ಭಾರತೀಯತೆ ಕಂಡು ಬರುವುದು ಮೂಲವಾಗಿ ನಮ್ಮ ಜೀವನದ ಹೆಜ್ಜೆ ಹೆಜ್ಜೆಯಲ್ಲಿ. ಭಾರತದ ಅಂತಃಶಕ್ತಿಯಿರುವುದು ಅದರ ಸಂಸ್ಕೃತಿಯ ಕಣಕಣಗಳಲ್ಲಿ. ಇಂದಿನ ಅತ್ಯಾಧುನಿಕ ಯುಗದಲ್ಲೂ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ದಾರ್ಶನಿಕ ರೂಪದಲ್ಲಿ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತಿರುವುದು ನಮ್ಮ ಸಂಸ್ಕೃತಿ. ಇತಿಹಾಸದ ಪುಟಗಳಲ್ಲಿ ನಮ್ಮ ಸಂಸ್ಕೃತಿಯ ರೂಪುರೇಷೆಗಳು ಎಳೆ ಎಳೆಯಾಗಿ ನೇಯ್ದುಕೊಂಡಿವೆ. ಅನೇಕ ಬಾರಿ ಸಾಂಸ್ಕೃತಿಕ ಬೆಳವಣಿಗೆಗೆ ಕೊಡಲಿ ಪೆಟ್ಟು ಬಿದ್ದಿದ್ದರೂ, ಆಳವಾಗಿ ಬೇರೂರಿರುವ ಸಂಸ್ಕೃತಿಯು ಬಿಳಲು ಬಿಟ್ಟು ಹೊಸ ಹೊಸ ಕವಲೊಡೆಯಲು ಸಾಧ್ಯವಾಗಿದೆ. ಹೀಗೆ ಕವಲೊಡೆದ ಸಂಸ್ಕೃತಿಯ ಒಂದೊಂದು ಶಾಖೆಯೂ ಹೊಸ ಕವಲೊಡೆದ ಸಂಸ್ಕೃತಿಯ ಒಂದೊಂದು ಶಾಖೆಯೂ ಹೊಸ ವಿಚಾರಗಳನ್ನು ಮತ್ತು ಆದರ್ಶಗಳನ್ನು ಪರಂಪರೆಯೊಂದಿಗೆ ಮೈಳೈಸಿ ಮುಂದಿನ ಕವಲಿಗೆ ಸಿದ್ಧವಾಗುತ್ತದೆ. ಇದು ಪ್ರಕೃತಿಯ ನಿಯಮ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು” ಡಿ.ವಿ.ಜಿಯವರ ಈ ಮಾತುಗಳು ಎಂದೆಂದಿಗೂ ಸತ್ಯ.

ಜಗತ್ತಿನ ಮತ್ತಾವ ದೇಶವೂ ಇಷ್ಟು ಭವ್ಯ ಮತ್ತು ವೈವಿಧ್ಯಮಯ ಸಂಸ್ಕೃತಿಗೆ ಜನ್ಮವಿತ್ತಿಲ್ಲ. ಆರ್ಥಿಕ, ವೈಜ್ಞಾನಿಕ ರಂಗದಲ್ಲಿ ಪ್ರಗತಿ ಸಾಧಿಸಿರುವ ಎಷ್ಟೋ ಮುಂದುವರೆದ ರಾಷ್ಟ್ರಗಳು ಸಾಂಸ್ಕೃತಿಕ ತಳಹದಿಯ ಭದ್ರತೆಯಿಲ್ಲದೆ ಸಾಮಾಜಿಕ ಸಮಸ್ಯೆಗಳ ಬೀಡಾಗಿವೆ. ಆದರೆ ಭಾರತ ಎಂತಹ ದುರ್ಭರ ಪ್ರಸಂಗದಲ್ಲೂ ಸ್ಥಿಮಿತವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಪಡೆದಿದೆ. ಇದಕ್ಕೆ ಕಾರಣ ಭಾರತೀಯ ಸಂಸ್ಕೃತಿ. ಇಂತಹ ಭವ್ಯೆತೆಯ ಆದರ್ಶವನ್ನು ಮೈಗೂಡಿಸಿಕೊಂಡ ನಮ್ಮ ದೇಶದ ಸಂಸ್ಕೃತಿಗೆ ನಾವೇ ಅಪರಿಚಿತರಾಗುವ ಅನುಭವ ನಿಜಕ್ಕೂ ಶೋಚನೀಯ. ಭಾರತವು ಬ್ರಿಟಿಷರ ದಬ್ಬಾಳಿಕೆಗೆ ಸಿಲುಕಿದಾಗ ಆದ ಶೋಷಣೆ ಹಿಂದೆ ಯಾವ ಪರಕೀಯರ ಆಳ್ವಿಕೆಗೆ ಒಳಗಾದ ಸಂದರ್ಭಕ್ಕಿಂತ ಹತ್ತು ಪಟ್ಟು ಭೀಕರವಾದುದು. ಭಾರತೀಯ ಸಂಸ್ಕೃತಿಗೆ ಧಕ್ಕೆ ತಂದರೆ ಭಾರತ ತನ್ನ ತನವನ್ನು ಕಳೆದುಕೊಳ್ಳುತ್ತದೆ ಎಂಬ ಕಠೋರ ವಿಚಾರವು ಬ್ರಿಟಿಷರಿಗೆ ಚೆನ್ನಾಗಿ ತಿಳಿದಿತ್ತು. ಅದಕ್ಕಾಗಿಯೇ ಅವರು ಭಾರತೀಯ ಕಲಾಪ್ರಕಾರಗಳ ಹಾಗೂ ಕರಕುಶಲ ವಸ್ತುಗಳ ಉತ್ಪಾದನೆಯ ನಾಶಕ್ಕೆ ಮೊದಲು ಮಾಡಿದರು. ನಾಡ ಪ್ರಭುಗಳು, ನವಾಬರು, ಆಳರಸರುಗಳು ತಮ್ಮ ಜೀವನದ ಭತ್ಯೆಗಾಗಿ ಬ್ರಿಟಿಷರಿಗೆ ಕೈಚಾಚುವ ದಾರುಣ ಸ್ಥಿತಿಯಲ್ಲಿದ್ದಾಗ, ಕಲಾವಿದರನ್ನು ಪೋಷಿಸುವ ಮತ್ತು ಕಲೆಯನ್ನು ಉತ್ತೇಜಿಸುವ ಕಾರ್ಯವನ್ನು ಹೇಗೆ ಮಾಡಬಲ್ಲವರಾಗಿದ್ದರು. ಕರಭಾರದಿಂದ, ವೈಜ್ಞಾನಿಕ ಉಪಕರಣಗಳ ಬಳಕೆಯಿಂದ ಆಘಾತಗೊಂಡ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾದಾಗ ಕಲೆಯನ್ನು ಅನುಭವಿಸುವ ಅಥವಾ ಆನಂದಿಸುವ ಸಹನೆ ಅವರಲ್ಲಿ ಉಳಿದಿರುತ್ತದೆಯೇ. ರಾಜಾಶ್ರಯ, ದೇವಾಲಯ ಸೇವೆಯಿಂದ, ಹಾಗೂ ಜನಸಾಮಾನ್ಯರ ಆದರದಿಂದ ಕಲೆಯನ್ನು ಕಾಪಾಡಿಕೊಂಡು ಬಂದ ಕಲಾವಿದರ ಜೀವನ ಅತ್ಯಂತ ದಾರುಣ ಸ್ಥಿತಿಯನ್ನು ತಲುಪಿತು.

