ಇಂದಿಗೂ ತುಳುನಾಡಿನಲ್ಲಿ ಹಂದಿ ಪಿಲಿಪಂಜಿ ದೈವವಾಗಿ ಪೂಜೆಗೊಳ್ಳುತ್ತಿದೆ. ಹಾಗೆಯೇ ಈ ಭಾಗವು ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ಹಂದಿಯನ್ನು ಬಲಿಯಾಗಿ ಅರ್ಪಿಸುವ ಪದ್ಧತಿಯು ರೂಢಿಯಲ್ಲಿದೆ. ಬಲಿಯ ಅರ್ಪಣೆಯ ರೀತಿಯು ಅಮಾನವೀಯವೂ, ಹಿಂಸಾತ್ಮಾಕವಾಗಿಯೂ ನಡೆಯುತ್ತದೆ. ಜೀವಂತ ಹಂದಿಯನ್ನು ಕಟ್ಟಿ ಅಂಗಾತ ಮಲಗಿಸಿ ಒನಕೆಯಿಂದ ಬಡಿಬಡಿದು ಬಲಿ ಅರ್ಪಿಸುತ್ತಾರೆ. ಇದೇ ರೀತಿಯ ಹಿಂಸಾತ್ಮಕವೂ ಅಮಾನವೀಯವೂ ಆದ ಪದ್ಧತಿಯೊಂದು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ರೂಢಿಯಲ್ಲಿದೆ. ಇಲ್ಲಿನ ಪದ್ಧತಿ ಎಂದರೆ ಜೀವಂತ ಹಂದಿ ತನಗೆ ತಾನೇ ಜನ ವಾಸಿಸುವ ಮನೆಯ ಒಳಗೆ ಬಂದರೆ ಅದನ್ನು ಮನೆಯ ಒಳಗಡೆ ಕಾಲುಮುರಿದು ಅಲ್ಲಿಯೇ ಕಂದಕ ಕಡಿಸು ಜೀವಂತ ಮಣ್ಣು ಮಾಡಲಾಗುತ್ತದೆ. ಇದು ಅವರ ಪಾಲಿಗೆ ಲಕ್ಷ್ಮಿಯಾಗಿ ಪೂಜೆಗೊಳ್ಳುತ್ತದೆ. ನಾಯಕ ಜನವರ್ಗದಲ್ಲಿ ಹೆಚ್ಚಾಗಿ ಈ ಪದ್ಧತಿ ರೂಢಿಯಲ್ಲಿದೆ. ಈ ಭಾಗದ ನಾಯಕ ಜನವರ್ಗ ಹಂದಿ ಹಾಗೂ ಕೋಳಿಯನ್ನು ತಿನ್ನುವುದಿಲ್ಲ. ಆದರೆ ಅವುಗಳನ್ನು ಬೇಟೆಯಾಡುತ್ತಾರೆ. ಹಿಂದೆ ವಿಜಯನಗರ ಅರಸರ ಕಾಲದಲ್ಲಿ ಸೈನ್ಯದಲ್ಲಿದ್ದರೆನ್ನಲಾದ ಈ ಜನವರ್ಗ ರಾಜರಂತೆ ಹಂದಿಯನ್ನು ಪೂಜಿಸುತ್ತಿದ್ದಿರಬೇಕು. ತಮ್ಮ ಭಾಗದ ದೈವವಾಗಿದ್ದ ವರಹವನ್ನು ಭಕ್ತಿ ಗೌರವಗಳೊಂದಿಗೆ ಇಂದಿಗೂ ಪೂಜಿಸುತ್ತಾರೆ.

ಒಂದು ಸಾಮ್ರಾಜ್ಯದಲ್ಲಿ ಹಲವು ಜನವರ್ಗಗಳು ಇರುವುದು ಸಹಜ. ಹಲವು ಜನವರ್ಗಗಳಿರುವ ಕಡೆ ಹಲವಾರು ಸಂಪ್ರದಾಯ ಆಚರಣೆಗಳಿರುವುದು ಸಾಮಾನ್ಯ. ಹೀಗಾಗಿ ಇಲ್ಲಿಯ ದೇವಾಲಯ ಹಾಗೂ ಗವಿಗಳಲ್ಲಿ ಹಂದಿ ಇತರ ಪ್ರಾಣಿಗಳನ್ನು ಪೂಜಿಸುವ ಹಾಗೂ ಬೇಟೆಯಾಡುವ ಚಿತ್ರಗಳಿವೆ. ಇಲ್ಲಿನ ಚಿತ್ರಗಳಲ್ಲಿ ಬೇಟೆಗೆ ಹೋಗುವ ಬೇಟೆಯಾಡುವ, ಬೇಟೆಯನ್ನು ಹೊತ್ತು ಸಾಗಿಸುವ, ಬೇಟೆಯನ್ನು ಸುಟ್ಟು ತಿನ್ನುವ ಉಬ್ಬು ಚಿತ್ರಗಳನ್ನು ಹೇರಳವಾಗಿ ಕಾಣಬಹುದು. ಬೇಟೆ ಜನಸಾಮಾನ್ಯರಿಗೆ ಆಹಾರೋತ್ಪಾದನೆ ಅಂಗವಾದರೆ, ಉಳ್ಳವರಿಗೆ ಅದು ಮನೋರಂಜನೆಯ ಸಾಧನವಾಗಿತ್ತು.

ಬೇಟೆಯಲ್ಲಿ ಜನ ಪಾಲ್ಗೊಳ್ಳುವಿಕೆಯನ್ನು ಗಮನಿಸಿದರೆ ಕೆಲವು ಸಮುದಾಯಕ್ಕೆ ಬೇಟೆ ಕೇವಲ ಆಚರಣೆಯಾಗಿರುವುದು ಕಂಡುಬರುತ್ತದೆ. ಬೇಟೆಯಲ್ಲಿ ದೊರೆತ ಪ್ರಾಣಿಗಳನ್ನು ಅವರು ಆಹಾರವಾಗಿ ಉಪಯೋಗಿಸುವುದಿಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ ಕಂಡುಬರುವ ನಾಯಕ ಜನವರ್ಗದವರ ಆಚರಣೆಗಳನ್ನು ಉದಾಹರಿಸಬಹುದು. ದಕ್ಷಿಣ ಕರ್ನಾಟಕದ ಕೆಲವು ಭಾಗಗಳ ಜನ ವರ್ಗಗಳು ಧನುರ್ಮಾಸದಲ್ಲಿ ಮಾಡುವ ಬೇಟೆಯನ್ನು ಉದಾಹರಿಸಬಹುದು. ಇನ್ನು ಬೇಟೆಯನ್ನು ಕೇವಲ ಆಚರಣೆಗಾಗಿಯೇ ಪ್ರಾಣಿಗಳ ಬೊಂಬೆ ಮಾಡಿ ಬೇಟೆಯ ಅಣಕವನ್ನು ಮಾಡುವ ಜನವರ್ಗಗಳು ಇವೆ. ಹಾಗೆಯೇ ಆಹಾರ ಮತ್ತು ಆರಾಧನೆಗಾಗಿಯೇ ಬೇಟೆಯಾಡುವ ಜನವರ್ಗಗಳು ಇವೆ. ಈ ಎಲ್ಲಾ ಬೇಟೆಯ ಆಚರಣೆಗಳು ಮಾನವ ಹಾಗೂ ಬೇಟೆಯ ಬಗೆಗಿನ ಬಹು ಸೂಕ್ಷ್ಮ ಸಂಬಂಧದ ಬಗೆಗೆ ಬೆಳಕು ಚೆಲ್ಲುತ್ತವೆ. ಮಾನವನು ಬೌದ್ಧಿಕ ಹಾಗೂ ದೈಹಿಕ ಬೆಳವಣಿಯಿಂದಾಗಿ ಪ್ರಾಣಿಯಿಂದ ಮಾನವ ಭಿನ್ನವಾದ. ಅಂದಿನಿಂದ ಬೇಟೆಯ ವಿವಿಧ ಮಗ್ಗಲುಗಳು, ತಂತ್ರೋಪಾಯಗಳು ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದವು. ಅವು ಆಚರಣೆಯಲ್ಲಿ ಉಳಿದು ಬಿಟ್ಟವು.

ಬೇಟೆಯಲ್ಲಿ ಹಲವು ಬಗೆಯ ವಿಧಾನಗಳಿವೆ. ಹಾಗೆಯೇ ಹಲವಾರು ಜನ, ಪ್ರಾಣಿ, ಪರಿಕರಗಳನ್ನು ಉಪಯೋಗಿಸಿ ಮಾಡುವ ದೊಡ್ಡ ತಂಡಗಳಿಂದ ಹಿಡಿದು ಒಬ್ಬರೇ ಬೇಟೆಯಾಡುವ ವಿಧಾನಗಳು ಚಾಲಿಗೆ ಬಂದವು. ಬೇಟೆಯನ್ನು ಅಧ್ಯಯನ ದೃಷ್ಟಿಯಿಂದ ಅದು ಒಳಗೊಳ್ಳುವ ವಿವರವನ್ನು ಕೆಳಗಿನ ವಿಭಾಗ ಕ್ರಮದಲ್ಲಿ ವಿಭಾಗಿಸಿ ಅರ್ಥೈಸಿಕೊಳ್ಳಬಹುದು.

