ಶಾಸನಗಳು ಕೇವಲ ಶಿಲೆಗಳಲ್ಲಿ ಅಷ್ಟೇ ಅಲ್ಲದೇ, ತಾಮ್ರ ಪಟಗಳ ಮೇಲೂ ವಿಗ್ರಹಗಳ ಮೇಲೂ, ಘಂಟೆಗಳ ಮೇಲೂ ಕೆತ್ತಿರುವುದನ್ನು ಕಾಣಬಹುದು. ಇವುಗಳ ಮೇಲಿನ ಬರಹಗಳೆಲ್ಲವೂ ಶಾಸನಗಳೇ ಆದರೂ ಚಿರಿತ್ರೆಕಾರರು ಅಧ್ಯಯನದ ಅನುಕೂಲಕ್ಕಾಗಿ ಈ ಬರಹಗಳನ್ನು ದಾನಶಾಸನಗಳು, ಪ್ರಶಸ್ತಿಶಾಸನಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು, ನಿಸದಿಗಲ್ಲುಗಳು, ಯೂಪಶಾಸನಗಳು, ಕೂಟಶಾಸನಗಳೆಂದು ಹಲವಾರು ಪ್ರಕಾರಗಳಾಗಿ ವಿಭಾಗಿಸಿದ್ದಾರೆ. ಹೀಗೆ ವಿಭಾಗಿಸಲಾದ ಶಾಸನಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ.

. ದಾನಶಾಸನ

ವ್ಯಕ್ತಿಯ ಜೀವನ ಮೌಲ್ಯಗಳಲ್ಲಿ ದಾನವೂ ಪ್ರಮುಖವಾದುದು. ದಾನಶಾಸನಗಳು ನಮ್ಮ ನಾಡಿನ ಸಂಸ್ಕೃತಿಯ ಒಂದು ಪ್ರಧಾನವಾದ ಅಂಶವನ್ನು ಎತ್ತಿ ತೋರಿಸುತ್ತವಲ್ಲದೆ ನಾಡಿನ ಜನರು ದಾನಕ್ಕೆ ಪ್ರಪ್ರಥಮ ಸ್ಥಾನವನ್ನಿತ್ತ ಧಾರ್ಮಿಕ ಸಂಸ್ಕೃತಿಯ ಸ್ವರೂಪವನ್ನು ಕೂಡ ಪ್ರತಿಬಿಂಬಿಸುತ್ತವೆ. ಇದಕ್ಕೆ ಪುರಾವೆ ಎಂಬಂತೆ ಶಾಸನಗಳಲ್ಲಿ ನಮಗೆ ಅತಿಹೆಚ್ಚು ಸಂಖ್ಯೆಯಲ್ಲಿ ದಾನಶಾಸನಗಳು ಕಾಣಸಿಗುತ್ತವೆ. ದೇವಾಲಯಗಳನ್ನು ಕಟ್ಟಿಸುವುದಲ್ಲದೆ, ಅನ್ನ, ಸತ್ರಾದಿ ಧರ್ಮಕಾರ್ಯಗಳಿಗಾಗಿ ವಿದ್ಯಾಭ್ಯಾಸಕ್ಕಾಗಿ ದಾನದತ್ತಿಗಳನ್ನು ಕೊಡುವುದು ಲೌಕಿಕ ಸಂಪತ್ತಿನ ಗಳಿಕೆಯ ಸಾರ್ಥಕ್ಯ ಎಂದು ಅಲೌಕಿಕದ ಸ್ವರ್ಗಸುಖವೆಂದು ಜನ ಭಾವಿಸಿದ್ದರು (ಜನರಲ್ಲಿ ಈಗಲೂ ಈ ಭಾವನೆ ಇರುವುದನ್ನು ಕಾಣಬಹುದು). ಈ ಭಾವನೆ ಕೇವಲ ರಾಜಾಧಿರಾಜರಿಗಷ್ಟೇ ಅಲ್ಲ ಜನಸಾಮಾನ್ಯರಲ್ಲಿಯೂ ಇದು ಸಹಜಗುಣವಾಗಿ ಪರಿಣಮಿಸಿತ್ತು ಎಂಬುದಕ್ಕೆ ನೂರಕ್ಕೆ ೯೫ರಷ್ಟು ದೊರೆತಿರುವ ಶಾಸನಗಳೇ ಸಾಕ್ಷಿ.

ಇವು ಮುಖ್ಯವಾಗಿ ಔದಾರ್ಯದ ಪ್ರದರ್ಶನಕ್ಕಾಗಿ ಹಾಕಿಸಲ್ಪಟ್ಟ ಶಾಸನಗಳು. ಒಬ್ಬ ವ್ಯಕ್ತಿಯ ತನ್ನ ವಿಶ್ವಾಸವನ್ನೋ, ಗೌರವವನ್ನೋ, ಮನವನ್ನೋ ಗೆದ್ದ ವ್ಯಕ್ತಿಗೋ, ಸಂಸ್ಥೆಗೋ ಧನರೂಪದಲ್ಲಿಯೇ ಆಗಲಿ ಅಥವಾ ಭೂಮಿಯ ರೂಪದಲ್ಲಿಯೇ ಆಗಲಿ ದಾನ ಮಾಡಲು ಬಯಸುತ್ತಾನೆ. ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದೆಂಬುದು ಅತಿ ಉದಾತ್ತವಾದ ದೃಷ್ಟಿಯಾದರೂ, ಕೊಟ್ಟ ದಾನವು ಆಚಂದ್ರಾರ್ಕವಾಗಿ ಉಳಿಯಬೇಕೆಂಬ ಆಸೆಯ ದೃಷ್ಟಿಯಿಂದ ಶಾಸನವನ್ನು ಹಾಕಿಸುತ್ತಾನೆ. ಈ ಹಿನ್ನೆಲೆಯಲ್ಲಿ ದಾನ ಗುಣದ ಜೊತೆಗೆ ಕೀರ್ತಿಯನ್ನು ಪಡೆಯಬೇಕೆಂದು ಉದ್ದೇಶವೂ ಆ ವ್ಯಕ್ತಿಗೆ ಇಲ್ಲದಿಲ್ಲ.

