ಭಾರತದ ಇತಿಹಾಸದ ರಚನೆಗೆ ಚಾರಿತ್ರಿಕ ಆಧಾರಗಳ ಆಭಾವ, ಅಸಮರ್ಪಕತೆ, ಅವಿಶ್ವಾಸನೀಯತೆಗಳು ಕಂಡುಬರುತ್ತವೆ. ಹಾಗೆಯೇ ಭಾರತದಲ್ಲಿ ಇತಿಹಾಸ ರಚಿಸಲು ಯಾವುದೇ ರೀತಿಯ ಆಕರಗಳು ಇಲ್ಲ ಎನ್ನುವ ಕೊರತೆ ಓರಿಯಂಟಲಿಸ್ಟರನ್ನು ಕಾಡಿದಾಗ, ಅವರಿಗೆ ದೊರೆತ ಆಕರಗಳೆಂದರೆ ಈ ಶಾಸನಗಳು. ಹಾಗಾಗಿ ಶಾಸನಗಳ ಅಧ್ಯಯನಕ್ಕೆ ಹೆಚ್ಚು ಮಹತ್ವ ಬಂದದ್ದು ಬ್ರಿಟಿಷ್ ವಸಾಹತುಶಾಹಿ ಆಡಳಿತಾವಧಿಯಲ್ಲಿ. ಅಲ್ಲಿಯವರೆಗೆ ಸಾಹಿತ್ಯಾಂಶಗಳಿಂದ ಪ್ರಾಚೀನ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳನ್ನು ತಿಳಿಯಬಹುದಾದರೂ ಅವು ಶಾಸನಗಳಷ್ಟು ಪ್ರಾಚೀನವಾದ ಹಾಗೂ ನಿಖರವಾದ ಮಾಹಿತಿಯನ್ನು ಒದಗಿಸುವುದಿಲ್ಲ. ಇದರಿಂದಲೇ ಶಾಸನಗಳ ಮಹತ್ವ ಎಷ್ಟೆಂಬುದನ್ನು ಊಹಿಸಬಹುದು. ಈ ದೇಶದ ಪ್ರಾಚೀನ ಇತಿಹಾಸವನ್ನು ಪುನಾರಚಿಸುವಲ್ಲಿ ಲಭ್ಯವಿರುವ ಏಕೈಕ ಖಚಿತ ಆಧಾರಗಳು ಶಾಸನಗಳೆಂದರೆ ತಪ್ಪಾಗಲಾರದು. ಇದಕ್ಕೆ ಕರ್ನಾಟಕದ ಶಾಸನಗಳೂ ಹೊರತಾದುವೇನೂ ಅಲ್ಲ. ಈ ಮಾತಿಗೆ ಪುಷ್ಟಿಯಾಗಿ ಕೆಲವು ವಿದ್ವಾಂಸರ ಹೇಳಿಕೆಗಳನ್ನು ಗಮನಿಸಬಹುದು.

ಹಿಂದೂ ಜನಾಂಗದವರಿಗೆ ಅಧಿಕೃತ ಚರಿತ್ರೆ ಇಲ್ಲದಿರುವಾಗ ಆಕಸ್ಮಿಕಗಳ ಮೂಲಕ ಆಗಾಗ ಪತ್ತೆಯಾಗುವ ಎಲ್ಲ ಅಸಲಿ ಸ್ಮಾರಕಗಳಿಗೆ ವಿಶೇಷವಾಗಿ ಶಿಲಾಶಾಸನ ಲೋಹಗಳಿಗೆ ನ್ಯಾಯವಾಗಿಯೇ ಪ್ರಾಮುಖ್ಯತೆ ಸಿಗುತ್ತದೆ.   ಕೋಲ್ ಬ್ರೂಕ್

ವಿಶೇಷವಾಗಿ ಭರತಖಂಡ ಶಾಸನ ರೂಪದ ಅವಶೇಷಗಳಲ್ಲಿ ಶ್ರೀಮಂತವಾಗಿರುವುದು ಮಾತ್ರವಲ್ಲದೆ ಶಾಸನಗಳೇ ದೇಶದ ಪ್ರಾಚ್ಯಂಗ ಸಂಬಂಧವಾದ ಎಲ್ಲಾ ಸಂಶೋಧನಾ ಪಥಗಳಲ್ಲಿಯೂ ಐತಿಹಾಸಿಕ ಫಲಿತಾಂಶಗಳಿಗೆ ಖಚಿತವಾದ ಏಕಮಾತ್ರ ಬುನಾದಿಯಾಗಿದೆ.ಜೆ.ಎಪ್. ಪ್ಲೀಟ್

ಶಾಸನಗಳು ಪ್ರಾಚೀನ ಭಾರತದ ಕಾಲಾನುಕ್ರಮಣಿಕೆಯ ಒಂದೇ ಒಂದು ಅಂತಿಮ ಆಲಂಬನ.
ಪ್ರೊ. ಜಿ.ಎಸ್. ದೀಕ್ಷಿತ್

ಶಾನಗಳು ಭಾರತದ ಜೀವನಾಡಿ. ಬಿ. ಸಿ. ಛಾಬಾ

ಶಾಸನಗಳು ನಮ್ಮ ನಾಡಿನ ಅಪೂರ್ವವಾದ ಸಂಪತ್ತು. ಡಾ ಪಿ. ಬಿ. ದೇಸಾಯಿ

ಸಂಶೋಧಕರಿಗೆ ಶಾಸನಗಳು ಅತ್ಯಂತ ಪ್ರಾಮಾಣಿಕವಾದ ಶುದ್ಧವಾದ, ನಿಚ್ಚಳವಾದ ಕಣ್ಣುಗಳಿದ್ದಂತೆ ಕಣ್ಣುಗಳ ಮುಖಾಂತರ ಸಂಶೋಧಕರು ಪ್ರಾಚೀನ ಕಾಲದ ಧರ್ಮ, ಸಮಾಜ, ಸಂಸ್ಕೃತಿಯಾದಿಗಳನ್ನು ನೋಡತೊಡಗಿದರೆ ಅವುಗಳ ಸತ್ಯರೂಪವು ಕಾಣಬಲ್ಲದು.ಡಾ. ಬಿ.. ವಸಂತಶೆಟಿ

ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡುವವರಿಗೆ ಸಾಹಿತ್ಯದಂತೆಯೇ ಶಾಸನಗಳೂ ವಿಷಯದ ಗಣಿಯಾಗಿವೆ. ಭಾರತೀಯರ ಜೀವನ ಮತ್ತು ಆಲೋಚನೆಗಳ ಮೇಲೆ ಬೇರೆ ಬೇರೆ ಕೋನಗಳ ಮೇಲೆ ಅವು ಸಾಕಷ್ಟು ಬೆಳಕನ್ನು ಬೀರುತ್ತವೆ. ಭಾರತೀಯ ಸಂಸ್ಕೃತಿಯ ಐಕ್ಯತೆಯನ್ನು ಕಾಪಾಡುವಲ್ಲಿ ಇವು ಪ್ರಧಾನ ಪಾತ್ರವನ್ನು ವಹಿಸುತ್ತವೆ. ಪ್ರಾಚೀನ ತಮ್ಮ ಜ್ಞಾನದ ಕೊರತೆಯನ್ನು ಶಾಸನಗಳ ಅಭ್ಯಾಸದಿಂದ ಹೋಗಲಾಡಿಸಿಕೊಳ್ಳಬಹುದು. ದಿ. ಸ್ಕಾಲ್ಕಾರ್

ಹೀಗೆ ವಿದ್ವಾಂಸರು ಶ್ರೇಷ್ಠರಿಂದ ಪ್ರಾಚೀನ ಭಾರತದ ಪುನಾರಚನೆಗೆ ಉಳಿದೆಲ್ಲ ಆಕರಗಳಿಗಿಂತ ಪ್ರಮುಖವಾದುದು ಹಾಗೂ ನಿಖರವಾದೆಂದು ಪರಿಗಣಿಸಲ್ಪಟ್ಟಿರುವ ಶಾಸನಗಳ ಮಹತ್ವವನ್ನು ಕುರಿತು ಈ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನ ಮಾಡಲಾಗಿದೆ. ಶಾಸನಗಳಲ್ಲಿರುವ ಮಹತ್ವದ ವಿಷಯವನ್ನು ಸ್ಥೂಲವಾಗಿ ಧಾರ್ಮಿಕ, ಚಾರಿತ್ರಿಕ, ಸಾಮಾಜಿಕ, ಭಾಷಿಕ, ಸಾಂಸ್ಕೃತಿಕ ಎಂದು ವಿಭಾಗಿಸಿಕೊಂಡಿದೆ.

