Categories
ಕನ್ನಡ ಕರ್ನಾಟಕದ ಇತಿಹಾಸ ಶಾಸನಗಳು

ಶಾಸನಗಳಲ್ಲಿ ಆರ್ಥಿಕ ಸಂಗತಿಗಳು

ಶಾಸನ ಎಂದರೆ ಕೌಟಿಲ್ಯನ ಪ್ರಕಾರ ರಾಜರ ಆಜ್ಞೆಯನ್ನು ತಿಳಿಸುವ ಬರಹ. ಅರ್ಥ ಶಾಸ್ತ್ರದ ಈ ನಿರ್ವಚನ ರಾಜ್ಯದ ಏನೆಲ್ಲ ಸಂಗತಿಗಳನ್ನು ಒಳಗೊಳ್ಳುತ್ತದೆ. ಎಂದರೆ ಆಡಳಿತದ ಸಂಗತಿಗಳ ಸಾರುವಿಕೆ ಎಂದೂ ಅರ್ಥೈಸಬಹುದು. ಅರ್ಥದ ಮೇಲೆ ಈ ಪ್ರಪಂಚ ವಿಶೇಷವಾಗಿ ನಿಂತಿದೆ ಎಂದರೆ ಯಾರೂ ಸಂಪೂರ್ಣ ಅಲ್ಲಗಳೆಯುವಂತಿಲ್ಲ. ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳು ಪ್ರತಿಯೊಂದು ಜೀವನದ ಜೊತೆಗೆ ಸಕಾರಾತ್ಮಕವೋ ಇಲ್ಲವೆ ನಕಾರಾತ್ಮಕವೋ ಆಗಿ ಒಂದಿಲ್ಲೊಂದು ರೀತಿಯಲ್ಲಿ ಹೊಂದಿಕೊಂಡಿವೆ.ಮನುಷ್ಯ ಸಮಾಜ ಜೀವಿ ಎಂಬುದು ಈಗ ಸರ್ವವಿದಿತ ಸಂಗತಿ. ಒಂದು ಕಾಲದಲ್ಲಿ ಮನುಷ್ಯ ಪ್ರಾಣಿಗಳಂತೆ ಇರುವಾಗ ಅರ್ಥದ ಸಮಸ್ಯೆ ಇಷ್ಟಿಲ್ಲ. ಆದರೆ ಸಮಾಜವೆಂಬ ಸಂಸ್ಥೆಯನ್ನು ಕಟ್ಟಿಕೊಂಡಾಗ ಕೂಡ ಒಂದಿಷ್ಟು ಕಾಲ ಸುಖದಿಂದ ಇದ್ದಿರಬಹುದು. ಆದರೆ ಎಲ್ಲವಸ್ತುಗಳು ಸಮಾನಬೆಲೆಯವು ಆಗಿರುವುದಿಲ್ಲ. ಆಗ ಬೇರೊಂದು   ಮಾನದಂಡದ ಅವಶ್ಯಕತೆಯುಂಟಾಗುತ್ತದೆ.

ಯಾವುದನ್ನು ಎಲ್ಲಕಡೆಯಲ್ಲೂ ಕೊಡಬಹುದು ಮತ್ತು ಬೇಕಾದ ವಸ್ತುಗಳನ್ನು ಪಡೆಯಬಹುದು. ಎಲ್ಲಕಡೆಯಲ್ಲೂ ಚಲಾವಣೆಗೆ ಹೊಂದುವ ಮಾಧ್ಯಮದ ಅವಶ್ಯಕತೆ ಉಂಟಾಯಿತು, ನಾಣ್ಯಪದ್ದತಿಯು ಜಾರಿಯಲ್ಲಿ ಬಂದಿತು. ಇಂದಿಗೂ ನಿಮಾನ ಪದ್ದತಿ (ಜಛಿತಿಥಿತಿ) ಹಾಗೂ ನಾಣ್ಯವಿನಿಮಯ ಪದ್ದತಿ ಎರಡೂ ಜಾರಿಯಲ್ಲಿವೆ. ಆದರೆ ನಿಮಾನ ಪದ್ದತಿ ಈಗ ಹಳ್ಳಿಗಳಲ್ಲಿ ಮಾತ್ರ ಕಂಡು ಬರುತ್ತದೆ, ಅದೂ ಉತ್ತರ ಕರ್ನಾಟಕದಲ್ಲಿ.

ಕರ್ನಾಟಕ ಎಂದರೆ ಇಲ್ಲಿ ಕವಿರಾಜ ಮಾರ್ಗದಲ್ಲಿ ಹೇಳಿದ ಕಾವೇರಿಯಿಂದ ಗೋದಾವರೀ ತೀರಗಳ ಮಧ್ಯದ ಪ್ರದೇಶ ಎಂದಿಟ್ಟುಕೊಂಡು ಈ ವಿಸ್ತಾರವಾದ ಭೂಭಾಗದಲ್ಲಿನ ಸಂಗತಿಗಳನ್ನು ಸುಮಾರು ೨೬೦೦ ವರ್ಷಗಳ ಚಾರಿತ್ರಿಕ ಸಂಗತಿಗಳನ್ನು ವಿವರಿಸುವ ಪ್ರಯತ್ನವನ್ನು ಮಾಡಿದೆ. ಕಾಲವೂ ವಿಸ್ತಾರ, ದೇಶವೂ ವಿಶಾಲ, ಮತ್ತೆ ಅನೇಕ ಸಂಗತಿಗಳು ಅಧ್ಯಯನದ ಮುಷ್ಟಿಗೇ ಬಂದಿಲ್ಲ, ಇಲ್ಲವೇ ಸುಸಂಬದ್ಧವಾದ ಅಧ್ಯಯನವೇ ಆಗಿಲ್ಲ. ಆದುದರಿಂದ ಇಂದು ಯಾರೇ ಆಗಲಿ ಸ್ವಲ್ಪ ಗಂಬೀರವಾದ ಹಾಗೂ ವಿಶ್ಲೇಷಣಾತ್ಮಕವಾದ ಅಧ್ಯಯನವನ್ನು ಆರಂಬಿಸಿದರೆ ಅನೇಕ ಹೊಸಸಂಗತಿಗಳು ಹೊರಬೀಳುತ್ತವೆ, ಇದುವರೆಗಿನ ತಿಳುವಳಿಕೆಯ ಆಯಾಮಗಳನ್ನೇ ಬದಲಿಸಿಬಿಡುತ್ತವೆ. ಒಂದು ಉದಾಹರಣೆಯಿಂದ ಹೇಳುವುದಾದರೆ ಪಲ್ಲವರು ಮೊದಲು ಕರ್ನಾಟಕದವರು  ಆಮೇಲೆ ತಮಿಳುನಾಡಿನವರು

ಅವರ ಮೊದಲ ರಾಜಧಾನಿ ವಿಜಯ ವೈಜಕೇಯಿ ಎಂದರೆ  ಬನವಾಸಿ. (ಎಪಿ.ಇಂಡಿಕಾ.ಸಂ.೧,ಪು.೬, ಶಾಸನಪಾಠ). ಈ ಸಂಗತಿ ಇಂದಿನ ಯಾವ ಪಠ್ಯಪುಸ್ತಕದಲ್ಲೂ ಕಾಣಬರದು. ಅರ್ಥಾತ್ ನಮ್ಮ ಮುಂದೆ ಇಂದು ಇರುವ ಅನೇಕ ಸಂಗತಿಗಳನ್ನು ಯಥಾಸ್ಥಿತಿಯಲ್ಲಿ ಸ್ವೀಕರಿಸುವಂತಿಲ್ಲ. ಇನ್ನು ಆರ್ಥಿಕ ಸಂಗತಿಗಳ ಸಮಗ್ರ ಅಧ್ಯಯನ ಆಗೇ ಇಲ್ಲದಿರುವಾಗ ಆ ಬಗೆಗೆ ಕೂಲಂಕುಷವಾಗಿ ವಿವರ ಕೊಡುತ್ತೇನೆ  ಎನ್ನುವುದು ಒಂದು ದಾರ್ಷ್ಟ್ಯದ ಮಾತು. ಶಾಸನಗಳಲ್ಲಿ ವಿಫುಲವಾದ ಸಾಮಗ್ರಿಯು ದೊರೆಯುತ್ತದೆ. ಒಂದುರಾಜ್ಯ ಎಂದರೆ ದೇಶ,  ಕೋಶ, ದುರ್ಗ, ಪುರ, ರಾಷ್ಟ್ರ, ಸ್ವಾಮಿ, ಅಮೂಲ್ಯಜನಪದ, ದಂಡ, ಬಲ, ಮಿತ್ರ ಹಾಗೂ ಜನಪದ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ರಾಜನಿಗೆ ಮಹಿಷೀ, ಖಡ್ಗ, ಕುಮಾರ, ದ್ರವಿಣ(ಸಂಪತ್ತು), ಅಶ್ವ, ಗಜ ಹಾಗೂ ಮಂತ್ರಿ ಮುಂತಾಗಿ ಸಪ್ತಾಂಗಗಳಿವೆ. ಆರ್ಥಿಕ ಹಣಪ್ರಪಂಚದ ವ್ಯವಸ್ಥೆ. ಹಣ ಅಥವಾ ಪಣ ಯಾವುದು ಕಾರ್ಷಪಣದಿಂದ ಬಂದಿವೆಯೊ ಅದರ ವ್ಯವಸ್ಥೆ. ಕಾರ್ಷಪಣ ಎಂದರೆ ಚಿನ್ನ ರೂಪಾಯಿ ಮೂಲತಃ ರೂಪ್ಯ ಎಂದರೆ ಬೆಳ್ಳಿಯಿಂದ ಆದದ್ದು. ಚಿನ್ನ ಬೆಳ್ಳಿ ಇವು ಕಲೆತರೆ ಅಚ್ಚಬಂಗಾರ ಹಾಗೂ ಹಾಗೂ ಅಚ್ಚ ಬೆಳ್ಳಿ ಇವು ಬುಲಿಯನ್ ಎನಿಸಿಕೊಳ್ಳುತ್ತದೆ. ಹಿಂದೂ ರಾಜರ ಕಾಲದಲ್ಲಿ ಚಿನ್ನ ವಿಶೇಷವಾಗಿ ನಾಣ್ಯದ ಧಾತುವಾಗಿತ್ತು. ಸೀಸ ಹಾಗೂ ತಾಮ್ರಲೋಹಗಳೂ ನಾಣ್ಯದ ಧಾತುಗಳಾಗಿದ್ದವೆಂದು ಲೋಹದ್ರಮ್ಮ ಕರಿಯ ದ್ರಮ್ಮ, ಎಂಬ ಮಾತುಗಳಿಂದ ತಿಳಿದುಬರುತ್ತದೆ. ಬೆಳ್ಳಿಯನ್ನು ವಿಶೇಷವಾಗಿ ಮುಸಲ್ಮಾನರ ರಾಜ್ಯಾಡಳಿತ ಕಾಲದಲ್ಲಿ ನಾಣ್ಯಸೃಷ್ಟಿಗೆ ಬಳಸಿದುದು ಕಂಡುಬರುತ್ತದೆ. ದ್ರಮ್ಮ (ಡ್ರ್ಯಾಂ) ಎಂಬ ಗ್ರೀಕ್ ನಾಣ್ಯ, ಅಣಂತೆಯೇ ದೀನಾರ (ಡಿನೇರಿಯಸ್) ರೋಮನ್ ನಾಣ್ಯ ಇವುಗಳ ಪ್ರಸಕ್ತ ಶಾಸನಗಳಲ್ಲಿಯೂ, ವಡ್ಡಾರಾಧನೆಯಲ್ಲಿಯೂ ಮತ್ತು ಬಸವಣ್ಣನವರ ವಚನಗಳಲ್ಲಿಯೂ ಬಂದಿದ್ದು ಕರ್ನಾಟಕದ ಜನತೆ ಇವನ್ನು ತಮ್ಮ ಜೀವನದ ವ್ಯವಹಾರದಲ್ಲಿ ಬಳಸುತ್ತಿದ್ದಾರೆಂದು ಅಬಿವ್ಯಕ್ತವಾಗುತ್ತದೆ. ಇವುಗಳು ಈಗ ಹೇಗೆ ಅಪರಿಚಿತವೋ ಹಾಗೆಯೇ ಹಿಂದಿನ ಕಾಲದ ಇನ್ನೂ ಅನೇಕ ಪಾರಿಭಾಷಿಕ ಪದಗಳು ಸದ್ಯಕ್ಕೆ ಅರ್ಥವಾಗದಿರಬಹುದು ಇಲ್ಲವೆ ವಿದ್ವಾಂಸರಲ್ಲಿ ಬಿನ್ನಾಬಿಪ್ರಾಯಗಳನ್ನು ಹೊಂದಿರಬಹುದು. ಬಿನ್ನಾಬಿಪ್ರಾಯಗಳನ್ನು ಬದಿಗಿಟ್ಟು ವಸ್ತುಸ್ಥಿತಿಯನ್ನು ಸಾಮಾನ್ಯ ರೀತಿಯಲ್ಲಿ ನೋಡಬೇಕಾಗಿದೆ.

