ನ್ಯಾಯ ಪಂಚಾಯ್ತಿಯಲ್ಲಿ

ಆಯಗಾರರಾದ ಬಡಿಗ ಕಮ್ಮಾರರು ವೈಯಕ್ತಿಕ ಪುಣ್ಯ ಕಾರ್ಯಗಳ ಜೊತೆಗೆ ದೇವಸ್ಥಾನ ನಿರ್ಮಾಣ ಹಾಗೂ ನ್ಯಾಯ ಪಂಚಾಯ್ತಿಯಲ್ಲಿ ನ್ಯಾಯ ತೀರ್ಮಾನದಂತಹ ಸಾರ್ವಜನಿಕ ಕಾರ್ಯಗಳಲ್ಲು ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ. ಕೊಪ್ಪಳದ ಅಗಡಿ ಸಂಗಣ್ಣನವರ ಮನೆಯಲ್ಲಿದ್ದ ತಾಮ್ರ ಶಾಸನದಲ್ಲಿ ಅಕ್ಕಸಾಲಿ ಸಿರಿಮಂಣನ ಉಲ್ಲೇಖ ಬರುತ್ತದೆ.

ಬೊಮ್ಮಗೌಡನೆಂಬವನು (ಕ್ರಿ. ಶ. ೧೫೮೩) ಕೊಪ್ಪಳದ ಕಸಬೆ ಗೌಡಕಿಯನ್ನು ವಿವಿಧ ಕಾರಣಗಳಿಂದ ತನಗೆ ತೂಗಿಸಿಕೊಂಡು ಹೋಗಲು ಅಸಾಧ್ಯವಾದಾಗ ಅದನ್ನು ಜಡಣ ಗೌಡನೆಂಬವನಿಗೆ ೨೭೫ ವರಹಗಳಿಗೆ ಮಾರುತ್ತಾನೆ. ತನಗೆ ಬಂದ ಆಯಾಗಾರಿಕೆ ಮಾನ್ಯವನ್ನು ಹಿಟ್ಟು -ಹುಗ್ಗಿ, ನಿಧಿ- ನಿಕ್ಷೇಪ, ಜಲ- ಪಾಷಾಣ, ಅಕ್ಷಣೆ- ಆಗಮಿ, ಸಿದ್ಧ- ಸಾಧ್ಯಗಳೆಂಬ ಆಷ್ಟಭೋಗವನ್ನು ಹೆಂಡತಿ-ಮಕ್ಕಳ ಅನುಮತಿಯೊಂದಿಗೆ ನೀಡುತ್ತಾನೆ. ಇದಕ್ಕೆ ಕೊಪ್ಪಳ ಸೀಮೆಯ ದೇಸಾಯಿಗಳು, ಸೇನುಬೋವರು ಮತ್ತು ಅಷ್ಟಾದಶ ಪ್ರಜೆಗಳು ಸಾಕ್ಷಿಯಾಗಿದ್ದಾರೆ ಈ ಅಷ್ಟಾದಶ ಪ್ರಜೆಗಳಲ್ಲಿ ಅಕ್ಕಸಾಲಿ ಸಿರುಮಣ್ಣನೂ ಹಾಗೂ ಕಮ್ಮಾರ ಮುದಿಯಪರ ಪ್ರಸ್ತಾಪ ಬರುವುದು ವೀಶೇಷ.

ಶಾಸನದ ಎರಡನೆಯ ಮುಖದ ೮೩ನೇ ಸಾಲಿನಲ್ಲಿ ಸಿರಿಮಣ್ಣನ ಹೆಸರು ಬರುತ್ತದೆ.

೭೬. ಯಿದಕ್ಕೆ ಸಾಕ್ಷಿಗಳು ಕೊಪ್ಪಳದ ಸೀಮೆ
೭೭. ಯ ದೇಸಾಯಿಗಳು ಮುಂತಾದ ಕಸ
೭೮. ಬೆಗೌಡ ಸೇನಬೋವರು ಅಷ್ಟದಶ ಪ್ರ
೭೯. ಜೆಗಳು ಮುಂತಾದ ಆಯಾಗರರು
೮೦. ಸಾಕ್ಷಿಗಳು
೮೧. ದೇಸಾಯಿ ವಿಟಪಸಾಕ್ಷಿ
೮೨. ಸಿರಮಣಗೌಡನ ಸಾಕ್ಷಿ
೮೩. ವಿರುಪಣ ಗೌಡನ ಸಾಕ್ಷಿ
೮೪. ಚಿಕ್ಕಜೆಡೆಗಣಗೌಡನ ಸಾಕ್ಷಿ
೮೫. ಗುಂಮಟಪುರದ ಧರಣಿ
೮೬. ಗೌಡನ ಸಾಕ್ಷಿ|| ಗೊಂದಿ
೮೭. ಗೊಂಡನ ಸಾಕ್ಷಿ || ಕಂಮ
೮೮. ಮುದಿಯಪನ ಸಾಕ್ಷಿ
೮೯. ಅಕ್ಕಸಾಲೆ ಸಿರಿಮಂಣನ ಸಾ
೯೦. ಕ್ಷಿ|| ಮದಿಗ ಮುದಕ ಸಾಕ್ಷಿ
೯೧. ಸೇನಭೋವ ದೇವ
೯೨. ರಸ ಸಾಕ್ಷಿ || ಪಟ
೯೩. ಲೂರರಸ ಸಾಕ್ಷಿ
೯೪. ಪಟಂಣ ಸೆಟ್ಟಿ
೯೫. ಸಾಕ್ಷಿ|| ದರ್ಮಣಪ
೯೬. ಸಾಕ್ಷಿ
೯೭. ತಳವ
೯೮. ರ ಗಿರಿಯಪನ ಯಿ
೯೯. ತನ ಸಾಕ್ಷಿ