.. ಶಾಸನಗಳ ಧಾರ್ಮಿಕ ಮಹತ್ವ

ನಮ್ಮ ನಾಡು ಸಂಪತ್ತಿಗೆ, ಸಂಸ್ಕೃತಿಗೆ, ರಾಜ್ಯಭಾರಕ್ಕೆ ಹೆಸರುವಾಸಿಯಾದಂತೆ ಧರ್ಮ ಸಹಿಷ್ಣುತೆಗೂ ಹೆಸರುವಾಸಿಯಾಗಿದೆ. ಈ ನಾಡಿನ ಆಯಾ ರಾಜರ ಆಳ್ವಿಕೆಯ ಕಾಲದಲ್ಲಿ ಬೌದ್ಧ, ಜೈನ, ಶೈವ, ಮಾಧ್ವ, ಸಿಖ್ ಮೊದಲಾದ ಅನೇಕ ಧರ್ಮಗಳು ಉಳಿದು ಬೆಳೆದು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಮೂಲಕ ಜನಸಾಮಾನ್ಯರ ಮೇಲೆ ಪ್ರಭಾವವನ್ನು ಬೀರಿ ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಈ ಶಾಸನಗಳಲ್ಲಿ ಧಾರ್ಮಿಕ ದೃಷ್ಟಿಯಿಂದ ನೀಡಿದ ದಾನದ ಬಗ್ಗೆ, ಧರ್ಮ ಸಮನ್ವಯಕ್ಕಾಗಿ ಹಾಕಿಸಿದ ಶಾಸನಗಳು, ಧರ್ಮವ್ಯಾಜ್ಯವನ್ನು ಪರಿಹರಿಸಲೆಂದು ಹಾಕಿಸಿದ ಶಾಸನಗಳನ್ನು ನೋಡಬಹುದು. ಉದಾಹರಣೆಗೆ ಚಾಲುಕ್ಯ ವಿಜಯಾದಿತ್ಯ ಸತ್ಯಾಶ್ರಯ ಕಾಲದ ಬಾದಾಮಿಯ ಶಾಸನ ಬ್ರಹ್ಮ, ವಿಷ್ಣು, ಮಹೇಶ್ವರ ಈ ಮೂರ್ತಿಗಳನ್ನು ಏಕಕಾಲದಲ್ಲಿ ಸ್ಥಾಪಿಸಿದುದನ್ನು ಹೇಳುತ್ತದೆ. ರಾಷ್ಟ್ರಕೂಟರ ಶಾಸನಗಳಲ್ಲಿ ಶಿವ ಮತ್ತು ವಿಷ್ಣು ಇಬ್ಬರನ್ನು ಕುರಿತ ಸ್ತುತಿರೂಪದ ಶ್ಲೋಕಗಳು ದೊರೆಯುತ್ತವೆ. ಅವರ ನಾಣ್ಯಗಳ ಮೇಲೆ ವಿಷ್ಣುವಿನ ವಾಹನ ಗರುಡ, ಧ್ಯಾನಸ್ಥನಾದ ಶಿವ ಇರುವುದು ಧರ್ಮ ಸಹಿಷ್ಣುತೆಯನ್ನು ಸೂಚಿಸುತ್ತದೆ.

ಹೊಯ್ಸಳರ ಎರಡನೆಯ ನರಸಿಂಹನ ದಂಡನಾಯಕ ಪೋಲಾಳ್ವನು ಹರಿಹರ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ದಾವಣಗೆರೆಯ ಶಾಸನವೊಂದರಿಂದ ತಿಳಿದುಬರುತ್ತದೆ. ಈ ಶಾಸನದಲ್ಲಿ ಬರುವ ಪದ್ಯಗಳು ಹೀಗಿವೆ.

ಹರಿಯಿಂದಂ ಬಿಟ್ಟು ದೈವಂ ಧರಣೀತದೊಳೊಲ್ಲೆಂದು ಪೇಳ್ವರ್ ಕೆಲಂಬರ್ |
ಹರನಿಂದಂ ಬಿಟ್ಟು ದೈವಂ ಧರಣೀತದೊಳಿಲ್ಲೆಂದು ಪೇಳ್ವರ್ ಕೆಲಂಬರ್ ||

ನರರಾಸಂದೇಹಂ ಪಿಂಗಿಸಲು ತಿಶಯದಿಂ ಕೂಡಲೂರಲ್ಲಿ ಶೋಭಾ |
ಕರಮಪ್ಪಂತೊಂದೆ ರೂಪಂ ತಳೆದ ಹರಿಹರಂ ಕೂರ್ತು ರಕ್ಷಿಕ್ಕೆ ನಮ್ಮ ||

ಸಂದ ಶಿವಂಗೆ ವಿಷ್ಣುವಿನ ರೂಪಮವಾದುದು ವಿಷ್ಣುವಿಗೆ ಪೆಂ |
ಪೊಂದಿ ನೆಗೈಱೆವೆತ್ತ ಶಿವರೂಪವಾದಾದುದು ವೇದ ವಾಕ್ಯ ದಿಂ ||

ದೆಂದೆದನೆಯ್ದೆ ನಿಶ್ಚಯಿಸುವಂತಿರೆ ಕೂಡಲೋಳೇಕ ಮೂರ್ತಿ ಯಿಂ |
ನಿಂದ ಜಗನ್ನುತ ಹರಿಹರಂ ಪರಕ್ಷಿಸುತಿರ್ಕೆ ಧಾತ್ರಿಯಿಂ || ಎಂದಿದೆ.

ಶ್ರೀ ವೈಷ್ಣವರಿಗೂ ಮತ್ತು ಜೈನರಿಗೂ ವಿರೋಧ ಬಂದಾಗ ವಿಜಯನಗರದ ಎರಡನೇ ಬುಕ್ಕರಾಯ ಆ ಎರಡೂ ಮತೀಯರಲ್ಲಿ ರಾಜಿ ಮಾಡಿಸಿದ ಸಂಗತಿಯನ್ನು ಶ್ರವಣಬೆಳಗೊಳದ ಒಂದು ಶಾಸನವು ತಿಳಿಸುತ್ತದೆ. ಅತ್ತಿಮಬ್ಬೆಯು ಪೊನ್ನ ವಿರಚಿತ ‘ಶಾಂತಿ ಪುರಾಣದ’ದ ೧೦೦೦ ಪ್ರತಿಗಳನ್ನು ಮಾಡಿಸಿ ಹಂಚಿದ್ದಲ್ಲದೆ, ೧೫೦೦ ಬಸದಿಗಳನ್ನು ಕಟ್ಟಿಸಿದಳು ಎಂಬ ಮಾಹಿತಿಯನ್ನು ಲಕ್ಕುಂಡಿ ಶಾಸನದಿಂದ ತಿಳಿದುಬರುತ್ತದೆ.

ದೇವಾಲಯಗಳು ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತಿದ್ದು, ಜನರನ್ನು ಮುನ್ನೆಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಅನೇಕ ದೇವಾಲಯಗಳು ಶಾಲೆಗಳನ್ನು ಪ್ರೌಢ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಾ ಜನಜೀವನವನ್ನು ರೂಪಿಸುವ ಶಕ್ತಿ ಕೇಂದ್ರಗಳಾಗಿದ್ದವು. ದೇವಾಲಯಗಳಿಗೆ ದಾನವಾಗಿ ಬಂದ ಹಣ ಈ ಸತ್ಕಾರ್ಯಗಳಿಗೆ ವಿನಿಯೋಗವಾಗುತ್ತಿತ್ತು. ದಾನವನ್ನು ಬಡಬಗ್ಗರಿಗೆ ನೀಡುವುದು, ಅನ್ನ ಛತ್ರಗಳನ್ನು ನಡೆಸುವುದು, ಧರ್ಮದ ಬಹಳ ಮುಖ್ಯ ಕಾರ್ಯವಾಗಿತ್ತು.

ದಾನದೊಳನ್ನಮೆ ಸಾರಂ
ದೀನಾನಾರ್ಥರ್ಗ್ಗೆ ತುಷ್ಟಿದಾನಮೆನುತ್ತುಂ
ತಾನೆಱೆದು ಜಕ್ಕಿಯಬ್ಬೆ
ಶೋನಿಧಿ ಸತ್ರಕ್ಕೆ ಭೂಮಿದಾನಮನಿತ್ತಳ್

ಹೀಗೆ ದಾನದಲ್ಲೆಲ್ಲಾ ಅನ್ನದಾನವೇ ಶ್ರೇಷ್ಠವೆಂಬ ಮಾತು ಶಾಸನಗಳಲ್ಲಿ ಕಂಡುಬರುತ್ತದೆ. ಅನ್ನದಾನಕ್ಕೆ ಕಾರಣವಾದ ಸತ್ರಗಳನ್ನು ಅನೇಕ ದೇವಾಲಯಗಳು ನಡೆಸುತ್ತಿದ್ದವು. ದೇವಾಲಯಗಳ ನಿರ್ಮಾಣ ಉದಾತ್ತವಾದ ಸಂಸ್ಕೃತಿಯ ಸಾಧನೆಗೆ ಹಿನ್ನೆಲೆಯಾಗಿತ್ತು. ಈ ಆಶಯದಿಂದಲೇ ದೇವಾಲಯಗಳ ಸಂಖ್ಯೆ ಅಧಿಕವಾಗಿ ಬೆಳೆಯಿತ್ತೆನ್ನಬಹುದು. ಜೀವನದಲ್ಲಿ ಒಂದಾದರೂ ದೇವಾಲಯವನ್ನು ಕಟ್ಟಿಸಬೇಕೆಂಬುದು ಇಲ್ಲವೇ ಕಟ್ಟಿಸಿದ ದೇವಾಲಯಗಳಿಗೆ ದಾನವನ್ನು ಕೊಡಬೇಕೆಂಬುದು ಅಂದಿನ ಜನರ ಧಾರ್ಮಿಕ ಭಾವನೆಯಾಗಿತ್ತು. ಆದುದರಿಂದಲೇ ಅತ್ಯದಿಕ ಸಂಖ್ಯೆಯಲ್ಲಿ ದೇವಾಲಯಗಳ ನಿರ್ಮಾಣವನ್ನು ಅದಕ್ಕೆ ಸಂಬಂಧಿಸಿದ ದಾನದತ್ತಿಗಳನ್ನು ಕಾಣಬಹುದು.

