ಕಲಿಕಾಕಾಂಕ್ಷಿ ಮಗುವಿನ ಸಮಸ್ಯೆಗಳು

ಉಚಿತ ಮತ್ತು ಕಡ್ಡಾಯ ಶಿಕ್ಷಣ, ಮಾತೃ ಭಾಷಾ ಶಿಕ್ಷಣದ ಮೂಲಕ ಶಿಕ್ಷಣ, ನಲಿ-ಕಲಿ ತತ್ವಾಧಾರಿತ ಬೋಧನೆ, ಅಕ್ಷರ ದಾಸೋಹ ಮುಂತಾದ ನೂರೆಂಟು ಕಾರ್ಯಕ್ರಮಗಳ ಮೂಲಕ ಸರಕಾರ ಮಗುವನ್ನು ಶಾಲೆಗೆ ಸೆಳೆಯಲು ಹಲವಾರು ಬಗೆಯಲ್ಲಿ ಶ್ರಮಿಸುತ್ತಿದೆ. ಇಂಥ ಯಾವುದೇ ಆಕರ್ಷಕ ಕೊಡುಗೆಗಳಿಲ್ಲದೆಯೂ ಹಿಂದಿನ ಕಾಲದಲ್ಲಿ ‘ಗುಡಿ ಸಾಲಿ’ಗಳಲ್ಲಿ ಓದಿದವರು ಇಂದು ಸಮಾಜದ ಬೇರೆ-ಬೇರೆ ರಂಗಗಳಲ್ಲಿ ಎಷ್ಟೋ ಎತ್ತರಕ್ಕೇರಿದವರೂ ಹಲವಾರು ಜನ ಇದ್ದಾರೆ. ಸೌಲಭ್ಯಗಳನ್ನು ನೀಡುವ ಮೂಲಕ ಸರಕಾರವು ಮಗುವಿನ ಮಾನಸಿಕ ಮತ್ತು ಬೌದ್ಧಿಕ ಹೊರೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿರುವುದೇನೋ ನಿಜ. ಆದರೆ ಕಲಿಕೆಯೆಂಬ ಬಹುಮುಖಿ ಆಯಾಮದ ಸಂಕೀರ್ಣ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಪ್ರಮುಖ ನಿಯೋಗಗಳಲ್ಲಿ ಶಿಕ್ಷಣ ಇಲಾಖೆಯೊಂದೇ ಇರದೆ ಇನ್ನೂ ಹಲವಾರು ಅಂಶಗಳು ತಳುಕು ಹಾಕಿಕೊಂಡಿವೆಯೆನ್ನುವುದೂ ಅಷ್ಟೇ ನಿಜ. ಹಾಗಾಗಿ ಇಷ್ಟೆಲ್ಲ ಸವಲತ್ತು, ಸೌಲಭ್ಯ, ಸಹಕಾರಗಳ ಹೊರತಾಗಿಯೂ ಪ್ರಾಥಮಿಕ ಹಂತದ ಮಕ್ಕಳ ಕಲಿಕೆಯ ದರದಲ್ಲಿ ಅಲ್ಲಲ್ಲಿ ಕುಂಠಿತ ಕಂಡು ಬರುತ್ತಿದೆ ಎನ್ನುವುದು ಕೆಲವರ ಅಂಬೋಣವಾಗಿದೆ. ಇದಕ್ಕೆ ಕಾರಣ ಮಗು ಎದುರಿಸುವ ಹಲವಾರು ಬಗೆಯ ಸಮಸ್ಯೆಗಳಾಗಿವೆ. ಕಲಿಕಾಕಾಂಕ್ಷಿ ಮಗುವು ಸಮರ್ಥವಾಗಿದ್ದರೆ ಈ ಎಲ್ಲ ಸಮಸ್ಯೆಗಳನ್ನು ಎದುರಿಸಿ ಮುಂದೆ ಬರುತ್ತದೆ. ಒಂದು ವೇಳೆ ಅಸಮರ್ಥವಾಗಿದ್ದರೆ ಕಲಿಯುವ ಸಾಮರ್ಥ್ಯವಿದ್ದೂ ನಿರೀಕ್ಷಿತ ಸಾಧನೆ ಮಾಡಲಾಗದೆ ಹಿನ್ನಡೆ ಅನುಭವಿಸುತ್ತದೆ. ಕಲಿಕಾಕಾಂಕ್ಷಿ ಮಗುವು ಎದುರಿಸುವ ಆ ಸಮಸ್ಯೆಗಳನ್ನೀಗ ಒಂದೊಂದಾಗಿ ನೋಡೋಣ.

) ಪಾಲಕರಿಂದ ಎದುರಿಸುವ ಸಮಸ್ಯೆಗಳು

ಗ್ರಾಮೀಣ ಪ್ರದೇಶಘಳ ನಿರಕ್ಷರಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತಾಗಿ ದಿವ್ಯ ನಿರ್ಲಕ್ಷ್ಯ ಅಥವಾ ಉಪೇಕ್ಷೆಯ ಧೋರಣೆಯನ್ನು ಹೊಂದಿರುವುದು ಸಾಮಾನ್ಯವಾಗಿದೆ. ಕುಟುಂಬದ ಪುರುಷ ಸದಸ್ಯರು ಕೃಷಿ ಚಟುವಟಿಕೆಗಳಲ್ಲೂ, ಸ್ತ್ರೀಯರು ಕೂಲಿ ಕೆಲಸ-ಮನೆಗೆಲಸಗಳಲ್ಲೂ ಬಿಜಿಯಾಗಿರುತ್ತಾರಾದ್ದರಿಂದ ಓದಿನಲ್ಲಿ ಮುಂದಿರುವ ಮಗು ತನ್ನ ಕಲಿಕಾಸಾಧನೆಯ ಹೆಮ್ಮೆ-ಸಂತೋಷಗಳನ್ನು ಹಂಚಿಕೊಳ್ಳಲು ಪ್ರೀತಿಪಾತ್ರರ ಕೊರತೆಯನ್ನನುಭವಿಸುತ್ತದೆ. ಈ ಭಾವನಾತ್ಮಕ ಹೊಡೆತದ ಜೊತೆಗೆ ಮನೆಯ ಅಶೈಕ್ಷಣಿಕ ವಾತಾವರಣ ಮಗುವಿನ ಕಲಿಕೆಗೆ ತೊಡಕುಂಟು ಮಾಡುತ್ತದೆ. ತಾಯಿ ತಂದೆಯರು ಅಶಿಕ್ಷಿತರಾಗಿರುವುದು ಒಂದು ಪ್ರತಿಕೂಲ ಪರಿಸ್ಥಿತಿ ಎಂದು ಅರ್ಥ ಮಾಡಿಕೊಳ್ಳಲಾಗದ ವಯಸ್ಸಿನ ಕಲಿಕಾಕಾಂಕ್ಷಿ ಮಗುವು ಮನೆಯಲ್ಲಿ ಸದಾ ಕಲಿಕೆಗೆ ಪೂರಕವಾದ ವಾತಾವರಣವಿರಬೇಕೆಂದು ಅಪೇಕ್ಷಿಸಿ ನಿರೀಕ್ಷಿಸುತ್ತದೆ. ಅದಿಲ್ಲದಿದ್ದಾಗ ನಿರಾಶೆಗೊಳ್ಳುತ್ತದೆ. ಇದಕ್ಕೆ ಕಲಶವಿಟ್ಟಂತೆ ಪಾಲಕರು ಅಗತ್ಯ ಕಲಿಕಾಸಾಮಗ್ರಿಗಳನ್ನು ಸಕಾಲಕ್ಕೆ ಪೂರೈಸುವುದೇ ಇರುವುದು ಮಗುವಿನ ಮೃದು ಮನಸ್ಸನ್ನು ಮತ್ತಿಷ್ಟು ಘಾಸಿಗೊಳಿಸುತ್ತದೆ. ಯಾವ್ಯಾವುದೋ ಕಾರಣಕ್ಕೆ ಕೆಲವು ಅಶಿಕ್ಷಿತ ಪಾಲಕರಲ್ಲಿ ತುಂಬಿರುವ ಶಿಕ್ಷಣದ ಕುರಿತ ತಾತ್ಸಾರ ಭಾವ, ಕಿತ್ತು ತಿನ್ನುವ ಬಡತನದೊಂದಿಗೆ ತಳುಕು ಹಾಕಿಕೊಂಡು ಬಂದಿರುವ ಅಜ್ಞಾನ, ಅಶಿಸ್ತು ಮತ್ತು ಮೂಢನಂಬಿಕೆಗಳು ಹಾಗೂ ಇವೆಲ್ಲಕ್ಕೂ ಮೇಲಾಗಿ ಅವರ ದುಶ್ಚಟಗಳು-ಮಗುವಿನ ಮೇಲೆ ಅಸಹ್ಯವಾದ, ಆಘಾತಕಾರಿಯಾದ ದೂರಗಾಮಿ ಪರಿಣಾಮ ಬೀರಬಲ್ಲ ಸಾಮರ್ಥ್ಯವುಳ್ಳವಾಗಿರುತ್ತವೆ. ಇನ್ನು ಮೇಲ್ಮದ್ಯಮ ಮತ್ತು ಶ್ರೀಮಂತ ಕುಟುಂಬಗಳ ಕಲಿಕಾಕಾಂಕ್ಷಿ ಮಗುವಿಗೆ ಇವುಗಳಿಗಿಂತ ಭಿನ್ನವಾದ ಸಮಸ್ಯೆಗಳಿರುತ್ತವೆ. ಅಗತ್ಯ ಸ್ವಾತಂತ್ರ್ಯದ ಕೊರತೆ, ಹೆಜ್ಜೆ ಹೆಜ್ಜೆಗೂ ಹೇರಲಾಗುವ ನಿರ್ಬಂಧಗಳು, ಹೆಚ್ಚಿನ ನಿರೀಕ್ಷೆಯ ಪರೋಕ್ಷ ಒತ್ತಡಗಳು ಹಾಗೂ ಅತಿಯಾದ ಶಿಸ್ತುಗಳು ಮಗುವಿನ ಅರಳಬೇಕಾದ ಮನಸ್ಸನ್ನು ಮುದುಡಿಸಿಬಿಡುತ್ತವೆ. ಕೌಟುಂಬಿಕ ಹಿಂಸಾಚಾರ ಮತ್ತು ಲಿಂಗ ಬೇಧಗಳಂತೂ ಬಡ ಮತ್ತು ಶ್ರೀಮಂತ ಯಾವುದೇ ಬಗೆಯ ಕುಟುಂಬದ ಹೆಣ್ಣುಮಗುವಿನ ಮನಸ್ಸಿನ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಬಲ್ಲಂಥ ಸಮಸ್ಯೆಗಳಾಗಿವೆ.

