ಕರ್ನಾಟಕದ ಮಹಿಳಾ ಹಿಂದೂಸ್ಥಾನಿ ಗಾಯಕಿಯರಲ್ಲೊಬ್ಬರಾದ ಧಾರಾವಾಡದ ಶ್ರೀಮತಿ ಶಾರದಾ ಹಾನಗಲ್ಲ ಅವರು ಜನಿಸಿದ್ದು ೧೯೨೯ರಲ್ಲಿ, ಸವಾಯ್‌ ಗಂಧರ್ವರ ಸ್ನೇಹಿತರಾದ ಶ್ರೀ ದತ್ತೋ ಪಂತ ದೇಸಾಯಿ, ಜೈಪುರ ಘರಾಣೆಯ ವಿಖ್ಯಾತ ಗಾಯಕ ಉಸ್ತಾದ್‌ ಅಲ್ಲಾದಿಯಾ ಖಾನರ ಶಿಷ್ಯೆಯಾದ ಶ್ರೀಮತಿ ಲಕ್ಷ್ಮೀಬಾಯಿ ಜಾಧವ ಮತ್ತು ವಿಖ್ಯಾತ ಹಾರ್ಮೋನಿಯಂ ವಾದಕ ಶ್ರೀ ಹನುಮಂತರಾವ ವಾಳ್ವೇಕರ ಅವರ ಬಳಿ ಸಂಗೀತ ಶಿಕ್ಷಣ ಪಡೆದಿರುವ ಶ್ರೀಮತಿ ಶಾರದಾ ಹಾನಗಲ್ಲ ಅವರು ಇಂಗ್ಲೀಷ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಧಾರವಾಡ ಆಕಾಶವಾಣಿಯ ಕೇಂದ್ರದಿಂದ ಅವರು ಅನೇಕ ವರ್ಷಗಳಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಛೇರಿ ನೀಡಿದ್ದಾರೆ. ನಾಡಿನ ಅನೇಕ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಅನೇಕ ವರ್ಷಗಳ ಕಾಲ ಅವರು ಧಾರವಾಡದ ಕರ್ನಾಟಕ ಕಲಾ ಮಹಾ ವಿದ್ಯಾಲಯದ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಮಹಾ ವಿದ್ಯಾಲಯದ ಪ್ರಾಚಾರ್ಯರಾಗಿ ಕ.ವಿ.ವಿ. ಸೆನೆಟ್‌, ಸಿಂಡಿಕೇಟ್‌ ಸದಸ್ಯರಾಗಿ, ಧಾರವಾಡ ಹಾಗೂ ಗೋವಾ ಕಲಾ ಅಕಾಡೆಮಿಯ ಸಂಗೀತ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

೭೬ ವರ್ಷಗಳ ತುಂಬು ಜೀವನ ಬಾಳಿ (ನಿಧನ ೧೨-೮-೨೦೦೪) ಅನೇಕ ಜನ ಶಿಷ್ಯರನ್ನು ತಯಾರಿಸಿದ ಶ್ರೀಮತಿ ಶಾರದಾ ಹಾನಗಲ್ಲ ಅವರಿಗೆ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ (೧೯೯೯-೨೦೦೦) ಮತ್ತು ಮೈಸೂರಿನ ವಸುಂದರಾ ಪರ್ ಫಾರ್ಮಿಂಗ್‌ ಆರ್ಟ್ಸ್ ಸೆಂಟರ್ ಇವರಿಗೆ ‘ಶೃತಿ ಸಾಗರ’ ಪ್ರಶಸ್ತಿ – ಹೀಗೆ ಮುಂತಾದ ಪ್ರಶಸ್ತಿ ದೊರೆತಿವೆ.