ಇಂದಿನ ವಾಣಿಜ್ಯಮಯ ಜಗತ್ತಿನ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಂದನ್ನೂ ವ್ಯಾವಹಾರಿಕವಾಗಿ ನೋಡುವ ದೃಷ್ಟಿ ಇರುವುದು ಎಷ್ಟು ಸಹಜವೋ, ಪ್ರಯೋಗಾಲಯದಲ್ಲಿ ಪ್ರಾಯೋಗಿಕವಾಗಿ ಫಲಿತಾಂಶಗಳನ್ನು ಕಂಡು ಹಿಡಿಯುವುದರಲ್ಲಿ ಸಾರ್ಥಕತೆಯನ್ನು ಕಾಣುತ್ತಿರುವುದೂ ಅಷ್ಟೇ ಸಹಜ. ಯಾರಾದರೂ ಇದಕ್ಕೆ ಮೀರಿದ ವಿಷಯಗಳನ್ನು ಹೇಳಿದರೆ ಅದನ್ನು ಉದಾಸೀನ ಭಾವದಿಂದ ನೋಡುತ್ತಾರೆ. ಅದಕ್ಕೆ ಅನೇಕ ಕಾರಣಗಳಿದ್ದರೂ ಮುಖ್ಯವಾಗಿ ಮಾನವ ತನ್ನ ಪರಿಸರಕ್ಕೆ ಮತ್ತು ಅವನ ಅವಶ್ಯಕತೆಗಳಿಗೆ ತನ್ನನ್ನು ಸೀಮಿತಗೊಳಿಸಿಕೊಂಡು ಅಷ್ಟಕ್ಕೆ ಬದುಕುತ್ತಿರುವುದು ಒಂದೆಡೆಯಾದರೆ, ಹುರುಳಿಲ್ಲದ ಅನೇಕರು ಕೇವಲ ಜನಬಲ ಮತ್ತು ಹಣಬಲದೊಂದಿಗೆ ಪ್ರಚಾರ ಗಿಟ್ಟಿಸಿದ್ದು, ವಿದ್ಯಾವಂತ ಸಮುದಾಯವನ್ನು ಮೋಸಗೊಳಿಸುತ್ತಿರುವುದು, ಅವರನ್ನು ಮನವರಿಕೆ ಮಾಡಲು ಆಗದೆ ಇರುವುದು ಹಾಗೂ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗದೆ ಇರುವುದು ಇನ್ನೊಂದು ಮುಖ್ಯ ಕಾರಣ.

ಅಲ್ಲದೆ ಕಾಲಚಕ್ರದ ಸುಳಿಯಲ್ಲಿ ಕೆಲವು ವಿಷಯ ಹಾಗೂ ಶಬ್ದಗಳು ಅರ್ಥ ವ್ಯಾಪ್ತಿ ಹಾಗೂ ಮೌಲ್ಯ ವ್ಯಾಪ್ತಿಯನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಮತ್ತು ಭರತಮುನಿಯ ಕಾಲಕ್ಕೇ ಪ್ರಬುದ್ಧತೆಯನ್ನು ತಲುಪಿದ್ದ ನೃತ್ಯ ನಾಟ್ಯಗಳ ಮೌಲ್ಯಗಳು ಸವಕಲಾಗಿ ಅವು ಕೇವಲ ಮನರಂಜನಾ ಮಟ್ಟಕ್ಕೆ ಮೀಸಲಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ನೃತ್ಯ ಶಿಕ್ಷಣ ಪದ್ಧತಿಯಲ್ಲಿ ಅಡಕವಾಗಿರುವ ಸಾರ್ವತ್ರಿಕ ಹಾಗೂ ಶೈಕ್ಷಣಿಕ ಮುಂತಾದ ಮೌಲ್ಯಗಳ ಗುಣಾವಕೋನವನ್ನು ಅಮೂಲಾಗ್ರವಾಗಿ ಚರ್ಚಿಸುವ ಅಗತ್ಯ ಇರುವುದರಿಂದ ಮುಖ್ಯವಾಗಿ ಈ ಲೇಖನದಲ್ಲಿ ಶಾಸ್ತ್ರೀಯ ನೃತ್ಯ ಎಂದರೇನು, ಅದರ ಪರಿಭಾಷೆ, ಮೌಲ್ಯಗಳು, ಅಗತ್ಯ, ಶಿಕ್ಷಣ ಪದ್ಧತಿ, ಬಹುಮುಖ ಪ್ರಯೋಜಕತ್ವ, ಶಾರೀರಿಕ, ಬೌದ್ಧಿಕ, ಮಾನಸಿಕ, ಸಾಮಾಜಿಕ, ಶೈಕ್ಷಣಿಕ, ಸಮಕಾಲಿಕ ಮೌಲ್ಯಗಳು, ಇಂದಿನ ಜನಾಂಗ ಸ್ಪಂದಿಸದೇ ಇರಲು ಕಾರಣ ಹಾಗೂ ಪರಿಹಾರ ಇತ್ಯಾದಿಗಳನ್ನು ಚರ್ಚಿಸಲಾಗಿದೆ.

ಶಾಸ್ತ್ರೀಯ ನೃತ್ಯ

ಶಾಸ್ತ್ರ ಎಂದರೆ ಸೈನ್ಸ್ ಮತ್ತು ಶಾಸ್ತ್ರೀಯ ಎಂದರೆ ಸೈನ್ಟಿಫಿಕ್ ಎಂದು ಅರ್ಥೈಸಬಹುದು. ಅಲ್ಲದೆ ಡಿಸಿಪ್ಲಿನ್ಟ್ (ಶಿಸ್ತುಬದ್ಧ) ಎಂಬ ಅರ್ಥದಲ್ಲಿಯೂ ಇದನ್ನು ಪ್ರಯೋಗಿಸಿದ್ದಾರೆ. ಈ ಎರಡು ಅರ್ಥಗಳೂ ನೃತ್ಯಕ್ಕೆ ಸರಿಯಾಗಿವೆ. ಶಾಸ್ತ್ರೀಯ ನೃತ್ಯವನ್ನು ಕ್ರಮಬದ್ಧವಾಗಿ ಬಹಳ ಶಿಸ್ತಿನಿಂದ ಕಲಿಯಬೇಕಾಗುತ್ತದೆ. ಈ ರೀತಿ ಕಲಿಕೆಯಿಂದ ಶರೀರ, ಮನಸ್ಸುಹಾಗೂ ಮೆದುಳಿನ ಶಿಸ್ತುಬದ್ಧವಾದ ಬೆಳವಣಿಗೆಗೆ ಸಹಕಾರಿಯಾಗಿ ಮನುಷ್ಯನಿಗೆ ಶಾರೀರಿಕ ಹಾಗೂ ಮಾನಸಿಕವಾಗಿ ವೈಜ್ಞಾನಿಕ ಫಲಿತಾಂಶಗಳು ದೊರೆಯುತ್ತವೆ. ಈ ಕಾರಣಗಳಿಂದ ಇದನ್ನು ಶಾಸ್ತ್ರೀಯ ನೃತ್ಯ ಎಂದು ಕರೆಯುವುದು ಸಮಂಜಸವಾಗಿದೆ.

1.    ಸುಖ ದುಃಖ ಸಮನ್ವಿತವಾದ ಲೋಕದ ವ್ಯವಹಾರ, ಸ್ವಭಾವಗಳನ್ನು ಅಂಗಾದಿ ಅಭಿನಯಗಳಿಂದ ವ್ಯಕ್ತಪಡಿಸುವುದೇ ನಾಟ್ಯ, ನೃತ್ಯ ಎಂದು ಶಾಸ್ತ್ರೀಯ ನೃತ್ಯಕ್ಕೆ ನಿರ್ವಚನವನ್ನು ಹೇಳಿ, ವೇದ ವಿದ್ಯೆಯೇ ಕ್ರೀಡೆಯಾಗಿ, ರಂಜನೆಯಾಗಿ, ದೃಶ್ಯ ಶ್ರಾವ್ಯತೆಯಿಂದ ಕೂಡಿರುವುದೇ ನಾಟ್ಯ ಎಂದು    ಭರತಮುನಿಯು ನಾಟ್ಯಶಾಸ್ತ್ರದಲ್ಲಿ ಹೇಳಿದ್ದಾರೆ.

2.    “ಭರತಂ ಕೋವಿದಮ್” ನಾಟ್ಯವು ಒಂದೆಡೆ ರಂಜನೆಯನ್ನು ಇನ್ನೊಂದೆಡೆ ವ್ಯವಹಾರ ಜ್ಞಾನವನ್ನು ಒದಗಿಸಲು ಸಾಧನವಾಗಿದೆ”.

3.    ನಾಟ್ಯ ಒಂದು ಪ್ರಯೋಗ ಕಲೆ.

4.    ನಾಟ್ಯವು ಹೇಡಿಗಳಲ್ಲಿ ಧಾರ್ಷ್ಟ್ಯವನ್ನು ಶೂರರಿಗೆ ಉತ್ಸಾಹವನ್ನು, ಅಜ್ಞಾನಿಗಳಿಗೆ ಜ್ಞಾನವನ್ನು ಮತ್ತು ವಿದ್ವಾಂಸರಿಗೆ ವಿದ್ವತ್ತನ್ನು ಕಲ್ಪಿಸುವ       ಸಾಧನವಾಗಿದೆ.

5.    ಪ್ರಾಚೀನ ನಾಟ್ಯವು ವೇದ ಮೂಲವಾದ್ದರಿಂದ ಅಪೌರುಷವೇ ಸರಿ.

6.    ಎಲ್ಲಾ ರೀತಿಯ ಜೀವಿಗಳಿಂದ ತುಂಬಿರುವ ಈ ಪ್ರಪಂಚಕ್ಕೆ ಹೇಳಿ ಮಾಡಿಸಿದಂತೆ ಇರುವುದು ನಾಟ್ಯ ಒಂದೇ.

7.    ನಾಟ್ಯವು ಬಹಳ ಪ್ರಬಲವಾದ ಮಾಧ್ಯಮ.

8.    ನೃತ್ಯವು ಒಂದು ಸಾರ್ವತ್ರಿಕವಾದ ಭಾಷೆ.

9.    ನೃತ್ಯವು ದೈವಿಕ.

10.  ನೃತ್ಯವು ಪ್ರಪಂಚವನ್ನು ಗುಣಾತ್ಮಕದೆಡೆಗೆ ಒಯ್ಯುವ ಒಂದು ಕ್ರಿಯಾತ್ಮಕ ಸಾಧನ.

11.  ನಾಟ್ಯದಲ್ಲಿ ಇಡೀ ಪ್ರಪಂಚವೇ ಅಡಗಿದೆ.

ಬದಲಾಗುತ್ತಿರುವ ಮಾನವೀಯ ಮೌಲ್ಯಗಳಿಗೆ ವೈಜ್ಞಾನಿಕವಾಗಿ ಈ ಪ್ರಶಂಸೆಗಳನ್ನು ವಿಶ್ಲೇಷಿಸಿ, ಇಂದಿನ ಸಮಾಜದ ಜನಜೀವನದಲ್ಲಿ ನೃತ್ಯ ಶಿಕ್ಷಣದ ಪ್ರಾಮುಖ್ಯತೆ ಅರಿವನ್ನು ಮೂಡಿಸಬೇಕಾಗಿದೆ.

ಈ ಪ್ರಶಂಸೆಯಲ್ಲಿ ಅಡಗಿರುವ ಮೌಲ್ಯಗಳು ಹುಟ್ಟಿನಿಂದ ಸಾಯುವ ತನಕ, ಪ್ರತಿ ಶತಮಾನದಲ್ಲಿಯೂ, ಜೀವನದುದ್ದಕ್ಕೂ ಮತ್ತು ಎಲ್ಲಾ ಕಾಲದಲ್ಲಿಯೂ ತಮ್ಮ ಬಹುಮುಖ ಪ್ರಯೋಜಕತ್ವದಿಂದ ಮಾನ್ಯತೆ ಪಡೆದಿರುವುದರಿಂದ ಇವುಗಳು ಸರ್ವಕಾಲಿಕವಾದ ಮೌಲ್ಯಗಳಾಗಿವೆ.

ವ್ಯಕ್ತಿ-ಸಮುದಾಯ-ಸಮಾಜ ಹಾಗೂ ಅದರ ಎಲ್ಲಾ ವರ್ಗಗಳು ಈ ವಿದ್ಯೆಯನ್ನು ಕರಗತ ಮಾಡಿಕೊಂಡಲ್ಲಿ ಯಾವುದೇ ತಾರತಮ್ಯ ಇಲ್ಲದೆ ನೃತ್ಯ ಶಿಕ್ಷಣದ ಫಲಿತಾಂಶಗಳು ಏಕರೀತಿಯಾಗಿ ಫಲಿಸುವುದರಿಂದ ಇದರ ಮೌಲ್ಯಗಳು ಸಾರ್ವತ್ರಿಕವಾಗಿವೆ.

