ಶಾಸ್ತ್ರಲಕ್ಷಣ

ಆಚಾರ್ಯ ಆದಿ ಶಂಕರಭಗವತ್ಪಾದರು ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಭಗವದ್ಗೀತಾ ಇವುಗಳಿಗೆ (ಪ್ರಸ್ತಾನತ್ರಯ) ಬರೆದಿರುವ ಭಾಷ್ಯಗಳಲ್ಲಿ ಶಾಸ್ತ್ರದ ಬಗೆಗೆ ತುಂಬಾ ವೈಜ್ಞಾನಿಕವಾದ ವಿವೇಚನೆಯನ್ನು ಮಾಡಿದ್ದಾರೆ. ಅದನ್ನು ಗೀತಾಭಾಷ್ಯ, ಬೃಹದಾರಣ್ಯಕ ಮತ್ತು ಐತರೇಯ ಉಪನಿಷತ್ತುಗಳು ಭಾಷ್ಯಗಳು ಮತ್ತು ಬ್ರಹ್ಮಸೂತ್ರ ಭಾಷ್ಯ ಇವುಗಳಿಂದ ಸಂಕ್ಷೇಪ್ತವಾಗಿ ಸಂಗ್ರಹಿಸಬಹುದು.

೧.   ಪ್ರವೃತ್ತಿಮಾರ್ಗ, ನಿವೃತ್ತಿಮಾರ್ಗ, ಶಾಶ್ವತವಾದುದು, ನಶ್ವರವಾದುದು ಮುಂತಾದ ವಿಷಯಗಳಲ್ಲಿ ಜನರಿಗೆ ನೀಡಲಾಗುವ ಉಪದೇಶಕ್ಕೆ ಶಾಸ್ತ್ರ ಎಂದು  ಹೆಸರು. ಇದರಲ್ಲಿ ಪರಾ (ನಿವೃತ್ತಿ ಮಾರ್ಗ, ಶಾಶ್ವತವಾದುದು) ವಿದ್ಯೆಗಳೂ, ಅಪರ ವಿದ್ಯೆಗಳು (ಪ್ರವೃತ್ತಿಮಾರ್ಗ, ಅನಿತ್ಯವಾದ ಎಂದರೆ ಲೌಕಿಕಶಾಸ್ತ್ರಗಳೂ ಸೇರಿವೆ.)

 

೨.   ಪುರುಷನ ಪ್ರಶ್ಯತಿಯು ಎಂತಹದೆಂದರೆ ಸ್ವಕಾರ್ಯಕ್ಕಾಗಿ ರಾಗದ್ವೇಷಗಳಿಂದಲೇ ಒಂದು ಕಾರ್ಯದಲ್ಲಿ ಪ್ರವರ್ತಿಸುವುದು. ಇದರಲ್ಲಿ ಸ್ವಧರ್ಮವನ್ನು ಬಿಡುವುದು  ಪರಧರ್ಮವನ್ನು ಅಶ್ರಯಿಸುವುದು ಎಂಬ ಎರಡು ತಪ್ಪುಗಳಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಾರ್ಗದರ್ಶನಕ್ಕಾಗಿ ಶಾಸ್ತ್ರವನ್ನೇ ಆಶ್ರಯಿಸಬೇಕು.

೩.    ಧರ್ಮಾಧರ್ಮಾದಿ ಸ್ವರೂಪವುಳ್ಳ ಕಾರ್ಯಗಳು ಫಲಸಾಧನೆಯನ್ನು ಪಡೆದುಕೊಳ್ಳುವಲ್ಲಿ ಶಾಸ್ತ್ರಕ್ಕಿಂತ ಹೆಚ್ಚಿನ ಪ್ರಮಾಣ ಅಧಿಕಾರವನ್ನು ಊಹಿಸಲೂ ಸಾಧ್ಯವಿಲ್ಲ.

೪.   ಸತ್ಯವನ್ನು ನಿರೂಪಿಸುವಲ್ಲಿ ಶಾಸ್ತ್ರವೇ ಅಂತಿಮ ಪ್ರಮಾಣ, ಏಕೆಂದರೆ, ವಾಸ್ತವಿಕತೆಯನ್ನು ಅವಾಸ್ತವಿಕವೆಂದು ತಪ್ಪು ತಿಳುವಳಿಕೆಯನ್ನು ಅದು ನಿವಾರಿಸುತ್ತದೆ; ಇದರಿಂದ ಅದು ಆತ್ಮವನ್ನು ಪ್ರತಿಪಾದಿಸುತ್ತದೆಯೇ ಹೊರತು ತಿಳಿಯದೆ ಇರುವ ಇನ್ನು ಯಾವುದನ್ನೋ ಜ್ಞಾಪಿಸುವುದಿಲ್ಲ.

೫.   ಸಾಧಿಸಬೇಕಾದುದು ಇದು, ಹಿತವಾದುದು, ಇದು ಹಿತಕರವಾದುದು, ಸಾಧಿಸಲುತಕ್ಕದಲ್ಲ, ಸಾಧನೆ ಸಾಧಿಸಬೇಕಾದುದು ಇವುಗಳ ನಡುವಣ ಸಂಬಂಧವು ಹೀಗೆದೆ-ಶಾಸ್ತ್ರವು ಉಪದೇಶಿಸುವುದು ಇದನ್ನೇ.

೬. ಶಾಸ್ತ್ರವು ವ್ಯಕ್ತಿಯನ್ನು ಜವಾನನಂತೆ ನಿರ್ಬಂಧಿಸುವುದು ಇಲ್ಲ, ತನ್ನಲ್ಲಿ ತೊಡಗಿಸುವುದೂ ಇಲ್ಲ (ಸ್ವೇಚ್ಛೆಯಿಂದ ವರಿಸಿ ಬಂದವರನ್ನು ಅನುಗ್ರಹಿಸುತ್ತದೆ.)

೭.    ಜನರು ತಮ್ಮ ತಮ್ಮ ರುಚಿಗೆ ತಕ್ಕಂತೆ ತಾವೇಕರ್ಮಸಾಧನ ವಿಶೇಷಗಳಲ್ಲಿ ತೊಡಗುತ್ತಾರೆ. ಶಾಸ್ತ್ರವಾದರೋ ಸೂರ್ಯಪ್ರಕಾಶದಂತೆ (ಪಕ್ಷಪಾತಮಾಡದೆ) ಉದಾಸೀನವಾಗಿಯೇ ಇರುತ್ತದೆ.

೮.   ಶಾಸ್ತ್ರವು ಮಾಡಬೇಕಾದುದನ್ನು ಜ್ಞಾಪಿಸುತ್ತದೆಯೇ ಹೊರತು ಕರ್ತವ್ಯದಲ್ಲಿ ತೊಡಗಿಸುವುದಿಲ್ಲ.

೯.   ಸಂಪ್ರದಾಯವನ್ನು ಬಲ್ಲವನು ಸರ್ವಶಾಸ್ತ್ರಗಳನ್ನು ತಿಳಿದವನಾದರೂ ಅವನು ಮೂಢನೇ, ಅವನ್ನು ಉಪೇಕ್ಷಿಸಬೇಸಬೇಕು.

೧೦. ಪದಾರ್ಥಗಳನ್ನು (ಸಹಜವಲ್ಲದ, ನಮಗೆ ಇಷ್ಟವಾದ) ಬೇರೆ ಯಾವುದೋ ರೀತಿಯಲ್ಲಿ ಪರಿವರ್ತಿಸುವುದರಲ್ಲಿ ಶಾಸ್ತ್ರವುತೊಡಗುವುದಿಲ್ಲ. ನಮಗೆ ತಿಳಿಯದೆ         ಇರುವ, ತಮ್ಮ ತಮ್ಮ ಸ್ವಭಾವದಲ್ಲೇ ಇರುವ ಪದಾರ್ಥಗಳನ್ನು ತಿಳಿಸಿಕೊಡುವುದರಲ್ಲಿ ಶಾಸ್ತ್ರವು ಪ್ರವೃತ್ತವಾಗಿದೆ.

೧೧. ಯಾವುದು ತಾನೇ ತಾನಾಗಿ ದೊರೆಯುವುದಿಲ್ಲವೋ ಅದನ್ನೇ ಶಾಸ್ತ್ರವು ಬೋಧಿಸುತ್ತದೆ.

೧೨. ಶಾಸ್ತ್ರವಿಧಿಗಳನ್ನು ಜನರು ಏಕೆಮೀರಿ ನಡೆಯುತ್ತಾರೆ ? ರಾಗದ್ವೇಷಾಧಿಗಳಿಗೆ ವಶರಾಗುವುದರಿಂದ ಅವರು ಹಾಗೆ ಮಾಡುತ್ತಾರೆ.

೧೩.  ಶಾಸ್ತ್ರವು ಏನು ಹೇಳುತ್ತದೆಂಬುದನ್ನು ಎಂದರೆ ಶಾಸ್ತ್ರರ್ಧವನ್ನು ತಿಳಿಯಲು ನಾವು ಶಕ್ಯರು, ಆದರೆ ಏಕೆ ಹಾಗೆ ಹೇಳಿದೆಯೆಂದು ಪ್ರಶ್ನಿಸಲು ಅವಕಾಶವಿಲ್ಲ.

೧೪. ಶಾಸ್ತ್ರದಲ್ಲಿ ಹೇಳಿರುವುದರಲ್ಲಿ ಮಾಡದೆ ಬಿಡಬಹುದಾದುದು ಏನೂ ಇಲ್ಲ, ಎಲ್ಲವೂ ಮಾಡಬೇಕಾದುದೇ.

