ಮಕ್ಕಳು ಕುಟುಂಬ ಪರಿಸರದಲ್ಲಿಯೇ ಭಾಷೆ(ಗಳನ್ನು) ಅನೌಪಚಾರಿಕವಾಗಿ ಕಲಿಯುತ್ತಾರೆ. ಪೌರಸಮಾಜಗಳಲ್ಲಿ ಮಕ್ಕಳಿಗೆ ಶಾಲಾ ಶಿಕ್ಷಣ ಅತ್ಯವಶ್ಯವೆಂದು ನಂಬುವುದರಿಂದ ಆ ಸಮಾಜದಲ್ಲಿ ಮಕ್ಕಳು ಶಾಲೆಗಳಿಗೆ ಬಂದು ಅಲ್ಲಿ ಮೊದಲಿಗೆ ಭಾಷೆಯನ್ನು ಔಪಚಾರಿಕವಾಗಿ ಮತ್ತೆ ಕಲಿಯಲು ತೊಡಗುತ್ತಾರೆ. ಭಾಷೆಗೆ ಸಂಬಂಧಿಸಿದ ಹಲವು ಕೌಶಲ್ಯಗಳನ್ನು ಮಕ್ಕಳು ಶಾಲೆಯಲ್ಲಿ ಬಲಪಡಿಸಿಕೊಳ್ಳುತ್ತಾರೆ. ಮತ್ತೆ ಕೆಲವು ಕೌಶಲ್ಯಗಳನ್ನು ಹೊಸದಾಗಿ ಕಲಿಯುತ್ತಾರೆ. ಉದಾ.ಗೆ  ಓದುವುದು ಮತ್ತು ಬರೆಯುವುದು. ಹಾಗೆಯೇ ಭಾಷೆಯ ಬಳಕೆಗೆ ಸಂಬಂಧಿಸಿದ ಕೆಲವು ಕೌಶಲ್ಯಗಳನ್ನು ಹೊಸ ಹಿನ್ನೆಲೆಯಲ್ಲಿ ಅರಿಯತೊಡಗುತ್ತಾರೆ. ಮಾತಿನಲ್ಲಿ ಔಪಚಾರಿಕತೆಯನ್ನು ತಂದುಕೊಳ್ಳುವುದು; ಅಂಥ ಮಾತಿನ ರೀತಿಯನ್ನು ಯೋಗ್ಯ ರೀತಿಯಲ್ಲಿ ಬಳಸಲು ಕಲಿಯವುದು; ‘ಶುದ್ಧ ರೂಪಗಳನ್ನು’ ‘ಅಶುದ್ಧರೂಪ’ಗಳಿಂದ ಬೇರೆ ಮಾಡುವುದು ಇವೇ ಮುಂತಾದ ಸಂಗತಿಗಳನ್ನು ಕಲಿಯುತ್ತಾರೆ.

ಶಾಲಾ ಶಿಕ್ಷಣದಲ್ಲಿ ಭಾಷಾ ಕೌಶಲ್ಯಗಳನ್ನು ಕಲಿಸುವ ಉದ್ದೇಶ, ಕ್ರಮ, ಗುರಿ ಇತ್ಯಾದಿಗಳು ಏನು, ಎಷ್ಟು, ಹೇಗೆ ಎಂಬಿವೇ ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ. ಸಾಂಪ್ರದಾಯಿಕ ವಿಧಾನದಲ್ಲಿ ಬರವಣಿಗೆ ಮತ್ತು ಓದುವುದು ಮುಖ್ಯ ಗುರಿಗಳಾಗಿದ್ದವು. ಸಾಕ್ಷರತೆಯೇ ಉದ್ದೇಶವಾಗಿತ್ತು. ಅದಕ್ಕೆ ಬೇಕಾದ ಬೋಧನಾ ವಿಧಾನ, ಪಠ್ಯಕ್ರಮ, ಪಾಠಗಳನ್ನು ರೂಪಿಸಿರುತ್ತಿದ್ದರು. ಆದರೆ ಭಾಷೆಯ ಮೌಖಿತ ಬಳಕೆಯನ್ನು ಅಲಕ್ಷಿಸಲಾಗುತ್ತಿತ್ತು. ಅಂದರೆ ಮಾತಾಡುವ, ಸಂವಾದದಲ್ಲಿ ತೊಡಗುವ, ಇತರರ ಮಾತನ್ನು ಆಲಿಸಿ ಗ್ರಹಿಸುವ ಕೌಶಲ್ಯಗಳು ಈಗಾಗಲೇ ಮಗುವಿನಲ್ಲಿ ಇರುತ್ತವೆಂದು ಇಳಿದು ಆ ಬಗ್ಗೆ ಶಾಲೆಗಳಲ್ಲಿ ಹೆಚ್ಚು ಗಮನ ಹರಿಸುತ್ತಿರಲಿಲ್ಲ.

ಈಚೆಗೆ ಚಿಂತನೆಗಳು ಬೇರೊಂದು ದಿಕ್ಕಿನಲ್ಲಿ ಹರಿದಿವೆ. ಶಾಲಾವಧಿಯಲ್ಲಿ ಮಗುವಿಗೆ ದೊರಕುವ ಭಾಷಾ ಕೌಶಲ್ಯಗಳ ತಳಹದಿ ಶಿಕ್ಷಣದ ಸಮಗ್ರ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸುವುದೆಂದು ತಿಳಿಯುತ್ತಿದ್ದಾರೆ. ಆದ್ದರಿಂದ  ಕೇವಲ ಬರವಣಿಗೆ ಮತ್ತು ಓದುಗಳನ್ನು ಮಾತ್ರ ಮುಖ್ಯ ಗುರಿಯಾಗಿ ಇರಿಸಿಕೊಳ್ಳದೆ ಇತರ ಕೌಶಲ್ಯಗಳನ್ನೂ ಬೆಳೆಸುವುದು ಅವಶ್ಯವೆಂದು ತಿಳಿದು ಶಿಕ್ಷಣಕ್ರಮದಲ್ಲಿ ಬದಲಾವಣೆಗಳನ್ನು ತರುತ್ತಿದ್ದಾರೆ.

