ಶಾರದಾಮಣಿದೇವಿ ಹುಟ್ಟಿದುದು ಒಂದು ಸಣ್ಣ ಹಳ್ಳಿಯಲ್ಲಿ. ಶಾಲೆಗೆ ಹೋಗಲಿಲ್ಲ. ಓದು ಬರಹ ಕಲಿಯಲಿಲ್ಲ. ಐದನೆಯ ವರ್ಷವಾಗಿದ್ದಾಗಲೇ ಮದುವೆ. ಹಣ, ವೈಭವ ಯಾವುದೂ ಇಲ್ಲ.

ಆದರೂ ಸಾವಿರಾರು ಮಂದಿ ಈಕೆಯನ್ನು ಭಕ್ತಿಯಿಂದ ’ತಾಯಿ’ ಎಂದು ಕರೆದರು. ಇವರು ತೀರಿಕೊಂಡು ಐವತ್ತು ವರ್ಷಗಳ ಮೇಲಾಯಿತು. ಇಂದಿಗೂ ನಮ್ಮ ದೇಶದಲ್ಲಿ ಸಾವಿರಾರು ಮಂದಿ ಆಕೆಯನ್ನು ’ಮಹಾಮಾತೆ’ ಎಂದು ಗೌರವಿಸುತ್ತಾರೆ.

ಶಾರದಾಮಣಿದೇವಿ ಇಂತಹ ಗೌರವವನ್ನೂ ಕೀರ್ತಿಯನ್ನೂ ಸಂಪಾದಿಸಿದ್ದು ಅವರ ಸರಳ, ಶುಭ್ರ ಜೀವನದಿಂದ. ತಮಗಾಗಿ ಅವರು ಏನನ್ನೂ ಬಯಸಲಿಲ್ಲ. ತಮ್ಮ ಪತಿ ಶ್ರೀ ರಾಮಕೃಷ್ಣ ಪರಮಹಂಸರು, ಅವರ ಶಿಷ್ಯರು ಭಕ್ತರು ಇವರಿಗಾಗಿ ಬದುಕಿದರು.

ತಂದೆಯ ಮನೆಯ ದೀಪ

ಕಲಕತ್ತೆಗೆ ಅರವತ್ತು ಮೈಲಿ ದೂರದಲ್ಲಿ ಜಯರಾಮವಟಿ ಎನ್ನವುದೊಂದು ಸುಂದರವಾದ ಸಣ್ಣ ಹಳ್ಳಿ. ಅದು ಬಂಗಾಳದ ಹೂಗ್ಲಿ ಜಿಲ್ಲೆಗೆ ಸೇರಿದೆ. ಹಳ್ಳಿಯ ಪಕ್ಕದಲ್ಲಿಯೇ ಆಮೋದರಾ ಎಂಬ ಹೊಳೆ ಹರಿಯುತ್ತದೆ. ದೊಡ್ಡ ಊರುಗಳಲ್ಲಿ ಸದ್ದು, ಗಲಾಟೆ, ಧೂಳು; ಈ ಹಳ್ಳಿ ಪ್ರಶಾಂತವಾಗಿದೆ.

ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಈ ಹಳ್ಳಿಯಲ್ಲಿ ರಾಮಚಂದ್ರ ಮುಖರ್ಜಿ ಎಂಬ ಬ್ರಾಹ್ಮಣರಿದ್ದರು, ಅವರ ಹೆಂಡತಿ ಶ್ಯಾಮಸುಂದರೀದೇವಿ. ಈ ದಂಪತಿಗಳೇನೂ ಸಾಹುಕಾರರಲ್ಲ; ಆದರೆ ತುಂಬಾ ಸಂಪನ್ನರು, ದೈವಭಕ್ತರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವದವರು. ಕಷ್ಟದಲ್ಲೇ ಆಗಲಿ, ಸುಖದಲ್ಲೇ ಆಗಲಿ ಎಂದೂ ಭಗವಂತನನ್ನು ಮರೆತವರಲ್ಲ.

೧೮೫೩ನೇ ಇಸವಿ ಡಿಸೆಂಬರ್ ೨೨ನೆಯ ತಾರೀಖು ಗುರುವಾರ ಸಂಜೆ ಈ ದಂಪತಿಗಳ ಮನೆಯಲ್ಲಿ ಒಂದು ಹೆಣ್ಣುಮಗು ಹುಟ್ಟಿತು. ಈ ಮಗುವೇ ಅವರ ಮೊದಲನೆಯ ಹೆಣ್ಣುಮಗಳು; ದೇವಿಯ ಆಶೀರ್ವಾದದಿಂದ ಮಗಳು ಹುಟ್ಟಿದಳೆಂದು ರಾಮಚಂದ್ರ ಮುಖರ್ಜಿಯವರು ’ಶಾರದಾದೇವಿ’ ಎಂದು ನಾಮಕರಣ ಮಾಡಿದರು.

ಬೆಳೆಯುವ ಪೈರಿನ ಗುಣ ಮೊಳಕೆಯಲ್ಲೇ ತಿಳಿಯುತ್ತದಂತೆ. ಅದೇ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಶಾರದಾಮಣಿಯ ಒಳ್ಳೆಯತನ ಎದ್ದು ಕಾಣುತ್ತಿತ್ತು. ಆಕೆಯ ಸ್ವಭಾವ ಮಿಕ್ಕ ಮಕ್ಕಳಿಗಿಂತ ತುಂಬಾ ಬೇರೆಯಾಗಿತ್ತು. ಮನೆಗೆ ಈ ಹುಡುಗಿಯೇ ಹಿರಿಯ ಮಗಳು. ತಂದೆ-ತಾಯಿಗಳು ತುಂಬಾ ಮುದ್ದಿನಿಂದಲೇ ಸಾಕಿದ್ದರು. ಆದರೂ ಪುಟ್ಟ ಶಾರದೆ ಸದಾ ಮನೆಯ ಕೆಲಸಗಳಲ್ಲಿ ತಾಯಿಗೆ ನೆರವಾಗುತ್ತಿದ್ದಳು. ತಂದೆಗೆ ಪೂಜೆ ಮಾಡಲು ಹೂವು, ತುಳಸಿಗಳನ್ನು ಬಿಡಿಸಿ ತಂದುಕೊಡುತ್ತಿದ್ದಳು. ಕೆಲವೊಮ್ಮೆ ಅಡಿಗೆ ಕೂಡಾ ಮಾಡುತ್ತಿದ್ದಳು.

ಮನೆಯ ಒಳಗಿನ ಕೆಲಸವಲ್ಲದೆ ಶಾರದಾದೇವಿ ಹೊರಗಡೆಯ ಕೆಲಸಗಳನ್ನೂ ಮಾಡಬೇಕಾಗುತ್ತಿತ್ತು.

ಬಂಗಾಳದಲ್ಲಿ ಮಳೆ ಹೆಚ್ಚು. ಕೆಲವು ಬಾರಿಯಂತೂ ಮನೆಯಿಂದ ಸ್ವಲ್ಪ ದೂರ ಹೋಗಬೇಕಾದರೂ ದೋಣಿಯಲ್ಲೇ ಹೋಗಬೇಕಾಗುತ್ತಿತ್ತು. ಅಂತಹ ಸಮಯದಲ್ಲಿ ಶಾರದಾದೇವಿ ಕೊಚ್ಚೆಯಲ್ಲೇ ನಡೆದು ಹೋಗಿ ದನಗಳಿಗಾಗಿ ಹುಲ್ಲು ಕುಯ್ದು ತರುತ್ತಿದ್ದಳು. ಗದ್ದೆಯಲ್ಲಿ ತಂದೆ ಕೆಲಸ ಮಾಡುತ್ತಿದ್ದಾಗ ಅವರಿಗೂ, ಆಳುಗಳಿಗೂ ಊಟ ತೆಗೆದುಕೊಂಡು ಹೋಗುತ್ತಿದ್ದಳು.  ಒಂದು ಸಲವಂತೂ ಯಾವುದೋ ರೋಗದಿಂದ ಭತ್ತವೇ ಸರಿಯಾಗಿ ಬೆಳೆಯಲಿಲ್ಲ. ಅಂತಹ ಸಮಯದಲ್ಲಿ ಈ ಹುಡುಗಿ ದಿನವೆಲ್ಲಾ ಗದ್ದೆ ಗದ್ದೆ ಸುತ್ತಿ ಭತ್ತದ ಕಾಳುಗಳನ್ನು ಆರಿಸಿ ತಾಯಿಗೆ ತಂದುಕೊಡುತ್ತಿದ್ದಳು.  ಇದಲ್ಲದೆ ತಮ್ಮಂದಿರನ್ನು ನೋಡಿಕೊಳ್ಳುವುದು, ಅವರನ್ನು ಶಾಲೆಗೆ ಬಿಟ್ಟು ಬರುವುದು, ಹೀಗೆ ಆ ವಯಸ್ಸಿನಲ್ಲೇ ಶಾರದಾದೇವಿ ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸ ಮಾಡುತ್ತಲೇ ಇರುತ್ತಿದ್ದಳು. ಶಾರದಾದೇವಿ ಸ್ವತಃ ಕಷ್ಟಪಟ್ಟು ಕೆಲಸ ಮಾಡುತ್ತಿದ್ದುದು ಮಾತ್ರವಲ್ಲ, ಚಿಕ್ಕ ವಯಸ್ಸಿನಿಂದ ಇನ್ನೊಬ್ಬರ ಕಷ್ಟವನ್ನು ಕಂಡರೆ ’ಅಯ್ಯೋ ಪಾಪ’ ಎಂದುಕೊಳ್ಳುವಳು. ಜೊತೆಗೆ ಅವರಿಗೆ ತಮ್ಮಿಂದಾದಷ್ಟು ಸಹಾಯವನ್ನೂ ಮಾಡುತ್ತಿದ್ದಳು.

ಒಮ್ಮೆ ಬಂಗಾಳದಲ್ಲಿ ದೊಡ್ಡ ಕ್ಷಾಮ ಬಂತು. ಆಗ ದೇವರ ದಯದಿಂದ ಇವರ ಮನೆಯಲ್ಲಿ ಸ್ವಲ್ಪ ಹೆಚ್ಚು ಧಾನ್ಯವಿತ್ತು. ಬೇರೆಯವರೆಲ್ಲಾ ಅನ್ನವಿಲ್ಲದೆ ಸಾಯುತ್ತಿರುವಾಗ ತಾವು ಮಾತ್ರ ಸುಖವಾಗಿ ಊಟಮಾಡಿಕೊಂಡಿರುವುದು ಶಾರದಾದೇವಿಯ ತಂದೆ ರಾಮಚಂದ್ರ ಮುಖರ್ಜಿಯವರಿಗೆ ಸರಿ ಎನ್ನಿಸಲಿಲ್ಲ. ಅವರು ಪ್ರತಿದಿನವೂ ಹಸಿದು ಬಂದವರಿಗೆಂದು ಅಡಿಗೆ ಮಾಡಿಸುತ್ತಿದ್ದರು. ಪುಟ್ಟ  ಶಾರದಾದೇವಿ ಬಂದವರಿಗೆಲ್ಲಾ ಅದನ್ನು ಪ್ರೀತಿಯಿಂದ ಬಡಿಸುತ್ತಿದ್ದಳು. ಆಹಾರ ಬಿಸಿಯಾಗಿದ್ದರೆ ಬೀಸಣಿಗೆಯಿಂದ ಬೀಸಿ ಆರಿಸಿ ಬಡಿಸುತ್ತಿದ್ದಳು.

ಶಾರದಾದೇವಿಯ ಆಟ-ಪಾಟಗಳೂ ಮಿಕ್ಕ ಸಮವಯಸ್ಕ ಹೆಣ್ಣು ಮಕ್ಕಳಂತೆ ಇರುತ್ತಲೇ ಇರಲಿಲ್ಲ. ಜಗಳವಾಡುವುದಕ್ಕೇ ಬರುತ್ತಿರಲಿಲ್ಲವೇನೋ, ಒಂದು ದಿನವೂ ಯಾರ ಜೊತೆಗೂ ಜಗಳವಿಲ್ಲ. ಜೊತೆಯವರಲ್ಲಿ ಯಾರಾದರೂ ಜಗಳವಾಡಿದರೆ ಅವರಿಗೆಲ್ಲಾ ಬುದ್ಧಿವಾದ ಹೇಳುತ್ತಿದ್ದಳು. ಅವಳ ವಯಸ್ಸಿನ ಹುಡುಗಿಯರು ಆಟದ ಸಾಮಾನುಗಳನ್ನು ಆಸೆಯಿಂದ ತರಿಸಿಕೊಂಡು ಆಡುವರು; ಶಾರದಾದೇವಿಗೆ ಆಟದ ಸಾಮಾನುಗಳೇ ಬೇಕಿರಲಿಲ್ಲ. ಬೇರೆ ಕೆಲಸವಿಲ್ಲದಿದ್ದಾಗ ಕಾಳಿಯ ವಿಗ್ರಹ, ಶಿವನ ವಿಗ್ರಹ ಇಂತಹವನ್ನು ಇಟ್ಟುಕೊಂಡು ಪೂಜೆ ಮಾಡುವಳು. ಒಂದು ಸಲವಂತೂ ದೇವಿಯ ಪೂಜೆಯನ್ನು ನೋಡುತ್ತಾ ಹೊರಗಿನ ಪ್ರಪಂಚವನ್ನೇ ಮರೆತುಬಿಟ್ಟಳಂತೆ.