) ಸಮುದಾಯದ ಸಮಸ್ಯೆಗಳು

ಸಮುದಾಯವು ಯಾವುದೇ ಬಗೆಯ ವ್ಯವಸ್ಥೆ ಬಗ್ಗೆ ಸಹಮತ ಮತ್ತು ಸಹಕಾರಿ ಧೋರಣೆ ಹೊಂದಿದ್ದಲ್ಲಿ ಮಾತ್ರ ಅದರ ಸಂಗಮ ಪ್ರಗತಿ ಸಾಧ್ಯವಾಗುತ್ತದೆ. ಏಕೆಂದರೆ ಮಗುವು ಸೇರಿದಂತೆ ಮಾನವನು ಸಂಘಜೀವಿಯಾಗಿದ್ದಾನೆ. ಕಲಿಯುವ ಮಗು ಶಾಲೆಗೆ ಹೋಗುತ್ತ ಬರುತ್ತ ಸಮುದಾಯದೊಂದಿಗೆ ಒಡನಾಡುತ್ತ ಬೆಳೆಯುತ್ತಿರುವಾಗ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮಾಜಕ್ಕಿರುವ ಅಭಿಪ್ರಾಯ, ನಿರೀಕ್ಷೆ, ನಿರಾಶೆ, ಅಸಹನೆ ಮತ್ತು ಮೆಚ್ಚುಗೆಗಳು ಗೊತ್ತಾಗುತ್ತವೆ. ಇವೆಲ್ಲದರ ಜೊತೆಗೆ ತನ್ನ ಸ್ವಾನುಭವವೂ ಸೇರಿ ಹಿರಿಯ ಪ್ರಾಥಮಿಕ ಹಂತಕ್ಕ ಬರುವಷ್ಟರಲ್ಲಿ ಶಿಕ್ಷಣದ ಬಗ್ಗೆ ಅದಕ್ಕೂ ಒಂದು ಕಲ್ಪನೆ ಮೂಡಲು ಸಾಧ್ಯವಾಗಿರುತ್ತದೆ. ಸ್ತ್ರೀ ಶಿಕ್ಷಣದ ಬಗ್ಗೆ ಜನರಿಗಿರುವ ಕೀಳರಿಮೆ, ತಾತ್ಸಾರಗಳು ಮತ್ತು ಶಾಲಾ ಚಟುವಟಿಕೆಗಳಲ್ಲಿ ಸಮುದಾಯವು ಉತ್ಸಾಹದಿಂದ ಅಥವಾ ಒಟ್ಟಾರೆ ಪಾಲ್ಗೊಳ್ಳದಿರುವುದು, ಶಾಲಾ ವ್ಯವಸ್ಥೆಯಲ್ಲೂ ಜಾರಿಯಲ್ಲಿರುವ ಜಾತಿ ಪದ್ಧತಿ, ಊರವರು-ಹೊರಗಿನವರು ಶಾಲಾ ಆಸ್ತಿಯನ್ನು ಹಾಳು ಮಾಡುವುದು ಜೊತೆಗೆ ಶಾಲೆಯ ವಾತಾವರಣದಲ್ಲಿ ವಿಷ ಬೆರೆಸಿ ವಿಘ್ನಸಂತೋಷ ಅನುಭವಿಸುವ ಘಟ್ಟಭದ್ರ ಹಿತಾಸಕ್ತಿಗಳು. ಇವೇ ಮುಂತಾದವು ಪರೋಕ್ಷವಾಗಿ ಶಿಕ್ಷಣದ ಬಗ್ಗೆ ತನ್ನ ಸಮಾಜಕ್ಕಿರುವ ಆಸ್ಥೆ-ಅಸಮಾಧಾನ ಮುಂತಾದವುಗಳ ಕುರಿತಾಗಿ ಮಗುವಿಗೆ ಸಂದೇಶವನ್ನು ರವಾನಿಸುತ್ತವೆ.

ಕಲಿಕೆಯಲ್ಲಿ ಮುಂದಿರುವ ಮಗು ಇವುಗಳನ್ನು ಆಳವಾಗಿ ಚಿಂತಿಸಿ ನೋಡಿ, ಚೆನ್ನಾಗಿ ಓದುವವರಿಗೆ ಮುಂದೆ ಆಶಾದಾಯಕ ಭವಿಷ್ಯವಿಲ್ಲವೆಂದು ಒಂದೊಮ್ಮೆ ಅಂದುಕೊಂಡುಬಿಟ್ಟರೆ ನಿರಾಶೆಯಿಂದ ಕುಸಿಯುತ್ತದೆ. ಒಂದು ವೇಳೆ ತನ್ನೂರಿನಲ್ಲಿ ಓದಿಕೊಂಡವರು ಇಲ್ಲದಿದ್ದರಂತೂ ಮಗುವು ಸೂಕ್ತ ಮಾರ್ಗದರ್ಶನದ ಕೊರತೆಯನ್ನು ಅನುಭವಿಸಿ ಕೊರಗುತ್ತದೆ. ತನ್ನ ಮನಸ್ಥಿತಿಗೆ ಹೊಂದಿಕೆಯಾಗುವ ಸಮಾನಮನಸ್ಕರಿಲ್ಲದೆ ಮಗು ಒಂಟಿತನದ ಕರಾಳತೆಗೆ ಮುಖಾಮುಖಿಯಾಗುತ್ತದೆ. ಹೀಗೆ ಸಮುದಾಯವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಗುವಿನ ಮೇಲೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಭಾವಗಳನ್ನು ಬೀರುತ್ತಲೇ ಇರುತ್ತದೆ.

) ಶಿಕ್ಷಕರಿಂದ ಮಗು ಎದುರಿಸುವ ಸಮಸ್ಯೆಗಳು:

ಶಿಕ್ಷಕರು ಮಕ್ಕಳ ಭವಿಷ್ಯದ ರೂವಾರಿಗಳಾಗಿದ್ದಾರೆ. ಆದರೆ ಎಲ್ಲ ಶಿಕ್ಷಕರನ್ನು ಹಾಗೆ ಭಾವಿಸುವುದೂ ತಪ್ಪು ಕಲ್ಪನೆಯಾಗಿದೆ. ಕೆಟ್ಟ ನಡತೆಯ ಶಿಕ್ಷಕ ಮತ್ತು ಕೆಟ್ಟ ಬೋಧನೆಯ ಶಿಕ್ಷಕ ಇಬ್ಬರೂ ಮಗುವಿನ ಭವಿಷ್ಯಕ್ಕೆ ಮಾರಕರಾಗಿದ್ದಾರೆ. ಇವೆರಡೂ ಮಿಳಿತಗೊಂಡಿರುವ ಅಪರೂಪದ ಮಾದರಿಯ ಶಿಕ್ಷಕರೂ ಇದ್ದಾರೆ. ಇಂಥ ಶಿಕ್ಷಕರು ಕಲಿಕಾಕಾಂಕ್ಷಿ ಮಗುವಿನ ಮೇಲೆ ಬೀರುವ ಋಣಾತ್ಮಕ ಪ್ರಭಾವವು ಘೋರ ಸ್ವರೂಪದ್ದಾಗಿರುತ್ತದೆ.

