ಉತ್ತಮ ಶಾಲಾ ಪರಿಸರವಿಲ್ಲದಿರುವುದು ಹಾಗೂ ಬೋಧನೆಯ ಕೊರತೆ

. ಪುರಾಣಿ ಪೋಡು, ಯಳಂದೂರು ತಾಲ್ಲೂಕು : ಬಿಳಿರಂಗನ ಬೆಟ್ಟದ ಪುರಾಣಿಪೋಡಿನ ಗಿರಿಜನ ಕಾಲೋನಿಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿದ್ದು, ಕಿರಿಯ (೧ – ೫) ಪ್ರಾಥಮಿಕ ಶಾಲೆಯಿದೆ. ಶಾಲೆಯಲ್ಲಿ ಬೋಧನೆಗೆ ಒಂದು ಕೊಠಡಿ ಮಾತ್ರ ಲಭ್ಯವಿದ್ದು, ಅರಣ್ಯ ಇಲಾಖೆಯ ಕೊಠಡಿಯೊಂದರಲ್ಲಿ ಅಡುಗೆ ಸಿದ್ಧಪಡಿಸಿ ಮಕ್ಕಳಿಗೆ ಬಡಿಸಲಾಗುತ್ತಿದೆ. ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಬಯಲೇ ಆಗಿದ್ದು, ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಉಳಿಯಲು ವಸತಿ ವ್ಯವಸ್ಥೆಯೂ ಇಲ್ಲ. ಈ ಶಾಲೆಯ ಉಸ್ತುವಾರಿ ಹೊತ್ತ ನಿಲಯಪಾಲಕರು ಶಾಲೆಗೆ ಬರುವುದೇ ಅಪರೂಪವಾಗಿದ್ದು, ಮಕ್ಕಳಿಗೆ ಸರಿಯಾಗಿ ಸೌಲಭ್ಯಗಳನ್ನು ತಲುಪಿಸುವುದಿಲ್ಲ. ಈ ಪೋಡಿಗೆ ಹೋಗಲು ಕಾಡಿನ ನಡುವೆ ಕಾಲು ಹಾದಿಯಲ್ಲಿ ೩ – ೪ ಕಿ.ಮೀ ನಡೆದು ಹೋಗಬೇಕಿದೆ. ಇಲ್ಲಿಗೆ ಯಾವುದೇ ರಸ್ತೆಯಾಗಲಿ, ದೀಪವಾಗಲಿ ಇಲ್ಲ. ಈ ಕಾರಣಗಳಿಂದಾಗಿ ಶಿಕ್ಷಕರು ಶಾಲೆಗೆ ಬರುವುದು ೧೧ ಗಂಟೆಗೆ, ಶಾಲೆ ಮುಗಿಸಿ ಹೊರಡುವುದು ೨ ಗಂಟೆಗೆ. ಈ ರೀತಿಯ ಸಮಸ್ಯೆಗಳ ಹಿನ್ನೆಲೆಯಿಂದ ಬರುವ ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ಕಡಿಮೆಯಿರುತ್ತದೆ. ಅಲ್ಲದೆ ೫ನೇ ತರಗತಿ ಮುಗಿಸಿದ ಇಲ್ಲಿಯ ಮಕ್ಕಳು ಆರನೇ ತರಗತಿಗೆ ಹೋಗಲು ನಾಲ್ಕು ಕಿ.ಮೀ. ದೂರ ಕಾಡಿನ ಕಾಲು ಹಾದಿ ದಾಟಿ, ೮ ಕಿ.ಮೀ. ದೂರದ ವಿಜಿಕೆಕೆ ಅಥವಾ ೪೦ ಕಿ.ಮೀ. ದೂರವಿರುವ ಚಾಮರಾಜನಗರ ಅಥವಾ ಕೊಳ್ಳೇಗಾಲದ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸೇರಬೇಕಾಗಿದ್ದು, ಮಕ್ಕಳು ಅಷ್ಟು ದೂರ ಹೋಗಿ ದಾಖಲಾಗುತ್ತಿಲ್ಲ. ವಿಜಿಕೆಕೆ ದಾಖಲಾಗುವ ಕೆಲವು ಮಕ್ಕಳಲ್ಲಿ ಕೆಲವರು ೭ ರಿಂದ ೮ ನೇ ತರಗತಿಯವರೆಗೆ ಹೋಗಿ ಶಾಲೆ ಬಿಡುತ್ತಾರೆ.

. ಪುಣಜನೂರು, ಚಾಮರಾಜನಗರ ತಾಲ್ಲೂಕು : ಪುನಜನೂರು ಆಶ್ರಮ ಶಾಲೆ ಬಾಡಿಗೆ ಕೊಠಡಿಯಲ್ಲಿ ನಡೆಯುತ್ತಿದ್ದು, ಅಪಾಯದ ಸ್ಥಿತಿಯಲ್ಲಿದೆ. ತರಗತಿಯ ಕೊಠಡಿ ತುಂಬಾ ಕಿರಿದಾಗಿದ್ದು, ಮಕ್ಕಳಿಗೆ ಕೂರಲು ಸಾಕಷ್ಟು ಸ್ಥಳಾವಕಾಶವಿಲ್ಲ. ಬೋಧನೆ ಮಾಡಲು ಪ್ರತ್ಯೇಕ ಕೊಠಡಿಗಳಿಲ್ಲ. ಶೌಚಾಲಯದ ವ್ಯವಸ್ಥೆ ಮಕ್ಕಳಿಗೆ ಬಯಲು ಪ್ರದೇಶವೇ ಆಗಿದ್ದು, ಸ್ನಾನ ಎಲ್ಲಾ ಮಕ್ಕಳು ಮನೆಯಲ್ಲೇ ಮಾಡಿ ಬರಬೇಕು. ಈ ಶಾಲೆಗೆ ದಾಖಲಾದ ೫೦ ಮಕ್ಕಳು ರಾತ್ರಿ ಉಳಿಯಲು ಸ್ಥಳವಕಾಶವಿಲ್ಲ. ಪುಣಜನೂರು ಆಶ್ರಮ ಶಾಲೆಗಾಗಿ ಶ್ರೀನಿವಾಸಪುರ ಕಾಲೋನಿಯ ಹತ್ತಿರ ಉತ್ತಮ ಕಟ್ಟಡ ವ್ಯವಸ್ಥೆಯಿರುವ ಹಾಗೂ ಮೂಲ ಸೌಲಭ್ಯಗಳನ್ನು ಹೊಂದಿರುವ ಕಟ್ಟಡ ನಿರ್ಮಾಣ ಆಗುತ್ತಿತ್ತು. ಮುಕ್ತಾಯದ ಹಂತದಲ್ಲಿದೆ. ಪ್ರಸ್ತುತ ಬಾಡಿಗೆ ಕೊಠಡಿಯ ಶಾಲೆಯಲ್ಲಿ ಲಂಬಾಣಿ ಸಮುದಾಯದ ಮಕ್ಕಳು ಮಾತ್ರ ಉಳಿಯುತ್ತಿದ್ದು, ಹೊಸಪೋಡಿನ ಗಿರಿಜನ ಮಕ್ಕಳು ಪ್ರತಿನಿತ್ಯ ಮನೆಗೆ ಹೋಗಿ ಬರುತ್ತಾರೆ. ಈ ಊರಿನ ಮಕ್ಕಳನ್ನು ವಾರದಲ್ಲಿ ಒಮ್ಮೆಯಾದರೂ ಶಿಕ್ಷಕರು ಹೋಗಿ ಕರೆದುಕೊಂಡು ಬರಬೇಕು. ಇಲ್ಲದಿದ್ದರೆ ಮಕ್ಕಳು ಶಾಲೆಗೆ ಹೆಚ್ಚು ಗೈರುಹಾಜರಿಯಾಗುತ್ತಾರೆ. ಇಷ್ಟಾದರೂ ೫ನೇ ತರಗತಿಯ ನಂತರ ಈ ಊರಿನ ಮಕ್ಕಳು ಶಾಲೆಗೆ ದಾಖಲಾಗುವುದಿಲ್ಲ. ಹೀಗೆ ಶಾಲೆಗೆ ದಾಖಲಾಗದ ಮಕ್ಕಳು ಮನೆಯಲ್ಲಿ ದನ, ಕುರಿ ಮತ್ತು ಮೇಕೆ ಮೇಯಿಸುತ್ತಾರೆ. ಇಲ್ಲವೆ ಮನೆ ಕೆಲಸ, ತೋಟದಲ್ಲಿ ಕೂಲಿ ಮಾಡಲು ಹೋಗುತ್ತಾರೆ.

. ಬೇಡಗುಳಿ ಆಶ್ರಮ ಶಾಲೆ, ಚಾಮರಾಜನಗರ ತಾಲ್ಲೂಕು : ಚಾಮರಾಜನಗರ ತಾಲ್ಲೂಕಿನಿಂದ ೫೦ ಕಿ.ಮೀ. ದೂರದಲ್ಲಿರುವ ಬೇಡುಗಳಿ ಪ್ರದೇಶಕ್ಕೆ ದಿನದಲ್ಲಿ ಒಂದು ಸಮಯ ಮಾತ್ರ ಬಸ್ಸಿನ ವ್ಯವಸ್ಥೆಯಿದ್ದು, ಕಡಿದಾದ ರಸ್ತೆ ಹಾಗೂ ದಟ್ಟ ಕಾಡಿನ ನಡುವೆ ಸಾಗಬೇಕಿದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಶರೀರವನ್ನು ಬೆಚ್ಚಗೆ ಮಾಡಲು ಬೆಂಕಿ ಮತ್ತು ಕಾಫಿ/ಟೀ ಇರಲೇಬೇಕು. ಹಾಗಾಗಿ ಈ ಪ್ರದೇಶದಲ್ಲಿ ವಸತಿ ಶಾಲೆಯಿದ್ದು, ಮುಖ್ಯ ಶಿಕ್ಷಕ ಕಂ ನಿಲಯಪಾಲಕರು ವಾರದಲ್ಲಿ ಎರಡು ದಿನ ಉಳಿದರೆ, ಸಹ ಶಿಕ್ಷಕರು ನಾಲ್ಕು ದಿನ ಉಳಿಯುತ್ತಾರೆ. ಈ ಶಾಲಾ ಕಟ್ಟಡವನ್ನು ರೀಪೇರಿಗೆಂದು ಜಿಲ್ಲಾ ಪಂಚಾಯಿತಿ ಸದಸ್ಯರು ಟೆಂಡರ್ ಪಡೆದು, ೩ ವರ್ಷಗಳಾದರೂ ಬೋಧನೆಗೆ ಕೊಠಡಿಗಳನ್ನು ಬಿಟ್ಟುಕೊಟ್ಟಿಲ್ಲ. ಒಂದು ಕೊಠಡಿಯಲ್ಲಿ ರೇಷನ್ ಹಾಕಿದ್ದು, ಶಿಕ್ಷಕರು ಉಳಿಯುತ್ತಿದ್ದಾರೆ. ಮತ್ತೊಂದು ಚಿಕ್ಕ ಕೊಠಡಿಯಲ್ಲಿ ಅಡುಗೆ ಮಾಡಲು ಬೋಧನೆ ಮಾಡಲಾಗುತ್ತಿದ್ದು, ಒಂದೇ ಕೊಠಡಿಯಲ್ಲೇ ಎಲ್ಲಾ ತರಗತಿಯ ಮಕ್ಕಳು ಕುಳಿತು ಪಾಠ ಕೇಳಬೇಕಿದೆ.