೧೫. ಇದು ಧರ್ಮ, ಇದು ಅಧರ್ಮ ಎಂಬುದನ್ನು ವಿವೇಚಿಸಿ ತಿಳಿಯಲೂ ಶಾಸ್ತ್ರವೇ ಸಾಧನ. ಏಕೆಂದರೆ ಧರ್ಮವಾಗಲಿ ಅಧರ್ಮವಾಗಲಿ ಇಂದ್ರಿಯಗೋಚರವಲ್ಲ. ಅಲ್ಲದೆ ದೇಶಕಾಲಗಳನ್ನು ವ್ಯತ್ಯಾಸ ಮಾಡುವುದರಿಂದ ಧರ್ಮವು ಅಧರ್ಮವಾಗಿಯೂ, ಅಧರ್ಮವು ಧರ್ಮವಾಗಿಯೂ ಇರಬಹುದು, ಎಂದರೆ ದೇಶ, ಕಾಲ, ನಿಮಿತ್ತಗಳಿಂದ ಅವುಗಳು ನಿಯತವಾದ ಒಂದೇ ರೀತಿಯಲ್ಲಿ ಇರುವಂತೆ ಗೋಚರಿಸುವುದಿಲ್ಲ.

ಈ ಮತ್ತಿತರ ಸೂಕ್ತಿಗಳನ್ನು ಶ್ರೀಮದಾಚಾರ್ಯರು ಬರೆದಿದ್ದು ಮುಖ್ಯವಾಗಿ ಮೋಕ್ಷಶಾಸ್ತ್ರಗಳನ್ನು ಕುರಿತೇ ಆದರೂ ಅವು ಲೌಕಿಕ ಶಾಸ್ತ್ರಗಳಿಗೂ, ವಿಶೇಷವಾಗಿ ಸಂಗೀತ ನೃತ್ಯಗಳಂತಹ ಕಲಾಶಾಸ್ತ್ರಗಳಿಗೆ, ಸಣ್ಣ ಬದಲಾವಣೆಗಳಿಗೆ ಅನ್ವಯಿಸುತ್ತವೆ. ಈ ವಿಷಯದಲ್ಲಿ ಸಂಗೀತ ನೃತ್ಯ ಕಲಾಬಂಧುಗಳು ಚಿಂತನೆಯನ್ನು ನಡೆಸಲೆಂದು ಆಶಿಸುತ್ತೇನೆ.

ಶಾಸ್ತ್ರವು ಎರಡು ವಿಧ:

ಶಾಸ್ತ್ರವು ಎರಡು ಬಗೆಯಾಗಿದೆ. ಪರಾಶಾಸ್ತ್ರಗಳು ತಟಸ್ಥವಾಗಿರುತ್ತವೆ. ಅಪರಾಶಾಸ್ತ್ರಗಳು ಎರಡು ವಿಧ : ಅನುಶಾಸನಾತ್ಮಕ ಮತ್ತು ವರ್ಣನಾತ್ಮಕ. ಅನುಶಾಸನಾತ್ಮಕ ಶಾಸ್ತ್ರಗಳಿಗೆ ಧರ್ಮಶಾಸ್ತ್ರಗಳು, ಗೃಹಸೂತ್ರಗಳು, ಶ್ರೌತಸೂತ್ರಗಳು, ಯೋಗ, ಕಾನೂನು ಇತ್ಯಾದಿಗಳು ಉದಾಹರಣೆಗಳು, ಇವು ರಾಜಾಜ್ಞೆಯಂತೆ, ಅವಶ್ಯಕವಾಗಿ ಕಟ್ಟುನಿಟ್ಟಿನಿಂದ ಅನುಸರಿಸಬೇಕಾದವುಗಳು ಇವುಗಳು ಸರಿಯೆ ತಪ್ಪು ಎಂಬ ವಿಮರ್ಶಗೆ ಒಳಪಡುವುದಿಲ್ಲ. ಇವು ಆಪ್ತ ವಾಕ್ಯಗಳೂ ಹೌದು, ವಿಧೇಯತೆಯನ್ನು ಅಪೇಕ್ಷಿಸುತ್ತವೆ. ವ್ಯಕ್ತಿಯ ಹಿತಕ್ಕೆಂದೇ ಇವು ಏರ್ಪಟ್ಟಿದ್ದರೂ ತನಗೆ ಇಷ್ಟವಾದಂತೆ, ಅನುಕೂಲಿಸುವಂತೆ ಬದಲಾಯಿಸಿಕೊಳ್ಳಲು ವ್ಯಕ್ತಿಗೆ ಸ್ವಾತಂತ್ರ್ಯವಿಲ್ಲ. ಅವುಗಳು ಏರ್ಪಡಿಸಿರುವ ವಿಧಿ ನಿಷೇಧಗಳನ್ನು ಚಾಚು ತಪ್ಪದೆ ಅನುಸರಿಸುವುದರಿಂದ ಮಾತ್ರ ಅವುಗಳ ಫಲ, ಪ್ರಯೋಜನಗಳು ದೊರೆಯುತ್ತವೆ.

ಅಪರಾವಿದ್ಯೆಗಳ ಇನ್ನೊಂದು ವರ್ಣನಾತ್ಮಕತೆ. ಇದು ಆಯಾ ವಿದ್ಯೆಯ ರೂಢಿ, ಪ್ರಯೋಗಗಳನ್ನು ಆಧರಿಸಿದೆ. ಇಂತಹ ವರ್ಣನೆಯು ಇಬ್ಬಗೆಯಾದುದು. ಮೊದಲನೆಯದು ಆಯಾ ವಿದ್ಯೆಯ/ಕಲೆಯ ಮೂಲ ಸ್ವಭಾವ, ತತ್ತ್ವದ್ರವ್ಯ, ವೈಶಿಷ್ಟ್ಯ ಸಂಕೇತ, ಮುಂತಾದವುಗಳ ನಿರೂಪಣೆ, ತನ್ನ ಮಾತೃ ಸಂಸ್ಕೃತಿಗೂ ತನಗೂ ಇರುವ ಸಂಬಂಧದ ಸ್ಪಷ್ಟನೆ. ಎರಡನೆಯದಾಗಿ ಅದರ ಸಮಸಾಮಯಿಕ ಸ್ಥಿತಿ, ಅದಕ್ಕೆ ಪೂರಕವಾಗುವಷ್ಟು ಇತಿಹಾಸ, ಪ್ರಮೇಯ, ಪ್ರಯೋಗ, ಲಕ್ಷಣ ನಿರೂಪಣ ಇತ್ಯಾದಿಗಳ ವರ್ಣನೆ ಮತ್ತು ವಿವರಣೆ. ಇಂತಹ ವಿದ್ಯೆ ಅಥವಾ ಕಲೆಯು ಯಾವಾಗಲೂ ಸಮರಸಾಮಾಯಿಕವಾಗಿ ಪ್ರಸ್ತುತವಾಗಿರುತ್ತದೆ ಅಥವಾ ಪ್ರಸ್ತುತವಾಗಿರಬೇಕು. ಆದುದರಿಂದ ಸದಾಕಾಲವು ವ್ಯತ್ಯಾಸಶೀಲವಾಗಿರುತ್ತದೆ. ಆದುದರಿಂದ ಅದರ ವರ್ಣನೆಯೂ ಎಂದರೆ ಶಾಸ್ತ್ರವೂ, ವ್ಯತ್ಯಾಸವಾಗುತ್ತಲೇ ಇರುತ್ತದೆ, ಇರಬೇಕು. ಇದು ಸಾಧ್ಯವಲ್ಲದುದರಿಂದ ಪ್ರಯೋಗವು ಎಂದರೆ ರೂಢಿಯು ಬದಲಾವಣೆಯ ಒಂದು ನಿರ್ದಿಷ್ಟ ಹಂತವನ್ನು ತಲುಪಿದಾಗ ಶಾಸ್ತ್ರವು ಅದಕ್ಕೆ ಸ್ಪಂದಿಸಿ ವ್ಯತ್ಯಾಸಗೊಳ್ಳುತ್ತದೆ. ಇಂತಹ ಪ್ರತಿಸ್ಪಂದನವು ಬೇರೆಬೇರೆಯಾದ ಹಂತಗಳಲ್ಲಿ ನಡೆಯುತ್ತದೆ. ಉದಾಹರಣೆಗೆ ಪ್ರಯೋಗದಲ್ಲಿ ನಡೆದ ಬದಲಾವಣೆಯು ಸ್ಥಿರಗೊಳ್ಳುವವರೆಗೂ ತಟಸ್ಥವಾಗಿ ಗಮನಿಸುತ್ತ ಇರುತ್ತದೆ. ಅಂತಹ ಬದಲಾವಣೆಯು ಆಯಾ ವಿಷಯದ ಶಾಸ್ತ್ರೋಕ್ತಿಗಿಂತ ಭಿನ್ನವಾಗಿರುವುದನ್ನು ಮತಾಂತರೇ ಕೇಚಿದ್‌, ಅಪರೇ, ಏಕೇ, ಅನ್ಯಥಾ ಇತ್ಯಾದಿ ಶಬ್ದಗಳಿಂದ ಸೂಚಿಸುತ್ತದೆ. ಬದಲಾವಣೆಯು ಕಾಲದೇಶಗಳಲ್ಲಿ ಸ್ಥಿರವಾದ ಮೇಲೆ ಆಯಾ ಶಾಸ್ತ್ರೋಕ್ತಿಯ ವ್ಯಾಪ್ತಿಯನ್ನು ವಿಸ್ತರಿಸುವುದರಿಂದ ಅಥವಾ ಸಡಿಲಗೊಳಿಸುವುದರಿಂದ ಅದನ್ನು ಒಳಗೊಳ್ಳಲು ಸಾಧ್ಯವೆ ಎಂಬುದನ್ನು ಶಾಸ್ತ್ರವು (ಎಂದರೆ ಶಾಸ್ತ್ರಕಾರನು) ಪರಿಶೀಲಿಸುತ್ತದೆ. ರೂಢಿಯ ಬದಲಾವಣೆಯು ಇಂತಹ ವ್ಯಾಪ್ತಿಯನ್ನೂ ಮೀರಿದರೆ ಆಗ ಶಾಸ್ತ್ರೋಕ್ತಿಯನ್ನು ಅವಶ್ಯವಾದಷ್ಟು ಮಾತ್ರ ಬದಲಾಯಿಸಿ ಆದ ಮಾರ್ಪಾಟು ಒಳಗೊಳ್ಳುತ್ತದೆ. ಅನಿವಾರ್ಯವಾದಾಗ ಮಾತ್ರ. ಆಯಾ ನಿಯಮವನ್ನು ರದ್ದುಗೊಳಿಸಿ ಅವಶ್ಯವಾದ ಒಂದು ಶಾಸ್ತ್ರೋಕ್ತಿಯನ್ನು ತಕ್ಕಾಲಕ್ಕೆ ಏರ್ಪಡಿಸಿಕೊಂಡು ಅಗತ್ಯವಾದರೆ ಅಗತ್ಯವಾದಾಗ ಅದನ್ನು ಸ್ಥಿರಪಡಿಸುತ್ತದೆ. ಶಾಸ್ತ್ರಕ್ಕೆ ಪ್ರಯೋಗವನ್ನು ಆಯಾ ವಿದ್ಯೆಯ ಅಥವಾ ಕಲೆಯ ಮೂಲಭೂತ ಸಂಸ್ಕೃತಿ, ಸ್ವಭಾವ, ವೈಶಿಷ್ಟ್ಯ, ಸ್ವರೂಪ ಮುಂತಾದವುಗಳನ್ನು ಸಂರಕ್ಷಿಸಿ ಮುನ್ನಡೆಸುವ ಜವಾಬ್ದಾರಿಯ ಹೊಣೆಯನ್ನು ಹೊತ್ತಿರುತ್ತದೆ, ಪ್ರಯೋಗದಲ್ಲಿ ಕಾಮಚಾರ, ಸ್ಥೈಯತೆ, ವೈಯಕ್ತಿಕ ವೈಚಿತ್ಯ, ಸಮೀಪದೃಷ್ಟಿ ಮುಂತಾದ ದುರ್ಬಲಗೊಳಿಸುವ ಶಾಸ್ತ್ರಗಳು ಪ್ರಯೋಗವಾಹಿನಿಯ ಎರಡು ದಡಗಳು, ವಾಹಿನಿಯ ಹರಿವು ಆಳ, ಗತಿ, ಪಾತ್ರ ಮುಂತಾದವನ್ನು ಕಾಪಾಡಿಕೊಳ್ಳುವುದೂ ಸಮಸಾಮಯಿಕ ಸೌಂದರ್ಯದೃಷ್ಟಿ ಮತ್ತು ಸೌಂದರ್ಯ ರುಚಿಗಳನ್ನು ಅಡಕಗೊಳ್ಳುವದು ಈ ದಡಗಳೇ ಆದ್ದರಿಂದ ಅದರ ಪಾತ್ರವು ಆಗಾಗ ಸ್ವಲ್ಪವಾಗಿ ಬದಲಾಯಿಸುತ್ತ ಇರುತ್ತದೆ. ಹೀಗೆ ಆಯಾ ಶಾಸ್ತ್ರವು ಸಮಸಾಮಯಿಕವಾದ, ಕಾಲದೇಶ ನಿಮಿತ್ತಗಳಿಂದ ಏರ್ಪಡುವ ವ್ಯತ್ಯಾಸಗಳನ್ನು ಒಳಗೊಳ್ಳುವ ನಿರಂತರವಾದ ಮತ್ತು ಅನುಸ್ಯೋತವಾದ ಏಕಪ್ರವಾಹ, ಸಂಗೀತ, ನೃತ್ಯ ಚಿತ್ರ, ಶಿಲ್ಪ ವಸ್ತು ಮುಂತಾದ ಕಲೆಗಳೂ ವ್ಯಾಕರಣ ಅಭಿದಾನ (ಕೋಶ) ಭೌತವಿಜ್ಞಾನಗಳು, ಸಾಮಾಜಿಕವಿದ್ಯೆಗಳು ಮುಂತಾದವು ಈಜಾತಿಗೆ ಸೇರಿದ ಅಪರಾವಿದ್ಯೆಗಳು.