ಕಂಠಪಾಠಕ್ಕೆ ಒತ್ತು ನೀಡುವುದು, ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸದಿರುವುದು, ಬೋಧನಾಶೈಲಿ ಮಕ್ಕಳ ಮಟ್ಟಕ್ಕೆ ಅನುಗುಣವಾಗಿಲ್ಲದಿರುವುದು, ತಮ್ಮಿಷ್ಟದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ತರತಮ ನೀತಿಯಿಂದ ಪಾಠ ಹೇಳುವುದು (ಎಲ್ಲರಿಗೂ ಸಮಾನವಾದ ವೈಯುಕ್ತಿಕ ಗಮನ ನೀಡುತ್ತ ಬೋಧಿಸುವುದಕ್ಕೆ ಶೈಕ್ಷಣಿಕ ಪರಿಭಾಷೆಯಲ್ಲಿ ‘ತರಗತಿಯ ಪ್ರಜಾತಂತ್ರೀಕರಣ’ ಎನ್ನಲಾಗುತ್ತದೆ.), ವಿಷಯ ಪ್ರಭುತ್ವದ ಕೊರತೆ, ಅನಿಯತ ಬೋಧನೆ, ನಿರಂತರ ಬೋಧನೆ, ನೀರಸ ಬೋಧನೆ, ಬರೆವಣಿಗೆಯ ದೋಷಗಳು, ಅಸ್ಪಷಟ ಮತ್ತು ಅಸಂಗತ ಉಚ್ಛಾರ ಶೈಲಿ ಇವೇ ಇನ್ನೂ ಮುಂತಾದ ಶಿಕ್ಷಕನ ಬೋಧನಾವರ್ತನೆಗಳಿಂದಾಗಿ ಮಗುವಿಗೆ ನಿರ್ದಿಷ್ಟ ಶಿಕ್ಷಕರಲ್ಲಿ, ಅವರು ಬೋಧಿಸುವ ವಿಷಯದಲ್ಲಿ ಆಸಕ್ತಿ ಕುಂದುತ್ತದೆ. ಅಸಮಾಧಾನ ಬೆಳೆಯುತ್ತದೆ. ಇಂಥ ಒಂದು ವಿಷಯ ಅಥವಾ ಶಿಕ್ಷಕನಿಗೆ ಸಂಬಂಧಿಸಿದ ಮಗುವಿನ ಮನೋಭಾವ ಅದರ ಒಟ್ಟು ಕಲಿಕಾಗತಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಬೋಧನೆಗಿಂತ ಬೋಧಕೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾದ ಶಿಕ್ಷಕರು, ಮಕ್ಕಳಿಂದ ತಮ್ಮ ಮನೆಗೆಲಸ ಮಾಡಿಸಿಕೊಳ್ಳುವ ಶಿಕ್ಷಕರು, ಅತಿಯಾದ ಶಿಕ್ಷೆ, ಅತಿಯಾದ ಹೋಂ-ವರ್ಕಿನ ಶಿಕ್ಷಕರು.. ತಮಗರಿವಿಲ್ಲದೆ ಮಕ್ಕಳನ್ನು ಅವರ ಕಲಿಕೆಯ ಸರಿದಾರಿಯಿಂದ ದೂರ ಸರಿಸಿ ಹಳಿ ತಪ್ಪಿಸಿಬಿಡುತ್ತಾರೆ.

) ಸಹಪಾರಿ ಮಕ್ಕಳಿಂದ ಎದುರಿಸುವ ಸಮಸ್ಯೆಗಳು

ಆಸಕ್ತಿಯಿಂದ ಪಾಠ ಕೇಳುತ್ತಿರುವ ಮಗುವಿನ ಹತ್ತಿರ ಕೂತಿರುವ ಹುಡುಗನೊಬ್ಬನು ಏನೋ ಕೀಟಲೆ ಮಾಡಿ ರಸಭಂಗ ಮಾಡುತ್ತಾನೆ. ಮಕ್ಕಳ ಮನಃಶಾಸ್ತ್ರದ ಪ್ರಕಾರ ಮಕ್ಕಳು ಸಮಾನಾಸಕ್ತರ ಗುಂಪು ಕಟ್ಟಿಕೊಳ್ಳುವುದರಿಂದ ಇಂಥ ಎರಡು ಗುಂಪುಗಳ ನಡುವಿನ ವಿನಾಕಾರಣ ಘರ್ಷಣೆಗಳಲ್ಲಿ ವೈಯುಕ್ತಿಕ ಅಸಕ್ತಿಯಿಲ್ಲದಿದ್ದರೂ ಗುಂಪಿನ ಬದ್ಧತೆಗಾಗಿಯಾದರೂ ಭಾಗವಹಿಸಬೇಕಾದ ಅನಿವಾರ್ಯತೆಗೆ ಕಲಿಕಾಕಾಂಕ್ಷಿ ಮಗು ಒಳಗಾಗಬೇಕಾಗುತ್ತದೆ. ಜಾಣನಾದ ಕಾರಣಕ್ಕೆ ಇತರರು ಆಟಕ್ಕೆ ಸೇರಿಸಿಕೊಳ್ಳದೆ ಐಸೋಲೇಟ್‌ ಆಗಿ ಉಳಿಯುವ ಮಗು ಖಿನ್ನತೆಗೊಳಗಾಗುತ್ತದೆ. ಜೊತೆಗೆ ಅವನ/ಅವಳ ಪುಸ್ತಕ, ಪೆನ್ಸಿಲ್ಲುಗಳು ಆಗಾಗ ಕಳುವಾಗುತ್ತವೆ. ಇಂಥವೇ ಇನ್ನೂ ಮುಂತಾದ ವಿಚಿತ್ರ ಸಮಸ್ಯೆಗಳನ್ನು ಮಗು ತನ್ನ ಸಹಪಾಠಿಗಳಿಂದ ಎದುರಿಸುತ್ತಿರುತ್ತದೆ.

ಒಬ್ಬ ರ‍್ಯಾಂಕ್‌ ಬಂದರೆ ಕೆಲವರು ‘ಅದೇನು ದೊಡ್ಡ ವಿಷಯ, ಮನೇಲಿ ಅಪ್ಪ-ಅಮ್ಮ ಓದಿಸ್ತಾರೆ’ ಅಂತ ಮೂಗು ಮುರಿಯುವುದನ್ನು ಕಾಣುತ್ತೇವೆ. ಆದರೆ ಕಲಿಕಾಕಾಂಕ್ಷಿ ಮಗುವಿನ ಶೈಕ್ಷಣಿಕ ಪರಿಸರದಲ್ಲಿ ಕೇವಲ ಅಪ್ಪ-ಅಮ್ಮ ಮಾತ್ರ ಇಲ್ಲ. ಶಿಕ್ಷಕರಿದ್ದಾರೆ, ಸಹಪಾಠಿಗಳಿದ್ದಾರೆ ಮತ್ತು ಸಮಾಜವಿದೆ. ಒಂದೆಡೆ ವಾತಾವರಣವು ಪೂರಕವಾಗಿದ್ದರೂ ಉಳಿದ ಕಡೆಗಳಲ್ಲಿ ಪ್ರತಿಕೂಲವಾಗಿರಬಹುದಾದ ಸಾಧ್ಯತೆಗಳಿವೆ. ಹಾಗಾಗಿ ಕಲಿಕಾಕಾಂಕ್ಷಿ ಮಗುವು ಎದುರಿಸುವ ಸಮಸ್ಯೆಗಳು ಅದಕ್ಕಷ್ಟೇ ಗೊತ್ತು. ಹೀಗೆ ಪಾಲಕ, ಸಹಬಾಲಕ, ಶಿಕ್ಷಕ ಮತ್ತು ಸಮುದಾಯಗಳಿಂದ ನಾನಾರೀತಿಯ ಸಮಸ್ಯೆಗಳನ್ನು ಮಗು ಕಲಿಕೆಗೆ ಸಂಬಂಧಿಸಿದಂತೆ ಎದುರಿಸುತ್ತಿರುತ್ತದೆ. ಹಾಗಾಗಿ ‘ಸರಕಾರ ಎಲ್ಲ ಸೌಲಭ್ಯ ಕೊಟ್ಟ ಮೇಲೂ ಮಗು ಕಲಿಯಲಿಲ್ಲವೆಂದರೆ ಏನರ್ಥ?’ ಎಂಬ ಪ್ರಶ್ನೆಯೂ, ‘ಮನೇಲಿ ಓದಿಸ್ತಾರೆ ರ‍್ಯಾಂಕ್‌ ಬರೋದರಲ್ಲೇನು ವಿಶೇಷ?’ ಎಂಬ ಪ್ರಶ್ನೆಯೂ ಅರ್ಥಹೀನವಾಗುತ್ತವೆ.

ಮಗುವಿನ ಕಲಿಕಾ ಹಿನ್ನಡೆ ಮತ್ತು ಸಾಧನೆಗಳಿಗೆ ಮೇಲೆ ಹೇಳಿದ ಇಷ್ಟೊಂದು ಕಾರಣಗಳ ಸಂಬಂಧವಿದೆ. ಇವೆಲ್ಲವನ್ನು ಎದುರಿಸಿ ಮುಂದೆ ಸಾಗುವ ಮನೋದಾರ್ಢ್ಯತೆ ಇರುವ ಕಲಿಕಾಸಕ್ತ ಮಗು ಮಾತ್ರ ಸಾಧನೆಯ ಶಿಖರವೇರುತ್ತದೆ. ಮನೋದಾರ್ಢ್ಯತೆಯ ಕೊರತೆಯಿರುವ ಮಗು ಕಲಿಕಾಸಕ್ತಿಯಿದ್ದೂ ಹಿನ್ನಡೆ ಅನುಭವಿಸುವಂತಾಗುತ್ತದೆ.