.. ಶಾಸನಗಳ ಚಾರಿತ್ರಿಕ ಮಹತ್ವ

ಈ ದೇಶದ ಪ್ರಾಚೀನ ಇತಿಹಾಸವನ್ನು ಪುನಾರಚಿಸುವಲ್ಲಿರುವ ಏಕೈಕ ಖಚಿತ ಆಧಾರಗಳೆಂದರೆ ಶಾಸನಗಳೇ ಎಂದರೆ ತಪ್ಪಾಗಲಾರದು. ಪ್ರಾಚೀನ ಭಾರತದ ಕಾಲಾನುಕ್ರಮಣಿಕೆಯ ಒಂದೇ ಒಂದು ಅಂತಿಮ ಅವಲಂಬನ ಶಾಸನಗಳು ಎಂದಿದ್ದಾರೆ ಬಿ.ಸಿ ಛೋಪ್ರಾ ಅವರು. ಉದಾಹರಣೆಗೆ ನೇಪಾಳದ ರುಮ್ಮಿಂದಯ್ ಎಂಬಲ್ಲಿ ಸಿಕ್ಕಿರುವ ಅಶೋಕನ ಸ್ತಂಭಶಾಸನವೊಂದು ಬುದ್ಧನ ಜನ್ಮಸ್ಥಳವನ್ನು ನಿಖರವಾಗಿ ನಿರ್ಣಯಿಸಿದೆ. ಅಶೋಕನ ಮಸ್ಕಿ ಶಾಸನದಲ್ಲಿ ‘ಅಶೋಕ’ ಎಂಬ ಹೆಸರಿಗೂ`ದೇವನಾಂಪ್ರಿಯ’ ಎಂಬ ಬಿರುದಿಗೂ ಇದ್ದ ಭಿನ್ನತೆಯನ್ನು ನಿವಾರಿಸಿ ಎರಡೂ ಒಂದೇ ಎಂಬುದಾಗಿ ಖಚಿತಪಡಿಸುತ್ತದೆ. ಇಮ್ಮಡಿ ಪುಲಿಕೇಶಿಯ ಐಹೊಳೆ ಶಾಸನದಲ್ಲಿ ಬಾದಾಮಿ ಚಾಲುಕ್ಯರ ವಂಶಾವಳಿ ಹಾಗೂ ಇಮ್ಮಡಿ ಪುಲಿಕೇಶಿಯ ಸಾಧನೆಗಳನ್ನು ವರ್ಣಿಸಲಾಗಿದೆ. ಕಾಕುತ್ಸವರ್ಮನ ತಾಳಗುಂದ ಶಾಸನವು ಕಾಕುತ್ಸವರ್ಮನ ಗುಣಗಾನ ಮಾಡುವುದರ ಜೊತೆಗೆ ಮಯೂರಶರ್ಮ, ಮಯೂರವರ್ಮನಾದ ಬಗೆಗೂ, ಪಲ್ಲವರನ್ನು ಸೋಲಿಸಿ ಕದಂಬ ರಾಜ್ಯ ಸ್ಥಾಪಿಸಿದುದರ ಬಗೆಗೂ ವಿವರಣೆಯನ್ನು ನೀಡುತ್ತದೆ. ಬಾದಮಿಯ ಶಾಸನವು ಕಲಿಯುಗ ವಿಪರೀತನೆಂಬ ಹೆಗ್ಗಳಿಕೆಗೆ ಪಾತ್ರನಾದ ಕಪ್ಪೆ ಆರಭಟ್ಟನ ಶೌರ್ಯ ಪರಾಕ್ರಮಗಳನ್ನು ಉಲ್ಲೇಖಿಸುತ್ತದೆ. ವಿಷ್ಣುವರ್ಧನನ ಬೇಲೂರು ಶಾಸನವು ಅವನ ದಿಗ್ವಿಜಯಗಳನ್ನು ವರ್ಣಿಸುವ ಶಾಸನವಾಗಿದೆ.

ಹೀಗೆ ಚರಿತ್ರೆಯ ದೃಷ್ಟಿಯಿಂದ ನೋಡಿದಾಗಲೂ ಇಲ್ಲಿ ಆಳ್ವಿಕೆ ನಡೆಸಿದ ರಾಜರ ಮಾಹಿತಿಯನ್ನು ನಿಖರವಾಗಿ ಶಾಸನಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಬಹುದು.

. ಶಾಸನಗಳ ಸಾಮಾಜಿಕ ಮಹತ್ವ

ಸಮಾಜದಲ್ಲಿ ಜೀವಿಸುವ ಜನರ ನಡವಳಿಕೆಗಳು, ಅವರ ಆಚರಣೆ, ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಕೂಡ ಶಾಸನಗಳಿಂದ ತಿಳಿಯಬಹುದು. ವಿಜಯನಗರದ ಪ್ರೌಢಪ್ರತಾಪದೇವರಾಯನ ಕಾಲದಲ್ಲಿ ರಚಿತವಾದ ಹಂಪೆಯ ಶಾಸನದಲ್ಲಿ ಬರುವ ಒಂದು ಪದ್ಯ ಸಾಮಾಜಿಕ ಜೀವನಕ್ಕೆ ಹಿನ್ನೆಲೆಯಾಗಿರಬೇಕಾದ ಉದಾತ್ತ ಸಂಸ್ಕೃತಿಯನ್ನು ಅರ್ಥವತ್ತಾಗಿ ಸೂಚಿಸುತ್ತದೆ.

ಕೆಱೆಯಂ ಕಟ್ಟಿಸು ಭಾವಿಯಂ ಸವೆಸು ದೇವಾಗಾರಮಂ ಮಾಡಿಸ
ಜ್ಜೆಱೆಯೊಳ್ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗ್ಗಿಂಬುಕೆಯಿ ನಂಬಿದ
ರ್ಗ್ಗೆಱೆವೆಟ್ಟಾಗಿರು ಶಿಷ್ಟರಂ ಪೊರೆಯೆನುತ್ತಿಂತೆಲ್ಲಮಂ ಪಿಂದೆ ತಾಂ
ಯೆಱೆದಳ್ಪಾಲೆಱೆವಂದು ತೊಟ್ಟು ಕಿವಿಯೊಳ್ ಲಕ್ಷೀಧರಾಮಾತ್ಯನಾ ||

ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದವರಿಗೆ ಆಶ್ರಯದಾತನಾಗು, ಸತ್ಪುರಷರನ್ನು ರಕ್ಷಿಸು ಎಂದು ಮುಂತಾಗಿ ಅವನ (ವಿಜಯ ನಗರದ ಪ್ರೌಢದೇವರಾಯನ ಮಂತ್ರಿ ಲಕ್ಷೀಧರನ) ಕಿವಿಯಲ್ಲಿ ಹೇಳುತ್ತ ಹಾಲನ್ನು ಹಾಕಿದಳಂತೆ ಅವನ ತಾಯಿ | ಎಂದಿದೆ.

ಹಸಿದವರಿಗೆ ಅನ್ನದಾನ, ದುಖಃಪೀಡಿತರಿಗೆ ಅಭಯದಾನ ಲಭಿಸುವಂತಿರುವ ಸಮಾಜವೇ ಸುಸಂಸ್ಕೃತ ಸಮಾಜ ಮತ್ತು ಸುಭಿಕ್ಷ ಸಮಾಜ ಎನಿಸಿಕೊಳ್ಳುತ್ತದೆಂಬುದು ಶಾಸನಗಳ ದೃಷ್ಟಿ, ಧರ್ಮಶಾಸ್ತ್ರಗಳಲ್ಲಿ ಮತ್ತು ಶಾಸನಗಳಲ್ಲಿಯೂ ಕೆಲವು ವೇಳೆ ತುಲಾಪುರುಷ ದಾನ, ಹಿರಣ್ಯ ಗರ್ಭದಾನ, ಗೋಸಹಸ್ರದಾನ ಎಂದು ಮೊದಲಾದ ಹದಿನಾರು ಬಗೆಯ ದಾನಗಳನ್ನು ಹೇಳಲಾಗಿದ್ದರೂ ಅನ್ನದಾನ ಹಾಗೂ ವಿದ್ಯಾದಾನಗಳು ಉಳಿದೆಲ್ಲ ದಾನಗಳಿಗಿಂತ ಶ್ರೇಷ್ಠವಾದುವೆಂಬ ಭಾವನೆ ಮೊದಲಿನಿಂದಲು ಬೆಳೆದು ಬಂದಿದೆ.