ಸಾಲು ೮೭ರಲ್ಲಿ ಬರುವ ಕಂಮರ ಮುದಿಯಪ ಎನ್ನುವುದು ಕಂಮ್ಮಾರ ಮುದಿಯಪ ಎಂದಿರಬಹುದಾಗಿದೆ.33

ಕ್ರಿ. ಶ. ೧೬೭೧ರ ಕೊಪ್ಪಳದ ಇನ್ನೊಂದು ತಾಮ್ರ ಶಾಸನದಲ್ಲಿ ಹಸ್ತಿವತಿ (ಆನೆಗೊಂದಿ) ನಾಡಿನ ಕಾತರಕಿ- ೮ ರಲ್ಲಿನ ಕೊಪ್ಪಳದ ಸೇನಬೋವಿಕೆಯನ್ನು ಕ್ರಯಕ್ಕೆ ಮಾರಿದ ವಿಷಯವನ್ನು ದಾಖಲಿಸುತ್ತದೆ. ಈ ಸಂದರ್ಭದಲ್ಲಿ ಕೊಪ್ಪಳ ಸೀಮೆಯ ದೇಸಾಯಿಗಳು ಮುಂತಾದ ಕಸಬೆಗೌಡರು ಅಷ್ಟದಶ ಪ್ರಜೆಗಳು ಮುಂತಾದ ಆಯಗಾರರೂ ಸಾಕ್ಷಿ ಗಳಾಗಿರುತ್ತಾರೆ. ಇದರಲ್ಲಿ ಕುಮ್ಮಾರ ಪಡಂಣನು ಒಬ್ಬ ಸಾಕ್ಷಿಗಾರ. ಅಂದರೆ ಅಷ್ಟಾದಶ ಪ್ರಜೆಗಳಲ್ಲಿ (ಆಯಗಾರರಲ್ಲಿ) ಕಮ್ಮಾರ ಬಡಿಗ ಅಥವಾ ಅಕ್ಕಸಾಲಿಗಳು ಇದ್ದೇ ಇರುತ್ತಾರೆನ್ನುವ ವಿವರ ಈ ಎರಡು ಶಾಸನಗಳಿಂದ ಸಿಗುತ್ತದೆ.

೪೦. …..ಕೊಪ್ಪಳದ ಸೀಮೆಯ ದೇಶಾ(ಸಾ)ಯಿ
೪೧. ಗಳು ಮುಂತಾದ ಕಸಬೆಗೌಡರು ಆ
೪೨. ಷ್ಟದಶ ಪ್ರಜೆಗಳು ಮುಂ(ತಾ)ದ (ಆ)
೪೩. ಯಗಾರರೂ ಸ (ಸಾ)ಕ್ಷಿಗಳು
೪೪. ದೇಶಾ(ಸಾ)ಯಿ ದೇ(ದೇ)ಸಕು
೪೫. ಲ ಕರಣಿ ಸ(ಸಾ)ಕ್ಷಿ
೪೬. ವಿಟಪ್ಪನ ಸಾಕ್ಷಿ
೪೭. ಗಿರಿಯಪ್ಪ ಗೌಡನ ಮಗ
೪೮. ಬಸವಣ್ಣ ಗೌಡನ ಸ (ಸಾ)ಕ್ಷಿ
೪೯. ಕುಮಾರ ಪಡಂಣನ ಸ(ಸಾ)ಕ್ಷಿ
೫೦. ತಳವರ ಕನಕನಯ
೫೧. ದೇಶ (ದೇಸಾ)ಯಿ ದೇ (ದೇ)ಸಕು
೫೨. ಲಕರಣೆ ಬಸವ
೫೩. ಪನ ಸ(ಸಾ)ಕ್ಷಿ
೫೪. ಕಂನಪ ಗೌಡನ
೫೫. ಮಗ ಗಿಯಪನ
೫೬. ಸ(ಸಾ)ಕ್ಷಿ ಬಡಿಗೇರ
೫೭. ರಿ ವೀರಂಣ ಸಕಿ (ಸಾಕ್ಷಿ)
೫೮. ಕಮಂ ನಂದಂಣ

ಕಮರ ಎನ್ನುವ ಪದ ೪೯ ಮತ್ತು ೫೮ನೇ ಸಾಲಿನಲ್ಲಿ ಪುನರಾವರ್ತನೆಯಾಗುತ್ತದೆ. ಅದೇ ರೀತಿ ಬಡಿಗೇರ ವೀರಣ್ಣನ ಹೆಸರು ಪ್ರಸ್ತಾಪವಾಗುತ್ತದೆ.34

ಅಷ್ಟಾದಶ ಪ್ರಜೆಗಳು ಎನ್ನುವ ಪರಿಕಲ್ಪನೆಯಂತೆ ‘ಬಾರಬಲೂತಿ’ ಎನ್ನುವ ನ್ಯಾಯ ಪಂಚಾಯ್ತಿ ವ್ಯವಸ್ಥೆ ಜಾರಿಯಲ್ಲಿತ್ತು. ಬಾರಾಬಲೂತಿ ವ್ಯವಸ್ಥೆಯೆಂದರೆ ಅದೊಂದು ಸ್ವಯಂ ಆಡಳಿತ ಘಟಕವಾಗಿತ್ತು. ವಿಜಯನಗರೋತ್ತರ ಕಾಲದ ಗ್ರಾಮ ಸಮುದಾಯದ ಒಂದು ಸಾಮಾನ್ಯ ಲಕ್ಷಣವಾಗಿತ್ತು. ಈ ವ್ಯವಸ್ಥೆಯಲ್ಲಿ ಗೌಡ (ಗ್ರಾಮದ ಮುಖ್ಯಸ್ಥ) ಶಾನುಭೋಗ (ಗ್ರಾಮಲೆಕ್ಕಿಗ) ಪಂಚಾಂಗದ ಬ್ರಾಹ್ಮಣ (ಜ್ಯೋತಿಷಿ) ಕಮ್ಮಾರ (ಕಬ್ಬಿಣದ ಕೆಲಸದವ) ಅಕ್ಕಸಾಲೆ (ಚಿನ್ನ, ಬೆಳ್ಳಿ ಕೆಲಸದವ) ಕುಂಬಾರ (ಮಡಿಕೆ ಮಾಡುವವ) ಆಗಸ (ಬಟ್ಟೆ ಒಗೆಯುವವ) ಕೆಲಸಿ (ಕ್ಷೌರಿಕ) ತೋಟಿ (ಜಲಗಾರ) ತಳವಾರ (ಕಾವಲಿನವ) ನೀರುಗಂಟಿ (ಕೆರೆಯ ತೂಬುಗಳನ್ನು ನಿಯಂತ್ರಿಸುವವ) ಮತ್ತು ಓಜರವನು (ಬಡಿಗಿ) ಇವರು ಗ್ರಾಮದ ಆಡಳಿತವನ್ನು ನಿರ್ವಹಿಸುವ ಪಂಚರಾಗಿದ್ದರು. ಇದರಲ್ಲಿ ಕಮ್ಮಾರ, ಅಕ್ಕಸಾಲಿ ಹಾಗೂ ಬಡಗಿ ಮೂವರೂ ಪ್ರಾತಿನಿಧ್ಯ ಪಡೆದಿರುವುದು ವಿಶೇಷವಾಗಿದೆ.35