ಹತ್ತನೆಯ ಶತಮಾನದಿಂದ ಈಚೆಗೆ ದಾನಶಾಸನದ ಪ್ರಾರಂಭದ ಬೆಳವಣಿಗೆ ಮತ್ತು ಮುಕ್ತಾಯಗಳಲ್ಲಿ ಒಂದು ವ್ಯವಸ್ಥಿತ ಕ್ರಮ ಗೋಚರವಾಗುತ್ತದೆ. ದಾನವನ್ನು ನೀಡುವವನು ಚಕ್ರವರ್ತಿಯಾಗಿರದೆ ಬೇರೆಯವರಾಗಿದ್ದರೆ ಆ ವ್ಯಕ್ತಿಯ ಮತ್ತು ಅವನ ವಂಶದ ವರ್ಣನೆ ಬರುತ್ತದೆ. ನಂತರ ಶಾಸನದ ಕಾಲವನ್ನು ಶಕೆ, ವರುಷ, ತಿಂಗಳು, ದಿನಗಳನ್ನು ಹೇಳುವಂತೆ ನಿಖರವಾದ ರೀತಿಯಲ್ಲಿ ಕೊಡಲಾಗಿರುತ್ತದೆ. ಅನಂತರ ಕೊಡಬೇಕಾದ ದಾನವನ್ನು ನಿರ್ದೇಶಿಸುವ ಭಾಗ ಬರುತ್ತದೆ. ಕೊಡುವ ದಾನ ಜಮೀನಾಗಿದ್ದರೆ ಅದರ ಗಡಿಗಳನ್ನು ಅದರ ಸೀಮೆಗಳನ್ನು, ಸುಂಕದ ಹಣವಾದರೆ ಅದರ ವಿವರಗಳನ್ನು ಕೊಡಲಾಗಿರುತ್ತದೆ. ಹೀಗೆ ದಾನ ಶಾಸನಗಳಲ್ಲಿ ದಾನದ ಹಲವಾರು ಬಗೆಗಳನ್ನು ಕಾಣಬಹುದು. ದಾನವನ್ನು ಕೊಡುವುದು ಯಾರಿಗೆ? ದೇವಾಲಯಕ್ಕೋ, ಸಂಸ್ಥೆಗೋ, ಮಠಕ್ಕೋ ಅಥವಾ ವ್ಯಕ್ತಿಗೋ ಹಾಗೂ ದಾನವನ್ನು ಯಾವ ಕಾರಣಕ್ಕಾಗಿ ಕೊಡಲಾಗಿದೆ? ಪೂಜಾದಿ ಕಾರ್ಯಗಳಿಗೋ ಅನ್ನಸಂತರ್ಪಣೆಗೋ ಅಥವಾ ವಿದ್ಯಾದಾನಕ್ಕೋ ಎಂಬ ಅಂಶಗಳ ವಿವರಣೆ ಬರುತ್ತದೆ. ಕೊಡವ ದಾನ ಯಾವುದೇ ಆಗಿರಲಿ, ಯಾವುದಕ್ಕೇ ಆಗಿರಲಿ ಅಷ್ಟಭೋಗ ತೇಜಸ್ವಾಮ್ಯದಿಂದ ಅನುಭವಿಸಬೇಕೆಂಬ ಹೇಳಿಕೆಯೂ ಇದೆ. ಕೊಡವ ದಾನವನ್ನು ಕಾಲಂಕರ್ಚಿ ವಿನಯದಿಂದ ಗೌರವಪೂರ್ವಕವಾಗಿ ಕೊಡುತ್ತಿದ್ದರು ಎಂಬ ವಿಷಯವೂ ಕೂಡ ಶಾಸನಗಳಿಂದಲೇ ತಿಳಿದುಬರುತ್ತದೆ.

ದಾನಶಾಸನಗಳನ್ನು ಅಧ್ಯಯನದ ಅನುಕೂಲಕ್ಕಾಗಿ ಮೂರು ರೀತಿಯಾಗಿ ವಿಭಜಿಬಹುದು.

೧. ಬಸದಿ, ಮಠ, ದೇವಾಲಯಗಳಿಗೆ ನೀಡಿದ ದಾನಶಾಸನ

೨. ವಿದ್ಯಾ ಕೆಂದ್ರಗಳಿಗೆ ನೀಡಿದ ದಾನಶಾಸನ

೩. ಪಂಡಿತ, ಗಣ್ಯವ್ಯಕ್ತಿಗಳಿಗೆ ನೀಡಿದ ದಾನಶಾಸನ

. ಬಸದಿ, ಮಠ, ದೇವಾಲಯಗಳಿಗೆ ನೀಡಿದ ದಾನಶಾಸನ

ಪ್ರಾಚೀನ ಕಾಲದಲ್ಲಿ ಬಸದಿ, ಮಠ, ದೇವಾಲಯಗಳು ಧರ್ಮ ಸಂಸ್ಕೃತಿಯ ಕೇಂದ್ರಗಳಾಗಿದ್ದಂತೆ, ಶಿಕ್ಷಣ ಕೇಂದ್ರಗಳೂ ಆಗಿದ್ದವು. ಹೀಗಾಗಿ ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರು (ಉಳ್ಳವರು) ಅವುಗಳಿಗೆ ದಾನ ದತ್ತಿಗಳನ್ನು ನೀಡುವ ಮೂಲಕವು ಏಳಿಗೆಗೆ ಕಾರಣವಾಗಿರುತ್ತಿದ್ದರು. ಉದಾಹರಣೆಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕು ಹಂಪಿಯಲ್ಲಿ ಕೃಷ್ಣಸ್ವಾಮಿ ದೇವಸ್ಥಾನದ ಪೂರ್ವಕ್ಕಿರುವ ಶಾಸನ. ವಿಜಯನಗರದ ಅರಸ ಪ್ರೌಢಪ್ರತಾದೇವರಾಯ ಕ್ರಿ.ಶ. ೧೪೧೧ರಂದು ಈ ಶಾಸನವನ್ನು ಹಾಕಿಸಿದ್ದಾನೆ. ಇದನ್ನು ರಚಿಸಿದ ಕವಿ ಮಧುರ. ಈ ಕೆಳಗಿನ ಶ್ಲೋಕದ ಮೂಲಕ ಶಾಸನ ಹಾಕಿಸಿದ್ದಾನೆ.

ನಮಸ್ತುಂಗಶಿರಶ್ಚುಂಬಿಚಂದ್ರಚಾಮರಚಾರವೆ ||
ತ್ರೈಲೋಕ್ಯ ನಗರಾರಂಭಮೂಲಸ್ತಂಭಾಯಶಂಭವೇ ||

ಎಂದು ಪ್ರಾರಂಭವಾಗುವ ಈ ಶಾಸನವು ೧೩೪ ಸಾಲುಗಳನ್ನೊಳಗೊಂಡಿದೆ. ವಿಜಯನಗರದ ಪ್ರೌಢಪ್ರತಾಪದೇವರಾಯನ ಮಂತ್ರಿ ಲಕ್ಷ್ಮೀಧರನು ಮಾಲ್ಯವಂತ ಪರ್ವತದಲ್ಲಿ ಮಹಾಗಣಪತಿಯನ್ನು ಪ್ರತಿಷ್ಠೆ ಮಾಡಿಸಿ ಆ ದೇವಸ್ಥಾನಕ್ಕೆ ದತ್ತಿಗಳನ್ನು ಬಿಟ್ಟಿರುವ ಸಂಗತಿಯನ್ನು ಹೇಳುತ್ತದೆ. ಈ ಶಾಸನವು ಕಾವ್ಯಮಯವಾಗಿದ್ದು ಇದರ ಕೆಲವು ಪದ್ಯಗಳು ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧಿಯಾಗಿವೆ.

ವಿಷ್ಣುವರ್ಧನನ ಆಳ್ವಿಕೆಯನ್ನು ಉಲ್ಲೇಖಿಸುವ ಮಂಗಳೂರಿನ ಶಾಸನವು ನಾರಸಿಂಹ ಹೊಯ್ಸಳ ದೇವನು ಗೋವಿಂದ ಜೀನಾಲಯಕ್ಕೆ ಮಾಗಳಿ ಅಗ್ರಹಾರದಲ್ಲಿ ಭೂದಾನ ನೀಡಿದ ವಿಷಯವನ್ನು ನಿರೂಪಿಸುತ್ತದೆ.

