ಮಾನವನು ಎಲ್ಲ ಜೀವಿಗಳಿಗಿಂತ ಶ್ರೇಷ್ಠನೆನೆಸಿಕೊಳ್ಳಲು ಮುಖ್ಯ ಕಾರಣವೆಂದರೆ ಅವನಲ್ಲಿರುವ ಅಗಾಧ ಬುದ್ಧಿಶಕ್ತಿ ಹಾಗೂ ವಿಚಾರಧಾರೆಯಾಗಿದೆ. ‘ನಹಿ ಜ್ಞಾನೇನ ಸದೃಶಂ’ ಎಂಬ ಉಕ್ತಿಯಂತೆ ಜ್ಞಾನಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ. ಅವನ ಅನ್ವೇಷಣಾ ಜ್ಞಾನ, ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವ, ಅನಾಗರಿಕ ಸ್ಥಿತಿಯಿಂದ ನಾಗರಿಕ ಸ್ಥಿತಿಗೆ ತಲುಪಿರುವುದು. ಈ ಎಲ್ಲವುಗಳಿಗೆ ಮಾನವನಿಗೆ ದೊರೆತ ಶಿಕ್ಷಣವೇ ಕಾರಣವಾಗಿದೆ. ಶಿಕ್ಷಣದ ಸಹಾಯದಿಂದ ಮಾನವನಿಗೆ ಓದು-ಬರಹ-ಮಾತು ಮುಂತಾದ ಸಂವಹನಾ ಕೌಶಲ್ಯಗಳು ರೂಢಿಯಾದುವಷ್ಟೇ ಅಲ್ಲದೆ ಸಮಾಜದ ಆಗು ಹೋಗುಗಳು, ದೇಶ-ವಿದೇಶಗಳಲ್ಲಿನ ಪ್ರಗತಿಯ ಜ್ಞಾನ ಹಾಗೂ ರಾಷ್ಟ್ರೀಯ ಪ್ರಜ್ಞೆಗಳು ಆತನಲ್ಲಿ ಬೆಳೆದವು. ಶಿಕ್ಷಣವು ವ್ಯಕ್ತಿಯಲ್ಲಿ ಅಡಗಿರುವ ಸಾಮರ್ಥ್ಯಗಳನ್ನು ಹೊರತೆಗೆಯುವುದಾಗಿದೆ. ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಮಹಾಶಕ್ತಿಗಳಲ್ಲಿ ಒಂದಾಗಿದೆ. ಮಾನವನ ಚಟುವಟಿಕೆಗಳಲ್ಲಿ ಶಿಕ್ಷಣಕ್ಕೆ ಮಹತ್ವದ ಸ್ಥಾನವಿದೆ ಮತ್ತು ವಿಶೇಷವಾದ ಪ್ರಾಧಾನ್ಯತೆಯಿದೆ. ಮಾನವನ ವ್ಯಕ್ತಿತ್ವವು ರೂಪುಗೊಳ್ಳುವ ಅವಧಿಯಲ್ಲಿ ಶಿಕ್ಷಣವು ಹೆಚ್ಚು ಪ್ರಭಾವವನ್ನು ಬೀರುತ್ತದೆ. ಶಿಕ್ಷಣವು ಮಾನವನ ಮನೋವ್ಯಾಪಾರಕ್ಕೆ, ಊಹಾಶಕ್ತಿಗೆ ಮತ್ತು ತಾರ್ಕಿಕತೆಗೆ ನೂತನ ರೂಪವನ್ನು ಕೊಡುತ್ತದೆ. ಪ್ರಜ್ಞಾವಂತ ಮಾನವನ ಉಗಮವು ಪ್ರಕೃತಿದತ್ತವಷ್ಟೇ ಆಗಿರದೆ ಅದು ಶಿಕ್ಷಣದ ನಿರಂತರ ಪ್ರಯೋಗಗಳ ಫಲಿತಾಂಶವೂ ಆಗಿದೆ. ನಿಸರ್ಗದತ್ತವಾದ ಈ ಪ್ರಜ್ಞೆಯನ್ನು ಅನುಭವದ ಮತ್ತು ಅವಶ್ಯಕತೆಗಳ ಸಾಧನದಿಂದ ಸೂಕ್ತ ರೀತಿಯಾಗಿ ನಿಯಂತ್ರಿಸುವ ಶಕ್ತಿಯೆಂದು ನಾವು ಶಿಕ್ಷಣವನ್ನು ವ್ಯಾಖ್ಯಾನಿಸಬಹುದಾಗಿದೆ.

ನಾಗರಿಕತೆಯ ಆದಿಯಿಂದಲೂ ಶಿಕ್ಷಣವು ಮಾನವನ ಜೊತೆಯಲ್ಲಿಯೇ ಪ್ರಗತಿ ಹೊಂದುತ್ತಿರುವುದು ಕಂಡು ಬರುತ್ತದೆ. ಅನಾದಿಕಾಲದಿಂದಲೂ ಶಿಕ್ಷಣವು ಮಹತ್ವವನ್ನು ಪಡೆದುಕೊಂಡು ಬಂದಿದೆ. “ಸತ್ತವರಿಗಿಂತಲೂ ಬದುಕಿರುವವರು ಹೇಗೆ ಶ್ರೇಷ್ಠರೋ ಹಾಗೆಯೇ ಶಿಕ್ಷಕರು ಅಶಿಕ್ಷಿತರಿಗಿಂತ ಶ್ರೇಷ್ಠರಾಗಿದ್ದಾರೆ” ಎಂಧು ಅರಿಸ್ಟಾಟಲ್‌ ಹೇಳಿದ್ದಾನೆ. “ಶಿಕ್ಷಣವು ಯುವಕರ ಮನೋಕ್ಲೇಶ ನಿವಾರಕ. ವಯಸ್ಕರಿಗೆ ಸಂತೈಕೆಯ ದಿವ್ಯೌಷಧ, ಬಡವರಿಗೆ ಭಾಗ್ಯದಾಯಕ ಮತ್ತು ಶ್ರೀಮಂತರಿಗೆ ಅಲಂಕಾರಪ್ರಾಯವಾದುದಾಗಿದೆ” ಎಂದು ಡಯೋಗಿನಿಸ್ಟನು ಅಭಿಪ್ರಾಯಪಟ್ಟಿದ್ದಾನೆ. ಅಮೃತಶಿಲೆಯ ದೇವತಾವಿಗ್ರಹವು ದೇವಾಲಯದ ಗರ್ಭಗುಡಿಯಲ್ಲಿ ಅಗತ್ಯವಾಗಿರುವಂತೆ ಆತ್ಮದ ಮೇಲ್ಮೈಗೆ ಶಿಕ್ಷಣವು ಅಗತ್ಯವಾಗಿದೆ. ಶಿಕ್ಷಣವು ಮಾನವನ ಅಂತರಂಗದ ಭಾವನೆಗಳನ್ನು ಬುದ್ಧಿಶಕ್ತಿಯ ಮೂಲಕ ಹೊರಗೆ ಸೆಳೆದು ಅವರನ್ನು ಅತ್ಯುನ್ನತ ಸ್ಥಿತಿಗೆ ಕೊಂಡೊಯ್ಯುವಂಥದ್ದಾಗಿದೆ.

ಶಿಕ್ಷಣವೆಂದರೆ ಕೇವಲ ಬುದ್ಧಿವಂತಿಕೆಯನ್ನು ಗಳಿಸುವುದಾಗಲಿ, ಅಥವಾ ಕೇವಲ ಅನುಭವ ಗಳಿಸುವುದಾಗಲೀ ಆಗಿರದೆ; ಅದು ಮಾನವನ ಅಭ್ಯಾಸ, ವರ್ತನೆ ಮತ್ತು ಚಾತುರ್ಯಗಳನ್ನು ಅಭಿವೃದ್ಧಿಗೊಳಿಸಿ ಮನುಷ್ಯನಿಗೆ ತುಂಬು ಜೀವನ ನಡೆಸಲು ಅವಕಾಶ ಮಾಡಿಕೊಡುವಂಥದ್ದಾಗಿದೆ. ಶಿಕ್ಷಣವು ಮಾನವನ ಸುಪ್ತ ಶಕ್ತಿಗಳ ಸ್ವಾಭಾವಿಕ, ಸಮಗ್ರ ಅಭಿವೃದ್ಧಿ ಎನಿಸಿಕೊಂಡಿದೆ. ಮಕ್ಕಳು ಉತ್ತಮ ನಾಗರಿಕರಾಗಿ ಇತರರೊಡನೆ ಸ್ನೇಹ-ಗೌರವ-ಘನತೆಗಳಿಂದ ವರ್ತಿಸುವಂತೆ ಮಾಡಿ ಅವರಲ್ಲಿ ಔದಾರ್ಯ, ಸಹಾನುಭೂತಿ, ಕರುಣೆ ಮುಂತಾದ ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ಶಿಕ್ಷಣವಾಗಿದೆ. ಆಳವಾದ ಮತ್ತು ವ್ಯಾಪಕವಾದ ಜ್ಞಾನವನ್ನು ಒಳಗೊಂಡಂತೆ ಅಪೇಕ್ಷಿತ ಮಟ್ಟದ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುವ ಪ್ರಕ್ರಿಯೆಗಳ ಸಮೂಹವೇ ಶಿಕ್ಷಣವಾಗಿದೆ. ಆಂತರಿಕವಾಗುವುದನ್ನು ಹೊರಹಾಕಿಸಿ ಬಾಹ್ಯ ಜಗತ್ತಿನ ಸಂಬಂಧ ಪಡೆಯುವಂತೆ ಮಾಡುವುದೇ ಶಿಕ್ಷಣವಾಗಿದೆ. ಸತ್ಯ ಸೌಂದರ್ಯಗಳ, ಸಭ್ಯತೆಯ ಪ್ರಜ್ಞೆಯೇ ಶಿಕ್ಷಣ. ಅಂದರೆ ಮಾನವನಲ್ಲಿ ಸುಪ್ತವಾಗಿರುವ ಸ್ವಾಭಾವಿಕ, ಮಾನಸಿಕ, ಆಧ್ಯಾತ್ಮಿಕ ಮೊದಲಾದ ವಿವಿಧ ಜ್ಞಾನಾಂಶಗಳ ಸಂಶೋಧನೆಯೇ ಶಿಕ್ಷಣವಾಗಿದೆಯೆನ್ನಬಹುದು. ಮಗುವಿನ ಶಿರ-ಉರ-ಕರಗಳ ವಿಕಾಸವಾಗಿ ಮಕ್ಕಳಲ್ಲಿ ಶ್ರದ್ಧೆ, ನ್ಯಾಯ, ವಿವೇಕ, ನಿಗ್ರಹ, ಮೊದಲಾದ ಸದ್ಗುಣಗಳು ನೆಲೆಸುವಂತೆ ಮಾಡುವುದೇ ಶಿಕ್ಷಣವಾಗಿದೆ. ವ್ಯಕ್ತಿಗೆ ಸೂಕ್ತ ಮಾರ್ಗದರ್ಶನ ನೀಡಿ ಕತ್ತಲಿನಿಂದ ಬೆಳಕಿಗೆ ಕರೆತರುವ ಕಾರ್ಯವನ್ನು ಶಿಕ್ಷಣವು ಮಾಡುತ್ತಿದೆ.