ಭಾರತೀಯ ಕಲೆಯು ಕಲಾವಿದನ ಉದ್ವಿಗ್ನ ಮನೋಭಾವದ ವೈಕ್ಯಲದ ನಿರೂಪಣೆಯಲ್ಲ. ಅಥವಾ ಕೇವಲ ಮೇಲ್ದರ್ಜೆಯ ರಸಿಕರು ಮಾತ್ರ ಅನುಭವಿಸುವ ಅಭಿರುಚಿಯನ್ನು ಸೂಸುವಂತಹುದಲ್ಲ. ಇಲ್ಲವೆ, ಯಾವುದೇ ಧಾರ್ಮಿಕ ಮುಖಂಡರ ಆಶೋತ್ತರಗಳನ್ನು ರೂಪಿಸುವ ಮಾರ್ಗವಾಗಿರಲಿಲ್ಲ. ಬದಲು ಕಲಾವಿದನ ಆಧ್ಯಾತ್ಮ ಭಾವನೆಯ ಪ್ರತೀಕವಾಗಿತ್ತು. ಸಾಮಾನ್ಯ ಜನರೂ ತಮ್ಮ ದುಃಖ ಕಷ್ಟಗಳನ್ನು ಮರೆತು ಸ್ವಲ್ಪ ಹೊತ್ತಿನಷ್ಟಾದರೂ ಮಾನಸಿಕ ಆನಂದ ಪಡೆಯುವ ಸಾಧನವಾಗಿತ್ತು. ಕಲಾವಿದ ಸಾಮಾಜಿಕ ರೀತಿ ನೀತಿಗಳನ್ನು ರೂಪಿಸುವ ಒಂದು ಸಂದೇಶವನ್ನು ಕಲೆಯ ಮೂಲಕ ಬಿತ್ತಿರಿಸುತ್ತಿದ್ದ. ಹೀಗೆ ಒಂದು ಪ್ರಯೋಜನಾತ್ಮಕ ಸಂದೇಶ ಮತ್ತು ಮಾನಸಿಕ ಆನಂದವನ್ನು ಪಡೆದ ಕೂಲಿಗಾರ, ಬಡಗಿ, ನೇಕಾರ, ಪಂಡಿತ, ಸೈನಿಕ, ಸ್ತ್ರೀ ಮಕ್ಕಳು ಎಲ್ಲ ವರ್ಗದವರೂ ಒಂದು ಹೊಸ ಚೇತನವನ್ನು ಮೈದುಂಬಿಸಿಕೊಂಡು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಸುಖ ದುಃಖಗಳನ್ನು ಹಂಚಿಕೊಂಡು ಜೀವನವನ್ನೇ ಕಲಾತ್ಮಕವಾಗಿ ಕಳೆಯುತ್ತಿದ್ದರು.

ದೇವಾಲಯಗಳು, ರಂಗಮಂದಿರಗಳು, ರಾಜಸಭೆಗಳು, ಪಂಚಾಯಿತಿ ಕಟ್ಟೆಗಳು, ಕಲೆ, ಕಲಾವಿದ ಮತ್ತು ಪೋಷಕರನ್ನು ಒಂದುಗೂಡಿಸುವ ವೇದಿಕೆಗಳಾಗಿದ್ದವು. ಔಷಚಾರಿಕತೆಯ ಮೇಲ್ಮುಸುಕನ್ನು ಹೊಂದಿಲ್ಲದ ಇವರ ನಡುವಿನ ಸರಳ ಸಂಬಂಧವು ಕಲೆಯು ಸಾಮಾಜಿಕ ಜೀವನದ ಒಂದು ಅಭಿಭಾಜ್ಯವಾದ ಅಂಗವಾಗುವಂತೆ ಮಾಡಿತ್ತು. ಕಲೆಯು ಸಾಮಾಜಿಕ ಆದರ್ಶಗಳನ್ನೂ, ಆಧ್ಯಾತ್ಮಿಕ ಮೌಲ್ಯಗಳನ್ನೂ ಮತ್ತು ಭಾರತೀಯ ತಾತ್ವಿಕ ವಿಚಾರಗಳನ್ನೂ ಜನಸಾಮಾನ್ಯರಿಗೆ ನೇರವಾಗಿ ಮತ್ತು ಪರಿಣಾಮಕಾರಿಯಾಗಿ ಮುಟ್ಟಿಸುವ ಸಾಧನವಾಗಿತ್ತು. ಅಲ್ಲದೆ ಎಲ್ಲ ಕಲಾ ಮಾಧ್ಯಮಗಳ ಧ್ಯೇಯವೂ ಈ ಅಂಶಗಳನ್ನು ಪೋಷಿಸುವ ಒಂದು ಸಾಮರಸ್ಯದ ಅಭಿವ್ಯಕ್ತಿಯೆನಿಸಿತ್ತು. ಕರಕುಶಲ ಕಲಾವಿದ, ಶಿಲ್ಪ, ಚಿತ್ರಕಾರ, ನರ್ತಕ, ಗಾಯಕ, ನಟ ಇವರೆಲ್ಲರ ವಿಚಾರ ಧಾರೆಗಳು ಸಾಹಿತ್ಯ, ಧರ್ಮ ಮತ್ತು ತಾತ್ವಿಕ ಅಂಶಗಳಿಂದ ಪ್ರಭಾವಿತಗೊಂಡಿದ್ದವು. ಒಂದು ಪ್ರಕಾರದ ಕಲಾವಿದ. ಇನ್ನೊಂದು ಕಲಾಪ್ರಕಾರದ ಕಲಾವಿದರ ವಿಚಾರವನ್ನು ಗೌರವಿಸಿ, ಅವಲಂಬಿಸುವ ಅವಕಾಶವಿದ್ದುದರಿಂದ ನಮ್ಮ ಕಲೆಯ ಅಭಿವ್ಯಕ್ತಿಯಲ್ಲಿ ಸಾಮರಸ್ಯ, ಹೊಂದಾಣಿಕೆ ಇತ್ತು.

