ಮಗುವಿನ ಮೇಲೆ ಜೀವನಶೈಲಿಯ ಪ್ರಭಾವ

ಮಾದರಿ ಜೀವನಶೈಲಿಯು ಮಗುವಿನ ಸರ್ವಾಂಗೀಣ ಪ್ರಗತಿಯ ಉದ್ದೇಶದ ಈಡೇರಿಕೆಗಾಗಿ ಬಹಳ ಅಗತ್ಯವಾಗಿದೆ. ಒಂದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮತ್ತು ಜೀವನದುದ್ದಕ್ಕೂ ಅದನ್ನು ಕಾಪಾಡಿಕೊಂಡು ಹೋಗಲು ಇದು ಮಗುವಿಗೆ ನೆರವಾಗುತ್ತದೆ. ಮಾದರಿ ಜೀವನಶೈಲಿಯು ಉಂಟು ಮಾಡುವ ಸರ್ವಾಂಗೀಣ ಪ್ರಗತಿಯು ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ, ನೈತಿಕ ಹಾಗೂ ಸಾಮಾಜಿಕ ಬೆಳವಣಿಗೆಗಳ ಮೊತ್ತವಾಗಿರುತ್ತದೆ. ಹಾಗಾಗಿ ಇವುಗಳನ್ನೂ ಈಗ ಒಂದೊಂದಾಗಿ ನೋಡೋಣ.

) ದೈಹಿಕ ಬೆಳವಣಿಗೆ

ದೈಹಿಕ ಬೆಳವಣಿಗೆಯು ಬೌದ್ಧಿಕ ಬೆಳವಣಿಗೆಗೆ ಸಹಕರಿಸುತ್ತದೆ. ಭಾವನಾತ್ಮಕ ಮತ್ತು ಸಾಮಾಜಿಕ ಹೊಂದಾಣಿಕೆಯ ಸ್ವಭಾವಗಳು ಕೂಡ ದೈಹಿಕ ಬೆಳವಣಿಗೆಯೊಂದಿಗೆ ನೇರ ಸಂಬಂಧ ಹೊಂದಿವೆ. ದಪ್ಪನೆಯ, ಕುಳ್ಳಗಿನ, ತೆಳ್ಳಗಿನ, ಎತ್ತರದ ಮಕ್ಕಳನ್ನು ಇತರೆ ಮಕ್ಕಳು ಬೇರೆಯಾಗಿ ನೋಡುವುದರಿಂದಾಗಿ ಆ ಮಕ್ಕಳು ತಮ್ಮ ಕೀಳರಿಮೆಯನ್ನು ಸರಿದೂಗಿಸಿಕೊಳ್ಳುವ ಪ್ರಯತ್ನವಾಗಿ ನಾಚಿಕೆ-ಹಿಂಜರಿಕೆಯ ಇಲ್ಲವೆ ಜಗಳಗಂಟತನದ ಸ್ವಭಾವಗಳನ್ನು ರೂಢಿಸಿಕೊಳ್ಳುತ್ತಾರೆ. ದೈಹಿಕ ಬೆಳವಣಿಗೆಯು ಬಾಹ್ಯ ಮತ್ತು ಆಂತರಿಕ ಎರಡೂ ಅಂಗಾಂಗಗಳ ಬೆಳವಣಿಗೆಯನ್ನು ಒಳಗೊಂಡಿರುತ್ತದೆ. ಬಾಹ್ಯ ಬೆಳವಣಿಗೆಯು ಸರಿಯಾಗಿದ್ದಾಗ ಒಳಗಿನ ಗ್ರಂಥಿಗಳೂ ಕೂಡ ಸರಿಯಾಗಿ ತಮ್ಮ ಚೋದಕಗಳನ್ನು ಸ್ರವಿಸುವ ಮೂಲಕ ಪರಿಚಲನಾಂಗ, ಶ್ವಾಸಕಾಂಗಗಳ ಸಮರ್ಪಕ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡುತ್ತವೆ.

) ಬೌದ್ಧಿಕ ಅಥವಾ ಮಾನಸಿಕ ಬೆಳವಣಿಗೆ

ಬೌದ್ಧಿಕ ಅಥವಾ ಮಾನಸಿಕ ಬೆಳವಣಿಗೆಯು ಅನುವಂಶೀಯತೆ ಮತ್ತು ಪರಿಸರಗಳಿಂದ ನಿಯಂತ್ರಿಸಲ್ಪಟ್ಟಿರುತ್ತದೆ. ಜೀವನದಲ್ಲಿ ಪಡೆಯುತ್ತಾ ಸಾಗುವ ಕಲಿಕೆಯ ಅವಕಾಶಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಅನುಭವಗಳು ಬೌದ್ಧಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಮಾದರಿ ಜೀವನಶೈಲಿಯು ಈ ಅಂಶಗಳನ್ನು ತೀವ್ರಗೊಳಿಸುವ ಮೂಲಕ ಬೌದ್ಧಿಕ ಬೆಳವಣಿಗೆಯು ತನ್ನ ತುರೀಯ ಅವಸ್ಥೆಯನ್ನು ತಲುಪಲು ಸಹಾಯ ಮಾಡುತ್ತದೆ. ಮಾದರಿ ಜೀವನಶೈಲಿಯಿಂದ ಉಂಟಾಗುವ ಬೌದ್ಧಿಕ ಅಥವಾ ಮಾನಸಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಈ ಕೆಳಕಂಡ ಬದಲಾವಣೆಗಳು ಮಗುವಿನಲ್ಲಿ ಕಂಡು ಬರುತ್ತವೆ.

೧. ಮಗು ತನ್ನ ಮತ್ತು ಹೊರ ಜಗತ್ತಿನ ನಡುವಿನ ವ್ಯತ್ಯಾಸವನ್ನು ಗುರುತಿಸಲು ಪ್ರಾರಂಭಿಸುತ್ತದೆ.

೨. ಹನ್ನೆರಡನೆಯ ವಯಸ್ಸಿನ ಹೊತ್ತಿಗಾಗಲೇ ಮಗುವಿನಲ್ಲಿ ಸಾಮಾನ್ಯ ನೀತಿ-ನಿಯಮಗಳ ಪರಿಕಲ್ಪನೆ ಸ್ಪಷ್ಟವಾಗಿರುತ್ತದೆ.

೩. ಶೀಘ್ರ ಗ್ರಹಿಕೆಯ ಹಂತವಾಗಿರುವುದರಿಂದ ಶಾಲೆಯಲ್ಲಿ ಮಗುವಿನ ಕಲಿಕೆ ಮತ್ತು ಸ್ಮರಣೆಗಳು ಬಲಗೊಳ್ಳುತ್ತವೆ.

೪. ತಾರ್ಕಿಕ ಶಕ್ತಿಯು ಹೆಚ್ಚಾಗುತ್ತಾ ಸಾಗುತ್ತದೆ. ಮೂರ್ತ ವಸ್ತುವಿನ ಮೇಲೆ ತನ್ನ ಜ್ಞಾನಾತ್ಮಕ ಕಾರ್ಯಾಚರಣೆಗಳನ್ನು ಅನ್ವಯಿಸಿ ನೋಡುತ್ತದೆ ಮತ್ತು ಈ ಸಂದರ್ಭದಲ್ಲಿ ಆಯ್ಕೆ ಮತ್ತು ಅನ್ವಯದ ಸಾಮರ್ಥ್ಯ ಹೆಚ್ಚಾಗಿರುತ್ತದೆ.

