ಆಚರಣೆ

ಪ್ರಾಚೀನ ಕಾಲದಲ್ಲಿದ್ದ ವನಸಂಪತ್ತು ಈಗಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ನಡುವೆ ಸಿಲುಕಿ ಸಂಕುಚಿತಗೊಳ್ಳುತ್ತಿದೆ. ಭಾರಿ ವನ್ಯಜೀವಿಗಳಾಗಲೀ, ಅವುಗಳನ್ನು ಕೊಂದು ತಮ್ಮ ಬೆಳೆಗಳನ್ನಾಗಲೀ, ಸಾಕು ಪ್ರಾಣಿಗಳನ್ನಾಗಲೀ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಗುಂಪುಗೂಡಿ ಬೇಟೆಯಾಡಿ ಸಂಪಾದಿಸುವ ಒಂದೆರಡು ಪ್ರಾಣಿಗಳು ಎಲ್ಲಾ ಬೇಟೆಗಾರರಿಗೆ ಸಾಕಾಗುವುದಿಲ್ಲ. ಹೀಗಾಗಿ ಬೇಟೆಯಿಂದ ಹಣ ಸಂಪಾದಿಸುವ ಮಾರ್ಗ ಮುಚ್ಚಿಹೋಗಿದೆ. ಇದರಿಂದ ಜನರಿಗೆ ಬೇಟೆಗೆ ಹೋಗಬೇಕೆಂಬ ಉತ್ಸಾಹವಿಲ್ಲ, ಹಂಬಲವಿಲ್ಲ, ಆದ್ದರಿಂದ ಬೇಟೆಯಲ್ಲಿ ಆಸಕ್ತಿ ಇರುವ ಬೇಟೆಗಾರರು ಮಾತ್ರ ಬೇಟೆಗೆ ಹೋಗುತ್ತಾರೆ. ತಲೆಮಾರಿನಿಂದ ಬಂದ ಬೇಟೆಯ ಹವ್ಯಾಸವನ್ನು ಅವರು ಕೇವಲ ಮನರಂಜನೆಯಾಗಿ ನೋಡದೆ, ಹೊಣೆಗಾರಿಕೆಯ ಒಂದು ವ್ಯಕ್ತಿಯನ್ನಾಗಿ ಒಪ್ಪಿಕೊಂಡು ಆಚರಿಸುತ್ತಿದ್ದಾರೆ.

ಅಂದು ಬೇಟೆ ಮಾನವನ ಪ್ರಮುಖ ಆಹಾರೋತ್ಪಾದನ ಸಾಧನವಾಗಿದ್ದು, ಚಳಿಯಿಂದ ಬೆಚ್ಚಗಿರಲು ಚರ್ಮವನ್ನು, ಎಲುಬು ಮತ್ತು ಕೊಂಬುಗಳಿಂದ ಉಪಕರಣ ಮುಂತಾದವುಗಳನ್ನು ಸಂಗ್ರಹಿಸುವ ವಿವಿಧೋದ್ದೇಶದಿಂದ ಕೂಡಿತ್ತು. ಇದನ್ನು ಬೇಟೆ ಕೇವಲ ಸಂಸ್ಕೃತಿಯಲ್ಲಿ ಒಂದು ನೆನಪಾಗಿ ಆಚರಣೆಯಾಗಿ ಪರಿವರ್ತನೆ ಹೊಂದಿದೆ.

ಜನಸಮೂಹದ ನಡುವೆಯೇ ಹುಟ್ಟಿಕೊಂಡ ರಾಜ್ಯ ವ್ಯವಸ್ಥೆ ಹಾಗೂ ಈಗಿನ ಪ್ರಜಾರಾಜ್ಯ ವ್ಯವಸ್ಥೆಗಳು ತಮ್ಮದೇ ರೀತಿಯಲ್ಲಿ ಹಿಂಸೆಯನ್ನು ಒಳಗು ಮಾಡಿಕೊಂಡು ಜನರಿಗೆ ಹಿಂಸೆ ಕೊಡುತ್ತಿರುವ ಸಂದರ್ಭಗಳು ಬಹಳಷ್ಟು ನಡೆದಿವೆ. ಆಹಾರೋತ್ಪಾದನ ವಿಧಾನಗಳಲ್ಲಿ ಒಂದಾದ ಬೇಟೆಯು ಆಚರಣೆ ಹಂತವನ್ನು ತಲುಪಿದಾಗ, ಬೇಟೆಯೊಳಗಿನ ಹಿಂಸೆಯ ಕಲ್ಪನೆಯು ಸಾಮಾಜಿಕ – ರಾಜಕೀಯ ವ್ಯವಸ್ಥೆಯ ಹಿಂಸಿಸುವ ತೆಕ್ಕೆಗೆ ಸೇರಿದ್ದು ಆಶ್ಚರ್ಯಕರ ಸಂಗತಿ. ಮನುಷ್ಯ ಮನುಷ್ಯನನ್ನೇ ಹಿಂಸಿಸುವ, ಬೇಟೆಯಾಡುವ ವಾತಾವರಣ, ನಿರ್ಮಾಣವಾಗಿದೆ. ಈ ನಡುವೆ ಪ್ರಾಣಿದಯೆಯ ಪ್ರಚಾರ ಪ್ರಬಲವಾಗಿದೆ. ಧರ್ಮದ ಅಭಯ ಹಸ್ತದ ಅಡಿಯಲ್ಲಿ ಪ್ರಾಣಿ ರಕ್ಷಣೆ ಹಸಿರಾಗಿ ಉಸಿರಾಡುತ್ತಿದೆ. ಒಂದು ಕಡೆ ಹಾಲು ಕೊಡುವ ಹಸುವಿನಂತೆ ಪ್ರಾಣಿಗೆ ದೈವದ ಸ್ಥಾನ ಲಭ್ಯವಾಗಿದೆ. ಇನ್ನೊಂದು ಕಡೆ ಸದಾ ಕೊಳಕನ್ನು ತಿಂದು ಬದುಕುವ ಹಂದಿಯೂ ಒಂದು ನಿರ್ದಿಷ್ಟ ದಿನದಲ್ಲಿ ಲಕ್ಷ್ಮಿಯಾಗಿ ಪೂಜೆ ಗೊಳ್ಳುತ್ತದೆ. ವಿಪರ್ಯಾಸವೆಂದರೆ ಅದು ಹಿಂಸೆಯಿಂದಲೇ, ಪೂಜಿಸುವವರಿಂದ ಪ್ರಾಣ ಕಳೆದುಕೊಳ್ಳುತ್ತದೆ.

