ಪಾಂಚಳರು ಮತ್ತು ಆಯಕಾರಿಕೆ

ಶಾಸನಗಳಲ್ಲಿ ವಿಶ್ವಕರ್ಮ, ಸ್ಥಪತಿ, ಕಮ್ಮಲಾನ, ಪಂಚಕಸುಬಿನವರು, ಪಾಂಚಾಳಕುಲ ಎಂಬಿತ್ಯಾದಿ ಉಲ್ಲೇಖಗಳು ಸಿಗುತ್ತವೆ. ಈ ಸಮುದಾಯದವರು ‘ಹೇಮಕರ್ಮ, ಲೋಹಕರ್ಮ,ಶಿಲಾಕರ್ಮ, ರನಕರ್ಮ, ಕಾಷ್ಟಕರ್ಮ, ಚಿತ್ರಕರ್ಮ, ಪತ್ರಕರ್ಮ, ಪ್ರತಿಮಾಲಕ್ಷಣ’ ಮುಂತಾದ ವಿದ್ಯೆಗಳಲ್ಲಿ ಹಸ್ತಕೌಶಲವುಳ್ಳವರಾಗಿದ್ದಾರೆಂದು ಶಾಸನ ಬಣ್ಣಿಸುತ್ತದೆ.[1] ನಾಗಮಂಗಲದ ಒಂದು ಶಾಸನದಲ್ಲಿ (ಕ್ರಿಶ. ೭೭೬ -೭೭) ಒಂದು ಶಾಸನವಂತೂ “ಸರ್ವಕಲಾಧಾರಭೂತ ಚಿತ್ರಕಲಾಭಿಜ್ಞೇಯ ವಿಶ್ವಕರ್ಮಾಚಾರ್ಯ್ಯೇಣ.”[2] ಎಂದು ವರ್ಣಿಸುತ್ತದೆ. ಸರಸ್ವತಿ ಗಣದಾಸಿಗಳೆಂದು ಸರಸ್ವತಿ ಗಣಮಿತ್ರರೆಂದು ಕೂಡ ಶಾಸನಗಳಲ್ಲಿ ಕರೆಯಲಾಗಿದೆ.[3]

ಕುತೂಹಲದ ವಿಷಯವೆಂದರೆ ಆಯಾ ಪ್ರಾದೇಶಿಕ ಅಧ್ಯತೆಗಳ ಹಿನ್ನೆಲೆಯಲ್ಲಿ ಈ ಜನವರ್ಗಕ್ಕೆ ಪ್ರಾಶಸ್ತ್ಯಗಳು ದೊರಕಿದರೂ ಶಿಲ್ಪಾಚಾರ್ಯರಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಉಳಿದ ನಾಲ್ಕು ಕಸುಬುನವರಿಗೆ ಸಿಕ್ಕಿಲ್ಲ. ಅದರಲ್ಲಂತೂ ಕುಂಚುಗಾರರು ಶಾಸನಗಳಲ್ಲಿ ಕಾಣುವುದು ಬಲು ಅಪರೂಪ. ತಮ್ಮ ಕೌಶಲ್ಯತೆಯೊಂದಿಗೆ ರಾಜಮರ್ಯಾದೆಯನ್ನು ಪಡೆದಂತೆ ವೃತ್ತಿ ಹಾಗೂ ಆಯದ ಹಿನ್ನೆಲೆಯಲ್ಲಿ ಈ ಕಸುಬಿನವರು ಅಷ್ಟೆ ಪ್ರಮಾಣದ ಅವಮರ್ಯಾದೆಗೂ ಉಪೇಕ್ಷೆಗೂ ಒಳಗಾದರು. ಮಹಾಕಾವ್ಯ, ಶಾಸ್ತ್ರ, ಪುರಾಣ, ಮುಂತಾದ ಧರ್ಮ ಶಾಸ್ತ್ರದ ಕೃತಿಗಳಲ್ಲಿ ಈ ಪಂಚಕಸುಬುದಾರರ ಬಗ್ಗೆ ಹೇಳಿದರೂ ಸಾಮಾಜಿಕ ವಾಸ್ತವದಲ್ಲಿ ಇವರಿಗೆ ಸಿಕ್ಕ ಸ್ಥಾನಮಾನ ಅಂತಹ ಗೌರವಯುತದ್ದೇನಾಗಿರಲಿಲ್ಲ. ಆದರೂ ಅಲ್ಲಲ್ಲಿ ತಮ್ಮ ಕಲಾ ನೈಪುಣ್ಯತೆ ಸ್ವಾರ್ಥರಹಿತ ಕಠಿಣ ನಿಷ್ಠೆ. ದೈಹಿಕ ದುಡಿಮೆ, ದೇಸೀ ಕೌಶಲ, ಸೃಜನಶೀಲತೆಯಿಂದ ಹೆಸರು ಮಾಡಿದ್ದು ಹಾಗೂ ಗೌರವಪಡೆದದ್ದು ಕಾಣುತ್ತದೆ. ಈ ಸಂಗತಿಗಳೇ ಕೃಷಿ ಹಾಗೂ ಕಸುಬಿನ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿವೆ ಎನ್ನುವುದು ಗಮನಾರ್ಹ

ಕಮ್ಮಾರ, ಅಕ್ಕಸಾಲಿಗ, ಬಡಗಿ, ಕುಂಚುಗಾರ ಹಾಗೂ ಶಿಲ್ಪಗಳು ಎಲ್ಲರೂ ಪಾಂಚಾಳ ಕುಲಕ್ಕೆ ಸೇರಿದವರು. ಚಿನ್ನದ ಕೆಲಸ ಮಾಡುತ್ತಿದ್ದ ಅಕ್ಕಸಾಲಿಗಳೂ ಅಪರೂಪಕ್ಕೆ ಒಮ್ಮೊಮ್ಮೆ ಶಾಸನಗಳನ್ನು ಕೆತ್ತಿದ್ದು ಇದೆ.[4] ರಾಜರು ಟಂಕಸಾಲೆಗಳಲ್ಲಿ ನಾಣ್ಯ ತಂಕಿಸಲು ನೇಮಿಸಿಕೊಳ್ಳುತ್ತಿದ್ದರು.[5] ಇಂದಿಗೂ ಪ್ರಾದೇಶಿಕವಾಗಿ ಟಂಕಾಸಾಲಿ ಎಂದು ಕರೆಸಿಕೊಳ್ಳುವ ಇವರಿಗೆ ರಾಜರು ವಾರ್ಷಿಕ ವೇತನ ಕೊಡುತ್ತಿದ್ದ ಬಗೆ ತಿಳಿದು ಬರುತ್ತದೆ.[6] ಇನ್ನು ಕಬ್ಬಿಣ ಕೆಲಸ ಮಾಡುತ್ತಿದ್ದ ಕಮ್ಮಾರರ ಬಗ್ಗೆ ಮರದ ಕೆಲಸದ ಬಡಗಿಗಳ ಬಗ್ಗೆ, ಮತ್ತು ಇವರಿಗೆ ಶಾಶ್ವತವಾದ ದತ್ತಿಗಳನ್ನು ಕೊಟ್ಟ ಬಗ್ಗೆ ಡಾ. ಚಿದಾನಂದಮೂರ್ತಿಯವರು ವಿವರಿಸುತ್ತಾರೆ.[7]