ಭಾಷೆಯ ತರಗತಿಗಳಲ್ಲಿ ಉಪಾಧ್ಯಾಯರು ಮಾತಾಡುವ ಭಾಷಾ ಪ್ರಭೇದ, ಅವರ ವಿಷಯ ನಿರೂಪಣಾ ವಿಧಾನ, ಶಾಲೆಯಲ್ಲಿ ಇತರ ವಿದ್ಯಾರ್ಥಿಗಳ ಭಾಷಾ ಬಳಕೆಯ ವೈವಿಧ್ಯ ಇವೆಲ್ಲವೂ ಬರವಣಿಗೆಯ, ಓದಿನ ಭಾಷಾ ರೂಪದ ಜತೆ ಯಾವ ಸಂಬಂಧ ಹೊಂದಿದೆ ಎಂಬುದು ವಿದ್ಯಾರ್ಥಿಗಳಿಗೆ ತಿಳಿಯುತ್ತಿರಲಿಲ್ಲ; ಉಪಾಧ್ಯಾಯರೂ ಆ ಕುರಿತು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ವಿಭಿನ್ನ ಸಾಮಾಜಿಕ ಹಿನ್ನೆಲೆಯಿಂದ ಬಂದ ಮಕ್ಕಳಿರುವ ಶಾಲೆಗಳಲ್ಲಿಯಂತೂ ಈ ಆಡುಮಾತಿನ ವೈವಿಧ್ಯಗಳು ಅಧಿಕ ವಾಗಿಯೇ ಇರುತ್ತಿದ್ದರು. ಇದರಿಂದ ಮಕ್ಕಳ ಭಾಷಾಕಲಿಕೆಯ ಮೇಲೆ ಏನು ಪರಿಣಾಮವಾಗುತ್ತಿದೆಯೆಂಬುದನ್ನು ಗುರುತಿಸುತ್ತಿದ್ದಾರೆ. ತಕ್ಕ ಪರಿಹಾರಗಳನ್ನು ರೂಪಿಸುತ್ತಿದ್ದಾರೆ.

ವಾಗ್ವಾದಗಳು : ಶಾಲಾ ಪಠ್ಯಪುಸ್ತಕಗಳನ್ನು ನೋಡಿದರೆ ಭಾಷಾ ಕಲಿಕೆಯಲ್ಲಿ, ಭಾಷೆಯ ರಚನೆಯನ್ನು ತಿಳಿಸಿಕೊಡುವ ಉದ್ದೇಶವೇ ಮೆಲುಗೈ ಪಡೆದಿರುವುದು ಗೊತ್ತಾಗುತ್ತದೆ. ಅಭ್ಯಾಸಗಳಲ್ಲಿ ಸಂಧಿ ರಚನೆ, ಸಮಾಸ ರಚನೆ, ವಾಕ್ಯದ ಭಾಗಗಳು, ಬಗೆಗಳು ಇತ್ಯಾದಿಗಳನ್ನು ವಿಶ್ಲೇಷಕ ವಿಧಾನ ದಲ್ಲಿ ತಿಳಿಯಲು ಪ್ರೇರೇಪಿಸುವ ಮಾಹಿತಿ ಇರುತ್ತದೆ. ಸಂಧಿ, ಸಮಾಸಗಳ ಹೆಸರು, ಅವುಗಳ ರಾಚನಿಕ ನಿಯಮಗಳನ್ನು ಕಲಿಸಿಕೊಡುವ ಯತ್ನ ಮುಖ್ಯ ವಾಗುತ್ತದೆ. ವಿದ್ಯಾರ್ಥಿಗಳು ಭಾಷೆಯ ಪ್ರಮಾಣ ರೂಪಗಳನ್ನು ಬರೆಯಲು / ಓದಲು ಕಲಿಯುತ್ತಿರುವಾಗಲೇ ಆ ರಚನೆಗಳನ್ನು ಚರ್ಚಿಸುವ ಪರಿಭಾಷೆ ಯೊಂದನ್ನು ಕಲಿಯುವುದು ಅವಶ್ಯವಾಗಿದೆ. ಈ ರಚನೆಯ ಕಲಿಕೆಯಲ್ಲಿ ಭಾಷೆಯನ್ನು ಇಡಿಯಿಂದ ಬಿಡಿಯಾಗಿ ಒಡೆದು ತೋರಿಸಿ ಕೊಡುವುದು ಮುಖ್ಯವಾಗಿರುತ್ತದೆ. ಭಾಷೆಯ ರೂಪಗಳನ್ನು ಕಟ್ಟುವುದನ್ನು ಕಲಿಸುವ ಪ್ರಯತ್ನಕ್ಕಿಂತ ಕಟ್ಟಿದ ರೂಪಗಳನ್ನು ಚಿಕ್ಕ ಚಿಕ್ಕ ಘಟಕಗಳನ್ನಾಗಿ ವಿಭಜಿಸಿ ನೋಡುವುದನ್ನು ಕಲಿಸುವುದಕ್ಕೆ ಒತ್ತು ಹೆಚ್ಚಾಗಿರುತ್ತದೆ.

ಭಾಷಾ ಕಲಿಕೆಯ ಈ ವಿಧಾನವನ್ನು ಟೀಕಿಸುವ ಚಿಂತನಾಕ್ರಮ ಬೆಳೆದಿದೆ. ಇಂಥ ಕಲಿಕೆಗಳು ಬಳಕೆಯ ಭಾಷೆಯ ವೈವಿಧ್ಯತೆಗಳನ್ನು ತಿಳಿಸಿಕೊಡುವುದಿಲ್ಲ ವೆಂದು ಟೀಕೆಯ ಮುಖ್ಯ ತಿರುಳು. ಅದರಲ್ಲೂ ಆಡುಮಾತಿನ ವಿವಿಧ ಬಗೆಗಳು ನಿತ್ಯದ ಹಲವಾರು ಪ್ರಸಂಗಗಳಲ್ಲಿ ಹೇಗೆ ರೂಪುತಳೆಯುತ್ತವೆ; ಅಂಥ ರೂಪಗಳನ್ನು ಬಳಸುವ ಸಾಮರ್ಥ್ಯವನ್ನು ಹೇಗೆ ಗಳಿಸಿಕೊಳ್ಳುವುದು ಎಂಬಿವೇ ಪ್ರಶ್ನೆಗಳಿಗೆ ಉತ್ತರ ನೀಡಲು ಮೇಲಿನ ಕಲಿಕೆಯ ವಿಧಾನ ಅಶಕ್ತವಾಗಿದೆ. ಆದ್ದರಿಂದ ವಿದ್ಯಾರ್ಥಿಗಳೂ ಭಾಷಾ ಕಲಿಕೆಯ ಕ್ರಮದಲ್ಲಿ ಬಳಕೆಯ ಬಗೆಗಳನ್ನು ತಿಳಿಯಲು, ಆ ಕುರಿತ ಸಾಮರ್ಥ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಈ ಕೊರತೆಯನ್ನು ನಿವಾರಿಸಲು ಭಾಷಾ ಬಳಕೆಯನ್ನು ಆಧರಿಸಿದ ಕಲಿಕೆಯ ವಿಧಾನವನ್ನು ರೂಪಿಸಿಕೊಂಡು ಅದನ್ನು ಶಾಲೆಗಳಲ್ಲಿ ಜಾರಿಗೆ ನೀಡುವ ಪ್ರಯತ್ನಗಳು ನಡೆದಿವೆ. ದಿನನಿತ್ಯದ ಹಲವಾರು ಪ್ರಸಂಗಗಳಲ್ಲಿ ಬಳಕೆಯಾಗುವ ಭಾಷಾ ಮಾದರಿಗಳು ಕಲಿಕೆಗೆ ನೆರವಾಗುವ ಪಠ್ಯಗಳಾಗುತ್ತವೆ. ಅವುಗಳನ್ನು ಬಳಸಿ ವಿದ್ಯಾರ್ಥಿಗಳು ಭಾಷಾ ವೈವಿಧ್ಯಗಳ ಪರಿಚಯ ಪಡೆಯುತ್ತಾರೆ. ಜತೆಗೆ ಅಂಥ ಪ್ರಸಂಗಗಳಲ್ಲಿ ಭಾಷೆಯನ್ನು ತಕ್ಕಂತೆ ಬಳಸಲು ಕಲಿಯುತ್ತಾರೆ. ಈ ಕಲಿಕೆಯಿಂದಾಗಿ ಅವರ ಭಾಷಾಸಾಮರ್ಥ್ಯ ಹೆಚ್ಚು ಸಮಗ್ರವಾಗುತ್ತದೆ.

