ನಮ್ಮ ದೇಶದ, ನಮ್ಮ ನಾಡಿನ, ನಮ್ಮ ಪೂರ್ವಿಕರ ಇತಿಹಾಸ ರಚನೆಗೆ ಇರತಕ್ಕ ಆಕರಗಳು ಮೂರು. ಮೊದಲನೆಯದು ಪರಂಪರೆ ಅಥವಾ ಐತಿಹ್ಯ, ಎರಡನೆಯದು ವಾಙ್ಮಯ ಅಥವಾ ಸಾಹಿತ್ಯ, ಮೂರನೆಯದು ಪುರಾತತ್ವ ಶೋಧನೆ. ಇವುಗಳಲ್ಲಿ ಪುರಾತತ್ವ ಶೋಧನೆ ಪ್ರಮುಖವಾದುದು. ಈ ಪುರಾತತ್ವಶಾಸ್ತ್ರದ ಒಂದು ಪ್ರಮುಖ ಅಂಗವೇ ಶಾಸನಶಾಸ್ತ್ರ. ಶಾಸನಗಳ ಅಧ್ಯಯನ ಇಂದು ಪ್ರಮುಖ ಸಾಂಸ್ಕೃತಿಕ ಅಧ್ಯಯನ ಎಂದು ಗುರುತಿಸಿಕೊಂಡಿದೆ. ಪ್ರಾಚೀನ ಯುಗಕ್ಕೆ ಸಂಬಂಧಿಸಿದಂತೆ ಹಾಗೂ ಇತಿಹಾಸ ರಚನೆಗೆ ಆಕರವಾಗಿದೆಯಲ್ಲದೆ ಸಂಸ್ಕೃತಿಯ ಅರಿವಿನ ದೃಷ್ಟಿಯಿಂದ ಬಹಳ ಗಣ್ಯವಾಗಿದೆ. ಬರಹದ ರೂಪದಲ್ಲಿರುವ ಇತರ ಆಧಾರಗಳಿಗಿಂತ ಶಾಸನಗಳ ಆಧಾರ ಹೆಚ್ಚು ವಿಶ್ವಾಸಯೋಗ್ಯವೂ ಮೌಲಿಕವೂ ಆಗಿದೆ.

ನಮ್ಮ ದೇಶದ, ನಮ್ಮ ನಾಡಿನ ಇತಿಹಾಸವನ್ನು ಕೇವಲ ಪಾಶ್ಚಾತ್ಯ ವಿದ್ವಾಂಸರು ರಚಿಸಿದ ಕೃತಿಗಳಿಂದ ನಾವು ನೋಡುತ್ತೇವೆ. ಅದು ಕೇವಲ ಕಾಲ್ಪನಿಕ ಸತ್ಯ ಎಂಬುದು ನಮ್ಮ ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ. ಹಾಗೆಯೇ ಇತಿಹಾಸಕಾರರು ತಮ್ಮ ಅಧ್ಯಯನದಲ್ಲಿ ಶಾಸನಗಳನ್ನು ಅವುಗಳಲ್ಲಿನ ರಾಜಕೀಯ ಮಹತ್ವವನ್ನು ಮಾತ್ರ ಗುರುತಿಸಲು ಬಳಸಿಕೊಂಡಿದ್ದರಿಂದ ಇತಿಹಾಸವೆಂದರೆ ಕೇವಲ ರಾಜ ಮಹಾರಾಜರ ವಿವರಣೆ ಮಾತ್ರ ಎಂಬಂತಹ ಅಭಿಪ್ರಾಯಕ್ಕೆ ಸೀಮಿತಗೊಂಡಿತ್ತು. ಆದರೆ ಕಳೆದ ದಶಕದಿಂದ ಇತಿಹಾಸವನ್ನು ನೋಡುವ ದೃಷ್ಟಿಯಲ್ಲಿ ಗಮನಾರ್ಹವಾದ ಬದಲಾವಣೆಗಳಾಗಿವೆ. ಇತಿಹಾಸ ರಚನೆಯ ಆಕರಗಳನ್ನು ಹೊಸ ರೀತಿಯಿಂದ ನಿರ್ವಚಿಸುವ ಪರಿಪಾಟ ಮೊದಲುಗೊಂಡಿದೆ. ಕೇವಲ ರಾಜ ಮಹಾರಾಜರ ಜೀವನ ಚರಿತ್ರೆಯನ್ನಷ್ಟೇ ಅಲ್ಲದೆ ಸಾಮಾನ್ಯ ಜನರ ದಿನನಿತ್ಯದ ಬದುಕನ್ನು, ಅವರ ಸಂಪ್ರದಾಯ ರೀತಿ ನೀತಿಗಳನ್ನು, ಅವರ ಬದುಕಿನ ಏಳು ಬೀಳುಗಳನ್ನು ಬಹುಶಿಸ್ತೀಯ ನೆಲೆಯಿಂದ ಅಧ್ಯಯನ ಮಾಡಲಾಗುತ್ತಿದೆ. ರಾಜಕೀಯ ಜ್ಞಾನಕ್ಕಷ್ಟೇ ಸೀಮಿತವಾಗಿದ್ದ ಶಾಸನಗಳನ್ನು ರಾಜಕೀಯೇತರ (ಸಂಸ್ಕೃತಿ, ಸಮಾಜ, ಆರ್ಥಿಕತೆ, ಹಾಗೂ ದುಡಿಯುವ ವರ್ಗದವರ)ವಿಷಯಗಳಿಗೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದುದರಿಂದ ನಮಗೆ ಪರಿಚಯ ಇಲ್ಲದಿದ್ದ ನಮ್ಮ ನಾಡಿನ ಪ್ರಾಚೀನ ಜೀವನಶೈಲಿಯ ಅಧ್ಯಯನಕ್ಕೆ ಅತ್ಯಮೂಲ್ಯವಾದ ನಿಧಿ ಗೋಚರವಾದಂತಾಗಿದೆ.