ಜಂಬೂರಿನ ಮಠದಲ್ಲಿ ನಡೆಯುತ್ತಿದ್ದ ಪಾಠಶಾಲೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಭೂಮಿಯನ್ನು ಅನೇಕ ಕಾರಣಗಳಿಗೆ ಬಿಟ್ಟ ಸಂಗತಿಯನ್ನು ಶಿಕಾರಿಪುರ ಶಾಸನ ತಿಳಿಸುತ್ತದೆ. ಹೀಗೆ ಕರ್ನಾಟಕವನ್ನಾಳಿದ ರಾಜ ಮನೆತನಗಳೆಲ್ಲವೂ ತಮ್ಮ ನಾಡಿನ ಏಳ್ಗೆಗಾಗಿ, ತಮ್ಮ ನಾಡಿನ ಜನರ ಅಭ್ಯುದಯಕ್ಕಾಗಿ ಹಾಗೂ ತಮ್ಮ ವೈಯಕ್ತಿಕ ಪರಿಚಯಕ್ಕಾಗಿ, ಹಲವಾರು ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ, ನೀಡಿದ ದಾನದ ನೆನಪಿಗೋಸ್ಕರ ಈ ನಾಡಿನಾದ್ಯಂತ ದಾನ ಶಾಸನಗಳನ್ನು ಹಾಕಿಸಿದ್ದಾರೆ.

. ವಿದ್ಯಾಕೇಂದ್ರಗಳಿಗೆ ನೀಡಿದ ದಾನಶಾಸನ

ಪ್ರಾಚೀನ ಭಾರತದ ಪ್ರಾರಂಭದ ಹಂತದಲ್ಲಿ ವಿದ್ಯಾಭ್ಯಾಸವು ಧಾರ್ಮಿಕವಾಗಿಯೇ ನಡೆಯುತ್ತಿತ್ತು. ಕ್ರಿ. ಪೂ. ೩ನೇ ಶತಮಾನದಲ್ಲಿ ಅಶೋಕನ ಬೌದ್ಧವಿಹಾರಗಳೇ ಮುಂದೆ ವಿದ್ಯಾಕೇಂದ್ರಗಳಾಗಿ ಬೆಳೆದವು. ಆಗಿನ ಕಾಲದಲ್ಲಿ ಹಿಂದೂಗಳಿಗೆ ವಿದ್ಯಾಕೇಂದ್ರಗಳೆಂದರೆ ದೇವಸ್ಥಾನಗಳೇ. ಇದರ ಜೊತೆಗೆ ಅಗ್ರಹಾರ, ಬ್ರಹ್ಮಪುರಿ, ಘಟಿಕಾಸ್ಥಾನಗಳಲ್ಲಿಯೂ ವಿದ್ಯಾಭ್ಯಾಸ ನಡೆಯುತ್ತಿತ್ತು. ಅವು ನೀಡುತ್ತಿದ್ದ ವಿದ್ಯಾಭ್ಯಾಸಕ್ಕೆ ಪ್ರತಿಯಾಗಿ ರಾಜರು, ಶ್ರೀಸಾಮಾನ್ಯರು ದಾನ ನೀಡುತ್ತಿದ್ದ ಸಂಗತಿ ಶಾಸನಗಳಿಂದ ತಿಳಿದುಬರುತ್ತದೆ. ಉದಾಹರಣೆಗೆ ಬಳ್ಳಾರಿ ಜಿಲ್ಲೆಯ ಕೋಗಳಿ ಶಾಸನ ಚಾಲುಕ್ಯ ಒಂದನೆಯ ಸೋಮೇಶ್ವರನ ಆಳ್ವೆಯ ಕಾಲದಲ್ಲಿ ಜೈನ ಮಂತ್ರಿಯಾಗಿದ್ದ ಇಂದ್ರಕೀರ್ತಿ ಎಂಬುವರು ವಿದ್ಯಾರ್ಥಿಗಳ ವಿದ್ಯೆ ಮತ್ತು ಅನ್ನಸತ್ರಕ್ಕೆ ೨೪ ಮತ್ತರ ಭೂಮಿಯನ್ನು ದಾನವಾಗಿ ನೀಡಿದ ವಿಷಯವನ್ನು ಹೇಳುತ್ತದೆ.

. ಪಂಡಿತರು/ಗಣ್ಯ ವ್ಯಕ್ತಿಗಳಿಗೆ ನೀಡಿದ ದಾನಶಾಸನ

ಪಂಡಿತರು/ಗಣ್ಯವ್ಯಕ್ತಿಗಳಿಗೆ ಗೌರವಪೂರ್ವಕವಾಗಿ ದಾನ ದತ್ತಿಗಳನ್ನು ನೀಡಿರುವ ಉದಾಹರಣೆಗಳು ಶಾಸನಗಳಲ್ಲಿ ದೊರೆಯುತ್ತವೆ ಉದಾಹರಣೆಗೆ ಜಿನವಲ್ಲಭನ ಗಂಗಾಧರಂ ಶಾಸನ. ಇದರ ಕಾಲ ಕ್ರಿ. ಶ. ಸುಮಾರು ೬೫೦. “ಓಂ ನಮಃ ಸಿದ್ದೇಭ್ಯಃ” ಎಂದು ಪ್ರಾರಂಭವಾಗುವ ಈ ಶಾಸನವು ೧೧ ಸಾಲುಗಳಿಂದ ಕೂಡಿದ್ದು, ಜಿನವಲ್ಲಭ ಜೈನಧರ್ಮದ ಅಭ್ಯುದಯಕ್ಕಾಗಿ ಮಾಡಿದ ಕಾರ್ಯಗಳನ್ನು ಆತನ ವಂಶಾವಳಿಯನ್ನು ವಿವರಿಸುವುದಲ್ಲದೆ, ಪಂಪನು ರಚಿಸಿದ ‘ವಿಕ್ರಮಾರ್ಜುನ ವಿಜಯ’ ಗ್ರಂಥವನ್ನು ಮೆಚ್ಚಿ ಆತನ ಪೋಷಕನಾಗಿದ್ದ ಚಾಲುಕ್ಯರ ಎರಡನೆಯ ಅರಿಕೇಸರಿಯು ಧರ್ಮಪುರವೆಂಬ ಆಗ್ರಹಾರವನ್ನು ಕವಿಗೆ ದತ್ತಿಯಾಗಿ ಬಿಟ್ಟ ವಿಷಯವನ್ನು ಜನ ಸಾಮಾನ್ಯರಿಗೆ ಶಾಸನ ರೂಪದಲ್ಲಿ ಸಾರಿ ಹೇಳುವ ಉದ್ದೇಶವನ್ನು ಹೊಂದಿದೆ.

