ಪೀಠಿಕೆ

ಯಾವುದೇ ಒಂದು ರಾಷ್ಟ್ರದ ಆದರ್ಶ ಕಲ್ಪನೆಗಳು, ಸಾಂಸ್ಕೃತಿಕ ಮೌಲ್ಯಗಳು, ಆರ್ಥಿಕ ಹಾಗೂ ಸಾಮಾಜಿಕ ಒಲವು ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಸಮಾಜದಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣವು ಪ್ರಜಾಪ್ರಭುತ್ವದ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತವೆ. ವ್ಯಕ್ತಿಯ ಸಂಸ್ಕೃತಿ, ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಒಲವು, ಸಾಮಾಜಿಕ ಒತ್ತಡ ಹೇಗೆ ವೈಯಕ್ತಿಕವಾಗಿ ಪ್ರಭಾವ ಬೀರುತ್ತದೆ ಎಂಬುದನ್ನು ಶಿಕ್ಷಣದ ಮೂಲಕ ಅರ್ಥಮಾಡಿಕೊಳ್ಳಬಹುದು. ಶಿಕ್ಷಣವು ಒಂದು ಸಾಮಾಜಿಕ ಸಂಸ್ಥೆಯಾಗಿದ್ದು, ವೈಜ್ಞಾನಿಕ ಚಿಂತನೆಗೆ ಒರೆ ಹಚ್ಚುವುದಲ್ಲದೆ, ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ, ವ್ಯಕ್ತಿಯ ಭಾಷೆ, ಸಂಸ್ಕೃತಿಯ ಉಳುವಿಗಾಗಿ ಕೆಲಸ ಮಾಡುತ್ತದೆ. ಹಾಗಾಗಿ ಶಿಕ್ಷಣ ಕೇವಲ ಜ್ಞಾನ ಸಂಪತ್ತಿನ ಕೇಂದ್ರವಾಗಿರದೆ, ಮಕ್ಕಳಿಗೆ ಭವಿಷ್ಯವನ್ನು ಎದುರಿಸಲು ಅಗತ್ಯವಾದ ಕಲೆ ಮತ್ತು ನೈಪುಣ್ಯತೆ ಹಾಗೂ ಮನೋಭಾವವನ್ನು ಬೆಳೆಸುವ ಕೇಂದ್ರವಾಗಿ ಕೆಲಸ ನಿರ್ವಹಿಸುತ್ತದೆ. ಈ ಮೌಲ್ಯಗಳನ್ನು ಬೆಳೆಸುವಲ್ಲಿ ಸ್ವಾತಂತ್ರ್ಯಾ ಪೂರ್ವದಲ್ಲಿ ಬುಡಕಟ್ಟು ಸಮುದಾಯಗಳಲ್ಲಿ ಯಾವುದೇ ಶೈಕ್ಷಣಿಕ ಸಂಸ್ಥೆಗಳು ಇರಲಿಲ್ಲ. ಬುಡಕಟ್ಟು ಸಮುದಾಯಗಳ ಸಾಮಾಜೀಕರಣ ಪ್ರಕ್ರಿಯೆಯಲ್ಲಿ ತಮ್ಮ ಪಾರಂಪರಿಕ ಮೌಲ್ಯಗಳು, ಕೌಶಲ್ಯಗಳು ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಮೌಖಿಕವಾಗಿ ಕುಟುಂಬ ಅಥವಾ ಸಮುದಾಯಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಅನೌಪಚಾರಿಕವಾಗಿ ಬೆಳೆಸಿಕೊಂಡು ಬಂದಿದೆ.

ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಸವಾಲು ನಮ್ಮ ಮುಂದೆ ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ದಿನಗಳಿಂದ ಇದೆ. ನಮ್ಮ ದೇಶದೊಂದಿಗೆ ಸ್ವತಂತ್ರಗೊಂಡ ಹಲವಾರು ದೇಶಗಳು ಸಾರ್ವತ್ರೀಕರಣವನ್ನು ಸಾಧಿಸಿ ಮುಂದೆ ಹೆಜ್ಜೆ ಇಟ್ಟಿವೆ. ಆದರೆ ನಮ್ಮ ದೇಶದ ಸಾಧನೆ ಅಪೇಕ್ಷಿತ ಮಟ್ಟಕ್ಕಿಂತ ಕಡಿಮೆ ಎಂದೇ ಹೇಳಬಹುದು. ಅರ್ಧ ಶತಮಾನಗಳ ನಂತರವೂ ಅದರಲ್ಲು ಶಿಕ್ಷಣವನ್ನು ಮೂಲಭೂತ ಹಕ್ಕಾಗಿಸಿದರೂ ತಳ ಸಮುದಾಯದ ಜನ ವರ್ಗಗಳಿಗೆ ಅದರಲ್ಲು ಬುಡಕಟ್ಟು ಸಮುದಾಯಗಳಿಗೆ ಶಿಕ್ಷಣದ ಅವಕಾಶವನ್ನು ಕಲ್ಪಿಸದಿರುವುದು ಆಘಾತಕಾರಿಯಾದ ವಿಷಯವಾಗಿದೆ. ಬುಡಕಟ್ಟು ಸಮುದಾಯಗಳ ಆರ್ಥಿಕ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಬಹಳ ಮುಖ್ಯವಾದ ವಿಷಯವಾಗಿದೆ. ಶಿಕ್ಷಣದಿಂದ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚುವುದಲ್ಲದೆ, ವ್ಯಕ್ತಿಯ ಸಾಮಾಜಿಕ ಪ್ರಗತಿಯೂ ಆಗುತ್ತದೆ. ಅಭಿವೃದ್ಧಿಗೆ ಶಿಕ್ಷಣ ಒಂದು ಮುಖ್ಯ ವಿಷಯವಾಗಿದ್ದು, ಬುಡಕಟ್ಟು ಸಮುದಾಯಗಳ ಪ್ರಗತಿ ಅವರಿಗೆ ಕೊಡುವ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಈ ದಿಶೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬುಡಕಟ್ಟು ಸಮುದಾಯಗಳ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು ವಿವಿಧ ಬುಡಕಟ್ಟು ಪ್ರದೇಶಗಳಲ್ಲಿ ಆಶ್ರಮ ಶಾಲೆಗಳನ್ನು ಆರಂಭಿಸಿದೆ. ಆದರೆ ಬುಡಕಟ್ಟು ಸಮುದಾಯದ ಶಿಕ್ಷಣವನ್ನು ಸಾಮಾನ್ಯ ಶಿಕ್ಷಣದ ಜೊತೆ ಹೋಲಿಸಿದಾಗ ಹೇಳಿಕೊಳ್ಳುವಂತಹ ಬದಲಾವಣೆಗಳೇನೂ ಆಗಿಲ್ಲ. ಆರರಿಂದ ಹದಿನಾಲ್ಕು (೬ – ೧೪) ವಯೋಮಾನದ ಎಲ್ಲಾ ಮಕ್ಕಳು ಶಾಲೆಯಲ್ಲಿರಬೇಕು, ಶಾಲೆಯಲ್ಲಿರುವ ಎಲ್ಲಾ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ಸಿಗಬೇಕೆಂದು ಸರ್ವ ಶಿಕ್ಷಣ ಅಭಿಯಾನದ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಆಶಯಗಳನ್ನು ಈಡೇರಿಸಲು ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಚಿಣ್ಣರ ಅಂಗಳ ಕಾರ್ಯಕ್ರಮಗಳು ಹಾಗೂ ಕಲಿಕಾ ಖಾತ್ರಿ ಯೋಜನೆಗಳ ಮೂಲಕ ಶಾಲೆಯಿಂದ ಹೊರಗುಳಿದ ಹಾಗೂ ಶಾಲೆಗೆ ಗೈರುಹಾಜರಿಯಾಗುವ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನಗಳಾಗಿದೆ. ಈ ಪ್ರಯತ್ನಗಳನ್ನು ದೇಶದಾದ್ಯಂತ ಮಾಡಲಾಗಿದ್ದರೂ ಬಹುಪಾಲು ಗಿರಿಜನ ಪ್ರದೇಶಗಳಲ್ಲಿ ಯಶಸ್ವಿಯಾಗಿಲ್ಲ. ಇವತ್ತಿಗೂ ದೇಶದಲ್ಲಿ ೮೧ ಲಕ್ಷ ಬುಡಕಟ್ಟು ಮಕ್ಕಳು ಶಾಲೆಯಿಂದ ಹೊರಗುಳಿದ್ದಾರೆ. ಈ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಆರಂಭವಾದ ಆಶ್ರಮ ಶಾಲೆಗಳ ಮೂಲ ಆಶಯಗಳು ಅನುಷ್ಟಾನದಲ್ಲಿವೆಯೇ. ಇಲ್ಲವೇ? ಆಶ್ರಮ ಶಾಲೆಗಳ ಶಿಕ್ಷಕ ಮತ್ತು ಮಕ್ಕಳ ನಡುವಿನ ಬಾಂಧವ್ಯ ಶಿಕ್ಷಕ ಮತ್ತು ಅಧಿಕಾರಿಗಳ ವೃತ್ತಿ ಬದ್ಧತೆ ಹಾಗೂ ಶಾಲಾ ಶಿಕ್ಷಣದಲ್ಲಿ ಪೋಷಕರ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕಿದೆ. ಆಶ್ರಮ ಶಾಲೆಗಳಲ್ಲಿ ಮಕ್ಕಳ ಗೈರುಹಾಜರಿ ಹಾಗೂ ಶಾಲೆ ಬಿಡುವ ಪ್ರಮಾಣ ಹೆಚ್ಚಾಗಿರಲು ಕಾರಣಗಳೇನು? ಮಕ್ಕಳ ವಾಸ್ತವದ ಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಈ ಅಧ್ಯಯನವನ್ನು ಮಾಡಲಾಗಿದೆ.