ಈ ಮೇಲಿನ ಎಲ್ಲ ಅಂಶಗಳು ಶಿಕ್ಷಣದ ಅರ್ಥವನ್ನು ತಿಳಿಸುತ್ತವೆ. ಇವುಗಳಲ್ಲಿ ಶಿಕ್ಷಣದ ಸಂಕುಚಿತ ಮತ್ತು ವಿಶಾಲಾರ್ಥಗಳೆರಡೂ ಅಡಕವಾಗಿವೆ. ಸಂಕುಚಿತ ಅರ್ಥದಲ್ಲಿ ಶಿಕ್ಷಣವೆಂದರೆ ಮಗುವಿನ ಬಾಲ್ಯಾವಸ್ಥೆಯಿಂಧ ಪ್ರಭುದ್ಧಾವಸ್ಥವರೆಗೆ ಶಾಲೆಯೆಂಬ ವ್ಯವಸ್ಥೆಯಲ್ಲಿ ನೀಡಲಾಗುವ ಶಿಕ್ಷಣ. ಈ ವ್ಯವಸ್ಥೆಯಲ್ಲಿ ಕಲಿಯುವವನಲ್ಲಿಯ ಆಸಕ್ತಿ ಮತ್ತು ಶ್ರದ್ಧೆಗಳನ್ನು ಗಣಿಸಿ ಮಗುವಿಗೆ ಸಾಂಪ್ರದಾಯಿಕ ಶಿಕ್ಷಣ ನೀಡಲಾಗುತ್ತಿದೆ. ಸಾಂಪ್ರದಾಯಿಕವಾಗಿ ಶಿಕ್ಷಣ ನೀಡಲಾಗುವ ವ್ಯವಸ್ಥೆಯಲ್ಲಿ ಕಲಿಕಾರ್ಥಿಗೆ ಇವುಗಳನ್ನು ಉಪಯುಕ್ತ ಮತ್ತು ಅವಶ್ಯವೆಂದು ಪರಿಗಣಿಸಲಾಗಿದೆ. ಈ ಉದ್ದೇಶ ಸಾಧನೆಗಾಗಿ ವಿಶೇಷ ಸಂಸ್ಥೆಯಾದ ಶಾಲೆಯು ಸ್ಥಾಪಿಸಲ್ಪಟ್ಟಿದೆ. ಶಿಕ್ಷಕನು ನೇಮಿಸಲ್ಪಟ್ಟಿದ್ದಾನೆ. ಶಿಕ್ಷಕ, ಕಲಿಕಾರ್ಥಿ ಮತ್ತು ಕಲಿಕೋಪಕರಣಗಳಿರುವ ಶಾಲೆ-ಇಷ್ಟೆಲ್ಲವನ್ನು ಸಂಕುಚಿತಾರ್ಥದ ಶಿಕ್ಷಣವು ಒಳಗೊಂಡಿದೆ. ಈ ಪದ್ಧತಿಯಿಂದ ಮಗುವಿನ ಭಾಗಶಃ ಬೆಳವಣಿಗೆಯಾಗುವುದರಿಂದ ಇದೆಲ್ಲವನ್ನು ಸಂಕುಚಿತಾರ್ಥದ ಶಿಕ್ಷಣವೆನ್ನಲಾಗಿದೆ.

ವಿಶಾಲಾರ್ಥದಲ್ಲಿ ಶಿಕ್ಷಣವೆಂದರೆ ಮಗುವಿನ ಬಾಲ್ಯಾವಸ್ಥೆಯಿಂದ ಪ್ರಭುದ್ಧಾವಸ್ಥೆಗೆ ಬರುವವರೆಗಿನ ಶಿಕ್ಷಣ. ಇದು ಮಗುವಿನ ಹುಟ್ಟಿನಿಂದ ಪ್ರಾರಂಭವಾಗಿ ಚಟ್ಟದಲ್ಲಿ ಕೊನೆಗೊಳ್ಳುತ್ತದೆ. ಈ ಪರಿಕಲ್ಪನೆಯ ಪ್ರಕಾರ ಶಿಕ್ಷಣವೇ ಜೀವನವಾಗಿದೆ, ಜೀವನವೇ ಶಿಕ್ಷಣವಾಗಿದೆ.

ಪ್ರಾಚೀನ ಕಾಲದಲ್ಲಿ ಶಿಕ್ಷಣ

ಶಿಕ್ಷಣವೆಂದರೆ ಹಿಂದೆ ಸತ್ಯ, ಸಾಧನೆ, ವಿವೇಚನೆ, ಮಹೋನ್ನತ ಭಾವಪರವಶತೆ ಎಂದು ಅರ್ಥೈಸಲಾಗುತ್ತಿತ್ತು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸವೆಂಬ ನಾಲ್ಕು ಆಶ್ರಮಗಳು ಶಿಕ್ಷಣದ ಮೂಲ ತಳಹದಿಯಿಂದ ರೂಪುಗೊಂಡಿದ್ದವು.

ಆಧುನಿಕ ಕಾಲದಲ್ಲಿ ಶಿಕ್ಷಣವು ಮಾನವನು ಜೀವನದ ಕಲೆಯನ್ನು ಅರಿತುಕೊಂಡು ತನ್ನ ಭಾವೀ ಜೀವನವನ್ನು ರೂಪಿಸಿಕೊಳ್ಳಲು ಸಹಾಯಕವಾಗುವಂತೆ ಮಾಡಲು ಔಪಚಾರಿಕ ರೀತಿಯಿಂದ ನಡೆಯುವ ಕ್ರಿಯೆಯಾಗಿದೆ. ಶಿಕ್ಷಣ ನೀಡುವ ಮೂಲ ಸಂಸ್ಥೆಯಾದ ಶಾಲೆಯ ಜವಾಬ್ದಾರಿಯು ಈ ಹಿನ್ನೆಲೆಯಲ್ಲಿ ತುಂಬ ಮಹತ್ವದ್ದಾಗಿದೆ.

ಪ್ರಾಚೀನ ಕಾಲದಿಂದಲೂ ಶಾಲೆ ಶಿಕ್ಷಣದ ವ್ಯವಸ್ಥಿತ ಸಂಸ್ಥೆಯಾಗಿ ರೂಪುಗೊಳ್ಳುತ್ತ ಬಂದಿದೆ. ಇಂಗ್ಲೀಷಿನಲ್ಲಿ ಶಾಲೆಗೆ ಸ್ಕೂಲ್‌ ಎನ್ನುವರು. ಈ ಪದವು ಗ್ರೀಕಿನ ‘ಸ್ಕೂಲೆ’ ಎಂಬ ಪದದಿಂದ ವ್ಯುತ್ಪತ್ತಿಯಾಗಿದ್ದು ಇದರರ್ಥ ವಿರಾಮ ಎಂದಾಗಿದೆ. ಪ್ರಾಚೀನ ಗ್ರೀಕಿನಲ್ಲಿ ಶಿಕ್ಷಣ ಎಲ್ಲರಿಗೂ ದೊರೆಯುತ್ತಿರಲಿಲ್ಲ; ಅದು ಸಾಕಷ್ಟು ವಿರಾಮವಿರುವ ಶ್ರೀಮಂತರ ಸೊತ್ತಗಿತ್ತು. ಆಗ ಮನೆಗಳೇ ಮಕ್ಕಳ ಶಿಕ್ಷಣ ಸಂಸ್ಥೆಗಳಾಗಿದ್ದವು. ಬರುಬರುತ್ತ ಧಾರ್ಮಿಕ ಸಂಪ್ರದಾಯಗಳು ಬೆಳೆದು ಚರ್ಚ್, ಗುಡಿ, ಮಸೀದಿಗಳು ಶಿಕ್ಷಣ ಕೇಂದ್ರಗಳಾದವು. ಸಮಾಜಗಳು ಬೆಳೆದಂತೆ ಸನ್ನಿವೇಶಗಳು ಬೆಳೆದು ಶಿಕ್ಷಣ ಕೇಂದ್ರಗಳಿಗೆ ಪ್ರತ್ಯೇಕ ಮತ್ತು ವ್ಯವಸ್ಥಿತ ಆಶ್ರಯದ ಅಗತ್ಯವನ್ನು ಜನ ಮನಗಂಡರು. ಏಕೆಂದರೆ ತಂದೆ-ತಾಯಂದಿರು ತಮ್ಮ ಕೆಲಸಗಳಲ್ಲಿಯೇ ಮುಳುಗಿಹೋಗ ತಮ್ಮ ಮಕ್ಕಳ ಶಿಕ್ಷಣದಲ್ಲಿ ಅನಾಸ್ಥೆ ತೋರಿಸತೊಡಗಿದರು. ಅಲ್ಲದೆ ಗೃಹ ಶಿಕ್ಷಣದಲ್ಲಿ ವಿಸ್ತೃತ ಸಮಾಜಶಿಕ್ಷಣದ ಸಮಸ್ಯೆಗಳನ್ನು ಸಮಾವೇಶ ಮಾಡುವುದು ಕಠಿಣವೂ ದುಸ್ಸಾಧ್ಯವೂ ಎನಿಸಿತು. ಆದ ಕಾರಣ ಶಾಲೆಯು ವ್ಯವಸ್ಥಿತ ಸ್ವರೂಪದ ಸಂಸ್ಥೆಯಾಗಿ ಉದಯವಾಯಿತು. ಇದು ಕುಟುಂಬಕ್ಕೂ ವಿಶಾಲವಾದ ಪ್ರಪಂಚಕ್ಕೆ ಸಂಪರ್ಕವೇರ್ಪಡಿಸುವ ಮಧ್ಯವರ್ತಿ ಸಂಸ್ಥೆಯಾಯಿತು. ಶಿಕ್ಷಕರು ಅಲ್ಲಿಯ ಕಾರ್ಯಸೂತ್ರಿಗಳಾದರು.

