ಶಾಲೆ ಬಿಟ್ಟ ಬುಡಕಟ್ಟು ಮಕ್ಕಳ ಸಮಗ್ರ ಅಧ್ಯಯನ

ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸಮುದಾಯದ ಮಕ್ಕಳು ಶಾಲೆ ಬಿಡಲು ಕಾರಣವಾದ ವಿವಿಧ ಅಂಶಗಳನ್ನು ಗುರುತಿಸಲಾಗಿದ್ದು, ಪ್ರಸ್ತುತ ಮಕ್ಕಳು ಮಾಡುವ ಕೆಲಸಗಳು ಹಾಗೂ ಅವರ ಪರಿಸ್ಥಿತಿಯ ಕೂಲಂಕುಶ ವಿವರಣೆಯನ್ನು ದಾಖಲಿಸಲಾಗಿದೆ. ಹಾಗಾಗಿ ಶಾಲೆ ಬಿಟ್ಟ ಮಕ್ಕಳ ಸಮಗ್ರ ಮಕ್ಕಳಿದ್ದು, ೬ ರಿಂದ ೧೪ ವಯಸ್ಸಿನವರಾಗಿದ್ದಾರೆ. ಈ ಮಕ್ಕಳಲ್ಲಿ ೧ ರಿಂದ ೫ನೇ ತರಗತಿಯ ೧೦ ಮಕ್ಕಳಿದ್ದು, ಅವರಲ್ಲಿ ೭ ಗಂಡು, ೦೩ ಹೆಣ್ಣು ಮಕ್ಕಳಿದ್ದಾರೆ. ೬ ರಿಂದ ೭ನೇ ತರಗತಿಯಲ್ಲಿ ೦೫ ಮಕ್ಕಳಲ್ಲಿ ೦೨ ಗಂಡು, ೦೩ ಹೆಣ್ಣು ಮಕ್ಕಳಿದ್ದು, ಈ ಎಲ್ಲಾ ಮಕ್ಕಳನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗಿದೆ.

. ರಾಣಿ, ೬ನೇ ತರಗತಿ, ಮದ್ದೂರು ಕಾಲೋನಿ, ಗುಂಡ್ಲುಪೇಟೆ ತಾಲ್ಲೂಕು : ಮದ್ದೂರು ಗಿರಿಜನ ಕಾಲೋನಿಯ ಬೋವುಯ್ಯನಿಗೆ (ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ವಾಚ್‌ಮನ್) ಐದು ಮಕ್ಕಳಿದ್ದಾರೆ. ಇವರ ಮೊದಲ ಮಗಳಾದ ಜೋತಿ ೧೫ ವರ್ಷದವಳಾಗಿದ್ದು, ೪ನೇ ತರಗತಿಯಲ್ಲಿ ಶಾಲೆ ಬಿಟ್ಟು, ಕೂಲಿ ಕೆಲಸ ಮಾಡುತ್ತಿದ್ದಾಳೆ. ಇವಳನ್ನು ಮನೆಯಲ್ಲಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವವರು ಇಲ್ಲವೆಂದು ಶಾಲೆ ಬಿಡಿಸಲಾಗಿತ್ತು. ಎರಡನೇ ಮಗಳಾದ ರಾಣಿ ೧೩ ವರ್ಷದವಳಾಗಿದ್ದು, ೬ನೇ ತರಗತಿಗೆ (೨೦೦೬ – ೦೭ರಲ್ಲಿ) ಶಾಲೆ ಬಿಟ್ಟಿದ್ದಾಳೆ. ಈಕೆ ೫ನೇ ತರಗತಿ ಓದುವಾಗಲೂ ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ಇವಳು ಓದು ಬರಹದಲ್ಲಿ ಬಹಳ ಹಿಂದಿದ್ದು, ಹೆಚ್ಚಾಗಿ ಅನಾರೋಗ್ಯದ ಕಾರಣಗಳನ್ನು ಕೊಟ್ಟು ಶಾಲೆಗೆ ಗೈರು ಹಾಜರಾಗುತ್ತಿದ್ದಳು. ಈ ಹಂತದಲ್ಲಿ ಶಾಲೆಯಲ್ಲಿ ಫೇಲ್ ಮಾಡಬಾರದೆಂಬ ನಿಯಮಕ್ಕೆ ಬದ್ಧವಾಗಿ ಶಿಕ್ಷಕರು ರಾಣಿಯನ್ನು ಐದನೇ ತರಗತಿಗೆ ಪಾಸು ಮಾಡಿ ಆರನೇ ತರಗತಿಗೆ ಕಳುಹಿಸಿದರು. ಆರನೇ ತರಗತಿಗೆ ಸೇರಿದ ಇವಳು ಜುಲೈವರೆಗೆ ಮಾತ್ರ ಶಾಲೆಗೆ ಹೋಗಿದ್ದು, ನಂತರ ಶಾಲೆ ಬಿಟ್ಟು ಸ್ವಲ್ಪ ದಿನಗಳವರೆಗೆ ಮನೆಯಲ್ಲಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಾ, ಮನೆ ಕೆಲಸ ಮಾಡಿಕೊಂಡಿದ್ದಳು. ನಂತರ ತನ್ನ ಅತ್ತೆ ಹಾಗೂ ಈಗಾಗಲೆ ಶಾಲೆ ಬಿಟ್ಟಿರುವ ಸ್ನೇಹಿತೆಯರ ಜೊತೆ ಸೇರಿ ಕೇರಳದ ಕಾಫಿ ತೋಟದಲ್ಲಿ ಕೆಲಸ ಮಾಡಲು ಹೋಗುತ್ತಿದ್ದಾಳೆ. ಈಕೆ ಶಾಲೆ ಬಿಟ್ಟ ಬಗ್ಗೆ ಪೋಷಕರನ್ನು ವಿಚಾರಿಸಿದಾಗ ದೊಡ್ಡವಳಾದ ಮೇಲೆ ಏನ್ ಒದ್ತಾಳೆ, ಹೋಗಿ ಓದು ಎಂದರೂ ಹೋಗಲ್ಲ ನಾವೇನು ಮಾಡುವುದು ಎನ್ನುತ್ತಾರೆ. ರಾಣಿಯನ್ನೇ ಶಾಲೆ ಬಿಟ್ಟ ಬಗ್ಗೆ ವಿಚಾರಿಸಿದಾಗ ಹಾಸ್ಟಲ್‌ನಲ್ಲಿ ಮೇಡಂ ಚೆನ್ನಾಗಿ ಬೈಯ್ತಾರೆ, ನನ್ನ ಗೆಳತಿಯರಾದ ಮಂಗಳಮ್ಮ್, ಜಯಲಕ್ಷ್ಮಿ ಮತ್ತು ಪುಟ್ಟಿ ಶಾಲೆಗೆ ಹೋಗುತ್ತಿಲ್ಲ ಅದಕ್ಕೆ ನಾನು ಹೋಗುವುದಿಲ್ಲ ಎಂದು ಹೇಳುತ್ತಾಳೆ. ಪ್ರಸ್ತುತದಲ್ಲಿ ಗಿರಿಜನ ಆಶ್ರಮ ಶಾಲೆ ಮದ್ದೂರು ಕಾಲೋನಿಯಲ್ಲಿ ಈಕೆಯ ತಮ್ಮ ಲೋಕೇಶ ೩ನೇ ತರಗತಿ ಓದುತ್ತಿದ್ದು, ತಂಗಿ ಲಕ್ಷ್ಮೀ ೨ನೇ ತರಗತಿ ಓದುತ್ತಿದ್ದಾಳೆ.