ಪರಿಣಾಮಕಾರಿ ಬೋಧನೆಗಾಗಿ ಶಾಲೆಯ ಶಿಕ್ಷಕರಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ತರಬೇತಿಯನ್ನು ನೀಡಲಾಗಿದ್ದು, ಈ ಶಾಲಾ ಶಿಕ್ಷಕರು ತರಬೇತಿ ಪಡೆದಿರುತ್ತಾರೆ. ಈ ಶಾಲೆಯಲ್ಲಿ ಕಳೆದ ೩ – ೪ ವರ್ಷಗಳ ಹಿಂದೆ ಉತ್ತಮವಾಗಿ ಬೋಧನೆ ಮಾಡುತ್ತಿದ್ದು, ಮಕ್ಕಳ ಕಲಿಕೆ ಕೂಡ ಚೆನ್ನಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ತರಗತಿ ನಿರ್ವಹಣೆ ಸಮರ್ಪಕವಾಗಿಲ್ಲ. ಶಾಲೆಯಲ್ಲಿ ಕೆಲವೊಂದು ಬೋಧನೋಪಕರಣಗಳಿದ್ದರೂ ಬೋಧನೆಯಲ್ಲಿ ಬಳಸುತ್ತಿಲ್ಲ. ತರಗತಿಯ ಬೋಧನೆ ಸಾಂಪ್ರದಾಯಿಕ ವಿಧಾನದಿಂದ ನಡೆಯುತ್ತಿದ್ದು, ಚಟುವಟಿಕಾಧಾರಿತ ಪರಿಣಾಮಕಾರಿ ಬೋಧನೆ ನಡೆಯುತ್ತಿಲ್ಲ. ಹಲವು ಸಂದರ್ಭಗಳಲಿ ಪ್ರಸ್ತಾಪಿಸಿದಂತೆ ಈ ಶಾಲೆಯಲ್ಲಿ ಮಕ್ಕಳಿಗೆ ವರ್ಣಮಾಲೆ, ಕಾಗುಣಿತ, ಮಗ್ಗಿ, ಪಾಠ ಬರೆಯಲು ಹೇಳಿ ವಿದ್ಯಾರ್ಥಿನಿಲಯದಲ್ಲಿ ಶಿಕ್ಷಕರು ರೇಡಿಯೋ ಕೇಳುವುದು, ದಿನಪತ್ರಿಕೆ ಓದುವ ಕೆಲಸ ಮಾಡುತ್ತಾರೆ. ಮಕ್ಕಳ ಕಲಿಕೆ ತುಂಬಾ ಗಂಭೀರ ಸ್ಥಿತಿಯಲ್ಲಿದೆ. ಮಕ್ಕಳು ತಮ್ಮ ಹೆಸರುಗಳನ್ನು, ವರ್ಣಮಾಲೆ ಕೂಡ ಬರೆಯಲಾಗದ ಸ್ಥಿತಿಯಲ್ಲಿದ್ದಾರೆ. ಈ ಶಾಲೆಯ ಮಕ್ಕಳ ಮೂಲ ಕಲಿಕೆಯಲ್ಲಿ ತುಂಬಾ ಸಮಸ್ಯೆಗಳಿದ್ದು, ಹೆಚ್ಚು ಮಕ್ಕಳು ಶಾಲೆಗೆ ಗೈರುಹಾಜರಿಯಾಗುತ್ತಾರೆ. ಶಾಲೆಗಳಿಗೆ ಹಾಜರಾಗುವ ಮಕ್ಕಳು ಪುಸ್ತಕ. ಲೇಖನ ಸಾಮಾಗ್ರಿಗಳನ್ನು ತರುವುದಿಲ್ಲ. ಮಧ್ಯಾಹ್ನದ ಊಟದ ನಂತರ ಮನೆಗೆ ಹೋಗುತ್ತಾರೆ. ಶಾಲೆಗೆ ವಾಪಸ್ಸು ಬರುವುದು ಬಹಳ ಕಡಿಮೆ ಮಕ್ಕಳು. ಈ ಶಾಲೆಗೆ ಅರ್ಧ ಪರ್ಲಾಂಗು ಇಲ್ಲದ ಗ್ರಾಮವಾದ ಮಾರಿಗುಡಿ ಪೋಡಿನಲ್ಲಿ ಶಾಲೆಗೆ ದಾಖಲಾಗದ ಮಕ್ಕಳಿದ್ದಾರೆ. ಶಿಕ್ಷಕರೂ ಕೂಡ ಈ ಮಕ್ಕಳನ್ನು ದಾಖಲು ಮಾಡಿಕೊಂಡಿಲ್ಲ, ಪೋಷಕರು ಕೂಡ ಮಕ್ಕಳನ್ನು ದಾಖಲು ಮಾಡಿಲ್ಲ. ಈ ಪ್ರದೇಶದ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಮಾಧ್ಯಮಿಕ ಶಿಕ್ಷಣ ಪಡೆಯಲು ೫೦ ಕಿ.ಮೀ. ದೂರ ಪ್ರಯಾಣ ಮಾಡಬೇಕಿದೆ. ಇಲ್ಲದೆ ನಗರ ಪ್ರದೇಶದ ವಸತಿ ಶಾಲೆಗಳಲ್ಲಿದ್ದು ಕಲಿಯಬೇಕಿದೆ. ಈ ಪ್ರದೇಶದಿಂದ ಮಾಧ್ಯಮಿಕ ಶಿಕ್ಷಣಕ್ಕೆ ದಾಖಲಾಗುವ ಮಕ್ಕಳು ದಾಖಲಾದ ತಿಂಗಳ ಒಳಗಾಗಿ ತಮ್ಮ ಸ್ವ ಸ್ಥಾನಕ್ಕೆ ಮರಳಿರುತ್ತಾರೆ. ಹೆಸರಿಗೆ ಮಾತ್ರ ಮಕ್ಕಳ ಹೆಸರು ಸಂಬಂಧಿಸಿದ ಶಾಲಾ ದಾಖಲಾತಿಯಲ್ಲಿರುತ್ತೆ. ಹಾಜರಾತಿಯನ್ನು ಹಾಕಲಾಗಿರುತ್ತದೆ. ಈ ಸಮಸ್ಯೆಗಳಿಂದಾಗಿಯೇ ಬೇಡಗುಳಿಯಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ೬ ಮತ್ತು ೭ನೇ ತರಗತಿಯನ್ನು ಆರಂಭ ಮಾಡಿತು. ಅದು ಎರಡು ವರ್ಷಗಳ ಕಾಲ ನಡೆದು ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ದಾಖಲಾಗುತ್ತಿಲ್ಲ ಎಂದು ಹೇಳಿ, ಆ ಶಾಲಾ ಶಿಕ್ಷಕರನ್ನು ಬೇರೆ ಕಡೆ ವರ್ಗಾಯಿಸಿ, ಶಾಲೆಯನ್ನು ಮುಚ್ಚಲಾಗಿದೆ.