. ಪ್ರಯೋಗ

ಪ್ರಯೋಗವೆಂದರೆ ಆಚರಣೆ, ರೂಢಿಗೆ ತರುವುದು. ಲಕ್ಷಣವನ್ನು ಲಕ್ಷ್ಯಕ್ಕೆ ಹೊಂದಿಸುವುದು, ಯಾವುದನ್ನಾದರೂ ಪ್ರತಿನಿಧಿಸಿ ಪ್ರದರ್ಶಿಸುವುದು, ಅನ್ವಯಗೊಳಿಸುವುದು ಇತ್ಯಾದಿ ಅರ್ಥಗಳಿವೆ. ಒಂದು ಕಲಾಕೃತಿಯನ್ನು ರಂಗದ ಮೇಲೆ ಇತರರು ನೋಡಲು, ಕೇಳಲು, ಅನುಭವಿಸಲು ಅನುವಾಗುವಂತೆ ಸೃಷ್ಟಿಸುವುದು. ಹಾಡಿನುಡಿಸಿದರೆ ಅದು ಸಂಗೀತ ಕಲೆಯಾಗುತ್ತದೆ ವಸ್ತುವೊಂದನ್ನು ಅಭಿನಯಿಸಿದರೆ ಅದು ದೃಶ್ಯಕಾವ್ಯವಾಗಿ ನರ್ತನ (ನಾಟ್ಯ, ನೃತ್ತ, ನೃತ್ಯ)ವೆನ್ನಿಸಿಕೊಳ್ಳುತ್ತದೆ. ಯಾವುದನ್ನಾದರೂ ಹೊಸತಾಗಿ ಆವಿಷ್ಕರಿಸುವುದಕ್ಕೂ ಪ್ರಯೋಗವೆಂಬ ಮಾತು ರೂಢಿಯಲ್ಲಿದೆ. ವಿಜ್ಞಾನಗಳಲ್ಲಿ ನಿಯಮಿತ, ನಿಯಂತ್ರಿತವಾದ ಸಂದರ್ಭಗಳಲ್ಲಿ ಒಂದು ಕರ್ಮವನ್ನು ಕೈಗೊಂಡು ಅದರ ವಿವರಗಳನ್ನು ತಟಸ್ಥಭಾವದಿಂದ ಗಮನಿಸಿ ಕರ್ಮಕ್ಕೂ ಅದರ ಫಲಕ್ಕೂ ಕಾರ್ಯಕಾರಣ ಸಂಬಂಧವನ್ನು ಅನುಮಾನಿಸುವ ಪ್ರಕ್ರಿಯೆಗೆ ಪ್ರಯೋಗವೆಂಬ ಪರಿಭಾಷೆಯಿದೆ. ಒಂದು ತತ್ತ್ವವನ್ನು ಕಲ್ಪನೆಯನ್ನು ಅಥವಾ ಭಾವನೆಯನ್ನು ಆಚರಣೆಗೆ ತರುವುದಕ್ಕೆ ಪ್ರಯೋಗವೆಂದು ಸಂಜ್ಞೆಯಿದೆ. ಪ್ರಯೋಗವು ಶಾಸ್ತ್ರಕ್ಕೆ ವಿರುದ್ಧ ಶಬ್ದ.

ಕಲೆಗಳಲ್ಲಿ ದೃಶ್ಯಕಾವ್ಯ ಮತ್ತು ಶ್ರವ್ಯಕಾವ್ಯ ಎಂದು ಎರಡು ವಿಧ. ಕಾವ್ಯವೆಂದರೆ ರಸವನ್ನು ಒಳಗೊಂಡ ವಸ್ತುವನ್ನು ರಸಸಂವಹನಕ್ಕಾಗಿ ಮೂರ್ತಗೊಳಿಸಿ ಸಾಕ್ಷಾತ್ಕಾರಿಸುವುದು. ಕಣ್ಣಿನಲ್ಲಿ ಅದು ದೃಶ್ಯವು ಕಿವಿಯಲ್ಲಿ ಸಾಕ್ಷಾತ್ಕಾರಿಸಿಗೊಂಡಾಗ ಶ್ರವ್ಯವೂ ಆಗುತ್ತದೆ. ನಾಟಕಾದಿ ರೂಪಕಗಳು ನರ್ತನ ಚಿತ್ರ ಶಿಲ್ಪ ಮತ್ತು ವಾಸ್ತುಕಲೆಗಳು ದೃಶ್ಯಕಾವ್ಯಗಳು. ಸಾಹಿತ್ಯ ಸಂಗೀತ ಮುಂತಾದವು ಶ್ರವ್ಯಕಾವ್ಯಗಳು. ನಾಟ್ಯವು (ಭರತಮುನಿಯು ಅರ್ಥಯಿಸಿದ ರೀತಿಯಲ್ಲಿ) ದೃಶ್ಯವೂ ಹೌದು ಶ್ರವ್ಯವೂ ಹೌದು, ನೃತ್ಯವು ಶಬ್ದಸಹಿತವಾಗಿದ್ದಾಗ, ನೃತ್ಯರಾಗಾದಿನಾದಮಯವಾಗಿದ್ದಾಗ ದೃಶ್ಯವು ಶ್ರವ್ಯವೂ ಆಗಿರುತ್ತದೆ. ಚಿತ್ರ, ಶಿಲ್ಪ ವಾಸ್ತುಗಳು ಶುದ್ಧ ದೃಶ್ಯಗಳು, ಸಂಗೀತವು ಶುದ್ಧಶ್ರವ್ಯ.

