ಬೇಟೆ’ ಎಂಬ ಪದ ಮೂಲದ್ರಾವಿಡ ಪದದಿಂದ ನಿಷ್ಪತ್ತಿಗೊಂಡಿದೆ. ತಮಿಳಿನಲ್ಲಿ ವೇಟ್ಟಿ, ವೇಟೆ, ವೇಡು ಎಂತಲೂ, ಮಲಯಾಳದಲ್ಲಿ ವೇಟ್ಟೈಯಂತಲೂ, ತುಳುವಿನಲ್ಲಿ ಬೋಣ್ಟೆ ಅಥವಾ ಬೋಂಟೆಯಂತಲೂ, ತೆಲುಗಿನಲ್ಲಿ ಏಟೆ, ವೇಟೆ ಎಂಬ ರೂಪಗಳನ್ನು ಪಂಚ ದ್ರಾವಿಡ ಭಾಷೆಗಳಲ್ಲಿ ಕಾಣಬಹುದು.

ಬೇಟೆ ಉಳಿದುಕೊಂಡು ಬಂದಿರುವುದನ್ನು ಪ್ರಮುಖವಾಗಿ ಐದು ಹಂತಗಳಲ್ಲಿ ಗುರುತಿಸಬಹುದು. ಅವುಗಳೆಂದರೆ ೧. ಆಹಾರೋತ್ಪಾದನೆ ೨. ಪೈರು ಹಾಗೂ ದನಕರುಗಳ ರಕ್ಷಣೆ ೩. ಚರ್ಮ, ಕೊಂಬು ಇತ್ಯಾದಿ ವಸ್ತುಗಳ ಸಂಗ್ರಹಣೆ ೪. ಪ್ರತಿಷ್ಠೆ, ಕೀರ್ತಿಯನ್ನು ಮೆರೆಯಲು ೫. ಆಚರಣೆಗಳಲ್ಲಿ ಬೇಟೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಪೂರ್ವಕಾಲದಲ್ಲಿನ ಬೇಟೆಯ ಸಂಪ್ರದಾಯ ಹಾಗೂ ಕ್ರಮಗಳು ಕಾಲದ ಗಡಣದೊಳಗೆ ಬೆಂದು ತಲೆಮಾರಿನಿಂದ ತಲೆಮಾರಿಗೆ ಸಾಗಿ, ಅಂದು ಪ್ರವೃತ್ತಿಯಾಗಿದ್ದು, ವೃತ್ತಿಯಾಗಿ ವಿಕಾಸ ಹೊಂದಿದೆ. ಬುದ್ಧಿಶಾಲಿಯಾದ ಮನುಷ್ಯ ಬೇಟೆಯಲ್ಲಿ ತನ್ನ ಅನುಭವದ ಮೇಲೆ ಹೊಸ ಹೊಸ ಕ್ರಮಗಳನ್ನು ಆವಿಷ್ಕಾರ ಮಾಡಿಕೊಂಡನು. ಅಂದು ಕೇವಲ ಬೇಟೆಯ ಪ್ರವೃತ್ತಿ, ವ್ಯಕ್ತಿ ನೆಲೆಯಲ್ಲಿದ್ದುದು ಸಮೂಹದ ಸಂಸ್ಕೃತಿಯಾಗಿ ಮಾರ್ಪಟ್ಟಿತು.

ನಮ್ಮ ನಾಗರಿಕತೆಯ ವಿಕಾಸದ ಹಂತಗಳನ್ನು ವಿಭಿನ್ನ ನೆಲೆಗಳಲ್ಲಿ ಅರ್ಥಮಾಡಿಕೊಳ್ಳಲು ಬೇಟೆ ಹಾಗೂ ಅದರ ವಿಧಾನಗಳ ಚಿಂತನೆಯನ್ನು ಸಾಧ್ಯವಿದೆ. ಈ ಬಗೆಗೆ ಚಿಂತಿಸುವ ನಮಗೆ ಅದರ ಪೂರ್ಣ ಪ್ರಮಾಣದ ಅನನುಕೂಲಗಳು, ಅದು ಪರಿಸರದ ಮೇಲೆ ನಡೆಸುವ ಕ್ರೌರ್ಯ ಇತ್ಯಾದಿಗಳ ಬಗೆಗೆ ಚೆನ್ನಾಗಿ ತಿಳಿದಿರಬೇಕು. ಮರೆಯಾಗುತ್ತಿರುವ ಬೇಟೆಯ ಸಂಸ್ಕೃತಿಯನ್ನು ಪೂರ್ವರೂಪದಲ್ಲಿ ನೋದಿ ಆ ಮೂಲಕ ಅಂದಿನ ಜನರ ತಿಳುವಳಿಕೆಗಳನ್ನು ಅರ್ಥ ಮಾಡಿಕೊಳ್ಳುವುದು ಈ ಲೇಖನದ ಉದ್ದೇಶಗಳ್ಲೊಂದು. ಬೇಟೆ ಅಮಾನವೀಯವಾದದ್ದು. ಉದಾಹರಣೆಗೆ ಜಗತ್ತಿನ ಅದ್ಭುತಗಳೊಂದಾದ ತಾಜ್‍ಮಹಲ್ ಅಪ್ಪಳಿಸಿದರೆ ಅದನ್ನು ಹಾಗೆಯೇ ಮತ್ತೆ ಕಟ್ಟಬಹುದು. ಅನೇಕ ಶಿಲಾವಿಗ್ರಹಗಳನ್ನು ಅನೇಕ ಗೊಮ್ಮಟರನ್ನು ಕೆತ್ತಿಸಬಹುದು. ಆದರೆ ಅವಸಾನದ ಅಂಚಿನಲ್ಲಿರುವ ಸಿಂಹ, ಹುಲಿ, ಚಿರತೆ, ಆನೆ – ಮುಂತಾದ ಜೀವಿಗಳ ಸಂತತಿಯನ್ನು ಬೆಳೆಸುವುದು ಸಾಧ್ಯವಾಗುವುದಿಲ್ಲ. ಯಾವ ಜೀವಿಯನ್ನು ಸೃಷ್ಟಿಸಲು ಸಾಧ್ಯವಿಲ್ಲವೋ ಅದನ್ನು ಬೇಟೆಯಾಡುವ, ಕೊಲ್ಲುವ ಹಕ್ಕು ಇರುವುದಿಲ್ಲ. ನಮ್ಮೆಲ್ಲರ ಬದುಕು ಪರಿಸರದ ಮೇಲೆ ನಿಂತಿದೆ. ಅದರ ರಕ್ಷಣೆ ನಮ್ಮ ರಕ್ಷಣೆ ಎಂದು ಬೇರೆ ಹೇಳಬೇಕಾಗಿಲ್ಲ. ಈ ಕಾರಣದಿಂದ ನೆಲ, ಜಲ ಹಾಗೂ ವನ್ಯಮೃಗ ಪಕ್ಷಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು.

ಬೇಟೆ ಜನಪದ ಜೀವನಕ್ಕೆ ಹೊಂದಿಕೊಂಡು ಬಂದ ಸಹಜ ಕ್ರಿಯೆ. ಇದು ವೀರ, ಭಯಾನಕ, ರೌದ್ರ, ಬೀಭತ್ಸ, ಹಾಸ್ಯ ಮೊದಲಾದ ನವರಸಗಳಿಗೆ ಸಾಕಷ್ಟು ಅವಕಾಶವನ್ನು ನೀಡುವ ರೋಚಕ ಪ್ರಸಂಗ. ಬೇಟೆಯಿಂದ ಯಾವಾಗಲೂ ಪ್ರಬಲವರ್ಗ ಜಯಿಸುತ್ತದೆ. ದುರ್ಬಲ ವರ್ಗ ಸೋತು, ಸಾಯುತ್ತದೆ. ಆಹಾರವಾಗುತ್ತದೆ. ‘ಬಲವಿದ್ದವುಗಳ ಬದುಕು’ ಎನ್ನುವ ಪ್ರಕೃತಿ ನಿಯಮದಡಿ ಸಾಗುತ್ತದೆ. ಬೇಟೆಯ ಈ ಕ್ರಿಯೆ ಜೀವಜಗತ್ತಿನ ಎಲ್ಲಾ ಜಲಚರ, ಕ್ರಿಮಿ ಕೀಟ, ಪಕ್ಷಿಗಳಿಂದ ಹಿಡಿದು ಕಾಡಿನ ಪ್ರಾಣಿಗಳಿಂದ ಬೆಳೆದು ಮಾನವನವರೆಗೂ ಚಾಚಿಕೊಂಡಿದೆ.