ಕರ್ನಾಟಕದ ಆರ್ಥಿಕ ಸಂಗತಿಗಳನ್ನು ದೇಶದ ಉತ್ಪಾದನೆ, ವ್ಯಾಪಾರ ಹಾಗೂ ಆಯವ್ಯಯ ಎಂಬ ಮೂರು ನಾಲ್ಕು ವಿಭಾಗಗಳಲ್ಲಿ ಪರಿಶೀಲಿಸಬಹುದು.

೧. ಉತ್ಪಾದನೆ: ಇಂದಿನಂತೆಯೇ ಪ್ರಾಚೀನ ಕಾಲದಲ್ಲಿಯೂ ಕರ್ನಾಟಕದಲ್ಲಿ ವ್ಯವಸಾಯವೇ ಬಹುಮುಖ್ಯವಾದ ಜೀವನೋಪಾಯವಾಗಿತ್ತು. ಭೂಮಿತಾಯಿಯ ಮಕ್ಕಳು  ನಾವು, ಕುರಿ ಸಾಕಾಣಿಕೆ ಆಡುಸಾಕಾಣಿಕೆ, ಎಮ್ಮೆ ಮತ್ತು ಹಸುಸಾಕಾಣಿಕೆ ಇವೂ ನಮ್ಮವರ ಉದ್ಯಮಗಳಾಗಿದ್ದವು. ಗೋಸಾಸ, (ಗೋಸಹಸ್ರ) ಗೋಮಾಳ ಇತ್ಯಾದಿಗಳನ್ನು ಇಲ್ಲಿ ಜ್ಞಾಪಕಕ್ಕೆ ತಂದುಕೊಳ್ಳಬೇಕು. ಕೃಷಿಮಷಿಗಳ ಪ್ರಸ್ತಾಪ ಪಂಪ ಮಾಡಿದ್ದಾನೆ(ಆದಿ. ಪು. ೧೧೧೦೭) ಕೃಷಿ ಎಂದರೆ ಒಕ್ಕಲುತನದಿಂದ ಲೋಕವೆ  ತಣಿಯುತ್ತಿತ್ತು.

ನೆಲನುಂ ಬೆಳೆಗೆ ಪಾರ್ವರುಂ ಪ್ರಜೆಯುಂ ತಣಿಗೆ , ಎಂಬ ಮಾತುಗಳಲ್ಲಿ ಜ್ಞಾಪಿಸಿಕೊಳ್ಳಬಹುದು. ದಾನವನ್ನು ಕೊಡುವ ವಸ್ತುಗಳಲ್ಲಿ ಭೂದಾನವೇ ಶ್ರೇಷ್ಠವೆಂದು ಪರಿಗಣಿಸಲಾಗುತ್ತಿತ್ತು. ಮತ್ತು ಭೂದಾನಕ್ಕೆ ಸಂಬಂಧಪಟ್ಟ ಶಾಸನಗಳ ಸಂಖ್ಯೆಯೇ ಅಕ. ಸಾಗುವಳಿಯ ಜಮೀನಿನ ಮೇಲೆ ಕಂದಾಯವನ್ನು ನಿಗದಿಪಡಿಸಲಾಗುತ್ತಿತ್ತು ಮಳೆಯಿಂದ ಬೆಳೆಯುವ ಭೂಮಿ ದೇವಮಾತೃಕೆ (ಬೆದ್ದಲುಒಣಹರಿ), ನದೀತಟಾಕ ಕೆರೆತೊರೆ ಇತ್ಯಾದಿಗಳಿಂದ ಬೆಳೆಯುವ ಭೂಮಿ ನದೀಮಾತೃಕೆ(ಗದ್ದೆ), ಬಾವಿ, ಕೊಡ ಇತ್ಯಾದಿಗಳಿಂದ ಸಾಗುವಳಿಗೊಳ್ಳುವುದು ತೋಟ ತುಡಿಕೆ. ಇವನ್ನೇ ಮುಸಲ್ಮಾನರ ಆಳ್ವಿಕೆಯಲ್ಲಿ ಖುಷ್ಕಿ, ತರಿ ಎಂದು ಕರೆದಿರುವರು. ಈ ವಿಭಜನೆ ಇಂದಿಗೂ ಬಳಕೆಯಲ್ಲಿದೆ. ಮಣ್ಣಿನ ಗುಣವನ್ನು ಕೂಡ ಆಶ್ರಯಿಸಿ ಹೊಲಗಳನ್ನು ಎರೆ(ಕರಿಕೆಯ್) ಕಿಸುಗಾಡ್, ಕೆಂಗಾಡು, ಮಳಲಕೆಯಿ, ಮೊರಡಿ ಮುಂತಾಗಿ ವಿಭಜಿಸಿದುದು ಕಂಡುಬರುತ್ತದೆ.

ಪ್ರಾಚೀನ ಕರ್ನಾಟಕದಲ್ಲಿಯೂ ಈಗಿನ ಹಾಗೆಯೇ ಭತ್ತ, ಕಬ್ಬು, ತೆಂಗು, ಅಡಕೆ,ಬಾಳೆ, ಈಳೆ, ನಿಂಬೆ, ಮಾವು, ಮಾದಲ, ಹಲಸು, ನೇರಳೆ, ಮಲ್ಲಿಗೆ, ಸಂಪಿಗೆ, ಸುರಗಿ, ಅದಿರ್ಮುತ್ತೆ, ಪಾದರಿ, ಗೊಜ್ಜಿಗೆ(ಸೇವಂತಿಗೆ), ದವನ ಹಾಗೂ ಮರುಗಗಳನ್ನು ಬೆಳೆಯುತ್ತಿದ್ದರು. ಒಂದೊಂದು ಊರಿಗೂ ಅಲ್ಲಿನ ದೇವಸ್ಥಾನಕ್ಕೆ ಆನಿಕೊಂಡೋ ಇಲ್ಲವೆ ಊರ ಹೊರಗೆ ಹೂದೋಟಗಳಿರುತ್ತಿದ್ದವು. ಅವುಗಳನ್ನು ಮಾಡುವ ಮಾಲೆಕಾರ(ಹೂಗಾರ, ಫುಲಾಣಿ) ಜನರಿಗೆ ರಾಜ ಭಂಡಾರದಿಂದ ಹೂ ನೀಡುವ ಬಗ್ಗೆ ಕಂದಾಯದಲ್ಲಿ ಒಂದಿಷ್ಟು ರಿಯಾಯ್ತಿ ಬಿಟ್ಟುದು ಮುಂತಾಗಿ ವಿವರಗಳು ಬರುತ್ತವೆ.