. ಶಿವಣ್ಣ, ೫ನೇ ತರಗತಿ, ಮದ್ದೂರು ಕಾಲೋನಿ, ಗುಂಡ್ಲುಪೇಟೆ ತಾಲ್ಲೂಕು :

ಮದ್ದೂರು ಕಾಲೋನಿಯ ಬೊಮ್ಮನ ಮಗ ಶಿವಣ್ಣ ಕಲಿಕೆ ಹಾಗೂ ಬರವಣಿಗೆಯಲ್ಲಿ ಉತ್ತಮವಾಗಿದ್ದರೂ, ತನ್ನ ಹಿರಿಯ ಸಹಪಾಠಿ ರಾಜುವಿನ ಜೊತೆ ಸೇರಿ ಐದನೇ (೨೦೦೫ – ೦೬ ರಲ್ಲಿ) ತರಗತಿಗೆ ಶಾಲೆ ಬಿಟ್ಟಿದ್ದಾನೆ. ಈತನ್ನು ಶಾಲೆಗೆ ಸೇರಿಸಲು ಈತನ ತಂದೆ, ಗ್ರಾಮಸ್ಥರು ಹಾಗೂ ಶಿಕ್ಷಕರು ತುಂಬಾ ಪ್ರಯತ್ನ ಮಾಡಿದರೂ ಶಾಲೆಗೆ ಕರೆತರಲು ಸಾಧ್ಯವಾಗಲಿಲ್ಲ. ಈತನಿಗೆ ಶಾಲೆಗಿಂತ ಊರಲ್ಲಿ ಕಾಲ ಕಳೆಯುವುದು ಮತ್ತು ಕಾಡು ಸುತ್ತುವುದರಲ್ಲಿ ಹೆಚ್ಚು ಆಸಕ್ತಿಯಿದೆ. ಈತ ಶಾಲೆಯಲ್ಲಿದ್ದಾಗ ಶಿಕ್ಷಕರು ಕೊಟ್ಟ ಮನೆಗೆಲಸ ಮಾಡುತ್ತಿರಲಿಲ್ಲ. ಈ ಬಗ್ಗೆ ಶಿಕ್ಷಕರ ಕಾರಣ ಕೇಳಿ ಏಟು ಕೊಟ್ಟ ಮಾರನೇ ದಿನವೇ ಶಾಲೆಗೆ ಗೈರು ಹಾಜರಿಯಾಗುತ್ತಿದ್ದನು. ಹೀಗೆ ಶಾಲೆಗೆ ಗೈರು ಹಾಜರಾಗುವ ಈತನನ್ನು ಕರೆತರಲು ಮನೆಗೆ ಹೋಗುವ ಶಿಕ್ಷಕ ಹಾಗೂ ಇತರೆ ಮಕ್ಕಳನ್ನು ಕಂಡ ತಕ್ಷಣ ಶಿವಣ್ಣ ಮನೆಯಿಂದ ತಪ್ಪಿಸಿಕೊಂಡು ಕಾಡು ಬೀಳುತ್ತಿದ್ದ. ಅಲ್ಲಿಗೂ ಬಿಡದೆ ಬಂದರೆ ೩೦ ರಿಂದ ೪೦ ಅಡಿ ಎತ್ತರದ ಮರವೇರಿ ಕೂರುತ್ತಿದ್ದ. ಈತನನ್ನು ಹಿಡಿಯಲು ಶಿಕ್ಷಕರು, ಉಳಿದ ಮಕ್ಕಳು ಹರಸಾಹಸ ಮಾಡಬೇಕಾಗಿತ್ತು. ಹೀಗೆ ಗೈರು ಹಾಜರಿಯಾಗುವ ಮೂಲಕ ಈತ ೫ನೇ ತರಗತಿ ಪರೀಕ್ಷೆಯನ್ನು ಬರೆಯಲಿಲ್ಲ. ಆದರೆ ೨೦೦೬ – ೦೭ನೇ ಸಾಲಿನಲ್ಲಿ ಶಾಲೆ ಆರಂಭವಾದಾಗ ಪ್ರತಿ ದಿನ ಶಾಲೆಯ ಹೊರಗೆ ನಿಂತು, ಶಾಲೆಗೆ ಬರುತ್ತಿದ್ದ ಇತರೆ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದ್ದ ಕಾರಣ ಮುಖ್ಯ ಶಿಕ್ಷಕರು ಈತನನ್ನು ಮತ್ತೇ ೫ನೇ ತರಗತಿಗೆ ಸೇರಿಸಿಕೊಂಡರು. ಆದರೆ ಈ ವರ್ಷವು ಶಾಲೆಯನ್ನು ಮಧ್ಯದಲ್ಲಿ ಬಿಟ್ಟು ಮೊದಲಿನಂತೆ ಅಲೆದಾಟ ಶುರು ಮಾಡಿದ. ನಂತರ ಕೇರಳದ ಕಾಫಿ ತೋಟದ ಕೆಲಸ ಮಾಡಲು ಹೋಗುತ್ತಿದ್ದಾನೆ.

. ಸಂತೋಷ್ಕುಮಾರ, ೪ನೇ ತರಗತಿ, ಮದ್ದೂರು ಕಾಲೋನಿ, ಗುಂಡ್ಲುಪೇಟೆ ತಾಲ್ಲೂಕು : ಕೇರಳ ಗಡಿ ಭಾಗದಲ್ಲಿರುವ ಗುಂಡ್ಲುಪೇಟೆ ತಾಲ್ಲೂಕಿನ ಮೂಲಹೊಳೆ ಮದ್ದೂರು ಕಾಲೋನಿಗೆ ೧೫ ಕಿ.ಮೀ ದೂರದಲ್ಲಿದೆ. ಈ ಊರಿನ ಆನೆ ಮಾವುತ ಸಣೈದನ ಮಗ ೧೦ ವರ್ಷ ವಯಸ್ಸಿನ ಸಂತೋಷನನ್ನು ಗಿರಿಜನ ಆಶ್ರಮ ಶಾಲೆಯ ಮದ್ದೂರು ಕಾಲೋನಿಯಲ್ಲಿ ೨೦೦೪ – ೦೫ನೇ ಸಾಲಿನಲ್ಲಿ ಎರಡನೇ ತರಗತಿಗೆ (ವಯಸ್ಸಿನ ಲೆಕ್ಕಚಾರದಲ್ಲಿ ೪ನೇ ತರಗತಿಯಲ್ಲಿರಬೇಕಿತ್ತು) ಸೇರಿಸಿಕೊಳ್ಳಲಾಯಿತು. ಈತ ೨೦೦೬ – ೦೭ನೇ ಸಾಲಿನವರೆಗೆ ೪ನೇ ತರಗತಿಯನ್ನು ಮುಗಿಸಿದ್ದು, ೨೦೦೭ – ೦೮ರಲ್ಲಿ ಐದನೇ ತರಗತಿಗೆ ಸೇರಬೇಕಿದ್ದು, ಶಾಲೆಗೆ ದಾಖಲಾಗದೆ ಕೇರಳದ ಕಾಫೀ ತೋಟದಲ್ಲಿ ಕೆಲಸ ಮಾಡುತ್ತಾನೆ. ಇವನ ಜೊತೆ ಸೇರಿದ ತಮ್ಮ ಪ್ರವೀಣ ಎರಡನೇ ತರಗತಿ ಮುಗಿಸಿದ್ದು, ಮೂರನೇ ತರಗತಿಗೆ ಸೇರಲಿಲ್ಲ. ಇವನಿಗೆ ಒಂಬತ್ತು ವರ್ಷದ ತಂಗಿಯಿದ್ದು, ಅವಳನ್ನು ಪೋಷಕರು ಈವರೆಗೂ ಶಾಲೆಗೆ ದಾಖಲು ಮಾಡಿಲ್ಲ. ಏಕೆಂದರೆ ಈ ಹುಡುಗಿ ತಾಯಿ ಬಿಟ್ಟು ಎಲ್ಲೂ ಹೋಗಲ್ಲ. ತಾಯಿ ಕೂಡ ತಾವು ಎಲ್ಲಿ ಹೋಗುತ್ತಾರೆ ಅಲ್ಲಿಗೆ ಜೊತೆಗೆ ಕರೆದುಕೊಂಡು ಹೋಗುತ್ತಾರೆ.

. ಜ್ಯೋತಿ, ೪ನೇ ತರಗತಿ, ಪುರಾಣಿಪೋಡು, ಯಳಂದೂರು ತಾಲ್ಲೂಕು : ಪುರಾಣಿ ಪೋಡಿನ ರಂಗೋಲೆ ರಂಗೇಗೌಡ ಮತ್ತು ಮಾದೇವಿಯವರ ಮಗಳು ೧೧ ವರ್ಷದ ಜ್ಯೋತಿ ೨೦೦೭ – ೦೮ ನೇ ಸಾಲಿನಲ್ಲಿ ಐದನೇ ತರಗತಿಗೆ ಶಾಲೆ ಬಿಟ್ಟು ಮನೆಯ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾಳೆ. ಈಕೆಯ ತಂದೆ – ತಾಯಿ ವರ್ಷದಲ್ಲಿ ೪ – ೫ ತಿಂಗಳು ಕೊಡಗಿನ ಕಾಫಿ ತೋಟದ ಕೆಲಸಗಳಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಜ್ಯೋತಿ ತನ್ನ ಸೋದರ ಅತ್ತೆಯೊಂದಿಗೆ ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾಳೆ. ೩ನೇ ತರಗತಿಗೆ ಹೋಗುತ್ತಿರುವ ತಮ್ಮನ್ನು ನೋಡಿಕೊಂಡು, ದನ ಮತ್ತು ಮೇಕೆಗಳನ್ನು ಮೇಯಿಸುತ್ತಾಳೆ. ತಂಗಿ ಮತ್ತು ತಮ್ಮನಿಗೆ ಅಡುಗೆ ಮಾಡಿ ಹಾಕುತ್ತಾಳೆ.