ಬುಡಕಟ್ಟು ಸಮುದಾಯಗಳು ಸಾಂಸ್ಕೃತಿಕವಾಗಿ ವಿಶಿಷ್ಟವಾಗಿದ್ದರೂ ಆರ್ಥಿಕವಾಗಿ, ಸಾಮಾಜಿಕವಾಗಿ, ಭಾಷಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿವೆ. ಸಾಮಾನ್ಯ ಜನ ಸಮುದಾಯದ ಮಕ್ಕಳ ದಾಖಲಾತಿ ಮತ್ತು ಹಾಜರಾತಿಗೆ ಹೋಲಿಸಿದಾಗ ಈ ಸಮುದಾಯಗಳ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ಸಮಸ್ಯೆಗಳಿವೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಬುಡಕಟ್ಟು ಸಮುದಾಯದ ಮಕ್ಕಳ ದಾಖಲಾತಿಯಲ್ಲಿ ಬದಲಾವಣೆಗಳಾದರೂ ಶಾಲೆಯಿಂದ ಹೊರಗುಳಿಯುವ ಪ್ರಮಾಣ ಹೆಚ್ಚಿದೆ. ಅದರಲ್ಲೂ ಹೆಣ್ಣು ಮಕ್ಕಳ ಗೈರುಹಾಜರಿ ಹಾಗೂ ಶಾಲೆ ಬಿಡುವ ಪ್ರಮಾಣ ಜಾಸ್ತಿಯಿದೆ. ಸುಜಾತರವರು ಆಂಧ್ರ ಪ್ರದೇಶದ ಬುಡಕಟ್ಟು ಪ್ರದೇಶಗಳ ಮಕ್ಕಳು ಹೆಚ್ಚು ಶಾಲೆಯಿಂದ ಹೊರಗುಳಿಯುತ್ತಿರುವ ಬಗ್ಗೆ ಚರ್ಚಿಸಿ, ಅದಕ್ಕೆ ಕಾರಣಗಳನ್ನು ತಿಳಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಬುಡಕಟ್ಟು ಮಕ್ಕಳ ಕಲಿಕೆಯನ್ನು ಬುಡಕಟ್ಟೇತರ ಮಕ್ಕಳ ಕಲಿಕೆಗೆ ಹೋಲಿಸಿದಾಗ ಮಕ್ಕಳ ಕಲಿಕಾ ಪ್ರಗತಿ ಬಹಳ ಕಡಿಮೆಯಿದ್ದು ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವಾಗಿದೆ ಎಂಬುದಾಗಿ ತಿಳಿಸಿದ್ದಾರೆ (ಸುಜಾತ, ೧೯೮೭). ಬುಡಕಟ್ಟು ಸಮುದಾಯದಲ್ಲಿ ಹೆಣ್ಣು ಮಕ್ಕಳು ಶಾಲೆ ಬಿಡುವ ಕುರಿತು ಕಾಥಗನ್ ಜಿಲ್ಲೆಯ ಅಧ್ಯಯನ ವರದಿಯೊಂದರಲ್ಲಿ ತಿಳಿಸಿರುವಂತೆ ಪೋಷಕರು ಹೆಣ್ಣು ಮಕ್ಕಳನ್ನು ಮನೆಯ ಕೆಲಸಗಳ ನಿರ್ವಹಣೆ ಮಾಡಲು, ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಹಾಗೂ ಮಕ್ಕಳನ್ನು ಆರ್ಥಿಕ ಕೆಲಸಗಳಲ್ಲಿ ಬಳಸಿಕೊಳ್ಳುವುದಕ್ಕೆ ಶಾಲೆ ಬಿಡಿಸ ತಿಳಿಸಿದೆ (ವಾಸವಿ, ೨೦೦೦). ಗೀತಾ ನಂಬೀಸನ್‍ರವರು ತಿಳಿಸಿರುವಂತೆ ಮಕ್ಕಳು ಶಾಲೆಯಿಂದ ಹೊರಗುಳಿಯುವಿಕೆಗೆ ಮಕ್ಕಳ ಕಡಿಮೆ ಕಲಿಕೆಯಾಗಿದ್ದು, ಈ ಕಡಿಮೆ ಕಲಿಕೆಗೆ ಕಾರಣ ಮಕ್ಕಳು ತಮ್ಮದಲ್ಲದ ಭಾಷೆಯೊಂದರ ಮೂಲಕ ಕಲಿಯುವುದಾಗಿದೆ. ಏಕೆಂದರೆ ಬುಡಕಟ್ಟು ಸಮುದಾಯ ಮಕ್ಕಳ ಪರಿಸರ, ಸಂಸ್ಕೃತಿ, ಭಾಷೆಗೂ, ಶಾಲೆಯಲ್ಲಿ ಬೋಧನೆ ಮಾಡುವ ಭಾಷೆಗೂ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ (ಗೀತಾ ನಂಬೀಸನ್, ೨೦೦೦).

ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು ಬುಡಕ್ಟ್ತು ಶಿಕ್ಷಣಕ್ಕೆ ಒತ್ತು ಕೊಡುವದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಹಾಗಾಗಿ ಗಿರಿಜನ ಮಕ್ಕಳ ಶಿಕ್ಷಣಕ್ಕಾಗಿ ಅವರು ವಾಸಿಸುವ ಪ್ರದೇಶಗಳಲ್ಲಿಯೇ ಆಶ್ರಮ ಶಾಲೆಗಳನ್ನು ಆರಂಭಿಸಲಾಗಿದ್ದು, ಮಕ್ಕಳಿಗೆ ವಸತಿ, ಉಚಿತ ಊಟ, ಬಟ್ಟೆ, ಪಠ್ಯಪುಸ್ತಕ, ಲೇಖನ ಸಾಮಗ್ರಿಗಳು ಹಾಗೂ ವಿದ್ಯಾರ್ಥಿ ವೇತನ ಇವೆ ಮುಂತಾದ ಪ್ರೋತ್ಸಾಹದಾಯಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೂ ಮಕ್ಕಳ ಗೈರು ಹಾಜರಿ ಹಾಗೂ ಶಾಲೆ ಬಿಡುವ ಪ್ರಮಾಣ ಕಡಿಮೆಯಾಗಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳಿದ್ದು, ಅವುಗಳನ್ನು ಇಲ್ಲಿ ಚರ್ಚಿಸುವುದು ಮುಖ್ಯವಾಗುತ್ತದೆ. ಬುಡಕಟ್ಟು ಸಮುದಾಯಗಳಲ್ಲಿರುವ ಬಡತನ, ಆರ್ಥಿಕ ಹಿಂದುಳಿಯುವಿಕೆ, ಕಡಿಮೆ ಸಂಪಾದನೆ, ಅರಣ್ಯ ಉತ್ಪನ್ನಗಳ ಮೇಲಿನ ಅವಲಂಬನೆ, ಋತುಮಾನದ ವಲಸೆ, ಅವರ ಮೇಲೆ ನಡೆಯುವ ಹಲವಾರು ದೌರ್ಜನ್ಯಗಳು ಇವೇ ಮುಂತಾದ ಕಾರಣಗಳಿಂದಾಗಿ ಇವತ್ತಿಗೂ ಬುಡಕಟ್ಟು ಸಮುದಾಯದ ಎಲ್ಲಾ ಮಕ್ಕಳಿಗೂ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ. ಬುಡಕಟ್ಟು ಸಮುದಾಯಗಳ ಶಿಕ್ಷಣ ಸುಧಾರಣೆಗಾಗಿ ದೇಶದ್ಯಾದಂತ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನ ಮಾಡಲಾಗಿದ್ದರೂ ಬುಡಕಟ್ಟು ಸಮುದಾಯಗಳ ಶೈಕ್ಷಣಿಕ ಪ್ರಗತಿ ಮಟ್ಟದಲ್ಲಿ ಇಲ್ಲ. ಬುಡಕಟ್ಟು ಸಮಾಜದಲ್ಲಿ ಬಹುಪಾಲು ಪೋಷಕರಿಗೆ ವೈಯಕ್ತಿಕವಾದ ಕಷ್ಟಗಳಲ್ಲಿ ಶಿಕ್ಷಣ ಅಸನೀಯವಾದ ಹೊರೆ ಎನಿಸಿರುತ್ತದೆ. ಕೆಲವರಿಗೆ ಈಗಾಗಲೆ ಓದಿರುವವರೇ ಕೆಲಸ ಇಲ್ಲದೆ ಕೂಲಿ ಮಾಡುತ್ತಿದ್ದಾರೆ. ಇನ್ನೂ ಇವರು ಓದಿ ಉದ್ದಾರವಾಗಬೇಕಾದುದ್ದು ಏನು ಇಲ್ಲ ಎಂಬ ಅಭಿಪ್ರಾಯವಿದೆ. ಕೆಲವು ಕುಟುಂಬದ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆತು, ಒಳ್ಳೆಯ ಕೆಲಸ ಸಿಕ್ಕಿ ಉತ್ತಮ ಜೀವನ ನಡೆಸುತ್ತಿದ್ದು, ಈ ಪ್ರಮಾಣ ಬಹಳ ಕಡಿಮೆಯಿದೆ. ಪ್ರಸ್ತುತದಲ್ಲಿ ಬುಡಕಟ್ಟು ಸಮುದಾಯಗಳಿಗೆ ಜೀವನ ನಡೆಸುವುದೇ ದುಸ್ಥರವಾಗಿರುವಾಗ ಶಿಕ್ಷಣದ ಬಗ್ಗೆ ಆಸಕ್ತಿಯಾದರೂ ಎಲ್ಲಿ ಬರಬೇಕು.

