ಫಲಿತಾಂಶಗಳು, ಪರಿಹಾರಗಳು ಮತ್ತು ತೀರ್ಮಾನಗಳು ಫಲಿತಾಂಶಗಳು

ಹಳ್ಳಿಯ ಸರ್ಕಾರೀ ಶಾಲೆಯೇ ಇರಲಿ, ನಗರದ ಖಾಸಗಿ ಶಾಲೆಯೇ ಇರಲಿ ಬಹುತೇಕ ಕುಟುಂಬಗಳಲ್ಲಿ ಶಿಕ್ಷಣದ ವಿಚಾರವಾಗಿ ಬಾಲಕಿಯರಿಗಿಂತ ಬಾಲಕರೇ ಹೆಚ್ಚಿನ ಆದ್ಯತೆ ಪಡೆದವರಾಗಿದ್ದಾರೆ.

೧. ನಗರದ ಖಾಸಗಿ ಶಾಲೆಗಳ ವಾತಾವರಣವು ಮಗುವಿನ ವಿಕಾಸಕ್ಕೆ ಮತ್ತು ಅಪೇಕ್ಷಿತ ವರ್ತನಾ ಬದಲಾವಣೆಗೆ ಸಹಕಾರಿಯಾಗಿದೆ. ಹಳ್ಳಿಯ ಸರ್ಕಾರಿ ಶಾಲೆಗಳ ವಾತಾವರಣವು ಈ ದಿಶೆಯಲ್ಲಿ ಅಷ್ಟೇನೂ ಆಶಾದಾಯಕವಾಗಿಲ್ಲ.

೨. ಸರಾಸರಿಗಿಂತ ಮೇಲ್ಮಟ್ಟದ ಸಾಧನೆಯ ಮಕ್ಕಳ ಜೀವನಶೈಲಿಯು ಸರಾಸರಿ ಸಾಧನೆಯ ಮಕ್ಕಳ ಜೀವನ ಶೈಲಿಗಿಂತ ಉತ್ತಮವಾಗಿದೆ. ಹಾಗೆಯೇ ಸರಾಸರಿ ಸಾಧನೆಯ ಮಕ್ಕಳ ಜೀವನಶೈಲಿಯು ಸರಾಸರಿಗಿಂತ ಕೆಳ ಮಟ್ಟದ ಸಾಧನೆಯ ಮಕ್ಕಳ ಜೀವನಶೈಲಿಗಿಂತ ಉತ್ತಮವಾಗಿದೆ.

೩. ಶಿಕ್ಷಿತ ಮತ್ತು ಸುಶಿಕ್ಷಿತ ಪಾಲಕರ ಮಕ್ಕಳ ಜೀವನಶೈಲಿಯು ಅಶಿಕ್ಷಿತ ಪಾಲಕರ ಮಕ್ಕಳ ಜೀವನಶೈಲಿಗಿಂತ ಉತ್ತಮವಾಗಿದೆ.

೪. ಪಾಲಕರ ಉದ್ಯೋಗವು ಮಕ್ಕಳ ಜೀವನಶೈಲಿಯ ಮೇಲೆ ನೇರವಾದ ಪ್ರಭಾವವನ್ನು ಹೊಂದಿದೆ. ಪಾಲಕರ ಉದ್ಯೋಗವು ದೊಡ್ಡದಾದಂತೆ ಮಕ್ಕಳ ಜೀವನಶೈಲಿಯು ಉತ್ತಮವಾಗುತ್ತ ಸಾಗುತ್ತದೆ.

೫. ಮಕ್ಕಳಿಗೆ ಒದಗಿಸಲಾಗುವ ಸೌಲಭ್ಯಗಳು ಪಾಲಕರ ಆರ್ಥಿಕತೆಯೊಂದಿಗೆ ನೇರ ಸಂಬಂಧ ಹೊಂದಿವೆ. ಭೌತಿಕ ಸೌಲಭ್ಯಗಳ ದೃಷ್ಟಿಯಿಂದ ಸ್ಥಿತಿವಂತ ಮಕ್ಕಳು ಬಡ ಮಕ್ಕಳಿಗಿಂತ ಹೆಚ್ಚು ಸಂತೃಪ್ತಿ ಹೊಂದಿದ್ದಾರೆ. ಉತ್ತಮ ಜೀವನಶೈಲಿ ರೂಪುಗೊಳ್ಳುವಲ್ಲಿ ಬಡತನವು ಒಂದು ತೊಡಕಾಗಿದೆ.

೬. ಕೌಟುಂಬಿಕ ಪರಿಸ್ಥಿತಿಯು ಮಗುವಿನ ಜೀವನ ಶೈಲಿಯ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ. ಅದೇ ಕಾರಣಕ್ಕಾಗಿ ಚಿಕ್ಕ ಕುಟುಂಬದ ಮಗುವಿನ ಜೀವನಶೈಲಿಯು ಅವಿಭಕ್ತ ಕುಟುಂಬದ ಮಗುವಿನ ಜೀವನಶೈಲಿಗಿಂತ ಉತ್ತಮವಾಗಿದೆ.

೭. ಹೆಚ್ಚು ಸೋದರ-ಸೋದರಿಯರನ್ನು ಹೊಂದಿರುವ ಮಗುವಿಗಿಂತ ಕಡಿಮೆ ಸೋದರ-ಸೋದರಿಯರನ್ನು ಹೊಂದಿರುವ ಮಗುವಿನ ಜೀವನಶೈಲಿಯು ಉತ್ತಮವಾಗಿದೆ.