ಕನ್ನಡ ಕಾವ್ಯಗಳಲ್ಲಿ ಬರುವ ಅಷ್ಟಾದಶ ವರ್ಣನೆಗಳಲ್ಲಿ ಮನರಂಜನೆ ಪ್ರಮುಖ ಸ್ಥಾನ ಪಡೆದಿದೆ. ಮೊದಲು ಬದುಕಿಗೆ ಅನಿವಾರ್ಯವಾಗಿದ್ದ ಬೇಟೆ ಕ್ರಮೇಣ ರೂಢಿಯಾಗಿ, ಕ್ರೀಡೆಯಾಗಿ, ಯುದ್ಧ ಕಲೆಯಾಗಿ, ಮನೋರಂಜನೆಯಾಗಿ, ಜೀವನಾಧಾರವಾಗಿ, ಮೃಗಯಾ ವಿನೋದವಾಗಿ, ಪ್ರಾಚೀನ ಸಾಹಿತ್ಯ ವಸ್ತು ವಿಷಯವಾಗಿ ವಿವಿಧ ಆಯಾಮ ಪಡೆಯಿತು. ಪಂಪ ಭಾರತದ ಅರ್ಜುನ, ಹರಿಶ್ಚಂದ್ರ ಕಾವ್ಯದ ಹರಿಶ್ಚಂದ್ರರನ್ನು ಇಲ್ಲಿ ಉದಾಹರಿಸಬಹುದು. ಬೇಟೆ ಎಂಬುದು ಕೇವಲ ಜೂಜು, ಬೇಟೆ, ಮಧ್ಯಪಾನಗಳಂತೆ ವ್ಯಸನ ಎಂಬುದು ಸರಿಯಲ್ಲ. ಬೇಟೆಯಿಂದ ಬೇಟೆಗಾರನಿಗೆ ಹಲವಾರು ಪ್ರಯೋಜಗಳಿದ್ದವು. ಈ ಕಾರಣದಿಂದಲೇ ಪಂಪನು ಬೇಟೆಯನ್ನು ವಿನೋದಗಳ ರಾಜ ಎಂದು ಕರೆದಿದ್ದಾನೆ. ಇದಕ್ಕೆ ಮಹಾಕವಿ ಕಾಳಿದಾಸನ ಪ್ರಭಾವ ನಿಚ್ಚಳವಾಗಿ ಪ್ರಭಾವ ಬೀರಿದೆ. ಅಭಿಜ್ಞಾನ ಶಾಕುಂತಲದಲ್ಲಿ ಕಾಳಿದಾಸನು ಬೇಟೆಯ ಕುರಿತು ರಚಿಸಿದ ಮನೋಹರವಾದ ಪದ್ಯವೊಂದು ಹೀಗಿದೆ.

            ಮೇದಶ್ಫೇದ ಕೃಶೋದರಂ ಲಘುಭವತ್ಯುತ್ಥಾನ ಯೋಗ್ಯಂವಪುಃ
ಸತ್ವಾನಾಮಪಿ ಲಕ್ಷ್ಯತೇ ವಿಕೃತಿ ಮಚ್ಚಿತ್ತಂ ಭಯ ಕ್ರೋಧಯೋಃ
ಉತ್ಕರ್ಷಃ ಸಚ ಧನ್ವಿನಾಂಯದಿಷವಃ ಸಿದ್ಧ್ಯಂತಿ ಲಕ್ಷ್ಯೇ ಚಲೇ
ಮಿಥ್ಯೈವ ವ್ಯಸನಂ ವದಂತಿ ಮೃಗಯಾ ಮೀದೃಗ್ವಿನೋದಃ ಕುತಃ

ಬೊಜ್ಜು ಕರಗಿ ಹೋಗುತ್ತದೆ. ಹೊಟ್ಟೆ ಕಿರಿದಾಗುತ್ತದೆ. ಶರೀರ ಚುರುಕುಗೊಂಡು ಲಘುವಾಗುತ್ತದೆ. ಹೆದರಿಕೆಯಲ್ಲಿ ಅಥವಾ ಸಿಟ್ಟಿನಲ್ಲಿ ಜಂತುಗಳು ವಿಕಾರವಶವಾದ ಚಿತ್ತ ಹೇಗಿರುತ್ತದೆಂದು ಅರಿವಾಗುತ್ತದೆ. ಚಲಿಸುತ್ತಿರುವ ಸಮಯದಲ್ಲಿ ಕೂಡಾ ಬಾಣಗಳು ಸರಿಯಾಗಿ ಲಕ್ಷ್ಯಕ್ಕೆ ನಾಟುವಂತೆ ಸಿದ್ಧಿ ದೊರಕುತ್ತದೆ ಎಂಬುದು ಬಿಲ್ಲುಗಾರರಿಗೆ ಬಲ್ಮೆಯಾಗಿದೆ. ಇಷ್ಟೆಲ್ಲಾ ಗುಣ ವಿಶೇಷಗಳಿದ್ದರೂ ಬೇಟೆಯನ್ನು ವ್ಯಸನಗಳಲ್ಲಿ ಒಂದು ಎನ್ನುವುದು ಕೇವಲ ಸುಳ್ಳೇ ಆಗಿದೆ. ಬೇಟೆಯಂತಹ ವಿನೋದ ಇನ್ನೆಲ್ಲಿದೆ? ಇದು ಮೇಲಿನ ಪದ್ಯದ ಅರ್ಥ.

ಮಹಾಕವಿ ಪಂಪ ಬೇಟೆಯಿಂದ ದೊರೆಯುವ ಪ್ರಯೋಜನಗಳನ್ನು ಕುರಿತು ಬರೆದ ಪದ್ಯ ಹೀಗಿದೆ.

            “ಪಸಿವು ದೊರೆಕೊಳ್ಗುಮುಣಿಸುಗಳಿಕೆಯ್ಗು ಮಾವಂದದೊಳ್ ಕನಲ್ದಾದ ಮೆಯ್ಗೆ
ನಸಿಯನಾಗಿಪುದುಳಿದುವಪ್ಪುವು ಬಗೆಗೊಳಲಪ್ಪುದು ಮೃಗದ ಮೆಯ್ಯೊಳ್
ನಿಸದ ಮೆಸೆವುದು ಬಲ್ಲಾಳ ಬಿಬ್ಬಲ್ಮೆ ತನ್ನೊಳಮಿಸುತೆ ಲೇಸಪ್ಪುದು
ಬಸದ ಮೆಂದಱಿಯದೆಳಿಸುವರ್ ಬೇಂಟೆಯಂ ಬೇಂಟೆಯ ಬಿನದಂಗಳಸಲ್ತೆ”

ಪ್ರಾದಿಮ ಕಾಲದಲ್ಲಿ ಬೇಟೆಯು ಎರಡು ಮುಖ್ಯ ಕಾರಣಗಳಿಗಾಗಿ ಪ್ರಮುಖವಾಗಿತ್ತು. ಅವುಗಳನ್ನು ಆಹಾರೋತ್ಪಾದನೆ ಹಾಗೂ ರಕ್ಷಣೆ ಎಂದು ಗುರುತಿಸಬಹುದು. ಹುಟ್ಟು ಬೇಟೆಗಾರನಾದ ಮಾನವ ಆದಿಯಲ್ಲಿ ಒಂಟಿಯಾಗಿ ಅರಣ್ಯ ಪ್ರದೇಶದಲ್ಲಿ ಅಲೆದಲೆದು ಗೆಡ್ಡೆ ಗೆಣಸು ಹಾಗೂ ಕೈಗೆ ಸಿಕ್ಕ ವಸ್ತು, ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಹಸಿವನ್ನು ನೀಗಿಸಿಕೊಳ್ಳುತ್ತಿದ್ದನೆಂದು ಸಂಶೋಧನೆಯಿಂದ ತಿಳಿದು ಬರುತ್ತದೆ. ಸಸ್ಯಾಹಾರ, ಮಾಂಸಾಹಾರ, ಅಹಿಂದೆ, ಹಿಂಸೆ, ಇವುಗಳ ಪರಿಕಲ್ಪನೆ ಹಾಗೂ ವ್ಯತ್ಯಾಸ ಆ ಕಾಲಘಟ್ಟದಲ್ಲಿ ಆತನ ಮನೋಪಟದಲ್ಲಿರಲಿಲ್ಲ. ಆಗ ಆತನಿಗೆ ಬೇಟೆ ಕೇವಲ ಅನಿವಾರ್ಯವಾದ ಆಹಾರೋತ್ಪಾದನೆ ಹಾಗೂ ತನ್ನ ರಕ್ಷಣೆಯ ಮಾರ್ಗವಾಗಿತ್ತು. ಆತನ ಬದುಕು ಜೀವಿಸುವುದಕ್ಕಾಗಿ ಆಹಾರ ಎನ್ನುವ ತತ್ವದ ಆಧಾರದ ಮೇಲೆ ಸಾಗುತ್ತಿತ್ತು.