01_134_SP-KUH

ಒಂದು ದೊಡ್ಡ ಬೇಟೆಯ ಪರಿಪೂರ್ಣ ತಂಡವಾಗಬೇಕಾದರೆ ಮೇಲಿನ ಎಲ್ಲಾ ಪರಿಕರ, ಬೇಟೆಗಾರ, ಪ್ರಾಣಿ ಮತ್ತು ಇತ್ಯಾದಿ ಇರಲೇಬೇಕಾಗುತ್ತದೆ. ಒಂದು ಇನ್ನೊಂದಕ್ಕೆ ಪೂರಕವಾಗಿ ಸಂಬಂಧ ಹೊಂದಿಕೊಂಡಿರುತ್ತದೆ. ಬೇಟೆಯಲ್ಲಿ ಪ್ರಾದಿಕಾಲದ ಉಪಕರಣಗಳಿಂದ ಹಿಡಿದು ಇಂದಿನ ಯುಗದ ಗನ್‍ಗಳು ಬಳಕೆಯಲ್ಲಿವೆ. ಪ್ರದೇಶ, ಜನರ ಸ್ಥಾನಮಾನ, ಆರ್ಥಿಕ ನೆಲೆಯಲ್ಲಿ ಬೇಟೆಗಾರರು ಉಪಕರಣಗಳನ್ನು ಹೊಂದಿರುತ್ತಾರೆ. ಉಪಕರಣ ಹೊಂದಿದವರೆಲ್ಲ ಬೇಟೆಯಲ್ಲಿ ಪ್ರಾಜ್ಞರಾಗಿರುವುದಿಲ್ಲ. ಅದಕ್ಕೆ ಪರಂಪರೆಯಿಂದ ಬಂದ ಬಳುವಳಿಯೂ ಕಾರಣವಾಗಿರುತ್ತದೆ ಪರಿಕರಗಳನ್ನು ಹಿಡಿಯುವವನು ಬಿಲ್ಲುಗಾರರಾಗಿಯೂ, ಪ್ರಾಣಿಗಳನ್ನು ಬಿಲ್ಲುಗಾರರ ಬಳಿಗೆ ಓಡಿಸುವವರನ್ನೂ ಸೋವುಗಾರರೆಂದು, ತಮಟೆ, ಡೋಲು ಹಿಡಿದಿದ್ದವರನ್ನು ಓಲಗದವರೆಂದು ಕರೆಯಲಾಗುತ್ತದೆ. ಇವರೆಲ್ಲ ಬೇಟೆಯಲ್ಲಿ ಮಹತ್ವದ ಕೆಲಸ ಮಾಡುತ್ತಾರೆ.

ಬೇಟೆಯಲ್ಲಿ ನಾಯಿಗಳ ಪಾತ್ರ ಪ್ರಮುಖವಾದದು. ಬೇಟೆ ನಾಯಿಗಳೆಂದೇ ಕರೆಯಿಸಿಕೊಳ್ಳುವ ನಾಯಿಗಳು ಬೇಟೆಯಲ್ಲಿ ಪ್ರಾಣಿಗಳನ್ನು ಪತ್ತೆಹಚ್ಚಲು ಪ್ರಮುಖ ಪಾತ್ರವಹಿಸುತ್ತವೆ. ಆದರೆ ಎಲ್ಲಾ ನಾಯಿಗಳು ಬೇಟೆಗೆ ಬರುವುದಿಲ್ಲ. ತೆಳು ಸೊರಬ, ಅಗಲವಾದ ಎದೆ, ನೆಟ್ಟಗೆ ನಿಂತಿರುವ ಕಿವಿ, ಬಾಗಿದ ಹುಬ್ಬು, ದಪ್ಪಕಾಲು, ನೆಲವನ್ನು ಮುಟ್ಟಿದ ಉಗುರುಗಳಿರಬೇಕು. ಇಂಥ ನಾಯಿಗಳು ಕುದುರೆಯಂತೆ ವೇಗವಾಗಿ ಓಡಿ, ಅಡ್ಡಲಾಗಿ ಹರಿದು ಸೇವಕನಂತೆ ಆಲಸ್ಯ ಮಾಡದೆ, ಯೋಗ್ಯನಂತೆ ನಂಬಿಸಿ, ಉರಿಯು ಹರಡುವಂತೆ ಹರಡಿಕೊಳ್ಳುವವು. ಈ ನಾಯಿಗಳು ಮೃಗದ ಹೆಜ್ಜೆಯ ಗುರುತನ್ನು ಅರಿತು ಆ ದಾರಿಯಲ್ಲಿ ನುಸುಳಿ ಬೇಟೆಯಾಡುತ್ತವೆ. ಬೇಟೆಗಾರರು ಈ ಲಕ್ಷಣಗಳನ್ನುಳ್ಳ ನಾಯಿಗಳನ್ನು ಮಾತ್ರ ಬೇಟೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಮೇಲಿನ ಲಕ್ಷಣ ಹೊಂದಿದ ನಾಯಿಗಳು ತಮ್ಮ ಯಜಮಾನನಿಗೆ ತೊಂದರೆ ಉಂಟಾದರೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ರಕ್ಷಣೆಗೆ ನಿಲ್ಲುತ್ತವೆ. ಇದಕ್ಕೆ ಜನಪದರು “ನಾಯಿನಿಷ್ಠೆ” ಎಂದು ಕರೆದರು. ಹಿಂದೆ ಅರಸರು ಬೇಟೆಗೆ ಹೋಗುವಾಗ ಬೇಟೆನಾಯಿಗಳ ಪಡೆಯೇ ಅವರೊಂದಿಗೆ ಸುತ್ತುವರಿದಿರುತ್ತವೆಂಬುದನ್ನು ಪಂಪ “ಬಿಲ್ಲುಂ ಕುದುರೆಯಂ ಕಾಲಾಳುಂ ನಾಯ್ಗಳುಮಂ” ಎಂದು ಹೇಳಿದ್ದಾನೆ. ಕವಿ ಲಕ್ಷ್ಮೀಶನು ತನ್ನ ‘ಜೈಮಿನಿ  ಭಾರತ’ ದಲ್ಲಿ ಎಲ್ಲಾ ರೀತಿಯ ಖಗಮೃಗಗಳನ್ನು ಬೇಟೆಯಾಡುವ ನಾಯಿಗಳು ಹೇಗಿರುತ್ತವೆಂಬುದನ್ನು ಈ ರೀತಿ ವಿವರಿಸುತ್ತಾನೆ.

            ಉಬ್ಬಿದುರುದೇರದೆಗೆದೊಡಲ ಬಾಗಿದ ಬೆನ್ನ
ಪಬ್ಬುಗೆಯ ಪಚ್ಚಳದ ಸೆಡೆದ ಬಾಲದ ಕೊನೆಯ
ಕೊಬ್ಬಿದ ಕೊರಳ ಸಣ್ಣ ಜಂಘಗಳ ಕೊಂಕುಗುರ ಮಡಗಿವಿಯ ಕಿಡಿಗಂಗಳ
ಹೆಬ್ಬಲ್ಲ ಬಿಡುವಾಯ ದೇಲ್ವ ಕೆನ್ನಾಲಗೆಯ
ಗಬ್ಬಿ ನಾಯ್ಗಳ ಹಾಸನುಗಿದು ಬಿಡೆಪಂದಿಗಳ
ನಬ್ಬರಿಸಿ ತುಡುಕಿದವು ಕೇಸರಿಯ ಮೇಲ್ವಾಯ್ದಡರ್ದು ಪುಲಿಯಂ ಕೊಂದವು.