ಕೆಲವು ಆಯ್ದ ಶಾಸನಗಳಿಂದ ಹೆಕ್ಕಿ ತೆಗೆದ ಇಲ್ಲಿನ ಉಲ್ಲೇಖಗಳು ನಮ್ಮ ಸಮ ಕಾಲೀನ ಸಾಮಾಜಿಕ ಸಂದರ್ಭದಲ್ಲಿ ಆಯಗಾರರ ವೃತ್ತಿಗಳ ಬಗ್ಗೆ ಇದ್ದ ವ್ಯಾಖ್ಯಾನಗಳನ್ನು ಪುನರ್‌ಪರಿಶೀಲನೆಗೆ ಒಡ್ಡಲು ಪ್ರೇರೇಪಿಸುತ್ತವೆ. ವೃತ್ತಿ ಹಾಗೂ ವೃತ್ತಿಕಾರರ ಬಗೆಗಿನ ವಸಾಹತು ಶಾಹಿ ವ್ಯಾಖ್ಯಾನಗಳು, ವೃತ್ತಿ ಹಾಗೂ ವೃತ್ತಿ ಸಮುದಾಯಗಳು ತನ್ನೊಳಗೆ ರೂಪಿಸಿಕೊಳ್ಳುತ್ತಿರುವ ಹಾಗೂ ಆರೋಪಿಸಿಕೊಳ್ಳುತ್ತಿರುವ ಸಾಂಸ್ಕೃತೀಕರಣ ಗುಣಧರ್ಮಗಳನ್ನು ತಳ್ಳಿ ಹಾಕುತ್ತವೆ. ಬರೀ ಕೂಲಿ ಕಾರ್ಮಿಕ ಅಥವಾ ಕೃಷಿ ಸಮಾಜದ ಲಗತ್ತಿ ನಂತೆ ನೋಡುವ ದೃಷ್ಟಿಕೋನಗಳನ್ನು ಬದಾಯಿಸುತ್ತವೆ. ಶಾಸನಸ್ಥ ಮಾಹಿತಿಗಳಲ್ಲಿ ಪ್ರಭುತ್ವದ ಆಯಾ ಸಾಮಾಜಿಕ ಸಂದರ್ಭದ ಪ್ರಾಧಾನ್ಯತೆ ಇದ್ದಾಗಲೂ ಬಾಬುದಾರರಾಗಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಕಾಣಿಸುವ ಪಾಂಚಾಳ ಕುಲದ ಆಯಗಾರಂಥ ಕಸುಬುದಾರರು ಒಂದು ಪರಿಪೂರ್ಣ ಸಮಾಜದ ನಿರ್ಮಾತೃಗಳಾಗಿದ್ದರು. ಶಾಸನಗಳನ್ನು ಮುಂದಿಟ್ಟುಕೊಂಡು ಬರೀ ಪ್ರಭುತ್ವ ಹಾಗೂ ಆದರ ಶೋಷಿತ ಮುಖಗಳನ್ನೇ ವೈಭವೀಕರಿಸಿ ನಡೆದ ಅಧ್ಯಯನಗಳು ಕಸುಬುದಾರ ವರ್ಗದ ಸಾಮಾಜಿಕ ಅನನ್ಯತೆಗಿಂತ ಪ್ರಭುತ್ವದ ಪರ ಅಥವಾ ವಿರೋಧಿ ನೆಲೆಯ ವ್ಯಾಖ್ಯಾನಗಳನ್ನೇ ಬೆಳೆಸಿ ಬಿಟ್ಟವು.

ಒಬ್ಬ ಆಯಗಾರನ ಮಗನಾಗಿ ಬೆಳೆದು ಬಂದ ನನ್ನಂಥವರಿಗೆ ವ್ಯವಸ್ಥೆಯ ಶೋಷಿತ ಹಾಗೂ ಶ್ರೇಣೀಕೃತ ಮುಖಗಳಿಗಿಂತ ಕಸುಬುದಾರ ವರ್ಗಗಳಲ್ಲಿದ್ದ ಸೃಷ್ಟಿಶೀಲತೆ ಹಾಗೂ ಶ್ರಮದ ಬದ್ಧತೆ ಮುಖ್ಯವೆನಿಸುತ್ತದೆ. ಕೂಲಿ, ಹೊಟ್ಟೆ, ಬಟ್ಟೆ, ಪ್ರಾಮುಖ್ಯತೆ ನಡುವೆಯೂ ಆಯಗಾರ ವೃತ್ತಿಗಳು ಕಾಯ್ದುಕೊಳ್ಳುವ ಆಂತರಿಕ ಪ್ರಜ್ಞೆ ಹಾಗೂ ಸಮಾಜಮುಖಿ ಚಲನೆ ಮುಖ್ಯವೆನಿಸುತ್ತದೆ. ಇದರಿಂದ ವೃತ್ತಿಗಳು ಎಂದೋ ನಾಶವಾಗಿ ಹೋಗಬೇಕಿತ್ತು. ಪರಿಸರದ ಮಿತಿಯೊಳಗೆ ಅರಳಿ ವಿಕಸಿಸುವ ಇಂಥ ಸಾಂಪ್ರದಾಯಿಕ ವೃತ್ತಿಗಳ ಮುಖ್ಯ ಗುಣ ಸೃಷ್ಟಿಶೀಲತೆ. ಇಂಥ ಗುಣವೇ ಪ್ರಭುಸಮ್ಮಿತ ಸಾಮಾಜಿಕ ಸಂದರ್ಭ ಗಳಲ್ಲೂ ಆಯಗಾರರನ್ನು ರಿಕ್ತಸ್ಥಾನಗಳಲ್ಲಿ ಶಾಸನಸ್ಥಗೊಳಿಸಲು ಸಾಧ್ಯವಾಯಿತು. ಚರಿತ್ರೆಯನ್ನು ಅತಿ ರಂಜಿತ ಅಥವಾ ಅತಿ ವಿಮರ್ಶಾತ್ಮಕವಾಗಿ ನೋಡುವುದಕ್ಕಿಂತ ಪೂರ್ವಗ್ರಹವಿಲ್ಲದ ಸಮಾಧಾನದಿಂದ ನೋಡುವ ಆಗತ್ಯವಿದೆ. ಏಕೆಂದರೆ ಸಮಾಜ ಸಂಸ್ಕೃತಿಗಳೆಂದರೆ ಒಮ್ಮುಖ ಅಥವಾ ಹಿಮ್ಮುಖ ವ್ಯಾಖ್ಯಾನಗಳಿಗೆ ಒಳಗಾಗುವ ಪಾರ್ಶ್ವಿಕ ಆಕೃತಿಗಳಲ್ಲ. ಅವನ್ನು ಬಹುಮುಖಿ ಆಯಾಮಗಳಿಂದ ನೋಡುವ ಆಗತ್ಯವಿದೆ. ಆವಾಗ ಆಯಗಾರರಂಥ ಕೆಳಜಾತಿ ಹಾಗೂ ಕೆಳವರ್ಗ ಸಾಮಾಜಿಕ ಸಂಚಲನೆಯಲ್ಲಿ ವಹಿಸಿದ ಪಾತ್ರ ಕುರಿತು ಹೊಸ ವ್ಯಾಖ್ಯಾನ ಮಾಡಬಹುದು.