ಕಾಡುಗಳಲ್ಲಿ ಪ್ರಾಣಿಗಳ ಜೊತೆಗೆ ಪ್ರಾಣಿಯಾಗಿ ಜೀವಿಸುವ ಆತನಿಗೆ ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು. ಮರದ ಪೊಟರೆ, ಬಂಡೆಗಳ ಕೆಳಗೆ, ಗುಹೆಗಳನ್ನು ವಾಸದ ನೆಲೆಯಾಗಿಸಿಕೊಂಡಿದ್ದ. ಒಂದು ಪರಿಮಿತ ಭದ್ರತೆ ಯನ್ನು ಒದಗಿಸುತ್ತಿದ್ದ ಆತನ ವಸತಿಗಳು ಕಾಡುಪ್ರಣಿಗಳಿಂದ ಪೂರ್ಣ ಪ್ರಮಾಣದ ರಕ್ಷಣೆಗೆ ಅನರ್ಹವಾಗಿದ್ದವು. “ಪರಿಮಿತ ಭದ್ರತೆಗಳಿರುವ ಗುಹೆ, ಗುಡಿಸಲುಗಳಂತಹ ವಸತಿಗಳಲ್ಲಿ ವಾಸಿಸುತ್ತಿದ್ದ ಆತನು ಕಾಡು ಮೃಗಗಳಿಂದ ತನ್ನ ಜೀವ ರಕ್ಷಣೆಗಾಗಿ ಅವುಗಳನ್ನು ಬೇಟೆಯಾಡುವ ಅನಿವಾರ್ಯತೆಗೆ ಒಳಗಾಗಿರಬೇಕು. ಈ ರೀತಿ ಬೇಟೆಯಾಡಿ ಕೊಂದ ಎಲ್ಲ ಪ್ರಾಣಿಗಳ ಮಾಂಸವನ್ನು ಆತನು ರುಚಿ ನೋಡಿರಲೂ ಸಾಕು. ಅವುಗಳ ಪೈಕಿ ನಾಲಗೆಗೆ ಒಗ್ಗಿದ, ಹೊಟ್ಟೆಗೆ ಪಥವೈನಿಸಿದ ಪ್ರಾಣಿಗಳ ಮಾಂಸ ಮಾತ್ರ ಆಹಾರಕ್ಕೆ ಯೋಗ್ಯವಾಗಿ ಮುಂದುವರೆದಿರಬಹುದು” (ವಿವೇಕ ರೈ ಬಿ.ಎ. ೧೯೯೪ – ೨೪೧) ಮೊದಲು ರಕ್ಷಣೆಯ ನೆಪದಲ್ಲಿ ಆರಂಭವಾದ ಬೇಟೆ ಹಸಿವನ್ನು ನೀಗುವ ಸಾಧನವಾಯಿತು. “Hunting is one of the oldest methods of obtaining food” (M.S.E. Vol.No.೯. ೧೯೯೦ – P – ೧೪೭). ಆತನಿಗೆ ಹಸಿವಿನ ನಿವಾರಣೆ ಹಾಗೂ ರಕ್ಷಣೆಗಳೆರಡೂ ಮೂಲ ಮಂತ್ರವಾಗಿದ್ದವು. ಹೀಗಾಗಿ ಆತ ಆಹಾರದ ಸಂಗ್ರಹದ ಗೊಡವೆಗೆ ಹೋಗಲಿಲ್ಲ. ಹೋಗಲಿಲ್ಲ ಎನ್ನುವುದಕ್ಕಿಂತ ಅದು ಆತನಿಗೆ ತಿಳಿದಿರಲಿಲ್ಲ ಎನ್ನುವುದೇ ಸತ್ಯಕ್ಕೆ ಹತ್ತಿರವಾದ ಸಂಗತಿ. ಹಸಿವೆಯನ್ನು ನೀಗಿಸಿಕೊಳ್ಳುವುದು ಆತನಿಗೆ ಬಹಳ ಪ್ರಯಾಸದ ಕೆಲವೇ ಆಗಿತ್ತು. ಅದನ್ನು ತಕ್ಷಣದಲ್ಲಿ ಪಡೆದುಕೊಳ್ಳಲು ಸಾಧ್ಯವಿರಲಿಲ್ಲ. ಅದನ್ನು ಪಡೆದುಕೊಳ್ಳಲು ಅನಿವಾರ್ಯವಾಗಿ ಸಾಹಸ ಪಡಬೇಕಾಯಿತು. ಅದೇ ಅವನಿಗೆ ಬೇಟೆಯೆಂಬುದನ್ನು ಕಲಿಸಿತು. ಅದರಲ್ಲಿಯೇ ಹೆಚ್ಚು ಅವಲಂಬಿತನಾದನು. ಸುತ್ತಲಿನ ಪ್ರಕೃತಿ ಅವನಿಗೆ ಇನ್ನೂ ಹೆಚ್ಚಿನ ಬೇಟೆಯ ವಿಧಾನವನ್ನು ಕಲಿಸಿಕೊಟ್ಟಿತು. ಉದಾ: ಜೇಡವು ಬಲೆಯ ಮೂಲಕ ಬೇಟೆಮಾಡುವುದು, ಹಲ್ಲಿ, ಹಾವುಗಳು ಹೊಂಚು ಹಾಕಿ ಬೇಟೆಯಾಡುವುದು, ಮಿಂಚೊಳ್ಳಿ ನೀರಿಗೆ ಧುಮುಕಿ ತನ್ನ ಕೊಕ್ಕಿನಿಂದ ಮೀನು ಹಿಡಿಯುವುದು, ಹುಲಿ ಚಿರತೆಗಳು ಹೊಂಚು ಹಾಕಿ ಬೇಟೆಯಾಡುವುದು, ತೋಳ, ಕಾಡುನಾಯಿಗಳು ಗುಂಪುಗೂಡಿ ಬೇಟೆಯಾಡುವುದು ಇನ್ನೂ ಮುಂತಾದವುಗಳು. ಹೀಗೆ ಪ್ರಾಣಿಗಳನ್ನು ವಿಭಿನ್ನ ರೀತಿಯಲ್ಲಿ ಬೇಟೆಯಾಡತೊಡಗಿದನು. ಬೇಟೆ ದಿನದಿಂದ ದಿನಕ್ಕೆ ಹೆಚ್ಚು ಸುಲಭವಾಗುತ್ತಾ ಹೋಯಿತು.

ಬೇಟೆಯು ಆಹಾರೋತ್ಪಾದನೆ ಮತ್ತು ರಕ್ಷಣೆಯ ಜೊತೆಗೆ ಆತನ ಬುದ್ಧಿ ವಿಕಾಸದಲ್ಲಿ ಬಹು ಮಹತ್ತರ ಪಾತ್ರ ವಹಿಸಿದೆ. ಪೂರ್ವಕಾಲದಲ್ಲಿ ಆದಿ ಮಾನವನು ಸಸ್ಯಾಹಾರದ ಜೊತೆಗೆ ತನ್ನ ಸುತ್ತಲಿನ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವ ಮಾಂಸಾಹಾರಿಯಾಗಿರುವುದೇ ಅವನಿಗೆ ವರವಾಗಿ ಪರಿಣಮಿಸಿತೆಂದು ಹೇಳಬೇಕು. ಬೇಟೆಯ ಕ್ರಿಯೆ ಮಾಂಸವನ್ನು ಒದಗಿಸುವುದರ ಜೊತೆಗೆ ಅವನ ವಿಕಾಸಕ್ಕೆ ಕಾರಣವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಅಮಾನವೀಯವೂ, ಕ್ರೂರವು ಆಗಿ ಕಂಡುಬರುವ ಬೇಟೆ ಮಾನವನ ದೈಹಿಕ ಹಾಗೂ ಬೌದ್ಧಿಕ ವಿಕಾಸದಲ್ಲಿ ವಹಿಸಿದ ಪಾತ್ರವನ್ನು ಮರೆಯುವಂತಿಲ್ಲ. ಆತ ಬೇಟೆಗೆ ವ್ಯೂಹ ರಚಿಸಿದಾಗ ಅನಿವಾರ್ಯವಾಗಿ ಬೇಟೆಯ ಪ್ರಾಣಿಯ ಬಗೆಗೆ ಚಿಂತಿಸಬೇಕಾಗಿತ್ತು. ಬೇಟೆಯಾಡಬೇಕಾದ ಪ್ರಾಣಿಯ ಚಲನವಲನ ಗಮನಿಸುವುದು. ಅದರ ಅತ್ಯಂತ ದುರ್ಬಲ ಗಳಿಗೆಯನ್ನು ಗುರುತಿಸುವುದು ಹಾಗೂ ಅದರ ಮೇಲೆ ಆಕ್ರಮಣ ಮಾಡುವುದು. ಇಂಥ ಕಾರ್ಯಗಳು ಅವನ ಮೆದುಳಿನ ಬೆಳವಣಿಗೆಯನ್ನು ಚುರುಕುಗೊಳಿಸಿದವು. ಬೇಟೆಯ ಪ್ರಾಣಿ ದೊಡ್ಡದಾಗಿದ್ದರೆ ಒಂದು ಗುಂಪು ಭಾಗಿಯಾಗುವಂತೆ ಪರಿಸ್ಥಿತಿ ಅನಿವಾರ್ಯವಾಗಿ ನಿರ್ಮಾಣವಾಗುತ್ತಿತ್ತು. ಆ ಸಂದರ್ಭದಲ್ಲಿ ಪ್ರತಿಯೊಬ್ಬನು ಒಂದು ಗೊತ್ತಾದ ಕೆಲಸದಲ್ಲಿ ತೊಡಗಲೇಬೇಕಾದ ಅನಿವಾರ್ಯತೆ ಉಂಟಾಗುತ್ತಿತ್ತು. ಇದರಿಂದಾಗಿ ಅವರಲ್ಲಿ ಸಂಘ ಜೀವನ ಹಾಗೂ ಸಹಕಾರಿ ಮನೋಭಾವ ಬೆಳೆಯಲು ಅನುಕೂಲವಾಯಿತು.