ಆಶ್ರಮ ಶಾಲೆಗಳ ಮೇಲುಸ್ತುವಾರಿ ಜೊತೆಗೆ ಮುಖ್ಯ ಶಿಕ್ಷಕನಾಗಿ ಕೆಲಸ ನಿರ್ವಹಿಸುವ ಶಿಕ್ಷಕರು ಹಾಗೂ ಸಹ ಶಿಕ್ಷಕರಲ್ಲಿ ಪುರುಷರ ಸಂಖ್ಯೆ ಹೆಚ್ಚಾಗಿದ್ದು, ಮಹಿಳಾ ಮೇಲ್ವಿಚಾರಕರು ಹಾಗೂ ಮಹಿಳಾ ಶಿಕ್ಷಕರ ಕೊರತೆ ಜಾಸ್ತಿ ಇದೆ. ಇದರಿಂದ ವಸತಿ ಶಾಲೆಯಲ್ಲಿ ಉಳಿಯಬೇಕಾಗಿರುವ ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗಿ ಶಾಲೆ ಬಿಡುತ್ತಾರೆ. ಕೆಲವು ಆಶ್ರಮ ಶಾಲೆಗಳಲ್ಲಿ ಇವತ್ತಿಗೂ ಹೆಣ್ಣು ಮತ್ತು ಗಂಡು ಮಕ್ಕಳಿಗೆ ರಾತ್ರಿ ಉಳಿಯಲು ಪ್ರತ್ಯೇಕವಾದ ವಸತಿ ವ್ಯವಸ್ಥೆಯಿಲ್ಲ. ಹಾಗೆಯೇ ಬಹುಪಾಲು ಬುಡಕಟ್ಟು ಮಕ್ಕಳು ಕುಟುಂಬದ ಆರ್ಥಿಕ ಸಂಪಾದನೆಯ ಭಾಗವಾಗಿರುವುದರಿಂದ ಐದು – ಆರನೇ ತರಗತಿ ಹಂತದಲ್ಲೇ ಮಕ್ಕಳನ್ನು ಶಾಲೆ ಬಿಸಿಸಲಾಗುತ್ತದೆ. ಹೆಣ್ಣು ಮಕ್ಕಳು ಋತುಮತಿಯರಾದರೆಂಬ (ಹೆಣ್ಣು ಮಕ್ಕಳು ಮದುವೆ ವಯಸ್ಸಿಗೆ ಬಂದಿರುವರೆಂದು) ಕಾರಣದಿಂದ ಪೋಷಕರು ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸುತ್ತಾರೆ. ಕೆಲವು ಕುಟುಂಬಗಳಲ್ಲಿ ತಾವು ದುಡಿಯಲು ಹೊರಗೆ ಹೋಗುವಾಗ ದೊಡ್ಡ ಮಕ್ಕಳಿಗೆ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು, ಮನೆ ಮತ್ತು ಕೃಷಿ ಕೆಲಸಗಳ ಜವಾಬ್ದಾರಿಯನ್ನು ಹೊರಿಸಲಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಬುಡಕಟ್ಟು ಸಮುದಾಯದಲ್ಲಿ ಶೇಕಡ ೩೦ ರಿಂದ ೭೦ ರಷ್ಟು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲೇ ಶಾಲೆಯನ್ನು ಬಿಡುತ್ತಾರೆ.

ಗಿರಿಜನ ಸಮುದಾಯಗಳಲ್ಲಿ ಮಕ್ಕಳು ಪೋಷಕರ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಅಲ್ಲದೆ ಜೀವನೋಪಾಯದ ಕಸುಬುಗಳಾದ ಪಶುಪಾಲನೆ, ಅರಣ್ಯ ಉತ್ಪನ್ನಗಳ ಸಂಗ್ರಹಿಸುವ ಇವೇ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕಾರಣಗಳಿಂದಾಗಿ ಬುಡಕಟ್ಟು ಸಮುದಾಯದ ಮಕ್ಕಳು ಶಾಲೆಗೆ ಹಾಜರಾಗುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ವ್ಯವಸಾಯದ ಕೆಲಸಗಳು. ಅರಣ್ಯ ಉತ್ಪನ್ನಗಳ ಸಂಗ್ರಹ ಹಾಗೂ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಕೆಲಸಗಳನ್ನು ಮಾಡಬೇಕಾಗಿದ್ದು, ಶಾಲೆಗೆ ಹಾಜರಾಗಲು ತೊಡಕಾಗಿದೆ (ಜಾ ಮತ್ತು ಜಿಂಗ್ರನ್, ೨೦೦೨). ೨೦೦೧ ರ ಸರ್ವ ಶಿಕ್ಷಣ ಅಭಿಯಾನ (ಎಸ್ ಎಸ್ ಎ) ಮಾಹಿತಿಯಂತೆ ದೇಶದಲ್ಲಿ ೬ ರಿಂದ ೧೪ ವಯೋಮಾನದ ೨೦.೨೪ ದಶಲಕ್ಷ ಪರಿಶಿಷ್ಟ ವರ್ಗದ ಮಕ್ಕಳಿದ್ದು, ಇವರಲ್ಲಿ ೧೪ ದಶಲಕ್ಷ ಮಕ್ಕಳು ಮಾತ್ರ ಪ್ರಾಥಮಿಕ ಶಾಲೆಗೆ ದಾಖಲಾಗಿದ್ದಾರೆ. ಹೀಗೆ ದಾಖಲಾದ ಮಕ್ಕಳಲ್ಲೂ ಶೇಕಡ ೫೨ ರಷ್ಟು ಮಕ್ಕಳು ಪ್ರಾಥಮಿಕ ಹಂತದಲ್ಲೂ, ಶೇಕಡ ೬೯ ರಷ್ಟು ಮಕ್ಕಳು ಮಾಧ್ಯಮಿಕ ಹಂತದಲ್ಲಿ ಶಾಲೆಯನ್ನು ಬಿಡುವುದಾಗಿ ತಿಳಿಸಿದೆ. ಕಾರಣ ಮಕ್ಕಳು ತಮ್ಮ ಪರಿಸರದಿಂದ ಶಾಲಾ ವ್ಯವಸ್ಥೆಗೆ ಹೊಂದಿಕೊಳ್ಳದಿರುವುದು, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ವೈವಿದ್ಯೆತೆಯಿರುವುದು. ಜೊತೆಗೆ ಹತ್ತಿರದಲ್ಲಿ ಶಾಲೆಗಳ ಲಭ್ಯತೆಯಿಲ್ಲದಿರುವುದು ಹಾಗೂ ಭೌತಿ ಸೌಲಭ್ಯದ ಕೊರತೆಯಿಂದಾಗಿ ಶಾಲೆಯನ್ನು ಬಿಡುತ್ತಾರೆ (ಬುಡಕಟ್ಟು ಅಭಿವೃದ್ಧಿ ಯೋಜನೆ, ೨೦೦೭).

ಜಿಲ್ಲೆಯ ಹಿನ್ನೆಲೆ

ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ೧೯೯೭ ರಲ್ಲಿ ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತ್ತು. ಈ ಪ್ರದೇಶವು ಕ್ರಿ.ಶ. ೮ನೇ ಶತಮಾನದಿಂದ ೧೯೫೦ ರವರೆಗೆ ವಿವಿಧ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು. ಇಲ್ಲಿ ತಲಕಾಡಿನ ಗಂಗರು, ಕಲ್ಯಾಣದ ಚಾಲುಕ್ಯರು, ದ್ವಾರಸಮುದ್ರದ ಹೊಯ್ಸಳರು, ತಮಿಳುನಾಡಿನ ಚೋಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರು ಹಾಗೂ ಬ್ರಿಟಿಷರ ಕಾಲದದಲ್ಲಿ ಮದ್ರಾಸ್ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿತ್ತು. ಐತಿಹಾಸಿಕ ಹಿನ್ನೆಲೆಯುಳ್ಳ ಚಾಮರಾಜನಗರವನ್ನು ಹಿಂದೆ ಅರಿಕುಠಾರ, ಅರೆಕುಠಾರ, ಅರಕೊಟಾರ ಎಂಬ ವಿಶೇಷ ಹೆಸರುಗಳಿಂದ ಕರೆಯಲಾಗುತ್ತಿದ್ದು, ೧೮೧೮ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ತಂದೆ ಚಾಮರಾಜ ಒಡೆಯರು ಹುಟ್ಟಿದ ನೆನಪಿಗಾಗಿ ಚಾಮರಾಜನಗರ ಎಂಬ ಹೆಸರನ್ನು ಇಟ್ಟರು. ಅಂದಿನಿಂದ ಅರೆಕುಠಾರ ಚಾಮರಾಜನಗರ ಎಂದು ಕರೆಯಲಾಗುತ್ತಿದೆ. ಜಿಲ್ಲೆಯು ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಕೇರಳ, ತಮಿಳುನಾಡಿನ ಗಡಿ ಪ್ರದೇಶಗಳನ್ನು ಒಳಗೊಂಡಿದೆ. ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಸೇರಿದಂತೆ ನಾಲ್ಕು ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣ ೫೦೦೧ ಚದರ ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಜೆಲ್ಲೆಯು ಸಂಪದ್ಭರಿತ ಅರಣ್ಯ ಪ್ರದೇಶವನ್ನು ಹೊಂದಿದ್ದು, ಕರಿಕಲ್ಲು ಗಣಿಗೆ ಹೆಸರಾಗಿದೆ. ಸುವರ್ಣಾವತಿ (ಹೊನ್ನು ಹೊಳೆ) ನದಿ, ಚಿಕ್ಕಹೊಳೆ ಉಪ ನದಿ ಹಾಗೂ ಗುಂಡಾಲ್ ಜಲಾಶಯಗಳನ್ನು ಹೊಂದಿದ್ದು, ಹೊಗೆನಕಲ್ ಪಾಲ್ಸ್, ಗಗನ ಚುಕ್ಕಿ – ಭರಚುಕ್ಕಿ ಜಲಪಾತಗಳು ನಯನ ಮನೋಹರವಾಗಿವೆ. ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ ಪ್ರಮುಖ ಗಿರಿಧಾಮಗಳಾಗಿದ್ದು ಪ್ರವಾಸಿ ತಾಣಗಳಾಗಿವೆ. ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಚಿಕ್ಕಲೂರು ಸ್ಥಳಗಳು ಧಾರ್ಮಿಕವಾದ ಹಿನ್ನೆಲೆಯುಳ್ಳ ಪ್ರದೇಶಗಳಾಗಿವೆ.

