ನಿನ್ನೆ ರಾತ್ರಿಯ ಮಳೆ ರಭಸದಿಂದ ಸುರುವಾದರೂ ಹೆಚ್ಚು ಸುರಿಯಲಿಲ್ಲ. ಕಾಡಿನ ನಾನಾ ಸಸ್ಯಗಳನ್ನು ತೊಯ್ಸಿ ಅವುಗಳ ವಾಸನೆ ಕಾಡಿನ ತುಂಬ ಇಡುಗುವಂತೆ ಮಾಡಿ ಹಿಂದೆ ಸರಿದಿತ್ತು. ಬೆಳ್ಳಿ ಮೂಡಿದಾಗ ಮೋಡಗಳಿಂದ ಜಾರಿದ ಕುಡುಗೋಲುಚಂದ್ರ ಪಡುವಣದ ಆಕಾಶದಲ್ಲಿ ಒದ್ದೆಯಾಗಿ ಕಾಣಿಸಿಕೊಂಡಿದ್ದ. ಶಿಖರಸೂರ್ಯನಿಗೆ ನಿದ್ದೆ ಬರಲೇ ಇಲ್ಲ. ಕೊಂಡದ ಮುಂದೆ ಕಾಲು ಚಾಚಿ ಕುಂತವನು ಎದ್ದಿರಲಿಲ್ಲ. ಮುಖ ಬಾತು ಉಬ್ಬಿದ ಎಡಗೆನ್ನೆಯನ್ನು ಮುಟ್ಟಿಕೊಳ್ಳಲೂ ಸಾಧ್ಯವಾಗದಷ್ಟು ನೋಯುತ್ತಿತ್ತು. ತಲೆಯಲ್ಲಿ ಮೊಟ್ಟೆಗಾತ್ರದ ಉಬ್ಬು ಕಾಣಿಸಿಕೊಂಡಿತ್ತು. ಕಣ್ಣು ಕೆಂಡದಂತೆ ಹೊಳೆಯುತ್ತಿದ್ದವು.

ಮಾನಸಿಕ ಆಘಾತ ಇನ್ನೂ ಜೋರಾಗಿತ್ತು. ಬೆಳ್ಳಿ ಕೊಟ್ಟ ಏಟಿನಿಂದ ಮೂರು ಮಾರು ಹಾರಿ ಬಿದ್ದಿದ್ದನಲ್ಲ – ಸಾಮಾನ್ಯ ಹೆಣ್ಣಿಗೆ ಈ ಶಕ್ತಿ ಎಲ್ಲಿಂದ ಬಂತು? ಹ್ಯಾಗೆ ಬಂತು? ತಿಳಿಯದಾಗಿತ್ತು. ಸಹಜವಾಗಿಯೇ ಶಿವಾಪುರದ ಜನ ಅಭೂತಪೂರ್ವ ಸ್ವಾಗತ ನೀಡಿ ಕೃತಾರ್ಥರಾಗುವರೆಂದು ಕನಸು ಕಂಡವನಿಗೆ….. “ಈಗುಳಿದಿರೋದು ಒಂದೇ ದಾರಿ!” ಎಂದು ದನಿ ಕೇಳಿಸಿತು. ನೋಡಿದರೆ ಕರಿ ಹುಡುಗ ಬಂದು ಬೆಂಕಿಯ ಮುಂದೆ ಕೂತ. ಶಿಖರಸೂರ್ಯ ಬೇಸರದಲ್ಲಿ “ಇಷ್ಟು ಹೊತ್ತು ಎಲ್ಲಿ ಹಾಳಾಗಿ ಹೋಗಿದ್ದೆಯೋ ಮಾರಾಯಾ?” ಅಂದ. ಹುಡುಗ ಉತ್ತರಿಸಲಿಲ್ಲ. ಬೆಳ್ಳಿಯ ಭಯಂಕರ ಶಕ್ತಿಯಿಂದ ಅವನಿಗೂ ಅಘಾತವಾಗಿತ್ತು. ಪುನಃ “ಈಗುಳಿದಿರೋದು ಒಂದೇ ದಾರಿ” ಅಂದ ಕಾಲು ಕಾಯಿಸುತ್ತ.