ಬಂಡೀಪುರ, ಗುಂಡ್ಲುಪೇಟೆ ತಾಲ್ಲೂಕು : ಕಾಡಲ್ಲಿ ಯಾವುದೇ ಆತಂಕವಿಲ್ಲದೆ, ನಿರ್ಭಯವಾಗಿ ಓಡಾಡುವ ಮಕ್ಕಳಿಗೆ ರಾತ್ರಿ ವಿದ್ಯಾರ್ಥಿನಿಲಯಗಳಲ್ಲಿ ಉಳಿಯದಂತೆ ಈ ಶಾಲಾ ಮುಖ್ಯ ಶಿಕ್ಷಕರು ಉಪಾಯ ಮಾಡಿದ್ದಾರೆ. ಅದಕ್ಕೆ ಸಹ ಶಿಕ್ಷಕರು ಸಹಕರಿಸಿದ್ದಾರೆ. ಮಕ್ಕಳಿದ್ದರೆ ರಾತ್ರಿ ತಾವು ಉಳಿಯುವುದು ಎಂಬುದು ಅವರ ಮನೋಧೋರಣೆ. ಮಕ್ಕಳಿಗೆ ರಾತ್ರಿ ದೆವ್ವಾ ಬರುತ್ತವೆ, ನೀವು ಮಲಗುವ ಜಾಗದಲ್ಲೇ ಹಾವುಗಳು ಬರುತ್ತವೆ. ಆನೆಗಳು ಕಾಂಪೌಡಿನಿಂದ ಒಳಗೆ ಸೊಂಡಿಲು ಹಾಕುತ್ತವೆ ಎಂದು ಭಯವನ್ನುಂಟು ಮಾಡಿ ಮನೆಗೆ ಹೋಗುವ ಹಾಗೇ ಮಾಡಲಾಗುತ್ತಿತ್ತು. ಮಕ್ಕಳಿಗೆ ಈ ಭಯದ ಜೊತೆಗೆ ಶಾಲೆಯಲ್ಲಿ ಉಳಿಯುವುದಕ್ಕಿಂತ ಮನೆಗೆ ಹೋಗುವುದು ಇಷ್ಟವಾಗುತ್ತಿದ್ದರಿಂದ ಪ್ರತಿ ದಿನ ಮನೆಯಿಂದಲೇ ಓಡಾಡುತ್ತಿದ್ದಾರೆ. ಮಕ್ಕಳಿಗೆ ಪ್ರತಿನಿತ್ಯ ಓಡಾಡಲು ಬಸ್ ಪಾಸುಗಳನ್ನು ಮುಖ್ಯ ಶಿಕ್ಷಕರೇ ಮಾಡಿಸಿಕೊಡುತ್ತಿದ್ದರು. ಕಾರಣ ಮಕ್ಕಳು ಪ್ರತಿನಿತ್ಯ ಮನೆಯಿಂದ ಬರುತ್ತಿರುವುದರಿಂದ ಮಧ್ಯಾಹ್ನದ ಊಟ ಮಾತ್ರ ಕೊಡಲಾಗುತ್ತಿದೆ. ಇಲ್ಲದಿದ್ದರೆ ಬೆಳಿಗ್ಗೆ ತಿಂಡಿ ಮಧ್ಯಾಹ್ನ, ರಾತ್ರಿ ಊಟ ಕೊಡಬೇಕಾಗುತ್ತಿತ್ತು. ಮಕ್ಕಳಿಗೆ ನೀಡುವ ಮಧ್ಯಾಹ್ನ ಊಟವೂ ಬಹಳ ಕನಿಷ್ಟವಾಗಿದ್ದು, ಅಡುಗೆ ಮಾಡುವವರೇ ಊಟ ಮಾಡದೇ ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದರು. ಶಿಕ್ಷಕರು ತಮ್ಮ ಮನೆಯ ಊಟವನ್ನು ಮಾಡುತ್ತಿದ್ದರು. ಸಾಂಬಾರಿಗೆ ಅಪರೂಪವಾಗಿದ್ದು, ಶಾಲೆಯಲ್ಲಿಯೇ ಹೆಚ್ಚಾಗಿ ಬಿಡುತ್ತಿದ್ದ ಸೀಮೆ ಬದನೆಕಾಯಿ ಮಾತ್ರ ಹೆಚ್ಚು ಬಳಕೆಯಾಗುತ್ತಿತ್ತು. ಆದರೆ ಹಾಜರಾತಿ ಪುಸ್ತಕದಲ್ಲಿ ಮಾತ್ರ ಮೂರು ಸಮಯದಲ್ಲೂ ಊಟ ಹಾಕಿರುವ ಬಗ್ಗೆ ದಾಖಲಾಗುತ್ತಿತ್ತು. ಆ ಸವಲತ್ತುಗಳನ್ನು ಮುಖ್ಯ ಶಿಕ್ಷಕರೇ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಶಾಲೆಯಲ್ಲಿರುವ ೫೦ ಮಕ್ಕಳಿಗೆ ಹಾಜರಾತಿ ೨೦ ರಿಂದ ೩೦ ಮಕ್ಕಳು ಬರುವುದೇ ಹೆಚ್ಚಾಗಿತ್ತು. ಶಾಲೆಗೆ ಮೇಲಾಧಿಕಾರಿಗಳು ಬರುತ್ತಾರೆಂಬ ವಿಷಯವನ್ನು ಮುಂಚಿತವಾಗಿ ತಿಳಿದುಕೊಳ್ಳುವ ಮುಖ್ಯ ಶಿಕ್ಷಕ ಆ ದಿನ ಮಕ್ಕಳನ್ನು ಕಷ್ಟಪಟ್ಟು ಬೆಳಿಗ್ಗೆ ಮತ್ತು ರಾತ್ರಿ ಉಳಿಸುತ್ತಿದ್ದರು. ಶಾಲೆ ಸರಿಯಾಗಿ ನಡೆಯದ ಬಗ್ಗೆ ಹಾಗೂ ಮಕ್ಕಳಿಗೆ ಊಟ, ತಿಂಡಿ ಸರಿಯಾಗಿ ಕೊಡದ ಬಗ್ಗೆ ಅಧಿಕಾರಿಗಳಿಗೆ ಹಲವು ಪೋಷಕರು ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಉಪಾಯವನ್ನು ಕಂಡುಕೊಂಡಿದ್ದರು. ಇದಕ್ಕಾಗಿ ಎಲ್ಲಾ ಸರಿಯಾಗಿ ನಡೆಯುತ್ತಿದೆ ಎಂಬ ಉತ್ತರ ಹೇಳುವ ಕೆಲವರನ್ನು ಸಿದ್ದಪಡಿಸಿಕೊಳ್ಲುತ್ತಿದ್ದರಲ್ಲದೆ, ಕೆಲವು ಸಲ ಕೇಳುವವರನ್ನೇ ಆಮಿಷದ ಬಲೆಗೆ ಕೆಡವುತ್ತಿದ್ದರು. ಹಾಗಾಗಿ ಇವರ ಮೆಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ೨೦೦೮ – ೦೯ನೇ ಸಾಲಿನಲ್ಲಿ ಈ ಮುಖ್ಯ ಶಿಕ್ಷಕರ ಮೇಲ್ವಿಚಾರಕ ಬಡ್ತಿ ಪಡೆದು ಕೋಲಾರ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಇಲ್ಲಿಂದ ಹೋಗುವಾಗ ವಿದ್ಯಾರ್ಥಿನಿಲಯದ ಕೆಲವು ವಸ್ತುಗಳನ್ನು ಯಾರ ಗಮನಕ್ಕೂ ತರದೇ ೧೨ ಗಂಟೆ ರಾತ್ರಿಯಲ್ಲಿ ಸಾಗಿಸುವಾಗ ಸಿಕ್ಕಿ ಬಿದ್ದಿದ್ದು, ತನಿಖೆ ನಡೆದರೂ ಅದನ್ನು ಮುಚ್ಚಿ ಹಾಕಲಾಯಿತು. ಈ ರೀತಿಯ ಕಾರಣಗಳು ಬುಡಕಟ್ಟು ಮಕ್ಕಳನ್ನು ಹೇಗೆ ಶಿಕ್ಷಣ ವಂಚಿತರನ್ನಾಗಿಸುತ್ತವೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿವೆ. ಶಾಲೆಯಲ್ಲಿ ಶಿಕ್ಷಕರ ಸಮಸ್ಯೆಯಿಂದಾಗಿ ಅಡುಗೆಯವರೇ ಬೋಧನೆ ಮಾಡುತ್ತಿದ್ದರು. ಮಕ್ಕಳ ಕಲಿಕಾ ಸಮಸ್ಯೆ ಹೆಚ್ಚಾಗಿದ್ದು, ಈ ಪ್ರದೇಶದ ಬುಡಕಟ್ಟು ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತರಾಗುತ್ತಿದಾರೆ.