01_190_SVBM-KUH

ಜಿಲ್ಲೆಯ ಬುಡಕಟ್ಟು ಜನಸಂಖ್ಯೆ ವಿವರ

೨೦೦೧ ಜನಗಣತಿ ಪ್ರಕಾರ ಪರಿಶಿಷ್ಟ ವರ್ಗದ ೧,೦೬,೧೧೧ (೧೦.೯೯%) ಇದೆ. ಇವರಲ್ಲಿ ಪುರುಷರು ೫೩,೨೦೫ ಇದ್ದು, ಮಹಿಳೆಯರು ೫೨,೯೦೬ ಇದ್ದು, ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿದ್ದಾರೆ. ಆದರೆ ಪರಿಶಿಷ್ಟ ವರ್ಗಗಳ ಈ ಜನಸಂಖ್ಯೆಯಲ್ಲಿ ಮೂಲ ಗಿರಿಜನ ಸಮುದಾಯಗಳಾದ ಸೋಲಿಗ, ಜೇನಕುರುಬ ಹಾಗೂ ಕಾಡು (ಬೆಟ್ಟ) ಕುರುಬ ಜನಸಂಖ್ಯೆ ಒಟ್ಟು ೩೧,೦೦೦ ಇದ್ದು, ಇವರು ಬಿಳಿಗಿರಿರಂಗನ ಬೆಟ್ಟ, ಬೇಡಗುಳಿ, ಪುಣಜನೂರು, ಮಲೆ ಮಹದೇಶ್ವರ ಬೆಟ್ಟ ಹಾಗೂ ಬಂಡೀಪುರದ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿದ್ದರೆ. ಅತಿ ಹೆಚ್ಚು ಬುಡಕಟ್ಟು ಸಮುದಾಯಗಳಾದ ಸೋಲಿಗರು ಕೊಳ್ಳೇಗಾಲ ಮತ್ತು ಚಾಮರಾಜನಗರ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಜೇನುಕುರುಬ ಹಾಗೂ ಕಾಡು ಕುರುಬ ಸಮುದಾಯಗಳು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಜನಸಂಖ್ಯೆಯ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ನೋಡಿ.

ಬುಡಕಟ್ಟು ಸಮುದಾಯಗಳ ಸಾಕ್ಷರತೆ

ಜಿಲ್ಲೆಯ ಸಾಮಾನ್ಯ ವರ್ಗದ ಸಾಕ್ಷರತೆ ಪ್ರಮಾಣ ೫೧,೨೬% ರಷ್ಟಿದ್ದರೆ, ಪರಿಶಿಷ್ಟ ವರ್ಗದ ಸಾಕ್ಷರತೆ ಪ್ರಮಾಣ ಶೇಕಡ ೨೪.೨೨ ರಷ್ಟಿದೆ. ತಾಲ್ಲೂಕುವಾರು ಸಾಕ್ಷರತೆಯನ್ನು ನೋಡಿದಾಗ ಚಾಮರಾಜನಗರ ತಾಲ್ಲೂಕಿನ ಬುಡಕಟ್ಟು ಸಮುದಾಯಗಳ ಸಾಕ್ಷರತೆ ಪ್ರಮಾಣ ೨೦.೪೭ ರಷ್ಟಿದ್ದು, ಪುರುಷರ ಸಾಕ್ಷರತೆ ಪ್ರಮಾಣ ೨೬.೨೪ ರಷ್ಟಿದ್ದು, ಮಹಿಳೆಯರ ಸಾಕ್ಷರತೆ ಪ್ರಮಾಣ ೧೪.೧೭ ರಷ್ಟಿದೆ. ಯಳಂದೂರು ತಾಲ್ಲೂಕಿನ ಬುಡಕಟ್ಟು ಸಮುದಾಯಗಳ ಸಾಕ್ಷರತೆ ಪ್ರಮಾಣ ೨೭.೮೫ ರಷ್ಟಿದ್ದು, ಪುರುಷರ ಸಾಕ್ಷರತೆ ಪ್ರಮಾಣ ೩೫.೭೭ ರಷ್ಟಿದ್ದು, ಮಹಿಳೆಯರ ಸಾಕ್ಷರತೆ ಪ್ರಮಾಣ ೧೯.೪೨ ರಷ್ಟಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬುಡಕಟ್ಟು ಸಮುದಾಯಗಳ ಸಾಕ್ಷರತೆ ಪ್ರಮಾಣ ೧೬.೪೫ ರಷ್ಟಿದ್ದು, ಪುರುಷರ ಸಾಕ್ಷರತೆ ಪ್ರಮಾಣ ೨೦.೮೩ ರಷ್ಟಿದ್ದು, ಮಹಿಳೆಯರ ಸಾಕ್ಷರತೆ ಪ್ರಮಾಣ ೧೧.೯೦ ರಷ್ಟಿದೆ. ಬುಡಕಟ್ಟು ಸಮುದಾಯಗಳ ಸಾಕ್ಷರತೆ ಪ್ರಮಾಣ ೨೫.೦೯ ರಷ್ಟಿದ್ದು, ಪುರುಷರ ಸಾಕ್ಷರತೆ ಪ್ರಮಾಣ ೩೨.೬೦ ರಷ್ಟಿದ್ದು, ಮಹಿಳೆಯರ ಸಾಕ್ಷರತೆ ಪ್ರಮಾಣ ೧೭.೩೪ ರಷ್ಟಿದೆ. ಜಿಲ್ಲೆಯ ಸಾಮಾನ್ಯ ಸಾಕ್ಷರತೆಯ ಪ್ರಮಾಣ ಹಾಗೂ ರಾಷ್ಟ್ರೀಯ ಸರಾಸರಿ ಸಾಕ್ಷರತೆಗಿಂತ ಬುಡಕಟ್ಟು ಸಮುದಾಯಗಳ ಸಾಕ್ಷರತೆ ಬಹಳ ಕಡಿಮೆಯಿದೆ. ಅದರಲ್ಲೂ ಮಹಿಳೆಯರ ಸಾಕ್ಷರತೆ ಪ್ರಮಾಣ ಬಹಳ ಕಡಿಮೆ ಇದೆ.

ಜಿಲ್ಲೆಯಲ್ಲಿ ಬುಡಕಟ್ಟು ಮಕ್ಕಳ ಶಿಕ್ಷಣಕ್ಕಿರುವ ಅವಕಾಶಗಳು

೨೦೦೯ – ೧೦ನೇ ಸಾಲಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ೧೯ ಆಶ್ರಮ ಶಾಲೆಗಳಿದ್ದು, ೧ ರಿಂದ ೫ ನೇ ತರಗತಿಯನ್ನು ಒಳಗೊಂಡಿವೆ. ಈ ೧೯ ಶಾಲೆಗಳಲ್ಲಿ ಒಟ್ಟು ೧೩೧೬ ಮಕ್ಕಳಿದ್ದು, ೬೫೫ ಬಾಲಕರು, ೬೫೮ ಬಾಲಕಿಯರಿದ್ದು, ಹೆಣ್ಣು ಮತ್ತು ಗಂಡು ಮಕ್ಕಳ ದಾಖಲಾತಿ ಸಮ ಪ್ರಮಾಣದಲ್ಲಿದೆ. ಇವರಲ್ಲಿ ಪರಿಶಿಷ್ಟ ವರ್ಗದ ಮಕ್ಕಳ ದಾಖಲಾತಿ ಸಂಖ್ಯೆ ೧೦೩೭ (ಬಾಲಕರು ೫೧೪, ಬಾಲಕಿಯರು ೫೨೩) ಇದೆ. ೨೦೦೮ – ೦೯ ರಲ್ಲಿ ಜಿಲ್ಲೆಯಲ್ಲಿ ಮಾಧ್ಯಮಿಕ ಹಂತದಿಂದ ಪ್ರೌಢ ಶಿಕ್ಷಣದ ಹಂತದವರೆಗೆ (೬ ರಿಂದ ೧೦) ೦೩ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿದ್ದು, ಒಟ್ಟು ೨೭೫ ಮಕ್ಕಳು ಕಲಿಯುತ್ತಿದ್ದಾರೆ. ಹಾಗೆಯೇ ಮಾಧ್ಯಮಿಕ ಹಂತದಿಂದ ಪ್ರೌಢ ಶಿಕ್ಷಣದ ಹಂತದವರೆಗೆ (೬ ರಿಂದ ೧೦) ಬುಡಕಟ್ಟು ಮಕ್ಕಳಿಗೆ ಜಿಲ್ಲೆಯಲ್ಲಿ ೦೭ ಮೆಟ್ರಿಕ್ ಪೂರ್ವ ಹಾಗೂ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಒಟ್ಟು ೨೪೦೦ ಮಕ್ಕಳಿಗೆ ಕಲಿಯಲು ಅವಕಾಶಗಳಿದ್ದು, ೨೦೦೭ – ೦೮ನೇ ಸಾಲಿನಲ್ಲಿ ೧೯೧೦ ಮಕ್ಕಳು ಕಲಿಯುತ್ತಿದ್ದು, ೫೬೫ ಮಕ್ಕಳ ಸ್ಥಾನ ಖಾಲಿ ಉಳಿದಿದೆ. ಬುಡಕಟ್ಟು ಪ್ರದೇಶದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ೪೨ ಕಿರಿಯ ಪ್ರಾಥಮಿಕ ಶಾಲೆಗಳಿವೆ. ಜೊತೆಗೆ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ತೆರೆದಿದ್ದು, ೪೦೦ ಮಕ್ಕಳು ಕಲಿಯುತ್ತಿದ್ದಾರೆ. ಜೊತೆಗೆ ನರ್ಸಿಂಗ್ ತರಬೇತಿ ಕೇಂದ್ರವನ್ನು ತೆರೆದು ತರಬೇತಿ ನೀಡಲಾಗುತ್ತಿದೆ. ಬುಡಕಟ್ಟು ಮಕ್ಕಳಿಗಾಗಿ ವೃತ್ತಿ ಶಿಕ್ಷಣ (ಐಟಿಐ) ಹಾಗೂ ಕಾಲೇಜುಗಳನ್ನು ಕರುಣಾ ಟ್ರಸ್ಟ್ ಆರಂಭಿಸಿದೆ. ಚಾಮರಾಜನಗರ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು (ಡಯಟ್) ಬುಡಕಟ್ಟು ಜನರ ಶಿಕ್ಷಣಕ್ಕೆ ಒತ್ತು ಕೊಡಬೇಕೆಂಬ ಹಿನ್ನೆಲೆಯಲ್ಲಿ ಗಿರಿಜನ ವಿಭಾಗವನ್ನು ೨೦೦೫ – ೦೬ ರಲ್ಲಿ ಆರಂಭ ಮಾಡಿವೆ. ಆದರೆ ಅದರ ಕಾರ್ಯ ಚಟುವಟಿಕೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನ ಮಾಡಲು ಹೆಚ್ಚಿನ ಆದ್ಯತೆ ನೀಡುತ್ತಿಲ್ಲ.

