ಆಯಗಾರಿಕೆ ಪ್ರಾಚೀನ ಕೃಷಿ ಸಮಾಜದ ಬಹುಮುಖ್ಯ ಆರ್ಥಿಕ ಹಾಗೂ ಸಾಮಾಜಿಕ ಪದ್ಧತಿಯಾಗಿತ್ತು. ಇದೊಂದು ಅಂತರ್‌ಕುಟುಂಬ ಸಂಬಂಧಗಳ ತಾಳಿಕೆ ಹಾಗೂ ಬಾಳಿಕೆಯ ವ್ಯವಸ್ಥೆಯಾಗಿತ್ತು. ಅದೊಂದು ಸಮೂಹ ಹೊಣೆಗಾರಿಕೆ ಸಂಗತಿಯಾಗಿತ್ತು. ಉತ್ಪಾದಕ ರೈತ ಕುಟುಂಬಗಳು, ಅವರನ್ನು ಆಶ್ರಯಿಸಿ ಬದುಕುವ ಕೈಕಸುಬಿನವರು, ಕೈಕಸುಬಿನವರನ್ನು ಆಶ್ರಯಿಸಿ ಬದುಕುವ ರೈತ ಕುಟುಂಬಗಳು ಇವರೆಲ್ಲರಿಗೂ ಕರ್ತವ್ಯಪ್ರಜ್ಞೆಯ ಭಾಗವಾಗಿ ಆಯ ಪ್ರಚಲಿತವಿತ್ತು. ಆಯ ಎನ್ನುವುದು ಹಣಕ್ಕಾಗಿ ದುಡಿಯುವ ದಂಧೆ ಆಗಿರಲಿಲ್ಲ. ಅದೊಂದು ಧರ್ಮ ಪ್ರಜ್ಞೆಯಾಗಿತ್ತು.

‘ಕೂತು ಉಂಡರೆ ಕುಡಿಕೆ ಹೊನ್ನು ಸಾಲದು’ ಎನ್ನುವ ಗಾದೆ ಮಾತನ್ನು ಯಾವ ಹಳ್ಳಿಗಳು ಸೃಷ್ಟಿಸಿದವೋ ಅದೇ ಹಳ್ಳಿಗಳಿಂದ ಆಧುನಿಕ ಶಿಕ್ಷಣ ಹಾಗೂ ಜಾಗತೀಕರಣದ ಫಲಿತಗಳಿಂದಾಗಿ ಕುಳಿತು ಉಣ್ಣುವ ತಾಣಗಳಾಗಿ ಪರಿವರ್ತಿತವಾಗುತ್ತಿವೆ. ಔದ್ಯೋಗಿಕರಣ ಹಾಗೂ ನಗರೀಕರಣದ ವಿಪರೀತತೆ ಹಳ್ಳಿಗಳನ್ನು ಹಾಗೂ ಬೆಳೆವ ಭೂಮಿಯನ್ನು ವಸ್ತು ರೂಪದ ಸರಕನ್ನಾಗಿಸಿದೆ. ಬಂಡವಾಳಶಾಹಿ ಪ್ರಗತಿ ಅಥವಾ ಆಧುನಿಕತೆಯ ಗುಣವೇ ಬೌದ್ಧಿಕವೂ ಹಾಗೂ ಭೌತಿಕವೂ ಆದಂತದ್ದು, ಇಂಥದಲ್ಲಿ ದುಡಿಮೆ ಹಿಂದೆ ಸರಿದು ಹಣವೇ ಮೌಲ್ಯವಾಗುತ್ತವೆ. ಶ್ರಮ ಪ್ರಧಾನ ಸಮುದಾಯ ಸಂಸ್ಕೃತಿ ಹಿಂದೆ ಸರಿದು ಶ್ರಮ ವಿರೋಧಿ ಹಾಗೂ ಸುಖ ಸಂಸ್ಕೃತಿಯ ಸಮುದಾಯವನ್ನು ಆಧುನಿಕತೆ ಹುಟ್ಟಿಸುತ್ತಿದೆ. ಭೂಮಿ-ಕೃಷಿ, ಮಳೆ-ಬೆಳೆ. ಆಚರಣೆ-ಸಂಪ್ರದಾಯ, ಆಯಗಾರಿಕೆ ಇಂಥ ಸಾಂಪ್ರದಾಯಿಕ ಪ್ರತ್ಯುತ್ಪನ್ನ ಪ್ರಧಾನ ಜೀವನ ಕ್ರಮಗಳು ಇಂದು ಅಪಹಾಸ್ಯಕ್ಕೂ ಉಪೇಕ್ಷೆಗೂ ಗುರಿಯಾಗುತ್ತಿವೆ. ಅಭಿವೃದ್ಧಿಯ ಅಸಹಜ ಬೆಳವಣಿಗೆ ಇಂದು ಪ್ರಧಾನವಾಗುತ್ತಿದೆ. ಇದು ಸಂಪ್ರದಾಯದ ವೈಭವ ಹಾಗೂ ಹಪಾಹಪಿ ಎಂದೆನಿಸಿ ಬಿಡಬಹುದು. ಆದರೆ ಅದು ಖಂಡಿತ ಅಲ್ಲ. ನೆಲಪ್ರಧಾನ ಪ್ರಗತಿಗಿಂತ ಹಣಪ್ರಧಾನ ಪ್ರಗತಿ, ಜನಪ್ರಧಾನ ಪ್ರಗತಿಗಿಂತ ಜನವಿರೋಧಿ ಪ್ರಗತಿ ಇಂಥ ಭಯಕ್ಕೆ ಕಾರಣವಾಗುತ್ತಿದೆ. ಮನುಷ್ಯನ ನೆಲ ಹಾಗೂ ನೆಲಗಳನ್ನೇ ಕಿತ್ತುಕೊಂಡು ದಿಕ್ಕೇಡಿಗಳನ್ನಾಗಿ ಸುತ್ತಿರುವ ಏಕಾಕೃತಿಯ ಹಣವಂತ ಪ್ರಗತಿ ಸಾಂಪ್ರದಾಯಿಕ ಸಮಾಜದ ವಿನಾಶಕ್ಕೆ ಕಾರಣವಾಗುತ್ತಿದೆ. ಅದರ ವೈವಿಧ್ಯತೆಯನ್ನೇ ನಾಶಮಾಡುತ್ತಿದೆ. ಇಂಥ ವೈವಿಧ್ಯತೆಯೇ ಶ್ರಮಪ್ರಧಾನ ಸಂಸ್ಕೃತಿಯ ಜೀವಾಳವಾಗಿತ್ತು. ಇಂದು ಆಧುನಿಕತೆ ಎನ್ನುವುದು ಬರೀ ಭೌತಿಕ ರೂಪದಲ್ಲಿ ಮಾತ್ರ ಬರುತ್ತಿಲ್ಲ ಅದು ತನ್ನದೇ ಆದ ಆಲೋಚನಕ್ರಮ, ಜೀವನ ವಿಧಾನ, ಸಂಸ್ಕೃತಿ ಎಲ್ಲವನ್ನು ಒಳಗೊಂಡ ಒಂದು ಸಾಮಾಜಿಕ ವ್ಯವಸ್ಥೆಯಾಗಿ ಬರುತ್ತಿದೆ.

ವ್ಯವಸಾಯ ಹಾಗೂ ಸೇವಾ ವೃತ್ತಿಯಂಥ ಉದ್ಯೋಗಗಳು ಬರೀ ವೃತ್ತಿಗಳಾಗಿರಲಿಲ್ಲ. ಅವು ಜೀವನ ಪದ್ಧತಿಗಳಾಗಿದ್ದವು. ಇಂಥ ಜೀವನ ಪದ್ಧತಿಯನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ. ಪಟ್ಟಣಿಗರು ತಮ್ಮ ವೃತ್ತಿಯನ್ನು ಸುಲಭವಾಗಿ ಬದಲಾಯಿಸಬಲ್ಲರು. ಏಕೆಂದರೆ ಪಟ್ಟಣದಲ್ಲಿ ವೃತ್ತಿಗೂ ಜೀವನ ಪದ್ಧತಿಗೂ ನೇರ ಸಂಬಂಧವಿರುವುದಿಲ್ಲ. ಪಟ್ಟಣಿಗರ ಆಯ್ಕೆಯ ಎಲ್ಲ ವೃತ್ತಿಗಳೂ ಹೆಚ್ಚು ಕಡಿಮೆ ಒಂದೇ ಜೀವನ ಶೈಲಿಯನ್ನು ಹೊಂದಿರುತ್ತವೆ. ಹೊಸ ವೃತ್ತಿಗಳ ಬಗ್ಗೆ ಹಳ್ಳಿಗರಿಗಿರುವ ಮಾನಸಿಕ ಹಿಂಜರಿತವನ್ನು ಗೆಲ್ಲಬೇಕಾಗುತ್ತದೆ. ಇದಕ್ಕೆ ಅಪಾರ ತಾಳ್ಮೆಬೇಕು.