ಅನ್ನದಾನಕ್ಕಾಗಿ ಭೂಮಿಯನ್ನು ದಾನ ಕೊಟ್ಟ ಜಕ್ಕಿಯೆಬ್ಬೆಯ ಆದರ್ಶವನ್ನು ವರ್ಣಿಸುವ ಸೊರಟೂರಿನ ಶಾಸನವೊಂದರಲ್ಲಿ “ದಾನದೊಳನ್ನದಾನಮೆಸಾರಂ” ಎಂದು ಮಹತ್ವವನ್ನು ಸಾರುತ್ತದೆ. ಮುಳುಗುಂದದ ಶಾಸನವೊಂದು ಅನ್ನದಾನಕ್ಕಾಗಿಯೇ ಭೂಮಿಯನ್ನು ದಾನವಾಗಿ ಕೊಟ್ಟದ್ದನ್ನು ಸಾರುತ್ತದೆ. ತ್ರೈಲೋಕ್ಯಮಲ್ಲದೇವ (೧ನೇ ಸೋಮೇಶ್ವರ)ನ ಕಾಲದ ಶಾಸನ ಅದು. “ಧೃವೇಶ್ವರ ಪಂಡಿತ” ಎಂಬುವವರಿಗೆ ಶೇಟ್ಟರೂ ಊರಗಾವುಂಡರೂ ಕೊಟ್ಟ ಜಮೀನಿನ ದಾನವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ನಗರೇಶ್ವರ ದೇವಾಲಯದ ಮಠಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಸತ್ರದಲ್ಲಿ ಸನ್ಯಾಸಿಗಳಿಗೆ ಅನ್ನದಾನಕ್ಕಾಗಿ ಆ ದಾನವನ್ನು ಕೊಡಲಾಗಿದೆ ಎಂಬುದು ತಿಳಿದುಬರುತ್ತದೆ.

ಇದೇ ರೀತಿ ವಿದ್ಯಾಭ್ಯಾಸಕ್ಕಾಗಿಯೂ ದಾನ ಕೊಟ್ಟ ಉದಾಹರಣೆಗಳನ್ನು ಶಾಸನಗಳಲ್ಲಿ ಕಾಣಬಹುದು. ಉದಾಹರಣೆಗೆ ಧಾರವಾಡ ಜಿಲ್ಲೆಯ ಹೆಬ್ಬಾಳಿನಲ್ಲಿ ಭುಜ್ಜಭೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಒಂದು ಮಠವಿತ್ತು. ಕ್ರಿ.ಶ. ೯೭೫ರ ಒಂದು ಶಾಸನದಲ್ಲಿ ೫೦ ಮತ್ತರ ಭೂಮಿಯನ್ನು ಅನುದಾನವಾಗಿ ಪಡೆದುದರ ಉಲ್ಲೇಖವಿದೆ. ಇಲ್ಲಿ ಅನೇಕ ವಿದ್ಯಾರ್ಥಿಗಳು ಊಟ ಪಡೆದು ವಿದ್ಯಾಭ್ಯಾಸವನ್ನು ಮಾಡುತ್ತಿದ್ದುದು ಈ ಶಾಸನದಿಂದ ವ್ಯಕ್ತವಾಗುತ್ತದೆ.

ಹಾಗೆಯೇ ವ್ಯಾಪಾರಕ್ಕೆ ಸಂಬಂಧಪಟ್ಟ ಶಾಸನಗಳೂ ದೊರೆಯುತ್ತವೆ. ಉದಾಹರಣೆಗೆ ಅಯ್ಯವಳೆಯವರ್ನೂರು ಎಂಬ ಮಾತು ಶಾಸನಗಳಲ್ಲಿ ದೊರೆಯುತ್ತದೆ. ಅಯ್ಯವಳೆ ಎಂದರೆ ಈಗಿನ ಐಹೊಳೆ. ಇದು ಪ್ರಾಚೀನ ಕರ್ನಾಟಕದಲ್ಲಿ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ವ್ಯಾಪಾರವನ್ನೆಲ್ಲಾ ಇಲ್ಲಿಯ ವರ್ತಕರು ನಿಯಂತ್ರಿಸುತ್ತಿದ್ದರು. ಸಿರಸಂಗಿ ಬಳ್ಳಿಗಂವೆಯೂ ಸಹ ವರ್ತಕರ ಪ್ರಮುಖ ಕೇಂದ್ರವಾಗಿತ್ತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ವಿಜಯನಗರ ಕಾಲದಲ್ಲಿ ವರ್ತಕರು ವೀರಬಣಂಜು (guildes) ಪ್ರಮುಖವಾಗಿತ್ತು ಅದು ರಾಜ್ಯದ ವ್ಯಾಪಾರವನ್ನೆಲ್ಲಾ ನಿಯಂತ್ರಿಸುತ್ತಿದ್ದಂತೆ ತೋರುತ್ತದೆ. ವ್ಯಾಪಾರದ ವ್ಯಾಪ್ತಿ, ತೆರಿಗೆ. ಪ್ರಮಾಣ, ಅಳತೆ, ತೂಕ ಮೊದಲಾದ ವಿವರಗಳು ಶಾಸನಗಳಲ್ಲಿ ಕಂಡುಬರುತ್ತವೆ. ಅಲ್ಲದೆ, ವರ್ತಕರ ಧರ್ಮಬುದ್ಧಿ ಮತ್ತು ಉದಾರಗುಣ ಮತ್ತು ದಾನದತ್ತಿಗಳನ್ನು ತಿಳಿಸುತ್ತ ವ್ಯಾಪಾರ ಸಂಸ್ಥೆಗಳು ಕೂಡ ಸಾಂಸ್ಕೃತಿಕ ಜೀವನಕ್ಕೆ ಪೋಷಕಾಗಿದ್ದವು ಎಂಬುದನ್ನು ತಿಳಿಸುತ್ತದೆ.

ಶಾಸನಗಳಲ್ಲಿ ಕಂಡುಬರುವ ಕನ್ನಡ ನಾಡಿನ ವರ್ಣನೆ ಸ್ವರ್ಗಸದೃಶ್ಯವಾದ ಸುಖದ ಕಲ್ಪನೆಯನ್ನು ತಂದುಕೊಡುತ್ತದೆ.

ಬೆಳಗೆಯ್ಯಿಂ ಪೊಂಗಣಿಯಿಂ
ಫಲತರುವಂದೊಳ್ಪಯಂಗಳಿಂ ಕುಸುಮರಜಾ
ನಿಳನಿಂ ಪಗರೆಯ ಪರಿಯಿಂ
ತಳರದ ಸಿರಿ ಬಲ್ಲಕುಂದೆ ನಾಳ್ಕೆಸೆದಿರ್ಕ್ಯುಂ

ಹೀಗೆ ಧನಧಾನ್ಯದ ಸೊಮ್ಮಿನ ಸೊಂಪಿನಿಂದ ಜನ ಸಮೃದ್ಧವಾಗಿ ಬಾಳುತ್ತಿರುವುದರ ಚಿತ್ರಣ ಶಾಸನಗಳಲ್ಲಿ ದೊರೆಯುತ್ತದೆ. ಇನ್ನು ಜನಸಾಮಾನ್ಯರ ವಿಷಯಕ್ಕೆ ಬಂದರೆ ಭಾವುಕತೆ ಹೆಚ್ಚಾಗಿ ಕೊಂಡುಬರುತ್ತದೆ. ಧರ್ಮದ ಹೆಸರಿನಲ್ಲಿ ಹೇಳಿದುದನ್ನೆಲ್ಲ ನಂಬುವ ಸರಳ ಹಾಗೂ ತೋರಿಸುವುದಕ್ಕಾಗಿ ಘಟಸರ್ಪವನ್ನು ಹಿಡಿಯಬೇಕಾದುದು, ಕಾಶಿ ಮುಂತಾದ ಕ್ಷೇತ್ರಗಳಲ್ಲಿ ಜೀವನದ ಅಂತ್ಯವನ್ನು ತಂದುಕೊಳ್ಳುವುದರಿಂದ ಮೋಕ್ಷ ದೊರೆಯುವುದೆಂಬ ಭಾವನೆ, ತಮ್ಮ ರಾಜನಿಗೆ ಮಕ್ಕಳಾದರೆ ತಾವು ತಲೆಯನ್ನು ಒಪ್ಪಿಸುತ್ತೇವೆಂದು ಆತನ ಆಪ್ತಜನರು ಹರಕೆ ಹೊತ್ತು ಅದನ್ನು ನೆರವೇರಿಸುತ್ತಿದ್ದರೆಂಬ ಹಲವು ಅಂಶಗಳು ಶಾಸನದಲ್ಲಿ ಕಾಣಸಿಗುತ್ತವೆ.

ಶಾಸನಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ಜೀವನದಲ್ಲಿ ಕಾಣಸಿಗುವ ಮತ್ತೊಂದು ಪ್ರಮುಖವಾದ ಅಂಶವೆಂದರೆ ಸಹಕಾರ ಜೀವನ, ಸುಖವೋ, ದುಃಖವೋ, ದಾನವೋ ಧರ್ಮವೋ ನಾಲ್ಕಾರು ಜನ ಕೂಡಿ ಅದನ್ನು ಅನುಭವಿಸುತ್ತಿದ್ದರು. ಹಾಗೆಯೇ ನಿರ್ವಹಿಸುತ್ತಿದ್ದರು. ಕೆರೆಗಳನ್ನು ಬಾವಿಗಳನ್ನು ಕಟ್ಟಿಸುವುದರಲ್ಲಿ ಮತ್ತು ಅದನ್ನು ಬಳಸುವುದರಲ್ಲಿ ಸಹಕಾರ ತತ್ವವೇ ಪ್ರಧಾನವಾಗಿತ್ತು. ಧಾರವಾಡದ ಜಿಲ್ಲೆಯ ನರಗುಂದದಲ್ಲಿ ಸಾರ್ವಜನಿಕರಿಂದಲೇ ಒಂದು ಕೆರೆ ನಿರ್ಮಿತವಾದದ್ದನ್ನು ಅಲ್ಲಿನ ಶಾಸನ ತಿಳಿಸುತ್ತದೆ.

ಆರ್ಥಿಕ ಅಂಶಗಳ ವಿವರ ಕೂಡ ಶಾಸನಗಳಿಂದ ತಿಳಿದುಬರುತ್ತದೆ. ವ್ಯಾಪಾರ ಪದ್ಧತಿ ಸುಂಕದ ಕ್ರಮ, ತೆರಿಗೆ ವಸೂಲಿಯ ರೀತಿ ಕಂದಾಯ ಕ್ರಮ, ರಾಜರು ಕೊಡುತ್ತಿದ್ದ ದಾನದತ್ತಿಗಳು, ಉಂಬಳಿಗಳು, ಇನಾಮು ಗ್ರಾಮಗಳು, ಇವುಗಳ ಆರ್ಥಿಕ ವ್ಯವಸ್ಥೆ ಮೊದಲಾದ ಅಂಶಗಳು ಪ್ರಾಸಂಗಿಕವಾಗಿ ಚಿತ್ರಿಸುತ್ತವೆ. ಇದಲ್ಲದೆ ಆಹಾರ ವಿಹಾರಗಳು, ಆಟ ಪಾಟಗಳು, ಹಬ್ಬ ಹರಿದಿನಗಳು, ಜಾತ್ರೆಕೂಟಗಳು, ಶುಭಕಾರ್ಯ, ಶಿವಕಥೆಗಳು ಮೊದಲಾದವು ಶಾಸನಗಳಿಂದ ಪರಿಚಿತವಾಗುತ್ತವೆ. ಹೀಗೆ ಶಾಸನಗಳ ಮೂಲಕ ಆ ಕಾಲದ ಜನರ ಸಾಮಾಜಿಕ ಜೀವನವನ್ನು ತಿಳಿದುಕೊಳ್ಳಬಹುದು.

.. ಶಾಸನಗಳ ಸಾಹಿತ್ಯಕ ಮಹತ್ವ

ಶಾಸನಗಳನ್ನು ವಿದ್ಯಾವಂತರು ಹಾಗೂ ಬರೆದಿರುವುದರಿಂದ ಹೇರಳ ಸಾಹಿತ್ಯಕಾಂಶಗಳು ಶಾಸನಗಳಲ್ಲಿ ಕಂಡುಬರುತ್ತವೆ. ಕ್ರಿ.ಶ. ಐದನೆಯ ಶತಮಾನದ ತಾಳಗುಂದ ಶಾಸನ ಮತ್ತು ಐಹೊಳೆಯ ರವಿಕೀರ್ತಿ ಶಾಸನಗಳು ಸಂಸ್ಕೃತದ ಶಾಸನಗಳು. ಇವು ತುಂಬಾ ಪ್ರೌಢವಾಗಿ ಮೂಡಿಬಂದಿದ್ದು ಸಂಸ್ಕೃತದ ಅನೇಕ ವೃತ್ತಗಳನ್ನೊಳಗೊಂಡಿವೆ. ಶಾಸನ ಕವಿಗಳು ಚಂಪೂಕಾವ್ಯವನ್ನು ಆದರ್ಶವಾಗಿಟ್ಟುಕೊಂಡಿದ್ದಂತೆ ತೋರುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಕವಿ ರನ್ನ, ಜನ್ನ, ಶಾಂತಿನಾಥ, ನಾಗಚಂದ್ರ ಮೊದಲಾದ ಕವಿಗಳು ಶಾಸನಗಳನ್ನು ರಚಿಸಿರುವುದನ್ನು ಕಾಣುತ್ತೇವೆ. ಹೀಗಾಗಿ ಶಾಸನಗಳು ಶುದ್ಧ ಸಾಹಿತ್ಯ ಕೃತಿಗಳಂತೆಯೇ ಸಾಹಿತ್ಯಕಾಂಶದಿಂದ ಕೂಡಿವೆ.

ಕರ್ನಾಟಕದ ಎಷ್ಟೋ ಶಾಸನಗಳು ಪದ್ಯಮಯವಾಗಿವೆ. ಎಷ್ಟೋ ಕವಿಗಳ ಪ್ರತಿಭೆ ಪ್ರಕಾಶನಕ್ಕೆ ನೆರವಾಗಿವೆ. ಕರ್ನಾಟಕದ ರವಿಕೀರ್ತಿಯಂತಹ ಪ್ರಸಿದ್ಧ ಸಂಸ್ಕೃತ ಕವಿಯ ಕಾವ್ಯ ಈಗ ಕೇವಲ ಶಾಸನದಲ್ಲಿ ಮಾತ್ರ ಉಳಿದುಕೊಂಡಿದೆ. ಇವನು ತನ್ನನ್ನು ‘ಮತಿಮಾನ್’ ಎಂದು ಕರೆದುಕೊಂಡಿದ್ದಾನೆ. ಅಲ್ಲದೆ ತಾನು ಕಾವ್ಯ ರಚನೆಯಲ್ಲಿ ಕಾಳಿದಾಸ, ಭಾರವಿಗಳಿಗೆ ಸಮಾನವೆಂದು ಹೇಳಿಕೊಂಡಿದ್ದಾನೆ. ಇವನ ಸಂಸ್ಕೃತ ಪ್ರೌಢಶೈಲಿಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಕೆಲವೊಂದು ಶಾಸನಗಳಲ್ಲಿ ಶುದ್ಧ ಕವ್ಯಗಳನ್ನೇ ಕೆತ್ತಿರುವುದುಂಟು. ನರ್ಮದೆಯ ದಡದ ಮೇಲಿರುವ ಮಾಂಧಾತಾ ಎಂಬಲ್ಲಿ ಅಮರೇಶ್ವರ ದೇವಾಲಯದ ಮುಂದಿರುವ ಕಲ್ಲುಗಳ ಮೇಲೆ ಪುಷ್ಪದಂತನ ಮಹಿಮೆಯ ಸ್ತ್ರೋತ್ರವನ್ನು ಕೆತ್ತಲಾಗಿದೆ.

ಧಾರ್ ಎಂಬ ಸ್ಥಳದಲ್ಲಿ ವ್ಯಾಕರಣ ಶಾಲೆಯ ಒಂದು ಭಾಗದಲ್ಲಿ ಸಂಸ್ಕೃತ ವರ್ಣಮಲೆಯನ್ನು ಕಾತಂತ್ರದಲ್ಲಿರುವ ಆಖ್ಯಾತ ಪ್ರತ್ಯಯಗಳ ಪಟ್ಟಿಯನ್ನು ಕೆತ್ತಲಾಗಿದೆ. ದೇವಗಡದ ಒಂದು ಶಿಲಾಫಲಕದ ಮೇಲೆ ಹದಿನೆಂಟು ಭಾಷೆಗಳನ್ನು ಅವುಗಳ ಲಿಪಿಗಳ ಮಾದರಿಗಳನ್ನು ಕೆತ್ತಲಾಗಿದೆ. ಇನ್ನೊಂದು ಬಹಳ ಕುತೂಹಲಕಾರಿಯಾದ ಶಾಸನವೆಂದರೆ ಕುಡಿಮಿಯಾಮಲೈಯ ಶಾಸನ. ಮದರಾಸಿನ ಪದುಕೋಟೆಗೆ ಸಮೀಪದಲ್ಲಿರುವ ಕುಡಿಮಿಯಾಮಲೈಯ ಎಂಬ ಬೆಟ್ಟದ ಮೇಲಿನ ಈ ಬಂಡೆಯ ಶಾಸನವು “ಪ್ರಪಂಚದಲ್ಲಿಯೇ ಸ್ವರ ಪ್ರಸ್ತಾಪವಿರುವ ಸಂಗೀತದ ಏಕೈಕ ಪ್ರಸ್ತರ ಶಾಸನ”. ಏಳನೆಯ ಶತಮಾನದ ಸಂಗೀತ ಪದ್ಧತಿಯ ಮೇಲೆ ಬೆಳಕನ್ನು ಚೆಲ್ಲುವ ಈ ಶಾಸನ ಪಲ್ಲವ ಗ್ರಂಥಲಿಪಿ ಸಂಸ್ಕೃತ ಭಾಷೆಯನ್ನೊಳಗೊಂಡಿದ್ದರೂ ಕೊನೆಯಲ್ಲಿ ಒಂದೇ ಒಂದು ತಮಿಳು ಸಾಲನ್ನೊಳಗೊಂಡಿದೆ.