ಶಿಕ್ಷಣದ ಸಂಘ-ಸಂಸ್ಥೆಗಳಲ್ಲಿ ಕೇವಲ ಶಿಕ್ಷಣಕ್ಕಾಗಿಯೇ ಮೀಸಲಾಗಿರುವ ಹಾಗೂ ಅದಕ್ಕಾಗಿ ವಿಶೇಷ ರೀತಿಯಲ್ಲಿ ಸ್ಥಾಪಿತವಾದ ಸಂಸ್ಥೆಯೆಂದರೆ ಶಾಲೆ. ಶಾಲೆಯ ಗುಂಪಿಗೆ ಸೇರಿದ ಇತರ ಸಂಸ್ಥೆಗಳನ್ನೆಲ್ಲ ಕ್ರಿಯಾಶೀಲ ಶಿಕ್ಷಣ ಸಂಸ್ಥೆಗಳೆಂದು ಪರಿಗಣಿಸಲಾಗಿದೆ. ಶಾಲೆಯೆಂಬ ಶಿಕ್ಷಣ ಸಂಸ್ಥೆಯು ಸ್ಥಾಪನೆಯಾಗಿರುವುದು ಇತ್ತೀಚೆಗೆ ಎನ್ನಬಹುದು. ಸಂಸ್ಕೃತಿಯು ಆಯಾ ಕಾಲಕ್ಕೆ ವಿಶಿಷ್ಟವಾದುದ್ದೂ ವಿಶೇಷ ರೂಪಿನದೂ ಮತ್ತು ಅತ್ಯಂತ ಸಂಕೀರ್ಣ ಸ್ವರೂಪದ್ದೂ ಆಗಿರುವುದರಿಂದ ನಿಷ್ಕ್ರಿಯ ಸಂಸ್ಥೆಗಳು ಅದನ್ನು ಮುಂದಿನ ಪೀಳಿಗೆಗೆ ಪ್ರಸರಿಸುವುದು ಕಠಿಣವೆಂದು ಅನ್ನಿಸಿದಾಗ, ಶಾಲೆಯೆಂಬ ವ್ಯವಸ್ಥೆಯು ಉದಿಸಿ, ಉದ್ದೇಶಪೂರ್ವಕವಾಗಿಯೇ ಆ ಕೆಲಸವನ್ನು ವಹಿಸಿಕೊಂಡು ಹೆಚ್ಚು ಕ್ರಮಬದ್ಧ ರೀತಿಯಲ್ಲಿ ಅದನ್ನು ನಿರ್ವಹಿಸಲು ಮುಂದೆ ಬರಬೇಕಾಯಿತು. ಸಂಸ್ಕೃತಿಯ ಪ್ರಸಾರಕ್ಕೆ ಲಿಪಿರೂಪದ ಬೆಳವಣಿಗೆಯೂ ಅಗತ್ಯವಾದ್ದರಿಂದ ಶಾಲೆಗಳು ಸೂಕ್ತವಾಗಿ ಆ ಕಾರ್ಯ ನಿರ್ವಹಿಸಲಾರಂಭಿಸಿದವು.

ಮುಂದಿನ ಜನಾಂಗದವರಿಗೆ ತಮ್ಮ ದೇಶದ ನಾಗರಿಕತೆಗಳನ್ನು ಪರಿಚಯ ಮಾಡಿಕೊಡಲು ಬಹು ಹಿಂದೆಯೇ ಚೀನಾ, ಈಜಿಪ್ತ್‌, ಭಾರತ, ಗ್ರೀಸ್‌, ಮತ್ತು ಇಟಲಿಯಂಥ ದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಲಾಗಿತ್ತು. ಮೊದಮೊದಲು ಶಾಲೆಗಳಲ್ಲಿನ ಶಿಕ್ಷಣವು ಉದಾತ್ತವಾದ ಸಾಂಸ್ಕೃತಿಕ ಅಂಶಗಳಿಗೆ ಸಂಬಂಧಿಸಿದುದಾಗಿತ್ತು. ಭಾಷೆ, ವೇದಾಂತ, ಗಣಿತಶಾಸ್ತ್ರ ಹಾಗೂ ಅವುಗಳ ಇತರ ಅಂಶಗಳು ಅಧ್ಯಯನ ವಿಷಯಗಳಾಗಿ ಶಾಲೆಗಳಲ್ಲಿ ಬೋಧಿತವಾಗುತ್ತಿದ್ದವು. ಆಗಿನ ಕಾಲದ ಶಿಕ್ಷಣದಲ್ಲಿ ಪ್ರಗತಿಪರವಾದ ಉದಾರ ದೃಷ್ಟಿ ಪ್ರಮುಖವಾಗಿತ್ತು. ವಿಶೇಷ ರೀತಿಯಲ್ಲಿ ಶ್ರದ್ಧೆ-ಭಕ್ತಿಯಿಂದ ಅದ್ಯಯನ ನಡೆಸುವ ಕೆಲಸವನ್ನು ಸಮಾಜದಲ್ಲಿನ ಮೇಲ್ದರ್ಜೆಯ ಜನರು ವಹಿಸಿಕೊಂಡಿದ್ದರು. ಕಾಲಾನುಕ್ರಮದಲ್ಲಿ ಸಂಸ್ಕೃತಿಯ ಪ್ರಮುಖ ಅಂಶಗಳು ಗ್ರಂಥಗತವಾದವು. ಪ್ರಜೆಗಳ ಮಕ್ಕಳೆಲ್ಲರೂ ಶಾಲೆಗೆ ಹೋಗಿ ಶಿಕ್ಷಣ ಪಡೆಯುವುದು ನಂತರದ ದಿನಗಳಲ್ಲಿ ರೂಢಿಗೆ ಬಂದಿತು.

ಇಂಥಹ ಶಾಲೆಯು ಹಲವಾರು ಪ್ರಮುಖ ಲಕ್ಷಣಗಳನ್ನು ಹೊಂದಿದ್ದು, ಇಲ್ಲಿ ನಿರ್ದಿಷ್ಟ ವಯಸ್ಸಿನ ಮಕ್ಕಳನ್ನು ಹೊಂದಿದ ಗುಂಪು ಇರುತ್ತದೆ. ಇಂಥ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವ್ಯತ್ಯಾಸ ಹೊಂದಬಹುದು. ಇಲ್ಲಿ ಎಲ್ಲ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಯುತ್ತವೆ. ಇಲ್ಲಿ ನಿರ್ದಿಷ್ಟವಾದ ಅಧಿಕಾರಿ ವರ್ಗ ಇಲ್ಲವೇ ಸಮೂಹವಿರುತ್ತದೆ. ತರಗತಿಗಳಿಂದ ವಿವಿಧ ವಿಷಯಗಳನ್ನು ಕಲಿಯುವ ಪ್ರತ್ಯೇಕ ಸಮೂಹಗಳಿರುತ್ತವೆ. ಪ್ರತಿಯೊಂದು ಸಮಯದಲ್ಲೂ ಶಾಲೆಯು ಶಿಸ್ತಿಗೆ ಪ್ರಾಮುಖ್ಯತೆ ನೀಡುವುದಲ್ಲದೆ ರಾಷ್ಟ್ರ, ನಾಗರಿಕತೆ, ಸಂಸ್ಕೃತಿ ಮತ್ತು ಜನಜೀವನದ ಸಂಪೂರ್ಣ ಚಿತ್ರಣವನ್ನು ಪ್ರತಿಬಿಂಬಿಸುವಂತಹ ಸನ್ನಿವೇಶ ಇಲ್ಲಿರುತ್ತದೆ.

ಶಾಲೆಯು ಕಲಿಕೆಯ ಮಂದಿರ. ಅದು ಸಾಮಾಜಿಕವಾಗಿ ಕಲಿಕೆಯನ್ನುಂಟು ಮಾಡುವುದು. ಏಕೆಂದರೆ ಸಮಾಜವೇ ತನ್ನ ಹಿತದೃಷ್ಟಿಯಿಂದ ಈ ಶಾಲೆಗಳನ್ನು ಸ್ಥಾಪಿಸಿಕೊಂಡಿದೆ. ಸಮಾಜದ ಸದಸ್ಯರ ಅಜ್ಞಾನ ಮತ್ತು ಮೌಢ್ಯತೆಗಳನ್ನು ಹೋಗಲಾಡಿಸಿ ಆಯಾಯ ಪರಿಸರಕ್ಕೆ ಹೊಂದಿಕೊಳ್ಳಲು ಅವಕಾಶ ಮಾಡಿಕೊಡುವ ಮಹತ್ಕಾರ್ಯದ ಹೊಣೆಗಾರಿಕೆಯು ಸಮಾಜಕ್ಕಿರುವುದರಿಂದ ಅದು ಶಾಲೆಯಂಥ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದೆ. ಹಿಂದೆ ಸಮಾಜವು ಸರಳವಾಗಿತ್ತು. ಈ ರೀತಿಯ ಸರಳವಾದ ಸಾಮಾಜಿಕ ಸಂರಚನೆಯ ಕಾರಣದಿಂದಾಗಿ ಮನೆಗಳಲ್ಲಿ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಶಾಲೆಗಳ ಕಲಿಕೆಯ ಮಟ್ಟವೂ ಸರಳವಾಗಿತ್ತು. ಹಾಗಾಗಿ ಆ ಶಿಕ್ಷಣದಲ್ಲಿ ಯಾವುದೇ ಮಹತ್ವಾಕಾಂಕ್ಷೆಗಳಿರಲಿಲ್ಲ.

ಪ್ರಾಥಮಿಕ ಶಿಕ್ಷಣದ ಸ್ವರೂಪ

ಶಿಕ್ಷಣವು ಮಾನವನ ಮೂಲಭೂತ ಅಗತ್ಯವಾಗಿದೆ. ಜೀವನದ ಕುರಿತಾದ ಮನುಷ್ಯನ ನಂಬಿಕೆ-ನಿಲುವುಗಳನ್ನು ಬದಲಾಯಿಸಬಲ್ಲ ಶಕ್ತಿಯು ಶಿಕ್ಷಣಕ್ಕಿದೆ. ಅದರಲ್ಲೂ ಬಾಲ್ಯ ಮತ್ತು ಕೌಮಾರ್ಯಾವಸ್ಥೆಗಳಲ್ಲಿ ಮಾನವನು ಪಡೆದ ಶಿಕ್ಷಣವು ಹೆಚ್ಚು ಪ್ರಭಾವಾಕಾರಿಯಾಗಿರುತ್ತದೆ. ಈ ಎರಡು ಅವಸ್ಥೆಗಳಲ್ಲಿ ಮಾನವನು ಪಡೆಯುವ ಶಿಕ್ಷಣವನ್ನು ಅಧ್ಯಯನಕ್ಕೆ ಅನುಕೂಲವಾಗುವಂತೆ ಒಟ್ಟು ಮೂರು ಹಂತಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಅವುಗಳೆಂದರೆ ಪೂರ್ವ-ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತಗಳು. ನಿರ್ದಿಷ್ಟವಾಗಿ ನೋಡಿದರೆ ಈ ಮೂರು ಹಂತದ ಶಿಕ್ಷಣಗಳು, ಅನುಕ್ರಮವಾಗಿ ಮಾನವನ ಬದುಕಿನ ಪೂರ್ವ ಬಾಲ್ಯ, ಉತ್ತರ ಬಾಲ್ಯ ಮತ್ತು ಕೌಮಾರ್ಯಾವಸ್ಥೆಗಳಲ್ಲಿ ದೊರೆಯುವಂಥ ಅಪೂರ್ವ ಕಲಿಕಾನುಭವಗಳಾಗಿವೆ ಎಂಬುದು ತಿಳಿಯುತ್ತದೆ.