ಬೇಟೆಗಾರರು ಸಾಮಾನ್ಯವಾಗಿ ನಾಯಿಗಳನ್ನು ಬೇಟೆಯಲ್ಲಿ ಬಳಸುತ್ತಾರೆ. ಕೆಲವು ಗುಡ್ಡಗಾಡು ಪ್ರದೇಶದ ಜನರು ಬೇಟೆಯಲ್ಲಿ ಎತ್ತು, ಎಮ್ಮೆ, ದನ, ಬೆಕ್ಕು, ಕುರಿ, ಗಿಡುಗ ಮತ್ತು ಗೌಜುಗಗಳನ್ನು ಇಂದಿಗೂ ಬೇಟೆಯಲ್ಲಿ ಬಳಸುತ್ತಾರೆ. ಸಾಕಿದ ಎತ್ತು, ಎಮ್ಮೆ ದನಗಳಿಂದ ಹಕ್ಕಿಗಳನ್ನು ಹಿಡಿಯಲು ಬಳಸುತ್ತಾರೆ. ಮುಸುಕು ಧರಿಸಿದ ಬೇಟೆಗಾರರು ಎತ್ತುಗಳ ಅಥವಾ ಇತರ ಯಾವುದೇ ಸಾಕು ಪ್ರಾಣಿಯ ಮರೆಯಲ್ಲಿ ಇದ್ದು, ಪಕ್ಷಿಗಳು ಹತ್ತಿರ ಬಂದಾಗ ಹಿಡಿದುಕೊಳ್ಳುತ್ತಾರೆ. ಹುಲಿ ಬೇಟೆಯ ವೇಳೆ ಕಾಡಿನಲ್ಲಿ ಎತ್ತುಗಳನ್ನೂ, ಎಮ್ಮೆಗಳನ್ನೂ ಕಟ್ಟಿ ಹುಲಿ ಬಂದ ತಕ್ಷಣ ಮರೆಯಲ್ಲಿದ್ದ ಬೇಟೆಗಾರ ಹುಲಿಯನ್ನು ಬೇಟೆಯಾಡುತ್ತಾನೆ. ಕೆಲವು ಸಾರಿ ಈ ಪ್ರಾಣಿಗಳನ್ನು ‘ದೀಹ’ ವಾಗಿಯೂ ಉಪಯೋಗಿಸುತ್ತಾರೆ. ಬೇಟೆಯ ಆಮಿಷಕ್ಕಾಗಿ ಕಟ್ಟಿದ ಪ್ರಾಣಿಗೆ ‘ದೀಹ’ ಎಂದು ಕರೆಯುತ್ತಾರೆ. “ದೊಡ್ಡ ಬೋನಿನ ಬಾಗಿಲನ್ನು ಸೂತ್ರದ ತಂತಿಯ ಸಹಾಯದಿಂದ ತೆರೆದಿಡಲಾಗುವುದು. ಮೊದಲೇ ಬೋನಿನಲ್ಲಿ ದೀಹದ ಪ್ರಾಣಿಯನ್ನು ಕಟ್ಟಲಾಗುವುದು. ಒಂಟಿಯಾದ ದೀಹವು ಒಂದೇ ಸಮನೆ ಅರಚುತ್ತದೆ. ಈ ಅರಚುಬವಿಕೆಯನ್ನು ಕೇಳಿದ ಹುಲಿಯು ಬೋನಿನೊಳಗೆ ಪ್ರವೇಶ ಮಾಡಿ ಅದನ್ನು ಹಿಡಿಯಲು ಪ್ರಯತ್ನಿಸುತ್ತದೆ. ಹೀಗೆ ಪ್ರಯತ್ನಿಸುವಾಗ ಅದರ ಮೈ ಸೂತ್ರದ ತಂತಿಗೆ ಬೋನಿನ ಬಾಗಿಲು ಮುಚ್ಚಿಕೊಳ್ಳುತ್ತದೆ” (ಸ.ಚಿ. ರಮೇಶ್ -೨೦೦೧ – ೮೨). ಹುಲಿ ಬೋನಿನೊಳಗೆ ಬಂದಿಯಾಗುತ್ತದೆ.

ಬೇಟೆಯಲ್ಲಿ ಬಳಕೆಯಾಗುವ ಬೆಕ್ಕು ವಿಶೇಷವಾಗಿ ದುಂಡಾದ ಮುಖವಿದ್ದು, ಉದ್ದನೆಯ ಬಳಕುವ ಶರೀರವನ್ನು ಹೊಂದಿರುತ್ತದೆ. ಬೇಟೆಗಾರ ಈ ರೀತಿಯ ಬೆಕ್ಕುಗಳನ್ನು ಹಿಡಿದು ಅವುಗಳಿಗೆ ಬೇಟೆಯ ತರಬೇತಿ ನೀಡುತ್ತಾನೆ. ಇಬುಗಳ ಸಹಾಯದಿಂದ ಮೊಲ ಮತ್ತು ಅವುಗಳಿಗೆ ಬೇಟೆಯಾಡುತ್ತಾನೆ. ಬೆಕ್ಕುಗಳು, ಪ್ರಾಣಿಗಳ ಬಿಲಗಳನ್ನು ಬಹು ಸುಲಭವಾಗಿ ನುಸುಳಿ ಅಲ್ಲಿರುವ ಸಣ್ಣಪುಟ್ಟ ಪ್ರಾಣಿಗಳನ್ನು ಹಿಡಿದು ತನ್ನ ಯಜಮಾನನಿಗೆ ಒಪ್ಪಿಸುತ್ತವೆ. ಒಮ್ಮೆ ಬೇಟೆಯನ್ನು ಬಾಯಿಯಿಂದ ಹಿಡಿದರೆ ಬೇಟೆಯ ಪ್ರಾಣಿ ಸಾಯುವವರೆಗೆ ಬಿಡುವುದಿಲ್ಲವೆಂದು ಬೇಟೆಗಾರರು ಹೇಳುತ್ತಾರೆ. ಬೇಟೆಯಲ್ಲಿ ಪ್ರಾಣಿಗಳ ಪಾತ್ರದಂತೆ ಪಕ್ಷಿಗಳ ಪಾತ್ರವೂ ಇದೆ. ಗಿಡುಗಗಳನ್ನು ಬಳಸುವ ಪರಿಣತ ಬೇಟೆಗಾರನು ಗಿಡುಗಗಳನ್ನು ಹಿಡಿದು ಅವುಗಳಿಗೆ ಬೇಟೆಯ ತರಬೇತಿ ನೀದುತ್ತಾನೆ. ಈ ಬೇಟೆಯ ಪಕ್ಷಿಗಳನ್ನು ‘ಸಾಳ್ವ’ ಎಂಥಲೂ ಕರೆಯುತ್ತಾರೆ. ಬೇಟೆ ಗಿಡುಗ ಸದಾಕಾಲ ಬೇಟೆಗಾರನ ಹೆಗಲ ಮೇಲೆ ಕುಳಿತಿರುತ್ತದೆ. ಬೇಟೆಗಾರ ಸೂಚನೆ ನೀಡಿದಾಗ ಅಲ್ಲಿಂದ ಹಾರಿಹೋಗಿ, ಬೇಟೆಯ ಪ್ರಾಣಿ, ಪಕ್ಷಿಗಳನ್ನು ಉರುಳಿಸಿ, ನಂತರ ತನ್ನ ಬೇಟೆಗಾರ ಯಜಮಾನನಿಗೆ ಒಪ್ಪಿಸುತ್ತದೆ.

ಬೇಟೆಯಲ್ಲಿ ಗೌಜುಗಪಕ್ಷಿ ವಿಶೇಷವಾಗಿ ಬೇಟೆಗಾರನಿಗೆ ತನ್ನ ಪರಿವಾರವನ್ನು ಹಿಡಿದುಕೊಡಲು ನೆರವಾಗುತ್ತದೆ. ಒಂದು ರೀತಿಯಲ್ಲಿ “ಮರಕ್ಕೆ ಮರ ಮೂಲ” “ಮುಳ್ಳನ್ನು ಮುಳ್ಳಿನಿಂದ ತೆಗೆ” ಎನ್ನುವ ಜನಪದರ ಮಾತುಗಳಂತೆ ಗೌಜುಗಗಳನ್ನು ಗೌಜುಗಗಳಿಂದಲೇ ಹಿಡಿಯುವ ವಿಧಾನ. ಒಂದು ರೀತಿಯಲ್ಲಿ ಊರು ಕೋಳಿಯನ್ನು ಹೋಲುವ ಇವು ಗುಂಡಾಗಿದ್ದು, ಮೊಂಡು ಬಾಲವನ್ನು ಹೊಂದಿರುತ್ತವೆ. ತಿಳಿ ಹಳದಿ ಹಾಗೂ ಕೆಂಪು ಬಣ್ಣವನ್ನು ಹೊಂದಿದ ಇದಕ್ಕೆ ಮೇಲೆಲ್ಲ ಕರಿಯ ಗೆರೆಗಳಿವೆ. ಗಾತ್ರದಲ್ಲಿ ಕೋಳಿಗಿಂತ ಚಿಕ್ಕದು. ಇದರ ಮಾಂಸ ಬಲು ರುಚಿ ಎಂದು ಹೇಳುತ್ತಾರೆ. ಈ ಪುಟ್ಟ ಪಕ್ಷಿಯ ಮಾಂಸಕ್ಕೆ ಬಹಳ ಬೇಡಿಕೆ ಇದೆ. ಹಾಗಾಗಿ ಇವು ಮಾರುಕಟ್ಟೆಯಲ್ಲಿ ಅಪಾರ ಸಂಖ್ಯೆಯಲ್ಲಿ ಕೊಂಡುಕೊಳ್ಳಲು ಸಿಕ್ಕುತ್ತವೆ. ಬೇಟೆಗೆ ಪಳಗಿಸಿದ ಗೌಜುಗ ಪಕ್ಷಿಯನ್ನು ಪಂಜರದಲ್ಲಿ ಬಂಧಿಸಿ, ಪಂಜರವು ಕಾಡಿನ ಗೌಜುಗಗಳಿಗೆ ಕಾಣದಂತೆ ಅದಕ್ಕೆ ಬಟ್ಟೆಯ ಮೇಲುಹೊದಿಕೆಯನ್ನು ಹಾಕಲಾಗುತ್ತದೆ. ಅದರ ಸುತ್ತ ಬಲೆಯ ವ್ಯೂಹವನ್ನು ರಚಿಸಲಾಗುತ್ತದೆ. ಬೇಟೆಗಾರ ತುಸುದೂರದ ಪೊದೆಯನ್ನು ಮರೆಯಾಗಿ, ಗೌಜುಗದಂತೆ ಸೀಳು ಹಾಕುತ್ತಾನೆ. ಬೇಟೆಗಾರನ ಸೀಳು ಧ್ವನಿಯನ್ನು ಪಂಜರದ ಗೌಜುಗ ಕೇಳಿಸಿಕೊಂಡು ಪ್ರತಿಯಾಗಿ ಹತ್ತಾರು ಸಾರಿ ಅನುಕರಿಸುತ್ತದೆ. ಈ ಗೌಜುಗದ ನಿಜಧ್ವನಿಯನ್ನು ಆಲಿಸಿದ ಕಾಡಿನ ಗೌಜುಗಗಳ ಹಿಂಡು ಧ್ವನಿಯತ್ತ ರಭಸದಿಂದ ನುಗ್ಗುತ್ತವೆ. ಆ ಧ್ವನಿ ಆಕ್ರಮಣಕಾರಿಯಾಗಿದ್ದರಿಂದ ಅದನ್ನು ಉಂಟುಮಾಡಿದ ಗೌಜುಗ ಪಕ್ಷಿಯ ಮೇಲೆ ಆಕ್ರಮಣ ಮಾಡಲು ಹಿಂದು ಮುಂದು ನೋಡದೆ, ಮೋಸ ಅರಿಯದೆ, ಕಡ್ಡಿಬಲೆಯಲ್ಲಿ ಬಂಧಿಯಾಗುತ್ತವೆ. ನುರಿತ ಬೇಟೆಗಾರ ಅರ್ಧ ದಿನದಲ್ಲಿ ನೂರಾರು ಗೌಜುಗಳನ್ನು ಹಿಡಿಯುತ್ತಾನೆ. ಹೀಗೆ ಗೌಜುಗಗಳನ್ನು ಶ್ರಮವಿಲ್ಲದೆ ಹಿಡಿಯುತ್ತಾ ಹೋದರೆ ಮುಂದೆ ಅವುಗಳನ್ನು ಚಿತ್ರಪಟದಲ್ಲಿ ನೋಡಬೇಕಾಗುತ್ತದೆ.