ವಿಶೇಷವೆಂದರೆ ಮೇಲೆ ಉಲ್ಲೇಖಿಸಿದ ಹೆಚ್ಚಿನ ಶಾಸನಗಳು ರಾಜನ ನೇರ ಆಡಳಿತ ಪರೀಧಿಯಿಂದ ಹೊರಗಿರುವಂಥ ಸ್ಥಾನಿಕ ಆಧಿಕಾರಿಗಳಾದ, ಮಾಂಡಳಿಕರು, ಗೌಡ, ಕುಲಕರ್ಣಿಯಂಥ ಕೆಳಹಂತದ ವಿಭಾಗಾಧಿಕಾರಿಗಳ ಆಡಳಿತ ಪ್ರದೇಶದಲ್ಲಿ ಬರೆಯಿಸ ಲ್ಪಟ್ಟಂಥವು. ಹೀಗಾಗಿ ರಾಜನ ದಾನ ಶಾಸನಗಳಿಗಿಂತ ಭಿನ್ನವಾದ ವಿಶ್ಲೇಷಣ ದಾಟಿ ಇವುಗಳಿಗೆ ಅನ್ವಯಿಸುತ್ತದೆ. ಶಾಸನಗಳಲ್ಲಿ ಉಕ್ತವಾದ ಆಯಗಾರರು, ಅವರ ಸಾಂಸ್ಕೃತಿಕ ಬಂಧುತ್ವ ಹಾಗೂ ಬಹುಳತ್ವ ಒಂದು ಪೂರ್ಣಪ್ರಮಾಣದ ಜಗತ್ತು. ಹನ್ನೆರಡನೆ ಶತಮಾನದ ಶಾಸನವೊಂದರಲ್ಲಿ ಕಾಣುವ ಬಡಗಿ, ಕಮ್ಮಾರ, ಅಕ್ಕಸಾಲೆ, ಅಸಗ, ಸಮಗಾರ, ದೇಡ, ಹೊಲೆಯರ ಕೂಡೆ ಒಳಗಾಗಿ…..36 ಎನ್ನುವ ಉಲ್ಲೇಖ ಬಡಿಗ ಕಮ್ಮಾರ ಅಕ್ಕಸಾಲಿಗ ಜೊತೆಗೆ ಅಸ್ಪೃಷ್ಯರೆಂದು ಗುರುತಿಸುವ ಸಮಗಾರ, ಹೊಲೆಯರಂಥ ಕೆಳ ಸಮುದಾಯಗಳು ಸಮಾನ ಮಾನ್ಯತೆ ಪಡೆದಿರುವುದು ವಿಶೇಷ. ಬಹಳಷ್ಟು ಶಾಸನಗಳು ಇಂಥ ಆಯಗಾರ ವರ್ಗಗಳನ್ನು ‘ಅಷ್ಟಾದಶ ಪ್ರಜೆಗಳು’, ‘ಸಮಸ್ತ ನಾಡವರು’, ಎಂದು ಗುರುತಿಸುವುದು ಆಭ್ಯಾಸಾರ್ಹವಾದುದು. ಇಂಥ ಸಂಗತಿಗಳನ್ನು ಬರೀ ಶುಷ್ಕ ಜಾತಿ ನಿಷ್ಠ ಸ್ಥಳಗಳಲ್ಲಿಟ್ಟು ನೋಡುವುದಕ್ಕಿಂತ ಕುಲಕಸುಬುಗಳ ವೃರ್ತಿಸಮುದಾಯಗಳ ಸಹಜ ಸ್ಥಿತಿಯಲ್ಲಿಟ್ಟು ಎಲ್ಲ ನೋಡಬೇಕು. ಆವಾಗ ಮೇಲು -ಕೀಳು ಎನ್ನುವ ಸಂಗತಿಗಳಿಂಗಿಂತ ಎಲ್ಲ ವೃತ್ತಿಗಳು ಪರಸ್ಪರ ಹೊಂದಿದ್ದ ಅಂತರಿಕ ಹಾಗೂ ಸಾಮಾಜಿಕ ಬದ್ಧತೆಗಳು ಸಮಷ್ಠಿ ಪ್ರಜ್ಞೆಗಳು ಬರುತ್ತವೆ.