.. ಪ್ರಶಸ್ತಿ ಶಾಸನಗಳು

ಪ್ರಶಸ್ತಿ ಶಾಸನಗಳು ರಾಜನ ದಿಗ್ವಿಜಯವನ್ನು ಹೇಳುವಂತಹವು. ಇವುಗಳಲ್ಲಿ ಎರಡು ವಿಧ. ೧. ರಾಜನ ದಿಗ್ವಿಜಯವನ್ನು ಕೀರ್ತಿಸುವಂತಹವು. ೨. ರಾಜನೊಬ್ಬ ದೇವಾಲಯ ಕಟ್ಟಿಸಿದ್ದನೋ ತಟಾಕವೊಂದನ್ನು ನಿರ್ಮಿಸಿದ್ದನೋ ಹೇಳಲು ಹೋಗಿ ಅದನ್ನು ಗೌಣ ಮಾಡಿ ರಾಜನ ದಿಗ್ವಿಜಯಗಳನ್ನು ಕೀರ್ತಿಸುವಂತಹವು. ಇದಕ್ಕೆ ಅಲಹಾಬಾದ್ ಸ್ತಂಭಶಾಸನ, ಕಾಕುತ್ಸವರ್ಮನ ತಾಳಗುಂದ ಶಾಸನ, ರವಿಕೀರ್ತಿಯ ಐಹೊಳೆ ಶಾಸನ, ವಿಷ್ಣುವರ್ಧನನ ಬೇಲೂರಿನ ಶಾಸನ ಮೊದಲಾದವು ಉದಾಹರಣೆಯಾಗಿ ಸಿಗುತ್ತವೆ. ಸಾಮಾನ್ಯವಾಗಿ ಪ್ರಶಸ್ತಿ ಶಾಸನಗಳನ್ನು ಬಹು ಪ್ರಸಿದ್ಧರಾದ ಕವಿಗಳು ರಚಿಸುತ್ತಿದ್ದರಿಂದ ಪ್ರೌಢಕಾವ್ಯಗಳಲ್ಲಿ ಕಂಡುಬರುವ ಶ್ಲೇಷ, ಅಲಂಕಾರ ಅಲ್ಲಿನ ಪದ್ಯ ಜಾತಿಗಳು ಮೊದಲಾದವು ಕಂಡುಬರುತ್ತವೆ. ಪ್ರಶಸ್ತಿ ಶಾಸನಗಳು ನಾಡಿನ ರಾಜಕೀಯ ಇತಿಹಾಸವನ್ನು ಪುನಾರಚಿಸಲು ಬಹುವಾಗಿ ನೆರವಿಗೆ ಬರುತ್ತವಾದರೂ ಈ ಶಾಸನಗಳನ್ನು ದಿಗ್ವಿಜಯಗಳನ್ನು ಹೇಳಲು ರಚಿಸಿದಂತೆ ಕಂಡುಬರುತ್ತದೆ. ಆಯಾ ರಾಜನ ಆಶ್ರಿತರಾಗಿದ್ದರಿಂದ ಉತ್ಪ್ರೇಕ್ಷೆ ಸಹಜವಾಗಿಯೇ ಇರುತ್ತದೆ ಎಂಬುದು ಗಮನಾರ್ಹ ಸಂಗತಿ.

ಉದಾಹರಣೆಗೆ (ಕ್ರಿ. ಶ. ೩೪೫-೬೦) ಚಿತ್ರದುರ್ಗದ ಬಳಿಯ ಚಂದ್ರವಳ್ಳಿ ಎಂಬಲ್ಲಿ ಶಾಸನ ಒಂದು ದೊರೆತಿದೆ. ಇದನ್ನು ಕದಂಬರ ಅರಸ ಮಯೂರವರ್ಮನುಹೊರಡಿಸಿದ್ದನು. ಬ್ರಾಹ್ಮೀಲಿಪಿ, ಸಂಸ್ಕೃತ ಭಾಷೆಯಲ್ಲಿರುವ ಶಾಸನ ಪದ್ಯ ಈ ರೀತಿ ಇದೆ.

ಕದಂಬಮ್ ಮಯೂರವರ್ಮನಾ
ತಟಾಕಮ್ ಧೃದಮ್ ಕೃತ್ಯಮ್ ಅಭಿರೂಪಮ್
ವಾನಸಕಮ್ ಶಾಪವಿತ್ವ ಕುಪಣಚಮ

ಕದಂಬರ ಮಯೂರವರ್ಮನು ಇಲ್ಲಿಯ ಕೆರೆಯನ್ನು ದುರಸ್ತಿ ಮಾಡಿಸಿ ಅಲ್ಲಿನ ವನವನ್ನು ಸುಂದರಗೊಳಿಸಿದನು ಎಂಬುದಾಗಿ ತಿಳಿದುಬರುತ್ತದೆ.

. ಬಾದಾಮಿ ಶಾಸನ

ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ ಕನ್ನಡದ ಪ್ರಮುಖ ಶಾಸನವೊಂದು ದೊರೆತಿದ್ದು ಇದರ ಕಾ ಕ್ರಿ. ಶ. ಸುಮಾರು ೭ ನೇ ಶತಮಾನ. ಕಲಿಯುಗ ವಿಪರೀತನೆಂಬ ಅಗ್ಗಳಿಕೆಗೆ ಪಾತ್ರನಾದ ಕಪ್ಪೆ ಅರಭಟ್ಟನ ಶೌರ್ಯಪರಾಕ್ರಮಗಳ ಉಲ್ಲೇಖ ಈ ಶಾಸನದಲ್ಲಿದೆ.

ಸಾಧುಗೆ ಸಾಧು, ಮಾಧುರ್ಯನ್ಗೆ ಮಾಧುರ್ಯನ್
ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ

ಕಲಿಯುಗ ವಿಪರೀತನು ಸಾಧುಗಳಿಗೆ ಸಾಧುವಾಗಿಯೇ ಇರುವನು, ತನ್ನ ವಿಷಯದಲ್ಲಿ ಯಾರು ಸ್ನೇಹದಿಂದಿರುವರೋ ಅವರಿಗೆ ಅವನೂ ಸ್ನೇಹಿತನು. ತನ್ನನ್ನು ಬಾಧಿಸುವ ಕಲಿಗೆ ತನ್ನ ವಿಪರೀತವಾದ ಕಲಿತನವನ್ನು ತೋರಿಸದೆ ಬಿಡನು. ಕಟ್ಟಿ ಹಾಕಿದ ಸಿಂಹವನ್ನು ಇದರಿಂದ ಏನು ಕೆಡಕು ಎಂಬ ಧೋರಣೆಯಿಂದ ಬಿಟ್ಟವರು ಹೇಗೆ ತಾವೇ ಕೆಡುವರೋ, ಸಾವನ್ನೇ ಪಡೆಯುತ್ತಾರೋ ಹಾಗೆ ಅರಭಟ್ಟನೊಡನೆ ವೈರ ಕಟ್ಟಿಕೊಂಡವರು ಕೆಡುವರು ಅಥವಾ ಸಾಯುವರು ಎಂಬುದಾಗಿದೆ.

. ವೀರಗಲ್ಲುಗಳು

ಯುದ್ಧದಲ್ಲಿ ಹೋರಾಡಿ ಮಡಿದ ವೀರರ ಸ್ಮರಣಾರ್ಥವಾಗಿ ನಿಲ್ಲಿಸುವ ಕಲ್ಲುಗಳೇ ವೀರಗಲ್ಲುಗಳು. ಇವುಗಳಲ್ಲಿ ತುಱುಗೋಳ್, ಪೆಣ್ಬುಯ್ಯಲ್, ಎಱವೆಸ, ನೆಂಟರೆಡರು ಊರಱುವು ಎಂಬ ಹಲವು ಪ್ರಸಂಗಗಳಿಗೆ ಸಂಬಂಧಪಟ್ಟ ವೀರಗಲ್ಲುಗಳು ದೊರೆಯುತ್ತವಾದರೂ ರಾಜಕಾರ್ಯಗಳಿಗಾಗಿ ಹೋರಾಡಿದ ವೀರಗಲ್ಲುಗಳು ಕಡ್ಡಾಯವಾಗಿದ್ದವು ಎಂಬುದು ಗಮನಾರ್ಹ.