ಶಾಸನಗಳಲ್ಲಿ ಸ್ವತಂತ್ರವಾಗಿ ರಚನೆಯಾಗಿರುವ ಏಕೈಕ ಕೃತಿಯೆಂದರೆ ಬೊಪ್ಪಣ ಪಂಡಿತನ ಗೊಮ್ಮಟಸ್ತುತಿ. ಶ್ರವಣಬೆಳ್ಗೊಳದ ದೊಡ್ಡ ಬೆಟ್ಟದ ಮೇಲಿನ ಗೊಮ್ಮೆಟೇಶ್ವರ ಸ್ವಾಮಿಯ ದ್ವಾರಪಾಲಕರ ಬಾಗಿಲ ಎಡಗಡೆ ನಿಲ್ಲಿಸಿರುವ ಕಲ್ಲಿನ ಮೇಲೆ ಕೊರೆಯಲಾಗಿರುವ ಈ ಶಾಸನವು “ಶ್ರೀ ಗೊಮ್ಮಟ ಜಿನನಂ ನರನಾಗಮರದಿತಿಜ ಖಚರ ಪತಿ ಪೂಜಿತಂ ಯೋಗಾಗ್ಮಿ ಹತಸರ್ಮನಂ ಯೋಗಿಧ್ಯೇಯನನಮೇಯನಂ ಸ್ತುತಿ ಯಿಸುವೆಂ” ಎಂದು ಆರಂಭವಾಗುತ್ತದೆ. ಬಾಹುಬಲಿಯ ತ್ಯಾಗವನ್ನು ಅವನ ತಪಸ್ಸನ್ನು ಗೊಮ್ಮಟ ವಿಗ್ರಹದ ಸೌಂದರ್ಯವನ್ನೂ ಕವಿ ಕೊಂಡಾಡಿದ್ದಾನೆ.

ಧಾರ್ಮಿಕ ಕಾರ್ಯಗಳನ್ನು ಮಾಡುವುದು ಪ್ರಾಚೀನ ಕಾಲದಲ್ಲಿ ಸಹಜವಾಗಿತ್ತು. ದೇವಾಲಯಗಳನ್ನು ಕಟ್ಟಿಸುವುದು, ಅರವೆಗಳನ್ನು ಬೆಳೆಸುವುದು, ಸತ್ರಗಳನ್ನು ಇಡಿಸುವುದು ಸಾಮಾನ್ಯವಾಗಿತ್ತು. ಶ್ರೀಮಂತರಷ್ಟೇ ಅಲ್ಲದೆ ಸಾಮಾನ್ಯ ಜನರು ಈ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಶಾಸನಗಳು ಈ ವಿಷಯವನ್ನು ಕಾವ್ಯಮಯವಾಗಿ ವರ್ಣಿಸಿವೆ. ಅಲ್ಲದೆ ಶಾಸನಗಳಲ್ಲಿ ಚಂಪೂ ಸಾಹಿತ್ಯ ಪ್ರಕಾರವಷ್ಟೇ ಅಲ್ಲದೇ ಛಂದಸ್ಸು ಅಂದರೆ ಕಂದ, ವೃತ್ತ, ತ್ರಿಪದಿ, ರಗಳೆ, ಏಳೆ, ಅಕ್ಕರ ಇತ್ಯಾದಿಗಳೂ ಕಂಡುಬರುತ್ತವೆ. ಉದಾಹರಣೆಗೆ ಕ್ರಿ.ಶ. ೯೪೨ರ ಶ್ರವಣಬೆಳ್ಗೊಳದ ಶಾಸನದಲ್ಲಿ ಅಕ್ಕರವನ್ನು ಕಾಣಬಹುದು.

ಒಳಗಂ ದಕ್ಷಿಣ ಸುಕರ ದುಷ್ಕರಮಂ ಸುಕರ ದುಷ್ಕರಭೇದಮಂ
ಒಳಗೆ ವಾಮದ ವಿಷಯವಲ್ಲಿಯ ವಿಷಯ ದುಷ್ಕರಮನಿನ್ನದರ ಪೊರಗ
ಗ್ಗಳಿಕಿಯೆನಿಪತಿ ವಿಷಮನದರತಿ ವಿಷಮದುಷ್ಕರಮೆಂಬ ದುಷ್ಕರಮಂ
ಎಳೆಯೊಳೊರ್ವನೆ ಚಾರಿಸಲ್‌ಬಲ್ಲಂ ನಾಲ್ಕು ಪ್ರಕರಣ ಮುನೀಂದ್ರರಾಜಂ

ಇಷ್ಟಲ್ಲದೆ ಬಾದಾಮಿ ಹಾಗೂ ಕೋಗಳಿ ಶಾಸನಗಳಲ್ಲಿ ತ್ರಿಪದಿಯನ್ನು ಕಾಣಬಹುದು. ಇನ್ನೂ ಕೆಲವು ಶಾಸನಗಳಲ್ಲಿ ರಗಳೆ (ಉತ್ಸಾಹ-ತೋವಾರ) ಗಳು ಕಂಡುಬರುತ್ತವೆ.

.. ಶಾಸನಗಳ ಭಾಷಿಕ ಮಹತ್ವ

ಶಾಸನಗಳಿಂದ ಆಯಾ ಕಾಲಘಟ್ಟದಲ್ಲಾದ ಕೆಲವು ಮಹತ್ವದ ಭಾಷಿಕಾಂಶಗಳ ಬದಲಾವಣೆಗಳನ್ನು ತಿಳಿಯಬಹುದು. ಉದಾಹಹರಣೆಗೆ ಕರ್ನಾಟಕದ ಶಾಸನಗಳಿಗೆ ಕನ್ನಡ ಭಾಷೆಯ ಪ್ರಾರಂಭದ ಕಾಲದಲ್ಲಿ ಪ್ರಾಕೃತವು ಮಹತ್ವದ ಪರಿಣಾಮ ಬೀರಿದೆ. ಎಂಬ ಅಂಶವು ಕರ್ನಾಟಕದ ಆರಂಭದ ಶಾಸನಗಳಿಂದ ವೇದ್ಯವಾಗುತ್ತದೆ. ಇಲ್ಲಿ ನಮಗೆ ದೊರೆಯುವ ಮೊದಲ ಶಾಸನಗಳಿಂದ ಅಶೋಕನವು. ಅವು ಕೂಡ ಪ್ರಾಕೃತ ಭಾಷೆಯಲ್ಲಿವೆ. ಇಲ್ಲಿ ದೊರೆಯುವ ಪ್ರಕೃತದ ಶಾಸನಗಳನ್ನು ಯವೊಂದು ಉಪಭಾಷೆಯ ಸುಸಂಬದ್ದವಾದ ಘಟ್ಟಗಳಲ್ಲಿ ಹೊಂದಿಸಲು ಸಾಧ್ಯವಾದಂತೆ ಕಾಣದು. ಮಳವಳ್ಳಿ ಶಾಸನಗಳ ಭಾಷೆಯನ್ನು ಬಿ.ಎಲ್. ರೈಸ್ ಅವರು ಮಹಾರಾಷ್ಟ್ರ ಪ್ರಾಕೃತವೆಂದು ಕರೆದಿದ್ದಾರೆ. ಅಶೋಕನ ಪ್ರಾಕೃತ ಶಾಸನದಲ್ಲಿರುವ ‘ಇಸಿಲ’ ಎಂಬ ಪದ ಕನ್ನಡದ್ದೆಂದು ಡಿ.ಎಲ್. ನರಸಿಂಹಚಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಕ್ರಿ.ಶ. ೪ನೇ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಪ್ರಾಕೃತ ಶಾಸನಯುಗ ಮುಕ್ತಾಯಗೊಂಡು, ಸಂಸ್ಕೃತ ಕನ್ನಡದ ಶಾಸನಯುಗ ಪ್ರಾರಂಭವಾಗುತ್ತದೆ. ಗಂಗರು, ಕದಂಬರು ಹಾಕಿಕೊಟ್ಟ ತಾಮ್ರಪಟಗಳು ಇದಕ್ಕೆ ಪ್ರಮುಖ ಆಕರಗಳಾಗಿವೆ. ಈ ಶತಮಾನದ ಸಂಸ್ಕೃತ ಶಾಸನಗಳಲ್ಲಿ ತೋರುವ ಬಹಳಷ್ಟು ಸ್ಥಾನವಾಚಕ ಪದಗಳು ಕನ್ನಡ ಮೂಲದವಾಗಿವೆ. ಉದಾಹರಣೆಗೆ ಕಱುನೀರಲಿ, ಮೀದುವಣ್ಣವಳ್ಳಿ ಮುಂತಾದವನ್ನು ನೋಡಬಹುದು. ಈ ಪ್ರಯೋಗಗಳಲ್ಲಿ ಅಪೂರ್ವವಾಗಿ ಕನ್ನಡ ಪ್ರತ್ಯಯಗಳೂ ಬರುವುದುಂಟು.