೫. ವಿಜ್ಞಾನದಲ್ಲಿನ ಆಸಕ್ತಿ ಮತ್ತು ಯಂತ್ರೋಪಕರಣಗಳ ನಿರ್ವಹಣಾ ಕೌಶಲ್ಯವು ಈ ಹಂತದಲ್ಲಿ ಉಚ್ಛ್ರಾಯ ಸ್ಥಿತಿ ತಲುಪುತ್ತದೆ.

೬. ಧೈರ್ಯ ಮತ್ತು ಪ್ರಾಮಾಣಿಕತೆಗಳು ವೃದ್ಧಿಸುತ್ತವೆ.

೭. ಕಾಲ್ಪನಿಕ ಆಟಗಳನ್ನು ಇಷ್ಟಪಡತೊಡಗಿರುತ್ತಾರೆ.

೮. ಸಾಮಾನ್ಯೀಕರಣದ ಅಸಾಧಾರಣ ಶಕ್ತಿಯನ್ನು ಗಳಿಸಿಕೊಂಡಿರುತ್ತಾರೆ. ತಕ್ಷಣದ ಕಾರಣ ಮತ್ತು ಪರಿಹಾರಗಳ ಬಗ್ಗೆ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

೯. ಸಮಸ್ಯೆಯನ್ನು ಅಮೂಲಾಗ್ರವಾಗಿ ವಿಶ್ಲೇಷಣೆಗೆ ಒಳಪಡಿಸಬಲ್ಲವರಾಗಿರುತ್ತಾರೆ.

ಬುದ್ಧಿಶಕ್ತಿಯು ಅನುವಂಶೀಯವಾಗಿ ಮಗುವಿಗೆ ಬಂದರೂ ಇದು ಒಂದು ಅರ್ಜಿತ ಸಂಗತಿಯಾಗಿದ್ದು ಸಮಾಜವು ಇದರ ಬೆಳವಣಿಗೆಗೆ ಅಗತ್ಯವಾದ ಪರಿಸರ ಮತ್ತು ಪೌಷ್ಠಿಕತೆಗಳನ್ನು ಒದಗಿಸುತ್ತದೆ. ಅದೇ ಕಾರಣಕ್ಕೆ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಹಿಂದುಳಿದಿರುತ್ತಾರೆ. ನಗರದ ಖಾಸಗಿ ಶಾಲೆಯ ಮಕ್ಕಳು ಈ ದೃಷ್ಟಿಯಿಂದ ಅದೃಷ್ಟವಂತರಾಗಿರುತ್ತಾರೆ.

) ಭಾವನಾತ್ಮಕ ಬೆಳವಣಿಗೆ

ಮಗುವಿನ ಭಾವನಾತ್ಮಕ ಅಥವಾ ಸಂವೇಗಾತ್ಮಕ ಬೆಳವಣಿಗೆಯು ದೇಹಾರೋಗ್ಯ. ಬುದ್ಧಿಶಕ್ತಿ, ಕೌಟುಂಬಿಕ ವಾತಾವರಣ, ಶಾಲಾ ಪರಿಸರ ಮತ್ತು ಶಿಕ್ಷಕರು, ಓರಗೆಯವರೊಂದಿಗಿನ ಒಡನಾಟ, ನೆರೆಹೊರೆ, ಸಮಾಜ ಮುಂತಾದವು ಮಗುವಿನ ಭಾವನಾತ್ಮಕ ಅಥವಾ ಸಂವೇಗಾತ್ಮಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಕೆಲವು ಅಂಶಗಳಾಗಿವೆ. ಅವುಗಳನ್ನೀಗ ವಿವರವಾಗಿ ನೋಡೋಣ.

. ದೇಹಾರೋಗ್ಯ

ದೇಹಾರೋಗ್ಯವು ಮಗುವಿನ ಭಾವನಾತ್ಮಕ ಅಥವಾ ಸಂವೇಗಾತ್ಮಕ ಬೆಳವಣಿಗೆಯೊಂದಿಗೆ ಧನಾತ್ಮಕ ಸಹಸಂಬಂಧವನ್ನು ಹೊಂದಿದೆ. ಆಂತರಿಕ ಅಥವಾ ಬಾಹ್ಯ-ಯಾವುದೇ ಬಗೆಯ ದೇಹಾರೋಗ್ಯದ ಸಮಸ್ಯೆಯು ಭಾವನಾತ್ಮಕ ಸಮಸ್ಯೆಗಳಿಗೂ ದಾರಿಮಾಡಿಕೊಡುತ್ತದೆ. ಸದಾ ಅನಾರೋಗ್ಯದಿಂದ ಬಳಲುವ ಸಪೂರ ದೇಹದ ಮಕ್ಕಳು ಭಾವನಾತ್ಮಕವಾಗಿ ಕಡಿಮೆ ಕ್ರಿಯಾಶೀಲರಾಗಿದ್ದು ಸಂವೇಗಾತ್ಮಕ ಅಸ್ಥಿರತೆಯನ್ನು ಹೊಂದಿರುತ್ತಾರೆ. ಸಮತೋಲಿತವಾದ ಸಂವೇಗಾತ್ಮಕ ಬೆಳವಣಿಗೆಗೆ ದೇಹದ ಎಲ್ಲ ಗ್ರಂಥಿಗಳ ಸಮರ್ಪಕ ಕಾರ್ಯನಿರ್ವಹಣೆ ತುಂಬಾ ಅಗತ್ಯವಾಗಿರುತ್ತದೆ. ಚೋದಕಗಳ ಸ್ರವಿಕೆಯಲ್ಲಿ ಆಗುವ ಯಾವುದೇ ಬಗೆಯ ಏರುಪೇರುಗಳು ಸಮರ್ಪಕವಾದ ಭಾವನಾತ್ಮಕವಾದ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತವೆ.

. ಬುದ್ಧಿಶಕ್ತಿ

ಬುದ್ಧಿಶಕ್ತಿಯು ಭಾವನಾತ್ಮಕ ಅಥವಾ ಸಂವೇಗಾತ್ಮಕ ಬೆಳವಣಿಗೆಯೊಂದಿಗೆ ನೇರವಾದ ಮತ್ತು ಪ್ರಬಲವಾದ ಸಹಸಂಬಂಧವನ್ನು ಹೊಂದಿದೆ. ಒಂದೇ ವಯೋಮಾನದ ಮಕ್ಕಳ ಪೈಕಿ ಕಡಿಮೆ ಬುದ್ಧಿಶಕ್ತಿ ಹೊಂದಿದ ಮಕ್ಕಳ ಭಾವನೆಗಳ ಮೇಲಿನ ಹಿಡಿತ ಅಥವಾ ನಿಯಂತ್ರಣ ಶಕ್ತಿಯು ಹೆಚ್ಚು ಬುದ್ಧಿಶಕ್ತಿ ಹೊಂದಿದ ಮಕ್ಕಳ ನಿಯಂತ್ರಣ ಶಕ್ತಿಗಿಂತ ಕಡಿಮೆಯಿರುತ್ತದೆ.