ವಾರ್ಷಿಕ ಆಯ ಪದ್ಧತಿ ಬಳಕೆಯಲಿದ್ದ ಬಗ್ಗೆ ಹಲವು ಶಾಸನಗಳು ತಿಳಿಸುತ್ತವೆ. ಈ ಆಯ ಪದ್ಧತಿ ಎನ್ನುವುದು ಬರೀ ಕೂಲಿಯಾಗಿರಲಿಲ್ಲ ಅದಕ್ಕೆ ದೀರ್ಘಕಾಲಿಕವಾದ ಆಯಾಮಗಳಿದ್ದವು. ಪ್ರಾಪ್ತಿಗಿಂತ ಹೆಚ್ಚು ಸಂತೃಪ್ತಿ ಮತ್ತು ಸಾಮುದಾಯಿಕ ಗುಣಗಳು ಅವುಗಳಿಗಿದ್ದವು. ಹೀಗಾಗಿ ಆಯಗಾರರು ಬರೀ ಕಾರ್ಮಿಕರಾಗಿರದೇ ಅವನೊಬ್ಬ ಜವಾಬ್ದಾರಿಯುತ ಬಾಬುದಾರರಾಗಿದ್ದರು. ಸಮಾಜದ ನೀತಿ ನಿರೂಪಣೆಯಲ್ಲಿ ಸಕ್ರಿಯ ಪಾಲುದಾರನಾಗಿದ್ದ ಬಗ್ಗೆ ಕನ್ನಡದ ಹಲವು ಶಾಸನಗಳು ತಿಳಿಸುತ್ತವೆ. ಹಳ್ಳಿಗಳಲ್ಲಿ ಕುಂಬಾರಗೌಡ, ಕಂಬಾರಗೌಡ, ಬಡಿಗ್ಗೌಡ, ಪತ್ತಾರಗೌಡ ಎಂದೇ ಜನ ಕಸುಬುದಾರರನ್ನು ಸಂಬೋದಿಸುವುದು ವಾಡಿಕೆ. ಇವರು ಕೆಲಸಮಾಡುವ ಸ್ಥಳಗಳನ್ನು ಕುಂಬಾರಸಾಲಿ, ಕಂಬಾರಸಾಲಿ, ಬಡಿಗಸಾಲಿ, ಅಕ್ಕಸಾಲಿ ಎಂದು ಕರೆಯುವುದುಂಟು. ಸಾಮಾಜಿಕವಾಗಿ ಇವರೆಲ್ಲರಿಗೂ ತಮ್ಮದೇ ಆದ ಸ್ಥಾನಮಾನಗಳಿರುತ್ತವೆ.

ಆಯಾಗಾರಿಗೆ ನಿಗದಿತವಾದ ವಾರ್ಷಿಕ ಆಯ ಒಂದು ತೆರನಾಗಿದ್ದರೆ ಆಯಾ ಸುಗ್ಗಿಯ ಕಾಲಕ್ಕೆ ಹಾಗೂ ಸಂದರ್ಭಾನುಸಾರ ಮಾಡುವ ಕೆಲಗಳಿಗೆ ಪ್ರತ್ಯೇಕ ಫಲಾಫಲಗಳಿರುತ್ತಿದ್ದವು ಇವ್ವೆಲ್ಲವೂ ವಸ್ತು ಹಾಗೂ ಧಾನ್ಯರೂಪದಲ್ಲಿರುತ್ತಿದ್ದವು. ಸುಗ್ಗಿಯ ಸಂದರ್ಭಗಳಾದ – ಹೊಲದಲ್ಲಿ ಜೋಳ ಕೀಳುವಾಗ, ತೆನೆಗಣಿಕೆ, ಶೇಂಗಾ ಬಿಡಿಸುವಾಗ ಶೇಂಗಾ, ತೆನೆ ಮುರಿಯುವಾಗ ತೆನೆ, ರಾಶಿಮಾಡುವಾಗ ಜೋಳ – ಕಾಳು ಹೀಗೆ ಎಲ್ಲವನ್ನು ಆಯಾಗಾರರು ಹೊಲಕ್ಕೆ ಹೋಗಿ ಸಂಗ್ರಹಿಸುತ್ತಿದ್ದರು. ದನಕರುಗಳಿದ್ದರೆ ಕಣಿಕೆ (ಸೊಪ್ಪೆ) ಹೊಟ್ಟು ಕೂಡ ಹೊತ್ತು ಕೊಂಡು ಬರುತ್ತಿದ್ದರು ಬಡಿಗ – ಕಮ್ಮಾರರು ಬಿತ್ತುವ ಹೊಲಗಳಿಗೆ ಭೇಟಿ ನೀಡಿದಾಗ ಬಿತ್ತುವ ಸಲಕರಣೆಗಳಿಗೆ ಏನಾದರೂ ತೊಂದರೆಯಾದಲ್ಲಿ ಅದನು ದುರಸ್ಥಿಮಾಡಿ ಬಿತ್ತನೆಯನ್ನು ಸುಗಮಗೊಳಿಸಿಕೊಡುತ್ತಿದ್ದರು ಅದಕ್ಕಾಗಿ ರೈತರು ಬಿತ್ತುವ ಪದಾರ್ಥಗಳಾದ ಜೋಳ, ಗೋಧಿ, ಶೇಂಗಾ, ಹೆಸರು, ಅಥವಾ ಕಡಲೆ ಇತ್ಯಾದಿ ಆ ಸಂದರ್ಭದಲ್ಲಿ ಬಿತ್ತುತ್ತಿದ್ದ ಬೀಜಗಳನ್ನು ಪ್ರತಿಯಾಗಿ ನೀಡುತ್ತಾರೆ. ಇದೊಂದು ಅಲಿಖಿತ ಹಾಗೂ ಅಘೋಷಿತ ನಿಯಮವಾಗಿರುತ್ತದೆ.

ಆಯಾಗಾರರ ಮೇಲೆ ರೈತರಿಗೆ ವಿಶೇಷ ಕಾಳಜಿ ಇರುತ್ತದೆ. ಆಯಾಗಾರರು ಅಷ್ಟೇ ತಮ್ಮನ್ನು ‘ಊರ ಹೆಣ್ಣುಮಕ್ಕಳೆಂದು ಕರೆದುಕೊಳ್ಳುತ್ತಾರೆ’. ಆಯಾಗಾರರಿಗೆ ದಾನ ನೀಡಿದಷ್ಟು ಭೂತಾಯಿ ಹುಲುಸು ನೀಡುತ್ತಾಳೆಂಬ ನಂಬಿಕೆ ರೈತದಾಗಿರುತ್ತದೆ. ಆಯಾಗಾರರು ಊರ ಹೆಣ್ಣುಮಕ್ಕಳೆಂದು ಹೇಳಿಕೊಳ್ಳುವಲ್ಲಿ ನಿಜವಾಗಲು ದೊಡ್ಡ ಅರ್ಥವಿದೆ ಎಂಬುದು ಗಮನಾರ್ಹ. ಒಂದು ಜಾನಪದ ತ್ರಿಪದಿಯಲ್ಲಿ ಬರುವಂತೆ