ಇಂತಹ ಒಂದು ಸುವ್ಯವಸ್ಥಿತ ಪ್ರಕ್ರಿಯೆಯನ್ನು ಬುಡಮೇಲು ಮಾಡಿ ಅದರ ಆಧಾರಕ್ಕೇ ಕೊಡಲಿ ಪೆಟ್ಟು ಕೊಡಲು ಬ್ರಿಟಿಷರು ಸತತ ಪ್ರಯತ್ನ ಮಾಡಿದರು. ಪ್ರಾಯಶಃ 19ನೇ ಶತಮಾನದ ಕೊನೆಯಲ್ಲಿ ಪುನರುಜ್ಜೀವನವಾಗದಿದ್ದರೆ ಭಾರತೀಯ ಕಲೆಯು ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಈ ಕಾಲ ಸಮಗ್ರ ಭಾರತೀಯ ಜೀವನ ಮಾರ್ಗವನ್ನೇ ಬದಲಿಸಿತು. ರಾಷ್ಟ್ರೀಯ ಚೇತನ ಬೆಳೆದಂತೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಒಂದು ರೀತಿಯ ವಿಶಿಷ್ಟ ಕ್ರಾಂತಿಯೇ ಉಂಟಾಯಿತು. ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳಲ್ಲೆವೂ ಪುನಃಶ್ಚೇತನ ಪಡೆದವು. ಈ ಶುಭ ನವೋದಯ ಕಾಲವು ಅಧೋಗತಿಗಿಳಿದ ನಾಟ್ಯಕಲೆಗೆ ಮತ್ತು ಕಲಾವಿದರಿಗೆ ಮತ್ತೆ ಗೌರವ ಸ್ಥಾನ ಗಳಿಸಿಕೊಟ್ಟಿತು. 1930ರವರೆಗೆ ಪುನರುಜ್ಜೀವನ ಸ್ಥಿತಿಯು ಮಂದಗತಿಯಲ್ಲಿದ್ದು ಕ್ರಮೇಣವಾಗಿ ನಾಟ್ಯಕಲೆಯು ರಂಗಮಂದಿರಕ್ಕೆ ಪ್ರವೇಶವನ್ನು ಪಡೆಯಿತು. ಮತ್ತೊಮ್ಮೆ ಸಾರ್ವಜನಿಕರಿಗೆ ನೃತ್ಯವನ್ನು ನೋಡುವ ಅವಕಾಶ ದೊರೆಯಿತು. ಆದರೆ ಇಷ್ಟು ಹೊತ್ತಿಗಾಗಲೇ ಜನಜೀವನ ಮೌಲ್ಯಗಳು ಪರಿವರ್ತನೆ ಹೊಂದಿದ್ದ ಕಾರಣ ನೃತ್ಯಕಲೆ ಸಾಂಪ್ರದಾಯಿಕವಾಗಿ, ಶಾಸ್ತ್ರೀಯ ಗುಣಗಳನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿತ್ತು. ಆದರೆ ಜನರ ವಿಚಾರಗಳು, ರೀತಿನೀತಿಗಳು ಬಹಳ ಭಿನ್ನವಾಗಿ ನೃತ್ಯ ಕಲೆಯು ಸಮಕಾಲೀನತೆಯ ಹೊರಗುಳಿಯಬೇಕಾಯಿತು.

ನೃತ್ಯಕಲೆಯಲ್ಲಿ ಆಯಾ ದೇಶದ ಸಂಸ್ಕೃತಿಯು ಮಾರ್ದನಿಸುತ್ತದೆ. ಇತರ ಕಲೆಗಳಲ್ಲಿ ಕಂಡು ಬರುವ ಶೀಘ್ರವಾದ ಬದಲಾವಣೆ ನೃತ್ಯ ಪ್ರಕಾರಗಳಲ್ಲಿ ಕಂಡು ಬರುವುದಿಲ್ಲ. ಸಾಮಾಜಿಕ ಬದಲಾವಣೆಗಳನ್ನು ನಿಧಾನವಾಗಿ ಮೈಗೂಡಿಸಿಕೊಳ್ಳುವ ಕಲೆ ನೃತ್ಯಕಲೆ. ಎಷ್ಟೇ ಪಾಶ್ಚಾತ್ಯ ಪ್ರಭಾವ ತೀವ್ರವಾಗಿದ್ದರೂ ನೃತ್ಯಕಲೆಯು ಮಾತ್ರ ನವ್ಯ ವಿಚಾರಗಳ ಬೆನ್ನೇರದೆ ಭಾರತೀಯ ಸಂಪ್ರದಾಯವನ್ನು ಶಾಸ್ತ್ರಬದ್ಧತೆಯನ್ನು ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಗುರುವಿನಲ್ಲಿ ಶ್ರದ್ಧೆ, ಭಕ್ತಿ, ರಂಗಮಂಟಪದ ಕಟ್ಟುಪಾಡುಗಳು, ವೇಷ ಭೂಷಣಗಳಲ್ಲಿ ಅನುಸರಿಸುವ ನಿಯಮಗಳು ಇವೆಲ್ಲವನ್ನೂ ಇಂದಿನ ಆಧುನಿಕ ಪರಿಸರದಲ್ಲೂ ನೃತ್ಯ ವಿದ್ಯಾರ್ಥಿಗಳು ಪಾಲಿಸುತ್ತಾರೆ. ವಿಶ್ವವಿದ್ಯಾನಿಲಯ ಮಟ್ಟದ ನೃತ್ಯಶಿಕ್ಷಣ. ವಿದ್ಯಾಭ್ಯಾಸ ಇನ್ನೂ ಅಷ್ಟು ಉತ್ತೇಜನಕಾರಿಯಾಗಿಲ್ಲ. 1930ನೇ ವರ್ಷದಿಂದೀಚೆಗೆ ನೃತ್ಯರಂಗದಲ್ಲಿ ಸಾಕಷ್ಟು ಪರಿವರ್ತನೆಗಳು, ಪ್ರಮುಖ ಘಟನೆಗಳು ಜರುಗಿ ನೃತ್ಯಕಲೆಯ ಬೆಳೆವಣಿಗೆಗೆ ಹೊಸ ತಿರುವನ್ನಿತ್ತಿವೆ.