ಉದಾ: ಮಾಲಕಾರಂಗೆ ಬಿಟ್ಟೋಡು ಅರ್ಧವಿಸವಿ. ಇಮ್ಮಡಿ  ಪುಲಕೇಶಿಯ ಚಿಕ್ಕಪ್ಪ ಮಂಗಳೇಶನು ಮಾಡಿಸಿದ ಕಲ್ಮನೆಗೆ( ಗುಹಾದೇವಾಲಯಕ್ಕೆ) ಲಂಜಿಗೇಸರ ಊರನ್ನು ಮತ್ತು ಮಾಲಕಾರಂಗೆ ರಾಜನು ನೀಡಿದ ದತ್ತಿಯನ್ನು ಒಂದು ಶಾಸನ ದಾಖಲಿಸಿದೆ. ದೇವಾಲಯದ ಕೈಂಕರ್ಯಕ್ಕೆ ಊರಿನ ಕಂದಾಯವನ್ನು ಬಿಡುತ್ತಿದ್ದರು. ಎಂಬುದು ಇಲ್ಲಿಂದ ಸ್ಪಷ್ಟವಿದೆ. ಅರ್ಧವಿಸವಿ ಅವಂದು ಬಳಕೆಯಲ್ಲಿದ್ದ ನಾಣ್ಯವನ್ನು ಸೂಚಿಸುತ್ತದೆ. ಬೆದ್ದಲು ಭೂಮಿಯಲ್ಲಿ ಜೋಳ, ದ್ವಿದಳಧಾನ್ಯಗಳು, ಹತ್ತಿ, ಹರಳು, ಎಳ್ಳು, ಸಾಸುವೆ, ಕೊತ್ತಂಬರಿ, ಸಜ್ಜೆ, ನವಣೆ, ಶಾವಿ(ರಾಜಾನ್ನ), ಹಾರಕ, ಕೋದ್ರ, ಗೋ ಇತ್ಯಾದಿಗಳನ್ನು ಬೆಳೆಯುತ್ತಿದ್ದರು. ನೀರಾವರಿಯು ಮುಖ್ಯವಾಗಿ ನದಿ, ಬಾವಿ, ಕೆರೆ  ಹಾಗೂ ಕೂಪಗಳನ್ನು ಅವಲಂಬಿಸಿತ್ತು. ರಾಜರು, ಶ್ರೀಮಂತರು, ಮಠಾಪತಿಗಳು ಮತ್ತು ಗ್ರಾಮಮುಖ್ಯಸ್ಥರು ಕೆರೆ, ಕಾಲುವೆ, ಕಟ್ಟೆ, ಸೇತುವೆ ಕಟ್ಟಿಸುತ್ತಿದ್ದರು. ಆ ಸೌಲಭ್ಯವನ್ನು ಪಡೆದವರು ಬೆಳೆಯಲ್ಲಿ ೧೦/೧ಎಂದರೆ ದಶಬಂದ ಅಥವಾ ಪತ್ತೆಸಿದ್ದಿ, ಫಸಲನ್ನು ಕೊಡಬೇಕಾಗಿದ್ದಿತು. ಶ್ರವಣ ಬೆಳಗೊಳ ತೀರ್ಥಕ್ಕೆ ಒಡೆಯರಾದ ಮತಿಸಾಗರಪಂಡಿತ ಭಟಾರಕರು ಕಾವೇರಿ ನದಿಯ ದಡದಲ್ಲಿ ಪೆರ್ಬಾಣ ಹಳ್ಳಿಯಲ್ಲಿ (ಈಗಿನ ಶ್ರೀರಂಗ ಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮ)

ಕಟ್ಟೆಯನ್ನು ಕಟ್ಟಿಸಿ ಅದಕ್ಕೆ ಆ ಹಳ್ಳಿಯನ್ನು ಕೊಂಡವರು ಅಲ್ಲಿನ ನೀರಾವರಿ ಸೌಲಭ್ಯವನ್ನು ಬಳಸಿಕೊಂಡುದಕ್ಕೆ ಕೊಡಬೇಕಾದ ಕಂದಾಯದ ವಿವರಗಳನ್ನು ಚೆನ್ನಾಗಿ ವಿವರಿಸಿದೆ. ಕಟ್ಟೆಯನ್ನು ಕಟ್ಟಿದ ವರ್ಷ ಅರಣಿಯ ಒಂದು ಗದ್ಯಾಣ, ಎರಡನೆಯ ವರ್ಷ ಪತ್ತೊನ್ದಿ (೧೦/೧) ಮೂರನೆಯ ವರ್ಷಏಳಳವಿ (೭/೧) ಅನಂತರದಲ್ಲಿ ಎಲ್ಲಾ ಕಾಲಕ್ಕೂ ಐದಳವಿ(೫/೧) ಕೊಡಬೇಕು. ಕ್ರಿ.ಶ. ೫ನೆಯ ಶತಮಾನದ ಹಲ್ಮಿಡಿಯ ಶಾಸನದ ಕಾಲದಲ್ಲಿ ೧೦/೧ ಇದ್ದದ್ದು ಕ್ರಿ.ಶ ೧೦ನೆಯ ಶತಮಾನದಲ್ಲಿ ೫/೧ ಆದದ್ದು ತುಂಬ ಗಮನಾರ್ಹವಾದ ಅದಂಶ.(ಟoಠಿ ಟ್ಛ ಜಿqಜ್ಞಿಜ)ಸೂಚ್ಯಾಂಕ ಏರಿದುದರ ಪರಿಣಾಮ ವಿದೆಂದು ತೋರುತ್ತದೆ.ಸುಮಾರು ಐದುನೂರು ವರ್ಷಗಳಲ್ಲಿ ಗದ್ದೆಯ ಭೂಮಿಯ ಮೇಲೆ ಹಾಕಿದ ಕಂದಾಯ ಎರಡುಪಟ್ಟಾಗಿದೆ  ಎಂಬುದು ಆರ್ಥಿಕ ವ್ಯವಸ್ಥೆಯ ದರ್ಪಣವಾಗಿದೆ.

 

ಈ ದೃಷ್ಟಿಯಿಂದ ಈಶಾಸನ (ಎಪಿ. ಕ. ಸಂ.೧೯೯೭) ಮಹತ್ವದ  ದಖಲೆಯಾಗಿದೆ. ತರಿ, ಖುಷ್ಕಿ ಭೂಮಿಗಳನ್ನು ಪರಿಗಣಿಸಿ ಕಂದಾಯವನ್ನು ನಿರ್ಧರಿಸಲಾಗುತ್ತದೆ. ಕಟ್ಟುಗುತ್ತಿಗೆ ಆಗಲೂ ಇತ್ತು.

೨. ಕೈಗಾರಿಕೆಗಳು : ಕೃಷಿಗೆ ಬೇಕಾದ ಹಾಗೆಯೇ ಯುದ್ಧಕ್ಕೆ ಬೇಕಾದ ಸಲಕರಣೆಗಳನ್ನು ಆಯುಧಗಳನ್ನು ಉತ್ಪಾದಿಸುವ ಕಮ್ಮಾರರ, ಪಂಚಕಾರುಕರ (ಇವರಲ್ಲಿ ಅಕ್ಕಸಾಲಿಗರು ಮೊದಲಾದವರು ಬರುತ್ತಾರೆ) ಕುಟುಂಬಗಳು  ಇದ್ದಂತೆ ನೇಕಾರರ ಗುಂಪೂ ಬಹಳ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ರೇಷ್ಮೆಯ ಉದ್ಯಮ ಪ್ರಾಯಶಃ ಚೀನಾದೇಶದಿಂದ ಇಲ್ಲಿಗೆ ಬಂದಿರಬೇಕು ಚೀನಾಂಬರ ಎಂದು ರೇಷ್ಮೆ ವಸ್ತ್ರಕ್ಕೆ ಕರೆದಿರುವುದೇ ಇದಕ್ಕೆ ಸಾಕ್ಷಿ. ಪಟ್ಟಗಾರರು ಎಂದೂ ಹೇಳಿರಬಹುದು. ನೇಕಾರರು ಹತ್ತಾರು ವಸ್ತ್ರಗಳನ್ನಲ್ಲದೆ. ರೇಷ್ಮೆ ಮುಂತಾದ ನವುರಾದ ವಸ್ತ್ರಗಳನ್ನು ನೇಯುತ್ತಿದ್ದರು. ನೇಯ್ಗೆಯ ಮಗ್ಗಗಳ ಮೇಲೆ ತೆರಿಗೆಗಳನ್ನು ಹಾಕುತ್ತಿದ್ದುದು ಅದರ ವಿಶೇಷ ಬೆಳವಣಿಗೆಯನ್ನು ಸೂಚಿಸುತ್ತದೆ. ಇದಕ್ಕೆ ಮಗ್ಗದೆರೆ ಎಂದು ಹೇಳುತ್ತಿದ್ದರು. ಚಿಪ್ಪಿಗಸಿಂಪಿಗ ಅಥವಾ ಸೂಜಿಯ ಕಾಯಕದ ಬದುಕುವ ಬಗೆ ಅಸ್ತಿತ್ವದಲ್ಲಿತ್ತು. ಮೇದಾರಿಕೆ( ಬೊಂಬುಗಳನ್ನು ಸೀಳಿ ಬುಟ್ಟಿ ಹಾಗೂ ಚಾಪೆ, ಮೊರ ಇತ್ಯಾದಿಗಳನ್ನು ಮಾಡುವುದು) ಇದ್ದಿತು. ಕುಂಬಾರಿಕೆ, ಎಣ್ಣೆಯ ಕೈಗಾರಿಕೆಯು ತುಂಬಾ ಪ್ರಚಾರದಲ್ಲಿದ್ದಿತು. ತೆಲ್ಲಿಗರೆಂದು ಇವರನ್ನು ಕರೆಯುತ್ತಿದ್ದರು. ಎಣ್ಣೆಯ ಗಾಣಗಳ ಮೇಲೆ ತೆರಿಗೆಗಳನ್ನು ಹಾಕಿದುದಕ್ಕೆ ದಾಖಲೆಗಳಿವೆ. ಕಬ್ಬಿನ ಗಾಣಗಳಲ್ಲಿಆಲೆಮನೆಗಳಲ್ಲಿಬೆಲ್ಲ ಹಾಗೂ ಸಕ್ಕರೆಯನ್ನು ಉತ್ಪಾದಿಸುತ್ತಿದ್ದರು. ವಚನ ಯುಗದಲ್ಲಿ ಅನೇಕ ಕಾಯಕಗಳ ಉಲ್ಲೇಖವಿದೆ. ಕಾಯಕವೇ ಕೈಲಾಸ ಎಂಬ ನುಡಿಯನ್ನು ಇಲ್ಲಿ ನೆನೆಯಬಹುದು.