ಉತ್ತರ ಕರ್ನಾಟಕದ ಭಾಗಗಳಲ್ಲಿ ಹಲವು ಜನವರ್ಗ ಹಂದಿಯನ್ನು ತಿನ್ನುವುದಿಲ್ಲ, ಆದರೆ ಬೇಟೆಯಾಡುತ್ತಾರೆ. ಪೂಜಿಸುವ ಜನವೂ ಸೇರಿದಂತೆ ಹಂದಿಯನ್ನು ವಾಸ್ತವ ಬದುಕಿನಲ್ಲಿ ಅನಿಷ್ಟವಾಗಿ ಕಾಣುತ್ತಾರೆ. ಇದಕ್ಕೆ ಅದು ತಿನ್ನುವ ಆಹಾರವೇ ಕಾರಣವಿರಬಹುದು. ಚಲಿಸುವ ವಾಹನಗಳಿಗೆ ಹಂದಿಯು ತಾಗಿದರೆ, ಆ ವಾಹನ ಮತ್ತು ಅದರ ಯಜಮಾನನಿಗೆ ತೊಂದರೆಯಾಗುವುದೆಂದು ನಂಬುತ್ತಾರೆ. ಈಗಲೂ ಅದರ ದಟ್ಟ ಛಾಯೆ ಜನರಲ್ಲಿದೆ. ದಕ್ಷಿಣ ಕರ್ನಾಟಕದ ಹಲವು ಭಾಗದ ಜನರು ಹಂದಿಯನ್ನು ಬೇಟೆಯಾಡಿ ಮಾಂಸವನ್ನು ತಿನ್ನುತ್ತಾರೆ. ಇಲ್ಲಿನ ಜನರು ಕಾಡಿನ ಹಂದಿಗಿಂತ ಊರಿನ ಹಂದಿಯನ್ನೇ ಅನಿಷ್ಟದ ಸಂಕೇತವಾಗಿ ಕಾಣುತ್ತಾರೆ. ಹಂದಿ ಮಾಂಸದ ಅಡುಗೆ ವಾಸಿಸುವ ಮನೆಯ ಹೊರಛಾವಣಿಯಲ್ಲಿ ನಡೆಯುತ್ತದೆ. ಅದರ ಊಟವೂ ಅಲ್ಲಿಯೇ ನಡೆಯುತ್ತದೆ. ಊಟ ಮಾಡಿದ ಪ್ರತಿಯೊಬ್ಬರೂ ಸಗಣಿಯಿಂದ ಕೈ ತೊಳೆದುಕೊಳ್ಳಬೇಕೆಂಬ ನಿಯಮವಿದೆ. ನಂತರ ಊಟ ಮಾಡಿದ ಸ್ಥಳವನ್ನು ಸಗಣಿಯಿಂದ ಸಾರಿಸುತ್ತಾರೆ. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿಯೂ ಮಾಂಸವನ್ನು ಬೇಯಿಸುವ ಒಲೆಗಳಿರುತ್ತವೆ. ಈ ಒಲೆಗಳಿಗೆ ಹೊಲಸಿನ ಒಲೆಗಳೆಂದು ಕರೆಯುತ್ತಾರೆ. ಇವುಗಳನ್ನು ಮಲೆನಾಡಿನ ಹಲವು ಕಡೆ ಕಾಣಬಹುದು. ಹಂದಿ ಮಾಂಸವನ್ನುಳಿದು ಇತರ ಪ್ರಾಣಿಗಳ ಮಾಂಸದ ಅಡುಗೆಯನ್ನು ಈ ಒಲೆಯಲ್ಲಿ ಮಾಡುತ್ತಾರೆ.

ಈ ಒಲೆಯಲ್ಲಿ ಹಂದಿ ಮಾಂಸದ ಅಡುಗೆ ಮಾಡುವಂತಿಲ್ಲ. ಈ ನಿಷೇಧವನ್ನು ಮೀರಿದರೆ ಆ ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದು, ಹಾಲು ಕೊಡುವ ಹಸುವಿನ ಕೆಚ್ಚಲಲ್ಲಿ ರಕ್ತ ಸುರಿಯುವುದು, ಹಾಲು, ಮಜ್ಜಿಗೆ ಕೆಟ್ಟು ಹೋಗುವುದು ಹೀಗೆ ನಾನಾ ರೀತಿಯ ತೊಂದರೆಗಳಾಗುತ್ತದೆಂದು ನಂಬಿಕೆ ಇದೆ. ಈ ನಿಷೇಧವನ್ನು ಜನ ಪಾಲಿಸಿದಂತೆ ಕಾಣುತ್ತಿಲ್ಲ. ಮನೆಯಲ್ಲಿ ಒಂದೇ ಒಲೆ ಇದ್ದು, ಅದರಲ್ಲಿ ಹಂದಿ ಮಾಂಸವನ್ನು ಸೇರಿದಂತೆ ಎಲ್ಲಾ ಅಡುಗೆಗಳನ್ನು ಮಾಡುತ್ತಾರೆ. ಇದರಿಂದ ಯಾವ ತೊಂದರೆಯೂ ಜೀವಕ್ಕೆ ಆದಂತಿಲ್ಲ.

ಯುಗಾದಿ ಹಬ್ಬದಂದು ಹಾಗೂ ಮರುದಿನ ಬೇಟೆಗೆ ಹೋಗುವ ಆಚರಣೆ ಉತ್ತರ ಕರ್ನಾಟಕದಾದ್ಯಂತ ಕಂಡುಬರುತ್ತದೆ. ಮೊದಲು ಮಾಡುವ ಬೇಟೆಗೆ ಮುಚ್ಚುಬೇಟೆ ಎಂದು ಕರೆಯುತ್ತಾರೆ. ಬೇಟೆಯಾದ ಪ್ರಾಣಿಗಳನ್ನು ಯಾರಿಗೂ ತಿಳಿಸದೇ ಊರ ಹೊರಗೆ ಮುಚ್ಚಿಡುವುದೇ ಈ ಬೇಟೆಯ ವಿಶೇಷವಾಗಿದೆ.