೮. ಎಷ್ಟನೇ ಮಗು ಎಂಬುದು ಕೂಡ ಮಗುವಿನ ಜೀವನಶೈಲಿಯ ಮೇಲೆ ಪರಿಣಾಮ ಬೀರುವ ಅಂಶವಾಗಿದೆ. ಮೊದಲ ಮಗುವಿಗೆ ಜವಾಬ್ದಾರಿ ಹೆಚ್ಚಿದ್ದರೆ ಕಡೆಯ ಮಗುವಿಗೆ ಪ್ರೀತಿ ಹೆಚ್ಚಿರುತ್ತದೆ. ಮಧ್ಯದ ಮಕ್ಕಳು ಲೆಕ್ಕಕ್ಕೇ ಇಲ್ಲದಂತಿರುತ್ತಾರೆ.

೯. ಮೊದಲ ಮತ್ತು ಕಡೆಯ ಮಕ್ಕಳು ಉಳಿದವರಿಗಿಂತ ಹೆಚ್ಚು ಪ್ರೀತಿ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ.

೧೦. ತಮ್ಮ ಜೀವನಶೈಲಿಯನ್ನು ಅಪೇಕ್ಷಿತ ರೀತಿಯಲ್ಲಿ ರೂಪಿಸಿಕೊಳ್ಳಲು ಬೇಕಿರುವ ಸೌಲಭ್ಯಗಳಲು ಹಳ್ಳಿ ಮಕ್ಕಳಿಗಿಂತ ನಗರದ ಮಕ್ಕಳಿಗೆ ಹೆಚ್ಚಾಗಿ ದೊರಕುತ್ತವೆ.

೧೧. ಪಾಲಕರೊಂದಿಗೆ ವಾಸವಿರುವ ಮಕ್ಕಳು ಒಡೆದ ಕುಟುಂಬಗಳ ಮಕ್ಕಳಿಗಿಂತ ಹೆಚ್ಚು ಸಂತೃಪ್ತರಾಗಿರುತ್ತಾರೆ.

೧೨. ಮಕ್ಕಳ ಜೀವನಶೈಲಿಯು ಮನೆಯಲ್ಲಿರುವ ಮನೋರಂಜನಾ ಸಾಧನಗಳಾದ ಟಿ.ವಿ. ಕಂಪ್ಯೂಟರ್ ಗಳಿಂದಲೂ ಪ್ರಭಾವಿತವಾಗಿದೆ. ಏಕೆಂದರೆ ಇವು ಮಗುವಿಗೆ ವಿಭಿನ್ನ ಅನುಭವಗಳನ್ನು ಒದಗಿಸುವ ಮೂಲಕ ಅವನ ದೃಷ್ಟಿಕೋನವನ್ನು ನೇರ್ಪುಗೊಳಿಸುತ್ತವೆ.

ಪರಿಹಾರೋಪಾಯಗಳು

೧. ಪಾಲಕರು ಮತ್ತು ಶಿಕ್ಷಕರು ಹೆಚ್ಚು ಹೆಚ್ಚು ಸಹನೆಯನ್ನು ರೂಢಿಸಿಕೊಳ್ಳಬೇಕು. ಮುಕ್ತವಾದ ವಾತಾವರಣವನ್ನು ಮಕ್ಕಳಿಗೆ ಒದಗಿಸಿಕೊಟ್ಟು ಅವರ ಬೌದ್ಧಿಕ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ತಪ್ಪಿದಾಗ ತಿದ್ದಬೇಕು. ಅವರಿಗೆ ಸಹನೆಯ ಈ ಪಾಠವನ್ನು ಸರಿಯಾಗಿ ಹೇಳಿಕೊಟ್ಟರೆ ಶಿಸ್ತಿನ ಜೀವನಶೈಲಿಯು ತನ್ನಂತಾನೇ ರೂಪುಗೊಳ್ಳುತ್ತದೆ.

೨. ಮಕ್ಕಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಮತ್ತು ಅಗತ್ಯ ಬಿದ್ದಾಗ ಮಾತ್ರ ಸೂಕ್ತ ಮಾರ್ಗದರ್ಶನ ನೀಡಬೇಕು.

೩. ಮಾನಸಿಕ, ತಾತ್ವಿಕ ಮತ್ತು ಶಾರೀರಿಕ ಶಕ್ತಿಗಳನ್ನು ಕುಂದಿಸುವ ಅನಗತ್ಯ ಜಗಳಗಳು, ತಪ್ಪು ಅರ್ಥೈಕೆಗಳು ಮತ್ತು ಮೂಢನಂಬಿಕೆಗಳಿಂದ ಮಕ್ಕಳನ್ನು ದೂರವಿರಿಸಬೇಕು.

೪. ಮಕ್ಕಳ ಬೆಳವಣಿಗೆಯು ಬಹುಮಟ್ಟಿಗೆ ಅವರ ಪಾಲಕರ ಜ್ಞಾನ ಸಂಪತ್ತು ಮತ್ತು ಅರ್ಜಿತ ಅನುಭವಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ ಸ್ವಾರ್ಥ, ಆಷಾಢಭೂತಿತನ, ಪೂರ್ವಗ್ರಹ, ದ್ವೇಷ ಮುಂತಾದ ದುರ್ಗುಣಗಳನ್ನು ಹತ್ತಿಕ್ಕಿಕೊಳ್ಳುವಂತೆ ಮಕ್ಕಳಿಗೆ ಪಾಲಕರು ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡಬೇಕು.