ಶಿಕ್ಷಣ, ಸಂಸ್ಕೃತಿ ಮತ್ತು ಜೀವನಶೈಲಿ

ಒಬ್ಬ ವಿದ್ಯಾರ್ಥಿಯ ಜೀವನಶೈಲಿಯು-ಅವನು ಹಳ್ಳಿಯ ಸರ್ಕಾರಿ ಶಾಲೆಯವನೇ ಆಗಿರಲಿ ಅಥವಾ ನಗರದ ಖಾಸಗಿ ಶಾಲೆಯವನೇ ಆಗಿರಲಿ-ನಿಸ್ಸಂಶಯವಾಗಿ ಅವನ ಶಿಕ್ಷಣದೊಂದಿಗೆ ನೇರ ಸಂಬಂಧವನ್ನು ಹೊಂದಿರುತ್ತದೆ. ಏಕೆಂದರೆ ಮಗುವಿನ ಬೆಳವಣಿಗೆ ಎನ್ನುವುದು ಹಲವಾರು ಅನುಭವಾಂಶಗಳು ಮತ್ತು ದೃಷ್ಟಿಕೋನಗಳ ಮೊತ್ತವಾಗಿದ್ದು ಇವುಗಳನ್ನು ಅವನಿಗೆ ಒದಗಿಸುವ ಮುಖ್ಯ ಮತ್ತು ಮೂಲ ಮಾಧ್ಯಮ ಶಿಕ್ಷಣವೇ ಆಗಿರುತ್ತದೆ. ದೇಹದ ರಸಾಯನಶಾಸ್ತ್ರ, ಪೌಷ್ಟಿಕತೆ, ಭೌತಿಕ ಲಕ್ಷಣಗಳು ಮತ್ತು ಅನಾರೋಗ್ಯದ ಪ್ರಭಾವಗಳು- ಈ ಎಲ್ಲ ಜೈವಿಕ ಸಂಗತಿಗಳು ಮಗುವಿನ ವರ್ತನೆಯನ್ನು ರೂಪಿಸುವ ಅಂಶಗಳಾಗಿರುತ್ತವೆ. ಜೀವನಶೈಲಿ ಎಂಬುದು ಈ ಎಲ್ಲ ಜೈವಿಕಾಂಶಗಳು ಪರಿಸರದೊಂದಿಗೆ ಹೊಂದಿರುವ ಅಂತರ್ ಸಂಬಂಧ ಮತ್ತು ಮಗುವು ತನ್ನನ್ನು ಮತ್ತು ತನ್ನ ಪರಿಸರವನ್ನು ಗ್ರಹಿಸಿಕೊಂಡಿರುವ ರೀತಿಗಳನ್ನು ಅವಲಂಬಿಸಿರುತ್ತದೆ. ಹಾಗಾಗಿಯೇ ಪ್ರತಿ ಮಗುವಿನ ಜೀವನ ಶೈಲಿಯೂ ಭಿನ್ನ ಮತ್ತು ಅನನ್ಯವಾಗಿರುತ್ತದೆ.

ಪರಿಸರದ ಎಲ್ಲ ಅಂಶಗಳ ಪೈಕಿ ಮನೆ, ಶಾಲೆ ಮತ್ತು ಸಮುದಾಯಗಳಲ್ಲಿ ಮಗು ಹೊಂದಿರುವ ಅಂತರ್ ವ್ಯಕ್ತಿ ಸಂಬಂಧಗಳು ತುಂಬಾ ಪ್ರಭಾವಶಾಲಿಯಾಗಿರುತ್ತವೆ. ಪ್ರತಿಯೊಬ್ಬನ ಭೂತದ ಮೇಲೆ ವರ್ತಮಾನ ಮತ್ತು ಭವಿಷ್ಯತ್ತುಗಳು ಅವಲಂಬಿತವಾಗಿದ್ದು, ಭೂತಕಾಲದಲ್ಲಿ ಗಳಿಸಿದ ಅನುಭವಗಳೇ ಮುಂದಿನ ಬೆಳವಣಿಗೆಯ ಹಾದಿಯನ್ನು ರೂಪಿಸುತ್ತಾ ಸಾಗುತ್ತವೆ. ಹೀಗೆ ಗಳಿಸಿದ ಅನುಭವಗಳ ಆಧಾರದ ಮೇಲೆ ರೂಪುಗೊಂಡ ವ್ಯಕ್ತಿತ್ವವೇ ಬಹುಪಾಲು ಜೀವನದುದ್ದಕ್ಕೂ ಬದಲಾವಣೆಯಾಗದೆ ಉಳಿದುಬರುವುದು. ಬದಲಾವಣೆಗಳಾದರೂ ಕೂಡ ಶೇಕಡಾ ಹತ್ತಕ್ಕಿಂತ ಹೆಚ್ಚು ಬದಲಾವಣೆ ಸಾಧ್ಯವೇ ಇಲ್ಲವಾದ್ದರಿಂದ ಜೀವನಶೈಲಿಯೂ ಕೂಡ ಹೀಗೇ ಬದಲಾವಣೆಯಾಗದೆ ಉಳಿಯುವುದು. ಅದೇ ಕಾರಣಕ್ಕಾಗಿ ತನ್ನನ್ನು ತಾನು ನೋಡಿಕೊಳ್ಳುವ ರೀತಿ ಮತ್ತು ತನ್ನನ್ನು ತಾನು ಭಾವಿಸಿಕೊಳ್ಳುವ ರೀತಿ-ಹೀಗೆ ಒಟ್ಟಾರೆಯಾಗಿ ತನ್ನನ್ನು ತಾನು ಅರ್ಥೈಸಿಕೊಂಡಿರುವ ರೀತಿಯು ಬಾಲ್ಯಕಾಲದಲ್ಲಿ ಹೇಗೆ ಬೆಳವಣಿಗೆಯಾಗಿತ್ತು ಎಂಬುದು ತುಂಬಾ ಮುಖ್ಯವಾದ ಸಂಗತಿಯಾಗುತ್ತದೆ.

ಬೆಳವಣಿಗೆಯ ಬಹುಪಾಲು ಸಂಗತಿಗಳು ಕೂಡ ಪರಸ್ಪರ ಸಹ ಮತ್ತು ಪೂರಕ ಸಂಬಂಧ ಹೊಂದಿರುವಂಥವಾಗಿರುತ್ತವೆ. ಉದಾಹರಣೆಗೆ ಸರಾಸರಿಗಿಂತ ಹೆಚ್ಚು ಬೌದ್ಧಿಕ ಬೆಳವಣಿಗೆ ಹೊಂದಿದವರ ಆರೋಗ್ಯ, ಹವ್ಯಾಸ, ಸಾಮಾಜಿಕತೆ ಮತ್ತು ವಿಶೇಷ ಮನೋವೃತ್ತಿಗಳು ಕೂಡ ಸರ್ವೇಸಾಮಾನ್ಯವಾಗಿ ಸರಾಸರಿಗಿಂತ ಹೆಚ್ಚೇ ಆಗಿರುತ್ತವೆ. ಏಕೆಂದರೆ ಮಗುವು ಒಂದು ಇಡಿಯಾದ ಘಟಕವಾಗಿ ಬೆಳವಣಿಗೆ ಹೊಂದುತ್ತದೆಯೇ ಹೊರತು ಬಿಡಿ ಬಿಡಿಯಾದ ಭಾಗಗಳಾಗಿ ಅಲ್ಲ. ಒಬ್ಬನ ಬೌದ್ಧಿಕತೆಯ ಅವನ ದೈಹಿಕ ಸ್ವಾಸ್ಥ್ಯವನ್ನು ಅವಲಂಬಿಸಿರುತ್ತದೆ. ಈ ದೈಹಿಕ ಸ್ವಾಸ್ಥ್ಯವು ಅವನ ಮಾನಸಿಕ ಆವೇಗಗಳನ್ನು ಮತ್ತು ಈ ಮಾನಸಿಕ ಆವೇಗಗಳು ಶಾಲೆಯೊಳಗಿನ ಅವನ ಜಯಾಪಜಯಗಳನ್ನು ಅವಲಂಬಿಸಿರುತ್ತವೆ. ಹೀಗೆ ಒಟ್ಟಾರೆಯಾಗಿ ವ್ಯಕ್ತಿಯೊಬ್ಬನ ಜೀವನಶೈಲಿಯು ಅವನು ಬಾಲ್ಯಕಾಲದಲ್ಲಿ ಪಡೆದಿರುವ ಶಾಲಾನುಭವಗಳನ್ನು ಅವಲಂಬಿಸಿದುದಾಗಿರುತ್ತದೆ.