ಮುಚ್ಚು ಬೇಟೆಯ ಮರುದಿನ ನಡೆಸುವ ಬೇಟೆಗೆ ಎಲ್ಲರೂ ಭಾಗವಹಿಸುವಂತೆ ತಳವಾರ ಸಾರುತ್ತಾನೆ. ತಳವಾರ ಸಾರುವಾಗ ಹರಿಜನ ಹಲಗೆ ಬಡಿಯುತ್ತಾನೆ. ಅಂದಿನ ಬೆಳ್ಳಿಗೆ ೫ ಗಂಟೆಗೆ ಬುಡೇಕಲ್ಲು (ಬಲೀಶ್ವರ) ಎದುರು ಜೀವಂತ ಹಂದಿಯನ್ನು ಕಂದಕ ಕಡಿದು ಅದರಲ್ಲಿ ಮಣ್ಣು ಮಾಡುತ್ತಾರೆ. ಮಣ್ಣಿನ ರಾಶಿ ಮೇಲೆ ಹೂವು ಭಂಡಾರ ಇತ್ಯಾದಿ ಹಾಕಿ ಪೂಜಿಸುತ್ತಾರೆ. ಹಂದಿಯನ್ನು ‘ಮಿಕ’ ವೆಂದು ಕರೆಯುತ್ತಾರೆ. ಅದು ಅವರ ಪಾಲಿಗೆ ಲಕ್ಷ್ಮಿ. ಲಕ್ಷ್ಮಿಯನ್ನು ಜೀವಂತ ಮಣ್ಣು ಮಾಡಿದ ಸ್ಥಳದಲ್ಲಿ ಗುರಿಕಾರನು ಕರಿ ಕುಂಬಳ ಕಾಯಿ ಹಾಗೂ ತೆಂಗಿನ ಕಾಯಿ ಇಟ್ಟು ಪೂಜಿಸುತ್ತಾನೆ. ಅಂದು ಮಧ್ಯಾಹ್ನ ಒಂದು ಗಂಟೆಗೆ ಮನೆಯಿಂದ ಬೇಟೆಯ ಸಾಧನಗಳನ್ನು ಹಿಡಿದು ಬಲೀಶ್ವರನ ಕಟ್ಟೆಗೆ ಬರುತ್ತಾರೆ. ಅಲ್ಲಿ ಪೂಜೆ ಸಲ್ಲಿಸಿ ಎಲ್ಲರೂ ಕಾಡಿನ ಕಡೆಗೆ ಹೊರಡುತ್ತಾರೆ. ಕಾಡಿನಲ್ಲಿ ಬೇಟೆಯಾಡಿದ ಪ್ರಾಣಿಯನ್ನು ಹೊತ್ತು ತರುತ್ತಾರೆ. ಬೇಟೆಯನ್ನು ಹೊಡೆದುರುಳಿಸಿದ ವ್ಯಕ್ತಿ ಹಾಗೂ ಬೇಟೆ ಎರಡನ್ನು ಆ ಸಂಜೆ ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡುತ್ತಾರೆ. ಕೊಡಗಿನ ಕಡೆ ಹುಲಿ ಹೊಡೆದ ಬೇಟೆಗಾರನನ್ನು ಗೌರವಿಸುವ ಪದ್ಧತಿಯೊಂದು ನಡೆಯುತ್ತದೆ. ಬೇಟೆಗಾರ ಹಾಗೂ ಸತ್ತ ಹುಲಿ ಸಿಂಗಾರ ಮಾಡಿ ಮದುವೆ ಮಾಡಿಸಲಾಗುತ್ತದೆ. ಇದಕ್ಕೆ ನರಿಮಂಗಲ ಎನ್ನುತ್ತಾರೆ. ಇದೇ ರೀತಿ ನವರಾತ್ರಿ ಹಾಗೂ ದೀಪಾವಳಿಗಳಲ್ಲಿ ಬೇಟೆಯಾಡುವುದು ಕರ್ನಾಟಕದ ಬೇರೆ ಬೇರೆ ಕಡೆ ಕಂಡು ಬರುತ್ತದೆ.