. ಶಿಕ್ಷಕರ ಮನೋಧೋರಣೆ ಮತ್ತು ಬದ್ಧತೆಯ ಪ್ರಶ್ನೆ

ಆಶ್ರಮ ಶಾಲಾ ಶಿಕ್ಷಕರ ಮನೋಧೋರಣೆಗಳು, ಅವರ ವೃತ್ತಿಯ ಅಭದ್ರತೆ ಅಂಶಗಳು, ಶಾಲಾ ವಾತಾವರಣ ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರಿತ್ತವೆ ಎಂಬುದನ್ನು ತಿಳಿಯುವುದು ಸಮಂಜಸವಾಗಿರುತ್ತದೆ. ಶಾಲೆಗಳಲ್ಲಿ ಶಿಕ್ಷಕ ಮತ್ತು ಮಕ್ಕಳು ಕೇಂದ್ರಬಿಂದುವಾದರೂ, ಶಿಕ್ಷಕನ ಪಾತ್ರ ಮಹತ್ವದಾಗಿರುತ್ತದೆ. ಶಿಕ್ಷಕರಲ್ಲಿರುವ ಕಾಳಜಿ, ಆತ್ಮವಿಶ್ವಾಸ, ಬೋಧನೆಯಲ್ಲಿ ಸಮಗ್ರ ಪಾಲ್ಗೊಳ್ಳುವಿಕೆಯ ಮೇಲೆ ಮಕ್ಕಳ ಕಲಿಕೆಯ ಗುಣಮಟ್ಟು ಉತ್ತಮವಾಗಿರುತ್ತದೆ. ಆದರೆ ಗಿರಿಜನ ಆಶ್ರಮಶಾಲೆಗಳಲ್ಲಿ ಇಂತಹ ಆಶಾದಾಯಕ ಪರಿಸ್ಥಿತಿಯನ್ನು ಕಾಣುವುದು ಕಷ್ಟವಾದುದ್ದಾಗಿದೆ. ಬಹುತೇಕ ಆಶ್ರಮ ಶಾಲೆಗಳಲ್ಲಿ ಮುಖ್ಯ ಶಿಕ್ಷಕ ಕಂ ಮೇಲ್ವಿಚಾರಕರಾದವರು ಹೆಚ್ಚು ಆಡಳಿತಾತ್ಮಕ ಕೆಲಸಗಳ ಕಾರಣ ಕೊಟ್ಟು ಶಾಲೆಯ ಹೊರಗೆ ಉಳಿದು ಶೈಕ್ಷಣಿಕ ವಿಷಯಗಳ ಕಡೆ ಗಮನ ಕೊಡುವುದಿಲ್ಲ. ಇವರನ್ನು ನೋಡುವ ಸಹ ಶಿಕ್ಷಕರು ಬೋದನೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಆಶ್ರಮ ಶಾಲೆಯ ಹೆಚ್ಚಿನ ಶಿಕ್ಷಕರು ದಿನಗೂಲಿ ಹಾಗೂ ಹೊರವಲಯ ಶಿಕ್ಷಕರಾಗಿದ್ದು, ಉದ್ಯೋಗ ಭದ್ರತೆಗಳಿಲ್ಲದ ಕಾರಣ ಅವರು ಮಕ್ಕಳ ಕಲಿಕೆಯ ಬಗ್ಗೆ ಗಮನ ಕೊಡುವುದು ಕಡಿಮೆಯಿದೆ. ಇನ್ನೂ ವೃತ್ತಿ ತರಬೇತಿ ಪಡೆಯದ, ಗಿರಿಜನ ಸಂಸ್ಕೃತಿ ಮತ್ತು ಭಾಷೆ ಅರಿವು ಇಲ್ಲದ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುತ್ತಿದ್ದು, ಶಾಲೆಯಲ್ಲಿ ಮಕ್ಕಳ ಸ್ವಾತಂತ್ರ್ಯಕ್ಕೆ ಅಂಕುಶ ಬಿದ್ದಾಗ, ಶಿಕ್ಷಕರ ಕೋಲಿನ ಹೊಡೆತ ಹಾಗೂ ಮಕ್ಕಳ ವೈಯಕ್ತಿಕ ನಿಂದನೆಗಳು ಕೂಡ ಶಾಲೆಗೆ ಗೈರು ಹಾಜರಿಯಾಗಲು ಹಾಗೂ ಶಾಲೆ ಬಿಡಲು ಕಾರಣವಾಗುತ್ತಿವೆ. ಶಾಲೆಯಲ್ಲಿ ಮಕ್ಕಳಿಗೆ ಬರವಣಿಗೆಯ ಕೆಲಸದ ಒತ್ತಡದ ಜೊತೆಗೆ ಕೆಲವು ಮಕ್ಕಳಿಗೆ ಓದಲು, ಬರೆಯಲು ಸಮಸ್ಯೆಗಳಾಗುತ್ತಿರುವುದೂ ಕೂಡ ಶಾಲೆಗೆ ಗೈರುಹಾಜರಿಯಾಗಲು ಅಥವಾ ಶಾಲೆಯನ್ನು ಬಿಡಲು ಕಾರಣವಾಗಿದೆ. ಕೆಲವು ಶಾಲೆಗಳಲ್ಲಿ ತರಗತಿಗಳ ನಿರ್ಲಕ್ಷ್ಯದಿಂದಾಗಿ, ಸರಿಯಾದ ಬೋಧನೆಯಿಲ್ಲದೆ ಮಕ್ಕಳು ಯಾಂತ್ರಿಕವಾಗಿ ಅಲಿಯಬೇಕಾಗಿರುವುದು ಶಾಲೆ ಬಿಡಲು ಒಂದು ರೀತಿಯ ಕಾರಣವಾಗಿದೆ. ಅಲ್ಲದೆ ಗಿರಿಜನ ಮಕ್ಕಳಿಗೆ ಎಷ್ಟೇ ಹೇಳಿಕೊಟ್ಟರೂ ಕಲಿಯುವುದಿಲ್ಲ, ಅವರಿಗೆ ಏನು ಮಾಡಿದರೂ ಅಷ್ಟೆ ಬದಲಾಗಲ್ಲ ಎಂಬ ಶಿಕ್ಷಕರ ತಾತ್ಸಾರದ ಮನೋಭಾವಗಳು ಮಕ್ಕಳು ಶಾಲೆಗೆ ಗೈರುಹಾಜರಿಯಾಗುವುದು ಹಾಗೂ ಶಾಲೆ ಬಿಡುವಲ್ಲಿ ಕಾರಣವಾಗಿವೆ.

ಮಕ್ಕಳನ್ನು ಕರೆತರಲು ಹೋದರೆ ಪೋಷಕರ ಬೈಗಳ, ತಿರಸ್ಕಾರ, ಪ್ರಶ್ನೆಗಳು ಕೇಳಿಬರುತ್ತವೆ. ಬುಡಕಟ್ಟು ಸಮುದಾಯದ ಮಕ್ಕಳು ಶಿಕ್ಷಕರನ್ನು ಕಂಡ ತಕ್ಷಣ ಮಕ್ಕಳು ಮನೆಯಲ್ಲಿ, ಕಾಡಿನಲ್ಲಿ ಅವಿತುಕೊಳ್ಳುವುದು ಇಲ್ಲವೇ ಕಾಡಿನಲ್ಲಿ ಓಟ ಕೀಳುವುದು ಹೆಚ್ಚಾಗಿಯೇ ಕಾಣಬಹುದು. ಆದರೆ ಇದಕ್ಕೆ ಹಲವಾರು ಕಾರಣಗಳಿವೆ. ಒಂದು ಪೋಷಕರು ಮಕ್ಕಳನ್ನು ಶಾಲೆಗೆ ಹೋಗುವಂತೆ ಯಾವತ್ತೂ ಒತ್ತಡ ಹೇರುವುದಿಲ್ಲ. ಈಗಾಗಲೇ ಶಾಲೆ ಬಿಟ್ಟಿರುವ ಇತರೆ ಮಕ್ಕಳ ಜೊತೆ ಸೇರಿ ಆಟ ಆಡಿಕೊಂಡು, ಕಾಡು ಸುತ್ತುವುದು ಮಾಡುತ್ತಾರೆ. ಶಾಲೆಗೆ ಬಂದರೆ ಶಿಕ್ಷಕರು ಬೈಗಳ, ಹೊಡೆಯುವುದು, ಹೋಂ ವರ್ಕ್ ಮಾಡಬೇಕಾಗಿರುವುದರಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಶಿಕ್ಷಕರಿಲ್ಲದೆ ಪಾಠವೂ ಇಲ್ಲದೆ ಕಾಲ ಕಳೆಯಲು ಮಕ್ಕಳಿಗೆ ಸಮಸ್ಯೆಗಳಿರುವ ಕಾರಣ, ಸಾಕಷ್ಟು ಮಕ್ಕಳ ಕಲಿಕೆಯಲ್ಲಿ ಸಮಸ್ಯೆಗಳಿರುವುದರಿಂದ ಶಾಲೆಗೆ ಬರಲು ಇಷ್ಟಪಡುವುದಿಲ್ಲ. ಹಾಗಾಗಿ ಶಿಕ್ಷಕರ ಕೈಗೆ ಸಿಕ್ಕಿದರೆ ಹುಡುಗರಿಂದ ಹೊತ್ತು ಕರೆದುಕೊಂಡು ಹೋಗುತ್ತಾರೆ ಎಂಬ ಭಯದಿಂದ ಕೈಗೆ ಸಿಗದೆ ಓಡುತ್ತಾರೆ. ಇಲ್ಲವೇ ಅಡಗಿ ಕುಳಿತುಕೊಳ್ಳುತ್ತಾರೆ. ಮತ್ತೇ ಈ ಸಮುದಾಯದ ಮಕ್ಕಳ ಪರಿಸ್ಥಿತಿ ಇತ್ತೀಚಿನ ಕೆಲವು ವರ್ಷಗಳ ಮಾತಿಲ್ಲ. ಸುಮಾರು ೨೦ – ೩೦ ವರ್ಷಗಳಿಂದಲೂ ಈ ಅಭ್ಯಾಸ ರೂಢಿಯಲ್ಲಿದೆ. ಇದಕ್ಕೆ ಅಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಕಾರಣಕರ್ತರಾಗಿದ್ದಾರೆ.

. ಮಕ್ಕಳ ನಿರಾಸಕ್ತಿ, ಪೋಷಕರು ಜವಾಬ್ದಾರಿ ತೆಗೆದುಕೊಳ್ಳದಿರುವುದು

ಶಾಲೆಗೆ ದಾಖಲಾಗದ ಮಕ್ಕಳು, ಮಾರಿಗುಡಿ ಪೋಡು : ಚಾಮರಾಜನಗರ ತಾಲ್ಲೂಕಿನ ಏಪ್ರಿಲ್ ೨೦೦೯ ನಲಿ ಭೇಟಿ ಮಾಡಿದ್ದು, ಶಾಲೆಗೆ ದಾಖಲಾದ ೦೮ ಮಕ್ಕಳಿದ್ದರು. ಮಕ್ಕಳನು ಶಾಲೆಗೆ ದಾಖಲಿಸದಿರುವ ಕುರಿತು ಕೇಳಿದಾಗ ಪೋಷಕರು ಬೆಳಗ್ಗೆ ಎದ್ದು, ಕಾಲೋನಿಯ ಪಕ್ಕದಲ್ಲಿರುವ ಎಸ್ಟೇಟ್ ಕೆಲಸಕ್ಕೆ ಹೊರಟು ಹೋಗುತ್ತೇವೆ. ಮಕ್ಕಳು ಶಾಲೆಗೆ ಹೋಗುತ್ತಾರೋ ಇಲ್ಲ ಅಂತಾ ನಮಗೇನು ತಿಳಿಯುತ್ತದೆ. ಕೆಲಸಕ್ಕೆ ನಾವು ಹೋದರೆ ಮನೆಯನ್ನು ನೋಡಿಕೊಳ್ಳುವವರು ಯಾರು. ಹಾಗಾಗಿ ಕೆಲವು ಮಕ್ಕಳ ಮನೆಯಲ್ಲಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಹೊರಗೆ ದುಡಿದು ಬರುವ ಪೋಷಕರಿಗೆ ಅಡುಗೆ ಮಾಡಿರಲು, ಮನೆ ಕೆಲಸ ನಿರ್ವಹಿಸುವ ಸಲುವಾಗಿ ಮನೆಯಲ್ಲೇ ಉಳಿದಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಲು ಗಮನ ನೀಡುವುದಿಲ್ಲ. ಮಾರಿಗುಡಿ ಪೋಡಿನ ಪೂಜಾರಿ ಜಡೆಯನಿಗೆ ೫ ಮಕ್ಕಳಿದ್ದು, ಒಂದು ಮಗುವು ಶಾಲೆಗೆ ಹೋಗುತ್ತಿಲ್ಲ. ಈ ಕುರಿತು ವಿಚಾರಿಸಿದಾಗ ದೊಡ್ಡವಳಿಗೆ ೧೨ ವರ್ಷ ಆಗಿದ್ದು, ಈಗ ಕಲಿಯುವುದು ಮುಗಿದಿದ್ದು, ಅವಳನ್ನು ಶಾಲೆಗೆ ಕಳುಹಿಸುವುದಿಲ್ಲ. ಅವಳು ಶಾಲೆಗೆ ಹೋದರೆ ಮನೆಯಲ್ಲಿ ಕೆಲಸ ಮಾಡುವವರು ಯಾರು ಇರುವುದಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮತ್ತೊಬ್ಬ ಮಗಳು ಗುರುಸಿದ್ದಿ ಶಾಲೆಗೆ ಹೋಗಲು ಹೆದರಿಕೊಳ್ಳುತ್ತಾಳೆ. ಅವಳಿಗೆ ಓದಲು ಇಷ್ಟವಿಲ್ಲ ಎಂದಾಗ, ಮನೆಯಲ್ಲಿದ್ದ ಅವಳನ್ನು ಮಾತನಾಡಿಸುವ ಪ್ರಯತ್ನ ಮಾಡಿದಾಗ ಅಳುತ್ತಾ ಅಡುಗೆ ಕೋಣೆಗೆ ಸೇರಿದಳು. ಆದರೆ ಉಳಿದ ಮೂವರು ಮಕ್ಕಳಾದ ನಾಗಪ್ಪ. ಜಡೆಯ ಹಾಗೂ ಸುಧಾಳನ್ನು ಮುಂದಿನ ವರ್ಷ (೨೦೦೯ – ೧೦ನೇ ಸಾಲಿಗೆ) ಕಳುಹಿಸುವುದಾಗಿ ತಿಳಿಸಿದರು. ಮಾರಿಗುಡಿ ಪೋಡಿನ ವಿ.ಆರ್. ಹಲಗನ ಮಗಳಾದ ಬೇದಮ್ಮಳಿಗೆ ೦೭ ವರ್ಷಗಳಾಗಿದ್ದು, ತಂದೆ – ತಾಯಿ ಎಸ್ಟೇಟ್ ಕೆಲಸಕ್ಕೆ ಹೋಗುವುದರಿಂದ ಮನೆಯಲ್ಲಿ ಚಿಕ್ಕ ಮಗು ನೋಡಿಕೊಳ್ಳುತ್ತಿದ್ದಾಳೆ.