. ಕೌಟುಂಬಿಕ ವಾತಾವರಣ

ಮಗುವಿನ ಭಾವನಾತ್ಮಕ ಬೆಳವಣಿಗೆಯ ಮೇಲೆ ಕೌಟುಂಬಿಕ ವಾತಾವರಣದ ಪ್ರಭಾವವು ನಿಸ್ಸಂಶಯವಾಗಿ ಗಮನಾರ್ಹವಾದುದಾಗಿದೆ. ಕುಟುಂಬದ ಹಿರಿಯರ ಮತ್ತು ಇತರೆ ಸದಸ್ಯರ ಸಂವೇಗಾತ್ಮಕ ವರ್ತನೆಗಳನ್ನು ಮಕ್ಕಳು ಅನುಕರಿಸುವುದರಿಂದ ಸಹಜವಾಗಿ ಅವೇ ಅವರಲ್ಲಿ ರೂಢಿಯಾಗುತ್ತವೆ. ಕುಟುಂಬದಲ್ಲಿನ ಪ್ರೀತಿ-ವಾತ್ಸಲ್ಯ-ಮಮತೆಗಳು ಮಗುವಿನಲ್ಲಿ ಧನಾತ್ಮಕ ಭಾವನೆಗಳನ್ನು ಪ್ರೇರೇಪಿಸಿದರೆ; ಕದನ, ಘರ್ಷಣೆ, ಉದ್ವೇಗಗಳು ಮಗುವಿನಲ್ಲಿ ಋಣಾತ್ಮಕ ಭಾವನೆಗಳನ್ನು ಪ್ರೇರೇಪಿಸುತ್ತವೆ. ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವ ಮತ್ತು ಪರಿಗಣಿಸುವ ರೀತಿಗಳು ಕೂಡ ಅದರ ಸಂವೇಗಾತ್ಮಕ ಬೆಳವಣಿಗೆ ಮೇಲೆ ಪ್ರಭಾವವನ್ನುಂಟು ಮಾಡುತ್ತವೆ. ಕುಟುಂಬದ ಗಾತ್ರ, ಸಮಾಜೋ-ಆರ್ಥಿಕ ಸ್ಥಿತಿ-ಗತಿ, ಪಾಲಕರ ಮನೋಭಾವ (ನಿರ್ಲಕ್ಷ್ಯಿತ, ಪೋಷಿತ ಅಥವಾ ಅತಿಸುರಕ್ಷಿತ ಮಗು) ಇತ್ಯಾದಿಗಳು ಕೂಡ ಈ ವಿಷಯದಲ್ಲಿ ನಿರ್ಧಾರಕ ಪಾತ್ರವನ್ನು ವಹಿಸುತ್ತವೆ.

ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜದಲ್ಲಿ ಮನೆ ಮಾಡಿರುವ ಮನೆತನ ಮತ್ತು ವಂಶಾವಳಿಗಳ ಕುರಿತ ನಂಬಿಕೆಗಳನ್ನು ಈ ಮಾತು ಪುಷ್ಟೀಕರಿಸುವಂತಿದೆ. ಏಕೆಂದರೆ ಪಾಲಕರೇ ಸಂಸ್ಕೃತಿ ಮತ್ತು ಸಾಮಾಜೀಕರಣದ ಪ್ರಮುಖ ವಾಹಕಗಳಾಗಿದ್ದಾರೆ. ವಿಘಟಿತ ಮತ್ತು ಸಣ್ಣ ಸಣ್ಣ ಕುಟುಂಬಗಳ ಈ ೨೧ನೆಯ ಶತಮಾನದಲ್ಲಿ ಕೂಡ ಮನೋವಿಶ್ಲೇಷಕರು ವ್ಯಕ್ತಿಯ ಮೇಲೆ ಅವನ ಬಾಲ್ಯಕಾಲದ ಕೌಟುಂಬಿಕ ಅನುಭವಗಳ ಪ್ರಭಾವವನ್ನು ಎತ್ತಿ ಹಿಡಿದಿದ್ದಾರೆ. ಫ್ರಾಯ್ಡ್‌ ಮತ್ತು ಆಡ್ಲರ್ ಅಂತೂ-ಅತಿಸುರಕ್ಷಿತತೆಯು ಮಗುವನ್ನು ನ್ಯೂರೋಸಿಸ್‌ನತ್ತ ಕೊಂಡೊಯ್ಯುತ್ತದೆ ಎಂದು ಅಂದೇ ಹೇಳಿದ್ದರು.

ಸ್ಥೂಲವಾಗಿ ಇದನ್ನು ಹೀಗೆ ಹೇಳಬಹುದು: ‘ಮಗುವಿಗೆ ಜನರು, ವಸ್ತುಗಳು ಮತ್ತು ಸಂಸ್ಥೆಗಳ ಬಗ್ಗೆ ಇರುವ ಮನೋಭಾವಗಳ ಮಾದರಿಯನ್ನು ಕುಟುಂಬವೇ ರೂಪಿಸಿಕೊಡುತ್ತದೆ.’ ನಂತರದ ಕಲಿಕೆಗಳ ಆಧಾರದ ಮೇಲೆ ಈ ಮನೋಭಾವ ಮಾದರಿಗಳು ಅಲ್ಪ ಸ್ವಲ್ಪ ಬದಲಾಗುತ್ತವೆಯೇ ಹೊರತು ಸಂಪೂರ್ಣ ಅಳಿಸಿಹೋಗುವುದಿಲ್ಲ.

ಅತಿಸುರಕ್ಷಿತತೆಯು ಮಗುವನ್ನು ಪರಾವಲಂಬಿ ಮಾಡುವ ಮೂಲಕ ಅವನ ಸ್ವಾವಲಂಬನೆಯ ಶಕ್ತಿಯನ್ನು ಕಸಿದುಕೊಳ್ಳುತ್ತದೆ. ಅದು ಮನೆಯ ಹೊರಗಿನ ಅವನ ಆಸಕ್ತಿಯನ್ನೇ ಕುಂಠಿತಗೊಳಿಸುತ್ತದೆ. ಇದರಿಂದಾಗಿ ಮಗುವಿನ ಮಹತ್ವಾಕಾಂಕ್ಷೆ ಮತ್ತು ಸೈರಣೆಯ ಶಕ್ತಿಗಳು ಕಡಿಮೆಯಾಗುತ್ತವೆ ಹಾಗೂ ಆತ್ಮವಿಶ್ವಾಸವು ಕುಗ್ಗುತ್ತದೆ. ಸಣ್ಣ ಸಣ್ಣ ಟೀಕೆ-ವಿಮರ್ಶೆಗಳಿಗೆ ಕೂಡ ಅತಿ ಸೂಕ್ಷ್ಮವಾಗಿ ಇಲ್ಲವೆ ಅಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾನೆ.

ಇನ್ನು ನಿರ್ಲಕ್ಷಿತ ಮಗುವು ಅಭದ್ರತೆ, ಅಸಹಾಯಕತೆಗಳನ್ನು ಅನುಭವಿಸುತ್ತ ಆತ್ಮಗೌರವವನ್ನು ಕಳೆದುಕೊಳ್ಳುತ್ತದೆ. ಇಂಥ ಮಗುವು ಸಮಾಜವಿರೋಧಿ ವರ್ತನೆಗಳಾದ ಸುಳ್ಳು ಹೇಳುವುದು, ಕದಿಯುವುದು, ಜಗಳಗಂಟತನ ಮುಂತಾದ ಗುಣಗಳನ್ನು ರೂಢಿಸಿಕೊಳ್ಳುತ್ತದೆ.