ಭಾಷಾ ಬಳಕೆಯನ್ನು ಆಧರಿಸಿದ ಈ ಕಲಿಕೆಯ ವಿಧಾನವೂ ಸಂಪೂರ್ಣ ದೋಷಮುಕ್ತವಲ್ಲ. ಬೋಧನೆಯ ಸಾಮಗ್ರಿ ಇಲ್ಲಿ ಅಗಾಧ. ಅದರ ಬಳಕೆಯೇ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದರಿಂದ ಆ ಭಾಷಾ ಮಾದರಿಗಳನ್ನು ವಿವರಿಸಿ ವಿಶ್ಲೇಷಿಸಲು ಅವಕಾಶಗಳು ಕಡಿಮೆಯಾಗುತ್ತವೆ. ಚಿತ್ರಪಟ್ಟಿಕೆಗಳು, ವಿವಿಧ ಬಗೆಯ ಮುದ್ರಿತ ಸಾಮಗ್ರಿ, ದೃಕ್ ಸಾಧನ ಸಾಮಗ್ರಿ, ಧ್ವನಿ ಮುದ್ರಿತ ಸಾಮಗ್ರಿ ಹೀಗೆ ಬಹು ವಿಧದಲ್ಲಿ ಪಠ್ಯವಸ್ತು ಸಿಗುವುದು ನಿಜ. ಕಲಿಕೆಯೂ ಆಕರ್ಷಕವಾಗಿರುತ್ತದೆ. ಆದರೆ ಕಲಿಕೆಯ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ಬೇಕಾದ ಚೌಕಟ್ಟು ಈ ಕಲಿಕೆಯ ವಿಧಾನದಲ್ಲಿ ಇಲ್ಲ. ಮತ್ತು ಪಠ್ಯ ಸಾಮಗ್ರಿಯ ಬಳಕೆ ಹೇಗಾಗ ಬೇಕೆಂದು ಖಚಿತವಾಗಿ ನಿರ್ಧರಿಸುವುದು ಕಷ್ಟ. ಉದಾ : ಜಾಹಿರಾತಿನ ತುಣುಕಿನಲ್ಲಿ ಬಳಕೆಯಾದ ಕನ್ನಡವನ್ನು ಹೇಗೆ ತರಗತಿಯಲ್ಲಿ ಬಳಸಿ ಪಾಠ ಮಾಡುವುದು? ಇಂಥವೇ ಸಮಸ್ಯೆಗಳಿಂದಾಗಿ ಬೋಧಕರು ಈ ಮಾದರಿಯ ಕಲಿಕೆಯನ್ನೂ ದೋಷಗ್ರಸ್ತವೆಂದೇ ತಿಳಿಯುತ್ತಾರೆ.

ಎಲ್ಲ ವಿವಾದಗಳಲ್ಲೂ ಮಧ್ಯವರ್ತಿ ಮಾರ್ಗದ ಮೂಲಕ ಸಮಸ್ಯೆಯನ್ನು ಬಿಡಿಸುವ ಯತ್ನ ನಡೆಯುತ್ತದೆ. ಇಲ್ಲಿಯೂ ಎರಡೂ ಬಗೆಯ ಬೋಧನೆಯ ವಿಧಾನಗಳ ಉತ್ತಮಾಂಶಗಳನ್ನು ಬೆರೆಸಿದ ವಿಧಾನವನ್ನು ರೂಪಿಸಲು ಯತ್ನಗಳು ನಡೆದಿವೆ. ಕಲಿಕೆಯ ವಿವಿಧ ಹಂತಗಳಲ್ಲಿ ಭಾಷೆಯ ರಚನೆಯ ತಿಳಿವು ಮತ್ತು ಭಾಷೆಯ ಬಳಕೆಯ ತಿಳಿವುಗಳನ್ನು ಯೋಗ್ಯ ಪ್ರಮಾಣದಲ್ಲಿ ಸಂಯೋಜಿಸುವ ಕಲಿಕೆಯ ವಿಧಾನದ ಕಡೆಗೆ ಇಂದಿನ ಓಲುವೆಗಳು.