ಬುಡಕಟ್ಟು ಸಮುದಾಯಗಳಿರುವ ವಿವಿಧ ಕಾಲೋನಿಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು

ಚಾಮರಾಜನಗರ ಜಿಲ್ಲೆಯ ೧೨ ಬುಡಕಟ್ಟು ಪ್ರದೇಶಗಳಲ್ಲಿ / ಕಾಲೋನಿಗಳಲ್ಲಿ ಶಾಲೆ ಬಿಟ್ಟು ೬ ರಿಂದ ೧೪ ವಯೋಮಾನದ ಮಕ್ಕಳ ವಿವರಗಳನ್ನು ಸಂಗ್ರಹಿಸಲಾಗಿದೆ. ಈ ಪ್ರದೇಶಗಳಲ್ಲಿ ೧೪೦ ಮಕ್ಕಳು ಶಾಲೆ ಬಿಟ್ಟವರಾಗಿದ್ದು, ೨೪ ಮಕ್ಕಳು ಶಾಲೆಗೆ ದಾಖಲಾಗಿಲ್ಲ. ಇವರಲ್ಲಿ ಗಂಡು ಮಕ್ಕಳ ಪ್ರಮಾಣ ೫೧.೮೩ (೮೫) ಇದ್ದು, ಹೆಣ್ಣು ಮಕ್ಕಳ ಪ್ರಮಾಣ ೪೮.೧೭ (೭೯) ರಷ್ಟಿದೆ. ಶಾಲೆ ಬಿಟ್ಟ ಮಕ್ಕಳ ವಯೋಮಾನ ಅವಲೋಕಿಸಿದಾಗ ೬ ರಿಂದ ೧೧ ವಯೋಮಾನದ ಮಕ್ಕಳ ಪ್ರಮಾಣ ೪೯.೩೯% (೮೧) ಇದ್ದು, ೧೨ ರಿಂದ ೧೪ ವಯೋಮಾನದ ಮಕ್ಕಳ ಪ್ರಮಾಣ ೫೦.೬೧% (೮೩) ಇದೆ. ಶಾಲೆ ಬಿಟ್ಟಿರುವ ತರಗತಿಯನ್ನು ಪರಿಶೀಲಿಸಿದಾಗ ೧ ರಿಂದ ೫ ನೇ ತರಗತಿ ಬಿಟ್ಟಿರುವವರ ಪ್ರಮಾಣ ೫೩.೦೫% (೮೭) ಇದ್ದು, ೬ ರಿಂದ ೮ ನೇ ತರಗತಿಗೆ ಶಾಲೆ ಬಿಟ್ಟವರ ಪ್ರಮಾಣ ೩೨.೩೨% (೫೩) ಇದ್ದು, ಶಾಲೆಗೆ ದಾಖಲಾಗದವರ ಪ್ರಮಾಣ ೧೪.೬೩% (೨೪) ರಷ್ಟಿದೆ. ಈ ಮಕ್ಕಳು ೨೦೦೫ – ೦೬ ರಿಂದ ೨೦೦೭ – ೦೮ನೇ ಸಾಲಿನಲ್ಲಿರುವ ಪ್ರಮಾಣವಾಗಿದ್ದು, ೨೦೦೮ – ೦೯ನೇ ಸಾಲಿನಲ್ಲಿ ಶಾಲೆ ಬಿಟ್ಟಿರುವ ಕೆಲವು ಕಾಲೋನಿಯ ಮಕ್ಕಳು ಸೇರಿದ್ದಾರೆ. ವಿವಿಧ ಬುಡಕಟ್ಟು ಕಾಲೋನಿಗಳಲ್ಲಿ ಶಾಲೆ ಬಿಟ್ಟಿರುವ ಮಕ್ಕಳ ಅಂಕಿ ಅಂಶಗಳಿಗಾಗಿ ಕೆಳಕಂಡ ಪಟ್ಟಿ ನೋಡಬಹುದು.

ಪಟ್ಟಿ ೧: ರಿಂದ ೧೪ ವಯೋಮಾನದ ಶಾಲೆ ಬಿಟ್ಟ ಮಕ್ಕಳ ವಿವರ ೨೦೦೫೦೬ ರಿಂದ ೨೦೦೭೦೮ನೇ ಸಾಲಿನವರೆಗೆ

 

 

ಕ್ರ.ಸಂ

ಶಾಲೆ ಬಿಟ್ಟ ಪ್ರದೇಶ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಶಾಲೆ ಬಿಟ್ಟ ತರಗತಿ ಶಾಲೆ ಬಿಟ್ಟಾಗ ವಯೋಮಾನ ಪ್ರಸ್ತುತ ಮಗುವಿನ ವಯಸ್ಸು?
ಗಂಡು ಹೆಣ್ಣು ಒಟ್ಟು ೧ – ೫ ೬ – ೮ ೬ – ೧೧ ೧೨ – ೧೪ ೬ – ೧೧ ೧೨ – ೧೪
ರಾಚಪ್ಪಾಜಿನಗರ ೧೦
ಪುರಾಣಿಪೋಡು
ಮದ್ದೂರು (ಕಾ) ೧೧ ೧೯ ೧೨ ೧೬ ೧೭
ರಂಗಸಂಸ್ರ (ಬೂಪ) ೧೦ ೧೯ ೧೦ ೧೦ ೧೫
ಪುಣಜನೂರು ೧೨ ೨೧ ೧೭ ೧೬ ೧೧ ೧೦
ನಕ್ಕುಂದಿ
ಕಂಚಗಳ್ಳಿ ೧೦
ಕೆ. ಗುಡಿ ೧೦ ೧೨ ೨೨ ೧೦ ೧೨ ೧೫ ೨೧
ಬೇಡಗುಳಿ ೧೧ ೧೦ ೧೦ ೧೦
೧೦ ಹಿರಿಯಂಬಲ ೧೧
೧೧ ಮೊಣಕೈಪೋಡು ೧೦
೧೨ ಮಾರಿಗುಡಿಪೋರ್ಡು ೧೪ ೧೦ ೧೦
    ೮೫ ೭೯ ೧೬೪ ೮೭ ೫೩ ೮೧ ೮೩ ೪೯ ೧೧೫
ಶೇಕಡ ೫೧.೮೩ ೪೮.೧೭ ೧೦೦ ೫೩.೦೫ ೩೨.೩೨ ೪೯.೩೯ ೫೦.೬೧ ೨೯.೮೮ ೭೦.೧೨

ಶಾಲೆಗೆ ದಾಖಲಾಗಿರದ ಮಕ್ಕಳು ೨೪೧೪.೬೩%

ಮಕ್ಕಳು ಶಾಲೆ ಬಿಡಲು ಕಾರಣವಾದ ಅಂಶಗಳು

ಶಾಲೆಗಳೇ ಇಲ್ಲದ ಪ್ರದೇಶಗಳು

ಜಿಲ್ಲೆಯ ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳೇ ಇಲ್ಲದ ಪ್ರದೇಶಗಳಿದ್ದು, ಹತ್ತಿರದಲ್ಲಿ ಶಾಲೆಯೂ ಇಲ್ಲ. ಇದ್ದರೂ ೪ – ೫ ಕಿ.ಮೀ ದೂರದಲ್ಲಿದ್ದು, ಕಾಡು ಪ್ರಾಣಿಗಳ ಹಾವಳಿಯಿದೆ. ಚಿಕ್ಕ ಮಕ್ಕಳು ಇಷ್ಟು ದೂರ ಶಾಲೆ ನಡೆದು ಬರಲು ಆಗುತ್ತಿಲ್ಲ. ಅದಕ್ಕಾಗಿ ವಸತಿ ಶಾಲೆಗಳಿದ್ದರೂ ಮಕ್ಕಳು ಪೋಷಕರನ್ನು ಬಿಟ್ಟು ಇಲ್ಲಿಗೆ ಸೇರುವುದಿಲ್ಲ. ಹಾಗೆಯೇ ಸಾಕಷ್ಟು ಮಕ್ಕಳಿದ್ದಾಗಿಯೂ ಶಿಕ್ಷಕರು ಹೋಗಿ ಅಲ್ಲಿ ಕಲಿಸುವ ವ್ಯವಸ್ಥೆಗಳಿಲ್ಲ ಅಂತಹ ಕೆಲವು ಪ್ರದೇಶಗಳ ವಿವರವನ್ನು ಇಲ್ಲಿ ತಿಳಿಯಬಹುದು.