ಮಾನವ ತನ್ನ ವಿಕಾಸದ ಹಂತದಲ್ಲಿ ಸಸ್ಯಾಹಾರವನ್ನು ಪ್ರಮುಖ ಆಹಾರವಾಗಿ ಉಪಯೋಗಿಸಲು ಆರಂಭಿಸಿದನು. ಈ ಹಂತದಲ್ಲಿ ಆತನು ದೈಹಿಕವಾಗಿಯೂ ಬದಲಾವಣೆ ಹೊಂದಿದ. ದೈಹಿಕ ರಕ್ಷಣಾಸ್ತ್ರಗಳಾದ ಉಗುರು, ಕೋರೆಹಲ್ಲು ಇತ್ಯಾದಿಗಳನ್ನು ಕಳೆದುಕೊಂಡನು. ಹೇಗೆಂದರೆ ಕೋರೆ ಹಲ್ಲುಗಳು ಆಹಾರವನ್ನು ಅಗಿಯಲು ತೊಂದರೆ ಕೊಡುತ್ತಿದ್ದವು. ಈ ಕಾರಣದಿಂದ ಕೋರೆ ಹಲ್ಲುಗಳಿಗೆ ಕೆಲಸವಿಲ್ಲದೇ ಕ್ರಮೇಣ ಕ್ಷೀಣಿಸಿದವು. ಉಗುರುಗಳು ಕ್ಷೀಣಿಸಿ ಅದರ ಬದಲು ಬೆರಳುಗಳು ಉಪಯೋಗಕ್ಕೆ ಬಂದವು. ಹಲ್ಲು ಮತ್ತು ಉಗುರುಗಳನ್ನು ಕಳೆದುಕೊಂಡ ಅವನಿಗೆ ತನ್ನ ಹಾಗೂ ತನ್ನವರನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಬೀಳುತ್ತದೆ. ಇದೆಲ್ಲವು ಮೆದುಳಿನ ಮೇಲೆ ಹೆಚ್ಚು ಒತ್ತಡವನ್ನುಂಟುಮಾಡುವಂತೆ ಮಾಡಿದಾಗ ಮಾನವ ಸಹಜವಾಗಿ ಇತರ ಪ್ರಾಣಿಗಳಿಗಿಂತ ಭಿನ್ನನು, ಬುದ್ಧಿವಂತನು ಚಾಣಾಕ್ಷನೂ ಆಗಲು ಕಾರಣವಾಯಿತು. ಈ ಹಂತದಲ್ಲಿ ಅಂದರೆ ಮೆದುಳಿನ ವಿಕಾಸದ ಹಂತದಲ್ಲಿ ಬೇಟೆಯ ಪಾತ್ರವನ್ನು ಮರೆಯುವಂತಿಲ್ಲ.

ಪ್ರಾಣಿಗಳ ಜೊತೆಗೆ ಪ್ರಾಣಿಯಾಗಿ ಬದುಕುತ್ತಿದ್ದ ಮನುಷ್ಯ ತನ್ನ ರಕ್ಷಣೆಯನ್ನು ಕೋರೆಹಲ್ಲುಗಳಿಂದಲೂ ಮತ್ತು ಉದ್ದನೆಯ ಉಗುರುಗಳಿಂದ ಮಾಡಿಕೊಳ್ಳುತ್ತಿದ್ದ. ತನ್ನ ಶರೀರದ ಕೆಲವು ಅಂಗಾಂಗಳು ಅಗತ್ಯಕ್ಕೆ ತಕ್ಕ ಹಾಗೆ ಹೆಚ್ಚು ಒತ್ತು ಕೊಟ್ಟಾಗ, ಅನಗತ್ಯವಾದ ಅಂಗಗಳು ನಿರುಪದ್ರವಿಯಾದವು. ದೈಹಿಕ ರಕ್ಷಣೆಯ ಅಂಗಭಾಗಗಳನ್ನು ಕಳೆದುಕೊಂಡ ನರ ವಾನರನಿಗೆ ತನ್ನ ಆತ್ಮರಕ್ಷಣೆಗೆ ಇದ್ದ ಪ್ರಮುಖ ಅಸ್ತ್ರ ಎಂದರೆ ಚುರುಕು ಬುದ್ಧಿ, ಬುದ್ಧಿಯ ಮೇಲೆ ಹೆಚ್ಚು ಹೆಚ್ಚು ಅವಲಂಬಿಸುತ್ತಾ ಹೋದಂತೆ ಮೆದುಳಿನ ವಿಕಾಸದ ವೇಗ ಹೆಚ್ಚುತ್ತಾ ಹೋಯಿತು. ಆಗ ರಕ್ಷಣೆಗೆ ಸುತ್ತಮುತ್ತ ಬಿದ್ದಿರುವ ಕೋಲು, ಕಲ್ಲುಗಳನ್ನೇ ಬಲಸಲು ಕಲಿತನು. ಇದು ಬೇಟೆಯನ್ನು ದಕ್ಕಿಸಿಕೊಳ್ಳಲು ಸಹಾಯವೂ ಹಾಗೂ ಸುಲಭವೂ ಅಯಿತು.

ಶಿಲಾಯುಗದ ಮಾನವನು ವಿವಿಧ ರೂಪದ ಆಯುಧಾಳನ್ನು ಕಲ್ಲಿನಿಂದ ತಯಾರಿಸಿ ಕೊಂಡು ಅದರಿಂದ ಬೇಟೆಯಾಡಿ ಹಸಿ-ಹಸಿ ಮಾಂಸವನ್ನೇ ತಿಂದು ಜೀವನ ಸಾಗಿಸುತ್ತಿದ್ದನು. ಅವನಿಗೆ ಬೇಟೆಯ ಪ್ರಮುಖ ಆಹಾರೋತ್ಪಾದನೆ ಸಾಧನವಾಗುವುದರ ಜೊತೆಗೆ ಉಡುಗೆ ಹಾಗೂ ಆಭರಣ ಸಲಕರಣೆಯನ್ನು ಒದಗಿಸಿತು. “To early man, hunting was a necessity. His quarry provided not only food from the meat but clothing from the skins, and material for tools from the bones. horns and hooves. Both archaeological evidence from the past and observation of simpler societies of the present show widespread preoccupation with, and ingenuity in, methods of hunting. These varied, and vary, with the nature of the terrain, the animal hunted, the ingenuity and inventiveness of the hunters, and the materials and technologies at their disposal”. (Encyclopaedia Britannica Vol-No-6. 1992-159) ಈವರೆಗೆ ಕೇವಲ ಆಹಾರೋತ್ಪಾದನ ಸಾಧನವಾಗಿದ್ದ ಬೇಟೆ ತನ್ನ ವ್ಯಾಪ್ತಿಯನ್ನು ವಿಸ್ತರಿಕೊಂಡು ಚರ್ಮದ ಹೊದಿಕೆ, ಉಪಕರಣ, ಆಭರಣ ಇತ್ಯಾದಿ ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸಿತು. ದೈಹಿಕವಾಗಿ ದುರ್ಬಲವಾಗಿದ್ದರೂ ಬುದ್ದಿಮತ್ತೆಯಲ್ಲಿ ಮಾತಾಡುವ ಶಕ್ತಿಯುಳ್ಳವನಾಗಿ ಉಳಿದ ಪ್ರಾಣಿಗಳಿಗಿಂತ ಬುದ್ಧಿವಂತನಾಗಿ, ಶಿಲಾಯುಗದಿಂದ ಲೋಹಯುಗಕ್ಕೆ ಕಾಲಿರಿಸಿದನು. ಬೇಟೆಗೆ ಕಬ್ಬಿಣದಿಂದ ತಯಾರಿಸಿದ ಕೊಡಲಿ, ಈಟಿ, ಖಡ್ಗಗಳನ್ನು ಬಳಸಲು ಆರಂಭಿಸಿದನು. ಈ ಹೊತ್ತಿಗಾಗಲೇ ಆತ ಬೆಂಕಿಯ ಉಪಯೋಗವನ್ನು, ಬಳಕೆಯನ್ನು ಕಂಡಿಕೊಂಡಿದ್ದರಿಂದ ಮಾಂಸವನ್ನು ರುಚಿಗಾಗಿ ಅರೆ ಬರೆ ಸುಟ್ಟು ತಿನ್ನಲು ಅರಿತುಕೊಂಡನು.

ಕಬ್ಬಿಣದ ಆಯುಧಗಳನ್ನು ಬೇಟೆಗೆ ಬಳಸಿದ ನಂತರ ಪ್ರಾಣಿಗಳನ್ನು ಮರಸು ಕುಳಿತು ಮರೆಯಲ್ಲಿ ನಿಂತು ಖಡ್ಗದಿಂದ ಕಡಿಯುವುದು, ಈಟಿಯಲ್ಲಿ ಇರಿಯುವುದು, ದೂರದಲ್ಲಿದ್ದರೆ ಬಾಣ ಗುರಿ ನೋಡಿ ಮರ್ಮ ಸ್ಥಾನಕ್ಕೆ ಹೊಡೆದು ಬೇಟೆಯನ್ನು ಉರುಳಿಸುವುದು. ಇದರಿಂದ ಹೆದರಿದ ಪ್ರಾಣಿಗಳು ಮನುಷ್ಯನ ವಾಸಸ್ಥಾನದಿಂದ ದೂರವಾಗಿ ಕಾಡು ಪ್ರದೇಶಗಳಿಗೆ ಓಡಿ ಹೋಗುತ್ತಿದ್ದುದರಿಂದ ಬೇಟೆ ಮೊದಲಿಗಿಂತ ಕಷ್ಟವಾಗಿ ಆಹಾರದ ಉತ್ಪಾದನೆಯು ಕಡಿಮೆಯಾಯಿತು. ಆಗೊಮ್ಮೆ ಈಗೊಮ್ಮೆ ದೊರೆತ ಬೆಟೆಯ ಮಾಂಸದ ಜೊತೆಗೆ ತಿನ್ನಲು ಗೆಡ್ಡೆ – ಗೆಣಸುಗಳನ್ನು ಉಪ ಆಹಾರವನ್ನಾಗಿ ಉಪಯೋಗಿಸಲು ತೊಡಗಿದನು. ಬೇಟೆಯ ಉತ್ಪಾದನೆಯನ್ನು ಹೆಚ್ಚಿಸಲು ಚಿಂತಿಸಿದ. ಅದಕ್ಕೆ ಪ್ರಕೃತಿಯೇ ಮಾರ್ಗವನ್ನು ತೋರಿಸಿತು. ಮೊದಮೊದಲು ಎಲ್ಲಾ ಪ್ರಾಣಿಗಳನ್ನು ತಿನ್ನುತ್ತಿದ್ದ. ನಂತರ ಆತ ಕೆಲವನ್ನು ಮಾತ್ರ ತಿನ್ನತೊಡಗಿದ. ಅದರಲ್ಲೂ ವ್ಯಕ್ತಿಗತ ಅಭಿಪ್ರಾಯಗಳು ಮುಖ್ಯವಾದವು. ಸ್ಥಳೀಯ ಹಾಗೂ ಸಾಂದರ್ಭಿಕ ಕಾರಣಗಳಿಂದ ಕೆಲವು ಪ್ರಾಣಿಗಳ ಮಾಂಸ ನಿಷಿದ್ಧವಾಗಿ ಅದು, ಕ್ರಮೇಣ ಸಾಂಪ್ರದಾಯಿಕವಾಗಿ ಬೆಳೆಯಲು ಕಾರಣವಾಯಿತು. ಇದೇ ಕಾರಣಕ್ಕಾಗಿಯೇ ಪ್ರಾಣಿಗಳನ್ನು ಬೇಟೆಯಾಡುವ ಪದ್ಧತಿ ಮುಂದುವರೆಯುತ್ತಾ ಹೋಯಿತು.