ಶಾಸ್ತ್ರೀಯ ನೃತ್ಯ ಶಿಕ್ಷಣದ ಅಗತ್ಯ

ಮಾನವನಿಗೆ ಸಮರ್ಥವಾಗಿ ಈ ಬದುಕಿನಲ್ಲಿ ಮುನ್ನಡೆಯಲು ಶಾರೀರಿಕ, ಬೌದ್ಧಿಕ ಹಾಗೂ ಮಾನಸಿಕ ಎಂಬ ಮೂರು ರೀತಿಯ ಸ್ವಶಕ್ತಿಗಳ ಅಗತ್ಯವಿದೆ. ಈ ಮೂರು ಶಕ್ತಿಗಳನ್ನು ಮಾನವ ಸ್ವತಃ ಸಾಧಿಸಿ ಸಿದ್ಧಿಸಿಕೊಳ್ಳಬೇಕಷ್ಟೆ. ಇವುಗಳಲ್ಲಿ ಯಾವುದಾದರೂ ಒಂದು ರೀತಿಯ ಶಕ್ತಿ ಕುಂಠಿತಗೊಂಡರೂ ಬದುಕಿನಲ್ಲಿ ನಿರೀಕ್ಷಿತ ಫಲಿತಾಂಶಗಳೂ ದೊರೆಯಲಾರವು. ಕೆಲವರಲ್ಲಿ ಶಾರೀರಿಕ ಶಕ್ತಿ ಅಧಿಕವಿದ್ದು, ಬುದ್ಧಿಶಕ್ತಿ ಕಡಿಮೆ ಇದ್ದರೆ ಕೆಲವರಲ್ಲಿ ಬುದ್ಧಿಶಕ್ತಿಯು ಹೆಚ್ಚಾಗಿದ್ದು, ಶಾರೀರಿಕವಾಗಿ ದುರ್ಬಲತೆ ಇರುತ್ತದೆ. ಇನ್ನು ಕೆಲವರಲ್ಲಿ ಈ ಎರಡೂ ಶಕ್ತಿಗಳಿದ್ದರೂ ಮಾನಸಿಕವಾಗಿ ದುರ್ಬಲರಾಗಿರುವುದನ್ನು ನಾವು ದಿನನಿತ್ಯದ ಬದುಕಿನಲ್ಲಿ ಕಾಣುತ್ತೇವೆ. ಈ ಶಕ್ತಿಗಳು ಏಕಕಾಲದಲ್ಲಿ ಪೂರ್ಣರೂಪದಲ್ಲಿ ಶಕ್ತಿಯುತವಾಗಿ ವಿಕಾಸ ಹೊಂದಿ ಮಾನವನ ಸರ್ವತೋಮುಖ ವಿಕಾಸ ಆಗಬೇಕಾಗಿದಲ್ಲಿ ಹಿಂದೆ ರೂಢಿಯಲ್ಲಿದ್ದ ಶಾಸ್ತ್ರೀಯ ನೃತ್ಯ ಶಿಕ್ಷಣ ಪದ್ಧತಿಯನ್ನು ಪುನರನುಷ್ಠಾನಕ್ಕೆ ತರಬೇಕಾಗಿದೆ. ಈ ಶಕ್ತಿಗಳನ್ನು ಹಣ ತೆತ್ತಾಗಲಿ, ವೈದ್ಯಕೀಯ ಮೂಲಗಳಿಂದಾಗಲಿ, ಎರವಲು ಪಡೆದಾಗಲಿ ಮತ್ತು ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸಿಯಾಗಲಿ ಪಡೆಯಲು ಸಾಧ್ಯವಿಲ್ಲ. ಬಹುಶಃ ಇದೇ ದೃಷ್ಟಿಯಿಂದ ನಮ್ಮ ಪೂರ್ವಾಚಾರ್ಯರು ಭರತನಾಟ್ಯ ಶಿಕ್ಷಣ ಪದ್ಧತಿಯನ್ನು ರೂಪಿಸಿ ಅದರ ಕಲಿಕೆಯ ಒಂದು ಹಂತವನ್ನು “ಮಾರ್ಗ” ಎಂದು ವ್ಯವಹರಿಸಿದ್ದಾರೆ. ಅಂದರೆ ಈ “ಮಾರ್ಗ”ದಲ್ಲಿ ಮನುಷ್ಯ ಸಾಗಿದರೆ ಸಫಲನಾಗಬಹುದು ಎಂದಿರಬೇಕು. ಹುಟ್ಟಿದ ಎಲ್ಲರಿಗೂ ತಮ್ಮ ಜೀವನದಲ್ಲಿ ಸಾಫಲ್ಯತೆಯನ್ನು ಪಡೆಯಬೇಕಾಗಿರುವುದರಿಂದ ಇಂದಿನ ಜನಾಂಗಕ್ಕೆ ಶಾಸ್ತ್ರೀಯ ನೃತ್ಯ ಶಿಕ್ಷಣ ಪದ್ಧತಿಯ ಅಗತ್ಯ ಬಹಳವೇ ಇದೆ.

ಶಾಸ್ತ್ರೀಯ ನೃತ್ಯದ ಬಹುಮುಖ ಪ್ರಯೋಜಕತ್ವವನ್ನು ದೈಹಿಕ, ಬುದ್ಧಿ ಹಾಗೂ ಮೆದುಳಿಗೆ ಸಂಬಂಧಿಸಿದಂತೆ ಬೌದ್ಧಿಕ, ಮಾನಸಿಕ, ಶೈಕ್ಷಣಿಕ, ಸಾಮಾಜಿಕ, ಸಮಾಕಾಲೀಕ ಎಂದು ವಿಭಾಗಿಸಬಹುದು.

ಪ್ರಯೋಜನಗಳು:

ಕಲೆಯು ಶಾಸ್ತ್ರೀಯವಾದಾಗ ರಸೇತರ, ರಸಾತ್ಮಕ, ಲೌಕಿಕ, ಅಲೌಕಿಕ, ತನ್ಮೂಲಕ ಅಧ್ಯಾತ್ಮಿಕ ಎಂದು ಹಲವಾರು ಘಟ್ಟಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಯೋಜನಗಳನ್ನು ನೀಡುತ್ತದೆ. ಯಾವ ನೃತ್ಯವು ಮನರಂಜನೆಗಷ್ಟೇ ಮೀಸಲಾಗದೆ ಜೀವೋತ್ಕರ್ಷತೆಯ ಕಡೆಗೆ ಏರಿಸಿ ತಾತ್ವಿಕ ದರ್ಶನ ದೊರಕಿಸಿಕೊಡುತ್ತದೋ ಅದು ಶಾಸ್ತ್ರೀಯ ಕಲೆ ಎಂದೆನಿಸುತ್ತದೆ. ರಸಾತ್ಮಕ ಪ್ರಯೋಜನಗಳು ರಸೇತರ ಪ್ರಯೋಜನಗಳಿಂದ ದೊರಕುವ ಸುಭದ್ರ ತಳಹದಿ ಮೇಲೆ ನಿರ್ಧರಿತಗೊಳ್ಳುವುದರಿಂದ ಇಲ್ಲಿ ರಸೇತರ ಪ್ರಯೋಜನಗಳನ್ನು ಚರ್ಚಿಸಲಾಗಿದೆ.

ರಸೇತರ ಪ್ರಯೋಜನಗಳನ್ನು ಶಾರೀರಿಕ, ಬೌದ್ಧಿಕ ಹಾಗೂ ಮಾನಸಿಕ ಎಂದು ಮೂರು ಮುಖ್ಯ ಘಟಕಗಳಲ್ಲಿ ಗುರಿತಿಸಬಹುದು. ನಂತರ ಸಾಮಾಜಿಕ, ಶೈಕ್ಷಣಿಕ ಹಾಗೂ ಸರ್ವಕಾಲಿಕ ಎಂದು ವಿಭಜಿಸಿ ನೃತ್ಯ ಶಿಕ್ಷಣದ ಪ್ರಯೋಜನಗಳನ್ನು ಚರ್ಚಿಸಲಾಗಿದೆ.

ದೈಹಿಕ:

ಶಾಸ್ತ್ರೀಯ ನೃತ್ಯ ಶಿಕ್ಷಣದಲ್ಲಿ ಪ್ರಾರ್ಥನೆಯ ನಂತರ ಶರೀರವನ್ನು ಹದಗೊಳಿಸುವ ಕೆಲವು ವ್ಯಾಯಾಮಗಳನ್ನು (ವಾರ್ಮ್ ಆಫ್ ಎಕ್ಸರ್‌ಸೈಸಸ್) ಕಡ್ಡಾಯವಾಗಿ ಮಾಡಬೇಕು.

ಈ ಅಂಗಸಾಧನೆಗಳು ಶರೀರವನ್ನು ಹತೋಟಿಯಲ್ಲಿ ಇಡಲು, ಶರೀರವನ್ನು ಹದಗೊಳಿಸಿ ನೃತ್ಯಕ್ಕೆ ಬೇಕಾದ ಲಾಲಿತ್ಯವನ್ನು ಪಡೆಯಲು ಪ್ರಯೋಜನಕಾರಿಯಾಗಿದೆ. ಈ ಅಂಗಸಾಧನೆಯ ಜೊತೆಗೆ ನೃತ್ಯದ ಮೂಲಾಂಶ, ಮುಖ್ಯಾಂಶಗಳಾದ ಮತ್ತು ನೃತ್ಯದ ಆಧಾರಭೂತ ವಿನ್ಯಾಸಗಳಾದ ಅಡವುಗಳ ಶಿಕ್ಷಣವನ್ನು ಕೊಡಲಾಗುತ್ತದೆ. ಈ ರೀತಿಯ ಶಿಕ್ಷಣವು ಮೂರು ಕಾಲ ಹಾಗೂ ತಾಳಗಳ ಐದು ಜಾತಿಗಳಲ್ಲಿಯೂ ಸುಮಾರು ನಾಲ್ಕು ವರ್ಷಗಳಷ್ಟು ಕಾಲಾವಧಿಯಲ್ಲಿ ನಡೆಯುತ್ತದೆ. ನಾಲ್ಕು ವರ್ಷಗಳ ಕಾಲದಲ್ಲಿ ಎಲ್ಲಾ ರೀತಿಯ ಅಡವುಗಳ ಶಿಕ್ಷಣ ಮುಗಿಸಿ ಚಿಕ್ಕ ಚಿಕ್ಕ ಜತಿಗಳನ್ನು ಚಿಕ್ಕ ಚಿಕ್ಕ ನೃತ್ಯಬಂಧಗಳನ್ನು ಕಲಿಸುತ್ತಾರೆ. ಅಷ್ಟರಲ್ಲಿ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆಗಳ ಕಾಲ ನರ್ತಿಸುವ ಕ್ಷಮತೆಯನ್ನು ಪಡೆದಿರುತ್ತಾರೆ. ನಂತರ ಹಿರಿಯ ಸ್ತರದ ನೃತ್ಯ, ನೃತ್ಯಬಂಧಗಳನ್ನು (ಸುಮಾರು ಎರಡು ಗಂಟೆ ರಂಗದ ಮೇಲೆ ಪ್ರದರ್ಶಿಸುವಷ್ಟು) ಕಲಿಸಲಾಗುತ್ತದೆ. ಅಂದರೆ ವಿದ್ಯಾರ್ಥಿಗಳು ಸುಮಾರು ನಾಲ್ಕು ಗಂಟೆಗಳಷ್ಟು ಕಾಲ ನರ್ತಿಸುವ ಕ್ಷಮತೆಯನ್ನು ಪಡೆಯುತ್ತಾರೆ.

ದೈಹಿಕವಾಗಿ ದೊರೆಯುವ ಪ್ರಯೋಜನಗಳನ್ನು ಕೆಳಕಂಡಂತೆ ಪಟ್ಟಿ ಮಾಡಬಹುದು.

1.    ಅಂಗಾಂಗಗಳ ನೀಳ, ಸುಂದರ ಹಾಗೂ ಸದೃಢ ಬೆಳವಣಿಗೆಯಿಂದ ನೃತ್ಯಾಭ್ಯಾಸಿಗಳು ಸುಂದರವಾದ ವ್ಯಕ್ತಿತ್ವವನ್ನು ಪಡೆಯುತ್ತಾರೆ.

2.    ಸತತ ನೃತ್ಯಾಭ್ಯಾಸದಿಂದ ದೇಹದಲ್ಲಿ ಅತಿಶ್ರಮ ತಾಳುವ ಶಕ್ತಿ ಹೆಚ್ಚಿಸುತ್ತದೆ.

3.    ಅತಿಶ್ರಮ ತಾಳುವ ಶಕ್ತಿ ಹೆಚ್ಚುವುದರಿಂದ ಶರೀರದಲ್ಲಿ ಪ್ರತಿರೋಧಕ ಶಕ್ತಿ (ರೆಸಿಸ್ಟೆನ್ಸ್ ಪವರ್) ಹೆಚ್ಚಾಗುತ್ತದೆ.

4.    ಶರೀರದ ಕೆಲವು ನ್ಯೂನತೆಗಳಾದ ಚಪ್ಪಟೆ ಪಾದ, ಬಗ್ಗಿದ ಕಾಲು, ಡೊಂಕಾದ ಮೊಣಕೈಗಳು, ಸೊಟ್ಟ ನಿಲುವು, ಗೂನುಬೆನ್ನು, ಮುಖದ ವಿಕಾರತೆ       ಹಾಗೂ ವಕ್ರತೆ ಇತ್ಯಾದಿಗಳು ಸತತ ಹಾಗೂ ಸರಿಯಾದ ಶಾಸ್ತ್ರೀಯ ನೃತ್ಯಾಭ್ಯಾಸದಿಂದ ಕ್ರಮವಾಗಿ ಸರಿಹೊಂದುತ್ತವೆ.

5.    ಹಸಿವು ಇಲ್ಲದೆ ಇರುವಿಕೆ ಮತ್ತು ಬಲಹೀನತೆಯನ್ನು ನೃತ್ಯಾಭ್ಯಾಸದಿಂದ ನಿವಾರಿಸಿಕೊಳ್ಳಬಹುದು.

6.    ಹಿಂದೆ ಹೇಳಿದಂತೆ ದೇಹದಲ್ಲಿ ಅತಿಶ್ರಮ ತಾಳುವ ಶಕ್ತಿ ಹೆಚ್ಚುವುದರಿಂದ, ರೋಗ ತಡೆಗಟ್ಟುವ ಶಕ್ತಿಯೂ ಹೆಚ್ಚಿ, ನೆಗಡಿ, ಕೆಮ್ಮು, ನಿಶ್ಯಕ್ತಿ, ಜ್ವರ, ಶ್ವಾಸನಾಳದ ತೊಂದರೆಗಳು ದೂರವಾಗಿ, ಸುಮಾರು ಶೇ. 80ರಷ್ಟು ದೇಹದ ಕಾಯಿಲೆಗಳಿಂದಾಗುವ ನೋವಿನಿಂದ ಮುಕ್ತಿ ಹೊಂದಬಹುದು.

7.    ರೋಗನಿರೋಧಕ ಶಕ್ತಿ ಶರೀರದಲ್ಲಿ ಹೆಚ್ಚುವುದರಿಂದ ಸೋಂಕು ರೋಗಗಳಿಗೆ ಬಲಿಯಾಗುವ ಸಂಭವ ಕಡಿಮೆಯಾಗುತ್ತದೆ.

8.    ಹಲವಾರು ಗಂಟೆಗಳಷ್ಟು ಕಾಲ ನರ್ತಿಸುವುದರಿಂದ ಬೆವರು ಸುರಿದು, ಬೆವರಿನ ಮೂಲಕ ದೇಹದಲ್ಲಿ ಉತ್ಪನ್ನವಾಗುವ ವಿಷಪೂರಿತ ಅಂಶಗಳು ಹೊರಬಂದು ದೇಹವು ಶುದ್ಧಿಯಾಗುತ್ತದೆ.

9.    ಯುವಕರು ಮತ್ತು ಹಿರಿಯರಲ್ಲಿ ವಯಸ್ಸಿಗೆ ಸಹಜವಾಗಿ ಮಾಡಬೇಕಾಗಿರುವ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ದೈಹಿಕ ಶ್ರಮವನ್ನು ತಾಳುವ ಶಕ್ತಿಯು ಶಾಸ್ತ್ರೀಯ ನೃತ್ಯಾಭ್ಯಾಸದಿಂದ ದೊರೆಯುತ್ತದೆ.

10.  ಯುವಕರು ತಮ್ಮ ಬಿಡುವಿನ ವೇಳೆಯಲ್ಲಿ ಅನವಶ್ಯಕವಾಗಿ ಹೊರಗೆ ಕಳೆಯುತ್ತಾ ಮಾದಕ ವಸ್ತುಗಳ ಸೇವನೆಗೂ, ಕೆಟ್ಟ ಸಹವಾಸಗಳಿಗೂ ಬಲಿಯಾಗುವುದು ತಪ್ಪುತ್ತದೆ.