1932ರಲ್ಲಿ ದಕ್ಷಿಣ ಭಾರತದಲ್ಲಿ ಉತ್ತಮ ಸಾಮಾಜಿಕ ಮೌಲ್ಯಗಳನ್ನು ಕಾಪಾಡಬೇಕೆನ್ನುವ ಪಂಗಡದವರಿಂದ “ನಾಚ್ ವಿರುದ್ಧ” (ನೃತ್ಯವನ್ನು ನೈತಿಕವಾಗಿ ಬಹಳ ಕೀಳು ಮಟ್ಟದಲ್ಲಿ ನೋಡಲಾಗುತ್ತಿತ್ತು. ನಾಚ್ ಪದವು, ನಾಚ್‌ವಾಲಿಗಳೆಂಬ ಪದವು ಸುಸಂಸ್ಕೃತ ಸಂಪ್ರದಾಯದ ಬೆಳವಣಿಗೆಗೆ ಅಡ್ಡಗಾಲಿನಂತೆ ಇದ್ದವು) ಚಳುವಳಿ ಪ್ರಾರಂಭವಾಯಿತು. ಈ ಚಳುವಳಿಯು ಒಂದು ವೇಳೆ ಯಶಸ್ವಿಯಾಗಿರದಿದ್ದರೆ ಶಾಸ್ತ್ರೀಯ ನೃತ್ಯಕಲೆಯು ಅವಸಾನವನ್ನು ಹೊಂದುತ್ತಿತ್ತು. ಪ್ರಭಾವಶಾಲಿ ವಕೀಲರೂ, ಸ್ವಾತಂತ್ರ್ಯ ಹೋರಾಟಗಾರರೂ ಆದ ಇ.ಕೃಷ್ಣಅಯ್ಯರ್ ಎಂಬುವರು ಈ ಚಳುವಳಿಯ ಮುಂದಾಳತ್ವವನ್ನು ವಹಿಸಿ, ನಶಿಸಿ ಹೋಗುತ್ತಿದ್ದ ಶಾಸ್ತ್ರೀಯ ನೃತ್ಯಕಲೆಗೆ ಜೀವ ತುಂಬಿದರು. ಇಷ್ಟು ಹೊತ್ತಿಗಾಗಲೇ ಉದಯಶಂಕರ್ ಅವರು ನಮ್ಮ ದೇಶದ ಸಂಸ್ಕೃತಿಯ ಹಿರಿಮೆಯನ್ನು ನಾಟ್ಯಕಲೆಯ ಮೂಲಕ ಪ್ರಪಂಚದ ಇತರ ದೇಶಗಳಲ್ಲಿ ಸಾರತೊಡಗಿದರು. ಗುರುದೇವ ರವೀಂದ್ರನಾಥ ಠಾಕೂರರು ಶಾಂತಿನಿಕೇತನದಲ್ಲಿ ನೃತ್ಯಕಲೆಯ ಶಿಕ್ಷಣಾಭ್ಯಾಸವನ್ನು ಏರ್ಪಾಟು ಮಾಡಿಸಿದರು. ಕೇರಳದಲ್ಲಿ ಕವಿ ವಲ್ಲತ್ತೋಳರು ಕಥಕ್ಕಳಿ ಸಂಪ್ರದಾಯವನ್ನು ನೆಲೆಗೊಳಿಸಿದರು. ಮೇಡಂ ಮೇನಕ ಕಥಕ್ ಸಂಪ್ರದಾಯವನ್ನು ಎಲ್ಲ ಕಡೆ ಜನಪ್ರಿಯಗೊಳಿಸಿದರು. “ನಾಚ್ ವಿರುದ್ಧ ಆಂದೋಲನದ ಸಂಕೇತವಾಗಿ 1933ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯವರು ಕಲ್ಯಾಣಿ ಸೋದರಿಯರ ಶಾಸ್ತ್ರೀಯ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಆಮಂತ್ರಿತರ ಸಮ್ಮುಖದಲ್ಲಿ ಏರ್ಪಡಿಸಿದರು. ನೃತ್ಯವನ್ನು ವೀಕ್ಷಿಸುತ್ತಿದ್ದ ರುಕ್ಷ್ಮಿಣೀದೇವಿಯವರು ಕುಲೀನ ಮನೆತನದವರಾಗಿದ್ದು, ಭರತನಾಟ್ಯವನ್ನು ಕಲಿಯುವ ನಿರ್ಧಾರವನ್ನು ಕೈಗೊಂಡರು. ತಮ್ಮ ನೃತ್ಯಕಲೆಯ ಮೂಲಕ ಸಾಂಸ್ಕೃತಿಕ ಚಳುವಳಿಯನ್ನೇ ಪ್ರಾರಂಭಿಸಿದರು. ಅಡಿಯಾರಿನಲ್ಲಿ ತಮ್ಮದೇ ಆದ ಕಲಾಕ್ಷೇತ್ರವನ್ನು ಪ್ರಾರಂಭಿಸಿದರು. ಆಗ ಕುಲೀನ ಮನೆತನದ ಗಂಡು ಹುಡುಗರು, ಹೆಣ್ಣು ಮಕ್ಕಳು ಕಲಾಕ್ಷೇತ್ರದಲ್ಲಿ ನೃತ್ಯವನ್ನು ಕ್ರಮಬದ್ಧವಾಗಿ ಕಲಿಯಲು ಮೊದಲು ಮಾಡಿದರು. ಒಮ್ಮೆ ಅಸಂಸ್ಕೃತವೆಂದು ಬಹಿಷ್ಕರಿಸಲ್ಪಟ್ಟ ನಾಟ್ಯಕಲೆ ಪುನರುತ್ಥಾನಗೊಂಡಿತು. ಮುಂದೆ ಎರಡು ದಶಕಗಳಲ್ಲಿ ಸ್ವತಂತ್ರ ಭಾರತದಲ್ಲಿ ಭಾರತೀಯ ಶಾಸ್ತ್ರೀಯ ಕಲೆಯು ಜನಪ್ರಿಯತೆಯನ್ನು ಗಳಿಸಿ ಮುಖ್ಯವಾದ ಸಮಾರಂಭಗಳಲ್ಲೆಲ್ಲ ಅವಶ್ಯಕವಾಗಿ ಪ್ರದರ್ಶಿಸುವ ಮಟ್ಟಿಗೆ ಬಂದಿತು. ಆಗ ನೃತ್ಯವನ್ನು ಕಲಿಯುವವರ ಸಂಖ್ಯೆ ಹೆಚ್ಚಾಗತೊಡಗಿತು.

ಚಾರಿತ್ರಿಕ ಕಾಲದಲ್ಲಿ ಭಾರತೀಯ ಕಲೆಗೆ ಶ್ರೀಮಂತ ಕೊಡುಗೆಯನ್ನು ನೀಡಿದ ಕರ್ನಾಟಕದ ನೃತ್ಯಕಲೆಯು ದಕ್ಷಿಣ ಭಾರತದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿತು. ಸ್ವಾತಂತ್ರ‍್ಯ ಪೂರ್ವದಲ್ಲಿಯ ಒಡೆಯರ ಕಲಾಭಿರುಚಿಯು ನೃತ್ಯಕಲೆಯ ಪೋಷಣೆಗೆ ಬಹಳ ಸಹಾಯಕವಾಯಿತು. ಮೈಸೂರಿನ ಅರಮನೆಯಲ್ಲಿ ಆಸ್ಥಾನ ನರ್ತಕಿಯರ ಪಾತ್ರ ಮೈಸೂರು ಸಂಪ್ರದಾಯದ ನೃತ್ಯವನ್ನು ಬೆಳೆಸುವಲ್ಲಿ ಹಿರಿಯದಾಗಿದೆ. ಮೈಸೂರು, ಬೆಂಗಳೂರು, ಮುಳಬಾಗಿಲು, ಕೋಲಾರ, ಟಿ.