ಓದುವುದು : ಶಾಲೆಯ ಭಾಷಾ ಕಲಿಕೆಯ ಒಂದು ಮುಖ್ಯ ಭಾಗವೆಂದರೆ ಓದುವುದನ್ನು ಕಲಿಸುವುದು. ಓದುವುದು ಎಂದರೇನು? ಲಿಪಿ ರೂಪದಲ್ಲಿ ಸಂಕೇತೀಕರಣಗೊಂಡ ಮಾತನ್ನು, ವಿಸಂಕೇತಿಸಿ ಮರಳಿ ಪಡೆಯುವುದನ್ನು ಓದು ಎನ್ನುತ್ತೇವೆ. ಓದಿನ ಮೂಲಕ ಮಾತಿಗೆ ನೆಲೆಗೆ ಬರವಣಿಗೆಯನ್ನು ಪರಿವರ್ತಿಸುತ್ತೇವೆ. ಇದೊಂದು ಭಾಷಾ ಕೌಶಲ. ಶಾಲೆಯಲ್ಲಿ ಓದುವುದನ್ನು ಕಲಿಸಲು ಮೊದಲು ಮಾಡಿದಾಗ ಬರೆವಣಿಗೆಯ ಸಂಕೇತಗಳನ್ನು, ಲಿಪಿಗಳನ್ನು ಪರಿಚಯ ಮಾಡಿಕೊಡುತ್ತಾರೆ. ಆನಂತರ ಲಿಪಿ ಸಂಯೋಜನೆಯ ನಿಯಮಗಳು ಹಾಗೂ ಸಂಯೋಜಿತ ರೂಪದಿಂದ ಉಚ್ಚಾರಣೆಯನ್ನು ಅರಿಯುವ ನಿಯಮಗಳನ್ನು ಕಲಿಯಬೇಕಾಗುತ್ತದೆ. ಮೇಲುನೋಟಕ್ಕೆ ಇದು ಸರಳ ವಾಗಿರುವಂತೆ ಕಂಡರೂ ವಾಸ್ತವವಾಗಿ ಹಾಗಿಲ್ಲ. ಕನ್ನಡದ  ನಿದರ್ಶನವೊಂದನ್ನು ಗಮನಿಸಿ. ಕನ್ನಡದ ಲಿಪಿ ಸಂಯೋಜನೆ ಎಡದಿಂದ (ಓದುವವರ) ಬಲಕ್ಕೆ ಸಾಗುತ್ತದೆ. ಬಹುಮಟ್ಟಿಗೆ ರೇಖಾತ್ಮಕ ಆದರೆ ಲಿಪಿಕರಣದಿಂದ ಉಚ್ಚಾರಣೆಯನ್ನು ಗ್ರಹಿಸುವ ನಿಯಮವನ್ನು ತಿಳಿದ ಹೊರತು ‘ಓದುವುದು’ ಕ್ರಮಬದ್ಧವಾಗುವುದಿಲ್ಲ. ‘ಸತ್ಯ’ ಎಂಬ ಪದವನ್ನು ಓದುವುದು ಹೇಗೆ? ‘ತ’ ಲಿಪಿಯೊಡನೆ ‘ಯ’ ಕಾರದ ಒತ್ತಕ್ಷರದ ಲಿಪಿಯಿದೆ. ನಿಯಮ ತಿಳಿಯದೆ ಕಣ್ಣಂದಾಜಿನಿಂದ ಓದಿದರೆ ‘ತ’ ಕಾರವನ್ನು ಪೂರ್ಣವಾಗಿ ಉಚ್ಚರಿಸಿ ಅನಂತರ ‘ಯ್’ (ವ್ಯಂಜನ ರೂಪ) ವನ್ನು ಹೇಳಬೇಕು. (ಸತಯ್) ಆದರೆ ಸಂಯೋಜನೆಯಿಂದ ವಿಸಂಕೇತಿಸುವ ನಿಯಮದಂತೆ ಒತ್ತಕ್ಷರಗಳಿದ್ದಾಗ ಪೂರ್ಣವಾಗಿ ‘ಬರೆದಿರುವ’ ವ್ಯಂಜನವನ್ನು ಕೇವಲ ವ್ಯಂಜನವನ್ನಾಗಿ ಉಚ್ಚರಿಸಬೇಕು. ಅನಂತರ ಅದರೊಡನೆ ಸಂಯೋಜಿಸಿರುವ ಸ್ವರಭಾಗವನ್ನು ಕೆಳಗೆ ‘ಅರೆಯಾಗಿ’ ಬರೆದಿರುವ ವ್ಯಂಜನದೊಡನೆ ಸಂಯೋಜಿಸಬೇಕು. ಇದು ಕನ್ನಡ ಓದಿನ ನಿಯಮ. ನಮಗೆ ಚೆನ್ನಾಗಿ ಬಳಕೆಯಾಗಿರುವುದರಿಂದ ಓದುವ ಈ ನಿಯಮ ಸರಳವೆಂಬಂತೆ ತೋರುತ್ತದೆ. ಆದರೆ ಕಲಿಯುವ ಮಗುವಿಗೆ ಇದು ಕಠಿಣ ನಿಯಮ.

ಓದಲು ಕಲಿಯುವ ಸಾಂಪ್ರದಾಯಿಕ ವಿಧಾನಗಳು ಹೆಚ್ಚು ಆಕರ್ಷಕ ವಾಗಿಲ್ಲ. ಬರೆವಣಿಗೆಯ (ಮುದ್ರಿತ) ಮಾದರಿಗಳನ್ನು ಯಾಂತ್ರಿಕವಾಗಿ ಓದಲು ಕಲಿಸುವರು. ಓದಿನ ಲಯಗಳಿಗೂ ಮಾತಿನ ಲಯಗಳಿಗೂ ಅಂತರ ವಿರುವುದರಿಂದ ಕಲಿಯುವ ಮಗುವಿಗೆ ತಾವು ಓದುತ್ತಿರುವ ಭಾಷೆಗೂ ತನಗೂ ಏನಾದರೂ ಸಂಬಂಧವಿರುವಂತೆ ಅನ್ನಿಸುವುದಿಲ್ಲ. ಓದುವ ಕೌಶಲವನ್ನು ಕಲಿತರೂ, ಕಲಿಯುವ ಕ್ರಮದ ಯಾಂತ್ರಿಕತೆಯಿಂದಾಗಿ, ಆ ಕೌಶಲವನ್ನು ಬೆಳೆಸಿಕೊಳ್ಳುವ ಆಸಕ್ತಿ ಭಾಷಿಕರಲ್ಲಿ ಉಳಿಯುವುದಿಲ್ಲ.

ಓದು ಕಲಿಕೆಯನ್ನು ಅದರ ಯಾಂತ್ರಿಕತೆಯಿಂದ ಬಿಡುಗಡೆ ಮಾಡಲೆಂದು ‘ಕ್ರಿಯಾತ್ಮಕ ಓದು’ ಎಂಬ ವಿಧಾನವನ್ನು ರೂಪಿಸಿದ್ದಾರೆ. ಓದಲು ಕಲಿಯುವವರು ಸಾಮಾನ್ಯವಾಗಿ ಏನನ್ನು ಓದಬೇಕಾಗುತ್ತದೆ ಎಂಬುದನ್ನು ತಿಳಿದು ತಕ್ಕ ಓದು ಸಾಮಗ್ರಿಯನ್ನು ನೀಡಬೇಕು. ಶಾಲೆಯ ಹೊರಗೆ ಕಣ್ಣಿಗೆ ಬೀಳುವ ಲಿಖಿತ ಭಾಷಾ ರೂಪಗಳು, ಬಳಕೆಯ ಸಾಮಗ್ರಿಗಳಿಗೆ ಸಂಬಂಧಿಸಿದ ಲಿಖಿತಗಳು ಇವೇ ಮೊದಲಾದುವನ್ನು ಓದಲು  ಕಲಿಯುವವರಿಗೆ ಇಚ್ಚೆ ಮೂಡುತ್ತದೆ. ಕಲಿಕೆ ಸುಗಮವಾಗುತ್ತದೆ ಮತ್ತು ಉಪಯುಕ್ತವಾಗುತ್ತದೆ.