ಪಾಂಚಾಳರಿಗೆ ವೃತ್ತಿ ಹಾಗೂ ಉತ್ಪಾದನೆಗಳೊಂದಿಗೆ ಅದು ಬರೀ ಮತ್ತೊಬ್ಬರ ಸೇವೆ ಎಂದಾಗಿರಲಿಲ್ಲ ಯಾಂತ್ರಿಕವೂ ಅಗೀರರಲಿಲ್ಲ ಅದೊಂದು ಜೀವನ ವಿಧಾನವಾಗಿತ್ತು. ಅದು ದೂರಗಾಮಿ ಪ್ರವೃತ್ತಿಯನ್ನು ಹೊಂದಿತ್ತು. ನಿರಂತರ ಶೋಧ ಹಾಗೂ ಗತಿಶೀಲ ಸ್ವರೂಪವನ್ನು ಈ ವ್ಯಕ್ತಿಗಳು ಹೊಂದಿದ್ದವು. ಆಪಾರವಾದ ಆರ್ಥಿಕ ಸಬಲತೆ ಹಾಗೂ ಸಾಮಾಜಿಕ ಕೀರ್ತಿ ಅವುಗಗಳಿಗಿರದಿದ್ದರೂ ತನ್ನ ಮಿತಿಯೊಳಗೆ ಅವು ಸೃಷ್ಟಿಸಿ ಕೊಂಡ ಬದುಕಿನ ನೆಲೆಗಳು ಅಲ್ಲಗಳೆಯುಂಥವಲ್ಲ. ಸಾಂಪ್ರದಾಯಿಕ ಸಾಮಾಜಿಕ ವಿಧಾನದಲ್ಲೂ ಆಯಗಾರ ಸಮುದಾಯಗಳ ಕ್ರಿಯಾಶಕ್ತಿ ದಾಖಲೆಗೊಂಡಿದ್ದು ಸಣ್ಣದೇನಲ್ಲ. ಈ ನಿಟ್ಟಿನಲ್ಲಿ ಶಾಸನೋಕ್ತ ಆಯಗಾರ ಸಮುದಾಯಗಳನ್ನು ಸ್ಥಿರ ಮಾದರಿಯ ರಂಜನೀಯ ಅಥವಾ ಅತಿ ನಿಕೃಷ್ಟ ದೃಷ್ಟಿಯಿಂದ ನೋಡಿದರೆ ಸಾಲದು. ಇಂಥ ಅಧ್ಯಯನ ಕ್ರಮಗಳು, ವೃತ್ತಿಗಳ ಭೌತಿಕ ಸ್ವರೂಪದ ಅರ್ಥಗಳನ್ನು ಅವುಗಳ ಸಾಂದರ್ಭಿಕ ವಿವರಗಳನ್ನು ಕೊಡುತ್ತವೆಯೇ ಹೊರತು ಸಂದರ್ಭದ ಆಚೆಗಿನ ಸಂಕಥನಗಳನ್ನು ನಿರೂಪಿಸುವುದಿಲ್ಲ.

ಸಮಾರೋಪ

ಪರಂಪರೆಯಿಂದ ಬೆಳೆದು ಬಂದ ಕೃಷಿ ಹಾಗೂ ಅದನ್ನಾಧರಿಸಿ ಬೆಳೆದ ಗ್ರಾಮ ಕಲೆಗಳು ಅಲ್ಲಿನ ಕೌಟುಂಬಿಕ ಆರ್ಥಿಕ, ಸಮಾಜಿಕ ಜೀವನದೊಂದಿಗೆ ಬೆಸೆದುಕೊಂಡಿರುತ್ತವೆ. ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಪೋಷಿಸುತ್ತ ಬಂದಿವೆ. ಗ್ರಾಮ ಜೀವನದ ವ್ಯವಹಾರ, ಉತ್ಪತ್ತಿಕ್ರಮ, ಸಂರಕ್ಷಣಾ ವಿಧಾನ ಹಾಗೂ ಮಾಧ್ಯಮಗಳಲೆಲ್ಲ ಪರಂಪರೆಯ ಮುಂದುವರಿಕೆಯ ಗುಣ ಕಂಡುಬರುತ್ತದೆ. ಪರಂಪರೆಯ ಮುಂದುವರಿಕೆ ಎಂದರೆ ಕೇವಲ ಹಿಂದೆ ಇದ್ದುದನ್ನು ಯಥಾವತ್‌ಆಗಿ ಮುಂದುವರಿಸುವುದಲ್ಲ. ಅನಗತ್ಯ ಹಾಗೂ ನಿರ್ಬಲವಾಗಿದ್ದನ್ನು ಸಬಲಗೊಳಿಸುವ ಹಾಗೂ ಸಹಜ ಸಶಕ್ತೀಕರಣಗೊಳಿಸುವ ಕ್ರಿಯಾ ಶೀಲ ಸ್ವರೂಪದ್ದು. ಕ್ರಿಯೆ ಇದ್ದಲ್ಲಿ ಸಹಜವಾಗಿ ಹೊಸತನ ಇದ್ದೇ ಇರುತ್ತದೆ. ಆದರೆ ಈ ಹೊಸತನ ಜೈವಿಕವಾಗಿರುತ್ತದೆ ಎನ್ನವುದು ವಿಶೇಷ.

ಗ್ರಾಮೀಣ ಕುಟುಂಬಗಳಲ್ಲಿ ವೃತ್ತಿ ಹಾಗೂ ಉತ್ಪಾದನೆಗಳೆಂದರೆ ಯಾಂತ್ರಿಕ ಹಾಗೂ ತಾತ್ಕಾಲಿಕವಾದುವುಗಳಿಲ್ಲ. ಒಪ್ಪತ್ತಿನ ಊಟದ ಹಂಬಲ ಮಾತ್ರ ಅವುಗಳಿಗಿರಲಿಲ್ಲ. ಅವು ದೀರ್ಘಕಾಲದ ಕಾರ್ಯಗತಿಯನ್ನು ಹೊಂದಿದ್ದವು. ಹಸಿವು ನೀರಡಿಕೆ ಎನ್ನದೆ ಹೆಂಡಿರು ಮಕ್ಕಳೊಡನೆ ಸತತವಾಗಿ ದುಡಿಯಬೇಕಾದ ಕೌಟುಂಬಿಕ ಕಾರ್ಯಗಳಾಗಿದ್ದವು. ಬಡತನದಲ್ಲಿ ಹುಟ್ಟಿ ದುಡಿಮೆಯೊಡನೆ ಬೆಳೆದು ತಾಪತ್ರಯಗಳೊಂದಿಗೆ ಜೀವಿಸುವ ಕಸುಬುದಾರರ ಬದುಕು ನಿತ್ಯಕ್ರಿಯಾಶೀಲ ಗುಣವುಳ್ಳದ್ದು ಅನ್ವೇಷಕ ಪ್ರವೃತ್ತಿಯುಳ್ಳದ್ದಾಗಿರುತ್ತದೆ.