೩. ಗಣಿ ಉದ್ಯಮಗಳು :ಪ್ರಾಚೀನ ಕರ್ನಾಟಕ ಎಂದರೆ ಮೌರ್ಯರ ಕಾಲಕ್ಕೆ ಮುಂಚೆಯೇ ಚಿನ್ನದ ಗಣಿಕೆಲಸ ಇಲ್ಲಿ ನಡೆದಿತ್ತು ಎಂಬುದಾಗಿ ಡಾ||ಥಾಫರ್ ಮೊದಲಾದವರ ಉತ್ಖಲನಗಳಲ್ಲಿ ಕಂಡುಬಂದಿದೆ. ದೇವನಾಂ ಪ್ರಿಯದರ್ಶಿಯೂ ಅಶೋಕನೂ ಒಬ್ಬನೇ ಎಂದು ತಿಳಿಸಿದ ಮಸ್ಕಿ ಶಾಸನದ ಸುತ್ತ ಸುತ್ತಣ ಪ್ರದೇಶದ ಅಧ್ಯಯನದಲ್ಲಿ ಇದು ಸ್ಪಷ್ಟವಿದೆ. ಇಂದಿಗೂ ಈ ಪ್ರದೇಶದ ಹಟ್ಟಿಯಲ್ಲಿ ಗಣಿಗಾರಿಕೆ ಉದ್ಯಮ ಅಸ್ತಿತ್ವದಲ್ಲಿದೆ.  ಕೋಲಾರ ಚಿನ್ನದ ಗಣಿಗಳೂ ಬಹು ಪ್ರಾಚೀನ, ಕೋಲಾರ ಜಿಲ್ಲೆಯ ಹುನಕುಂದ ಮತ್ತು ಬಿಜಾಪುರ ಜಿಲ್ಲೆಯ ಹುನಗುಂದ ಸ್ಥಳಗಳ ಬಳಿಯಲ್ಲಿ ಚಿನ್ನದ ಗಣಿಗೆಲಸಗಳ ಅವಶೇಷಗಳಿವೆ.  ಜಲಗಿನಅಕಾರಿ ಎಂಬ ಪದವಿಯೂ ಚಿನ್ನದ ಕೆಲಸದ ಮೇಲಿನ ಸುಂಕಾಕಾರಿಯನ್ನು ಸೂಚಿಸುತ್ತಿರಬಹುದು. ಜರಗಿನ ತೆರೆ ಎಂಬ ಒಂದು ತೆರಿಗೆ ಉತ್ತರ ಕರ್ನಾಟಕದ ಶಾಸನಗಳಲ್ಲಿ ಕಂಡುಬರುತ್ತದೆ. ಜರಗಿನ ಪ್ರಸ್ತಾಪ ಬಸವಣ್ಣನವರ ಒಂದು ವಚನದಲ್ಲಿ ಬಂದಿದೆ. ಶ್ರೀಶೈಲದಲ್ಲಿರುವ ಹಾಟಕೇಶ್ವರ ದೇವಾಲಯದ ಲಿಂಗವನ್ನು ಹಾಗೆ ಕರೆಯಲು ಅದು ಒಂದೊಮ್ಮೆ ಚಿನ್ನವನ್ನು(ಹಾಟಕ) ನೀಡುತ್ತಿದ್ದುದೇ ಕಾರಣ.

ಇಂಗಳದ ಹಾಳ ಎಂಬ ಗ್ರಾಮಗಳ ಬಳಿಯಲ್ಲಿ ತಾಮ್ರ ಲೋಹವನ್ನು ಉತ್ಪಾದಿಸುತ್ತರೆಂದು ತಿಳಿದುಬಂದಿದೆ. ಶಹಪುರ ತಾಲ್ಲೂಕಿನ ಗೋಗಿಯ ಬಳಿಯ ಹಾರನಗೆರೆಯಲ್ಲಿ ಬೂದಿದಿಣ್ಣೆ (Ash mount) ದೊರಕಿದ್ದು ಹತ್ತಿರದಲ್ಲಿ ಇಂಗಿನ ಹಾಳದಲ್ಲಿ ತಾಮ್ರ ಉತ್ಪಾದಿಸುತ್ತಿದ್ದರೆಂದು ಇತ್ತೀಚೆಗೆ ತಿಳಿದು ಬಂದಿದೆ. ಇಲ್ಲಿ ಶಾತವಾಹನರ ಕಾಲದ ಟಂಕಸಾಲೆ ಒಂದಿದ್ದುದಾಗಿಯೂ ಅಲ್ಲಿ ದೊರೆತ ಅನುಪಯುಕ್ತ ನಾಣ್ಯಗಳ ರಾಶಿಯ ಮೂಲಕ ಗೊತ್ತಾಗಿದೆ. ಈ ನಾಣ್ಯಗಳಿಗೆ ಮಿಶ್ರಲೋಹ (Alloy) ಬಳಸಿರುವುದು ಗಮನಾರ್ಹ.

ಉಪ್ಪು ಮಾರಾಟದ ವಸ್ತುಗಳಲ್ಲೊಂದಾಗಿತ್ತು. ಅನೇಕ ಕಡೆಗೆ ಉಪ್ಪಿನ ಮಾಳಿಗಳಿವೆ. ಗುಲ್ಬರ್ಗ ಜಿಲ್ಲೆಯ ಸುರಪುರ ತಾಲ್ಲೂಕಿನ ಬೈಚಬಾಳದಲ್ಲಿ ೧೯೫೦೬೦ ರ ವರೆಗೂ ಉಪ್ಪಿನ ಉದ್ಯಮ ಚಾಲ್ತಿಯಲ್ಲಿದ್ದಿತು. ಈ ಕಾರ್ಯದಲ್ಲಿ ತೊಡಗಿಸಿಕೊಂಡ ಕುಟುಂಬಗಳಿಗೆ ಉಪ್ಪಾರರು ಎಂದು ಹೇಳಲಾಗುತ್ತಿತ್ತು. ಉಪ್ಪಿನ ಬಾವಿಗಳು(ಕೂಪಗಳು) ಇನ್ನೂ ಕಾಣಸಿಗುತ್ತವೆ. ಉಪ್ಪಿನಿಕ ಗವುಡಗಳು ದೇವರ್ಗೆ ಬಿಟ್ಟ ಆಯ(ಸುರಪುರ ತಾಲ್ಲೂಕಿನ ಶಾಸನಗಳು ಕ್ರಿ.ಶ.೧೧೪೪ ಹಗರಟಿಯ ಶಾಸನ) ಎಂಬ ವಾಕ್ಯ ಉಪ್ಪಿನ ವ್ಯಾಪಾರದ ವಿಷಯವನ್ನು ತಿಳಿಸುತ್ತದೆ. ಗ್ರಾಮನಾಂ ಉಪ್ಪಿನ ಕೆರೆ ಇತ್ಯಾದಿಗಳು ಈ ಉದ್ಯಮದ ಅಸ್ತಿತ್ವವನ್ನು ಸೂಚಿಸುತ್ತವೆ.  ಗಣಿಗಳಿಂದ ರಾಜ್ಯಗಳಿಗೆ ತುಂಬ ಆದಾಯವಿರುತ್ತಿತ್ತು. ಕೌಟಿಲ್ಯನ ಪ್ರಕಾರ ಗಣಿಗಳು ರಾಜ್ಯದ ರಾಜನ ಆಸ್ತಿ. ಮನುಸ್ಮೃತಿಯಲ್ಲಿ ಖಾಸಗಿಯವರೂ ಗಣಿಗಾರಿಕೆ ಮಾಡಬಹುದೆಂದಿದೆ. ಕ್ರಿ.ಶ.೧೧೧೨ ನೆಯ ಶತಮಾನದ ಕೃತಿ ಮಾನಸೋಲ್ಲಾಸ ಚಿನ್ನದ ಗಣಿ, ಬೆಳ್ಳಿಯಗಣಿ, ರತ್ನಗಳಗಣಿ ಇತ್ಯಾದಿಗಳ ಮೇಲೆ ತೆರಿಗೆಗಳನ್ನು ಹಾಕಬೇಕೆಂದು ವಿಸುತ್ತದೆ. ಬಳ್ಳಿಗಾವೆಯ ವರ್ತಕರು ಇಂದ್ರನೀಲ, ಚಂದ್ರಕಾಂತ, ಮುತ್ತು, ಮಾಣಿಕ್ಯ, ವಜ್ರ, ವೈಡೂರ್ಯ, ಪುಷ್ಯರಾಗ, ಇತ್ಯಾದಿ ರತ್ನಗಳ ವ್ಯಾಪಾರವನ್ನು ಮಾಡುತ್ತಿದ್ದರು. ಬಳ್ಳಾರಿಜಿಲ್ಲೆಯಲ್ಲಿ ವಜ್ರದ ಗಣಿಗಳಿದ್ದುವೆಂದು ಮಾರ್ಕೊಪೋಲೊ, ಇಬ್ನಾಬತೂತ, ತವೆರ್ನಿಯರ್, ಮೊದಲಾದ ಪ್ರವಾಸಿಗರ ಬರವಣಿಗೆಯಿಂದ ತಿಳಿದು ಬರುತ್ತದೆ. ಗುಂಟಕಲ್ ಬಳಿಯ ವಜ್ರಕರೂರಲ್ಲಿ ಇಂದಿಗೂ ಆಗಾಗ ವಜ್ರಗಳು ದೊರೆಯುತ್ತವೆ. ವಜ್ರ, ಬಿಜ್ಜ ಇವು ವಜ್ರದ ಅಸ್ತಿತ್ವವನ್ನು ಸೂಚಿಸುತ್ತವೆ. ವಿಜಯನಗರದ ಬೀದಿಗಳ ರತ್ನದ ವ್ಯಾಪಾರ ಯಾರಿಗೆ ಗೊತ್ತಿಲ್ಲ.