. ಮೊಣಕೈಪೋಡು, ಚಾಮರಾಜನಗರ ತಾಲ್ಲೂಕು : ಬೇಡಗುಳಿಯ ದಟ್ಟ ಅರಣ್ಯದ ನಡುವೆ ಇರುವ ಈ ಕಾಲೋನಿಯು ಬೇಡಗುಳಿಗೆ ೫ ಕಿ.ಮೀ. ಕಾಲು ಹಾದಿಯಲ್ಲಿ ನಡೆದು ಸಾಗಬೇಕಾಗಿದೆ. ಕಾಡು ಪ್ರಾಣಿಗಳ ಹಾವಳಿಯಲ್ಲಿದ್ದು, ದೊಡ್ಡವರು ಸಹ ಓಡಾಡಲು ಆಗದ ಪರಿಸ್ಥಿತಿಯಿದೆ. ಅಂತಹ ಪ್ರದೇಶಗಳಿಂದ ಮಕ್ಕಳು ಶಾಲೆಗೆ ಬರುವುದು ಅಪರೂಪವಾಗಿದೆ. ಇವರ ಪೋಡಿನ ಸುತ್ತ ದೊಡ್ಡ, ದೊಡ್ಡ ಆನೆ ಕಂದಕಗಳನ್ನು ತೆಗೆಯಲಾಗಿದ್ದು, ಆ ಕಂದಕ ದಾಟಲು ಒಂದು ಮರದ ತುಂಡಿನ ಮೇಲೆ ನಡೆದು ಹೋಗಬೇಕಿದೆ. ಈ ಪ್ರದೇಶಗಳಲ್ಲಿ ೧೫ ಸೋಲಿಗ ಕುಟುಂಬಗಳು ವಾಸವಾಗಿದ್ದು, ಈ ಪ್ರದೇಶದಲ್ಲಿ ರಸ್ತೆ, ನೀರು, ವಿದ್ಯುತ್ ಸೌಲಭ್ಯಗಳಿರುವುದಿಲ್ಲ. ಪ್ರಾಥಮಿಕ ಶಾಲೆ ಇಲ್ಲವೇ ಇಲ್ಲ. ಇಲ್ಲಿ ಶಾಲೆಗೆ ಹೋಗಬಹುದಾದ ವಯಸ್ಸಿನ (೬ – ೧೪) ೧೪ ಮಕ್ಕಳಿದ್ದಾರೆ. ಈ ಮಕ್ಕಳಿಗೆ ೫ ಕಿ.ಮೀ. ದೂರದಲ್ಲಿರುವ ಬೇಡಗುಳಿ ಆಶ್ರಮ ಶಾಲೆಯಲ್ಲಿ ಕಲಿಯಲು ಅವಕಾಶ ಕಲ್ಪಿಸಿದರೂ, ಈ ವಸತಿ ಶಾಲೆಯಲ್ಲಿ ರಾತ್ರಿ ಯಾವ ಮಕ್ಕಳೂ ಉಳಿಯದ ಕಾರಣ, ಶಾಲೆಗೆ ದಾಖಲಾಗುವುದಿಲ್ಲ. ದಾಖಲಾದ ಎರಡು – ಮೂರು ಮಕ್ಕಳು ಮತ್ತೇ ಮನೆಗೆ ಹೋಗಿ ಬಿಡುತ್ತಾರೆ. ೨೦೦೬ – ೦೭ ರ ಅವಧಿಯಲ್ಲಿ ಈ ಪ್ರದೇಶದಲ್ಲಿ ಗ್ರೀನ್ ಫೌಂಡೇಶನ್ ಒಂದು ವರ್ಷ ಸೇತುಬಂಧ ಶಾಲೆ ನಡೆಸಿದ್ದು, ಸಫಲವಾಗಿಲ್ಲ. ಹಾಗಾಗಿ ಈ ಪ್ರದೇಶದಲ್ಲಿ ಶಾಲೆ ಬಿಟ್ಟ ಹಾಗೂ ಶಾಲೆಗೆ ದಾಖಲಾಗದ ಮಕ್ಕಳು ಇದ್ದಾರೆ. ಈ ಪ್ರದೇಶದ ಮಕ್ಕಳ ಅಂಕಿ ಅಂಶಗಳಿಗಾಗಿ ಕೆಳಗಿನ ಪಟ್ಟಿಯನ್ನು ನೋಡಬಹುದಾಗಿದೆ.

ಪಟ್ಟಿ . ಶಾಲೆಯಿಲ್ಲದ ಬುಡಕಟ್ಟು ಪ್ರದೇಶ ಮೊಣಕೈಪೋಡಿನ ಮಕ್ಕಳ ವಿವರ ೨೦೦೮೦೯

ಕ್ರ.ಸಂ ಮಕ್ಕಳ ಹೆಸರು ತಂದೆ ಹೆಸರು ಮಕ್ಕಳ ವಯಸ್ಸು ಏಪ್ರಿಲ್ ೨೦೦೯ ಕ್ಕೆ
ಜ್ಯೋತಿ ಮಾದೇವ ೧೧
ಜಡೆಯ ಮಾದೇವ
ಲಕ್ಷ್ಮೀ ಮಾದೇವ (ರಜನಿ) ೧೦
ಮಾದೇವಿ ಮಾದೇವ (ರಜನಿ) ೧೨
ನಾಗೇಶ ಮಾದೇವಿ ೧೩
ನಾಗ ಬೋಳಿಮಾದೇವ ೧೨
ಮಾದೇವ ಬೋಳಿಮಾದೇವ ೧೧
ಸಿದ್ದಪ್ಪ ಬೋಳಿಮಾದೇವ ೧೨
ಲಕ್ಷ್ಮೀ ಬೋಳಿಮಾದೇವ ೧೦
೧೦ ಕುಂಬ ಬೋಳಿಮಾದೇವ
೧೧ ನಾಗ ಹಲಗನಮಾದೇವ ೧೧
೧೨ ಮಾದೇವಿ ಹಲಗನ ಮಾದೇವ
೧೩ ಬಸವರಾಜು ಕೋಣೂರ
೧೪ ರಾಜು ಶಿವರಾಜು

. ಕೆರಬಂದಿ ಮತ್ತು ಗೊಂಬೆಗಲ್ಲು ಪೋಡು, ಹನೂರು ವಲಯ : ಕೆರೆದಿಂಬ ಮತ್ತು ಗೊಂಬೆಗಲ್ಲುಪೋಡುಗಳು ತಾಲ್ಲೂಕು ಕೇಂದ್ರದಿಂದ (ಕೊಳ್ಳೇಗಾಲ) ೬೦ ಕಿ.ಮೀ ದೂರದಲ್ಲಿದ್ದು, ಬಿಳಿಗಿರಿರಂಗನ ಬೆಟ್ಟಕ್ಕೆ ೧೮ ಕಿ.ಮೀ ಇದೆ. ಈ ಪೋಡುಗಳಿಂದ ಬಿಳಿಗಿರಿರಂಗನ ಬೆಟ್ಟದ ಮುಖ್ಯ ರಸ್ತೆಗೆ ೬ – ೭ ಕಿ.ಮೀ ದೂರ ಕಾಲು ನಡಿಗೆಯಲ್ಲಿ ಬರಬೇಕು. ಇಲ್ಲವೇ ೧೫ ಕಿ.ಮೀ ದೂರದ ಒಡೆಯರ ಪಾಳ್ಯಕ್ಕೆ ನಡೆದು ಹೋಗಬೇಕು. ಕಾಲು ಹಾದಿಯಲ್ಲಿ ನಡೆಯುವಾಗ ಕಾಲಿಗೆ ಅಟ್ಟೆ ಹುಳದ ಹಾವಳಿಯಿದೆ. ಈ ಎರಡು ಪೋಡುಗಳಲ್ಲಿ ೭೫ ಕುಟುಂಬಗಳಿದ್ದು, ಸುಮಾರು ೨೫೦ ಜನಸಂಖ್ಯೆ ಇದೆ. ಈ ಎರಡು ಪ್ರದೇಶಗಳಲ್ಲಿ ೬ – ೧೪ ವಯೋಮಾನದ ೪೦ ಮಕ್ಕಳಿದ್ದಾರೆ. ಈ ಪ್ರದೇಶಗಳು ಸ್ವಾತಂತ್ರ್ಯ ಪೂರ್ವದಿಂದ ಈವರೆಗೆ ಯಾವುದೇ ಶಾಲೆಯನ್ನು ತೆರೆಯಲಾಗಿಲ್ಲ. ಕಾರಣ ಈ ಪ್ರದೇಶಗಳು ದಟ್ಟ ಅರಣ್ಯ ಪ್ರದೇಶದಲ್ಲಿದ್ದು, ಯಾವುದೇ ವಾಹನ ಸೌಲಭ್ಯಗಳಿಲ್ಲ. ಮೂಲಭೂತ ಸೌಲಭ್ಯದ ಮಾತು ಇಲ್ಲವೇ ಇಲ್ಲ. ಈ ಪ್ರದೇಶಗಳಿಗೆ ಹೋಗಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಪಡೆದ ಹೋಗಬೇಕಿದೆ. ಮಳೆಗಾಲದಲ್ಲಂತೂ ಪ್ರವೇಶ ಮಾಡಲಾಗದ ಸ್ಥಿತಿಯಿದ್ದು, ಎಲ್ಲಾ ಕಾಲದಲ್ಲೂ ಕಾಡು ಪ್ರಾಣಿಗಳ ಹಾವಳಿಯಿದೆ.