ಪ್ರಾಥಮಿಕ ಶಿಕ್ಷಣವು ಮಗುವಿಗೆ ಕಡ್ಡಾಯವಾಗಿದೆ. ಅದಕ್ಕಾಗಿಯೇ ದೇಶವು ೬-೧೪ರ ವಯೋಮಾನದ ಮಕ್ಕಳ ಸಾರ್ವತ್ರಿಕ ದಾಖಲಾತಿ, ಹಾಜರಾತಿ ಮತ್ತು ಕಲಿಕೆಗಳ ಗುರಿ ಸಾಧನೆಗಾಗಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತ, ಅದಕ್ಕಾಗಿ ಬಗೆಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ವಯೋಮಾಣದ ಪ್ರತಿ ಮಗುವೂ ಪಡೆದಿರಲೇಬೇಕಾದ ಕನಿಷ್ಠ ಶಿಕ್ಷಣದ ಕಡೆ ಇದು ತನ್ನ ಗಮನವನ್ನು ಕೇಂದ್ರೀಕರಿಸಿದೆ. ಜ್ಞಾನಸ್ಫೋಟದ ಈ ದಿನಗಳಲ್ಲಿ ಅನಕ್ಷರತೆ ಮತ್ತು ಅಮಾಯಕತೆಗಳು ಊನಗಳಾಗಿ ಪರಿಗಣಿತವಾಗಿವೆ. ಅಶಿಕ್ಷಿತರು ಶೋಷಣಾರಹಿತ ಜೀವನವನ್ನು ನಡೆಸುವುದು ದುಸ್ಸಾಧ್ಯವಾಗಿದೆ. ಅವರು ತಮ್ಮ ಅರಿವಿನ ಪರಿಧಿಯ ಮಿತಿಯಲ್ಲೇ ಆರಾಮವಾಗಿಯಂತೂ ಇದ್ದಾರೆ. ಆದರೆ ಅವರ ಈ ಆರಾಮವು ತಮ್ಮ ಮೇಲಾಗುವ ಬಗೆಬಗೆಯ ಶೋಷಣೆಗಳನ್ನು ಒಪ್ಪಿತ ಸತ್ಯಗಳಾಗಿ ಸ್ವೀಕರಿಸಿರುವ ದುರ್ಬಲ ಮನೋಧರ್ಮದಿಂದ ಉಂಟಾದುದಾಗಿದೆ ಎಂಬುದು ಅವರಿಗಿನ್ನೂ ತಿಳಿಯದ ಸತ್ಯವಾಗಿದೆ. ಅದನ್ನು ತಿಳಿಸಿಕೊಡಲು ಅವರಿಗೆ ಶಿಕ್ಷಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕನಿಷ್ಟ ಪ್ರಾಥಮಿಕ ಹಂತದವರೆಗಿನ ಶಿಕ್ಷಣವು ಪ್ರತಿಯೊಬ್ಬನ ಮೂಲಭೂತ ಅಗತ್ಯವಾಗಿದೆಯೆಂದು ಮನಗಂಡಿರುವ ದೇಶವು ಆ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕೇವಲ ಶಿಕ್ಷಣ ಮಾತ್ರವೇ ಒಬ್ಬ ವ್ಯಕ್ತಿಗೆ ತನ್ನ ಹಕ್ಕು ಮತ್ತು ಬಾಧ್ಯತೆಗಳ ಬಗ್ಗೆ ಮನವರಿಕೆ ಮಾಡಿಕೊಡಬಲ್ಲ ಪರಿಣಾಮಕಾರಿ ಶಕ್ತಿಯಾಗಿದೆ. ಸರಿಯಾದ ಅಭ್ಯರ್ಥಿಯನ್ನು ಗುರುತಿಸಿ ಮತ ನೀಡುವ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಿಸುವಲ್ಲಿ ತಾನೇನು ಪಾತ್ರ ನಿರ್ವಹಿಸಬಹುದು ಎಂಬುದನ್ನು ಸಹ ಇದು ತಿಳಿಸಿಕೊಡುತ್ತದೆ. ಮೂಢನಂಬಿಕೆಗಳ ಜಗತ್ತಿನಿಂದ ಜನರನ್ನು ಹೊರಗೆಳೆದು ಮೊದಲಿಗಿಂತ ಉತ್ತಮ ಜೀವನವನ್ನು ನಡೆಸಲು ಶಕ್ತಿಯನ್ನು ಒದಗಿಸುತ್ತದೆ. ಪ್ರಾಥಮಿಕ ಶಿಕ್ಷಣವು ಮಕ್ಕಳ ಜೀವನದ ಪ್ರಮುಖ ಮೈಲಿಗಲ್ಲಾಗಿದ್ದು ಇದು ಮಕ್ಕಳಲ್ಲಿ ಉತ್ತಮ ಆರೋಗ್ಯ ಹಾಗೂ ನೈರ್ಮಲ್ಯದ ಅಭ್ಯಾಸಗಳನ್ನು ರೂಢಿಸುತ್ತದೆ ಮತ್ತು ಆ ಮೂಲಕ ಬದುಕಿಗೆ ಅಗತ್ಯವಾಗಿರುವ ಶಿಸ್ತು ಮತ್ತು ಸಂಯಮದ ಪಾಠಗಳನ್ನು ಕಲಿಸಿಕೊಡುತ್ತದೆ. ಹೀಗೆ ಕಲಿತ ಶಿಸ್ತು ಮತ್ತು ಸಂಯಮದ ಪಾಠವು ಮುಂದೆ ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆ-ಸವಾಲುಗಳನ್ನು ಧೀಮಂತಿಕೆಯಿಂದ ಎದುರುಗೊಳ್ಳುವಲ್ಲಿ ನೆರವಿಗೆ ಬರುತ್ತದೆ. ಇವೆಲ್ಲದರ ಜೊತೆಗೆ ಪ್ರಾಥಮಿಕ ಶಿಕ್ಷಣವು ಮುಂದಿನ ಹಂತದ ಶಿಕ್ಷಣಗಳಿಗೆ ಭದ್ರ ಬುನಾದಿಯನ್ನು ಹಾಕುತ್ತದೆ. ಏಕೆಂದರೆ ಪ್ರೌಢ ಮತ್ತು ಉನ್ನತ ಶಿಕ್ಷಣಗಳ ಗುಣಮಟ್ಟವು ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಮುಖ್ಯವಾಗಿ ಅವಲಂಬಿಸಿರುತ್ತದೆ.

ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಸ್ವತಂತ್ರ ಭಾರತವು ಪ್ರಾಥಮಿಕ ಶಿಕ್ಷಣದ ಮಹತ್ವವನ್ನು ಸರಿಯಾಗಿಯೇ ಅರಿತುಕೊಂಡಿದೆ ಮತ್ತು ದೇಶದ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜತಾಂತ್ರಿಕ ಪ್ರಗತಿಯ ಹಿಂದೆ ಪ್ರಧಾನ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುವ ಗುರುತರ ಸಂಸ್ಥೆಯಾಗಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಒಪ್ಪಿಕೊಂಡಿದೆ. ಅದಕ್ಕನುಗುಣವಾಗಿ ದೇಶದ ಸಂವಿಧಾನವು ತನ್ನ ೪೫ನೇ ವಿಧಿಯಲ್ಲಿ ದೇಶದ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಸೌಲಭ್ಯವನ್ನು ಘೋಷಿಸಿದೆ.

ಪ್ರಾಥಮಿಕ ಶಿಕ್ಷಣವು ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ಪ್ರಾರಂಭದ ಬಿಂದುವಾಗಿದ್ದು ಇದು ಶಿಕ್ಷಣದ ಏಣಿಯಲ್ಲಿನ ಮೊದಲ ಮೆಟ್ಟಿಲಾಗಿದೆ. ಪ್ರಾಥಮಿಕ ಹಂತದಲ್ಲಿನ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕ ಶಿಕ್ಷಣವು ಜನರ ಬೌದ್ಧಿಕ ಪ್ರಗತಿಗೆ ಅತ್ಯಂತ ಅಗತ್ಯವಾಗಿದೆ. ಆದ್ದರಿಂದಲೇ ಶಿಕ್ಷಣವನ್ನು ಮಗುವಿನ ಮೂಲಭೂತ ಹಕ್ಕಾಗಿ ಮತ್ತು ಮಗುವನ್ನು ಶಾಲೆಗೆ ಕಳಿಸುವ ವಿಚಾರವಾಗಿ ಪಾಲಕರನ್ನು ಉತ್ತರದಾಯಿಯಾಗಿ ಸಂವಿಧಾನವು ಘೋಷಿಸಿದೆ. ಈ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕ ಶಿಕ್ಷಣದ ವಿಧಿಯು ಆರ್ಥಿಕ, ಸಾಂಸ್ಥಿಕ ಮತ್ತು ಮಾನವ ಸಂಪನ್ಮೂಲಗಳ ಸಂಗ್ರಹಕ್ಕೆ ಅಗತ್ಯವಾದ ಪ್ರೇರಣೆಗಳನ್ನು ಒದಗಿಸುತ್ತದೆ. ಸಮಾನತೆಯನ್ನು ಸಾಧಿಸಲು ಬೇಕಿರುವ ಮಹಿಳಾ ಸಬಲೀಕರಣಕ್ಕಾಗಿಯೂ ಈ ವಿಧಿಯು ಅಗತ್ಯವಾಗಿದೆ. ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಪ್ರತಿಶತ ಹತ್ತರಷ್ಟು ಕಡಿಮೆಗೊಳಿಸುವಲ್ಲಿ, ಕಲಿಕಾಸಾಧನೆಯನ್ನು ಶೇಕಡಾ ಇಪ್ಪತ್ತೈದರಷ್ಟು ಹೆಚ್ಚಿಸುವಲ್ಲಿ ಮತ್ತು ಲಿಂಗ ಹಾಗೂ ಸಾಮಾಜಿಕ ತಾರತಮ್ಯಗಳನ್ನು ಶೇಕಡಾ ಐದರಷ್ಟು ಕಡಿಮೆಗೊಳಿಸುವಲ್ಲಿ ಈ ವಿಧಿಯು ನೆರವಾಗಿದೆ. ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಪ್ರಮುಖ ಸಮಸ್ಯೆಗಳಾದ ಅಪವ್ಯಯ ಮತ್ತು ಸ್ಥಗಿತತೆಗಳ ಪ್ರಮಾಣವನ್ನು ಕಡಿಮೆಗೊಳಿಸಿ ಅನಕ್ಷರತೆಯ ಪ್ರಮಾಣವನ್ನು ಗಣನೀಯವಾಗಿ ಕುಗ್ಗಿಸಿದೆ. ವಿವಿಧ ಸಮುದಾಯಗಳ, ವಿಕಲಚೇತನರ ಬಲವೃದ್ಧಿಗಾಗಿ, ದೇಶದಲ್ಲಿ ಶೋಷಣೆಯನ್ನು ನಿಯಂತ್ರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ಸರ್ಕಾರವು ಹಲವಾರು ಶೈಕ್ಷಣಿಕ ಕ್ರಮಗಳನ್ನು ಕೈಗೊಂಡಿದೆ. ೬-೧೪ರ ವಯೋಮಾನದ ಮಕ್ಕಳ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕ ಶಿಕ್ಷಣದ ವೇಗವನ್ನು ಹೆಚ್ಚಿಸಲಿಕ್ಕಾಗಿ ೧೯೫೭ರಲ್ಲಿ ಸ್ಥಾಪಿತವಾದ ಅಖಿಲ ಭಾರತ ಪ್ರಾಥಮಿಕ ಶಿಕ್ಷಣ ಮಂಡಳಿಯು ಇಂಥ ಒಂದು ಮುಖ್ಯ ಕ್ರಮವಾಗಿದೆ.