ನೃತ್ಯ ನರ್ತನ ಶಾಸ್ತ್ರ

ನೃತ್ಯ -ನರ್ತನ ಶಾಸ್ತ್ರಗಳು ಆಯಾ ಕಲೆಗಳ ಪ್ರಯೋಗದಲ್ಲಿರುವ ತತ್ತ್ವ, ತಂತ್ರ, ವಿಧಾನ, ದ್ರವ್ಯ, ಸಂಕೇತ ಪದ್ಧತಿ, ವೈಶಿಷ್ಟ್ಯ ಮುಂತಾದವುಗಳನ್ನು ಗೌಣವಾಗಿ ಬೇರ್ಪಡಿಸಿ ಅವುಗಳನ್ನು ನಿರ್ದಿಷ್ಟವಾಗಿ, ಸುವ್ಯವಸ್ಥಿತವಾಗಿ, ಅವ್ಯಾಪ್ತಿ ಅತಿವ್ಯಾಪ್ತಿ ಮುಂತಾದ ದೋಷಗಳಿಲ್ಲದಂತೆ ಕ್ರೋಡಿಕರಿಸಿ ಏರ್ಪಡಿಸುತ್ತದೆ. ಮೂರ್ತವಾದುದನ್ನು ಆಮೋರ್ತಗೊಳಿಸಿ ಲಕ್ಷಣ ತತ್ತ್ವ ಪ್ರಮೇಯಗಳನ್ನಾಗಿ ಪರಿವರ್ತಿಸುವುದಕ್ಕೆ ಶಾಸ್ತ್ರವೆಂದೂ, ಶಾಸ್ತ್ರದಲ್ಲಿರುವ ಲಕ್ಷಣಾದಿಗಳನ್ನು ಆಯಾ ಮಾಧ್ಯಮಗಳಲ್ಲಿ ದೃಶ್ಯ ಶ್ರವ್ಯಸಂಕೇತಗಳಿಂದ ಮೂರ್ತಗೊಳಿಸುವುದನ್ನು ಪ್ರಯೋಗವೆಂದೂ ಸ್ಥೂಲವಾಗಿ ಇಟ್ಟುಕೊಳ್ಳಬಹುದು. ಹೀಗೆ ಇವೆರಡೂ ಅನ್ಯೋನ್ಯಗಳು ಇತರೇತರಾಶ್ರಗಳು ಎಂದರೆ ಒಂದಿಲ್ಲದೆ ಇನ್ನೊಂದಿಲ್ಲ.

ನರ್ತನ ಮಾಧ್ಯಮ

ನಾಟ್ಯ ನೃತ್ಯಗಳಿಗೆ ಮಾಧ್ಯಮವು ಮಾನವ ಶರೀರ, ಸಂಗೀತಕ್ಕೆ ಶಾರೀರ, ಸ್ವರ, ಲಯಗಳು, ಈ ಕಲೆಗಳನ್ನು ಮೂರ್ತಿಕರಿಸಬೇಕಾದರೆ ಆಯಾ ಮಾಧ್ಯಮಗಳಿಗೆ ಅನುಗುಣವಾದ ಕೃತಿ ಪ್ರಕಾರಗಳನ್ನು ನಿರ್ಮಿಸಿ ಅವುಗಳನ್ನು ಪ್ರಯೋಗಿಸುವುದು. ಇಂತಹ ಒಂದೊಂದು ಪ್ರಕಾರವು ತನ್ನನ್ನು ವಿಶಿಷ್ಟಗೊಳಿಸುವ ಲಕ್ಷಣಗಳಿಂದ ರೂಪಿತವಾಗಿದ್ದು ಆಯಾ ಕಲೆಯ ದ್ರವ್ಯ ಸಂಕೇತ ವಿಧಾನ ತಂತ್ರ ಇವೆಲ್ಲವೂ ಆಯಾ ಕೃತಿಯಲ್ಲಿ ಸಂಗಮಿಸುತ್ತವೆ. ಈ ಕೃತಿ ಪ್ರಕಾರಗಳನ್ನು ನಿರ್ಮಿಸಲು ಬೇಕಾಗುವ ತಂತ್ರಗಳನ್ನು ಲಕ್ಷಣಗಳನ್ನೂ ಮಾದರಿಗಳನ್ನು ಆಯಾ ಕಲೆಯ ಪೂರ್ವಪ್ರಯೋಗವೇ ಒದಗಿಸುತ್ತದೆ. ಈ ಚೌಕಟ್ಟಿನ ಒಳಗೆ ಕಲಾಸೃಷ್ಟಿಯ ಪ್ರತಿಭೆಯು ಕಾರ್ಯ ಶೀಲವಾಗಿ ಹೊಸ ಪ್ರಕಾರಗಳನ್ನು ನಿರ್ಮಿಸುತ್ತದೆ. ಇದು ಅನುಸ್ಯೂತವಾಗಿ ನಡೆದು ಒಂದು ಪರಂಪರೆಯು ಏರ್ಪಡುತ್ತದೆ. ಇದರಲ್ಲಿ ಪ್ರಾಚೀನವಾದ ಆದರೆ ಪ್ರಸಿದ್ಧಿ ವಿಧುರವು ಶೋತೃ ಪ್ರೇಕ್ಷಕರ ಆಸಕ್ತಿ ಮತ್ತು ಪ್ರೀತಿಗಳನ್ನು ಕಳೆದುಕೊಂಡ ಕೃತಿಗಳು ಪ್ರಯೋಗದಿಂದ ಕಣ್ಮರೆಯಾಗುತ್ತವೆ. ಜನಪ್ರೀತಿಯನ್ನೂ ಆಕರ್ಷಣೆಯನ್ನು ಸಂಪಾದಿಸಿಕೊಡುವ ಹೊಸಕೃತಿಗಳ ನಿರ್ಮಾಣವಾಗುತ್ತದೆ. ಹೀಗೆ ಪರಂಪರೆಯ ಪೂರ್ವಭಾಗದಲ್ಲಿ ವ್ಯವಕಲನವೂ ಉತ್ತರ ಭಾಗದಲ್ಲಿ ಸಂಕಲನವೂ ನಡೆಯುತ್ತ ಹೋಗುತ್ತವೆ. ಇವುಗಳ ಪ್ರಯೋಗದಲ್ಲಿ ಆಕೃತಿ ಸ್ಥಿರತೆ ಅಚ್ಚುಕಟ್ಟು, ಪ್ರಯೋಗದಲ್ಲಿ ಅನಮೃತೆ, ಗುರುಪರಂಪರೆಯ ಅವಿಚ್ವಿನ್ನತೆ ನಿರೂಪಣ ಶೈಲಿಯ ಮತ್ತು ಪ್ರತಿಪಾದನ ತಂತ್ರದ ಏಕರೂಪತೆ ಇವುಗಳಿಂದ ಒಂದು ಸಂಪ್ರದಾಯವು ಕಾಲಾನುಕ್ರಮದಲ್ಲಿ ಏರ್ಪಡುತ್ತದೆ. ಇದರಿಂದ ಆಯಾ ಕಲೆಯ ಹಂದರವು ನಿರ್ದಿಷ್ಟವೂ ಬಲಿಷ್ಠವೂ ಆಗುತ್ತದೆ. ಹೀಗಾಗಬೇಕಾದರೆ ಆಯಾ ಕಲೆಯ ಸಹೃದಯರು ಈ ಕೃತಿರೀತಿಗಳನ್ನು ಒಪ್ಪಿ ಅಪ್ಪಿಕೊಳ್ಳುವುದು ಅವಶ್ಯ. ಈ ಪ್ರಕಾರಗಳ ಪ್ರಾಚುರ್ಯ ಪ್ರಸಿದ್ಧಿಗಳು ನಿರ್ಮಾಣಕಾರ-ಪ್ರಯೋಕ್ಷ್ಯ-ಸಹೃದಯ ಎಂಬ ತ್ರಿಕೋನದಿಂದ ಹುಟ್ಟಿ ಬೆಳೆಯುತ್ತವೆ.  ಕರ್ನಾಟಕ ಸಂಗೀತದಲ್ಲಿ ಗೀತ, ಸ್ವರಜತಿ, ವರ್ಣ, ಪದ, ಜಾವಳಿ, ಪಲ್ಲವಿ ದೇವರನಾಮ, ತಿಲ್ಲಾನ, ದರು, ಅಷ್ಟಪದಿ, ತರಂಗ, ಶ್ಲೋಕ ವಿರುತ್ತಂ ಇತ್ಯಾದಿ ಕೃತಿಪ್ರಕಾರಗಳಿವೆ. ಭರತನಾಟ್ಯದಲ್ಲಿ ಅಲರಿಪ್ಪ, ಜತಿಸ್ವರ ಕವಿತಾ (ಕೌತ) ಶಬ್ದ, ವರ್ಣ, ಕೃತಿ, ಪದ, ಜಾವಳಿ, ತಿಲ್ಲಾನ, ಧರು, ಅಷ್ಟಪದಿ, ಶ್ಲೋಕ ಮುಂತಾದ ಕೃತಿಪ್ರಕಾರಗಳಿವೆ. ಭಾರತೀಯ ಸಂಗೀತದ ಪ್ರಯೋಗದಲ್ಲಿ ಕರ್ನಾಟಕ ಸಂಗೀತ ಹಿಂದೂಸ್ಥಾನೀಸಂಗೀತ, ಒಡಿಸ್ಸಿ ಸಂಗೀತ, ಎಂಬ ಮುಖ್ಯ ವಿಭಾಗಗಳೂ, ಭಾರತೀಯ ನೃತ್ಯಪ್ರಯೋಗದಲ್ಲಿ ಭರತನಾಟ್ಯ, ಕೂಚಿಪುಡಿ, ಮೋಹಿನಿ ಆಟ್ಟಂ, ಕಥಕ್‌ಮಣಿಪುರಿ ಇತ್ಯಾದಿ ಹಲವು ರೀತಿಗಳು ದೇಶಾದ್ಯಂತ ಹರಡಿಕೊಂಡಿವೆ. ಪ್ರಸ್ತುತ ಲೇಖನದಲ್ಲಿ ಇವೆಲ್ಲವುಗಳಿಗೆ ಸಾಮಾನ್ಯವಾದ ಮತ್ತು ಸಾಧಾರಣವಾದ ಜಿಜ್ಞಾಸೆಯನ್ನು ಮಾಡುವ ಪ್ರಯತ್ನವನ್ನು ಮಾಡಲಾಗಿದೆ.

