ಉಡುಗಣಿ

ತಾಲ್ಲೂಕು: ಶಿಕಾರಿಪುರ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ

ಶಿಕಾರಿಪುರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗ್ರಾಮ. ಈ ಕ್ಷೇತ್ರದ ಹೆಸರನ್ನು ನೆನಪಿಸಿಕೊಂಡರೆ ಎದುರು ನಿಲ್ಲುವುದು ೧೨ ನೇ ಶತಮಾನದ ಶ್ರೇಷ್ಠ ವಚನಕಾರ್ತಿ ಹಾಗೂ ಅಕ್ಕ ಎಂದೇ ಖ್ಯಾತಿ ಪಡೆದ ಅಕ್ಕಮಹಾದೇವಿಯ ಭಾವಚಿತ್ರ. ಅಕ್ಕಮಹಾದೇವಿ ಜನಿಸಿದ ಪುಣ್ಯ ಭೂಮಿಯೇ ಉಡುಗಣಿ. ಇವಳು ಸೌಂದರ್ಯವತಿ, ಸದ್ಗುಣ ಸಂಪನ್ನಳಾಗಿದ್ದಳು. ಉಡುಗಣಿಯಲ್ಲಿ ಕೌಶಿಕ ಮಾಹಾರಾಜ ಆಳ್ವಿಕೆ ನಡೆಸುತ್ತಿದ್ದು. ಮಹಾದೇವಿ ಸೌಂದರ್ಯಕ್ಕೆ ಮಾರು ಹೋಗಿ ಮದುವೆಯಾಗಲು ಪೀಡಿಸಲು ತೊಡಗಿದಾಗ ಒಪ್ಪಂದದನ್ವಯ ಮದುವೆಯಾಗುತ್ತದೆ. ನಂತರ ಕೌಶಿಕ ಮಹಾದೇವಿ ಷರತ್ತುಗಳನ್ನು ಮುರಿದಾಗ ಒಪ್ಪಂದದನ್ವಯ ಮದುವೆಯಾಗುತ್ತದೆ. ನಂತರ ಕೌಶಿಕ ಮಹಾದೇವಿ ಷರತ್ತುಗಳನ್ನು ಮುರಿದಾಗ ಅವರ ದಾಂಪತ್ಯ ಜೀವನವು ಮುರಿದು ಬೀಳುತ್ತದೆ. ಅಕ್ಕಮಹಾದೇವಿ ಕೌಶಿಕನನ್ನು ತೊರೆದು ತನ್ನ ಆರಾಧ್ಯ ದೈವ ಶ್ರೀ ಚನ್ನಮಲ್ಲಿಕಾರ್ಜುನನನ್ನು ಹುಡುಕುತ್ತಾ ಶ್ರೀಶೈಲದಲ್ಲಿ ಐಕ್ಯಳಾದಳು.

ಬಳ್ಳಿಗಾವಿ

ತಾಲ್ಲೂಕು: ಶಿಕಾರಿಪುರ
ತಾಲ್ಲೂಕು ಕೇಂದ್ರದಿಂದ: ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೦ ಕಿ.ಮೀ

ಬಳ್ಳಿಗಾವಿ ದಕ್ಷಿಣದ ಕೇದಾರವೆಂದೇ ಪ್ರಸಿದ್ಧಿಯಾಗಿದೆ. ಇಲ್ಲಿ ಕಲ್ಲು ಕಥೆಯನ್ನು ಹೇಳಬಲ್ಲದು. ಅಲ್ಲದೆ ಕಲೆಯ ಆಗರವೂ ಆಗಬಲ್ಲದು. ಅಂತೆಯೇ ಕವಿವಾಣಿ ಶಿಲೆಯಲ್ಲಿ ಗುಡಿಯ ಕಲೆಯ ಬಲೆ ಎಂದು ಉಳಿದಿದೆ. ದಕ್ಷಿಣ ಕೇದಾರ ಎಂದು ಕರೆಯುತ್ತಿರುವ ಮಲೆನಾಡ ಸಿರಿಯ ನಡುವೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿರುವ ಕೇದಾರೇಶ್ವರ ದೇಗುಲವು ನಮ್ಮೆಲ್ಲರ ಸಂತೋಷದ ಸಿರಿಯಾಗಿದೆ. ಶಿರಾಳಕೊಪ್ಪದಿಂದ ಕೇವಲ ೧ ಕಿ.ಮೀ ಅಂತರದಲ್ಲಿ ರಸ್ತೆಯ ಬದಿಯಲ್ಲಿಯೇ ಇದ್ದು ಬಂದು ಹೋಗುವ ಜನರ ಮನಸ್ಸನ್ನು ಮುಗ್ಧಗೊಳಿಸಿ ತನ್ನೆಡೆಗೆ ಬರಮಾಡಿಕೊಳ್ಳದೆ ಇರಲಾರದು.