ಆರನೆಯ ಶತಮಾನದ ಸಂಸ್ಕೃತ ಶಾಸನಗಳಲ್ಲಿ ಕನ್ನಡ ಅಂಶಗಳು ಇನ್ನೂ ಹೆಚ್ಚಾಗಿವೆ. ಬರುಬರುತ್ತ ಕನ್ನಡ ಶಾಸನಗಳ ಸಂಖ್ಯೆ ಹೆಚ್ಚಾದವಾದಾದರೂ ಈ ಹೆಚ್ಚಳವು ಪ್ರಾಕೃತ ಶಾಸನಗಳನ್ನು ತಡೆದಂತೆ ಸಂಸ್ಕೃತ ಶಾಸನಗಳನ್ನು ತಡೆಯಿಲಿಲ್ಲ. ಹಲವಾರು ಸಂಸ್ಕೃತ ಶಾಸನಗಳ ಅಂತ್ಯದಲ್ಲಿ ಕನ್ನಡ ಬರಹವಿರುವುದು ಆರನೆಯ ಶತಮಾನದಿಂದ ಕಂಡುಬರುತ್ತದೆ. ಭೋಗಿವರ್ಮನ ತಗರೆಯ ಶಾಸನವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಅದರ ಕೊನೆಯ ಐದು ಸಾಲುಗಳ ಬರಹ ಕನ್ನಡವಾಗಿದೆ. ಕನ್ನಡ ಶಾಸನಾರಂಭದಲ್ಲಿ ಸ್ವಸ್ತಿ, ವಚನ ಅಥವಾ ದೇವತಾಸ್ತುತಿ ಅನಂತರ ಬರುವ ಸಂಸ್ಕೃತ ದೀರ್ಘ ಸಮಾಸದ ಹಾಗೂ ಅಂತ್ಯದಲ್ಲಿ ಪುರಾಣಾದಿಗಳ ಎತ್ತಿದ ಫಲಶ್ರುತಿ ಇಷ್ಷು ಶತಮಾನಗಳವರೆಗೆ ಶಾಸನಿಕ ಕನ್ನಡ ವೈಶಿಷ್ಟ್ಯಗಳೆನ್ನಿಸಿಕೊಂಡಿವೆ.

ಐದನೆಯ ಶತಮಾನದಿಂದ ಸಂಸ್ಕೃತ ಕನ್ನಡಗಳು ಜೊತೆ ಜೊತೆಯಾಗಿಯೇ ನಡೆದು ಬರುವವಾದರೂ ೫-೬ನೇ ಶತಮಾನದಲ್ಲಿ ಸಂಸ್ಕೃತವೇ ಒಂದು ಹೆಜ್ಜೆ ಮುಂದು. ೭ನೆಯ ಶತಮಾನದಿಂದ ಕನ್ನಡವು ಉತ್ಸಾಹದಿಂದ ಮುಂದುವರಿಯುವುದನ್ನು ನೋಡಬಹುದು. ಇದಕ್ಕೆ ನಿದರ್ಶನವಾಗಿ ಹಲ್ಮಿಡಿ ಹಾಗೂ ತಮ್ಮಟಕಲ್ಲು ಶಾಸನಗಳನ್ನು ಉದಾಹರಿಸಬಹುದು. ೬ನೆಯ ಶತಮಾನದಲ್ಲಿನ ಮಂಗಳೇಶನ ಬಾದಾಮಿ ಶಾಸನ, ಸಿರಿಗುಂದ ಶಾಸನ, ಭೋಗಿವರ್ಮನ ತಗರೆಯ ಶಾಸನ ಇವು ಅಚ್ಚಕನ್ನಡ ಬರಹಗಳಾಗಿದ್ದು ಕನ್ನಡ ಭಾಷೆಯ ಅಂದಿನ ಸ್ವರೂಪದ ಮೇಲೆ ಬೆಳಕು ಚೆಲ್ಲುತ್ತವೆ. ೭ನೆಯ ಶತಮಾನದಲ್ಲಿ ಹಲವಾರು ಗದ್ಯ ಶಾಸನಗಳ ಜೊತೆಗೆ ಪದ್ಯ ಶಾಸನಗಳೂ ದೊರೆತಿವೆ. ‘ಮ’ ಕಾರವನ್ನು ತಪ್ಪಾಗಿ ಪ್ರಯೋಗಿಸಿದ್ದು ಸ್ವರಾಂತಗಳಾದ ಪದಗಳು ದೊರೆಯುದಿರುವುದು, ಆದಿಯಲ್ಲಿಯ ಮಧ್ಯಸ್ವರಗಳು ಉಚ್ಚವಾಗುವುದು, ದೀರ್ಘಸ್ವರಕ್ಕೆ ಪರದ ಸಜಾತಿಯ ದ್ವಿತ್ವಗಳು ನಿಷ್ಟವಾಗುವುದು, ಸಂಧಿಯಾದಾಗ ಎರಡು ಸ್ವರಗಳ ನಡುವೆ ಸಿದ್ಧಿಸುತ್ತಿದ್ದ ಅಘೋಷ ದ್ವಿತ್ವಗಳು ಸಿದ್ಧಿಸದೇ ಇರುವುದು ವರ್<ವ್ ಪರಿವರ್ತನೆ ಮೊದಲಾದವುಗಳನ್ನು ಇಲ್ಲಿ ಹೆಸರಿಸಬಹುದು.

ಎಂಟನೆಯ ಶತಮಾನದ ಭಾಷೆ ಬಹಳಷ್ಟು ಬದಲಾಯಿಸಿದ್ದು ಸಂಕ್ರಮಣಾವಸ್ಥೆಯಲ್ಲಿದೆ. ಅಲ್ಲದೆ ಹೊಸ ಪ್ರಕ್ರಿಯೆಗಳು ಇಲ್ಲಿ ಇಣುಕು ಹಾಕಿವೆ. ಅನುನಾಸಿಕಗಳ ಬದಲು ವಿಶೇಷವಾಗಿ ಅಂತ್ಯದ ‘ಮ್’ ‘ನ್’ ಗಳ ಬಿಂದುವಿನ ಪ್ರಯೋಗ ಹೆಚ್ಚುವುದು, ವರ್ತಮಾನ ಕಾಲದ ಪ್ರತ್ಯಯವಾದ ‘ಉತ’ ಎಂಬುದಕ್ಕೆ ಪುರುಷಾರ್ಥಕ ಪ್ರತ್ಯಯ ಸೇರಿ ಉಂಟಾದ ಪೂರ್ಣ ಕ್ರಿಯಾಪದ, ಕ್ರಿಯಾಪದದ ಅಂತ್ಯದಲ್ಲಿ ಹೊಸಗನ್ನಡದಂತೆ ‘ಎ’ ಸ್ವರ ಸೇರುವುದು, ಸ್ವೀಕೃತ ಪದಗಳ ‘ಹ’ ಕಾರವು ಶೂನ್ಯಗೊಳ್ಳುವಂತಹ ಮೊದಲಾದ ಬದಲಾವಣೆಯ ಕ್ರಿಯೆಗಳನ್ನು ಗುರುತಿಸಬಹುದು.

ಒಂಬತ್ತನೆಯ ಶತಮಾನದ ಭಾಷಾ ಪ್ರಯೋಗಕ್ಕೆ ನಮಗೆ ಕಾಣಸಿಗುವ ಪ್ರಮುಖ ಆಕರವೆಂದರೆ ಕವಿರಾಜಮಾರ್ಗ. ಕವಿರಾಜಮಾರ್ಗ ಮತ್ತು ಈ ಶತಮಾನದ ಶಾಸನಗಳನ್ನು ಪರೀಕ್ಷಿಸಿದರೆ ೭ನೇ ಶತಮಾನದ ಮತ್ತು ಆ ಪೂರ್ವದಲ್ಲಿದ್ದ ಶಬ್ದರಚನೆ ಬಹಳಷ್ಟು ಪರಿವರ್ತನೆಗೊಂಡಿದ್ದು ಕಂಡುಬರುತ್ತದೆ. ತೃತೀಯಾದಿ ಸ್ಥಾನಗಳಲ್ಲಿಯ (ಬರಿಪ್ಪಮುಂ) ದ್ವಿತ್ವಗಳು ಕವಿರಾಜಮಾರ್ಗದಲ್ಲಿಯೇ ಕಡಿಮೆಯಾಗಿವೆ. ‘ಱ’ ಕಾರ ಪ್ರಯೋಗವು ಕವಿರಾಜಮಾರ್ಗದಂತಹ ಅದ್ಯಕೃತಿಯಲ್ಲಿಯೇ ಅಸ್ಪಷ್ಟವಾಗಿದೆ. ಶಾಸನಗಳಲ್ಲಿ ತೋರುವಂಥ ವ್ಯಂಜನಾಂತಗಳು ಸ್ವರಾಂತಗಳಾದ ಉದಾಹರಣೆಗಳು ಕವಿರಾಜ ಮಾರ್ಗದಲ್ಲಿ ಕಂಡುಬರುವುದಿಲ್ಲ. ದ್ವಿತೀಯ ಮತ್ತು ಷಷ್ಟಿಗಳಲ್ಲಿಯ ದೀರ್ಘ ಸ್ವರವನ್ನು ಕವಿರಾಜಮಾರ್ಗದಲ್ಲಿ ಕಾಣಬಹುದಾದರೂ ಅದರಲ್ಲಿ ಸಪ್ತಮಿಯ ‘ಉಳ್’ ಪ್ರತ್ಯಯದ ಸುಳಿವಿಲ್ಲ. ಇವೆಲ್ಲ ಅಂಶಗಳನ್ನು ಗಮನಿಸಿದರೆ ಕವಿರಾಜಮಾರ್ಗವು ಹಲವಾರು ರೀತಿಯ ಹೊಸತನವನ್ನು ತಂದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ.