ನರಸೀಪುರ ಮುಂತಾದ ಸ್ಥಳಗಳಲ್ಲಿ ಹಲವು ದೇವದಾಸಿಯರು, ನಾಟ್ಯ ಗುರುಗಳು ಅಭಿನಯ ಪ್ರಧಾನವಾದ ನಾಟ್ಯ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದರು. ದೇವದಾಸೀ ಪದ್ಧತಿಯ ರದ್ದತಿಯ ಕಾಯ್ದೆಯಿಂದಾಗಿ ಈ ವಂಶದಲ್ಲಿ ನೃತ್ಯವನ್ನು ಬೆಳೆಸಿಕೊಂಡು ಬಂದ ಕಲಾವಿದರು ಜೀವನ ನಿಮಿತ್ತಕ್ಕಾಗಿ ಇತರ ಉದ್ಯೋಗಗಳನ್ನು ಅನುಸರಿಸಬೇಕಾಯಿತು. ಈ ಕಾಲದ ಕರ್ನಾಟಕದ ಪ್ರಮುಖ ಕಲಾವಿದರೆಂದರೆ ಬೈಕೂರು ವೆಂಕಟಲಕ್ಷ್ಮೀ, ತಿರುಮಕೂಡ್ಲು ಸುಂದರಮ್ಮ, ನಾಗರತ್ನ, ಚಂದ್ರ ವದನಮ್ಮ, ಪುಟ್ಟದೇವಮ್ಮ, ಜಟ್ಟಿ ತಾಯಮ್ಮ ಮುಂತಾದವರು. ಪ್ರಮುಖ ನಾಟ್ಯಾಚಾರ್ಯರೆಂದರೆ ಘನಕೇಸರಿ ವೆಂಕಟಸುಬ್ಬಯ್ಯ ಭಟ್ಟ ಯಜಮಾನ ಕೋಲಾರ ಕಿಟ್ಟಪ್ಪ, ಪುಟ್ಟಪ್ಪ, ಗುಂಡಪ್ಪ ಮುಂತಾದವರು. ಆಸ್ಥಾನ ನರ್ತಕಿಯರಾಗಿದ್ದ ಶ್ರೀಮತಿ ಜೇಜಮ್ಮ ಮತ್ತು ವೆಂಕಟಲಕ್ಷ್ಮಮ್ಮನವರ ಕಲಾಸೇವೆ ಚಿರಸ್ಮರಣೀಯವೆನಿಸಿದೆ. ಬೆಂಗಳೂರಿನಲ್ಲಿ ಸ್ವಾಂತಂತ್ರ‍್ಯಾನಂತರ ನೃತ್ಯಕಲೆಯನ್ನು ಕಲಿಯಬೇಕೆನ್ನುವ ಅಭಿಲಾಷೆ ಹೆಚ್ಚಾಯಿತು. ಆ ಹೊತ್ತಿಗಾಗಲೇ ಶಾಂತಾರಾವ್ ಮತ್ತು ಮಾಯಾರಾವ್ ಅವರು ಉದಯೋನ್ಮುಖ ಕಲಾವಿದರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದರು. ರಾಂಗೋಪಾಲ್ ಅವರು ದಕ್ಷಿಣದಲ್ಲೇ ನೃತ್ಯಕಲೆಯಲ್ಲಿ ಒಂದು ಹೊಸ ಆಯಾಮ ಸೃಷ್ಟಿಸಿ ಕರ್ನಾಟಕದಲ್ಲಿ ನೃತ್ಯಕಲೆಯ ಬೆಳವಣಿಗೆಗೆ ಕಾರಣರಾಗಿದ್ದರು. ಬೆಂಗಳೂರಿನ ಅನೇಕ ನೃತ್ಯಾಸಕ್ತರು ವಿದ್ಯಾವಂತರು ಮದರಾಸಿಗೆ, ಅಡಿಯಾರಿನ ಕಲಾಕ್ಷೇತ್ರಕ್ಕೆ ಹೋಗಿ ನೃತ್ಯವನ್ನು ಕಲಿತು ಬಂದು ನೃತ್ಯಶಾಲೆಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳನ್ನು ತಯಾರು ಮಾಡಿದರೆ, ಇನ್ನು ಕೆಲವರು ವಂಶಪಾರಂಪರ್ಯವಾಗಿಬಂದ ನೃತ್ಯ ಕಲೆಯನ್ನು ಕುಲೀನ ಮನೆತನದ ಹೆಣ್ಣುಮಕ್ಕಳಿಗೆ ಹೇಳಿಕೊಟ್ಟು ಉತ್ತಮ ಕಾರ್ಯಕ್ರಮಗಳನ್ನು ನೀಡಲಾರಂಭಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪುರುಷರೂ ನೃತ್ಯವನ್ನು ಕಲಿತು ಪ್ರದರ್ಶನ ನೀಡುತ್ತಿದ್ದರು. ಯು.ಎಸ್. ಕೃಷ್ಣರಾವ್ ಮತ್ತು ಶ್ರೀಮತಿ ಚಂದ್ರಾಭಾಗಾದೇವಿಯವರ ಯುಗಳ ನೃತ್ಯ ಕಾರ್ಯಕ್ರಮಗಳು ಒಂದು ಹೊಸ ಕ್ರಾಂತಿಯನ್ನೇ ಉಂಟುಮಾಡಿದವು. ಅದರಂತೆ ಉತ್ತರ ಕರ್ನಾಟಕದಲ್ಲಿ ಶ್ರೀನಿವಾಸ ಕುಲಕರ್ಣಿಯವರು ತಮ್ಮ ಸಂಸ್ಥೆಯ ಮೂಲಕ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಕೇಶವಮೂರ್ತಿಯವರು ಕೇಶವ ನೃತ್ಯಶಾಲೆಯನ್ನು ಪ್ರಾರಂಭಿಸಿ ಉತ್ತಮ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದರು. ಮೈಸೂರು ಸಂಪ್ರದಾಯವನ್ನು ವಂಶಪಾರಂಪತ್ಯವಾಗಿ ಉಳಿಸಿಕೊಳ್ಳುವ ಅಭಿಲಾಷೆಯಿಂದ ಸಿ. ರಾಧಾಕೃಷ್ಣ ಅವರು ಬೆಂಗಳೂರಿನಲ್ಲಿ ನೃತ್ಯ ಕಲಿಸತೊಡಗಿದರು. ಕೌಶಿಕ್ ಅವರು ಅನೇಕ ಪ್ರಾಯೋಗಿಕ ಯೋಜನೆಗಳಿಂದ ಕರ್ನಾಟಕದ ನೃತ್ಯ ಪರಂಪರೆ ಬೆಳೆಸಬೇಕೆನ್ನುವ ಇಚ್ಛೆಗೆ ಸ್ಫೂರ್ತಿ ಒದಿಗಿಸಿದರು. ನೂಪುರ ನೃತ್ಯ ಶಾಲೆಯ ಶ್ರೀಮತಿ ಲಲಿತಾ ಶ್ರೀನಿವಾಸನ್ ಭರತನಾಟ್ಯದಲ್ಲಿ ಮೈಸೂರು ಸಂಪ್ರದಾಯದ ವೈಶಿಷ್ಟ್ಯಕ್ಕೆ ಒತ್ತು ನೀಡಿದರು. ಮದ್ರಾಸಿನಲ್ಲಿ ಸಿನಿಮಾರಂಗದಲ್ಲಿ ಹಲವು ನೃತ್ಯ ಕಲಾವಿದರು ನೃತ್ಯ ನಿರ್ದೇಶಕರಾಗಿ ದುಡಿಯತೊಡಗಿದರು. ಬೆಂಗಳೂರಿನಲ್ಲಿ ಒಂದು ರೀತಿಯ ಉತ್ತಮ ಅಭಿರುಚಿಯ ಪರಿಸರವನ್ನು ಕಂಡು ಹಲವು ಮದರಾಸಿನ ನೃತ್ಯಪಟುಗಳು