. ಸುಧಾ, ೫ನೇ ತರಗತಿ, ಪುರಾಣಿಪೋಡು, ಯಳಂದೂರು ತಾಲ್ಲೂಕು : ಪುರಾಣಿ ಪೋಡಿನ ರಂಗೋಲೆ ಜಡೇಗೌಡ ಮತ್ತು ಮಾದಮ್ಮನ ಕುಟುಂಬ ವ್ಯವಸಾಯ ಮಾಡುತ್ತಿದ್ದು, ಆಡು, ಕುರಿ, ದನಗಳನ್ನು ಸಾಕುತ್ತಾರೆ. ಮಗಳು ೧೨ ವರ್ಷದ ಸುಧಾ ಋತುಮತಿಯಾದ ಕಾರಣ ಪೋಷಕರು ೫ನೇ (೨೦೦೭ – ೦೮ರಲ್ಲಿ) ತರಗತಿಗೆ ಬಿಡಿಸಿದ್ದಾರೆ. ಈಕೆಯ ಅಣ್ಣ ನಾಗರಾಜು ೯ನೇ ತರಗತಿಯನ್ನು ಕೊಳ್ಳೆಗಾಲದಲ್ಲಿ ಓದುತ್ತಿದ್ದು, ತಂಗಿ ಶ್ವೇತಾ ೫ನೇ ತರಗತಿ, ತಮ್ಮ ಮಹೇಶ ೩ನೇ ತರಗತಿಯನ್ನು ಪುರಾಣಿ ಪೋಡಿನಲ್ಲಿ ಓದುತ್ತಿದ್ದಾರೆ.

. ಜಡೇಮಾದಿ, ೬ನೇ ತರಗತಿ, ಪುರಾಣಿಪೋಡು, ಯಳಂದೂರು ತಾಲ್ಲೂಕು : ಇದೇ ಗ್ರಾಮದ ಲೇಟ್ ಮಾದೇಗೌಡ ಮತ್ತು ಮಹದೇವಮ್ಮನವರ ಮಗಳಾದ ೧೨ ವರ್ಷದ ಜಡೆಮಾದಿ ೬ನೇ ತರಗತಿಯನ್ನು (೨೦೦೬ – ೦೭ರಲ್ಲಿ) ಪೂರ್ಣಗೊಳಿಸದೆ ಮನೆಯ ಕೆಲಸಗಳನ್ನು ನಿರ್ವಹಿಸುವುದರ ಜೊತೆಗೆ ದನಗಳನ್ನು ಮೇಯಿಸುತ್ತಿದ್ದಾಳೆ. ಈಕೆಯ ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಅಣ್ಣ ರಂಗಸ್ವಾಮಿ ೭ನೇ ತರಗತಿ ಬಿಟ್ಟು ಇರುವ ಸ್ವಲ್ಪ ಜಮೀನಿನಲ್ಲಿ ವ್ಯವಸಾಯದ ಕೆಲಸ ಹಾಗೂ ಹಳ್ಳಿಯಲ್ಲಿ ಸಿಗುವ ತೋಟದ ಕೂಲಿ ಕೆಲಸಕ್ಕೆ ಹೋಗುತ್ತಾನೆ.

. ಜಡೆಸ್ವಾಮಿ, ೬ನೇ ತರಗತಿ, ರಂಗಸಂದ್ರ (ಬೂದಿಪಡಗ), ಚಾಮರಾಜನಗರ ತಾಲ್ಲೂಕು : ರಂಗಸಂದ್ರ (ಬೂದಿಪಡಗ) ಗ್ರಾಮದ ೧೨ ವರ್ಷದ ಜಡೇಸ್ವಾಮಿಯ ತಂದೆ – ತಾಯಿ ಇಬ್ಬರು ಅನಾರೋಗ್ಯದ ಕಾರಣ ಮರಣ ಹೊಂದಿದ್ದಾರೆ. ಪ್ರಸ್ತುತ ಈತನು ಅಜ್ಜಿ ಹಾಗೂ ಸಹೋದರಿಯರ ಜೊತೆ ವಾಸವಿದ್ದಾನೆ. ಇವನು ೨೦೦೭ – ೦೮ ನೇ ಸಾಲಿನಲ್ಲಿ ೬ನೇ ತರಗತಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿದ ಮೂರು ತಿಂಗಳ ನಂತರ ಇತರೆ ಸ್ನೇಹಿತರ ಜೊತೆ ಸೇರಿ ಶಾಲೆ ಬಿಟ್ಟ. ಶಾಲೆ ಬಿಟ್ಟ ಕಾರಣ ಕೇಳಿದರೆ ಗ್ಯಾಸಿನ ಊಟ ನಮಗೆ ಹಿಡಿಸುವುದಿಲ್ಲ, ಹಾಸ್ಟಲ್‌ನಲ್ಲಿ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಹೇಳುತ್ತಾನೆ. ಶಾಲೆ ಬಿಟ್ಟ ಮೇಲೆ ಜಡೆಸ್ವಾಮಿ ಸುಗ್ಗಿಯ ಸಮಯದಲ್ಲಿ ಜೋಳದ ತೆನೆ ತರಿಯಲು, ಸೂರ್ಯಕಾಂತಿ ತಟ್ಟೆ ಕೀಳಲು ಹೋಗುತ್ತಾನೆ. ಅಲ್ಲದೆ ತೋಟಗಳಿಗೆ ಗೊಬ್ಬರ ಹಾಕಲು ಹೋಗುತ್ತಿದ್ದು, ೬೦ ರೂಪಾಯಿ ಕೂಲಿ ಸಿಗುತ್ತಿದೆ. ಇದರಲ್ಲಿ ಮನೆಗೂ ಕೊಟ್ಟು, ತಾನು ಸ್ವಲ್ಪ ಇಟ್ಕೊಂಡು ಬೇಕಾದನ್ನು ತೆಗೆದುಕೊಳ್ಳುವುದಾಗಿ ತಿಳಿಸಿತ್ತಾನೆ. ಈತ ಫೆಬ್ರವರಿ ತಿಂಗಳಿಂದ ಏಪ್ರಿಲ್ ತಿಂಗಳವರೆಗೆ ಲವಂಗದ ಮೊಗ್ಗು ಸಂಗ್ರಹಿಸಲು ಕಾಸು ಕಟ್ಕೊಂಡು ಗೋಲಿ, ಪಚ್ಚಿ ಆಟ ಆಡ್ತಾನೆ. ಕ್ರಿಕೆಟ್ ಆಟ ಕೂಡ ಆಡುತ್ತಾನೆ. ಈತನ ಮೊದಲ ಅಕ್ಕ ೧೭ ವಯಸ್ಸಿನ ಬಸಮ್ಮ ಓದಿಲ್ಲ. ಈಕೆ ಕೂಲಿ ಮಾಡಿಕೊಂಡು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾಳೆ. ಈತನ ಎರಡನೇ ಅಕ್ಕ ೧೫ ವರ್ಷದ ಸಂಕಮ್ಮ ಚಾಮರಾಜನಗರದ ಪಿಡಬ್ಲ್ಯೂಡಿ ಶಾಲೆಯಲ್ಲಿ ೮ನೇ ತರಗತಿ ಓದುತ್ತಿದ್ದು, ರಜಾ ದಿನಗಳಲ್ಲಿ ತೋಟದ ಕೆಲಸಕ್ಕೆ ಹೋಗುತ್ತಿದ್ದು, ಪರೀಕ್ಷೆ ಸಮಯದಲ್ಲಿ ಶಾಲೆ ಬಿಟ್ಟು ಕೂಲಿ ಮಾಡುತ್ತಾಳೆ. ಮೂರನೇ ಅಕ್ಕ ೧೩ ವರ್ಷದ ಹಾಲಮ್ಮ ೭ನೇ ತರಗತಿಗೆ ಶಾಲೆ ಬಿಟ್ಟು ೧ ವರ್ಷವಾಗಿದ್ದು, ಮನೆ ಕೆಲಸ ಮಾಡಿಕೊಂಡು ಅಕ್ಕನ ಮಗುವನ್ನು ನೋಡಿಕೊಳ್ಳುತ್ತಾಳೆ.