ಬೇಟೆಯ ವಿವಿಧ ತಂತ್ರೋಪಾಯಗಳನ್ನು ಮೃಗ ಪಕ್ಷಿ ಕೀಟಾದಿಗಳಿಂದಲೇ ಮನುಷ್ಯ ಕಲಿತಿರುವುದು ಈ ಬಗೆಗೆ ಯಾವ ವಿವಾದವಿಲ್ಲ. ಜೇಡದಿಂದ ಬಲೆ ಒಡ್ಡುವುದನ್ನು ಕಲಿತರೆ, ಚಿರತೆ, ಹುಲಿಗಳಿಂದ ಮರಸು ಬೇಟೆ ವಿಧಾನವನ್ನು ಅರಿತು ಸೀಳು ನಾಯಿಗಳಿಂದ ಸಮೂಹ ಬೇಟೆಯನ್ನು, ಮುಳ್ಳು ಹಂದಿಗಳಿಂದ ಬಾಣ ಬಿಡುವಿಕೆಯನ್ನು ಕರಗತ ಮಾಡಿಕೊಂಡನು. ಈ ಬೇಟೆಯ ಸುಧಾರಿತ ತಂತ್ರಗಳಿಂದ ಮತ್ತೆ ಗಣನೀಯ ಪ್ರಮಾಣದಲ್ಲಿ ಆಹಾರೋತ್ಪಾದನೆ ಹೆಚ್ಚಿತು. ಇದುವರೆಗೂ ಅಲೆಮಾರಿಯಾಗಿದ್ದ ಮಾನವ ಒಂದು ಕಡೆ ನೆಲೆ ನಿಂತನು. “ತನ್ನ ಜೀವನ ನಿರ್ವಹಣೆಗೆ ಕೃಷಿ ಕಾರ್ಯಕ್ಕೆ ಕೈ ಹಾಕಿದನು. ತನ್ನ ಕೃಷಿಗೆ ವಾಸಯುಕ್ತವಾದ ಕಾಡುಕುದುರೆ, ದನ, ಕೋಣ, ಕುರಿ, ಮೇಕೆಗಳನ್ನು ಪಳಗಿಸಿ ಸಾಕಲು ತೊಡಗಿದನು” (ಜತ್ತಪ್ಪ ರೈ ೧೯೮೨-೧೨). ಬೇಟೆಯನ್ನು ಕೇವಲ ಆಹಾರ, ಚರ್ಮ, ಕೊಂಬು, ಎಲುಬು ಮುಂತಾದ ಹಲವು ಉಪಯೋಗಕ್ಕಾಗಿ ಅವಲಂಬಿಸುವುದರ ಜೊತೆಗೆ ತಮ್ಮ ಪೈರನ್ನು, ಸಾಕುವ ದನಕರುಗಳನ್ನು ರಕ್ಷಿಸಿಕೊಳ್ಳಲು ಬೇಟೆಯ  ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡನು.

ಬೇಟೆ ಮುಂದುವರಿದು ಬದುಕಿನ ಅಂಗವಾಗಿ, ಅವನಿಗೆ ಗೌರವ ತರುವ ಮಾರ್ಗವು ಆಯಿತು. ಪ್ರಾಣಿಗಳನ್ನು ಸಾಕುವ ಮತ್ತು ಕೊಲ್ಲುವ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಂದು ಅದರಲ್ಲಿ ಹಿಂಸೆ ಮತ್ತು ಅಹಿಂಸೆಯ ಕಲ್ಪನೆ ಇದ್ದಂತೆ ಕಾಣುವುದಿಲ್ಲ. ಕೆಲವು ಪ್ರಾಣಿಗಳನ್ನು ಸಾಕುವ ಕೆಲವನ್ನು ಕೊಲ್ಲುವ ಕ್ರಿಯೆಯೇ ವೈರುಧ್ಯವಾಗಿ ಕಾಣುತ್ತದೆ. ಕೊಲ್ಲುವ ಕ್ರಿಯೆಯನ್ನು ಒಂದು ಅನಿವಾರ್ಯ ಆಹಾರೋತ್ಪಾದನಾ ವಿಧಾನ ಎಂದು ಭಾವಿಸಿದ್ದರಿಂದ ಅಮ್ದು ಹಿಂಸೆಯ ಕಲ್ಪನೆ ಇರಲು ಸಾಧ್ಯವಿಲ್ಲ. ಊರುಗಳು ಹುಟ್ಟಿ ಬೆಳೆಯುತ್ತಾ ಬಂದಂತೆ ಅಹಿಂಸೆಯ ಕಲ್ಪನೆಗಳು ಬಲಿಯುತ್ತಾ ಬಂದಿವೆ ಎಂದು ಬರಗೂರು ರಾಮಚಂದ್ರಪ್ಪನವರು ಉಪಸಂಸ್ಕೃತಿ ಮಾಲೆ ಪ್ರಸ್ತಾವನೆಯಲ್ಲಿ ಚರ್ಚಿಸಿದ್ದಾರೆ. ಕಾಲ ಜಾರಿದಂತೆ ಜನಸಂಖ್ಯೆ ಹೆಚ್ಚಿತು. ಕಾಡು ಕ್ರಮೇಣ ಕಡಿಮೆಯಾಗುತ್ತಾ ಊರುಗಳು ಬೆಳೆದು ಬಂದವು. ಇಂದಿನ ಸ್ಥಿತ್ಯಂತರ ಬದುಕಿನಲ್ಲಿ ಬೇಟೆ ಸಂಸ್ಕೃತಿ ತನ ಸ್ವರೂಪವನ್ನು ಬದಲಿಸಿಕೊಂಡಿದೆ. ಕಾರಣ ಅಂದಿನ ಕಾಡು ಇಂದು ಇಲ್ಲ. ಹುಲಿ ಚಿರತೆಯಂತಹ ಪ್ರಾಣಿಗಳ ತಲೆ ಎಣಿಸುವಷ್ಟು ಅವು ವಿರಾವಾಗಿವೆ. “ಅವುಗಳ ರಕ್ಷಣೆಯ ಜವಾಬ್ದಾರಿಗೆ ಸರಕಾರ ಟೊಂಕಕಟ್ಟಿ ನಿಂತು ಅದಕ್ಕಾಗಿಯೇ ಹಲವು ನಿಯಮ ಕಾನೂನು ಕಟ್ಟಲೆಗಳನ್ನು ಮಾಡಿದೆ. ಇದರಿಂದ ಆದಿಮ ಬದುಕಿನಲ್ಲಿ ಅನಿವಾರ್ಯವಾಗಿದ್ದ ಬೇಟೆ ಇಂದಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಕಾಣದಷ್ಟು ಕಣ್ಮರೆಯಾಗುತ್ತಾ ಬಂದಿದೆ. ಕೆಲವು ಕಾಡುಗಳ್ಳರನ್ನು ಬಿಟ್ಟರೆ ಬೇಟೆಯೇ ಪೂರ್ಣ ಜೀವನಾಧಾರ ಮಾಡಿ ಬದುಕುತ್ತಿದ್ದ ಆದಿಮ ಜನವರ್ಗ ಇಂದು ಕಡಿಮೆಯಾಗಿದೆ. ಅವರು ತಮ್ಮ ಬದುಕಿಗಾಗಿ ಬೇರೊಂದು ವೃತ್ತಿಯನ್ನು ಅವಲಂಬಿಸಿದ್ದಾರೆ” (ಸ.ಚಿ. ರಮೇಶ, ೨೦೦೧ – ೧೦).