“ಅದೇನು ದಾರಿಯೋ! ಒಂದು ಕಡಿಮೆ ಇಪ್ಪತ್ತು ರಾಜ್ಯಗಳನ್ನ ಗೆದ್ದವನಿಗೆ ಒಂದು ಚಿಕ್ಕ ಹಟ್ಟಿ ಸವಾಲಾಗಿದೆ ಅಂದರೆ ನಂಬುವ ಮಾತೇ ಇದು? ಮಾಂಡಳಿಕ ರಾಜರು ಚಪ್ಪಾಳೆ ತಟ್ಟಿ ನಗುವಂತಾಯಿತಲ್ಲ ನನ್ನ ಗತಿ!”

ಈಗಲೂ ಹುಡುಗ ಮಾತಾಡಲಿಲ್ಲ. ಇವನೇ ಮುಂದುವರಿಸಿದ.

“ಅಧಿಕಾರ ಗಳಿಸಿ ಚಕ್ರವರ್ತಿಯಾದೆ. ಅರಮನೆ ತುಂಬ ಚಿನ್ನ ಗಳಿಸಿದೆ. ನನ್ನ ಗಳಿಕೆಯಲ್ಲ ಹುಸಿ ಎಂದಳು ಮಗಳು! ಸುಖದ ಮಾದಕ ಮಧು ಪಾತ್ರೆಯಂಥ ಹೆಂಗಸಿನ ಒಡೆಯನಾಗಬೇಕೆಂದೆ – ಅವಳೋ ವಿಷಪೂರಿತ ರಾಸಾಯನಿಕವಾಗಿದ್ದಾಳೆ!”

ಹುಡುಗ ಪಕ್ಕದಲ್ಲಿದ್ದ ಮರದ ತುಂಡೊಂದನ್ನು ಬೆಂಕಿಗೆ ಹಾಕಿ ಮತ್ತೆ ಕೂತು ಹೇಳಿದ:

“ಈ ಜನರ ಆದ್ಯತೆಗಳು ಬೇರೆ, ಸಂಸ್ಕೃತಿ ಬೇರೆ, . ಅವರ ವಿಭಿನ್ನ ಬದುಕಿನ ಶೈಲಿಯ ಬಗ್ಗೆ ಆಶ್ಚರ್ಯವಾಗುವದು ಸಹಜ. ಹಾಗಂತ ಅರ್ಥವಾಗದವರನ್ನು ಆಳಬಾರದು ಅಂತಿಲ್ಲವಲ್ಲ?”

ಶಿಖರಸೂರ್ಯ ಆತನ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ; ತಂತಾನೇ ಮಾತಾಡಿಕೊಂಡಂತೆ ಮುಂದುವರಿಸಿದೆ:

“ನಾವು ತಿಳಿಯುತ್ತೇವೆ: ಸೂರ್ಯ ಮೂಡಿ ಈ ಜಗತ್ತನ್ನು ಬೆಳಕಿನಿಂದ ತುಂಬುತ್ತಾನೆ. ಆಮೇಲೆ ಭೂಮಿಯ ಚಟುವಟಿಕೆ ಸುರುವಾಗುತ್ತದೆ ಅಂತ. ಇವರು ಹೇಳ್ತಾರೆ. ಗವಿಯಲ್ಲಿರೋ ಅಮ್ಮ ಸೂರ್ಯನನ್ನು ಬೆಳಗುತ್ತಾಳೆ ಅಂತ! ನಮ್ಮದು ನಮಗೆ ನಿಜ. ಅವರದೂ ಅವರಿಗೆ ನಿಜ – ಮೂಢನಂಬಿಕಾಯಾದರೂ! ಆದರೆ ಅವರ ಮೂಢನಂಬಿಕೆಗಿರುವ ಬಲ ನಮ್ಮ ನಿಜಕ್ಕಿಲ್ಲ, ಯಾಕೆ? ಗವಿಯ ಕಡೆ ನೋಡಿ ಅಗೋ ಅಮ್ಮ ಅಂತಾರೆ. ಕೈ ಮುಗಿಯುತ್ತಾರೆ. ಬೇಕಾದರೆ ಹೋಗಿ ಮುಟಿ ಬರುತ್ತಾರೆ. ಅಮ್ಮನೊಂದಿಗೆ ಮಾತಾಡಿ ಬರುತ್ತಾರೆ! ನಾವು ನಮ್ಮ ನಿಜವನ್ನ ಮುಟ್ಟುವದೂ ಇಲ್ಲ. ಅದರೊಂದಿಗೆ ಮಾತಾಡುವುದು ಇಲ್ಲ. ನಮ್ಮ ತಾರ್ಕಿಕ ಶಕ್ತಿಯನ್ನು ತೃಪ್ತಿಪಡಿಸಿಕೊಂಡು ಸಮಾಧಾನ ಪಡುತ್ತೇವೆ.”