. ಪ್ರೇಮ, ೫ನೇ ತರಗತಿ, ರಂದಸಂದ್ರ (ಬೂದಿಪಡಗ), ಚಾಮರಾಜನಗರ ತಾಲ್ಲೂಕು : ರಂಗಸಂದ್ರ ಗ್ರಾಮದವರಾದ ಜಡೇಗೌಡ (ಅರಣ್ಯ ಇಲಾಖೆಯಲ್ಲಿ ವಾಚರ್) ಮತ್ತು ಕಾಳಮ್ಮನವರ ಮಗಳಾದ ೧೩ ವರ್ಷ ವಯಸ್ಸಿನ ಪ್ರೇಮ ಶಾಲೆ ಬಿಟ್ಟು ಎರಡು ವರ್ಷವಾಗಿದೆ. ಈಕೆ ಶಾಲೆಗೆ ಬರುವುದಕ್ಕಿಂತ ಹೆಚ್ಚಾಗಿ ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದಳು. ಆದರೂ ಐದನೇ ತರಗತಿ ಪಾಸು ಮಾಡಿ ೬ನೇ (೨೦೦೭ – ೦೮ನೇ ಸಾಲು) ತರಗತಿಗೆ ಕಳುಹಿಸಿದರೂ ಶಾಲೆಗೆ ದಾಖಲಾಗಲೇ ಇಲ್ಲ. ಇವಳಿಗೆ ಓದಲು, ಬರೆಯಲು ತುಂಬಾ ಸಮಸ್ಯೆಯಿದ್ದು, ಮನೆಯಲ್ಲಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು, ಕಾಫಿ ಹಣ್ಣಿನ ಕೆಲಸವಿದ್ದಾಗ ಅಜ್ಜಿ ಜೊತೆ ಅತ್ತಿಖಾನೆ ಎಸ್ಟೇಟಲ್ಲಿ ಕೆಲಸ ಮಾಡಲು ಹೋಗುತ್ತಿದ್ದಾಳೆ. ಈಕೆಯ ಅಣ್ಣ ಜಡೆಯ ೭ನೇ ತರಗತಿಗೆ ಬಿಟ್ಟು ಕೂಲಿ ಕೆಲಸ ಮಾಡುತ್ತಾನೆ.

. ಮಹೇಶ ಎಂ. ಬಿನ್ ಮಹದೇವ, ೫ನೇ ತರಗತಿ, ರಂಗಸಂದ್ರ, ಚಾಮರಾಜನಗರ ತಾಲ್ಲೂಕು : ತಂದೆ ಮಹದೇವ, ತಾಯಿ ಮಾದಮ್ಮ ಇವರು ಕೂಲಿ ಜೊತೆಗೆ ಇರುವ ಸ್ವಲ್ಪ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾರೆ. ವಯಸ್ಸು ೧೩, ಶಾಲೆ ಬಿಟ್ಟ ತರಗತಿ ೫ನೇ ತರಗತಿ ಶಾಲೆ ಬಿಟ್ಟು ೩ ವರ್ಷ ಆಗಿದೆ. ಕಾಫಿ ತೋಟದ ಕೆಲಸ ಮಾಡಲು ಬೇಡಗುಳಿ, ಹೊನ್ನಮೇಟಿ, ಅತ್ತಿಖಾನೆ, ಕೊಡಗು ಪ್ರದೇಶಗಳಿಗೆ ಹೋಗುತ್ತಾನೆ. ಈತನ ಅಣ್ಣ ನಾಗೇಶ್ ಬಿ. ಮೆಟ್ರಿಕ್ ಫೇಲ್ ಆಗಿ ಓದು ಮುಂದುವರಿಸಿಲ್ಲ. ಈತನೂ ಕೂಡ ಕಾಫಿ ತೋಟದ ಕೆಲಸಕ್ಕಾಗಿ ಹೊರಗೆ ಹೋಗುತ್ತಾನೆ. ಈತನ ಜೊತೆ ಓದುತ್ತಿದ್ದ ಬಸವರಾಜು, ಚಿಕ್ಕಪ್ಪನ ಮಗ ಶಿವಣ್ಣ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೭ನೇ ತರಗತಿಗೆ ಹೋಗುತ್ತಿದ್ದಾರೆ. ಸ್ವಾಮಿ, ಕುಮಾರ, ಶಿವಣ್ಣ, ೩ನೇ ತರಗತಿಗೆ ಶಾಲೆ ಬಿಟ್ಟು ಕೂಲಿ ಮಾಡ್ತಾರೆ. ಈ ಹುಡುಗನಿಗೆ ಓದಲು ಸೇರಿಸಿದರೆ ಹೋಗ್ತೀನಿ. ಓದಕ್ಕೆ, ಬರೆಯೋಕ್ಕೆ ಬರುತ್ತದೆ. ಇವನು ಓದುವಾಗ ಶಾಲೆಯಲ್ಲಿ ಇದ್ದ ಸಿದ್ದರಾಜಶೆಟ್ಟಿ, ಕೃಷ್ಣ ಮೇಸ್ಟ್ರು ಚೆನ್ನಾಗಿ ಪಾಠ ಮಾಡ್ತಿದ್ದ ಬಗ್ಗೆ ತಿಳಿಸಿದ್ದು, ಶಿವ ಹೆಡ್ ಮೇಸ್ಟ್ರು ಶಾಲೆಯಲ್ಲಿ ಒಂದೊಂದು ಗಳಿಗೆ ಇದ್ದು ಹೋಗ್ತಿದ್ರು. ಕೃಷ್ಣ, ಕುಮಾರಸ್ವಾಮಿ ಮೇಸ್ಟ್ರು ಚೆನ್ನಾಗಿ ಏಟ್ ಕೊಡ್ತಿದ್ರು ಎಂದು ತಿಳಿಸಿದ್ದಾನೆ.

೧೦. ಸ್ವಾಮಿ ಬಿನ್ ವಾಚರ್ ಮಾದೇವ, ೬ನೇ ತರಗತಿ, ರಂಗಸಂದ್ರ, ಚಾಮರಾಜನಗರ ತಾಲ್ಲೂಕು : ವಯಸ್ಸು ೧೩ ವರ್ಷ, ೨೦೦೭ – ೦೮ರಲ್ಲಿ ೬ನೇ ತರಗತಿಗೆ ಮುರಾರ್ಜಿ ಶಾಲೆಗೆ ಹೋಗಿದ್ದು, ೩ ತಿಂಗಳ ನಂತರ ಶಾಲೆ ಬಿಟ್ಟಿದ್ದಾನೆ. ಈತನಿಗೆ ಓದಬೇಕೆಂಬ ಇಷ್ಟ ಇತ್ತಂತೆ. ಆದರೆ ಶಾಲೆಗೆ ಹೋಗುತ್ತಿದ್ದ ರಂಗಸಂದ್ರದ ಹುಡುಗರೆಲ್ಲಾ ಸೇರಿ ಶಾಲೆಯಲ್ಲಿ ದೈಯ ಇರ್ತವೆ ಅಂತಾ ಹೇಳಿ ಬಿಟ್ಟು ಬಿಟ್ರು. ಅವರ ಜೊತೆ ನಾನು ಶಾಲೆ ಬಿಟ್ಟೆ. ಮನೆಯಲ್ಲಿ ಹೋಗು ಅಂದ್ರು, ಆದರೆ ನನ್ನ ಗೆಳೆಯರು ಯಾರೂ ಹೋಗಲ್ಲ ಅಂದ್ರು ಅದಕ್ಕೆ ನಾನು ಹೋಗಲಿಲ್ಲ. ಊರಲ್ಲಿ ಕೆಲಸಕ್ಕೆ ಕರದ್ರೆ ಹೋಗ್ತೀನಿ. ಇಲ್ಲಾ ಅಂದ್ರೆ ಕುಳ್ಳೂರಲ್ಲಿ ತೋಟದ ಕೆಲಸಕ್ಕೆ ಹೋಗ್ತೀನಿ. ನನಗೆ ದಿನಕ್ಕೆ ೫೦ ರೂಪಾಯಿ ಕೂಲಿ ಕೊಡ್ತಾರೆ. ಕೆಲಸ ಇಲ್ಲದ ದಿನ ಊರಲ್ಲಿ ಸುತ್ತುತ್ತೀನಿ ಎನ್ನುತ್ತಾನೆ. ಈತನ ತಾಯಿ ಮಹದೇವಮ್ಮ. ಅಣ್ಣ ಮಣಿಕಂಠ – ೮ನೇ ತರಗತಿಗೆ ಶಾಲೆ ಬಿಟ್ಟು ೩ ವರ್ಷ ಆಗಿದೆ. ಈಗ ಅವನಿಗೆ ೧೭ ವರ್ಷ ಆಗಿದೆ. ಕೂಲಿ ಮಾಡುತ್ತಾನೆ. ತಂಗಿ ಪುಟ್ಟಿ ಶಿಶುವಿಹಾರಕ್ಕೆ ಹೋಗುತ್ತಾಳೆ. ನನ್ನ ಜೊತೆ ಓದಿದವರು ಶಾಲೆ ಬಿಟ್ಟು ಕೂಲಿ ಕೆಲಸ ಮಾಡ್ತಾರೆ. ಈಗ ನಾನು ಕೋಳಿಪಾಳ್ಯದ ಶಾಲೆಗೆ ಸೇರ್ಕೊಂಡು ತಪ್ಪಿಸಿಕೊಳ್ಳದೇ ಓದ್ತೀನಿ ಎನ್ನುತ್ತಾನೆ.