ಈ ಅಖಿಲ ಭಾರತ ಪ್ರಾಥಮಿಕ ಶಿಕ್ಷಣ ಮಂಡಳಿಯು ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರಸರ್ಕಾರ, ರಾಜ್ಯ ಸರ್ಕಾರ, ಮತ್ತು ಸ್ಥಳೀಯ ಆಡಳಿತಗಳಿಗೆ ಸಲಹೆಗಳನ್ನು ನೀಡುತ್ತ ಸಂವಿಧಾನದ ೪೫ನೇ ವಿಧಿಯು ವಿವರಿಸುವ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕ ಶಿಕ್ಷಣದ ಜಾರಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಅಷ್ಟೇ ಅಲ್ಲದೆ ಪ್ರಾಥಮಿಕ ಶಿಕ್ಷಣದ ಆಡಳಿತಾತ್ಮಕ, ಆರ್ಥಿಕ ಮತ್ತು ಬೋಧನಾತ್ಮಕ ಸಮಸ್ಯೆಗಳ ಪರಿಹಾರಕ್ಕಾಗಿ ಸಂಶೋಧನಾ ಕಾರ್ಯಗಳನ್ನು ಸಂಘಟಿಸಲು ಸಹಾಯ ನೀಡುತ್ತದೆ ಮತ್ತು ಆ ಸಂಶೋಧನಾ ಕಾರ್ಯದ ಫಲಿತಾಂಶಗಳನ್ನು ಪ್ರಕಟಿಸಲು ನೆರವು ನೀಡುತ್ತದೆ. ಪ್ರಾಥಮಿಕ ಶಿಕ್ಷಣದ ಬೋಧನಾ ಗುಣಮಟ್ಟ ಮತ್ತು ಮಕ್ಕಳ ಹಾಜರಾತಿ ಪ್ರಮಾಣಗಳನ್ನು ಹೆಚ್ಚಿಸುವಲ್ಲಿ ಅಧಿಕಾರಿ ವರ್ಗ ಹಾಗೂ ಶಿಕ್ಷಕರಿಗೆ ನೆರವಾಗುವಂಥ ಸಾಹಿತ್ಯ ಸಾಮಗ್ರಿಯ ರಚನೆಗೆ ಒತ್ತು ನೀಡುತ್ತದೆ. ಈ ಮಂಡಳಿಯ ಸ್ಥಾಪನಾ ನಂತರ ಪ್ರತಿ ಹಳ್ಳಿಯಲ್ಲೂ ಒಂದು ಪ್ರಾಥಮಿಕ ಶಾಲೆಯಿರುವಂತೆ ಅಥವಾ ಕನಿಷ್ಟ ಒಂದು ಕಿ.ಮೀ. ವ್ಯಾಪ್ತಿಯೊಳಗಡೆ ಒಂದು ಪ್ರಾಥಮಿಕ ಶಾಲೆಯಿರುವಂತೆ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದೆ.

ಇದರ ಹೊರತಾಗಿಯೂ ಭಾರತ ಸರ್ಕಾರವು ಈ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕ ಶಿಕ್ಷಣದ ಜಾರಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ ಕೆಲವು ಹೀಗಿವೆ:

. ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿ.ಪಿ..ಪಿ)

ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಗುರಿ ಸಾಧನೆಯ ಪ್ರಮುಖ ಸಾಧನವಾಗಿ ಡಿ.ಪಿ.ಇ.ಪಿ.ಯನ್ನು ೧೯೯೪ರಲ್ಲಿ ಪ್ರಾರಂಭಿಸಲಾಯಿತು. ಇದರ ಮೂಲಕ ಜಿಲ್ಲೆಯನ್ನು ಒಂದು ಘಟಕವಾಗಿಸಿಕೊಂಡು ವಿಕೇಂದ್ರೀಕೃತ ನಿರ್ವಹಣೆ, ಸಹಭಾಗೀ ತತ್ವ ಮತ್ತು ಸಾಮರ್ಥ್ಯ ವೃದ್ಧಿಯನ್ನು ಎಲ್ಲ ಹಂತಗಳಲ್ಲಿ ತರುವ ಮೂಲಕ ಸಾರ್ವತ್ರೀಕರಣದ ಗುರಿಸಾಧನೆಯ ಕಾರ್ಯಾಚರಣೆಗಾಗಿ ತಂತ್ರಗಳನ್ನು ಹೆಣೆಯಲಾಯಿತು. ರಾಜ್ಯಮಟ್ಟದ ನೋಂದಾಯಿತ ಸಂಸ್ಥೆಗಳ ಮೂಲಕ ಈ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಲಾಯಿತು.

ಮುಖ್ಯವಾಗಿ ಈ ಕಾರ್ಯಾಚರಣೆಯ ಹೊಸ ಶಾಲೆ ಅಥವಾ ತರಗತಿ ಕೊಠಡಿಗಳ ನಿರ್ಮಾಣ, ಬದಲೀ/ಅನೌಪಚಾರಿಕ ಶಾಲಾ ಕೇಂದ್ರಗಳ ಸ್ಥಾಪನೆ, ಶಿಕ್ಷಕರ ನೇಮಕಾತಿ, ಅಂಗನವಾಡಿಗಳ ಸ್ಥಾಪನೆ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ/ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗಳ ಬಲಪಡಿಸುವಿಕೆ, ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಮೂಲಕ ತರಬೇತಿ ಕಾರ್ಯಕ್ರಮಗಳು, ಪ.ಜಾತಿ. ಪ.ಪಂ ಮತ್ತು ಮಹಿಳೆಯರಿಗಾಗಿ ವಿಶೇಷ ಯೋಜನೆಗತಳ ಜಾರಿ.. ಮುಂತಾದ ವಿಷಯಗಳನ್ನು ಲಕ್ಯದಲ್ಲಿರಿಸಿಕೊಂಡು ಕೆಲಸ ಪ್ರಾರಂಭಿಸಿತು.

. ಕಪ್ಪು ಹಲಗೆ ಕಾರ್ಯಾಚರಣೆ

೧೯೮೭-೮೮ರಲ್ಲಿ ಪ್ರಾರಂಭವಾದ ಈ ಕಾರ್ಯಾಚರಣೆಯು ಮುಖ್ಯವಾಗಿ ದೇಶದ ಎಲ್ಲ ಶಾಲೆಗಳಿಗೆ ಹಂತ-ಹಂತವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸುವುದನ್ನು ಪ್ರಮುಖ ಲಕ್ಷ್ಯವಾಗಿ ಹೊಂದಿತ್ತು. ೧೯೯೩-೯೪ರಲ್ಲಿ ಈ ಕಾರ್ಯಾಚರಣೆಯು-ಮಕ್ಕಳ ದಾಖಲಾತಿಯು ೧೦೦ರ ಗಡಿಯನ್ನು ದಾಟಿದಮಥ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನೀಡುವುದರತ್ತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು.

. ಲೋಕ ಜಂಬಿಶ್

ಸ್ವೀಡಿಶ್‌ ಅಂತರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ರಾಜಸ್ಥಾನದಲ್ಲಿ ಪ್ರಾರಂಭಿಸಲಾದ ಈ ಯೋಜನೆಯ ಪದಶಃ ಅರ್ಥ ಶಿಕ್ಷಣಕ್ಕಾಗಿ ಜನರ ಹೋರಾಟ ಎಂದು. ಸಾರ್ವಜನಿಕರ ಸಹಭಾಗಿತ್ವ ಮತ್ತು ಸಂಘಟನೆಯ ಮೂಲಕ ‘ಸರ್ವರ ಶಿಕ್ಷಣ’ದ ಗುರಿಯನ್ನು ಸಾಧಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿತ್ತು. ೧೯೯೭-೯೮ರಲ್ಲಿ ಈ ಯೋಜನೆಯು ೭೫ ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇದು ರಾಜಸ್ಥಾನದ ಮಕ್ಕಳಲ್ಲಿ ಕನಿಷ್ಟ ಕಲಿಕಾ ಸಾಮರ್ಥ್ಯದ ಸಾಧನೆ ಮೂಲಕ ಇಡೀ ರಾಜ್ಯದ ಶೈಕ್ಷಣಿಕ ಗುಣಮಟ್ಟದ ಹೆಚ್ಚಳಕ್ಕೆ ಗಣನೀಯ ಕೊಡುಗೆಯನ್ನು ನೀಡಿತು.

. ರಾಷ್ಟ್ರೀಯ ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮ

ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಉಳಿಕೆಗಳನ್ನು ಹೆಚ್ಚಿಸುವ ಹಾಗು ಅದೇ ಸಮಯಕ್ಕೆ ಅವರ ಪೌಷ್ಟಿಕತೆಯನ್ನು ಹೆಚ್ಚಿಸುವ ಲಕ್ಷ್ಯವನ್ನಿರಿಸಿಕೊಂಡು ಈ ಮಧ್ಯಾಹ್ನದೂಟದ ಯೋಜನೆಯನ್ನು ೧೯೯೫ರಲ್ಲಿ ಜಾರಿಗೆ ತರಲಾಯಿತು. ಒಂದರಿಂದ ನಾಲ್ಕನೇ ತರಗತಿವರೆಗಿನ ಮಕ್ಕಳಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಈಗ ರಾಜ್ಯ ಸರ್ಕಾರದ ಉತ್ಸಾಹದಿಂದಾಗಿ ಇದು ಪ್ರೌಢಶಾಲಾ ಹಂತಕ್ಕೂ ವಿಸ್ತರಣೆಗೊಂಡಿದೆ. ಇದಕ್ಕಾಗಿ ಪ್ರತ್ಯೇಕ ಅಡುಗೆ ಸಹಾಯಕರ ನೇಮಕ ಮತ್ತು ಕೊಠಡಿಗಳ ನಿರ್ಮಾಣವೂ ಆಗಿದೆ.