೫. ತಮ್ಮ ಮಕ್ಕಳು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಬಯಸುವ ಪಾಲಕರು ಮೊದಲು ತಮ್ಮ ಕುಟುಂಬದ ಗಾತ್ರವನ್ನು ಕಿರಿದುಗೊಳಿಸಬೇಕು. ಕಿರಿದುಗೊಳಿಸುವುದೆಂದರೆ ತಮ್ಮ ವಯಸ್ಸಾದ ಪಾಲಕರನ್ನು ಮನೆಯಿಂದ ಹೊರ ಹಾಕುವುದಲ್ಲ; ಬದಲಿಗೆ ತಾವು ಹೆರುವ ಮಕ್ಕಳ ಸಂಖ್ಯೆಯನ್ನು ಎರಡಕ್ಕೆ ಮಿತಿಗೊಳಿಸಿಕೊಳ್ಳುವುದು. ಇದರಿಂದ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಮಕ್ಕಳಿಗಾಗಿ ಹೆಚ್ಚು ಸಮಯ ನೀಡಲು ಮತ್ತು ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುತ್ತದೆ.

೬. ಗಂಡು ಮತ್ತು ಹೆಣ್ಣು ಮಕ್ಕಳನ್ನು ಸರಿಸಮನಾಗಿ ಕಾಣಬೇಕು. ಬೇರೆಯವರ ಎದುರು ಮಕ್ಕಳನ್ನು ದೂಷಿಸುವುದಾಗಲೀ, ವಿಮರ್ಶಿಸುವುದಾಗಲೀ, ಟೀಕಿಸುವುದಾಗಲೀ ವಿನಾಕಾರಣ ಹಳಿಯುವುದಾಗಲೀ ಮಾಡಕೂಡದು.

೭. ಮಕ್ಕಳ ಮಾತು, ವರ್ತನೆ ಮತ್ತು ಭಾವನೆಗಳನ್ನು ನಿರ್ಲಕ್ಷಿಸದೆ ಅವರ ಮಾತುಗಳನ್ನು ಸಾವಧಾನವಾಗಿ ಕೇಳಿಸಿಕೊಂಡು, ಅರ್ಥ ಮಾಡಿಕೊಂಡು ಸರಿಯಿದ್ದರೆ ಅವರ ಆಲೋಚನೆಗಳನ್ನು, ಇಷ್ಟಾನಿಷ್ಟಗಳನ್ನು ಸ್ವೀಕರಿಸುವುದನ್ನು ಕಲಿತುಕೊಳ್ಳಬೇಕು.

೮. ಮಕ್ಕಳನ್ನು ಸಾಧ್ಯವಾದಷ್ಟು ಸಂತೃಪ್ತ ಸ್ಥಿತಿಯಲ್ಲಿಡಲು ಪ್ರಯತ್ನಿಸಬೇಕು.

೯. ಮಕ್ಕಳ ಎಲ್ಲ ಮೂಲಭೂತ ಬೇಡಿಕೆಗಳನ್ನು ಈಡೇರಿಸಬೇಕು.

೧೦. ಉತ್ತರ ಬಾಲ್ಯಾವಸ್ಥೆಯ ಮಗುವು ಹೆಚ್ಚು ಕುತೂಹಲದ ಸ್ವಭಾವವನ್ನು ಹೊಂದಿರುತ್ತದೆ. ಅವನ ಕುತೂಹಲವನ್ನು ತಣಿಸುವಂಥ ವಿವಿಧ ಬಗೆಯ ಮಾಹಿತಿಯನ್ನು ನೀಡಬೇಕು.

೧೧. ಈ ಉತ್ತರ ಬಾಲ್ಯಾವಸ್ಥೆಯ ಸಹಕಾರದ, ಸಾಮಾಜಿಕ ಸೇವೆಯ ಮತ್ತು ಸ್ವಾರ್ಥದ ಭಾವನೆಗಳು ಬಲಗೊಳ್ಳುವ ಕಾಲವಾಗಿರುತ್ತದೆ. ಹಾಗಾಗಿ ವಿಧ್ವಂಸಕವಾಗಿ ಪರಿವರ್ತನೆಗೊಳ್ಳಬಹುದಾದ ಮಗುವಿನ ಗುಂಪು ಚಟುವಟಿಕೆಗಳನ್ನು ನಿಯಂತ್ರಿಸಿ ಸಾಧ್ಯವಾದರೆ ನಿರ್ಣಾಮಗೊಳಿಸಬೇಕು. ಅದೇ ಸಮಯಕ್ಕೆ ಇಂಥ ಚಟುವಟಿಕೆಗಳಿಗೆ ಬದಲಿಯಾಗಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಒದಗಿಸಬೇಕು.

೧೨. ಶಿಕ್ಷಕರು ಮಕ್ಕಳ ವೈಯುಕ್ತಿಕ ಭಿನ್ನತೆಗಳನ್ನು ಗಮನದಲ್ಲಿರಿಸಿಕೊಂಡು ಅವರವರ ಅಗತ್ಯ ಮತ್ತು ಅನನ್ಯತೆಗಳಿಗನುಗುಣವಾಗಿ ಮಾರ್ಗದರ್ಶನ ನೀಡಬೇಕು.

೧೩. ಪಾಲಕರು ಮತ್ತು ಶಿಕ್ಷಕರೇ ಮಗುವಿನ ಪಾಲಿನ ಯಾವತ್ತೂ ಮಾದರಿಗಳಾಗಿರುವುದರಿಂದ ಮತ್ತು ಬಹುಪಾಲು ಮಕ್ಕಳು ಇವರ ಅನುಕರಣೆಯಿಂದಲೇ ಕಲಿಯುವುದರಿಂದ ಪಾಲಕರು ಮತ್ತು ಶಿಕ್ಷಕರು ಆದರ್ಶಮಯ ವ್ಯಕ್ತಿತ್ವಗಳನ್ನು ರೂಢಿಸಿಕೊಳ್ಳಬೇಕು.