೧೧. ಹಾಲಮ್ಮ ಬಿನ್ ಲೇಟ್. ಬೊಮ್ಮೇಗೌಡ. ೭ನೇ ತರಗತಿ, ರಂಗಸಂದ್ರ, ಚಾಮರಾಜನಗರ ತಾಲ್ಲೂಕು : ೧೪ ವರ್ಷದ ಹಾಲಮ್ಮ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಇವಳು ೭ನೇ ತರಗತಿಗೆ ಶಾಲೆ ಬಿಟ್ಟು ೧ ವರ್ಷ ಆಗಿದ್ದು, ಮನೆಕೆಲಸ ಮಾಡ್ಕೊಂಡು ಈಕೆಯ ಅಕ್ಕನ ಮಗು ನೋಡಿಕೊಳ್ಳುತ್ತಾಳೆ. ಈಕೆಯ ಮತ್ತೊಬ್ಬ ಅಕ್ಕ ಸಂಕಮ್ಮ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (೨೦೦೭ – ೦೮) ೮ನೇ ತರಗತಿ ಓದುತ್ತಿದ್ದು ಮಧ್ಯದಲ್ಲಿ ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದಾಳೆ. ಈಕೆಯ ತಮ್ಮ ಜಡೇಸ್ವಾಮಿ ೬ನೇ ತರಗತಿಗೆ (೨೦೦೭ – ೦೮ರಲ್ಲಿ) ಶಾಲೆ ಬಿಟ್ಟಿದ್ದಾನೆ. ಹಾಲಮ್ಮ ಶಾಲೆ ಬಿಡಲು ಕಾರಣವಾದ ಅಂಶಗಳ ಬಗ್ಗೆ ತಿಳಿಸಿದ್ದು ನಾನು ಹುಡುಗಿಯರ ಹಾಸ್ಟೆಲ್‍ನಲ್ಲಿ ಓದ್ತಿದ್ದೆ. ಮುಂದೆ ಓದಲು ನನಗೆ ಶೂ, ಯೂನಿಫಾರಂ, ಬ್ಯಾಗ್, ನೋಟ್ ಬುಕ್ ಕೊಳ್ಳಲು ದುಡ್ಡು ಇರಲಿಲ್ಲ ಅದಕ್ಕೆ ನಾನು ಓದು ನಿಲ್ಲಿಸಿದೆ ಎಂದು ಹೇಳುತ್ತಾಳೆ. ನನಗೆ ಓದಕ್ಕೆ ಇಷ್ಟವಿದೆ. ಮುಂದೆ ಕೋಳಿಪಾಳ್ಯ ಶಾಲೆಗೆ ಸೇರ್ಕೊಳ್ತಿನಿ ಎನ್ನುತ್ತಾಳೆ.

೧೨. ಮಾದೇಶ. ಎಂ ೪ನೇ ತರಗತಿ, ರಂಗಸಂದ್ರ, ಚಾಮರಾಜನಗರ ತಾಲ್ಲೂಕು : ಮಾದೇವನ ಮಗ ಮಾದೇಶ ಈತ ೬ನೇ ತರಗತಿಗೆ ಶಾಲೆ ಬಿಟ್ಟಿದ್ದು, ಹಾಸನೂರಿನಲ್ಲಿ ಕಾಫಿ ಹಣ್ಣು ಬಿಡಿಸಲು ಹೋಗುತ್ತಾನೆ. ದಿನಕ್ಕೆ ಆತನಿಗೆ ೮೦ ರೂಪಾಯಿ ಕೂಲಿ ಸಿಗುತ್ತದೆ. ಈತನ ಪ್ರಕಾರ ಹಾಸ್ಟೆಲ್‍ನಲ್ಲಿ ಉಳಿಯಕ್ಕೆ ಇಷ್ಟ ಆಗಲಿಲ್ಲ. ಅಲ್ಲಿ ಬೇಜಾರಾಗ್ತಿತ್ತು. ಅದಕ್ಕೆ ಫ್ರೆಂಡ್ಸ್ ಜೊತೆ ಸೇರ್ಕೊಂಡು ಶಾಲೆ ಬಿಟ್ಟಿದ್ದೀನಿ. ಈತನ ಅಣ್ಣ ಬಸವಣ್ಣ ಮುರಾರ್ಜಿ ಶಾಲೆಯಲ್ಲಿ ೮ನೇ ತರಗತಿ ಓದುತ್ತಿದ್ದಾನೆ. ತಮ್ಮ ಶಿವಣ್ಣ ೬ನೇ ತರಗತಿ ರಂಗಸಂದ್ರ ಆಶ್ರಮ ಶಾಲೆಯಲ್ಲಿ ಓದುತ್ತಾನೆ. ತಂಗಿ ಮಂಜುಳ ೩ನೇ ತರಗತಿಯನ್ನು ರಂಗಸಂದ್ರ ಆಶ್ರಮ ಶಾಲೆಯಲ್ಲಿ ಓದುತ್ತಿದ್ದಾಳೆ.

೧೩. ಸಿದ್ದರಾಜಗೌಡ, ೬ನೇ ತರಗತಿ, ಕೋಳಿಪಾಫ್ಯ, ಚಾಮರಾಜನಗರ ತಾಲ್ಲೂಕು : ಕೋಳಿಪಾಳ್ಯ ಗಿರಿಜನ ಆಶ್ರಮ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಗೋವಿಂದ ಮತ್ತು ಕುಂಬಮ್ಮನ ಮಗ ೧೨ ವರ್ಷ ವಯಸ್ಸಿನ ಸಿದ್ದರಾಜೇಗೌಡ ಕೋಳಿಪಾಳ್ಯ ಗಿರಿಜನ ಆಶ್ರಮ ಶಾಲೆಯಲ್ಲಿ ೫ನೇ ತರಗತಿ ಮುಗಿಸಿ, ಚಾಮರಾಜನಗರಕ್ಕೆ ೬ನೇ ತರಗತಿಗೆ (೨೦೦೭ – ೦೮ ರಲ್ಲಿ) ಸೇರಿದ. ಸೇರಿದ ಎರಡು ತಿಂಗಳಲ್ಲಿ ವಿದ್ಯಾರ್ಥಿನಿಲಯದಲ್ಲಿ ಊಟ ಸರಿಯಿಲ್ಲ. ಹೊಟ್ಟೆ ತುಂಬಾ ಊಟ ಕೊಡುವುದಿಲ್ಲವೆಂದು ಶಾಲೆ ಬಿಟ್ಟ ನಂತರ ತನ್ನ ಹುಟ್ಟೂರಾದ ರಂಗಸಂದ್ರ ಅಲೆದಾಡುತ್ತಿದ್ದ ಈ ಹುಡುಗನನ್ನು ರಂಗಸಂದ್ರ ಆಶ್ರಮ ಶಾಲೆಯ ಶಿಕ್ಷಕರು ೨೦೦೭ – ೦೮ನೇ ಸಾಲಿನಲ್ಲಿ ೪ನೇ ತರಗತಿಗೆ ಕೂರಿಸಿರುತ್ತಾರೆ. ಇವನನ್ನು ಮತ್ತೆ ಶಾಲೆಗೆ ಹೋಗುವ ಬಗ್ಗೆ ಕೇಳಿದರೆ ನನಗೆ ಓದಕ್ಕೆ, ಬರೆಯಕ್ಕೆ ಬರಲ್ಲ ಅಂತಾ ಮುರಾರ್ಜಿ ಶಾಲೆಗೆ ಸೇರಿಸ್ಕೊಳ್ಳಲಿಲ್ಲ ಅದಕ್ಕೆ ಬಿಟ್ಟುಬಿಟ್ಟೆ. ಈ ವರ್ಷ ಚೆನ್ನಾಗಿ ಕಲತ್ಕೊಂಡು ಮುಂದಿನ ವರ್ಷ ಮುರಾರ್ಜಿ ಶಾಲೆಗೆ ಸೇರುವುದಾಗಿ ತಿಳಿಸುತ್ತಾನೆ.