ಸಿಂಹಾಸನಗಳನ್ನು ಕಲಾಕಾರರು ರಾಜರುಗಳಿಗೆ ಏರ್ಪಡಿಸುತ್ತಿದ್ದಿರಬೇಕು ಆದರೆ ಲೋಹಾಸನಗಳ ಪ್ರಶಸ್ತಿ ಶಾಸನಗಳಲ್ಲಿಯೂ ಪಂಪಾದಿ ಕವಿಗಳ ಕಾವ್ಯದಲ್ಲಿಯೂ ಕಂಡುಬರುತ್ತಿದ್ದು ಅನೇಕ ಶ್ರೀಮಂತರು ಇವುಗಳನ್ನು ಕೊಡಲು ಬಳಸುತ್ತಿರಬೇಕು. ಅಕಂದರೆ ಇವುಗಳನ್ನು ಲೋಹಾರರು ಉತ್ಪಾದಿಸುತ್ತಿರಬೇಕು.

೪. ಸಾಲ ಮತ್ತು ಮಾರಾಟದ ವ್ಯವಸ್ಥೆ : ಕೊಟ್ಟವನು ಕೋಡಂಗಿ ಇಸಗೊಂಡವನು ಈರಭದ್ರ, ಎಂಬ ಗಾದೆ ಕೊಡು ಕೊಳ್ಳುವಿಕೆ (ಸಾಲ) ವನ್ನು ನಿರಾಕರಿಸಿದರೂ ಸಾಲದ ಕಾರ್ಯ ನಿಲ್ಲುವಂತಿಲ್ಲ. ಜನತೆ, ದೇಶ ಕೊರತೆಗಳ ಪೂರೈಕೆಗೆ ಆಗಾಗ ಸಾಲಮಾಡಲೇ ಬೇಕಾಗುತ್ತದೆ. ಎಲ್ಲರೂ ಮೋಸಗಾರರಿದ್ದಿಲ್ಲ. ಎಲ್ಲೋ ಕೆಲವು ಶ್ರೀಮಂತರು, ಸಾಹುಕಾರರು, ದೇವಾಲಯಗಳು ಗ್ರಾಮಸಭೆಗಳು, ಮಹಾರಾಜನ ಸಮಿತಿಗಳು ಹಣವನ್ನು ಸಾಲವಾಗಿ ಕೊಡುತ್ತಿದ್ದವು. ಕೊಟ್ಟ ಸಾಲವನ್ನು ವಸೂಲು ಮಾಡುವುದಕ್ಕೆ ಸಿಬ್ಬಂದಿಯೂ ಇರುತ್ತಿತ್ತು, ಸಾಲದ ವಸೂಲಿಗೆ ಹೋದ ವ್ಯಕ್ತಿಗಳಿಗೆ ಸಾಲ ತೆಗೆದುಕೊಂಡವರು ಊಟದ ವ್ಯವಸ್ಥೆ ಇತ್ಯಾದಿಗಳನ್ನು ಮಾಡಬೇಕಿತ್ತು. ರಾಷ್ಟ್ರಕೂಟ ಮುಮ್ಮಡಿಕೃಷ್ಣನ ಕಾಲದ ತಮಿಳು ನಾಡಿನ ಶಾಸನಗಳಲ್ಲಿ ಅನೇಕ ಕಡೆಗೆ ಇದರ ಪ್ರಸ್ತಾಪ ಬರುತ್ತದೆ.  ಸಾಲ ಹಾಗೂ ಬಡ್ಡಿ ಇವು ಜೊತೆಜೊತೆಗೆ ಹೋಗುವ ಜೋಡೆತ್ತಿನ ಬಂಡಿ. ಭಕ್ತಾದಿಗಳು ಕೊಡುವ ದೇವಸ್ಥಾನದ ನಂದಾದೀಪಕ್ಕೆ, ಜೀರ್ಣೋದ್ದಾರಕ್ಕೋ, ಅರವಟ್ಟಿಗೆಗೋ, ಕೆರೆಗೋ ಇಲ್ಲವೆ ಕೆರೆಯ ದುರಸ್ಥಿಗೋ ಕೊಡುತ್ತಿದ್ದ ಹಣವನ್ನು  ಪುದುವಟ್ಟಾಗಿಸಿ ಅದಕ್ಕೆ ಬರುವ ಬಡ್ಡಿಯಿಂದ ಕಾರ್ಯಗಳನ್ನು ಎಸಗಬೇಕೆಂದು ಅನೇಕ ಶಾಸನಗಳಲ್ಲಿ ಬರೆದಿದೆ. ಎಪಿ.ಕ. ಎಪಿ.ಇಂಡಿಕಾಯಾವುದೇ ಶಾಸನ ಸಂಪುಟ ತೆಗೆದರೂ ಸುಲಭವಾಗಿ ಕಾಣಬಹುದಾದ ವಿಷಯ ವರ್ತಕ ಶ್ರೇಣಿಗಳು, ದೇವಾಲಯದ ಧರ್ಮದರ್ಶಿಗಳು ಊರ ಸಭೆಗಳು ಈ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.