ಕಡೆಯ ಬಲಕಿನ ತಾಳ ಎಡೆಯಾಯ್ತು ಅರಸನಿಗೆ
ಎಡಗಡೆಯ ತಾಳ ಪಶುಪಕ್ಷಿ ಜೀವನಕೆ
ನಡುವಿನ ತಾಳ ರೈತನಿಗೆ [8]

ಒಂದು ತಾಳದ ಬೆಳೆಯು ಬಂದವರಿಗಿಲ್ಲೆನ್ನೆ
ಮುಂದು ಕೊಡುಗೈಯ್ಯ ಒಕ್ಕಲಿಗ| ನಾಡೊಳು
ಹೊಂದಿ ದಾಸೋಹ ರೈತನಿಗೆ [9]

ಎನ್ನುವಲ್ಲಿ ಉತ್ಪಾದನೆಯ ಒಂದು ಭಾಗ ರೈತನಿಗೆ ಸಲ್ಲುತ್ತದೆ. ಉಳಿದ ಮೂರು ಭಾಗ ಕರ-ತೆರಿಗೆ, ಧಾನ ಧರ್ಮ, ಪಶುಪಕ್ಷಿಗಳಿಗೆ ದಕ್ಕುತ್ತದೆ. ಹೀಗೆ ಉತ್ಪಾದನೆಯ ಬಹುಭಾಗ ಪರೋಪಕಾರಕ್ಕೆ ಬಳಕೆಯಾಗುವುದು ಸಾಮುದಾಯಿಕ ಪ್ರವೃತ್ತಿಗಳನ್ನು ಎತ್ತಿ ತೋರಿಸುತ್ತದೆ.

ಬಡಿಗೇರಣ್ಣ ಕಣಕ ಬಾರೋ ಬಣ್ಣದ ರ್ಯಾಗೋಲ ಕಣಕ ತಾರೋ
ಕುಂಬಾರಣ್ಣ ಕಣಕ ಬಾರೋ ತುಂಬಿದ ಕೊಡ ಕಣಕ ತಾರೋ
ಮಾದಿಗರಣ್ಣ ಕಣಕ ಬಾರೋ ಹಂತಿಗಣ್ಣಿ ಹೊತ್ತ ತಾರೋ [10]

ಎಂತ್ಯಾದಿಯಾಗಿ ಆಯಗಾರರನ್ನು ಕೃಷಿಕ ಕರೆಯುತ್ತಾನೆ. ಹಂಚಿ ತಿನ್ನುವ ನೆಲೆಗಳು ಇಲ್ಲಿ ಕಾಣುತ್ತವೆ. ಉತ್ಪಾದನೆ ವ್ಯಕ್ತಿಯದಾದರೂ ಅದರ ಫಲ ಸಮಷ್ಟಿಗೂ ಸಿಗಬೇಕು ಎನ್ನುವ ಉದಾತ್ತತೆ ಇಂಥಲ್ಲಿ ಕಾಣುತ್ತದೆ. ಇಂಥ ಮಾನವೀಯ ಮೌಲ್ಯಗಳನ್ನು ಶಾಸನ ಬರಹಗಳು ಅಳವಡಿಸಿಕೊಂಡಿರುವುದು ಗಮನಾರ್ಹ.

ಆಯ ಪದ್ಧತಿಯು ಪ್ರಾಚೀನ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದ ಬಗ್ಗೆ ಲಿಖಿತ ಆಧಾರಗಳು ಸಿಗುವುದು ಕ್ರಿ. ಶ. ಸು. ೧೦೩೫ರ ಒಂದು ಶಾಸನದಲ್ಲಿ. “ಅಕ್ಕಸಾಲಿಯಾಯ ಉಪ್ಪೊಳಗಾಗಿ ಧಾನ್ಯಂಗಳೊಳೆಲ್ಲಂ”[11] ಕ್ರಿಶ. ೧೦೭೭ರ ವೀರಗಲ್ಲೊಂದರಲ್ಲಿ ಆಳ ಎಂಬ ಅಕ್ಕಸಾಲಿ ಮತ್ತು ರಾಯ ಎಂಬ ಅಗಸ ಇಬ್ಬರು ಊರಿನವರಿಂದ ಆಯ ಪಡೆದುಕೊಂಡ ವಿವರ ಸಿಗುತ್ತದೆ. ಕ್ರಿ. ಶ. ೧೦೯೮-೯೯ರ ಒಂದು ಶಾಸನದಲ್ಲಿ ಅಕ್ಕಸಾಲಿ ಭಾಗೋಜಿಯ ಭಾಗದಾಯದ ಹೆಸರಿದೆ. [12] ಕ್ರಿ. ಶ. ೧೧೩೦ರ ಶಾಸನದಲ್ಲಿ ಅಕ್ಕಸಾಲೆ ಕಮ್ಮಾರನಾಗಿದ್ದ ಕದಿಟ್ಟಯನಾಥಾಚಾರಿಯ ಉಲ್ಲೇಖ ಬರುತ್ತದೆ:[13] ಕ್ರಿ. ಶ. ೧೦೭೪ ಶಾಸನದಲ್ಲಿ ‘ತಿಳಪಳ್ಳಿಯ ಬೀನೋಜನ ಮಗಂ ಕಾಳೋಜ ಶಾಸನಮಂ ಮಾಡಿದ ಬೆಸಕ್ಕೆ ಸೋಮೇಶ್ವರ ಪಂಡಿತರ್ ವರ್ಷಂ ಪ್ರತಿ ಅವಲಕ್ಕಿಗೆ ಖಣ್ಡುಗ ಭತ್ತಮಂ ಕೊಟ್ಟರ್’ ಎಂದು ಬರುತ್ತದೆ. ಕ್ರಿ. ಶ. ೧೦೭೫ ಒಂದು ಶಾಸನದಲ್ಲಿ ಶಿಲ್ಪಿ ಬೀರೋಜಂಗೆ ಸರೋಂಜಗೆ ರಾಯಗಟ್ಟಿಯಿಂ ಬಡಿಗ ಮತ್ತರು ೧೨ ಸಿಡೀ ಹುಣಸೆಯಿಂ ಪಡುವ ಮತ್ತರು ೧೨ ತೋಂಟ ಮತ್ತರು ೨ಎನ್ನುವ ಉಲ್ಲೇಖ ಬರುತ್ತದೆ. ಕ್ರಿ. ಶ. ೧೧೬೩ ಶಾಸನದಲ್ಲಿ ಕಲುಕುಟಿಗ ಕೇತೋಜಂಗೆ ಸ್ಥಾನಿಕರಿಫುತ್ತು ಕಮ್ಮ ಗದ್ದೆಯನುಂ ಬಳಿಯೆಂ ಸಲಿಸುವರು. ಕ್ರಿ. ಶ. ೧೭೧೨ ರ ಕೃಷ್ಣರಾಜು ಪೇಟೆ ತಾಲೂಕು ಬೈರಾಪುರದ ಶಾಸನದಲ್ಲಿ ಪಾಂಚಾಳರಿಗೆ ಅಯಿ ಫಂಡುಗ ಗದ್ದೆಯನ್ನು ಬೈರಾಪುರದ ಮಹಾ ಜನರು ನೀಡಿರುವ ವಿವರ ಸಿಗುತ್ತದೆ. ಕ್ರಿ. ಶ. ಈ ಎಲ್ಲ ಮಾಹಿತಿಗಳು ಆಕ್ಕಸಾಲೆ. ಕಮ್ಮಾರಿಕೆ ಬಡಿಗ ವೃತ್ತಿಗಳು ಒಂದೇ ಕುಟುಂಬದ ವೃತ್ತಿಯಾಗಿದ್ದು ಒಂದೇ ಮೂಲದವೆನ್ನುವುದನ್ನು ದೃಢಪಡಿಸುತ್ತವೆ. ಇಂದಿಗೂ ನನ್ನ ತಂದೆ, ಹಾಗೂ ಚಿಕ್ಕಪ್ಪ ಇವರು ಬಡಿಗತನ, ಕಮ್ಮಾರಿಕೆ, ಅಕ್ಕಸಾಲಿಕೆ ಮೂರು ಕೆಲಸವನ್ನು ನಿರ್ವಹಿಸುವುದು ಇದಕ್ಕೆ ಜ್ವಲಂತ ನಿದರ್ಶನ. ಅಂದರೆ ಈ ಆಯಾಗಾರರು ಪರಸ್ಪರ ಬೇರೆ ಬೇರೆ ಅಲ್ಲ. ಅಗತ್ಯಕ್ಕನುಗುಣವಾಗಿ ಜವಾಬ್ದಾರಿಗಳನ್ನು ಅವರು ನಿರ್ವಹಿಸುತ್ತಿದ್ದರು. ಹೀಗಾಗಿ ಇಂಥ ಆಯಾಗಾರರಿಗೆ ಸಮಾಜದಲ್ಲಿ ಔಚಿತ್ಯವಾದ ಗೌರವಗಳು ಸಿಗುತ್ತಿದ್ದವು.