ಆಧುನಿಕ ಪ್ರತಿಯೊಬ್ಬ ವ್ಯಕ್ತಿಗೂ ಕೊಳ್ಳುವ ರೋಗವನ್ನು ಅಂಟಿಸುತ್ತಿದೆ. ಕೊಳ್ಳುವ ರೋಗ ಬಡಿದ ಮನುಷ್ಯನಿಗೆ ಮಾರಲಿಕ್ಕಿರುವುದು ಆತನ ಕಾಯಕ ಹಾಗೂ ಬುದ್ಧಿಮತ್ತೆ ಮಾತ್ರ ಆದರೆ ಯಂತ್ರಗಳ ದೈತ್ಯಶಕ್ತಿಯ ಮುಂದೆ ಮನುಷ್ಯನ ಕಾಯಕಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ಬುದ್ದಿಮತ್ತೆ ಎಂಬುದು ತಂತ್ರಜ್ಞಾನವಾದರೆ ಮಾತ್ರ ಅದಕ್ಕೆ ಬೆಲೆಯಿದೆ. ಲೋಕಾನುಭವಕ್ಕೆ ಬೆಲೆಯಿಲ್ಲವಾಗಿದೆ. ಹೀಗಾಗಿ ಯಂತ್ರಗಳನ್ನು ಹೊಂದಿದವರು ಶ್ರೀಮಂತರಾಗಿ ಇಲ್ಲದವರು ಬಡವರಾಗಿ ಉಳಿದಿದ್ದಾರೆ. ಗಾದೀಜಿಯಂಥವರು ಪಂಚಾಯತಿ ರಾಜ್ಯ ವ್ಯವಸ್ಥೆಯಲ್ಲಿ ಕಲ್ಪಿಸಿಕೊಂಡದ್ದು ಕೊಳ್ಳದೇ ಇರುವ ಹಳ್ಳಿಗಳನ್ನು ಅಥವಾ ಕೊಳ್ಳುವ ಅಗತ್ಯವಿರದ ವಿಕೇಂದ್ರಿಕೃತವಾದ ಗ್ರಾಮ ಸ್ವರಾಜ್ಯವನ್ನು ಮೊದಲು ಹಳ್ಳಿಗಳಲ್ಲಿ ಕೊಡು-ಕೊಳ್ಳುವ ಪದ್ಧತಿ (barter system) ಜಾರಿಯಲ್ಲಿತ್ತು. ಈಗಲೂ ಈ ಪದ್ಧತಿ ಕೆಲವು ಕಡೆ ಜೀವಂತವಿದೆ. ಮಲೆನಾಡಿನಲ್ಲಿ ಎಲ್ಲ ರೈತರು ಕೋಣಗಳನ್ನು ಕಟ್ಟುತ್ತಿರಲಿಲ್ಲ. ಅಥವಾ ಕಬ್ಬು ಅರೆಯುವ ಗಾಣಗಳನ್ನು ಇಟ್ಟಿರುತ್ತಿದ್ದಿಲ್ಲ. ಬೇಸಾಯದ ವೇಳೆಯಲ್ಲಿ ಹಾಗೂ ಕುಯಿಲಿನ ಸಂದರ್ಭಗಳಲ್ಲಿ ಅಂತಹ ಪದಾರ್ಥಗಳು ಬೇಕಿದ್ದರೆ ಇದ್ದವರು ಇರದಿದ್ದವರಿಗೆ ಒದಗಿಸುತ್ತಿದ್ದರು. ಪಡೆದವರು ಮತ್ತೊಂದು ಸಂದರ್ಭದಲ್ಲಿ ಪ್ರತಿಯಾಗಿ ಮತ್ತೇನೋ ವ್ಯವಸ್ಥೆಯನ್ನು ಒದಗಿಸುತ್ತಿದ್ದರು ಅಥವಾ ಕೂಲಿ ಮಾಡಿ ಋಣ ತೀರಿಸುತ್ತಿದ್ದರು.

ಕೊಡು-ಕೊಳ್ಳುವ ವ್ಯವಸ್ಥೆ ಸುಸೂತ್ರವಾಗಿ ನಡೆಯಲೆಂದೇ ಗ್ರಾಮಗಳು ನಾಟಿ, ಕುಯಿಲು, ಕಣ ಮಾಡುವುದು ಇತ್ಯಾದಿ ಚಟುವಟಿಕೆಗಳು ಏಕಕಾಲದಲ್ಲಿ ಬರದಿರುವಂತೆ ಗಮನ ಹರಿಸುತ್ತಿದ್ದವು. ಗ್ರಾಮದ ಕುಶಲ ಕರ್ಮ್ಮಿಗಳಾದ ಕಮ್ಮಾರರು, ಕುಂಬಾರರು, ಬಡಗಿಗಳು, ಹಜಾಮರು, ಹೂಗಾರರು, ಗಾಣಿಗರು, ಇಡೀ ವರ್ಷ ತಾವು ಸಲ್ಲಿಸಿದ ಸೇವೆಗೆ ಪ್ರತಿಯಾಗಿ ರೈತರಿಂದ ಕಾಳು ಪಡೆಯುತ್ತಿದ್ದರು. ಕೊಡು-ಕೊಳ್ಳುವ ವ್ಯವಸ್ಥೆಯಿಂದಾಗಿ ಗ್ರಾಮದ ಆರ್ಥಿಕತೆ ಹೆಚ್ಚಾಗಿ ಗ್ರಾಮದೊಳಗೇ ಸುತ್ತುಹಾಕುತ್ತಿತ್ತೇ ಹೊರತು ಗ್ರಾಮದಿಂದಾಚೆ ಹರಿದು ಹೋಗುತ್ತಿರಲಿಲ್ಲ. ಆದರೆ ಈಗಿನ ವ್ಯವಸ್ಥೆಯಲ್ಲಿ ಹಣವು ನಗರದತ್ತ ಹರಿದು ಹೋದೀತೆ ಹೊರತು ನಗರದಿಂದ ಗ್ರಾಮಗಳತ್ತ ಖಂಡಿತ ಅಲ್ಲ.[1]

ಆಯಗಾರಿಕೆ ಅರ್ಥ ಹಾಗೂ ಸ್ವರೂಪ

‘ಆಯ’ ಎಂದರೆ ಕೃಷಿ ಕಾರ್ಯಗಳಿಗೆ ಬೇಕಾದ ಸೇವೆಗಳನ್ನು ಸಲಕರಣೆಗಳನ್ನು ಒದಗಿಸುವ ಸಮುದಾಯಗಳಿಗೆ ರೈತರು ಬೆಳೆದದ್ದರಲ್ಲಿ ಒಂದು ಪಾಲನ್ನು ಧಾನ್ಯ ರೂಪದಲ್ಲಿ ನೀಡುವ ಪ್ರತಿಫಲಕ್ಕೆ (ಪಗಾರ) ‘ಆಯ’ ಎನ್ನಲಾಗುತ್ತದೆ. ಆಯ ನೀಡುವವರನ್ನು ಆಯದ ಕುಳ ಅಥವಾ ವತನದಾರನೆಂದೂ ಆಯ ಪಡೆಯುವವರನ್ನು ಕಸುಬಿನವರು, ಆಯದವರು ಅಥವಾ ಆಯಗಾರರು ಎಂದು ಕರೆಯಲಾಗುತ್ತದೆ. ಉತ್ತರಕರ್ನಾಟಕಲ್ಲಿ ‘ಆಯ’ಕ್ಕೆ ಬಾರಾಬಲುತೆ ಎಂದು ಕರೆಯುವ ವಾಡಿಕೆ ಇದೆ. ಮಂಡ್ಯ ಮೈಸೂರು ಕಡೆಗೆ ‘ಆಡದೆ’ ಎಂದೂ ಆಯಗಾರರಿಗೆ ‘ಆಡದೆಯವರು’ ಎಂದೂ ಕರೆಯಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ‘ಎಚ್ಚ’ ಎಂದೂ ‘ಎಚ್ಚಗಾರರೆಂದು’ ಕರೆಯಲಾಗುತದೆ.

ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ, ಗುಜರಾತ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಲಬಾರ್‌ಮುಂತಾದ ಭಾಗಗಳಲ್ಲಿ ಆಯ ಪದ್ಧತಿ ಕಂಡುಬರುತ್ತದೆ. ಉತ್ತರ ಭಾರತದಲ್ಲಿ ಹಲವು ಕಡೆ ಆಯವನ್ನು ‘ಜಜಮಾನಿ’ ಎಂದು ಕರೆಯಲಾಗುತ್ತದೆ. ಆಯದ ಕುಳಗಳಿಗೆ ಜಜಮಾನ್‌ಎಂದೂ ಆಯಗಾರರನ್ನು ಕಾಮೀನ್‌, ಪರ್ಜನ್‌, ಪರ್ಧಾನ್‌, ಕಾಮವಾಲೇ ಎಂದು ಪ್ರಾದೇಶಿಕವಾಗಿದೆ ವಿಭಿನ್ನ ಹೆಸರುಗಳಿಂದ ಗುರುತಿಸಲಾಗುತ್ತದೆ. ಶ್ರಮ ಹಾಗೂ ಆ ಶ್ರಮಕ್ಕೆ ನೀಡುವ ಸಂಭಾವನೆಯ ಸಾರ್ವತ್ರಿಕ ರೂಪವನ್ನೇ ಆಯ ಅಥವಾ ಜಜಮಾನಿ ಎಂದು ಕರೆಯಲಾಗುತ್ತದೆ.

ಜನ ಬೆಳೆದು ಜನಾಂಗವಾದಾಗಲೇ ಆಯಗಾರ ಪದ್ಧತಿ ಹುಟ್ಟಿಕೊಂಡಿತು ಜೀವನದ ಅವಶ್ಯಕತೆ ಪರಸ್ಪರ ಅನಿವಾರ್ಯತೆ ಆಯಗಾರಿಕೆಯ ಉಗಮಕ್ಕೆ ಕಾರಣ. ಪ್ರಾಚೀನ ಕಾಲದ ಜನಪದ ಸಂಘ ಜೀವನಕ್ಕೆ ಈ ಆಯಗಾರ ಪದ್ಧತಿ ಉತ್ತಮ ನಿದರ್ಶನ. ಒಕ್ಕಲಿಗರನ್ನು ಕೇಂದ್ರವಾಗಿಟ್ಟುಕೊಂಡು ಈ ಆಯಗಾರ ಮಂಡಲ ಪರಸ್ಪರ ಜೋಲಿ ಹಿಡಿದುಕೊಂಡು ಚಲಿಸುತ್ತದೆ. ಜೀವನಾವಶ್ಯಕತೆಯ ಪರಿಣಾಮದಿಂದ ಹುಟ್ಟಿದ ಈ ವೃತ್ತಿಗಳು ಕೇವಲ ಚಾಕರಿ ವೃತ್ತಿಗಳಾಗಿ ಉಳಿಯದೆ ಕಲೆಯಾಗಿ ಅರಳಿದವು. ಕಲೋಪಾಸನೆಯಾಗಿ ಬೆಳೆದವು. ಗೌಡರಿಂದ ಹಿಡಿದು ತಳವಾರನವರೆಗೆ ಪ್ರತಿಯೊಂದು ವೃತ್ತಿಯವನೂ ಹಳ್ಳಿಯ ಸಹಜೀವನದಲ್ಲಿ ಪಾಲ್ಗೊಂಡು ಹಳ್ಳಿಯ ಏಳ್ಗೆಗೆ ದುಡಿಯುವಂತೆ ಪ್ರತಿಯೊಬ್ಬನಿಗೂ ನಿರ್ದಿಷ್ಟ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿಗದಿಗೊಳಿಸಲಾಗಿತ್ತು. ಇಂಥ ವ್ಯವಸ್ಥೆಯಿಂದ ಹಳ್ಳಿಗಳ ಜೀವನವು ಸುಗಮವಾಗಿ ನಡೆದುಕೊಂಡು ಹೋಗುತ್ತಿತ್ತು. ಸಾಮಾಜಿಕ ಜೀವನದ ಐಕ್ಯತೆಗೆ ಎಲ್ಲಾ ಕಸುಬಿನವರು ಶ್ರಮಿಸುತ್ತಿದ್ದರು.

ಆಯಗಾರರಲ್ಲಿ ವಿವಿಧ ಜಾತಿ ಕಸುಬಿನವರಿದ್ದರೂ ಒಂದೊಂದು ಕಸುಬಿನವರು ಇತರ ಕಸುಬುದಾರರ ನೆರವು ಪಡೆಯುವುದು ಅನಿವಾರ್ಯವಾಗಿತ್ತು. ಒಂದು ಸಂದರ್ಭದಲ್ಲಿ ಧನಿ ಆದವನು ಮತ್ತೊಂದು ಸಂದರ್ಭದಲ್ಲಿ ಅಧೀನವಾಗಿರುತ್ತಿದ್ದ, ಮತ್ತೊಮ್ಮೆ ಸರೀಕನಾಗಿರುತ್ತಿದ್ದ. ಎಲ್ಲ ಆಯಗಳು ಪರಸ್ಪರ ಪೋಷಕ ಸಂಬಂಧವನ್ನು ಹೊಂದಿದವು. ಕಸುಬುಗಳು ಭಿನ್ನವಾಗಿದ್ದರೂ ಅವು ಸಾಮುದಾಯಿಕ ಒಗ್ಗಟ್ಟಿಗೆ ಹಾತೊರೆಯುತ್ತಿದ್ದವು. ಕಂಬಾರ, ಬಡಿಗ, ಅಗಸ, ಬೇರೆಯವರ ಮನೆ ಅಥವಾ ಹೊಕ್ಕೆ ಹೋದಾಗ ಆಯಗಾರರಾಗಿರುತ್ತಿದ್ದರು. ತಮ್ಮ ಹೊಲದ ರಾಶಿ ಅಥವಾ ಆಚರಣೆ ಕ್ರಿಯೆಗಳ ಸಂದರ್ಭದಲ್ಲಿ ಕೊಡುವ ಹಾಗೂ ನೀಡುವ ಸ್ಥಾನದಲ್ಲಿ ನಿಲ್ಲುತ್ತಿದ್ದರು. ಅಂದರೆ ಅನ್ಯಪ್ರಸಂಗದಲ್ಲಿ ಸರೀಕನೊಂದಿಗೆ ದಾನ ಅಥವಾ ಆಯ ಪಡೆಯುವ ಅಗಸ ಅಥವಾ ಕ್ಷೌರಿಕರು ತಮ್ಮ ಹೊಲದ ರಾಶಿ ಅಥವಾ ಆಚರಣೆ ಪ್ರಸಂಗದಲ್ಲಿ ಕೊಡುವ ಸ್ಥಾನದಲ್ಲಿ ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ಕೊಡುತ್ತೇನೆನ್ನುವ ಅಹಂಕಾರಕ್ಕಿಂತ ಹಂಚಿ ತಿನ್ನುವ ಸಹಕಾರ ತತ್ವ ಪ್ರಧಾನವಾಗಿರುತ್ತದೆ.