೧೪. ಮಕ್ಕಳ ವರ್ತನೆಗಳನ್ನು ತಿದ್ದುವಂಥ ಒಳ್ಳೆಯ ಹವ್ಯಾಸಗಳ ರೂಢಿಯನ್ನು ಶಾಲೆ ಮತ್ತು ಮನೆಯ ವಾತಾವರಣಗಳು ಹಾಕಿಕೊಡುವಂತಿರಬೇಕು.

೧೫. ಶಿಕ್ಷಕರು ತರಗತಿಯ ಭಾವುಕ ವಾತಾವರಣವನ್ನು ನಿಯಂತ್ರಿಸುವ ಶಕ್ತಿಯುಳ್ಳವರಾಗಿರಬೇಕು.

ಮುಂದಿನ ಸಂಶೋಧನೆಗೆ ಅವಕಾಶಗಳು

ಈ ಅಧ್ಯಯನ ಕಾರ್ಯಕ್ಕೆ ಹಲವಾರು ಮಿತಿಗಳಿದ್ದಾಗ್ಗ್ಯೂ ಇದು ಹಲವಾರು ಸಂಶೋಧನೆಗಳ ಬೀಜಗಳನ್ನು ತನ್ನ ಒಡಲೊಳಗಿರಿಸಿಕೊಂಡಿದೆ. ಅಂಥ ಕೆಲವು ಸಾಧ್ಯತೆಗಳು ಹೀಗಿವೆ.

೧. ಈ ಕಾರ್ಯವನ್ನು ಆಧರಿಸಿ ಮುಂದೆ ಕೌಟುಂಬಿಕ ವಾತಾವರಣಕ್ಕೆ ಸಂಬಂಧಿಸಿದ ಮನೋವೈಜ್ಞಾನಿಕ ಅಂಶಗಳ ಪ್ರತ್ಯೇಕ ಅಧ್ಯಯನವನ್ನು ಕೈಗೊಳ್ಳಬಹುದು.

೨. ಮಾನವ ಮತ್ತು ಭೌತಿಕ ಸಂಪನ್ಮೂಲಗಳ ದೃಷ್ಟಿಯಿಂದ ಶಾಲಾ ವಾತಾವರಣವನ್ನು ಮತ್ತಷ್ಟು ಸುಧಾರಿಸಲು ಮಾರ್ಗೋಪಾಯಗಳನ್ನು ಕಂಡುಹಿಡಿಯಬಹುದು.

೩. ಶಾಲೆಯ ವಾತಾವರಣದ ಪರಿಣಾಮವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಅಂತರ್ ವ್ಯಕ್ತಿ ಸಂಬಂಧಗಳು ಮತ್ತು ಅಂತರ್ ಕ್ರಿಯಾ ಪ್ರಕ್ರಿಯೆಗಳನ್ನು ಈ ಅಧ್ಯಯನದ ನೆರವಿನಿಂದ ಕಂಡುಹಿಡಿಯಬಹುದು.

೪. ಮಗುವಿನ ಮೇಲೆ ಶಾಲಾ ವಾತಾವರಣದ ಮನೋವೈಜ್ಞಾನಿಕ ಪರಿಣಾಮಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪರಿಹಾರಾತ್ಮಕ ಕ್ರಮಗಳ ಬಗ್ಗೆ ಪ್ರತ್ಯೇಕ ಅಧ್ಯಯನವನ್ನು ಕೈಗೊಳ್ಳಬಹುದು.

೫. ಮಗುವಿನ ಮಾನಸಿಕ ಸಾಮರ್ಥ್ಯಗಳನ್ನು ವೃದ್ಧಿಸುವಲ್ಲಿ ಶಾಲೆಯ ಪ್ರಭಾವಗಳನ್ನು ಅಭ್ಯಸಿಸಬಹುದು.

೬. ಮಗುವಿನ ಶೈಕ್ಷಣಿಕ ಪ್ರಗತಿಯ ಮೇಲೆ ಪ್ರಭಾವ ಬೀರುವ ಸಾಮಾಜಿಕ ಅಂಶಗಳ ಅಧ್ಯಯನವನ್ನು ಕೈಗೆತ್ತಿಕೊಳ್ಳಬಹುದು.

೭. ಅತ್ಯಂತ ಕರ್ಮಠ ಕುಟುಂಬ ಮತ್ತು ಅತ್ಯಂತ ಆಧುನಿಕ ಕುಟುಂಬಗಳ ಮಕ್ಕಳ ಸಾಧನೆಗಳ ತೌಲನಿಕ ಅಧ್ಯಯನವನ್ನು ಮಾಡಬಹುದು.

ತೀರ್ಮಾನಗಳು

೧. ನಗರದ ಖಾಸಗಿ ಶಾಲೆಯೇ ಆಗಲಿ, ಹಳ್ಳಿಯ ಸರ್ಕಾರಿ ಶಾಲೆಯೇ ಆಗಲಿ-ಹುಡುಗ ಮತ್ತು ಹುಡುಗಿಯರ ಜೀವನಶೈಲಿಗಳಲ್ಲಿ ಗಮನಾರ್ಹ ವ್ಯತ್ಯಾಸವಿದೆ.