ಹೊಟ್ಟೆ ಬಸವನ ಕುಟುಂಬ, ಮಾರಿಗುಡಿಪೋಡು, ಬೇಡಗುಳಿ

ಬೇಡಗುಳಿಯ ಮಾರಿಗುಡಿ ಪೋಡಿನಲ್ಲಿರುವ ಹೊಟ್ಟೆ ಬಸವ ಮತ್ತು ರಂಗಮ್ಮನ ಅವಿದ್ಯಾವಂತರಾಗಿದ್ದು, ಕೂಲಿ ಮಾಡಿ ಜೀವನ ಮಾಡುತ್ತಿದ್ದಾರೆ. ಇವರಿಗೆ ಐದು ಜನ ಮಕ್ಕಳಿದ್ದು, ೧೬ ವಯಸ್ಸಿನ ಮಗ ಮದುವೆಯಾಗಿದ್ದಾನೆ. ೮ ವಯಸ್ಸಿನ ಮಗಳು ನಾಗಿ, ೧೧ ವಯಸ್ಸಿನ ಮಗ ಜಡೆಯ, ೧೩ ವಯಸ್ಸಿನ ಮಗಳು ಜಡೆಮಾದಿ, ೧೪ ವಯಸ್ಸಿನ ಮಗಳು ಮಾರೆ ಇದ್ದಾರೆ. ಈ ಐದು ಮಕ್ಕಳಲ್ಲಿ ಎರಡು ಮಕ್ಕಳು ಮಾತ್ರ ಒಂದು ಮತ್ತು ಎರಡನೇ ತರಗತಿವರೆಗೆ ಓದಿದ್ದು, ಉಳಿದ ಮೂರು ಮಕ್ಕಳನ್ನು ಶಾಲೆಗೆ ದಾಖಲಿಸಿರುವುದಿಲ್ಲ. ಇವರಲ್ಲಿ ಮಗಳು ನಾಗಿಯನ್ನು ಹೊರತುಪಡಿಸಿ ಉಳಿದವರೆಲ್ಲಾ ಕಾಫಿ ತೋಟದ ಕೆಲಸಗಳಿಗೆ ಹೋಗುತ್ತಾರೆ. ಮಕ್ಕಳನ್ನು ಶಾಲೆಗೆ ದಾಖಲಿಸದಿರುವ ಕುರಿತು ಮನೆಯ ಯಜಮಾನ ಹೊಟ್ಟೆ ಬಸವನನ್ನು ಕೇಳಿದಾಗ ಮಕ್ಕಳು ಓದಿ ಏನು ಆಗಬೇಕಾಗಿಲ್ಲ. ಶಾಲೆಯಲ್ಲಿ ಮಕ್ಕಳನ್ನು ಶಿಕ್ಷಕರು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಅಲ್ಲಿ ಮೀಟಿಂಗ್, ರೇಷನ್ ತರಕ್ಕೆ ಹೋಗಿದ್ದೆ ಅಂತ ಹೋಗ್ತಾರೆ. ಶಾಲೆಯಲ್ಲಿ ಮಕ್ಕಳು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು, ಏನೂ ಕಲಿಯದೇ ಇರುವುದಕ್ಕಿಂತ ಮನೆಯಲ್ಲೇ ಇದ್ದು, ಮನೆ ಕೆಲಸ ಮಾಡಿಕೊಳ್ಳುತ್ತಾರೆ, ಹೊರಗೆ ಹೋಗಿ ಸಂಪಾದನೆ ಮಾಡಿದ್ರೆ ತಾನೇ ಜೀವನ ಮಾಡೋದು, ಅದಕ್ಕೆ ದುಡಿಯಲು ಹೋಗುತ್ತಾರೆ ಎಂದು ಉತ್ತರಿಸಿದರು.

ಪಟ್ಟಿ . ಶಾಲೆಗೆ ದಾಖಲಾಗದ ಮಾರಿಗುಡಿ ಪೋಡಿನ ಮಕ್ಕಳು ೨೦೦೮೦೯

ಕ್ರ.ಸಂ ಮಕ್ಕಳ ಹೆಸರು ತಂದೆ ಹೆಸರು ಮಕ್ಕಳ ವಯಸ್ಸು ಏಪ್ರಿಲ್ ೨೦೦೯ಕ್ಕೆ ಕಾರಣ
ನಾಗಪ್ಪ ವಿ.ಆರ್. ಹಲಗ ಪೋಷಕರು ಗಮನ ಕೊಡದಿರುವುದು
ಬೇದಮ್ಮ ವಿ.ಆರ್. ಹಲಗ ಚಿಕ್ಕ ಮಗು ನೋಡಿಕೊಳ್ಳುವ ಜವಾಬ್ದಾರಿ
ಗುರುಸಿದ್ದಿ ಪೂಜಾರಿ ಸಣ್ಣ ಜಡೆಯ ಮನೆಯ ಜವಾಬ್ದಾರಿ
ನಾಗೇಶ ಪೂಜಾರಿ ಸಣ್ಣ ಜಡೆಯ ೧೦ ಶಾಲೆ ಹೋಗಲು ಆಸಕ್ತಿಯಿಲ್ಲದಿರುವುದು
ಮಾದ ಪೂಜಾರಿ ಸಣ್ಣ ಜಡೆಯ ಪೋಷಕರು ಸೇರಿಸಲು ಗಮನ ಕೊಡದಿರುವುದು
ಸುಧಾ ಪೂಜಾರಿ ಸಣ್ಣ ಜಡೆಯ ಪೋಷಕರು ಸೇರಿಸಲು ಗಮನ ಕೊಡದಿರುವುದು
ಮಾದೇವಿ ಜೆ. ಸಿದ್ದ ಮಗು ಶಾಲೆಗೆ ಹೋಗಲು ಭಯಪಡುವುದು
ಶಿವಣ್ಣ ಮಾಸ್ತ ಮಗುವಿಗೆ ಶಾಲೆಗೆ ಹೋಗಲು ನಿರಾಸಕ್ತಿ
ಶಿವಣ್ಣ ಲೇ. ಕುಂಬ ಮಗುವಿಗೆ ಶಾಲೆಗೆ ಹೋಗಲು ನಿರಾಸಕ್ತಿ
೧೦ ನಾಗಿ ಹೊಟ್ಟೆ ಬಸವಣ್ಣ ಪೋಷಕರು ಸೇರಿಸಲು ಗಮನ ಕೊಡದಿರುವುದು

 