ಮಾಯಾಲೋಲ ಪರಮಜ್ಯೋತಿ ಶೂನ್ಯ ಸಿಂಹಾಸನಾಧೀಶ ಅಲ್ಲಮಪ್ರಭು ದೇವರು ಜನಿಸಿದ ಪವಿತ್ರ ಪುಣ್ಯ ಸ್ಥಳವು ಇದಾಗಿದೆ. ಅನತಿ ದೂರದಲ್ಲಿಯೇ ಅನಿಮಿಷಾರಣ್ಯ ಯತಿಗಳ ಗುಹೆ ಮಾಳಗೊಂಡನಕೊಪ್ಪದಲ್ಲಿದೆ.

 

ಅಂಜನಾಪುರ ಜಲಾಶಯ

ತಾಲ್ಲೂಕು: ಶಿಕಾರಿಪುರ
ತಾಲ್ಲೂಕು ಕೇಂದ್ರದಿಂದ: ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೫೦ ಕಿ.ಮೀ

ಶಿಕಾರಿಪುರ ೨೦ ಕಿ.ಮೀ ದೂರದಲ್ಲಿರುವ ಅಂಅನಾಪುರ ವ್ಯಾಪ್ತಿಯಲ್ಲಿ ಬರುವ ಜಲಾಶಯವು ಅಂಜನಾಪುರ ಜಲಾಶಯವೆಂದೇ ಪ್ರಸಿದ್ಧಗೊಂಡಿದೆ. ತಾಲ್ಲೂಕಿನ ಜೀವ ನದಿಯಾದ ಕುಮದ್ವತಿ ನದಿಗೆ ಅಡ್ಡಲಾಗಿ ಇಲ್ಲಿ ಒಂದು ಅಣೆಕಟ್ಟಾನ್ನು ನಿರ್ಮಿಸಿ ’ಗೋಡ್ ಬೋಲೇ’ ಗೇಟನ್ನು ಅಳವಡಿಸಿ ಸುಂದರ ಪ್ರವಾಸಿತಾಣವನ್ನಾಗಿ ಮಾಡಲಾಗಿದೆ. ಅಲ್ಲದೆ ಈ ಜಲಾಶಯವು ಶಿಕಾರಿಪುರ ಮತ್ತು ಶಿರಾಳಕೊಪ್ಪ ನಗರಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿದ್ದು ಶಿಕಾರಿಪುರ ಸುತ್ತಮುತ್ತಲಿನ ಸಾವಿರಾರು ಎಕರೆ ಜಮೀನಿಗೆ ನೀರುಣಿಸಿ ಸಾವಿರಾರು ಜನರ ಉಸಿರಾಗಿದೆ.

 

ತಾಳಗುಂದ

ತಾಲ್ಲೂಕು: ಶಿಕಾರಿಪುರ
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ಶಿಕಾರಿಪುರದಿಂದ ಸುಮಾರು ೩೦ ಕಿ.ಮೀ ದೂರದಲ್ಲಿರುವ ಕ್ರಿ.ಶ. ೧೨ ನೇ ಶತಮಾನದವರೆಗೆ ಅತ್ಯಂತ ಪ್ರಖ್ಯಾತ ಕ್ಷೇತ್ರವಾಗಿತ್ತು. ಈ ಹಿಂದೆ ತಾಳಗುಂದವನ್ನು ಸ್ಥಾನಕುಂದೂರು, ಸ್ಥಾನಗುಂದೂರು ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ತಾಳಗುಂದವು ಬನವಾಸಿ ಕದಂಬರ ರಾಜನಾದ ಕಾಕುಸ್ಥವರ್ಮನ ಕಾಲದಿಂದಲೂ ಪ್ರಖ್ಯಾತಿ ಪಡೆದ ಊರು. ಅಲ್ಲದೇ ಪ್ರಣವೇಶ್ವರ ದೇವಸ್ಥಾನದಿಂದಲೂ ಇದು ಪ್ರಸಿದ್ದವಾಗಿದೆ. ಹಾಗೂ ಕದಂಬರ ಕಾಲದ ತಾಳಗುಂದ ಶಾಸನವು ಹಿರಿತನದಿಂದ ಎರಡನೆಯ ಪ್ರಾಚೀನ ಶಾಸನವೆಂದು ಪ್ರಖ್ಯಾತಿ ಹೊಂದಿದೆ.