ಮಾದರಿ ಜೀವನಶೈಲಿಯು ವ್ಯಕ್ತಿಯೊಬ್ಬನಿಗೆ ಮಾನಸಿಕ ಆವೇಗಗಳ ಪಕ್ವತೆ ಮತ್ತು ಸ್ಥಿರತೆಯನ್ನು ಗಳಿಸಿಕೊಳ್ಳುವಲ್ಲಿ ಹಾಗೂ ವೈಯುಕ್ತಿಕ ಮತ್ತು ಸಾಮಾಜಿಕ ಭದ್ರತೆಯನ್ನು ಗಳಿಸಿಕೊಳ್ಳುವಲ್ಲಿ ನೆರವಾಗುತ್ತದೆ. ಅದೇ ರೀತಿಯಾಗಿ ಆರೋಗ್ಯಕರ ಮಾನವ ಸಂಬಂಧಗಳ ಮತ್ತು ಸಮೂಹ ಒಡನಾಟಗಳ ನಿರ್ವಹಣೆಗೆ ಬೇಕಾದ ಶಕ್ತಿಯನ್ನು ನೀಡುತ್ತದೆ ಮತ್ತು ಉತ್ತಮ ಮಾನಸಿಕ ಆರೋಗ್ಯವೂ ಸೇರಿದಂತೆ ಒಂದು ಪರಿಪೂರ್ಣ ದೇಹಾರೋಗ್ಯ ಭಾಗ್ಯವನ್ನು ಒದಗಿಸುತ್ತದೆ.

ಶಿಕ್ಷಣದ ಮುಖ್ಯ ಗುರಿ ಕೂಡ ಸಮಾಜದ ಅಗತ್ಯ ಮತ್ತು ನಿರೀಕ್ಷೆಗಳಿಗನುಗುಣವಾಗಿ ವರ್ತನೆಯ ರೀತಿಗಳನ್ನು ಪರಿವರ್ತಿಸುವುದೇ ಆಗಿದೆ. ಸಮಾಜದಲ್ಲಿ ನಡೆಯುವ ಎಲ್ಲ ಬಗೆಯ ಸಮಾಜೋ-ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡಿರುವ ಎರಡು ವ್ಯವಸ್ಥೆಗಳಾದ ಕುಟುಂಬ ಮತ್ತು ಶಾಲೆಗಳು ಕೂಡ ಸಮಾಜದ ಅಂಗ ಸಂಸ್ಥೆಗಳೇ ಆಗಿರುವುದರಿಂದ ಶಿಕ್ಷಣದ ಒಟ್ಟಾರೆ ಪ್ರಕ್ರಿಯೆಯು ಕುಟುಂಬ ಜೀವನ ಶಿಕ್ಷಣವನ್ನೂ ತನ್ನೊಳಗೆ ಹೊಂದಿಯೇ ಇರುತ್ತದೆ. ಹೀಗೆ ಸಮಾಜವು ಮಾದರಿ ವ್ಯಕ್ತಿತ್ವದವನೆಂದು ಒಪ್ಪಿಕೊಂಡಿರುವ ವ್ಯಕ್ತಿಯು ಅವನ ಪ್ರಾಥಮಿಕ ಶಿಕ್ಷಣ ಕಾಲದ ವರ್ತನೆಗಳು, ಮನೋವೃತ್ತಿಗಳು, ಆಸಕ್ತಿಗಳು ಮತ್ತು ರೀತಿ-ನೀತಿಗಳಿಂದ ರೂಪುಗೊಂಡವನಾಗಿರುತ್ತಾನೆ.

ಮನೆಯಲ್ಲಿ ಎಲ್ಲ ಬಗೆಯ ಸೌಲಭ್ಯಗಳನ್ನು ಹೊಂದಿರುವ ಮತ್ತು ತನ್ನ ಕುಟುಂಬ, ಶಾಲೆ ಹಾಗೂ ಸಮುದಾಐಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ವಿದ್ಯಾರ್ಥಿಯು ಯಾವುದೇ ಬಗೆಯ ಆತಂಕ-ಉದ್ವೇಗಗಳಿಲ್ಲದೆ ಆನಂದವಾಗಿ, ಶಾಂತಚಿತ್ತನಾಗಿ ಇರುತ್ತಾನೆ. ಇದು ಅವನ ಶಾಲಾ ಇಮೇಜಿನ ಮೇಲೂ ಸಾಕಷ್ಟು ಧನಾತ್ಮಕ ಪ್ರಭಾವವನ್ನು ಬೀರುತ್ತದೆ. ಹೀಗಾಗಿ ಇಂಥ ಮಾದರಿ ಜೀವನಶೈಲಿಯ ಮಕ್ಕಳು ಒಳ್ಳೆಯ ಸಾಮಾಜಿಕ ಹೊಂದಾಣಿಕೆಯ ಗುಣವನ್ನು ಹೊಂದಿರುತ್ತಾರೆ ಮತ್ತು ಕಲಿಕೆಯಲ್ಲೂ ಉತ್ತಮ ಸಾಧನೆಯನ್ನು ಪ್ರದರ್ಶಿಸುತ್ತಾರೆ. ಅದೇ ರೀತಿಯಾಗಿ ಮನೆಯಲ್ಲಿ ಅಂಥ ಏನೂ ಉತ್ತಮ ವಾತಾವರಣ ಇಲ್ಲಿದಿದ್ದರೂ; ಉತ್ತಮ ಶಾಲಾ ಸೌಲಭ್ಯಗಳು, ಪ್ರಭಾವೀ ಶಿಕ್ಷಕರು ಮತ್ತು ಉತ್ತಮ ನಡೆವಳಿಕೆಗಳನ್ನು ಪ್ರೇರೇಪಿಸುವಂಥ ನೀತಿ-ನಿಯಮಗಳಿಂದ ಕೂಡಿದ ಉತ್ತಮವಾದ ಶಾಲಾ ಪರಿಸರವೂ ಕೂಡ ಇಂಥ ಮಾದರಿ ಜೀವನಶೈಲಿಯತ್ತ ಒಬ್ಬ ವಿದ್ಯಾರ್ಥಿಯನ್ನು ಕೊಂಡೊಯ್ಯಬಲ್ಲುದಾಗಿರುತ್ತದೆ.

ಜೀವನಶೈಲಿ ಮತ್ತು ಪ್ರಾಥಮಿಕ ಶಿಕ್ಷಣಗಳು ಪರಸ್ಪರಾವಲಂಬಿಗಳಾಗಿವೆ ಏಕೆಂದರೆ ಮಗುವಿನೊಳಗೆ ಹುಟ್ಟಿನಿಂದಲೇ ಬಂದಿರುವ ಅಂಶಗಳು, ಪರಿಸರದ ಶಕ್ತಿಗಳು-ಅದರಲ್ಲೂ ವಿಶೇಷವಾಗಿ ಮನೆ, ನೆರೆಹೊರೆ ಹಾಗೂ ಶಾಲಾ ಪರಿಸರಗಳ ಶಕ್ತಿಗಳು ಶೈಕ್ಷಣಿಕ ಸಾಧನೆಯ ಮೇಲೆ ಗಮನಾರ್ಹವಾದ ಪ್ರಭಾವಗಳನ್ನುಂಟು ಮಾಡುತ್ತವೆ.