ಒಂದು ವೇಳೆ ಪಾಲಕರೇ ಮಗುವಿಗೆ ಶರಣಾಗಿ ವರ್ತಿಸಿ, ಅದರ ಎಲ್ಲ ಬೇಕು-ಬೇಡಗಳನ್ನು ಪೂರೈಸಿ ತಮ್ಮ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಟ್ಟರೆ ಮುಂದೆ ಆ ಮಗುವು ಅವಿಧೇಯ ಮತ್ತು ಹೊಣೆಗೇಡಿಯಾಗಿ ರೂಪುಗೊಳ್ಳುತ್ತದೆ.

. ಶಾಲಾಪರಿಸರ ಮತ್ತು ಶಿಕ್ಷಕರು

ಮಗುವಿನ ಭಾವನಾತ್ಮಕ ಬೆಳವಣಿಗೆಯಲ್ಲಿ ಶಾಲಾ ಜೀವನವು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಶಾಲೆಯ ಆರೋಗ್ಯಕರ ವಾತಾವರಣವು ಮಗುವಿನ ಸಮತೋಲಿತ ಭಾವನಾತ್ಮಕ ಬೆಳವಣಿಗೆಯಾಗಿ ಪರಿಣಮಿಸುತ್ತದೆ. ಶಾಲೆಯ ಭೌತಿಕ ಸಂಪನ್ಮೂಲಗಳು, ಬೋಧನಾವಿಧಾನಗಳು, ಸಹಪಠ್ಯ ಚಟುವಟಿಕೆಗಳು, ಶಿಕ್ಷಕ-ವಿದ್ಯಾರ್ಥಿ, ಶಿಕ್ಷಕ-ಶಿಕ್ಷಕ ಮತ್ತು ಶಿಕ್ಷಕ-ಮುಖ್ಯಶಿಕ್ಷಕ ಸಂಬಂಧಗಳು, ವಿದ್ಯಾರ್ಥಿಗಳ ಕುರಿತ ಶಿಕ್ಷಕರ ಮನೋಭಾವಗಳು, ಶಿಕ್ಷಕರ ಸಂವೇಗಾತ್ಮಕ ವರ್ತನೆಗಳು..ಇವೆಲ್ಲ ಮಗುವಿನ ಭಾವನಾತ್ಮಕ ಬೆಳವಣಿಗೆಯನ್ನು ಪ್ರಭಾವಿಸುತ್ತವೆ.

ಮಾದರಿ ಜೀವನಶೈಲಿಯನ್ನು ರೂಢಿಸಿಕೊಳ್ಳುವುದರಿಂದ ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಈ ಕೆಳಕಂಡ ಸಹಾಯಗಳು ಉಂಟಾಗುತ್ತವೆ.

೧. ಸಾಮಾಜಿಕ ಸನ್ನಿವೇಶಗಳಲ್ಲಿ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಮಗು ಕಲಿತುಕೊಳ್ಳುತ್ತದೆ.

೨. ಮಗುವಿನ ಭಾವನಾತ್ಮಕ ಪ್ರತಿಕ್ರಿಯೆಗಳು ಸೂಕ್ಷ್ಮತೆಯನ್ನು ಪಡೆದುಕೊಳ್ಳುತ್ತವೆ.

೩. ಹುಡುಗಿಯರು ತಮಗಿಂತ ಹೆಚ್ಚು ಅಸೂಯಾಪರರು ಎಂದು ಅರಿತುಕೊಳ್ಳುತ್ತಾರೆ.

. ಸಾಮಾಜಿಕ ಬೆಳವಣಿಗೆ ಮತ್ತು ಸಮಾನಾಸಕ್ತರೊಂದಿಗಿನ ಸಂಬಂಧ

ಮಗುವಿನ ಸಾಮಾಜಿಕ ಬೆಳವಣಿಗೆಯು ಅವನ ಭಾವನಾತ್ಮಕ ಬೆಳವಣಿಗೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಹೆಚ್ಚು ಸಾಮಾಜಿಕತೆಯನ್ನು ಹೊಂದಿರುವ ಮಗುವು ಹೆಚ್ಚು ಭಾವನಾತ್ಮಕ ಹೊಂದಾಣಿಕೆಯನ್ನು ಹೊಂದಿರುತ್ತದೆ. ಸಾಮಾಜಿಕವಾಗಿ ತಿರಸ್ಕೃತವಾದ ಮತ್ತು ಅಪಹೊಂದಾಣಿಕೆಯ ಸಮಸ್ಯೆ ಹೊಂದಿರುವ ಮಗುವು ಸದಾ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾಜಿಕ ಸಂಬಂಧಗಳ ಸಮರ್ಪಕ ನಿರ್ವಹಣೆಯು ಮಗುವಿನ ಭಾವನಾತ್ಮಕ ವರ್ತನೆಗಳಲ್ಲಿ ಅಪೇಕ್ಷಿತ ಬದಲಾವಣೆಯನ್ನು ತರುವ ಪರಿಣಾಮಕಾರಿ ಮಾರ್ಗವಾಗಿದೆ. ಪರಿಪೂರ್ಣವಾದ ಸಾಮಾಜಿಕ ಬೆಳವಣಿಗೆ ಮಾತ್ರ ಮಗುವಿನಲ್ಲಿ ಅಪೇಕ್ಷಿತ ಮತ್ತು ಸಮಾಜ ಒಪ್ಪಿತ ಭಾವನಾತ್ಮಕ ಬೆಳವಣಿಗೆಯನ್ನು ತರಬಲ್ಲುದು.

. ನೆರೆಹೊರೆ, ಸಮುದಾಯ ಮತ್ತು ಸಮಾಜ

ಮಗುವು ಸದಸ್ಯತ್ವ ಹೊಂದಿರುವ ಇತರೆ ಸಾಮಾಜಿಕ ನಿಯೋಗಗಳಾದ ನೆರೆಹೊರೆ, ಸಮುದಾಯ ಮತ್ತು ಸಮಾಜಗಳು ಕೂಡ ಅವನ ಭಾವನಾತ್ಮಕ ವರ್ತನಾ ಮಾದರಿಯ ಮೇಲೆ ತಮ್ಮ ಪ್ರಭಾವವನ್ನು ಹೊಂದಿರುತ್ತವೆ. ಏಕೆಂದರೆ ಅವನು ತನ್ನ ಹಲೊವಾರು ಭಾವನಾತ್ಮಕ ವರ್ತನೆಯ ತಂತ್ರಗಳನ್ನು ಈ ನಿಯೋಗಗಳಿಂದಲೇ ಹೆಕ್ಕಿ ತೆಗೆದುಕೊಂಡಿರುತ್ತಾನೆ.