11.  ವಯಸ್ಕರ ಮತ್ತು ಹಿರಿಯರು ಅನಾಯಾಸವಾಗಿ ಹೆಚ್ಚುವ ದೇಹದ ತೂಕವನ್ನು ಹತೋಟಿಯಲ್ಲಿ ಇಟ್ಟುಕೊಂಡು ದೇಹಸೌಂದರ್ಯದ ಜೊತೆಗೆ ಗಾಂಭೀರ್ಯತೆಯನ್ನು ಕಾಪಾಡಿಕೊಳ್ಳಬಹುದು.

12.  ನೃತ್ಯಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಇಳಿವಯಸ್ಸಿನಲ್ಲಿ ಹೆಚ್ಚಾಗಿ ಕಾಡುವ ಬಲಹೀನತೆ, ನಿದ್ರಾಹೀನತೆ, ಆಲಸ್ಯ, ಜಡತ್ವ,          ಕೈಕಾಲುಗಳ ನೋವು, ಹಸಿವು, ಇಲ್ಲದಿರುವಿಕೆ ಇತ್ಯಾದಿಗಳನ್ನು ವಯೋವೃದ್ಧರು ಪರಿಹರಿಸಿಕೊಳ್ಳಬಹುದು.

13.  ದೀರ್ಘಕಾಲದ ಕಾಯಿಲೆಗಳಾದ ರಕ್ತದೊತ್ತಡ, ಹೃದಯಬೇನೆ, ಶ್ವಾಸಕೋಶದ ಕಾಯಿಲೆಗಳಿಂದಲೂ ಮುಕ್ತಿ ಪಡೆಯಬಹುದು.

ಹೀಗೆ ಮಕ್ಕಳಿಂದ ವಯೋವೃದ್ಧರವರೆಗೂ ದೈಹಿಕವಾಗಿ ಇಷ್ಟೊಂದು ಪ್ರಯೋಜನಗಳನ್ನು ಕಲ್ಪಿಸುವ ಶಾಸ್ತ್ರೀಯ ನೃತ್ಯದ ಪ್ರಶಂಸೆಯನ್ನು ಎಷ್ಟು       ಮಾಡಿದರೂ ಸಾಲದು.

ಬೌದ್ಧಿಕ

ಬುದ್ಧಿ ಹಾಗೂ ಮೆದುಳಿನ ಚಟುವಟಿಕೆಗಳನ್ನು ಬೌದ್ಧಿಕ ಎಂದು ಪರಿಗಣಿಸಿ, ಬೌದ್ಧಿಕವಾಗಿ ಸಿಗುವ ಪ್ರಯೋಜನಗಳನ್ನು ಕ್ರೂಢೀಕರಿಸುವ ಮೊದಲು ನೃತ್ಯಶಿಕ್ಷಣ ವಿಧಾನವನ್ನು ಅರಿಯಬೇಕು.

ಕುತ್ತಿಗೆ, ಕಣ್ಣುಗಳ ವಿನ್ಯಾಸ, ಮುಖಭಾವ, ಹಸ್ತಗಳ ವಿನ್ಯಾಸ, ವೈವಿಧ್ಯಮಯ ಹೆಜ್ಜೆ ವಿನ್ಯಾಸ, ಸಂಗೀತದ ಹಿನ್ನೆಲೆಗೆ ಹಾಗೂ ಸಾಹಿತ್ಯದ ಅರ್ಥಕ್ಕೆ ತಕ್ಕಂತೆ ಏಕಕಾಲದಲ್ಲಿ ನರ್ತಿಸಬೇಕಾಗುತ್ತದೆ. ಈ ರೀತಿಯ ಅಭ್ಯಾಸವನ್ನು ಸಿದ್ಧಿಸಿಕೊಳ್ಳಲು ಕ್ರಮಬದ್ಧವಾದ ಶಿಕ್ಷಣ ಪದ್ಧತಿಯೂ ಅಗತ್ಯ. ಕ್ರಮಬದ್ಧವಾದ ಶಿಕ್ಷಣದಿಂದ ಒಂದೊಂದು ಅವಯವಗಳು ಶಾಸ್ತ್ರೀಯ ಚಲನೆಗಳನ್ನು ಕಲಿತು-ಕಲಿತಿರುವುದರ ಜೊತೆಗೆ ಇನ್ನೊಂದನ್ನು ಸೇರಿಸುತ್ತಾ ಹೋಗುತ್ತೇವೆ. ಹೀಗೆ ಹಲವಾರು ವಿನ್ಯಾಸ ಹಾಗೂ ವಿಷಯಗಳ ಅಭಿವ್ಯಕ್ತಿಯ ಏಕಕಾಲದಲ್ಲಿ ಮಾಡಲು ಸಿದ್ಧಿಸುತ್ತದೆ. ಈ ರೀತಿಯ ಶಿಕ್ಷಣ ಕ್ರಮದಲ್ಲಿ ಅಭ್ಯಾಸ ಮಾಡುವುದರ ಕಡೆಗೂ ಕಲಿಯುವುದರ ಕಡೆಗೂ ಏಕಕಾಲದಲ್ಲಿ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಕಲಿಯುವವರು ಸುಮಾರು 13ಕ್ಕೂ ಹೆಚ್ಚಿನ ವಿಷಯಗಳ ಮೇಲೆ ಏಕಕಾಲದಲ್ಲಿ ಏಕಾಗ್ರಚಿತ್ತವನ್ನು ಪಡೆಯತ್ತಾರೆ. ಇದರಿಂದ ಏಕಾಗ್ರತೆ ಹೆಚ್ಚಿ ಮನಸ್ಸನ್ನು ಒಂದೇ ಸಮನಾಗಿ ಹಲವಾರು ವಿಷಯಗಳ ಮೇಲೆ ಬಹಳ ಕಾಲ ಸತತವಾಗಿ ನಿಲ್ಲಿಸಲು ಸಾಧ್ಯವಾಗುತ್ತದೆ.

ಈ ರೀತಿಯ ಶಾಸ್ತ್ರೀಯ ನೃತ್ಯಾಭ್ಯಾಸದಿಂದ ಮೆದುಳಿನ ಸರ್ವತೋಮುಖ ವಿಕಾಸವಾಗುತ್ತದೆ. ಮೆದುಳಿನ ಎಲ್ಲಾ ಆಯಾಮಗಳಿಗೂ ವ್ಯಾಯಾಮ ದೊರಕುವುದರಿಂದ ಮೆದುಳಿನ ಪೂರ್ಣವಿಕಾಸ ಸಾಧ್ಯವಾಗುತ್ತದೆ. ಮೆದುಳಿನ ಅಂತರ್ಗತ ಶಕ್ತಿಯನ್ನು ಬುದ್ಧಿಶಕ್ತಿ ಎಂದು ಕರೆಯಲಾಗುವುದು. ಮೆದುಳನ್ನು ಒಂದು ಅಂಗವೆಂದು ಪರಿಗಣಿಸಿದರೆ ಅಂಗಗಳು ಶಕ್ತಿಯನ್ನು ಪಡೆಯುವಂತೆ ಮೆದುಳು ಸಹ ಶಕ್ತಿಯುತವಾಗುತ್ತದೆ. ಇದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಬುದ್ಧಿಗೆ ಸಂಬಂಧಿಸಿದ ಬೌದ್ಧಿಕ ವಿಕಾಸವಾಗಲು ಮನುಷ್ಯನ ಮೆದುಳಿನ ಎಲ್ಲಾ ಕೋಶಗಳು ಸದೃಢಗೊಂಡು ಕ್ರಿಯಾಶೀಲವಾಗಬೇಕು. ಈ ಕ್ರಿಯಾಶೀಲತೆಯ ವಿಕಾಸಕ್ಕೆ ಮೇಲೆ ಹೇಳಿದ ನೃತ್ಯಶಿಕ್ಷಣ ಪದ್ಧತಿಯು ವರವಾಗಿದೆ.

ಶಾಸ್ತ್ರೀಯ ನೃತ್ಯದ ಕಲಿಕೆ ಹಾಗೂ ಅಭ್ಯಾಸದಲ್ಲಿನ ಪ್ರಮುಖ ಅಂಶವಾದ ಈ ಒಂದು ಕ್ರಮ ಅಥವಾ ವಿಧಾನದಿಂದ ಮಾನವನಿಗೆ ಬೌದ್ಧಿಕವಾಗಿ ಆಗುವ ಪ್ರಯೋಜನಗಳನ್ನು ಈ ರೀತಿ ಹೇಳಬಹುದು.

1.    ಮೆದುಳಿನ ಶಕ್ತಿ ಹೆಚ್ಚುವುದರಿಂದ ಸಂವೀಕ್ಷಣಾಶಕ್ತಿ ಎಂದರೆ ಅತ್ಯಂತ ಗಮನವಿಟ್ಟು ಒಂದನ್ನೇ ವೀಕ್ಷಿಸುವ ಶಕ್ತಿ ಹೆಚ್ಚುತ್ತದೆ. ಕಾರಣ ನೃತ್ಯ ಕಲಿಯುವಾಗ ಯಾವ ರೀತಿ ನೃತ್ಯ ಕಲಿಸುತ್ತಿದ್ದಾರೆ ಎಂಬುದನ್ನು ಗಮನವಿಟ್ಟು ನೋಡಿದರೇನೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯ.ಹೀಗೆ ಸಂವೀಕ್ಷಣಾಶಕ್ತಿಯು ಬಲವಾಗಿ ವರ್ಧಿಸುತ್ತದೆ.

2.    ಗಮನವಹಿಸಿ ನೋಡಿದ್ದನ್ನು ಗ್ರಹಿಸುವ ಶಕ್ತಿ (ಗ್ರಾಸ್ಪಿಂಗ್ ಕೆಪಾಸಿಟಿ)ಯನ್ನು ಮೆದುಳು ಪಡೆಯುತ್ತದೆ. ಬುದ್ಧಿಶಕ್ತಿ ಹೆಚ್ಚಾಗುವುದರಿಂದ ಖಚಿತವಾದ ಅರ್ಥಗಳ ಅರಿವು ಬಹಳ ಬೇಗ ಆಗುತ್ತದೆ. ಹೀಗೆ ಶಾಸ್ತ್ರೀಯ ನೃತ್ಯಾಭ್ಯಾಸದಿಂದ ಮೆದುಳಿನ ಗ್ರಹಿಕಾಶಕ್ತಿ ಹೆಚ್ಚುತ್ತದೆ.

3.    ಸಂವೀಕ್ಷಣಾ ಹಾಗೂ ಗ್ರಹಿಕಾಶಕ್ತಿಯ ನಂತರ ಸಂಗ್ರಹಣಾಶಕ್ತಿಯನ್ನು ಮೆದುಳು ಪಡೆಯುತ್ತದೆ. ಹಿಂದೆ ಹೇಳಿದಂತೆ ಏಕಕಾಲದಲ್ಲಿ ಹಲವಾರು     ವಿಷಯಗಳಲ್ಲಿ ಏಕಾಗ್ರತೆಯನ್ನು ಪಡೆದು ಹಲವಾರು ಗಂಟೆಗಳ ಕಾಲ ನೃತ್ಯವನ್ನು ನೆನನಪಿನಲ್ಲಿಟ್ಟುಕೊಂಡು ಪ್ರಯೋಗಕ್ಕೆ ತರಬೇಕಾಗುತ್ತದೆ. ಈ ಒಂದು ಪ್ರಕ್ರಿಯೆಯಿಂದ ಮೆದುಳಿನ ಸಂಗ್ರಹಣಾಶಕ್ತಿ ಹೆಚ್ಚುತ್ತದೆ.

4.    ಸಂಗ್ರಹಿಸಿದ ವಿಷಯಗಳು ಸರಿಯಾದ ಸಮಯಕ್ಕೆ ಒಂದಾದ ನಂತರ ಒಂದರಂತೆ ನೆನಪಿನಲ್ಲಿ ತಂದುಕೊಂಡು ಕಾರ್ಯರೂಪಕ್ಕೆ ತರುವುದರಿಂದ           ಸ್ಮರಣಶಕ್ತಿಯು ತಾನೇ ತಾನಾಗಿ ವರ್ಧಿಸುತ್ತದೆ.

5.    ಇಷ್ಟೊಂದು ವಿಷಯಗಳ ಕಡೆಗೆ ಗಮನಕೊಡುತ್ತಾ ಈಗ ಏನು ಮಾಡಬೇಕು, ಮುಂದೆ ಏನು ಮಾಡಬೇಕು ಎಂಬುದರ ಕಡೆಗೂ ಗಮನ ಕೊಡಬೇಕಾಗುತ್ತದೆ. ಒಂದರ ನಂತರ ಒಂದನ್ನು ಕ್ರಮವಾಗಿ ನೆನಪು ಮಾಡಿಕೊಳ್ಳುವ ಯಾವ ಕ್ರಿಯೆ ಇದೆಯೋ ಅದು ಜೀವನದಲ್ಲಿ ಖಚಿತವಾದ ನಿರ್ಧಾರಗಳನ್ನು ಸಕಾರಾತ್ಮವಾಗಿ ತೆಗೆದುಕೊಳ್ಳಲು ಸಹಕಾರಿಯಾಗಿದೆ.

ಈ ರೀತಿಯ ಶಿಕ್ಷಣ ಮತ್ತು ಅಭ್ಯಾಸದಿಂದ ಬೌದ್ಧಿಕವಾಗಿ ಸಿಗುವ ಪ್ರಯೋಜನಗಳು ಇನ್ನಾವ ವಿಷಯವನ್ನು ಅಭ್ಯಾಸ ಮಾಡುವುದರಿಂದಲೂ ಪೂರ್ಣವಾಗಿ ದೊರಕದು ಎಂದೇ ದೇಹದ ಬೆಳವಣಿಗೆಯ ಜೊತೆ ಜೊತೆಯಲ್ಲಿಯೇ ಬೌದ್ಧಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಶಾಸ್ತ್ರೀಯ ನೃತ್ಯದ ಉಗಮವಾಗಿರಬೇಕು. ಅಂದಿನ ಆಚಾರ್ಯರು ಮೆದುಳಿನ ವಿಕಾಸದ ಕಡೆಗೆ ಸಾಕಷ್ಟು ವಿವೇಚಿಸಿ, ದೇಹ ಮತ್ತು ಮನಸ್ಸುಗಳ ಆರೋಗ್ಯ ಪೂರ್ಣ ಬೆಳವಣಿಗೆಗೆ ಶಾಸ್ತ್ರೀಯ ನೃತ್ಯದ ಅಗತ್ಯವನ್ನು ಕಂಡು ಇದನ್ನು ಪ್ರಯೋಗಕ್ಕೆ ತಂದಿದ್ದಾರೆ.