೨. ನಗರವೇ ಇರಲಿ, ಹಳ್ಳಿಯೇ ಇರಲಿ-ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ಜೀವನಶೈಲಿಗಳಲ್ಲಿ ಗಮನಾರ್ಹ ವ್ಯತ್ಯಾಸವಿದೆ.

೩. ಸರಾಸರಿಗಿಂತ ಮೇಲ್ಮಟ್ಟದ ಮತ್ತು ಸರಾಸರಿಗಿಂತ ಕೆಳ ಮಟ್ಟದ ಸಾಧನೆಯ ಮಕ್ಕಳ ಜೀವನಶೈಲಿಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ.

೪. ಶಿಕ್ಷಿತ ಮತ್ತು ಅಶಿಕ್ಷಿತ ಪಾಲಕರ ಮಕ್ಕಳ ಜೀವನಶೈಲಿಗಳ ನಡುವೆ ಕೂಡ ಸಾಕಷ್ಟು ವ್ಯತ್ಯಾಸಗಳಿವೆ.

೫. ಉದ್ಯೋಗಸ್ಥ ಮತ್ತು ನಿರುದ್ಯೋಗಿ ಪಾಲಕರ ಮಕ್ಕಳ ಜೀವನಶೈಲಿಗಳಲ್ಲಿ ಕೂಡ ಸಾಕಷ್ಟು ವ್ಯತ್ಯಾಸಗಳಿವೆ.

೬. ಮೇಲ್ಮಧ್ಯಮ, ಮಧ್ಯಮ ಮತ್ತು ಕೆಳಮಧ್ಯಮ ಸ್ತರದ ಕುಟುಂಬಗಳಿಂದ ಬಂದಿರುವ ಮಕ್ಕಳ ಜೀವನಶೈಲಿಗಳಲ್ಲಿ ಕೂಡ ಸಾಕಷ್ಟು ಗಮನಾರ್ಹ ವ್ಯತ್ಯಾಸಗಳಿವೆ.

೭. ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳಿಂದ ಬಂದಿರುವ ಮಕ್ಕಳ ಜೀವನಶೈಲಿಗಳ ನಡುವೆ ಕೂಡ ಸಾಕಷ್ಟು ಅಂತರಗಳಿವೆ.

೮. ಸಾಕಷ್ಟು ಸಹೋದರ-ಸಹೋದರಿಯರನ್ನು ಹೊಂದಿರುವ ಮಕ್ಕಳು ಮತ್ತು ಕೇವಲ ಒಬ್ಬ ಸಹೋದರ ಅಥವಾ ಸಹೋದರಿಯನ್ನು ಹೊಂದಿರುವ ಮಕ್ಕಳ ಜೀವನಶೈಲಿಗಳ ನಡುವೆ ಕೂಡ ಸಾಕಷ್ಟು ಅಂತರಗಳಿವೆ.

೯. ಒಂದೇ ಕುಟುಂಬದ ಮೊದಲ, ಕಡೆಯ ಮತ್ತು ಮಧ್ಯದ ಮಕ್ಕಳ ಜೀವನಶೈಲಿಗಳಲ್ಲಿ ಸಹ ಗಮನಾರ್ಹ ವ್ಯತ್ಯಾಸಗಳಿವೆ.

೧೦. ನಗರ ಮತ್ತು ಹಳ್ಳಿಯ ಮಕ್ಕಳ ಜೀವನಶೈಲಿಗಳಲ್ಲಂತೂ ಸಾಕಷ್ಟು ವ್ಯತ್ಯಾಸಗಳು ಯಾವತ್ತೂ ಇದ್ದೇ ಇವೆ.

೧೧. ಪಾಲಕರೊಂದಿಗೆ ವಾಸಿಸುವ ಮತ್ತು ಪಾಲಕರಿಂದ ದೂರವಿರುವ (ಅನಾಥರು, ಸಂಬಂಧಿಕರ ಮನೆಗಳಲ್ಲಿರುವವರು ಇಲ್ಲವೆ ಹಾಸ್ಟೇಲುಗಳಲ್ಲಿರುವವರು) ಮಕ್ಕಳ ಜೀವನಶೈಲಿಗಳಲ್ಲಿ ಕೂಡ ಸಾಕಷ್ಟು ವ್ಯತ್ಯಾಸಗಳಿವೆ.

೧೨. ಮನೆಯಲ್ಲಿ ಟೀವಿ-ಕಂಪ್ಯೂಟರ್ ಸೌಲಭ್ಯಗಳನ್ನು ಹೊಂದಿರುವ ಮತ್ತು ಹೊಂದಿಲ್ಲದಿರುವ ಮಕ್ಕಳ ಜೀವನಶೈಲಿಗಳ ನಡುವೆ ಕೂಡ ಸಾಕಷ್ಟು ಅಂತರಗಳಿವೆ.

ನಮ್ಮ ಮಕ್ಕಳು ಹೀಗೇ ಯಾಕೆ?