ಈ ದಿಕ್ಕಿನಲ್ಲಿ ಹಲವು ಪ್ರಯೋಗಳು ನಡೆದಿವೆ. ಓದು ಕಲಿಯುವವರು ಚಿತ್ರಗಳನ್ನೂ ‘ಓದು’ತ್ತಾರೆ. ಬರವಣಿಗೆಯ ನಡುವೆ ಚಿತ್ರಗಳಿರುವುದು ಸಾಮಾನ್ಯ. ಇದರಲ್ಲಿ ಮುಖ್ಯವಾಗಿ ಎರಡು ಬಗೆ. ಒಂದು ಹಲವಾರು ವಾಕ್ಯಗಳ ನಡುವೆ ಒಂದು ಚಿತ್ರವಿರುವುದು. ಎರಡು ವಾಕ್ಯದ ಒಳಗೇ  ಪದಗಳ ಬದಲಿಗೆ ಚಿತ್ರವಿರುವುದು. ಮೊದಲನೆಯದು ನಮಗೆ ಚೆನ್ನಾಗಿ ಪರಿಚಿತ. ಇಲ್ಲಿ ಅಕ್ಷರಗಳೊಡನೆ ಚಿತ್ರಗಳನ್ನು ಹೇಗೆ ಹೊಂದಿಸಿಕೊಳ್ಳಬೇಕೆಂದು ಕಲಿಯುವುದೂ ಓದು ಕಲಿಕೆಯ ಭಾಗವಾಗಿರುತ್ತದೆ. ಚಿತ್ರದಂಥ ಅಭಾಷಿಕ ರೂಪಗಳನ್ನು ಲಿಪಿಯ ಮೂಲಕ ಗ್ರಹಿಸಿದ ಭಾಷೆಯನ್ನೂ ಪರಸ್ಪರ ಹೊಂದಿಸಿಕೊಳ್ಳುವುದನ್ನು ಕಲಿಯಲು ಇದರಿಂದ ನೆರವು ದೊರೆಯುತ್ತದೆ. ವಾಕ್ಯದ ಒಳಗೇ ಬರುವ ಚಿತ್ರಗಳ ಮಾದರಿ ಹೊಸದು. ಅಲ್ಲಿ ಪದಗಳ ಬದಲು ಚಿತ್ರಗಳನ್ನು ಒದಗಿಸಿ ಒಟ್ಟು ವಾಕ್ಯವನ್ನು ಓದಲು ಕಲಿಸಲಾಗುತ್ತದೆ.

ಇಂಥ ಓದಿನಿಂದ ಲಿಪಿ ಸಹಿತ ಭಾಷೆ ಮತ್ತು ಲಿಪೇತ್ಯರ ಸಂಕೇತಗಳನ್ನು ಸಮನ್ವಯಗೊಳಿಸುವ ಚಟುವಟಿಕೆಗಳಲ್ಲಿ ಕಲಿಯುವವರು ತೊಡಗುತ್ತಾರೆ. ಇದು ಕಲಿಕೆಯನ್ನು ಆಕರ್ಷಕವನ್ನಾಗಿಸುತ್ತದೆ. ಓದು ಕಲಿಕೆಯ ಆಕರ್ಷಕ ವಾಗಬೇಕೆಂದು ಯೋಚಿಸುವವರು ಲಿಪಿರೂಪದ ಭಾಷೆಗೂ ಅದನ್ನು ಓದಿ ಗ್ರಹಿಸಿದ ‘ಅಕ್ಷರಶಃ’ ತಾಳೆಯಾಗಬೇಕೆಂದು ತಿಳಿಯುವುದಿಲ್ಲ. ಬರೆವಣಿಗೆಯ ಪದಗಳನ್ನು ಓದುವಾಗ ಇಡಿಯಾಗಿ ಗ್ರಹಿಸಿ ವಾಕ್ಯದ ‘ಅಂದಾಜು ಭಾಷಾರೂಪ’ವನ್ನು ಮನಸ್ಸಿಗೆ ತಂದುಕೊಳ್ಳುವುದನ್ನು ‘ಓದು’ ಎಂದು ಒಪ್ಪಲು ಇವರು ಸಿದ್ಧ. ಪಠ್ಯಬದ್ಧ ಓದಿಗೆ ಪೂರ್ಣ ಪ್ರಮಾಣದಲ್ಲಿ ಬದ್ಧರಾಗಿರಬೇಕೆಂದು ಬಯಸುವವರು ಇಂಥ ‘ಅಂದಾಜು ಓದ’ನ್ನು ಒಪ್ಪುವುದಿಲ್ಲ. ಹೀಗೆ ಓದಲು ಕಲಿತರೆ ಓದುವ ಕೌಶಲ ಅಪೂರ್ಣ ವಾಗುತ್ತದೆಂದೇ ಅವರು ತಿಳಿಯುತ್ತಾರೆ.

ಓದುವಿಕೆಯಿಂದ ಭಾಷಾ ಕೌಶಲವನ್ನು ಶಾಲೆಯಲ್ಲಿ ಕಲಿತ ಮೇಲೆ ಅದನ್ನು ಮುಂದೆ ವ್ಯವಸ್ಥಿತವಾಗಿ ಬಳಸಬೇಕಷ್ಟೆ. ನಿತ್ಯ ಜೀವನದಲ್ಲಿ ಓದಿನ ಸ್ವರೂಪ ಮತ್ತು ಅವಶ್ಯಕತೆ ನಿರಂತರವಾಗಿ ಬದಲಾಗುತ್ತಲೇ ಇದೆ. ‘ವೇಗದ ಓದಿಗೆ’ ಅಥವಾ ‘ತುರ್ತಿನ ಓದಿಗೆ’ ಈಗ ಸಂದರ್ಭಗಳು ಹೆಚ್ಚಾಗುತ್ತಿವೆ. ಉದಾಹರಣೆಗೆ ಟೆಲಿವಿಶನ್‌ನಲ್ಲಿ ಅನ್ಯ ಭಾಷೆಯ ಚಲನಚಿತ್ರವನ್ನು ಪ್ರದರ್ಶಿಸುವಾಗ ಅಲ್ಲಿನ ಸಂಭಾಷಣೆಗಳನ್ನು ಉಪಶೀರ್ಷಿಕೆಯಲ್ಲಿ ನಾವು ಓದಬಲ್ಲ ಭಾಷೆಯಲ್ಲಿ ಅನುವಾದಿಸಿ ಕೊಡುತ್ತಾರೆ. ನೋಡುವ ನಾವು ಸವೇಗವಾಗಿ ಆ ಬರವಣಿಗೆಯನ್ನು ಓದಬೇಕು. ಇಂಥ ತುರ್ತಿನ ಓದಿನಲ್ಲಿ ಅಕ್ಷರಶಃ ಗ್ರಹಿಕೆ ಅಸಾಧ್ಯವೇ ಆಗಿರುತ್ತದೆ. ಹೀಗೆ ಓದಿನ ಬಗೆಗಳು ದಿನೇ ದಿನೇ  ಹೆಚ್ಚುತ್ತಲೇ  ಇವೆ. ಆದ್ದರಿಂದ ಶಾಲೆಯಲ್ಲಿ ಓದು ಕೌಶಲವನ್ನು ಕಲಿಸುವಾಗ ಈ ಎಲ್ಲ ಅವಶ್ಯಕತೆಗಳನ್ನು ಮನಗಂಡಿರಬೇಕಾಗುತ್ತದೆ. ಮತ್ತು ಅದಕ್ಕೆ ತಕ್ಕಂತೆ ಕಲಿಕೆಯ ಕ್ರಮವನ್ನು ರೂಪಿಸಬೇಕಾಗುತ್ತದೆ.