ಹಾಗೆ ಕಂಬಾರನಿಗೆ ತಿದಿ ಬೇಕು ಅದಕ್ಕಾಗಿ ಆತ ಮಾದಿಗನ ಮೇಲೆ ಅವಲಂಬಿತನಾಗುತ್ತಾನೆ. ಮಾದಿಗನಿಗೆ ರೆಂಪಿಗೆ ಹಾಗೂ ಉಳಿ ಬೇಕು ಆಗ ಆತ ಕಂಬಾರನ ಮೇಲೆ ಅವಲಂಬಿತನಾಗಿರುತ್ತಾನೆ. ಬಡಿಗ ಅಕ್ಕಸಾಲಿಗೆ ವಿವಿಧ ನಮೂನೆ ಕಬ್ಬಿಣ ಸಲಕರಣೆಗಳು ಬೇಕು. ಆಗ ಅವರೂ ಕಂಬಾರನ ಮೇಲೆ ಅವಲಂಬಿತರಾಗುತ್ತಾರೆ. ಕಂಬಾರ ತನಗೆ ಬೇಕಾದ ಸಲಕರಣೆಗಳಿಗೆ ಉಳಿದ ಆಯಗಾರರ ಮೇಲೆ ಅವಲಂಬಿತನಾಗುತ್ತಾನೆ. ಕೃಷಿಕರು ಆಯಗಾರರ ಮೇಲೆ ಆಯಗಾರರು ಕೃಷಿಕರ ಮೇಲೆ ಅವಲಂಬಿತವಾಗಿರುವುದ ಇಲ್ಲಿ ಸಹಜ.

ಆಯ್ದ ಪದ್ಧತಿ ಹಾಗೂ ಆಯಗಾರರನ್ನು ಎಂಟು ಹಿಟ್ಟಿನವರು ಬಾರಾಬಲೂತೆದಾರ್‌(ಹನ್ನೆರಡು ಬಗೆಯ ಕಸುಬುದಾರರು) ಹಾಗೂ ಅಷ್ಟಾದಶ ವರ್ಗದವರು ಎಂದು ವಿಂಗಡಿಸುವುದುಂಟು. ಎಂಟು ಹಿಟ್ಟಿನವರೆಂದರೆ ಅದು ಗ್ರಾಮದ ಒಂದು ಪ್ರಮುಖ ಸಂಸ್ಥೆ. ಅದರಲ್ಲಿ . ಗೌಡ, . ಸೇನಭೋವ, . ತಳಾರ, . ಬಡಗಿ, . ಕಮ್ಮಾರ, . ಅಕ್ಕಸಾಲೆ, . ಅಗಸ, . ಹಿಟ್ಟುಕಾರ (ಅಂಬಿಗ) ಅಥವಾ ಕಂಚಗಾರ ಈ ಸಮಿತಿಯಲ್ಲಿ ಸಮಾವೇಶವಾಗುತ್ತಿದ್ದರು. ಮೊದಲ ಮೂರು ಜನರನ್ನು ಗ್ರಾಮಾಧಿಕಾರಿಗಳೆಂದು ನಂತರದ ಐದು ಜನರನ್ನು ಪಂಚಕಾರುಕರೆಂದು ಕರೆಯುತ್ತಿದ್ದ ಬಗ್ಗೆ ಖಾನಾಪೂರ ತಾಲೂಕಿನ ಬೈಲೂರು ಶಾಸನಲದಲ್ಲಿ (ಕ್ರಿ. ಶ. ೧೧೬೨) ಉಲ್ಲೇಖ ಸಿಗುತ್ತದೆ.

ಶಾಸನಗಳಲ್ಲಿ ಆಯಗಾರರ ಪ್ರಸ್ತಾಪ

ಕ್ರಿ. ಶ. ೧೧ನೇ ಶತಮಾನದಿಂದೀಚೆಗೆ ಕರ್ನಾಟಕದಲ್ಲಿ ಆಯಗಾರರ ಬಗ್ಗೆ ಕೆಲವು ಪ್ರಸ್ತಾಪಗಳು ಸಿಗುತ್ತವೆ. ಈ ಆಯಗಾರರ ಕುರಿತು ಹಿಂದಿನ ಕೆಲವು ಶಾಸನಗಳು ಬಿಡಿ ಬಿಡಿಯಾಗಿ ಪ್ರಸ್ತಾಪಿಸುತ್ತವೆ. ನಂತರದ ಶಾಸನಗಳಲ್ಲಿ ಆಯಗಾರರ ಸಮುದಾಯಗಳ ಉಲ್ಲೇಖ ಗುಂಪು ಗುಂಪಾಗಿ ಬಂದಿರುವುದು ಕಾಣುತ್ತದೆ. ಪಶ್ಚಿಮ ಚಾಲುಕ್ಯ, ಹೊಯ್ಸಳ, ಯಾದವ ಕಾಲದ ಶಾಸನಗಳಲ್ಲಿ ಗಾವುಂಡ, ತೋಟಿಗ, ಕಲ್ಲುಕುಟಿಗ, ಕಮ್ಮಾರ, ಅಕ್ಕಸಾಲಿ, ಬಡಗಿ, ಕ್ಷೌರಿಕ, ಜ್ಯೋತಿಷಿಗಳ ಪ್ರಸ್ತಾಪ ಇಡಿಯಾಗಿ ಕಾಣುತ್ತದೆ.

ಹರಪ್ಪನಹಳ್ಳಿ ತಾಲೂಕಿನ ತಳವಾಗಿಲು ಶಾಸನ (ಕ್ರಿ. ಶ. ಸು. ೧೦೯೨) ದಲ್ಲಿ ಭೋಗೇಶ್ವರ ದೇವರ ಆಚಾರ್ಯನು ಸುರಲೋಕ ಪ್ರಾಪ್ತನಾದಾಗ ಸೇನಗೌಡನ ಮಗ ಚಿಕ್ಕಗೌಡ ಮತ್ತು ಆತನ ಮಾವ ನೇಮಗೌಡ. ಅಱವತ್ತೊಕ್ಕಲು ಹನ್ನೆರಡು ಹಿಟ್ಟು ಸಹಿತವಾಗಿ ಆ ಸ್ಥಳವನ್ನು ಪೂಜಾರಿ ನಾಗಯ್ಯನಿಗೆ ಕಾಲು ತೊಳೆದು ಹಿಟ್ಟು ಹಾಸಿಕೊಟ್ಟರೆಂದು ಹೇಳಲಾಗಿದೆ. ಖಾನಾಪೂರ ತಾಲ್ಲೂಕಿನ ಬೈಲೂರು ಶಾಸನದಲ್ಲಿ (ಕ್ರಿ. ಶ. ೧೧೬೨) ಹೆಗ್ಗಡೆಯವರ ಮಲ್ಲಣ್ಣಕ್ಕಶಾಲೆ ಸಿಂಗೋಜಂ ಕಮ್ಮಾರ ದಾಸೋಜಂ ಮಡಿವಳ ಸೊಪ್ಪಯನಿಂತೆಂಟು ಹಿಟ್ಟು ಸಹಿತವಿದ್ದುದ ಎಂದು ಎಂಟು ಹಿಟ್ಟಿನವರ ಉಲ್ಲೇಖ ಬರುತ್ತದೆ. ನಾಲ್ಕು ಜನರನ್ನೇ ಎಂಟು ಹಿಟ್ಟು ಎಂದು ಕರೆದಿರುವುದು ಗಮನಾರ್ಹ. ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮಕ್ಕೆ ಸೇರಿದ ಹೊಯ್ಸಳ ವೀರಬಲ್ಲಾಳನ ತಾಮ್ರ ಪಟದಲ್ಲಿ (ಕ್ರಿ. ಶ. ಸು. ೧೨೦೦) ಹಿಟ್ಟಿನ ತಳವಾರಿ ಮಾರನಾಯಕ, ಹಿಟ್ಟಕಾರ ಬಡಗಿ ಹಿಲೋಜ, ಹಿಟ್ಟಿನ ಕಮ್ಮಾರ ದೇವೋಜ ಮತ್ತು ಹಿಟ್ಟಿನ ಅಕ್ಕಸಾಲೆ ಪಾರಸೋಜ, ಇವರಿಗೆ ಭೂಮಿಯನ್ನು ಬಿಟ್ಟುಕೊಟ್ಟ ಉಲ್ಲೇಖ ಬರುತ್ತದೆ. ಎಂಟು ಜನರ ಸಮಿತಿಯಲ್ಲಿ ಅಕ್ಕಸಾಲೆ, ಕಮ್ಮಾರ ಹಾಗೂ ಬಡಿಗಿ ಮೂವರಿಗೂ ಪ್ರಾತಿನಿಧ್ಯ ಸಿಕ್ಕಿರುವುದು ಗಮನಾರ್ಹ ಸಂಗತಿ. ಕೋಳೂರು ಶಾಸನದಲ್ಲಿ ಕ್ರಿ. ಶ. ಸು. ೧೨೨೦ರ ಹಾಗೂ ಕಡಕೋಳ ಗ್ರಾಮದ ಶಾಶನ (ಕ್ರಿ. ಶ. ಸು. ೧೨೩೯) ದಲ್ಲಿ ಹನ್ನೆರಡು ಹಿಟ್ಟಿನ ಉಲ್ಲೇಖಗಳು ಸಿಗುತ್ತವೆ. ಕಡೂರು ತಾಲ್ಲೂಕಿನ ಸೋಮನಹಳ್ಳಿ ಶಾಸನದಲ್ಲಿ (ಕ್ರಿ. ಶ. ೧೨೪೨) ಅಕ್ಕಸಾಲೆ ಮಾರೋಜನು ತನ್ನ ಅಕ್ಕಸಾಲೆ ಹಿಟ್ಟಿನ ಭೂಮಿಯೊಳಗೆ ಬ್ರಹ್ಮೇಶ್ವರ ದೇವರ ಅಂಗಭೋಗಕ್ಕೆ ದತ್ತಿ ಬೆದ್ದಲು ಕಂಬ ೫೫ ಎಂದು ಬರುತ್ತದೆ. ಅಕ್ಕಿ ಆಲೂರು ಶಾಸನ (ಕ್ರಿ. ಶ. ಸು. ೧೨೬೯) ದಲ್ಲಿ ಹನ್ನೆರಡು ಹಿಟ್ಟುಕಾರರ ಉಲ್ಲೇಖ ಸಿಗುತ್ತದೆ. ಹೆಬ್ಬಳಿ (ಬಾದಾಮಿ ||ತಾ||)ಯ ಹನುಮಂತ ದೇವರ ಗುಡಿಯ ಕಲ್ಲಿನ ಮೇಲಿರುವ ಶಾಸನದಲ್ಲಿ ಕ್ರಿ.ಶ. ೧೫೪೭ರಲ್ಲಿ ಸದಾಶಿವರಾಯನು ವಿದ್ಯಾನಗರಿಯ ಸಿಂಹಸಾನವನ್ನು ಆಳುತ್ತಿರುವಾಗ ರಾಮರಾಜ, ತಮ್ಮರಾಜ ಅರಸರು ಕ್ಷೌರಿಕ ವೃತ್ತಿಯ ತಿಮ್ಮೋಜ, ಕೊಂಡೋಜ, ಭದ್ರೋಜರಿಗೆ ಶಾಸನ ಸಮೇತ ದಾನ ನೀಡಿದ ವಿವರವಿದೆ. ಅದೇ ರೀತಿ ಕ್ರಿ.ಶ. ೫೭೮ಕ್ಕೆ ಸೇರಿದ ಬಾದಾಮಿಯ ಶಾಸನವೊಂದರಲ್ಲಿ ಮಂಗಲೇಶನು ಗವಿ ದೇವಾಲಯಕ್ಕೆ (ಕಲ್ಮನೆ) ನೀಡಿದ ದೇವರಿಗಾಗಿ ಹೂ ಕೊಯ್ಯುವ ಮಾಲೆಗಾರರಿಗೆ ಅರ್ಧ ವಿಸದಿ (ತೆರಿಗೆಯನ್ನು) ಬಿಟ್ಟ ಉಲ್ಲೇಖಗಳು ಸಿಗುತ್ತವೆ.