ಶಿಖರಸೂರ್ಯ ವಿಷಣ್ಣನಾಗಿದ್ದ. ಹುಡುಗ ಉತ್ಸಾಹದಿಂದ ಹೇಳಿದ:

“ಅಮ್ಮನ ಹೆಸರಿನಲ್ಲಿರುವ ಅಜ್ಞಾತವನ್ನವರು ಪ್ರೀತಿಸುತ್ತಾರೆ. ತಮ್ಮ ಪ್ರೀತಿ ಮತ್ತು ತಮ್ಮೆಲ್ಲ ಭಾವನೆಗಳನ್ನು ಅದು ವಿವರಿಸುತ್ತದೆ ಅಂತಾರೆ. ಇದೇ ಅವರ ದುರ್ಬಲ ಸ್ಥಳ. ನೀನೂ ಒಂದು ಅಜ್ಞಾತವನ್ನು ಸೃಷ್ಟಿ ಮಾಡು.”

ಶಿಖರಸೂರ್ಯ ಚುರುಕು ದೃಷ್ಟಿಯಿಂದ ಹುಡುಗನನ್ನು ನೋಡಿದ. ಅವನ ಕುತೂಹಲ ಕೆರಳಿದ್ದಕ್ಕೆ ಹುಡುಗ ಉತ್ಸಾಹಗೊಂಡು ಮುಗುಳುನಗುತ್ತಿದ್ದ. ಶಿಖರಸೂರ್ಯ ಸ್ವಲ್ಪಹೊತ್ತು ಹಾಗೇ ನೋಡುತ್ತಿದ್ದ. “ಅಂದರೆ?” ಅಂದ.

“ನೀನೂ ನಿನ್ನ ದೇವರನ್ನು ತೋರಿಸು ಗುರು. ಇದೆಯಲ್ಲ – ಒಂದು ಕಾಲಲ್ಲಿ ತಕ್ಕಡಿ ಇನ್ನೊಂದರಲ್ಲಿ ಚೂರಿ ಹಿಡಿದ ಹದ್ದು! ಅದನ್ನೇ ದೇವರೆಂದು ಹೇಳು. ಲೋಕವೆಲ್ಲಾ ಹಣವಂತರಾಗಲಿ ಅಂತದೆ ಈ ದೇವರು! ಆಗದ ದರಿದ್ರರನ್ನ ಕೊಂಡು ಭೂಮಿಯ ದಾರಿದ್ರವನ್ನ ನಾಶ ಮಾಡಿರಯ್ಯ ಅಂತದೆ. “ದಾರಿದ್ಯ್ರದ ವಿರುದ್ಧ ನಮ್ಮ ಯುದ್ಧ!” ಅಂತ ಚಿನ್ನದ ಧಾನ್ಯ ಚೆಲ್ಲಿ ನೋಡು. ಆಯ್ದುಕೊಳ್ಳದವ ಇದ್ದರೆ ನನಗೆ ತೋರಿಸು.”

ಹುಡುಗನ ದನಿಯಲ್ಲಿ ಆತ್ಮ ವಿಶ್ವಾಸ ಮತ್ತು ಉತ್ಸಾಹವಿತ್ತು. ಕೊಂಚ ಅನುಮಾನದಿಂದ ಶಿಖರಸೂರ್ಯ ಕೇಳಿದ:

“ಆದರೆ ಶಿವಪಾದ ಅವರಿಗೆ ಬೇಕಾದಷ್ಟು ಅಸ್ತ್ರ ಕೊಟ್ಟಿದ್ದಾನಯ್ಯಾ! ಮೌಲ್ಯ ಅಂತವೆ, ಸಂಸ್ಕೃತಿ ಅಂತಿವೆ. ಅಮ್ಮ ಬಂದಳು ಅಂತ ಗಡಗಡ ನಡುಗುತ್ತವೆ, ಹಾಡಿ ಕುಣಿಯುತ್ತವೆ….”

“ಅದನ್ನೆಲ್ಲಾ ನನಗೆ ಬಿಡು ಗುರು. ಅವರು ಒಂದು ಹೇಳಿದರೆ ನಾನು ಹತ್ತು ಕತೆ ಹೇಳಾಕಿಲ್ಲವ?”