ಬರೆವಣಿಗೆ : ಶಾಲೆಯಲ್ಲಿ ಭಾಷಾ ಕಲಿಕೆಯ ಮತ್ತೊಂದು ಮುಖ್ಯ ಭಾಗ ಬರೆವಣಿಗೆಯ ಓದು. ಕಲಿಕೆಗಿಂತ ಹೆಚ್ಚು ಸಂಕೀರ್ಣವಾದ ಕಲಿಕೆಯಿದು. ಬರೆಯಲು ಕಲಿಯುವಾಗ ದೇಹದ ಹಲವಾರು ಅಂಗಾಂಗಗಳ ಚಟುವಟಿಕೆ ಗಳನ್ನು ಗೊತ್ತಾದ ರೀತಿಯಲ್ಲಿ ಸಂಯೋಜಿಸಿ ಹೊಂದಿಸಬೇಕಾಗುತ್ತದೆ. ಕೈಬೆರಳುಗಳು, ಕಣ್ಣುಗಳು ಮತ್ತು ಆಯಾ ಅಂಗಗಳಿಗೆ ಸಂಬಂಧಿಸಿದ ನರಗಳು ಇವೆಲ್ಲವೂ ಈ ಕಲಿಕೆಯಲ್ಲಿ ವಿಶೇಷ ತರಬೇತಿಗೆ ಒಳಗಾಗುತ್ತವೆ.

ಸಾಂಪ್ರದಾಯಿಕ ಬರೆಹ ಕಲಿಕೆಯ ವಿಧಾನ ಮುಖ್ಯವಾಗಿ ನಿಗದಿತ ಗುರಿ ಸಾಧನೆಯ ಕಡೆಗೆ ಗಮನವಿಡುತ್ತದೆ. ಅದಕ್ಕಾಗಿ ಅವಶ್ಯವಿರುವ ತರಬೇತನ್ನು ತಾನೇ ರೂಪಿಸಿದೆ. ತಿದ್ದುವುದು ಮತ್ತು ಪುನರಾವರ್ತನೆ ಈ ವಿಧಾನದಲ್ಲಿ ಮುಖ್ಯ. ಮರಳಿನ ಮೇಲೆ ಅಕ್ಷರವನ್ನು ಬೆರಳಿನಿಂದ ತಿದ್ದುವುದು, ಹಲಗೆಯ ಮೇಲೆ ಬರೆದ ಅಕ್ಷರವನ್ನು ತಿದ್ದುವುದು ಇವೆರಡೂ ಈಗೀಗ ಕಡಿಮೆಯಾಗಿದೆ. ಆದರೆ ಪುನರಾವರ್ತನೆಯ ವಿಧಾನ ಬಲವಾಗಿದೆ. ಬರೆದ ಅಥವಾ ಮುದ್ರಿಸಿದ ಮಾದರಿಯನ್ನು ಮತ್ತೆ ಮತ್ತೆ ನಕಲು ಮಾಡುವುದನ್ನು ಬರೆವಣಿಗೆ ಕಲಿಕೆಯಲ್ಲಿ ಅತ್ಯವಶ್ಯವೆಂದು ಶಿಕ್ಷಣಶಾಸ್ತ್ರಜ್ಞರು ತಿಳಿಯುತ್ತಾರೆ.

ಬರೆವಣಿಗೆಗೆ ಬಳಸುವ ಲೇಖನಿ (ಬಳಪ, ಸೀಮೆಸುಣ್ಣ, ಹಲಗೆ, ಪೆನ್ನು, ಪೆನ್ಸಿಲ್)ಗಳನ್ನು ಹೇಗೆ ಹಿಡಿಯಬೇಕು ಮತ್ತು ಬರೆಯುವಾಗ ಹೇಗೆ ಕೂರಬೇಕು ಎಂಬುದನ್ನೂ ಪ್ರಾಸಂಗಿಕವಾಗಿ ಕಲಿಸುವರು. ಯಾವುದು ಆದರ್ಶ ಮಾದರಿ ಎನ್ನುವುದನ್ನು ತಿಳಿಸುವರು; ಮಕ್ಕಳು ಬರೆಯುವಾಗ ಈ ಮಾದರಿಯನ್ನೇ ಅನುಕರಿಸುವಂತೆ ಒತ್ತಾಯಿಸುತ್ತಾರೆ. ಅವರು ಲೇಖನಿ ಹಿಡಿಯುವ ವಿಧಾನ, ಕೂರುವ ವಿಧಾನ ಇವುಗಳಲ್ಲಿ ಇರುವ ವ್ಯತ್ಯಯಗಳನ್ನು ಸರಿಪಡಿಸುವರು. ಆದರೆ ಬರೆಹ ಕಲಿಕೆಯ ಕೊನೆಯಲ್ಲಿ ಮಕ್ಕಳು ಅಕ್ಷರಗಳ ಆದರ್ಶ ರೂಪಗಳನ್ನಾಗಲೀ, ಲೇಖನಿ ಹಿಡಿಯುವ, ಕೂರುವ ಆದರ್ಶ ಸ್ಥಿತಿಗಳನ್ನಾಗಲೀ ಕಲಿಯುವುದಿಲ್ಲ. ಅವರದೇ ಆದ ಸಿದ್ದಿಗಳನ್ನು ಅವರು ಪಡೆಯುತ್ತಾರೆ. ಹಾಗಾಗಿ ಒಬ್ಬೊಬ್ಬರ ಅಕ್ಷರವೂ ಒಂದೊಂದು ಬಗೆ. ಲೇಖನಿ ಹಿಡಿಯುವ, ಬರೆಯುವ, ಕೂರುವ ವಿಧಾನಗಳೂ ಹಲವು ಬಗೆಗಗಳಲ್ಲಿ ಇರುತ್ತವೆ.