ಹಿಟ್ಟು ಒಂದು ಆಹಾರ ಪದಾರ್ಥವಾಗಿತ್ತು. ಕಾರಣ ಹಿಟ್ಟು ಶಬ್ದಕ್ಕೆ ಆಯ, ಬದುಕುವ ಸಾಧನ, ಸಂಭಾವನೆ, ಪ್ರತಿಫಲ ಎನ್ನುವ ಅರ್ಥ ಬಂದಿದೆ. ಜೀವನಾಧಾರವಾದ ಹಿಟ್ಟು ಪವಿತ್ರವಾದ ಪದಾರ್ಥವೂ ಹೌದು. ಉಂಬಳಿ ದಾನ ಮುಂತಾದವನ್ನು ಬಿಡುವಾಗ ‘ಹಿಟ್ಟು ಹಾಸಿ ಕೊಟ್ಟರು, ಕಾಲಂಕರ್ಚಿ ಹಿಟ್ಟಂ ಹೂತಿ ಕುಡೆ ಪಡೆದು’ ಎನ್ನುವ ಉಲ್ಲೇಖ ಶಾಸನಗಳಲ್ಲಿ ಇಂಡುಬರುತ್ತದೆ. ಹಿಟ್ಟುಕಾರರಿಗೆ ಭೂಮಿ ನೀಡುವುದಲ್ಲದೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತಿತ್ತು. ತಳವಾರ, ಬಡಗಿ, ಕಮ್ಮಾರ, ಅಕ್ಕಸಾಲೆ ಈ ನಾಲ್ಕು ಹಿಟ್ಟುಕಾರರಿಗೆ ಭೂಮಿಯನ್ನು ಉಂಬಳಿಯಾಗಿ ಬಿಟ್ಟ ಬಗ್ಗೆ ಹುಬ್ಬಳ್ಳಿ ತಾಲ್ಲೂಕಿನ ಮಂಟುರ ಶಾಸನ ಹೇಳುತ್ತದೆ. ಎಂಟು ಹಿಟ್ಟು ಸಮಿತಿಯ ಉಲ್ಲೇಖ ಗಮನಿಸಿದರೆ ಗ್ರಾಮದ ಸಾಂಘಿಕ ಜೀವನದಲ್ಲಿ ಮಹತ್ವದ ಸಂದರ್ಭದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತಿದ್ದುದು ಮನವರಿಕೆಯಾಗುತ್ತದೆ. ದುಡಿವ ವರ್ಗಗಳಿಗೆ ನಿರಂತರ ಅನ್ನಕ್ಕೆ ಆಧಾರವಾಗುವ ಮಹತ್ವದ ಆಶಯಗಳನ್ನು ಇಲ್ಲಿ ಕಾಣಬಹುದು.

ಆಯ ಪದ್ಧತಿ ಬಲೂತಾ ಹೆಸರಿನಿಂದ ಮಹಾರಾಷ್ಟ್ರದಲ್ಲಿ ಸಾರ್ವತ್ರಿಕವಾಗಿ ಕಂಡು ಬರುತ್ತದೆ. ‘ಬಲೂತಾ’ ಎಂದರೆ ಗ್ರಾಮೀಣ ಕೈಕಸುಬಿನವರಿಗೆ ಧಾನ್ಯ ರೂಪದಲ್ಲಿ ಕೊಡುವ ಸಂಭಾವನೆ ಅಥವಾ ಪಾಲು. ಇಂಥ ಸಂಭಾವನೆ ಪಡೆಯುವವರನ್ನು ಅಲೂತೆದಾರ ಎಂದು ಕರೆಯಲಾಗುತ್ತದೆ. ‘ಆಲೂತೆದಾರ’ ಎಂದರೆ ಪೂರ್ವನಿರ್ಧರಿತವಾದ ಸಂಭಾವನೆ ಪಡೆಯದಿರುವವ. ಬಲೂತೆದಾರ ಎಂದರೆ ವರಿಷ್ಠ ದರ್ಜೆಯ ಕೆಲಸಗಾರ, ನಿರ್ದಿಷ್ಟ ಆಯ ಪಡೆಯುವವ. ಬಲೂತೆ ಎಂದರೆ ಆಯ, ಬಲೂತೆದಾರ ಎಂದರೆ ಆಯಗಾರ. ಕರ್ನಾಟಕದಲ್ಲಿ ಹನ್ನೆರಡು ಜನ ಆಯಗಾರರಿರುವಂತೆ ಮಹಾರಾಷ್ಟ್ರದಲ್ಲಿ ಹನ್ನೆರಡು ಜನ ಬಲೂತೆದಾರರಿರುತ್ತಾರೆ. ಹನ್ನೆರಡು ಮಂದಿ ಆಯಗಾರರೆಂದರೆ ಗೌಡ, ಬಣಕಾರ, ಬಡಿಗಿ, ಕಮ್ಮಾರ, ಅಕ್ಕಸಾಲಿ, ಕುಂಬಾರ, ನಾಯಿಂದ, ಬಾರಿಕ, ತಳವಾರ, ಅಗಸ, ಚಲವಾದಿ (ಹೊಲೆಯ) ಮಾದಿಗ ಎನ್ನುವ ಜಾತಿ ಕಸುಬಿಗೆ ಸೇರಿದ ಗುಂಪುಗಳು.