ಬೇಟೆಯಲ್ಲಿ ಜನ, ಪ್ರಾಣಿ ಹಾಗೂ ಪಕ್ಷಿಗಳ ಪಾತ್ರದಂತೆ ಪರಿಕರಗಳು ಮುಖ್ಯವೆನಿಸುತ್ತವೆ. ಮರದಿಂದ ಮಾಡಿದ ಪರಿಕರಗಳಾದ ದಡಿಗೆ, ಕಡ್ಡಿಬಲೆ, ಹಲಗೆ, ಲೋಹದಿಂದ ಮಾಡಿದ ಖಡ್ಗ, ಈಟಿ, ಕತ್ತರಿ, ತಂತಿ ಬಲೆ, ಹಾಗೆ ಲೋಹ ಮತ್ತು ಮರದಿಂದ ತಯಾರಿಸಿದ ಬೋನು, ಬಿಲ್ಲು, ಕತ್ತಿ, ಭರ್ಚಿ ಮತ್ತು ಕೋವಿ, ನಾರು ಮಾತು ದಾರದಿಂದ ತಯಾರಿಸಿದ ಹಗ್ಗ, ಬಲೆ, ಉರುಳುಗಳು, ಮೇಣ ಬಳಕೆ ಹಾಗೂ ಬೆಂಕಿಯ ಬಳಕೆಗಳು ಬೇಟೆಯನ್ನು ಸರಳಗೊಳಿಸಿ, ಬೇಟೆಗಾರನ ದೈವಗಳಾಗಿ ಪೂಜ್ಯನೀಯವಾಗಿವೆ. ಅಮವಾಸ್ಯೆ ಹುಣ್ಣಿಮೆ ಹಾಗೂ ಹಬ್ಬಗಳಲ್ಲಿ ಈ ಆಯುಧಗಳಿಗೆ ಬಲಿ ಅರ್ಪಿಸಿ, ಎಡೆಸಲ್ಲಿಸುವ ಆಚರಣೆ ಬೇಟೆಗಾರ ಸಂಸ್ಕೃತಿಯಲ್ಲಿದೆ.