ಧೀರ ಸಮುದಾಯವೊಂದು ನಿಸ್ಸಂಶಯವಾಗಿಯೂ ಧೀರ ಮಕ್ಕಳನ್ನೇ ಉತ್ಪಾದಿಸುತ್ತದೆ. ಅದಕ್ಕೆಂದೇ ನಮ್ಮ ಸಮಾಜದಲ್ಲಿ ‘ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆ’ ಎಂಬ ಮಾತು ಚಾಲ್ತಿಯಲ್ಲಿದೆ. ಹಿರಿಯರು ಅನಗತ್ಯವಾಗಿ ಭಾವುಕ ಉದ್ರೇಕಗಳನ್ನು ವ್ಯಕ್ತಪಡಿಸುವಂಥ ಸಮಾಜದಿಂದ ಬಂದಿರುವ ಮಗುವು ಅಂಥದೇ ಅನಪೇಕ್ಷಿತ ವರ್ತನೆಯನ್ನು ಪಡೆದು ರೂಢಿಸಿಕೊಳ್ಳುತ್ತದೆ. ‘ಅವರ ಅಪ್ಪನ ಹಾಗೆ ಇವನೂ ಟೆನ್ಷನ್‌ ಗಿರಾಕಿ’ ಎಂಬಂಥ ಮಾತುಗಳು ಈ ಮಾತಿಗೆ ಪುಷ್ಟಿ ಒದಗಿಸುತ್ತವೆ. ಹೀಗೆ ಹಲವಾರು ಭಾವನಾತ್ಮಕ ವರ್ತನೆಯ ಮಾದರಿಗಳನ್ನು ಮಗುವು ನೆರೆಹೊರೆ, ಸಮುದಾಯ ಮತ್ತು ಸಮಾಜಗಳಿಂದ ಪಡೆದುಕೊಳ್ಳುತ್ತದೆ.

.ನೈತಿಕ ಬೆಳವಣಿಗೆ

ಮಾದರಿ ಜೀವನಶೈಲಿಯು ಉತ್ತಮವಾದ ನೈತಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಮಗುವಿನ ಚಾರಿತ್ರ್ಯ ನಿರ್ಮಾಣದಲ್ಲಿ ಕುಟುಂಬ ಶಾಲೆ, ಸಮಾಜಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಈ ನಿಯೋಗಗಳು ಮಗುವಿನ ಮಾನಸಿಕ ಶಕ್ತಿಯನ್ನು ತರಬೇತುಗೊಳಿಸಿ, ಯೋಗ್ಯ ಆದರ್ಶಗಳನ್ನು ರೂಢಿಸಿ, ಉತ್ತಮ ಹವ್ಯಾಸಗಳನ್ನು ಗುರುತಿಸಿ, ವರ್ತನೆಗಳಿಗೆ ಸರಿದಾರಿ ತೋರಿಸುವ ಮೂಲಕ ಉತ್ತಮ ಮನೋಭಾವನೆಗಳನ್ನು ಬೆಳೆಸುತ್ತವೆ. ತಪ್ಪುಗಳಿಗೆ ಶಿಕ್ಷೆ ನೀಡಿ, ಒಪ್ಪುಗಳಿಗೆ ಬಹುಮಾನ ನೀಡುತ್ತವೆ. ನೀತಿ ಕಥೆಗಳು ಮತ್ತು ದೃಷ್ಟಾಂತಗಳ ಮೂಲಕ ನೈತಿಕ ಮೌಲ್ಯಗಳ ಬೆಳವಣಿಗೆಗೆ ಸಹಕರಿಸುತ್ತವೆ.

. ಸಾಮಾಜಿಕ ಬೆಳವಣಿಗೆ

ಸಾಮಾಜಿಕ ವರ್ತನೆಯಲ್ಲಿ ಅಪೇಕ್ಷಿತ ಬದಲಾವಣೆಗಳನ್ನು ತರುವಂಥ ಗುಣಗಳ ಬೆಳವಣಿಗೆಯ ಪ್ರಕ್ರಿಯೆಯನ್ನು ಸಾಮಾಜಿಕ ಬೆಳವಣಿಗೆ ಎನ್ನುವರು. ಇಂಥ ಸಾಮಾಜಿಕ ಬೆಳವಣಿಗೆಯನ್ನು ಪ್ರಭಾವಿಸುವ-ವೈಯುಕ್ತಿಕ ಅಂಶಗಳಾದ ದೇಹಾರೋಗ್ಯ, ಬುದ್ಧಿಶಕ್ತಿ ಹಾಗೂ ಭಾವನಾತ್ಮಕ ಬೆಳವಣಿಗೆಗಳು ಮತ್ತು ಪರಿಸರದ ಅಂಶಗಳಾದ ಕೌಟುಂಬಿಕ ವಾತಾವರಣ, ಕುಟುಂಬದ ಗಾತ್ರ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಜೀವನಶೈಲಿಯು ಒಳಗೊಳ್ಳುತ್ತದೆ.

ಹೀಗೆ ಮಗುವಿಗೆ ಮಾದರಿ ಜೀವನಶೈಲಿಯು ಅಗತ್ಯವಾಗಿದ್ದು ಅದು ಮಗುವಿನ ದೈಹಿಕ, ಬೌದ್ಧಿಕ, ಸಂವೇಗಾತ್ಮಕ, ನೈತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಈ ಎಲ್ಲ ಅಂಶಗಳ ಹಿನ್ನೆಲೆಯೊಂದಿಗೆ ಶಿಕ್ಷಣ ಮತ್ತು ಜೀವನಶೈಲಿಗಳ ಸಂಬಂಧದ ಸ್ವರೂಪವನ್ನು ಅಭ್ಯಸಿಸುವ ಉದ್ದೇಶದಿಂದ ಒಂದು ವಿಸ್ತೃತವಾದ ಅಧ್ಯಯನವನ್ನು ಕೈಗೊಳ್ಳಲಾಯಿತು.

ಅಧ್ಯಯನದ ಉದ್ದೇಶ, ವ್ಯಾಪ್ತಿ ಮತ್ತು ಸಾರಾಂಶ

ಈ ನಾಡಿನಲ್ಲಿ, ಈ ದೇಶದಲ್ಲಿ, ಅಷ್ಟೇಕೆ ಈ ಭೂಮಿ ಮೇಲೆ ಎಷ್ಟೋ ಮಕ್ಕಳು ವಾಸಿಸುತ್ತಿದ್ದಾರೆ. ಅವಸ್ಥೆಯ ದೃಷ್ಟಿಯಿಂದ ಅವರಲ್ಲ ಒಂದೇ ಆಗಿದ್ದಾರಾದರೂ ಅವರವರ ಸ್ವಭಾವ ಮತ್ತು ಮನೋಧರ್ಮಗಳು ಬೇರೆ-ಬೇರೆಯೇ ಆಗಿವೆ ಎಂದು ಮನಃಶಾಸ್ತ್ರವು ಈಗಾಗಲೇ ಗುರುತಿಸಿದೆ. ಅದರಂತೆಯೇ ಅವರ ಜೀವನಶೈಲಿ ಕೂಡ ಒಂದೇ ತೆರನಾಗಿರದೆ ಸ್ವಭಾವ ಮತ್ತು ಮನೋಧರ್ಮಗಳ ಹಾಗೆಯೇ ಬೇರೆ-ಬೇರೆಯಾಗಿರುತ್ತವೆ ಎಂದು ಶೈಕ್ಷಣಿಕ ಸಮಾಜಶಾಸ್ತ್ರದ ಮತ್ತೊಂದು ಅಧ್ಯಯನವು ಗುರುತಿಸಿದೆ.