ಮಾರಾಟದ ಸೌಲಭ್ಯ ಊರೂರಲ್ಲಿಯೂ ದೇವಸ್ಥಾನ ಇಲ್ಲವೆ ಅದರ ಬಳಿಯಲ್ಲಿ ಅಲಂಗಡಿಗಳ ಮುಖಾಂತರ ನಡೆಯುತ್ತಿತ್ತು. ದೇವಸ್ಥಾನದ ನಿರ್ಮಾಣ ನಗರೀಕರಣದ ಕಾರ್ಯದಲ್ಲಿ ಒಂದಂಗ ಎಂಬುದು ತರಿಕೆರೆತಾಲ್ಲೂಕಿನ ಅಮೃತಾಪುರ ಶಾಸನ ಬಹಳ ಸೊಗಸಾಗಿ ಚಿತ್ರಿಸಿದೆ. (ಎಪಿ.ಕ ಸಂಪುಟ೬ ಬಿ.ಎಲ್.ರೈಸ್) ಸಂತೆಗಳು ವ್ಯಾಪಾರಗದ ಕೇಂದ್ರಗಳು ವಾರಕ್ಕೊಮ್ಮೆ ನಿಗದಿತ ದಿನದಂದು ಹತ್ತಾರು ಹಳ್ಳಿಗಳ ಮಧ್ಯೆ ಒಂದು ಮೈದಾನದಲ್ಲಿ ಸಂತೆಗಳು ನೆರೆಯುತ್ತಿದ್ದವು. ಅಲ್ಲಿ ನಿಮಾನಪದ್ದತಿ ಹಾಗೂ ನಾಣ್ಯ ವಿನಿಮಯ ಪದ್ದತಿ ಎರಡೂ ಅಸ್ಥಿತ್ವದಲ್ಲಿದ್ದವು. ವಸ್ತುಗಳ ಧಾರಣೆ ಮತ್ತು ಧಾರಣೆಗಳ ಮೇಲೆ ಸರ್ಕಾರದ ಹತೋಟಿ ಇದ್ದುದಕ್ಕೆ ಎಲ್ಲಿಯೂ ದಾಖಲೆಗಳು ದೊರೆಯುವುದಿಲ್ಲ. ಇಸ್ಲಾಂ ಧರ್ಮದಲ್ಲೂ ಎಷ್ಟಾದರೂ ಲಾಭವನ್ನು ಪಡೆಯಬಹುದು. ಇದಕ್ಕೆ ಹತೋಟಿ ಇಲ್ಲ. ಅಲ್ಲಿ ಸಾಲಕೊಡುವುದು ಬಡ್ಡಿಪಡೆಯುವುದು ಪಾಪಕಾರ್ಯ. ಬಸವಾದಿ ಪ್ರಮಥರೂ ಕಡಬಡ್ಡಿಯ ಕೊಡಬಾರದು, ಎಂದೇ ಸೂಚಿಸಿದ್ದಾರೆ. ಸಾಲವನುಕೊಟ್ಟವರು ಬಹಳ ಭಯಾನಕ ರೀತಿ ವಸೂಲಾತಿ ಮಾಡುತ್ತಿದ್ದರು ಇದು ಎಲ್ಲ ದೇಶಗಳಲ್ಲೂ ಕಂಡುಬಂದ ಸಂಗತಿ ಶೈಲಾಕರು ತಮ್ಮಲ್ಲಿ ಸಾವಿರಾರು ಇಂದಿನ ಡಾನ್ ಗಳು ಅವರ ಪರಂಪರೆಯೆ (ಶೇಕ್ಸ್‌ಪಿಯರ್‌ನ ಮರ್ಚೆಂಟ್‌ಆಫ್‌ವೆನಿಸ್) ಡಾ|| ಎ. ಎಸ್. ಅಳ್ತೇಕರ್ ಹಾಗೂ ಡಾ|| ಅಪ್ಪಾದೊರೈ ಅವರ ಕೃತಿಗಳು ಈ ದಿಶೆಯಲ್ಲಿ ಸಾಕಷ್ಟು ಬೆಳಕನ್ನು ಚೆಲ್ಲುತ್ತವೆ. ವರ್ತಕರು ಹಾಗೂ ವರ್ತಕ ಶ್ರೇಣಿಗಳು ಮಾರಾಟದ ಅಪತಿಗಳು. ಒಂದೇ ಬಗೆಯ ಪುಕ್ಕಗಳನ್ನುಳ್ಳ ಪಕ್ಷಿಗಳು ಒಂದೆಡೆ ಸೇರುವಂತೆ ಇರುವಂತೆ ವಲಸೆ ಹೋಗುವಂತೆ ಒಂದೊಂದು ಬಗೆಯ ಜನತೆ ಸಂತೆಗಳಲ್ಲಿ ಸೇರುತ್ತಿದ್ದರು. ಸಂತೆಯಿಂದ ಸಂತೆಗೆ ಪ್ರಯಾಣ ಬೆಳೆಸುತ್ತಿದ್ದರು. ಯಾವುದಾದರೂ ಕ್ರಮವನ್ನು ಕಾರ್ಯವನ್ನು ಕೈಗೊಳ್ಳಬೇಕಾದರೆ. ಒಂದು ಪಂಗಡದವರು  (ಒಂದು ಜಾತಿಯವರು) ಒಂದೆಡೆ ಒಟ್ಟಿಗೆ ಸೇರಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರು. ಉದಾ:ಐಯ್ಯಾ ಹೊಳೆ ಐನೂರ್ವರು, ಉಗುರ ಮೂನೂರ್ವರು, ನಾನಾದೇಶಿಗಳು, ಮುಂಮರಿದಂಡಗಳು  ಇತ್ಯಾದಿ. ವೈಶ್ಯಾನ್ವಯ, ವೀರಬಣಂಜುಗಳು ಮುಂತಾಗಿಯೂ ಇವರನ್ನು ಗುರುತಿಸಲಾಗುತ್ತದೆ. ಇವರು ಶ್ರೀಮಂತರಾಗಿರುತ್ತಿದ್ದರು. ತತ್ಕಾರಣ ಸಮಾಜದ ಮೇಲೆ, ರಾಜನ ಮೇಲೆ, ತಮ್ಮ ಪ್ರಭಾವವನ್ನು ಬೀರುತ್ತಿದ್ದರು. ಊರಿನ, ರಾಜ್ಯದ, ತಮ್ಮ ಪ್ರಭಾವವನ್ನು ಬೀರುತ್ತಿದ್ದರು. ಊರಿನ, ರಾಜ್ಯದ, ರಾಜನ ಆರ್ಥಿಕ ವ್ಯವಸ್ಥೆಯ ಕಟ್ಟಡದಲ್ಲಿ ಮೂಲಸ್ಥಂಬವೆಂದು ಭಾವಿಸಲಾಗುತ್ತಿತ್ತು. ಇವರನ್ನು ಪಟ್ಟಣಗಳಲ್ಲಿ ವ್ಯಾಪಾರಸ್ಥರ ಮುಖ್ಯವ್ಯಕ್ತಿಯನ್ನು ಪಟ್ಟಣಸ್ವಾಮಿ ಎಂದು ಘೋಷಿಸಲಾಗುತ್ತಿತ್ತು. ಆಯ್ಯಾವೊಳೆ ೫೦೦ ಹಾಗೂ ಉಗುರು ೩೦೦ ಇವುಗಳನ್ನು ಸಂಘಗಳು ಎಂದು ಗುರುತಿಸಲಾಗಿದೆ. ವೀರಬಣಂಜು ಇದು ವೀರವಣಿಕ್ ಶಬ್ದದ ತದ್ಭವ. ಇವರು ಉದಾರಿಗಳೂ ಆಗಿದ್ದು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಇವರು ವ್ಯಾಪಾರದಲ್ಲಿ ಸಂಘಟನೆಯನ್ನು ಕಟ್ಟಿಕೊಂಡಿದ್ದರೆಂದು ತಿಳಿದು ಬರುತ್ತದೆ. ವ್ಯಾಪಾರಿಗಳು ವಸ್ತುಗಳನ್ನು ತರಿಸುತ್ತಿದ್ದರು ಮತ್ತು ದೂರಕ್ಕೆ ಕಳಿಸುತ್ತಿದ್ದರು. ಇದೇ ಆಮದು ಮತ್ತು ರಫ್ತು. ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಸಾಮಗ್ರಿಗಳ ಪಟ್ಟಿಯನ್ನು ತಯಾರಿಸಬಹುದು. ಆದರೂ ಶಾಸನಗಳಲ್ಲಿ ಬಂದಿರುವ ಸಂಗತಿಗಳು ವ್ಯಾಪಾರಗಳು ಮಾಡುತ್ತಿದ್ದ ವ್ಯಾಪಾರದ ಸ್ಥೂಲ ವಿವರಗಳೇ ವಿನಾ ಅವು ಅವರ ಲೆಕ್ಕದ ಕಡತ(ಕಡಿತ) ಗಳಲ್ಲ. ಅವರ ಲೆಕ್ಕದ ಪುಸ್ತಕಗಳಲ್ಲ. ರಾಜನ ರಾಜ್ಯದ ಆಯ ವ್ಯಯದ ಕಡತಗಳು ಇದ್ದಿರಬಹುದು.

ರಾಜ್ಯಕ್ಕೆ ಹೊಸ ಕ್ಷೇತ್ರಗಳು ಮಂಡಲಗಳು ಸೇರಿದಾಗ ಅವುಗಳನ್ನು ಕಡಿತಕ್ಕೆ ಸೇರಿಸಿದ ಉಲ್ಲೇಖಗಳು ದೊರೆಯುತ್ತವೆ. ರಾಜನ ಆದಾಯವನ್ನು ನೋಡಿಕೊಳ್ಳುವ ವ್ಯಕ್ತಿಯೇ ಭಂಡಾರಿ. ಬಸವಣ್ಣನವರು ಬಿಜ್ಜಳನ ಭಂಡಾರಿ ಆಗಿದ್ದರೆಂಬುದು ಲೋಕವಿಶ್ರುತ ಸಂಗತಿ. ರಾಜರು ಆಮದು ರಪ್ತಿನ ವಸ್ತುಗಳ ಮೇಲೆ ಸುಂಕವನ್ನು ಹಾಕುತ್ತಿದ್ದರು. ಸಾಮಾನ್ಯವಾಗಿ ಆಮದಿನ ವಸ್ತುಗಳು ಮುತ್ತು, ಮಾಣಿಕ್ಯ, ರತ್ನ, ವಜ್ರ, ವೈಡೂರ್ಯ, ಇಂದ್ರನೀಲ, ಚಂದ್ರಕಾಂತ, ಕುದುರೆಗಳು ಇತ್ಯಾದಿ. ಮಸಾಲೆ ಸಾಂಬಾರಿನ ಪದಾರ್ಥಗಳು ವಿಶೇಷವಾಗಿ ಮೆಣಸು, ಏಲಕ್ಕಿ, ಜೀರಿಗೆ, ಸಾಸಿವೆ, ಕೊತ್ತಂಬರಿ, ಇಂಗು, ಶುಂಠಿ, ಹಿಪ್ಪುಲಿ, ಅಲ್ಲ(ಹಸಿರುಶುಂಠಿ), ಅರಿಶಿನ, ಚೆಕ್ಕೆ, ನಾರು, ಬೇರು(ಔಷದಿಯ) ವಸ್ತುಗಳು, ಕರ್ನಾಟಕದ ಪ್ರದೇಶದಿಂದ ರಫ್ತಾಗುತ್ತಿದ್ದವು. ಎಂದು ಹೇಳಬಹುದು. ಬಳ್ಳಿಗಾವೆಯ ವರ್ತಕರು ಮತ್ತು ಬೇರೆಕಡೆಯವರು ಚೇರ ಚೋಳ, ಪಾಂಡ್ಯ, ತೆಲುಂಗ, ಮಗಧ, ಸೌರಾಷ್ಟ್ರ ಮುಂತಾದ ಭಾರತೀಯ ಪ್ರದೇಶಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಗಿ ತಿಳಿದುಬಂದಿದೆ. ಅದಂತೆಯೇ ಚೀನಾ, ಗ್ರೀಸ್, ರೋಮ್, ಅರಬ್, ದೇಶಗಳಿಂದ ಕುದುರೆಗಳುಖರ್ಜೂರ ಇತ್ಯಾದಿ ವಸ್ತುಗಳು ಆಮದಾಗುತ್ತಿದ್ದವು, ಪಶ್ಚಿಮಕರಾವಳಿಗುಂಟ ಇರುವ ಬಂದರುಗಳು ಈ ಕಾರ್ಯಕ್ಕೆ ನೆಲೆಗಳಾಗಿದ್ದವು. ಎತ್ತು, ಕತ್ತೆ, ಕೋಣ, ಕುದುರೆ, ತೆಪ್ಪ, ದೋಣಿ, ಹಡಗು, ಇವು ಮನುಷ್ಯನಲ್ಲದೆ ಸಾಕಣಿಕೆಯ ಸೌಕರ್ಯಗಳಾಗಿದ್ದವು. ಈ ಸಾರಿಗೆಯ ವಸ್ತುಗಳವಾಹನಗಳಮೇಲೆ ಬಿನ್ನ ಬಿನ್ನ ರೀತಿಯಲ್ಲಿ ಸುಂಕವನ್ನು ಹಾಕಲಾಗುತ್ತಿತ್ತು. ಸುಂಕಗಳು ವಸ್ತುಗಳ ರೂಪದಲ್ಲಿ ಇಲ್ಲವೇ ನಾಣ್ಯದ ರೂಪದಲ್ಲಿ ಇರಬಹುದಾಗಿತ್ತೆಂದು ತಿಳಿದುಬರುತ್ತದೆ.