ಕಲೆ ಮತ್ತು ಸಂಸ್ಕೃತಿ

ಜಗತ್ತು ಸದಾ ಚಲನಶೀಲವಾದುದು. ಆದುದರಿಂದ ವ್ಯತ್ಯಾಸಮಯವಾದುದು. ಇದು ಕಾಲಗತಿಯ ಪರಿಣಾಮ ಮಾನವನೂ ಅವನು ಸೃಷ್ಟಿಸಿರುವ ಕಲಾ ಜಗತ್ತು, ಈ ನಿಯಮಕ್ಕೆ ಹೊರತಲ್ಲ. ಕಲಾ ಪ್ರಯೋಗದಲ್ಲಿ ಇದು ನಿತ್ಯಸತ್ಯವಾದುದು. ವ್ಯಕ್ತಿ ಸಂಸ್ಕೃತಿ ಮತ್ತು ಸಮುದಾಯ ಸಂಸ್ಕೃತಿಗಳು ದೇಶಕಾಲನಿಮಿತ್ತಗಳ ಕಾರಣಗಳಿಂದಾಗಿ ವ್ಯತ್ಯಾಸವಾಗುತ್ತಲೇ ಇರುತ್ತವೆ. ಆಯಾ ಸಂಸ್ಕೃತಿಯ ತಿರುಳು ಅದಕ್ಕೆ ಮೂಲಭೂತವಾದುದು. ಅದು ನಿಯತವಾಗಿ ಸ್ವರೂಪದಲ್ಲೇ ಯಾವಾಗಲೂ ಇರುತ್ತದೆ. ಆದರೆ ಅದರ ಹೊರಮೈ ಕಾಲದೇಶ ನಿಮಿತ್ತಳಿಂದಾಗಿ ಸದಾ ಮಾರ್ಪಡುತ್ತಲೇ ಇರುತ್ತದೆ. ಇದರ ಅರ್ಥವೇನೆಂದರೆ ಕಲೆಯ ಶಾಸ್ತ್ರ ಅಂತರಂಗ ಮತ್ತು ಬಹಿರಂಗವೆಂಬ ಎರಡು ದೇಹಗಳಿರುತ್ತವೆ. ಅಂತರಂಗ ದೇಹವು ಆಯಾ ಕಲೆಯ ಮಾತೃಸಂಸ್ಕೃತಿಯ ಆಧಾರಭೂತ ಪ್ರಮೇಯ ಕಲ್ಪನೆ ಮತ್ತು ಸಿದ್ಧಾಂತಗಳಿಂದಲೂ ತನ್ನನ್ನು ವೈಶಿಷ್ಟ್ಯಗೊಳಿಸುವ ಸ್ವರೂಪನಿರ್ಣಾಯಕವಾದ ಅಂಶಗಳಿಂದಲೂ ಏರ್ಪಡುತ್ತದೆ. ಅದರ ಬಹಿರಂಗವು ವ್ಯತ್ಯಾಶೀಲವಾದ ಜನಾಭಿರುಚಿಯನ್ನೂ ಸಮಸಾಮಯಿಕ ನಾಗರಿಕತೆಯ ಪ್ರಭಾವಗಳನ್ನು ಜಾನಪದ, ಅನ್ಯಸಂಸ್ಕೃತಿಗಳ ಸಂಸರ್ಗ, ಪರಿಷ್ಕಾರ, ಆವಿಷ್ಕಾರ, ಸಾಮಾಜಿಕ ದೃಷ್ಟಿಧೋರಣೆಗಳು, ಕಲೆಯ ಆಂತರಿಕ ಹಾಗೂ ಬಾಹ್ಯ ಒತ್ತಡಗಳು ಮುಂತಾದವುಗಳಿಂದ ರೂಪಗೊಳ್ಳುತ್ತದೆ. ಕಲೆಯ ಅಂತರಂಗ-ಬಹಿರಂಗಗಳಲ್ಲಿ ಸಮರಸ-ಸಮತೋಲನಗಳಿದ್ದಾಗ ಸಂಸ್ಕೃತಿಯೂ ಕಲೆಯೂ ಊರ್ಥ್ವಗಾಮಿಯಾಗಿ, ಪುಷ್ಟವಾಗಿ ಬೆಳೆಯುತ್ತವೆ. ಅವುಗಳಲ್ಲಿ ವಿರಸ ವೈಷಮ್ಯಗಳು ತಲೆದೋರಿದರೆ ಸಂಸ್ಕೃತಿಯೂ ಕಲೆಯೂ ಬಡವಾಗುತ್ತವೆ.

ಪ್ರಯೋಗವು ಪ್ರಯೋಕ್ತ್ಯ-ಕವಿ (ವಾಗ್ಗೇಯಕಾರ, ನಾಟ್ಯ ಪ್ರಬಂಧ ನಿರ್ಮಾಣಾ) ಸಹೃದಯ ಎಂಬ ತ್ರಿಪಾದಿಯೆಂದು ಈಗಾಗಲೇ ಸೂಚಿಸಿಯಾಗಿದೆ. ಇದಕ್ಕೆ ವೈಯಕ್ತಿಕ ಸಾಮುದಾಯಕ ಎಂಬ ಎರಡು ಮುಖಗಳುಂಟು ಎಂದರೆ ಕೃತಿನಿರ್ಮಾಣವು ಕವಿಯ ವೈಕ್ತಿಕ ಪ್ರತಿಭೆಯಿಂದ ಪ್ರಯೋಗವು ಬಿಡಿಬಿಡಿಯಾದ ಪ್ರಯೋಗಗಳಿಂದ (ಗಾಯಕ, ವಾದಕ, ನರ್ತಕ) ರಸಾಸ್ವಾದವು ಬಿಡಿಬಿಡಿಯಾದ ರಸಿಕರಿಂದ ನಿಜ. ಆದರೆ ಸಾಮಾಜಿಕ ಸ್ತರದಲ್ಲಿ ಪ್ರಯೋಗಕ್ಕೆ ಘನಿಷ್ಠವೂ, ಏಕರೂಪವೂ, ಕಾಲದೇಶಗಳಲ್ಲಿ ವಾಕ್ಯವೂ ದೊರೆಯುವುದು ಸಾಮುದಾಯಿಕವಾಗಿಯೇ, ಅಭಿರುಚಿಗಳ ಸಾಧಾರಣ್ಯದಿಂದಾಗಿ ರಸಿಕಸಮುದಾಯವೂ, ಶೈಲಿ ಪ್ರವೃತ್ತಿ ನಿಲುವು-ಒಲವುಗಳ ವೈವಿಧ್ಯ ಇವುಗಳಿಂದ ಸಮುದಾಯವೂ, ಗುರುಪರಂಪರೆ, ಪೂರ್ವಸಿದ್ಧತೆಯ ವೈವಿದ್ಯ ಸಾಂಸ್ಕೃತಿಕ ಹಿನ್ನೆಲೆ ಮುಂತಾದವುಗಳಿಂದ ಪ್ರಯೋಕ್ತ ಸಮುದಾಯವೂ ಯಾವುದೇ ಸಮಾಜದಲ್ಲಿ ಏರ್ಪಡುತ್ತವೆ. ಇದರಿಂದಾಗಿ ವಿವಿಧರುಚಿಗಳನ್ನು ತಣಿಸಲು ಸಾಧ್ಯವಾಗಿ ಕಲೆಯ ಪ್ರಯೋಗ ಮತ್ತು ಪ್ರಯೋಜನಗಳು ಸಾರ್ವತ್ರಿಕವಾಗುತ್ತವೆ.

ಸಂಗೀತ ನೃತ್ಯಗಳ ಪ್ರಯೋಗಗಳಲ್ಲಿ ಗುರುಪರಂಪರೆ ಮತ್ತು ಶೈಲಿಗಳು ಪ್ರಮುಖಪಾತ್ರಗಳನ್ನು ವಹಿಸುತ್ತವೆ. ಗುರುಪರಂಪರೆಯಲ್ಲಿ ಪ್ರತ್ಯಕ್ಷವಾಗಿರುವ ಸ್ವಗುರುವೇ ಮುಖ್ಯತರು. ಗುರುವಿನ ಗುರು (ಪರಮಗುರುವು) ಗುರುವಿನ ಮೇಲೆ ಬೀರಿದ ಪ್ರಭಾವಕ್ಕಾಗಿ ಮುಖ್ಯ ಪರಮಗುರುವಿನ ಗುರು (ಪರಮೇಷ್ಠಿಗುರು)ವು ತನ್ನಗುರು (ಪರಾತ್ಪರಗುರು) ವಿನಿಂದ ಪಡೆದುಕೊಂಡ ಪರಂಪರಾಬಲದ ಪ್ರತಿನಿಧಿಯಾಗಿ ಶುದ್ಧಪುರುಷನಾಗುತ್ತಾನೆ. ಯಾವುದೇ ಪರಂಪರೆಯ ವೈಶಿಷ್ಟವ್ಯವೇನೆಂದರೆ ಅದರ ನಿಷ್ಕಾಮ ಗುಣ, ಎಂದರೆ ಅದು ಹಿಂದಿನ ಕೊನೆಯಲ್ಲಿ ಸ್ವಲ್ಪವನ್ನು ಬಿಟ್ಟು ಮುಂದಿನ ಕೊನೆಯಲ್ಲಿ ಸ್ವಲ್ಪವನ್ನು ಸೇರಿಸಿಕೊಳ್ಳುತ್ತ ಬೆಳೆಯುತ್ತದೆ. ಏಕೆಂದರೆ, ಒಬ್ಬ ಗುರುವಿನಿಂದ ಶಿಷ್ಯನಿಗೆ ಬರುವಾಗ ಪ್ರಯೋಗವು ಸ್ವಲ್ಪವಾದರೂ ತನ್ನ ಶುದ್ಧಿಯನ್ನು ಕಳೆದುಕೊಳ್ಳುತ್ತದೆ. ಗುರುವಿನ ಸ್ವಂತಿಕೆಯಿಂದ ಸ್ವಲ್ಪವಾದರೂ ಅದಕ್ಕೆ ಸೇರಿಕೊಳ್ಳುತ್ತದೆ. ಇದಕ್ಕೆ ಕಾರಣವು ಶಿಷ್ಯನು ಗುರುವಿನ ಪಡಿಯಚ್ಚು ಆಗಬಾರದು, ಆಯಾ ಪರಂಪರೆಯ ವೈಶಿಷ್ಟ್ಯ ಮತ್ತು ಸಾರಗಳನ್ನು ಒಳಗೊಂಡ ಒಬ್ಬ ಸ್ವತಂತ್ರ ಗುರುವೇ ಆಗಬೇಕೆಂಬುದು. ಇದರಿಂದ ಕಲೆಯೂ ಪರಂಪರೆಯೂ ನಿಂತನೀರಾಗದೆ ಪ್ರವಾಹರೂಪವಾಗುತ್ತದೆ. ಸಮಸಾಮಯಿಕ ಪ್ರಸ್ತುತತೆಯನ್ನು ಉಳಿಸಿಕೊಳ್ಳುತ್ತದೆ.