ಸಾಂಪ್ರದಾಯಿಕ ಆಧುನಿಕ ಪೂರ್ವ ಸಮಾಜದಲ್ಲಿ ಕುಟುಂಬವು ಅತ್ಯಂತ ಮಹತ್ವದ ಸ್ಥಾನ ಪಡೆದಿತ್ತು. ಇದು ವ್ಯಕ್ತಿಯೊಬ್ಬನನ್ನು ಜವಾಬ್ದಾರಿಯುತ ಸದಸ್ಯನನ್ನಾಗಿ ಮಾಡಲು ಅಗತ್ಯವಿದ್ದ ಬಹುತೇಕ ಎಲ್ಲ ಸಮಾಜೀಕರಣ ಕ್ರಿಯೆಗಳಲ್ಲಿಯೂ ಸ್ವತಂತ್ರವಾಗಿ ಇಲ್ಲವೆ ಉಳಿದ ಸಾಮಾಜಿಕ ಸಂಸ್ಥೆಗಳೊಂದಿಗೆ ಸೇರಿ ಭಾಗವಹಿಸುತ್ತಿತ್ತು. ಇದರಿಂದಾಗಿ ವ್ಯಕ್ತಿ ತನ್ನ ಜೀವಿತದ ಅವಧಿಯಲ್ಲಿ ಪ್ರತಿಯೊಂದು ಹಂತದಲ್ಲಿಯೂ ಕುಟುಂಬದ ಕಾರ್ಯವನ್ನು ರಚನೆಯ ಅಂಶಗಳನ್ನು ಪ್ರತಿನಿಧಿಸುತ್ತಿದ್ದನು. ಆದರೆ ಸಮಾಜವು ಆಧುನಿಕರಣ ಪ್ರಕ್ರಿಯೆಯಲ್ಲಿ ಸೇರಿ ಪರಿವರ್ತನೆಗೊಳ್ಳುತ್ತಿದ್ದಂತೆ ಕುಟುಂಬದ ಅನೆಕ ಕಾರ್ಯಗಳನ್ನು ಸಮಾಜದ ಉಳಿದ ಆನುಷಂಗಿಕ ಸಂಸ್ಥೆಗಳು ತಮ್ಮದಾಗಿಸಿಕೊಂಡವು. ಉದಾಹರಣೆಗೆ ಕೈಗಾರಿಕೀಕರಣದಿಂದಾಗಿ ಕುಟುಂಬಾವಲಂಬಿತವಾಗಿದ್ದ ವೃತ್ತಿಗಳು ಮನೆಯ ಪರಿಸರದಿಂದ ಮಾರುಕಟ್ಟೆಗೆ ಸ್ಥಳಾಂತರವಾದವು. ಇದು ವೃತ್ತಿಗಳನ್ನು ಸೇವೆ ಹಾಗೂ ವಂಶಾನುಗತ ಕಲಿಕಾ ಕ್ರಮಗಳಿಂದ ಬೇರ್ಪಡಿಸಿತು. ಹಣಗಳಿಸುವ ಮಾಧ್ಯಮವನ್ನಾಗಿಸಿತು. ಮನೆಯ ಹಾಗೂ ಕಟುಂಬದ ಸದಸ್ಯರ ಅವಿಭಾಜ್ಯ ಅಂಗವಾಗಿದ್ದ ವೃತ್ತಿ ಆ ನೆಲೆಯಿಂದ ಬೇರ್ಪಟ್ಟಿತು. ಕುಟುಂಬಾವಲಂಬಿತ ಉದ್ಯೋಗಗಳು ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆ ಹಾಗೂ ಬದಲಾವಣೆಗಳ ಮೇಲೆ ತುಂಬ ಪ್ರಭಾವ ಬೀರುತ್ತಿದ್ದವು. ಆಧುನೀಕರಣದ ಗಂಭೀರ ಪ್ರಭಾವದಿಂದಾಗಿ ಮಗುವಿಗೆ ನೈಸರ್ಗಿಕವಾಗಿ ತನ್ನ ಕುಟುಂಬದಿಂದ ಸಹಜವಾಗಿ ಸಿಗುತ್ತಿದ್ದ ಅನೌಪಚಾರಿಕ ಶಿಕ್ಷಣ ಹಾಗೂ ಸಂಸ್ಕಾರಗಳು, ಮೌಲ್ಯಗಳು, ಲೋಕರೂಢಿಗಳು ಸಿಗದಂತಾಯಿತು. ಇದು ಬರೀ ಪರಂಪರೆಯ ಮುಂದುವರಿಕೆಯಾಗಿ ಮಾತ್ರ ಕಾಣುತ್ತಿರಲಿಲ್ಲ. ಒಬ್ಬ ಜವಾಬ್ದಾರಿಯುತ ನಾಗರಿಕನ ರಚನಾತ್ಮಕ ರೂಪಗೊಳ್ಳುವುಕೆಗೆ ಇಂಬು ನೀಡುತ್ತಿತ್ತು. ಕೌಶಲ್ಯದೊಂದಿಗೆ ಬದುಕನ್ನು ತಾಳಿಕೊಳ್ಳುವ, ಬಾಳಿಕೊಳ್ಳುವ ಹಾಗೂ ರೂಪಿಸಿಕೊಳ್ಳುವ ಜೀವನ ತತ್ವನ್ನು ಕಲಿಸುತ್ತಿತ್ತು. ಹೀಗಾಗಿ ಹೊಸತನ ಎನ್ನುವುದು ಅನ್ಯವೆಂದೆನಿಸದೆ ಅನನ್ಯವೆಂದೆನಿಸುತ್ತಿತ್ತು. ಮಾರುಕಟ್ಟ ಪ್ರಧಾನ ವೃತ್ತಿ ನಿಯಮಗಳು ಲಾಭಕೋರತನದಿಂದಾಗಿ ಮನುಷ್ಯನಿಂದ ಪರಕೀಯವಾದವು. ಇದು ಕುಟುಂಬವೂ ಕೂಡ ಇಂದು ತನ್ನ ಕೆಲವು ಆರ್ಥಿಕ ಸಾಂಸ್ಕೃತಿಕ ಧಾರ್ಮಿಕ ಕಾರ್ಯಗಳನ್ನು ಕಳೆದುಕೊಳ್ಳುವಂಥ ವಾತಾವರಣವನ್ನು ನಿರ್ಮಿಸಿತು.

