾಂತನಾಗುತ್ತಿದ್ದ. ಔಷಧ ಇಂಜೆಕ್ಷನ್ ಪಥ್ಯ ಪಾನೀಯಗಲನ್ನು ತೆಗೆದುಕೊಳ್ಳುತ್ತಿದ್ದ. ಅವರ ಮಾತಿನಲ್ಲಿ ಅಂಥ ಮೃದುತ್ವ, ಅನುಕಂಪ, ಪ್ರೇಮ ಇರುತ್ತಿದ್ದವು.

ಜೀವನ ಸಂಧ್ಯೆ

೧೯೧೩ ರಲ್ಲಿ ಬರ್ದ್ವಾನ್ ಎಂಬ ಊರಲ್ಲಿ ನೂರಾರು ಜನರು ಪ್ರವಾಹದಿಂದ ನಿರ್ಗತಿಕರಾದರು. ರಾಮಕೃಷ್ಣ ಮಿಷನ್ ತನ್ನ ಸೇವಾಕಾರ್ಯವನ್ನು ಶಾರದಾನಂದರ ನೇತೃತ್ವದಲ್ಲಿ ಪ್ರಾರಂಭಿಸಿತು. ಕೆಲವು ತಿಂಗಳುಗಳವರೆಗೆ ಅವಿರತವಾಗಿ ಸೇವಾಕಾರ್ಯ ನಡೆಯಿತು. ಈ ಸೇವಾ ಕಾರ್ಯಕ್ರಮವನ್ನು ನಿರ್ವಹಿಸುವುದಕ್ಕೆ ಹಣವನ್ನೂ ಯೋಗ್ಯ ಕಾರ್ಯಕರ್ತರನ್ನೂ ಅವರು ಒದಗಿಸಿ ತಾವೂ ಸೇವಾಕಾರ್ಯದಲ್ಲಿ ಧುಮುಕಿದರು.

೧೯೨೩ ನೇ ಏಪ್ರಿಲ್ ೧೯ ನೇ ತಾರೀಖು ಶ್ರೀ ಶಾರದಾದೇವಿಯವರ ಜನ್ಮಸ್ಥಾನವಾದ ಜಯರಾಮ ವಟಿಯಲ್ಲಿ ಶ್ರೀ ಶಾರದಾದೇವಿ ದೇವಾಲಯವನ್ನು ಉದ್ಘಾಟಿಸಿದರು.

೧೯೨೬ ರಲ್ಲಿ ರಾಮಕೃಷ್ಣ ಮಿಷನ್ ಸಂಸ್ಥೆಯ ನೂರಾರು ಕೇಂದ್ರಗಳಲ್ಲಿ ವಿವಿಧ ಸೇವಾಕಾರ್ಯಗಳನ್ನು ಮಾಡುತ್ತಿದ್ದ ಸಂನ್ಯಾಸಿಗಳ ಸಮ್ಮೇಳನವನ್ನು ಕರೆದರು. ಮುಂದಿನ ಕಾರ್ಯಕ್ರಮಗಳನ್ನು ಹೇಗೆ ನಡೆಸಬೇಕೆಂದು ಮಾರ್ಗದರ್ಶನ ಮಾಡಿದರು. ಆಧ್ಯಾತ್ಮಿಕತೆ ಮತ್ತು ಚಾರಿತ್ರ್ಯ ಬಲ ವೃದ್ಧಿಗೊಳಿಸುವುದರ ಕಡೆ ಗಮನವೀಯಬೇಕು ಎಂದರು. ಅದನ್ನು ಸರಿಪಡಿಸಲು ಸಾಧ್ಯವಾದರೆ ವ್ಯಕ್ತಿ, ತನ್ಮೂಲಕ ಸಮಾಜ ತಮ್ಮನ್ನು ಸರಿಪಡಿಸಿಕೊಳ್ಳುವರು ಎಂದು ಧ್ಯೇಯನಿಷ್ಠರಾಗಿ ದುಡಿಯುವಂತೆ ಸ್ಫೂರ್ತಿಯ ಸಂದೇಶವನ್ನು ನೀಡಿದರು.

’ತನ್ನನ್ನು ತಾನು ದುರ್ಬಲ, ನೀಚ, ಪಾಪಿ ಎಂದು ಯೋಚಿಸುವುದು ಮಹಾಪಾಪ. ನಂಬಬೇಕಿದ್ದರೆ ನಾವು ಭಗವಂತನ ಮಕ್ಕಳು, ಆತನ ಅಂಶ. ಆತನ ಅಪಾರ ಆನಂದಶಕ್ತಿಗಳ ಹಕ್ಕುದಾರರೆಂದು ನಂಬೋಣ’ ಎನ್ನುತ್ತಿದ್ದರು ಅವರು.