ಹಬ್ಬ, ಜಾತ್ರೆ, ಹುಣ್ಣಿಮೆ ಇತ್ಯಾದಿ ದಿನಗಳಲ್ಲಿ ಬೇಟೆಗೆ ಹೋಗುವಂತೆ, ಸಾವಿನ ಸಂದರ್ಭದಲ್ಲಿಯೂ ಬೇಟೆಗೆ ಹೋಗುವುದು ಕರ್ನಾಟಕದ ಹಲವಾರು ಕಡೆ ಕಂಡುಬರುತ್ತದೆ. ಮಲೆನಾಡಿನ ಕೆಲವು ಜನವರ್ಗಗಳಲ್ಲಿ ಸತ್ತವನ ತಿಥಿ, ವೈಕುಂಠ ಸಮಾರಾಧನೆಗಳಲ್ಲಿ ಮಾಂಸದ ಅಡುಗೆಯನ್ನು ಎಡೆ ಇಡುತ್ತಾರೆ. ಎಡೆಗೆ ಬೇಕಾದ ಮಾಂಸವನ್ನು ಮಾರುಕಟ್ಟೆಯಿಂದ ಕೊಂಡು ಅಥವಾ ಶಿಕಾರಿಯಿಂದ ಸಂಗ್ರಹಿಸಿ ತರುತ್ತಾರೆ. ಎಡೆಗೆ ಮಾಂಸ, ಕಡಬು, ಅನ್ನ, ಸಾರು ಹಾಗೂ ಸತ್ತ ವ್ಯಕ್ತಿ ಅಸೆ ಪಡುವ ಇತರೆ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. “ಊಟಕ್ಕೆ ಕಡಬು, ಮಾಂಸ, ಶಿಕಾರಿ ಮಾಡಿದ್ದರೆ ಕಾಡು ಪ್ರಾಣಿ ಮಾಂಸ, ಅನ್ನ, ಸಾರು, ಮಜ್ಜಿಗೆ, ಬಾರಿ ಊಟ. ಆಗ ಸತ್ತ ತಿಥಿಗಳಿಗೆ ಸಿಹಿ ಅಡಿಗೆ ಮಾಡುತ್ತಿರಲಿಲ್ಲ” (ಕೆ.ಎಸ್. ರಾಮಪ್ಪಗೌಡ ೧೯೯೮ – ೧೫೮). ಮಣೆಯ ಮೆಲಿರುವ ಕಳಸದ ಹತ್ತಿರವಿರುವ ಎರಡು ಹಣತೆಗಳನ್ನು ಒಂದಕ್ಕೊಂದು ಸೇರಿಸುತ್ತಾರೆ. ಆಗ ಸತ್ತವನು ಪಿತೃಗಳ ಜೊತೆಗೆ ಸೇರಿದನೆಂದು ತಿಳಿಯುತ್ತಾರೆ. ಈ ಸಮಾರಾಧನೆಗೆ ಸತ್ತವರ ಹತ್ತಿರದ ಬಂಧುಗಳು ಹಾಗೂ ಪರಿಚಿತ ವ್ಯಕ್ತಿಗಳು ಭಾಗವಹಿಸುತ್ತಾರೆ. ಸತ್ತ ವ್ಯಕ್ತಿಯ ನಾಮಬಲಕ್ಕೆ ಬೇಟೆ ವಶಪಡಿಸಿಕೊಳ್ಳುವ ಶಕ್ತಿ ಇದ್ದರೆ ಬೇಟೆಯಾಗುವುದೆಂದು, ಇಲ್ಲದಿದ್ದರೆ ಇಲ್ಲವೆಂದು ನಂಬುತ್ತಾರೆ. ಹೀಗೆ ಬೇಟೆಯು ಆ ಸಂಸ್ಕೃತಿಯವರಲ್ಲಿ ಬೆಸೆದುಕೊಂಡಿರುತ್ತದೆ. ಸಮಾರಾಧನೆಯ ಹಿಂದಿನ ದಿನದ ಬೆಳಗ್ಗೆ ಅಥವಾ ಅದರ ಹಿಂದಿನ ರಾತ್ರಿ ಬೇಟೆಗಾರನೊಬ್ಬ ಊರಿನ ಬೇಟೆಗಾರರಿಗೆಲ್ಲ ಬೇಟೆಯ ಕರೆಯನ್ನು ನೀಡುತ್ತಾನೆ. ಆ ದಿನದ ಬೇಟೆಯ ಸ್ಪಷ್ಟ ಉದ್ದೇಶವನ್ನು ಬೇಟೆಗಾರರಿಗೆ ತಿಳಿಸುತ್ತಾನೆ. ಸತ್ತ ವ್ಯಕ್ತಿಯ ನಾಮಬಲದ ಮೇಲೆ ಬೇಟೆಗೆ ಹೊರಡುತ್ತಾರೆ. ಆ ದಿನವೆಲ್ಲಾ ಕಾಡನ್ನು ಬೇಟೆಗೆ ಕಟ್ಟಿ ಬೇಟೆಯಾಡುತ್ತಾರೆ. ಅಂದಿನ ಬೇಟೆಯಲ್ಲಿ ದೊರೆತ ಪ್ರಾಣಿಯನ್ನು ಸತ್ತ ವ್ಯಕ್ತಿಯ ಮನೆಯವರಿಗೆ ಕೊಡುತ್ತಾರೆ.

ದಕ್ಷಿಣ ಕರ್ನಾಟಕದ ಕೆಲವು ಭಾಗಗಳ ಜನವರ್ಗಗಳಲ್ಲಿ ಧನುರ್ಮಾಸದಲ್ಲಿ ಬೇಟೆಗೆ ಹೋಗುವ ಆಚರಣೆ ಇಂದಿಗೂ ಕಂಡುಬರುತ್ತದೆ. ಹಳೆಯ ವರ್ಷದ ಕೊನೆ ಹಾಗೂ ಹೊಸ ವರ್ಷದ ಮೊದಲು ಅಂದರೆ ಡಿಸೆಂಬರ್ ೧೫ರಿಂದ ಜನವರಿ ೧೫ರ ವೇಳೆಗೆ. ಅದರಲ್ಲೂ ಗುರುವಾರಗಳಲ್ಲಿ ಮಾತ್ರ ಸಾಮೂಹಿಕ ಬೇಟೆ ನಡೆಯುತ್ತದೆ. ಬೇಟೆಗೆ ಹೋಗುವ ದಿನವನ್ನು ಊರ ಹಿರಿಯರೊಡನೆ ಚರ್ಚಿಸಿ ತೀರ್ಮಾನಿಸಿಕೊಳ್ಳುತ್ತಾರೆ. ಹಿರಿಯರ ಮಾರ್ಗದರ್ಶನದಂತೆ ಬೇಟೆಯ ಹಿಂದಿನ ರಾತ್ರಿ ಊರ ಮುಂದಿನ ಗುಡಿಯ ಎದುರು ಸ್ವಲ್ಪ ಹೊತ್ತು ಊರಿನ ತಲವಾರ ತಮಟೆ ಬಡಿಯುತ್ತಾನೆ. ಹಾಗೆಯೇ ಬೇಟೆಗೆ ಹೋಗುವ ಬೆಳಿಗ್ಗೆ ಎಲ್ಲರೂ ಬೇಟೆಗೆ ಬರಬೇಕೆಂದು ತಮಟೆ ಬಡಿದು ಸಾರುತ್ತಾನೆ. ಬೇಟೆಗಾರರೆಲ್ಲ ಬೇಟೆಯ ಆಯುಧಗಳಿಂದ ಸಿದ್ಧರಾಗಿ ಗುಡಿಯ ಎದುರು ಸೇರುತ್ತಾರೆ. ಗುಡಿಯ ಎದುರು ಗುಂಪಾಗಿ ನಿಂತು ಆಯುಧಗಳನ್ನು ಎತ್ತಿ ಎಲ್ಲರೂ ತಮ್ಮ ಇಷ್ಟ ದೇವರುಗಳನ್ನು ಹೇಳಿಕೊಂಡು ಒಕ್ಕೊರಲಿನಿಂದ ಕೂಗು ಹಾಕುತ್ತಾರೆ. ಕೊಡಗಿನ ಕಡೆ ಬೇಟೆಗೆ ಹೋಗುವ ಮುನ್ನ ಎಲ್ಲರೂ ತಮ್ಮ ಇಷ್ಟ ದೈವವನ್ನು ಪ್ರಾರ್ಥಿಸಿಕೊಳ್ಳುವ ಪದ್ಧತಿ ಇದೆ. ನಂತರ ಗುಡಿಯ ಪೂಜಾರಿಯಿಂದ ಮಂಗಳಾರತಿ ಮತ್ತು ತೀರ್ಥವನ್ನು ಪಡೆಯುತ್ತಾರೆ. ತಂಡದ ನಾಯಕನಿಗೆ ಪೂಜಾರಿಯು ದೇವರ ಕೊರಳ ಹೂವಿನ ಹಾರವೊಂದನ್ನು ಹಾಕುತ್ತಾನೆ.