೧೨೦ ವರ್ಷಗಳ ಹಿಂದಿನ ಮಾತಲ್ಲವೇ? ಆಗ ಬಹು ಮಂದಿ ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಶಾರದಾದೇವಿಗೆನೋ ಓದುವುದರಲ್ಲಿ ಆಸಕ್ತಿಯಿತ್ತು. ಆದರೆ ಮಗಳು ಮದುವೆಯಾಗಿ ಅತ್ತೆ ಮನೆಗೆ ಹೋಗಬೇಕು, ಅವಳಿಗೆ ಶಾಲೆಯೇಕೆ ಎಂಬ ಅಭಿಪ್ರಾಯ ಅವಳ ತಂದೆತಾಯಿಯರದು. ಆದುದರಿಂದ ಅವಳನ್ನು ಶಾಲೆಗೆ ಸೇರಿಸಲೇ ಇಲ್ಲ. ಹಾಗೆಂದ ಮಾತ್ರಕ್ಕೆ ಶಾರದಾದೇವಿ ಏನನ್ನೂ ಕಲಿಯಲೇ ಇಲ್ಲ ಎಂದಲ್ಲ. ಅಕ್ಷರ ಜ್ಞಾನ ಇಲ್ಲದಿದ್ದರೂ ಶಾರದಾದೇವಿಗೆ ತಿಳುವಳಿಕೆ ತುಂಬಾ ಇತ್ತು. ಅವಳ ತಂದೆ ರಾಮಚಂದ್ರ ಮುಖರ್ಜಿಯವರು ರಾಮಾಯಣ, ಮಹಾಭಾರತ, ಚೈತನ್ಯಭಾಗವತ ಮುಂತಾದ ಪುರಾಣ ಗ್ರಂಥಗಳನ್ನು ಓದಿ ಹೇಳುತ್ತಿದ್ದರು ತಾಯಿ ಪುಟ್ಟ ಶಾರದೆಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಸೀತೆ, ಸಾವಿತ್ರಿ, ಶಬರಿ ಮುಂತಾದ ಶ್ರೇಷ್ಠ ಹೆಂಗಸರ ಕತೆಗಳನ್ನು ಹೇಳುತ್ತಿದ್ದರು. ಅಷ್ಟೇ ಅಲ್ಲ, ’ನೀನೂ ಅವರ ಹಾಗೇ ಆಗಬೇಕು’ ಎಂದು ಬುದ್ಧಿ ಹೇಳುತ್ತಿದ್ದರು. ಮುಂದೆ ಶಾರದಾದೇವಿ, ಬಹು ದೊಡ್ಡ ಭಗವದ್ಭಕ್ತ ಶ್ರೀ ರಾಮಕೃಷ್ಣ ಪರಮಹಂಸರಂತಹ ಮಹಾತ್ಮರಿಗೆ ತಕ್ಕ ಪತ್ನಿಯಾಗುವ ಯೋಗ್ಯತೆ ಸಂಪಾದಿಸಿಕೊಂಡರು.

ರಾಮಕೃಷ್ಣ ಪರಮಹಂಸರೊಂದಿಗೆ ಮದುವೆ

ಶಾರದಾದೇವಿಯ ತಂದೆ ತಾಯಿ ಅವಳಿಗೆ ಮದುವೆ ಮಾಡಬೇಕೆಂದು ಯೋಚಿಸಿದರು. ಆಗ ಶಾರದಾದೇವಿಗೆ ಎಷ್ಟು ವಯಸ್ಸು ಗೊತ್ತೇ? ಐದು ವರ್ಷ! ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬಹು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಬಿಡುತ್ತಿದ್ದರು.

ರಾಮಕೃಷ್ಣ ಪರಮಹಂಸ ಎಂಬುವರು ನಮ್ಮ ದೇಶದ ಮಹಾಭಕ್ತರು ಮತ್ತು ಮಹಾಜ್ಞಾನಿಗಳಲ್ಲಿ ಒಬ್ಬರು. ಇವರಿಗೆ ತಂದೆ ತಾಯಿ ಇಟ್ಟ ಹೆಸರು ಗದಾಧರ. ಅವರು ದಕ್ಷಿಣೇಶ್ವರದಲ್ಲಿ ಭವತಾರಿಣಿಯ ಮಂದಿರದಲ್ಲಿ ದೇವರ ಪೂಜೆಯ ಕೆಲಸಕ್ಕೆ ಸೇರಿದರು. ದೇವರನ್ನು ನೋಡಬೇಕು ಎಂದು ಅವರಿಗೆ ಆಸೆ ಅವರ ರೀತಿಗಳು ಸಾಮಾನ್ಯ ಜನರಿಗೆ ವಿಚಿತ್ರವಾಗಿ ತೋರುತ್ತಿದ್ದುದರಿಂದ ಜನ ಅವರನ್ನು ಹುಚ್ಚರೆಂದೇ ಕರೆಯುತ್ತಿದ್ದರು. ದೇವರು ಇನ್ನೂ ಕಾಣಿಸಲಿಲ್ಲ ಎಂದು ರಾಮಕೃಷ್ಣರು ದುಃಖದಿಂದ ಅಳುತ್ತಿದ್ದರು. ಗಂಟೆಗಟ್ಟಲೆ ಮೈಮೇಲೆ ಪ್ರಜ್ಞೆ ಇಲ್ಲದಂತೆ ಕುಳಿತುಬಿಡುತ್ತಿದ್ದರು. ಈ ವಿಷಯಗಳೆಲ್ಲಾ ಅವರ ತಾಯಿ ಚಂದ್ರಮಣಿಗೂ ತಿಳಿಯಿತು. ಅವರು ರಾಮಕೃಷ್ಣರನ್ನು ತಮ್ಮ ಊರಾದ ಕಾಮಾರಪುಕುರಕ್ಕೆ ಕರೆಸಿಕೊಂಡರು. ಮಗನ ಸ್ಥಿತಿಯನ್ನು ಕಂಡು ತಾಯಿ ಚಂದ್ರಮಣಿದೇವಿಗೆ ತುಂಬಾ ದುಃಖವಾಯಿತು, ಗಾಬರಿಯೂ ಆಯಿತು. ಅವರು ಮಗನಿಗೆ ವೈದ್ಯರಿಂದ ಚಿಕಿತ್ಸೆ ಮಾಡಿಸಿದರು; ಮಂತ್ರವಾದಿಗಳಿಂದ ಮಂತ್ರ ಹಾಕಿಸಿದರು; ಯಾವದರಿಂದಲೂ ರಾಮಕೃಷ್ಣರಿಗೆ ಗುಣಮುಖವಾಗಲಿಲ್ಲ. ತಾಯಿಗೆ ಚಿಂತೆ ಹತ್ತಿತು. ’ಮದುವೆ ಮಾಡಿದರೆ ಹುಚ್ಚು ಬಿಟ್ಟು ಹೋಗುತ್ತದೆ’ ಎಂದು ಯಾರೋ ಸಲಹೆ ನೀಡಿದರು. ಚಂದ್ರಮಣಿದೇವಿಗೂ ಆ ಸಲಹೆ ಸರಿಯಾಗಿ ಕಂಡಿತು. ಆದರೆ ಅಲ್ಲಿನ ಪದ್ಧತಿಯಂತೆ ಗಂಡುಮಕ್ಕಳಿಗೆ ಮದುವೆ ಮಾಡುವುದಕ್ಕೆ ಹೆಣ್ಣಿನ ತಂದೆಗೆ ’ಕನ್ಯಾಶುಲ್ಕ’ ಎಂದರೆ ಹಣ ಕೊಡಬೇಕಾಗಿದ್ದಿತು. ಚಂದ್ರಮಣಿದೇವಿಯ ಹತ್ತಿರ ಅಷ್ಟು ಹಣವೂ ಇರಲಿಲ್ಲ. ಜೊತೆಗೆ ರಾಮಕೃಷ್ಣರ ಹುಚ್ಚಿನ ವಿಚಾರವೂ ಅನೇಕ ಜನರಿಗೆ ಗೊತ್ತಾಗಿದ್ದಿತು. ಹೀಗಾಗಿ ತಾಯಿ ಮತ್ತೆ ಚಿಂತಿಸುವಂತಾಯಿತು. ಅವರ ಚಿಂತೆಯನ್ನು ತಿಳಿದು ರಾಮಕೃಷ್ಣರೇ, “ಸುಮ್ಮನೆ ಯಾಕೆ ಯೋಚಿಸ್ತೀಯಮ್ಮಾ? ಜಯವಾಮವಟಿಯಲ್ಲಿ ರಾಮಚಂದ್ರ ಮುಖರ್ಜಿಯವರ ಮನೆಯಲ್ಲಿ ಒಬ್ಬ ಹುಡುಗಿ ಇದ್ದಾಳೆ. ಅಲ್ಲಿ ಹೋಗಿ ವಿಚಾರಿಸು ಎಂದು ಸೂಚಿಸಿದರು. ಅದರಂತೆ ಚಂದ್ರಮಣಿ ಹುಡುಕಿಕೊಂಡು ಹೊರಟರು. ಹುಡುಗಿಯೇನೋ ಇದ್ದಳು, ಆದರೆ ಅವಳಿಗೆ ಐದೇ ವರ್ಷ. ಅದೇ ಹುಡುಗಿಯನ್ನೇ ರಾಮಕೃಷ್ಣರಿಗೆ ಕೊಟ್ಟು ಮದುವೆ ಮಾಡುವುದೆಂದು ನಿಶ್ಚಯವಾಯಿತು. ಗಂಡಿನ ಮನೆಯವರು ಮುನ್ನೂರು ರೂಪಾಯಿಗಳ ಕನ್ಯಾಶುಲ್ಕವನ್ನು ಕೊಟ್ಟರು.

ಮದುವೆಯಾದ ಮೇಲೆ ಶಾರದಾದೇವಿ‌ಯನ್ನು ಕಾಮಾರಪುಕುರಕ್ಕೆ ಅತ್ತೆಯ ಮನೆಗೆ ಕರೆದುಕೊಂಡು ಹೋದರು. ಮದುವೆಯ ಸಮಯದಲ್ಲಿ ಯಾರದೋ ಮನೆಯಿಂದ ಒಡವೆಗಳನ್ನು ತಂದು ಹುಡಗಿಗೆ ತೊಡಿಸಿದ್ದರು. ಮದವೆ ಮುಗಿದ ಮೇಲೆ ಅವನ್ನು ತೆಗೆದುಕೊಡಲು ಹುಡುಗಿ ಒಪ್ಪಲಿಲ್ಲ. ಆಗ ರಾತ್ರಿ ಅವಳು ಮಲಗಿರುವಾಗ ರಾಮಕೃಷ್ಣರೇ ಅವನ್ನೆಲ್ಲಾ ಉಪಾಯವಾಗಿ ತೆಗೆದು ತಾಯಿಯ ಕೈಲಿ ಕೊಟ್ಟರು ಬೆಳಗ್ಗೆ ಎದ್ದ ಮೇಲೆ ಮೈಮೇಲೆ ಆಭರಣಗಳಿಲ್ಲದಿದ್ದುದನ್ನು ಕಂಡು ಎಳೆಯ ಹುಡುಗಿ  ಶಾರದಾದೇವಿ ಅಳತೊಡಗಿದಳು. ಚಂ‌‌‌‌‌‌ದ್ರಮಣಿದೇವಿ ಸೊಸೆಯನ್ನು ಎತ್ತಿಕೊಂಡು ಸಮಾಧಾನಪಡಿಸಿದರು. ಶಾರದಾದೇವಿಯೇನೋ ಸುಮ್ಮನಾದಳು. ಆದರೆ ಅವಳ ಸೋದರಮಾವನಿಗೆ ಈ ಘಟನೆಯಿಂದ ಅಸಮಾಧಾನವಾಯಿತು. ಹುಡುಗಿಯನ್ನು ತವರು ಮನೆಗೆ ಕರೆದುಕೊಂಡು ಹೊರಟುಹೋದರು.

ಆಗ ಶಾರದಾದೇವಿ ಇನ್ನೂ ಏನೂ ತಿಳಿಯದ ಹುಡುಗಿ. ಐದೇ ವರ್ಷ, ಆದರೂ ಆಗಲೇ ತಮ್ಮ ಗಂಡನನ್ನು ಕಂಡರೆ ಭಕ್ತಿ, ಗೌರವ. ಒಂದು ಸಲ ರಾಮಕೃಷ್ಣರು ಜಯರಾಮವಟಿಗೆ ಮಾವನ ಮನೆಗೆ ಬಂದರು. ಶಾರದಾದೇವಿ ಅವರ ಕಾಲುಮುಟ್ಟಿ ನಮಸ್ಕಾರ ಮಾಡಿದಳು. ಅವರು ಕುಳಿತ ಮೇಲೆ ಬೀಸಣಿಗೆಯಿಂದ ಗಾಳಿ ಬೀಸಿದಳು. ಎಳೆ ಹುಡುಗಿಯ ಈ ನಡವಳಿಕೆಯನ್ನು ನೋಡಿ ಮನೆಯವರೆಲ್ಲಾ ನಕ್ಕರು. ಜೊತೆಗೇ ಆಶ್ಚರ್ಯಪಟ್ಟರು.

ಮುಂದೆ ಹದಿನಾಲ್ಕು ವರ್ಷಗಳಾಗುವವರೆಗೆ ಶಾ‌ರದಾಮಣಿ ಶ್ರೀ ರಾಮಕೃಷ್ಣರನ್ನು ನೋಡಲೇ ಇಲ್ಲ. ಅವರು ಕಾಮಾರಪುಕರಕ್ಕೆ ಬಂದಾಗ ಶಾರದಾದೇವಿಯೂ ಅಲ್ಲಿಗೆ ಬಂದರು. ಆಗ ಶ್ರೀ ರಾಮಕೃಷ್ಣರು ಅವರನ್ನು ತುಂಬಾ ಪ್ರೀತಿಯಿಂದ ಕಂಡರು. ಸುಲಭವಾದ ಮಾತುಗಳಲ್ಲಿ ದೇವರ ಮತ್ತು ಧರ್ಮದ ವಿಚಾರಗಳನ್ನೆಲ್ಲಾ ಹೆಂಡತಿಗೆ ತಿಳಿಸಿಕೊಟ್ಟರು.