ಆಳಂದ ತಾಲ್ಲೂಕಿನ ಮದಿಹಾಳ ಶಾಸನದಲ್ಲಿ (ಕ್ರಿ. ಶ. ೧೧೮೪) ಸ್ವಯಂಭು ಕೋಟಿ ಶಂಕರ ದೇವರಿಗೆ ಸೂಳೆಗೇರಿಯ ಭೂಮಿಯಂ ಆ ದೇವರ ಪುರದಲು ದಂಡಿದೋಷ, ಮಡಿವಳ, ಬಡಗಿ, ಸಿಪ್ಪಿಗ, ಕಮ್ಮಟಿ ಇನಿತುಮಂ ಸರ್ವಭಾದಾ ಪರಿಹರವಾಗಿ ಧಾರಾ ಪೂರ್ವಕಂ ಮಾಡಿಕೊಟ್ಟರು[14] ಎನ್ನುವಲ್ಲಿ ಆಯಗಾರರಿಗೆ ಭೂದಾನ ನೀಡಿದ ವಿವರವಿದೆ. ಇದರಲ್ಲಿ ಬಡಿಗ, ಕಂಬಾರರಂತೆ ಉಳಿದ ಜಾತಿಯ ಆಯಗಾರರ ಹೆಸರು ಇರುವುದು ವಿಶೇಷ. ರಾಷ್ಟ್ರಕೂಟರ ಕಾಲಕ್ಕೆ ಸೇರಿದ ಒಂದು ಶಾಸನದಲ್ಲಿ ಸುಧಾಶೀಳ ಕಾಷ್ಟ್ರೇಷ್ಟಕಂ ಚಿತ್ರಕಾಂಚನ ಲೋಹದಿ ಕಟ್ಟಸ್ಫಟಿತ ನವಕರ್ಮ XXX ತುರಾ ಶ್ರಮXXX ಗಿಗಳ XXX ರ್ತ್ಥಿಗೆ ಹೊತ್ತಾಗೆಗಾ (ಕ್ಷರಾರ್ತ್ಥಿ) ಗಾಗಾರಕಂ ಬಿಟ್ಟಕಯಿ ಎನ್ನುವ ಮಾತು ಬಡಿಗ ಕುಂಬಾರರಂಥ ಕುಶಲಿ ಕರ್ಮಿಗಳಿಗೆ ಹೊತ್ತಿಗೆ ಅನ್ನಕ್ಕಾಗಿ ಭೂಧಾನ ನಿಡಿದ ಸಂಗತಿ ಗಮನಾರ್ಹ. ಕ್ರಿ. ಶ. ೧೨೧೫ರ ನಾಗಾವಿ ನಗರದ ಕಂಮ್ಮಾರ ಬೊಮ್ಮೋಜನು ಶ್ರೀಮಹಾಬಲ ದೇವರ ಕಮ್ಮಾಟಕ್ಕೆ ಕೆಲಸವನ್ನು ಮಾಡಿ ಆದಾಯ ಪಡೆಯುತ್ತಾನೆ.[15]

ವಿಜಾಪುರದ ಖ್ವಾಜಾಜಹಾನ್‌ಮಸೀದೆ ೨ ನೇಯ ಕಂದದಲ್ಲಿ ದೊರೆತ ಶಾಸನದಲ್ಲಿ (ಕ್ರಿ. ಶ. ೧೨೨೯) ಸ್ಥಾನಚಾರ್ಯ ಸರ್ವಜ್ಞರಾಶಿ ದೇವನಿಂದ ಸ್ವಯಂಭೂ ಶಿವಲಿಂಗ ದೇವಾಲಯಕ್ಕಾಗಿ ಬಡಿಗಿ ಕಾಮೋಜನ ಮಗ ಮಲ್ಲನಿಗೆ ಭೂದಾನ ನೀಡಿದ ವಿವರವಿದೆ.[16] ಕ್ರಿ. ಶ. ೧೧೮೫ ಲಕ್ಕುಂಡಿ ಶಾಸನದಲ್ಲಿ ಶಿಲ್ಪಿಗಳಿಗೆ ಸಂಬಂಧಿಸಿದ ಅನೇಕ ವಿವರಗಳಿವೆ. ಆ ಊರಲ್ಲಿ ಪಾಂಚಾಳರ ಒಂದು ವೃತ್ತಿಸಂಘ ಇದ್ದಿತೆಂದು ಕಾಣುತ್ತದೆ. ಅಲ್ಲಿಯ ನೂರಿಪ್ಪತ್ತು ಶಿಲ್ಪಿಗಳಲ್ಲಿ ಅಚ್ಚಿನ ಮೊಳೆಯವರು, ಬೆಳ್ಳಿಗಮ್ಮಟದವರು, ಬಡಿಗ, ಕಮ್ಮಾರರು ಇದ್ದರು. ಪತ್ರ ಚಿತ್ರಕುಶಳರಾಗಿದ್ದ ಅವರು ಕಮ್ಮಟ ಜಿನಾಲಯಕ್ಕೆ ದತ್ತಿ ಕೊಡುತ್ತಾರೆ.[17]

ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದಲ್ಲಿರುವ ವೀರಗಲ್ಲಿನ ಮೇಲಿರುವ ಒಂದು ಶಾಸನ ಈ ದೃಷ್ಟಿಯಿಂದ ಗಮನಾರ್ಹವಾದದ್ದು. ಕ್ರಿ. ಶ. ೧೪೨೯ ಕ್ಕೆ ಸಲ್ಲುವ ಈ ಶಾಸನದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ದಾನ ನೀಡಿದ ವಿವರಗಳಿವೆ. ಸಮಸ್ತ ವೀರ ಪಾಂಚಾಳರು ಸೇರಿಕೊಂಡು ಪೆರುಗಾಳ ಮಲ್ಲೋಜ ಬಯರೋಜರಿಗೆ ಈ ದಾನವನ್ನು ಬಿಟ್ಟಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಉದ್ಯೋಗಸ್ಥರ ಕುಲದೇವಿಯಾದ ಕಾಳಿಕಾದೇವಿಯ ಪ್ರಸ್ತಾಪ ಶಾಸನದ ಎರಡು ಹಾಗೂ ಇಪ್ಪತ್ಮೂರನೆಯ ಸಾಲಿನಲ್ಲಿ ಬಂದಿರುವುದು.