೧೪. ಜಡೆಯ, ನೇ ತರಗತಿ ಬೇಡಗುಳಿ ಆಶ್ರಮ ಶಾಲೆ : ಬೇಡಗುಳಿಯ ರಾಮಯ್ಯನ ಪೋಡಿನ ಪೂಜಾರಿ ಬಸವಣ್ಣ ಮತ್ತು ಈರಮ್ಮ ಮಗ ೮ ವಯಸ್ಸಿನ ಜಡೆಸ್ವಾಮಿ ಬೇಡಗುಳಿ ಆಶ್ರಮ ಶಾಲೆಗೆ ದಾಖಲಾಗಿ ಎರಡು ವರ್ಷ ಕಳೆದರೂ ಶಾಲೆಗೆ ಸತತ ಗೈರುಹಾಜರಿಯಾಗಿದ್ದಾನೆ. ಪೋಷಕರು ಶಾಲೆಗೆ ಹೋಗುವಂತೆ ಒತ್ತಾಯ ಮಾಡಿದರೂ ಆತ ಶಾಲೆಗೆ ಹೋಗುತ್ತಿಲ್ಲ. ಮನೆಯಲ್ಲಿ ಕಪ್ಪು – ಬಿಳುಪು ಟಿ.ವಿ. ಇದ್ದು, ಬಾಡಿಗೆಗೆ ಕ್ಯಾಸೇಟ್ ತಂದು ವಾರದಲ್ಲಿ ೩ – ೪ ಸಿನಿಮಾ ನೋಡುತ್ತಾ ಮನೆಯಲ್ಲೇ ಕಾಲ ಕಳೆಯುವುದು ಅಥವಾ ಕಾಡು ಸುತ್ತುವುದು ಅವನಿಗೆ ತುಂಬಾ ಇಷ್ಟ. ಆದರೆ ಶಾಲೆಗೆ ಮಾತ್ರ ಹೋಗಲು ಒಪ್ಪುವುದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ಈತನ ಅಣ್ಣ ಮಹೇಶ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಳಿಪಾಳ್ಯದಲ್ಲಿ ೬ನೇ ತರಗತಿ ಓದುತ್ತಿದ್ದಾನೆ.

೧೫. ಮಾದ, ೨ನೇ ತರಗತಿ, ಹಿರಿಯಂಬಲ, ಕೊಳ್ಳೇಗಾಲ ತಾಲ್ಲೂಕು : ತಂದೆ ಜಡೆಯ, ತಾಯಿ ರಂಗಮ್ಮ ಕೂಲಿ ಜೊತೆಯಲ್ಲಿ ವ್ಯವಸಾಯವನ್ನು ಮಾಡುತ್ತಾರೆ. ಈ ಹುಡುಗನಿಗೆ ೧೦ ವರ್ಷಗಳಾಗಿದ್ದು ಶಾಲೆ ಬಿಟ್ಟು ೨ ವರ್ಷ ಆಗಿದೆ. ತಮ್ಮ ಜಮೀನಿಗೆ ಜೋಳ ಹಾಕಿದಾಗ ಹೊಲ ಕಾಯುತ್ತಾನೆ. ಟಿಬೆಟ್ ಕ್ಯಾಂಪ್‍ನ ಜಮೀನಿನ ಜೋಳಕ್ಕೆ ಗೊಬ್ಬರ ಹಾಕಲು ಹೋಗುವುದಾಗಿ ತಿಳಿಸಿದ್ದಾನೆ. ಉಳಿದ ದಿನಗಳಲ್ಲಿ ತಂದೆ – ತಾಯಿ ಅತ್ತಿಖಾನೆ, ಬೇಡಗುಳಿ, ಕೊಡಗಿನ ಕಾಫಿ ತೋಟಕ್ಕೆ ಹೋಗುತ್ತಾನೆ. ಇತರೆ ಮಕ್ಕಳ ಜೊತೆ ಆಟ ಆಡಿಕೊಂಡು ಕಾಲ ಕಳೆಯುತ್ತಾನೆ. ಈತನಿಗೆ ಓದಲು, ಬರೆಯಲು ಸಮಸ್ಯೆಯಿದ್ದು, ಮುಂದೆ ಓದುವ ಕುರಿತು ಆಸಕ್ತಿ ತೋರುತ್ತಿಲ್ಲ.

ಸಾರಾಂಶ

ಕಳೆದ ೬೦ ವರ್ಷಗಳಿಂದ ಜಿಲ್ಲೆಯ ಬುಡಕಟ್ಟು ಸಮುದಾಯಗಳ ಶಿಕ್ಷಣದ ಸ್ಥಿತಿಯನ್ನು ಅವಲೋಕಿಸಿದಾಗ ಆಶ್ರಮ ಶಾಲೆಗಳಲ್ಲಿ ಓದುತ್ತಿದ್ದ ಶೇಕಡ ೩೦ – ೪೦ ರಷ್ಟು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಶಾಲೆಯನ್ನು ಬಿಟ್ಟಿದ್ದು, ಶೇಕಡ ೫೦ ರಿಂದ ೭೦ ರಷ್ಟು ಮಕ್ಕಳು ಫ್ರೌಡ ಶಿಕ್ಷಣ ಹಂತದಲ್ಲೂ, ಉಳಿದ ಶೇಕಡ ೮ ರಿಂದ ೧೦ ರಷ್ಟು ಬುಡಕಟ್ಟು ಮಕ್ಕಳು ತತ್ಸಮಾನ ಹಂತದಲ್ಲಿ ಶಾಲೆಯನ್ನು ಬಿಡುತ್ತಾರೆ. ಹಾಗಾಗಿ ಈ ಸಮುದಾಯದಲ್ಲಿ ಉನ್ನತ ಶಿಕ್ಷನ ಪಡೆಯುವುದು ಮರೀಚಿಕೆಯಾಗಿದೆ. ಈ ಸಮುದಾಯದ ಹೆಚ್ಚಿನ ಮಕ್ಕಳು ಕನಿಷ್ಟ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪೂರೈಸುವುದಿಲ್ಲ. ಬುಡಕಟ್ಟು ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಆರಂಭವಾಗಿರುವ ಚಾಮರಾಜನಗರ ತಾಲ್ಲೂಕಿನ ರಂಗಸಂದ್ರದ ಆಶ್ರಮ ಶಾಲೆ ಆರಂಭಗೊಂಡು ೬೦ ವರ್ಷ ಕಳೆದರೂ ಇಬ್ಬರನ್ನು ಹೊರತುಪಡಿಸಿ ಮೆಟ್ರಿಕ್ ಪಾಸು ಮಾಡಿದವರು ಯಾರೂ ಇಲ್ಲ. ಆ ಇಬ್ಬರು ಒಂದೇ ಕುಟುಂಬದವರಾಗಿದ್ದು ಒಬ್ಬರು ನರ್ಸಿಂಗ್ ತರಬೇತಿ ಪಡೆಯುತ್ತಿದ್ದು, ಒಬ್ಬರು ಮೆಟ್ರಿಕ್ ಪಾಸು ಮಾಡಿ ಓದು ನಿಲ್ಲಿಸಿದ್ದಾರೆ. ಹಾಗೆಯೇ ಗುಂಡ್ಲುಪೇಟೆ ತಾಲ್ಲೂಕಿನ ಮದ್ದರೂ ಕಾಲೋನಿ ಆಶ್ರಮ ಶಾಲೆ ಆರಂಭಗೊಂಡು ೫೦ ವರ್ಷಗಳಾಗಿದ್ದು, ಈ ಶಾಲೆಯಲ್ಲಿ ಓದಿದವರಲ್ಲಿ ಒಬ್ಬರು ಸ್ನಾತಕೊತ್ತರ ಪದವಿ ಮಾಡಿದ್ದು, ಒಬ್ಬರು ಪದವಿಯನ್ನು, ಇಬ್ಬರು ಪಿಯುಸಿ ಮುಗಿಸಿ ಎ.ಎನ್.ಎಂ. ತರಬೇತಿಯನ್ನು ಪಡೆಯುತ್ತಿದ್ದಾರೆ. ೬ ಮಂದಿ ಎಸ್.ಎಸ್.ಎಲ್.ಸಿ ಫೇಲಾಗಿದ್ದಾರೆ, ಈ ಕಾಲೋನಿಯ ಮಹಿಳೆಯೊಬ್ಬರು ಎಂ.ಎ (ಸಮಾಜಶಾಸ್ತ್ರ) ಮಾಡಿದ್ದು, ಬೆಂಗಳೂರಿನಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊಳ್ಳೇಗಾಲ ತಾಲ್ಲೂಕಿನ ಗಾಣಿಗಮಂಗಲ ಆಶ್ರಮ ಶಾಲೆಯು ಆರಂಭವಾಗಿ ೪೦ ವರ್ಷಗಳಾಗಿದ್ದು, ಈ ಶಾಲೆಯಲ್ಲಿ ಓದಿದ ಮಕ್ಕಳಲ್ಲಿ ೪ ಮಕ್ಕಳು ಮೆಟ್ರಿಕ್ ಶಿಕ್ಷಣವನ್ನು ಮುಗಿಸಿ ವ್ಯವಸಾಯ ಮತ್ತು ಕೂಲಿ ಕೆಲಸಗಳನ್ನು ಮಾಡುತ್ತಿದ್ದು, ೧೪ ಯುವಕ / ಯುವತಿಯರು ಪದವಿಪೂರ್ವ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಒಬ್ಬರು ಡಿ.ಎಡ್ ತರಬೇತಿ ಮುಗಿಸಿ, ಈ ಶಾಲೆಯಲ್ಲೇ ಹೊರವಲಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಮತ್ತೊಬ್ಬರು ಪಿಯುಸಿ ಮುಗಿಸಿ ಜೀರಿಗೆಗದ್ದೆ ಆಶ್ರಮ ಶಾಲೆಯಲ್ಲಿ ಹೊರವಲಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಪುರಾಣಿಪೋಡು ಆಶ್ರಮ ಶಾಲೆಯಲ್ಲಿ ಮುಖ್ಯ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದಾರೆ.