. ಸಮನ್ವಯ

ಸಮನ್ವಯ ವೆಂದರೆ ಒಂದು ಇನ್ನೊಂದಕ್ಕೆ ಅಥವಾ ಹಲವು ವಸ್ತುವಿಷಯಗಳು ಪರಸ್ಪರವಾಗಿ ಹೊಂದಿಕೊಂಡಿರುವುದು, ಪರಸ್ಪರವಾಗಿ ಸಮಂಜಸವಾಗಿರುವುದು. ಈ ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ನಾಟ್ಯದ ಪ್ರಯೋಗವೂ ನಾಟ್ಯದ ಶಾಸ್ತ್ರವೂ ಪರಸ್ಪರವಾಗಿ ಸಮಂಜಸವಾಗಿರುವುದು, ವಿರೋಧಗಳಿಲ್ಲದಿರುವುದು, ಅನುಗುಣವಾಗಿರುವುದು.

ಸಂಗೀತದಲ್ಲಿ

ಪ್ರಾಚೀನ ಭಾರತೀಯ ಸಂಗೀತ ನೃತ್ಯ ಶಾಸ್ತ್ರ ಗ್ರಂಥಗಳ ಪರಿಚಯವಿರುವವರಿಗೆ ಒಂದು ವಿಶೇಷ ಸಂಗತಿಯು ಗೋಚರಿಸುತ್ತದೆ. ಕ್ರಿ.ಶ. ಸುಮಾರು ಹದಿಮೂರನೆಯ ಶತಮಾನದಿಂದ ಹದಿನೆಂಟು ಹತ್ತೊಂಭತ್ತನೆಯ ಶತಮಾನದ ವರೆಗೆ ರಚಿತವಾಗಿರುವ ಶಾಸ್ತ್ರಗ್ರಂಥಗಳೆಲ್ಲಾ (ನಂತರದವು ಶಾಸ್ತ್ರಗ್ರಂಥಗಳೆನ್ನಿಸಬಹುದಾದವು ತುಂಬಾ ಕಡಿಮೆ) ತಮ್ಮ ಕಾಲದ ಸಂಗೀತದಲ್ಲಿ ಕಂಡು ಬಂದ ಲಕ್ಷ್ಯಲಕ್ಷಣಗಳ ವಿರೋಧವನ್ನು ಅಥವಾ ಅಸಮಂಜಸತೆಗಳನ್ನು ಸರಿಪಡಿಸುವ ಉದ್ದೇಶ ಮತ್ತು ಪ್ರತಿಜ್ಞೆಗಳಿಂದಲೇ ಮಾಡಲಾಗುತ್ತವೆ. ಇದನ್ನು ಅವು ಹೇಗೆ ಸಾಧಿಸುತ್ತವೆಂದರೆ ಆಗ ರೂಢಿಯಲ್ಲಿದ್ದರಾಗಗಳ ತಾಳಗಳ ಮತ್ತು ಪ್ರಬಂಧಗಳ ಪ್ರಯೋಗದಲ್ಲಿ ಕಂಡುಬರುತ್ತಿದ್ದ ಲಕ್ಷಣಗಳು ಹಿಂದೆ ರಚಿತವಾಗಿದ್ದ ಶಾಸ್ತ್ರಗ್ರಂಥಗಳು ಹೇಳಿದ್ದ ಲಕ್ಷಣಗಳಿಂದ ಹೇಗೆ ಭಿನ್ನ ಮತ್ತು ಏಕೆ ಭಿನ್ನವಾಗಿತ್ತು ಎಂದು ವಿವರಿಸಿ, ತಮ್ಮ ಕಾಲದಲ್ಲಿದ್ದ ಆಯಾ ಪ್ರಯೋಗವನ್ನು ಸಮರ್ಥಿಸಿಕೊಳ್ಳುವ ಉಪಾಯಗಳನ್ನು ಹೇಳುತ್ತಿದ್ದವು. ಇಂತಹ ವ್ಯತ್ಯಾಸಗಳನ್ನು ಮತಾಂತರಗಳೆಂದು ಪಟ್ಟಿಮಾಡುವುದಲ್ಲದೆ ಪೂರ್ವಲಕ್ಷಣವನ್ನು ಹೇಗೆ ವಿಸ್ತರಿಸಿದರೆ ಆಧುನಿಕ ಲಕ್ಷಣವನ್ನು ಒಳಗೊಳ್ಳಬಹುದು ಎಂದು ವಿವರಿಸುತ್ತಿದ್ದವು. ಇಂತಹ ವ್ಯತ್ಯಾಸಗಳು ಹುಟ್ಟುತ್ತಿದ್ದುದು ಏಕೆ ? ಇದಕ್ಕೆ ಕಾರಣವು ಸಂಗೀತದ ಮೂಲದ್ರವ್ಯಗಳೇ ಎಂದರೆ ನಾದಲಯಗಳು. ಇವಕ್ಕೆ ಸಾಂಸ್ಕೃತಿಕ ಪ್ರತಿಹಾಸಿಕ ಅಥವಾ ಅಂತರಂಗಿಕ ಒತ್ತಡಗಳಿಗೆ ಪ್ರತಿಸ್ಪಂದಿಸಿ ಕಾಲಕಾಲಕ್ಕೆ ಸ್ವಲ್ಪ ವ್ಯತ್ಯಾಸವಾಗುವ, ಆದುದರಿಂದ ಅಭಿರುಚಿಯನ್ನು ಮಾರ್ಪಡಿಸುವ (ಅಥವಾ ಅಭಿರುಚಿ ವ್ಯತ್ಯಾಸದಿಂದ ಉದಯಿಸುವ) ಶಕ್ತಿಯಿದೆ. ಇಂತಹ ವ್ಯತ್ಯಾಸಗಳನ್ನೆಲ್ಲಾ ಒಳಗೊಳ್ಳುವ ಪ್ರಯೋಗಕ್ಕೆ ಶಾಸ್ತ್ರಕ್ಕೂ ಒಂದು ನಿಯಮವನ್ನು ಹಿಂದೆ ಏರ್ಪಡಿಸಿಕೊಳ್ಳಲಾಗಿತ್ತು. ಏನೆಂದರೆ ಲಕ್ಷ್ಯ ಪ್ರಧಾನವಾದ ಶಾಸ್ತ್ರಗಳಲ್ಲಿ ಲಕ್ಷ್ಯವೇ ಮುಖ್ಯ. ಅದನ್ನು ಶಾಸ್ತ್ರವು ಮಾನ್ಯ ಮಾಡಬೇಕು. ಆದುದರಿಂದ ಈ ವ್ಯತ್ಯಾಸಗಳ ಸೇರ್ಪಡೆಗೆ ಅನುಕೂಲವಾಗುವಷ್ಟರ ಮಟ್ಟಿಗೆ ಶಾಸ್ತ್ರವು ನಮ್ರವಾಗಿರಬೇಕು, ಎಂದರೆ ಭಾಗಿಸಲಾಗುವಂತೆ ಇರಬೇಕು ಇದನ್ನು ವಿಸ್ತರಣೆ, ವ್ಯಾಖ್ಯಾನ, ಶಾಸ್ತ್ರೋಕ್ತ ಲಕ್ಷಣದಲ್ಲಿ ಮತಾಂತರಕ್ಕೆ ಅವಕಾಶ ಇತ್ಯಾದಿಗಳ ಮೂಲಕ ಸಾಧಿಸಬೇಕು.