.. ತುಱುಗೋಳ್

ಪ್ರಾಚೀನ ಭಾರತೀಯರಿಗೆ ಗೋವು ಪೂಜ್ಯನೀಯವಾಗಿದುದ್ದಲ್ಲದೆ ವಿನಿಮಯದ ವಸ್ತುಗಳಲ್ಲೊಂದಾಗಿದ್ದು ಸುವರ್ಣಕ್ಕೆ ಸಮಾನವಾಗಿತ್ತು. ಆದುದರಿಂದಲೇ ಗೋವನ್ನು ಸಂಪತ್ತೆಂದು ಪರಿಗಣಿಸಲಾಗುತ್ತಿತ್ತು. ಗೋವಿಗಿದ್ದ ಪೂಜ್ಯತೆ ಕಡಿಮೆಯಾದಂತೆ ಅವುಗಳನ್ನು ಸೆರೆಹಿಡಿದು ಯುದ್ಧ ಸಾರಿದ ಸಂಕೇತವಾಗಿ ಬಳಸಲಾಗುತ್ತಿತ್ತು. ಈ ರೀತಿ ಸೆರೆ ಸಿಕ್ಕ ಗೋವುಗಳನ್ನು ಸಂರಕ್ಷಿಸಲು ಹೋಗಿ ಹೋರಾಡಿ ಮಡಿದ ವೀರರಿಗೆ ಸಂಬಂಧಿಸಿದ ವೀರಗಲ್ಲುಗಳೇ ತುಱುಗೋಳ್‌ಗಳು. ಉದಾಹರಣೆಗೆ ಕ್ರಿ.ಶ. ೧೦೫೮ರ ಮೂಡಿಗೆರೆಯ ವೀರಗಲ್ಲು, ಮೂಡಿಗೆರೆಯನ್ನು ಆಕ್ರಮಿಸಿ ತುಱುಗಳನ್ನು ಹಿಡಿದು ಹೆಣ್ಣು ಮಕ್ಕಳ ಮಾನಹರಣ ಮಾಡುತ್ತಿದ್ದಾರೆಂದು ಹುಯ್ಯಲಿಡುತ್ತಿದ್ದುದನ್ನು ಕೇಳಿದ ಮಾಚಗಾವುಣ್ಡ ಎಂಬುವನು ಸ್ವಲ್ಪವೂ ತಡಮಾಡದೆ ಅಲ್ಲಿಗೆ ಹೋಗಿ “ಜಿತೇನ ಲಭ್ಯತೇ ಲಕ್ಷ್ಮೀ, ಮೃತೇನಾಪಿ ಸುರಾಂಗನಾ ಕ್ಷಣವಿದ್ವಂಸಿನಿ ಕಾಯೇ ಕಂಚಿತಾ ಮರಣೇರಮೇ ಯಂಬಾ ಶ್ಲೋಕಮನಾತ್ಮಗತಂ ಬಗೆದು ಸಂಗ್ರಾಮಯಂ ಪರಿಚ್ಛೇದಿಯಾಗಿ ಮಾರ್ಬಲದಾಳಂ ಮೂದಲಿಪಿ” ಶತ್ರು ಪಕ್ಷದವರನ್ನು ಸದೆಬಡಿದು ತುಱುಗಳನ್ನು ಹಿಂದಿರುಗಿಸಿದ ವಿಷಯವನ್ನು ತಿಳಿಸುತ್ತದೆ. ಹಾಗೆಯೇ ಗೋಗ್ರಹಣ ಯದ್ಧವನ್ನು ಎದುರಿಸಿ ವೀರಸ್ವರ್ಗವೇರಿದ ಏಕೈಕ ಸ್ತ್ರೀ ‘ಲಕ್ಷ್ಮಮ್ಮ ಗಾವುಂಡಿ’ ಎಂದು ವಿದ್ವಾಂಸರು ಅಭಿಪ್ರಾಯಿಸಿದ್ದಾರೆ.

. ಪೆಣ್ಬುಯ್ಯಲ್

ಪೆಣ್ಬುಯ್ಯಲ್ ಎಂದರೆ ಹೆಣ್ಣಿನ ಆರ್ತಧ್ವನಿ. ನೆರೆರಾಜ್ಯದ ದಾಳಿಕೋರರು. ಕದನಕ್ಕೆ ಬಂದು ಹೆಣ್ಣುಮಕ್ಕಳ ಮಾನಭಂಗಕ್ಕೆ ತೊಡಗುತ್ತಿದ್ದರಲ್ಲದೆ ಸೀರೆ ಸೆಳೆಯುವ ಮೂಲಕ ಯುದ್ಧವನ್ನು ಸಾರುತ್ತಿದ್ದರು. ಇಂತಹ ಪ್ರಸಂಗಗಳಲ್ಲಿ ವೀರನಾದವನು ಸ್ತ್ರೀಯರ ಮಾನರಕ್ಷಣೆಗಾಗಿ ಹೋರಾಡುತ್ತಿದ್ದನು. ಏರಿಬಂದ ವೈರಿಗಳು ಹೆಂಡಿರ ಮಾನಹರಣಕ್ಕೆ ಪ್ರಯತ್ನಿಸುತ್ತಿದ್ದುದನ್ನು ವೀರಗಲ್ಲು “ಪೆಂಡಿರ ಉಡೆಯರ್ಚುವಲ್ಲಿ” ಎಂದು ಸೊಗಸಾದ ಶಬ್ದದಿಂದ ಸೂಚಿಸುತ್ತದೆ. ಈ ರೀತಿಯ ಶಾಸನಗಳು ಅಬ್ಬಲೂರಿನಲ್ಲಿ ಕಾಣಸಿಗುತ್ತವೆ.

. ಎಱವೆಸ

ಎಱವೆಸ ಎಂದರೆ ಒಡೆಯನ ಅಪ್ಪಣೆ ಎಂದರ್ಥ. ಆತನ ಉಪ್ಪಿನ ಋಣಕ್ಕಾಗಿ ಹೋರಾಡುವುದು ಇಲ್ಲಿಯ ಮುಖ್ಯ ಧ್ಯೇಯವಾಗಿದೆ. ಎಱವೆಸ ಯುದ್ಧವಾಗಿದ್ದು ತರಬೇತು ಪಡೆದು ಸೈನ್ಯ ನಿರ್ವಹಿಸುವ ಈ ಸಂಘರ್ಷಣೆ ರಾಜ್ಯದ ಹಣೆಬರಹವನ್ನು ನಿರ್ಧರಿಸುತ್ತಿತ್ತು. ಇಂತಹ ಯುದ್ಧಗಳಲ್ಲಿ ಹೋರಾಡಿ ಮಡಿದವರ ನೆನಪಿಗೆ ನೆಟ್ಟ ವೀರಗಲ್ಲುಗಳೇ ‘ಎಱವೆಸ’ ಗಳು ಇದಕ್ಕೆ ಮಾವಳಿಯ ಶಾಸನ ಉತ್ತಮ ಉದಾಹರಣೆಯಾಗಿದೆ.

. ನೆಂಟರೆಡರು

ಸಂಬಂಧಿಕರಿಗೆ ಸ್ನೇಹಿತರಿಗೆ ಸಂಭವಿಸಿದ ಆಪತ್ಕಾಲದಲ್ಲಿ ನೆರವಾಗುವುದು ಕೂಡ ಜೀವನ ಮೌಲ್ಯಗಳಲ್ಲೊಂದು. ಇಂತಹ ಕೆಲವು ಘಟನೆಗಳೂ ಕೂಡ ಶಾಸನಗಳಲ್ಲಿ ಉಲ್ಲೇಖಿತಗೊಂಡಿದೆ. ಉದಾಹರಣೆಗೆ ದೇವಗಾವುಂಡ ಮಲ್ಲಗಾವುಂಡರ ವೀರಮರಣವನ್ನು ಕೇಳಿ ಸೈರಿಸದೆ ತಮ್ಮನಾದ ಬೊಪ್ಪಗಾವುಂಡ ‘ನಿಮ್ಮಾದುದನಪ್ಪೆಂ’ ಎಂದು ವೈರಿಗಳನ್ನೆದುರಿಸಿ ಜಯಶಾಲಿಯಾಗಿ ಅಣ್ಣ ತಮ್ಮಂದಿರಿಗೆ ವೀರಗಲ್ಲು ನಿಲ್ಲಿಸಿದ ವಿಷಯ ಕೊರಕೋಡು ಶಾಸನದಲ್ಲಿ ಬರುತ್ತದೆ.