ಹಿಂದೆ ಶಾಸ್ತ್ರೀಯ ನೃತ್ಯದ ಕಲಿಕೆಯ ಒಂದು ಹಂತವನ್ನು “ಮಾರ್ಗ” ಎಂದು ಕರೆಯುತ್ತಿದ್ದರು. ಮಾರ್ಗ ಎಂದರೆ ನಿಖರವಾಗಿಯೂ ನಿಶ್ಚಿತವಾಗಿಯೂ ಹಿರಿದಾದ ಗುರಿಯನ್ನು ತಲುಪಿಸುವ ಹೆದ್ದಾರಿ. ಈ ಅರ್ಥದ ಹಿನ್ನೆಲೆಯಲ್ಲಿ ಒಂದು ಮಾರ್ಗ ನೃತ್ಯ ಕಲಿ ಅಥವಾ ಕಲಿತಿದ್ದೇನೆ ಎಂದೇ ಭಾಷಿಸುವ ಪದ್ಧತಿ ಇದ್ದೀತು. ಬಹಶಃ ಮಾನವನ ಸರ್ವತೋಮುಖ ಏಳಿಗೆಗೆ ಈ ಮಾರ್ಗದಲ್ಲಿ ಹೋದರೆ ಸರಿ ಎಂದೇ ಇರಬೇಕು ನೃತ್ಯದ ಒಂದು ಹಂತದವರೆಗಿನ ಶಿಕ್ಷಣಕ್ಕೆ “ಮಾರ್ಗ” ಎಂದು ಹೆಸರಿಸಿರುವುದು.

ಮಾನಸಿಕ

ಹಿಂದೆ ಹೇಳಿದ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯಿಂದ ಮಾನವನಲ್ಲಿ ಆತ್ಮವಿಶ್ವಾಸ ತಾನೇ ತಾನಾಗಿ ಬೆಳೆಯುತ್ತದೆ. ಜೀವನದಲ್ಲಿ ವ್ಯವಹಾರ ಜ್ಞಾನವೂ ಹೆಚ್ಚುತ್ತದೆ. ದಿನನಿತ್ಯದಲ್ಲಿ ಆಗುವ ಸರಿತಪ್ಪುಗಳು ಸಹ ಖಚಿತವಾಗಿ ಅರ್ಥವಾಗತೊಡಗುತ್ತವೆ. ಮನಸ್ಸಿನ ಕಿರಿಕಿರಿ ದೂರವಾಗಿ ನೆಮ್ಮದಿ, ಶಾಂತಿ, ಸಮಾಧಾನ ದೊರಕಿ ಮಾನವನ ವ್ಯಕ್ತಿತ್ವ ಉನ್ನತಮಟ್ಟದತ್ತ ರೂಪುಗೊಳ್ಳುತ್ತದೆ. ನೃತ್ಯದಲ್ಲಿ ಲೋಕಸ್ವಭಾವ ವ್ಯವಹಾರಗಳೆಲ್ಲವೂ ಅಡಗಿರುವುದರಿಂದ ಅದನ್ನು ಅಭ್ಯಾಸ ಮಾಡಿದಾಗ ವ್ಯವಹಾರ ಜ್ಞಾನ ಹೆಚ್ಚಾಗುತ್ತದೆ.

ದಿನನಿತ್ಯದ ಜಡ್ಡು ಹಿಡಿದ ಕೆಲಸಗಳಿಂದಲೂ ಅನೇಕ ಸಾಂಸಾರಿಕ, ಸಾಮಾಜಿಕ ಗೊಂದಲಗಳಿಂದಲೂ ರೋಸಿಹೋಗಿ ಮನಸ್ಸನ್ನು ಉತ್ಸಾಹದಿಂದ ಇಟ್ಟುಕೊಳ್ಳಲು ಹಾಗೂ ಎಂತಹ ಕಷ್ಟ ಬಂದರೂ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳದೆ ಇರಲು ಸಹಕಾರಿಯಾಗುತ್ತದೆ. ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಇದು ಪ್ರಬಲವಾದ ಸಾಧನವಾಗಿದೆ.

ನೃತ್ಯಾಭ್ಯಾಸದಿಂದ ದೊರಕಿದ ಆತ್ಮಬಲದಿಂದ ಈ ಘರ್ಷಣೆಯ ಯುಗದಲ್ಲಿ ಅಡ್ಡಬಂದ ಎಲ್ಲವನ್ನೂ ಮೆಟ್ಟಿ ನಿಲ್ಲುವ ಆತ್ಮಶಕ್ತಿ ಹೆಚ್ಚುತ್ತದೆ. ಲಲಿತಕಲೆಗಳ ಅಭ್ಯಾಸ ಆಸೆ-ನಿರಾಶೆಗಳ ತಕಲಾಟಗಳಿಗೆ ಪರಿಹಾರ ಮಾರ್ಗಗಳಾಗಿವೆ ಎಂದು ಖಚಿತವಾಗಿ ಹೇಳಬಹುದು. ಜೀವನದ ಕೊನೆಯ ಘಟ್ಟದಲ್ಲಿ ಇದು ಸಾಕ್ಷಾತ್ ಭಗವಂತನನ್ನು ಕಾಣಲು ಸುಲಭವಾದ ಮಾರ್ಗ ಕೆಲವರಿಗಾದರೆ, ಇನ್ನುಳಿದವರಿಗೆ ಮನಸ್ಸಿಗೆ ಶಾಂತಿ, ಉತ್ಸಾಹ ದೊರಕಿ ಆಧ್ಯಾತ್ಮಿಕ ಹಾಗೂ ಜೀವನದ ಸಾರ್ಥಕತೆಯ ಮುಖ್ಯ ಸಾಧನವಾಗುತ್ತದೆ. ಚೈತನ್ಯ ಮಹಾಪ್ರಭು, ಮೀರಾಬಾಯಿ ಮತ್ತಿತರರು ಈ ನೃತ್ಯದ ಮಾಧ್ಯಮದಿಂದಲೇ ಭಗವಂತನನ್ನು ಕಂಡವರು.

ಇವುಗಳ ಜೊತೆಗೆ ಸಮಯದ ಸದುಪಯೋಗವು ಆಗುತ್ತದೆ. ಅರವತ್ತು ಎಂದರೆ ಅರಳು, ಮರುಳೋ ಎಂಬಂತೆ ವಯೋವೃದ್ಧರನ್ನು ಕಾಡುವ ಅರಳು-ಮರಳು ಎಂದರೆ ಮಾನಸಿಕ ಅಸ್ಥಿರತೆ, ಮರೆವು, ಎಲ್ಲದಕ್ಕೂ ಮೂಗು ಎಳೆಯುವ ಪರಿಪಾಠ ಕಾಡುವುದಿಲ್ಲ. ಶಾಸ್ತ್ರೀಯ ನೃತ್ಯಾಭ್ಯಾಸದಿಂದ ಮೆದುಳು ಯಾವಾಗಲು ಚುರುಕಾಗಿರುವುದರಿಂದ ಆಲೋಚನಾಶಕ್ತಿ ಕುಂದದೆ ಸಮಯದ ಅವಶ್ಯಕತೆಯ ಬಗ್ಗೆ ವಿವೇಚಿಸಿ ಹೊಂದಿಕೊಳ್ಳಲು ಸಹಾಯವಾಗುತ್ತದೆ. ತುಂಬುಜ್ಞಾನಿಗಳಾದ ಇಂತಹ ವಯೋವೃದ್ಧರು ತಮ್ಮತಮ್ಮ ವಿಷಯಗಳಲ್ಲಿ ನಿಖರತೆ ಹಾಗೂ ಪರಿಪಕ್ವತೆಗಳನ್ನು ಪಡೆದು ಸಮಾಜದ ಪ್ರವರ್ತಕರೂ ಆಗಬಹುದು.

ಈ ಗುಣಾತ್ಮಕ ಪಲಿತಾಂಶಗಳನ್ನು ಯಾವ ರೀತಿಯಲ್ಲಿ ಪಡೆಯಬಹುದಾಗಿದೆ ಎಂಬುದಕ್ಕೆ ಕೆಲವು ಪ್ರಯೋಗಾತ್ಮಕ ವಿಶ್ಲೇಷಣೆಗಳನ್ನು ಗಮನಿಸಬಹುದು.

ನೃತ್ಯ ಕಲೆಯ ಅಭ್ಯಾಸದ ಆರಂಭದಲ್ಲಿ ಚಾರಿ, ಮಂಡಲ, ಕರಣ, ಅಂಗಾಹಾರ, ಅಡವು ಇತ್ಯಾದಿಗಳನ್ನು ಅಭ್ಯಾಸ ಮಾಡುವಾಗ ಆಯತಪಾದದಲ್ಲಿ ತಾಳಲಯ ಬುದ್ಧವಾಗಿ ಅಭ್ಯಾಸ ಮಾಡಬೇಕು. ಈ ರೀತಿ ಮಾಡುವಾಗ ಶರೀರದಲ್ಲಿನ ಎಲ್ಲಾ ನರಮಂಡಲಗಳು ಕ್ರಿಯಾಶೀಲವಾಗುತ್ತದೆ. ರಕ್ತನಾಳಗಳು ನರಮಂಡಲದ ಜೊತೆಗೆ ಕ್ರಿಯಾಶೀಲವಾಗಿ ನೃತ್ಯದ ಜೊತೆಗೆ ರಕ್ತಶುದ್ಧತೆಯ ಕ್ರಿಯೆಯ ಏಕಕಾಲದಲ್ಲಿ ನಡೆಯುತ್ತದೆ. ಇಂತಹ ಕ್ರಿಯೆಗಳಿಂದ ಬುದ್ದಿ ಮತ್ತು ಮನಸ್ಸುಗಳ ಸೂಕ್ಷ್ಮಾತಿಸೂಕ್ಷ್ಮ, ತಂತುಗಳು ಮತ್ತು ನರಮಂಡಲಗಳು ಕ್ರಿಯಾಶೀಲಗೊಂಡು ಸೂಕ್ಷ್ಮ ಹಾಗೂ ಆಳವಾಗಿರುವ ಅರಿವಿನ ಹಂದರಗಳು ಕ್ರಿಯಾಶೀಲವಾಗುತ್ತವೆ. ಈ ರೀತಿಯ ಪ್ರಯೋಜನವನ್ನು ನೃತ್ಯಭ್ಯಾಸಿಗಳು ಮಾತ್ರ ಪಡೆಯಬಲ್ಲರು. ಎರಡು ಗಂಟೆಗಳ ಕಾಲ ಸತತವಾಗಿ ನೃತ್ಯ ಮಾಡುವ ಕಲಾವಿದರನ್ನು ನೋಡಿದರೆ ಈ ಅಂಶದ ಅರಿವಾಗುತ್ತದೆ.

ಇದಕ್ಕೆ ಕಾರಣ ಅರ್ಧಮಂಡಲದಲ್ಲಿ ಕಾಲುಗಳನ್ನು ಎತ್ತಿಕಟ್ಟುವ ಯಾವ ಕ್ರಿಯೆ ಇದೆಯೋ ಅದು ಶರೀರದಲ್ಲಿ ಒಂದು ರೀತಿಯ ಕಂಪನವನ್ನು ಉಂಟುಮಾಡುತ್ತದೆ. ಶರೀರದ ಸಮಸ್ತ ಅಣುಗಳು ಈ ಕಂಪನಕ್ಕೆ ಒಳಗಾಗಿ ಕ್ರಿಯಾಶೀಲವಾಗುತ್ತವೆ. ವಿವಿಧ ರೀತಿಯ ನರ್ತನ ವಿನ್ಯಾಸಗಳಿಂದ ಉಂಟಾಗುವ ಕಂಪನಗಳಿಂದ ಮಾನವನ ಇಡೀ ನರಮಂಡಲಕ್ಕೆ ವ್ಯಾಯಾಮವು ದೊರಕಿ ಅವುಗಳು ಕ್ರಿಯಾಶೀಲತೆಯನ್ನು ಪಡೆಯುತ್ತವೆ. ಇದರಿಂದ ಮಾನವನ ಅರಿವಿನ ಹಂದರಗಳು ಬಿಚ್ಚಿಕೊಳ್ಳುತ್ತಾ ವಿಕಾಸ ಹೊಂದುತ್ತವೆ. ಸೂಕ್ಷ್ಮ ತಂತುಗಳು ಜಾಗೃತಗೊಂಡು ಮನುಷ್ಯ ತನ್ನನ್ನು ಮೊದಲು ನಂತರ ತನ್ನವರು, ಇತರರು, ಸಮುದಾಯ, ಸಮಾಜ, ದೇಶ ಹಾಗೂ ರಾಷ್ಟ್ರಗಳನ್ನು ಅರಿಯಲು ಸಹಕಾರಿಯಾಗುತ್ತದೆ. “ಅರಿತು ಬಾಳಿದಾಗಲೇ ಸುಖ” ಎಂಬ ನಾಣ್ಣುಡಿಯ ಸತ್ಯವಾದ ಹೇಳಿಕೆ. ಸುಖ ಶಾಂತಿಯ ಬದುಕು ಮಾನವನದಾಗುವುದರಲ್ಲಿ ಸಂಶಯವಿಲ್ಲ.

ಈಗಿನ ಪೀಳಿಗೆಯಲ್ಲಿ ಅರಿವಿನ ಪರಿವೆಯೇ ಇಲ್ಲದಂತೆ ಆಗಿದ್ದು, ಅದಕ್ಕೆ ಸಮಯಾಭಾವವು ಇರುವುದರಿಂದ ಒಂದು ವೇಳೆ ಅರಿಯದೆ ಹೋದರೆ ಬಿರುಕು ಬಿಡುವುದನ್ನು ಕಾಣುತ್ತೇವೆ. ಇದಕ್ಕೆ ಕಾರಣ ನರಮಂಡಲದಲ್ಲಿ ಹುದುಗಿರುವ ಸೂಕ್ಷ್ಮಾತಿಸೂಕ್ಷ್ಮ ತಂತುಗಳು ಕ್ರಿಯಾಶೀಲವಾಗದೆ ಹಾಗೆಯೇ ಉಳಿದಿರುವುದು. ಉಪಯೋಗಿಸದ ಅಂಗಗಳು ತಾವಾಗಿಯೇ ಕ್ಷೀಣಿಸುತ್ತಾ ನಾಶಹೊಂದುವುದನ್ನು ವಿಜ್ಞಾನವು ಖಚಿತಪಡಿಸಿರುವುದರಿಂದ ಈ ಪ್ರಕ್ರಿಯೆ ಹೀಗೆಯೇ ಮುಂದುವರೆದರೆ ಮಾನವ ಒಬ್ಬ ಭಾವರಹಿತ ರೋಬೋಟ್ ಆಗಬಹುದು. ಈ ಅಂಶಗಳ ಬಗ್ಗೆ ಆಳವಾದ ಚಿಂತನೆಯು ನಡೆಯಬೇಕಾಗಿದೆ. ವಿಜ್ಞಾನದ ಅಳತೆಗೂ ಸಿಗದಂತಹ ಭಾವಾತ್ಮಕ ಹಾಗೂ ನೈತಿಕಾತ್ಮಕ ಪ್ರಯೋಜನಗಳು ಸಮಾಜಕ್ಕೆ ಬಹಳವೇ ಉಪಯುಕ್ತವಲ್ಲವೆ?