೫. ನಾಣ್ಯಪದ್ದತಿ : ಮೌರ್ಯರಿಂದ ಮೈಸೂರ ಅರಸರವರೆಗೆ ಹಲವು ರಾಜಮನೆತನಗಳು ಇಲ್ಲಿ ಆಳಿವೆ. ಅವೆಂದರೆಮೌರ್ಯರು, ಶಾತವಾಹನರು, ವಾಕಾಟಕರು, ಪಲ್ಲವರು, ಕದಂಬರು, ಗಂಗರು, ಬಾಣರು, ವಿಷ್ಣುಕುಂಡಿನರು, ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು,  ಕಲಚೂರ್ಯರು, ಸೆವುಣರು, ಹೊಯ್ಸಳರು, ವಿಜಯನಗರದ ಅರಸರು, ಸ್ವಾದಿ, ಕೆಳದಿ, ಅಚಿಲ,ಚೌಟ, ಬಂಗ, ಮೈಸೂರು, ಬಹಮನೀ, ಆದಿಲ್ ಷಾಹಿ, ಬರೀದ್ ಷಾಹಿ, ಮೊಘಲರು, ನಿಜಾಮರು, ಸುರಪುರ, ಸವಣರು, ಚಿತ್ರದುರ್ಗ ಹೀಗೆ ಹತ್ತು ಹಲವು ರಾಜಮನೆತನಗಳು ನಾಣ್ಯಗಳನ್ನು ಟಂಕಿಸಿದರು.  ಅಚ್ಚಿಸಿದರು.

ಇದೇ ಒಂದು ದೊಡ್ಡ ಅಧ್ಯಯನ. ನಾಣ್ಯಗಳನ್ನು ಟಂಕಿಸುತ್ತಿದ್ದ ಸ್ಥಳಗಳಿಗೆ ಟಂಕಸಾಲೆಗಳೆಂದೂ ಕಮ್ಮಟಗಳೆಂದೂ ಕರೆತ್ತಿದ್ದರು. ನಿರುಪಯುಕ್ತ ನಾಣ್ಯಗಳೂ ಮತ್ತು ಚಲಾವಣೆಯಲ್ಲಿರುವ ನಾಣ್ಯಗಳು ಆಗಾಗ ಈಗ ೧೦೧೫ ವರ್ಷಗಳಿಂದ ಶಹಪುರ ತಾಲ್ಲೊಕಿನ ಗೋರಿಯ ಬಳಿಯ ಹಾರನಗೆರೆಯ ಗ್ರಾಮದ ಹಳ್ಳದ ಬಳಿಯಲ್ಲಿ ಜನರಿಗೆ ದೊರೆತಿರುವುದು ಒಂದು ಅದ್ಭುತ ಶೋಧ. ಇವುಗಳಲ್ಲಿ ಕೆಲವು ಸಂಪೂರ್ಣ ಆಕಾರ(ವೃತ್ತಾಕಾರ) ಗಳನ್ನು ಹೊಂದಿಲ್ಲ. ಇನ್ನೂ ಕೆಲವುಗಳ ಮೇಲೆ ಹಿಂಬದಿ ಹಾಗೂ ಮುಂಬದಿ ಎರಡೂ ಪಕ್ಕಗಳಲ್ಲಿ ಬೇರೆ ಬೇರೆಯಾಗಿ ಹಾಕಬೇಕಾದ ಚಿಹ್ನೆಗಳನ್ನು ಮುಂಬದಿಯಲ್ಲೇ ಅಚ್ಚೊತ್ತಿದ್ದಾರೆ. ಮುಂಬದಿಯಲ್ಲಿ ರಾಙೂ ಗೋತಮಿಪುತಸ ಸಿರಿಸಾತ ಕಂಣಿಸ ಎಂಬ ಉಲೇಖವನ್ನು ಈ ನಾಣ್ಯಗಳು ಹೊಂದಿದ್ದು ಈ ಸ್ಥಳದ ಆಸುಪಾಸಿನಲ್ಲಿ ಎಲ್ಲೋ ಒಂದು ಶಾತವಾಹನರ ರಾಜ್ಯದಲ್ಲಿ ಟಂಕಸಾಲೆ ಇದ್ದುದನ್ನು ಸೂಚಿಸುತ್ತವೆ.ಈ ಭೂಭಾಗ ಶಾತವಾಹನರ ರಾಜ್ಯದಲ್ಲಿತ್ತೆನ್ನುವುದಕ್ಕೆ ಹತ್ತಿರದ ಹಾಳಾದ ಸನ್ನತಿಯಲ್ಲಿ ಶಾತವಾಹನರ  ಶಾಸನ ಸಿಕ್ಕಿರುವುದೇ ಸಾಕ್ಷಿ. ನಾಣ್ಯಗಳಲ್ಲಿ ಪ್ರಸಿದ್ದವಾದದ್ದು ಗದ್ಯಾಣ ಅಥವಾ ಪೊನ್ ಪಣ, ಅಡ್ಡ, ಹಾಗ, ಬೇಳೆ, ವೀಸ, ಬಿನ್ನ ಬೆಲೆಯ ಪ್ರಟ್ಯೇಕ ನಾಣ್ಯಗಳು. ಕಾಕಿಣಿ(ಕವಡೆ), ನಿಷ್ಕ ಹಗೂ ಧರಣ ಎಂಬ ನಾಣ್ಯಗಳ ಉಲ್ಲೇಖವೂ ಶಾಸನಗಳಲ್ಲಿ ದೊರೆಯುತ್ತದೆ. ಕವಡೆಕಾಸು, ವೀಸ ಇವು ಅತ್ಯಂತ ಕನಿಷ್ಠವಾದವು ಎಂದು ತೋರುತ್ತದೆ. ಬ್ರಹ್ಮಶಿವ ಸಮಯಪರೀಕ್ಷೆಯಲ್ಲಿ(೧೦೬೯ಕ್ರಿ.ಶ.) ವೀಸ ಕನಿಷ್ಟ ನಾಣ್ಯವೆಂದು ತಿಳಿಸಿದ್ದಾನೆ.

ಕೂಸಿಗೆ ಕುತ್ತ ವಾದೊಡೆ
ದೇಶದ ಬಳರಿಯರ್ಗೆ ಕುಡುವರೊಳರ್ಚನೆಯಂ|
ಶಾಸನ ದೇವತೆಗೆಂದೊಡೆ
ವೀಸದ ಪುಷ್ಪಮುವನೀಯರಗುಲಿವೆಂಡಿರ್|

ಜೈನ ಅಥವಾ ಜೈನೇತರ(?) ಸ್ತ್ರೀಯರನ್ನು ಧರ್ಮಹಂತರೆಂದು ಬಯ್ದಿದ್ದಾನೆ. ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಖಾಜಿ ಪೇಟ ಶಾಸನದಲ್ಲಿ ದ್ರಮ್ಮ ನಾಣ್ಯದ ಉಲ್ಲೇಖ ಮೂರುಸಲಬಂದಿದ್ದು, ಅದು ಜನಬಳಕೆಯಲ್ಲಿ ಇದ್ದಿತ್ತೆಂಬುದು ಸ್ಪಷ್ಟವಿದೆ. ದೀನಾರ ನಾಣ್ಯಗಳ ನಿ ಬೆಂಗಳೂರು ಬಳಿ ದೊರಕಿದ್ದು ಆ ನಾಣ್ಯಗಳು ಈ ದೇಶದಲ್ಲಿ ಪ್ರಚಲಿತವಾಗಿದ್ದವೆಂಬುದನ್ನು ತಿಳಿಸುತ್ತವೆ.

೬. ಅಳತೆಗಳು ಮತ್ತು ತೂಕಗಳು : ಭೂಮಿಯ ಅಳತೆ, ಕಾಳಿನ ಅಳತೆ ಹಾಗೂ ಎಣ್ಣೆ ತುಪ್ಪ ಇತ್ಯಾದಿ ದ್ರವಗಳ ಅಳತೆ ಹಾಗೂ ಲೋಹಗಳ ತೂಕ ಶಾಸನಗಳಲ್ಲಿ ಕಾಣಬರುತ್ತವೆ. ಭೂಮಿಯನ್ನು ಅಳೆಯುವಲ್ಲಿ ಮತ್ತರು, ನಿವರ್ತನ, ಕಂಬ/ಕಮ್ಮ, ಗೇಣ್ ಹಾಗೂ ಕೋಲ್ ಶಬ್ದಗಳಿದ್ದರೆ. ಇನ್ನೊಂದು ಬಗೆಯಲ್ಲಿ ಎಂದರೆ ಬೀಜಹರಿಯ ರೂಪದಲ್ಲೂ ಭೂಮಿಯನ್ನು ಅಳೆಯಲಾಗುತ್ತಿತ್ತು. ಖಂಡುಗ, ಉಡಿ ಇತ್ಯಾದಿ. ಉದಾಹರಣೆಗೆ ಎರಡುಸಲಕ್ಕೆ ಗದ್ದೆ ಇಕ್ಕಂಡುಗ ಬೆದ್ದಲ್ ಇತ್ಯಾದಿ. ಕೋಲುಗಳು ರಾಜ್ಯದಿಂದ ರಾಜ್ಯಕ್ಕೆ, ಊರಿಂದ ಊರಿಗೆ ಒಮ್ಮೂಮ್ಮೆ ಎರಡೆರಡು ಕೋಲ್ ಅಳತೆಗಳು ಇರುತ್ತಿದ್ದವು. ಇವು ಒಂದು ಊರಿಂದ ಬಿನ್ನ ಬಿನ್ನವಾದ ಅಳತೆಯನ್ನು ಒಳಗೊಂಡಿರುತ್ತಿದ್ದವು.