. ಊರಱುವು

ಪ್ರಾಚೀನ ಕಾಲದಲ್ಲಿ ಕಳ್ಳರು ಗೋವುಗಳನ್ನು ಕದ್ದು ಹೆಣ್ಣು ಮಕ್ಕಳ ಮಾನಭಂಗ ಮಾಡಿ ಗ್ರಾಮಗಳನ್ನು ನಾಶಪಡಿಸುತ್ತಿದ್ದರು. ಇದೇ ಊರಱುವು ಅಥವಾ ಊರಿನ ನಾಶ ನೆರೆಹಳ್ಳಿಯ ದಾಳಿಕಾರರು ಆಗಾಗ ಊರು ಕೆಟ್ಟು ಸೂರೆಯಾಡುವಾಗ ಆರಿಗಾದರೂ ಇಲ್ಲ ಎಂಬಂತೆ ಊರುಗಳನ್ನು ಆಗಾಗ ಲೂಟಿ ಮಾಡುತ್ತಿದ್ದರು. ಇಂಥ ಸಮಯದಲ್ಲಿ ಗಟ್ಟಿಯಾಗಿ ನಿಂತು ವೈರಿಗಳನ್ನು ಎದುರಿಸಿ ಸಂರಕ್ಷಿಸಿದವರಿಗೆಂದು ಹಾಕಿಸಿದ ಶಾಸನಗಳೇ ಇವು. ಗೆಂಡ್ಲಗ್ರಾಮದ ವಿರಗಲ್ಲು, ಬಿವನ ಎಂಬುವನು ಊರನ್ನು ಮುತ್ತಿದ ಕಳ್ಳರೊಡನೆ ಕಾದಿ “ಜವನುಂಡು ಕಾರಿದಂದದಿ ಅವರಂಕೊಂದು” ಸತ್ತನೆಂದು ಹೇಳುತ್ತದೆ.

. ಇತರೆ

ವೀರಗಲ್ಲುಗಳು ಕೇವಲ ವ್ಯಕ್ತಿ, ವಸ್ತುವಿಷಯಗಳಿಗೆ ಸಂಬಂಧಿಸಿವಲ್ಲದೆ ಯುದ್ಧದಲ್ಲಿ ಸಹಾಯ ಮಾಡಿದ ಪ್ರಾಣಿಗಳಿಗೂ ಸಂಬಂಧಿಸಿವೆ. ಹಂದಿಯನ್ನು ಕೊಂದು ತಾನೂ ಸತ್ತ ಕಾಳಿ, ಪೂಣಿಗ, ಕೇಸರಿ ಹೆಸರಿನ ನಾಯಿಗಳಿಗಾಗಿ ನಿಲ್ಲಿಸಿದ ವಿರಗಲ್ಲುಗಳು ಆತಕೂರು, ಗೊಲ್ಲರಹಟ್ಟಿ, ಯಲಹಂಕ ಗ್ರಾಮಗಳಲ್ಲಿವೆ. ಹೀಗೆ ಹೋರಾಟದಲ್ಲಿ ತಮ್ಮ ಶೌರ್ಯ, ಪರಾಕ್ರಮವನ್ನು ಮೆರೆದು ಮಡಿದ ವಿಷಯವನ್ನು ವೀರಗಲ್ಲುಗಳಲ್ಲಿ ಕಾಣಬಹುದು.

.. ಮಾಸ್ತಿಕಲ್ಲು

‘ಮಾಸ್ತಿ’ ಎಂಬುದು ಮಹಾಸತಿ ಪದದ ತದ್ಬವ ರೂಪ. ಪ್ರಾಚೀನಕಾಲದ ಜನರು ತಾವು ಅನುಸರಿಸಿದ ಧರ್ಮದಲ್ಲಿ ಗಂಡ ಸತ್ತಾಗ ಅವನೊಡನೆ ಸತಿಯೂ ಚಿತೆಯೇರುವುದನ್ನು ಒಂದು ಮೌಲ್ಯವೆಂದು ಪರಿಗಣಿಸಲಾಗುತ್ತಿತ್ತು. ಈ ರೀತಿ ಚಿತೆಯೇರಿದ ಸ್ತ್ರೀಯರನ್ನು ಮಹಾಸತಿ ಎಂದು ಕರೆಯುತ್ತಿದ್ದರು. ಇದೊಂದು ಸ್ತ್ರೀ ಸಮಾಜಕ್ಕೆ ಆದರ್ಶಪ್ರಾಯವೂ, ಗೌರವಯುತವೂ ಆಗಿತ್ತು. ಸತಿ ಹೋಗುವುದರಲ್ಲಿ ಎರಡು ವಿಧ. ಗಂಡನ ಕಳೆಬರಹದೊಡನೆ ಚಿತೆಯೇರುವುದು ಒಂದು. ಇದನ್ನು ‘ಸಹಗಮನ’ ಎಂದು ಕರೆಯಲಾಗುತ್ತದೆ. ಎರಡನೆಯದು ಗಂಡ ಎಲ್ಲೋ ಸತ್ತ ಸುದ್ದಿಯನ್ನು ಕೇಳಿ ಚಿತೆಯನ್ನು ನಿರ್ಮಿಸಿ ಅದನ್ನೇರುವುದು. ಇದನ್ನು ‘ಅನುಗಮನ’ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ೧೦೫೭ರ ಬೆಳತೂರು ಶಾಸನವು ಸವಲಷಿರಾಜನ “ಎಳೆಲೆ ತಪಱಿಯ ಕಮ್ಮಾರಿವುಯ್ದು”ಸತ್ತಿದ್ದನ್ನು ಹೇಳುತ್ತದೆ. ಹಡವಳ್ತಿ ಕನಕವ್ವೆಗೆ ವೇಳೆವಾಳಿಗಾಗಿ ಸತ್ತ ಹಟ್ಟಿಗೊರವನಾಯಕನ ಪತ್ನಿ ಬೊಮ್ಮಕ್ಕ ಸತಿ ಹೋದ ವಿಷಯ ೧೦೯೦ರ ಕೋಟೆವೂರ ಶಾಸನದಲ್ಲಿದೆ.