ನರ್ತನದಲ್ಲಿ

ಇದಕ್ಕೆ ಪ್ರತಿಯಾಗಿ ನಾಟ್ಯ/ನೃತ್ಯ ಶಾಸ್ತ್ರಗ್ರಂಥಗಳಲ್ಲಿ ಇಂತಹ ಪ್ರತಿಜ್ಞೆಯೂ ಸಂದರ್ಭಗಳೂ ಇಲ್ಲ. ಏಕೆಂದರೆ ಅವುಗಳ ಮೂಲದ್ರವ್ಯವು ಮಾನವಶರೀರ ಅದರಲ್ಲಿ ಬಣ್ಣ ಕುಲ, ಜಾತಿ, ಭಾಷೆ ಮುಂತಾದ ವ್ಯತ್ಯಾಸಳಿದ್ದರೂ ಮಾನವ ಶರೀರದ ವಿನ್ಯಾಸವು ನಿಯತವಾಗಿದೆ. ಅದರ ಅಂಗೋಪಾಂಗ ಪ್ರತ್ಯಂಗಗಳ ಚಾಲನ ಚಲನ ಸಾಧ್ಯತೆಗಳೂ ವೈವಿದ್ದವೂ ಸಾಮರ್ಥ್ಯವೂ ನಿಯತವಾಗಿದೆ. ಮತ್ತು ದೇಹದ ಭಂಗಿಗಳೂ ಚಾಲನಮಾದರಿಗಳೂ ತಕ್ಕಮಟ್ಟಿಗೆ ನಿಯತವಾಗಿಯೇ ಇವೆ. ಅಂತೆಯೇ ಕಣ್ಣೆವೆ ಕಣ್ಣುಗುಡ್ಡೆ, ಹುಬ್ಬು, ಕೈಬೆರಳುಗಳು ಇತ್ಯಾದಿಗಳ ಚಲನಾ ರೀತಿಗಳೂ ಎಷ್ಟೇ ವೈವಿಧ್ಯಮಯವಾಗಿದ್ದರೂ ಮಿತವಾಗಿಯೇ ಇರುತ್ತವೆ. ಇದಕ್ಕೆ ಕಾರಣವು ಮಾನವ ಶರೀರದ ನಿಯತವಾಗಿರುವ ವಿನ್ಯಾಸ. ಎರಡನೆಯದಾಗಿ ಈ ಎಲ್ಲ ಸಾಧ್ಯತೆಗಳನ್ನೂ ನಾಟ್ಯಶಾಸ್ತ್ರಜ್ಞರು ದೇಹದಲ್ಲಿ ಒಂದು ಅಂಗುಲವನ್ನೂ ಬಿಡದಂತೆ ಕಂಡುಹಿಡಿದು ಕರಾರುವಕ್ಕಾಗಿ ನಿರೂಪಿಸಿ ಒಂದು ಕೋಶವನ್ನು ನಿರ್ಮಿಸಿದ್ದಾರೆ. ಭರತಮುನಿಯಿಂದ ಪ್ರಾರಂಭವಾದ ಈ ಕೆಲಸವು ರಾಜ್ಯಾದೇಶದಲ್ಲಿ ಪರಾಕಾಷ್ಠೆಯನ್ನು ಮುಟ್ಟಿ ಮಾನವದೇಹದ ಅಂಗ, ಉಪಾಂಗ ಮತ್ತು ಪ್ರತ್ಯಂಗಗಳ ಸಕಲ ನಿಕ್ಷೇಪಗಳ ವಿಶ್ವಕೋಶವು ಸಿದ್ಧವಾಯಿತು. ಹೆಚ್ಚು ಕಡಿಮೆ ಪ್ರಪಂಚದ ಯಾವುದೇ ಭಾಗದ ನೃತ್ಯ ಪದ್ಧತಿಯ ಸೂಕ್ಷ್ಮಾತಿಸೂಕ್ಷ ವಿವರಗಳನ್ನು ಈ ಕೋಶದ ಸಹಾಯದಿಂದ ಪ್ರಯೋಗದಲ್ಲಿ ಸಾಧಿಸಿಕೊಳ್ಳಬಹುದು. ಅಷ್ಟು ವಿವರಪೂರ್ಣವಾಗಿದೆ, ವ್ಯಾಪಕವಾಗಿದೆ. ಈ ಕೋಶ ! ಒಂದು ಭಾಷೆಯಲ್ಲಿರುವ ಅಕ್ಷರಮಾಲೆಯಿಂದ ಈ ಭಾಷೆಯಲ್ಲಿರುವ ಎಲ್ಲ ಪದಗಳನ್ನೂ ಅವುಗಳ ಗುಂಪನದಿಂದ ವಾಕ್ಯಗಳನ್ನು ಪಡೆದುಕೊಳ್ಳುವಂತೆ ಈ ವಿಶ್ವಕೋಶವಿದೆ. ನೃತ್ತದ ಎಲ್ಲ ಪ್ರಯೋಗಗಳೂ – ತಾತ್ವಿಕವಾಗಿ ಈ ವಿಶ್ವಕೋಶದಲ್ಲಿಯೇ ಅಡಕವಾಗಿವೆ. ನೃತ್ಯಾದಿಗಳಲ್ಲಿ ಬರುವ ರಸಗಳನ್ನು ಅವುಗಳ ಆಶ್ರಯ ಆಶ್ರಯಭಾವವನ್ನು ಅವುಗಳ ಸ್ಥಾಯಿ, ಅನುಭಾವ ಮತ್ತು ಸಂಚಾರೀ ಭಾವಗಳನ್ನು ಇಂತೆಯೇ ವ್ಯವಸ್ಥೆಗೊಳಿಸಿ ಕೋಶವೊಂದು ಏರ್ಪಟ್ಟಿದೆ.

ಸಮನ್ವಯ ತತ್ತ್ವ

ಮೇಲ್ಕಂಡ ಅರ್ಥದಲ್ಲಿ, ಶಾಸ್ತ್ರಕ್ಕೂ ಪ್ರಯೋಗಕ್ಕೂ ಸಮಂಜಸತೆಯಿಲ್ಲವೆಂದರೆ ಶಾಸ್ತ್ರದಲ್ಲಿ ಹೇಳಿರುವ ಆಯಾ ಪ್ರಯೋಗಗಳ ಆದರ್ಶರೂಪಕ್ಕೂ ಪ್ರಯೋಗದಲ್ಲಿರುವ ರೂಪಕ್ಕೂ ನಡುವೆ ಭಿನ್ನತೆಯಿದೆ ಎಂದಾಗುತ್ತದೆ. ಆದರೆ ಆದರ್ಶವೆಂದರೆ ಪ್ರಯೋಗವು ಮುಟ್ಟಲಾಗದ್ದುದು ಎಂದೇ ಅರ್ಥವಲ್ಲವೇ? ಆದುದರಿಂದ ಪ್ರಯೋಗಾಂಶವು ತನ್ನ ಆದರ್ಶಕ್ಕೆ ಎಷ್ಟು ಸಮೀಪವಾಗಿದೆಯೋ ಅಷ್ಟರಮಟ್ಟಿಗೆ ಅದು ಸಾರ್ಥಕ ಎಂದಿಟ್ಟುಕೊಳ್ಳಬೇಕು ಆದುದರಿಂದ ಇಂತಹ ಅಸಮಂಜಸತೆಯು ಕೇವಲ ತಾತ್ತ್ವಿಕವಾದುದು.

ಆದರ್ಶದಿಂದ ಪ್ರಯೋಗವು ಎಷ್ಟೆಷ್ಟು ದೂರಸರಿಯುತ್ತದೋ ಅದು ಅಷ್ಟಷ್ಟು ಶಾಸ್ತ್ರವಿರೋಧ ಎಂದು ಭಾವಿಸಬಹುದು.

ಸಂಗೀತಶಾಸ್ತ್ರ ಗ್ರಂಥಗಳಿಗೂ ನೃತ್ಯ-ನೃತ್ತ ಶಾಸ್ತ್ರ ಗ್ರಂಥಗಳಿಗೂ ಇರುವ ಇನ್ನೊಂದು ಮುಖ್ಯ ವ್ಯತ್ಯಾಸವೆಂದರೆ ಸಂಗೀತ ಶಾಸ್ತ್ರಗ್ರಂಥಗಳಲ್ಲಿ ಪ್ರಯೋಗಕ್ಕೆ ಅನುಕೂಲವಾದ ವಿವಿಧ ಪ್ರಬಂಧ ರೀತಿಗಳ ಲಕ್ಷಣಗಳನ್ನು ಕೊಡಲಾಗಿದೆ. (ಆಧುನಿಕ ಕರ್ನಾಟಕ ಸಂಗೀತದ ಹಾಡಿನ ಮಾದರಿಗಳ ಲಕ್ಷಣಗಳು ಇನ್ನೂ ಗ್ರಂಥಸ್ಥವಾಗಿಲ್ಲವೆಂಬುದನ್ನು ಗಮನಿಸಬೇಕು ಇಪ್ಪತ್ತನೆಯ ಮತ್ತು ಇಪ್ಪತ್ತೊಂದನೆಯ ಶತಮಾನಗಳಲ್ಲಿ ಇಂತಹ ಗ್ರಂಥಗಳು ದೇಶಭಾಷೆಗಳಲ್ಲಿ ರಚಿತವಾಗಿದೆ. ಉದಾ ನನ್ನ ಕರ್ನಾಟಕ ಸಂಗೀತವಾಹಿನಿ ಮತ್ತು ಕರ್ನಾಟಕದಲ್ಲಿ ಕಲೆಗಳು-ಸಂಗೀತ) ನೃತ್ತ ನೃತ್ಯ ಶಾಸ್ತ್ರಗ್ರಂಥಗಳಲ್ಲಿ ಪ್ರಬಂಧ ಪ್ರಕಾರಗಳನ್ನು ವರ್ಣಿಸಿರುವುದು ತುಂಬಾ ಅಪರೂಪ. ಶಾರ್ಜ್ಞಾದೇವ, ಜಯಸೇನಾಪತಿ, ಕಲ್ಲಿನಾಥ, ಪಂಡರೀಕವಿಠಲ, ಚತುರದಾಮೋದರ, ಇವರ ಗ್ರಂಥಗಳಲ್ಲಿ ಮಾತ್ರ ಸ್ವಲ್ಪ ಲಕ್ಷಣವನ್ನು ನೋಡಬಹುದು. ಆದರೆ ಈ ಪ್ರಬಂಧಗಳು ಬಹು ಹಿಂದೆಯೇ ತಮ್ಮ ಪ್ರಯೋಗಕ್ಷಮತೆಯನ್ನು ಕಳೆದುಕೊಂಡಿದೆ. ಈಗಿನ ನೃತ್ತ ನೃತ್ಯ ಪ್ರಬಂಧಗಳ ಲಕ್ಷಣಗಳು ಆಧುನಿಕಗ್ರಂಥಗಳಲ್ಲಿ ಮಾತ್ರ ದೊರೆಯುತ್ತವೆ. ಇವು ಕೇವಲಸ್ಥೂಲ ಲಕ್ಷಣಗಳ ಇವುಗಳಿಂದಳು ಪ್ರಯೋಗವು ಭಿನ್ನವಾಗಿದೆಯೆ ಎಂದು ಹೇಳಲು ಬೇಕಾಗುವಷ್ಟು ವಿವರಗಳು ಇಲ್ಲಿ ದೊರೆಯುವುದಿಲ್ಲ.