ತೀವ್ರತರವಾದ ವೈಜ್ಞಾನಿಕತೆ ಹಾಗೂ ವಸ್ತುನಿಷ್ಠತೆಯಿಂದಾಗಿ ಮಾನವೀಯ ಅಂಶಗಳನ್ನು ಸಮಾಜವು ಕಳೆದುಕೊಳ್ಳುತ್ತ ಬಂದಿರುವುದನ್ನು ಜಗತ್ತಿನ ಎಲ್ಲ ಪ್ರಮುಖ ಚಿಂತಕರೂ ಗುರುತಿಸಿದ್ದಾರೆ. ತಂತ್ರಜ್ಞಾನವು ಜನವಾದಿ ಸಂಸ್ಕೃತಿಯನ್ನೊಳಗೊಂಡ ಒಂದು ಸಾಮಾಜಿಕ ಚಿಂತನ ಕ್ರಮವಾಗಿ ಬಳಕೆಯಾದಾಗ ಮಾತ್ರ ಅಭಿವೃದ್ಧಿ ಎನ್ನುವುದು ಸಾರ್ಥಕವಾಗುತ್ತದೆ. ಅಂದರೆ ತಾಂತ್ರಿಕ ಹಾಗೂ ಆರ್ಥಿಕ ಪ್ರಗತಿಗಳು ಕಣ್ಣಿಗೆ ಹೊಡೆಯುವಂತೆ ಕಾಣುತ್ತಿದ್ದರೂ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಅಂಥ ಗಣನೀಯ ಹಾಗೂ ಗುಣಮಟ್ಟದ ಪ್ರಗತಿ ಕಾಣುತ್ತಿಲ್ಲ. ರೇಖಾತ್ಮಕವಾಗಿರುವ ಅಭಿವೃದ್ಧಿ ಮಾದರಿಗಳು ವೃತ್ತಾಕಾರವಾಗಿರುವ ಸಾಮಾಜಿಕ ಹಾಗೂ ಅಂಥ ಕಸುಬುದಾರ ಸಮುದಾಯಗಳು ಒಂದೆಡೆಯಾದರೆ, ತೀವ್ರತರದ ತಾಂತ್ರಿಕ ಆವಿಷ್ಕಾರಗಳು ಮತ್ತೊಂದೆಡೆಯಾಗಿ ಕವಲುದಾರಿ ನಿರ್ಮಾಣವಾಗಿದೆ. ಕಾರಣ ಅಭಿವೃದ್ಧಿಗೆ ಮಾನವಮುಖಿಯಾದ ಜೈವಿಕ ಸಾತತ್ಯವಿಲ್ಲದಿರುವುದೇ ಕಾರಣ. ಅಭಿವೃದ್ಧಿ ಮೀಮಾಂಸೆಯಲ್ಲಿ ಯಂತ್ರ ಹಣ ಹಾಗೂ ಅಂಕಿ – ಸಂಖ್ಯೆಗಳೇ ಪ್ರಧಾನ ಪಾತ್ರವಹಿಸುತ್ತಿವೆ.

ಆಧುನಿಕ ಪೂರ್ವ ಭಾರತದ ಗ್ರಾಮೀಣ ಕರಕುಶಲ ವೃತ್ತಿಗಳು ಹಾಗೂ ವ್ಯವಸಾಯ ಪದ್ಧತಿಗಳು ‘ಸಜ್ಜನ – ಅನ್ನಾಧಾರ’ದ ನೆಲೆಗಳಾಗಿದ್ದವು. ಸ್ವಾವಲಂಬನೆ ಹಾಗೂ ತನ್ಮಯತೆ ಇವುಗಳ ಪ್ರಮುಖ ವಿವೇಕಗಳಾಗಿದ್ದವು. ಅಂದರೆ ಉತ್ಪಾದಕ ವ್ಯಕ್ತಿ ಮತ್ತು ಆ ಕುಟುಂಬದ ಜೀವನ ನಿರ್ವಹಣೆಗೆಂದು ಉತ್ಪಾದನೆ ನಡೆಯುತ್ತಿತ್ತೇ ವಿನಹಃ ಮಾರುಕಟ್ಟೆ ಪ್ರಣೀತ ವ್ಯಾಪಾರ ಸರಕಿನ ಉತ್ಪಾದಕ ಘಟಕವಾಗಿರಲಿಲ್ಲ. ಆದರೆ ಆಧುನಿಕತೆಯು ಭಾರತೀಯ ಸಮಾಜದಲ್ಲಿ ಬೇರೂರುತ್ತ ನಡೆದಂತೆ ಗ್ರಾಮೀಣ ಕಸುಬು ಹಾಗೂ ಕೃಷಿ ಹೆಚ್ಚು ಹೆಚ್ಚು ವ್ಯಾಪಾರೀಕರಣದತ್ತ ವಾಲಿತ್ತು.