ಹೀಗೆ ಗಂಡ ಸತ್ತಾಗ ‘ಮಾಸ್ತಿ’ ಆದವರ ನೆನಪಿಗಾಗಿ ನಿಲ್ಲಿಸಿದ ಕಲ್ಲುಗಳೇ ಮಾಸ್ತಿಕಲ್ಲುಗಳು. ಈ ಶಾಸನಗಳಲ್ಲಿ ಹೆಂಗಸರು ತನ್ನ ಬಲಗೈಯನ್ನು ಮೇಲಕ್ಕೆತ್ತಿರುತ್ತಾಳೆ. ಅಂಗೈ ಸ್ಪಷ್ಟವಾಗಿದ್ದು, ಬೆರಳುಗಳು ಬಿಡಿಬಿಡಿಯಾಗಿರುತ್ತವೆ. ಕೆಲವು ಕಲ್ಲುಗಳಲ್ಲಿ ಸ್ತ್ರೀ ಚಿತ್ರದ ಹಿಂದೆ ‘ಜ್ವಾಲೆ’ಗಳಿರುವಂತೆ ಕೆತ್ತನೆ ಇರುತ್ತದೆ. ಸತಿಯಾದವಳನ್ನು ದೇವತೆಗೆ ಸಮಾನವೆಂದು ಪರಿಗಣಿಸಿ ಆಕೆಗೆ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು (ಪ್ರಸ್ತುತ ಸಂದರ್ಭದಲ್ಲಿಯೂ ಇದನ್ನು ಕಾಣಬಹುದು). ಸಾಮಾನ್ಯವಾಗಿ ಮಾಸ್ತಿ ಕಲ್ಲುಗಳಿಗೆ ಲಿಪಿ ಇರುವುದಿಲ್ಲ, ಇದ್ದರೂ ವಿರಳ.

.. ನಿಸದಿಗಲ್ಲು

ಸಮಾಧಿ ಮರಣ ಮತ್ತು ನಿಸಿದಿ ಹೊಂದುವ ಪದ್ಧತಿ ಪ್ರಾಚೀನ ಕಾಲದಿಂದಲೂ ಬೆಳದು ಬಂದ ಸಂಪ್ರದಾಯವಾಗಿದೆ. ಜೈನ ಸನ್ಯಾಸಿಗಳು ಮತ್ತು ಗೃಹಸ್ಥರು ಸನ್ಯಾಸನ ವಿಧಿಯಿಂದ ಅಥವಾ ಸಲ್ಲೇಖನ ವ್ರತದಿಂದ ಮರಣವನ್ನಪ್ಪಿದ್ದನ್ನು ಈ ನಿಸಿದಿಗಲ್ಲುಗಳು ತಿಳಿಸುತ್ತವೆ. ನಿಸಿದಿ ಅಥವಾ ನಿಷತ್ ಎಂದರೆ ಕುಳಿತಿರುವುದು ಎಂದರ್ಥ. ಸಲ್ಲೇಖನ ವ್ರತವನ್ನು ಆಚರಿಸುವ ವ್ಯಕ್ತಿ ಗುರುವಿನ ಬಳಿ ಕುಳಿತು ಧರ್ಮಶ್ರವಣದಲ್ಲಿ ನಿರತನಾಗಿರುವ ಚಿತ್ರವನ್ನು ಈ ಶಾಸನಗಳಲ್ಲಿ ಕಾಣಬಹುದು. ಜೈನರಲ್ಲಿ ವೃದ್ಧಾಪ್ಯವನ್ನು ಹೊಂದಿದಾಗ ಸಲ್ಲೇಖನ ವ್ರತದಿಂದ ಅನ್ನ ಆಹಾರಾದಿಗಳನ್ನು ತೊರೆದು ಧರ್ಮಶ್ರವಣ ಮಾಡುತ್ತಾ ಪ್ರಾಣ ಬಿಡುತ್ತಿರುವುದಕ್ಕೆ ಉದಾಹರಣೆಯಾಗಿ ಅನೇಕ ಶಾಸನಗಳು ಶ್ರವಣ ಬೆಳ್ಗೊಳದಲ್ಲಿ ಸಿಗುತ್ತದೆ.

ಉದಾಹರಣೆಗೆ,

ಸುರಚಾಪಂಬೋಲೆ ವಿದ್ಯಲ್ಲತೆಗಳ ತೆಱವೋಲ್ಮಂಜುವೋಲ್ತೋಱುಬೇಗಂ
ಪಿರಿಗುಂ ಶ್ರೀ ರೂಪಲೀಲಾಧನ ವಿಭವಮಹಾರಾಶಿಗಳ್ನಿಲ್ಲ ವಾರ್ಗ್ಗುಂ
ಪರಮೂರ್ತಂ ಮೆಚ್ಚೆನಾನೀಧರಣಿಯಾಳಿರವಾನೆನುಡುಸನ್ನಸನಂಗೆ
ಯ್ದು ಸತ್ವನ್ನನ್ದಿಸೇನಪ್ರವರ ಮುನಿವರಸ್ದೇದೇವಲೋಕಕ್ಕೆ ಸನ್ದಾರ್

ಈ ಪದ್ಯ ಸುರಚಾಪ, ವಿದ್ಯುಲತೆ, ಮಂಜುಗಳಿಂದ ಭೂಷಿತವಾದ ಸಾಹಿತ್ಯ ವಾತಾವರಣವನ್ನು ಹೊತ್ತು ನಿಂತಿದೆ. ಇದೇ ಸಮಯದಲ್ಲಿ ಪದ್ಯಗಳಲ್ಲಿ ಕಂಡುಬರುವ “ಸೋಸ್ತಿಯ್ದಿದೊರ್ಪಿದ್ದಿಯಾನ್” “ಅವರ್ ಸ್ವರ್ಗ್ಗಾಗ್ರಮಾನೇಱುದಾರ್” “ದೇವಲೋಕಕ್ಕೆ ಸನ್ದಾರ್” ಎಂಬಲ್ಲಿಯ ಕ್ರಿಯಾಪದದ ದೀರ್ಘೀಕರನಗಳು ವೃತ್ತಿಯಾ ಸ್ವರ್ಗಕ್ಕೆ ಏರಿಹೋದುದನ್ನು ದೃಶ್ಯವತ್ತಾಗಿ ಚಿತ್ರಿಸುತ್ತದೆ. ಒಟ್ಟಿನಲ್ಲಿ ನಿಸಿದಿಗಲ್ಲುಗಳು ಜೈನಧರ್ಮದ ತತ್ವ ಮತ್ತು ಆಚರಣೆಗಳನ್ನು ತಿಳಿಸುವಂತಹುಗಳಾಗಿವೆ.

.. ಯೂಪಶಾಸನ

ಯಾಗದ ಸಂದರ್ಭದಲ್ಲಿ ಬಲಿ ಕೊಡಲಿರುವ ಪಶುಗಳನ್ನು ಕಟ್ಟಿಹಾಕಲೆಂದು ನೆಟ್ಟಿರುವ ಕಂಬಗಳೇ ಯೂಪಸ್ತಂಭ ಅಥವಾ ಶಾಸನಗಳು. ಇಷ್ಟಾರ್ತ ಸಿದ್ಧಿಗಾಗಿ ಯಾಗಗಳನ್ನು ಮಾಡುವಾಗ ಪಶುಗಳನ್ನು ಬಲಿ ಕೊಡುತ್ತಿದ್ದರೆಂಬ ಸಂಗತಿ ಪ್ರಾಚೀನ ಭಾರತದ ಇತಿಹಾಸದಿಂದ ತಿಳಿದುಬರುತ್ತದೆ. ಸೊಮಯಾಗಗಳಲ್ಲಿ ಪಶುಬಲಿಯು ಒಂದು ಅಂಗವಾಗಿದ್ದರೆ, ಪ್ರಾಣಿಗಳನ್ನು ಬಲಿ ಕೊಡುವುದೇ ಪ್ರಮುಖವಾಗಿರುವ ಯಾಗವನ್ನು ‘ನಿಗೂಢ ಪಶುಬಂಧ’ವೆಂದು ಕರೆಯಲಾಗುತ್ತಿತ್ತು. ಯೂಪವು ಪತಾಶ, ಖದಿರ, ಬಿಲ್ವ ಮುಂತಾದ ವೃಕ್ಷಗಳಿಂದ ಮಾಡಿದ್ದಾಗಿರಬೇಕೆಂಬುದಲ್ಲದೆ ಅದರ ಎತ್ತರ ಇತ್ಯಾದಿ ನಿಯಮಗಳು ಹೀಗೆಯೇ ಇರಬೇಕೆಂಬುದನ್ನು ಅನೇಕ ಶಾಸನಗಳು ತಿಳಿಸುತ್ತವೆ. ಪಂಪಭಾರತದಲ್ಲಿ ಚಿನ್ನದ ಯೂಪಸ್ತಂಭದ ಉಲ್ಲೇಖವಿದೆ. ‘ವಿವೇಕ ಚಿಂತಾಮಣಿಯಲ್ಲಿ’ ಯಜ್ಞ ಪ್ರಕ್ರಿಯೆಯನ್ನು ವರ್ಣಿಸುವಾಗ ಯೂಪಸ್ತಂಭದ ಹೆಸರು ಬಂದಿದೆ. ಹೀಗೆ ಯೂಪಸ್ತಂಭಗಳು ಮರದಿಂದಲೂ ಶಿಲೆಯಿಂದಲೂ ಮಾಡಿರುವುದು ಕಾಣಸಿಗುತ್ತವೆ ಎಂಬುದು ಗಮನಾರ್ಹ. ಉದಾಹರಣೆಗೆ