ಆಯುಧಗಳು ಇಟ್ಟ ಗುರಿ ತಪ್ಪಬಾರದೆಂದು ಮಾಂತ್ರಿಕನಿಂದ ಆಯುಧ ಗಳಿಗೆ ಮುಷ್ಠ ಮಾಡಿಸಿಕೊಳ್ಳುವ ಪದ್ಧತಿ ಕಂಡುಬರುತ್ತದೆ. ಕೆಲವು ಸಾರಿ ಬೇಟೆಗಾರರೇ ಮಂತ್ರವನ್ನು ಮಾಡಿಕೊಳ್ಳುವುದು ಉಂಟು. “ಪ್ರಾಣಿಗಳನ್ನು ಮಾಟ – ಮಂತ್ರ – ತಂತ್ರಗಳಿಂದ ವಶಪಡಿಸಿಕೊಂಡು ಮಾಡುವ ಬೇಟೆ, ಪ್ರಾಣಿಗಳ ಮೂಳೆಗಳನ್ನು ಮನೆಯಲ್ಲಿ ನೇತು ಹಾಕುವುದು, ಮಿಡತೆಗಳನ್ನು ಕೂಡಿ ಹಾಕುವುದು, ಮೂಳೆಗಳನ್ನು ಸುಡುವುದರಿಂದ, ಪ್ರಾಣಿಗಳು ನಡೆದ ಹೆಜ್ಜೆಯ ಅಡಿಯ ಮಣ್ಣನ್ನು ಗಾಳಿಗೆ ತೂರುವುದರಿಂದ ಇನ್ನೂ ಮುಂತಾದ ತಂತ್ರಗಳಿಂದ ಪ್ರಾಣಿಗಳನ್ನು ವಶಪಡಿಸಿಕೊಳ್ಳುವಿಕೆ” (ಸ.ಚಿ. ರಮೇಶ್ -೨೦೦೧-೧೨೦). ಹಸು, ಎಮ್ಮೆ, ಎತ್ತು ಇತ್ಯಾದಿ ಸಾಕು ಪ್ರಾಣಿಗಳನ್ನು ಬೇಟೆಯ ಆಯುಧದಿಂದ ಅಥವಾ ಗುಂಡಿನಿಂದ ಹೊಡೆದ ಆ ಆಯುಧಕ್ಕೆ ‘ಭಾಂಗು’ ಬರುತ್ತದೆ. ಅಂದರೆ ಬೇಟೆಯಲ್ಲಿ ಆ ಆಯುಧ ಹಿಡಿದ ವ್ಯಕ್ತಿಯ ಬಳಿ ಯಾವ ಪ್ರಾಣಿಯೂ ಸುಳಿಯುದಿಲ್ಲ. ಒಂದು ವೇಳೆ ಬಂದರೂ ಗುರಿ ಬೀಳುವುದಿಲ್ಲ. ಕೊಡಗಿನ ಭಾಗದಲ್ಲಿ ಗುಬ್ಬಿ, ಹದ್ದು, ಅಳಿಲು, ದನಕರುಗಳು, ಕಾಡು ಕೋಳಿ, ಇಲಿ, ಹಾವು, ನವಿಲು ಇವುಗಳನ್ನು ಗುಂಡಿಟ್ಟು ಕೊಲ್ಲುವುದಿಲ್ಲ. ಹಾಗೆಯೇ ತೆಂಗಿನ ಮರ ಹಾಗೂ ಅರಳೀಮರದ ಮೇಲಿರುವ ಯಾವುದೇ ಪ್ರಾಣಿ ಪಕ್ಷಿಗಳನ್ನು ಕೊಲ್ಲುವ ಹಾಗಿಲ್ಲ. ತೆಂಗು “ಕಲ್ಪವೃಕ್ಷ” ಅರಳೀ ದೈವವೃಕ್ಷ ಎಂಬುದು ಅವರ ನಂಬಿಕೆ. ಅಲ್ಲಿಯ ಬೇಟೆಯ ದೈವ ಬೋತೆಕಾರ ಅಯ್ಯಪ್ಪನಾಗಿದ್ದಾನೆ. ಅದು ಅಲ್ಲಿನ ಮನೆ ದೇವತೆಯು ಹೌದು. ಅದನ್ನು “ಸಾರ್ಥವು” ಎಂದು ಕರೆಯುತ್ತಾರೆ. ಈ ಬೇಟೆ ದೇವತೆ ಬೇಟೆಯನ್ನು ಒದಗಿಸುವುದಲ್ಲದೇ ಆಯುಧಗಳ ಗುರಿಯನ್ನು ನಿಯಂತ್ರಿಸುತ್ತದೆ ಎಂದು ನಂಬುತ್ತಾರೆ. “ಆಗಾಗ, ಹೊಡೆದ ಗುಂಡು ಗುರಿ ತಪ್ಪುತ್ತಿದ್ದರೆ ಮಂತ್ರಿಸಿದ ಕೋಳಿ ಮೊಟ್ಟೆಗೆ ಗುಂದು ಹೊಡೆದು ಕೋವಿಯ ‘ದೃಷ್ಟಿ ತೆಗೆಯುವುದು’ ಜನರಲ್ಲಿರುವ ಒಂದು ನಂಬಿಕೆ. ಇದಕ್ಕೆ ‘ಮುಟ್ಟಿ’ ಮಾಡುವುದು ಎನ್ನುತ್ತಾರೆ” (ಐನಂಡ ಎಂ. ಧನು ೨೦೦೦-೪೪). ಮಲೆನಾಡಿನ ಭಾಗಗಳಲ್ಲೂ ಇದು ಕಂಡುಬರುತ್ತದೆ. “ಸಕಲೇಶಪುರ ಭಾಗದಲ್ಲಿ ಅರಣ್ಯ ಪ್ರವೇಶಿಸುವ ಮೊದಲು ಪಂಜರವಳ್ಳಿ ದೈವಗಳನ್ನು ಸ್ಮರಿಸಿಕೊಂಡು ಬೇಟೆಗೆ ಕೊಂಡೊಯ್ಯುಲಿರುವ ಸಾಧನಗಳನ್ನೆಲ್ಲ ಒಂದೆಡೆ ಇಟ್ಟು ಪೂಜಿಸಿ ಒಳ್ಳೆಯ ಬೇಟೆ ಸಿಕ್ಕಲಿ ಎಂದು ಪಾರ್ಥಿಸಿ ಕೊಳ್ಳುವರು. ಯಾವುದೇ ಅಡ್ಡಿ ಆತಂಕಗಳು ಒದಗದಿರಲೆಂದು ಮಂತ್ರವಾದಿಗಳಿಂದ “ತಡೆ ಒಡೆಸುವರು”, ಅನಂತರ ಕಾಡಿನ ದೇವತೆಯಾದ ಕಾಡ್ಲ ಒಡೆಯ ಮತ್ತು ಚೌಡಿಯನ್ನು ಹಣ್ಣು ಕಾಯಿ ಇಟ್ಟು ಪೂಜಿಸುವರು. ವರ್ಷಕೊಮ್ಮೆ ‘ಬೇಟೆ ಮಂಜ’ ಎಂಬ ಬೇಟೆ ದೇವತೆಯನ್ನು ಪ್ರಾರ್ಥಿಸಿಕೊಳ್ಳುವರು” (ಯು.ಎಸ್. ರಾಮಣ್ಣ, ೨೦೦೦-೨೮).ಪ್ರಾದೇಶಿಕವಾಗಿ ಭಿನ್ನ ಜನವರ್ಗದ ಬೇಟೆಗಾರ ಸಂಸ್ಕೃತಿಯಲ್ಲಿ ವಿಭಿನ್ನ ಆಯುಧಗಳು ಬಳಕೆಯಾಗುತ್ತವೆ. ಉದಾ: ಬಿಲ್ಲು, ಬಾಣ, ಭರ್ಜಿ, ಕತ್ತಿ, ಕೊಡಲಿ, ಗಂಡುಕೊಡಲಿ, ಚಿಪ್ಪುಗೊಡಲಿ, ಕುಡುಗೋಲು, ಈಟಿ, ಕೋವಿ, ಮಚ್ಚು, ಕೇವಿನಕೋವಿ, ತೋಟ ಕೋವಿ, ದಂಡ, ಕಲ್ಲು ಹಾರೆ, ಖಡ್ಗ, ಕಠಾರಿ ಇತ್ಯಾದಿ. ಹೀಗೆ ಹತ್ತಾರ ಆಯುಧಗಳು ಆಯಾಯಾ ಬೇಟೆಗಾರ ಸಂಸ್ಕೃತಿ ನೆಲೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತವೆ. ಬೇಟೆಯಲ್ಲಿ ಬಳಕೆಯಾಗುವ ಹೆಚ್ಚಿನ ಆಯುಧಗಳು ನಿತ್ಯ ಕೆಲಸ ಕಾರ್ಯಗಳಲ್ಲಿಯೂ ಬಳಕೆಯಾಗುತ್ತವೆ. ಉದಾಹರಣೆಗೆ ಕತ್ತಿ, ಕೊಡಲಿ, ಕುಡುಗೋಲು, ಹಾರೆ, ಇತ್ಯಾದಿ. ನಿತ್ಯಜೀವನದಲ್ಲಿ ಉಪಯೋಗವಾಗುವ ಪರಿಕರಗಳನ್ನು ಬಿಟ್ಟು ಬೇಟೆಯಲ್ಲಿ ಮಾತ್ರ ಉಪಯೋಗವಾಗುವ ವಸ್ತುಗಳನ್ನು ಬೇಟೆ ಮುಗಿದ ನಂತರ ಅವುಗಳ ಸ್ಥಾನದಲ್ಲಿ ಸುರಕ್ಷಿತವಾಗಿಡುತ್ತಾರೆ. ಆಯುಧಗಳನ್ನು ಮುಟ್ಟುವುದಾಗಲಿ, ಒದೆಯು ದಾಗಲಿ ಮಾಡುವುದಿಲ್ಲ. ಅವುಗಳಿಗೆ ಮೈಲಿಗೆಯಾದರೆ ಗುರಿ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಎಂದು ನಂಬುತ್ತಾರೆ.

ಬೇಟೆ ಹಲವು ಕಾರಣಗಳಿಗಾಗಿ ನಡೆಯುತ್ತದೆಂದು ಅಧ್ಯಯನದಿಂದ ತಿಳಿದು ಬಂದ ಸತ್ಯ. ಬೇಟೆ ಪ್ರಾದಿಮ ಕಾಲದಲ್ಲಿ ಮಾನವನಿಗೆ ಮಾಡಿದ ಉಪಕಾರವನ್ನು, ಇಂದು ಮಾಡುತ್ತಿರುವ ಅಪಕಾರ ನಮ್ಮೆಲ್ಲರ ಅರಿವಿನಲ್ಲಿದೆ. ಅದು ಇಂದು ಆಚರಣೆ, ಅನುಕರಣೆ ಇತ್ಯಾದಿಯಾಗಿ ರೂಪಾಂತರ ಹೊಂದುತ್ತಿದೆ. ಈ ಬೇಟೆ ಹಲವು ಕಡೆ ಇಂದಿಗೂ ರೂಢಿಯಲ್ಲಿದೆ. ಅವುಗಳನ್ನು ಅಧ್ಯಯನದ ದೃಷ್ಟಿಯಿಂದ ನಾಲ್ಕು ಭಾಗಗಳಾಗಿ ವಿಭಾಗಿಸಿಕೊಳ್ಳಬಹುದು.