ಈ ಹಿನ್ನೆಲೆಯಲ್ಲಿ ಹಳ್ಳಿಯ ಸರ್ಕಾರಿ ಶಾಲೆಯ ಮತ್ತು ನಗರದ ಖಾಸಗಿ ಶಾಲೆಯ ಪ್ರಾಥಮಿಕ ಶಾಲಾ ಮಕ್ಕಳ ಜೀವನ ಶೈಲಿಗಳ ತೌಲನಿಕ ಅಧ್ಯಯನವನ್ನು ಕೈಗೊಳ್ಳಲಾಯಿತು. ವಿಶೇಷವಾಗಿ ಅವರ ಪಾಲಕರ ವಿದ್ಯಾರ್ಹತೆ, ಉದ್ಯೋಗ, ಸಮಜೋ-ಸಾಂಸ್ಕೃತಿಕ ಸ್ಥಿತಿ ಗತಿ ಮತ್ತು ಇತರೆ ಕೆಲವು ಆಯ್ದ ಸಹಚಲಕಗಳ ಹಿನ್ನೆಲೆಯಲ್ಲಿ ಈ ತೌಲನಿಕ ಅಧ್ಯಯನವನ್ನು ಕೈಗೊಳ್ಳಲಾಯಿತು.

ಉದ್ದೇಶಗಳು

ಈ ಅಧ್ಯಯನಕ್ಕೆ ಮುಖ್ಯವಾಗಿ ಮೂರು ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿತ್ತು. ಅವುಗಳೆಂದರೆ:

೧. ಪ್ರಾಥಮಿಕ ಶಾಲಾ ಹಂತದ ಮಕ್ಕಳ ಜೀವನಶೈಲಿಯ ಮೇಲೆ ಅವರ ಪಾಲಕರ ವಿದ್ಯಾರ್ಹತೆಯ ಪ್ರಭಾವಗಳನ್ನು ಅಭ್ಯಾಸಕ್ಕೊಳಪಡಿಸುವುದು.

೨. ಪ್ರಾಥಮಿಕ ಶಾಲಾ ಮಕ್ಕಳ ಜೀವನಶೈಲಿಯ ಮೇಲೆ ಅವರ ಪಾಲಕರ ಉದ್ಯೋಗಗಳು ಬೀರುವ ಪ್ರಭಾವಗಳನ್ನು ಪರಿಶೀಲಿಸುವುದು.

೩. ಪ್ರಾಥಮಿಕ ಶಾಲಾ ಮಕ್ಕಳ ಜೀವನ ಶೈಲಿಯ ಮೇಲೆ ಅವರ ಪಾಲಕರ ಸಮಾಜೋ-ಸಾಂಸ್ಕೃತಿಕ ಸ್ಥಿತಿ-ಗತಿಗಳ ಪ್ರಭಾವಗಳನ್ನು ಅಭ್ಯಾಸ ಮಾಡುವುದು.

ಈ ಮೂರು ಚಲಕಗಳ ಹಿನ್ನೆಲೆಯಲ್ಲಿ ಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು ಮತ್ತು ನಗರದ ಖಾಸಗಿ ಶಾಲೆಯ ಮಕ್ಕಳ ಜೀವನಶೈಲಿಗಳಲ್ಲಿರುವ ವ್ಯತ್ಯಾಸದ ಕಾರಣ, ಸ್ವರೂಪ ಮತ್ತು ಪರಿಣಾಮಗಳನ್ನು ಅಭ್ಯಸಿಸಲು ಈ ಅಧ್ಯಯನವನ್ನು ಕೈಗೊಳ್ಳಲಾಯಿತು.

ಪ್ರಾಕಲ್ಪನೆಗಳು

ಈ ಸಂಶೋಧನಾ ಕಾರ್ಯದ ಅಧ್ಯಯನಕ್ಕೆ ಅನುಕೂಲವಾಗುವಂತೆ ಸಮಸ್ಯೆಯ ಕಾರಣಗಳಿಗೆ ಸಂಬಂಧಿಸಿದಂತೆ ಮೊದಲೇ ಕೆಲವು ಪ್ರಾಕಲ್ಪನೆಗಳನ್ನು ರೂಪಿಸಿಕೊಳ್ಳಲಾಯಿತು.

೧. ಪ್ರಾಥಮಿಕ ಶಾಲಾಮಕ್ಕಳ ಜೀವನಶೈಲಿಯು ಪಾಲಕರ ಆರ್ಥಿಕ ಮಟ್ಟಕ್ಕನುಗುಣವಾಗಿ ಬದಲಾಗುತ್ತದೆ.

೨. ನಗರಗಳ ಪಾಲಕರಿಗೆ ಹೋಲಿಸಿದರೆ ಹಳ್ಳಿಗಳ ಪಾಲಕರಲ್ಲಿ ನಿರುದ್ಯೋಗಿಗಳ ಪ್ರಮಾಣ ಹೆಚ್ಚಾಗಿರುತ್ತದೆ.

೩. ಪ್ರಾಥಮಿಕ ಶಾಲಾ ಹಂತದಲ್ಲಿನ ಮಕ್ಕಳು ಮತ್ತು ಶಿಕ್ಷಕರ ಸಂಬಂಧವು ಧನಾತ್ಮಕ ಅಥವಾ ಋಣಾತ್ಮಕ ಅಥವಾ ಸಾಂಪ್ರದಾಯಿಕ ಸ್ವರೂಪದ್ದಾಗಿರುತ್ತದೆ.

೪. ಪ್ರಾಥಮಿಕ ಶಾಲಾ ಮಕ್ಕಳ ಜೀವನಶೈಲಿಯು ಅವರ ಪಾಲಕರ ಸಮಾಜೋ-ಸಾಂಸ್ಕೃತಿಕ ಸ್ಥಿತಿ-ಗತಿಯೊಂದಿಗೆ ಧನಾತ್ಮಕ ಸಂಬಂಧವನ್ನು ಹೊಂದಿರುತ್ತದೆ.

ಮಾದರಿಗಳ ಆಯ್ಕೆ

ಅಧ್ಯಯನವು ಔಪಚಾರಿಕ ಶಿಕ್ಷಣ ಪ್ರಕ್ರಿಯೆಗೆ ಮಾತ್ರವೇ ಸೀಮಿತವಾಗಿದ್ದು ಅದರಲ್ಲೂ ಪ್ರಾಥಮಿಕ ಹಂತದ ೫,೬ ಮತ್ತು ೭ನೇ ತರಗತಿಯ ವಿದ್ಯಾರ್ಥಿಗಳನ್ನು ಮಾತ್ರ ಅಧ್ಯಯನಕ್ಕಾಗಿ ಆಯ್ದುಕೊಂಡಿದೆ. ಗುಲ್ಬರ್ಗಾ ಜಿಲ್ಲೆಯ ಚಿತಾಪೂರ ತಾಲೂಕಿನ ರಾವೂರು ಎಂಬ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅದೇ ಗ್ರಾಮದ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ರಾಯಚೂರು ನಗರದ ಬಸವ ವಿದ್ಯಾನಿಕೇತನ ಶಾಲೆ ಎಂಬ ಖಾಸಗಿ ಶಾಲೆ ಮತ್ತು ಇಲ್ಲಿಯದೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳನ್ನು ಈ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿದೆ.

