ಇತಿಹಾಸಕ್ಕೆ ಆಧಾರಗಳೇ ಜೀವಾಳ. ಅವುಗಳಿಲ್ಲದೆ ಇತಿಹಾಸವನ್ನು ಪುನರ್ ರಚಿಸುವುದಿರಲಿ, ಇದಕ್ಕೂ ಹಿಂದೆ ಹೀಗಿತ್ತು ಎಂಬುದನ್ನು ಊಹಿಸಲು ಅಸಾಧ್ಯ. ಭಾರತದ ಇತಿಹಾಸ ರಚನೆಗೆ ಲಭ್ಯಬಾಗಿರುವ ಮೂಲಾಧಾರಗಳು ವಿವಿಧ ಮೂಲವುಳ್ಳವು. ಉದಾಹರಣೆಗೆ, ಪ್ರಾಚೀನ ಭಾರತದ ಕೆಲವು ಐತಿಹಾಸಿಕ ಸಂಗತಿಗಳನ್ನೊಳಗೊಂಡ ಸಾಹಿತ್ಯವಿದೆ. ಅನೇಕ ಸ್ಥಳಪುರಾಣಗಳಿವೆ, ಸ್ಥಳೀಯ ಘಟನಾವಳಿಗಳ ದಾಖಲೆಗಳಿವೆ. ಸಾವಿರಾರು ಶಾಸನಗಳಿವೆ. ಇಷ್ಟೆಲ್ಲಾ ಇದ್ದರೂ ಎಲ್ಲ ದೃಷ್ಟಿಯಿಂದ ಪರಿಗಣಿಸಬಹುದಾದ ಒಂದೇ ಒಂದು ಇತಿಹಾಸ ಗ್ರಂಥವೂ ರಚನೆಯಾಗಿಲ್ಲವೆಂಬುದು ನಮ್ಮ ದೌರ್ಭಾಗ್ಯವಲ್ಲದೆ ಮತ್ತೇನೂ ಅಲ್ಲ. ಪ್ರಸ್ತುತ ಅಧ್ಯಯನದಲ್ಲಿ ಇತಿಹಾಸಕ್ಕೆ ಪ್ರಮುಖ ಆಕರಗಳಾದ ಶಾಸನಗಳನ್ನು ಕುರಿತ ಶಾಸನದ ಅರ್ಥ ಹಾಗೂ ವಿವಿಧ ವಿದ್ವಾಂಸರು ತಮ್ಮ ಬರವಣಿಗೆಯಲ್ಲಿ ಶಾಸನಕ್ಕೆ ನೀಡಿದ ವ್ಯಾಖ್ಯಾನಗಳನ್ನು ಕುರಿತು ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

`ಶಾಸನ’ ಎಂಬ ಪದವು ‘ಶಾಸ್’ ಎಂಬ ಧಾತುವಿನಿಂದ ರೂಪುಗೊಂಡಿದೆ. ಇದರ ಅರ್ಥ ಆಜ್ಞಾಪಿಸು, ಶಿಕ್ಷಿಸು, ನಿಯಂತ್ರಿಸು ಎಂದು. ಶಾಸನಗಳು ಮೂಲತಃ ದಾನ ಸಂಬಂಧವಾದ ರಾಜಾಜ್ಞೆಗಳಾಗಿದ್ದು ಕಾಲಾನುಕ್ರಮದಲ್ಲಿ ವಿಶಾಲ ಅರ್ಥವನ್ನು ಪಡೆದುಕೊಂಡವು. ಹಾಗೆಯೇ ಇವುಗಳನ್ನು ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಕಲ್ಲು, ತಾಮ್ರ, ಬೆಳ್ಳಿ, ಶಂಖ, ದಂತ, ಮಣ್ಣಿನ ಮಡಕೆ, ಮರ, ಪ್ರಾಣಿಗಳ ಚರ್ಮ ಮುಂತಾದ ವಸ್ತುಗಳ ಮೇಲೆ ಬರೆಯಲಾದ ಬರವಣಿಗೆಗಳನ್ನು ಶಾಸನವೆಂದು ಹೇಳುತ್ತೇವೆ.