ಈ ಪೋಡಿನ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನು ೮ – ೧೦ ವರ್ಷಗಳ ಕಾಲ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿಜಿಕೆಕೆ) ನಂತರ ೨೦೦೦ ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯು ಗೊಂಬೆಗಲ್ಲು ಮತ್ತು ಕೆರೆದಿಂಬ ಪೋಡಿನಲ್ಲಿ ಶಿಕ್ಷಣ ಖಾತ್ರಿ ಯೋಜನೆ (ಇಜಿಎಸ್) ಕೇಂದ್ರವನ್ನು ಆರಂಭಿಸಿದ್ದು, ಈ ಕೇಂದ್ರಗಳಿಗೆ ಒಟ್ಟು ೪೦ ಮಕ್ಕಳು ಬರುತ್ತಿದ್ದರು. ಇದರ ಜವಾಬ್ದಾರಿಯನ್ನು ವಿಜಿಕೆಕೆಗೆ ವಹಿಸಲಾಗಿದ್ದು, ಈ ಶಾಲೆಗೆ ಒಬ್ಬರು ಸ್ವಯಂ ಸೇವಕರನ್ನು ನೇಮಿಸಿ ೧೦೦೦ ರೂ. ಸಹಾಯ ಧನವನ್ನು ನೀಡುತ್ತಿದ್ದರು. ಬಿಸಿಯೂಟ ತಯಾರು ಮಾಡಲು ಸ್ಥಳೀಯರನ್ನು ನೇಮಿಸಿ ಅವರಿಗೆ ೫೦೦ ರೂ ಧನ ಸಹಾಯವನ್ನು ಇಲಾಖೆಯವರು ನೀಡುತ್ತಿದ್ದರು. ಬಿಸಿಯೂಟ ತಯಾರಿಕೆಗೆ ಬೇಕಾದ ಆಹಾರ ಪದಾರ್ಥಗಳನ್ನು ೩ ತಿಂಗಳಿಗೆ ಒಂದು ಬಾರಿ ಕೊಡಿಸಲಾಗುತ್ತಿತ್ತು. ಸ್ವಯಂ ಸೇವಕರಿಗೆ, ಅಡುಗೆ ತಯಾರಿಕೆಗೆ ಗೌರವಧನವನ್ನು ಸರಿಯಾಗಿ ನೀಡದೆ, ಮಕ್ಕಳಿಗೆ ಸರಿಯಾಗಿ ಆಹಾರ ಪದಾರ್ಥಗಳು ಸಾಕಾಗದ ಕಾರಣದಿಂದಾಗಿ ೨೦೦೩ ನೇ ಸಾಲಿನ ನಂತರ ಇ.ಜಿ.ಎಸ್ ಕೇಂದ್ರಗಳು ಮುಚ್ಚಿದವು. ಒಟ್ಟಾರೆ ಈ ಪ್ರದೇಶದ ಬುಡಕಟ್ಟು ಸಮುದಾಯದ ಮಕ್ಕಳು ಹಿಂದಿನಿಂದ ಇವತ್ತಿನವರೆಗೂ ಶಿಕ್ಷಣ ವಂಚಿತರಾಗಿದ್ದರೆ.

ಎರಡು ಪೋಡುಗಳ ಸಮುದಾಯದ ಅಭಿಪ್ರಾಯಗಳು

ಮಕ್ಕಳು ಕಾಡಿನಲ್ಲಿ ಆಟ ಆಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಶಿಕ್ಷಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳೆರಡು ನಮ್ಮ ಮಕ್ಕಳಿಗೆ ಅನ್ಯಾಯ ಮಾಡುತ್ತಿವೆ. ಎರಡು ಪೋಡುಗಳ ನಡುವೆ ಶಾಲೆ ತೆರೆದು, ಎರಡು ಪೋಡುಗಳಿಂದ ಇಬ್ಬರು ಅಡುಗೆಯವರನ್ನು ನೇಮಿಸಿಕೊಂಡರೆ ಮಕ್ಕಳನ್ನು ಕರೆದುಕೊಂಡು ಬರಲು ಸಹಾಯವಾಗುತ್ತದೆ. ನಂತರ ಶಾಲೆ ಮುಗಿದ ಮೇಲೆ ಮಕ್ಕಳನ್ನು ವಾಪಸ್ಸು ಕರೆದುಕೊಂಡು ಹೋಗಲು ಸಹಾಯವಾಗುತ್ತದೆ. ನಾವು ನಮ್ಮ ಪೋಡುಗಳಲ್ಲಿ ಇರುವ ಎಲ್ಲಾ ಮಕ್ಕಳನ್ನು ಶಾಲೆಗೆ ವ್ಯವಸ್ಥಿತವಾಗಿ ಹೋಗುವಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಈ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು, ಸಾರಿಗೆ ಸಂಪರ್ಕಗಳು ಇಲ್ಲದ ಕಾರಣ ಇಲ್ಲಿ ಕೆಲಸ ಮಾಡುವವರು ಬಹಳ ಬದ್ದತೆಯಿಂದ ನಮ್ಮಲ್ಲೇ ವಾಸವಿದ್ದು, ಕಲಿಸಬೇಕಾಗುತ್ತದೆ ಎಂದು ತಿಳಿಸುತ್ತಾರೆ.

. ಪಾಲಾರ್, ಹನೂರು ವಲಯ

ಈ ಪ್ರದೇಶವು ಮಲೆ ಮಹದೇಶ್ವರ ಬೆಟ್ಟದಿಂದ ೨೬ ಕಿ.ಮೀ. ದೂರದಲ್ಲಿದ್ದು, ಕಾರ್ನಾಟಕ ಹಾಗೂ ತಮಿಳುನಾಡಿನ ಮುಖ್ಯ ರಸ್ತೆಯಲ್ಲಿದೆ. ಈ ಪ್ರದೇಶವು ಕರ್ನಾಟಕದ ಗಡಿಯಂಚಿನ ಗ್ರಾಮವಾಗಿದ್ದು, ತಮಿಳುನಾಡಿನ ಪಾಲಾರ್ ನದಿಯ ಪಕ್ಕದ ಕಾಡಿನಲ್ಲಿ ವಾಸವಾಗಿದ್ದಾರೆ. ಈ ಪ್ರದೇಶ ವೀರಪ್ಪನ್ ಅಡಗುದಾಣ ಹಾಗೂ ಅವನ ಹುಟ್ಟೂರಾದ ಗೋಪಿನಾಥಂಗೆ ೨೬ ಕಿ.ಮೀ ಅಂತರದಲ್ಲಿದೆ. ಈತ ಜೀವಂತವಾಗಿದ್ದಂತಹ ಸಂದರ್ಭದಲ್ಲಿ ಸಂಘರ್ಷಣೆಯ ಸ್ಥಳವಾಗಿತ್ತು. ಈ ಪ್ರದೇಶದಲ್ಲಿ ೨೮ ಬುಡಕಟ್ಟು ಸಮುದಾಯದ ಕುಟುಂಬಗಳು ವಾಸವಾಗಿದ್ದು, ೧೬೮ ಜನಸಂಖ್ಯೆಯಿದೆ. ಇಲ್ಲಿಯ ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆಯಲು ೨೬ ಕಿ.ಮೀ. ದೂರದ ಮಲೆ ಮಹದೇಶ್ವರ ಬೆಟ್ಟಕ್ಕೆ ಬರಬೇಕಿದೆ. ಇಲ್ಲಿಗೆ ದಾಖಲಾದ ಮಕ್ಕಳು ಕೆಲವು ತಿಂಗಳು ಶಾಲೆಗೆ ಹಾಜರಾಗಿ ನಂತರ ಮನೆಯಲ್ಲೇ ಉಳಿಯುತ್ತಾರೆ. ಹಾಗಾಗಿ ಈ ಪ್ರದೇಶದಲ್ಲಿ ಶಾಲೆಯಿಂದ ಹೊರಗುಳಿದ ಸುಮಾರು ೩೦ ಮಕ್ಕಳಿದ್ದಾರೆ. ಈ ಕಾರಣದಿಂದಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ೧೫ ಏಪ್ರಿಲ್ ೨೦೦೭ ರಿಂದ ೧೪ ಮೇ ೨೦೦೭ ರವರೆಗೆ ಚಿಣ್ಣರ ಅಂಗಳ ಕೇಂದ್ರವನ್ನು ನಡೆಸಿತು. ನಂತರ ಈ ಪ್ರದೇಶದಲ್ಲಿ ಶಾಲೆಯನ್ನು ತೆರೆಯಲು ಸಾಧ್ಯವಾಗಿಲ್ಲ. ಮೊದಲಿನಿಂದಲೂ ಶಾಲೆ ತೆರೆಯಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ.