ಬೆಂಗಳೂರಿನಲ್ಲಿ ನೆಲೆಸಿ ನೃತ್ಯಶಾಲೆಗಳನ್ನು ಪ್ರಾರಂಭಿಸಿ ತಮಿಳು ರಚನೆಗಳನ್ನೇ ಹೆಚ್ಚು ಜನಪ್ರಿಯಗೊಳಿಸಲು ಮೊದಲು ಮಾಡಿದರು. ಕನ್ನಡ ಜಾಗೃತಿಯ ಆಂದೋಲನ ಅಷ್ಟು ಹೊತ್ತಿಗೆ ಪ್ರಾರಂಭವಾಯಿತು. ಆಗ ಕನ್ನಡದ ರಚನೆಗಳನ್ನು ನೃತ್ಯದಲ್ಲಿ ಅಳವಡಿಸಿಕೊಳ್ಳಬೇಕು. ಮೈಸೂರು ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಬೇಕು ಎನ್ನುವ ಕೂಗು ಎಲ್ಲೆಲ್ಲೂ ಕೇಳಿಬಂದಿತು. ಆಗ ಹಲವು ತಮಿಳು ರಚನೆಗಳು ಕನ್ನಡಕ್ಕೆ ಭಾಷಾಂತರಗೊಂಡವು. ಮೈಸೂರು ರಾಜಸಭೆಯ ನರ್ತನ ಸಂಪ್ರದಾಯದ ಬಗ್ಗೆ ಹಲವು ಲೇಖಕರು ಬರೆದರು. ಇನ್ನೇನು ತೆರೆಯ ಮರೆಯಲ್ಲೇ ಅಂತ್ಯವಾಗುತ್ತಿದ್ದ ಜೇಜಮ್ಮ ಮತ್ತು ವೆಂಕಟಲಕ್ಷ್ಮಮ್ಮನವರನ್ನು ಮತ್ತೆ ಜ್ಞಾಪಿಸಿಕೊಳ್ಳಲಾಯಿತು. ಅವರನ್ನು ಬೆಂಗಳೂರಿಗೆ ಬರಮಾಡಿಕೊಂಡು ಸನ್ಮಾನಿಸಲಾಯಿತು. ಆದರೆ ಅವರಿಗೆ ಆರ್ಥಿಕ ಸಹಾಯ ಮಾಡಲು ಯಾವ ಏರ್ಪಾಡೂ ಆಗಲಿಲ್ಲ. ಆಗಾಗ ಅವರನ್ನು ಸಮಾರಂಭಗಳಲ್ಲಿ ಕರೆಸುವುದು, “ನಿಮ್ಮ ಕಾಲದಲ್ಲಿ ಹೇಗೆ ನರ್ತಿಸುತ್ತಿದ್ದಿರಿ” ಎಂಬ ವಿಷಯವಾಗಿ ಮಾತನಾಡಿಸುವುದು. ಹಲವೊಮ್ಮೆ ಅವರಿಂದ ಅಭಿನಯ ಮಾಡಿಸುವುದು, ಇವೆಲ್ಲಾ ಆಗಾಗ ಕಂಡುಬರುತ್ತಿದ್ದ ಅಂಶಗಳು. ನೃತ್ಯಕಲೆಯ ಬಗ್ಗೆ ಹಲವು ಲೇಖನಗಳು, ಸಣ್ಣ ಸಣ್ಣ ಪುಸ್ತಕಗಳು ಹೊರ ಬರಲಾರಂಭಿಸಿದವು.

ಬೆಂಗಳೂರಿಗೆ ತಕ್ಕಂತೆ ನೃತ್ಯ ಕಾರ್ಯಕ್ರಮಗಳು ನಿಯೋಜಿತಗೊಳ್ಳತೊಡಗಿದವು. ಹೆಚ್ಚು ಸಂಖ್ಯೆಯಲ್ಲಿ ಮೇಲೆ ತಿಳಿಸಿದ ಗುರುಗಳಿಂದ ನೃತ್ಯ ಶಿಕ್ಷಣ ಪಡೆದ ಶಿಷ್ಯಂದಿರು ತಾವೂ ನೃತ್ಯ ಶಾಲೆಗಳನ್ನು ಪ್ರಾರಂಭಿಸಿ ಪ್ರತಿಯೊಂದು ಬಡಾವಣೆಯಲ್ಲೂ ನೃತ್ಯವನ್ನು ಪರಿಚಯಗೊಳಿಸಿದರು. ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಎಂಬ ಪರೀಕ್ಷೆಗಳನ್ನು ಸರಕಾರವು ಪ್ರಾರಂಭಿಸಿತು. ಇದರ ಫಲವಾಗಿ ಎಲ್ಲ ನೃತ್ಯ ಪರೀಕ್ಷಕರು ಪಠ್ಯಕ್ರಮಗಳನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಪಾಠ ಹೇಳಲು ಪ್ರಾರಂಭಿಸಿದರು. ಇನ್ನೊಂದು ಹೊಸ ಬೆಳವಣಿಗೆಯೆಂದರೆ ಅರಂಗ್ರೇಟಂ ಅಥವಾ ರಂಗಪ್ರವೇಶ. ಒಬ್ಬ ಗುರುವಿನಲ್ಲಿ 20 ಜನ ಶಿಷ್ಯರಿದ್ದರೆ ಇಬ್ಬರು ಮೂರು ಜನ ಮಾತ್ರ ರಂಗಪ್ರವೇಶವನ್ನು ಆಚರಿಸುತ್ತಿದ್ದರು. ಏಕೆಂದರೆ ಆರ್ಥಿಕ ಸ್ಥಿತಿಯೂ ಇದಕ್ಕೆ ಪೂರಕವಾಗಿರಬೇಕಾಗುತ್ತಿತ್ತು. ಸರಕಾರದ ಆಶ್ರಯದಲ್ಲಿ ಪ್ರಾರಂಭವಾದ ಸಂಗೀತ ನಾಟಕ ಅಕಾಡೆಮಿ ರಾಜ್ಯದ ವಿವಿಧ ಭಾಗಗಳಲ್ಲಿ ನೃತ್ಯ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಅನೇಕ ನೃತ್ಯ ಕಲಾವಿದರನ್ನು ಪರಿಚಯಿಸಿತು. ಶಿಷ್ಯವೇತನವನ್ನು ಕೊಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಯುವ ಶ್ರದ್ಧೆ ಹೆಚ್ಚಾಯಿತು. ಏನೇ ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ನೃತ್ಯವನ್ನು ಕಲಿತಿದ್ದರೂ ಅದನ್ನೇ ವೃತ್ತಿಯಾಗಿ ಬೆಳೆಸಿಕೊಂಡವರು ಬೆರಳೆಣಿಸುವಷ್ಟು ಮಾತ್ರ. ಪುರುಷರು ಬೇರೆ ವೃತ್ತಿಗಳಲ್ಲಿದ್ದುಕೊಂಡು ನೃತ್ಯವನ್ನು ಹವ್ಯಾಸ ರೂಪದಲ್ಲಿ ಬೆಳೆಸಿಕೊಂಡರು. ಈಗ ಸುಮಾರು ಹತ್ತು ವರ್ಷಗಳಿಂದೀಚೆಗೆ ನೃತ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿ ಸಂಶೋಧನಾತ್ಮಕ ದೃಷ್ಟಿಕೋನವು ಬೆಳೆಯಿತು.