ನಕ್ಕಂದಿ, ಕೊಳ್ಳೆಗಾಲ ತಾಲ್ಲೂಕು, ಹನೂರು ವಲಯ : ನಕ್ಕುಂದಿ ಗ್ರಾಮದ ಬುಡಕಟ್ತು ಸಮುದಾಯದ ಮೊಳ್ಳೇಗೌಡರು ಬಾಲ್ಯದಲ್ಲಿ ಶಾಲೆಗೆ ಹೋಗಿ ಬರಹ ಕಲಿಯದಿದ್ದರೂ, ಸ್ವ ಆಸಕ್ತಿಯಿಂದ ಆಕ್ಷರ ಕಲಿತಿದ್ದು, ಪ್ರಸ್ತುತದಲ್ಲಿ ಗ್ರಾಮ ಸಹಾಯಕರಾಗಿ (ಕಂದಾಯ ಇಲಾಖೆ) ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಮಕ್ಕಳಿಗೆ ಶಿಕ್ಷನ ಕೊಡಿಸಬೇಕೆಂಬ ಆಸೆ ಹೊತ್ತು ಮೊದಲ ಮಗಳಾದ ಶಿವಮ್ಮಳನ್ನು ಪಿ.ಯು.ಸಿ ಓದಿಸಿದ್ದು, ಈಕೆ ಆಂಗ್ಲ ಭಾಷೆಯಲ್ಲಿ ಅನುತ್ತೀರ್ಣಳಾದ ನಂತರ ಮದುವೆ ಮಾಡಿರುತ್ತಾರೆ. ಆದರೂ ಗಂಡನ ಒಪ್ಪಿಗೆ ಪಡೆದು ಪಿ.ಯು.ಸಿ ಪರೀಕ್ಷೆಯನ್ನು ಕಟ್ಟಿಸಿರುವುದಾಗಿ ತಿಳಿಸಿದ್ದು, ದಾದಿಯ ತರಬೇತಿ ಕೊಡಿಸಬೇಕೆಂಬ ಆಸೆಯಿದೆ ಎಂದು ಹೇಳುತ್ತಾರೆ. ಮತ್ತೊಬ್ಬ ಮಗ ೧೮ ವಯಸ್ಸಿನ ಶಿವಕುಮಾರ ಎಸ್.ಎಸ್.ಎಲ್.ಸಿ ವರೆಗೆ ಓದಿದ್ದು ಕೊನೆಯಲ್ಲಿ ಪರೀಕ್ಷೆಯನ್ನು (೨೦೦೪ – ೦೫) ತೆಗೆದುಕೊಳ್ಳದೆ ಶಾಲೆ ಬಿಟ್ಟು ಈಗ ತಮಿಳುನಾಡು ಹಾಗೂ ರಾಮಾಪುರ ಬಯಲಿನಲ್ಲಿ ಕಬ್ಬು ಕಡಿಯುವ ಕೆಲಸ ಮತ್ತು ತೋಟದ ಕೆಲಸವನ್ನು ಮಾಡುತ್ತಿದ್ದಾನೆ. ಮತ್ತಿಬ್ಬರು ಮಕ್ಕಳಾದ ಸುರೇಶ, ಸಿದ್ದಲಿಂಗ ೬ನೇ ತರಗತಿಗೆ ಬಿಟ್ಟು ಕೂಲಿ ಕೆಲಸ ಮಾಡುತ್ತಿದ್ದರೆ. ಮತ್ತೊಬ್ಬ ಮಗ ಚಂದ್ರ ಶಾಲೆಗೆ ಹೋಗುವುದಾಗಿ ಹೇಳಿ ಬೇರೆ ಮಕ್ಕಳ ಜೊತೆ ಕಾಡಿಗೆ ಹೋಗುತ್ತಾನೆ. ಶಾಲೆ ಬಿಟ್ಟ ಸಮಯಕ್ಕೆ ಸರಿಯಾಗಿ ಮನೆಗೆ ಬರುತ್ತಾನೆ. ಅವನು ಶಾಲೆಗೆ ಹೋಗದಿರುವ ಬಗ್ಗೆ ಮನೆಯವರು ಶಿಕ್ಷಕರನ್ನು ಕೇಳಿದ್ದಾರೆ ಎಂಬುದು ಅವನಿಗೆ ತಿಳಿದರೆ ಆ ದಿನ ಮನೆಗೆ ಬರುವುದಿಲ್ಲ. ಮಗಳಾದ ರೋಜಾ ಮಾತ್ರ ಶಾಲೆಗೆ ತಪ್ಪಿಸಿಕೊಳ್ಳದೆ ಹೋಗುತ್ತಿದ್ದಾಳೆ. ೩ನೇ ತರಗತಿಯಲ್ಲಿ ಓದುತ್ತಿರುವ ಇನ್ನೊಬ್ಬ ಮಗ ರತೀಶ ಕೂಡ ಶಾಲೆಗೆ ಹೋಗುವುದಾಗಿ ಹೇಳಿ, ಶಾಲಾ ಸಮಯ ಮುಗಿಯುವವರೆಗೂ ಮಿಣ್ಯಂ ಅಥವಾ ತಮ್ಮ ಜನರ ಕಾಲೋನಿಯಲ್ಲಿ ತಿರುಗುತ್ತಾನೆ. ಒಂದು ಸಲ ಶಾಲೆಗೆ ಹೋಗದೆ ಮೀಣ್ಯದ ಬಸ್ಸಿನಿಂದ ಮೈಸೂರಿನವರೆಗೂ ಹೋಗಿದ್ದು, ಇವನನ್ನು ನೋಡಿದ ಆ ಊರಿನ ಕ್ಲೀನರ್ ವಾಪಸ್ಸು ಊರಿಗೆ ಕರೆದುಕೊಂಡು ಬಂದಿದ್ದಾನೆ ಎಂದು ಮೊಳ್ಳೇಗೌಡರು ತಿಳಿಸಿದರು.

ಶಾಲೆ ಬಿಟ್ಟ ಬುಡಕಟ್ಟು ಮಕ್ಕಳ ಸಂದರ್ಶನ ವಿವರ

ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಪ್ರದೇಶಗಳಲ್ಲಿ ಶಾಲೆ ಬಿಟ್ಟ ೭೦ ಮಕ್ಕಳನ್ನು ನೇರ ಸಂದರ್ಶನ ಮಾಡಲಾಗಿದೆ. ಇವರಲ್ಲಿ ಶೇಕಡ ೪೮.೨೯ ರಷ್ಟು ಸೋಲಿಗ ಸಮುದಾಯದ ಮಕ್ಕಳಾಗಿದ್ದು, ಶೇಕಡ ೮.೫೭ ರಷ್ಟು ಜೇನುಕುರುಬ ಸಮುದಾಯದಿಂದ, ಶೇಕಡ ೭.೧೪ರಷ್ಟು ಕಾಡುಕುರುಬ ಸಮುದಾಯ ಮಕ್ಕಳಾಗಿದ್ದಾರೆ. ಈ ಮಕ್ಕಳಲ್ಲಿ ೫೨.೮೬% ಗಂಡು (೩೭) ಮಕ್ಕಳು, ೪೭. ೧೪% ಹೆಣ್ಣು (೩೩) ಮಕ್ಕಳಿದ್ದು ೯೦% ರಷ್ಟು (೬೩) ಮಕ್ಕಳು ತಂದೆ ತಾಯಿ ಜೊತೆ ವಾಸವಾಗಿದ್ದು, ೧೦% (೭) ಮಕ್ಕಳು ಅಜ್ಜ – ಅಜ್ಜಿ ಜೊತೆ ವಾಸವಾಗಿದ್ದಾರೆ.

ಶಾಲೆ ಬಿಟ್ಟ ತರಗತಿ

ಸಂದರ್ಶನ ಮಾಡಿದ ಮಕ್ಕಳಲ್ಲಿ ೧೧.೪೩ ರಷ್ಟು ೧ ರಿಂದ ೩ನೇ ತರಗತಿಯಲ್ಲಿ ಶಾಲೆಯನ್ನು ಬಿಟ್ಟಿದ್ದು, ಶೇಕಡ ೫೨.೮೬ ರಷ್ಟು ೪ ರಿಂದ ೫ನೇ ತರಗತಿಗೆ ಶಾಲೆ ಬಿಟ್ಟಿದ್ದಾರೆ. ಅದರಲ್ಲೂ ೫ನೇ ತರಗತಿಯಲ್ಲಿ ಹೆಚ್ಚು ಶಾಲೆಯನ್ನು ಬಿಟ್ಟಿದ್ದಾರೆ. ಶೇಕಡ ೩೫.೭೧ ರಷ್ಟು ಮಕ್ಕಳು ೬ ರಿಂದ ೭ನೇ ತರಗತಿಯಲ್ಲಿ ಶಾಲೆಯನ್ನು ಬಿಟ್ಟವರಾಗಿದ್ದಾರೆ.

ನಕ್ಷೆ . ಮಕ್ಕಳು ಶಾಲೆ ಬಿಟ್ಟ ತರಗತಿ

02_190_SVBM-KUH

ಓದುಬರಹ ಕುರಿತು ಮಕ್ಕಳ ಅಭಿಪ್ರಾಯ

ಓದುಬರಹ ಕುರಿತು ಮಕ್ಕಳನ್ನು ಕೇಳಿದಾಗ ಶೇಕಡ ೨೪.೨೯ ರಷ್ಟು ಮಕ್ಕಳು ಓದು ಬರಹ ಚೆನ್ನಾಗಿ ಗೊತ್ತಿರುವುದಾಗಿ ತಿಳಿಸಿದ್ದು, ಶೇಕಡ ೨೮.೫೭ ಮಕ್ಕಳು ಸಾಧಾರಣವಾಗಿರುವುದಾಗಿ ತಿಳಿಸಿದ್ದಾರೆ. ಶೇಕಡ ೪೭.೧೪ ರಷ್ಟು ಮಕ್ಕಳು ಸಮಸ್ಯೆಗಳಿರುವುದಾಗಿ ತಿಳಿಸಿದ್ದಾರೆ.

ಶಾಲೆ ಬಿಟ್ಟ ಮಕ್ಕಳು ಮಾಡುವ ಕೆಲಸಗಳು

ಪ್ರಸ್ತುತ ಈ ಮಕ್ಕಳು ಮಾಡುತ್ತಿರುವ ಕೆಲಸಗಳೆಂದರೆ ೪೩ ಮಕ್ಕಳು (೬೧.೪೩%) ಕಾಫಿ ತೋಟದಲ್ಲಿ, ಸುತಲ ಹಳ್ಳಿಗಳಲ್ಲಿ ತೋಟದ ಕೆಲಸ, ಕಳೆ ತೆಗೆಯುವ, ಸೂರ್ಯಕಾಂತಿ, ಜೋಳದ ತೆನೆ ಕೀಳುವ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ, ೦೯ ಮಕ್ಕಳು (೧೨.೮೬%) ಪಶುಪಾಲನೆ ಮತ್ತು ವ್ಯವಸಾಯವನ್ನು, ೧೨ ಮಕ್ಕಳು (೧೭.೧೪%) ಮನೆಯಲ್ಲಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ಗೃಹಕೃತ್ಯ ಕೆಲಸಗಳನ್ನು ನಿರ್ವಹಿಸುವುದಾಗಿ ತಿಳಿಸಿದ್ದು, ೬ ಮಕ್ಕಳು (೮.೫೭%) ಯಾವುದೇ ಕೆಲಸವನ್ನು ಮಾಡದೇ ಊರು ಮತ್ತು ಕಾಡಲ್ಲಿ ತಿರುಗುತ್ತಾ ಕಾಲ ಕಳೆಯುತ್ತಾರೆ.