ದೈಹಿಕ ಹಾಗೂ ಬೌದ್ಧಿಕ ವಿಕಾಸದಲ್ಲಿ ಅನಿವಾರ್ಯವಾಗಿದ್ದ ಬೇಟೆ, ಮಾನವನ ಸಾಂಸ್ಕೃತಿಕ ಇತಿಹಾಸದ ಬೆಳವಣಿಗೆಯ ಮುಂದಿನ ಹಂತಗಳಲ್ಲಿ ಸಾರ್ವತ್ರಿಕವಾಗಿ ಅನಿವಾರ್ಯವಾಗಲಿಲ್ಲ. ಪ್ರಾದೇಶಿಕ ಪರಿಸರದಿಂದಾಗಿಯೂ ಬೇಟೆ ವ್ಯತ್ಯಾಸವಾಗುತ್ತದೆ. ಕಾಡಿನ ಪ್ರದೇಶಗಳಲ್ಲಿ ಬದುಕುವ ಜನವರ್ಗಕ್ಕೆ ಬೇಟೆ ಅನಿವಾರ್ಯವಾದರೆ, ಬಯಲು ಪ್ರದೇಶದಲ್ಲಿ ಬದುಕುವ ಜನವರ್ಗಕ್ಕೆ ಅದು ಅನಿವಾರ್ಯವಾಗುವುದಿಲ್ಲ. ಅದರ ಬದಲಾಗಿ ಬಯಲು ಪ್ರದೇಶದ ಜನವರ್ಗ ಪ್ರಾಣಿಗಳನ್ನು ಸಾಕುವ ಕೆಲಸ ಕಾರ್ಯದಲ್ಲಿ ತೊಡಗಿ ಅದರಿಂದ ತಮಗೆ ಬೇಕಾದ ಮಾಂಸವನ್ನು ಪಡೆದರು. ಮಲೆನಾಡಿನ ಕೃಷಿಕರು ಬೇಟೆಯನ್ನು ಉಳಿಸಿಕೊಂಡ ರೀತಿಯೇ ಬೆರೆಯಾಗಿದೆ. “ವ್ಯವಸಾಯವನ್ನೇ ಪ್ರಮುಖ ಕಸುಬಾಇ ಮಾಡಿಕೊಂಡಿರುವ ಇವರು ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಇವರಿಗೆ ಬೇಟೆ ಬೇಸರ ನೀಗುವ, ಸಾಹಸ ಮರೆವ ಸಾಧನವೂ ಹೌದು” (ಹಿರಿಯಣ್ಣ : ೧೯೯೯ – ೧೨೯).

ಪ್ರಾಣಿಗಳನ್ನು ಸಾಕುವ ಪ್ರವೃತ್ತಿಯೇ ಬೇಟೆಯು ಬಯಲು ನಾಡಿನವರಲ್ಲಿ ಕಡಿಮೆಯಾಗಲು ಕಾರಣವಾಯಿತು. “ಆದರೆ ಇಂತಹ ಎಲ್ಲಾ ಸಂದರ್ಭಗಳಲ್ಲೂ ಪ್ರಾಣಿ ಸಿಗುವ ಸಂಭವ ಇಲ್ಲವಾದ್ದರಿಂದ, ಇಂತಹ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಮನೆಯಲ್ಲಿ ಸಾಕುವ ಹಾಗೂ ಇಂತಹ ಸಾಕು ಪ್ರಾಣಿಗಳ ಸಂತತಿಯನ್ನು ಬೆಳೆಸುವ ಪ್ರವೃತ್ತಿಯೇ ಬೇಟೆಯ ಸಂಸ್ಕೃತಿಯನ್ನು ಕಡಿಮೆ ಮಾಡಿದಂತೆ ಕಾಣಿಸುತ್ತದೆ” (ವಿವೇಕ ರೈ. ಬಿ.ಎ. ೧೯೪೮-೨೪೨). ಪರಿಮಿತ ಭೌಗೋಳಿಕ ಪ್ರದೇಶದಲ್ಲಿ ಬದುಕುತ್ತಿದ್ದ ಜನವರ್ಗಗಳು ಬೇಟೆಯನ್ನು ತಮ್ಮ ಆಹಾರೋತ್ಪಾದನ ಮಾರ್ಗಗಳಲ್ಲೊಂದಾಗಿ ಮಾಡಿಕೊಂಡು ಮುಂದುವರಿದರು. ಈ ಜನವರ್ಗವು ಸಾಂಸ್ಕೃತಿಕ ವಿಕಾಸದ ಆರಂಭದ ಹಂತಗಳನ್ನು ದಾಟಿಲ್ಲ. ಇವರಲ್ಲಿ ಪ್ರಾಚೀನ ಸಂಸ್ಕೃತಿಯ ಅನೇಕ ಪಳೆಯುಳಿಕೆಗಳು ಕಂಡುಬರುತ್ತವೆ. ಹೀಗೆ ಬಾಹ್ಯ ಸಂಪರ್ಕಕ್ಕೆ ಒಳಗಾಗದ ಜನವರ್ಗಗಳು ಗುಡ್ದಗಾಡು ಜನಾಂಗಗಳಾಗಿ ಬೆಳೆದು ಬಂದಿವೆ.

ಮಲೆನಾಡಿನ ಕೃಷಿಕರಲ್ಲಿ ಆದಿವಾಸಿ ಬೇಟೆ ವಿಧಾನದ ಅಂಶಗಳಿವೆ. “ಇವರು ಹೆಚ್ಚಾಗಿ ಸಾಂಪ್ರದಾಯಿಕ ಬೇಟೆ ವಿಧಾನಗಳನ್ನೇ ಅನುಸರಿಸುತ್ತಾರೆ. ಈ ಬೇಟೆ ತಂತ್ರಗಳು ಆದಿವಾಸಿ ಬೇಟೆ ವಿಧಾನ ತಂತ್ರಗಳನ್ನು ನೆನಪಿಗೆ ತರುತ್ತವೆ. ಪ್ರತಿಯೊಂದು ಪ್ರಾಣಿಯನ್ನು ಕೊಲ್ಲಲು ಬೇರೆ ಬೇರೆ ತಂತ್ರಗಳನ್ನು ಕಂಡುಕೊಳ್ಳುವುದರ ಜೊತೆಯಲ್ಲೇ ಅದಕ್ಕೆ ಬೇಕಾದ ಸಾಧನ ಸಲಕರಣೆಗಳ ಕುಮ್ಮಕ್ಕನ್ನು ಬಳಸಿಕೊಳ್ಳುತ್ತಾರೆ. ಬೇಟೆಯಲ್ಲಿ ನಾಯಿಗಳ ನೆರವನ್ನು ಇವರು ಹೆಚ್ಚಾಗಿ ಪಡೆದುಕೊಳ್ಳುವುದು ಕಂಡುಬರುತ್ತದೆ (ಹಿರಿಯಣ್ಣ ೧೯೯೯ – ೧೨೯).

ಈಗಲೂ ಪ್ರತ್ಯೇಕವಾಗಿ ಬದುಕು ಸಾಗಿಸುತ್ತಿದ್ದ ಗುಡ್ಡಗಾಡು ಜನವರ್ಗಗಳು ಕಾಣಸಿಗುತ್ತವೆ. ಬಯಲು ಪ್ರದೇಶದಲ್ಲಿ ನೆಲೆನಿಂತ ಜನವರ್ಗಗಳು ಸಂಸ್ಕೃತಿಯ ವಿಕಾಸದಲ್ಲಿ ನಾಗರಿಕತೆಯನ್ನು ಬಹುಬೇಗನೆ ಸಾಧಿಸಿಕೊಂಡವು. ಈ ಜನವರ್ಗಗಳು, ಬೇಟೆಯ ಜೊತೆ ಜೊತೆಗೆ ತಾವು ತಲೆತಲಾಂತರದಿಂದ ಕಂಡುಕೊಂಡ ಅನೇಕ ತಂತ್ರಜ್ಞಾನಗಳ ಬಲದಿಂದ ಕೃಷಿಯನ್ನು ತಮ್ಮ ಮುಖ್ಯ ಕಸುಬನ್ನಾಗಿಸಿಕೊಂಡವು. ತಾವು ಬೆಳೆದ ಬೆಳೆಯನ್ನು, ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಬೇಟೆಯನ್ನು ಬಳಸಿಕೊಳ್ಳಲಾಯಿತು. “The development of agriculture made hunting less man’s sole life support, but he still pursued it to protect crops. Flocks, or herds as well as for food. The hunter’s Continual training with his impliments and in tracking and stalking had a social value in maintaining group activity, earning prestige, and preserving tradition” (Encyclopaedia Britanica, Vol.6.199 – 159). ಕೃಷಿಯಿಂದಾಗಿ ಭೂ ಒಡೆತನದ ಕಲ್ಪನೆಗಳು ಕಾಣಿಸಿಕೊಂಡವು. ಸಹಜವಾಗಿ ಯಜಮಾನ ಸಂಸ್ಕೃತಿ ಬೆಳೆಯಿತು. ಆರ್ಥಿಕ ಸ್ಥಿತಿ ಮಾನವನ ಅಂತಸ್ತನ್ನು ನಿರ್ಣಯಿಸುವ ಮಾನದಂಡವಾಯಿತು. ಭೂ ಒಡೆಯನೋ, ರಾಜನೋ, ಬಲ್ಲಾಳನೋ – ಯಾರೇ ಆಗಲಿ ಆತ ಬೇಟೆಗಾರ ಸಂಸ್ಕೃತಿಗಿಂತ ಭಿನ್ನವಾದ ಹಾಗೂ ಸಾಪೇಕ್ಷವಾಗಿ ಶಿಷ್ಟಸಂಸ್ಕೃತಿಯ ಬೆಳವಣಿಗೆಗೆ ಕಾರಣನಾದ. ಕೃಷಿಯಿಂದ ಆರ್ಥಿಕ ಅಂತಸ್ತನ್ನು ಹೆಚ್ಚಿಸಿಕೊಂಡ ಯಜಮಾನ ಸಂಸ್ಕೃತಿಯ ಮುಖಂಡರುಗಳಿಗೆ ಬೇಟೆಯ ಮನರಂಜನೆಯ ಒಂದು ಸಾಧನವಾಯಿತು.