ಇಷ್ಟಕಾಚಯನದಿಂ ರಾಜಿಸಿತು ಬಳಸಿ ಪರಿ
ಶಿಷ್ಟದಿಂದೊಪ್ಪದುವು ಪಲವು ವೇದಿಗಳೆಸೆದು
ವಷ್ಟಕುಂಡದ ರಚನೆ ಪಾಲಾಶಮೇಳು ಖಾದಿರಮಾರು ಬಿಲ್ವಮೈದು

ಒಟ್ಟಿನಲ್ಲಿ ಪಶುಗಳನ್ನು ಬಲಿ ಕೊಡುವುದರ ಮೂಲಕ ಯಾಗಗಳನ್ನು ಆರಂಭಿಸುತ್ತಿದ್ದರಿಂದ ಆ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ಸ್ತಂಭಗಳು ಕಂಡುಬರುತ್ತವೆ.

.. ಕೂಟಶಾಸನ

ಒಬ್ಬ ರಾಜ ನಾಡಿನ ಏಳ್ಗೆಗೆ ಹಾಕಿಸಿದ ಶಾಸನಗಳಿಗೆ ವಿರುದ್ಧವಾಗಿ ಸ್ವಹಿತಾಸಕ್ತಿಗೆ ಹಾಕಿಸಿದ ಶಾಸನಗಳನ್ನು ಕೂಟಶಾಸನ ಎಂದು ಹೇಳಬಹುದು. ಕೂಟಶಾಸನದಲ್ಲಿ ಸುಳ್ಳು ದಾಖಲೆಗಳಿರುತ್ತವೆ. ಆದುದರಿಂದಲೇ ಇವುಗಳನ್ನು ಕೃತಕ ಶಾಸನಗಳೆಂದು ಕರೆಯುತ್ತಾರೆ. ಈ ಕೃತಕತೆಯನ್ನು ತಾಮ್ರಶಾಸನಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಏಕೆಂದರೆ ತಾಮ್ರ ಶಾಸನಗಳಲ್ಲಿ ನೈಜತೆ ಇರುತ್ತಿತ್ತು. ಜನರು ದಾಖಲೆಗಳನ್ನು ಶಿಲಾಶಾಸನಗಳಲ್ಲಿ ಕಂಡರಿಸುವುದು ಕಷ್ಟವಾದ ಕಾರ್ಯವಾಗಿತ್ತು. ಒಂದು ವೇಳೆ ಅವುಗಳಲ್ಲಿ ಕಂಡರಿಸಿದರೆ ಸಾರ್ವಜನಿಕರ ಕಣ್ಣಿಗೆ ಅವು ಬೀಳವಂತೆ ಊರಿನ ದೇವಾಲಯ ಮೊದಲಾದ ಪ್ರಮುಖ ಸ್ಥಳಗಳಲ್ಲಿಡಬೇಕಾಗುತ್ತಿತ್ತು. ಕೂಟಶಾಸನಗಳನ್ನು ಬರೆಯಿಸಿದ ಕೂಡಲೇ ಅವುಗಳನ್ನು ಪ್ರದರ್ಶಿಸಿದರೆ ಅವುಗಳಲ್ಲಿ ಉಕ್ತವಾದ ಸಂಗತಿಗಳ ಬಗೆಗೆ ಜನರು ಪ್ರತಿಭಟಿಸುವ ಸಂಭವಿರುತ್ತಿತ್ತು. ಆದುದರಿಂದಲೇ ಈ ಭಯ ಜನರಲ್ಲಿ ಗಾಢವಾಗಿತ್ತು. ಹೀಗಾಗಿ ಕೂಟಶಾಸನಗಳನ್ನು ಹೆಚ್ಚಾಗಿ ತಾಮ್ರಶಾಸನಗಳಲ್ಲಿ ಕಂಡರಿಸಲಾಗುತ್ತಿತ್ತು.

ಯಾವುದೋ ವಿಶೇಷವಾದ ಗೌರವವನ್ನೋ ಆಸ್ತಿಯನ್ನೋ ಅಧಿಕಾರವನ್ನೋ ಸಾಧಿಸುವುದರ ಸಲುವಾಗಿ ಕೃತಕ ತಾಮ್ರಪಟಗಳನ್ನು ಸೃಷ್ಟಿಸಿ ಅವುಗಳನ್ನು ಅಧಿಕೃತ ದಾಖಲೆಯೆಂದು ರಾಜರ ಮುಂದೆಯೋ, ಊರಿನ ಹಿರಿಯರ ಮುಂದೆಯೋ ಹಾಜರಿಪಡಿಸಿ ಇಲ್ಲದ ಸಂಪತ್ತು, ಸವಲತ್ತುಗಳನ್ನು ಪಡೆಯುವ ಉದ್ದೇಶ ಈ ಶಾಸನಗಳಿಂದಿದ್ದಿತು.

ಹೀಗೆ ಶಾಸನಗಳು ದಾನದಂತಹ ವ್ಯಕ್ತಿಯ ಜೀವನ ಮೌಲ್ಯವನ್ನೂ, ರಾಜ ಮಹಾರಾಜರ ವಂಶಾವಳಿ, ಹುಟ್ಟು-ಬೆಳವಣಿಗೆ, ದಿಗ್ವಿಜಯಗಳು, ಸಾಮ್ರಾಜ್ಯ ವಿಸ್ತರಣೆಯಂತಹ ಮಹತ್ವದ ವಿಚಾರಗಳನ್ನು, ಯುದ್ಧದಲ್ಲಿ ಹೋರಾಡಿ ಮಡಿದ ವೀರರ ಶೌರ್ಯ ಸಾಹಸಗಳನ್ನು, ಸ್ತ್ರೀಯರ ಸ್ಥಾನ ಮಾನಗಳ ಮಾಹಿತಿಯನ್ನೊಳಗೊಂಡ ವಿಚಾರಗಳನ್ನು ತಿಳಿಸುತ್ತ ಸತ್ಯಾಸತ್ಯತೆಗಳನ್ನು ಅರಿಯುವಲ್ಲಿ ಸಹಾಯಕವಾಗಿವೆ.