ನರ್ತನ ಕ್ರಿಯೆಯಲ್ಲಿ ತಾಳಲಯಕ್ಕನುಗುಣವಾಗಿ ನಡೆಯುವ ಕಾಲಿನ ತಟ್ಟುವಿಕೆಗೆ ಇರುವ ಶಕ್ತಿಯನ್ನು ಒಂದು ಉದಾಹರಣೆಯ ಮೂಲಕ ಮನಗಾಣಬಹುದು. ಸೈನಿಕರು ಯಾವುದೇ ಸೇತುವೆಯನ್ನು ದಾಟುವಾಗ ಒಂದು ಶಿಸ್ತಾದ ನಿಯಮವನ್ನು ಪಾಲಿಸಲೇಬೇಕು. ಅದೇನೆಂದರೆ ಅವರು ಸೇತುವೆಯ ಮೇಲೆ ಸಾಗುವಾಗ ಅದರ ಎಂದಿನ “ಟೈಮ್ ಬೀಟ್ ಮಾರ್ಚ್‌”ನ್ನು ಮಾಡುತ್ತಾ ಸಾಗದೆ ಸಾಧಾರಣವಾದ ನಡಿಗೆಯಲ್ಲಿ ದಾಟಬೇಕು ಎನ್ನುವುದು. ಸೇತುವೆಯು ಎಲ್ಲಾ ಸೈನಿಕರ ತೂಕವನ್ನು ಹೊತ್ತರೂ ಹಲವಾರು ಸೈನಿಕರ ಲಯಬದ್ಧ ಕಾಲ್ಬಡಿತದಿಂದ ಉಂಟಾಗುವ ಕಂಪನವನ್ನು ತಡೆಯಲಾರದು ಎಂಬ ವೈಜ್ಞಾನಿಕ ಕಟುಸತ್ಯವು ಇದಕ್ಕೆ ಕಾರಣವಾಗಿದೆ. ಇದರಿಂದ ತಾಳ ಲಯಬದ್ಧವಾದ ಕಾಲಿನ ತಟ್ಟುವಿಕೆಯಿಂದ ಉಂಟಾಗುವ ಕಂಪನದ ಶಕ್ತಿ ಎಷ್ಟೆಂಬುದರ ಅರಿವಾಗುತ್ತದೆ. ಗಟ್ಟಿಯಾದ ಬಂಡೆಗಳು ಸಹ ಸತತವಾಗಿ ಹರಿಯುವ ಜಲಧಾರೆಯ ಹೊಡೆತಕ್ಕೆ ಸಿಕ್ಕಿ ಹರಳುಗಳಾಗುವುದನ್ನು ಕಾಣುತ್ತೇವೆ. ನೃತ್ಯದಲ್ಲಿಯೂ ಸಹ ನಾವು ಗಂಟೆಗಟ್ಟಲೆ ಕಾಲುಗಳನ್ನು ವಿವಿಧ ಸ್ಥಾನಕಗಳಲ್ಲಿ ಲಯಬದ್ಧವಾಗಿ ಸತತವಾಗಿ ತಟ್ಟುತ್ತೇವೆ. ಇದರಿಂದ ಉತ್ಪತ್ತಿಯಾಗುವ ಕಂಪನಗಳು ಶರೀರದ ಮೇಲೆ ಯಾವ ರೀತಿ ಗುಣಾತ್ಮಕವಾದ ಪ್ರಯೋಜನಗಳನ್ನು ನೀಡುತ್ತವೆ ಎಂಬುದನ್ನು ಇಂದಿನ ಜನಾಂಗ ನೃತ್ಯ ಕಲಿತೇ ತಿಳಿಯಬೇಕು.

ಮಂಡಿಗಳ ಹಲವಾರು ರೀತಿಯ ವಿನ್ಯಾಸಗಳಿಂದ ಕಾಲು, ಸೊಂಟ ಮತ್ತು ಬೆನ್ನುಹುರಿಗಳಿಗೆ ಅಗತ್ಯವಿರುವ ವ್ಯಾಯಾಮವು ದೊರಕುತ್ತದೆ. ಮಂಡಿಗಳ ವಿವಿಧ ವಿನ್ಯಾಸಗಳಿಂದ ಬೆನ್ನು ಹುರಿಗೆ ನೇರವಾಗಿ ವ್ಯಾಯಾಮ ದೊರಕುವುದರಿಂದ ಭಾರತೀಯ ಆಧ್ಯಾತ್ಮಿಕ ಅಡಿಪಾಯ ಹಾಗೂ ಯೋಗ ತಪಾದಿಗಳಿಂದ ಜಾಗೃತಗೊಳ್ಳುವಂತಹ ನಾಡಿ ಮತ್ತು ಚಕ್ರಗಳಿಗೂ ವ್ಯಾಯಾಮವು ದೊರಕಿ ಕ್ರಿಯಾಶೀಲವಾಗುತ್ತವೆ. ಜಾಗೃತಗೊಂಡ ಚಕ್ರಗಳಿಗೂ ವ್ಯಾಯಾಮವು ದೊರಕಿ ಕ್ರಿಯಾಶೀಲವಾಗುತ್ತವೆ. ಜಾಗೃತಗೊಂಡ ಚಕ್ರಗಳಿಂದಾಗುವ ಪ್ರಯೋಜನಗಳನ್ನು ಸಂಬಂಧಪಟ್ಟ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡರೆ ನೃತ್ಯಕಲೆಯ ಮಹತ್ವದ ಅರಿವಾಗುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಬೇರೆ ಮಾಧ್ಯಮಗಳಿಂದಲೂ ಪಡೆಯಬಹುದಾದರೂ ಬುದ್ದಿಶಕ್ತಿಯ ವಿಕಾಸ, ರಂಜನಾಶಕ್ತಿ, ಅರಿವಿನ ಅಂಶಗಳು, ಏಕಾಗ್ರತೆ, ಆಧ್ಯಾತ್ಮಿಕತೆ ಹಾಗೂ ಸರ್ವಾಂಗೀಣ ಕ್ಷಮತೆಯನ್ನು ಪಡೆಯುವಲ್ಲಿ ನೃತ್ಯವು ಉಳಿದ ಚಟುವಟಿಕೆಗಳಿಗಿಂತ ಭಿನ್ನವಾಗಿದ್ದು, ಸಾರ್ವಕಾಲಿಕ ಉಪಯುಕ್ತತತೆಯನ್ನು ಹೊಂದಿದೆ.

ಸಾಮಾಜಿಕ:

ಭಾರತೀಯ ಕಾವ್ಯ ಮೀಮಾಂಸೆ ಮತ್ತು ಕಲೆಗಳ ಪ್ರಮುಖ ಉದ್ದೇಶವಾದ ರಸಪ್ರತಿಪಾದಕತ್ವದ ಆಳವಾದ ಚಿಂತನೆಯು ಭಾರತೀಯ ಸಂಸ್ಕೃತಿಯಲ್ಲಿ ನಡೆದಿರುವಷ್ಟು ಇನ್ಯಾವ ಸಂಸ್ಕೃತಿಯಲ್ಲೂ ನಡೆದಿಲ್ಲ. ರಸಪ್ರತಿಪಾದಕ್ವ, ತನ್ಮೂಲಕ ಸೌಂದರ್ಯೋಪಾಸನೆ ಮತ್ತು ಆನಂದೇ ಬ್ರಹ್ಮ ಎನ್ನುವ ಚಿಂತನೆಗೆ ಭಾರತೀಯ ಚಿಂತನಾಕಾರರು ಖಚಿತವಾದ ರೂಪವನ್ನು ಕೊಟ್ಟು ಇದನ್ನು ಮೇರು ಸಿದ್ಧಾಂತವಾಗಿಸಿದ್ದಾರೆ. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಾಚಾರ್ಯರು ಸರನಿಷ್ಷತ್ತಿಯು ಮಾನವನ ಮೇಲೆ ಯಾವ ರೀತಿ ಗುಣಾತ್ಮಕವಾದ ಪರಿಣಾಮ ಬೀರಬಲ್ಲದು ಎಂಬುದನ್ನು ವಿಶ್ಲೇಷಿಸಿ ಅದಕ್ಕೆ “ನಾಟ್ಯ” ಎಂಬ ಮಾಧ್ಯಮವನ್ನು ಹುಟ್ಟುಹಾಕಿ, ಅದರ ಅಂಶಗಳನ್ನು ಶಾಶ್ವತವಾಗಿ ಸೂತ್ರೀಕರಿಸಿದ್ದಾರೆ.

ರಸಾನುಭವವು ಹೊರಗಿನಿಂದ ಬರುವಂತಹದಲ್ಲ. ಇದು ಪ್ರೇಕ್ಷಕನಲ್ಲಿಯೇ ಹುದುಗಿರುವ ಆಂತರಿಕ ಅನುಭವಗಳ ಆವಿಷ್ಕಾರ. ಅನುಕರಣೆಯಿಂದ ನರ್ತಕನು ಭಾವವಿಭಾವಾದಿ ಸಂಚಾರಿಭಾವಗಳಿಂದ ಸ್ಥಾಯೀಭಾವವನು ಅಭಿನಯಿಸಿದಾಗ ಅವುಗಳ ಸಾಮಾಜಿಕ ಹಾಗೂ ಸಹೃದಯ ಪ್ರೇಕ್ಷಕನಲ್ಲಿ ವಾಸನಾರೂಪವಾಗಿರುವ ಭಾವಗಳನ್ನು ಎಚ್ಚರಗೊಳಿಸುತ್ತವೆ. ಎಚ್ಚರಗೊಂಡ ಭಾವಗಳನ್ನು ಮಾನಸಿಕವಾಗಿ ನಟನ ಜೊತೆ ಅನುಭವಿಸಿದ ಸಹೃದಯ ಪ್ರೇಕ್ಷಕ ಅವುಗಳಿಂದ ವೈಯಕ್ತಿಕವಾದ ಪರಿಧಿಯಿಂದ ವಿಮೋಚನೆ ಹೊಂದಿ ಸಾಧಾರಣೀಕೃತನಾಗುತ್ತಾನೆ. ಈ ಸ್ತರದಲ್ಲಿ ಅವನಲ್ಲಿದ್ದ ಕ್ರೂರಾದಿಭಾವಗಳು ಶೋಧಿತಗೊಂಡು ಆತ ಸಮಾಹಿತವಾದ ಸಮಾಧಾನವಾದ ಮನಸ್ಸಿನವನಾಗಿ ಶುಭ್ರನಾಗುತ್ತಾನೆ. ಒಂದು ರೀತಿ ವಿಲಕ್ಷಣ ಶಾಂತಿಯನ್ನು ಪಡೆಯುತ್ತಾನೆ. ಈ ಹಂತದಲ್ಲಿ ಆತನ ಅನುಭವ ಆಸ್ವಾದ್ಯವಾಗಿ ಹೃದಯ ಸಂವಾದಕ್ಕೆ ಕಾರಣವಾಗುತ್ತದೆ. ಈ ಆಸ್ವಾದ್ಯತೆಯಿಂದ ಅನುಭವಕ್ಕೆ ಬರುವ ಆನಂದವೇ ರಸ.

ಸಹೃದಯ ಪ್ರೇಕ್ಷಕನಲ್ಲಿ ಸುಪ್ತವಾಗಿಯೂ ವಾಸನಾರೂಪವಾಗಿಯೂ ಇರುವ ಭಾವವು ಉದ್ದೀಪನಗೊಂಡು, ಅನುಭವಿತಗೊಂಡು, ವಿರೇಚನಹೊಂದಿ, ಶೋಧನೆಗೊಳಗಾಗಿ ಸಾಧಾರಣೀಕರಣಗೊಂಡು ಸಮಾಧಾನ ಹೊಂದಿ ಆಸ್ವಾದನೆಗೊಳಗಾದಾಗ ಅನುಭವಜನ್ಯ ಆನಂದವು ರಸವಾಗುತ್ತದೆ. ಭಾವಾನುಭವ ರಸಾನುಭವಗಳಲ್ಲಿ ಭಾವವು ವೈಯಕ್ತಿಕತೆಯನ್ನು ಕಳೆದುಕೊಂಡು ಸಾಧಾರಣೀಕೃತಗೊಂಡಾಗ ರಸವಾಗುತ್ತದೆ.

ಈ ರೀತಿಯ ಶೋಧನೆಗೊಳಗಾದ ಮನಸ್ಸು ಪಡೆಯುವ ರಸಾನುಭವದಿಂದ ಸಹೃದಯ ಯಾವ ರೀತಿ ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಪ್ರಯೋಜನ ಪಡೆಯಬಲ್ಲರೆಂಬುದನ್ನು ಇಂದಿನ ಜಗತ್ತು ಕಡ್ಡಾಯವಾಗಿ ಅರಿಯಲೇಬೇಕು.