 02_134_SP-KUH

ಬೇಟೆಯಲ್ಲಿ ಪ್ರಾಣಿ ಬೇಟೆ ಮಾಡುವಾಗ ಸಮುದಾಯದ ಸಹಕಾರ ಅಗತ್ಯ. ಬೇಟೆಗಾರರು ಪ್ರಾಣಿಗಳ ಚಲನವಲನಗಳನ್ನು ಅವುಗಳ ಹೆಜ್ಜೆ, ಕೂಗು ಇತ್ಯಾದಿಗಳಿಂದ ಗುರುತಿಸುವ ಜಾಣ್ಮೆ ಹೊಂದಿದವರಾಗಿರುತ್ತಾರೆ. ಯಾವ ಪ್ರಾಣಿಶಾಸ್ತ್ರಜ್ಞರಿಗೇನು ಕಡಿಮೆ ಇಲ್ಲದಂತೆ ಪ್ರಾಣಿಗಳ ಬಗೆಗೆ ನಿಖರವಾಗಿ ಹೇಳುವ ಪ್ರಜ್ಞೆಯನ್ನು ಹೊಂದಿರುತ್ತಿದ್ದರು. ಇದನ್ನು ಪ್ರಾಣಿಶಾಸ್ತ್ರೀಯ ಅಧ್ಯಯನಕಾರರು ಗಮನಿಸಿದರೆ ಆ ಅಧ್ಯಯನಕ್ಕೆ ಅನೇಕ ಮಾಹಿತಿ ಹಾಗೂ ವಿವರಗಳು ಸಿಕ್ಕುತ್ತವೆ. ಬೇಟೆಗಾರ ಪ್ರಾಣಿಗಳ ಚಟುವಟಿಕೆಯ ಜ್ಞಾನ ಭಂಡಾರವೇ ಸರಿ. “ಯಾವ ಪ್ರಾಣಿ ಯಾವಾಗ ಚಟುವಟಿಕೆಯಿಂದಿರುತ್ತದೆ. ಯಾವಾಗ ಹೊರಗೆ ಬರುತ್ತದೆ. ಯಾವ ಆಹಾರ ಪ್ರಿಯವಾದುದು, ಯಾವಾಗ ಪುಷ್ಟಿಯಾಗಿ ಬೆಳೆದಿರುತ್ತದೆ ಇತ್ಯಾದಿ ಅಂಶಗಳನ್ನು ಬಲ್ಲವರಾಗಿರುತ್ತಾರೆ. ಆದುದರಿಂದ ಬೇಟೆಯ ತಂತ್ರವನ್ನು ಆಯಾ ಪ್ರಾಣಿಯ ಸ್ವಭಾವಕ್ಕನುಗುಣವಾಗಿ ರೂಪಿಸಿಕೊಂಡಿರುತ್ತಾರೆ” (ಯು.ಎಸ್. ರಾಮಣ್ಣ – ೨೦೦೧-೨೨). “ಹುಲಿಗೆ ಕಿವಿ, ಕಣ್ಣು ಸೂಕ್ಷ್ಮ, ಹಂದಿಗೆ ಮೂಗು ಸೂಕ್ಷ್ಮ, ಕಾಡಿನಲ್ಲಿ ಹಣ್ಣುಗಳು ಉದುರಿದ್ದರೆ ಅದನ್ನು ತಿನ್ನಲು ಜಿಂಕೆಗಳು ಬರುತ್ತವೆ. ಕಾಡುಹಂದಿ ಕಬ್ಬಿನ ಗದ್ದೆಗೆ ಬರುತ್ತದೆ. ಕಾಡುಕುರಿಗಳು ಚೂರಿ ಕಾಯಿ, ಕಣಗಲು ಹಣ್ಣುಗಳು ಚುಂಗೋಳಿ ಹಣ್ಣು, ಅಮಟೆಹಣ್ಣು ತಿನ್ನಲು ಬರುತ್ತವೆ. ಹಾರ್ ಬೆಕ್ಕು ಭತ್ತ ತಿನ್ನಲು ಬರುತ್ತದೆ. ಉಡ ಸಿಕ್ಕಿದಾಗ ಅದರ ಕಾಲು ಕೈ ಕತ್ತರಿಸಿ ತರಬೇಕು. ಚಿಪ್ಪಿನ ಹಂದಿ ಹೊಡೆದಾಗ ಅದು ಮುದುರಿಕೊಳ್ಳುವುದು. ಅದರಿಂದ ಅದನ್ನು ತೆಗೆದುಕೊಂಡು ಬರುವಾಗ ಹೊಡೆಯುತ್ತಲೇ ಬರಬೇಕು. ಮಲೆಗಾಲವು ಮೀನು ಶಿಕಾರಿಗೆ ಪ್ರಶಸ್ತವಾದುದು ಇತ್ಯಾದಿ ಹತ್ತಾರು ಸಂಗತಿಗಳ ಜ್ಞಾನ ಬೇಟೆಗಾರರಿಗಿರುತ್ತದೆ” (ಯು.ಎಸ್. ರಾಮಣ್ಣ – ೨೦೦೧-೨೨).

ಎಲ್ಲಾ ಸಂದರ್ಭದಲ್ಲಿಯೂ ಜನಪದರಿಗೆ ದೇವರು ಬೇಕು. ಏನೇ ಕೆಲಸ ಮಾಡುವ ಮೊದಲು ದೇವರನ್ನು ಪ್ರಾರ್ಥಿಸಿಕೊಳ್ಳುವುದು ಅವರ ರೂಢಿ. ಹಾಗೆಯೇ ಬೇಟೆಗೆ ಹೋಗುವಾಗಲು ಬೇಟೆ ದೇವರನ್ನು ಪೂಜಿಸಿ ಬೇಟೆ ಸಿಗಲೆಂದು ಪ್ರಾರ್ಥಿಸುತ್ತಾರೆ. ಕೊಡಗಿನ ಕಡೆ ಬೇಟೆಗೆ ಹೋಗುವಾಗ ಬೇಟೆಗಾರರು ಅಯ್ಯಪ್ಪ ದೇವರ ಹೆಸರಿಡಿದು ಕರೆಯುವ ಪದ್ಧತಿ ಇದೆ. ಬೇಟೆ ಸಿಕ್ಕದೆ, ಊರಿನವರ ಅಪಮಾನಕ್ಕೆ, ಕಿಡಿನುಡಿಗೆ ಗುರಿಯಾಗದೇ, ಬೇಟೆ ಸಿಕ್ಕಲಿ ಎನ್ನುವ ಉದ್ದೇಶದಿಂದ ಈ ಆಚರಣೆ ಚಾಲ್ತಿಯಲ್ಲಿದೆ. “ಯಾವುದೇ ದೇವತೆಯ ನಿರಾಕಾರ ವಿಗ್ರಹದೆದುರು ಅನೇಕ ಕಬ್ಬಿಣದ ತ್ರಿಶೂಲಗಳಿರುವುದು ಸಾಮಾನ್ಯ. ಅರಣ್ಯವಾಸಿ ದೇವತೆಗಳಿಗೆ ಗುಡಿಕಟ್ಟುವುದು ನಿಷೇಧ. ಕೆನ್ನಾಯಿಗಳನ್ನು ಹೋಲುವ ನಾಯಿಯ ಮಣ್ಣಿನ ರೂಪವನ್ನು ಕುಂಬಾರನಿಂದ ಮಾಡಿಸಿ ದೇವರಿಗೆ ಒಪ್ಪಿಸುತ್ತಾರೆ. ಹೀಗೆ ಹರಕೆ ಒಪ್ಪಿಸಲು ಕಾರಣಗಳು : ೧. ತಾನು ಸಾಕಿರುವ ಬೇಟೆ ನಾಯಿಗೆ ಇದ್ದಕ್ಕಿದ್ದಂತೆ ರೋಗರುಜಿನ ಬಂದರೆ ೨. ಬೇಟೆಯ ಕಾಲದಲ್ಲಿ ಅಕಸ್ಮಾತ್ ಯಾವುದೇ ಬೇಟೆಗಾರನಿಂದ ಬೇಟೆ ನಾಯೀಗೆ ಗುಂಡೇಟು ತಗುಲಿ ಅದು ಸತ್ತು ಹೋದರೆ ೩. ಬೇಟೆಯ ಮೃಗದ ಧಾಳಿಗೆ ಸಿಕ್ಕಿ ನಾಯಿ ಸತ್ತು ಹೋದರೆ ೪. ಬೇಟೆ ಕಾಲದಲ್ಲಿ ಯಾವುದೇ ಆಪತ್ತು ಒದಗದಂತೆ ರಕ್ಷಣೆ ನೀಡುವಂತೆ ದೇವರನ್ನು ಬೇಡಿಕೊಳ್ಳುವಾಗ ಮಣ್ಣಿನ ನಾಯಿಯ ರೂಪವನ್ನು ಕೊಡುತ್ತೇವೆಂದು ಹರಕೆ ಮಾಡಿಕೊಳ್ಳುತ್ತಾರೆ” (ಐನಂಡ ಎಂ.ಧನು – ೨೦೦೧-೪೫).