`ಶಾಸನ’ ಕ್ಕೆ ಸಮನಾರ್ಥವಾಗಿ ಬಳಕೆಯಾಗುತ್ತಿರುವ ಇಂಗ್ಲಿಷ್ ಪದ ‘Inscription’. ಇದನ್ನು ‘Ephigraph’ ಎಂದು ಕರೆಯಲಾಗತ್ತದೆ. ಆದುದರಿಂದಲೇ ‘Ephigraphy’ ಎಂಬ ಪದ ಬಳಕೆಯಲ್ಲಿದೆ. Inscription ಎಂಬ ಪದವು ‘Inscribere’ ಎಂಬ ಲ್ಯಾಟಿನ್ ಭಾಷೆಯ ಪದದಿಂದ ಬಂದಿದ್ದು ‘ಮೇಲೆ ಬರೆ’ ಎಂಬ ಅರ್ಥವನ್ನು ಹೊಂದಿದೆ. ಹಾಗೆಯೇ ‘Epigraphy’ ಎಂಬ ಪದವು ‘Epi’ (ಮೇಲೆ) ಮತ್ತು ‘Graphie’ (ಬರೆ) ಸಂಕೇತ ಎಂಬೆರೆಡು ಗ್ರೀಕ್ ಪದಗಳಿಂದ ಹುಟ್ಟಿಕೊಂಡಿದೆ. ‘Epigraphy’ ಪದವನ್ನು ಬರಹಗಳ ಅಧ್ಯಯನಶಾಸ್ತ್ರ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ.

`Inscription’ ಎಂದರೆ ಬಹುಕಾಲ ನಿಲ್ಲಬಲ್ಲ ಶಾಶ್ವತವಾಗಿ ಉಳಿಯಬಲ್ಲ ವಸ್ತುಗಳ ಮೇಲೆ ಕೊರೆಯಲ್ಪಟ್ಟ ಬರಹ. ಕಲ್ಲು, ತಾಮ್ರ, ಬೆಳ್ಳಿ, ಮೊದಲಾದವುಗಳ ಮೇಲೆ ಕೊರೆಯಲ್ಪಟ್ಟ ಬರಹಗಳೇ ಶಾಸನಗಳು.

ಭಾರತೀಯರು ಶಾಸನ ಎಂಬ ಪದಕ್ಕೆ ವಿಶಾಲ ಅರ್ಥವನ್ನು ನೀಡುವುದರ ಸಲುವಾಗಿ ಅವುಗಳ ಆಂತರಿಕ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ವ್ಯಾಖ್ಯಾನಿಸಿದರು. ಹೀಗಾಗಿ ಶಾಸನವೆಂಬುವುದು ಆಜ್ಞೆ. ಪ್ರಜೆಗಳೆಲ್ಲರೂ ಪಾಲಿಸಬೇಕಾದ ಒಂದು ಸಂಹಿತೆ. ಸಂವಿಧಾನ, ನೀತಿ-ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಯಾಗುತ್ತಾರೆಂಬ ಎಚ್ಚರಿಕೆಯ ನೀತಿ ಸಂಹಿತೆಗಳು ಎಂಬ ವಿಶಾಲಾರ್ಥವನ್ನು ಪಡೆದುಕೊಂಡಿತು. ಅಶೋಕನು ತಾನು ಹಾಕಿಸಿದ ಶಾಸನಗಳನ್ನು ಧರ್ಮಲಿಪಿಗಳೆಂದು ಕರೆದುಕೊಂಡಿದ್ದಾನೆ. ‘Inscribe’ ಎಂಬುದರಿಂದ ಹೊರಟ ಕೆತ್ತು. ಕೊರೆ, ಕಂಡರಿಸು ಎಂಬ ಅರ್ಥಕ್ಕಿಂತ ಭಿನ್ನವಾಗಿ ಆಡಳಿತ, ಪ್ರಭುತ್ವ, ಆಜ್ಞೆ, ಅಪ್ಪಣೆ, ಕಾನೂನು, ಕಟ್ಟಳೆ, ವಿಧಿ, ನಿಗ್ರಹ, ಹಿಡಿತ, ಶಿಕ್ಷೆ, ದಂಡನೆ, ಶಾಸ್ತಿ, ಒಪ್ಪಂದ ಮತ್ತು ಕರಾರು ಎಂಬ ವ್ಯಾಪಕ ಅರ್ಥವನ್ನು ಶಾಸನ ಪಡೆದುಕೊಂಡಿತು.