ಸಂತರೊಬ್ಬರು ಬರೆದ ಸಂತಚರಿತ್ರೆ

’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗ’ ನಮ್ಮ ದೇಶದ ಮಹಾಸಂತರೊಬ್ಬರ ತಪಸ್ಸು ಸಾಧನೆಗಳ ಸಾಹಸವನ್ನು ತಿಳಿಸಿಕೊಡವ ಗ್ರಂಥ. ಆ ತಪಸ್ಸು ಸಾಧನೆಗಳ ಫಲವಾಗಿ ಪಡೆದ ದಿವ್ಯ ಎಂದರೆ ದೇವರ ಸಂಬಂಧವಾದ ಅನುಭವಗಳನ್ನು ಸ್ಪಷ್ಟವಾಗಿ ವಿವರಿಸುವ ಗ್ರಂಥ. ಆ ಅನುಭವಗಳನ್ನು ಪಡೆದ ಮಹಾವ್ಯಕ್ತಿ ಹೇಗೆ ಬದುಕಿದರು? ಎಷ್ಟು ಎತ್ತರಕ್ಕೆ ಏರಿದರು? ಹೇಗೆ ಇತರರನ್ನು ಒಳ್ಳೆಯ ದಾರಿಗೆ ಎಳೆದರು? ದುಷ್ಟರನ್ನು ಹೇಗೆ ಶಿಷ್ಟರನ್ನಾಗಿ ಮಾಡಿದರು? ದಾರಿ ತಪ್ಪಿದವರನ್ನು ಹೇಗೆ ಸರಿದಾರಿಗೆ ತಂದರು? ಎಲ್ಲ ಮತಗಳ ದೈವ ಭಕ್ತರನ್ನು ಗುರುತಿಸಿ ಹೇಗೆ ಗೌರವಿಸಿದರು? ಇದನ್ನೆಲ್ಲ ತಿಳಿಸಿಕೊಡುವ ದೊಡ್ಡಗ್ರಂಥ. ವಿಜ್ಞಾನಿಯ ಸಂಶೋಧಕ ದೃಷ್ಟಿಯಿಂದ ಬರೆದ ಗ್ರಂಥ. ಧರ್ಮ, ದೇವರು, ಅವತಾರ, ಸಾಧನೆ, ಪ್ರಾರ್ಥನೆ, ದರ್ಶನಭಾವ, ಸಮಾಧಿ ಇವುಗಳನ್ನು ಕುರಿತು ನೂರಾರು ಸಂದೇಹಗಳನ್ನು ದೂರ ಮಾಡುವ ಗ್ರಂಥ.

ಸ್ವಾಮಿ ಶಾರದಾನಂದರು ಗ್ರಂಥ ರಚನೆಗೆ ಮೊದಲು ಸಂಶಯಕ್ಕೆ ಎಡೆ ಇಲ್ಲ ಸಾಕ್ಷಿ ಆಧಾರಗಳನ್ನು ಸಂಗ್ರಹಿಸಿದರು. ’ಇದು ಸತ್ಯ’ ಎಂದು ನಿರೂಪಿಸುವುದಕ್ಕೆ ಮೊದಲು ವಿಮರ್ಶೆಯ ಒರೆಗಲ್ಲಿನಲ್ಲಿ ಅವನ್ನು ಪರೀಕ್ಷಿಸಿದರು. ನಮ್ಮ ದೇಶದ ಇತರ ಮಹಾ ಸಂತರ, ಆಚಾರ್ಯ ಪುರಷರ ಜೀವನದ ಮುಖ್ಯ ಘಟನೆಗಳೊಡನೆ ಶ್ರೀ ರಾಮಕೃಷ್ಣರ ಜೀವನವನ್ನು ಹೋಲಿಸಿ ನೋಡಿದರು. ಅವರು ಶಾಸ್ತ್ರಗಳನ್ನು ಓದಿ ತಿಳಿದುಕೊಂಡ ವಿದ್ವಾಂಸರಾಗಿದ್ದರು. ಶಾಸ್ತ್ರಗಳಲ್ಲಿ ಹೇಳಿರುವ ವಿಚಾರಗಳೊಂದಿಗೆ ಶ್ರೀ ರಾಮಕೃಷ್ಣರ ಅನುಭವ ಮತ್ತು ಉಪದೇಶಗಳನ್ನು ಹೋಲಿಸಿ ಪರೀಕ್ಷಿಸಿದ್ದರು. ಅವರು ಆ ಕಾಲದಲ್ಲಿ ಆಂಗ್ಲ ವಿಧ್ಯಾಭ್ಯಾಸ ಮಾಡಿದವರು. ವಿಜ್ಞಾನದ ವಿಷಯಗಳನ್ನು ತಿಳಿದುಕೊಂಡವರು. ಈಗಿನ ಕಾಲದವರಿಗೆ ಬರಬಹುದಾದ ಸಂಶಯಗಳು ಅವರಿಗೂ ಬಂದಿದ್ದವು. ನಿಜ ಏನು? ಸತ್ಯ ಯಾವುದು? ಎನ್ನುವುದನ್ನು ತಿಳಿಯುವ ತೀವ್ರ ಆಸಕ್ತಿ ಅವರಿಗಿತ್ತು. ಸರಿಯಾದ ಸಿದ್ಧತೆ ಮತ್ತು ತರಬೇತಿ ಇಲ್ಲದೆ ಮಹಾತ್ಮರನ್ನು ತಿಳಿಯುವ ಅರ್ಹತೆ ಬರುವುದಿಲ್ಲ ಎನ್ನುತ್ತಾರೆ. ಶಾರದಾನಂದರು ಈ ಅರ್ಹತೆಯನ್ನು ಸಂಪಾದಿಸಿದ್ದರು.