“ಕಥೆ ಹೇಳೋದಕ್ಕಲ್ಲಯ್ಯಾ, ತಾರ್ಕಿಕ ಜಗತ್ತನ್ನ ಹೊರಗಿಸಲಿಕ್ಕೆ ಅವರು ಹುಟ್ಟಿಸಿದ ಉಪಯಗಳಿವು. ಇಂಥ ಉಪಾಯಗಳನ್ನ ಗುಡ್ಡೆ ಹಾಕಿ ಅದನ್ನೇ ಪುರಾಣ ಅಂತವೆ! ಪುರಾಣ ಅಂದಕೂಡಲೆ ಹೆದರತೀವಿ ಅಂತ ಗೊತ್ತಿದೆ ಅವಕ್ಕೆ.”

“ನೀನು ಹೇಳಿದ್ದು ಅರ್ಥವಾಯಿತು ಗುರು. ಶಿವಾಪುರ ಅಂದರೆ ಏನು ಅಂತ ಗೊತ್ತಾಯಿತು: ಅದೊಂದು ಕಗ್ಗಾಡು; ಮಾತಾಡುವ ಪ್ರಾಣಿಗಳಿಂದ ತುಂಬಿದ ಕಗ್ಗಾಡು! ಹಗಲು ಕೂಡ ಸೂರ್ಯನ ಬಿಸಿಲು ಬೀಳದ ಕಗ್ಗಾಡು. ಆ ಕಗ್ಗಾಡಿನಲ್ಲಿ ಸೂರ್ಯನ ಕಿರಣಗಳು ಪ್ರವೇಶಿಸುವಂತೆ ಮಾಡಿ ಕತ್ತಲನ್ನು ಓಡಿಸುವುದು ನಮ್ಮ ಧರ್ಮದ ಉದ್ದೇಶ. ಕತ್ತಲೆಯ ಕಗ್ಗಾಡಿನಲ್ಲಿ ಬೆಳಕಿನ ಹೊಸ ಧರ್ಮ ಸಾಮ್ರಾಜ್ಯ ಸ್ಥಾಪನೆಯೇ ನಮ್ಮ ಗುತಿ! ಇದೇ ಧರ್ಮಯುದ್ಧ! ಈ ಯುದ್ಧದಲ್ಲಿ ನಿನ್ನಡಿಯ ಬಲಿಯಾದರೂ ಸೈ, ನೀನು ಗೆಲ್ಲಲೇಬೇಕು”.

“ಆದರೆ ಶಿವಾಪುರದ ಜನ ಅಸಾಧ್ಯರಯ್ಯಾ! ಅವರ ಮನಸ್ಸು ಹೀಗೇ ಇಷ್ಟೇ – ಅಂತ ಹೇಳಲಿಕ್ಕಾಗದು.”

“ನಿನಗೆ ಅಪ್ರಿಯವಾದ ಒಂದು ಸತ್ಯ ಇದೆ. ಹೆದರದೆ ಹೇಳು ಅಂದೆ ಹೇಳುತ್ತೇನೆ.”

“ಅದೇನಿದೆಯೋ ಬೊಗಳಯ್ಯಾ”.

“ಇಂದಿಲ್ಲ ನಾಳೆ, ಎಂದಾದರೊಂದು ದಿನ “ನೀನು ಕೂತ ಜಾಗ ಖಾಲಿ ಮಾಡು” ಅಂತ ನಿನಗೆ ಹೇಳೋನು ಒಬ್ಬನೇ – ತರುಣಚಂದ್ರ ಅರ್ಥಾತ್ ನಿನ್ನಡಿ! ಹೌದಾ?”

“ಹೌದು” ಎಂದ ಶಿಖರಸೂರ್ಯ ಮೆತ್ತಗಾಗಿ.

“ಇಲ್ಲಿಯ ಬೆಟ್ಟಕ್ಕೂ ಅಲ್ಲಿಯ ಕನಕಪುರಿಗೂ ಅವನೇ ಹಕ್ಕಿನ ಅಧಿಕಾರಿ! ನೀನಲ್ಲಿ! – ಹೌದಾ?”

“ಹೌದು!”

“ಹಾಗಿದ್ದರೆ ಅವನನ್ನ ಮುಗಿಸಲಿಕ್ಕೆ ನಿನಗಿರುವ ಅವಕಾಶವೂ ಇದೊಂದೇ! ಅಂತಿಮ ಅವಕಾಶ! ಹೌದಾ?”

“ಭಲೆ!”