ಹಿಂದಿನ ಕಾಲದ ಸಮಸಾಮಯಿಕ ಪ್ರಯೋಗಗಳನ್ನು ವಿವರಿಸಿ ವರ್ಣಿಸಿರುವ ಗ್ರಂಥಗಳನ್ನು ಶಾಸ್ತ್ರಗ್ರಂಥಗಳೆನ್ನುವುದಾದರೆ, ಹಿಂದಿನ ಕಾಲದ ಪ್ರಯೋಗಗಳು ನಮ್ಮ ಕಾಲದ ಪ್ರಯೋಗಕ್ಕೆ ಮಾದರಿಗಳು ಎಂದಾಗುತ್ತದೆ. ಇದೇನೂ ಸಮಂಜಸವಾದ ಆಲೋಚನೆಯಲ್ಲ. ಶಾಸ್ತ್ರವು ಅನುಶಾಸನಾತ್ಮಕವಾದರೆ ಅದರ ವಿಧಿನಿಷೇಧಗಳಿಗೆ ಪ್ರಯತ್ನವು ಬದ್ಧ. ಆದರೆ ನಾಟ್ಯ (?) ಶಾಸ್ತ್ರವು ವರ್ಣನಾತ್ಮಕ ಶಾಸ್ತ್ರ ಅನುಶಾಸಕವಲ್ಲ.

ಇನ್ನು ಭರತನಾಟ್ಯವು ಪ್ರಯೋಗಮ ಭರತಮುನಿಯ ನಾಟ್ಯಶಾಸ್ತ್ರದಲ್ಲಿರುವ ಲಕ್ಷಣಗಳಿಗೆ ಅನುಗುಣವಾಗಿದ್ದರೆ ಶಾಸ್ತ್ರೀಯ ಇಲ್ಲದಿದ್ದರೆ ಅಲ್ಲ ಎಂಬ ಪ್ರಶ್ನೆಯನ್ನು ಪರಿಶೀಲಿಸಬಹುದು. ನಾಟ್ಯ ಶಾಸ್ತ್ರದಲ್ಲಿ ಇಂದಿನ ಭರತನಾಟ್ಯದಲ್ಲಿ ಪ್ರಯೋಗಗೊಳ್ಳುತ್ತಿರುವ ಯಾವ ಕೃತಿಪ್ರಕಾರವನ್ನೂ ವರ್ಣಿಸಿಲ್ಲವಾದುದರಿಂದ ಅಲ್ಲಿ ಹೇಳಿರುವ ಅಂಗ, ಉಪಾಂಗ, ಪ್ರತ್ಯಂಗಗಳಿಗೆ ವಿಧಿಸಿರುವ ಅಥವಾ ವರ್ಣಿಸಿರುವ ಲಕ್ಷಣಗಳಿಗೆ ಇಂದಿನ ಭರತನಾಟ್ಯದಲ್ಲಿ ಪ್ರಯೋಗವಾಗುವ ವಿಕ್ಷೇಪಗಳು ಅನುಗುಣವಾಗಿದ್ದರೆ ಶಾಸ್ತ್ರೀಯ ಇಲ್ಲದಿದ್ದರೆ ಅಲ್ಲ ಹಸ್ತಗಳಿಗೆ ಹೇಳಿರುವ ವಿನಿಯೋಗಗಳು ಸರಿಯಾಗಿದ್ದರೆ ಸಮನ್ವಯವಾಗಿದೆ ಎಂದು ಭಾವಿಸಿಕೊಳ್ಳುವುದು ಸುಲಭವಾದ ಉತ್ತರ. ಇದರಲ್ಲಿ ಸ್ವಲ್ಪ ಗೋಜಲಿದೆ. ಭರತಮುನಿಯ ನಾಟ್ಯಶಾಸ್ತ್ರದಲ್ಲಿರುವ ವಿಶೇಷ, ವಿನಿಯೋಗಗಳಿಗೂ ನಂದಿಕೇಶ್ವರನ ಅಭಿನಯದರ್ಪಣ ಮತ್ತು ಭರತಾರ್ಣವಗಳಲ್ಲಿ ಇರುವವುಗಳಿಗೂ ಸಾಕಷ್ಟು ಭಿನ್ನತೆಗಳಿವೆ. ಅಷ್ಟೇ ಅಲ್ಲದೆ ಅಭಿನಯದರ್ಪಣ ಮತ್ತು ಭರತಾರ್ಣವಗಳ ನಡುವೆಯೇ ಇಂತಹ ತೀವ್ರಭಿನ್ನತೆಗಳಿವೆ. ಅಲ್ಲದೆ ಈ ಎರಡು ಗ್ರಂಥಗಳಲ್ಲಿ, ಭರತವೆಂಬುದು ವ್ಯಕ್ತಿವಾಚಕವಲ್ಲ, ಅದು ನೃತ್ತ-ನೃತ್ಯಕಲೆಗಳ ಸಮುಚ್ಚಯನಾಮ. ಭರತಮುನಿಯು ಕೊಡದಿದ್ದ ವಿವರಗಳನ್ನು ಜಾಯಸೇನಾಪತಿ, ಶಾರ್ಜ್ಞದೇವ ಮುಂತಾದವರು ಕೊಡುವಲ್ಲಿ ಅವುಗಳನ್ನು ಇಟ್ಟುಕೊಳ್ಳಬೇಕೆ, ಬಿಡಬೇಕೆ ?

ಹಸ್ತಾಭಿನಯದ ವಿಷಯದಲ್ಲಿ ಇನ್ನೂ ಒಂದು ಪ್ರಸಕ್ತವಾಗಿದೆ. ಹಳೇಬಿಡು, ಬೇಲೂರು, ಗದ್ದವಳ್ಳಿ ಮುಂತಾದ ಹೊಯ್ಸಳ ದೇವಾಲಯಗಳ ನಾಟ್ಯಶಿಲ್ಪಗಳಲ್ಲಿ ಇರುವ ಹಸ್ತ ಭಂಗಿಗಳು ಶಾಸ್ತ್ರಗ್ರಂಥಗಳಲ್ಲಿ ಹೇಳಿರುವ ಆದರ್ಶಾಕಾರಗಳನ್ನು ಅನುಸರಿಸುವುದಿಲ್ಲ. ಅವುಗಳನ್ನು ಹೋಲುತ್ತವೆ. ಅಷ್ಟೆ. ಮೈಸೂರುಶೈಲಿಯ ಅಭಿನಯದಲ್ಲೂ ಹೇಗೆಯೇ ಇತ್ತು. ಈ ಅರ್ಥಾಂಗಿಕಾರವು ಸುಂದರವಾಗಿರಲು ಕಾರಣವೇನೆಂದರೆ ಇಡೀ ಶಿಲ್ಪದಲ್ಲಿ ಅಥವಾ ನಾಟ್ಯಭಂಗಿಯಲ್ಲಿರುವ ಲಾವಣ್ಯ ಚಾರುತ್ವ ಬೇರೆ ಶಿಲ್ಪ ಶೈಲಿಗಳಲ್ಲಿ (ಉದಾ ಚೋಳಶೈಲಿ) ಇರುವ ಹಸ್ತಗಳ ಕಟ್ಟುನಿಟ್ಟಾಗಿ ಆದರ್ಶಸಮೀಪವಾಗಿದ್ದರೂ ಕವಾಯತಿನ ಏಕರೂಪತೆ ಮತ್ತು ಶಿಸ್ತುಗಳು ಪ್ರೇಕ್ಷಕನ ಮನಸಿಗೆ ಭಾಸವಾಗುತ್ತವೆ. ಕಲೆಯ ಮುಖ್ಯ ಉದ್ದೇಶವೂ ಸಾರಾಂಶವು ಚಾರುತ್ವ (ರಮಣೀಯತೆ) ಎಂಬುದನ್ನು ನೆನೆಸಿಕೊಂಡರೆ ಈ ವಿರೋಧಗಳನ್ನು ಸಮನ್ವಯಸಿಬಹುದು. ನರ್ತನ ನಿರ್ಣಯದ ಕೊನೆಯಲ್ಲಿ ಪಂಡರೀಕ ವಿಠಲನು ಒತ್ತಿಹೇಳಿರುವಂತ “ಭರತ; ವಾಕ್ಯವು ಇದೇ:

ದೇಶಿ ಪ್ರಸಿದ್ಧಾ ಅನಂತಾಹಿ ನಾನಾದೇಶ ಜನಾಶ್ರಿತಾ|
ಯಥಾಚಾರು ತಥಾಕಾರ್ಯಾ ನೃತ್ಯ ವಿದ್ಯಾವಿಶಾರದ್ಯೆಃ|
ಚಾರ್ವದಿಷ್ಠನವನ್ನೃತ್ಯಃ ನೃತ್ಯಮನ್ಯದ್‌ವಿಡಂಬನಮ್‌||

ಶಾಸ್ತ್ರಕ್ಕೂ ಪ್ರಯೋಗಕ್ಕೂ ಸಮನ್ವಯದ ವಿಷಯದಲ್ಲಿ ಶಾಸ್ತ್ರದ ಕಟ್ಟಕಡೆಯ ಮಾತು ಇದೇ. ಪ್ರಯೋಗವನ್ನು ಆದರ್ಶಗೊಳಿಸಿ ಶಾಸ್ತ್ರವು ವರ್ಣಿಸಿರುವುದೇ ಈ ಕಾರಣದಿಂದಲೇ. ನೃತ್ಯರಸಿಕರು ರೋಮಾಂಚಗೊಂಡು ಅಹುದಹುದೆನ್ನಬೇಕು. ನೃತ್ಯ ಶಾಸ್ತ್ರವಿಶಾರದರೂ ರೋಮಾಂಚನಗೊಂಡು ಮೈಮರೆತು ೯ಶಾಸ್ತ್ರವನ್ನೂ ಮರೆತು) ಅಹುದಹುದೆನ್ನಬೇಕು. ಇದೇ ಸಮನ್ವಯ.