ಬಹುತೇಕ ಸಂದರ್ಭಗಳಲ್ಲಿ ಹಳ್ಳಿಗರನ್ನು ಅವರ ಮುಗ್ಧತೆ ಮತ್ತು ಅಮಾಯಕತೆಗಳಿಗಾಗಿ ಸಮಾಜವು ಹಳ್ಳಿಮುಕ್ಕ ಎಂದು ಕರೆದು ಆಡಿಕೊಳ್ಳುವುದನ್ನು ನಾವೆಲ್ಲ ಗಮನಿಸಿಯೇ ಇರುತ್ತೇವೆ. ಈಗ ಹೀಗೆ ಅವಮಾನ, ಅವಜ್ಞೆ ಹಾಗೂ ಗೇಲಿಗೆ ಒಳಗಾಗುತ್ತಿರುವ ಹಳ್ಳಿಗೆ ಒಂದೊಮ್ಮೆ ಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದುಕೊಂಡು ಕೌಟುಂಬಿಕ ಒತ್ತಡಗಳ ಕಾರಣವಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದವನೂ ಆಗಿರಬಹುದು. ಅಥವಾ ದುರದೃಷ್ಟವಶಾತ್‌ ಶಾಲೆಯ ಮೆಟ್ಟಿಲನ್ನು ಏರದೆ ಇದ್ದವನೂ ಆಗಿರಬಹುದು. ಅವನು ವಿದ್ಯೆ ಪಡೆದ ಶಾಲೆ ಮತ್ತು ಬಾಳಿ ಬೆಳೆದ ಪರಿಸರಗಳು ಅವನನ್ನು ಹೀಗೆ ರೂಪಿಸಿರುತ್ತವೆ. ಅದರಲ್ಲಿ ಅವನ ಆಯ್ಕೆ ಎಂಬುದು ಕಿಂಚಿತ್ತೂ ಇಲ್ಲದಿರುವಾಗ ಅವನೇಕೆ ಈ ರೀತಿಯ ಅವಮಾನಗಳನ್ನು ಅನುಭವಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಹಾಗೆಯೇ ನಗರ ಪ್ರದೇಶದ ಜನರ ವ್ಯಾವಹಾರಿಕ ಚಾಲಾಕಿತನ ಮತ್ತು ಮೋಸಗುಣಗಳನ್ನು ನಾವು ಬೆರಗುಗಣ್ಣಿಂದ ನೋಡಿ ಮೆಚ್ಚುಗೆಯ ಮಾತಾಡುವುದು ಕೂಡ ಇಂಥದೇ ಮತ್ತೊಂದು ಅತಿಯಾಗಿದೆ. ಇದೆಲ್ಲವು ಅವನು ವಾಸಿಸುತ್ತಿರುವ, ವಿದ್ಯೆ ಪಡೆದು ಬಂದಿರುವ ಪರಿಸರದ ದೇಣಿಗೆಯೇ ಹೊರತು ಅವನ ಸ್ವಯಾರ್ಜಿತ ಅನುಭವಗಳಾಗಿರುವ ಸಂಭವನೀಯತೆಗಳು ತುಂಬಾ ಕಡಿಮೆ.

ಪಟ್ಠಣಿಗರ ಬುದ್ಧಿವಂತಿಕೆ ಮತ್ತು ಹಳ್ಳಿಗರ ಅಮಾಯಕತೆಗಳಿಗೆ ಅವುಗಳದೇ ಆದ ಸೌಂದರ್ಯ ಮತ್ತು ಶಕ್ತಿಗಳಿವೆ. ಅವುಗಳನ್ನು ನಾವು ಗುರುತಿಸಬೇಕಿದೆ. ಅವರ ಈ ಸ್ವಭಾವ ವಿಶಿಷ್ಟತೆಗಳನ್ನು, ಅನನ್ಯತೆಗಳನ್ನು ಅವುಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಿರುವ ‘ಜೀವನಶೈಲಿ’ ಎಂಬ ಸಾಮಾಜಿಕ ಅಂಶದ ಬೆಳಕಿನಲ್ಲಿ ನೋಡಬೇಕಾಗಿದೆ.

ಮುಂದೆ ಹೀಗೆ ನಗರ ಮತ್ತು ಹಳ್ಳಿಗಳ ನಾಗರಿಕರಾಗಿ ರೂಪುಗೊಳ್ಳಲಿರುವ ಮಕ್ಕಳು ಈಗಲೂ ಅವರವರ ಪ್ರದೇಶಗಳ ಶಾಲೆಗಳಲ್ಲಿ, ತರಗತಿ ಕೊಠಡಿಗಳ ನಾಲ್ಕು ಗೋಡೆಗಳ ನಡುವೆ ಶಾಲೆಯ ಆ ಪರಿಸರ, ನೆರೆಹೊರೆ, ಗೆಳೆಯರು, ಕುಟುಂಬ, ಮತ್ತು ಶಿಕ್ಷಕರ ನಡೆವಳಿಕೆ.. ಇತ್ಯಾದಿಗಳಿಂದ ಪ್ರಭಾವ-ಪ್ರೇರಣೆಗಳನ್ನು ಪಡೆಯುತ್ತ ತಮ್ಮದೆನ್ನುವ ಒಂದು ಜೀವನಶೈಲಿಯನ್ನು ರೂಢಿಸಿಕೊಳ್ಳುತ್ತಿರಬಹುದು.

ನಗರ ಮತ್ತು ಹಳ್ಳಿಯ ಮಕ್ಕಳ ಜೀವನಶೈಲಿಯ ನಡುವೆ ಗಮನಾರ್ಹ ವ್ಯತ್ಯಾಸಗಳು ಇವೆಯೆಂದ ಮಾತ್ರಕ್ಕೆ ನಗರದ ಖಾಸಗಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಸಮಸ್ಯೆಗಳೇ ಇಲ್ಲವೆಂದೇನಲ್ಲ. ಸಮಸ್ಯೆಗಳು ಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಇರುವಂತೆಯೇ ನಗರದ ಖಾಸಗಿ ಶಾಲೆಯ ಮಕ್ಕಳಿಗೂ ಇವೆ. ಆದರೆ ಅವರಿಬ್ಬರ ಸಮಸ್ಯೆಗಳ ಸ್ವರೂಪಗಳು ಬೇರೆ-ಬೇರೆಯಷ್ಟೇ. ಹಾಗಿದ್ದೂ ಹಳ್ಳಿಯ ಮಕ್ಕಳ ಸಮಸ್ಯೆಗಳು ತುಂಬಾ ಜಟಿಲ, ಕ್ಲಿಷ್ಟ ಮತ್ತು ಸಂಕೀರ್ಣ ಸ್ವಭಾವದವುಗಳಾಗಿವೆ.