ವಾಸ್ತವದಲ್ಲಿ ಮಕ್ಕಳು ಬರೆಯುವುದನ್ನು ಕಲಿಯುವಾಗ, ಈ ಮೊದಲೇ ಹೇಳಿದಂತೆ, ಹಲವು ರೀತಿಯ ಅಂಗ ಸಂಬಂಧಿ ಮತ್ತು ನರ ಸಂಬಂಧಿಯಾದ ಚಟುವಟಿಕೆಗಳನ್ನು ವಿಶಿಷ್ಟ ರೀತಿಯಲ್ಲಿ ಸಂಯೋಜಿಸುತ್ತಾರೆ. ಅಕ್ಷರಗಳ ಆಕಾರವನ್ನು ಗ್ರಹಿಸುವುದು; ಅವುಗಳ ರೇಖಾಗತಿಯ ದಿಕ್ಕನ್ನು ಅರಿಯುವುದು. ತಾವು ಕಂಡ ಅಕ್ಷರಗಳ ಗಾತ್ರಗಳನ್ನು ಬರೆಯುವ ಅಕ್ಷರಗಳ ಗಾತ್ರಕ್ಕೆ ಹೊಂದಿಸಿಕೊಳ್ಳುವುದು. ಇವೇ ಮೊದಲಾದವು ಮುಖ್ಯ ಹಂತಗಳು. ಇವಲ್ಲದೆ ಎಡದಿಂದ ಬಲಕ್ಕೆ ಚಲಿಸುವ ಬರೆವಣಿಗೆಯಾದರೆ ಅದಕ್ಕನುಗುಣ ವಾಗಿ ಕೈಯನ್ನು, ಬೆರಳುಗಳನ್ನು ಚಲಿಸುವಂತೆ  ಮಾಡುವುದು, ಸಾಲುಗಳ ನೇರವನ್ನು ಕಾಯ್ದುಕೊಳ್ಳುವುದು, ಸಾಲುಗಳು ಒಂದರ ಕೆಳಗೆ ಒಂದು ಬಂದಾಗ  ಅವುಗಳ ನಡುವಣ ಅಂತರವನ್ನು ನಿಗದಿತ ರೀತಿಯಲ್ಲಿ ಇರಿಸಿ ಕೊಳ್ಳುವುದು. ಹಾಳೆಯ ಮೇಲಿನ ಸಾಲಿನಿಂದ ಕೆಳಗಿನ ಸಾಲಿನವರೆಗೆ ಬರೆವಣಿಗೆ ಮುಂದುವರೆದಂತೆ ಬರೆಯುತ್ತಿರುವ ಹಾಳೆ ಇಲ್ಲವೇ ಪುಸ್ತಕವನ್ನು ಸೂಕ್ತಗತಿಯಲ್ಲಿ ಚಲಿಸುವಂತೆ ಮಾಡುವುದು ಇವೂ ಕಲಿಯಬೇಕಾದ ಇನ್ನಿತರ ಸಂಗತಿಗಳು.

ಬರೆಯುವುದೇಕೆ? : ನಾವೇಕೆ ಬರೆಯುವುದನ್ನು ಕಲಿಯಬೇಕು? ಶಾಲೆಯ ಹಂತದಲ್ಲಿ ಬರೆಯುವುದನ್ನು ಕಲಿತವರಲ್ಲಿ ಬಹುಪಾಲು ಮಂದಿ ಮುಂದೆ ಸಹಿ ಹಾಕುವುದನ್ನು ಬಿಟ್ಟರೆ ಉಳಿದಂತೆ ಬರೆಯುವ ಪ್ರಸಂಗವನ್ನೇ ಎದುರಿಸುವುದಿಲ್ಲ. ಆದರೂ ಬರೆಯುವುದು ಅತ್ಯವಶ್ಯವೆಂದು  ತಿಳಿಯುವು ದೇಕೆ? ಶಾಲೆಯಲ್ಲಿ ಇನ್ನಿತರ ವಿಷಯಗಳನ್ನು ಕಲಿಸುವರಷ್ಟೆ. ಹಾಗೆ ಕಲಿತದ್ದು ಎಷ್ಟು ಎಂದು ತಿಳಿಯಲು ಬರೆವಣಿಗೆ ನೆರವಿಗೆ ಬರುತ್ತದೆ. ಅಂದರೆ ಪರೀಕ್ಷೆಗಳಲ್ಲಿ ಉತ್ತರಗಳನ್ನು ಬರೆಯುತ್ತೇವೆ. ಬರೆವಣಿಗೆ ಹೀಗೆ ಇತರ ಕಲಿಕೆಗಳೆಷ್ಟು ಗುರಿ ತಲುಪಿವೆಯೆಂದು ತಿಳಿಯಲು ನೆರವಾಗುತ್ತದೆ. ‘ಪರೀಕ್ಷೆ ಬರೆಯುವುದು’ ಎಂಬ ವಾಗ್ರೂಢಿಯೇ ಭಾಷೆಯಲ್ಲಿ ನೆಲೆಗೊಂಡಿರು ವುದು ಗಮನಾರ್ಹ.

ಬರೆಹದ ಉಪಯೋಗವನ್ನು ನಾವು ನೋಡುವ ವಿಧಾನವೇ ಬದಲಾಗ ಬೇಕಾದರೆ ಬರೆವಣಿಗೆಯೂ ಒಂದು ಭಾಷಾಭಿವ್ಯಕ್ತಿ ಕೌಶಲ. ಮಾತಿಗೆ ಎಷ್ಟು ಉಪಯೋಗಗಳಿವೆಯೋ ಅಷ್ಟೇ ಉಪಯೋಗ ಬರೆವಣಿಗೆಗೂ ಇದೆ. ಬೇರೆ ಬೇರೆ ಉದ್ದೇಶಗಳಿಗಾಗಿ ಮಾತಿನ ಬಗೆಯನ್ನು ಬಳಸುವುದನ್ನು ನಾವು ಕಲಿಯುವಂತೆ ಬರೆಹದ ಭಾಷೆಯನ್ನೂ ಬೇರೆ ಬೇರೆ ಉದ್ದೇಶಗಳಿಗೆ ಅನುಗುಣವಾಗಿ ಬಳಸಲು ಕಲಿಯುವುದು ಅವಶ್ಯವಾಗಿದೆ. ಆತ್ಮೀಯರಿಗೆ ಪತ್ರ ಬರೆಯುವುದು, ಸಾರ್ವಜನಿಕ ಹಿತಾಸಕ್ತಿಯ ವಿಷಯ ಕುರಿತು ದೂರು ಸಲ್ಲಿಸುವುದು, ನಿವೇದನಾ ಪತ್ರ ಬರೆಯುವುದು, ದಿನಚರಿ ಬರೆಯುವುದು ಹೀಗೆ ಬೇರೆ ಬೇರೆ ಪ್ರಸಂಗಗಳಲ್ಲಿ ಬರೆಯುವ ಭಾಷೆ ಬೇರೆ ಬೇರೆಯ ರೀತಿಯಲ್ಲಿರುತ್ತದೆ. ಆದ್ದರಿಂದ ಬರೆವಣಿಗೆಯ ಕಲಿಕೆಯಲ್ಲಿ ಈ ಬರೆವಣಿಗೆಯ ವಿವಿಧ ಮಾದರಿಗಳನ್ನು ಕಲಿಯುವುದೂ ಸೇರುತ್ತದೆ.

ಬರೆಯಬೇಕೆ?