ಹತ್ತನೆಯ ಶತಮಾನದ ಶಾಸನಗಳಲ್ಲಿ ಆಖ್ಯಾತ ಪ್ರತ್ಯಯಗಳಲ್ಲಿ ‘ಓ’ ಸ್ವರ, ವಿಭಕ್ತಿ ಪ್ರತ್ಯಯಗಳಲ್ಲಿಯೂ ಆಖ್ಯಾತ ಪ್ರತ್ಯಯಗಳಲ್ಲಿಯೂ ಅಲ್ಲಲ್ಲಿ ದೀರ್ಘಸ್ವರ ಮುಂತಾದವು ಪ್ರಯೋಗದಲ್ಲಿರುವುದು ಕಂಡುಬರುತ್ತದೆ. ಒಂದು ಶಾಸನದಲ್ಲಿ ‘ಉಳ್’ ಪ್ರತ್ಯಯ ಕೂಡ ಕಂಡುಬಂದಿದೆ. ಹೀಗೆ ಶಾಸನಗಳಿಂದ ಭಾಷೆಯ ಪ್ರಾರಂಭಿಕ ಹಂತದಿಂದ ಬೆಳವಣಿಗೆಯಲ್ಲಾದ ಬದಲಾವಣೆಗಳನ್ನು ಗುರುತಿಸಬಹುದು.

.. ಶಾಸನಗಳ ಸಾಂಸ್ಕೃತಿಕ ಮಹತ್ವ

ಒಂದು ನಾಡು ಎಂದರೆ ಕೇವಲ ಆದನ್ನಾಳಿದ ರಾಜರಷ್ಟೇ ಅಲ್ಲ. ಅಲ್ಲಿ ಬದುಕಿಬಾಳಿದ ಜನವೂ ಕೂಡ. ಆ ಜನತೆ ಬದುಕಿದ ರೀತಿ ಅನುಸರಿಸಿದ ಧರ್ಮ, ಕಟ್ಟಿದ ಕಲೆ ಅವರ ಜೀವನ ಸಮಸ್ಯೆಗಳು, ಮೌಲ್ಯಗಳು ಇತ್ಯಾದಿಗಳ ವಿವರಣೆಯೇ ಆ ದೇಶದ ಇತಿಹಾಸ. ಜನತೆಯ ಜೀವನವನ್ನು ಕುರಿತಾದ ಇಂತಹ ಅಧ್ಯಯನವನ್ನು ಸಾಂಸ್ಕೃತಿಕ ಅಧ್ಯಯನವೆಂತಲೂ ಕರೆಯಬಹುದು.

ಶಾಸನಗಳ ಪ್ರಶಸ್ತಿಯ ಅಥವಾ ರಾಜಾವಳಿಯ ಭಾಗ ರಾಜಕೀಯ ಇತಿಹಾಸಕ್ಕೆ ಹೇಗೆ ಮುಖ್ಯವೋ ಹಾಗೆಯೇ ಶಾಸನದಲ್ಲಿ ದಾನವನ್ನು ಸ್ವೀಕರಿಸುವ ವ್ಯಕ್ತಿಯ ಮತ್ತು ದಾನದ ವಿವರಗಳನ್ನು ಹೇಳುವ ಭಾಗ ಸಾಂಸ್ಕೃತಿಕವಾಗಿ ಮುಖ್ಯವಾಗುತ್ತದೆ. ದಾನವನ್ನು ಸ್ವೀಕರಿಸುವವನು ವ್ಯಕ್ತಿಯಾಗಿದ್ದರೆ ಅವನ ಪರಾಕ್ರಮದ ಅಥವಾ ಪಾಂಡಿತ್ಯದ ವಿವರ ಇರುತ್ತದೆ. ಇದರಿಂದ ಅಂದಿನ ಕಾಲದ ವೀರರ ಆದರ್ಶ ಅಥವಾ ವಿದ್ವಾಂಸರ ಅಧ್ಯಯನದ ವಿಷಯಗಳು ಗೋಚರವಾಗುತ್ತವೆ. ದೇವಾಲಯಗಳಿಗೆ ದಾನ ಕೊಟ್ಟಿದ್ದರೆ ಆ ದೇವಾಲಯಗಳಿಗೆ ನಡೆಯುವ ವಿಶೇಷ ಪೂಜೆಯ ವಿವರ ಬರುತ್ತದೆ. ಆಗ್ರಹಾರಗಳಿಗೆ ಕೊಟ್ಟ ದಾನವಾಗಿದ್ದರೆ ಆಗ್ರಹಾರದ ಮಹಾಜನಗಳ ವರ್ಣನೆ ಅವರ ಅಧ್ಯಯನ ವಿಚಾರಗಳು ಬರುತ್ತವೆ.

ದಾನವನ್ನು ರಾಜನಾದವನು ಮಾತ್ರವಲ್ಲದೆ ಸಮಾಜದ ಎಲ್ಲ ಜಾತಿಯ, ಎಲ್ಲ ವರ್ಗದ ಜನ ನೀಡಿದ್ದಾರೆ. ಇಲ್ಲಿ ಅವರವರ ಜಾತಿಗಳಿಗೆ ವಿಶಿಷ್ಟವಾದ ಆಚರಣೆಗಳು ತಿಳಿದುಬರುವಂತೆಯೇ ಅವರ ಸಾಂಘಿಕ ಜೀವನದ ವಿವರಣೆಯೂ ತಿಳಿದುಬರುತ್ತದೆ. ಅನೇಕ ವೃತ್ತಿಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳು, ನಾನಾರೀತಿಯ ಸುಂಕದ ಹೆಸರುಗಳು ನಮಗೆ ಶಾಸನಗಳಿಂದ ತಿಳಿದುಬರುತ್ತದೆ.

ಕೀಳ್ ಮುತ್ತುಗೂರಿನ ಶಾಸನ ಏಕಾಂಗ ವೀರನಾಗಿ ಹುಲಿ ಕೊಂದ ಏರಿಯ ಮೇಲಿನ ಜಾಗವನ್ನು ನಿರ್ದೇಶಿಸುತ್ತದೆ. ಕೊಟ್ಟೊರಿನ ಒಂದು ಶಾಸನ ಶೈವ ಸನ್ಯಾಸಿಯೊಬ್ಬ ಅಗ್ನಿ ಪ್ರವೇಶ ಮಾಡಿದುದನ್ನು ತಿಳಿಸುತ್ತದೆ. ಬೆಳತೂರು ಶಾಸನ ದೇಕಬ್ಬೆ ಎಂಬ ಸ್ತ್ರೀ ತನ್ನ ಗಂಡ ಮಡಿದುದನ್ನು ಕೇಳಿ ಸಹಗಮನ ಮಾಡಿದುದನ್ನು ಹೇಳುತ್ತದೆ.

ಒಟ್ಟಿನಲ್ಲಿ ಶಾಸನಗಳ ಅಧ್ಯಯನದಿಂದ ಅಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರವನ್ನು ಪುನಾರಚಿಸಬಹುದು. ಶಾಸನಗಳು ಹಿಂದಿನ ಗತಕಾಲದ ಕರ್ನಾಟಕದ ಜನತೆಯ ಸಾಮಾಜಿಕ ಜೀವನದ ವಿವಿಧ ಮುಖಗಳನ್ನು ಮಜಲುಗಳನ್ನು ತಿಳಿಸಲು ಸಹಾಯಕವಾಗುವುದರ ಜೊತೆಗೆ ಇಲ್ಲಿಯ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿಯ ಮೇಲೂ ಬೆಳಕು ಚೆಲ್ಲುತ್ತವೆ. ಹಳ್ಳಿಗಳ ಆಡಳಿತ ನಿರ್ವಹಣೆಯ ಕ್ರಮ, ನಾಡು, ವಿಷಯ ಮುಂತಾದ ರಾಜಕೀಯ ವಿಭಾಗಗಳು ಮತ್ತು ಅವುಗಳ ಆಡಳಿತ ಊರಗಾವುಂಡ, ನಾಡಪೇರ್ಗಡೆ, ಪಟ್ಟಣಸ್ವಾಮಿ ಮೊದಲಾದ ಅಧಿಕಾರಿಗಳು ಮಹಾಜನಗಳ ಮೂಲಕ ಆಗ್ರಹಾರಗಳ ಆಡಳಿತ ಇತ್ಯಾದಿ ವಿಷಯಗಳ ಪ್ರಸ್ತಾಪ ಶಾಸನಗಳಲ್ಲಿ ವಿಪುಲವಾಗಿ ದೊರೆಯುತ್ತದೆ. ಶಾಸನಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಅಧ್ಯಯನಕ್ಕೆ ಒಳಪಡಿಸಿದಂತೆ ಅವುಗಳ ಮೂಲಕ ವಿಶಿಷ್ಟವಾದ ಮಾಹಿತಿಗಳನ್ನು ಬಿಚ್ಚಿಡುವುದರ ಮೂಲಕ ಅವುಗಳ ಮಹತ್ವವನ್ನು ಹೆಚ್ಚಿಸಿಕೊಂಡಿವೆ.