. ಜೀವನಶೈಲಿಯ ಮೇಲೆ ಮನೆಯ ಪ್ರಭಾವ

ಪಾಲಕರು, ಮನೆಯ ವಾತಾವರಣ ಹಾಗೂ ಕೌಟುಂಬಿಕ ಸಂಬಂಧಗಳು ಮಗುವಿನ ಶೈಕ್ಷಣಿಕ ಸಾಧನೆಯೊಂದಿಗೆ ನೇರ ಸಂಬಂಧವನ್ನು ಹೊಂದಿವೆ. ನಗರದಲ್ಲಿನ ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದ ಕುಟುಂಬಗಳು ತಮ್ಮ ಮಕ್ಕಳಿಗೆ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಹಾಗೂ ಸೂಕ್ತ ಶೈಕ್ಷಣಿಕ ಅವಕಾಶಗಳನ್ನು ಒದಗಿಸುತ್ತವೆ. ಆದರೆ ಹಳ್ಳಿಗಳಲ್ಲಿನ ಕೆಳಮಧ್ಯಮ ಮತ್ತು ಬಡ ಕುಟುಂಬಗಳ ಮಕ್ಕಳು ಸೂಕ್ತ ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯುವ ಮಾತು ಒತ್ತಟ್ಟಿಗಿರಲಿ ನೈರ್ಮಲ್ಯರಹಿತವಾದ ಪರಿಸರ ಹಾಗೂ ಅಪೌಷ್ಟಿಕತೆಯ ಸಮಸ್ಯೆಗಳಿಂದಾಗಿ ಅವರ ಆರೋಗ್ಯದ ಪರಿಸ್ಥಿತಿಯೇ ಅಷ್ಟು ಸರಿಯಾಗಿರುವುದಿಲ್ಲ. ಇದು ಅವರ ಕಲಿಕಾ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವುದರಿಂದ ಅವರು ಕಲಿಕಾ ಹಿನ್ನಡೆಯನ್ನು ಅನುಭವಿಸುವಂತಾಗುತ್ತದೆ. ಬಡತನದ ಕಾರಣದಿಂದಾಗಿ ಸಾಮಾನ್ಯ ಜ್ಞಾನವನ್ನು ವೃದ್ಧಿಸುವ ಕಿರುಪ್ರವಾಸ, ಶೈಕ್ಷಣಿಕ ಪ್ರವಾಸಗಳಂಥ ಕಾರ್ಯಕ್ರಮಗಳಿಂಧ ಹೊರಗುಳಿಯುವುದರಿಂದ ಇಂಥ ವಿಷಯಗಳಿಗೆ ಸಂಬಂಧಿಸಿದಂತೆ ಜ್ಞಾನದ ಕೊರತೆ ಮತ್ತು ಹಿಂದುಳಿಯುವಿಕೆಯನ್ನು ಅನುಭವಿಸುತ್ತಾರೆ. ಅದಲ್ಲದೆ ಹಳ್ಳಿಯ ಬಡ ಮಕ್ಕಳು ಮನೆಗೆಲಸಗಳನ್ನು ಮಾಡುವುದೇ ಅಲ್ಲದೆ ಮನೆತನದ ವೃತ್ತಿಗಳಲ್ಲೂ ಪಾಲಕರಿಗೆ ಸಹಾಯ ಮಾಡುತ್ತಾರೆ. ಇದರಿಂದ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಯ ಕಡಿಮೆ ಉಳಿಯುತ್ತದೆ ಹಾಗೂ ಈಗಾಗಲೇ ಕೆಲಸ ಮಾಡಿದ ದಣಿವೂ ಇದರೊಂದಿಗೆ ಸೇರಿ ಓದಿನತ್ತ ಸೂಕ್ತ ಲಕ್ಷ್ಯವನ್ನು ವಹಿಸಲಾಗುವುದಿಲ್ಲ. ಈ ಸಮಸ್ಯೆಯು ಅವರನ್ನು ಮನೆಯಲ್ಲಷ್ಟೇ ಅಲ್ಲದೆ ಶಾಲೆಯಲ್ಲೂ ಕಾಡುತ್ತದೆ.

ಇದಲ್ಲದೆ ಪಾಲಕರ ಬಡತನ, ಅನಕ್ಷರತೆ ಹಾಗೂ ಬೌದ್ಧಿಕ ಕೀಳರಿಮೆಗಳು ಕೂಡ ಹಳ್ಳಿಯ ಮಕ್ಕಳ ಸಾಧಾರಣ ಕಲಿಕಾ ಸಾಧನೆಗೆ ತಮ್ಮ ಕೊಡುಗೆಯನ್ನು ನೀಡುತ್ತವೆ. ಇಂಥ ಪಾಲಕರಿಗೆ ಅತ್ತ ಶಿಕ್ಷಣದ ಬಗ್ಗೆ ಒಳ್ಳೆ ಅಭಿಪ್ರಾಯವೂ ಇರುವುದಿಲ್ಲ ಇತ್ತ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಾಮರ್ಥ್ಯವೂ ಇರುವುದಿಲ್ಲ.

ನಗರದ ಮಕ್ಕಳ ಸಮಸ್ಯೆಗಳ ಸ್ವರೂಪ ಬೇರೆ ತೆರನಾದದ್ದು. ಕೌಟುಂಬಿಕ ಸಂಬಂಧಗಳು ಮತ್ತು ವರ್ತನೆಗಳು ಈ ಮಕ್ಕಳ ಪಾಲಿಗೆ ಅಡ್ಡಗಾಲಾಗಿ ಕಾಡುತ್ತವೆ. ತಂದೆ-ತಾಯಿ ಸಂಬಂಧ ಅಷ್ಟು ಮಧುರವಾಗಿರದಿದ್ದಲ್ಲಿ, ಮನೆಯಲ್ಲಿ ಮಲತಾಯಿ ಅಥವಾ ಮಲತಂದೆ ಇದ್ದಲ್ಲಿ, ಪಾಲಕರು ಅತಿಶಿಸ್ತಿನವರೋ, ಇಲ್ಲವೆ ಅತ್ಯಂತ ನಿರ್ಲಕ್ಷ್ಯದವರೋ ಆಗಿದ್ದಲ್ಲಿ, ಮನೆಯಲ್ಲಿ ಹೊಂದಾಣಿಕೆಯಿರದೆ ಸದಾ ಜಗಳ ನಡೆಯುತ್ತಿದ್ದಲ್ಲಿ, ಅತಿನಿರೀಕ್ಷೆಯ ಒತ್ತಡದ ವಾತಾವರಣವಿದ್ದಲ್ಲಿ-ಮಕ್ಕಳ ಸಾಮಾಜಿಕ ಮತ್ತು ಮನೋವೈಜ್ಞಾನಿಕ ಅಗತ್ಯಗಳ ಸಕಾಲಿಕ ಈಡೇರಿಕೆಯಾಗದೆ ಅದೇ ವ್ಯಸನದಲ್ಲಿ ಕಲಿಕಾ ಹಿನ್ನಡೆಯತ್ತ ಪಯಣ ಆರಂಭಿಸುತ್ತಾರೆ. ನಗರ ಅಥವಾ ಹಳ್ಳಿ ಯಾವುದೇ ಪ್ರದೇಶದ ಮಗುವಿಗು ಉತ್ತರ ಬಾಲ್ಯದ ಈ ಅವಸ್ಥೆಯಲ್ಲಿ ಪ್ರೀತಿ, ವಾತ್ಸಲ್ಯ, ಅಭಯ ಮತ್ತು ಸೂಕ್ತವಾದ ಸಕಾಲಿಕ ಮಾರ್ಗದರ್ಶನದ ಅಗತ್ಯವಿರುತ್ತದೆ.

. ಜೀವನಶೈಲಿಯ ಮೇಲೆ ಶಾಲೆಯ ಪ್ರಭಾವ

ಕಲಿಕಾ ಹಿಂದುಳಿಯುವಿಕೆಗೆ ಅಸಮಪರ್ಕಕ ಶಾಲಾ ವಾತಾವರಣ ಮತ್ತು ಅಲ್ಲಿಯ ಪ್ರತಿಕೂಲ ಪರಿಸ್ಥಿತಿಗಳೂ ಕಾರಣವಾಗುತ್ತವೆ. ನಿರಂತರ ಗೈರುಹಾಜರಿ ಮತ್ತು ಅನಿಯಮತಿ ಹಾಜರಿಗಳ ಪರಿಣಾಮವಾಗಿ ಸಹಜವಾಗಿ ಮಗುವು ಕಲಿಕೆಯಲ್ಲಿ ಹಿಂದೆ ಬೀಳುತ್ತದೆ. ಈ ಸಮಸ್ಯೆಯು ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಹೆಚ್ಚು ಕಂಡು ಬರುತ್ತದೆ. ಸ್ವತಃ ಪಾಲಕರೇ ಮಕ್ಕಳನ್ನು ಹೊಲದ ಕೆಲಸಗಳಿಗೆ, ಮನೆಗೆಲಸಗಳಿಗೆ, ಕೂಲಿ ಕೆಲಸಕ್ಕೆ ಹೆಚ್ಚುವುದು ಅಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ.

ನಗರದ ಖಾಸಗಿ ಶಾಲೆಗಳ ಮಕ್ಕಳಿಗೆ ಈ ಸಮಸ್ಯೆಗಳಿಲ್ಲ. ಅವರ ಸಮಸ್ಯೆಗಳೇ ಬೇರೆ. ದೋಷಯುಕ್ತ, ಅನಾಸಕ್ತಿದಾಯಕವಾದ, ರುಚಿಹೀನವಾದ ಬೋಧನಾಶೈಲಿ; ಕಲಿಕಾನುಭವಗಳಲ್ಲಿ ಸೂಕ್ತ ಪುನರಾವರ್ತನೆ, ಪ್ರಾಯೋಗಿಕತೆ, ಕ್ರಿಯಾಶೀಲತೆ ಹಾಗೂ ವೈವಿಧ್ಯತೆಯ ಕೊರತೆ; ದೋಷಪೂರಿತವಾದ ಪಠ್ಯಕ್ರಮ ಮತ್ತು ಪರೀಕ್ಷಾ ವ್ಯವಸ್ಥೆ; ಮಾರ್ಗದರ್ಶನದ ಕೊರತೆ; ದುರ್ಬಲ ಆಡಳಿತ ವ್ಯವಸ್ಥೆ; ಅಶಿಸ್ತು; ಮನೆಗೆಲಸದ ಪರಿಶೀಲನೆ ಮಾಡದಿರುವಿಕೆ; ಪ್ರಶಂಸೆಯ ಕೊರತೆ; ಶಿಕ್ಷಕರ ಮನೋಭಾವ, ಸಿಬ್ಬಂದಿ ನಡುವಿನ ಅಪಹೊಂದಾಣಿಕೆ ಮುಂತಾದವು ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುವಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತವೆ. ಈ ಸಮಸ್ಯೆಗಳು ಹಳ್ಳಿಯ ಸರ್ಕಾರಿ ಶಾಲೆಯಲ್ಲೂ ಇದ್ದು ಅವು ನಿರಂತರವಾಗಿ ಶಾಲೆಗೆ ಬರುವ ಮಕ್ಕಳನ್ನು ಬಾಧಿಸುತ್ತವೆ.