ಆಶ್ರಮ ಶಾಲೆಗಳು ಬುಡಕಟ್ಟು ಮಕ್ಕಳ ಮನವೊಲಿಸುವಿಕೆಯಲ್ಲಿ ಬಹಳ ಹಿಂದಿದ್ದು, ಈ ಮಕ್ಕಳ ಕಲಿಕೆಯಲ್ಲಿ ಕಡಿಮೆ ಮಟ್ಟದ ಸಾಧನೆಯನ್ನು ಕಾಣಬಹುದು. ಅಲ್ಲದೆ ಪೋಷಕರ ಉದಾಸೀನತೆ ಮತ್ತು ಸಾಂಸ್ಕೃತಿಕ ವೈರುದ್ಯಗಳೆರಡು ಮುಖ್ಯವಾದ ವಿಷಯಗಳಾಗಿದ್ದು ಇವುಗಳ ಬಗ್ಗೆ ಒಲವು ತೋರಬೇಕು. ಈ ರೀತಿಯ ಒಲವಿನಿಂದ ಮಕ್ಕಳ ದಾಖಲಾತಿ ಹೆಚ್ಚಾಗುವುದಲ್ಲದೆ, ಶಿಕ್ಷಣದ ಮಟ್ಟ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ರೋತ್ ಮತ್ತು ರಾವ್ ವ್ಯಕ್ತಪಡಿಸಿದ್ದಾರೆ (ರೌತ್ ೧೯೮೫ ; ರಾವ್ ೧೯೯೭). ಹೆಚ್ಚಿನ ಗಿರಿಜನ ಮಕ್ಕಳು ಶಾಲೆ ಬಿಡುವುದಕ್ಕೆ ಕಾರನ ಪೋಷಕರ ಅನಕ್ಷರತೆ ಹಾಗೂ ಪೋಷಕರ ಸಹಕಾರವಿಲ್ಲದಿರುವುದು. ಮಕ್ಕಳು ಹಬ್ಬ ಹಾಗೂ ಋತುವಿನ ಕಾಲದಲ್ಲಿ ಹೆಚ್ಚು ಗೈರು ಹಾಜರಿಯಾಗುತ್ತಾರೆ. ಅಲ್ಲದೆ ಮಕ್ಕಳು ಶಾಲೆಯಲ್ಲಿ ತಮ್ಮದಲ್ಲದ ಭಾಷಾ ಮಾಧ್ಯಮದ ಮೂಲಕ ಕಲಿಯಬೇಕಾಗಿರುವುದು ಸಮಸ್ಯೆಯಾಗಿದೆ. ಶಿಕ್ಷಕರಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಅನುಪಾಲನೆ ಇಲ್ಲದಿರುವುದಿಲ್ಲ ಈ ಕಾರಣದಿಂದಾಗಿ ಆಶ್ರಮ ಶಾಲೆಗಳಲ್ಲಿ ಗಿರಿಜನ ಮಕ್ಕಳು ಶಾಲೆಯನ್ನು ಅರ್ಧದಲ್ಲೇ ಬಿಡುತ್ತಾರೆ (ಟೋಪ್ : ೧೯೭೦). ಈ ರೀತಿಯ ಅಸಹಕಾರದ ಸ್ಥಿತಿ ಕಳೆದ ೩೦ ವರ್ಷಗಳ ನಂತರವೂ ಹೆಚ್ಚಿನ ಪ್ರಮಾಣದಲ್ಲಿದೆ. ಇದಕ್ಕೆ ಮುಖ್ಯವಾದ ಕಾರನ ಮುಖ್ಯವಾಗಿ ಶಾಲೆ ಮತ್ತು ಸಮುದಾಯಗಳ ನಡುವೆ ಉತ್ತಮ ಮುಖ್ಯವಾದ ಕಾರಣ ಮುಖ್ಯವಾಗಿ ಶಾಲೆ ಮತ್ತು ಸಮುದಾಯಗಳ ನಡುವೆ ಉತ್ತಮ ಸಂಬಂಧಗಳಿಲ್ಲದಿರುವುದು. ಓದಿದ ಕೆಲವು ಮಂದಿಯು ಪೋಷಕರಂತೆಯೇ ದುಡಿಯುತ್ತಿದ್ದು, ಅವರ ಬದುಕಿನಲ್ಲಿ ಯಾವುದೇ ಬದಲಾವಣೆಗಳನ್ನು ಕಾಣಲು ಸಾಧ್ಯವಾಗಿಲ್ಲದಿರುವುದು ಕೂಡ ಇವತ್ತು ಮಕ್ಕಳು ಶಾಲೆಗೆ ಹೋಗಲು ಪೋಷಕರು ಸಹಕಾರ ನೀಡದಿರುವುದನ್ನು ಕಾಣಬಹುದು. ಮೊದಲಿಗಿಂತಲೂ ಪ್ರಸ್ತುತದಲ್ಲಿ ಹೆಚ್ಚು ಮಕ್ಕಳು ಕುಟುಂಬದ ಸಂಪಾದನೆಯ ಭಾಗವಾಗಿದ್ದು, ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂಬ ಕಾರಣದಿಂದಲೂ ಮಕ್ಕಳನ್ನು ಶಾಲೆಗೆ ಹೋಗುವಂತೆ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಕಡಿಮೆಯಿದೆ. ಅಲ್ಲದೆ ಶಾಲೆಗೆ ಬಂದಂತಹ ಮಕ್ಕಳಿಗೆ ಶಾಲೆಯಲ್ಲಿ ಬೋಧನೆಗಾಗಿ ಕಾಯಬೇಕಾಗಿರುವುದು, ಬೋಧನೆಯು ಗುಣಮಟ್ಟದಿಂದ ಕೂಡದಿರುವುದು ಕೂಡ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವಾಗಿದೆ. ಆಶ್ರಮ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರು ಬುಡಕಟ್ಟು ಸಮುದಾಯಗಳ ಮಕ್ಕಳು ಹಾಗೂ ಪೋಷಕರ ಬಗ್ಗೆ ಹೊಂದಿರುವ ತಾತ್ಸಾರದ ಮನೋಭಾವವು ಕೂಡ ಕಾರಣವಾಗಿದೆ.