ಈ ಅಧ್ಯಯನವು ಜೀವನಶೈಲಿಯನ್ನು ಪ್ರಭಾವಿಸುವ ಇತರೆ ಸಾಮಾಜಿಕ ಅಂಶಗಳನ್ನೂ ಗಮನಕ್ಕೆ ತೆಗೆದುಕೊಂಡಿದ್ದು ಶಾಲೆಯ ಮತ್ತು ಮನೆಯ ವಾತಾವರಣದ ಬಗ್ಗೆ ಮಕ್ಕಳು ನೀಡಿದ ಸ್ವಯಂ ವರದಿಯನ್ನು ಪ್ರಾಥಮಿಕ ದಾಖಲೆಯಾಗಿ ಬಳಸಿಕೊಂಡ ಇದೆ. ವಿದ್ಯಾರ್ಥಿಯ ಸ್ಥಳಕ್ಕೆ ಭೇಟಿ ಕೊಟ್ಟು ಅವಲೋಕನ ತಂತ್ರದ ಮೂಲಕ ಕೆಲವು ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಕೆಲವು ಆಯ್ದ ಮಕ್ಕಳಿಂದ ಬಿಳಿಹಾಳೆಯ ಮೇಲೆ ಬೆಳಗಿನಿಂದ ಸಂಜೆವರೆಗಿನ ಅವರ ಚಟುವಟಿಕೆಗಳ ದೈನಿಕದ ವರದಿಯನ್ನು ಸಂಗ್ರಹಿಸಲಾಗಿದೆ.

ನಂತರ ಆ ಶಾಲೆಯ ಶಿಕ್ಷಕರ ನೆರವಿನಿಂದ ಸರಾಸರಿಗಿಂತ ಮೇಲ್ಮಟ್ಟದ, ಸರಾಸರಿಯ ಮತ್ತು ಸರಾಸರಿಗಿಂತ ಕೆಳಮಟ್ಟದ ಸಾಧನೆಯನ್ನು ಪ್ರತಿನಿಧಿಸುವ ಬಾಲಕ ಮತ್ತು ಬಾಲಕಿಯರನ್ನು ಮಾದರಿಗಳಾಗಿ ಆಯ್ಕೆ ಮಾಡಿಕೊಂಡು, ಅವರ ಪಾಲಕರ ವಿದ್ಯಾರ್ಹತೆ, ಉದ್ಯೋಗ ಮತ್ತು ಆದಾಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುವ ‘ಜೀವನಶೈಲಿ ಅನ್ವೇಷಕ ಪ್ರಶ್ನಾವಳಿ’ಗೆ ಉತ್ತರಗಳನ್ನು ಪಡೆಯಲಾಗಿದೆ.

ಹಾಗೆಯೇ ಶಾಲೆಯ ವಿಸ್ತೀರ್ಣ, ಭೌತಿಕ ಮತ್ತು ಮಾನವ ಸಂಪನ್ಮೂಲಗಳ ಲಭ್ಯತೆ, ನೀತಿ-ನಡಾವಳಿಗಳು, ತರಗತಿ ನಿರ್ವಹಣೆ, ಮಕ್ಕಳಲ ಶಿಸ್ತು, ಸಂಸ್ಥೆಯ ಆಡಳಿತ ಮುಂತಾದ ಸಂಗತಿಗಳ ಬಗ್ಗೆ ಪಾಲಕರು, ಶಿಕ್ಷಕರು ಮತ್ತು ಮುಖ್ಯಗುರುಗಳೊಂದಿಗಿನ ಅನೌಪಚಾರಿಕ ಮಾತುಕತೆಯ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ನಗರ ಪ್ರದೇಶದಿಂದ ಒಂದು ಸರ್ಕಾರಿ ಮತ್ತೊಂದು ಖಾಸಗಿ ಶಾಲೆ ಹಾಗೂ ಗ್ರಾಮೀಣ ಪ್ರದೇಶದಿಂದ ಒಂದು ಸರ್ಕಾರಿ ಮತ್ತೊಂದು ಖಾಸಗಿ ಶಾಲೆ ಹೀಗೆ ಒಟ್ಟು ನಾಲ್ಕು ಶಾಲೆಗಳಿಂದ ತಲಾ ಇಪ್ಪತ್ತು ವಿದ್ಯಾರ್ಥಿಗಳಂತೆ ಒಟ್ಟು ೮೦ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಪ್ರತಿ ಶಾಲೆಯ ಇಪ್ಪತ್ತು ವಿದ್ಯಾರ್ಥಿಗಳಲ್ಲೂ ಸರಾಸರಿಗಿಂತ ಮೇಲ್ಮಟ್ಟದ, ಸರಾಸರಿಯ ಮತ್ತು ಸರಾಸರಿಗಿಂತ ಕೆಳಮಟ್ಟದ ಸಾಧನೆಯ ವರ್ಗಗಳಿಂದ ಸಮಾನ ಸಂಖ್ಯೆಯ ಬಾಲಕರು ಮತ್ತು ಬಾಲಕಿಯರು ಇರುವಂತೆ ಆಯ್ಕೆಯನ್ನು ವ್ಯವಸ್ಥೆಗೊಳಿಸಲಾಗಿದೆ.

ಅಧ್ಯಯನ ಸಾಧನಗಳು

೧. ವೀಕ್ಷಣೆ

೨. ಸಹಭಾಗೀ ಅವಲೋಕನ
೩. ಸ್ವಯಂ ವರದಿ
೪. ಸಂದರ್ಶನ
೫. ಜೀವನಶೈಲಿ ಅನ್ವೇಷಕ ಪ್ರಶ್ನಾವಳಿ

. ವೀಕ್ಷಣೆ

ಅಧ್ಯಯನಕ್ಕಾಗಿ ಆಯ್ದುಕೊಂಡಿರುವ ಮಾದರಿಗಳದ್ದೇ ವಯೋಮಾನದ ಇತರ ಮಕ್ಕಳನ್ನು ಅವರಿಗೆ ಗೊತ್ತಾಗದಂತೆ ದೂರದಿಂದಲೇ ಅಭ್ಯಾಸ ಮಾಡುವ ವಿಧಾನವನ್ನು ವೀಕ್ಷಣೆ ಎನ್ನುವರು. ನೆರೆಹೊರೆಯ ಮಕ್ಕಳನ್ನು ಅವರಿಗೆ ಗೊತ್ತಾಗದಂತೆ ಸತತ ಎರಡು ದಿನಗಳ ಕಾಲ ವೀಕ್ಷಣೆಗೊಳಪಡಿಸಿ ಅವರ ಸಮೂಹ ವರ್ತನೆ, ಕ್ರೀಡಾಸಕ್ತಿ, ಭಾಷಾ ಸಾಮರ್ಥ್ಯ, ನಾಯಕತ್ವ ಗುಣ, ದೈಹಿಕ ಕ್ಷಮತೆ ಮತ್ತು ನೈರ್ಮಲ್ಯ ಅಭ್ಯಾಸಗಳು ಇತ್ಯಾದಿ ಗುಣಗಳನ್ನು ದಾಖಲಿಸಿಕೊಳ್ಳಲಾಯಿತು.