ಒಂದೂವರೆ ತಿಂಗಳ ನಂತರ ಶಾರದಾಮಣಿ ತವರು ಮನೆಗೆ ಬಂದುಬಿಟ್ಟರು. ಕೆಲವು ದಿನಗಳಲ್ಲೇ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹೊರಟುಹೋದರು. ಅವರ ಸ್ಥಿತಿ ಮತ್ತೆ ಮೊದಲಿನಂತಾಯಿತು. ದೇವರ ದರ್ಶನಕ್ಕಾಗಿ ಹಂಬಲಿಸುವರು, ಕಾಳಿಯ ವಿಗ್ರಹ ಹಿಡಿದು ಬೇಡುವರು, ಅಳುವರು.  ಬಹು ಜನ ಅವರು ಹುಚ್ಚರು ಎಂದುಕೊಂಡರು. ಈ ವಿಚಾರ ಅಲ್ಲಿ ಇಲ್ಲಿ ಸುತ್ತಿ ಜಯರಾಮವಟಿಗೂ ತಲುಪಿತು. ಎಲ್ಲರೂ ಶಾರದಾದೇವಿಯನ್ನು ಕಂಡ ಕೂಡಲೇ,’ಅಯ್ಯೋ! ನಮ್ಮ ಶಾರದೆಯ ಗಂಡನಿಗೆ ಹುಚ್ಚು ಹಿಡಿದಿದೆಯಂತೆ’ ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ಮಾತು ಶಾರದಾದೇವಿಯ ಕಿವಿಗೂ ಬಿತ್ತು. ಅದನ್ನು ಕೇಳಿ ಅವರಿಗೆ ತುಂಬಾ ದುಃಖವಾಯಿತು. ಅಲ್ಲದೆ ಅವರು ನನ್ನನ್ನು ಕರೆದುಕೊಂಡು ಹೋಗಲಿಲ್ಲವಲ್ಲಾ ಎನ್ನುವ ಚಿಂತೆ ಬೇರೆ. ಕೊನೆಗೆ ತಮ್ಮ ಪತಿಗೆ ಕಾಯಿಲೆಯಾಗಿರುವಾಗ ತಾವು ಅವರ ಹತ್ತಿರವೇ ಇರುವುದು ಒಳ್ಳೆಯದೆಂದು ನಿಶ್ಚಯಿಸಿದರು.

ರಾಮಕೃಷ್ಣರ ಜೊತೆಗೆಭಕ್ತರಿಗೆ ತಾಯಿ

ಈಗಿನಂತೆ ರೈಲು, ಬಸ್ಸುಗಳಿಲ್ಲದ ಕಾಲ ಅದು. ಎತ್ತಿನ ಗಾಡಿ, ಕುದುರೆ ಗಾಡಿಗಳಲ್ಲಿ ಪ್ರಯಾಣ ಮಾಡುವುದೂ ಕಷ್ಟವಾಗಿತ್ತು. ಅರವತ್ತು ಮೈಲಿ ದೂರ ನಡೆದೇ ಹೋಗಬೇಕಾಗಿತ್ತು. ಶ್ರೀಮಂತರಾದರೆ ಪಲ್ಲಕ್ಕಿಯಲ್ಲಿ ಹೋಗಬಹುದಾಗಿತ್ತು.  ಅಷ್ಟಾಗಿ ರಸ್ತೆಯೂ ಚೆನ್ನಾಗಿರಲಿಲ್ಲ; ಅಲ್ಲದೆ ಕಳ್ಳಕಾಕರ ಕಾಟ ಬೇರೆ. ಆದ್ದರಿಂದ ಒಬ್ಬರು ಇಬ್ಬರು ಪ್ರಯಾಣ ಮಾಡುವಂತೆಯೇ ಇರಲಿಲ್ಲ. ಈ ಕಾರಣಗಳಿಂದಾಗಿ ಶಾರದಾಮಣಿ ತಕ್ಷಣ ದಕ್ಷಿಣೇಶ್ವರಕ್ಕೆ ಹೋಗುವಂತಿರಲಿಲ್ಲ. ಅವರು ಅದಕ್ಕಾಗಿ ತಕ್ಕ ಸಮಯ ಕಾಯಬೇಕಾಯಿತು.

ಕೆಲವು ದಿನಗಳಲ್ಲಿ ಚೈತನ್ಯ ಜಯಂತಿ ಬಂತು. ಶಾರದಾದೇವಿಯ ಕೆಲವರು ನೆಂಟರು ಗಂಗಾಸ್ನಾನ ಮಾಡುವುದಕ್ಕೆಂದು ಹೊರಟರು. ಶಾರದಾದೇವಿಗೆ ಶ್ರೀರಾಮಕೃಷ್ಣರನ್ನು ನೋಡಲು ಇದೇ ತಕ್ಕ ಸಮಯ ಎನ್ನಿಸಿತು. ಈ ವಿಚಾರವನ್ನು ತಂದೆ ರಾಮಚಂದ್ರ ಮುಖರ್ಜಿಯವರಲ್ಲಿ ಹೇಳಿಕೊಂಡರು. ಅದಕ್ಕೆ ಅವರೂ ಒಪ್ಪಿಗೆ ಕೊಟ್ಟರು. ಶಾರದಾದೇವಿ ತಂದೆಯನ್ನು ಕರೆದುಕೊಂಡು ದಕ್ಷಿಣೇಶ್ವರಕ್ಕೆ ಹೊರಟರು.

ದಾರಿಯಲ್ಲಿ ಹೋಗುವಾಗ ಮೊದಲೆರಡು ದಿನಗಳೇನೋ ನಿರಾತಂಕವಾಗಿ ಕಳೆದವು. ಮೂರನೆಯ ದಿನದ ಹೊತ್ತಿಗೆ ಶಾರದಾದೇವಿಗೆ ವಿಪರೀತ ಆಯಾಸವಾಯಿತು. ಹೆಚ್ಚು ನಡೆದು ಅಭ್ಯಾಸವಿಲ್ಲದ್ದರಿಂದ ಕಾಲು ನೋವಿನಿಂದಾಗಿ ಜ್ವರವೂ ಬಂತು . ಮುಂದೆ ನಡೆಯುವುದಕ್ಕೆ ಸಾಧ್ಯವಾಗದೇ ರಸ್ತೆಯ ಪಕ್ಕದಲ್ಲಿದ್ದ ಮನೆಯಲ್ಲಿ ಒಂದು ರಾತ್ರಿ ಕಳೆದರು. ರಾತ್ರಿ ಕನಸಿನಲ್ಲಿ ದೇವಿಯೇ ಬಂದು ಆಶೀರ್ವಾದಿಸಿದಂತಾಯಿತು. ಬೆಳಗಾಗುವ ಹೊತ್ತಿಗೆ ಶಾರದಾದೇವಿ ಚೇತರಿಸಿಕೊಂಡರು. ಆ ದಿನವೆಲ್ಲಾ ನಡೆದು ರಾತ್ರಿ ಹತ್ತು ಗಂಟೆಯ ಹೊತ್ತಿಗೆ ದಕ್ಷಿಣೇಶ್ವರಕ್ಕೆ ಬಂದರು.

ರಸ್ತೆಯುದ್ದಕ್ಕೂ ಶಾ‌ರದಾದೇವಿಯವರಿಗೆ ಶ್ರೀರಾಮಕೃಷ್ಣ ಪರಮಹಂಸರದೇ ಆಲೋಚನೆಯಾಗಿತ್ತು. ಅವರು ಹೇಗಿದ್ದಾರೋ ಏನೋ, ಅವರು ತನ್ನನ್ನು ನೋಡಿ ಎಷ್ಟೋ ದಿನಗಳಾಗಿ ಹೋಗಿದೆ, ಅವರಿಗೆ ಹುಚ್ಚು ಎಂದು ಜನ ಹೇಳುತ್ತಾರೆ, ತನ್ನನ್ನು  ಗುರುತಿಸುತ್ತಾರೋ ಇಲ್ಲವೋ, ಗುರುತಿಸಿದರೂ ಮಾತನಾಡಿಸುತ್ತಾರೋ ಇಲ್ಲವೋ, ಹೀಗೆ ಯೋಚಿಸುತ್ತಲೇ ದಕ್ಷಿಣೇಶ್ವರಕ್ಕೆ ಬಂದು ಸೇರಿದರು. ನೇರವಾಗಿ ಶ್ರೀ ರಾಮಕೃಷ್ಣರನ್ನು ನೋಡಲೆಂದು ಹೋದರು. ರಾಮಕೃಷ್ಣರು ಅವರನ್ನು ನೋಡಿದ ಕೂಡಲೇ ತುಂಬಾ ಪ್ರೀತಿಯಿಂದ ಬರಮಾಡಿಕೊಂಡರು. ಅವರು ಇರುವುದಕ್ಕೆ ತಮ್ಮ ತಾಯಿ ಚಂದ್ರಮಣಿಯವರ ಹತ್ತಿರ ಸ್ಥಳ ವ್ಯವಸ್ಥೆ ಮಾಡಿದರು. ಗಂಡನನ್ನು ಕಂಡ ಮೇಲೆ ಶಾರದಾದೇವಿಯವರ ಮನಸ್ಸಿನಲ್ಲಿದ್ದ ಅನುಮಾನ, ಭಯಗಳೆಲ್ಲಾ ದೂರವಾದವು. ಅವರ ತಂದೆಯ ಮನಸ್ಸಿಗೂ ಸಮಾಧಾನವಾಯಿತು. ಅವರು ಮಗಳನ್ನು ಅಲ್ಲಿಯೇ ಬಿಟ್ಟು ಊರಿಗೆ ಹಿಂತಿರುಗಿದರು.

ದೇವರ ಕಡೆ ಮನಸ್ಸನ್ನು ತಿರುಗಿಸಿ, ದೇವರ ಧ್ಯಾನದಲ್ಲಿಯೇ ಜೀವನವನ್ನು ಕಳೆಯುವವರಲ್ಲಿ ಹಲವರು ಮದುವೆಯೇ ಆಗುವುದಿಲ್ಲ. ಮದುವೆ ಆಗಿದ್ದರೂ  ಹೆಂಡತಿಯನ್ನು ಬಿಟ್ಟು  ಹೊರಟುಹೋಗುತ್ತಾರೆ. ಹೆಂಡತಿ – ಮಕ್ಕಳು ಇವರ ಯೋಚನೆಯಿಂದ  ತಮ್ಮ ದೇವರಧ್ಯಾನ, ಯೋಚನೆ ಇವಕ್ಕೆ ತೊಂದರೆಯಾಗುತ್ತದೆ  ಎಂದು ಇವರಿಗೆ ಎನ್ನಿಸುತ್ತದೆ. ಆದರೆ ಶ್ರೀರಾಮಕೃಷ್ಣರು ಎಂದೂ  ಆ ರೀತಿ ಯೋಚಿಸಲಿಲ್ಲ; ತಾವು ದೇವರನ್ನು ಪೂಜಿಸಿ ಧ್ಯಾನಿಸಿ ಬದುಕುವುದಕ್ಕೆ ತಮ್ಮ ಹೆಂಡತಿಯಿಂದ ತೊಂದರೆ ಎಂದು ಭಾವಿಸಲಿಲ್ಲ. ಎಲ್ಲ ಹೆಂಗಸರಲ್ಲೂ ಅವರು ದೇವಿಯನ್ನೇ ಕಾಣುತ್ತಿದ್ದರು. ಆದ್ದರಿಂದಲೇ ಶಾರದಾದೇವಿಯವರನ್ನು ದೂರ ಅಟ್ಟುವ ಬದಲು ಅವರನ್ನು ದೇವರ ಧ್ಯಾನ, ಪೂಜೆ, ಜನರಿಗೆ ಸರಿಯಾಗಿ ದಾರಿ ತೋರಿಸುವುದು – ಇವುಗಳಲ್ಲಿ ತಮ್ಮ ಜೊತೆಗಾತಿಯನ್ನಾಗಿ ಮಾಡಿಕೊಂಡರು. ತಾವು ಪ್ರಪಂಚವನ್ನು ಬಿಟ್ಟ ಮೇಲೆ ಶಾರದಾದೇವಿಯೇ ಜನರಿಗೆ ಮಾರ್ಗದರ್ಶಿಯಾಗಲು ಅವಕಾಶ ಮಾಡಿಕೊಟ್ಟರು.