ಗುಡಿಯಿಂದ ಬೇಟೆಗಾರರ ತಂಡವು ವಾದ್ಯಗಾರರ ಸಮೇತ ಬೇಟೆನಾಯಿಗಳ ಜೊತೆಗೆ ಮುಖಂಡನ ಮುಂದಾಳುತನದಲ್ಲಿ ಊರಿನ ಪೂರ್ವ ದಿಕ್ಕಿನ ಹೆಬ್ಬಾಗಿಲಿನಿಂದ ಕಾಡಿನ ಕಡೆಗೆ ನಡೆಯುತ್ತಾರೆ. ಈ ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲಾ ಬೇಟೆಗಾರರು ಬೇಟೆಯ ಹೊಸ ಉಡುಗೆ ತೊಡುಗೆಗಳನ್ನು ತೊಟ್ಟಿರುತ್ತಾರೆ. ಕೆಲ ಬೇಟೆಗಾರರು ಬಲೆ ಹಾಕಿ ಪ್ರಾಣಿಗಳನ್ನು ಹಿಡಿದರೆ ಮತ್ತೆ ಕೆಲವರು ಬಡಿಗೆಯಿಂದ ಹೊಡೆದು ಕೊಲ್ಲುತ್ತಾರೆ. ಬೇಟೆಯಲ್ಲಿ ದೊರೆತ ಪ್ರಾಣಿಗಳನ್ನು ಹೊತ್ತು ನಾಲ್ಕು ದಿಕ್ಕುಗಳಿಗೂ ಕೇಳಿಸುವಂತೆ ಕೇಕೆ ಹಾಕುತ್ತಾ ಊರ ಕಡೆಗೆ ಬರುತ್ತಾರೆ. ಬೆಳಿಗ್ಗೆ ಹೊರಟ ಪೂರ್ವದಿಕ್ಕಿನ ಹೆಬ್ಬಾಗಿಲಿನ ಮೂಲಕವೇ ಊರನ್ನು ಪ್ರವೇಶಿಸುತ್ತಾರೆ. ಗುಡಿಯ ಮುಂದೆ ಎಲ್ಲರೂ ಕೇಕೆ ಹಾಕಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ.

ಈ ರೀತಿಯ ಸಾಂಪ್ರದಾಯಿಕ ಬೇಟೆಯಲ್ಲಿ ಹೊಗೆಬೇಟೆ, ಕೋಲು ಬೇಟೆ, ದೊಡ್ಡ ಬೇಟೆ ಎಂಬ ಮೂರು ವಿಧಗಳಿವೆ. ಅವು ಮೂರು ವಾರಗಳಲ್ಲಿ ನಡೆಯುತ್ತವೆ. ಮೊದಲ ಎರಡೂ ಬೇಟೆಯ ಆಚರಣೆಗಳು ಚಿಕ್ಕವಾಗಿರುತ್ತವೆ. ಮೂರನೆಯದು ಅತಿ ದೊಡ್ಡದು ಹಾಗೂ ಹೆಚ್ಚು ಜನರು ಭಾಗವಹಿಸುವ ಆಚರಣೆಯಾಗಿದೆ. ಹೊಗೆ ಬೇಟೆಯಲ್ಲಿ ಮಾಂತ್ರಿಕಾ ಚರಣೆಯ ವಿಧಿ ವಿಧಾನಗಳು ಹೆಚ್ಚಾಗಿ ಕಂಡುಬರುತ್ತವೆ. ಬೇಟೆಗಾರರು ಊರಿನ ಪೂರ್ವ ಬಾಗಿಲಿನಿಂದ ಹೊರಟು ಕಾಡಿನ ಬಯಲು ಪ್ರದೇಶದಲ್ಲಿ ಹುತ್ತ ಒಂದರ ಮೇಲೆ ತಮ್ಮ ಆಯುಧಗಳನ್ನೆಲ್ಲಾ ಓರಣವಾಗಿಡುತ್ತಾರೆ. ಒಂದು ಜಾತಿಯ ಕಾಡಿನ ಹುಲ್ಲು ಹಾಗೂ ಮೊಲದ ಪಿಚಿಕೆಗಳಿಗೆ ಬೆಂಕಿ ಅದರ ಹೊಗೆಯಿಂದ ಆಯುಧಗಳಿಗೆ ಧೂಪ ಹಾಕುತ್ತಾರೆ. ನಂತರ ಬೇಟೆಯಾಡುತ್ತಾರೆ. ಇದರಲ್ಲಿ ಮುಖ್ಯವಾಗಿ ಆಯುಧಗಳಿಗೆ ಮಾಂತ್ರಿಕ ಶಕ್ತಿಯನ್ನು ತುಂಬುವಂಥದ್ದು ಕಂಡುಬರುತ್ತದೆ. ಕೋಲುಬೇಟೆಯು ಎರಡನೆಯ ಆಚರಣೆಯಾಗಿದ್ದು ಆ ಸಂದರ್ಭದಲ್ಲಿ ಊರಿನಿಂದ ಕಾಡಿಗೆ ಹೋಗುವ ದಾರಿಯಲ್ಲಿ ಸಿಗುವ ಗುಡಿಗಳಿಗೆ ಪೂಜಿಸಿ ನಂತರ ಬೇಟೆಯನ್ನು ದಕ್ಕಿಸಿಕೊಳ್ಳುವಂಥದ್ದು. ಬೇಟೆಯಿಂದ ದೊರೆತ ಪ್ರಾಣಿಗಳನ್ನು ಮೆರವಣಿಗೆಯ ಮೂಲಕ ಹೊತ್ತು ಊರಿನ ಪೂರ್ವ ದಿಕ್ಕಿನ ಹೆಬ್ಬಾಗಿಲಿನಿಂದ ಊರನ್ನು ಪ್ರವೇಶಿಸುತ್ತಾರೆ. ಗುಡಿಯ ಮುಂದೆ ಎಲ್ಲರೂ ಸೇರಿ ಕೇಕೆ ಹಾಕಿ ನಂತರ ಅವರವರ ಮನೆಯನ್ನು ಸೇರುತ್ತಾರೆ.