ಗ್ರಾಂಟ್‌ಡಫ್‌ಅವರ ಪ್ರಕಾರ ಬಲೂತೆದಾರರ ಹೆಸರು ಕೆಳಗಿನಂತಿವೆ. ಸುತಾರ (ಬಡಗಿ) ಲೋಹಾರ (ಕಮ್ಮಾರ) ಛಾಂಭಾರ (ಸಮಗಾರ) ಮಾಂಗ (ಮಾದ) ಕುಂಬಾರ (ಕುಂಬಾರ) ನ್ಹಾವಿ (ನಾವಲಿಗ) ಪರೀಟ (ಅಗಸ) ಗುರವ (ಗೊರವ) ಜೋಶಿ (ಜೋಯಿಸ) ಭಟ (ಪುರೋಹಿತ) ಮುಲಣಾ (ಮೌಲಾನಾ) ಇತ್ಯಾದಿ ಪ್ರಾದೇಶಿಕವಾಗಿ ಇಲ್ಲಿನ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ.

ಗೌಡ, ಪಟೇಲ ಗ್ರಾಮದ ಆಡಳಿತ ವ್ಯವಸ್ಥೆಯನ್ನು ಸುಗಮವಾಗಿ ಸಾಗಿಸುವ ಕರ್ತವ್ಯ ಹೊಂದಿದ್ದರು. ಗೌಡನ ಕೆಲಸದಲ್ಲಿ ತಾಳವಾರ ಹಾಗೂ ತೋಬಿ (ಮಾದಿಗ) ನೆರವಾಗುತ್ತಿದ್ದರು. ಬಾರಕೇರ ಊರಿನ ಕೆರೆ, ನದಿಗಳ ನಿರ್ವಹಣೆ ಮಾಡುತ್ತಿದ್ದನು. ಬಣಕಾರ ಊರ ಧಾರ್ಮಿಕ ಕಾರ್ಯಗಳಲ್ಲಿ ನೆರವಾಗುತ್ತಿದ್ದನು. ಬಡಿಗ, ಕಮ್ಮಾರ ಕೃಷಿ ಕೆಲಸಗಳಿಗೆ ಮುಖ್ಯವಾದರೆ ಅಕ್ಕಸಾಲೆ ಆಭರಣ ಮಾಡಿಕೊಡುತ್ತಿದ್ದನು. ಕುಂಬಾರ ನಾಯಿಂದ ಅಗಸರ ಕೆಲಸಗಳು ರೈತ ಹಾಗೂ ಊರಿನ ಇತರರಿಗೂ ಅಗತ್ಯವಾಗಿದ್ದವು. ಚಲವಾದಿ ಮಾದಿಗರಾದರೋ ಊರ ಕೆಲಸಗಳಲ್ಲಿ ಸ್ವಚ್ಛತೆ ಹಾಗೂ ವಾದ್ಯ ಸೇವೆ ಮಾಡುತ್ತಿದ್ದರು. ಇದಕ್ಕಾಗಿ ಇವರಿಗೆ ಸುಗ್ಗಿಯಲ್ಲಿ ಹೊರೆಸೊಪ್ಪೆ ಅಥವಾ ‘ಆಯದ ಕಾಳು’ ಕೊಡುತ್ತಿದ್ದರು. ಇದೂ ಅಲ್ಲದೆ ವ್ಯವಹಾರಗಾರರ ಮನೆಯಲ್ಲಿ ಹೊಲಿ ಮಕ್ಕಳಾಗಿ ಅಥವಾ ಆಯಗಾರರಾಗಿ ದನಕರಗಳನ್ನು ಹೊತ್ತು ಹಾಕಿ ಚರ್ಮ ಸುಲಿದು ಹಗ್ಗ, ಮಿಣಿ, ಬಾರಕೋಲು ಹಾಗೂ ಚಪ್ಪಲಿ ಮಾಡಿಕೊಡುತ್ತಿದ್ದರು. ಇದಕ್ಕೆ ಪ್ರತಿಫಲವಾಗಿ ವರ್ಷದ ಕೊನೆಯಲ್ಲಿ ಸುಗ್ಗಿ ಕಾಲದಲ್ಲಿ ಕಾಳುಕಡ್ಡಿ ಸಿಗುತ್ತಿತ್ತು. ಇದೊಂದು ಪರಸ್ಪರ ಅನ್ಯೋನ್ಯ ಅವಲಂಬನೆಯಾಗಿತ್ತು. ಆದಾಗ್ಯೂ ಇದು ಅಧೀನತೆಯ ಹಾಗೂ ಶೋಷಣೆಯ ದಾರಿಯಾಗಿ ಅಲ್ಲಲ್ಲಿ ಕಾಣುವುದನ್ನು ಮರೆಯಲಾಗದು. ಸೇವೆಯಲ್ಲಿ ಆಯಗಾರರು ಕ್ರಮ ತಪ್ಪಿದರೆ ಬುದ್ಧಿ ಕಲಿಸುವ ಹಕ್ಕು ಊರ ಪ್ರಮುಖರಿಗಿದ್ದಂತೆ ಧನಿಯಾದವನು ಆಯ ಕೊಡುವಲ್ಲಿ ಮೀನಮೇಷ ಎನಿಸಿದರೆ, ಕ್ರಮ ತಪ್ಪಿದರೆ ಅಂಥವನ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಮುಖಂಡರಿಗಿರುತ್ತಿತ್ತು.