ರಾಷ್ಟ್ರೀಯ ನೃತ್ಯರಂಗದಲ್ಲಿ ಸಂಶೋಧನೆಗಳು, ವಿಚಾರಗೋಷ್ಠಿಗಳು, ಪ್ರಾತ್ಯಕ್ಷಿಕೆಗಳು, ಪರ ರಾಷ್ಟ್ರಗಳಲ್ಲಿ ನೃತ್ಯ ಪ್ರದರ್ಶನಗಳು ಮುಂತಾದ ಯೋಜನೆಗಳಿಂದ ನೃತ್ಯ ರಂಗದಲ್ಲಿ ಕಲಾವಿದರು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಿ ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶವಾಯಿತು. ಆದರೆ ಕರ್ನಾಟಕಕ್ಕೆ ಆಗ ಹೆಚ್ಚಿನ ಪ್ರಾತಿನಿಧ್ಯ ಇರುತ್ತಿತರಲಿಲ್ಲ. ದಕ್ಷಿಣವೆಂದರೆ ಮದರಾಸಿನಿಂದಲೇ ಪ್ರತಿನಿಧಿಗಳನ್ನು ಕರೆಸುತ್ತಿದ್ದರು. ಅವರು ತಮ್ಮ ಹಿರಿಮೆಯನ್ನು ಸಾರಿ ಬರುತ್ತಿದ್ದರು. ಬಿ.ವಿ.ಕೆ. ಶಾಸ್ತ್ರಿ, ಎಸ್‌.ಎನ್. ಚಂದ್ರಶೇಖರ್, ರಾ.ಸತ್ಯನಾರಾರಣ, ಕೌಶಿಕ್, ಯು.ಎಸ್. ಕೃಷ್ಣರಾವ್, ನಟರಾಜನ್ ಅವರುಗಳು ಲೇಖನಗಳು ಕರ್ನಾಟಕದಲ್ಲಿ ನೃತ್ಯಕಲೆಯ ಬೆಳವಣಿಗೆಯ ಬಗೆಗೆ ಬೆಳಕನ್ನು ಚೆಲ್ಲತೊಡಗಿದವು.

ಎಲ್ಲೆಡೆಯಲ್ಲೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶಕೊಡಬೇಕೆನ್ನುವ ಹಂಬಲದಿಂದ ನೃತ್ಯ ನಾಟಕಗಳನ್ನು ನಿಯೋಜಿಸಲು ಆರಂಭವಾಯಿತು. ಹಲವು ವೇಳೆ ಸಂಪ್ರದಾಯಬದ್ಧ ರಚನೆಗಳನ್ನು ಕಥೆಯ ಸುತ್ತ ಹಣೆದು ಪ್ರದರ್ಶಿಸಿದರೆ ಸಮಕಾಲೀನ ವಿಚಾರಗಳ ಪ್ರದರ್ಶನಕ್ಕೆ ಸೂಕ್ತವಾದ ಚಲನವಲನಗಳನ್ನು ಆರಿಸಿಕೊಂಡು ನೃತ್ಯ ಸಂಯೋಜನೆಗಳನ್ನು ಸೃಜಿಸಲಾಯಿತು. ರಾಷ್ಟ್ರೀಯ ಭಾವನೆಯನ್ನು ಬೆಳೆಸಲು ವಿವಿಧ ನೃತ್ಯ ಪ್ರಕಾರಗಳನ್ನು ಒಂದೇ ವೇದಿಕೆಯ ಮೇಲೆ ಹಲವು ಕಲಾವಿದರು ಪ್ರದರ್ಶಿಸಿದರು. ಮದ್ರಾಸ್, ಬೊಂಬಾಯಿ, ದೆಹಲಿ, ಬೆಂಗಳೂರು, ಹೈದರಾಬಾದಿನಲ್ಲಿ ಹೊಸ ರಂಗಮಂದಿರ ನಿರ್ಮಾಣದಿಂದ ಆಧುನಿಕ ರೀತಿಯ ದೀಪ ವ್ಯವಸ್ಥೆ, ಪರಿಸರ ಉಂಟಾಯಿತು. ಆಗ ನೃತ್ಯ ಕಾರ್ಯಕ್ರಮಗಳು ಹೆಚ್ಚು ಅಚ್ಚುಕಟ್ಟಿನಿಂದ ನಿಯೋಜಿತಗೊಂಡವು. ಈಗಲೂ ಉತ್ತರ ಕರ್ನಾಟಕದಲ್ಲಿ ಕರಾವಳೀ ಕರ್ನಾಟಕದಲ್ಲಿ ಉತ್ತಮ ನೃತ್ಯ ಶಿಕ್ಷಣ ಸೌಲಭ್ಯ ರಂಗಮಂದಿರಗಳು, ಶಿಕ್ಷಕರ ಕೊರತೆ ಇದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾತ್ರ ಬೇಕಾದಷ್ಟು ನೃತ್ಯಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ನೃತ್ಯ ಶಾಲೆಗಳಲ್ಲಿ ಒಂದು ರೀತಿಯ ಸಾಮರಸ್ಯವನ್ನು ಏರ್ಪಡಿಸಲು ನೃತ್ಯಕಲಾ ಪರಿಷತ್ತನ್ನು ಸ್ಥಾಪಿಸಲಾಗಿದೆ. ನೃತ್ಯದಲ್ಲಿ ಕಾಲೇಜು ಮಟ್ಟದ ಶಿಕ್ಷಣವನ್ನು ಮೈಸೂರಿನ ಲಲಿತಕಲೆಯ ಕಾಲೇಜು ಮತ್ತು ಬೆಂಗಳೂರು ವಿಶ್ವ ವಿದ್ಯಾಲಯ ವಿಭಾಗ ಸುಮಾರು 12 ವರ್ಷಗಳಿಂದ ನೀಡುತ್ತಿದ್ದರೂ ಅಂತಹ ಸಾಧನೆಯನ್ನು ತೋರಲು ಅಸಮರ್ಥವೆನಿಸಿವೆ.

ಇತ್ತೀಚಿನ ವರ್ಷಗಳಲ್ಲಿ ಕೇವಲ ನೃತ್ಯಕಾರ್ಯಕ್ರಮವಲ್ಲದೇ, ವಾರ್ಷಿಕೋತ್ಸವವಲ್ಲದೇ ಹೆಸರಾಂತ ನೃತ್ಯ ಸಂಸ್ಥೆಗಳು ದೇಶದ ವಿವಿಧ ಭಾಗಗಳಿಂದ ಕಲಾವಿದರನ್ನೂ, ಸಂಶೋಧಕರನ್ನೂ ಕರೆಯಿಸಿ ಸಮ್ಮೇಳನವನ್ನು ಏರ್ಪಡಿಸುವ ಪರಿಪಾಠವನ್ನು ಹಾಕಿಕೊಂಡಿವೆ. ಇದಕ್ಕಾಗಿ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಗೀತ ನೃತ್ಯ ಅಕಾಡೆಮಿ, ವಿಭಾಗೀಯ ಕೇಂದ್ರಗಳು, ಕೇಂದ್ರ ಸರ್ಕಾರದ ಇಲಾಖೆಗಳು ಹಲವು ಹೆಸರಾಂತ ಕಂಪೆನಿಗಳಿಂದ ಧನ ಸಹಾಯವನ್ನು ಪಡೆದು ಬೃಹತ್ ಪ್ರಮಾಣದಲ್ಲಿ ಸಮಾರಂಭಗಳನ್ನು ಏರ್ಪಡಿಸುತ್ತಿವೆ. ಹೀಗಾಗಿ ಬೇರೆ ರಾಜ್ಯದ ಕೇಂದ್ರಗಳೂ ನಮ್ಮ ಕಲಾವಿದರನ್ನು ಆಹ್ವಾನಿಸಲಾರಂಭಿಸಿವೆ. ರಾಷ್ಟ್ರೀಯ ಮಟ್ಟದಲ್ಲಿ, ಮದ್ರಾಸಿನ ಮ್ಯೂಸಿಕ್ ಅಕಾಡೆಮಿ ಮತ್ತು ಇತರ ಸಭೆಗಳ ವಿಚಾರ ಸಂಕಿರಣಗಳಲ್ಲಿ ಮತ್ತು ನೃತ್ಯ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಪ್ರಾತಿನಿಧ್ಯವಿರುತ್ತದೆ.