– ಅಂದ ಶಿಖರಸೂರ್ಯ, ಹುಡುಗನ ಮಾತು ಖಾತ್ರಿಯಾಗಿ ಅವನ ಕಣ್ಣಲ್ಲಿ ಝಗ್ಗನೆ ಬೆಳಕಾಡಿ ಮುಖ ಕಳೆಕಳೆಯಾಯಿತು.

“ಅಯ್ಯಾ ಮಿತ್ರಾ, ಈ ಯುದ್ಧದ ಮುಂದಾಳು ಈಗಿನಿಂದ ನೀನೇ ಕಣಯ್ಯಾ! ತರುಣಚಂದ್ರನ ಕಥೆ ಮುಗಿಸಲೇಬೇಕು. ಹೇಳು ಏನು ಮಾಡೊಣ?”

“ವೈರಿಯ ಮರ್ಮಸ್ಥಳವನ್ನ ಸರಿಯಾಗಿ ಗುರುತಿಸಬೇಕು. ಆಮೇಲೆ ಇರಿಯಬೇಕು. ಏನಂತಿ?”

“ಭಲೆ!”

“ನಿನ್ನ ಪ್ರಥಮ ವೈರಿ – ಶಿವಾಪುರದ ಜನತೆ! ಅವರ ಜೀವ ಜೀವಾಳ ಎಲ್ಲಿದೆ ಗೊತ್ತ? ನಿನ್ನಡಿಯೆಂಬ ಗಿಣಿಯ ಹೃದಯದಲ್ಲಿ! ಗಿಣಿಯನ್ನ ಬಂಧಿಸಿ, ಪಂಜರದಲ್ಲಿಟ್ಟು ಅದರ ಒಂದೊಂದೇ ರೆಕ್ಕೆ ಪುಕ್ಕಗಳನ್ನ ಕಿತ್ತೆಸೆಯುತ್ತ ಆ ಜನರಿಗೆ ತೋರುಸುತ್ತ ಹೇಳಬೇಕು: –

“ಬೆಟ್ಟ ಕೊಟ್ಟರೆ ಗಿಣಿಯನ್ನು ಜೀವಂತ ಬಿಡ್ತೀನಿ! ಇಲ್ಲವೋ? ಗಿಣಿಯನ್ನ ಕೊಲ್ತೀನಿ!”

“ಭಲೇ ಮಿತ್ರಾ!”

“ಬೆಟ್ಟ ಸಿಕ್ಕ ಮೇಲೆ ಗಿಣಿಯನ್ನು ಮುಗಿಸಬೇಕು. ಆಗ ನೋಡು ಗುರು – ಇಲ್ಲಿ ಶಿವಾಪುರ, ಅಲ್ಲಿ ಕನಕಪುರಿ – ಎರಡಕ್ಕೂ ನೀನೆ ಅಖಂಡ ದೊರೆ!”

“ಆದರೆ ಅವನು ಸಿಕ್ಕಬೇಕಲ್ಲ?”

“ಅವಸರ ಮಾಡಬೇಡ. ನಿಶ್ಚಿಂತನಾಗಿರು. ಅವನು ಶಿವಾಪುರ ಸೀಮೆಗೆ ಅಧಿಕಾರಿ, ನಿನಗೆ ಗೌರವ ಸೂಚಿಸಲಿಕ್ಕಾದರೂ ನೀನಿದ್ದಲ್ಲಿಗೆ ಬಂದೇ ಬರ್ತಾನೆ. ಅದೇ ಸಂದರ್ಭ – ಬೆಲ್ಲದ ಮಾತಿನಲ್ಲಿ ಬೆಟ್ಟವ ಕೊಡೆಂದು ಕೇಳು. ಕೊಟ್ಟನೋ? ಬಚಾವಾದ. ಇಲ್ಲವೋ – ಛಕ್ಕಂತ ಹಿಡಿದು ಪಂಜರದಲ್ಲಿಡು, ”

ಶಿಖರಸೂರ್ಯ ಇದೇ ವಿಚಾರವನ್ನ ಮೆಲುಕಾಡಿಸುತ್ತ, ಇಡೀ ದಿನ ಮಾಡಬೇಕಾದ ಕೆಲಸ ಕಾರ್ಯಗಳ ಯೋಜನೆ ಹಾಕುತ್ತ ಕೂತ. ಹುಡುಗ ಯಾವಾಗಲೋ ಮಾಯವಾಗಿದ್ದ.