ಈ ಸಾಮಾನ್ಯ ತೀರ್ಮಾನಕ್ಕೆ ವ್ಯತಿರಿಕ್ತವಾಗಿರುವ ಹೊರತುಪಡಿಸಿದ ಪ್ರಕರಣಗಳೂ ಅಲ್ಲಲ್ಲಿ ಕಂಡು ಬರುತ್ತವೆ. ಸಂಖ್ಯಾದೃಷ್ಟಿಯಿಂದ ಇವು ಗೌಣಪ್ರಮಾಣದಲ್ಲಿರುವುದರಿಂದ ಇವುಗಳ ಆಧಾರದ ಮೇಲೆ ಸಾಮಾನ್ಯ ತೀರ್ಮಾನಗಳಿಗೆ ಬರಲಾಗುವುದಿಲ್ಲ. ಉದಾಹರಣೆಗೆ ಹೇಳುವುದಾದರೆ ಎಲ್ಲ ಸೌಲಭ್ಯಗಲಿದ್ದೂ ಅರಾಜಕ ಜೀವನಶೈಲಿಯನ್ನು ರೂಢಿಸಿಕೊಂಡು ಸಮಾಜವಿದ್ರೋಹಿ ಶಕ್ತಿಯಾಗಿ ತಯಾರಾಗಿರುವ ನಗರದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳೂ ಅಲ್ಲಲ್ಲಿ ಇದ್ದಾರೆ. ಹಾಗೆಯೇ ಕುಗ್ರಾಮಗಳಲ್ಲಿ ಓದಿ ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ತಮ್ಮ ಸ್ವಂತ ಶಕ್ತಿಯ ಬಲದಿಂದ ಗೆದ್ದು ಉತ್ತಮ ಸಾಧನೆ ಮಾಡಿ ಮಾದರಿ ಜೀವನಶೈಲಿಯನ್ನು ರೂಢಿಸಿಕೊಂಡು ಸಮಾಜಕ್ಕೆ ಆದರ್ಶಪ್ರಾಯರಾಗಿ ಬೆಳೆದವರೂ ಇದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಗ್ರಾಮವೊಂದರ ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದ ಉತ್ತಮ್‌ ಕಾಂಬಳೆಯವರು ಇಂದು ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಆಯ್ಕೆಗೊಂಡ ಪ್ರಖ್ಯಾತ ಮರಾಠಿ ಸಾಹಿತ್ಯ ಸಮ್ಮೇಳದ ಅಧ್ಯಕ್ಷ ಪದವಿಗೆ ಆಯ್ಕೆಗೊಂಡ ಪ್ರಖ್ಯಾತ ಮರಾಠಿ ಲೇಖಕ ಮತ್ತು ಮಹಾರಾಷ್ಟ್ರದ ‘ಸಕಾಳ್‌’ ಪತ್ರಿಕಾಸಮೂಹದ ಪ್ರಧಾನ ಸಂಪಾದಕ. ಹಾಗೆಯೇ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್‌ ಎಂಬ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಶಿವರಾಜ ಪಾಟೀಲರು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು.

ಒಟ್ಟಾರೆಯಾಗಿ ಸಾಧಿಸುವ ಛಲ ಮತ್ತು ಇಚ್ಛಾಶಕ್ತಿಗಳೇ ಯಾವುದೇ ಸಾಧನೆಯ ಹವಿಸ್ಸುಗಳಾಗಿರುತ್ತವೆ. ಆದರೆ ಈ ಗುಣಗಳನ್ನು ಮಗುವಿನಲ್ಲಿ ಮೂಡಿಸಿ, ಬೆಳೆಸುವಲ್ಲಿ ಮಾತ್ರ ಜೀವನಶೈಲಿಯೂ ಸೇರಿದಂತೆ ಇನ್ನಿತರ ಕೆಲವು ಬಾಹ್ಯ ಶಕ್ತಿಗಳು ಪೂರಕವಾಗಿ ಅಥವಾ ಮಾರಕವಾಗಿ ವರ್ತಿಸಿ ಪ್ರಭಾವ ಬೀರುತ್ತಿರುತ್ತವೆ. ಪಟ್ಟಣದ ಮಕ್ಕಳ ವಿಷಯಕ್ಕೆ ಬಂದರೆ ಪರಿಸರವು ಸಾಧನೆಗೆ ಪೂರಕವಾಗಿಯೂ, ಜೀವನಶೈಲಿಯ ಪ್ರೇರಕವಾಗಿಯೂ ಇರುವುದರಿಂದ ಅವರು ಅದಾಗಲೇ ಹಳಿಯ ಮೇಲೆ ಇದ್ದಿರುತ್ತಾರೆ. ಅದಕ್ಕಾಗಿ ಹಳ್ಳಿ ಮಕ್ಕಳು ವ್ಯಯಿಸುವ ಅರ್ಧಶಕ್ತಿಯ ಉಳಿತಾಯದ ಲಾಭವೂ ಇವರಿಗೆ ಆಗಿರುತ್ತದೆ. ಹೀಗಾಗಿ ಅವರು ಏನನ್ನಾದರೂ ಸುಲಭವಾಗಿ ಸಾಧಿಸಬಲ್ಲವರಾಗಿರುತ್ತಾರೆ.