೧೩. . . . . . ಸಮಸ್ತ ನಗರ ವೀರಪಾಂಚಾಳ ಊ
೧೪ ಪೆರುಗಳ ಮಲ್ಲೋಜ ಬಯಿರೋಜನವರಿಗೆ ಕೊಟ್ಟಸಾ
೧೫ ಸನದ ಕ್ರಮವೆಂತೆಂದರೆ ಸಂವತರೆಹಳ್ಳಿ ಸರ
೧೬ ಮಹಾಳಿ ಹಿರಿಯುರ ಬಡಿಗೆ ಕಮ್ಮರಿಕೆ ಅಕ್ಕಸಾಲಿಕೆ
೧೭ ಪಾಂಚಾಳ ಕೊಲವರ್ತನೆ ಬೇಡಿಗೆಯೇನುಳವನು ಸರ್ವಮಾ
೧೮ ನ್ಯವಾಗಿ ಕೊಟೆಉ . . . . . [18]

ಬಂಗಾರ ಪೇಟೆ ತಾಲ್ಲೂಕಿನ ಮರಗಲ್ಲು ಶಾಸನದಲ್ಲಿ (ಕ್ರಿ. ಶ. ೧೪೩೦) ಮರಗಲ್ಲು ಗ್ರಾಮದ ಹಲವು ಪಾಂಚಾಳರು ಸೇರಿ ಸಂತೆಯನ್ನು ಕಟ್ಟಿಸಿ ಭೂಮಿ ಹಾಗೂ ತೆರಿಗೆಯನ್ನು ಮಾನ್ಯವಾಗಿ ಬಿಟ್ಟ ಉಲ್ಲೇಖಗಳು ದೊರೆಯುತ್ತವೆ.

೧೦. ವ ಮರಗಳಲು ಅಯಿವತ್ತಾರು ದೇಶದ ಸಾಲಿ
೧೧. ಮೂಲೆ ಸಮಸ್ತ ಹಲರು ಪಂಚಾಳಸಹಿತವಾಗಿ ಕೂ
೧೨. ಡಿ ಸಂತೆಯ ಕಟ್ಟಿಸಿದ ಸಂಬಂಧ ಆ ಸಂತೆಯ ಪ
೧೩. ಟ್ಟಣಸ್ವಾಮಿ ಚಿಯಿಯ ಬಸ್ಸಿಸೆಟ್ಟಿಗೆ ಮಾಂನ್ಯವಾಗಿ
. . . . . . . . . . .
. . . . . . . . . . .
೨೦. ಕಬ್ಬಿಣದಕೆಲಸ, ಮರಕೆಲಸ, ಅಕ್ಕಸಾಲೆ
೨೧. ಅಗಸ ನಾವಿಂದ ಹೊಲೆಯನು ಯಿಂ
೨೨. ತಿವರು ಸರ್ವಮಾನ್ಯ ಸಲಿಸುವರು.[19]

ದಾನ ನೀಡುವ ಹಾಗೂ ಪಡೆಯುವ ಸಂದರ್ಭದಲ್ಲಿ ಆಯಗಾರರಿಗೆ ಸಿಗುತ್ತಿದ್ದ ಮಹತ್ವ ಇದರಿಂದ ತಿಳಿದುಬರುತ್ತದೆ.

ಅದೇ ರೀತಿ ಹಂಪಿ ವಿರೂಪಾಕ್ಷ ದೇವಾಲಯದ ರಂಗಮಂಟಪದ ಉತ್ತರ ದ್ವಾರದಲ್ಲಿರುವ ಘಂಟೆಯ ಮೇಲೆ ಪ್ರಭವ ಸಂವತ್ಸರದಲ್ಲಿ ಈ ಘಂಟೆಯನ್ನು ಮಲಣರಸ ಮಾಡಿಸಿದ. ಈ ಘಂಟೆಯನ್ನು ಮಾಡೊದವರು ಬೊಂಮ್ಮಜ ಚಿಬಸ್ವಯನ ಮಗ ವೀರಣ ಮಾಡಿಸಿದರು. ಕಂಚಗಾರ ಬಸ್ವಯನು ಮಾಡಿದನು ಎಂದಿದೆ. (೧೮ನೇ ಶತಮಾನ)[20]

ಮಾಲೂರು ತಾಲ್ಲೂಕಿನ ತೇಕಲ್ಲು ಶಾಸನ (ಕ್ರಿ. ಶ. ೧೪೩೧) ದಲ್ಲಿ ಮಹಾ ಮಂಡಳೇಶ್ವರ ನಾದ ಸಾಳುವ ಗೋಪರಾಜವೊಡೆಯರ ಪ್ರಧಾನಿಯಾದ ಸಿಂಗಿರಾಜನು ತೇಕಲ್ಲಿನ ವರದರಾಜ ದೇವರ ಮುಖ ಮಂಟಪದ ಗೋಪುರಕ್ಕೆ ಬಾಗಿಲು ಮಾಡಿದ ಬಡಿಗ ಬೇಜೋಜದೇವನಿಗೆ. ಕಬ್ಬಿಣದ ಕೆಲಸ ಮಾಡಿದ ಕಮ್ಮಾರ ಅಂಗೋಜನಿಗೆ ಭೂದಾನ ನೀಡುತ್ತಾನೆ. ಅಷ್ಟೇ ಅಲ್ಲದೆ ಕುದುರೆ, ಸತ್ತಿಗೆಗಳನ್ನು ಲಾಂಛನವಾಗಿ ನೀಡಿದ ವಿವರಗಳು ದೊರೆಯುತ್ತವೆ.[21] ಇದರಿಂದ ವಿಧಿತವಾಗುವುದೇನೆಂದರೆ ಕಮ್ಮಾರ ಹಾಗೂ ಬಡಗಿ ವೃತ್ತಿಗಳು ಕೇವಲ ಕೂಲಿ ವೃತ್ತಿಗಳಾಗಿರಲಿಲ್ಲ ಎನ್ನುವುದು.