ರಾಜನ ಸಹಿ, ಮುದ್ರೆ, ದಿನಾಂಕದೊಂದಿಗೆ ಅಧಿಕೃತವಾಗಿ ಹೊರಟ ಶಾಸನಗಳು ಶಿಲೆ, ತಾಮ್ರ, ಕಬ್ಬಿಣ ಇತ್ಯಾದಿ ಮಾಧ್ಯಮಗಳಲ್ಲಿ ಬರೆದಿರುವ ರಾಜಾಜ್ಞೆಗಳಾಗಿದ್ದಂತೆ ರಾಜರಲ್ಲದವರು ಬರೆಸಿದಾಗಲೂ ಕೂಡ ಶಾಸನಗಳೆಂದು ಪರಿಗಣಿತವಾದವು. ವೀರರು, ಮಹಾಸತಿಯ, ಸನ್ಯಾಸಿಗಳ ಮರಣ ವೃತ್ತಾಂತವನ್ನು ಉಲ್ಲೇಖಿಸುವ ವೀರಗಲ್ಲು, ಮಾಸ್ತಿಕಲ್ಲು, ನಿಸಿದಿಕಲ್ಲುಗಳು ಸಹ ಶಾಸನದ ಪರಂಪರೆಗೆ ಸೇರಿದವು. ಇವುಗಳನ್ನು ಹೊರತುಪಡಿಸಿ ಶುದ್ಧಕಾವ್ಯ, ನಾಟಕ, ವ್ಯಾಕರಣ, ಸಂಗೀತ ಮುಂತಾದ ಯಾವ ಪ್ರಕಾರವೇ ಆಗಲಿ ಶಿಲೆಯ ಮೇಲಿದ್ದರೆ ಅದು ಸಹ ಶಾಸನವೆಂಬ ಹೆಸರನ್ನು ಪಡೆಯಿತು. ಹೀಗೆ ರಾಜಪ್ರಭುತ್ವ ಪರಿಸರದಲ್ಲಿ ಬೆಳೆದು ಬಂದ ಶಾಸನಗಳು ದಂಡನೆ, ಶಿಕ್ಷೆ, ಕರಾರು, ಕಟ್ಟಳೆ ಎಂಬ ಸಂಕುಚಿತ ಅರ್ಥದಿಂದ ಹೊರಬಂದು ಅಂದಿನ ಜನರ ಜೀವನ ಪದ್ಧತಿಯ ಎಲ್ಲ ಮುಖಗಳನ್ನು ಕಾಯ್ದುಕೊಂಡು ಬಂದ ದಾಖಲೆಗಳೆಂಬ ವಿಶಾಲಾರ್ಥವನ್ನು ಪಡೆದುಕೊಂಡವು.

ಶಾಸನಗಳೆಂದರೇನು ಎಂಬುದನ್ನು ಕುರಿತು ಕೆಲವು ಪ್ರಸಿದ್ಧ ಇತಿಹಾಸತಜ್ಞರು ತಮ್ಮ ಬರವಣಿಗೆಯಲ್ಲಿ ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು.

೧. ಶಾಸನ (ಎಂಬ ಪದ) ರಾಜರ ಆಜ್ಞೆಗಳನ್ನು ತಿಳಿಸುವ ಬರಹವನ್ನು ಹೇಳುತ್ತದೆ.
ಕೌಟಿಲ್ಯನ ಅರ್ಥಶಾಸ್ತ್ರ

೨. The Insriptions are redificalsion very frequently of an official character and generally more or less of a public nature which recite facts simple or complex with or of the matters to which they refer. (ಶಾಸನಗಳು ಬಹು ಸಂದರ್ಭಗಳಲ್ಲಿ ಅಧಿಕೃತ ಲಕ್ಷಣವುಳ್ಳ ಸಾಧಾರಣವಾಗಿ ಹೆಚ್ಚು ಕಡಿಮೆ ಸಾರ್ವಜನಿಕ ಸ್ವರೂಪವುಳ್ಳ ಸರಳವಾದ ಅಥವಾ ಇಲ್ಲದಿರುವ ಮತ್ತು ತಾವು ಪ್ರಸ್ತಾಪಿಸುವ ವಿಷಯಗಳ ಬಗ್ಗೆ ಶಾಶ್ವತವಾದ ದಖಲೆಗಳಾಬೇಕೆಂದು ಆದ ನಿರ್ದಿಷ್ಟವಾದ ಪ್ರಕಟಣೆಗಳು).
J. F. Fleet

೩. Inscription literally means any writing engraved on some object. (ಶಾಸನವೆಂದರೆ ಯಾವುದಾದರೊಂದು ಪದಾರ್ಥದ ಮೇಲೆ ಕೊರೆದ ಬರಹವೆಂದರೆ ಅಕ್ಷರಶಃ ಅರ್ಥವಾಗುತ್ತದೆ).
ಡಿ. ಸಿ. ಸರ್ಕಾರ್