ಊರ ಜಾತ್ರೆ-ಹಬ್ಬ, ಉತ್ಸವ-ಜಗಳ, ಸಂಧಾನದ ಸಂದರ್ಭದಲ್ಲಿ ಆಯಗಾರರಿಗೆಲ್ಲ ನಿರ್ದಿಷ್ಟ ಹ್ವಾರೆಗಳಿರುತ್ತಿದ್ದವು. ಅಂಥ ಹ್ವಾರೆಗಳನ್ನು ನಿರ್ವಹಿಸಲು ದೇವರಭೂಮಿ ಎನ್ನುವ ಕಂದಾಯ ರಹಿತ ಭೂಮಿ ಸಿಗುತ್ತಿತ್ತು. ಹಾಗೆ ಊರ ದೇವತೆಗೆ ಬಲಿಕೊಟ್ಟ ಕೋಣದ ಬೇರೆ ಬೇರೆ ಭಾಗಗಳ ಮೇಲೆ ವಿವಿಧ ಆಯಗಾರರಿಗೆ ಹಕ್ಕಿರುತ್ತಿತ್ತು ಡರ್ಕಹೈಂ ಎಂಬ ಫ್ರೇಂಚ್‌ಸಮಾಜಶಾಸ್ತ್ರಜ್ಞ ಹೇಳುವಂತೆ ‘ಹಳ್ಳಿಯ ಜೀವನ ಕಸುಬುದಾರರು ಪರಸ್ಪರರು ಅವಲಂಬಿಸುವ ಜೈವಿಕ ಐಕ್ಯತೆಯನ್ನು (Organic Salidarity) ಪ್ರತೀಕಿಸುತ್ತಿತ್ತು. ನಗರೀಕರಣ, ಔದ್ಯೋಗಿಕರಣ, ಯಾಂತ್ರೀಕರಣ, ಹಣದ ವಹಿವಾಟು, ವ್ಯಾಪಾರ ಉದ್ಯಮಗಳ ಐಕ್ಯತೆ (Mechanical sadidanity) ಇಂದು ಹೆಚ್ಚಾಗುತ್ತಿದೆ. ನಗರೀಕರಣ, ಬೃಹತ್‌ಕೈಗಾರಿಕೆಗಳು, ನೀರಾವರಿ ಯೋಜನೆಗಳು ಅಕಾಲಿಕ ಹಾಗೂ ಅಲ್ಪಕಾಲಿಕ ಮಳೆಗಾಲ, ಪರಿಸರನಾಶ, ಸಿದ್ಧ ಸಲಕರಣೆಗಳು ಮುಂತಾದ ಸಂಗತಿಗಳು ಬೆಳೆವ ಭೂಮಿಯನ್ನು ನುಂಗಿ ಹಾಕುತ್ತಿವೆ. ಕೃಷಿ ಪದ್ಧತಿ ಹಾಗೂ ಆಯ ಪದ್ಧತಿಯನ್ನು ಇಲ್ಲವಾಗಿಸುತ್ತಿವೆ. ಬೇಸಾಯಗಾರರು ಇಂದು ಬಡಿಗಿ, ಕಮ್ಮಾರ, ಕುಂಬಾರ ಮುಂತಾದ ಆಯಗಾರರ ಮೇಲೆ ಕೈಯೂರಿ ನಿಲ್ಲಬೇಕಾದ ಪರಿಸರ ಇಲ್ಲ. ಮಿತವಾದ ಭೂಮಿ, ಹಚ್ಚುತ್ತಿರುವ ಜನಸಂಖ್ಯೆ ಆಯಪದ್ಧತಿಯಂಥ ಸ್ವಾಲಂಬಿ ಬದುಕನ್ನು ಇಲ್ಲವಾಗಿಸುತ್ತಿದೆ. ಭೂಮಿ ಹಾಗೂ ಆಯ ಎರಡೂ ಸ್ಥಿರವಿದ್ದಾಗ ಆಯಗಾರರು ಎಂದೂ ಅನ್ನಕ್ಕಾಗಿ ಅಗತ್ಯಕ್ಕಾಗಿ ಚಿಂತಿಸುವಂತಿರಲಿಲ್ಲ. ಹಣ ಅವರ ಕೈಯಲ್ಲಿ ಓಡಾಡಿದಿದ್ದರು. ಧಾನ್ಯ ಹಾಗೂ ಅಗತ್ಯ ವಸ್ತುಗಳ ಕೊರತೆ ಕಾಣುತ್ತಿದ್ದಿಲ್ಲ. ಉದಾಹರಣೆಗೆ “ನನ್ನ ಅಪ್ಪ ನನ್ನೂರಿನ ಐವತ್ತು ‘ಗಳೆ’ಗಳನ್ನು ಮಾಡುತ್ತಿದ್ದ. ಇದರಿಂದ ನಮಗೆ ವರ್ಷಕ್ಕೆ ಏನಿಲ್ಲೆಂದರೂ ಹದಿನೈದರಿಂದ ಇಪ್ಪತ್ತು ಚೀಲ ಜೋಳ ದೊರಕುತ್ತಿತ್ತು. ಮನೆ ಚಿಕ್ಕದಾಗಿದ್ದರೂ ಪಕ್ಕದಲ್ಲಿದ್ದ ಮಳಿಸ್ವಾಮಿ ಮಠದಲ್ಲಿ ಜೋಳದ ಚೀಲಗಳನ್ನು ನಿಟ್ಟು ಕಟ್ಟುತ್ತಿದ್ದರು. ಹಾಗೆ ವಿವಿಧ ಆಹಾರ ಧಾನ್ಯಗಳು ದ್ವಿದಳ ದಾನ್ಯಗಳೂ ತಕ್ಕಮಟ್ಟಿಗೆ ದೊರೆಯುತ್ತಿದ್ದವು. ಹಣದ ಅಗತ್ಯ ಕಂಡಾಗ ಅಪ್ಪ ಅನುಕೂಲಕ್ಕೆ ತಕ್ಕಂತೆ ಈ ಧಾನ್ಯಗಳನ್ನು ಮಾರಿ ಬಟ್ಟೆ ಬರೆ ಮುಂತಾದ ವಸ್ತುಗಳನ್ನು ಖರೀದಿಸುತ್ತಿದ್ದರು. ಆಯಿ, ಹಾಲು, ಮೊಸರು, ಕಾಯಿಪಲ್ಲೆ ಸಣ್ಣಪುಟ್ಟ ದಿನಸಿಗಳನ್ನು, ಕಾಳುಗಳನ್ನು ಕೊಟ್ಟು ಪಡೆಯುತ್ತಿದ್ದರು”. ಇಲ್ಲಿ ಹಣದ ಕೊರತೆ ಇತ್ತೇ ವಿನಹ ಆಹಾರದ ಕೊರತೆ ಇರಲಿಲ್ಲ. ಹಣಕ್ಕಿರುವ ಇಂದಿನ ಬೆಲೆ ಅಂದು ವಸ್ತುಗಳಿತ್ತು. ಜೋಳ-ಕಾಳುಗಳೇ ಅಂದಿನ ವ್ಯವಹಾರದ ವಸ್ತುಗಳಾಗಿದ್ದವು.

ಆಯಗಾರರು ಕುಲಕಸುಬಿನ ಜೊತೆಗೆ ವಿವಿಧ ಉಪವೃತ್ತಿಗಳನ್ನು ಅವಲಂಬಿಸಿದ್ದರು. ಆಯ ಪದ್ದತಿ ನಂಬಿಕೆ, ಸೇವೆ, ಪರಸ್ಪರ ಅವಲಂಬನೆ, ಕೊಡುಗೆಗಳ ಮೇಲೆ ನಿಂತಿತ್ತು. ವೈಷಮ್ಯಕ್ಕೆ ಒಳಜಗಳಕ್ಕೆ ಅವಕಾಶವಿಲ್ಲದಂತೆ ನೀತಿ ನಿಯಮಗಳನ್ನು ಈ ಪದ್ಧತಿ ರೂಢಿಸಕೊಂಡಿತ್ತು. ತಲೆತಲಾಂತರದಿಂದ ಆಯದ ಕುಳ ಹಾಗೂ ಆಯಗಾರರ ಮಧ್ಯ ಅನ್ಯೋನ್ಯ ಸಂಬಂಧಗಳಿದ್ದವು. ಇದು ಸಾಮಾಜಿಕ ಭದ್ರತೆಗೆ ಸುಗಮ ಜೀವನಕ್ಕೆ ದಾರಿಯಾಗುತ್ತಿತ್ತು. ಆಗಾಗ ಆಯಗಾರರ ಹಾಗೂ ಆಯ ಕುಳದ ಮಧ್ಯ ಸೇವಾ ನಿಯಮದಲ್ಲಿ ವ್ಯತ್ಯಯಗಳಾದರೆ ಅದನ್ನು ಬಗೆಹರಿಸಿಕೊಳ್ಳುವ ಹಾಗೂ ಬದಲಾಯಿಸಿಕೊಳ್ಳುವ ಅವಕಾಶವೂ ಈ ಪದ್ಧತಿಯಲ್ಲಿತ್ತು. ಆಯುಧ ಕರಾರುಗಳನ್ನು ಬದಲಿಸಿಕೊಳ್ಳಲು ಇದಕ್ಕೆ ಪರಸ್ಪರ ಜಾತಿಗಳ ಹಿರಿಯರ ಒಪ್ಪಿಗೆ ಅಗತ್ಯವಾಗುತ್ತಿತ್ತು. ಅದೇ ರೀತಿ ಒಂದು ಬಡಿಗ ಕುಟುಂಬ ಇನ್ನೊಂದು ಕುಟುಂಬದ ಆಯದ ಕುಳವನ್ನು ಸೆಳೆದುಕೊಂಡಾಗ ಜಾತಿ ಪಂಚಾಯ್ತಿ ಅಂಥವನಿಗೆ ದಂಡ ಶಿಕ್ಷೆ ನೀಡುತ್ತಿತ್ತು. ಈ ರೀತಿ ಪ್ರತಿಯೊಬ್ಬ ಆಯಗಾರರಿಗೂ ದಾನ, ಧರ್ಮ ಕೊಡುತ್ತಿದ್ದ ಹಾಗೂ ಉಂಬಳಿ ನೀಡುತ್ತಿದ್ದ ಸಂಗತಿಗಳು ತಿಳಿದು ಬರುತ್ತವೆ.