ಹೀಗಿರುವ ಶಾಸನಗಳ ಮಹತ್ವವನ್ನು ಮನಗೊಂಡು ಕನಾಟಕ ಶಾಸನಗಳ ಪ್ರಕಾರ ಹಾಗೂ ಅವುಗಳ ಮಹತ್ವವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಪ್ರಯತ್ನವನ್ನು ಈ ಕಿರುಕೃತಿಯಲ್ಲಿ ಮಾಡಲಾಗಿದೆ.

ಉದ್ದೇಶ

ಕರ್ನಾಟಕದ ಚರಿತ್ರೆ ಕ್ರಿಸ್ತಪೂರ್ವದಿಂದಲೂ ಪ್ರಸಿದ್ಧಿ ಪಡೆದಿದೆ. ಹಲವಾರು ಸಾಮ್ರಾಜ್ಯಗಳು, ಅರಸುಮನೆತನಗಳು, ಸಂಸ್ಥಾಮಗಳು, ಪಾಳೆಗಾರರು ಈ ನಾಡನ್ನು ಆಳಿ ತಮ್ಮ ಸಾಂಸ್ಕೃತಿಕ ಅಂಶಗಳನ್ನು ಅವರ ಉತ್ತರಾಧಿಕಾರಿಗಳಾದ ನಮಗೆ ಬಿಟ್ಟು ಹೋಗಿದ್ದಾರೆ. ಇಂತಹ ಅಮೂಲ್ಯ ಸಾಂಸ್ಕೃತಿಕ ಸಂಪತ್ತನ್ನು ಅವರು ಹಾಕಿಸಿದಂತಹ ಶಾಸನಗಳಿಂದ ತಿಳಿಯಬೇಕಾದುದು ನಮ್ಮ ಕರ್ತವ್ಯ, ಆದರೆ ನಾವು ಅವುಗಳನ್ನು ನಿರ್ಲಕ್ಷಿಸಿ, ಶಾಸನಗಳನ್ನು ಸಂರಕ್ಷಿಸುವ ಹಾಗೂ ಅವುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡದೆ ಇರುವುದು ದುರಂತ. ಆದುದರಿಂದ ಈ ಒಂದು ಸಣ್ಣ ಕೃತಿಯ ಮೂಲಕ ಈ ನಾಡಿನ ಕನ್ನಡಿಗರಿಗೆ ಶಾಸನಗಳ ಪರಿಚಯವನ್ನು ಮಾಡಿ ಕೊಡುವುದು ಈ ಕೃತಿಯ ಮೂಲ ಉದ್ದೇಶವಾಗಿದೆ. ಕರ್ನಾಟಕದಲ್ಲಿ ವಿಭಿನ್ನ ಜಾತಿ, ಜನಾಂಗ, ಬುಡಕಟ್ಟುಗಳು, ವಿವಿಧ ಧಾರ್ಮಿಕ ಪಂಗಡಗಳು, ಅವರ ನಂಬಿಕೆಗಳು, ಆಚರಣೆಗಳು, ವೈವಿಧ್ಯಮಯವಾದ ಭಾಷೆ, ಪ್ರಾಚೀನ ಸಾಹಿತ್ಯ ಹೀಗೆ ಹಲವು ಹತ್ತು ವಿಷಯಗಳು ತಮ್ಮದೇ ಆದ ಸ್ಥಾನಮಾನವನ್ನು ಈ ರಾಜ್ಯದಲ್ಲಿ ಹೊಂದಿವೆ. ನಮ್ಮ ನಾಡಿನ ಸಂಸ್ಕೃತಿಯನ್ನು ಸಾರುವ ದೇವಾಲುಗಳು, ವಾಸ್ತುಶಿಲ್ಪಗಳು, ಕಟ್ಟಡಗಳು,ಸ್ಮಾರಕಗಳನ್ನು ಕರ್ನಾಟಕದ ಶಾಸನಗಳನ್ನು ಪ್ರಮುಖ ಆಧಾರವಾಗಿಟ್ಟುಕೊಂಡು ಅಂದಿನ ಚಾರಿತ್ರಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ಸಾಂಸ್ಕೃತಿಕ ದೃಷ್ಟಿಯ ಮಹತ್ವದ ವಿಚಾರಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ.