ಮೂರನೆಯ ಆಚರಣೆಯಾದ ದೊಡ್ಡ ಬೇಟೆಯು ಹಲವಾರು ಬೇಟೆಗಾರರನ್ನು, ಬೇಟೆನಾಯಿಗಳನ್ನು, ವಾದ್ಯಗಾರರನ್ನು, ಸೋವುಗಾರರನ್ನು, ಬಿಲ್ಲುಗಾರರನ್ನು ಒಳಗೊಂಡಿರುತ್ತದೆ. ದೊಡ್ಡ ಪ್ರಮಾಣದ ಇದು ಹೆಸರಿಗೆ ತಕ್ಕಂತೆ ಹೆಚ್ಚು ಜನಾಕರ್ಷಣೀಯವಾಗಿದ್ದು, ಇದರಲ್ಲಿ ಅನೇಕ ಊರಿನ ಬೇಟೆಗಾರರ ತಂಡಗಳು ಭಾಗವಹಿಸಿರುತ್ತವೆ. ಬೇಟೆಗೆ ಹೊರಡುವ ದಿನ ಹಿಚುಕಿದ ಅವರೇ ಬೇಳೆಯ ವಿಶೇಷ ಸಾರಿನ ಅಡಿಗೆ ಮಾಡಿ, ಊಟ ಮಾಡಿಕೊಂಡು ಹೊರಡುತ್ತಾರೆ. ಅಂದಿನ ದಿನ ಎತ್ತೋ ದೇವರನ್ನು (ಬೇಟೆರಂಗ) ಇಟ್ಟು ಪೂಜಿಸುತ್ತಾರೆ. ರಾಮನು ಬೇಟೆಯ ಆರಾಧ್ಯ ದೈವವೆಂದು ಅವರು ನಂಬುತ್ತಾರೆ. ಬೇರೆ ಬೇರೆ ಊರುಗಳಿಂದ ಹೊರಟ ಬೇಟೆಗಾರರು ಇಡೀ ದಿನವೆಲ್ಲವೂ ಗುಂಪು ಗುಂಪಾಗಿಯೇ ಬೇಟೆಯಾಡುತ್ತಾರೆ. ಅವರೆಲ್ಲರು ಒಂದು ನಿರ್ದಿಷ್ಟ ಗುಡಿಯ ಮುಂದೆ ಬಂದು ಸೇರುತ್ತಾರೆ. ಪ್ರತಿ ತಂಡದಲ್ಲೂ ವಾದ್ಯಗಾರರು ವಾದ್ಯ ನುಡಿಸುತ್ತಿರುತ್ತಾರೆ. ಗುಡಿಯ ಪೂಜಾರಿಯು ಪ್ರತಿ ತಂಡದ ಮುಖ್ಯಸ್ಥರಿಗೂ ಹೂವಿನ ಹಾರ ಹಾಕಿ ಗೌರವಿಸುತ್ತಾನೆ. ಆ ತಕ್ಷಣ ಆ ತಂಡದವರು ಅಂದು ಬೇಟೆಯಾಡಿದ ಪ್ರಾಣಿಗಳನ್ನು ಮೇಲಕ್ಕೆತ್ತಿ ಪ್ರದರ್ಶಿಸುತ್ತಾ ತಮ್ಮ ವಾದ್ಯಗಾರರೊಂದಿಗೆ ಕೋಲಾಹಲದಿಂದ ಕೇಕೆ ಹಾಕುತ್ತಾ ಗುಡಿಯನ್ನು ಸುತ್ತಿ ತೀರ್ಥ ಹಾಕಿಸಿಕೊಂಡು ತಮ್ಮೂರಿಗೆ ತೆರಳುತ್ತಾರೆ. ಹೀಗೆ ಪ್ರತಿ ತಂಡದವರು ಕೂಡ ಮಾಡುತ್ತಾರೆ.