ಹುಟ್ಟಿದ ಮಗು ಐದು ವರ್ಷಗಳವರೆಗೆ ಅಳುವುದು, ನಗುವುದು, ಹಠ ಮಾಡುವುದು ಇತ್ಯಾದಿಗಳನ್ನು ಬಿಟ್ಟರೆ ಕಾಮಕ್ರೋಧಾದಿಗಳಿಗೆ ಒಳಗಾಗಿರುವುದಿಲ್ಲ. ಬೆಳೆಯುತ್ತಾ ಹೋದಂತೆಲ್ಲಾ ವಯಸ್ಸಿಗೆ ಸಹಜವಾದ ಭಾವನೆಗಳು ಜಾಗೃತಗೊಂಡು ವಿಕಾಸವಾಗುತ್ತಾ ಹೋಗುತ್ತವೆ. ವಾತಾವರಣದ ಹಿನ್ನೆಲೆ ಮತ್ತು ಪರಿಸರಕ್ಕೆ ಅನುಗುಣವಾಗಿ ಕಾಮಕ್ರೋಧಾದಿಗಳು ಸಹ ಅನೇಕ ಸ್ತರಗಳಲ್ಲಿ ವಿಕಾಸಗೊಳ್ಳುವುದನ್ನು ಕಾಣುತ್ತೇವೆ. ಕೆಲವರಲ್ಲಿ ಕೆಲವು ಭಾವನಗಳು ಅತಿಯಾಗಿಯೂ ಬಲವಾಗಿಯೂ ವರ್ಧಿಸಿ ಬೇರೂರಿ ಪ್ರಕ್ಷುಬ್ಧಸ್ಥಿತಿಯನ್ನು ತಲುಪಿದಾಗ ಒಳಿತುಕೆಡುಕುಗಳ ಮತ್ತು ಧರ್ಮಾಧರ್ಮಗಳ ವಿವೇಚನೆಯು ಇಲ್ಲದೆ ದುರಂತಕ್ಕೆ ಒಳಗಾಗುವುದನ್ನು ನಾವು ದಿನನಿತ್ಯದ ಬದುಕಿನಲ್ಲಿ ಕಾಣುತ್ತೇವೆ. ಇಲ್ಲಿ ಮನುಷ್ಯ ಪ್ರಕ್ಷುಬ್ಧ ಭಾವನೆಗಳ ಅತಿಯಾದ ಒತ್ತಡಕ್ಕೆ ಸಿಲುಕಿ ವಿವೇಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಇಂತಹ ಮನಸ್ಸುಗಳ ಪರಿಣಾಮದಿಂದಲೇ ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಸರಿಪಡಿಸಲಾಗದಂತಹ ದುರಂತಗಳು ನಡೆಯುವುದು. ಸಮಾಜದ ಎಲ್ಲಾ ಅಂಗಗಳಲ್ಲಿಯೂ ಹಾನಿಕಾರಕವಾದ ಈ ದುರಂತಗಳನ್ನು ತಪ್ಪಿಸಲು ಹಾಗೂ ಪ್ರಕ್ಷುಬ್ಧ ಸ್ಥಿತಿಯನ್ನು ತಲುಪುವ ಮನುಷ್ಯನ ಮನೋವಿಕಾರಗಳನ್ನು ವಿಕಾಸದ ಹಂತದಲ್ಲಿಯೇ ಶಮನಗೊಳಿಸುವ ಕ್ರಿಯೆಯು ನೃತ್ಯನಾಟ್ಯಗಳಿಂದ ನಡೆಯುತ್ತದೆ. ನಾಟ್ಯ ಪ್ರಶಂಸೆಯಲ್ಲಿ ಹೇಳಿರುವ ಹಾಗೆ ಹುಟ್ಟಿದ ಭಾರತೀಯರೆಲ್ಲರೂ ಒಂದು ಕಾಲದಲ್ಲಿ ಕಡ್ಡಾಯವಾಗಿ ಸಂಗೀತ ನೃತ್ಯಗಳನ್ನು ಕಲಿಯುತ್ತಿದ್ದರು. ಇಂದೂ ಸಹ ಏಳನೇ ವಯಸ್ಸಿನಿಂದಲೇ ಎಲ್ಲರಿಗೂ ಸರಿಯಾದ ಗುರುಗಳ ಮಾರ್ಗದರ್ಶನದಲ್ಲಿ ನೃತ್ಯವನ್ನು ಕಲಿತು ಕಲಿಯುವ ಹಂತದಲ್ಲಿಯೇ ಅರಿವಿನ ಹಂದರಗಳನ್ನು ಹೆಚ್ಚು ಮಾಡಿಕೊಳ್ಳುತ್ತಾ ತನ್ಮೂಲಕ ಶೋಧನೆಗೊಳಗಾದಾಗ ದುಷ್ಟಾದಿಭಾವಗಳು ವಿರೇಚನಗೊಳ್ಳುತ್ತವೆ. ಹೀಗಾದಾಗ ಮನಸ್ಸು ಪ್ರತಿಹಂತದಲ್ಲಿಯೂ ಶುದ್ಧವಾಗುತ್ತಾ ವಿಕಾಸ ಹೊಂದಿ ಸುಸಂಸ್ಕೃತವಾಗುತ್ತದೆ. ಸುಸಂಸ್ಕೃತ ಮಾನವರಿಂದ ಸಮಾಜದ ಎಲ್ಲಾ ನೆಲೆಗಳಲ್ಲಿಯೂ ಶಾಂತಿ ನೆಲೆಸಿ ಸಮಾಜದ ಸುಃಖ ಬಾಳ್ವೆಯು ಸಾಕಾರವಾಗುತ್ತದೆ. ಇಂತಹ ಲೋಕಕಲ್ಯಾಣಕಾರಿಯಾದ ಶ್ರೀ ವಿದ್ಯೆಯನ್ನು ಅದರ ತತ್ವಗಳನ್ನು ಹಾಗೂ ಅದರಿಂದ ದೊರಕುವ ಸತ್ಫಲಗಳನ್ನು ಅರಿತುಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಬೇಕು. ದುಷ್ಟ ಹಾಗೂ ವಿರುದ್ಧ ಭಾವಗಳ ವಿರೇಚನ, ವಿಮೋಚನಗಳಿಗೆ ನೃತ್ಯದ ಮಾಧ್ಯಮದಿಂದ ರಸತತ್ವವೊಂದೇ ಮಾರ್ಗವೆಂದು ಹೇಳಬಹುದು.

ಶೈಕ್ಷಣಿಕ:

ಸಮುದಾಯಿಕವಾಗಿ ನೃತ್ಯ ಶಿಕ್ಷಣವು ಮನುಷ್ಯನಲ್ಲಿ ಸಂಸ್ಕೃತಿಯನ್ನು ಬೆಳೆಸುತ್ತದೆ. ಮನುಷ್ಯನಲ್ಲಿನ ಜಡ, ಒರಟುತನವನ್ನು ಹೋಗಲಾಡಿಸುವುದರ ಮೂಲಕ ಮನುಷ್ಯನನ್ನು ಶೋಧಿಸಿ ಪರಿಷ್ಕರಿಸುತ್ತದೆ. ಸುಸಂಸ್ಕೃತ ಮಾನವನೇ ಸುಭದ್ರ ಸಮಾಜದ ಅಡಿಗಲ್ಲಾಗಿರುವುದರಿಂದ ಇದು ಮಾನವನಿಗೆ ಒಂದು ರೀತಿಯ ಆತ್ಮ ಶಿಕ್ಷಣವನ್ನು ನೀಡಿ ಆತನನ್ನು ಸತ್ಪ್ರಜೆಯನ್ನಾಗಿ ರೂಪಿಸುತ್ತದೆ. ಇದರಿಂದ ಸಮಾಜದಲ್ಲಿ ಸಂಸ್ಕೃತಿಯ ಸಂವಹನೆ ಮತ್ತು ಪರಿವರ್ತನೆಗಳು ಆರೋಗ್ಯದಾಯಕವಾಗಲು ಸಹಕಾರಿಯಾಗುತ್ತದೆ.

ವೈಯಕ್ತಿಕವಾಗಿ ಹೇಳಬೇಕೆಂದರೆ ಶಾಸ್ತ್ರೀಯ ನೃತ್ಯಾಭ್ಯಾಸದಿಂದ ದೊರಕಿದ ದೈಹಿಕ ಶಕ್ತಿ, ಅತಿಶ್ರಮ ತಾಳುವ ಶಕ್ತಿ ಹಾಗೂ ಮೆದುಳಿನ ವಿವಿಧ ಕೋಶಗಳ ವಿಕಾಸದಿಂದ ಶಾಲಾ ಕಾಲೇಜುಗಳಲ್ಲಿ ಮಾಡಬೇಕಾಗಿರುವ ಓದಿನ ಕಡೆಗೆ ಹೆಚ್ಚು ಗಮನಕೊಟ್ಟು ಹೆಚ್ಚಿನ ಅಂಕಗಳಿಸಲು ಸಾಧ್ಯವಾಗುತ್ತದೆ. ಎಷ್ಟು ಸಮಯ ಬೇಕಾದರೂ ತಮ್ಮ ಕೆಲಸಗಳ ಕಡೆಗೆ ಗಮನಕೊಟ್ಟು ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸ ಹೆಚ್ಚಿದಂತೆ ತಾವು ಮಾಡುವ ಕೆಲಸಗಳಲ್ಲಿ ಉತ್ಸಾಹ ಹೆಚ್ಚಾಗಿ ಖಚಿತವಾದ ಫಲಿತಾಂಶವನ್ನು ಪಡೆಯಲು ಸಹಕಾರಿಯಾಗುತ್ತದೆ. ಸಾಧನೆಯಿಂದ ಪಡೆದುಕೊಂಡ ಇಂತಹ ಶಕ್ತಿಯಿಂದ ಜೀವನದಲ್ಲಿ ಮಾಡಬೇಕಾಗಿರುವ ಯಾವುದೇ ಕೆಲಸಗಳಲ್ಲಿ ಅಳವಡಿಸಿಕೊಂಡರೂ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ದೈಹಿಕ, ಬೌದ್ಧಿಕ ಹಾಗೂ ಮಾನಸಿಕವಾಗಿ ಶಾಸ್ತ್ರೀಯ ನೃತ್ಯದಿಂದ ಸಿಗುವ ಪ್ರಯೋಜನಗಳನ್ನು ಹಣ ತೆತ್ತಾಗಲಿ, ಇನ್ನೊಬ್ಬರಿಂದ ಪಡೆದಾಗಲಿ, ವೈದ್ಯಕೀಯ ಮೂಲಗಳಿಂದಾಗಲಿ ಪಡೆಯಲು ಸಾಧ್ಯವಿಲ್ಲದಿರುವುದರಿಂದ ಮಾನವ ಸಂಪೂರ್ಣ ವಿಕಸಿತ ಮನುಷ್ಯನಾಗಲು ಈ ರೀತಿಯ ಅಭ್ಯಾಸವನ್ನೇ ರೂಢಿಸಿಕೊಳ್ಳಬೇಕಾಗುತ್ತದೆ. ಶಿಸ್ತುಬದ್ಧವಾದ ನೃತ್ಯ ಶಿಕ್ಷಣವನ್ನು ಪಡೆದು ಸರ್ವತೋಮುಖ ಏಳಿಗೆಯನ್ನು ಪಡೆಯಬಹುದಾಗಿದೆ. ಈ ರೀತಿಯ ಪ್ರಯೋಜನಗಳನ್ನು ವಿಜ್ಞಾನದ ಯಾವುದೇ ಮಾಧ್ಯಮದಿಂದ ಪಡೆಯಲು ಸಾಧ್ಯವಿಲ್ಲ. ಶಾಸ್ತ್ರೀಯ ನೃತ್ಯ ಶಿಕ್ಷಣ ಹಾಗೂ ಅಭ್ಯಾಸದಿಂದ ಸಿಗುವ ಫಲಿತಾಂಶಗಳು ವಿಜ್ಞಾನದ ಅಳತೆಗೂ ಸಿಗದಂತಹವು. ಈ  ರೀತಿಯ ಪ್ರಯೋಜನಗಳನ್ನು ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ ಸ್ವತಃ ಸಾಧಿಸಿಕೊಂಡು ಬೆಳೆಸಿಕೊಳ್ಳಬೇಕಷ್ಟೆ.

ಗುರುದೇವ ಶ್ರೀ ರವೀಂದ್ರನಾಥ ಠಾಗೂರರ ಕಲೆಗೆ ಸಂಬಂಧಪಟ್ಟ ತಮ್ಮ ಸೂತ್ರದಲ್ಲಿ ಇದೇ ಅಂಶಗಳನ್ನು ಸೂತ್ರಿಕರಿಸಿದ್ದಾರೆ. ಪ್ರಸಿದ್ಧ ಇತಿಹಾಸಕಾರರಾದ ಕಾರ್ಡಿಯಲ್ ಗೋಮ್ಸರವರೂ ಸಹ ನೃತ್ಯ ಸಂಗೀತಗಳೆಂದರೆ ಮಾನವನ ಸಹಜ ವಿಕಾಸ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮಕಾಲೀನ

ದೈಹಿಕವಾಗಿ, ಬೌದ್ಧಿಕವಾಗಿ, ಮಾನಸಿಕವಾಗಿ ಬಹಳ ಪ್ರಯೋಜನಕಾರಿಯಾಗಿರುವ ಶಾಸ್ತ್ರೀಯ ನೃತ್ಯದಿಂದ ವರ್ತಮಾನ ಜಗತ್ತು ಅಂದರೆ ಆಧುನಿಕ ಯುಗದಲ್ಲಿ ಏನು ಪ್ರಯೋಜನ? ಇದು ಸಿನಿಮಾ, ದೂರದರ್ಶನ ಹಾಗೂ ಇ-ಮೇಲ್ ಯುಗವಲ್ಲವೇ? ಇಂತಹ ಪ್ರಶ್ನೆಗಳು ಸಹಜವಾಗಿಯೇ ಏಳಬಹುದು. ಆದರೆ ನೃತ್ಯಾಭ್ಯಾಸದಿಂದ ಸಿಗುವ ಗುಣಾಂಶಗಳನ್ನು ದಿನನಿತ್ಯದ ಬದುಕು ಹಾಗೂ ವ್ಯವಹಾರಗಳಲ್ಲಿಯೂ ಸಹ ಅಳವಡಿಸಿಕೊಂಡು ಸಫಲತೆಯನ್ನು ಪಡೆಯಬಹುದು.

ಸಿನಿಮಾಕ್ಕೂ ನೃತ್ಯಕ್ಕೂ ಮೊದಲಿನಿಂದಲೂ ನಂಟು. ಅದು ಯಾವ ರೀತಿಯ ನೃತ್ಯವಾದರೂ ಆಗಬಹುದು. ಅಂತೂ ಸಿನಿಮಾದಲ್ಲಿ ನೃತ್ಯ ಇದ್ದೇ ಇರುತ್ತದೆ. ಶಾಸ್ತ್ರೀಯ ನೃತ್ಯ, ಅದರಲ್ಲೂ ಭರತನಾಟ್ಯವನ್ನು ಕಲಿತ ಕಲಾವಿದರು ಪ್ರಪಂಚದಲ್ಲಿನ ಯಾವ ರೀತಿಯ ನೃತ್ಯವನ್ನಾದರೂ ಬಹಳ ಬೇಗ ಕಲಿತು ಲೀಲಾಜಾಲವಾಗಿ ಮಾಡಬಲ್ಲರು.

ಎಂತಹ ಗಂಭೀರ, ಪ್ರೌಢ ಹಾಗೂ ಉತ್ಸಾಹಪೂರ್ಣ ಅಭಿನಯವನ್ನು ಯಾವ ನಿರ್ದೇಶನವೂ ಇಲ್ಲದೆ ನೀಡಬಲ್ಲರು. ಅದೇ ಕಾರಣಕ್ಕಾಗಿಯೇ ಸಿನಿಮಾ ಸೇರಲು ಹೋಗ ಪ್ರತಿಯೊಬ್ಬ ಕಲಾವಿದರಿಗೂ ನೀವು “ಭರತನಾಟ್ಯ” ಕಲಿತಿದ್ದೀರಾ ಎಂದು ಕಡ್ಡಾಯವಾಗಿ ಕೇಳುತ್ತಾರೆ. ಇದಕ್ಕೆ ಪೂರಕವಾಗಿ ಭಾರತೀಯ ಸಿನಿಮಾದ ಆರಂಭ ಹಾಗೂ ಮಧ್ಯಯುಗದಲ್ಲಿ ದಕ್ಷಿಣದ ಭರತನಾಟ್ಯ ತಾರೆಯರು ದೀರ್ಘಾವಧಿಯಲ್ಲಿ ನಾಯಕಿಯರಾಗಿ ಪ್ರಸಿದ್ಧರಾಗಿದ್ದರು. ಸಿನಿಮಾ ಸೇರಲು ಹೋದ ಪ್ರತಿಯೊಬ್ಬರೂ ಭರತನಾಟ್ಯವನ್ನು ಮದಲೋ ಇಲ್ಲ ನಂತರವೋ ಕಲೀತೇ ಕಲಿಯುತ್ತಾರೆ. ಈಗಲೂ ತೆಲುಗು ಹಾಗೂ ಮಲೆಯಾಳಂ ಸಿನಿಮಾ ರಂಗದಲ್ಲಿ ನಾಯಕಿಯರಾಗಲು ಭರತನಾಟ್ಯದಲ್ಲಿ ರಂಗಪ್ರವೇಶ ಮಾಡಬೇಕಾಗಿರುವುದು ಬಹಳ ಅಗತ್ಯ. ಏಕೆಂದರೆ ರಂಗಪ್ರವೇಶ ಮಾಡಿದ ಕಲಾವಿದರಿಗೆ ಸಾಧಾರಣವಾಗಿ ಎಲ್ಲಾ ರೀತಿಯ ಅಭಿನಯ, ನಡಿಗೆ, ಭಾವನೆಗಳನ್ನು ಹೊರಹೊಮ್ಮುವ ವಿಧಾನಗಳ ಅರಿವಿದ್ದು, ಪಾತ್ರಕ್ಕೆ ನಡಿಗೆ, ಗಾಂಭೀರ್ಯತೆಗಳು ಸಹಜವಾಗಿಯೇ ಬರುತ್ತವೆ. ಪಾತ್ರಕ್ಕೆ ಜೀವತುಂಬಲು ಅವಶ್ಯ ಇರುವ ಎಲ್ಲಾ ಅಂಶಗಳನ್ನು ಕಲಿತಿರುತ್ತಾರೆ. ಇದರಿಂದ ಶಾಸ್ತ್ರೀಯ ನೃತ್ಯ ಅದರಲ್ಲೂ ಭರತನಾಟ್ಯದ ಕಲಿಕೆ ಎಷ್ಟು ಅಗತ್ಯ ಎಂಬುದು ತಿಳಿದುಬರುತ್ತದೆ.