. ಮೂಲಭೂತ ಹಕ್ಕಾಗಿ ಶಿಕ್ಷಣ

೨೦೦೧ರ ನವೆಂಬರ್ ೨೮ರಂದು ಲೋಕಸಭೆಯು ಅಂಗೀಕರಿಸಿದ ೯೩ನೇ ತಿದ್ದುಪಡಿ ಮಸೂದೆಯು ಆರರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಘೋಷಿಸಿದೆಯಲ್ಲದೆ ಈ ವಯೋಮಾನದ ಮಕ್ಕಳಿಗೆ ಅವರ ಹಕ್ಕಿನ ಶಿಕ್ಷಣವನ್ನು ಕೊಡಿಸುವ ವಿಚಾರವಾಗಿ ಪಾಲಕರನ್ನು ಹೊಣೆಗಾರರನ್ನಾಗಿ ಮಾಡಿದೆ. ಇದರಿಂದಾಗಿ ‘ಸರ್ವರಿಗೂ ಶಿಕ್ಷಣ’ದ ಗುರಿಯನ್ನು ಸಾಧಿಸುವ ಯೋಜನೆಗೆ ಮತ್ತಷ್ಟು ಬಲ ಬಂದಿದೆ.

. ಸರ್ವ ಶಿಕ್ಷಣ ಅಭಿಯಾನ

೬-೧೪ರ ವಯೋಮಾನದ ಎಲ್ಲ ಮಕ್ಕಳು ೨೦೦೩ರೊಳಗಾಗಿ ಶಾಲೆಗಳಲ್ಲಿ/ಕಲಿಕಾ ಖಾತ್ರಿ ಕೇಂದ್ರಗಳಲ್ಲಿ /ಸಂಪರ್ಕ ಶಾಲೆಗಳಲ್ಲಿ ಇರಬೇಕೆಂದು, ೨೦೦೮ರೊಳಗಾಗಿ ಐದು ವರ್ಷದ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿರಬೇಕೆಂದು, ೨೦೧೦ರೊಳಗಾಗಿ ಎಂಟು ವರ್ಷದ ಶಿಕ್ಷಣವನ್ನು ಪಡೆದಿರಬೇಕೆಂದು ಕಾಲಮಿತಿಯ ಗುರಿಯನ್ನು ಹಾಕಿಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಯಿತು. ಶಿಕ್ಷಣದಲ್ಲಿನ ಲಿಂಗ ಮತ್ತು ಸಮುದಾಯ ಆಧಾರಿತ ಅಂತರಗಳ ನಿವಾರಣೆ ಮತ್ತು ಸಾರ್ವತ್ರಿಕ ಉಳಿಕೆಗಳನ್ನೂ ಇದು ಗಮನದಲ್ಲಿರಿಸಿಕೊಂಡಿತ್ತು. ಈಗ ೨೦೧೦ರ ವೇಳೆಗೆ ಸರ್ವ ಶಿಕ್ಷಣ ಅಭಿಯಾನದ ಗುರಿಗಳು ಸಾಕಷ್ಟು ಮಟ್ಟಿಗೆ ಈಡೇರಿವೆ. ಲಿಂಗ ಮತ್ತು ಸಮುದಾಯ ಆಧಾರಿತ ಅಂತರಗಳಂತೂ ಬಹುತೇಕ ಸಂಪೂರ್ಣ ನಿವಾರಣೆಯಾಗಿವೆ.

. ಅನೌಪಚಾರಿಕ ಶಿಕ್ಷಣ

ವಿವಿಧ ಕಾರಣಗಳಿಂದಾಗಿ ಔಪಚಾರಿಕ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದಿರುವ ಮತ್ತು ವಂಚಿತರಾಗಿರುವ ಆರರಿಂದ ಹದಿನಾಲ್ಕರ ವಯೋಮಾನದ ಮಕ್ಕಳಿಗಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಅನೌಪಚಾರಿಕ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಔಪಚಾರಿಕ ಶಾಲೆಗೆ ದಾಖಲಾಗಿ ನಡುವೆಯೇ ಶಾಲೆ ಬಿಟ್ಟವರು, ಶಾಲೆಯ ಅಭ್ಯಾಸವೇ ಇರದ ಸಮುದಾಯಗಳ ಮಕ್ಕಳು, ಬಾಲಕಾರ್ಮಿಕರು, ಸೌದೆ-ಬೆರಣಿ-ನೀರು ತರಲೆಂದೋ, ತಮ್ಮ-ತಂಗಿಯರನ್ನು ನೋಡಿಕೊಳ್ಳಲೆಂದೋ, ದನಗಳನ್ನು ಮೇಯಿಸಲೆಂದೋ, ಮನೆವಾರ್ತೆ ನೋಡಿಕೊಳ್ಳಲೆಂದೋ ಶಾಲೆಯಿಂದ ಹೊರಗುಳಿದಿರುವ ಮಕ್ಕಳು.. ಇಂಥ ಮತ್ತು ಈ ಬಗೆಯ ಮಕ್ಕಳ ಶಿಕ್ಷಣವು ಅನೌಪಚಾರಿಕ ಶಿಕ್ಷಣದ ವ್ಯಾಪ್ತಿಯಡಿ ಬರುತ್ತದೆ. ಈ ಯೋಜನೆಯ ಮುಖ್ಯ ಲಕ್ಷ್ಯವು ಶೈಕ್ಷಣಿಕವಾಗಿ ಹಿಂದುಳಿದಿರುವ ಹತ್ತು ರಾಜ್ಯಗಳೇ ಆದರೂ ಮರುಭೂಮಿ ಪ್ರದೇಶಗಳು, ಗುಡ್ಡಗಾಡು ಜನಾಂಗಗಳು ಹಾಗೂ ಮಹಾನಗರಗಳ ಕೊಳಚೆಪ್ರದೇಶಗಳನ್ನೂ ಇದು ಗಣನೆಗೆ ತೆಗೆದುಕೊಂಡಿದೆ.

ಸರ್ಕಾರಿಖಾಸಗಿ, ಗ್ರಾಮೀಣಪಟ್ಟಣ

ಇಷ್ಟಾಗಿಯೂ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ಅಂತರವು ಹಾಗೇ ಇದೆ. ಬಹುತೇಕ ಖಾಸಗಿ ಶಾಲೆಗಳು ಪಟ್ಟಣ ಪ್ರದೇಶಗಳಲ್ಲಿ ನೆಲೆಗೊಂಡಿರುವುದು ಕೂಡ ಈ ಅಂತರಕ್ಕೆ ತನ್ನ ಕೊಡುಗೆಯನ್ನು ನೀಡಿದೆ. ಏಕೆಂದರೆ ಶಾಲೆಯು ನೆಲೆಗೊಂಡಿರುವ ಭೌಗೋಳಿಕ ಮತ್ತು ಸಾಮಾಜಿಕ ವಾತಾವರಣಗಳು ಅದರ ಶೈಕ್ಷಣಿಕ ವಾತಾವರಣವನ್ನು ನಿರ್ಧರಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲೂ ಈ ಖಾಸಗಿ ಶಾಲೆಗಳು ಪ್ರಾರಂಭವಾಗಿವೆ. ಸ್ಥಿತಿವಂತ ಪಾಲಕರು ತಮ್ಮ ಮಕ್ಕಳನ್ನು ಈ ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಹಳ್ಳಿಯ ಮಕ್ಕಳ ನಡುವೆ ಸದ್ದಿಲ್ಲದೆ ಈ ಆರ್ಥಿಕ ತಾರತಮ್ಯದ ಗೋಡೆಯು ಎದ್ದು ನಿಲ್ಲುತ್ತಿದೆ. ನಗರದ ಕೆಲವು ಆಯ್ದ ಖಾಸಗಿ ಶಾಲೆಗಳಲ್ಲಿ ಸಿಗುವ ಸುವ್ಯವಸ್ಥಿತ ಕಟ್ಟಡ, ತರಬೇತಾದ ಶಿಕ್ಷಕರು, ಉತ್ತಮ ಪಾಠೋಪಕರಣಗಳು ಹಳ್ಳಿಯ ಈ ಶಾಲೆಗಳಲ್ಲಿ ಇಲ್ಲದಿದ್ದರೂ ಸರ್ಕಾರಿ ಶಾಲೆಯಿಂದ ದೂರ ಸರಿಯುವುದನ್ನೇ ಒಂದು ಪ್ರತಿಷ್ಟೆಯ ವಿಷಯವನ್ನಾಗಿಸಿಕೊಂಡಿರುವ ಪಾಲಕರ ಮನೋಭಾವದಿಂದ ಇವುಗಳಿಗೆ ಲಾಭವೇ ಆಗಿದೆ.

ಶಾಲೆಯು ಮಕ್ಕಳ ಆಸಕ್ತಿ, ಹವ್ಯಾಸ ಮತ್ತು ಮನೋವೃತ್ತಿಗಳ ರೂಪಣೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ದೈಹಿಕವಾಗಿ ಸಬಲವಾದ, ಬೌದ್ಧಿಕವಾಗಿ ಜಾಗೃತವಾದ, ಭಾವನಾತ್ಮಕವಾಗಿ ಸ್ಥಿತಪ್ರಜ್ಞವಾದ ಮತ್ತು ಸಾಮಾಜಿಕವಾಗಿ ಯೋಗ್ಯವಾದ ಸಮತೋಲದ ವ್ಯಕ್ತಿತ್ವಗಳನ್ನು ಅದು ರೂಪಿಸಿ ಬೆಳೆಸುತ್ತದೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಹಾಗೂ ಗ್ರಾಮೀಣ ಮತ್ತು ಪಟ್ಟಣದ ಶಾಲೆಗಳಲ್ಲಿ ಅವುಗಳ ಸಾಮಾಜಿಕ ಸಂರಚನೆ ಮತ್ತು ವಾತಾವರಣದ ದೃಷ್ಟಿಯಿಂದ ಹಲವಾರು ವ್ಯತ್ಯಾಸಗಳಿರುತ್ತವೆ.