. ಜೀವನಶೈಲಿಯ ಮೇಲೆ ನೆರೆಹೊರೆಯ ಪ್ರಭಾವ

ಮಗುವಿನ ಸಾಮಾಜಿಕ ಪರಿಸರವು ಕೇವಲ ಮನೆ ಮತ್ತು ತರಗತಿ ಕೊಠಡಿಗಳ ನಾಲ್ಕು ಗೋಡೆಗಳ ನಡುವಿಗೇ ಸೀಮಿತವಾಗಿರದೆ ಮನೆಯ ಸುತ್ತಲಿನ ನೆರೆಹೊರೆ, ಜೊತೆಯಲ್ಲಿ ಆಡುವ ಗೆಳೆಯರ ಸಮೂಹ, ನಿತ್ಯ ಒಡನಾಡುವ ಸಮುದಾಯದ ಸದಸ್ಯರು, ಸಮೂಹ ಮಾಧ್ಯಮಗಳು ಮುಂತಾದ ಹಲವು ಸಂಗತಿಗಳನ್ನು ಒಳಗೊಂಡಿದೆ. ಇವುಗಳ ಮೂಲಕ ಮಗುವು ಹಲವಾರು ಸಾಮಾಜಿಕ ಅನಿಷ್ಟಗಳ ಸಮೀಪ ಸಂಪರ್ಕಕ್ಕೆ ಬರುವುದರಿಂದ ಅದರ ಶೈಕ್ಷಣಿಕ ಸಾಧನೆಗೆ ಅಡ್ಡಿಯುಂಟಾಗುವ ಸಂಭವವಿರುತ್ತದೆ. ಇದು ಹಳ್ಳಿ ಮತ್ತು ಪಟ್ಟಣ ಎರಡರ ಮಕ್ಕಳ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಈ ಅನಿಷ್ಟಗಳ ಸ್ವರೂಪ ಮತ್ತು ಸ್ವಭಾವಗಳು ಹಳ್ಳಿ ಮತ್ತು ಪಟ್ಟಣಗಳಲ್ಲಿ ಬೇರೆ ಬೇರಯಾಗಿರುತ್ತವೆ

ಈ ರೀತಿಯಾಗಿ ಹಲವಾರು ಪರಿಸರದ ಪ್ರಭಾವಗಳಿಂದ ರೂಪುಗೊಂಡಿರುವ ಜೀವನಶೈಲಿಯು ಬಹುಮಟ್ಟಿಗೆ ಮಗುವಿನ ಶೈಕ್ಷಣಿಕ ಪ್ರಗತಿಯನ್ನು ನಿಯಂತ್ರಿಸಿ ನಿರ್ದೇಶಿಸುತ್ತದೆ. ಅವನ ಆಸಕ್ತಿಗಳು, ಮನೋವೃತ್ತಿಗಳು, ಕೆಲಸದ ಮತ್ತು ಓದಿನ ಹವ್ಯಾಸಗಳು, ಯೋಚಿಸುವ ಮತ್ತು ತರ್ಕಿಸುವ ಸಾಮರ್ಥ್ಯ, ಅರ್ಥ ಮಾಡಿಕೊಳ್ಳುವ ಮತ್ತು ಅವಲೋಕಿಸುವ ಶಕ್ತಿಗಳು.. ಎಲ್ಲವೂ ಅವನು ವಾಸಿಸುವ ಪರಿಸರದ ರೀತಿ ಮತ್ತು ಸ್ವರೂಪಗಳಿಂದ ಅಂದರೆ ಜೀವನಶೈಲಿಯಿಂದ ಪ್ರಭಾವಕ್ಕೊಳಗಾಗುತ್ತವೆ. ಪರಿಣಾಮವಾಗಿ ಯಾರೇ ಆಗಲಿ ಅಂತಿಮವಾಗಿ ಅವನ ಜೀವನಶೈಲಿಯು ಪಡೆದುಕೊಳ್ಳಲು ಅನುಮತಿಸಿದಷ್ಟನ್ನು ಮಾತ್ರವೇ ಪಡೆದುಕೊಳ್ಳುತ್ತಾನೆ.

ಶಿಕ್ಷಣ ಮತ್ತು ಸಂಸ್ಕೃತಿ

ಮಾನವನ ನಡೆವಳಿಕೆಯು ಹೊಂದಾಣಿಕೆಯ ಸ್ವರೂಪದ್ದಾಗಿದೆ. ಹಾಗಾಗಿ ಅದು ಯಾವುದೇ ಬಗೆಯ ಸಾಂಸ್ಕೃತಿಕ ಪರಿಸರಕ್ಕೂ ತನ್ನನ್ನು ಹೊಂದಿಸಿಕೊಳ್ಳುತ್ತದೆ. ಆದರೆ ಇದಕ್ಕಾಗಿ ಸೂಕ್ತ ತರಬೇತಿಯ ಅಗತ್ಯವಿದೆ. ತರಬೇತಿಯ ಮಾತು ಬಂದಾಗ ಪುನಃ ಅದು ನಮಗೆ ಶಿಕ್ಷಣದ ಪರಿಕಲ್ಪನೆಯನ್ನು ನೆನಪಿಗೆ ತಂದುಕೊಡುತ್ತದೆ.

ಮಗುವಿನ ಸಮಾಜವು ಪಾಲಕರು ಮತ್ತು ಸಹೋದರರಿಂದ ಪ್ರಾರಂಭವಾಗಿ ನಿಧಾನವಾಗಿ ಹಲವು ಬಗೆಯ ಮಾನವೀಯ ಸಂಬಂಧಗಳನ್ನು ಒಳಗೊಳ್ಳುತ್ತ ಬೆಳೆಯುತ್ತ ಸಾಗುತ್ತದೆ. ಶೈಕ್ಷಣಿಕ ಓದಿನ ಜೊತೆಜೊತೆಗೇ ಸಮಾಜದ ಓದೂ ನಡೆದೇ ಇರುತ್ತದೆ. ಶೈಕ್ಷಣಿಕ ಓದಿನ ಭಾಗವಾಗಿ ಬರುವ ಮನಃಶಾಸ್ತ್ರ, ಸಮಾಜಶಾಸ್ತ್ರ ಮತ್ತು ಶರೀರರಚನಾಶಾಸ್ತ್ರಗಳ ತಿಳಿವಳಿಕೆಯು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವಲ್ಲಿ ನೆರವಾಗುತ್ತದೆ. ಅದೇ ರೀತಿಯಾಗಿ ಉತ್ತಮ ಸಂಸ್ಕೃತಿಯು ಮಗುವಿಗೆ ಶಿಕ್ಷಿತನಾಗಲು ಪ್ರೇರೇಪಿಸುತ್ತದೆ. ಹೀಗೆ ಶಿಕ್ಷಣ ಮತ್ತು ಸಂಸ್ಕೃತಿಗಳ ಸಂಬಂಧವು ಅವಿನಾಭಾವವಾಗಿದೆ.

ಶಿಕ್ಷಣದ ಮುಖ್ಯ ಗುರಿ ಮಗುವಿನ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಯಾಗಿದೆ. ನಿರ್ದಿಷ್ಟ ಸಂಸ್ಕೃತಿಯೊಂದರಲ್ಲಿ ಪ್ರಭಾವಶಾಲಿಯಾಗಿ ಬೆಳೆಯುವಲ್ಲಿ ಶಾಲೆಯೆಂಬ ವಿಶೇಷ ನಿಯೋಗದ ಪಾತ್ರ ತುಂಬಾ ಮಹತ್ವದ್ದಾಗಿದೆ. ಹೀಗೆ ವ್ಯಕ್ತಿಯು ಸಮಾಜದ ಸಂಸ್ಕೃತಿಯಿಂದ ರೂಪುಗೊಂಡು ನಂತರ ಸಮಾಜದಲ್ಲಿ ಪ್ರಜ್ಞಾಪೂರ್ವಕ ಬದಲಾವಣೆಗಳನ್ನು ಜಾರಿಗೆ ತರುವ ಮೂಲಕ ಅದೇ ಸಂಸ್ಕೃತಿಯ ಬೆಳವಣಿಗೆಗೆ ಕೊಡುಗೆ ನೀಡುವಂತಾಗುತ್ತಾನೆ.