ಅಕ್ಷರಗಳನ್ನು, ಬರವಣಿಗೆಯನ್ನು ಕಲಿಯುವುದು ಶಾಲಾ ಶಿಕ್ಷಣದಲ್ಲಿ ಅತ್ಯವಶ್ಯ. ಆದರೆ ತಾಂತ್ರಿಕ ಪ್ರಗತಿಯ ಪರಿಣಾಮವಾಗಿ ನಾವೀಗ ಬರೆಯುವುದು ಅವಶ್ಯವಲ್ಲ. ಬರೆಹ ಎಂದರೆ ಸಾಂಪ್ರದಾಯಿಕ ಅರ್ಥದಲ್ಲಿ ಹಲಗೆ ಬಳಪ ಹಿಡಿಯುವುದು, ಪೆನ್ನು ಪುಸ್ತಕ ಹಿಡಿಯುವುದು ಇದು ಮುಖ್ಯವಲ್ಲ. ಬೆರಳಚ್ಚು, ಗಣಕಗಳ ಪ್ರವೇಶದಿಂದಾಗಿ ನಾವೀಗ ಬರೆಯುವುದು ಬೇರೊಂದು ರೀತಿಯಲ್ಲಿ. ಅಕ್ಷರಗಳನ್ನು ರೂಪಿಸುವ ಕೆಲಸವನ್ನು ಯಂತ್ರಗಳು ಮಾಡುತ್ತವೆ. ಅದಕ್ಕೆ ಬೇಕಾದ ಯಾಂತ್ರಿಕ ಆದೇಶಗಳನ್ನು ನಾವು ಕೊಡಬೇಕು. ಬರೆಯುವ ತೊಡಕುಗಳು ಇಂಥ ವಿಧಾನಗಳಲ್ಲಿ ಇಲ್ಲ. ತಪ್ಪುಗಳಾದರೆ ತಿದ್ದುವುದು ಬರೆದ ಪದ ವಾಕ್ಯಗಳನ್ನು ಮರುಹೊಂದಿಸುವುದು ಸುಲಭ. ಸೌಲಭ್ಯಗಳು ಲಭಿಸಿರುವ ಹಿನ್ನೆಲೆಯಲ್ಲಿ ನಾವು ಹಿಂದಿನಂತೆ ಬರೆಯಬೇಕೆ? ಬರೆಯುವುದನ್ನು ಹಿಂದಿನಂತೆ ಕಲಿಯಬೇಕೆ?

ಸಾಮಾನ್ಯವಾಗಿ ಸಂಗತಿ ಪ್ರಧಾನವಾದ ವ್ಯಾವಹಾರಿಕ ರೀತಿಯ ಬರೆವಣಿಗೆ ಯನ್ನು ಶಾಲೆಯಲ್ಲಿ ಹೆಚ್ಚಾಗಿ ಕಲಿಸುವರು. ಅಥವಾ ಅಂಥಾ ಬರೆವಣಿಗೆಯ ಬಳಕೆಗೆ ಹೆಚ್ಚು ಒತ್ತು ಬೀಳುತ್ತದೆ. ನಿತ್ಯ ಜೀವನದ ಮಾತಿನಲ್ಲಿ ಸೇರುವ ಭಾವನೆಗಳು, ಉದ್ವೇಗಗಳು. ಬರೆವಣಿಗೆಯ ಈ ಮಾದರಿಯಲ್ಲಿ ಇರುವುದಿಲ್ಲ. ಆದರೆ ಮಾತಿನ ಬಗೆಯ ಬರೆವಣಿಗೆಗೂ ಅವಕಾಶಗಳಿವೆ. ಅದನ್ನೂ ಕಲಿಯುವುದು ಅವಶ್ಯವಾಗಿದೆ.

ಬರೆಯುವ ಮಾದರಿಗಳು : ಇನ್ನೊಂದು ರೀತಿ

1. ಅಕ್ಷರಗಳನ್ನು ಬಳಸಿ ಇಡೀ ವಾಕ್ಯವನ್ನು ಬರೆಯುವುದು.

2. ವಾಕ್ಯದಲ್ಲಿ ಕೆಲವು ಪದಗಳನ್ನು ಮಾತ್ರ ಬಳಸಿ ಉಳಿದವನ್ನು ಪ್ರಸಂಗ ನಿಷ್ಠವಾಗಿ ಊಹಿಸಲು ಸೂಚಿಸುವಂತೆ ಬರೆಯುವುದು. ತಂತಿ ಸಂದೇಶ ಇದಕ್ಕೆಂದು ಮಾದರಿ.

3. ಹಲವು ವಾಕ್ಯಗಳಲ್ಲಿ ಒಂದೇ ರೀತಿಯ ಮಾಹಿತಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದರೆ, ಆಗ ಇಡಿ ಬರೆವಣಿಗೆಯನ್ನು ಒಂದು ಕೋಷ್ಠಕ ವನ್ನಾಗಿ ಪರಿವರ್ತಿಸುವುದು.


ಉದಾ: ರೈಲು ವೇಳಾಪಟ್ಟಿ

  ಬರುವುದು ಹೊರಡುವುದು
ಬೆಂಗಳೂರು-ಹುಬ್ಬಳ್ಳಿ 10-15 06-50
ಬೆಂಗಳೂರು-ಮದರಾಸು 08-10 22-15
ಬೆಂಗಳೂರು-ದೆಹಲಿ 20-10 07-50

 

4. ವಾಕ್ಯಗಳ ಸರಣಿಯು ಹಲವಾರು ಕ್ರಿಯೆಗಳ ರೇಖಾತ್ಮಕ ಚಲನೆಯನ್ನು ಬಿಂಬಿಸುತ್ತಿದ್ದರೆ ಆಗ ವಾಕ್ಯಗಳನ್ನು ಒಂದು ಚಲನ ನಕ್ಷೆಯನ್ನಾಗಿ ಪ್ರತಿನಿಧಿಸುವುದು.

5. ಪರ್ಯಾಯ ಸಂಕೇತಗಳ ಬಳಕೆ ಹ್ರಸ್ವೀಕರಣಕ್ಕಾಗಿ ಲಿಖಿತ ಭಾಷೆಯನ್ನೇ ಮತ್ತೊಂದು ಸಂಕೇತ ವ್ಯವಸ್ಥೆಗೆ ಪರಿವರ್ತಿಸುವುದು.

ಉದಾ. 1 ಔಷಧಿಯ ಹೆಸರು 1-x-1

ಹೀಗೆ ಬರೆದರೆ ‘ಔಷಧಿಯನ್ನು ಬೆಳಗ್ಗೆ ಮತ್ತು ರಾತ್ರಿ ತೆಗೆದುಕೊಳ್ಳಬೇಕು’ ಎಂದು ಓದುತ್ತೇವೆ.

2. ಒ > ಎ / ವ್ಯ-ಕ

‘ಓ ಧ್ವನಿಯು ಯಾವುದೇ ವ್ಯಂಜನ ಮತ್ತು ಕ ಕಾರಗಳ ನಡುವೆ ಬಂದಾಗ ಎ ಕಾರವಾಗಿ ಉಚ್ಚಾರಗೊಳ್ಳುತ್ತದೆ’ ಎಂಬ ವಾಕ್ಯವನ್ನು ಪ್ರತಿನಿಧಿ ಸುವ ಸೂತ್ರವಿದು.