ಇಷ್ಟೇ ಅಲ್ಲದೆ ಕ್ಯಾಮರಾ ಎದುರಿಸುವ (ಕ್ಯಾಮರಾ ಫೇಸಿಂಗ್) ಅಂಶ ಏನಿದೆ ಅದನ್ನು ಶಾಸ್ತ್ರೀಯ ನೃತ್ಯ ಕಲಿತವರಿಗೆ ಸಹಜವಾಗಿಯೇ ಕರಗತವಾಗಿರುತ್ತದೆ. ಏಕೆಂದರೆ ಪ್ರೇಕ್ಷಕನಿಗೆ ಅಭಿಮುಖವಾಗಿ ಮಾಡಬೇಕಾಗಿರುವ ನೃತ್ಯವನ್ನು ಕಲಿಯುವಾಗ ಮೇಲಿನ ಅಂಶವು ಸಹಜವಾಗಿಯೇ ಮೈಗೂಡಿರುತ್ತದೆ. ಈ ಅಂಶ ಸಿನಿಮಾ ಹಾಗೂ ದೂರದರ್ಶನ ಮುಂತಾದ ಮಾಧ್ಯಮಗಳಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.

ಇನ್ನು ರೂಪದರ್ಶಿತ್ವದಲ್ಲಿ ವಿವಿಧ ರೀತಿಯ ನಡಿಗೆಗೆ, ರಂಗದ ಮೇಲೆ ಚಲಿಸುವುದಕ್ಕೆ, ವೈವಿಧ್ಯಮಯ ಭಂಗಿಗಳನ್ನು ತೋರಲು, ಪ್ರಸನ್ನ, ಮುಖಭಾವಕ್ಕೆ ಮತ್ತು ಅಭಿನಯ ಚಾತುರ್ಯಕ್ಕೆ ಭರತನಾಟ್ಯದ ಅಭ್ಯಾಸ ಬಹಳವಾಗಿ ಸಹಾಯಕವಾಗಬಲ್ಲದು. ಶಾಸ್ತ್ರೀಯ ನೃತ್ಯವನ್ನು ಕಲಿತು ಅದನ್ನು ಕಸುಬನ್ನಾಗಿ ಮಾಡಿಕೊಂಡರೂ ಅದರಿಂದ ಸಿಗುವ ಘನತೆ ಗಾಂಭೀರ್ಯಗಳು ಅಪಾರ ಎನಿಸಿದರೂ ಜೀವನ ನಡೆಸಲು ಕಷ್ಟ ಎಂಬ ವದಂತಿ ಇದೆ. ಒಬ್ಬ ಒಳ್ಳೆಯ ಎಂಜಿನಿಯರ್ ಆಗಲಿ, ಡಾಕ್ಟರ್ ಅಥವಾ ಉಪಾಧ್ಯಾಯರಾಗಲೀ ತಮ್ಮನ್ನು ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ದಿವಸಕ್ಕೆ 12ರಿಂದ 15 ಗಂಟೆಯವರೆಗೂ ಕೆಲಸ ಮಾಡುವಂತೆ ಒಬ್ಬ ಕಲಾವಿದ ಕಲೆಯ ವಿವಿಧ ಆಯಾಮಗಳನ್ನು ರೂಢಿಸಿಕೊಂಡು ಅಷ್ಟೇ ಹೊತ್ತು ದುಡಿದರೆ ಜೀವನ ಕಷ್ಟ ಎನಿಸುವುದಿಲ್ಲ. ಕೇವಲ ವಾರಕ್ಕೆ ಒಂದೆರಡು ಗಂಟೆಗಳಷ್ಟು ದುಡಿದು ಕಷ್ಟ ಎಂದರೆ ಏನು ಮಾಡಲಾದೀತು?

ಅದೂ ಅಲ್ಲದೆ ಇದು ಸೌಂದರ್ಯಮಯ ಯುಗ. ಎಲ್ಲೆಲ್ಲಿಯೂ ಜನರು ಸೌಂದರ್ಯವನ್ನು ಕಾಣಲು ಬಯಸುತ್ತಾರೆ. ನೃತ್ಯ ಕಲಾವಿದರು ತಮ್ಮ ಸಾಧನೆಯಿಂದ ಅಮಿತ ಕಲ್ಪನಾಶಕ್ತಿಯನ್ನು ಪಡೆದಿರುತ್ತಾರೆ. ಅದನ್ನು ಬಳಸಿಕೊಂಡು ಕಲಾನಿರ್ದೇಶಕರಾಗಿ, ಕಲಾವಿನ್ಯಾಸಕರಾಗಿ, ಕಾರ್ಯಕ್ರಮದ ಸಂಯೋಜಕರಾಗಿ, ಎಲ್ಲಾ ಕ್ಷೇತ್ರಗಳಲ್ಲಿಯೂ ದುಡಿಯಬಹುದು. ವರ್ಣಗಳ ವಿನ್ಯಾಸ, ವಸ್ತ್ರವಿನ್ಯಾಸ ಮತ್ತಿತರ ವಿಭಾಗಗಳಲ್ಲೂ ನಿರ್ದೇಶಕರಾಗಿ ದುಡಿಯಬಹುದು. ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶಗಳನ್ನು ಕಲ್ಪಿಸಿಕೊಂಡು ಮುಂದೆ ಹೋಗಬೇಕಷ್ಟೆ.

ಮೇಲೆ ಹೇಳಿದ ಸರ್ವಕಾಲಿಕ ಹಾಗೂ ಸಾರ್ವತ್ರಿಕ ಪ್ರಯೋಜನೆಗಳು ಈ ವಿದ್ಯೆಯನ್ನು ಕಲಿತು ಸಾಧಿಸಿಕೊಂಡ ಕಲಾವಿದರಿಗಷ್ಟೆ ಲಭ್ಯ. ಇವುಗಳು ಅನುಭವ ವೇದ್ಯವಾಗುವ ಫಲಿತಾಂಶಗಳು. ಇವುಗಳನ್ನು ಕೈಯಿಂದ ತೆಗೆದು ತೋರಿಸಲಾಗಲಿ, ಇಲ್ಲವೆ ವಿಜ್ಞಾನದ ಪ್ರಯೋಗಾಲಯದಲ್ಲಿ ಪ್ರಯೋಗಿಸಿ ತೋರಿಸಲಾಗಲಿ ಬರುವುದಿಲ್ಲ.

ಇಂದಿನ ಜನಾಂಗ ಈ ಮಾಲ್ಯಗಳಿಗೆ ಸ್ಪಂದಿಸದಿರಲು ಕಾರಣಗಳು:

1.    ಇಂದಿನ ವಾಣಿಜ್ಯಮಯ ಜಗತ್ತಿನ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಂದನ್ನೂ ವ್ಯಾವಹಾರಿಕವಾಗಿ ನೋಡುವ ದೃಷ್ಟಿ ಇರುವುದು ಎಷ್ಟು ಸಹಜವೋ,       ಪ್ರಯೋಗಾಲಯದಲ್ಲಿ ಪ್ರಾಯೋಗಿಕವಾಗಿ ಫಲಿತಾಂಶಗಳನ್ನು ಕಂಡು ಹಿಡಿಯುವುದರಲ್ಲಿ ಸಾರ್ಥಕತೆಯನ್ನು ಕಾಣುತ್ತಿರುವುದೂ ಅಷ್ಟೆ ಸಹಜ. ಯಾರಾದರೂ ಇದಕ್ಕೆ ಮೀರಿದ ವಿಷಯಗಳನ್ನು ಹೇಳಿದರೆ ಅದನ್ನು ಉದಾಸೀನ ಭಾವದಿಂದ ನೋಡುತ್ತಾರೆ. ಅದಕ್ಕೆ ಅನೇಕ ಕಾರಣಗಳಿದ್ದರೂ    ಮುಖ್ಯವಾಗಿ ಮಾನವ ತನ್ನ ಪರಿಸರಕ್ಕೆ ಮತ್ತು ಅವನ ಅವಶ್ಯಕತೆಗಳಿಗೆ ತನ್ನನ್ನು ಸೀಮಿತಗೊಳಿಸಿಕೊಂಡು ಅಷ್ಟಕ್ಕೆ ಬದುಕುತ್ತಿರುವುದನ್ನು        ಒಂದೆಡೆಯಾದರೆ, ಹುರುಳಿಲ್ಲದ ಅನೇಕರು ಕೇವಲ ಜನಬಲ ಮತ್ತು ಹಣಬಲದೊಂದಿಗೆ ಪ್ರಚಾರ ಗಿಟ್ಟಿಸಿದ್ದು, ವಿದ್ಯಾವಂತ ಸಮುದಾಯವನ್ನು ಒಂದೆಡೆಯಾದರೆ, ವಿದ್ಯಾವಂತ ಸಮುದಾಯವನ್ನು ಮೋಸಗೊಳಿಸುತ್ತಿರುವುದು, ಅವರನ್ನು ಮನವರಿಕೆ ಮಾಡಲು ಆಗದೆ ಇರುವುದು ಹಾಗೂ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲೂ ಆಗದೆ ಇರುವುದು ಇನ್ನೊಂದು ಮುಖ್ಯಕಾರಣ.

2.    ಈಗಿನ ಜನಾಂಗಕ್ಕೆ ಧರ್ಮ, ದೇವರು ಇತ್ಯಾದಿಗಳ ಬಗ್ಗೆ ಆಸಕ್ತಿ ಮತ್ತು ನಂಬಿಕೆಗಳು ಅಷ್ಟೊಂದು ಇಲ್ಲವಾಗಿರುವುದು ಹಾಗೂ ಅದರ ಅವಶ್ಯಕತೆ ಇಲ್ಲದಿರುವುದು, ಧರ್ಮ, ದೇವರುಗಳ ಬುನಾದಿಯ ಮೇಲೆ ನಿಂತಿರುವ ನೃತ್ಯದಂತಹ ವಿಷಯಗಳ ಬಗ್ಗೆ ಅಲಕ್ಷ್ಯ ಬರಲು ಕಾರಣವಾಗಿದೆ.

3.    ಶಾಸ್ತ್ರೀಯ ನೃತ್ಯ ಎಂದರೆ ಏನು? ಶಾಸ್ತ್ರೀಯ ನೃತ್ಯವನ್ನು ಏಕೆ ಕಲಿಯಬೇಕು? ಅದರಿಂದ ಆಗುವ ಪ್ರಯೋಜನಗಳೇನು? ದೀರ್ಘಕಾಲ ಬೆವರು ಸರಿಸಿ ಕಲಿಯಬೇಕಾಗಿರುವ ಈ ಶಾಸ್ತ್ರೀಯ ನೃತ್ಯದ ಕಲಿಕೆಯಿಂದ ಸಮಯ ಮತ್ತು ಹಣ ಎರಡೂ ನಷ್ಟವಲ್ಲವೆ? ಶ್ರಮವೂ ಅಲ್ಲವೆ?

4.    ಜೀವನ ನಿರ್ವಹಣೆಗೆ ಹಲವಾರು ವಿಷಯಗಳನ್ನು ಕಲಿಯಬೇಕಾಗಿರುವುದರಿಂದ ಇದೊಂದು ಅನವಶ್ಯಕ ಹೊರೆ ಅಲ್ಲವೇ ಇತ್ಯಾದಿ ಹಲವಾರು ಪ್ರಶ್ನೆಗಳು ಶಾಸ್ತ್ರೀಯ ನೃತ್ಯ ಕಲಿಯಬೇಕು ಅಥವಾ ಕಲಿಯಿರಿ ಎಂಬ ಪ್ರಶ್ನೆ ಬಂದಾಗಲೆಲ್ಲಾ ಸಹಜವಾಗಿ ಎಲ್ಲರ ಮನಸ್ಸಿನಲ್ಲಿಯೂ ಮೂಡುತ್ತದೆ.

5.    ಮನರಂಜನೆಗಾಗಿ ಇಷ್ಟೊಂದು ಶಿಸ್ತುಬದ್ಧವಾಗಿ ಹಲವಾರು ವರ್ಷಗಳು ಕಷ್ಟಪಟ್ಟು ಏಕೆ ಕಲಿಯಬೇಕು? ಅದರ ಅಗತ್ಯ ಏನಿದೆ? ದೂರದರ್ಶನ, ಸಿನಿಮಾ ಮುಂತಾದ ಮಾಧ್ಯಮಗಳನ್ನು ಸುಲಭವಾಗಿ ಮನರಂಜನೆ ದೊರೆಯುವುದಿಲ್ಲವೆ?

6.    ಶರೀರದ ಸೌಷ್ಠವತೆಗೆ ಬ್ರೇಕ್, ಡಿಸ್ಕೋ ಮುಂತಾದವುಗಳು ಸಾಕಲ್ಲವೇ? ಇವುಗಳು ಬೇಗ ಕಲಿತು ಮುಗಿಯುವುದರಿಂದ ಶಾಸ್ತ್ರೀಯ ನೃತ್ಯ         ಕಲಿಯುವುದರ ಅಗತ್ಯದ ಬಗ್ಗೆ ಇಂದಿನ ಜನಾಂಗದ ಧೋರಣೆ ಸಹಜವಾಗಿಯೇ ಇದೆ. ಈ ಪ್ರಶ್ನೆಗಳಿಗೆ ಉತ್ತರವಾಗಿ ಶಾಸ್ತ್ರೀಯ ನೃತ್ಯ ಶಿಕ್ಷಣದ   ಸಾಧ್ಯಾಸಾಧ್ಯತೆಗಳ ಬಗ್ಗೆ ಕೂಲಂಕುಷವಾಗಿ ವಿವೇಚಿಸಲಾಗಿದೆ.