ಅದೇ ಹಳ್ಳಿಯ ಮಕ್ಕಳ ಜೀವನಶೈಲಿಯು ಸಾಧನೆಗೆ ವ್ಯತಿರಿಕ್ತವಾಗಿದ್ದು, ಆ ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಪರಿಹರಿಸಿಕೊಂಡು ಹಳಿಗೆ ಬರುವಷ್ಟಕ್ಕೆ ಮಕ್ಕಳ ಅರ್ಧಕ್ಕರ್ಧ ಶಕ್ತಿಯು ಸೋರಿ ಹೋಗಿರುತ್ತದೆ. ಇದರಿಂದಾಗಿ ಅವರಲ್ಲಿ ನಿರಾಶೆ ಉಂಟಾಗಿ ತಮ್ಮ ಬಗೆಗೆ ಕೀಳರಿಮೆ ಬೆಳೆಸಿಕೊಳ್ಳತೊಡಗುತ್ತವೆ. ಈ ಕೀಳರಿಮೆಯು ಉಳಿದಿರುವ ಇಷ್ಟು ಶಕ್ತಿಯನ್ನೂ ನಾಶ ಮಾಡಿಬಿಡುವಷ್ಟು ಶಕ್ತಿಶಾಲಿಯಾಗಿರುತ್ತದೆ. ಇಂಥದರ ನಡುವೆಯೂ ಗಮನಾರ್ಹ ಸಾಧನೆ ಮಾಡಿದ ಹಳ್ಳಿ ಮಕ್ಕಳು ಏನಿದ್ದಾರೆ, ಅವರು ತಮ್ಮ ಕೀಳರಿಮೆಯನ್ನು ಮೀರಲಿ, ಮೆಟ್ಟಿ ನಿಲ್ಲಲು ಅವಡುಗಚ್ಚಿ ಅಭ್ಯಾಸ ಮಾಡಿದವರಾಗುತ್ತಾರೆ. ಹೇಗಾದರೂ ಮಾಡಿ ತಾವು ಕೂಡ ಮುಖ್ಯವಾಹಿನಿಗೆ ಸೇರಿಕೊಳ್ಳಬೇಕೆಂಬ ಹಂಬಲವೇ ಅವರ ಪಾಲಿನ ಪ್ರೇರಕಶಕ್ತಿಯಾಗಿ ಕೆಲಸ ಮಾಡುತ್ತದೆ. ಅದನ್ನೊಂದು ಜೀವನ್ಮರಣದ ಪ್ರಶ್ನೆಯಾಗಿ ಸ್ವೀಕರಿಸುವ ಅವರು ತಮಗೇ ಅರಿವಿಲ್ಲದೆ ಮುಖ್ಯವಾಹಿನಿಯ ಮುಂಚೂಣಿ ನಾಯಕರಾಗಿಬಿಡುತ್ತಾರೆ.

ಹಳ್ಳಿಗಳಲ್ಲಿ ಶಿಕ್ಷಣದ ಮಹತ್ವದ ಅರಿವು ಹೆಚ್ಚಿ, ಸಾಕ್ಷರತೆಯ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿ, ಜೀವನಶೈಲಿಯಲ್ಲಿ ಅಮೂಲಾಗ್ರ ಬದಲಾವಣೆಯಾಗದ ಹೊರತು ‘ಎಲ್ಲ ಮಕ್ಕಳೂ ಒಂದೇ’ ಎಂದು ಹಳ್ಳಿಯ ಮತ್ತು ನಗರದ ಮಕ್ಕಳನ್ನು ಒಂದೇ ತಟ್ಟೆಯಲ್ಲಿಟ್ಟು ನೋಡುವುದು ತಪ್ಪಾಗುತ್ತದೆ. ಹಳ್ಳಿಗರಿಗೆ ಅದೇ ಕಾರಣಕ್ಕೆ ಕೆಲವು ರಿಯಾಯಿತಿಗಳು ಅಗತ್ಯವಾಗಿವೆ.

ಶಿಕ್ಷಣ ಮತ್ತು ಜೀವನಶೈಲಿಗಳ ಸಂಬಂಧದ ಸ್ವರೂಪವನ್ನು ವಿವಿಧ ನೆಲೆಗಳಿಂದ ನಿಕಷಕ್ಕೆ ಒಡ್ಡಿದ ಈ ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ, ಹಳ್ಳಿಯ ಮಕ್ಕಳು ಹೀಗೇ ಯಾಕಿರುತ್ತಾರೆ ಎಂಬುದಕ್ಕೆ ಅವರು ‘ಹಳ್ಳಿಯ’ ಮಕ್ಕಳಾಗಿರುವುದಕ್ಕೇ ಹಾಗಿರುತ್ತಾರೆ ಎನ್ನುವ; ನಗರದ ಮಕ್ಕಳು ಹಾಗೇ ಯಾಕಿರುತ್ತಾರೆ ಎಂಬುದಕ್ಕೆ ಅವರು ‘ನಗರದ’ ಮಕ್ಕಳಾಗಿರುವುದಕ್ಕೇ ಹಾಗಿರುತ್ತಾರೆ ಎನ್ನುವ ಅಂತಿಮ ತೀರ್ಮಾನಗಳಿಗೆ ತಲುಪಬಹುದು.