ಶ್ರೀ ರಾಮಕೃಷ್ಣರು ತಮ್ಮ ಜೀವನವನ್ನೆಲ್ಲ ದೇವರ ಧ್ಯಾನ, ಪೂಜೆ ಇವಕ್ಕೆ ಮುಡಿಪು ಮಾಡಿದ್ದರು. ಶಾರದಾದೇವಿಗೆ ತುಂಬ ಚಿಕ್ಕ ವಯಸ್ಸು. ಅವರೂ ಗಂಡನ ಹಾಗೆಯೇ ಎಲ್ಲ ಸುಖವನ್ನೂ ಬಿಟ್ಟು ವೈರಾಗ್ಯದಿಂದಿರುವಂತೆ ರಾಮಕೃಷ್ಣರು ಬಲವಂತ ಮಾಡಲಿಲ್ಲ. ಸಾಮಾನ್ಯವಾಗಿ ಗಂಡ ಹೆಂಡತಿ ಸುಖವಾಗಿರಬೇಕು, ಒಳ್ಳೆಯ ಬಟ್ಟೆ ಹಾಕಿಕೊಳ್ಳಬೇಕು, ನಾಲ್ಕು ಕಡೆ ಹೋಗಿ ಬರಬೇಕು, ಮಕ್ಕಳನ್ನು ಬೆಳೆಸಿ ಅವರೊಂದಿಗೆ ಸಂತೋಷವಾಗಿರಬೇಕು ಎಂದು ಬಯಸುತ್ತಾರೆ. ಆದುದರಿಂದ ರಾಮಕೃಷ್ಣರು ಶಾರದಾದೇವಿಗೆ ಹೇಳಿದರು:” ನನಗೇನೋ ಇತರರ ಹಾಗೆ ಸಂಸಾರ ನಡೆಸುವ ಆಸೆ ಇಲ್ಲ. ನೀವು ಇಷ್ಟಪಡುವುದಾದರೆ ನಿಮ್ಮ ಜೊತೆಗೆ ಸಂಸಾರ  ನಡೆಸಲು ನಾನು ಸಿದ್ಧನಾಗಿದ್ದೇನೆ”.

ಆದರೆ ಶಾರದಾದೇವಿ ಚಿಕ್ಕಂದಿನಿಂದಲೂ ದೈವಭಕ್ತಿ, ವೈರಾಗ್ಯ, ಭಾವನೆಗಳನ್ನು ಬೆಳೆಸಿಕೊಂಡವರು. ಅವರೆಂದರು: “ಅಂತಹ ಆಸೆಗಳೇನೂ ಇಲ್ಲ. ಕೊನೆಯವರೆಗೆ ನಿಮ್ಮ ಜೊತೆ ಇರುವಂತಾದರೆ, ನನಗೆ ಅದೇ ಸಂತೋಷ”.

ಆಕೆ ಇಂತಹ ತಪಸ್ವಿನಿಯಾಗಿದ್ದರಿಂದಲೇ ಶ್ರೀರಾಮಕೃಷ್ಣ ಪರಮಹಂಸರ ನಂತರ ಅವರ ಶಿಷ್ಯರಿಗೆಲ್ಲಾ ತಾವೇ ಗುರುವಾಗಿ ನಿಂತು ಉಪದೇಶ ಕೊಡಲು ಸಮರ್ಥರಾದರು.

ಒಂದು ಸಲ ಶಾರದಾದೇವಿ ಶ್ರೀ ರಾಮಕೃಷ್ಣರ ಕಾಲನ್ನು ಒತ್ತುತ್ತಾ ಕುಳಿತಿದ್ದರು. ಇದ್ದಕ್ಕಿದ್ದಂತೆ ಅವರು ತಮ್ಮ ಪತಿಯನ್ನು ಕೇಳಿದರು:

“ನೀವು ನನ್ನನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ”

ಅದಕ್ಕೆ ಶ್ರೀರಾಮಕೃಷ್ಣರು ಕ್ಷಣವೂ ಯೋಚಿಸದೆ ಉತ್ತರ ಕೊಟ್ಟರು:

“ಗುಡಿಯಲ್ಲಿರುವ ದೇವಿಯೇ ಈಗ ನಿಮ್ಮ ರೂಪದಲ್ಲಿ ಬಂದು ನನ್ನ ಕಾಲನ್ನು ಒತ್ತುತ್ತಿರುವಳು”.

ತಮ್ಮ ಹೆಂಡತಿಯೂ ಶ್ರೀರಾಕೃಷ್ಣರ ಕಣ್ಣಿಗೆ ದೇವಿಯಂತೆಯೇ ಕಾಣಿಸುತ್ತಿದ್ದರು. ಬಾಯಲ್ಲಿ ಹೇಳಿದುದಷ್ಟೇ ಅಲ್ಲದೆ ಒಮ್ಮೆ ಅವರು ಆಕೆಯನ್ನು ಪೀಠದ ಮೇಲೆ ಕೂರಿಸಿ, ದೇವರನ್ನು ಪೂಜಿಸಿಯೂ ಬಿಟ್ಟರು! ಪ್ರಪಂಚದ ಯಾವ ಮಹಾಪುರುಷನ ಜೀವನದಲ್ಲೂ ಬಹುಶಃ ಇಂತಹ ಘಟನೆ ನಡೆದಿಲ್ಲ.

ಶ್ರೀ ರಾಮಕೃಷ್ಣರು ಶಾರದಾದೇವಿಯವರಿಗೆ ಗುರು, ದೇವರು ಎಲ್ಲಾ ಆಗಿದ್ದರು. ತಪಸ್ಸು, ಜಪಗಳನ್ನು ಮಾಡುವುದಕ್ಕಿಂತ, ಪತಿಸೇವೆ ಮಾಡುವುದೇ ಶಾರದಾದೇವಿಯವರ ಮುಖ್ಯ ಸಾಧನೆಯಾಗಿತ್ತು. ಆ ಸಾಧನೆಯ ಮೂಲಕವೇ ಅವರು ಸಿದ್ಧಿಯನ್ನು ಪಡೆದುಕೊಂಡರು.

ಮೊ‌ದಲಿನಿಂದಲೂ ಕಷ್ಟಪಟ್ಟು ಶಾರದಾಮಣಿಯವರು ದಕ್ಷಿಣೇಶ್ವರದಲ್ಲಂತೂ ಒಂದು ಘಳಿಗೆ ಸುಮ್ಮನಿರದೆ ಕೆಲಸ ಮಾಡುತ್ತಿದ್ದರು. ಬೆಳಗಿನ ಜಾವ ಮೂರು ಗಂಟೆಗೇ ಎದ್ದು ಬಿಡುತ್ತಿದ್ದರು. ಆಗಲೇ ಗಂಗಾನದಿಯಲ್ಲಿ ಸ್ನಾನ. ಅನಂತರ ದೇವರಧ್ಯಾನ. ಸುಮಾರು ಏಳು ಗಂಟೆಗೆ ಶ್ರೀ ರಾಮಕೃಷ್ಣರಿಗೆ ಎಣ್ಣೆ ಹಚ್ಚಿ ಕೈಕಾಲುಗಳನ್ನು ಒತ್ತುತ್ತಿದ್ದರು. ಆಮೇಲೆ ಅಡಿಗೆ. ಶ್ರೀ ರಾಮಕೃಷ್ಣರಿಗೆ ಶಾರದಾದೇವಿ ಬಡಿಸಿದರೇ ಊಟ ಸರಿಹೋಗುತ್ತಿದ್ದುದು. ಶ್ರೀರಾಮಕೃಷ್ಣರು ಊಟ ಮಾಡಿದ ನಂತರ ಶಾರದಾದೇವಿಯವರ ಫಲಾಹಾರ. ಭಕ್ತರಿಗೆ ಕೊಡುವುದಕ್ಕೆ ವೀಳ್ಯದೆಲೆಗಳನ್ನು ಸಿದ್ಧಮಾಡಿಕೊಡಬೇಕು. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಊಟ, ಆಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ. ಮತ್ತೆ ಕೆಲಸ ಪ್ರಾರಂಭಿಸಿ ದೇವರ ದೀಪಗಳಿಗೆಲ್ಲಾ ಎಣ್ಣೆ ಹಾಕಿಡುತ್ತಿದ್ದರು. ತಾವು ತಲೆ ಬಾಚಿಕೊಂಡು ಆಮೇಲೆ ರಾತ್ರಿಯ ಅಡಿಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಸಂಜೆ ದೇವಸ್ಥಾನದಲ್ಲಿ ಮಂಗಳಾರತಿ, ಆ ಹೊತ್ತಿಗೆ ಶಾರದಾಮಣಿದೇವಿಯೂ ದೇವರಿಗೆ ದೀಪ ಹಚ್ಚಿ ಸ್ವಲ್ಪ ಹೊತ್ತು ಧ್ಯಾನ ಮಾಡುತ್ತಿದ್ದರು. ಮತ್ತೆ ರಾತ್ರಿ ಅಡಿಗೆ, ರಾಮಕೃಷ್ಣರನ್ನು ನೋಡಲು ಬಂದವರ ಕಷ್ಟಸುಖ ವಿಚಾರಿಸಿಕೊಳ್ಳುವುದು, ಅವರಿಗೆ ಸಲಹೆ ನೀಡುವುದು, ಈ ಕೆಲಸ ಬೇರೆ. ಮೊದಮೊದಲು ಅತ್ತೆ ಚಂದ್ರಮಣಿದೇವಿಗೆ, ಶ್ರೀರಾಮಕೃಷ್ಣರಿಗೆ ಮತ್ತು ತಾವು, ಹೀಗೆ ಮೂರೇ ಜನಕ್ಕೆ ಅಡಿಗೆ ಮಾಡುತ್ತಿದ್ದರು. ಬರಬರುತ್ತಾ ಶ್ರೀರಾಮಕೃಷ್ಣರನ್ನು ನೋಡಲು ದೂರದೂರದ ಊರಿಂದ ಬರುವ ಭಕ್ತರಿಗೆಲ್ಲಾ ಅಡಿಗೆ ಮಾಡಬೇಕಾಗುತ್ತಿತ್ತು. ಅನೇಕ ಮಂದಿ ಹೆಂಗಸರೂ ಶ್ರೀರಾಮಕೃಷ್ಣರನ್ನು ನೋಡಲು ಬರುತ್ತಿದ್ದರು. ಆಗ ಅವರು ಇಳಿದುಕೊಳ್ಳುತ್ತಿದ್ದುದು ಶಾರದಾದೇವಿಯವರ ಪುಟ್ಟ ಕೊಠಡಿಯಲ್ಲೆ. ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸ ಮಾಡುತ್ತಿದ್ದರೂ ಶಾರದಾಮಣಿ ಒಮ್ಮೆಯಾದರೂ ತಮಗೆ ಆಯಾಸವಾಯಿತೆಂದು ಗೊಣಗಿದವರಲ್ಲ, ಬೇಸರಪಟ್ಟುಕೊಳ್ಳುತ್ತಿರಲಿಲ್ಲ. ಮಾಡುವುದೆಲ್ಲಾ ದೇವರ ಸೇವೆ ಎನ್ನುವ ಮನೋಭಾವದಿಂದ ಸಂತೋಷವಾಗಿ ಮಾಡುತ್ತಿದ್ದರು. ಅನೇಕ ದಿನ ಸಂಜೆಯ ಹೊತ್ತು ತಮ್ಮ ಕೋಣೆಯಲ್ಲೇ ಕುಳಿತು ಗಂಗೆಯ ಕಡೆ ನೋಡುತ್ತಾ ಧ್ಯಾನದಲ್ಲಿ ಮೈಮರೆಯುವರು.

ಕೈಯೆಲ್ಲಾ ಕಜ್ಜಿಯಾಗಿ ಅನ್ನ ಕಲಸಿಕೊಳ್ಳಲು ಆಗದಿದ್ದ ಭಕ್ತನಿಗೆ ಶಾ‌ರದಾದೇವಿ

ಕೆಲವರು ಭಕ್ತರು ದೇವರ ಧ್ಯಾನದಲ್ಲಿ ಹಲವು ಕೆಲಸಗಳನ್ನು ಮರೆಯುವುದುಂಟು. ತಮ್ಮನ್ನೂ ಸುತ್ತಮುತ್ತಲಿನವರನ್ನೂ ಮರೆಯುವುದೂ ಉಂಟು. ಆದರೆ ಶ್ರೀ ರಾಮಕೃಷ್ಣರು, ಯಾರೇ ಆಗಲಿ ತಮ್ಮ ಕೆಲಸವನ್ನು ಗಮನವಿಟ್ಟು ಚೆನ್ನಾಗಿ ಮಾಡಬೇಕು ಎನ್ನುವವರು. ಅದಕ್ಕೆಂದೇ ಸಣ್ಣಪುಟ್ಟ ಕೆಲಸಗಳನ್ನು ಶಿಸ್ತಿನಿಂದ ಮಾಡುವುದನ್ನು ಅವರು ಶಾರದಾದೇವಿಯವರಿಗೆ ಕಲಿಸಿಕೊಟ್ಟಿದ್ದರು. ಶಾರದಾಮಣಿ ಶಾಲೆಗೆ ಹೋದವರಲ್ಲ. ಅವರಿಗೆ ಓದು ಬರಹ ಬಾರದು. ಆದರೂ ಶ್ರೀರಾಮಕೃಷ್ಣರ ಉಪದೇಶವನ್ನು ಗಮನವಿಟ್ಟು ಕೇಳಿಸಿಕೊಂಡು, ಅದರಂತೆ ಚಾಚೂ ತಪ್ಪದೆ ನಡೆದುಕೊಂಡು, ಪರಮಹಂಸರ ದಾರಿಯಲ್ಲೇ ನಡೆದರು.

ವೈರಾಗ್ಯದ ಹೆಸರಿನಲ್ಲಿ ತನ್ನ ಹತ್ತಿರದವರನ್ನು ಉದಾಸೀನವಾಗಿ ಕಾಣುವುದು ಶ್ರೀರಾಮಕೃಷ್ಣರ ಸ್ವಭಾವದಲ್ಲಿರಲೇ ಇಲ್ಲ. ಎಲ್ಲರೂ ದೇವರ ಮಕ್ಕಳೇ, ಅಲ್ಲವೆ? ಆದುದರಿಂದ ತನ್ನ ಹತ್ತಿರ ಇರುವವರನ್ನು ಪ್ರೀತಿಸಲಾರದವನು, ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು.