ಖಾಸಗಿ ಶಾಲೆಗಳಲ್ಲಿ ಇರುವ ಸುವ್ಯವಸ್ಥಿತ ಕಟ್ಟಡ, ಸೂಕ್ತವಾದ ಪರಿಣಾಮಕಾರಿ ಬೋಧನಾ ಸಲಕರಣೆಗಳು, ಸ್ವಚ್ಛ ಮತ್ತು ಸ್ವಸ್ಥ ಶಾಲಾ ಆವರಣದ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಸಿಗುವುದು ಅಪರೂಪ. ಸರ್ವ ಶಿಕ್ಷಣ ಆವರಣದ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಸಿಗುವುದು ಅಪರೂಪ. ಸರ್ವ ಶಿಕ್ಷಣ ಅಭಿಯಾನದ ನಂತರ ಒಂದಷ್ಟು ಪರಿಸ್ಥಿತಿ ಬದಲಾಗಿದ್ದರು ನಿರ್ವಹಣೆಯಲ್ಲಿನ ಇಚ್ಛಾಶಕ್ತಿ ಮತ್ತು ಆಸಕ್ತಿಯ ಕೊರತೆಯಿಂದಾಗಿ ಮತ್ತೆ ಅದೇ ಅಂತರವು ಉಳಿದೇ ಇದೆ. ಖಾಸಗಿ ಶಾಲೆಗಳ ಶಿಕ್ಷಕರು ಶಾಲೆಯು ಒದಗಿಸುವ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಬೋಧನೆಯನ್ನು ಪರಿಣಾಮಕಾರಿಯಾಗಿಸಿಕೊಳ್ಳಲು, ಮಕ್ಕಳಿಗೆ ಕಠಿಣ ಪರಿಕಲ್ಪನೆಗಳನ್ನು ಮನವರಿಕೆ ಮಾಡಿಕೊಡಲು ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಇದಕ್ಕೆ ಆಡಳಿತ ಮಂಡಳಿಯ ಬಿಗಿ ನಿಲುವು ಮತ್ತು ಸೇವಾ ಅಭದ್ರತೆಯ ಭಯಗಳು ಕಾರಣವಾಗಿರಲಿಕ್ಕೂ ಸಾಕು. ಅದೇನೇ ಇದ್ದರೂ ಇದರ ಪರಿಣಾಮವು ನೇರವಾಗಿ ಶೈಕ್ಷಣಿಕ ಗುಣಮಟ್ಟದ ಮೇಲಂತೂ ಆಗಿಯೇ ಆಗುತ್ತದೆ. ಸರ್ಕಾರಿ ಶಾಲೆಯ ಶಿಕ್ಷಕರ ವಿಷಯಕ್ಕೆ ಬಂದಾಗ ಬೋಧನೋಪಕರಣಗಳಿಗಾಗಿ ನೀಡಲಾಗುವ ಅನುದಾನವು ಕೆಲವು ಸಂದರ್ಭಗಳಲ್ಲಿ ಶಿಕ್ಷಕರನ್ನು ತಲುಪದೇ ಹೋದರೆ ಇನ್ನು ಕೆಲವು ಸಂದರ್ಭಗಳಲ್ಲಿ ತಲುಪಿದರೂ ಶಿಕ್ಷಕರು ಅದನ್ನು ಉದ್ದೇಶಿತ ಉದ್ದೇಶಕ್ಕಾಗಿ ಬಳಸದೆ ಉಳಿಯುತ್ತಾರೆ. ಇದಕ್ಕೆ ನನ್ನದೆಂಬ ಭಾವನೆಯ ಕೊರತೆ, ಬದ್ಧತೆಯ ಕೊರತೆ ಹಾಗೂ ಸೇವಾ ಭದ್ರತೆಯ ಅಭಯಗಳೇ ಕಾರಣವಾಗಿರಲಿಕ್ಕೆ ಸಾಧ್ಯತೆಗಳಿವೆ.

ಸರ್ಕಾರಿ ಶಾಲೆಗಳಲ್ಲಿ ವೈಜ್ಞಾನಿಕ ಉಪಕರಣಗಳಿದ್ದರೂ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳು ಇರುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಪ್ರತಿ ಹೊಸ ಖರೀದಿಯೂ ‘ಸೂಕ್ತ ಮಾರ್ಗದ ಮೂಲಕ’ವೇ ಆಗಬೇಕಾಗಿರುವುದರಿಂದ ವಿಳಂಬವೂ ಇದರೊಂದಿಗೆ ಬೆರೆತುಕೊಳ್ಳುತ್ತದೆ. ಖಾಸಗಿ ಶಾಲೆಗಳ ಆಡಳಿತ ಯಂತ್ರಾಂಗವು ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಏಕೆಂದರೆ ಅದಕ್ಕೆ ದಾಖಲಾತಿ ಕುಸಿಯುವ ಮತ್ತು ಸಂಸ್ಥೆಯ ವಿಶ್ವಾಸಾರ್ಹತೆ ಕಡಿಮೆಯಾಗುವ ಭಯವಿರುತ್ತದೆ.

ಸರ್ಕಾರಿ ಶಾಲೆಗಳಲ್ಲಿ ಮುಖ್ಯ ಗುರುಗಳ ಕೊಠಡಿ, ಕಚೇರಿ, ಶಿಕ್ಷಕ-ಶಿಕ್ಷಕಿಯರಿಗಾಗಿ ಪ್ರತ್ಯೇಕ ಸಿಬ್ಬಂದಿ ಕೋಣೆ,. ದೈಹಿಕ ಶಿಕ್ಷಣ ಕೊಠಡಿ.. ಮುಂತಾದವುಗಳ ವ್ಯವಸ್ಥೆ ಅಷ್ಟೊಂದು ಸಮರ್ಪಕವಾಗಿರುವುದಿಲ್ಲ. ಕಡಿಮೆ ಸ್ಥಳಾವಕಾಶದ ತರಗತಿ ಕೊಠಡಿಗಳು, ದುರಕ್ತಿ ಬಾಕಿಯಿರುವ ಶಾಲಾ ಕಟ್ಟಡಗಳ ದೃಶ್ಯವು ಸಾಮಾನ್ಯವಾಗಿದ್ದು ತರಗತಿಗಳು ಬಹುತೇಕ ಬಹುವರ್ಗ ಮಾದರಿಯವಾಗಿರುತ್ತವೆ ಇಲ್ಲವೆ ತುಂಬಿ ತುಳುಕುವಷ್ಟು ವಿದ್ಯಾರ್ಥಿಗಳನ್ನು ಹೊಂದಿರುತ್ತವೆ. ಆದರೆ ಇದಕ್ಕೆ ಶಾಲೆ ಹೊಣೆಗಾರ ಅಲ್ಲ. ಸರ್ಕಾರಿ ಶಾಲೆಗಳಲ್ಲಿ ಫೀ ಕಡಿಮೆ ಇರುವುದರಿಂದ ಮತ್ತು ಸಮವಸ್ತ್ರ-ಊಟ-ಪುಸ್ತಕ-ವಿದ್ಯಾರ್ಥಿವೇತನ ಇನ್ನೂ ಮುಂತಾದ ಹಲವು ಸೌಲಭ್ಯಗಳಿರುವುದರಿಂದ ಕೆಳಮಧ್ಯಮ ವರ್ಗದ ಮಕ್ಕಳು ಇಲ್ಲಿಗೇ ಬರುತ್ತವೆ. ಯಾರಿಗೂ ಪ್ರವೇಶಾತಿಯನ್ನು ನಿರಾಕರಿಸುವಂತಿಲ್ಲವಾಗಿ ನಿಗದಿತ ಸಾಮರ್ಥ್ಯ ಮೀರಿರುವುದು ಪ್ರವೇಶಾತಿಯನ್ನು ನಿರಾಕರಿಸುವಂತಿಲ್ಲವಾಗಿ ನಿಗದಿತ ಸಾಮರ್ಥ್ಯ ಮೀರಿರುವುದು ಗೊತ್ತಾದರೂ ವಿಧಿಯಿಲ್ಲದೆ ದಾಖಲು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿ ಈ ಅತಿದಟ್ಟಣೆಯ ಸಮಸ್ಯೆಯು ಉದ್ಭವಿಸುತ್ತದೆ.

ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ತರಗತಿಯಲ್ಲೂ ನೂರರ ಗಡಿಯಲ್ಲಿದ್ದರೆ ಖಾಸಗಿ ಶಾಲೆಗಳಲ್ಲಿ ಇದರ ಪ್ರಮಾಣ ೩೫-೬೦ ಇದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿಯ ನಿಯಂತ್ರಣವು ಸಾಧ್ಯವಿಲ್ಲವಾಗಿ ಅದಕ್ಕಿರುವ ಒಂದೇ ಪರಿಹಾರೋಪಾಯವೆಂದರೆ ಸಾಕಷ್ಟು ಸಂಖ್ಯೆಯ ಕೊಠಡಿಗಳನ್ನು ನಿರ್ಮಿಸುವುದು. ಇಷ್ಟಾದರೆ ಸಮಸ್ಯೆ ಬಗೆಹರಿಯಿತು ಎಂದುಕೊಳ್ಳುವಂತಿಲ್ಲ. ಏಕೆಮದರೆ ನಿರ್ಮಾಣಗೊಂಡ ಹೆಚ್ಚುವರಿ ಸಂಖ್ಯೆಯ ಕೊಠಡಿಗಳಿಗನುಗುಣವಾಗಿ ಶಿಕ್ಷಕರನ್ನೂ ಒದಗಿಸಬೇಕಾಗುತ್ತದೆ. ಕೊಠಡಿ ನಿರ್ಮಾಣ ಮತ್ತು ಶಿಕ್ಷಕರ ನೇಮಕಾತಿಯ ವಿಷಯವನ್ನು ಸ್ವತಃ ಸರ್ಕಾರವೇ ನೋಡಿಕೊಳ್ಳುತ್ತಿರುವುದರಿಂದ ಮತ್ತೆ ಇದು ‘ಸೂಕ್ತ ಮಾರ್ಗದ ಮೂಲಕ’ ಹಾದು ಬರುವವರೆಗೆ ವಿಳಂಬವಾಗಿ ಸಮಸ್ಯೆಯು ರೂಢಿಯಾಗಿ ಹೋಗಿರುತ್ತದೆ. ಖಾಸಗಿ ಶಾಲೆಗಳಲ್ಲಿ ಎಲ್ಲವೂ ಒಬ್ಬರ ಕೈಯಲ್ಲಿ ಇರುವುದರಿಂದ ಈ ಬಗೆಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಾಧ್ಯವಾಗುತ್ತದೆ.

ಪೀಠೋಪಕರಣಗಳ ವ್ಯವಸ್ಥೆಯು ಮೊದಲಿಗಿಂತ ಸರ್ಕಾರಿ ಶಾಲೆಗಳಲ್ಲಿ ಈಗ ತುಂಬಾ ವ್ಯವಸ್ಥಿತವಾಗಿ ಆಗಿದೆ. ಬಹುತೇಕ ಎಲ್ಲಿಯೂ ಮಕ್ಕಳು ನೆಲದ ಮೇಲೆ ಕೂರುವ ಪರಿಸ್ಥಿತಿ ಇಲ್ಲ. ಹಲವಾರು ಕಡೆ ಈ ವಿಷಯದಲ್ಲಿ ಸರ್ಕಾರದೊಂದಿಗೆ ಕೆಲ ಸರ್ಕಾರೇತರ ಸ್ವಯಂಸೇವಾ ಸಂಘಗಳೂ ಕೈ ಜೋಡಿಸಿವೆ. ಆದರೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ನೆರವಾಗುವ ಪ್ರಯೋಗಾಲಯ ಮತ್ತು ಓದುವ ಹವ್ಯಾಸ ಬೆಳಸುವ ವಾಚನಾಲಯಗಳಿಗಾಗಿ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಬಹುಪಾಲು ಸರ್ಕಾರಿ ಶಾಲೆಗಳಲ್ಲಿ ಇಲ್ಲದಿರುವುದು ನೋವಿನ ಸಂಗತಿಯಾಗಿದೆ.