ಚರಿತ್ರೆ ಕೂಡ ತನ್ನ ಒಡಳೊಳಗೆ ಅನೇಕ ಬಗೆಯ ಬೇಟೆಯ ಮಾಹಿತಿಗಳನ್ನು ಅಡಗಿಸಿಕೊಂಡಿದೆ. ಬೇಟೆಯು ಮಾನವನಿಗೆ ಅನಿವಾರ್ಯವಾಗಿತ್ತೆನ್ನುವುದರ ಮೇಲೆ ಇದು ಬೆಳಕು ಚೆಲ್ಲುತ್ತದೆ. ಶಾಸನ, ಗ್ರಂಥ ಉಬ್ಬುಶಿಲ್ಪಗಳು, ಕೋಟೆಯ ಹೆಬ್ಬಾಗಿಲುಗಳು, ದೇವಾಲಯಗಳ ಶಿಲ್ಪಗಳು ಹೆಸರುಗಳು ಉದಾಹರಣೆಗೆ ಬೇಟೆರಂಗ, ಬೇಟೆಬಾಗಿಲು ಇತ್ಯಾದಿ. ಜನಪದ ಮೌಖಿಕ ಇತಿಹಾಸಗಳಾದ ಕತೆ, ಹಾಡು, ಪುರಾಣ, ಐತಿಹ್ಯ ಮುಂತಾದವುಗಳನ್ನು ಉದಾಹರಿಸಿಬಹುದು. ಅನೇಕ ಸಾಮ್ರಾಜ್ಯಗಳ ಹುಟ್ಟಿಗೆ ಬೇಟೆ ಕಾರಣವಾಯಿತು ಎನ್ನುವುದು ಜನಪದ ಕತೆಗಳಿಂದ ತಿಳಿದುಬರುತ್ತದೆ. ವಿಜಯನಗರ ಸಾಮ್ರಾಜ್ಯದ ಹುಟ್ಟಿನ ಬಗೆಗೆ ಬೇಟೆಯಾಡುತ್ತಾ ಬಂದಾಗ ಅಲ್ಲಿ ವಾಸವಾಗಿದ್ದ ಮೊಲಗಳು ಅವರ ಬೇಟೆ ನಾಯಿಗಳನ್ನು ಬೆನ್ನಟ್ಟಿ ಹೋದವು. ಇಷ್ಟೇ ಅಲ್ಲ. ಅವರು ಏರಿದ ಕುದುರೆಗಳ ಕಾಲುಗಳನ್ನು ಕಚ್ಚಿದವಂತೆ. ಅಲ್ಲಿ ನಡೆದ ವಿಚಿತ್ರವೂ, ಆಶ್ಚರ್ಯವೂ ಅದ ಘಟನೆಯನ್ನು ಆ ಪ್ರದೇಶದ ಋಷಿಮಾನ್ಯರಾದ ವಿದ್ಯಾರಣ್ಯರಿಗೆ ತಿಳಿಸಿದರು. ಬಹುಕಾಲದಿಂದಲೂ ಆ ತಪೋಭೂಮಿಯಲ್ಲಿ ನೆಲೆಯಾಗಿದ್ದ ವಿದ್ಯಾರಣ್ಯರು ಚಿಂತಿಸಿ ನಂತರ ಹೀಗೆ ಹೇಳಿದರು. ಇದು ಗಂಡುಮೆಟ್ಟಿನ ನೆಲ ಎಲ್ಲ ಪ್ರದೇಶಗಳಲ್ಲೂ ಹೀಗೆ ಘಟಿಸಲು ಸಾಧ್ಯವಿಲ್ಲ. ಎಲ್ಲಿ ದುರ್ಬಲವೂ, ಸಾಮಾನ್ಯವೂ ಆದ ಪ್ರಾಣಿ ಬಲಿಷ್ಟವೂ, ದರ್ಪವೂ ಆಗಿ ವರ್ತಿಸುತ್ತದೆಯೋ ಅಲ್ಲಿ ಭೂಮಿಯು ದೈವಿಕ ಮಹತ್ವವನ್ನು ಹೊಂದಿರುತ್ತದೆ. ನೀವು ಸಾಮ್ರಾಜ್ಯ ಸ್ಥಾಪಿಸಲು ಇದು ಒಳ್ಳೆಯ ಗಂಡು ಭೂಮಿ. ಈ ಸಲುವಾಗಿ ನಾನು ತಾಯಿ ಭುವನೇಶ್ವರಿಯನ್ನು ಕುರಿತು ತಪಸ್ಸು ಮಾಡಿ ವರ ಪಡೆಯುತ್ತೇನೆ. ತಪಸ್ಸಿನಿಂದ ಫಲ ಲಭಿಸಿದ ನಂತರ ಶಂಖ ಊದುತ್ತೇನೆ. ಶಂಖನಾದ ಕೇಳಿದ ಮರುಗಳಿಗೆಯಲ್ಲಿಯೇ ನೀವು ಸಾಮ್ರಾಜ್ಯ ಸ್ಥಾಪಿಸಿ ಎಂದು ಹೇಳಿದರು. ಅದರಂತೆ ಸಾಮ್ರಾಜ್ಯ ಸ್ಥಾಪನೆಗೆ ಎಲ್ಲ ಸಿದ್ಧತೆಯನ್ನು ಮಾಡಿಕೊಂಡು ಹಕ್ಕ-ಬುಕ್ಕರು ಎದುರು ನೋಡುತ್ತಿರುತ್ತಾರೆ. ಇತ್ತ ವಿದ್ಯಾರಣ್ಯರು ದೇವಿಯಿಂದ ಎಂದೂ ಅಳಿಯದ ಸಾಮ್ರಾಜ್ಯ ಸ್ಥಾಪಿಸಲು ವರ ಪಡೆಯಲು ತಪಸ್ಸು ಮಾಡುತ್ತಾರೆ. ದೇವಿ ಪ್ರತ್ಯಕ್ಷಳಾಗಿ ಏನು ವರಬೇಕು ಎಂದು ಕೇಳುವ ವೇಳೆಗೆ ಮಾಯಾವಿ ಭಿಕ್ಷುಕನೊಬ್ಬ ಶಂಖವನ್ನು ಬಿಡದೆ ಊದುತ್ತಾನೆ. ಶಂಖನಾದವನ್ನು ಕೇಳಿದ ಹಕ್ಕ-ಬುಕ್ಕರು ವಿದ್ಯಾರಣ್ಯರು ಊದಿದ ಶಂಖನಾದವೆಂದೇ ತಿಳಿದು ಸಾಮ್ರಾಜ್ಯ ಸ್ಥಾಪನೆ ಮಾಡಿಬಿಟ್ಟರು. ಇದರಿಂದ ನೊಂದ ವಿದ್ಯಾರಣ್ಯರು ದೇವಿಯನ್ನು ಕೇಳಲಾಗಿ ಪ್ರಕೃತಿ ನಿಯಮದಂತೆ ಹುಟ್ಟಿದುದು ಅಳಿಯಲೇ ಬೇಕು. ಚಿರಕಾಲ ಉಳಿಯುವ ಸಾಮ್ರಾಜ್ಯ ಸ್ಥಾಪಿಸಲು ಸಾಧ್ಯವಿಲ್ಲ ಎಂದು ತಾಯಿ ಭುವನೇಶ್ವರಿ ಹೇಳಿದಳಂತೆ. ಮುಂದೆ ಸಾಮ್ರಾಜ್ಯ ಸ್ಥಾಪಿಸಲು ಆ ಭಾಗಕ್ಕೆ ಬಂಗಾರದ ಮಳೆ ಸುರಿಸಿದಳಂತೆ. ದೇವಿ ಸುರಿಸಿದ ಬಂಗಾರದ ಮಳೆಯಿಂದ ವಿದ್ಯಾರಣ್ಯರು ಹಕ್ಕ-ಬುಕ್ಕರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿಸಿದರಂತೆ. ಹೀಗೆ ಹಲವಾರು ಸಾಮ್ರಾಜ್ಯಗಳ ಹಿಂದೆ ಬೇಟೆ ಸಂಸ್ಕೃತಿಯ ಐತಿಹ್ಯಗಳು ಹೇರಳವಾಗಿ ಸಿಗುತ್ತವೆ. ಈ ಹೇಳಿಕೆಗಳು ಪೂರ್ಣ ಸತ್ಯಕ್ಕೆ ಹತ್ತಿರವಾಗಿಲ್ಲದಿದ್ದರೂ, ಬೇಟೆ ಒಂದು ಸಾಮ್ರಾಜ್ಯದ ಸ್ಥಳದ ಆಯ್ಕೆಯಲ್ಲಿ ಬಹು ಮಹತ್ವದ ಸ್ಥಾನ ಪಡೆದಿರಬಹುದು ಎನ್ನುವುದರ ಮೇಲೆ ಬೆಳಕು ಚೆಲ್ಲುತ್ತದೆ.