ದಕ್ಷಿಣೇಶ್ವರದಲ್ಲಿ ಶಾರದಾದೇವಿ ನಹಬತ್‌ಖಾನೆ ಎಂಬ ಮನೆಯಲ್ಲಿ ಕೆಳಗಿನ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಆ ಕೊಠಡಿ ಶ್ರೀರಾಮಕೃಷ್ಣರಿದ್ದ ಕೊಠಡಿಗೆ ಸುಮಾರು ಐವತ್ತು ಗಜಗಳಷ್ಟು ಮಾತ್ರ ದೂರವಿತ್ತು. ಆದರೂ ದಿನವಿಡೀ ಬರುತ್ತಿದ್ದ ಭಕ್ತರ ಗುಂಪಿನಿಂದಾಗಿ ಶಾರದಾದೇವಿಗೆ ಕೆಲವೊಮ್ಮೆ ಮೂರು ನಾಲ್ಕು  ದಿನಗಳಾದರೂ ತಮ್ಮ ಪತಿಯನ್ನು ನೋಡುವುದಕ್ಕೇ ಆಗುತ್ತಿರಲಿಲ್ಲ. ಆದರೆ ಶ್ರೀರಾಮಕೃಷ್ಣರು ಅವರ ಆರೋಗ್ಯ, ಅನುಕೂಲಗಳನ್ನು ಕುರಿತು ವಿಚಾರಿಸುತ್ತಲೇ ಇದ್ದರು. ಆಕೆ ತನ್ನನ್ನು ನೆಚ್ಚಿಕೊಂಡು ಹುಟ್ಟಿದ ಊರನ್ನು, ತಂದೆತಾಯಿಯರನ್ನು ಬಿಟ್ಟು ಬಂದಿದ್ದಾರೆ; ಆದ್ದರಿಂದ ಅವರಿಗೆ ಯಾವ ರೀತಿಯಿಂದಲೂ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಸದಾ ಪ್ರಯತ್ನಪಡುತ್ತಿದ್ದರು. ಈ ವಿಚಾರವಾಗಿ ಮುಂದೆ ಶಾರದಾದೇವಿಯವರೇ ಅನೇಕ ಸಲ ಹೇಳುತ್ತಿದ್ದರು:’ ಶ್ರೀರಾಮಕೃಷ್ಣರು ತ್ಯಾಗವೇ ರೂಪು ತಾಳಿದಂತಿದ್ದರೂ ಅನೇಕ ವೇಳೆ ನನ್ನ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದರು’ ’ಎಂದು.

’ದೇವರು ಪ್ರೇಮಮಯಿ. ಪತಿಗೆ ದೇವರ ಮೇಲೆ ಪ್ರೀತಿ ಬಂದಿದೆ ಎಂದ ಮಾತ್ರಕ್ಕೆ ಹೆಂಡತಿಯನ್ನು ಹೆಂಡತಿಯನ್ನು ಅಸಡ್ಡೆ ಮಾಡಬೇಕಾಗಿಲ್ಲ’ ಎನ್ನುವುದು ಪರಮಹಂಸರ ಅಭಿಪ್ರಾಯವಾಗಿತ್ತು.

ಒಂದು ಸಲ ಗುಲಾಬ್ ಮಾ ಎಂಬ ಭಕ್ತೆ ಶ್ರೀರಾಮಕೃಷ್ಣರಿಗೆ ಊಟ ತೆಗೆದುಕೊಂಡು ಹೋಗಿ ರಾತ್ರಿ ಹತ್ತು ಗಂಟೆಯಾದರೂ ಅಲ್ಲೇ ಮಾತನಾಡುತ್ತಾ ಕುಳಿತುಬಿಟ್ಟರು. ಶಾರದಾದೇವಿ ಅವರಿಗಾಗಿ ಕಾಯುತ್ತಾ ಇದ್ದರು. ಇದನ್ನು ತಿಳಿದ ಪರಮಹಂಸರು ಗುಲಾಬ್ ಮಾಗೆ “ನೀನು ಬಹಳ ಹೊತ್ತು ಇಲ್ಲಿ ಕುಳಿತುಬಿಟ್ಟರೆ, ಶಾರದೆಗೆ ತೊಂದರೆಯಾಗುತ್ತದೆ. ಬೇಗ ಹೋಗು” ಎಂದು ಆಕೆಯನ್ನು ಕಳುಹಿಸಿಬಿಟ್ಟರು.

ಶಾರದಾದೇವಿಗೆ ಸ್ವಲ್ಪವೂ ನೋವಾಗದಂತೆ ಶ್ರೀರಾಮಕೃಷ್ಣರು ಸದಾ ಎಚ್ಚರಿಕೆ ವಹಿಸುತ್ತಿದ್ದರು. ಒಂದು ಸಲ ಭಕ್ತನೊಬ್ಬ ತುಂಬಾ ಮಿಠಾಯಿಗಳನ್ನು ಗುರುಗಳಿಗೆ ತಂದುಕೊಟ್ಟ. ಶಾರದಾಮಣಿ ಅದರಲ್ಲಿ ಸ್ವಲ್ಪ ಮಾತ್ರ ತಮ್ಮ ಪತಿಗೆಂದು ಇಟ್ಟುಕೊಂಡು ಉಳಿದುದನ್ನೆಲ್ಲಾ ಅಕ್ಕಪಕ್ಕದ ಮನೆಯ ಮಕ್ಕಳಿಗೆ ಹಂಚಿಬಿಟ್ಟರು. ಇದನ್ನು ನೋಡಿ ರಾಮಕೃಷ್ಣರು: “ಹೆಂಗಸು ಇಷ್ಟು ಧಾರಾಳವಾದರೆ ಸಂಸಾರ ನಡೆಯುವುದು ಹೇಗೆ?” ಎಂದು ಸ್ವಲ್ಪ ಗಟ್ಟಿಯಾಗಿ ಹೇಳಿದರು ಅದಕ್ಕೆ ಶಾರದಾದೇವಿಯವರು ಸಪ್ಪೆ ಮುಖ ಹಾಕಿಕೊಂಡು ಅಲ್ಲಿಂದ ಹೊರಟರು. ತಕ್ಷಣ ಶ್ರೀರಾಮಕೃಷ್ಣರು ಶಿಷ್ಯರನ್ನು ಕರೆದು :” ಆಕೆಯನ್ನು ತಕ್ಷಣ ಕರೆದುಕೊಂಡು ಬನ್ನಿ. ಆಕೆಯ ಕಣ್ಣಿನಿಂದ ಒಂದು ತೊಟ್ಟು ಕಣ್ಣೀರು ಬಿದ್ದರೂ ನನ್ನ ತಪಸ್ಸೆಲ್ಲ ಹಾಳಾಗುತ್ತದೆ!” ಎಂದರು.

ತಮ್ಮ ಹತ್ತಿರವಿದ್ದ ಸ್ವಲ್ಪ ಹಣದಲ್ಲಿ ಪರಮಹಂಸರು ಎರಡು ಚಿನ್ನದ ಬಳೆಗಳನ್ನು ಮಾಡಿಸಿ ಪ್ರೀತಿಯಿಂದ ಅವನ್ನು ಶಾರದಾದೇವಿಯವರಿಗೆ ಕಳುಹಿಸಿಕೊಟ್ಟರು.

ಶ್ರೀರಾಮಕೃಷ್ಣರಿಗೆ ಶಾರದಾದೇವಿಯವರಲ್ಲಿ ಮಮತೆಯಿದ್ದುದು ಮಾತ್ರವಲ್ಲದೆ ಆಕೆಯ ದಿವ್ಯಶಕ್ತಿಯಲ್ಲಿ ನಂಬಿಕೆಯೂ ಇತ್ತು. ಅವರು ಒಂದು ಸಲ ಆಕೆಗೆ ಹೇಳಿದರು: “ಅನೇಕರು ಅಜ್ಞಾನದಿಂದ ಕ್ರಿಮಿಕೀಟಗಳಂತೆ ಬದುಕುತ್ತಿದ್ದಾರೆ.ಅವರನ್ನು ಉದ್ಧಾರ ಮಾಡುವುದು ನಿಮ್ಮ ಕರ್ತವ್ಯ.”

ಇದನ್ನು ಕೇಳಿ ಶಾರದಾದೇವಿ,” ನಾನು ಹೆಂಗಸು. ನಾನು ಏನು ಮಾಡಬಲ್ಲೆ?” ಎಂದರು.

“ಹೆಂಗಸಾದರೇನು? ಹೆಂಗಸೇ ಆದಿಶಕ್ತಿಯ ಅವತಾರ. ಅವಳು ಮನಸ್ಸು ಮಾಡಿದರೆ ಯಾರಿಗೆ ಬೇಕಾದರೂ ಗುರುವಾಗಬಹುದು.,” ಎಂದು ಶ್ರೀರಾಮಕೃಷ್ಣರೂ ಆಕೆಗೆ ಅನೇಕ ದಿವ್ಯ ಮಂತ್ರಗಳನ್ನು ಉಪದೇಶಿಸಿದರು.

ಶ್ರೀರಾಮಕೃಷ್ಣರು ಶಾರದಾದೇವಿಯವರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರನ್ನು ’ನೀನು’ ಎಂದು ಏಕವಚದಲ್ಲಿ ಸಂಬೋಧಿಸುತ್ತಾ ಕೂಡಾ ಇರಲಿಲ್ಲ, ’ನೀವು’ ಎನ್ನುತ್ತಿದ್ದರು. ಒಂದು ದಿನ ರಾತ್ರಿ ಬಾಗಿಲು ಸದ್ದಾಗಲು, ಯಾರೋ ದೇವಸ್ಥಾನದ ಆಳುಗಳೆಂದು ತಿಳಿದು, “ಬಾಗಿಲು ಮುಚ್ಚಿಕೊಂಡು ಬಾ” ಎಂದರು. ಶಾರದಾದೇವಿ ಹತ್ತಿರ ಬಂದಾಗ ಅವರನ್ನು ನೋಡಿ ಶ್ರೀರಾಮಕೃಷ್ಣರು, “ಯಾರೋ ಕೆಲಸದವರೆಂದು ತಿಳಿದೆ, ದಯವಿಟ್ಟು ಕ್ಷಮಿಸಿ” ಎಂದರು. ಶಾರದಾದೇವಿ “ಅದರಲ್ಲಿ ತಪ್ಪೇನಿದೆ?” ಎಂದರೂ, ಅದೇ ವಿಚಾರಕ್ಕೆ ರಾತ್ರಿಯೆಲ್ಲಾ ರಾಮಕೃಷ್ಣರು ನಿದ್ದೆ ಕೂಡಾ ಮಾಡಲಿಲ್ಲವಂತೆ.

ರಾಮಕೃಷ್ಣರು ಬಹು ದೊಡ್ಡ ಭಕ್ತರು. ಅವರಿಗೆ ದೇವರೇ ಮುಖ್ಯ. ಹಣಕಾಸು ಬೇಡವೇ ಬೇಡ. ಅವರಿಗೆ ತಕ್ಕ ಹೆಂಡತಿ ಶಾರದಾದೇವಿ. ತಮ್ಮ ಪತಿಯ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.

ಒಂದು ಸಲ ಶ್ರೀರಾಮಕೃಷ್ಣರ ಹಣವಂತ ಭಕ್ತನೊಬ್ಬ ಅವರಿಗೆ ಹೇಳಿದ:

“ನಿಮ್ಮ ಹೆಸರಿನಲ್ಲಿ ಬ್ಯಾಂಕಿನಲ್ಲಿ ಹತ್ತು ಸಾವಿರ ರೂಪಾಯಿಗಳನ್ನಿಡುತ್ತೇನೆ. ಅದರಿಂದ ಬರುವ ಬಡ್ಡಿಯಿಂದ ನಿಮಗೆ ಬೇಕಾದ ಸಾಮಾನುಗಳನ್ನು ಕೊಳ್ಳಬಹುದು”.

ಹಣ ಎಂದರೆ ರಾಮಕೃಷ್ಣರು ದೂರ ಸರಿಯುತ್ತಿದ್ದರು. ಈ ಮಾತುಗಳನ್ನು ಕೇಳಿ ಅವರಿಗೆ ಸಿಡಿಲು ಬಡಿದಂತಾಯಿತು. ಅವರು ಹೇಳಿದರು:

“ನನ್ನನ್ನು ಮಾತ್ರ ಹಣದ ಆಸೆಯಲ್ಲಿ ಸಿಕ್ಕಿಸಬೇಡ. ಬೇಕಾದರೆ ಶಾರದಾದೇವಿಯನ್ನು ಕೇಳು. ನನ್ನಂತಹ ಬಡವನನ್ನು ಮದುವೆಯಾದ್ದರಿಂದ ಅವರಿಗೆ ಸೀರೆ, ಒಡವೆಗಳನ್ನು ಕೊಂಡುಕೊಳ್ಳಲು ಆಗುತ್ತಿಲ್ಲ. ಆಕೆಗೆ ಇಷ್ಟವಾದರೆ ತೆಗೆದುಕೊಳ್ಳಲಿ”.

ಆತ ಶಾರದಾದೇವಿಯನ್ನೇ ಪ್ರಾರ್ಥಿಸಿಕೊಂಡ. ಆದರೆ ಆಕೆ ಸ್ವಲ್ಪವೂ ಅನುಮಾನಿಸದೆ ಅದನ್ನು ನಿರಾಕರಿಸಿದರು: ’ಅವರಿಗೆ ಬೇಡವಾದ ಹಣ ನನಗೇಕೆ? ನಾನದನ್ನು ತೆಗೆದುಕೊಂಡರೂ ಅವರಿಗಾಗಿಯೇ ಉಪಯೋಗಿಸುತ್ತೇನೆ, ಅಲ್ಲವೇ?’

ಇದನ್ನು ಕೇಳಿ ಶ್ರೀ ರಾಮಕೃಷ್ಣರಿಗೆ ತುಂಬಾ ಸಂತೋಷವಾಯಿತು.