. ಸಹಭಾಗೀ ಅವಲೋಕನ

ವಿದ್ಯಾರ್ಥಿಗಳೊಂದಿಗೆ ಸಹಜವಾಗಿ ಬೆರೆತು ಮಾತಾಡುತ್ತ ಆ ಅನೌಪಚಾರಿಕ ಮಾತುಕತೆಯ ಮೂಲಕವೇ ಮಕ್ಕಳ, ಪಾಲಕರ ಮತ್ತು ಶಿಕ್ಷಕರ ಸಾಮಾನ್ಯ ಚಟುವಟಿಕೆಗಳು ಹಾಗೂ ಹವ್ಯಾಸಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ವಿಧಾನವೇ ವೀಕ್ಷಣಾತಂತ್ರ. ಈ ಅಧ್ಯಯನಕ್ಕೆ ಅಗತ್ಯವಾದ ಕೆಲವು ನಿರ್ದಿಷ್ಟ ಮಾಹಿತಿಗಳನ್ನು ಸಂಗ್ರಹಿಸಲಿಕ್ಕಾಗಿ ಈ ಸಾಧನವನ್ನು ಬಳಸಿಕೊಳ್ಳಲಾಗಿದೆ.

. ಸ್ವಯಂ ವರದಿ

ಒಂದು ಶಾಲೆಯ ೫,೬ ಹಾಗೂ ೭ನೇ ತರಗತಿಗಳ ಸರಾಸರಿಗಿಂತ ಮೇಲ್ಮಟ್ಟದ, ಸರಾಸರಿ ಸಾಮರ್ಥ್ಯದ ಹಾಗೂ ಸರಾಸರಿಗಿಂತ ಕೆಳಮಟ್ಟದ ಸಾಧನೆಯ ಆಯ್ದ ವಿದ್ಯಾರ್ಥಿಗಳನ್ನು ಒಂದೆಡೆ ಕೂರಿಸಿ ವಿವಿಧ ಸಮಯಗಳನ್ನು ನಮೂದಿಸಿರುವ ಹಾಳೆಗಳನ್ನು ಕೊಡಲಾಯಿತು. ಆಯಾ ಸಮಯಗಳ ಮುಂದೆ ಬಿಡಲಾಗಿರುವ ಖಾಲಿ ಸ್ಥಳಗಳಲ್ಲಿ ತಮ್ಮ ಆ ಸಮಯದ ದೈನಿಕ ಚಟುವಟಿಕೆಗಳನ್ನು ತುಂಬುವಂತೆ ಹೇಳಲಾಯಿತು. ಬೆಳಗಿನಿಂದ ರಾತ್ರಿವರೆಗಿನ ಅವರ ಎಲ್ಲ ಚಟುವಟಿಕೆಗಳನ್ನು ದಾಖಲಿಸಲು ಹೇಳಿ ಈ ಸ್ವಯಂ ವರದಿಯ ಹಾಳೆಗಳನ್ನು ಮನೆಗೇ ಕೊಂಡೊಯ್ಯಲು ನೀಡಲಾಯಿತು.

. ಸಂದರ್ಶನ

ಅಧ್ಯಯನಕ್ಕಾಗಿ ಆಯ್ದುಕೊಂಡಿರುವ ಪ್ರತಿಯೊಬ್ಬ ಮಗುವನ್ನೂ ಪ್ರತ್ಯೇಕವಾಗಿ ಸಂದರ್ಶನ ಮಾಡಲಾಯಿತು. ಮಗುವಿನ ಚಟುವಟಿಕೆಗಳ ಮಟ್ಟವನ್ನು ನಿರ್ಧರಿಸಿ ದರ್ಜೆ ನೀಡುವಲ್ಲಿ ಅನುಕೂಲವಾಗುವ ದರ್ಜಾಮಾಪನಿಯ ತಂತ್ರವನ್ನು ಬಳಸಿಕೊಳ್ಳಲಾಯಿತು.

. ಜೀವನಶೈಲಿ ಅನ್ವೇಷಕ ಪ್ರಶ್ನಾವಳಿ

ವೀಕ್ಷಣೆ, ಸಹಭಾಗೀ ಅವಲೋಕನ, ಸ್ವಯಂ ವರದಿ ಹಾಗೂ ಸಂದರ್ಶನಗಳ ಫಲಿತಾಂಶಗಳನ್ನು ಆಧರಿಸಿ ಜೀವನಶೈಲಿ ಅನ್ವೇಷಕ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಯಿತು. ಮನೆಯ ವಾತಾವರಣ, ಶಾಲೆಯ ವಾತಾವರಣ ಮತ್ತು ಸಾಮಾಜಿಕ ವಾತಾವರಣಗಳಿಗೆ ಸಂಬಂಧಿಸಿದಂತೆ ೮೦ ಪ್ರಶ್ನೆಗಳನ್ನು ಇದರಲ್ಲಿ ಅಡಕಗೊಳಿಸಲಾಗಿತ್ತು. ಪಾಲಕರ ವಿದ್ಯಾರ್ಹತೆ, ಉದ್ಯೋಗ, ಆರ್ಥಿಕತೆ, ಪ್ರೀತಿ-ವಾತ್ಸಲ್ಯ, ಶಿಕ್ಷಕರ ವರ್ತನೆ, ಗೆಳೆಯರ ವ್ಯಕ್ತಿತ್ವ, ಸಮಾಜೋ-ಸಾಂಸ್ಕೃತಿಕ ಚಟುವಟಿಕೆಗಳು, ಆಹಾರಾಭ್ಯಾಸಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ರೂಪಿಸಲಾದ ಈ ಪ್ರಶ್ನೆಗಳಿಗೆ ‘ಯಾವತ್ತೂ’, ‘ಬಹುತೇಕ’, ‘ಕೆಲವೊಮ್ಮೆ’ ಹಾಗೂ ‘ಎಂದಿಗೂ ಇಲ್ಲ’ ಎಂಬ ಉತ್ತರಗಳನ್ನು ನೀಡಿ ಯಾವುದಾದರೊಂದನ್ನು ಗುರುತಿಸುವಂತೆ ನಿರ್ದೇಶಿಸಲಾಯಿತು ಮತ್ತು ಪ್ರತಿ ಉತ್ತರಕ್ಕೂ ಒಂದು ದರ್ಜೆಯನ್ನು ಮೊದಲೇ ನಿಗದಿಪಡಿಸಿಕೊಳ್ಳಲಾಗಿತ್ತು.

ದತ್ತಾಂಶ ವಿಶ್ಲೇಷಣೆ

ಎಸ್‌.ಪಿ.ಎಸ್‌.ಎಸ್‌ (ಸ್ಟ್ಯಾಟಿಸ್ಟಿಕಲ್‌ ಪ್ಯಾಕೇಜ್‌ ಇನ್‌ ಸೋಶಿಯಲ್‌ ಸೈನ್ಸ್‌) ತಂತ್ರದ ಮೂಲಕ ಸಂಗ್ರಹಿತ ಮಾಹಿತಿಯನ್ನು ಸಂಖ್ಯಾರೂಪಕಗಳಾಗಿ ಪರಿವರ್ತಿಸಿ ವಿವಿಧ ಕೋಷ್ಟಕಗಳಾಗಿ ವರ್ಗೀಕರಿಸಿ ಸಂಖ್ಯಾಶಾಸ್ತ್ರೀಯ ಪರೀಕ್ಷೆಗಳಗೆ ಒಳಪಡಿಸಿ ಪ್ರಾಕ್ಕಲ್ಪನೆಗಳ ಸಿಂಧುತ್ವವನ್ನು ಪರಿಶೀಲಿಸಲಾಯಿತು.