. ಆಲಂಬಾಡಿ, ಹನೂರು ವಲಯ

ಪಾಲಾರ್‌ಗಿಂತಲೂ ಭಿನ್ನವಾದ ಪ್ರದೇಶವೆಂದರೆ ಆಲಂಬಾಡಿ. ಇದು ಹೊಗೇನಕಲ್ ಪಾಲ್ಸ್‌ನಿಂದ ೫ – ೬ ಕಿ.ಮೀ. ದೂರದಲ್ಲಿದ್ದು, ೩೦ ಬುಡಕಟ್ಟು ಸಮುದಾಯದ ಸೋಲಿಗ ಕುಟುಂಬಗಳು ವಾಸಿಸುತ್ತಿವೆ. ಈ ಊರು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಹೊಗೆನೇಕಲ್ ಪಾಲ್ಸ್‌ವರೆಗೆ ದಿನದಲ್ಲಿ ಎರಡು ಸಮಯ ಬಸ್ಸಿನ ವ್ಯವಸ್ಥೆಯಿದೆ. ಹೊಗೆನೇಕಲ್ ಪಾಲ್ಸ್‌ನಿಂದ ಅಲಂಬಾಡಿಗೆ ಸುಮಾರು ೫ ಕಿ.ಮೀ. ದೂರ ಕಾಡಿನ ಕಾಲು ಹಾದಿಯಲ್ಲಿ ನಡೆದು ಹೋಗಬೇಕಿದ್ದು, ಕಾಡು ಪ್ರಾಣಿಗಳ ಹಾವಳಿಯಿದೆ. ಹಾಗಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪುವುದಿಲ್ಲ. ಸುಮಾರು ೧೫ ರಿಂದ ೨೦ ಕಿ.ಮೀ. ಅಂತರದಲ್ಲಿ ಪ್ರಾಥಮಿಕ ಶಾಲೆಗಳಿವೆ. ಈ ಶಾಲೆಗಳಲ್ಲಿ ವಸತಿ ನಿಲಯಗಳ ಅನುಕೂಲಗಳಿಲ್ಲದ ಕಾರಣ ಶಿಕ್ಷಣದಿಂದ ಕಾಲೇಜು ಶಿಕ್ಷಣದವರೆಗೂ ೫೦ ಕಿ.ಮೀ. ದೂರದ ಮಲೆ ಮಹದೇಶ್ವರ ಬೆಟ್ಟದ ಗಿರಿಜನ ಆಶ್ರಮ ಶಾಲೆ, ಮಠದ ಶಾಲೆಗಳಿಗೆ ಸೇರಬೇಕಿದೆ. ಹೀಗೆ ದೂರದ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಪೋಷಕರನ್ನು ಬಿಟ್ಟು ಇರಲು ಕಷ್ಟವಾಗುತ್ತಿದ್ದು, ಭಾನುವಾರ ಅಥವಾ ರಜಾ ದಿನಗಳಲ್ಲಾದರೂ ಮನೆಗೆ ಹೋಗಿ ಬರಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಪೋಷಕರಿಗೂ ತಮ್ಮ ಮಕ್ಕಳನ್ನು ಅಷ್ಟು ದೂರ ತಿಂಗಳುಗಟ್ಟಲೆ ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಕೂಲಿ ಮಾಡಿ ಜೀವನ ನಡೆಸುವ ಬುಡಕಟ್ಟು ಜನರಿಗೆ ೪೦ – ೫೦ ಕಿ.ಮೀ. ದೂರದ ವಿದ್ಯಾರ್ಥಿನಿಲಯದಲ್ಲಿ ಉಳಿಯುವ ಮಕ್ಕಳನ್ನು ಹೋಗಿ ನೋಡಿಕೊಂಡು ಬರಲು ಹಣಕಾಸಿನ ಸಮಸ್ಯೆಯಿದೆ. ಇಷ್ಟು ದೂರದಿಂದ ಶಾಲೆಗೆ ಸೇರುವ ಕೆಲವು ಮಕ್ಕಳು ವರ್ಷದಲ್ಲಿ ಕೆಲವು ತಿಂಗಳು ಮಾತ್ರ ಉಳಿದು ನಂತರ ಶಾಲೆಗೆ ಗೈರುಹಾಜರಿಯಾಗುತ್ತಾರೆ. ಹೀಗೆ ಶಾಲೆಗೆ ಗೈರುಹಾಜರಿಯಾಗುವ ಮತ್ತು ಶಾಲೆಯಿಂದ ಹೊರಗುಳಿಯುವ ಈ ಪ್ರದೇಶದ ಮಕ್ಕಳು (೧೨ನೇ ವಯಸ್ಸು ಮೇಲ್ಪಟ್ಟವರಾಗಿದ್ದಾರೆ), ಯುವಕರು ಆಂಧ್ರ ಪ್ರದೇಶದಲ್ಲಿ ಕಲ್ಲು ಚಿಪ್ಸ್ ಹೊಡೆಯುವ ಕೆಲಸಕ್ಕೆ ಹೋಗುತ್ತಿದ್ದು, ಗಡಿ ಪ್ರದೇಶವಾದ ತಮಿಳುನಾಡಿನ ಹಳ್ಳಿಯ ಜಮೀನಿನಲ್ಲಿ, ತೋಟಗಳಲ್ಲಿ ಕೂಲಿ ಕೆಲಸ ಮಾಡಲು ಹೋಗುತ್ತಾರೆ. ಕಾಫೀ ಹಣ್ಣಿನ ಸಮಯದಲ್ಲಿ ಹೊನ್ನಮೇಟಿ ಎಸ್ಟೇಟ್‍ಗೆ ಹೋಗಿ ಕೆಲಸ ಮಾಡುತ್ತಾರೆ. ಈ ಸಮಸ್ಯೆಗಳಿಂದಾಗಿಯೇ ೧೯೯೮ರಲ್ಲಿ ಆಲಂಬಾಡಿಯಲ್ಲಿ ಶಿಕ್ಷಣ ಇಲಾಖೆ ಹಿರಿಯ ಪ್ರಾಥಮಿಕ ಶಾಲೆಯೊಂದನ್ನು ತೆರೆದಿತ್ತು. ಈ ಶಾಲೆ ಆರಂಭದ ೨ ವರ್ಷ ಮಾತ್ರ ನಡೆದಿದ್ದು, ಅನಂತರ ಶಾಲೆಯನ್ನು ಮುಚ್ಚಲಾಗಿದೆ. ಇದಕ್ಕೆ ಕಾರಣ ಶಿಕ್ಷಕರಿಗೆ ಪ್ರತಿ ದಿನ ತಮಗೆ ಓಡಾಲು ಸಮಸ್ಯೆಯಾಗುತ್ತಿದೆ ಎಂದು, ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆ ಇರುವ ಬಗ್ಗೆ ಹಾಗೂ ದಾಖಲಾದ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂಬ ವರದಿಯನ್ನು ಕೊಟ್ಟು ಶಾಲೆಯನ್ನೇ ಮುಚ್ಚಿಸಿಬಿಟ್ಟರು ಎಂದು ಪೋಷಕರು ದೂರುತ್ತಾರೆ. ಈಗಲಾದರೂ ನಮ್ಮ ಹಳ್ಳಿಯಲ್ಲೇ ಶಾಲೆ ತೆರೆದರೆ ಮಕ್ಕಳನ್ನು ಓದಿಸುವುದಾಗಿ ಪೋಷಕರು ತಿಳಿಸುತ್ತಾರೆ.

ದೂರದ ಪ್ರದೇಶಗಳಲ್ಲಿರುವ ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳು

ಬುಡಕಟ್ಟು ಪ್ರದೇಶಗಳಲ್ಲಿ ಐದನೇ ತರಗತಿ ಮುಗಿದ ನಂತರ ಹೆಚ್ಚು ಮಕ್ಕಳು ಶಾಲೆಗೆ ಹೋಗುವುದಿಲ್ಲ. ಕಾರಣ ಐದನೇ ತರಗತಿ ನಂತರ ಹತ್ತಿರದಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳೇ ಇಲ್ಲ. ಕೆಲವು ಬುಡಕಟ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ ೫ ರಿಂದ ೨೫ ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದರೂ ಆಶ್ರಮ ಶಾಲೆಗಳಂತೆ ಸೌಲಭ್ಯಗಳಿಲ್ಲದ ಕಾರಣ ಮಕ್ಕಳು ಈ ಶಾಲೆಗಳಿಗೆ ಸೇರುವುದಿಲ್ಲ. ಹಾಗಾಗಿ ಕೆಲವು ಮಕ್ಕಳು ೫ನೇ ತರಗತಿಯ ನಂತರ ಓದುವುದನ್ನು ನಿಲ್ಲಿಸುತ್ತಾರೆ. ಬೇಡಗುಳಿ ಗಿರಿಜನ ಪ್ರದೇಶದ ಮಕ್ಕಳು ೫ನೇ ತರಗತಿಯ ನಂತರ ೫೦ ಕಿ.ಮೀ. ದೂರದ ಚಾಮರಾಜನಗರಕ್ಕೆ ದಾಖಲಾಗಬೇಕಿದೆ. ಹೀಗೆ ದಾಖಲಾದ ಮಕ್ಕಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ, ಪೋಷಕರನ್ನು ಬಿಟ್ಟು ಇರಲಾಗದೆ ಶಾಲೆ ಬಿಡುತ್ತಾರೆ. ಈ ಪ್ರದೇಶಕ್ಕೆ ಹೋಗಿ ಬರಲು ಎರಡು ದಿನ ಬೇಕಿದ್ದು, ಬಸ್ಸಿನ ಅನಾನುಕೂಲತೆ ಇದೆ. ಹಾಗಾಗಿ ೫ನೇ ತರಗತಿ ಮುಗಿದ ನಂತರ ಬೇಡಗುಳಿಯಲ್ಲೇ ಇರುವ ಕಾಫಿ ಎಸ್ಟೇಟ್‍ಗಳಲ್ಲಿ ಕೆಲಸ ಮಾಡಲು ಹೋಗುತ್ತಾರೆ. ಪುರಾಣಿ ಪೋಡಿ ಮಕ್ಕಳು ೩ ಕಿ.ಮೀ. ಕಾಡಿನ ಕಾಲು ಹಾದಿಯಲ್ಲಿ ನಡೆದು ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸರ್ಕಾರಿ ಶಾಲೆ ಅಥವಾ ವಿಜಿಕೆಕೆಗೆ ಹೋಗಬೇಕಿದೆ. ಹಿರಿಯಂಬಲ ೫ ಕಿ.ಮೀ. ದೂರ, ಜೀರಿಗೆ ಗದ್ದೆ ೩ ಕಿ.ಮೀ. ದೂರ ಕಾಲು ನಡಿಗೆಯಲ್ಲಿ ಬಂದು ಬಸ್ಸು ಹಿಡಿಯಬೇಕಿದೆ.