ಸಂಜಯ್ ಕೆ ರಾ‍ಯ್‍ರವರು ಭಾರತದ ಬುಡಕಟ್ಟು ಶಿಕ್ಷಣ ಮತ್ತು ಲಿಂಗ ಪ್ರಶ್ನೆ ಎಂಬ ಅಧ್ಯಯನದಲ್ಲಿ ಟೋಪ್‍ರವರ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಮೊದಲನೆಯದಾಗಿ ಈ ಸಮುದಾಯದಲ್ಲಿ ತಂದೆ – ತಾಯಿ ಕೆಲಸಕ್ಕಾಗಿ ಹೊರಗೆ ಹೋಗುವುದರಿಂದ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಶಾಲೆಗೆ ಹೋಗುವ ಮಕ್ಕಳ ಮೇಲೆ ಇರುತ್ತದೆ. ಎರಡನೆಯದಾಗಿ ಮಕ್ಕಳು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿದ್ದು, ಪಶುಪಾಲನೆ ಮುಂತಾದ ಕೆಲಸಗಳನ್ನು ನಿರ್ವಹಿಸುವ ಮೂಲಕ ದುಡಿಯಬೇಕಾಗಿರುವುದು ಹಾಗೂ ಕಾಡಿನಿಂದ ಒಣ ಎಲೆ ಹಾಗೂ ಸೌದೆಯನ್ನು ಸಂಗ್ರಹಿಸಬೇಕಾಗಿರುವ ಜವಾಬ್ದಾರಿಯು ಶಾಲೆಗೆ ಹೋಗುವ ಮಕ್ಕಳ ಮೇಲಿದೆ. ನಾಲ್ಕನೆಯದಾಗಿ ತಮ್ಮ ಸಾಂಪ್ರದಾಯಿಕವಾದ ಕೆಲಸಗಳ ನಿಪುಣತೆಯ ಬಗ್ಗೆ ಮಕ್ಕಳಿಗೆ ಹೇಳಿಕೊಡುವ ಸಲುವಾಗಿ ತಮ್ಮ ಜೊತೆ ಕರೆದುಕೊಂಡು ಹೋಗುತ್ತಾರೆ ಎಂಬುದಾಗಿ ತಿಳಿಸಿದ್ದಾರೆ (ಸಂಜಯ್ ಕೆ ರಾಯ್, ೨೦೦೫ : ೬೧).

ಗಿರಿಜನ ಆಶ್ರಮ ಶಾಲೆಗಳಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ತೆರೆಯುವುದು. ಶಾಲೆಗಳಲ್ಲಿ ಮಕ್ಕಳ ಕಲಿಕೆ ಓದು, ಬರಹಕ್ಕೆ ಸೀಮಿತವಾಗದೇ ಅವರ ಬದುಕನ್ನು ರೂಪಿಸಿಕೊಳ್ಳುವಂತಹ ಶಿಕ್ಷಣವನ್ನು ಕೊಡಬೇಕು. ಉದಾ ; ಹೊಲಿಗೆ ತರಬೇತಿ, ಕಾಡಿನ ಉಪ ಉತ್ಪನ್ನದ ಸಂಗ್ರಹ ಮತ್ತು ನಿರ್ವಹಣೆ, ಮಾರಾಟ, ಗಿಡಮೂಲಿಕೆಯ ಔಷಧಿಯ ಜ್ಞಾನದ ಬಳಕೆ ಇತ್ಯಾದಿ. ಬುಡಕಟ್ಟು ಸಮುದಾಯದ ಮಕ್ಕಳಲ್ಲಿರುವ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡಬೇಕು. ಅವರ ಜಾನಪದ ಹಾಡು, ಕುಣಿತ ಹಾಗೂ ಕಲೆ ಮತ್ತು ಕೌಶಲ್ಯಗಳಿಗೆ ಆದ್ಯತೆ ನೀಡಬೇಕು. ಈಗಾಗಲೇ ಶಿಕ್ಷಣ ಪಡೆದು ಮನೆಯಲ್ಲಿರುವ ಯುವ ಸಮುದಾಯಕ್ಕೆ ಜೀವನ ರೂಪಿಸಿಕೊಳ್ಳುವ ತರಬೇತಿ ಹಾಗೂ ಆರ್ಥಿಕ ಸಹಾಯ ಮಾಡಬೇಕು. ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡಬೇಕಾದ ಅವಶ್ಯಕತೆಯಿದೆ. ಇಂತಹ ಪ್ರಯತ್ನದಲ್ಲಿ ಒರಿಸ್ಸಾದ ಆದಿವಾಸ ಕಳಿಂಗ ವಿಶ್ವವಿದ್ಯಾಲಯ ಯಶಸ್ವಿಯಾಗಿರುವುದನ್ನು ಕಾಣಬಹುದಾಗಿದೆ. ಅರಣ್ಯದಲ್ಲಿ ವಾಸಮಾಡುವ ಗಿರಿಜನರ ಜನವಸತಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಜೊತೆಗೆ, ಇನ್ನೂ ಹೆಚ್ಚಿನ ವಸತಿ ಶಾಲೆಗಳನ್ನು ತೆರೆಯಲು ಸರ್ಕಾರ ಗಮನ ಕೊಡಬೇಕು. ಇಲ್ಲದಿದ್ದರೆ ೬ – ೧೪ ವವೋಮಾನದ ಮಕ್ಕಳ ಶಿಕ್ಷಣದ ಹಕ್ಕನ್ನು ವಂಚಿಸಿದಂತಾಗುತ್ತದೆ. ಆಶ್ರಮ ಶಾಲೆಗಳಲ್ಲಿ ಬೋಧನೆಗೆ ನೇಮಕಗೊಂಡಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಂದ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಬೇಕಿದೆ. ಅವರಿಗೆ ತರಬೇತಿಯನ್ನು ನೀಡಿ ಬೋಧನೆ ಮಾಡಲು ಬಿಡುವುದು ಸೂಕ್ತ ಜೊತೆಗೆ ವೃತ್ತಿ ತರಬೇತಿ ಹೊಂದಿದ ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳಬೇಕಿದ್ದು, ವಿದ್ಯಾರ್ಥಿನಿಲಯದಲ್ಲಿ ಮಹಿಳಾ ನಿಲಯಪಾಲಕರನ್ನು ನೇಮಿಸುವುದು ಅಗತ್ಯವಿದೆ. ಅಲ್ಲದೆ ಶೈಕ್ಷಣಿಕವಾದ ಅನುಪಾಲನೆ ಬಹಳ ಮುಖ್ಯವಾಗುತ್ತದೆ. ಈ ವಿಷಯಗಳ ಬಗ್ಗೆ ಸರ್ಕಾರ ಹಾಗೂ ಸಮಾಜ ಕಲ್ಯಾಣ / ಬುಡಕಟ್ಟು ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ತುರ್ತು ಗಮನ ಹರಿಸಬೇಕಾಗಿದೆ.

ಮಕ್ಕಳ ಮನೆಯ ಆರ್ಥಿಕ ಸಮಸ್ಯೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಆದ್ಯತೆಯನ್ನು ಕೊಡುವುದಿಲ್ಲ ಕುಟುಂಬಗಳು ವಲಸೆ ಹೋದಾಗ ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು (ಮನೆಯ ಕೆಲಸ, ದನ, ಕುರಿ ಮೇಯಿಸುವುದು, ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಇತ್ಯಾದಿ) ಹೊರಿಸಿ ಕೆಲವು ತಿಂಗಳು ದುಡಿಯಲು ಹೊರಗೆ ಹೋಗುತ್ತಾರೆ. ತಂದೆ – ತಾಯಿ ಅಕಾಲಿಕ ಮರಣ ಹೊಂದಿದಾಗ ಹಾಗೂ ಹೆಣ್ಣು ಮಕ್ಕಳು ಋತುಮತಿಯರಾದಾಗ ಹೆಚ್ಚು ಶಾಲೆಯನ್ನು ಬಿಡುತ್ತಾರೆ. ಹೀಗೆ ವಿವಿಧ ಕಾರಣಗಳಿಗಾಗಿ ಶಾಲೆ ಬಿಡುವ ಮಕ್ಕಳು ತಮ್ಮ ಜೊತೆಯ ಸಹಪಾಠಿಗಳು ಶಾಲೆ ಬಿಟ್ಟು ಆಡು, ಕುರಿ, ದನ ಮೇಯಿಸುವುದು ಹಾಗೂ ಊರು / ಕಾಡಲ್ಲಿ ಸುತ್ತಾಡುವುದನ್ನು ನೋಡಿ ತಾವು ಶಾಲೆ ಬಿಟ್ಟು ಅವರ ಜೊತೆ ಸೇರುತ್ತಾರೆ. ಕಾಡಲ್ಲಿ ಸಿಗುವ ನೆಲ್ಲಿ ಕಾಯಿ, ಪಾಸೆ, ಜೇನು ಕೀಳಲು ಹಾಗೂ ಬೇಸಿಗೆಯಲ್ಲಿ ಸಿಗುವ ಲವಂಗದ ಮಗ್ಗು ಸಂಗ್ರಹಿಸಿ ಮಾರುವುದರಿಂದ, ತೋಟಗಳಲ್ಲಿ ಮಾಡುವ ಕೆಲಸಗಳಿಂದ ಮಕ್ಕಳಿಗೆ ಹಣ ಸಿಗುತ್ತದೆ. ಈ ಕುರಿತು ಪೋಷಕರಿಗೆ ಅರಿವು ಮೂಡಿಸಬೇಕು.