ಅಂದಿನ ಕಾಲದ ರಾಜರು ಕಟ್ಟಿಸಿದ ಕೋಟೆಯ ಹೆಬ್ಬಾಗಿಲುಗಳಲ್ಲಿ ಬೇಟೆಗಾರರ ಹೆಬ್ಬಾಗಿಲು ಒಂದು. ಹೀಗೆ ಹೆಸರಿಟ್ಟಿದ್ದ ಹಿಂದೆ ವಿಜಯನಗರ ಅರಸರು ಹಾಗೂ ಅಲ್ಲಿನ ಜನರಿಗೆ ಬೇಟೆಯ ಬಗೆಗಿರುವ ಉತ್ಸಾಹ ಹಾಗೂ ಮಹತ್ವ ಅಡಗಿರುವುದು ತಿಳಿದು ಬರುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಪ್ರಚಲಿತವಿದ್ದ ಹಲವಾರು ಬೇಟೆ ಸಂಪ್ರದಾಯದ ಉಲ್ಲೇಖಗಳು ಆ ಕಾಲದಲ್ಲಿ ರಚನೆಯಾದ ಶಾಸನ, ಗ್ರಂಥ ಹಾಗೂ ಉಬ್ಬುಶಿಲ್ಪಗಳಲ್ಲಿ ಕಂಡುಬರುತ್ತವೆ. ಅಂದಿನ ಅರಸರು ಆಚರಿಸುತ್ತಿದ್ದ ದಸರಾ ಹಬ್ಬದಲ್ಲಿ, ನಗರದಲ್ಲಿ ಏರ್ಪಡಿಸುತ್ತಿದ್ದ ಇತರೆ ಹಬ್ಬ ಹಾಗೂ ಆಚರಣೆಗಳಲ್ಲಿ ರಾಜರೊಡನೆ ಬೇಟೆಗೆ ಹೋದ ಬೇಟೆಗಾರರು, ಬೇಟೆಯಾಡಿ ಸಂಪಾದಿಸಿದ ಬೇಟೆಯ ಪ್ರಾಣಿಯನ್ನು ಹೊತ್ತು ನಗರವನ್ನು ಬೇಟೆ ಹೆಬ್ಬಾಗಿಲಿನಿಂದ ಪ್ರವೇಶ ಮಾಡುತ್ತಿದ್ದರೆಂದು ಗ್ರಂಥಗಳಿಂದ ತಿಳಿದುಬರುತ್ತದೆ. ರಾಜನಿಂದ ಸಾಮಾನ್ಯನವರೆಗೆ ಬೇಟೆ ಪ್ರಚಲಿತವಿತ್ತು. ವಿಜಯನಗರವನ್ನು ಆಳಿದ ಮೊದಲ ರಾಜವಂಶದ ಸಂಗಮರ ಇಮ್ಮಡಿ ದೇವರಾಯನಿಗೆ ಹಲವಾರು ಬಿರುದುಗಳಿದ್ದವು. ಅವುಗಳಲ್ಲಿ ‘ಗಜಬೇಂಟೆಕಾರ’ ಎನ್ನುವುದು ಒಂದು. ಈ ಬಿರುದಾವಳಿಯ ಹಿಂದೆ ಆತನಿಗಿರುವ ಬೇಟೆಯ ಬಗೆಗಿನ ಆಸಕ್ತಿ ಶೂರತ್ವ ಹಾಗೂ ಆನೆಯ ಬೇಟೆಯ ಬಗೆಗಿನ ಚಾಣಾಕ್ಷತನ ಅಡಗಿರುವುದು ತಿಳಿದುಬರುತ್ತದೆ. ಆನೆಯ ಬೇಟೆಯ ಬಗೆಗಿನ ಉಬ್ಬುಶಿಲ್ಪಗಳನ್ನು ಮಹಾನವಮಿ ದಿಬ್ಬು, ವಿಠಲದೇವಸ್ಥಾನ, ಹಜಾರಾಮದೇವಸ್ಥಾನದ ಕಂಬಗಳು ಹಾಗೂ ಗೋಡೆಯ ಮೇಲೆ ಕಾಣಬಹುದು.

ವಿದೇಶಿ ಪ್ರವಾಸಿ ಅಬ್ದುಲ್‍ರಜಾಕನು ವಿಜಯನಗರಕ್ಕೆ ಭೇಟಿ ನೀಡಿದಾಗ ಆ ಕಾಲದ ವರಹಗಳ ಬಗೆಗೆ ಉಲ್ಲೇಖಿಸುತ್ತಾನೆ. ಆತನು ಎರಡನೆಯ ದೇವರಾಯನ ಕಾಲದಲ್ಲಿ ಭೇಟಿ ನೀಡಿದಾಗ ವರಹಗಳು (ಕರೆನ್ಸಿ) ಅದರಲ್ಲಿ ೧/೪ ವರಹವು ಚಿನ್ನದ್ದಾಗಿದ್ದು ೧೨.೨ ಗ್ರೆಯ್ನ್ ತೂಗುತ್ತಿತ್ತು. ದೇವರಾಯ ಗಜಬೇಟೆಗಾರನಾಗಿದ್ದ ಕಾರಣ ಅವನ ಕಾಲದ ನಾಣ್ಯಗಳ ಮೇಲೆ ಅನೆಯ ಚಿತ್ರಗಳು ಕಂಡುಬರುತ್ತವೆ. ‘ತಾರ’ ಎಂಬ ಬೆಳ್ಳಿಯ ನಾಣ್ಯದ ಒಂದು ಮುಖದಲ್ಲಿ ಬಳ್ಳಿಯ ಚಿತ್ರವಿದ್ದು ಇನ್ನೊಂದೆಡೆ ‘ಶ್ರೀ ದೇವರಾಯ; ಎಂಬ ದೇವನಾಗರಿ ಲಿಪಿ ಇದೆ. ಆ ಕಾಲದ ಅನೇಕ ತಾಮ್ರ ನಾಣ್ಯಗಳ ಮೇಲೆ ಆನೆ ಮತ್ತು ರಾಜನು ಆನೆ ಬೇಟೆ ಮಾಡುವ ಚಿತ್ರಗಳು ಕಂಡು ಬಂದು, ಶ್ರೀ ದೇವರಾಯ, ಗಜಬೇಟೆಗಾರ, ರಾಯರಾಹಗಂಡ, ಭೇರುಂಡ ಎಂಬ ಉಲ್ಲೇಖಗಳು ಕಂಡುಬರುತ್ತವೆ.

ಮಹಾನವಮಿ ದಿಬ್ಬ ಹಾಗೂ ವಿಜಯ ವಿಠಲ ಗುಡಿಯ ಸಭಾಮಂಟಪದ ಹಿಂಭಾಗದಲ್ಲಿ ಹುಲಿಯ ಬೇಟೆಯ ಉಬ್ಬು ಶಿಲ್ಪಗಳಿವೆ. ಇವು ಆ ಕಾಲದ ಹುಲಿಯ ಬೇಟೆಯ ಮೇಲೆ ಬೆಳಕು ಚೆಲ್ಲುತ್ತವೆ. ತುಂಗಭದ್ರೆ ನದಿಯ ವಿಶಾಲ ಬಯಲು ಪ್ರದೇಶದ ಹುಲ್ಲುಗಾವಲು ಪಶುಪಾಲಕರ ತಾಣವಾಗಿತ್ತು. ಅವರ ಸಾಕುಪ್ರಾಣಿಗಳನ್ನು ತಿನ್ನಲು ಹವಣಿಸುತ್ತಿದ್ದ ಹುಲಿ ಚಿರತೆಗಳನ್ನು ನಿಗ್ರಹಿಸಲು ಬೇಟೆಯಾಡುತ್ತಿದ್ದರು. ಈ ಪ್ರದೇಶದಲ್ಲಿ ನೆಲೆನಿಂತ ಕುರುಬರು, ಗೊಲ್ಲರು, ಮ್ಯಾಸಬೇಡರು ಇಂದಿಗೂ ಪಶುಪಾಲಕರಾಗಿರುವುದು ಮೇಲಿನ ಹೇಳಿಕೆಗೆ ಸಾಕ್ಷಿಯಾಗಿದೆ. ಇಷ್ಟೆ ಅಲ್ಲದೆ ಮಹಾನವಮಿ ದಿಬ್ಬದ ಎದುರಿಗೆ ಕಂಡುಬರುವ ಬುನಾದಿಯ ಚೌಕಟ್ಟಿನ ಕಟ್ಟಡ ಒಂದರ ಸುತ್ತ, ವಿಜಯ ವಿಠಲ ದೇವಾಲಯದ ಹೊರಭಾಗದಲ್ಲಿ, ಮಹಾನವಮಿದಿಬ್ಬದ ದಕ್ಷಿಣ ಭಾಗದ ಹೊರಗೋಡೆಯ ಮೇಲಿನ ಉಬ್ಬು ಚಿತ್ರಗಳು, ಬೆಟ್ಟ, ಗುಡ್ಡಗಳಲ್ಲಿರುವ ಗವಿಗಳ ಒಳಗಿನ ವರ್ಣಚಿತ್ರಗಳು ಆಗಿನ ಕಾಲದ ಜಿಂಕೆಯ ಬೇಟೆಯ ಬಗೆಗೆ ಬೆಳಕು ಚೆಲ್ಲುತ್ತವೆ. ವಿಶೇಷವೆಂದರೆ ವಿಜಯನಗರ ಅರಸರ ರಾಜ್ಯ ಲಾಂಛನವಾದ ಹಂದಿ (ವರಹ) ಯ ಬೇಟೆಯ ಬಗೆಗಿನ ಉಬ್ಬು ಶಿಲ್ಪಗಳು ಇಲ್ಲಿನ ಹಲವಾರು ದೇವಾಲಯಗಳಲ್ಲಿ ಕಂಡುಬರುತ್ತವೆ. ಹಂದಿಯನ್ನು ವಿಷ್ಣುವಿನ ಅವತಾರವೆಂದು, ತಮ್ಮ ಧನ (ಕರೆನ್ಸಿ) ಸಂಪತ್ತಿಗೂ ‘ವರಹ’ ಗಳೆಂದು ಕರೆಯುತ್ತಿದ್ದರು ಹಾಗೂ ಪೂಜಿಸುತ್ತಿದ್ದರು.