’ಶ್ರೀ ರಾಮಕೃಷ್ಣರ ಲೀಲಾ ಪ್ರಸಂಗ’ ಮೊದಲಿಗೆ ಬಂಗಾಳಿಯಲ್ಲಿ ಐದು ಭಾಗಗಳಾಗಿ ಪ್ರಕಟವಾಯಿತು. ಮೊದಲ ಭಾಗದ ಹೆಸರು ಪೂರ್ವ ಕಥೆ ಮತ್ತು ಬಾಲ್ಯ ಜೀವನ. ಈ ಮೊದಲ ಭಾಗದಲ್ಲಿ ಏಳು ಅಧ್ಯಾಯಗಿವೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಧರ್ಮಶ್ರದ್ಧೆ ನೆಲೆನಿಂತಿರಲು ಕಾರಣವನ್ನು ವಿವೇಚಿಸಿದ್ದಾರೆ. ಅನಾದಿ ಕಾಲದಿಂದಲೂ ಅವತರಿಸುತ್ತ ಬಂದ ಮಹಾತ್ಮರ ಮತ್ತು ಸಂತರ ಜೀವನ ಸಂದೇಶಗಳು ಜನಜೀವನವನ್ನು ರೂಪಿಸಿದ ಬಗೆಯನ್ನು ವಿವರಿಸಿದ್ದಾರೆ. ಆ ಬಳಿಕ ಶ್ರೀ ರಾಮಕೃಷ್ಣರ ಪೂರ್ವಜರ ವಿಚಾಋವನ್ನೂ ಅವರ ಬಾಲ್ಯ ಜೀವನದ ಎಲ್ಲ ಘಟನೆಗಳನ್ನೂ ನಿರೂಪಿಸಿದ್ದಾರೆ.

ಎರಡನೆಯ ಭಾಗದ ಹೆಸರು ’ಸಾಧಕಭಾವ’. ಗ್ರಂಥದಲ್ಲಿ ಇದು ಅತಿ ವಿಸ್ತಾರವಾದ ಭಾಗ. ಇದರಲ್ಲಿ ಇಪ್ಪತ್ತೊಂದು ಅಧ್ಯಾಯಗಳಿವೆ. ಶ್ರೀ ರಾಮಕೃಷ್ಣರ ರೋಮಾಂಚಕಾರಿಯಾದ ತಪಸ್ಸು ಬೇರೆ ಬೇರೆ ಪಥಗಳನ್ನನುಸರಿಸಿ ಪಡೆದ ಅವರ ದೈವೀ ಅನುಭವಗಳನ್ನು ವಿವರಿಸಿದ್ದಾರೆ. ಅವರ ವಿವಾಹದ ವಿಚಾರವೂ ಇದೆ.

ಮೂರನೆಯ ಭಾಗ ’ಗುರುಭಾವ’ದ ಪೂರ್ವಾರ್ಧ. ಎಲ್ಲ ಸಾಧನೆ ಸಿದ್ಧಿಗಳ ನಂತರ ಗುರುಶಕ್ತಿಯ ಪೂರ್ಣ ವಿಕಾಸವಾದದ್ದು. ಭಕ್ತರಿಗೂ ಶಿಷ್ಯರಿಗೂ ನಾನಾ ರೀತಿಯಿಂದ ಮಾರ್ಗದರ್ಶನ ಮಾಡಿದ ವಿಧಾನಗಳು ಇದರಲ್ಲಿವೆ. ಎಂಟು ಅಧ್ಯಾಯಗಳುಳ್ಳ ಈ ಭಾಗದಲ್ಲಿ ಸಾಧನೆಗೆ ಸಂಬಂಧಿಸಿದ ಗಹನವಾದ ವಿಚಾರಗಳಿವೆ.