ಸ್ವಭಾವತಃ ಸೌಮ್ಯ ಪ್ರಕೃತಿಯವರಾದರೂ ಶಾರದಾದೇವಿ ಕೆಲವು ಸಲ ತುಂಬಾ ಧೈರ್ಯ ತೋರಿಸುತ್ತಿದ್ದರು. ತಮ್ಮ ನಡವಳಿಕೆಯಿಂದ ಎಂತಹ ಕ್ರೂರಿಗಳ ಮನಸ್ಸನ್ನಾದರೂ ಬದಲಾಯಿಸುತ್ತಿದ್ದರು. ಒಂದು ಸಲ ಅವರು ಜಯರಾಮವಟಿಯಿಂದ ದಕ್ಷಿಣೇಶ್ವರಕ್ಕೆ ಬರುತ್ತಿದ್ದರು. ದಟ್ಟವಾದ ಕಾಡು; ಹೆದರಿಕೆಯಾಗುವಂತಹ ಕತ್ತಲು. ರಸ್ತೆಯಲ್ಲಿ ಕಳ್ಳಕಾಕರ ಕಾಟ ಬೇರೆ. ಜೊತೆಯವರು ಬೇಗ ನಡೆಯುಲಾರದವರು. ಜೊತೆಯಲ್ಲಿದ್ದವರಿಗೆ ಕತ್ತಲಾಗುವಷ್ಟರಲ್ಲಿ ಕಾಡನ್ನು ದಾಟಬೇಕೆಂಬ ಆತುರ ತನ್ನಿಂದ ಬೇರೆಯವರಿಗೆ ತೊಂದರೆ ಏಕೆಂದು ಶಾರದಾದೇವಿ ಅವರನ್ನೆಲ್ಲಾ ಮುಂದೆ ಕಳಿಸಿಬಿಟ್ಟರು. ಒಬ್ಬರೇ ಮುಂದೆ ನಡೆದರು. ಭಯಂಕರವಾಗಿ ಕಾಣುತ್ತಿದ್ದ ವ್ಯಕ್ತಿಯೊಬ್ಬ ಇದಿರಿಗೆ ಬಂದ. ಅವನು ದಾರಿಯಲ್ಲಿ ಪ್ರಯಾಣಿಕರನ್ನು ಹೊಡೆದು ಬಡಿದು ಕಳ್ಳತನ ಮಾಡುವ ಮನುಷ್ಯ, ಒಂದು ನಿಮಿಷ ಶಾರದಾದೇವಿಗೆ ಭಯವಾಯಿತು. ಮರುಕ್ಷಣವೇ ಅವರು ಸುಧಾರಿಸಿಕೊಂಡರು ಆ ಮನುಷ್ಯ, “ಕತ್ತಲೆಯಲ್ಲಿ ಒಂಟಿಯಾಗಿ ಹೋಗುತ್ತಿರುವ ನೀನು ಯಾರು?” ಎಂದ ಶಾರದಾದೇವಿ ಧೈರ್ಯವಾಗಿ:

“ಅಪ್ಪಾ! ನಾನು ನಿಮ್ಮ ಮಗಳು ಶಾರದೆ. ಜೊತೆಯವರೆಲ್ಲಾ ಮುಂದೆ ಹೊರಟುಹೋದರು. ನಿಮ್ಮ ಅಳಿಯ ದಕ್ಷಿಣೇಶ್ವರದಲ್ಲಿದ್ದಾರೆ. ದಯವಿಟ್ಟು ನನ್ನನ್ನು ಅಲ್ಲಿಗೆ ಕಳುಹಿಸಿಕೊಡಿ” ಎಂದರು.

ಆ ಹೊತ್ತಿಗೆ ಆ ಮನುಷ್ಯನ ಹೆಂಡತಿಯೂ ಅಲ್ಲಿಗೆ ಬಂದಳು. ಶಾರದಾದೇವಿ ಆಕೆಯನ್ನೂ ’ಅಮ್ಮಾ’ ಎಂದು ಕರೆದರು. ಆ ಗಂಡ ದರೋಡೆಕೋರ, ದಾರಿಯಲ್ಲಿ ಹೋಗುವವರನ್ನು ಹಿಂಸೆ ಮಾಡಿ ಅವರ ಹಣ – ಒಡವೆ ಕಸಿದುಕೊಳ್ಳುವವನು. ಅವನ ಹೆಂಡತಿಗೂ ಸ್ವಲ್ಪವೂ ದಯೆಯಿಲ್ಲ. ಆದರೆ ಶಾರದಾದೇವಿಯ ಮಾತುಗಳು, ಒಳ್ಳೆಯ ಸ್ವಭಾವ ಇವುಗಳಿಂದ ಆ ಗಂಡ – ಹೆಂಡತಿಯರಿಗೂ ವಾತ್ಸಲ್ಯ ಉಂಟಾಯಿತು. ಅವರು ಶಾರದಾದೇವಿಯನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದರು. ಆ ರಾತ್ರಿ ತಮ್ಮ ಮನೆಯಲ್ಲಿಯೇ ವಿಶ್ರಮಿಸಿಕೊಳ್ಳಲು ಜಾಗ ಕೊಟ್ಟರು. ಬೆಳಗ್ಗೆ ಶಾರದಾದೇವಿಯ ಜೊತೆಯಲ್ಲಿದ್ದವರೆಲ್ಲಾ ಅವರನ್ನು ಹುಡುಕಿಕೊಂಡು ಅವರನ್ನು ಬೀಳ್ಕೊಟ್ಟರು. ಮುಂದೆ ಅನೇಕ ಸಲ ಅವರು ಶಾರದಾದೇವಿಯನ್ನು ನೋಡಲೆಂದು ದಕ್ಷಿಣೇಶ್ವರಕ್ಕೆ ಬಂದು ಹೋಗುತ್ತಿದ್ದರು.

ಭಕ್ತರೊಂದಿಗೆ ಮಾತನಾಡಿ ಮಾತನಾಡಿ ಶ್ರೀರಾಮಕೃಷ್ಣರಿಗೆ ಗಂಟಲಿನ ರೋಗವೇ ಬಂದುಬಿಟ್ಟಿತು. ಎಷ್ಟು ಚಿಕಿತ್ಸೆ ಮಾಡಿದರೂ ಪ್ರಯೋಜನವಾಗಲಿಲ್ಲ. ಅವರನ್ನು ದಕ್ಷಿಣೇಶ್ವರದಿಂದ ಕಾಶೀಪುರದ ತೋಟಕ್ಕೆ ಕರೆದುಕೊಂಡು ಬಂದರು. ಶಾರದಾದೇವಿಯಂತೂ ಹಗಲು ರಾತ್ರಿ ಅವರ ಸೇವೆ ಮಾಡಿದರು. ಆದರೂ ೧೮೮೬ನೆಯ ವರ್ಷ ಆಗಸ್ಟ್ ಹದಿನೈದರಂದು ಶ್ರೀರಾಮಕೃಷ್ಣ ಪರಮಹಂಸರು ಸಮಾಧಿಮಗ್ನರಾದರು, ಮತ್ತೆ ಎಚ್ಚರಗೊಳ್ಳಲಿಲ್ಲ.

ಶಾರದಾದೇವಿ – ರಾಮಕೃಷ್ಣರ ಮದುವೆಯಾಗಿ ಇಪ್ಪತ್ತೆಂಟು ವರ್ಷ ಕಳೆದಿತ್ತು. ರಾಮಕೃಷ್ಣರನ್ನೇ ಗಂಡ – ಗುರು – ದೇವರು ಎಂದು ಬಾಳಿದ್ದರು ಶಾರದಾದೇವಿ. ಅವರಿಗೆ ತಡೆಯಲು ಸಾಧ್ಯವಾಗದಷ್ಟು ದುಃಖವಾಯಿತು. ಆದರೆ ಅವರಿಗೆ ಒಂದು ವಿಶೇಷ ಅನುಭವವಾಯಿತು. ಶ್ರೀ ರಾಮಕೃಷ್ಣರು ಅವರಿಗೆ ಕಾಣಿಸಿಕೊಂಡು :

’‘ನಾನು ಸತ್ತುಹೋಗಿದ್ದೇನೆಂದು ನೀನೂ ಭಾವಿಸುತ್ತೀಯಾ?’ ಎಂದು ಕೇಳಿದಂತಾಯಿತು. ಆಗ ಶಾರದಾದೇವಿಗೆ ಸ್ವಲ್ಪ ಸಮಾಧಾನವಾಯಿತು. ಶ್ರೀರಾಮಕೃಷ್ಣ ಪರಮಹಂಸರ ದೇಹ ಮರೆಯಾಗಿದ್ದರೂ ಅವರು ತೇಜಸ್ಸಿನ ರೂಪದಲ್ಲಿ ತಮ್ಮ ಹತ್ತಿರವೇ ಇದ್ದಾರೆಂಬ ನಂಬಿಕೆ ಬಂತು.

ಶ್ರೀ ರಾಮಕೃಷ್ಣರ ಅಗಲುವಿಕೆಯ ದುಃಖದಿಂದ ಸಮಾಧಾನವಾಗುವಂತೆ ಶಿಷ್ಯರು ಶಾರದಾದೇವಿಯವರನ್ನು ದೊಡ್ಡ ಯಾತ್ರಾಸ್ಥಳವಾದ ಬೃಂದಾವನಕ್ಕೆ ಕರೆದುಕೊಂಡು ಹೋಗಬೇಕೆಂದೂ ನಿಶ್ಚಯಿಸಿದರು. ಅದೇ ಪ್ರಕಾರ ಅವರೆಲ್ಲರೂ ಕಾಶಿ, ಅಯೋಧ್ಯೆ, ವೈದ್ಯನಾಥ ಮುಂತಾದ ಪುಣ್ಯಕ್ಷೇತ್ರಗಳ ದರ್ಶನ ಮಾಡಿಕೊಂಡು ಬೃಂದಾವನಕ್ಕೆ ಬಂದರು. ಒಂದು ವರ್ಷ ಕಾಲ ಶಾರದಾದೇವಿ ಅಲ್ಲೇ ಸಾಧನೆ ಮಾಡುತ್ತಿದ್ದರು. ಅಲ್ಲೇ ಮೊದಲ ಬಾರಿಗೆ ’ಯೋಗಾಂದ’ ಎನ್ನುವ ಶಿಷ್ಯರಿಗೆ ಉಪದೇಶವನ್ನೂ ಕೊಟ್ಟರು.

ಪುಣ್ಯಸ್ಥಳದಲ್ಲಿ ಏನನ್ನಾದರೂ ಬಿಟ್ಟುಬಿಡುವುದು ಪದ್ಧತಿ. ಕೆಲವರು ತಮ್ಮ ಪ್ರೀತಿಯ ಹಣ್ಣನ್ನು ಬಿಡುತ್ತಾರೆ, ಕೆಲವರು ತಮಗೆ ಇಷ್ಟವಾದ ತರಕಾರಿಯನ್ನು ಬಿಡುತ್ತಾರೆ. ಅದರಂತೆ ಶಾರದಾದೇವಿ ರಾಧಾರಮಣನ ದೇವಸ್ಥಾನಕ್ಕೆ ಹೋಗಿ, ದೇವರ ಬಳಿ ’ಇನ್ನೊಬ್ಬರಲ್ಲಿ ತಪ್ಪು ಹುಡುಕುವ ದುರ್ಗುಣ ನನ್ನಲ್ಲಿದ್ದರೆ ಅದು ದೂರವಾಗುವಂತೆ ಮಾಡು’ ಎಂದು ಪ್ರಾರ್ಥಿಸಿಕೊಂಡರು. ಅದರಂತೆಯೇ ಮುಂದೆ ಎಂತಹ ಸಂದರ್ಭದಲ್ಲೂ ಅವರು ಬೇರೆಯವರಲ್ಲಿದ್ದ ದೋಷವನ್ನು ಎತ್ತಿ ಆಕ್ಷೇಪಿಸಲಿಲ್ಲ.

ಶ್ರೀ ರಾಮಕೃಷ್ಣರು ಸಮಾಧಿಸ್ಥರಾಗುವುದಕ್ಕೆ ಮುಂಚೆ, ’ನಾನು ಕಾಲವಾದ ಮೇಲೆ ನನ್ನ ಹುಟ್ಟಿದ ಊರಾದ ಕಾಮಾರಪುಕುರಕ್ಕೆ ಹೋಗಿ ಇರು,’ ಎಂದು ಹೇಳಿದ್ದರು. ಅದರಂತೆ ಶಾರದಾದೇವಿ ಕಾಮಾರಪುಕರಕ್ಕೆ ನಡೆದುಕೊಂಡೇ ಹೋದರು.

ಕಾಮಾರಪುಕುರದಲ್ಲಿ ಅವರು ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಯಿತು. ಊಟಕ್ಕೆ ಉಪ್ಪಿಲ್ಲ, ದೇಪಕ್ಕೆ ಎಣ್ಣೆಯಿಲ್ಲ ಎನ್ನುವಂತಹ ಬಡತನ. ಸಾಲದ್ದಕ್ಕೆ ಸುತ್ತಲಿನವರು ಅವರ ಮನಸ್ಸು ನೋಯುವಂತೆ ಮಾತನಾಡುವರು. ಎಲ್ಲವನ್ನೂ ಶಾರದಾದೇವಿ ಮೌನವಾಗಿ ಸಹಿಸಿದರು. ಒಂದು ದಿನವಂತೂ ಹುಚ್ಚನೊಬ್ಬ ಶಾರದಾದೇವಿಯನ್ನು ಅಟ್ಟಿಸಿಕೊಂಡು ಬಂದ. ಅವರು ಎಷ್ಟು ಓಡಿದರೂ ಅವನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಆಗ ಅವರು ತಕ್ಷಣ ತಿರುಗಿ ಬಿದ್ದು ಅವನ ಎದೆಯ ಮೇಲೆ ಕುಳಿತು ನಾಲಗೆ ಎಳೆದು ಚೆನ್ನಾಗಿ ಪೆಟ್ಟುಕೊಟ್ಟರು.