ಕೊಳಗ,ಮಾನ, ಬಳ್ಳ, ಸೇರು, ವೀಸ, ದಡೆ(೧೨ಸೇರು), ಮಣ, ತೊಲ, ಹೇರು, ಇತ್ಯಾದಿಗಳ ಉಲ್ಲೇಖಗಳು ದೊರೆಯುತ್ತವೆ. ಸೆಟ್ಟಿಯ ಬಳ್ಳ ಕಿರಿದು ಎಂಬಲ್ಲಿ ಮೋಸದ ಹೊಳಹೂ ಇದೆ. ಸರ್ಕಾರಗಳು ಇವುಗಳ ಮೇಲೆ ಹತೋಟಿ ಇಟ್ಟುಕೊಂಡಿದ್ದವೋ ಇಲ್ಲವೋ ತಿಳಿಯದು. ಆದರೆ ಚಿನ್ನದ ನಾಣ್ಯಗಳ ತೂಕದಲ್ಲಿ ಸಾರ್ವತ್ರಿಕ ಸಮಾನತೆ ಇರಬೇಕು. ಒಂದು ಟಂಕಸಾಲೆಯಲ್ಲಿ ನಿರ್ಮಾಣಗೊಂಡ ನಾಣ್ಯದಂತೆ ಎಂಬಲ್ಲಿ ಸಮಾನ ತೂಕವನ್ನು ಸೂಚಿಸುತ್ತದೆ. ಚಿನ್ನ ಬೆಳ್ಳಿಯ ನಾಣ್ಯಗಳ ತೂಕಮೌಲ್ಯರಾಜ್ಯಾಡಳಿತಗಳ ಹತೋಟಿಯಲ್ಲಿರಬೇಕು. ಅಳತೆ ಮತ್ತು ತೂಕಗಳ ಮೇಲೆ ರಾಜ್ಯದ ಮುದ್ರೆ ಇರಬೇಕೆಂದು ಅರ್ಥಶಾಸ್ತ್ರ ಹೇಳಿದೆ.

೭. ಆಯವ್ಯಯ : ರಾಜ್ಯದ ಆದಾಯವನ್ನು ಸಾಮಾನ್ಯವಾಗಿ ಎರಡು ಭಾಗಗಳಲ್ಲಿ ವಿಂಗಡಿಸಿ ಅಭ್ಯಶಿಸಲಾಗುತ್ತಿತ್ತು. ತೆರಿಗೆಗಳು ಮತ್ತು ಇತರ ಆಕರಗಳು. ತೆರಿಗೆಗಳಿಂದ ಬರುತ್ತಿದ್ದ ಆದಾಯವೇ ಹೆಚ್ಚು ಅವುಗಳ ಸಂಖ್ಯೆ ಅಸಂಖ್ಯಾತ. ಇತರ ಆಕರಗಳು ಅಲ್ಪ. ಉತ್ತರಾಕಾರಿಗಳಿಲ್ಲದ ಆಸ್ತಿ ರಾಜನ ಬೊಕ್ಕಸಕ್ಕೆ ಸೇರುತ್ತಿತ್ತು. ರಾಜನ ರಾಣಿಯರು, ಮಕ್ಕಳೂ ವೈಯಕ್ತಿಕ ಆದಾಯವನ್ನು ತಮ್ಮತಮ್ಮ ಖರ್ಚಿಗೆ ಪಡೆದಿರುತ್ತಿದ್ದರು. ಅವರ ಆದಾಯವನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೇ ಮನೆವಾರ್ತೆ. ರಾಜನು ಶ್ರೀಮಂತರ ಇಲ್ಲವೇ ಪರಮಂಡಲಗಳನ್ನು ಗೆದ್ದಾಗ. ಅವರ ಆದಾಯ ರಾಜ್ಯಾದಾಯಕ್ಕೆ ಸೇರುರುತ್ತಿತ್ತು. ಶ್ರೀಮಂತರ ಆಸ್ತಿಯನ್ನು ಅವನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿತ್ತು. ಅವರು ನಿರಂಕುಶಮತಿಗಳಲ್ಲವೇ?

೮. ತೆರಿಗೆಗಳು :ಕರ್ನಾಟಕದಲ್ಲಿ ಶಾಸನಗಳನ್ನು ಅಧ್ಯಯನಕ್ಕೆ ಎತ್ತಿಕೊಂಡರೆ ಮೇಲುನೋಟಕ್ಕೆ ಸಾಕಷ್ಟು ತೋರರೂಪದಲ್ಲಿ ಘೋರರೂಪದಲ್ಲಿ, ತೆರಿಗೆಗಳು ಕಂಡುಬರುತ್ತವೆ. ಅವುಗಳ ಸಂಖ್ಯೆ ಅಸಂಖ್ಯಾತ. ಎಷ್ಟೋಸಲ ಅವುಗಳ ಅರ್ಥವೂ ಅಸ್ಪಷ್ಠ. ಪ್ರತಿಯೊಂದನ್ನು ಪ್ರತ್ಯೇಕ ವಿವರಿಸುವುದು ಈ ಕಿರುಲೇಖನದಲ್ಲಿ ಅಸಾಧ್ಯದ ಸಂಗತಿ. ಕರ್ನಾಟಕದಲ್ಲಿ ಪ್ರಚಲಿತವಾಗಿದ್ದ ಕೆಲವು ಮುಖ್ಯ ತೆರಿಗೆಗಳು. ಅಟ್ಟದೆಱ, ಆರುವಣ(ಷಟ್ಟಂಗ), ಆಯಿಲದೆಱ(ಕುದುರೆಗಳ ಥಡಿಗಳನ್ನು ಮಾಡಿ ಮಾರುವಲ್ಲಿ ಕೊಡುವ ತೆರಿಗೆ) ಉಟ್ಟ ಸಾಮಂತದೆಱ, ಒಸಗೆದೆಱ, ಕತ್ತರಿವಣ, ಕನ್ನಡಿವಣ, ಕಾಣಿಕೆ ಹಣಗಳು, ಕಿರುಕುಳ (ಕಿರುತೆರಿಗೆ) ಕುಮಾರ ಗದ್ಯಾಣ, ಕುಂಬಱಬಟ್ಟೆ, ಕುಱಂಬದೆರೆ, ಕುಳ, ಕುಳಿಯಸುಂಕ, ಕೂಟಕ ಕೊಡತಿವಣ, ಕೊಡವೀಸ, ಕೊಳ್ಳಿ ಗಾಣದೆಱ, ಜಲ್ಲಂ, ಡೊಂಕಿ, ತಳ, ತಳಭಂಡದ ಸುಂಕ, ಮುಂತಾದ ಸುಂಕಗಳನ್ನು ಹೇರುತ್ತಿದ್ದರು.

ವ್ಯಯದ ಕಡೆಗೆ ಬಂದರೆ ಸೈನ್ಯಕ್ಕೆ ವಿಶೇಷ ಖರ್ಚಾಗುತ್ತಿತ್ತು, ಉತ್ತರಕರ್ನಾಟಕ ಗೋದಾವರೀ ದಂಡಕಾರಣ್ಯ ಗಿಡವಿಲ್ಲದಂತೆ ಆದುದಕ್ಕೆ ಸುಮಾರು ಎರಡು ಸಾವಿರ ವರ್ಷಗಳು ರಾಜಮಹಾರಾಜರ ಲಕ್ಷಾಲಕ್ಷ ಸೇನಾಪಡೆ ಆ ನಾಡನ್ನು ತೊತ್ತಳದುಳಿದುದು, ತೆರಿಗೆಗಳನ್ನು ಸಂಗ್ರಹಿಸುವ ಅಕಾರಿಗಳು ಬರುತ್ತಿದ್ದರು. ಧರ್ಮ ಶಾಸ್ತ್ರಗಳುಸೃತಿಗಳುಕಾಳಿದಾಸಾದಿಗಳ ಕಾವ್ಯಗಳು ರಾಜ್ಯಾಡಳಿತವನ್ನು ನಡೆಸುವವರಿಗೆ ಆದರ್ಶಗಳನ್ನು ಮುಂದಿಟ್ಟಿವೆ. ಪ್ರಜೆಗಳಿಂದ ಗಳಿಸಿದ ಹಣವನ್ನು ಮತ್ತೆ ಪ್ರಜೆಗಳಿಗೇ ಖರ್ಚುಮಾಡಬೇಕೆಂದು ಹೇಳಿದೆ. ಅಶೋಕ, ದಿಲೀಪ, ಮೊದಲಾದವರ ಸಂಖ್ಯೆ ಅಲ್ಪ, ಅವರು ಪ್ರಜೆಗಳಿಗೆ ತೆರಿಗೆಗಳಿಂದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರು. ರಾಮರಾಜ್ಯದ ಆದರ್ಶವೂ ಭಾಗವತ ಮೊದಲಾದ ಪುರಾಣಗಳ ಆದರ್ಶವೂ, ರಾಮಾಯಣ ಮಹಾಭಾರತದ ಆದರ್ಶವೂ ಆ ಜನದ ಮುಂದೆ ಹಿಂದೆ ಇದ್ದಿತು. ಶಾಸನಗಳಲ್ಲಿ ಬರುವ ಪದ್ಯಗಳು ಆರ್ಥಿಕ ಜೀವನವನ್ನು ಸಮತೋಲನದಲ್ಲಿ ಇಡಲು ಪ್ರಯತ್ನ ಪಟ್ಟಿವೆ. ಆಧುನಿಕ ಆರ್ಥಿಕ ತತ್ವಗಳನ್ನು ಪ್ರಾಚೀನ ಕಾಲಕ್ಕೆ ಅನ್ವಯಿಸುವುದು ಉತ್ತಮವಲ್ಲವೆಂದು ತೋರುತ್ತದೆ. ಶಾಸನಗಳು ಆರ್ಥಿಕ ವ್ಯವಸ್ಥೆಯ ಮೇಲೆ ಹೊಳಹನ್ನು ಹಾಕುತ್ತವೆ. ಆದರೆ ಕೂಲಂಕುಶವಿವರಗಳನ್ನು ನೀಡುವುದಿಲ್ಲ ಆ ಕಾರ್ಯ ಅವುಗಳ ಉದ್ದೇಶಕ್ಕೆ ಬೇರೆಯಾದದ್ದು.

ಚಿತ್ರಗಳು:

೧. ಕರ್ನಾಟಕದ ಪರಂಪರೆ  ಸಂಪುಟ ೧, ೨  ಪ್ರ. ಮೈಸೂರು ಸರ್ಕಾರ.

೨. ಹಸಿರು ಹೊನ್ನು  ಬಿ. ಜಿ. ಎಲ್. ಸ್ವಾಮಿ.

೩. ಕರ್ನಾಟಕದ ಯಾತ್ರೆ  ಜೀರಗೆ ಕಟ್ಟೆ ಬಸವಪ್ಪ.

೪. Anchor Printed Canvas.