ಶಾಲಾ ಹಂತದ ಅನುಷ್ಠಾನದ ಮಿತಿಯಲ್ಲಿರುವ ವೇಳಾಪಟ್ಟಿಯ ವಿಷಯಕ್ಕೆ ಬಂದರೆ ಸರ್ಕಾರಿ ಶಾಲೆಗಳ ವೇಳಾಪಟ್ಟಿ ಹೆಚ್ಚಿನ ಸಾಮ್ಯತೆ ಮತ್ತು ನಿಯಮ ಸಡಿಲತೆ ಹೊಂದಿದ್ದು ಖಾಸಗಿ ಶಾಲೆಗಳ ವೇಳಾಪಟ್ಟಿಯು ಇದಕ್ಕೆ ಹೋಲಸಿದರೆ ಹೆಚ್ಚು ಕರಾರುವಾಕ್ಕಾದುದೂ, ಬಿಗಿಯಾದ ನಿಯಮಗಳಿಂದ ಕೂಡಿದುದೂ ಆಗಿದೆ. ಪಾಲಕ-ಶಿಕ್ಷಕರ ಭೇಟಿ, ಪಾಲಕರ ಸಭೆಗಳಂತೂ ಸರ್ಕಾರಿ ಶಾಲೆಗಳಲ್ಲಿ ತುಂಬಾ ವಿರಳ. ಸಮುದಾಯದತ್ತ ಶಾಲಾ ಕಾರ್ಯಕ್ರಮ, ವಿದ್ಯಾರ್ಥಿ ವೇತನದ ವಿತರಣೆಯಂಥ ಅನಿವಾರ್ಯ ಮತ್ತು ಲಾಭದಾಯಕ ದಿನಗಳಂದು ಮಾತ್ರ ಪಾಲಕರು ಶಾಲೆಗಳ ಕಡೆ ತಲೆ ಹಾಕುವುದು ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಕಂಡು ಬಂದರೆ, ನಗರದ ಖಾಸಗಿ ಶಾಲೆಗಳಲ್ಲಿ ಇವು ನಿಯಮಿತವಾಗಿ ನಡೆಯುತ್ತವೆ ಮತ್ತು ಪಾಲಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಕಂಡು ಬರುತ್ತದೆ.

ಇದರ ಕಾರಣವು ಸಾಮಾಜಿಕ ಸಂರಚನೆಯಲ್ಲಿದೆ. ಹಳ್ಳಿಯ ಪಾಲಕರು ಒಂದು ದಿನ ಶಾಲೆಗೆ ಭೇಟಿ ಕೊಡಬೇಕಾದರೆ ಅವರ ಒಂದು ದಿನದ ಕೂಲಿಯೋ ಮತ್ತೊಂದೋ ಒಟ್ಟಾರೆ ಕೆಲಸವನ್ನು ಬಿಡಬೇಕಾಗುತ್ತದೆ. ಅನಕ್ಷರಸ್ಥರಾದ ಅವರು ಶಾಲೆಗೆ ಭೇಟಿ ಕೊಟ್ಟಾಗ ಮಾಡಬಹುದಾದ ಕೆಲಸವೆಂದರೆ ಮಾಸ್ತರರು ಹೇಳಿದಲ್ಲಿ ಸಹಿ ಮಾಡುವುದು ಅಥವಾ ಹೆಡ್‌ ಮಾಸ್ತರರ ಮಾತುಗಳನ್ನು ಸುಮ್ಮನೆ ಕುಳಿತು ಕೇಳಿಸಿಕೊಳ್ಳುವುದು. ಆದರೆ ಅದೇ ನಗರದ ಖಾಸಗಿ ಶಾಲೆಯ ಪಾಲಕರಿಗೆ ಶಾಲೆಯ ಭೇಟಿ ಒಂದು ಮುಖ್ಯವಾದ ಕೆಲಸ. ಶಿಕ್ಷಕ-ಪಾಲಕರ ಭೇಟಿ ಕಾರ್ಯಕ್ರಮವನ್ನು ಪ್ರತಿಷ್ಠೆಯ ವಿಷಯವಾಗಿ ಭಾವಿಸುವ ಗಂಡಸರಿರುವಂತೆ, ಈ ಅವಕಾಶವನ್ನು ತಮ್ಮ ಒಂದು ‘ಔಟಿಂಗ್‌’ ಎಂಬಂತೆ ತಿಳಿದುಕೊಂಡು, ಎಲ್ಲರನ್ನು ಭೇಟಿಯಾಗಿ ಹರಟುವ ‘ಗೆಟ್‌ ಟುಗೆದರ್’ ಆಗಿ ಮಾರ್ಪಡಿಸಿಕೊಳ್ಳುವ ಮಹಿಳಾಮಣಿಗಳೂ ಉಂಟು. ಎಲ್ಲ ಪಾಲಕರು ಹೀಗೆ ಇರುವುದಿಲ್ಲವಾದರೂ ಒಟ್ಟಾರೆಯಾಗಿ ನಗರದ ಖಾಸಗಿ ಶಾಲೆಗಳ ಮಕ್ಕಳ ಪಾಲಕರು ಶಾಲೆಗೆ ಭೇಟಿ ನೀಡುವ ಅವಕಾಶಗಳಿಂದ ತಪ್ಪಿಸಿಕೊಳ್ಳುವುದು ವಿರಳವೆಂದೇ ಹೇಳಬಹುದು. ಅಧಿಕಾರಿಗಳು, ಬಿಜಿನೆಸ್‌ಮನ್‌ಗಳು ಮುಂತಾದ ವರ್ಗಗಳ ಪಾಲಕರು ಈ ಮಾತಿಗೆ ಅಪವಾದವಾಗಿರಲೂಬಹುದು. ತಮ್ಮ ಮಕ್ಕಳ ಕಲಿಕೆಯ ಪ್ರಗತಿಯನ್ನು ಪರೀಕ್ಷಿಸುವತ್ತಲೇ, ಶಿಕ್ಷಕರನ್ನು ಮಾತಿಗೆಳೆದು ಅಳೆಯುವ,ತಮ್ಮ ನಿರೀಕ್ಷೆಗಳನ್ನು ಮುಕ್ತವಾಗಿ ಚರ್ಚಿಸುವ ಪಾಲಕರ ಸಂಖ್ಯೆಯಂತೂ ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ನಗರದ ಖಾಸಗಿ ಶಾಲೆಗಳಲ್ಲಿಯೇ ಹೆಚ್ಚಾಗಿದೆ ಎಂಬುದಂತೂ ಸತ್ಯವಾದ ಮಾತಾಗಿದೆ.

ಒಟ್ಟಾರೆ ವಾತಾವರಣವು ನಗರದ ಖಾಸಗಿ ಶಾಲೆಯಲ್ಲಿ ಆಕರ್ಷಕವೂ, ಚೈತನ್ಯದಾಯಕವೂ ಆಗಿದ್ದರೆ ಹಳ್ಳಿಯ ಸರ್ಕಾರಿ ಶಾಲೆಯದು ಅನಾಕರ್ಷಕವಾಗಿರುತ್ತದೆ. ನಿರ್ದಿಷ್ಟವಾಗಿ ಯಾರೊಬ್ಬರ ಒಡೆತನದಲ್ಲಿಯೂ ಸರ್ಕಾರಿ ಶಾಲೆ ಇಲ್ಲವಾದ್ದರಿಂದ, ಸಂಜೆ ಹೊತ್ತು ಅದು ಊರವರ ಆಟದ ಮೈದಾನವಾಗಿ, ಹತ್ತೆಂಟು ಬಗೆಯ ಅನೈತಿಕ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತದೆ. ಒಮ್ಮೆ ಹೀಗೇ ನೆರೆ ರಾಜ್ಯದ ಒಂದು ಊರಿಗೆ ಹೋಗಿದ್ದಾಗ ಸಂಜೆ ಹೊತ್ತು ಶಾಲೆಯ ಕಡೆ ವಾಯುವಿಹಾರ ಹೋದಾಗ ಅಲ್ಲಿಯ ತರಗತಿ ಕೋಣೆಯೊಂದಕ್ಕೆ ಬೀಗವನ್ನೇ ಹಾಕಿರದಿದ್ದುದು ಆಶ್ಚರ್ಯವನ್ನುಂಟು ಮಾಡಿತು. ನೂರೆಂಟು ಬಗೆಯ ಚಟುವಟಿಕೆಗಳಿಗಾಗಿ ಪುಂಡು-ಪೋಕರಿಗಳು ಶಾಲೆಯ ಆವರಣವನ್ನು, ತರಗತಿ ಕೊಠಡಿಗಳನ್ನು ಬಳಸಿಕೊಳ್ಳುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲವಾದ್ದರಿಂದ ಅಲ್ಲಿ ಒಂದು ಕೋಣೆಯನ್ನೇ ಅಂಥವರಿಗಾಗಿ ಬಿಟ್ಟು ಬಿಡಲಾಗಿತ್ತು.

ಹಾಗೆ ನೋಡಿದರೆ ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯಗಳು ಹೆಚ್ಚಿರುವುದು ಸರ್ಕಾರಿ ಶಾಲೆಯಲ್ಲೇ. ಇಲ್ಲಿ ವಿದ್ಯಾರ್ಥಿವೇತನವಿದೆ. ಉಚಿತ ಪಠ್ಯಪುಸ್ತಕಗಳ ಮತ್ತು ಸಮವಸ್ತ್ರಗಳ ಪೂರೈಕೆಯಿದೆ. ಪುಸ್ತಕಗಳನ್ನು ಇಟ್ಟುಕೊಳ್ಳಲು ಉಚಿತ ಬ್ಯಾಗುಗಳ ಸೌಲಭ್ಯವಿದೆ. ಹುಡುಗಿಯರಿಗಂತೂ ಯಾವುದೇ ಶುಲ್ಕವಿಲ್ಲ. ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆಯಿದೆ. ಪ್ರೌಢಶಾಲಾ ಹಂತಕ್ಕೆ ಬಂದರೆ ಉಚಿತ ಬೈಸಿಕಲ್‌ಗಳನ್ನು ನೀಡಲಾಗುತ್ತಿದೆ. ಇಷ್ಟೆಲ್ಲ ಇದ್ದರೂ ಇವುಗಳ ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಆದರೆ ವಿದ್ಯಾರ್ಥಿಗಳು ಸ್ವಯಂ-ಅರಿವಿನಿಂದ ಶಾಲೆಯ ಸೌಲಭ್ಯಗಳನ್ನು ಹೆಚ್ಚಾಗಿ ಮತ್ತು ಅರ್ಥಪೂರ್ಣವಾಗಿ ಬಳಸಿಕೊಳ್ಳುವುದು ಮಾತ್ರ ನಗರದ ಖಾಸಗಿ ಶಾಲೆಯಲ್ಲೇ. ಈ ಭಿನ್ನತೆಗೆ ಅವರವರ ಜೀವನಶೈಲಿಗಳೇ ಕಾರಣವಾಗಿವೆ.