7.    ಮಾನವ ತನ್ನ ಮೆದುಳು ಹಾಗೂ ಅದರ ಇತರ ಕೋಶಗಳತ್ತ ಗಮನಹರಿಸುವುದೇ ಇಲ್ಲ. ಅಂದರೆ ಮೆದುಳಿನ ಬೆಳವಣಿಗೆಯ ಬಗೆಗಾಗಲಿ, ಅದರ       ವಿಕಾಸದ ಬಗೆಗಾಗಲಿ, ಅದನ್ನು ನಿರ್ಮಲವಾಗಿಯೂ ಸ್ವಚ್ಚವಾಗಿಯೂ ಇಟ್ಟುಕೊಳ್ಳುವ ಬಗೆಗಾಗಲೀ ಆಲೋಚನೆ ಮಾಡುವುದೇ ಇಲ್ಲ. ಬಹುಶಃ ಮೆದುಳು            ಇತರ ಅಂಗಗಳಂತೆ ಕಣ್ಣಿಗೆ ಗೋಚರಿಸದಿರುವುದೂ ಒಂದು ಕಾರಣ ಇರಬಹುದು. ಸ್ವಚ್ಛ, ಸದೃಢ, ಪೂರ್ಣವಿಕಸಿತ ಮೆದುಳಿನ ಅವಶ್ಯಕತೆಯನ್ನೂ     ಪ್ರಾಮುಖ್ಯತೆಯನ್ನೂ ಮಾನವ ಅರಿತಿಲ್ಲವೆ? ಇಲ್ಲ ಅದರ ಬಗ್ಗೆ ಆಲೋಚನೆ ಮಾಡಲು ಸಮಯವಿಲ್ಲವೆ? ಪ್ರತಿನಿತ್ಯ ಹಾಕುವ ಬಟ್ಟೆಗಳಿಂದ ಹಿಡಿದು     ದೇಹ ಸೌಂದರ್ಯ ಹಾಗೂ ನೈರ್ಮಲ್ಯತೆಯನ್ನು ಕಾಪಾಡಲು ಏನೆಲ್ಲವನ್ನು ಮಾಡುವ ಮಾನವ ಏಕೆ ತನ್ನ ಮೆದುಳಿನ ವಿಕಾಸ ಹಾಗೂ ಸದೃಢತೆಯ         ಬಗ್ಗೆ ಆಲೋಚಿಸುವುದಿಲ್ಲ? ಏಕೆ ಪೂರ್ಣ ವಿಕಾಸವಾದ ಮೆದುಳನ್ನು ಪಡೆಯಲು ಕಾರ್ಯಪ್ರವೃತ್ತನಾಗುವುದಿಲ್ಲ ಹಾಗೂ ಪ್ರಯತ್ನ ಪಡುವುದಿಲ್ಲ? ಇದೊಂದು ಯಕ್ಷ ಪ್ರಶ್ನೆಯಾಗುವ ಸಂಭವವೇ ಹೆಚ್ಚಾಗಿದೆ. ಮೆದುಳೂ ಸಹ ಇತರ ಅಂಗಗಳ ಹಾಗೆ ಒಂದು ಅಂಗ. ಹೇಗೆ ಶರೀರದ ಒಳಗೆ ಹೊರಗಿನ ಎಲ್ಲಾ ಅಂಗಗಳ ಬಗ್ಗೆ ನಾವು ಕಾಳಜಿ ವಹಿಸುತ್ತೇವೆಯೋ ಹಾಗೆಯೇ ಮೆದುಳಿನ ಬೆಳವಣಿಗೆ, ವಿಕಾಸಗಳ ಕಡೆಗೂ ಗಮನಹರಿಸಿದರೆ ತನ್ನನ್ನು ಕುಟುಂಬದವರನ್ನು ಸಮುದಾಯ ಹಾಗೂ ರಾಷ್ಟ್ರವನ್ನು ಅರಿತು ಒಂದು ಸುಂದರ ಸಮಾಜವನ್ನು ನಿರ್ಮಿಸಬಹುದು. ಮಾನವನ ವ್ಯಕ್ತಿತ್ವ ಪೂರ್ಣ ವಿಕಾಸವನ್ನು ಪಡೆದು ಉನ್ನತ ಮಟ್ಟದ ಮಾನವನಾಗಲು ದಾರಿಯಾಗುತ್ತದೆ.

ಈ ದಾರಿಯನ್ನು ಕಂಡುಕೊಳ್ಳಲು ಇರುವ ಮಾರ್ಗ ಯಾವುದು? ಯಾವ ರೀತಿಯ ಶಿಕ್ಷಣ, ತರಬೇತಿಗಳಿಂದ ಮೆದುಳಿನ ಪೂರ್ಣ ವಿಕಾಸದ ಕಡೆಗೆ ಗಮನಕೊಡಬಹುದು. ಪುಸ್ತಕದಲ್ಲಿ ಪ್ರಚಲಿತದಲ್ಲಿ ಇರುವ ವ್ಯವಸ್ಥೆಯು ಈ ದಿಶೆಯಲ್ಲಿ ಸಮಂಜಸವಾಗಿದೆಯೇ? ಅದರ ಕಡೆಗೆ ಏಕೆ ಯಾರಿಗಾದರೂ ಗಮನ ಹರಿದಿಲ್ಲ? ಇತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಹೋದಲ್ಲಿ ಉಪಯೋಗಿಸದೆ ಇರುವ ಅಂಗಗಳು ತಾವಾಗಿಯೇ ಕಾಲಕ್ರಮೇಣ ನಶಿಸಿ ಹೋಗುವಂತೆ ಮೆದುಳಿನ ವಿವಿಧ ಕೋಶಗಳ ಶಕ್ತಿ ಕುಂಠಿತಗೊಂಡು ಕ್ರಮೇಣ ನಶಿಸಿಹೋಗುವ ಸಂಭವವು ಕಂಡುಬರುತ್ತಿದೆ. ಇದಕ್ಕೆ ಏಕೈಕ ಪರಿಹಾರ ಮಾರ್ಗವಾಗಿ ಶಾಸ್ತ್ರೀಯ ನೃತ್ಯ ಶಿಕ್ಷಣ ಪದ್ಧತಿಯನ್ನು ಅನುಷ್ಠಾನಕ್ಕೆ ತರುವುದು ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಹಲವಾರು ಪರಿಹಾರ ಮಾರ್ಗಗಳನ್ನು ಸಮಗ್ರವಾಗಿ ಕಂಡುಕೊಳ್ಳಬೇಕಾಗಿದೆ.

ಪರಿಹಾರಗಳು:

1.    ಮೊದಲನೆ ತರಗತಿಯಿಂದ 12ನೇ ತರಗತಿಯವರೆಗೂ ಶಾಸ್ತ್ರೀಯ ನೃತ್ಯ ಶಿಕ್ಷಣವನ್ನು ಒಂದು ಕಡ್ಡಾಯ ವಿಷಯವನ್ನಾಗಿಸಿ ಪರಿಗಣಿಸಿ ಇದರ ಬೋಧನಾ ಕ್ರಮವನ್ನು ರೂಪಿಸಿ ಕಡ್ಡಾಯವಾಗಿ ಜಾರಿಗೆ ತರಬೇಕು.

2.    12ನೇ ತರಗತಿಗೆ ಬರುವಷ್ಟರಲ್ಲಿ ಅವರು ಭರತನಾಟ್ಯದ ಒಂದು ಮಾರ್ಗವನ್ನು ಅಂದರೆ ಪೂರ್ಣಹಂತವನ್ನು ಕಲಿತು ಮುಗಿಸುವ ಹಾಗೆ ಪ್ರಯೋಗ          ಕ್ರಮವನ್ನು ರೂಪಿಸಬೇಕು.

3.    ಶಾಸ್ತ್ರೀಯ ನೃತ್ಯ ಪದ್ಧತಿಯ ಗುಣಾತ್ಮಕ ಮೌಲ್ಯಗಳ ಪ್ರಚಾರವನ್ನು ಪ್ರಾತ್ಯಕ್ಷಿಕೆ ಹಾಗು ಉಪನ್ಯಾಸಗಳ ಮೂಲಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ           ಏರ್ಪಡಿಸಬೇಕು.

4.    ಮುದ್ರಣ ಹಾಗೂ ತಾಂತ್ರಿಕ ಮಾಧ್ಯಮಗಳ ಮೂಲಕವು ಈ ಮೌಲ್ಯಗಳ ಬಗ್ಗೆ ಚರ್ಚೆ ಹಾಗೂ ಸಂದರ್ಶನಗಳನ್ನು ಏರ್ಪಡಿಸಿ ಜನಜಾಗೃತಿ ಮೂಡಿಸಬೇಕು.

5.    ರಜಾದಿನಗಳಲ್ಲಿ ಪರಿಣಿತರಿಂದ ಶಿಬಿರ ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಿ ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಡಬೇಕು.

6.    ಈ ವಿಷಯಕ್ಕೆ ಸಂಬಂಧಪಟ್ಟ ನಿರ್ದೇಶನಾಲಯಗಳು, ಅಕಾಡೆಮಿಗಳು, ಸಂಘ ಸಂಸ್ಥೆಗಳು, ಹಿರಿಯ ಕಲಾವಿದರು ಮತ್ತು ಕಲಾತಜ್ಞರು ಸೇರಿ ಈ ಮೌಲ್ಯಗಳನ್ನು ಪುನರನುಷ್ಠಾನಕ್ಕೆ ತರುವಲ್ಲಿ ಸಂಘಟಿತವಾಗಿಯೂ ಸಕಾರಾತ್ಮಕವಾಗಿಯೂ ಪ್ರಯತ್ನಗಳನ್ನು ನಡೆಸಿ ಕಾರ್ಯರೂಪಕ್ಕೆ ತರಬೇಕು.

7.    ಸಮಗ್ರ ನೃತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವತ್ತ ಗಮನವನ್ನು ಹರಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಜೀವಿತದ ಎಲ್ಲಾ ಆಯಾಮಗಳಲ್ಲಿಯೂ ಎಲ್ಲಾ ಕ್ಷೇತ್ರಗಳಲ್ಲಿಯೂ ಈ ಶಿಕ್ಷಣದ ಪ್ರಯೋಜನಗಳನ್ನು ಕುರಿತು ಚರ್ಚೆ ನಡೆಸಬೇಕು.

8.    ಉನ್ನತ ಉದ್ಯಮಗಳು ತಮ್ಮ ಹಣಕಾಸು ವ್ಯವಸ್ಥೆಯಲ್ಲಿ ಈ ಮೌಲ್ಯಗಳನ್ನು ಪೋಷಿಸಲು ಧನಸಹಾಯವನ್ನು ಮೀಸಲಿರಿಸಿ ಇಂದಿನ ಜನಾಂಗಕ್ಕೆ ತಲುಪಿಸಬಹುದು.

ಈ ರೀತಿಯ ಹಲವಾರು ಪ್ರಯೋಜನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದರೆ ನೃತ್ಯ ಶಿಕ್ಷಣದ ಪ್ರಯೋಜನಗಳನ್ನು ಇಂದಿನ ಜನಾಂಗಕ್ಕೆ ತಲುಪಿಸಬಹುದು.

ನೃತ್ಯ ಶಿಕ್ಷಣ ಪದ್ಧತಿಯ ಈ ಮೌಲ್ಯಗಳು ನಮ್ಮ ಜನಾಂಗಕ್ಕೆ ತಲುಪಿದಲ್ಲಿ ಖಂಡಿತವಾಗಿಯೂ ಹುಟ್ಟಿದ ಎಲ್ಲರೂ ಒಂದು ಕಾಲದಲ್ಲಿ ಸಂಗೀತ ನೃತ್ಯಗಳನ್ನು ಕಡ್ಡಾಯವಾಗಿ ಕಲಿಯುತ್ತಿದ್ದಂತೆ ಮುಂದೆಯೂ ಕಲಿಯುವುದರಲ್ಲಿ ಸಂಶಯವಿಲ್ಲ.

ಇಂದಿನ ಜನಾಂಗದವರ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳು ಮೇಲಿವೆ. ಅವುಗಳನ್ನು ಕುರಿತು ಶಾಸ್ತ್ರೀಯ ನೃತ್ಯ, ಶಿಕ್ಷಣದ ಗುಣಾತ್ಮಕ ಅಂಶಗಳನ್ನು ಸಾಧನೆ ಮೂಲಕ ತಮ್ಮದಾಗಿಸಿಕೊಂಡರೆ ಹುಟ್ಟಿದ ಪ್ರತಿಯೊಬ್ಬರು ನೃತ್ಯ ಕಲಿಯುವಂತಾಗಿ ಸಭ್ಯ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವೇ ಇಲ್ಲ. ಇದನ್ನೇ ಸೂಚ್ಯವಾಗಿ “ನೃತ್ಯವು ಪ್ರಪಂಚವನ್ನು ಗುಣಾತ್ಮಕದೆಡೆಗೆ ಒಯ್ಯುವ ಒಂದು ಕ್ರಿಯಾತ್ಮಕ ಸಾಧನ” ಎಂದು ಹೇಳಿರುವುದು.

ನೃತ್ಯದ ಕಲಿಕೆ ಹಾಗೂ ಅಭ್ಯಾಸದಿಂದ ಮನುಷ್ಯ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳುವುದರ ಜೊತೆಗೆ ಆಧುನಿಕ ಜಗತ್ತಿನಲ್ಲಿಯೂ ಸಮರ್ಥವಾಗಿ ಮುನ್ನಡೆಯಬಹುದು. ನಾಟ್ಯ, ನೃತ್ಯಗಳ ಅಭ್ಯಾಸಕ್ಕೂ ಮತ್ತು ಸಾಧನೆಗೂ ಇಂತಹ ಗುಣಾತ್ಮಕವಾದ ಕಾರಣಗಳು ಸಾಕಾಗುವುದಿಲ್ಲವೆ? ಇವುಗಳಿಗಿಂತ ಮಿಗಿಲಾದ ಅಂಶಗಳು ಬೇಕೆ?

ಚತುರ್ವೇದಗಳಿಂದ ಎಲ್ಲಾ ಸಾರಗಳನ್ನು ಮೈಗೂಡಿಸಿಕೊಂಡು ಪಂಚಮವೇದ ಎಂದು ಹೆಸರುಗೊಂಡಿರುವ ಈ ನಾಟ್ಯದ ಪ್ರಶಂಸೆಯು ನಾಟ್ಯ ಶಾಸ್ತ್ರದಲ್ಲಿ ಈ ರೀತಿ ಉಕ್ತವಾಗಿದೆ.

ಪಾಠ್ಯಂ ನಾಟ್ಯಂ ತಥಾ ಗಾನಂ
ಚಿತ್ರಂ ವಾದಿತ್ವಮೇವಚ
ವೇದಂ ಮಂತ್ರಾರ್ಥ ವಾಚನೇ
ಸಮಮೇ ತದ್ ಭವಿಷ್ಯತಿ

ನಾಟ್ಯಶಾಸ್ತ್ರ

ಓದುವುದು, ನರ್ತಿಸುವುದು, ಹಾಡುವುದು, ಚಿತ್ರಲೇಖನ, ವಿವಿಧ ವಾದ್ಯಗಳ ವಾದನ ಇತ್ಯಾದಿಗಳು ವೇದಪಠನಕ್ಕೆ ಸಮಾನವಾದದ್ದು ಎಂದು ಹೇಳಿದ್ದಾರೆ.