ಬೇಟೆಗೆ ಉಪಯೋಗಿಸುವ ರಾಮಡೋಲು, ತಮಟೆ, ಬರ್ಜಿ, ಚಂದ್ರಾಯುಧ, ಗಂಡುಗೊಡಲಿ, ಬಲೆ ಇತ್ಯಾದಿಗಳು ಸಾಂಪ್ರದಾಯಿಕ ಆಯುಧಗಳಾಗಿವೆ. ಹೊರನೋಟಕ್ಕೆ ಇವು ಸರಳವಾಗಿ ಕಂಡರೂ ಬಳಕೆಯಲ್ಲಿ ಬಲಶಾಲಿ ಹಾಗೂ ಹೆಚ್ಚು ಪ್ರಯೋಜನಕಾರಿಯಾಗಿವೆ. ಇಲ್ಲಿ ಬಳಸುವ ವಾದ್ಯಗಳು ಒಂದು ಹಬ್ಬದ ವಾತಾವರಣವನ್ನು ಉಂಟು ಮಾಡುತ್ತವೆ. ತಮಟೆಯ ಜೊತೆಗೆ ದೊಡ್ಡ ಗಾತ್ರದ ರಾಮಡೋಲು, ಪಾಚೆ, ಮ್ಯಾಳ, ಹಾಗೂ ಕೊಂಬುಗಳು ಗಿಡಗಂಟೆಯಲ್ಲಿ ಅಡಗಿರುವ ಪ್ರಾಣಿಗಳನ್ನು ಎಬ್ಬಿಸಲು ಅನುಕೂಲಕರವಾಗಿವೆ. ಇಂಥ ಉಲ್ಲೇಖಗಳು ಪ್ರಾಚೀನ ಕಾವ್ಯಗಳಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಮಲೆನಾಡಿನಲ್ಲಿ ಈ ಕೆಲಸಕ್ಕಾಗಿಯೇ ಕೆಲವರನ್ನು ನಿಯೋಜಿಸಿರುವುದು ಕಂಡುಬರುತ್ತದೆ. ಮೊಲದ ಪಿಚಿಕೆಗೆ ಹೊಗೆ ಹಾಕಿ ಆಯುಧಗಳಿಗೆ ಧೂಪ ಹಾಕುವ ಪ್ರಕ್ರಿಯೆಯಲ್ಲಿ ಸಮೃದ್ಧ ಬೇಟೆಯ ಆಶಯದಿಂದ ಆದಿಮಾನವ ನಡೆಸುತ್ತಿದ್ದ ಮಾಟಕ್ಕೆ ಸಂಬಂಧಿಸಿದ ನಂಬಿಕೆಯ ಪಳೆಯುಳಿಕೆ ಅಂತರ್ಗತವಾಗಿರುವಂತೆ ಕಂಡುಬರುತ್ತದೆ. ಈಗಲೂ ದುಷ್ಟ ಮಾಟದಲ್ಲಿ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಯಾವುದಾದರೂ ವಸ್ತುವನ್ನು ಬಳಸಿ ಮಾಟ ಮಾಡಿದರೆ ಆ ವ್ಯಕ್ತಿಗೆ ಕೇಡಾಗುತ್ತದೆ ಅಥವಾ ಮಾಟಗಾರನ ನಿರ್ದೇಶನದಂತೆ ವರ್ತಿಸುತ್ತಾನೆ ಎಂಬ ನಂಬಿಕೆಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಬೇಟೆಯ ಆಚರಣೆಯಲ್ಲಿ ಆದಿಮತೆಯ ಆಯಾಮ ಇರುವುದು ಕಂಡುಬರುತ್ತದೆ. ಬೇಟೆಯ ಮೂರು ಆಚರಣೆಯಲ್ಲಿ ತೆಂಕಣಬೇಟೆ ಎಂಬ ಇನ್ನೊಂದು ಬೇಟೆಯು ರೂಢಿಯಲ್ಲಿದೆ. ದೊಡ್ಡ ಬೇಟೆಗೆ ಮೊದಲು ಒಂದು ದಿನ ಬೇಟೆಗೆ ಹೊರಟು ದೂರದ ಇನ್ನೊಂದು ಊರಿನ ಸರಹದ್ದಿಗೆ ಹೋಗಿ ಅಲ್ಲಿ ರಾತ್ರಿ ತಂಗಿ ಪ್ರಾಣಿಗಳನ್ನು ದಕ್ಕಿಸಿಕೊಂಡು ಮತ್ತೆ ಬೇಟೆಯಾಡುತ್ತಲೇ ಊರಿಗೆ ಹಿಂದಿರುಗುವಂತಹುದು ಒಂದು ಪದ್ಧತಿ. ಈ ಬೇಟೆಯ ಪದ್ಧತಿ ಈಗಿನ ದಿನದಲ್ಲಿ ಕಡಿಮೆಯಾಗಿದೆ. ಈ ಬೇಟೆಯ ಆಚರಣೆಗಳಲ್ಲಿ ಒಂದು ಬುಡಕಟ್ಟಿನ ಜನರು ಇನ್ನೊಂದು ಬುಡಕಟ್ಟಿನ ನೆಲೆಯನ್ನು ಆಕ್ರಮಿಸಿದ ದಿಗ್ವಿಜಯದ ಸಂಕೇತವಾಗಿಯೂ ಕಂಡುಬರುತ್ತದೆ.

ಪ್ರಾಚೀನ ಕಾಲದಲ್ಲಿ ಮಾನವನಿಗೆ ಅನಿವಾರ್ಯವಾಗಿದ್ದ ಬೇಟೆ ನಂತರದ ದಿನಗಳಲ್ಲಿ ಆತನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಯಿತು. ಐವತ್ತು ಅರವತ್ತು ವರ್ಷಗಳ ಹಿಂದೆ ಬೇಟೆಗೆ ಬಹಳ ಪ್ರಾಧ್ಯಾನತೆ ಇತ್ತು. ಬೇಟೆಗಾರನಿಗೆ ವಿಶೇಷ ಗೌರವ ಪ್ರಶಸ್ತಿಗಳು ದೊರೆಯುತ್ತಿದ್ದವು. ಅದರಲ್ಲೂ ಹುಲಿಗಳನ್ನು ಬೇಟೆಯಾಡಿದ ಬೇಟೆಗಾರನಿಗೆ ‘ಹುಲಿ ಮದುವೆ’ ಮಾಡಿಸಿ ಗೌರವಿಸಲಾಗುತ್ತಿತ್ತು. ಅಂದು ಅದು ಅನಿವಾರ್ಯವಾಗಿತ್ತು. ಇಂದಿನ ದಿನಗಳಲ್ಲಿ ಕಾಡು ಕಡಿಮೆಯಾಗಿದೆ. ಊರು ವಿಸ್ತರಿಸಿ ಜನಸಂಖ್ಯೆ ಹೆಚ್ಚಿದೆ. ಇರುವ ಕಾಡಿನಲ್ಲಿಯೇ ಬೇಟೆಯು ಸಾಗಿದೆ. ಆದರೆ ಅದು ಸಂಸ್ಕೃತಿಯಿಂದ ಹೊರಬಂದು ವ್ಯಾಪಾರಿ ವೃತ್ತಿಯಾಗಿದೆ. ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಆನೆಯಿಂದ ಹಿಡಿದು ಹಾವು ಉಡಗಳವರೆಗೆ ಅವ್ಯಾಹತವಾಗಿ ಬೇಟೆ ನಡೆದು ಪ್ರಾಣಿಗಳನ್ನು ಚಿತ್ರ ಪಟದಲ್ಲಿ ನೋಡುವಂತಾಗಿದೆ. ಸಂಸ್ಕೃತಿಯಿಂದ ವಿಕೃತಿಯತ್ತ ಚಲಿಸಿದ ಬೇಟೆ ಮನುಷ್ಯ ತನ್ನನ್ನು ತಾನು ಕೊಂದುಕೊಳ್ಳುವ ಮಾರ್ಗವೇ ಸರಿ. ಇಂದಿನ ದಿನಗಳಲ್ಲಿ ಬೇಟೆ, ಬೆಳೆ ರಕ್ಷಣೆ, ಆಹಾರ, ಆತ್ಮ ರಕ್ಷಣೆ ಹಾಗೂ ವೈದ್ಯಕೀಯ ಉದ್ದೇಶಕ್ಕಾಗಿ ಅಲ್ಲಲ್ಲಿ ನಡೆಯುತ್ತಿದೆ. ಕೆಲವು ಭಾಗಗಳಲ್ಲಿ ಆಚರಣೆಯ ಹಿನ್ನಲೆಯಲ್ಲಿ ಪ್ರಾಣಿಗಳನ್ನು ಕಗ್ಗೊಲೆ ಮಾಡಲಾಗುತ್ತದೆ. ಈ ಬಗೆಗೆ ಪರಿಸರ ಪ್ರೇಮಿಗಳು, ಸರಕಾರ ಹಾಗೂ ಪ್ರಾಜ್ಞ ಜನ ಗಮನಿಸಿ ಬೇಟೆಯನ್ನು ತಡೆಯಬೇಕು. ಪರಿಸರವನ್ನು ಉಳಿಸಿಕೊಳ್ಳಬೇಕು.