ನಕ್ಷೆ . ಶಾಲೆ ಬಿಟ್ಟ ಮಕ್ಕಳು ಮಾಡುವ ಕೆಲಸಗಳು

03_190_SVBM-KUH

ಶಾಲೆ ಬಿಟ್ಟ ಬಗ್ಗೆ ಮಕ್ಕಳ ಅಭಿಪ್ರಾಯಗಳು

ಶಾಲೆ ಬಿಟ್ಟ ೭೦ ಮಕ್ಕಳಲ್ಲಿ ಶೇಕಡ ೧೫.೭ ರಷ್ಟು (೧೧) ಮಕ್ಕಳು ೫ನೇ ತರಗತಿ ಶಾಲೆ ಬಿಟ್ಟಿದ್ದಾರೆ. ಮಕ್ಕಳು ಶಾಲೆ ಬಿಡಲು ಕಾರಣವಾದ ಅಂಶಗಳನ್ನು ತಿಳಿಸಿದ್ದು ನಮ್ಮೂರಲ್ಲಿ ೫ನೇ ತರಗತಿ ನಂತರ ಶಾಲೆ ಇಲ್ಲ. ಶಾಲೆಗೆ ಹೋಗಲು ತುಂಬಾ ದೂರ (ಸುಮಾರು ೨೦ – ೪೦ ಕಿ.ಮೀ) ಹೋಗಬೇಕು. ಬಸ್ಸಿನ ತೊಂದರೆ. ಹಾಸ್ಟೆಲ್‌ನಲ್ಲಿ ಗ್ಯಾಸ್ (ಅಡುಗೆ ಅನಿಲ) ಊಟ ನಮಗೆ ಹಿಡಿಸಲ್ಲ. ಹೊಟ್ಟೆ ನೋವು ಬರುತ್ತದೆ. ನಗರದ ಸ್ಕೂಲು ಇಷ್ಟ ಆಗಲ್ಲ ಅದಕ್ಕೆ ನಾವು ಶಾಲೆಗೆ ಹೋಗಲ್ಲ ಎಂದು ತಿಳಿಸಿದ್ದಾರೆ. ಹಿರಿಯ ಸ್ನೇಹಿತರು ಹಾಗೂ ಸಹೋದರ / ಸಹೋದರಿಯ ಜೊತೆ ಸೇರಿ ಶಾಲೆ ಬಿಟ್ಟಿರುವುದಾಗಿ ತಿಳಿಸಿದ್ದಾರೆ. ಶೇಕಡ ೭.೧೪ ರಷ್ಟು (೫) ಮಕ್ಕಳು ಪಶುಪಾಲನೆಯ (ದನ, ಕುರಿ ಹಾಗೂ ಮೇಕೆಗಳನ್ನು ಮೇಯಿಸಲು) ಕಾರಣಗಳಿಂದಾಗಿ ಶಾಲೆ ಬಿಟ್ಟಿರುವುದಾಗಿ ತಿಳಿಸಿದ್ದಾರೆ. ಶೇಕಡ ೧೧.೪೩ ರಷ್ಟು (೮) ಮಕ್ಕಳು ಮನೆಯ ಕೆಲಸಗಳ ನಿರ್ವಹಣೆ, ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಮತ್ತು ತಾವು ದೊಡ್ಡವಳಾದ (ಋತುಮತಿಯರಾದ) ಕಾರಣ ತಂದೆ – ತಾಯಿಯೇ ಶಾಲೆಯನ್ನು ಬಿಡಿಸಿರುವುದಾಗಿ ತಿಳಿಸಿದ್ದಾರೆ. ಶೇಕಡ ೧೪.೨೯ ರಷ್ಟು (೧೦) ಮಕ್ಕಳು ಸುಗ್ಗಿಯ ಕಾಲದಲ್ಲಿ ಬೆಳೆ ಕಟಾವು, ಕಳೆ ತೆಗೆಯುವ ಕೆಲಸ, ಕಾಫಿತೋಟದ ಕೆಲಸಗಳು, ಕಬ್ಬು ಕಡಿಯುವ ಕೆಲಸಗಳ ಸಂದರ್ಭಗಳಲ್ಲಿ ಹಾಗೂ ಹಬ್ಬ, ಜಾತ್ರೆಗಳಲ್ಲಿ ಹೆಚ್ಚಾಗಿ ಶಾಲೆಗೆ ಗೈರು ಹಾಜರಿಯಾಗಿ ನಂತರ ಶಾಲೆ ಬಿಟ್ಟಿದ್ದಾಗಿ ತಿಳಿಸಿದ್ದಾರೆ. ಶೇಕದ ೨೭. ೧೪ ರಷ್ಟು (೧೯) ಮಕ್ಕಳು ಓದು, ಬರಹದ ಸಮಸ್ಯೆಗಳಿಂದ ಶಾಲೆ ಬಿಟ್ಟಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೇರೆಯವರ ಮುಂದೆ ಓದಕ್ಕೆ ಬರೆಯಕ್ಕೆ ಬರದಿದ್ದರೆ ನಮಗೆ ನಾಚಿಕೆ, ಬೇಜಾರಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ. ಚೆನ್ನಾಗಿ ಹೊಡೆಯುತ್ತಾರೆ ಮತ್ತು ಬೈಯ್ಯುತ್ತಾರೆ. ಹೋಂ ವರ್ಕ ಜಾಸ್ತಿ ಕೊಡ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಕ್ಷೆ . ಮಕ್ಕಳು ಶಾಲೆ ಬಿಟ್ಟ ಬಗ್ಗೆ ನೀಡಿದ ಕಾರಣಗಳು

04_190_SVBM-KUH

ಪುನಃ ಶಾಲೆಗೆ ಹೋಗುವ ಬಗ್ಗೆ ಮಕ್ಕಳ ಅಭಿಪ್ರಾಯ

ಶಾಲೆ ಬಿಟ್ಟ ಮಕ್ಕಳನ್ನು ಪುನಃಹ ಶಾಲೆಗೆ ಹೋಗುವ ಕುರಿತು ಕೇಳಿದಾಗ ಶೇಕಡ ೧೭.೧೪ ರಷ್ಟು ಮಕ್ಕಳು ಹೋಗುವುದಾಗಿ ತಿಳಿಸಿದ್ದು, ಶೇಕಡ ೧೨.೮೬ ರಷ್ಟು ಮಕ್ಕಳು ಮನೆಯಲ್ಲಿ ಕಳುಹಿಸಿದರೆ ಹೋಗುವುದಾಗಿ ತಿಳಿಸಿದ್ದು, ಶೇಕಡ ೭೦ ರಷ್ಟು ಮಕ್ಕಳು ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಏಕೆ ಗೋಗುವುದಿಲ್ಲ ಎಂಬುದಕ್ಕೆ ಓದು ಬರಹದ ಸಮಸ್ಯೆಗಳು, ದೊಡ್ಡವಳಾಗಿರುವುದರಿಂದ, ಶಾಲೆ ಬಿಟ್ಟು ೩ – ೪ ವರ್ಷಗಳಾಗಿರುವುದರಿಂದ ಹಾಗೂ ಕೂಲಿ ಕೆಲಸ ಮಾಡಲು ಹೊಂದಿಕೊಂಡಿರುವುದರಿಂದ ಶಾಲೆಗೆ ಹೋಗಲು ಇಷ್ಟವಿಲ್ಲ ಎಂದು ಮಕ್ಕಳು ತಿಳಿಸಿದ್ದಾರೆ.

ಶಾಲೆ ಬಿಟ್ಟ ಮಕ್ಕಳ ಅಭ್ಯಾಸಗಳು

ಶಾಲೆ ಬಿಟ್ಟ ಮಕ್ಕಳಲ್ಲಿ ದುಶ್ಚಟಗಳಿಗೆ ಬಲಿಯಾಗಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದಾಗ ಶೇಕಡ ೨೦ ರಷ್ಟು ಮಕ್ಕಳು ಬೀಡಿ, ಸೀಗರೇಟ್, ಪಾನಪರಾಗ್, ಹನ್ಸ್ ಹಾಕುವುದಾಗಿ ತಿಳಿಸಿದ್ದು, ಶೇಕಡ ೧೧.೮೬ ರಷ್ಟು ಮಕ್ಕಳು ರಮ್ ಕುಡಿಯುವುದಾಗಿ ತಿಳಿಸಿದ್ದಾರೆ. ಶೇಕಡ ೧೨.೮೬ ರಷ್ಟು ಮಕ್ಕಳು ಇಸ್ಪಿಟ್ ಆಟ ಹಾಗೂ ಪಚ್ಚಿ ಆಟಗಳನ್ನು ಆಡುವುದಾಗಿ ತಿಳಿಸಿದ್ದು, ಶೇಕಡ ೫೫.೭೧ ರಷ್ಟು ಮಕ್ಕಳು ಯಾವುದೇ ದುರಭ್ಯಾಸಗಳಿಲ್ಲದ ಬಗ್ಗೆ ತಿಳಿಸಿದ್ದಾರೆ. ಆದರೆ ಹೆಣ್ಣು ಮಕ್ಕಳಲ್ಲಿ ಕೆಲವರು ಪಾನ್‌ಪರಾಗ್, ಬಂಗಿ ಸೇವನೆ ಬಿಟ್ಟು ಇತರೆ ಯಾವುದೇ ಕೆಟ್ಟ ಅಭ್ಯಾಸ ಇಲ್ಲ.