ಬಯಲು ಸೀಮೆಯ ನಾಯಕ ಜನಾಂಗದವರು ಬೇಟೆಯನ್ನು ಸಂಪ್ರದಾಯಬದ್ಧವಾಗಿ ನಡೆಸುವ ರೂಢಿ ಇಟ್ಟುಕೊಂಡಿದ್ದಾರೆ. ಅವರು ತಮ್ಮ ಇಷ್ಟ ದೇವತೆಯಿಂದ ‘ಹೂವು ಕೇಳಿ’ ಬೇಟೆಗೆ ಹೊರಡುತ್ತಾರೆ. “ಬೇಟೆಗೆ ಹೊರಡುವ ಮುನ್ನ ಪಟ್ಟಲದಮ್ಮ, ಗೌಡಗೆರಮ್ಮನಿಗೆ ಪೂಜೆ ಸಲ್ಲಿಸಿ ಹೊರಡುವುದು ವಾಡಿಕೆ. ಈ ದೇವರ ಹೆಸರಿನಲ್ಲಿ ಬಂದು ಕೋಡಗಲ್ಲನಿಟ್ಟು, ಅರಿಶಿನ ಕುಂಕುಮ, ಹೂವುಗಳಿಂದ ಪೂಜಿಸಿ, ಹೂವು ಕೇಳಿ (ದೇವರ ತಲೆಯ ಮೇಲಿಂದ ಹೂವು ಬೀಳುವುದು) ಹೂ ಕೊಟ್ಟ ನಂತರ, ಯಾವ ಅಪಾಯವೂ ಇಲ್ಲದಂತೆ, ಸುಲಭವಾಗಿ ಬೇಟೆ ಸಿಗುವಂತೆ ದೇವರನ್ನು ಪ್ರಾರ್ಥಿಸಿ, ಜಯಕಾರ ಹಾಕಿ ಬೇಟೆಗೆ ಹೊರಡುತ್ತಾರೆ” (ಎಂ.ಎಸ್. ಪ್ರಕಾಶ್ -೨೦೦೦-೧೪). ಮಲೆನಾಡಿನ ಪ್ರದೇಶದಲ್ಲಿ ಬೇಟೆಗೆ ಹೋಗುವ ಮುನ್ನ ಮರದಿಂದ ಮಾಡಿದ ಹಂದಿ ಮೂರ್ತಿಯನ್ನು ಪೂಜಿಸುವ ಆಚರಣೆಯೊಂದು ನಡೆಯುತ್ತದೆ. ಬೇಟೆಯಲ್ಲಿ ಹಂದಿ ದೊರೆತರೆ ಅದರ ತಲೆಯನ್ನು ಕತ್ತರಿಸಿ ಅದರ ಕೊಬ್ಬಿನಿಂದಲೇ ದೀಪ ಉರಿಸಿ ಪೂಜೆ ಸಲ್ಲಿಸುವ ಪದ್ಧತಿಯು ಇದೆ. “ಕಾಡಿಗೆ ಹೋಗುವ ಮೊದಲು ಅರಣ್ಯ ದ್ವಾರದಲ್ಲಿ ಕಲ್ಲಿನಿಂದ ನಿರ್ಮಿಸಿದ ಹಂದಿಯಾಕಾರದ ಬೇಟೆರಂಗನ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸಲ್ಲಿಸುವರು. ಆ ಸಮಯದಲ್ಲಿ “ನಿನ್ನ ಹಾಗೆ ನಿನ್ನ ಮಕ್ಕಳು, ಮೊಮ್ಮಕ್ಕಳು ನಮಗೆ ಸಿಕ್ಕುತ್ತಿರಲಿ” ಎಂದು ಬೇಡಿಕೊಳ್ಳುವರು. ಬೇಟೆಯ ಸಮಯದಲ್ಲಿ ಹಂದಿಯೇ ಸಿಕ್ಕಿದಲ್ಲಿ, ಅದರ ತಲೆಯನ್ನು ಕತ್ತರಿಸಿ, ಬೇಟೆ ರಂಗನ ಮುಂದಿಟ್ಟು, ಅದರ ಮಸೂಡಿಗೆ ಹತ್ತಿ ಬತ್ತಿ ಇಟ್ಟು ಹಂದಿಯು ಕೊಬ್ಬಿನಿಂದಲೇ ದೀಪ ಹಚ್ಚುವ ಸಂಪ್ರದಾಯವಿದೆ. ಹೀಗೆಯೇ ಬೇಟೆ ಸಿಕ್ಕುತ್ತಿದ್ದರೆ ಪೂಜೆ ಮಾಡುವುದಾಗಿ, ಮತ್ತೊಮ್ಮೆ ಹಿಂದಿನ ರೀತಿಯಲ್ಲಿ ಹೇಳಿ ಧೂಪ ಹಾಕುತ್ತಾರೆ.” (ಯು.ಎಸ್. ರಾಮಣ್ಣ – ೨೦೦೧-೨೫). ಈ ಬಗೆಯ ಆಚರಣೆಗಳನ್ನು ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಚಿಕ್ಕಮಗಳೂರಿನ ಪ್ರದೇಶಗಳಲ್ಲಿ ಈಗಲೂ ನೋಡಬಹುದು.

ಬೇಟೆ ಸಮುದಾಯದಲ್ಲಿ ಹಂದಿಯು ಬೇಟೆ ರಂಗನಾಗಿಯೂ, ಬಲಿಯಾಗಿಯೂ, ನೈವೇದ್ಯವಾಗಿಯೂ ಮತ್ತು ಆಹಾರವಾಗಿಯೂ ಇರುವುದನ್ನು ನೋಡಿದರೆ ಅದರ ಆಂತರ್ಯದಲ್ಲಿ ಯಾವುದೋ ಬೆಲೆ ಬಾಳುವಂಥದ್ದು ಇರಲೇಬೇಕಲ್ಲವೇ? ಮಲೆನಾಡಿನ ಹಲವು ಕಡೆ ಜನಪದ ದೈವಗಳಿಗೆ ಹಂದಿಯನ್ನೇ ಬಲಿ ಕೊಡಬೇಕು. ಇದಕ್ಕೆ ಬನದ ದೇವತೆಗಳಿಗೆ ಹಾಗೂ ಚೌಡಿ ದೇವತೆಗಳನ್ನು ಉದಾಹರಿಸಬಹುದು. ವಿಜಯನಗರ ಅರಸರ ರಾಜ್ಯಲಾಂಛನ ಹಂದಿ (ವರಹ) ಮಹಾವಿಷ್ಣುವಿನ ಅವತಾರವೆಂಬುದು ಸಾರ್ವತ್ರಿಕವಾಗಿ ನಂಬುಗೆ. ಹಂದಿಯು ತುಳುನಾಡಿನಲ್ಲಿ ‘ಪಿಲಿಪಂಜಿ’ ದೈವವಾಗಿಯೂ, ಮಲೆನಾಡಿನಲ್ಲಿ ಬೇಟೆರಂಗನಾಗಿಯೂ, ಉತ್ತರ ಕರ್ನಾಟಕದ ಕೆಲವು ಜನವರ್ಗದವರಿಗೆ ಲಕ್ಷ್ಮಿಯಾಗಿಯೂ ಇರುವುದು ಹೊಸ ಚಿಂತನೆಯತ್ತ ಬೆಳಕು ಚೆಲ್ಲುತ್ತದೆ. ಮೇಲಿನ ವಾದದಲ್ಲಿ ನಾವು ಗಮನಿಸಿದ ಸಮಾನ ಅಂಶಗಳೆಂದರೆ ಬಲಿ ಮತ್ತು ಆಹಾರ. ಎಲ್ಲೋ ಒಂದು ಕಡೆ ಇವೆರಡಕ್ಕೂ ಸಂಬಂಧ ಇದ್ದಂತೆ ತೋರುತ್ತದೆ. ಇದನ್ನು “ಕೋಟಿ ಕೊಟ್ಟಾದರೂ ಗೂಟಿ ತಿನ್ನು” ಎಂಬ ಜನಪದರ ಗಾದೆಮಾತಿನ ಮೂಲಕ ಅರ್ಥೈಸಬಹುದು. ಹಂದಿಯ ಮಾಂಸದ ಭಕ್ಷಣೆಯ ಮಹತ್ವದ ಮೇಲೆ ಬೆಳಕು ಚೆಲ್ಲುತ್ತದೆ. ಹೆಚ್ಚಾಗಿ ಆಷಾಢದ ದಿನಗಳಲ್ಲಿ ತಿನ್ನುವುದು ಹೆಚ್ಚು. ಈ ದಿನ ಮಾನಗಳಲ್ಲಿ ಗಾಳಿಯ ಒತ್ತಡ ಜಾಸ್ತಿಯಿರುತ್ತದೆ, ಈ ವೇಳೆಯಲ್ಲಿ ಮನುಷ್ಯನಿಗೆ ಕೊಬ್ಬಿನ ಅಂಶ ಹೆಚ್ಚು ಬೇಕು. ಹಂದಿ ಮಾಂಸ ಭಕ್ಷಣೆ ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದೇ ಅವುಗಳ ಪೂಜೆ ಹಾಗೂ ಬಲಿಗೆ ಕಾರಣವಾಗಿದೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹಂದಿಯ ಬಲಿ ಮತ್ತು ಪೂಜೆಯನ್ನು ನೋಡಬಹುದು.

ಮಾಂಸದ ಹಂಚಿಕೆ

ಬೇಟೆಯಲ್ಲಿ ದೊರೆತ ಪ್ರಾಣಿಯ ಮಾಂಸದ ಹಂಚಿಕೆಯು ವಿಶಿಷ್ಟವಾಗಿದೆ. ಯಾವುದೇ ರೀತಿಯ ಆಧುನಿಕ ತೂಕದ ವಸ್ತುಗಳನ್ನು ಬಳಸದೇ ಬರಿಯ ಕೈ ಅಂದಾಜಿನ ಮೇಲೆ ಹಂಚಿಕೊಳ್ಳಲಾಗುತ್ತದೆ. ಬೇಟೆಯಲ್ಲಿ ಭಾಗವಹಿಸಿದ ನಾಯಿಗಳು, ಜನ ಹಾಗೂ ಕೋವಿಗಳಲ್ಲದೆ, ಬೇಟೆಯನನ್ನುರುಳಿಸಿದ ಬೇಟೆಗಾರರಿಗೆ ವಿಶೇಷ ಪಾಲು ನೀಡಲಾಗುತ್ತದೆ. ಬೇಟೆಯಲ್ಲಿ ಬೇಟೆ ದೊರಕಿಸಿಕೊಟ್ಟ ದೈವಕ್ಕೆ ‘ಕೊಡಸು’ ಹಾಗೂ ಹುರಿತುಂಡಿನ ನೈವೇದ್ಯವನ್ನು ತಪ್ಪದೇ ಅರ್ಪಿಸುತ್ತಾರೆ. ಗ್ರಾಮದ ಆಡಳಿತಕ್ಕೊಳಪಟ್ಟ ಕಾಡಿನ ಆಡಳಿತಾಧಿಕಾರಿಗಳಾದ ಗೌಡ, ಪಟೇಲರಗಳಿಗೂ ಪಾಲು ನೀಡಬೇಕೆನ್ನುವ ಅಲಿಖಿತ ನಿಯಮವಿದೆ. ಮಲೆನಾಡಿನ ಭಾಗವ ಬೇಟೆಗಾರರು ಕೆಳಗಿನ ಕ್ರಮದಲ್ಲಿ ಮಾಂಸವನ್ನು ಹಂಚಿಕೊಳ್ಳುತ್ತಾರೆ.