ಇಂದು ವೃತ್ತಿಕಾರ ಅಥವಾ ರೈತನೊಬ್ಬ ತನ್ನ ಮತ್ತು ತನ್ನ ಕುಟುಂಬದ ದುಡಿತದ ಮೂಲಕ ಉತ್ಪಾದಿಸುವ ಸರಕು ಅಥವಾ ಆಹಾರ ಪದಾರ್ಥಗಳನ್ನು ತನಗೆಂದು ಉತ್ಪಾದಿಸದೇ ಲಾಭದಾಯಕ ದೃಷ್ಟಿಯಿಂದ ಉತ್ಪಾದಿಸುತ್ತಾನೆ. ಒಬ್ಬ ಬಡಿಗ ಅಡುಗೆಮನೆಯ ದಿನನಿತ್ಯದ ಕಾರ್ಯಗಳಿಗಾಗಿ ಉತ್ಪಾದಿಸುತ್ತಿದ್ದ ಹುಟ್ಟು – ಕಡಗೋಲು, ಲಟ್ಟಣಿಗೆ, ಈಳಿಗೆ ಮಣೆ, ಮೇಜು – ಕುರ್ಚಿ ಇತ್ಯಾದಿ ಅಗತ್ಯ ವಸ್ತುಗಳು ಇಂದು ಸರಕುಗಳಾಗಿ ಮಾರ್ಪಡುತ್ತಿವೆ. ಮೊದಲಾಗಿದ್ದರೆ ಹುಟ್ಟಿಗೆ ಪ್ರತಿಯಾಗಿ ರೊಟ್ಟಿ ಅಥವಾ ದವಸ, ಕಡಗೋಲಿಗೆ ಪ್ರತಿಯಾಗಿ ಬೆಣ್ಣೆ ಅಥವಾ ಗೋಧಿಯನ್ನು ಪಡೆದುಕೊಳ್ಳುತ್ತಿದ್ದ. ಅದು ನಿಯಮವಾಗಿರದೆ ಪರಸ್ಪರ ಒಂದು ಆಂತರಿಕ ಸಂಬಂಧ ಹಾಗೂ ಸೌಜನ್ಯವಾಗಿತ್ತು. ಆದರೆ ಇಂದು ಪರರಿಗಾಗಿ ಉತ್ಪಾದಿಸುವ ಪರಿಸ್ಥಿತಿ ಎದುರಾಗಿದೆ. ಆಹಾರ ಪದಾರ್ಥಗಳು ಹೈನುಗಾರಿಕೆಯಂಥ ದಿನನಿತ್ಯದ ಬಳಕೆ ವಸ್ತುಗಳು ಉದ್ಯಮಶೀಲತೆಯನ್ನು ಪಡೆದಿರುವುದೂ ಕಾರಣವಾಗಿದೆ. ಮರ ಸಿಗದೆ ಇರುವುದು, ಮರದ ಜಾಗದಲ್ಲಿ ಪ್ಲಾಸ್ಟಿಕ್‌ಬಂದಿರುವುದು, ಬಳಸುವ ಜನ ಕಡಿಮೆಯಾಗಿರುವುದು ಕೂಡ ಮುಖ್ಯ ಕಾರಣವಾಗಿದೆ. ಈ ಎಲ್ಲ ಸಂಗತಿಗಳು ಇಂಥ ವೃತ್ತಿಕಾರರ ಉತ್ಪಾದನಾ ವಿಧಾನವನ್ನು ಲಾಭದಾಯಕ ದೃಷ್ಟಿಯಿಂದ ಮಾಡಲು ಪ್ರೇರೇಪಿಸುತ್ತವೆ. ಹೀಗೆ ಮಾರಿದ ಹಣದಿಂದ ಕಸುಬುದಾರ ನೇರ ಮನೆಗೆ ಹೋಗದೆ ಹಣದಿಂದ ಆಧುನಿಕ ಜಗತ್ತಿನಲ್ಲಿ ಲಭ್ಯವಿರುವ ವೈಯಕ್ತಿಕ ಸುಖದ ಸೌಕರ್ಯಗಳನ್ನು ಕೊಳ್ಳುವಲ್ಲಿ ವಿಶೇಷ ಕಾತುರವಹಿಸುತ್ತಾನೆ. ವರಮಾನ ವಸ್ತು ರೂಪದಲ್ಲಿದ್ದಾಗ ಕುಟುಂಬದ ಸದಸ್ಯರು ಹಂಚಿತಿನ್ನುತ್ತಿದ್ದರು. ವರಮಾನ ಹಣದ ರೂಪಕ್ಕೆ ಬಂದಾಗ ಅದು ಸಮುದಾಯ ಕೇಂದ್ರದಿಂದ ವ್ಯಕ್ತಿಕೇಂದ್ರಕ್ಕೆ ತಿರುಗಿತು ಹಾಗೂ ಸುಖಲೋಲುಪತೆಗೆ ದಾರಿಮಾಡಿಕೊಟ್ಟಿತು. ಇದರಿಂದ ಕುಟುಂಬದ ಪರಿಕಲ್ಪನೆ ಸಡಿಲವಾಗುತ್ತ ನಡೆಯಿತು. ಸಾಂಪ್ರದಾಯಿಕ ವೃತ್ತಿಗಳ ಮುಖ್ಯಗುಣ ಪರಿಸರದ ಮಿತಿಯೊಳಗೇ ಅರಳಿ ಸಹಜಗತಿಯಲ್ಲಿ ವಿಕಾಸವಾಗುವುದು. ಆಧುನಿಕ ಜೀವನ ಪದ್ಧತಿಯ ಗುಣ ಪರಿಸರದ ಮಿತಿಯನ್ನು ಮೀರಿ ಅಸಹಜಗತಿಯಲ್ಲಿ ಬದಲಾವಣೆ ಹೊಂದುವುದು. ಇಂಥ ಅಸಹಜ ಬದಲಾವಣೆಯೇ ಪಾರಂಪರಿಕ ಕಲೆಗಳ ಪುನರ್ ಜ್ಜೀವನಕ್ಕೆ ಅಡ್ಡಿಯಾಗಿದೆ.


33 ಡಾ. ಚನ್ನಬಸವ ಹಿರೇಮಠ, ರಾಯಚೂರು ಕೊಪ್ಪಳ ಜಿಲ್ಲೆಯ ಶಾಸನಗಳು ಪುಟ. ೩೪- ೩೫; ೧೯೯೯

34 ಅದೇ. ೩೩- ೩೪; ೧೯೯೯

35 ಕರ್ನಾಟಕ ಚರಿತ್ರೆ ಸಂಪುಟ -೩, ವಿಜಯನಗರ ಕಾಲದ ಸಾಮಾಜಿಕ ಒಲವುಗಳು, ಪುಟ ೩೨೫; ೧೯೯೭

36 SII. XX. No. 299.