ಶಾಲೆ ಬಿಟ್ಟ ಮಕ್ಕಳಿಗಾಗಿ ಚಿಣ್ಣರ ಅಂಗಳ ಕೇಂದ್ರ, ರಂಗಸಂದ್ರ

ಚಾಮರಾಜನಗರ ತಾಲ್ಲೂಕಿನ ರಂಗಸಂದ್ರ ಗ್ರಾಮದಲ್ಲಿ ೧ ರಿಂದ ೫ನೇ ತರಗತಿಯವರೆಗೆ ಆಶ್ರಮ ಶಾಲೆಯಿದ್ದು, ಮಾಧ್ಯಮಿಕ ಶಿಕ್ಷಣ ಪಡೆಯಲು ೨೮ ಕಿ.ಮೀ. ದೂರದಲ್ಲಿರುವ ಜಿಲ್ಲಾ ಕೇಂದ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಥವಾ ವಿದ್ಯಾರ್ಥಿ ನಿಲಯಗಳಿಗೆ ದಾಖಲಾಗಿಬೇಕಿದೆ. ೫ – ೬ ಕಿ.ಮೀ ದೂರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಪ್ರಾಥಮಿಕ ಶಾಲೆಗಳಿದ್ದರೂ ಆ ಶಾಲೆಗಳಲ್ಲಿ ವಸತಿನಿಲಯ ಸೌಲಭ್ಯಗಳಿಲ್ಲದ ಕಾರಣ ದಾಖಲಾಗುವುದಿಲ್ಲ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ ೬ನೇ ತರಗತಿಗೆ ದಾಖಲಾಗುವ ಬಹುತೇಕ ಮಕ್ಕಳು ನಗರ ಪರಿಸರಕ್ಕೆ ಹೊಂದುವುದಿಲ್ಲ, ಊಟ ಸರಿಯಿಲ್ಲ, ಗ್ಯಾಸ್ ಊಟದಿಂದ ಹೊಟ್ಟೆ ನೋವು ಬರುತ್ತದೆ, ನನ್ನ ಸ್ನೇಹಿತರು ಯಾರು ಉಳಿಯುವುದಿಲ್ಲ ಎಂಬ ಕಾರಣ ನೀಡಿ ದಾಖಲಾದ ೨ ತಿಂಗಳಲ್ಲೇ ಶಾಲೆಯನ್ನು ಬಿಟ್ಟು ಊರು ಸೇರುತ್ತಾರೆ. ಹೀಗೆ ೨೦೦೭ – ೦೮ ಮತ್ತು ೨೦೦೮ – ೦೯ನೇ ಸಾಲಿನಲ್ಲಿ ೬ನೇ ತರಗತಿಗೆ ಶಾಲೆ ಬಿಟ್ಟು ಬಂದ ಮಕ್ಕಳ ಸಂಖ್ಯೆ ೧೬ ಇದೆ. ಶಾಲೆ ಬಿಟ್ಟ ನಂತರ ಈ ಮಕ್ಕಳು ಶಾಲೆ ಬಿಟ್ಟ ಕೂಲಿ, ಮನೆ ಕೆಲಸ ಹಾಗೂ ಪಶುಪಾಲನೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಶಾಲೆ ಬಿಟ್ಟ ಮಕ್ಕಳಿಗಾಗಿ ೨೦೦೮ – ೦೯ನೇ ಸಾಲಿನ ಏಪ್ರಿಲ್ ಮತ್ತು ಮೇನಲ್ಲಿ ಶಿಕ್ಷಣ ಇಲಾಖೆಯಿಂದ ಚಿಣ್ಣರ ಅಂಗಳ ಕೇಂದ್ರವನ್ನು ತೆರೆದು, ಕೇಂದ್ರಕ್ಕೆ ಗೌರವಧನದ ಮೂಲಕ ಒಬ್ಬ ಶಿಕ್ಷಕರು, ಒಬ್ಬ ಸ್ವಯಂ ಸೇವಕರನ್ನು ನೇಮಕ ಮಾಡಿತು. ಹೀಗೆ ನೇಮಕಗೊಂಡ ಶಿಕ್ಷಕರಿಗೆ ತರಬೇತಿಯನ್ನು ನೀಡಿತು. ತರಬೇತಿ ಪಡೆದ ಶಿಕ್ಷಕರು ಆಸಕ್ತಿಯಿಂದ ಕೇಂದ್ರಕ್ಕೆ ೧ ಮಕ್ಕಳನ್ನು ದಾಖಲು ಮಾಡಿಕೊಂಡರು. ಮಕ್ಕಳಿಗೆ ಪ್ರತಿ ದಿನ ಅಭಿನಯ ಗೀತೆಗಳು, ಕ್ವಿಜ್, ಹಾಡು, ಕಥೆ, ಗಾದೆ, ಒಗಟು, ಕಲೆಯ ಚಟುವಟಿಕೆಗಳು ಹಾಗೂ ಭಾಷೆಯ ಮೂಲ ಕಲಿಕೆಗಳು, ಗಣಿತದ ಮೂಲ ಪ್ರಕ್ರಿಯೆಗಳನ್ನು ಕಲಿಸಿಕೊಡುತ್ತಿದ್ದರು. ಕಲಿಕಾ ಪೂರ್ವ ಚಟುವಟಿಕೆಗಳಿಗೆ ಜೊತೆಗೆ ಭಾಷೆ. ಗಣಿತ, ಪರಿಸರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪಾಠೋಪಕರಣಗಳನ್ನು ಸಿದ್ದಪಡಿಸಿ ಬೋಧನೆಯಲ್ಲಿ ಬಳಸುತ್ತಿದ್ದರು. ಕೇಂದ್ರಕ್ಕೆ ಇಲಾಖೆಯಿಂದ ನೀಡಿದ ಅನುದಾನವನ್ನು ಈ ಶಾಲಾ ಮುಖ್ಯ ಶಿಕ್ಷಕರು ಒಂದು ತಿಂಗಳಾದರೂ ನೀಡಿರಲಿಲ್ಲ. ಆದರೂ ಕೇಂದ್ರದ ಶಿಕ್ಷಕರು ಸಾಲ ಮಾಡಿ ತರಗತಿ ನಡೆಸಿರುತ್ತಾರೆ. ಗ್ರಾಮಸ್ಥರು ಸಭೆ ಮಾಡಿ ಶಾಲೆ ಬಿಟ್ಟ ಮಕ್ಕಳನ್ನು ಚಿಣ್ಣರ ಅಂಗಳ ಕೇಂದ್ರಕ್ಕೆ ಸೇರಿಸಲು ಪೋಷಕರಿಗೆ ತಿಳುವಳಿಕೆ ನೀಡಿದ್ದಾರೆ. ಕೇಂದ್ರಕ್ಕೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ) ಗಳು ಭೇಟಿ ಮಾಡಿದ್ದು, ಕೇಂದ್ರಕ್ಕೆ ಬೇಕಾದ ಹಣಕಾಸಿನ ನೆರವು ಒದಗಿಸುವಲ್ಲಿ ನೆರವು ನೀಡಿದರು. ಮಕ್ಕಳ ಕಲಿಕಾ ಪ್ರಗತಿಯನ್ನು ವೀಕ್ಷಿಸಿ ಸಕಹೆ, ಸೂಚನೆಗಳನ್ನು ನೀಡಿದ್ದಾರೆ. ಈ ಕೇಂದ್ರಕ್ಕೆ ೧೪.೦೫.೦೯ ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಅವರ ಸಿಬ್ಬಂದಿ ವರ್ಗ ಭೇಟಿ ಮಾಡಿ ಶಿಕ್ಷಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಿಗೆ ಶಾಲೆ ಬಿಡದಂತೆ ತಿಳುವಳಿಕೆ ನೀಡಿದರು. ಕೇಂದ್ರದ ಸಮಯ ಮುಗಿದ ನಂತರ ಮುಖ್ಯವಾಹಿನಿಗೆ ೮ ಮಕ್ಕಳನ್ನು ದಾಖಲಿಸಿದ್ದು, ಮತ್ತೇ ಆ ಮಕ್ಕಳು ಶಾಲೆ ಬಿಟ್ಟು ಮನೆ ಸೇರಿದ್ದು, ಯಥಾಸ್ಥಿತಿ ಮುಂದುವರಿದಿದೆ. ಚಿಣ್ಣರ ಅಂಗಳ ಕೇಂದ್ರದ ಮಕ್ಕಳ ವಿವರಣೆಗಳಿಗಾಗಿ ಪಟ್ಟಿ ೪ ನ್ನು ನೋಡಿ.

ಪಟ್ಟಿ . ಚಿಣ್ಣರ ಅಂಗಳ ಕೇಂದ್ರಕ್ಕೆ ದಾಖಲಾದ ಮಕ್ಕಳ ವಿವರ

ಕ್ರ.ಸಂ ವಿದ್ಯಾರ್ಥಿಹೆಸರು ತಂದೆಯ ಹೆಸರು ಜನ್ಮ ದಿನಾಂಕ ಜಾತಿ ಶಾಲೆ ಬಿಟ್ಟ ತರಗತಿ ಮಕ್ಕಳು ಓದುತ್ತಿದ್ದ ಶಾಲೆ
ಕೆ. ಮಾದೇವಿ ಕಾರಯ್ಯ ೮ – ೫ – ೯೭ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
ಮಣಿಸ್ವಾಮಿ ಮಹದೇವ ೧೦ – ೪ – ೯೭ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
ಜಿ. ಕುಮಾರ ಗುರುಸಿದ್ದ ೨ – ೫ – ೯೭ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
ಜಿ. ಶಿವಣ್ಣ ಗೋವಿಂದ ೨೦ – ೫ – ೯೭ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
ಮುರುಗೇಶ ಲೇ. ಸಿದ್ದೇಗೌಡ ೨೫ – ೫ – ೯೭ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
ಶಿವರಾಜು ಸಿದ್ದೇಗೌಡ ೫ – ೧ – ೯೭ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
ಜಡೇಸ್ವಾಮಿ ಲೇ. ಹೀರೆಗೌಡ ೧೫ – ೫ – ೯೫ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
ಹಾಲಮ್ಮ ಬೊಮ್ಮೇಗೌಡ ೧೫ – ೫ – ೯೫ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
ಎಂ. ಮಹೇಶ ಮಾದ ೧೦ – ೬ – ೯೭ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
೧೦ ಆರ್. ಮಾದೇಶ ರಂಗೇಗೌಡ ೨೫ – ೪ – ೯೫ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
೧೧ ಎಂ. ನಾಗೇಂದ್ರ ಮಹದೇವ ೫ – ೬ – ೯೭ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ
೧೨ ಎಂ. ಮಾದೇಶ ಆರ್. ಮಹದೇವ ೨೮ – ೫ – ೯೭ ಸೋಲಿಗ ೬ನೇ ಮುರಾರ್ಜಿ ದೇಸಾಯಿ ಶಾಲೆ. ಚಾ.ನಗರ