 03_134_SP-KUH

ಲೇಸು ಮತ್ತು ಬೀವಿನ ಪಾಲುಗಳನ್ನುಳಿದ ಪಾಲುಗಳು ಒಂದೇ ಅಳತೆಯಲ್ಲಿರುತ್ತವೆ. ತುಳುನಾಡಿನ ಕಡೆ ಪ್ರಾಣಿಗಳನ್ನು ಕಾಡಿನಿಂದ ನಾಡಿನ ಕಡೆಗೆ ಸಾಗಿಸುವವರನ್ನು ಹೊಂತಕಾರಿಗಳೆಂದು ಕರೆಯುತ್ತಾರೆ. ಮಾಂಸವನ್ನು ಪಾಲು ಮಾಡುವವನನ್ನು ಮಲೆನಾಡಿನ ಭಾಗಗಳಲ್ಲಿ ಸೊಂಟಮುರುಕನೆಂದು ಕರೆಯುತ್ತಾರೆ. ಬೇಟೆಯ ವಲಯದೊಳಗೆ ಹಂಪಿನ ಸ್ಥಳ, ಬೇಟೆರಂಗ, ಕೊದಸು ಹುರಿತುಂಡು ಇತ್ಯಾದಿಗಳು ಮಹತ್ವದ ಸ್ಥಾನ ಪಡೆದಿರುತ್ತವೆ. ಬೇಟೆ ದೇವನಿಗೆ ಹುರಿತುಂಡು ಹಾಗೂ ಹಸಿ ಮಾಂಸದ ಕೊದಸನ್ನು ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಬೇಟೆರಂಗನಿಗೆ ‘ಕರಕಲುಕಡ್ಡಿ’ ಅರ್ಪಿಸುವ ಪದ್ಧತಿಯು ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. “ತೀರ್ಥಹಳ್ಳಿ ಸುತ್ತಲಿನಲ್ಲಿ ಹಸಿಗೆಯಾದ ಮೇಲೆ ಸ್ವಲ್ಪ ಭಾಗ ಮಾಂಸವನ್ನು ತೆಗೆದುಕೊಂಡು ಉಪ್ಪು ಕಾರ ಹಾಕಿ ಬೇಯಿಸಿ ಹುರಿತುಂಡು ಮಾಡಿ ಉಳಿದ ಮಾಂಸವನ್ನು ಒಂದು ಬುಟ್ಟಿಗೆ ತುಂಬಿಸಿ ಬೇಟೆರಂಗನ ಪೂಜೆಗೆ ಅಣಿಗೊಳಿಸುವರು. ಚಿಕ್ಕಮಗಳೂರು ಭಾಗದಲ್ಲಿ ಕೆಲವು ಕಡೆ ಬೇಟೆರಂಗನಿಗೆ ಕಾಡ್ಲ ಒಡೆಯನಂತೆ ನಿರ್ದಿಷ್ಟ ಆಕಾರವಿಲ್ಲ. ಆದುದರಿಂದ ಫಲ ಬಿದುವ ವೃಕ್ಷದ ಕೆಳಗೆ ಒಂದು ಕಲ್ಲು ಇಟ್ಟು ಬೇಟೆರಂಗನ ಹೆಸರು ಹೇಳಿ ಆವಾಹನೆ ಮಾಡುವರು” (ಯು.ಎಸ್. ರಾಮಣ್ಣ -೨೦೦೧-೨೬-೨೭) ಮಾಂಸದ ಎಲ್ಲಾ ಪಾಲು ರಾಶಿಯನ್ನು ಮಾಡಿ ಮುಗಿಸಿದ ನಂತರ ಐದು ಅಥವಾ ಒಂಬತ್ತು ಜಾತಿಯ ಎಲೆಗಳ ಮೇಲೆ ಹಸಿಮಾಂಸದ ತುಂಡುಗಳನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಅಂದಿನ ಬೇಟೆಯನ್ನು ಕೊಂದ ಕೋವಿಯಿಂದ ಅದೇ ಬೇಟೆಗಾರರು ಆಕಾಶದ ಕಡೆಗೆ ಗುಂಡು ಹಾರಿಸುತ್ತಾನೆ. ನಂತರ ಆತನು ಧೂಪ ಹಾಕಿಕೊಳ್ಳುತ್ತಾನೆ. ಉಳಿದ ಬೇಟೆಗಾರರು ಧೂಪ ಹಾಕಿಕೊಂಡು ಹೀಗೆಯೇ ಮುಂದೆ ಒಳ್ಳೆಯ ಬೇಟೆ ಸಿಕ್ಕಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ನಂತರ ಎಲ್ಲರಿಗೂ ಮಾಂಸ ಮತ್ತು ಹುರಿತುಂಡು ಪಾಲುಗಳನ್ನು ನೀದಲಾಗುವುದು. ಕೊನೆಯಲ್ಲಿ ಹಂಪಿಗೆ ಹಾಸಿದ ಬಾಳೆ ಎಲೆಯನ್ನು ತೆಗೆಯುವ ‘ಹಂಪು ಕೊಚ್ಚುವುದು’ ಎನ್ನುವ ಪದ್ಧತಿ ನಡೆಯುತ್ತದೆ.

ಮಲೆನಾಡಿನ ಪ್ರದೇಶದಲ್ಲಿ ಈ ಪದ್ಧತಿ ಇದೆ. “ಹಸಿಗೆ ನಡೆದ ಜಾಗದಿಂದ ನಿರ್ಗಮಿಸುವ ಮುನ್ನ “ಹಂಪು” ಹಾಸಿದ ವ್ಯಕ್ತಿ ಹಂಪು ಕೊಚ್ಚಬೇಕು. ಹಾಸಿದ ಬಾಳೆ ಎಲೆಗಳನ್ನು ಆತ ಒಟ್ಟು ಮಾಡಿ ಉರಿಯುವ ಕೊಳ್ಳಿಯ ಮೇಲಿರಿಸಿದ್ದ ‘ಕೊಚ್ಚುಮರದ’ ಮೇಲೆ ಇರಿಸಿಕೊಂಡು ‘ಬೇಟೆ ಬೊ’ ಎಂದು ಉಚ್ಚರಿಸುತ್ತ ಮೂರು ಸಲ ಕೊಚ್ಚಿ ಹಾಕುತ್ತಾನೆ. ಆಗ ಅವನ ಹಿಂಭಾಗದಿಂದ ಇಬ್ಬರು ಬಂದು ‘ಇವತ್ತು ಹಿಡಿ, ನಾಳೆ ಹೊಡಿ’ ಎಂದು ಬೆನ್ನಿಗೆ ಗುದ್ದು ಹಾಕುತ್ತಾರೆ” (ಹಿರಿಯಣ್ಣ ೧೯೯೯ – ೧೩೨). “ಗ್ರಾಮದೇವತೆಗೆ ಶಿಕಾರಿ ಎಡೆ ಎಂದು ಮೀಸಲಿಡುವುದು ಸಕಲೇಶಪುರ ಭಾಗದಲ್ಲಿದೆ ಇಲ್ಲಿ ಪಾಲು ಶಬ್ದಕ್ಕೆ ಸಂವಾದಿಯಾಗಿ ಎಡೆ ಎಂಬ ಶಬ್ದವೇ ಬಲಕೆಯಲ್ಲಿದೆ” (ಯು.ಎಸ್. ರಾಮಣ್ಣ ೨೦೦೦-೨೭). ಪ್ರಾಣಿ ಹೊಡೆದುರುಳಿಸಿದ ಬೇಟೆಗಾರ ಗೌರವಕ್ಕೆ ಪಾತ್ರನಾಗಿ ಅತಿ ಹೆಚ್ಚು ಮಾಂಸದ ಪಾಲನ್ನು ಪಡೆಯುತ್ತಾನೆ. ಬೇಟೆಯನ್ನು ಬಿಟ್ಟ ಬಿಲ್ಲುಗಾರ, ಬೇಟೆಗಾರರ ಕಿಡಿನುಡಿಗೆ ಕುಗ್ಗಿ ಅವಮಾನಿತನಾಗುತ್ತಾನೆ. ಬೇಟೆಯಲ್ಲಿ ಹೆಚ್ಚು ಮಾಂಸ ದೊರೆತರೆ ಅದನ್ನು ಒಣಗಿಸಿ, ಮಡಕೆಯಲ್ಲಿ ತುಂಬಿಟ್ಟುಕೊಂಡು, ಮುಂದೆ ಮಳೆಗಾಲದಲ್ಲಿ ಅಡಿಗೆಗೆ ಉಪಯೋಗಿಸುತ್ತಾರೆ. ಇದೇ ರೀತಿ ಮೀನನ್ನು ಒಣಗಿಸಿಟ್ಟುಕೊಳ್ಳುತ್ತಾರೆ. ಇದಕ್ಕೆ ಮಲೆನಾಡಿನಲ್ಲಿ, ಕರಿಮೀನು ಎಂದು ಕರೆಯುತ್ತಾರೆ.