ದೂರದರ್ಶನದ ಮೂಲಕ ನೃತ್ಯ ಪ್ರದರ್ಶನ, ನೃತ್ಯ ಕಲಾವಿದರ ಈಗಿನ ಕಲಾವಿದರ ಉತ್ತುಂಗ ಸಾಧನೆಯೆನಿಸಿಬಿಟ್ಟಿದೆ. ಈಗಿನ ದಿನಗಳಲ್ಲಿ ಈಗ ಒಬ್ಬ ಕಲಾವಿದರ ಪ್ರದರ್ಶನಕ್ಕಿಂತ ಸಾಮೂಹಿಕ ಅಥವಾ ನೃತ್ಯ ಸಂಯೋಜನೆಗಳಿಗೆ ಹೆಚ್ಚಿನ ಒಲವು. ಕಥಕ್, ಒಡಿಸ್ಸಿ, ಕಥಕ್ಕಳಿ ನೃತ್ಯ ಪ್ರಕಾರಗಳಿಗೂ ಆಶ್ರಯ ನೀಡಿರುವ ಬೆಂಗಳೂರು ನಗರವು ರಾಷ್ಟ್ರೀಯ ಕೇಂದ್ರವಾಗುವ ಒಲವನ್ನು ತೋರುತ್ತಿದೆ. ಒಂದು ದೋಷವೆಂದರೆ ಕಲಿಯುವ ಮತ್ತು ಕಲಿಸುವ ವ್ಯವಸ್ಥೆಯಲ್ಲಿ ಮೊದಲಿನ ತಾಳ್ಮೆ, ಪರಿಶ್ರಮ, ಶ್ರದ್ಧೆಯಿಲ್ಲದಿರುವುದು. ಇದು ಕಂಪ್ಯೂಟರ್ ಯುಗ. ನೃತ್ಯವನ್ನು ಕಂಪ್ಯೂಟರ್ ಗತಿಯಲ್ಲಿ ಕಲಿಯಬೇಕು, ಪ್ರದರ್ಶಿಸಬೇಕು ಅನ್ನುವ ತೀವ್ರ ಹಂಬಲ ವಿದ್ಯಾರ್ಥಿಗಳಲ್ಲಿ, ತಂದೆ ತಾಯಿಗಳಲ್ಲಿ ಎಷ್ಟು ಬೇಗ ತಮ್ಮ ಪುತ್ರ ಅಥವಾ ಪುತ್ರಿ, ಕಾರ್ಯಕ್ರಮ ನೀಡುತ್ತಾರೋ ಎನ್ನುವ ಆತುರ. ಇದರಿಂದ ಕಲಿಸುವ ವ್ಯವಸ್ಥೆಯಲ್ಲೂ ಅನೇಕ ಬದಲಾವಣೆಗಳಾಗಿವೆ. ಯಾವುದೇ ನೃತ್ಯ ಸಂಯೋಜನೆಗೆ ವಿವಿಧ ಗುರುಗಳಲ್ಲಿ ಕಲಿಯುತ್ತಿರುವ ಶಿಷ್ಯಂದಿರೆಲ್ಲರೂ ಒಟ್ಟಿಗೆ ಸೇರಿ ಕೆಲವ ಮಾಡುತ್ತಾರೆ. ವೇಷಭೂಷಣ, ದೀಪ ವ್ಯವಸ್ಥೆ, ಪ್ರಚಾರ ಮಾಧ್ಯಮ ಜನಗಳ ಅಭಿರುಚಿಯ ಅರಿವು ಈಗಿನ ಕಲಾವಿದರಲ್ಲಿ ಕಂಡುಬರುತ್ತದೆ. ಈ ಒಂದು ಬೆಳವಣಿಗೆ ರಾಜ್ಯಮಟ್ಟದ ವಿವಿಧ ನೃತ್ಯ ಸಂಯೋಜನೆಗಳ ತಂಡಕ್ಕೆ ದಾರಿಮಾಡಿಕೊಡುವ ಸಂಭವವಿದೆ. ಈ ತಂಡಗಳಿಗೆ ಸದಸ್ಯರಾಗಿ ಸರದಿಯಂತೆ ಪಾಲ್ಗೊಳ್ಳುವ ದಿನವೂ ಬರಬಹುದು. ಅನೇಕ ಜನರು ಕಲಾ ನಿರ್ದೇಶಕರಾಗಿ, ಶಾಲಾ ಮತ್ತು ಕಾಲೇಜು ಮಟ್ಟದ ಶಿಕ್ಷಕರಾಗಿಯೂ ರೂಪುಗೊಳ್ಳಬಹುದು. ಈ ಒಂದು ಬದಲಾವಣೆಯನ್ನು ಸ್ವಾಗತಿಸಿದ ಹಲವು ನೃತ್ಯ ಶಾಲೆಗಳು, ಶಿಕ್ಷಕರು ಸಂಪ್ರದಾಯ ಶಾಸ್ತ್ರೀಯತೆಯನ್ನು ಕಾಪಾಡಿಕೊಂಡು ಬರುವ ಪ್ರಯತ್ನದಲ್ಲೇ ಉಳಿಯಬಹುದು. ಎಲ್ಲಾ ರಂಗಗಳಲ್ಲಿ ಇದ್ದಂತೆ ಶಾಸ್ತ್ರೀಯ ಮತ್ತು ನವ್ಯ ಬೆಳವಣಿಗೆಗಳು ಕರ್ನಾಟಕದ ನೃತ್ಯ ರಂಗದಲ್ಲೂ ಕಾಣಿಸಿಕೊಂಡರೆ ಆಶ್ಚರ್ಯವೇನಲ್ಲ. ಯಾವುದೇ ರೀತಿಯ ಅಭಿವ್ಯಕ್ತಿಯಾಗಲಿ ಅದು ಜನರನ್ನು ತಲುಪಲು, ಉಳಿಯಲು, ದಾಖಲೆಯ ರೂಪದಲ್ಲಿ ದೊರೆಯಲು ಹೆಚ್ಚು ಸಂಖ್ಯೆಯಲ್ಲಿ ಲೇಖನಗಳು ಹೊರಬರಬೇಕು. ಬರೆಯುವ ಅಭ್ಯಾಸವನ್ನು ಬೆಳೆಸಿಕೊಂಡರೆ ಉತ್ತಮ ಮಟ್ಟದ ವಿಮರ್ಶೆಗಳು, ಪ್ರಕಟಣೆಗಳು ಹೊರ ಬಂದು ಕರ್ನಾಟಕದ ಪ್ರತಿಭೆಗೆ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆಯುತ್ತದೆ.