ಕನ್ನಡನಾಡಿನ ಹಲವು ಶಾಸನಗಳು ಇಂಥ ಸ್ವಾವಲಂಬಿ ಹಾಗೂ ಸಮುದಾಯ ಪ್ರಧಾನ ಆಯಗಾರಿಕೆ ಹಾಗೂ ಆಯಗಾರರ ಬಗ್ಗೆ ಸಾಕಷ್ಟು ಪ್ರಮಾಣದ ಮಾಹಿತಿಗಳನ್ನು ನೀಡುತ್ತವೆ. ಆಯ ಪ್ರಧಾನ ಸಮಾಜದಲ್ಲಿ ಕಸುಬುದಾರಿಕೆ ಅಥವಾ ಕಸುಬುದಾರ ಕೇವಲ ಒಬ್ಬ ಕೂಲಿಕಾರ್ಮಿಕನಾಗಿರಲಿಲ್ಲ. ಆತನೊಬ್ಬ ಸಾಮಾಜಿಕ ನಿರ್ಮಾತೃವಾಗಿದ್ದ. ಸಾಂಪ್ರದಾಯಿಕ ವೃತ್ತಿಗಳಲ್ಲಿ ಹಾಗೂ ಸಾಮಾಜಿಕ ಸಂದರ್ಭದಲ್ಲಿ ಆಯ ಪದ್ಧತಿ ಎನ್ನುವುದು ಒಂದು ಪ್ರಮುಖ ಸಂಗತಿಯಾಗಿತ್ತು. ವಿಶೇಷವಾಗಿ ಕನ್ನಡದ ದಾನ ಶಾಸನಗಳಲ್ಲಿ ಹಾಗೂ ವ್ಯಾಜ್ಯಕ್ಕೆ ಸಂಬಂಧಿಸಿದ ಶಾಸನಗಳಲ್ಲಿ ಉಲ್ಲೇಖಿತಗೊಳ್ಳುವ ಆಯಗಾರರ ಸಂಗತಿಗಳು ಕುತೂಹಲ ಹುಟ್ಟಿಸುವಂಥವು. ಡಾ. ಎಂ.ಎಂ ಕಲಬುರ್ಗಿಯವರ ಅಭಿಪ್ರಾಯವೊಂದು ಈ ಸಂದರ್ಭದಲ್ಲಿ ಪ್ರಸ್ತುವೆನಿಸುತ್ತದೆ. ‘ …. ಯುದ್ದವಿಜಯವನ್ನೆ ಪ್ರಭಾವಳಿಯಾಗಿ ಬಳಸಿ, ಧಾನ-ಧರ್ಮ ಕಾರ್ಯಗಳನ್ನು ಉತ್ಪ್ರೇಕ್ಷಿಸುವುದು ನಮ್ಮ ಶಾಸನಗಳ ಪದ್ಧತಿಯಾಗಿದ್ದೀತು. ನಮ್ಮ ಇತಿಹಾಸಕಾರರೂ ಇದೇ ದೊಡ್ಡ ಸಾಧನೆಯೆಂದು ಭ್ರಮಿಸಿ, ಅತಿ ರಂಜಿತ ಇತಿಹಾಸ ಬರೆಯುತ್ತ ಬಂದರು. ಆದರೆ ಶಾಸನಗಳ ಮುಖಬೆಲೆಯನ್ನು ದಾಖಲಿಸುವುದಕ್ಕಿಂತ ಅವುಗಳ ಹಿಂದಿನ ಮನಸ್ಸನ್ನು, ಅದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಮಾಜ-ಸಂಸ್ಕೃತಿಗಳ ಮೇಲಾದ ಸತ್ಪರಿಣಾಮ-ದುಷ್ಪರಿಣಾಮಗಳನ್ನು ಚಿತ್ರಿಸುವುದು ಮಾತ್ರ ನಿಜವಾದ ಚರಿತ್ರೆಯೆನಿಸುತ್ತದೆ.’[2]

ಅಂದರೆ ಶಾಸನಗಳ ಮೇಲೆ ನಡೆದ ಹೆಚ್ಚಿನ ಅಧ್ಯಯನಗಳು ರಾಜನ ಯುದ್ಧ ವಿಶೇಷಗಳು, ದೇವಾಲಯ ನಿರ್ಮಾಣ ಹಾಗೂ ದಾನ ಕಾರ್ಯಗಳ ಶ್ರೇಷ್ಟತೆಯನ್ನೇ ಮೇಲು ಮಾಡಿ ಹೇಳಿರುವುದು ಸಾಮನ್ಯ ಸಂಗತಿ. ಆದರೆ ಒಂದು ಸಂಪೂರ್ಣ ಸಮಾಜ ಸಂಸ್ಕೃತಿಗಳ ಬಗೆಗಿನ ಚರ್ಚೆಗಳು ಇಂಥ ಅಧ್ಯಯನಗಳಲ್ಲಿ ಕಾಣುವುದಿಲ್ಲ. ಶಾಸನಗಳ ಅಧ್ಯಯನಗಳೊಳಗೆ, ಪ್ರಭುತ್ವ ಅದರ ಪರಿವಾರದ ಹೆಗ್ಗಳಿಕೆಗಳೇ ಮುಖ್ಯವಾಗಿ ಬಂದಿವೆ. ರಾಜ ಪರಿವಾರದಷ್ಟೇ ಸಾಮಾಜಿಕ ನೀತಿ ನಿಯಮಗಳಲ್ಲಿ ಮುಖ್ಯವಾದ ಇತರೆ, ಕಸುಬುದಾರ ವರ್ಗಗಳ ಚರ್ಚೆ ಗೌಣವಾಗಿದೆ. ಅಂದರೆ ಊನಗೊಂಡ ಚರಿತ್ರೆಯ ಒಂದು ಪರಿಷ್ಕೃತ ಮಜಲು ಅಧ್ಯಯನಗಳ ಭಾಗವಾಗಿರುವುದು ಕಂಡುಬರುತ್ತದೆ.

ಒಂದು ರಾಜ್ಯದ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ವ್ಯವಸ್ಥೆಯ ಸುಗಮ ನಡಿಗೆಗೆ ಈ ಆಯಗಾರರು ಅತ್ಯವಶ್ಯ. ಸಮಾಜದ ಭೌತಿಕ ಹಾಗೂ ಆಂತರಿಕ ನೀತಿ ನಿರ್ಧಾರಗಳನ್ನು ರೂಪಿಸುವ ಮತ್ತು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರಕುಶಲ ಕಲಾವಿದರು , ಕೆಳವರ್ಗದ ಕೆಲಸಗಾರರು ಪ್ರಮುಖರಾಗಿದ್ದರು. ಕೌಟಿಲ್ಯ ಹೇಳುವಂತೆ ರಾಜ್ಯ ವ್ಯವಸ್ಥೆಯ ಗೂಢಚೆರ್ಯೆ ವಿಭಾಗದಲ್ಲಿ ಸನ್ಯಾಸಿ, ಜ್ಯೋತಿಷಿ ಸೂಳೆಯರು ಇರುವಂತೆ ಇಂಥ ಕಸುಬುದಾರರೂ ಹಾಗೂ ಅವರ ಜಾಗಗಳು ಪ್ರಮುಖ ಪ್ರಾತ್ರವಹಿಸುತ್ತಿದ್ದವು. ಸೂಕ್ಷ್ಮ ಗ್ರಾಹಿಗಳಾದ ಇವರು ಸಾರ್ವಜನಿಕ ರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಇದರಿಂದ ಶತ್ರುಗಳಿಂದ ರಾಜ್ಯಕ್ಕೆ ಬರುತ್ತಿದ್ದ ಅಪತ್ತುಗಳ ನಿರ್ವಹಣೆಯಲ್ಲಿ ಇವರದೂ ಪ್ರಮುಖ ಪಾಲು ಇರುತ್ತಿತ್ತು. ಹೀಗಾಗಿ ಕಸುಬುದಾರ ವರ್ಗಗಳು ಬರೀ ಕಾರ್ಮಿಕರು ಮಾತ್ರವಾಗಿರದೆ ರಾಜ್ಯದ ಹಿತದೃಷ್ಟಿಯನ್ನು ಕಾಪಾಡುವಲ್ಲಿ ತಮ್ಮದೇ ಕೊಡುಗೆ ನೀಡಿದ್ದು ಗಮನಾರ್ಹ.

[1] ಪ್ರಸನ್ನ, ಪುಟ ೨೪, ೨೦೦೫

[2] ಮುರಿಗೆಪ್ಪ ಎ (ಪ್ರಸಂ) ಕೃಷ್ಣದೇವರಾಯ; ಆಯ್ದ ಲೇಖನ ಸಂಪುಟ, ಪುಟ, ೧೬೦;೨೦೦೮