೪. ಶಾಸನ ಕಲ್ಲು ಅಥವಾ ತಾಮ್ರ ಮುಂತಾದ ಲೋಹಗಳ ಮೇಲೆ ಬರೆವ ದಾಖಲೆ.
ಶ್ರೀನಿವಾಸ ರಿತಿ

೫. ಶಾಸನಗಳು ಸಾಹಿತ್ಯದ ತಲಕಾವೇರಿ.
ಎಂ. ಚಿದಾನಂದ ಮೂರ್ತಿ

೬. ಶಾಸನಗಳು ಒಂದು ಪ್ರದೇಶದ ಪ್ರಾಚೀನ ಇತಿಹಾಸವನ್ನು ಸಂಸ್ಕೃತಿಯನ್ನು ತಿಳಿಸುವಲ್ಲಿ ಮೂಕಸಾಕ್ಷಿಯಾಗಿದೆ ನಿಂತಿವೆ.
ಜೆ. ಎಂ. ನಾಗಯ್ಯ

೭. ಶಾಸನಗಳು ಆಯಾಕಾಲದಲ್ಲಿ ಬರೆದವುಗಳಾಗಿದ್ದು ಲಿಪಿಕಾರರು ಕಾಲ ಕಾಲಕ್ಕೆ ಮಾಡುವ ತಿದ್ದುಪಡಿಯ ದೋಷವಿಲ್ಲದೆ ಅನೂಚಾನವಾಗಿ ಬಂದ ಮೂಲ ಸಾಮಗ್ರಿಗಳಾಗಿವೆ.
. ಎಂ ಅಣ್ಣಿಗೇರಿ, ಆರ್. ಶೇಷಶಾಸ್ತ್ರೀ

೮. ಶಾಸನಗಳು ಪ್ರಮುಖವಾಗಿ ಒಂದು ಕಾಲದಲ್ಲಿ ನಡೆದ ವ್ಯವಹಾರಗಳ ಲಿಖಿತ ದಾಖಲೆಗಳು, ನಾಡಿನ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವ ಮೂಲ ಸಾಮಗ್ರಿಗಳಾಗಿವೆ.
ನಾಗಭೂಷಣ

೯. ಶಾಸನಎಂಬ ಪದಕ್ಕೆ ನಾನಾರ್ಥಗಳಿರುವವಾದರೂ ದಾಖಲೆಗಳ ಸಂದರ್ಭದಲ್ಲಿ ಅದಕ್ಕೆರಾಜಾಜ್ಞೆಎಂಬ ವಿಶಿಷ್ಟಾರ್ಥ ಅನ್ವಯವಾಗುತ್ತದೆ. ಇದನ್ನು ಬರೆಯಿಸಿದವರು ಕೂಡ ಆಗೀಗ ಇದನ್ನುಶಾಸನಎಂದೇ ಹೆಸರಿಸಿದ್ದಾರೆ. ಇದಲ್ಲದೆ ಲಿಪಿ, ಧರ್ಮಲಿಪಿ, ಲೇಖ, ಶಿಲಾಲೇಖ, ಕಲ್ಬರಹ, ತಾಮ್ರಪಟ್ಟಿಕಾ, ತಾಮ್ರಪಟ, ತಾಮ್ರಶಾಸನ ಇತ್ಯಾದಿ ನಾಮಾಂತರಗಳೂ ಶಾಸನಗಳಿಗೆ ಉಂಟು.
ಎಂ. ಬಿ. ನೇಗಿನಹಾಳ    