ಸಂಸ್ಕೃತಿ ಮತ್ತು ಜೀವನಶೈಲಿ

ಒಬ್ಬ ವ್ಯಕ್ತಿಯ ಜೀವನಶೈಲಿಯ ಅವನು ಹುಟ್ಟಿ ಬೆಳೆದಿರುವ ಸಂಸ್ಕೃತಿಯಿಂದ ಸಾಕಷ್ಟು ಪ್ರಭಾವಕ್ಕೊಳಗಾಗಿರುತ್ತದೆ. ಯಾರದೇ ಜೀವನಶೈಲಿಯನ್ನು ತೆಗೆದುಕೊಂಡರೂ ಅದು ಅವರ ಸಾಂಸ್ಕೃತಿಕ ಚೌಕಟ್ಟಿನೊಳಗೇ ರೂಪುಗೊಂಡಿರುತ್ತದೆ. ಇದೇ ಸಂದರ್ಭಕ್ಕೆ ಪರಿಸರ ಸಂಬಂಧೀ ಜಾಗೃತಿಯನ್ನು ಮೂಡಿಸುವಲ್ಲಿ ಸಾಂಸ್ಕೃತಿಕ ಪರಿಸರದ ಪ್ರಭಾವವನ್ನು ಅರ್ಥ ಮಾಡಿಕೊಳ್ಳುವುದೂ ಬಹಳ ಮುಖ್ಯವಾದ ಸಂಗತಿಯಾಗಿದೆ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಜೈವಿಕದ ಜೊತೆಗೆ ಸಾಂಸ್ಕೃತಿಕ ಉತ್ಪನ್ನವೂ ಆಗಿರುತ್ತಾನೆ. ಅವನು ಜೀನ್ಸ್‌ಗಳ ಮೂಲಕ ಬಂದ ಅನುವಂಶೀಯತೆಯ ಗುಣಲಕ್ಷಣಗಳಿಂದಷ್ಟೇ ಅಲ್ಲದೆ ತಾನು ಹುಟ್ಟಿ-ಬೆಳೆದಿರುವ ಸಂಸ್ಕೃತಿಯಿಂದಲೂ ಪ್ರಭಾವಕ್ಕೊಳಗಾಗಿರುತ್ತಾನೆ.

ಬೇರೆ-ಬೇರೆ ಸಮಾಜಗಳು ಬೇರೆ-ಬೇರೆ ಬಗೆಯ ಸಂಸ್ಕೃತಿಗಳನ್ನು ಹೊಂದಿರುತ್ತವೆ. ಈ ವಿವಿಧ ಬಗೆಯ ಸಮಾಜಗಳ ಸಂಸ್ಕೃತಿಗಳನ್ನು ಹೋಲಿಸಿ ನೋಡಿದಾಗ ಕೆಲವು ನಿರ್ದಿಷ್ಟ ವರ್ತನೆಗಳು ಸಾಮಾನ್ಯವಾಗಿರುವುದು ಕಂಡು ಬರುತ್ತದೆ. ಉದಾಹರಣೆಗೆ ಬಹುತೇಕ ಎಲ್ಲ ಸಮಾಜಗಳಲ್ಲೂ ಏಕಪತ್ನಿತ್ವ ರೀತಿಯ ಕೌಟುಂಬಿಕ ಜೀವನಶೈಲಿ ರೂಢಿಯಲ್ಲಿದ್ದರೆ ಕೆಲವು ಸಮಾಜಗಳಲ್ಲಿ ಬಹುಪತ್ನಿತ್ವ ಜಾರಿಯಲ್ಲಿದೆ. ಎಲ್ಲ ಸಮಾಜಗಳು ಆಹಾರಪದ್ಧತಿಗೆ ಸಂಬಂಧಿಸಿದಂತೆ ಒಂದೋ ಸಸ್ಯಾಹಾರವನ್ನು ಇಲ್ಲವೆ ಮಾಂಸಾಹಾರವನ್ನು ಪಾಲಿಸಿಕೊಂಡು ಬಂದಿದ್ದರೆ; ಎಲ್ಲೋ ಒಂದೆರಡು ಕಡೆ ನರಭಕ್ಷಕ ಪದ್ಧತಿಯಿರುವುದನ್ನು ಕಾಣುತ್ತೇವೆ. ಹಾಗೆಯೇ ಮದುವೆಯು ಎಲ್ಲ ಸಮಾಜಗಳಲ್ಲಿನ ಸಾಮಾನ್ಯ ಸಂಪ್ರದಾಯವಾಗಿದ್ದರು ಮದುವೆಯ ಆಚರಣೆಯಲ್ಲಿ ಸಾಕಷ್ಟು ಭಿನ್ನತೆಗಳಿವೆ. ಇನ್ನೂ ಒಂದು ಮುಖ್ಯವಾದ ಅಂಶವೆಂದರೆ ಒಂದೇ ಸಮಾಜದಲ್ಲಿ ಪ್ರಧಾನ ಸಂಸ್ಕೃತಿ ಮತ್ತು ಅಧೀನ ಅಥವಾ ಉಪಸಂಸ್ಕೃತಿಗಳು ರೂಢಿಯಲ್ಲಿರುತ್ತವೆ.

ಮಕ್ಕಳು ತಾವು ಹುಟ್ಟಿ-ಬೆಳೆಯುತ್ತಿರುವ ಸಮಾಜದ ಸಂಸ್ಕೃತಿಯ ಅಚ್ಚಿಗನುಗುಣವಾಗಿ ತಯಾರಾಗುತ್ತಾ ಹೋಗುತ್ತವೆ. ಅದೇ ಕಾರಣಕ್ಕಾಗಿ ಕೆಲವು ಸಾಮಾಜಿಕ ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಅಮೇರಿಕಾದ ಮಕ್ಕಳು ಭಾರತದ ಅದೇ ವಯೋಮಾನದ ಮಕ್ಕಳಿಗಿಂತ ಭಿನ್ನ ನಿಲುವನ್ನು ಪ್ರದರ್ಶಿಸುತ್ತವೆ.

ಅನುವಂಶಿಯತೆಯು ವ್ಯಕ್ತಿಯ ಸಂಸ್ಕಾರವನ್ನು ಪ್ರಭಾವಿಸುತ್ತದಾದರೂ ಈ ಪ್ರಭಾವವು ಆ ವ್ಯಕ್ತಿಯು ತನ್ನ ಸಾಮಾಜಿಕ ಪರಿಸರದೊಂದಿಗೆ ಹೊಂದಿರುವ ಒಡನಾಟ ಮತ್ತು ಸಾಮಾಜಿಕ ಸಮೂಹಗಳಿಂದ ಅವನು ಕಲಿತಿರುವ ಪಾಠಗಳನ್ನು ಅವಲಂಬಿಸಿರುತ್ತದೆ.

ಜರ್ಮನ್ನರು ತಮ್ಮ ದೇಶವನ್ನು ಪಿತೃಭೂಮಿ ಎಂದು ಕರೆದರೆ ನಾವು ನಮ್ಮ ದೇಶವನ್ನು ಮಾತೃಭೂಮಿ ಎಂದು ಕರೆಯುತ್ತೇವೆ. ಅಮೇರಿಕಾದಲ್ಲಿ ರೂಢಿಯಲ್ಲಿರುವ ಹದಿಹರೆಯದ ಹುಡುಗರ ‘ಡೇಟಿಂಗ್‌ ಕಲ್ಚರ್’ ಅನ್ನು ಭಾರತವು ಸುತರಾಂ ಒಪ್ಪುವುದಿಲ್ಲ. ಹೀಗೆ ಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಜನರು ವಿದ್ಯಾಭ್ಯಾಸ, ಉದ್ಯೋಗ ಮತ್ತು ಭಾಷೆಗಳಿಗೆ ಸಂಬಂಧಿಸಿದಂತೆ ಭಿನ್ನ ನಿಲುವುಗಳನ್ನು ಹೊಂದಿರುತ್ತಾರೆ. ವಿರಾಮಕಾಲದ ಚಟುವಟಿಕೆಗಳು ಮತ್ತು ಹವ್ಯಾಸಗಳ ಆದ್ಯತೆಯಲ್ಲೂ, ಕಲಾತ್ಮಕ ಅಭಿವ್ಯಕ್ತಿಯಲ್ಲೂ ಕೂಡ ಈ ಭಿನ್ನತೆ ಕಂಡು ಬರುತ್ತದೆ. ನಂಬಿಕೆ ಮತ್ತು ಮೌಲ್ಯಗಳ ನಡುವಿನ ವ್ಯತ್ಯಾಸವಂತೂ ಸ್ಪಷ್ಟಗೋಚರ ಸಂಗತಿಯಾಗಿದೆ.

ಈ ಎಲ್ಲ ಅಂಶಗಳಿಂದ ಸ್ಪಷ್ಟವಾಗುವುದೇನೆಂದರೆ ಒಬ್ಬ ವ್ಯಕ್ತಿಯು ಅವನ ನಿರ್ದಿಷ್ಟ ಸಮಾಜದ ಸಂಸ್ಕೃತಿಯ ಅಚ್ಚಿನಂತೆ ರೂಪುಗೊಳ್ಳುತ್ತಾನೆ. ಆದ್ದರಿಂದ ಸಂಸ್ಕೃತಿಯ ಶೈಕ್ಷಣಿಕ ನಿಹಿತಾರ್ಥಗಳ ಅರಿವು ಪ್ರಾಥಮಿಕ ಹಂತದ ಶಿಕ್ಷಕರಿಗೆ ತುಂಬಾ ಅಗತ್ಯವಾಗಿದೆ.