ಇತರ ಉಲ್ಲೇಖಗಳು

ಕ್ರಿ. ಶ. ೧೧೧೮ರ ಶಾಸನದಲ್ಲಿ ಕಮ್ಮಾರಿಕೆಯಿಂದ ದೊರೆಯುವ ಆದಾಯದಲ್ಲಿ ೧/೧೦ ಭಾಗದಂತೆ ದೇವರಿಗೆ ಆರ್ಪಿಸಿದ ವಿಷ್ಯ ಬರುತ್ತದೆ. ಕ್ರಿ. ಶ. ೧೦೯೯ ಶಾಸನದಲ್ಲಿ ‘ಕಮ್ಮರವಿಟ್ಟಿ’ ಎಂಬ ಪ್ರಯೋಗ ಕಮ್ಮಾರರು ಬಿಟ್ಟಿ ಕೆಲಸ ಮಾಡುತ್ತಿದ್ದ ವಿಷಯ ವನ್ನು ಸೂಚಿಸುತ್ತದೆ.31 ಕ್ರಿ. ಶ. ೧೧೮೯ರ ಗದಗ ತಾಲ್ಲೂಕಿನ ಹೊಂಬಳ ಗ್ರಾಮದ ಶಾಸನದಲ್ಲಿ ಕಂಚಗಾಱ ದೇವರ ಉಪಕರಣಗಣಳೆಲ್ಲವೂ ಕೂಲಿಯಂ ಕೊಳ್ಳದೆ ಮಾಡಿ ಕೊಡುವಂತಾಗಿ ಬಿಟ್ಟರು ಎಂದು ಬರುತ್ತದೆ. ಬಿಟ್ಟ ಬೆಸನ ಮಾಡುವುದು ಶೂದ್ರರು ಹಾಗೂ ಕಾರುಕರಗೆ ಬಿಟ್ಟ ವಿಷಯವಾಗಿತ್ತು. ಆದರೆ ಇಲ್ಲಿ ಕಮ್ಮಾರರು ಬಿಟ್ಟ ಕೆಲಸ ಮಾಡಿಕೊಡಬೇಕೆನ್ನುವ ಸಂಗತಿ ಕಂಬಾರರನ್ನು ಶೂದ್ರ ಸಮುದಾಯಗಳಲ್ಲಿ ಒಂದಾಗಿ ಪರಿಗಣಿಸಿದ್ದಾರೆ. ಎಂಬ ಸಂದೇಹ ಉಂಯಾಗಿತ್ತದೆ. ಆದರೆ ಬಹಳಷ್ಟು ಶಾಸನಗಲ್ಲಿ ಪ್ರಯೋಗವಾಗಿರುವ ಒಂಭತ್ತು ಪಣಕಟ್ಟಿನವರು ಅಷ್ಟಾದಶ ಪ್ರಜೆಗಳು ಎನ್ನುವ ಊರ ಪ್ರಮುಖ ಗುಂಪುಗಳಲ್ಲಿ ಒಂಭತ್ತು ಪನಕಟ್ಟನ ಎಡಗೈ ಗುಂಪಿನಲ್ಲಿ ಪಾಂಚಾಳರನ್ನು ಗುರಿತಿಸುತ್ತಾರೆ.

ಕ್ರಿ. ಶ. ೧೧೩೮ರ ಧಾರವಾಡ ಜಿಲ್ಲೆಯ ಮತ್ತೂರು ಗ್ರಾಮದ ಶಾಸನದಲ್ಲಿ ಕಮ್ಮನವಳ್ಳಿಯ ಜಕ್ಕಿಸೆಟ್ಟಿಯು ಮತ್ತೂರಿನ ಮೇಲೆ ದಾಳಿಮಾಡಿ ಹೆಣ್ಣುಮಕ್ಕಳನ್ನು ಅಪಹರಿಸಬೇಕೆಂದು ಕೊಂಡಾಗ ಆ ಗ್ರಾಮದ ಕಮ್ಮಾರ ಮಾಚನು ಅವನೊಂದಿಗೆ ಹೋರಾಟ ಮಾಡಿ ಅವನನ್ನು ಕೊಂದುದಲ್ಲದೇ ಆ ಹೋರಾಟದಲ್ಲಿ ಮರಣ ಹೊಂದಿದನೆಂದು ಹೇಳಿದೆ. ಗೊಟ್ಟುಗೊಂಡ ಗ್ರಾಮದ ಜಕ್ಕಿಗೌಡ, ಕಂಕಗೌಡ ಮತ್ತು ಅಲ್ಲಿಯ ಸಮಸ್ತ ಪ್ರಜೆಗಳು ಸೇರಿ ಮಾಚನ ಅಣ್ಣನಿಗೆ ೨೨ ಕಮ್ಮಬೂಮಿ ಮತ್ತು ೫೦ ಕಮ್ಮ ಹಕ್ಕಲನ್ನು ದಾನ ನೀಡಿದ ವಿಷಯ ಬರುತ್ತದೆ. ಹಾಗೆ ಕ್ರಿ. ಶ. ೧೧೫೨ರ ಧಾರವಾಡ ಜಿಲ್ಲೆಯ ಮತ್ತೊಂದು ಶಾಸನದಲ್ಲಿ ಗಮ್ಮಾರ ಗಳಯಾನೆಂಬ ಮಹಾಯೋಧನು ಯುದ್ಧದಲ್ಲಿ ಹೋರಾಡಿ ಮಡಿದ ವಿಷಯ ಬರುತ್ತದೆ.

ಕ್ರಿ. ಶ. ೧೨ನೇ ಶತಮಾನಕ್ಕೆ ಸೇರಿದ ಹಾವೇರಿ ತಾಲ್ಲೂಕಿನ ದೇವಿಹೊಸೂರಿನ ವೀರಗಲ್ಲು ಶಾಸನದಲ್ಲಿ ಸರ್ವ ನಮಸ್ಯದನಾದಿಯಗ್ರಹಾರಂ ದೆಯ್ಯದ ಪೊಸವೊರಂ ಶ್ರೀ ಮನ್ಮಹಮಂಡಳೇಶ್ವರ ಕೀರ್ತಿ ದೇವರಸ ನಿರದುತರುವ ಕೊಂಡ ಹೋಹಲ್ಲಿ ಅಕ್ಕಸಾಲಿ ದಾಸೋಜಂ ಮಾಱುಂ ತಿರಿರ್ಚ್ಚಿಕಾದಿ ಶ್ರೀ ಸಾಸಿರ್ವ್ವರ, ಶ್ರೀ ಪಾದಶರಣೆಂದು ಸುರಲೋಕ ಪ್ರಾಪ್ತನಾದ ಉಲ್ಲೇಖವಿದೆ. ಇವನ ಸ್ಮರಣೆಗಾಗಿ ವೀರಗಲ್ಲು ಹಾಕಿಸಲಾಗಿದೆ.