ಹೀಗೆ ಮೇಲ್ಕಾಣಿಸಿದ ವ್ಯಾಖ್ಯಾನಗಳು ಶಾಸನಗಳು ಎಂದರೇನು ಮತ್ತು ಯಾವುದನ್ನು ಶಾಸನಗಳೆಂದು ಪರಿಗಣಿಸಲಾಗುತ್ತಿತ್ತು ಹಾಗೂ ಅವುಗಳಿಂದ ತಿಳಿದುಬರುವ ಐತಿಹಾಸಿಕ ಅಂಶಗಳೇನು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೆಯೇ ಶಾಸನಗಳು ಜನ್ಮ ತಾಳಲು ಕಾರಣವೇನು? ರಾಜರು ತಮ್ಮ ಚರಿತ್ರೆ ಶಾಶ್ವತವಾಗಿರಬೇಕೆಂಬ ಆಕಾಂಕ್ಷೆಯಿಂದ ಶಾಸನಗಳನ್ನು ಕಲ್ಲಿನ ಮೇಲೆ ಕೊರೆಸಿದರು ಎಂಬುದು ಸಾಮಾನ್ಯ ಗ್ರಹಿಕೆಯಿದೆ. ಆದರೂ ಅವು ಕಾಲಕ್ರಮೇಣ ವಿವಿಧ ಉದ್ದೇಶಗಳ ಹಿನ್ನೆಲೆಯಲ್ಲಿ ಹಾಕಿಸಿರುವ ಸಂಗತಿ ಗೋಚರಿಸುತ್ತವೆ. ಹೀಗಾಗಿ ಒಂದೇ ಉದ್ದೇಶದಿಂದ ಜನ್ಮ ತಾಳಿದವು ಎಂದು ಖಚಿತವಾಗಿ ಹೇಳುವುದು ಕಷ್ಟ. ಆರಂಭದಲ್ಲಿ ಶಾಸನಗಳು ರಾಜಾಜ್ಞೆಗೆಂದೇ ಮೀಸಲಾಗಿದ್ದವು. ರಾಜನು ಹೊರಡಿಸಿದ ಆಜ್ಞೆಗಳನ್ನು ಪ್ರಜೆಗಳಿಗೆ ತಲುಪಿಸುವ ಮಾಧ್ಯಮವಾಗಿ ಶಾಸನಗಳು ರೂಪುಗೊಂಡವು. ಕಾಲಾಂತರದಲ್ಲಿ ಅವು ರಾಜಾಜ್ಞೆಗಷ್ಟೇ ಮೀಸಲಾಗದೆ ದಾನದ ವಿಷಯ ಹಾಗೂ ದಾನ ನೀಡಿದ ವಂಶದ ವರ್ಣನೆ, ಯುದ್ಧದಲ್ಲಿ ಹೋರಾಡಿ ಮಡಿದ ವೀರರ ಶೌರ್ಯ, ರಾಜರ ಲೋಕೋಪಯೋಗಿ ಕಾರ್ಯ, ಹೀಗೆ ಅನೇಕ ವಿಷಯಗಳನ್ನು ಒಳಗೊಂಡವು. ಈ ಕುರಿತು ಚಿದಾನಂದಮೂರ್ತಿಯವರು “ಸಾಹಿತ್ಯಕ್ಕೆ ಸಾಹಿತ್ಯ, ಧರ್ಮಕ್ಕೆ ಧರ್ಮ, ಇತಿಹಾಸಕ್ಕೆ ಇತಿಹಾಸವೆನಿಸಿದ ಶಾಸನಗಳು ಪ್ರಾಚೀನ ಕರ್ನಾಟಕದ ಸಾಹಿತ್ಯ ಧರ್ಮ ಮತ್ತು ಸಮಾಜಗಳಿಗೆ ಹಿಡಿದ ಶಿಲಾದರ್ಪಣಗಳೆನಿಸಿವೆ. ಪ್ರಾಚೀನ ಶಾಸನಗಳಲ್ಲಿ ರಾಜಮನೆತನ, ರಾಜನ ಹೆಸರು, ದತ್ತಿಯ ಕಾಲ ದತ್ತಿಯ ವಿವರ ಮಾತ್ರವಷ್ಟೆ ಬರೆಯುತ್ತಿದ್ದರು. ಬರುಬರುತ್ತಾ ಶಾಸನಕಾರರು ಹೆಚ್ಚಿನ ವಿಷಯವನ್ನು ಅದರಲ್ಲಿ ಉಲ್ಲೇಖಿಸಹತ್ತಿದರು. ದೇವತಾಸ್ತುತಿ, ದೇಶದ ವರ್ಣನೆ, ಅದರ ರಾಜ, ಅವನ ಅಧಿಕಾರ, ಅದರ ಕಾಲ, ದಾನವನ್ನು ಸ್ವೀಕರಿಸಿದವನ ಪಾಂಡಿತ್ಯ, ಜನರ ನೀತಿಯ ಮಟ್ಟ, ಆದರ್ಶ ಬುದ್ಧಿವಂತಿಕೆ ಇತ್ಯಾದಿ ವಿಷಯಗಳನ್ನು ಶಾಸನಗಳಲ್ಲಿ ಬರೆಯತೊಡಗಿದರು.”