ಆಚರಣೆ, ಔಷಧಿ, ನಂಬಿಕೆ, ರಕ್ಷಣೆ ಇತ್ಯಾದಿ ಕಾರಣಕ್ಕಾಗಿ ನಡೆಯುತ್ತಿರುವ ಬೇಟೆಯು ನಮ್ಮ ನಡುವೆ ಇನ್ನೂ ಜೀವಂತವಾಗಿದೆ. ಬೇಟೆ ಹೀಗೆ ಮುಂದುವರಿಯುತ್ತಾ ಹೋದರೆ ನಂತರದ ದಿನಗಳಲ್ಲಿ ಮನುಷ್ಯನ ಬದುಕು ದುಸ್ತರವಾಗುತ್ತದೆ. ಬೇಟೆಯಿಂದ ಜೈವಿಕ ಆಹಾರ ಸರಪಳಿ ತಪ್ಪಿ ಅಸಮತೋಲನವಾಗುತ್ತದೆ. ಒಂದು ಪ್ರಾಣಿ ಅಥವಾ ಪಕ್ಷಿ ಒಂದನ್ನು ತಿಂದು, ಇನ್ನೊಂದು ಬದುಕುತ್ತದೆ. ಇದು ಒಂದು ಪ್ರಕೃತಿ ನಿಯಮದಡಿ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ಮನುಷ್ಯ ಪ್ರಕೃತಿ ನಿಯಮದ ವಿರುದ್ಧ ಬೇಟೆಯಾಡುತ್ತಾನೆ. ಯಾವ ಪ್ರಾಣಿ, ಪಕ್ಷಿ ಇತ್ಯಾದಿಗಳು ಹೆಚ್ಚು ಲಾಭ ತರುತ್ತವೆಯೋ ಅವುಗಳನ್ನು ಅವ್ಯಾಹತವಾಗಿ ಕೊಲ್ಲುತ್ತಿರುತ್ತಾನೆ. ಹೀಗಾಗುವುದರಿಂದ ಜೈವಿಕ ಆಹಾರ ಕ್ರಮದ ಸಮತೋಲನ ತಪ್ಪಿ ಇನ್ನೊಂದು ಕೀತದ, ಕ್ಷುದ್ರ ಪ್ರಾಣಿಯು ಸಂಖ್ಯೆ ಹೆಚ್ಚುತ್ತದೆ. ಉದಾಹರಣೆಗೆ ಹಾವನ್ನು ಕೊಲ್ಲುವುದರಿಂದ ಇಲಿಗಳ ಸಂಖ್ಯೆ ಹೆಚ್ಚುತ್ತದೆ. ಪಕ್ಷಿಗಳನ್ನು ಕೊಲ್ಲುವುದರಿಂದ ವಿವಿಧ ಜಾತಿಯ ಕೀಟಗಳ ಸಂಖ್ಯೆ ವಿಪರೀತವಾಗುತ್ತದೆ. ಬೆಳೆದ ಬೆಳೆ, ಆಹಾರ ಪದಾರ್ಥ ಇತ್ಯಾದಿಗಳನ್ನೆಲ್ಲಾ ಅವು ಕಬಳಿಸಿ ನಾಶ ಮಾಡುತ್ತದೆ. ಇದರಿಂದಾಗಿ ಆಹಾರ ಸಮಸ್ಯೆ ಇಡೀ ಮನುಕುಲವನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಇದೊಂದು ಉದಾಹರಣೆಯಷ್ಟೇ. ಇಂಥಹ ನೂರಾರು ಸಮಸ್ಯೆಯನ್ನು ಬೇಟೆ ಸೃಷ್ಟಿಸುತ್ತದೆ. ಮಾರಕ ರೋಗ ತರುವ ಸಾವಿರಾರು ಕ್ರಿಮಿ ಕೀಟಗಳಿಂದಾಗಿ ಮುಂದಿನ ದಿನಗಳು ಮನುಷ್ಯನ ಬದುಕಿಗೆ ಮಾರಕವಾಗುತ್ತದೆ.

ಬೇಟೆಯಿಂದಾಗಿ ಈಗಾಗಲೇ ಹುಲಿ, ಸಿಂಹ, ಚಿರತೆ ಇತ್ಯಾದಿಗಳನ್ನು ಚಿತ್ರಪಟದಲ್ಲಿ ನೋಡುವಂತಾಗಿದೆ. ಮುಂದಿನ ದಿನಗಳಲ್ಲಿ ಬೇಟೆಯು ಮನುಕುಲಕ್ಕೆ ಮಾರಕವಾಗುವುದರಲ್ಲಿ ಸಂದೇಹವಿಲ್ಲ. ಈಗಿನ ದಿನಗಳಲ್ಲಿ ನಾವೆಲ್ಲ ಹುಲಿ, ಸಿಂಹ, ಚಿರತೆ, ಗುಬ್ಬಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ಕಾಡಿನಲ್ಲಿ ಅಲ್ಲದಿದ್ದರೂ ಸಂಗ್ರಹಾಲಯದಲ್ಲಿರಲಿ ಚಿತ್ರ ಪಟದಲ್ಲಿ ನೋಡಲು ಸಾಧ್ಯವಾಗದು. ಅಂದರೆ ಕಲಾವಿದನಿಗೂ ನೋಡಲೂ ಪ್ರಾಣಿಗಳು ಇಲ್ಲವಾಗುತ್ತವೆ.