ಭಕ್ತರಿಗೆ ದೀಪ – ಎಲ್ಲರಿಗೆ ತಾಯಿ

ಶ್ರೀರಾಮಕೃಷ್ಣರಿಗೆ ನೂರಾರು ಮಂದಿ ಭಕ್ತರು. ಅವರಲ್ಲಿ ಎಷ್ಟೋ ಜನ ಶ್ರಿಮಂತರು. ಶ್ರೀ ರಾಮಕೃಷ್ಣರ ಪತ್ನಿ ಇಂತಹ ಕಷ್ಟದಲ್ಲಿದ್ದಾರೆ ಎನ್ನುವ ಸುದ್ಧಿ ಕ್ರಮೇಣ ಕಲಕತ್ತೆಗೆ ತಲುಪಿತು. ಆಗ ಶ್ರೀರಾಮಕೃಷ್ಣರ ಭಕ್ತರು ಅವರನ್ನು ಕಲಕತ್ತೆಗೆ ಬರುವಂತೆ ಪ್ರಾರ್ಥಿಸಿಕೊಂಡರು. ಒಂದು ವರ್ಷ ಅತಿಯಾದ ಕಷ್ಟ, ದುಃಖಗಳನ್ನು ಅನುಭವಿಸಿದ ನಂತರ ಶಾರದಾದೇವಿ ಮತ್ತೆ ಕಲಕತ್ತೆಗೆ ಬಂದರು. ಸ್ವಾಮಿ ಯೋಗಾನಂದ, ಅವರ ನಂತರ ಸ್ವಾಮಿ ಶಾರದಾನಂದರು ಕೊನೆಯವರೆಗೆ ಶಾರದಾದೇವಿಯವರ ಯೋಗಕ್ಷೇಮ ನೋಡಿಕೊಂಡರು.

ಕಲಕತ್ತೆಯಲ್ಲಿದ್ದಾಗ ಶಾರದಾದೇವಿಯವರು ಪಂಚತಪವೆಂಬ ಕಠಿಣ ತಪಸ್ಸನ್ನು ಆಚರಿಸಿದರು. ಪಂಚತಪವೆಂದರೆ ಬೇಸಿಗೆಯಲ್ಲಿ, ಮೇಲೆ ಸೂರ್ಯ ಉರಿಯುತ್ತಿರುವಾಗ, ನಾಲ್ಕು ಕಡೆಯೂ ಬೆಂಕಿ ಹಾಕಿ, ಮಧ್ಯೆ ಕುಳಿತು ಮಾಡುವ ತಪಸ್ಸು. ಶಾರದಾದೇವಿ ಹೀಗೆ ಏಳು ದಿನ ತಪಸ್ಸು ಮಾಡಿದರು. ಅದು ಮುಗಿಯುವ ಹೊತ್ತಿಗೆ ಹೊಗೆ, ಬೆಂಕಿಗಳಿಂದ ಅವರ ದೇಹವೆಲ್ಲಾ ಕಪ್ಪಗಾಗಿತ್ತು.

ಶ್ರೀ ರಾಮಕೃಷ್ಣ ಪರಮಹಂಸರ ನಂತರ ಶಾರದಾದೇವಿಯವರೇ ಅವರ ಶಿಷ್ಯರಿಲ್ಲರಿಗೂ ಗುರುವಾದರು. ತಮ್ಮ ಹತ್ತಿರ ಬಂದು ಪ್ರಾರ್ಥಿಸಿಕೊಂಡವರಿಗೆಲ್ಲಾ ಉಪದೇಶವನ್ನು ಕೊಡುತ್ತಿದ್ದರು.

ಶಾರದಾದೇವಿ ಕಳ್ಳನಿಗೆ, ’ಅಪ್ಪಾ, ನಾನು ನಿಮ್ಮ ಮಗಳು ಶಾರದೆ’ಎಂದಳು.

ಶ್ರೀರಾಮಕೃಷ್ಣರು ಬದುಕಿರುವಾಗ,”ನಾನು ನೋಡದೆ ಇದ್ದ ಪುಣ್ಯಕ್ಷೇತ್ರಗಳನ್ನೆಲ್ಲಾ ನೀನು ನೋಡಿ ಬಾ” ಎಂದು ಶಾರದಾದೇವಿಯವರಿಗೆ ಹೇಳಿದ್ದರು. ಅದರಂತೆ ಅವರು ಕಾಶಿ, ಬೃಂದಾವನ, ಜಗನ್ನಾಥ ಮುಂತಾದ ಉತ್ತರ ಭಾರತದ ಪುಣ್ಯಕ್ಷೇತ್ರಗಳನ್ನೆಲ್ಲಾ ಸುತ್ತಿ ಬಂದರು. ಅನಂತರ ದಕ್ಷಿಣಲ್ಲಿ ಮದ್ರಾಸಿಗೆ ಬಂದು ಅಲ್ಲಿಂದ ರಾಮೇಶ್ವರ ಕನ್ಯಾಕುಮಾರಿ ಮುಂತಾದ ಯಾತ್ರಾಸ್ಥಳಗಳನ್ನೂ ಸಂದರ್ಶಿಸಿದರು. ಬೆಂಗಳೂರಿಗೆ ಸಹ ಬಂದಿದ್ದರು.

ಸ್ವಾಮಿ ಯೋಗಾನಂದ, ಸ್ವಾಮಿ ಶಾರದಾನಂದ, ಗುಲಾಬ್ ಮಾ, ಯೋಗಿನ್ ಮಾ, ಲಕ್ಷ್ಮೀದೇವಿ, ಗೌರಿ ಮಾ ಮುಂತಾದವರು ಶಾರದಾದೇವಿಯ ಶಿಷ್ಯರಲ್ಲಿ ಮುಖ್ಯರು ಶ್ರೀ ರಾಮಕೃಷ್ಣರ ಸ್ವಂತ ಶಿಷ್ಯರೂ ಶಾರದಾದೇವಿಯನ್ನು ಗುರುವಿನಂತೆಯೇ ಗೌರವಿಸುತ್ತಿದ್ದರು. ಸ್ವಾಮಿ ವಿವೇಕಾನಂದರ ಹೆಸರನ್ನು ನಾವೆಲ್ಲ ಕೇಳಿದ್ದೇವೆ. ದೂರ ದೇಶಗಳಲ್ಲೆಲ್ಲ ಹಿಂದೂಧರ್ಮ ಮತ್ತು ಭಾರತದ ಹಿರಿಮೆಯನ್ನು ತೋರಿಸಿಕೊಟ್ಟವರು. ಅಲ್ಲಿಯ ಎಷ್ಟೋ ಜನ ಅವರ ಭಕ್ತರಾದರು. ಇಂತಹವರೂ ಆಕೆಯನ್ನು ಕೇಳದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅದಕ್ಕೆ ಶಾರದಾದೇವಿಯವರ ಅಸಾಧಾರಣ ವ್ಯಕ್ತಿತ್ವವೇ ಕಾರಣ.

ಶಾರದಾದೇವಿ ಆದರ್ಶ ತಪಸ್ವಿನಿ, ಆದರ್ಶ ಸತಿ, ಆದರ್ಶ ಮಾತೆಯೂ ಹೌದು. ಇವರಿಗೆ ಸ್ವಂತ ಮಕ್ಕಳಿರಲಿಲ್ಲ, ನಿಜ. ಆದರೆ ಇವರಲ್ಲಿದ್ದ ತಾಯಿಯ ಮಮತೆ ಮಿಕ್ಕವರಿಗಿಂತ ಹೆಚ್ಚಿನದು. ಎಲ್ಲರೂ ತಮ್ಮ ಮಕ್ಕಳನ್ನು ತುಂಬ ಪ್ರೀತಿಸುತ್ತಾರೆ, ಅಲ್ಲವೇ? ಇದು ಸರಿ, ಸಹಜ, ಆದರೆ ಬೇರೆಯವರನ್ನು ತನ್ನ ಮಕ್ಕಳಂತೆ ಕಾಣುವುದು ನಿಜವಾಗಿ ದೊಡ್ಡತನ. ಶಾರದಾದೇವಿಯ ತಾಯಿ ಒಂದು ಸಲ, “ಮಕ್ಕಳಿಂದ ಅಮ್ಮ ಎನ್ನಿಸಿಕೊಳ್ಳುವ ಭಾಗ್ಯ ನನ್ನ ಮಗಳ ಹಣೆಯಲ್ಲಿ ಬರೆಯಲಿಲ್ಲ” ಎಂದರು. ಅದನ್ನು ಕೇಳಿದ ಶ್ರೀರಾಮಕೃಷ್ಣರು, “ಅದಕ್ಯಾಕೆ ಚಿಂತೆ ಮಾಡುತ್ತೀರಿ? ಜಗತ್ತಿನ ಮೂಲೆ ಮೂಲೆಗಳಿಂದಲೂ ಅವರನ್ನು ’ಅಮ್ಮಾ’ ಎಂದು ಕರೆಯುವ ಮಕ್ಕಳು ಬರುತ್ತಾರೆ” ಎಂದರಂತೆ.

ಅದರಂತೆಯೇ ಸ್ವಾಮಿ ವಿವೇಕಾನಂದರಂತಹ ಮಹಾಪುರುಷರಿಂದಲೂ ಶಾರದಾದೇವಿ ’ಅಮ್ಮಾ’ ಎನ್ನಿಸಿಕೊಂಡರು. ಅಷ್ಟೇ ಅಲ್ಲ, ’ಮಹಾಮಾತೆ’ ’ಶ್ರೀಮಾತೆ’ ಎನ್ನುವ ಹೆಸರಿನಿಂದಲೇ ಅವರು ಪ್ರಖ್ಯಾತರಾದರು.

ಜನ ಕರೆಯುತ್ತಿದ್ದುದು ಮಾತ್ರವಲ್ಲ, ಎಲ್ಲರೂ ಅವರ ಮಮತೆಯ ದೃಷ್ಟಿಗೆ ಜಾತಿ-ಮತ, ದೊಡ್ಡವರು-ಚಿಕ್ಕವರು, ಶ್ರೀಮಂತರು-ಬಡವರು ಎನ್ನುವ ಭೇದವೂ ಇರಲಿಲ್ಲ ಶಿಷ್ಯರಿಗೆ ಉಪದೇಶ ಕೊಡುವುದರ ಜೊತೆಗೇ ಅವರ ಕಷ್ಟ ಸುಖಗಳನ್ನೂ ವಿಚಾರಿಸಿಕೊಳ್ಳುತ್ತಿದ್ದರು. ಭಕ್ತರು ಮನೆಗೆ ಬಂದರೆ ಅವರಿಗೆ ತಾವೇ ಅಡಿಗೆ ಮಾಡಿ  ಬಡಿಸುತ್ತಿದ್ದರು. ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುತ್ತಿದ್ದರು. ಊಟ ಮಾಡಿದ ಎಲೆಯನ್ನು ಎತ್ತುವುದಕ್ಕೆ ಸಹ ಅವಕಾಶ ಕೊಡದೆ ತಾವೇ ಅದನ್ನೂ ಮಾಡುತ್ತಿದ್ದರು. ಕೊನೆಗೆ ಸೆಖೆಯಾಗಿದೆಯೆಂದು ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದರು. ಅವರು ಗುರು ರಾಮಕೃಷ್ಣರ ಹೆಂಡತಿ, ಅಲ್ಲವೇ? ಆದುದರಿಂದ ಒಬ್ಬ ಶಿಷ್ಯನಿಗೆ ಹೀಗೆ ಅವರಿಂದ ಸೇವೆ ಮಾಡಿಸಿಕೊಳ್ಳಲು ನಾಚಿಕೆಯಾಯಿತು. ಆಗ ಶಾರದಾದೇವೆಯು,

“ಛೇ ಛೇ, ಇದರಲ್ಲಿ ನಾಚಿಕೆಯೇನು? ನಾನು ನಿನ್ನ ತಾಯಿಯಲ್ಲವೇ? ಮಗುವಿನ ಕೆಲಸ ಮಾಡುವುದು ತಾಯಿಯ ಹಕ್ಕು” ಎಂದು ಹೇಳಿ ಅವನನ್ನು ಸುಮ್ಮನಾಗಿಸಿದರು.

ಇನ್ನೊಂದು ಸಲ ಒಬ್ಬ ಭಕ್ತನಿಗೆ ಕೈಯ್ಯೆಲ್ಲಾ ಕಜ್ಜಿಯಾಗಿ ಅನ್ನ ಕಲಸುವುದಕ್ಕೂ ಆಗದಂತಾಗಿತ್ತು. ಆಗ ಶಾರದಾದೇವಿಯೇ ಅನ್ನ ಕಲಿಸಿ ಅವನಿಗೆ ಊಟ ಮಾಡಿಸಿದರು. ಇಂತಹ ಮಮತೆ ಆಕೆಯದು.