ವ್ಯಾಪ್ತಿ

ಪ್ರಸ್ತುತ ಅಧ್ಯಯನವಾದ ‘ಶಾಸನಗಳ ಪ್ರಕಾರ ಮತ್ತು ಅವುಗಳ ಮಹತ್ವ’ ಎಂಬ ವಿಷಯವು ಇತಿಹಾಸದ ದೃಷ್ಟಿಯಿಂದ ತಂಬಾ ವಿಸೃತವಾದ ವಿಷಯವಾಗಿದ್ದು ಈಗಾಗಲೇ ಹಲವು ಗ್ರಂಥಗಳಲ್ಲಿ ಐತಿಹಾಸಿಕ ದೃಷ್ಟಿಯಿಂದ ಚರ್ಚಿತವಾಗಿದೆ. ಆದರೆ ಅವುಗಳ ಸ್ಥೂಲ ಪರಿಚಯವನ್ನು ಸಾಮಾನ್ಯ ಜನರಿಗೆ ತಿಳಿಸುವ ಪ್ರಯತ್ನವನ್ನು ಈ ಕಿರುಕೃತಿಯಲ್ಲಿ ಮಾಡಲಾಗಿದೆ. ಸಾಮಾನ್ಯ ಜನರ ದೃಷ್ಟಿಯಿಂದ ನೋಡಿದರೆ ಇದು ವಿಭಿನ್ನವಾಗಿದೆಯಲ್ಲದೆ ವಿಶಿಷ್ಟವೂ ಆಗಿದೆ. ಪ್ರಮುಖವಾಗಿ ಕರ್ನಾಟಕದ ಶಾಸನಗಳ ಪ್ರಕಾರ ಹಾಗೂ ಅವುಗಳ ಮಹತ್ವವನ್ನು ತಿಳಿಸುವ ಈ ಕೃತಿಯು ಶಾಸನಗಳ ಪ್ರಕಾರಗಳಲ್ಲಿ ದಾನಶಾಸನ, ಪ್ರಶಸ್ತಿಶಾಸನ, ವೀರಗಲ್ಲು, ಮಾಸ್ತಿಗಲ್ಲು, ನಿಸಿದಿಗಲ್ಲು, ಯೂಪಶಾಸನ, ಕೂಟಶಾಸನ ಹಾಗೂ ಧಾರ್ಮಿಕ, ಚಾರಿತ್ರಿಕ, ಸಾಮಾಜಿಕ, ಭಾಷಿಕ, ಸಾಂಸ್ಕೃತಿಕ ದೃಷ್ಟಿಯಿಂದ ಶಾಸನಗಳ ಮಹತ್ವವನ್ನು ತಿಳಿಸುವವರೆಗೆ ಇದರ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿದೆ. ಅಲ್ಲದೆ ಮುಖ್ಯವಾಗಿ ಕರ್ನಾಟಕದ ಶಾಸನಗಳಿಗೆ ಸಂಬಂಧಿಸಿದ ಗ್ರಂಥಸ್ಥ ಕೃತಿಗಳನ್ನು ಆಕರವಾಗಿ ಹೊಂದಿದೆ.

ಪ್ರಾಮುಖ್ಯತೆ

ಪ್ರತಿಯೊಂದು ಅಧ್ಯಯನವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಪ್ರಸ್ತುತ ಅಧ್ಯಯನವು ಕರ್ನಾಟಕದಲ್ಲಿರುವ ಸಾಮಾನ್ಯ ಜನರಿಗೆ ಈ ನಾಡಿನ ಶಾಸನಗಳ ಪ್ರಕಾರ ಹಾಗೂ ಅವುಗಳ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸುವ ಮೂಲಕ ಹಾಗೂ ನಿಖರವಾದ ಮಾಹಿತಿಯನ್ನು ಒದಗಿಸುವಲ್ಲಿ ಹೇಗೆ ಶಾಸನಗಳು ಸಹಾಯಕವಾಗುತ್ತದೆ, ಅಲ್ಲದೆ ಶಾಸನಗಳಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುವ ಓದುಗರಿಗೂ ಹೇಗೆ ಸಹಾಯಕವಾಗುತ್ತದೆ ಎಂಬುದನ್ನು ತೋರಿಸುವುದಾಗಿದೆ.