ಕ್ರಿ. ಶ. ೧೧೩೮ರ ಹೊಯ್ಸಳ ವಿಷ್ಣುವರ್ಧನ ಕಾಲಕ್ಕೆ ಸೇರಿದ ಬೊಮ್ಮನಹಳ್ಳಿ ಶಾಸನದಲ್ಲಿ ಕಿರಿಯ ಬಸವಾಚಾರಿ ಸಾರ್ವಜನಿಕರಿಗಾಗಿ ಕೆರೆ ಹಾಗೂ ದೇವಾಲಯ ಕಟ್ಟಿಸಿ ತಾನೇ ತಪ್ಪಸ್ವಿಯಾಗಿ ಧರ್ಮ ಪಾಲನೆ ಮಾಡಿದ ಉಲ್ಲೇಖವಿದೆ. ಅದೇ ರೀತಿ ಕ್ರಿ. ಶ. ೧೧೮೬ರ ಶಾಸನದಲ್ಲಿ ಬಡಿಗ ಕಲ್ಲೋಜನು ತನಗೆ ಬರುವ ಕೂಟುಯಲ್ಲಿಯೇ ಹೊಸೂರು ಮೋರಕೇಶ್ವರ ನಿತ್ಯ ನೈವೇಧ್ಯಕ್ಕಾಗಿ ಅಕ್ಕಿಯನ್ನು ಶ್ರೀ ಆಗಸ್ತ್ಯ ಮುನಿಗಳ ಕಾಲ್ತೊಳೆದು ದಾನ ಬಿಡುತ್ತಾನೆ. ಕ್ರಿ. ಶ. ೧೪೮೦ರ ಶಾಸನವೊಂದರಲ್ಲಿ ಬಡಿಗಿ ಲಿಂಗೋಜನು ಜಗಳೂರು ತಾಲ್ಲೂಕಿನ ನಿಬಗೂರಿನಲ್ಲಿ ಆಂಜನೇಯ ಗುಡಿಥಿ ಕೆಲಸ ಮಾಡುತ್ತಾನೆ. ಅದಕ್ಕಾಗಿ ಊರಗೌಡ ಅವನಿಗೆ ಅರವತ್ತು ಒಕ್ಕಲು ಮಾನ್ಯ ನೀಡುತ್ತಾನೆ.

ಕ್ರಿ. ಶ. ೧೪೩೧ ಮಾಲೂರು ತೇಕಲ್ಲು ಗ್ರಾಮದ ವರದಾರಾಜ ಸ್ವಾಮಿ ದೇವಾಸ್ಥಾನದಲ್ಲಿ ದೇವೂಜ ಎಂಬ ಬಡಗಿಯ ಗುಡಿಗೆ ಸಂಬಂಧಿಸಿದ ಮರ ಕೆಲಸ ಮಾಡಿದ್ದಕ್ಕಾಗಿ ಗದ್ದೆ. ಹೊಲ ಕೊಡಲಾಗಿದೆ ಎಂದು ಉಲ್ಲೇಖವಿದೆ. ಕ್ರಿ. ಶ. ೧೪೧೮ರ ಶಾಸನದಲ್ಲಿ ವೀರ ಪಂಚಾಳರು ವಿಜಯನಗರದ ಹರಿಹರ ರಾಯನಿಗೆ ಸಿಂಹಾಸನವನ್ನು ಮಾಡಿಕೊಟ್ಟಿದ್ದಕ್ಕಾಗಿ ರಾಜ ಮೆಚ್ಚಿ ಎತ್ತು, ಎಮ್ಮೆ, ಗಾಡಿ. ಆಭರಣ ಮುಂತಾದವುಗಳ ಮೇಲೆ ಪಾಂಚಾಳರ ಕಟ್ಟಬೇಕಾಗಿದ್ದ ತೆರಿಗೆಯನ್ನು ಮನ್ನಾಮಾಡುವ ಉಲ್ಲೇಖ ದೊರೆಯುತ್ತದೆ.

ಕ್ರಿ. ಶ. ೧೨೧೯ರ ಅಬಲೂರು ಶಾಸನದಲ್ಲಿ ಬಡಗಿ ಮಾಚ ಹಾಗೂ ಹೋಮ ಎನ್ನುವ ಅಣ್ಣತಮ್ಮರ ವಿವರ ಬರುತ್ತದೆ.

ವ || ಬೀರಗವುಡಿನ ಬೆಸವರಂ ಬಡಗಿ ಕೇತೋಜನ ಮಕ್ಕಳು ಮಾಚಂಗೋಮಂಗಳು ಮಾಡಿದ ವೀರ ಮೆಂತೆಂದೆಡೆ

ಕಂ || ಘುಟ್ಟಿಸಿ ನೂಂಕಿದ ಜಾಜಿಯ
ಥಟ್ಟಂ ಕಟ್ಟಾಳು ಬಡಗಿ ಮಾಚಂ ತಾಗಲ್
ನಿಟ್ಟಿಸಿ ಗೋಮನು ಇಸೆ ಪಡ
ಲಿಟ್ಟುದು ತತ್ಕ್ಷಣದಿ ವೈರಿ ಬಳಸಿನಿತನಿತಂ

ಸೋದರರಿಬ್ಬರ ವೀರಂ
ಮೇದಿಗಚ್ಚರಿಯಿದೆನಿಸಿ ಧುರದೊಳು ಪಲರಂ
ಕಾದಿ ತವೆಕೊಂದು ಸ್ವರ್ಗ್ಗ
ಕ್ಕೋದರ್ಜ್ಜವವೆಸೆಯ ಮಾಚನುಂ ಗೋಮಂ32

ಮದ್ಧೇಬಿಹಾಳ ತಾಲ್ಲೂಕಿನ ಹುಲ್ಲೂರು ಶಾಸನದಲ್ಲಿ ನಾದುಗಂಡೆಯ ಬಯಿಚೋಜನ ಮಗ ಗೋಪಣನು ಕುಲುಮೆಯಯಿಕುವ ಮೂಲಸ್ಥಾನದ ಗುಡಿ ಪಲುವರದ ಎನ್ನುವ ಉಲ್ಲೇಖ ಬರುತ್ತದೆ.[22] ಕಂಚಾಗಾರ ಕೀವಿಶೆಟ್ಟಿ[23] ಶಿಲ್ಪಿರೇವಯ್ಯ[24] ಅಕ್ಕಸಾಲಿ ಭಾಗೋಜನ[25] ಹೊಲದ (ಸು. ೧೪ನೇ ಶತಮಾನ) ಉಲ್ಲೇಖಗಳು ಅಭ್ಯಾಸಾರ್ಹವಾದಂಥವು. ಕ್ರಿ. ಶ. ಸು. ೮೮೩ರ ಒಂದು ಶಾಸನದಲ್ಲಿ ಒಳಗೊಂದೆಯ ಗಾಮುಂಡರು ಇತರರು ಸೇರಿ ಕೆರೆಗೆ ಸೇರಿದ್ದ ಬೂಮಿಯಲ್ಲಿ ಸ್ಪಲ್ಪ ಭಾಗವನ್ನು ಕುಲುಮೆಗೆ ಕೊಟ್ಟ ವಿವರ ಸಿಗುತ್ತದೆ. ಕ್ರಿ. ಶ. ಸು ೧೪-೧೫ ನೇ ಶತಮಾನಕ್ಕೆ ಸೇರಿರಿರಬಹುದಾದ ಈ ಶಾಸನದಲ್ಲಿ ಮಳಿಯಪ್ಪನ ಮಗ ಮೋನಪ್ಪಯ್ಯನಿಗೆ ಕೆರೆ ಕಟ್ಟಿದ್ದಕ್ಕೆ ಮಾನ್ಯ ನೀಡಿದ ಉಲ್ಲೇಖವಿದೆ.