ಕೆಟ್ಟವರನ್ನೂ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದುದು ಇವರ ವಿಶೇಷ ಗುಣ. ಭಕ್ತನೊಬ್ಬ ಏನೋ ತಪ್ಪು ಕೆಲಸ ಮಾಡಿದ್ದ. ಹಿರಿಯರೊಬ್ಬರು ಶಾರದಾದೇವಿಗೆ, ಅವನನ್ನು ನಿಮ್ಮ ಹತ್ತಿರ ಸೇರಿಸಬೇಡಿ ಎಂದು ಹೇಳಿದರು ಅದಕ್ಕೆ ಶಾರದಾದೇವಿ: “ಛೇ ಛೇ, ಹಾಗೆಂದರೇನು? ನನ್ನ ಮಗು ಕೆಸರಿನಲ್ಲಿ ಬಿದ್ದು ಮೈಯೆಲ್ಲಾ ಕೊಳೆ ಮಾಡಿಕೊಂಡರೆ ಅದನ್ನು ತೊಳೆದು ಮೇಲೆತ್ತಿಕೊಳ್ಳುವುದಲ್ಲವೇ ನನ್ನ ಕರ್ತವ್ಯ?” ಎಂದು ಉತ್ತರ ಕೊಟ್ಟರು.

ಇನ್ನೊಂದು ಬಾರಿ, ಕೆಟ್ಟ ಕೆಲಸಗಳನ್ನು ಮಾಡಿ ಜೀವಿಸುತ್ತಿದ್ದ ಹೆಂಗಸೊಬ್ಬಳು ಬಾಗಿಲಿನ ಹತ್ತಿರ ಅಳತ್ತಾ ಕುಳಿತಿದ್ದಳು. ಶಾರದಾದೇವಿ ಅವಳನ್ನು ಸಮಧಾನ ಮಾಡಿದ್ದಲ್ಲದೆ, ಅವಳಿಗೆ ಉಪದೇಶವನ್ನೂ ಕೊಟ್ಟರು. ಮತ್ತೊಂದು ಸಲ ದರೋಡೆಗಾರನಾಗಿದ್ದವನೊಬ್ಬ ಶಾರದಾದೇವಿಗೆ ಬಾಳೆಹಣ್ಣುಗಳನ್ನು ತಂದು ಕೊಟ್ಟ. ಆಕೆ ಅದನ್ನು ಸಂತೋಷದಿಂದ ತೆಗೆದುಕೊಂಡರು. ಕೆಲವರಿಗೆ, ಶಾರದಾದೇವಿ ಕೆಟ್ಟವರನ್ನು ಹತ್ತಿರ ಸೇರಿಸಬಾರದು ಎನ್ನಿಸಿತು. ಅವರು ಇಂತಹ ಉದಾರ ಗುಣವನ್ನು ಕಂಡು  ಆಕ್ಷೇಪಣೆ ಮಾಡುತ್ತಿದ್ದರು. ಆಗ ಶಾರದಾದೇವಿ ಅವರಿಗೆ ಕೊಡುತ್ತಿದ್ದ ಉತ್ತರ:

“ಒಳ್ಳೆಯವರನ್ನು ಮಾತ್ರ ಉದ್ಧಾರ ಮಾಡಲು ಶ್ರೀರಾಮಕೃಷ್ಣರು ಹುಟ್ಟಲಿಲ್ಲ. ಪಾಪಿಗಳೂ ಪುಣ್ಯಾತ್ಮರಾಗಲು ಅವಕಾಶ ಮಾಡಿಕೊಡಬೇಕು.” ಎಂಬುದೇ ಅವರ ಧ್ಯೇಯ.

ಜಾತಿ ಭೇದವಂತೂ ಶಾರದಾದೇವಿಯವರ ಮನಸ್ಸಿನಲ್ಲೂ ಸುಳಿಯುತ್ತಿರಲಿಲ್ಲ. ರಾಮಕೃಷ್ಣರ ಶಿಷ್ಯೆಯರಲ್ಲಿ ಸೋದರಿ ನಿವೇದಿತಾ, ದೇವಮಾತಾ ಮೊದಲಾದವರು ನಮ್ಮ ದೇಶದವರಲ್ಲ, ಪಶ್ಚಿಮ ದೇಶಗಳವರು. ಇವರೆಲ್ಲ ಶಾರದಾಮಣದೇವಿಯವರನ್ನು ಕಾಣಲು ಬರುತ್ತಿದ್ದರು. ಶಾರದಾದೇವಿ ಅವರೊಂದಿಗೆ ಊಟ ಮಾಡುತ್ತಿದ್ದರು. ಇಷ್ಟೇ ಅಲ್ಲ, ಒಮ್ಮೆ ಸೋದರಿ ನಿವೇದಿತಾ ಕ್ರೈಸ್ತರ ಹಬ್ಬವಾದ ಈಸ್ಟರ್ ನಲ್ಲಿ ಪ್ರಾರ್ಥನೆಯನ್ನು ಹಾಡಿದಾಗ ಅದರ ಅರ್ಥವನ್ನು ತಿಳಿದು ಬಹಳವಾಗಿ ಮೆಚ್ಚಿಕೊಂಡರು.

ಶಾರದಾದೇವಿಯವರಿಗೆ ಹೆಚ್ಚು ವಿದ್ಯಾಭ್ಯಾಸ ಇರಲಿಲ್ಲ, ಅವರು ಹುಟ್ಟಿದ್ದು ಸಂಪ್ರದಾಯಸ್ಥರ ಮನೆಯಲ್ಲಿ. ಆದರೂ ಅವರು ತುಂಬಾ ಸುಧಾರಕ ಮನೋಭಾವದವರಾಗಿದ್ದರು. ಒಂದು ಸಲ ಒಬ್ಬ ಭಕ್ತೆ ಅವರನ್ನು ಪ್ರಶ್ನಿಸಿದಳು:

“ನನಗೆ ಐದು ಜನ ಹೆಣ್ಣುಮಕ್ಕಳು. ಅವರಿಗೆಲ್ಲಾ ಮದುವೆ ಮಾಡುವುದೇ ಕಷ್ಟವಾಗಿದೆ. ಏನು ಮಾಡಲಿ?” ಎಂದು.

ಅದಕ್ಕೆ ಶಾರದಾದೇವಿ ನಿಶ್ಚಿತ ಸ್ವರದಲ್ಲಿ ಉತ್ತರ ಕೊಟ್ಟರು:

“ಅದಕ್ಕೇನು? ಅವರನ್ನು ಶಾಲೆಗೆ ಕಳುಹಿಸು. ಓದುಬರಹ ಕಲಿತು ದೇಶಸೇವೆ ಮಾಡಲಿ.”

ಇನ್ನೊಬ್ಬರು: “ಈಚೆಗೆ ಗಂಡುಹುಡುಗರಿಗೆ ಮದುವೆಯಾಗುವುದಕ್ಕೇ ಇಷ್ಟವಿಲ್ಲ” ಎಂದಾಗ,

“ಒಳ್ಳೆಯದೇ ಆಯಿತು. ಸಂಸಾರದ ಜಂಜಾಟಕ್ಕೆ ಬೀಳದೆ ಪರೋಪಕಾರ ಮಾಡಲಿ” ಎಂದರು.

ಮತ್ತೊಬ್ಬ ಗೃಹಿಣಿಭಕ್ತಳು ಅವರ ಬಳಿಗೆ ಬಂದು, ತನ್ನ ಮಗಳಿಗೆ ಮದುವೆಯಾಗುವಂತೆ ಬುದ್ಧಿ ಹೇಳಿ, ಎಂದಳು ಅದಕ್ಕೆ ಶ್ರೀಮಾತೆ: “ಮದುವೆಯಾಗೆಂದು ಅವಳನ್ನು ಯಾಕೆ ಒತ್ತಾಯ ಮಾಡುತ್ತೀ? ಜೀವನವಿಡೀ ಒಬ್ಬನ ಆಳಿನಂತೆ ಬದುಕುವುದರಲ್ಲಿ ಯಾವ ಸುಖವಿದೆ? ಇಷ್ಟವಿಲ್ಲದ ಯಾರಿಗೂ ಮದುವೆಯಾಗೆಂದು ಬಲವಂತ ಮಾಡಬಾರದು” ಎಂದು ಬುದ್ಧಿ ಹೇಳಿದರು.

ಬರಗಾಲ, ಪ್ರವಾಹ, ಬೆಂಕಿ ಮುಂತಾದ ಅಪಘಾತಗಳಿಗೆ ಸಿಕ್ಕಿ ನರಳುತ್ತಿರುವವರಿಗೆ ಶ್ರೀ ರಾಮಕೃಷ್ಣ ಸಂಘದವರು ಅನೇಕ ಸಹಾಯಗಳನ್ನು ಮಾಡುತ್ತಿದ್ದರು. ಶಾರದಾದೇವಿ ತಮ್ಮಲ್ಲಿಗೆ ಬರುವ ಭಕ್ತರಿಗೆ ಈ ಸೇವಾಕಾರ್ಯಗಳಲ್ಲಿ ನೆರವಾಗುವಂತೆ ಸಲಹೆ ನೀಡುತ್ತಿದ್ದರು.

ಶಾರದಾದೇವಿಯವರಿಗೆ ಅಹಂಕಾರವೆನ್ನುವುದು ಸ್ವಲ್ಪವೂ ಇರಲಿಲ್ಲ. ತಮಗೆ ಬಂದ ಕೀರ್ತಿಯೆಲ್ಲಾ ಶ್ರೀರಾಮಕೃಷ್ಣರಿಗೆ ಸೇರಿದ್ದು ಎನ್ನುವ ವಿನೀತ ಭಾವ ಇವರಲ್ಲಿ ಮನೆ ಮಾಡಿತ್ತು.

ಶಾರದಾದೇವಿಗೆ ದೇವರಲ್ಲಿ ಆಳವಾದ ಭಕ್ತಿ. ಆದರೆ ಮನುಷ್ಯರು ಎಲ್ಲವನ್ನೂ ದೇವರ ಇಷ್ಟ, ಹಣೆಯ ಬರಹ ಎಂದು ಬಿಟ್ಟು  ಕುಳಿತುಕೊಳ್ಳಬಾರದು, ತಾವು ಪ್ರಯತ್ನ ಪಡಬೇಕು ಎಂಬ ಅಭಿಪ್ರಾಯ. ಪುರುಷನ ಪ್ರಯತ್ನವಿಲ್ಲದೆ ಸಾಧನೆಯ ಮಾರ್ಗದಲ್ಲಿ ಮುಂದುವರೆಯುವುದು ಸಾಧ್ಯವೇ ಇಲ್ಲ ಎಂದು ತಮ್ಮ ಶಿಷ್ಯರಿಗೆ ಉಪದೇಶಿಸುತ್ತಿದ್ದರು. ಸಣ್ಣ

ಕೆಲಸವಾಗಲೀ ದೊಡ್ಡ ಕೆಲಸವಾಗಲೀ ಪ್ರಯತ್ನವಿಲ್ಲದೆ ಫಲ ದೊರೆಯುವುದಿಲ್ಲ. ಪ್ರಯತ್ನಿಸಿದರೂ ಕೆಲಸ ಸಾಧ್ಯವಾಗದೆ ಹೋಗಬಹುದು. ಆದರೆ ಅದಕ್ಕಾಗಿ ಮನಷ್ಯ ನಿರಾಶನಾಗಬಾರದು. ಬೆಸ್ತನೊಬ್ಬ ಮೀನಿಗಾಗಿ ಕೆರೆಯಲ್ಲಿ ದಿನವೆಲ್ಲಾ ಗಾಳ ಹಾಕಿ ಕುಳಿತಿರುತ್ತಾನೆ. ಕೆಲವೊಮ್ಮೆ ಅವನಿಗೆ ಬೇಗ ಮೀನು ಸಿಕ್ಕಬಹುದು, ಹೆಚ್ಚಾಗಿಯೂ ಸಿಕ್ಕಬಹುದು ಕೆಲವು ದಿನ ಒಂದು ಮೀನೂ ಸಿಗದೆ ಹೋಗಬಹುದು. ಅಂದ ಮಾತ್ರಕ್ಕೆ ಅವನು ತಾನು ಮಾಡುವ ಪ್ರಯತ್ನವನ್ನೇನೂ ನಿಲ್ಲಿಸುವುದಿಲ್ಲ. ಅದೇ ರೀತಿ ಯಾವ ಕೆಲಸಕ್ಕೇ ಆಗಲಿ ಪ್ರಯತ್ನ ತುಂಬಾ ಮುಖ್ಯ ಎನ್ನುವುದು ಶಾರದಾದೇವಿಯವರ ಉಪದೇಶದ ಸಾರಾಂಶವಾಗಿತ್ತು.

ಶ್ರೀ ಶಾರದಾದೇವಿಯವರು ಅರವತ್ತೇಳು ವರ್ಷಗಳ ಕಾಲ ತಮ್ಮ ತಪಸ್ಸಿನಿಂದ ಮತ್ತು ಶುದ್ಧ ಆಚರಣೆಯಿಂದ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ೧೯೨೦ನೆಯ ಇಸವಿ  ಜುಲೈ ೨೦ನೇ ತಾರೀಖು ರಾತ್ರಿ ಈ ಲೋಕವನ್ನು ಬಿಟ್ಟರು. ಆದರೆ ಇಂದೂ ಭಾರತದ ಮೂಲೆಮೂಲೆಯಲ್ಲಿ ಜನ ಅವರನ್ನು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾರೆ. ಶಾರದಾದೇವಿಯಂತಹ ಆದರ್ಶ ಸ್ತ್ರೀ ಪ್ರಪಂಚದ ಇತಿಹಾಸದಲ್ಲೇ ತುಂಬಾ ಅಪರೂಪ. ಸೋದರಿ ನಿವೇದಿತಾ ಅವರು ಹೇಳುವಂತೆ:

“ಶ್ರೀ ರಾಮಕೃಷ್ಣರು ಪ್ರಪಂಚದ ಮುಂದಿಟ್ಟ ಆದರ್ಶ ಸ್ತ್ರೀ ಶ್ರೀ ಶಾರದಾದೇವಿ”.