ನಾಲ್ಕನೆಯ ಭಾಗ ’ಗುರುಭಾವ’ದ ಉತ್ತರಾರ್ಧ. ಬೇರೆ ಬೇರೆ ಸಂಪ್ರದಾಯದ ಸಾಧುಗಳನ್ನು ಭೇಟಿ ಮಾಡಿದುದು, ತೀರ್ಥಯಾತ್ರೆ, ಆಧುನಿಕರ, ಬ್ರಹ್ಮ ಸಮಾಜದವರ ಮೇಲೆ ಪ್ರಭಾವ ಬೀರಿದ ವಿಚಾರವಿದೆ.

ಐದನೆಯ ಭಾಗದ ಹೆಸರು ’ದಿವ್ಯಭಾವ ಮತ್ತು ನರೇಂದ್ರನಾಥರು.’ ಶ್ರೀ ರಾಮಕೃಷ್ಣರು ಯೋಗದೃಷ್ಟಿಯಿಂದ ಮೊದಲೇ ಕಂಡುಕೊಂಡ ಸಂನ್ಯಾಸಿ ಶಿಷ್ಯರು ಒಬ್ಬೊಬ್ಬರಾಗಿ ಬಂದ ವಿಚಾರ, ಸಂನ್ಯಾಸಿ ಶಿಷರನ್ನು ತರಬೇತಿಗೊಳಿಸಿದ ವಿಧಾನ, ಮುಂದೆ ವಿವೇಕಾನಂದರೆಂದು ಪ್ರಸಿದ್ಧರಾದ ನರೇಂದ್ರನಾಥರಿಗೆ ಶಿಕ್ಷಣ ನೀಡಿದ ಕ್ರಮ – ಇವುಗಳ ವಿವರಣೆಯೊಂದಿಗೆ ಶ್ರೀ ರಾಮಕೃಷ್ಣರ ಕೊನೆಯ ದಿನಗಳ ವಿವರಣೆಯೂ ಇದೆ.

ಶ್ರೀ ರಾಮಕೃಷ್ಣರ ಜೀವನಸಂದೇಶಗಳ ಆಳ ಅಗಲಗಳನ್ನು ತಿಳಿಸುವ ಅಧಿಕಾರಯುತವಾದ ಗ್ರಂಥವಿದು.

ಕೊನೆಯ ದಿನಗಳು

ಶಾರದಾನಂದರು ಸಮ್ಮೇಳನದ ನಂತರ ಹೆಚ್ಚು ಹೆಚ್ಚು ಅಂತರ್ಮುಖಿಗಳಾದರು. ಹೆಚ್ಚಿನ ಸಮಯವನ್ನು ಧ್ಯಾನದಲ್ಲಿ ಕಳೆಯಲಾರಂಭಿಸಿದರು. ೧೯೨೭ ನೇ ಆಗಸ್ಟ್ ೬ ರಂದು ಧ್ಯಾನದ ಬಳಿಕ ದೇವರಕೋಣೆಗೆ ಪದೇ ಪದೇ ಹೋಗಿ ಬಂದರು. ಸಂಜೆ ಸ್ವಲ್ಪ ತಲೆ ಸುತ್ತುತ್ತಿದೆ ಎಂದರು. ಅವರ ಅಸ್ವಸ್ಥತೆ ಅಂದೇ ಪ್ರಾರಂಭವಾಗಿತ್ತು. ಆಗಸ್ಟ್ ೧೯ನೇ ತಾರೀಕು ಬೆಳಗಿನ ಹೊತ್ತು ಅವರು ಈ ಲೋಕದಿಂದ ಕಣ್ಮರೆಯಾದರು.

ಸ್ವಾಮಿ ಶಾರದಾನಂದರು ಭಗವದ್ಗೀತೆಯಲ್ಲಿ ಹೇಳಿದ ಸ್ಥಿತಪ್ರಜ್ಞನ ಗುಣಗಳನ್ನು ಮೈವೆತ್ತುಬಂದಂತಿದ್ದರು. ತ್ಯಾಗ ಮತ್ತು ಸೇವೆಯ ಜೀವಂತ ಆದರ್ಶವಾಗಿದ್ದರು. ತನಗಾಗಿ ಏನೂ ಬೇಡ, ಆದರೆ ಜನರು ಉನ್ನತಿಯ ಮಾರ್ಗ ಹಿಡಿಯಬೇಕು, ಉದ್ಧಾರವಾಗಬೇಕು ಎಂಬುದೇ ಅವರ ಧ್ಯೇಯ. ಅದಕ್ಕಾಗಿಯೇ ಅವರ ಬಾಲು, ದುಡಿಮೆ.