ಶ್ರೀಗುರು ಮಾಳಿಗ(ಪ್ಪ)
ಮಗ ಮೋನಪತೈ()
ನವರಿಗೆ ಕೆರೆಕಟಿ
ದಕ್ಕೆ ಕೊಟ್ಟ (ಮಾನ್ಯ) [26]

ಸಾಲವಾಡಗಿ ಶಾಸನವೊಂದರಲ್ಲಿ ಕಾಣುವ (ಸು. ಶ. ೧೨) ಮೂರುಜಾವಿ ಮುನಿಯ ಉಲ್ಲೇಖ ಗಮನರ್ಹವಾದುದು. ಕಾಶ್ಮೀರಬ್ರತಿ ಮೂರುಜಾವಿ ಮುನಿಯಿಂದ ಹೊರೆ ಯುಮೇಶ್ವರ ದೇವಾಲಯದ ಪುನಃ ನಿರ್ಮಾಣ ಮಾಡಿದ ಉಲ್ಲೇಖವಿದೆ[27] ಈತ ಅಬ್ಬಲೂರಿನ ಏಕಾ<ತ ರಾಮಯ್ಯನೊಂದಿಗೆ ಕಾಣುವ ಮೂರುಜಾವಿ ಮುನಿಯಾಗಿರ ಬಹುದೆ? ಎನ್ನುವ ಸಂದೇಹ. ಈ ಊಹೆ ಸರಿಯಾದರೆ ಉತ್ತರ ಕರ್ನಾಟಕದಲ್ಲಿ ಕಾಣುವ ಮೂರುಜಾವಿ ದೇವರ ಪರಂಪರೆಗೆ ಹೊಸ ಆಯಾಮ ಪ್ರಾಪ್ತವಾಗಲಿದೆ. ಕ್ರಿ. ಶ. ೧೫೫೯ರ ಒಂದು ಶಾಸನದಲ್ಲಿ ಎಲ್ಲೋಜ, ತಮ್ಮೋಜ, ಮತು ಉಲ್ಲೋಜ ಎಂಬ ಮೂವರು ಕಮ್ಮಾರು ಕೃಷಿ ಕೆಲಸಕ್ಕೆ ನೀರನ್ನು ಎತ್ತುವ ಏತಕ್ಕಾಗಿ ಕಬ್ಬಿಣದ ಬಾನಿಯನ್ನು ಧರ್ಮಕ್ಕೆಂದು ಮಾಡಿಕೊಡುತ್ತಾರೆ. ಇವರು ತಮ್ಮನ್ನು ಶ್ರೀಮತು ಕಾಳಿಕಾ ಕಮಟೇಶ್ವರ ದೇವರ ವರಪ್ರಸಾದಿಗಳು ಎಂದು ಹೇಳಿಕೊಂಡಿದ್ದಾರೆ.[28]

ಹೀಗೆ ದಾನ ನೀಡುವ ಹಾಗೂ ಪಡೆಯುವ ನೆಲೆಗಳಲ್ಲಿ ಮಾತ್ರವಲ್ಲದೇ ವೀರ ಯೋಧರಾಗಿ ಸಮಾಜ ಸುಧಾರಕರಾಗಿ, ದೇವಸ್ಥಾನ ನಿರ್ಮಾಪಕರಾಗಿ ಬಡಿಗ, ಕಮ್ಮಾರ, ಅಕ್ಕಸಾಲಿಗರು ಕಾಣಿಸುವುದು ವಿಶೇಷವಾಗಿದೆ. ಇದು ಪಾಂಚಳಕರಿಗೆ ಆ ಹೊತ್ತಿನ ಸಾಮಾಜಿಕ ಸಂದರ್ಭದಲ್ಲಿದ್ದ ಸ್ಥಾನಮಾನಗಳನ್ನು ಗ್ರಹಿಕೆಗೆ ತರುತ್ತದೆ.

[1] Epigraphia Camatica. IV .KP.68,1116.AD

[2] EC. IX. NI. 60. 797 AD

[3] Bomby Karnataka Inscriptions (B. K. I) I, ii, 151, 11O2. AD

[4] EC.XII.TP.104, 1130.AD

[5] B. K. I. I, ii, !53,1103. AD

[6] EC. VII, SK, 118, 1054.AD

[7] ಡಾ. ಎಂ. ಚಿದಾನಂದ ಮೂರ್ತಿ, ಶಾಸನಗಳ ಸಾಂಸ್ಕೃತಿಕ ಆಧ್ಯಯನ ಪುಟ; ೪೮೭,೪೮೮; ೨೦೦೨ (ತೃ.ಮು)

[8] ಡಾ. ವಿರೇಶ ಬಡಿಗೇರ, ರಾಶಿಬುತ್ತಿ, ಪುಟ ೬; ೨೦೦೬

[9] ಡಾ. ವಿರೇಶ ಬಡಿಗೇರ, ರಾಶಿಬುತ್ತಿ, ಪುಟ ೨೩; ೨೦೦೬

[10] ಡಾ. ವಿರೇಶ ಬಡಿಗೇರ, ರಾಶಿಬುತ್ತಿ, ಪುಟ ೨೬; ೨೦೦೬

[11] Mysore. Archaeological Report. (1931). P. 191. C. 1053. AD

[12] SII. IX. i 89, 1035. AD

[13] EC.IV. KP.78,C.1130.AD

[14] ಶಾಸನ ಸಾಹಿತ್ಯ ಸಂಚಯ . ಪು. ೧೨೦,

[15] ಉದೃತ; ಆರ್‌. ಬಿ. ಕುಮಾರ, ಪುಟ, ೩೩; ೨೦೦೪

[16] SII. XX. 225

[17] ಡಾ. ಎಂ. ಚಿದಾನಂದ ಮೂರ್ತಿ, ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪುಟ ೫೧೨; ೨೦೦೯

[18] ಪರಮಶಿವಮೂರ್ತಿ ಡಿ. ವಿ.(ಸಂ ) ಪ್ರೌಢದೇವರಾಯನ ಶಾಸನಗಳು.ಪುಟ ೮೬-೮೭; ೨೦೦೭

[19] ಅದೇ. ಪುಟ, ೧೨೦-೧೨೧; ೨೦೦೭

[20] ಹಂಪಿ ಶಾಸನಗಳು -೩, ಪುಟ ೨೬, ಕ್ರ. ಸಂ. ೪೭; ೨೦೦೭

[21] ಅದೇ. ಪುಟ, ೧೫೨ -೧೫೩; ೨೦೦೭

31 SII. XV. PP. 92. No. 67

32 ಶಾಸನ ಸಾಹಿತ್ಯ ಸಂಚಯ . ಪು. ೧೫೪; ೧೯೬೧

[22] SII. XV. 73

[23] SII. XX. 225

[24] SII. XVIII. 404

[25] SII. XV. 642

[26] ಡಾ. ದೇವರಕೊಂಡಾರೆಡ್ದಿ, ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ- ೯, ಪುಟ ೧೩-೧೪; ೨೦೦೬

[27] SII. XV.46

[28] SII. IX. (II); PP 662 No. 670