ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಶ್ರೀಮತಿ ಶಾರದಾ ಉಮೇಶ ರುದ್ರ ನೃತ್ಯ ಹಾಗೂ ರಂಗಭೂಮಿ ಎರಡರಲ್ಲೂ ಸಾಕಷ್ಟು ಕೆಲಸ ಮಾಡಿರುವ ಸಾಧಕಿ ಪ್ರೊ. ಯು. ಎಸ್.ಕೃಷ್ಣರಾವ್ ದಂಪತಿಗಳು, ಶ್ರೀ ಮುತ್ತಯ್ಯ ಪಿಳ್ಳೈ, ಡಾ|| ಕೆ.ವೆಂಕಟಲಕ್ಷ್ಮಮ್ಮ, ಪಂದನಲ್ಲೂರು ಗೋಪಾಲಕೃಷ್ಣ ಮುಂತಾದವರು ಶಾರದಾ ಅವರ ವಿದ್ಯಾ ಗುರುಗಳು.

ಪ್ರಸಿದ್ಧ ನೃತ್ಯ ಸಂಯೋಜಕಿಯೂ ಆದ ಶಾರದಾ ರುದ್ರ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೃತಿಗಳಿಗೆ ನೃತ್ಯ ಸಂಯೋಜಿಸಿ ಅಮೇರಿಕಾ ಹಾಗೂ ಇಂಗ್ಲೆಂಡ್‌ನಲ್ಲಿ ಹಲವು ಪ್ರದರ್ಶನಗಳನ್ನು ನೀಡಿದ್ದಾರೆ. ಶ್ರೀಕೃಷ್ಣ ಪಾರಿಜಾತ, ಸೀತಾ ಪರಿಣಯ, ಪುರುಷಾರ್ಥ ಕೌತ್ವಂ, ಕಾಮ ದಹನ, ಮಾಳವೀಕಾಗ್ನಿ ಮಿತ್ರ, ಶಾಕುಂತಲ, ಗೀತಗೋವಿಂದ, ಅಕ್ಕ ಮಹಾದೇವಿ ಮುಂತಾದ ಹಲವು ನೃತ್ಯ ನಾಟಕಗಳನ್ನು ನಿರ್ದೇಶಿಸಿರುವ ಶಾರದಾ, ಗಿರೀಶ್ ಕಾರ್ನಡರ ಹಯವದನ ನಾಟಕವನ್ನು ನೃತ್ಯ ನಾಟಕವಾಗಿ ಪರಿವರ್ತಿಸಿ ಯಶಸ್ವೀ ಪ್ರದರ್ಶನಗಳನ್ನು ನೀಡಿದ್ದಾರೆ. ತಮ್ಮ ಪತಿ ಶ್ರೀ ಉಮೇಶ್‌ರುದ್ರರ ಜೊತೆ ಅನೇಕ ನಾಟಕಗಳಲ್ಲೂ ನಟಿಸಿರುವ ಶಾರದಾ ಈ ಮುಖಾಂತರ ವಿದೇಶ ಪ್ರಯಾಣ ಮಾಡಿದ್ದಾರೆ.

ತಮ್ಮ ಕುಟುಂಬದ ಸಮಾಜ ಸೇವೆಯ ಕೈಂಕರ್ಯವನ್ನು ತಾವೂ ಮುಂದುವರಿಸಿಕೊಂಡು ಬಂದಿರುವ ಇವರು, ಅನೇಕ ಸಂಘ-ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಶಿಕ್ಷಣ ಹಾಗೂ ಕಲೆಗೆ ಸಾಕಷ್ಟು ಉತ್ತೇಜನ-ಪ್ರೋತ್ಸಾಹ ನೀಡುತ್ತಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯೂ ಆಗಿದ್ದ ಶಾರದಾ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅಲ್ಲದೆ ಋಷಿಕೇಶ ಸ್ವಾಮಿಗಳು ’ನಾಟ್ಯ ಸರಸ್ವತಿ’ ಮತ್ತು ರಂಬಾಪುರಿ ಜಗದ್ಗುರುಗಳು ’ನಾಟ್ಯ ರತ್ನ’ ಬಿರುದು ನೀಡಿ ಸನ್ಮಾನಿತರಾಗಿರುವ ಶಾರದಾರವರಿಗೆ ೨೦೦೦-೦೧ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿಯು ಸಂದಿದೆ.