ಎಂಟನೇ ದಿನ ಬೀರನ ಹಟ್ಟಿಯಿಂದ ಯಾತ್ರಿಕರು ಯೋಗಿಕೊಳ್ಳಕ್ಕೆ ಪಯಣವಾಗಲು ತಯಾರಾದಾಗ ಎಲ್ಲಿ ಮಿಂದಿದ್ದರೋ, ಗಂಗ, ಬೊಂತೆಯರು ನ್ಯಾರೇ ಕೂಡ ಮಾಡಿ ಬಂದು ಸೇರಿಕೊಂಡರು. ಬೊಂತೆಯ ಗೌರಿಯ ಕೈಯಲ್ಲಿಯ ಗಂಟು ತಗೊಂಡ. ನಿನ್ನೆ ದೀಪವಾರಿದ ಮೇಲೆ ಮಂಟಪದಲ್ಲಿ ಏನು ನಡೆಯಿತೆಂದು ಇತಿಹಾಸಕ್ಕೆ ತಿಳಿಯಲಿಲ್ಲ. ಏನು ನಡೆಯಿತೆಂದು ತಿಳಿಯಲು ಅನೇಕ ಯಾತ್ರಿಕರು ಆಸಕ್ತಿಯಿಂದ ಕೇಳಿದರೂ ಗಂಗ ಬೊಂತೆಯರು ಹೇಳಲಿಲ್ಲ. ಆದರೆ ಇಬ್ಬರೂ ಒಳಗೊಳಗೇ ನಗುತ್ತಿದ್ದರು. ಆಗಾಗ ತಮ್ಮಲ್ಲೇ ನಗೆ ಮತ್ತು ನೋಟಗಳಿಂದ ಮಾತಾಡಿಕೊಳ್ಳುತ್ತಿದ್ದರು. ಕೇಳುವುದಕ್ಕೆ ಗೌರಿಗೆ ಆಸಕ್ತಿ ಇರಲಿಲ್ಲ. ಅವಳ ಚಿಂತೆ ಇದ್ದದ್ದು ಪುನಃ ಭಂಟರು ಬಂದರೆ ಏನು ಮಾಡುವುದೆಂಬುದೇ ಆಗಿತ್ತು. ಆ ಬಗ್ಗೆ ಚಿಂತೆ ಬೇಡವೆಂದು ಇಬ್ಬರೂ ಆಶ್ವಾಸನೆ ಕೊಟ್ಟರು. ಇಷ್ಟಂತೂ ನಿಜ: ಆಮೇಲೆ ರಾಜಭಂಟರ್ಯಾರೂ ಯಾತ್ರಿಕರ ಕಡೆ ಸುಳಿಯಲಿಲ್ಲ. ದಾರಿಯಲ್ಲಿ ಯಥಾ ಪ್ರಕಾರ ಗಂಗನ ಚೇಷ್ಟೆಗಳು, ಕಥನಗಳು ನಡೆದೇ ಇದ್ದವು. ಆದರೂ ಆತ ನಿನ್ನೆಯ ಘಟನೆಯ ಬಗ್ಗೆ ತಪ್ಪಿಕೂಡ ಬಾಯಿ ಬಿಡಲಿಲ್ಲ.

ಬರಬರುತ್ತ ಮಧ್ಯಾಹ್ನದ ಊಟವಾದ ಮೇಲೆ ಯಾತ್ರಿಕರಲ್ಲಿಯೇ ಎರಡು ಗುಂಪುಗಳಾದವು. ಹೊಸ ಯಾತ್ರಿಕರ ಗುಂಪು ಮುಂದೆ ಮುಂದೆ ಹೋದರು. ಇನ್ನೊಂದು ಗುಂಪಿನಲ್ಲಿ ಗೌರಿ, ಗುಣದಮ್ಮ, ಗಂಗ, ಬೊಂತೆಯರಿದ್ದರು. ಈ ಗುಂಪು ಮೌನವಾಗಿತ್ತು. ಗೌರಿಗೆ ಉದರಶೂಲೆ ಸುರುವಾಗಿತ್ತು. ನಿನ್ನೆ ನಾಯಕನಾಡಿದ ಮಾತು ಕೇಳಿದ ಮೇಲೆ ಗಂಗನಿಗೆ ಗೌರಿಯ ಬಗ್ಗೆ ಮರುಕ ಸುರುವಾಗಿತ್ತು. ರಾಜನೇ ಇವಳನ್ಯಾಕೆ ಕೊಲ್ಲಿಸಬಯಸಿದ್ದ? ಇವಳು ಮಲಮಗಳಿರಬಹುದೆ? ಗೌರಿಯನ್ನು ಕೇಳುವುದು ಒಳ್ಳೆಯದಲ್ಲ. ಗುಣದಮ್ಮನಿಗೆ ವಿಷಯ ಗೊತ್ತಿಲ್ಲ. ಬೊಂತೆಯನಿಗೆ ಬಾಯಿ ಇಲ್ಲ. ಶಿವಾಪುರಕ್ಕೆ ಹೋದ ಮೇಲೆ ಕೇಳಿದರಾಯ್ತೆಂದು ಸುಮ್ಮನಾದ.

ಬೊಂತೆಯನೂ ನಾಯಕನ ಮಾತನ್ನು ಕದ್ದು ಕೇಳಿಸಿಕೊಂಡು ನಡುಗಿ ಹೋಗಿದ್ದ. ಮಗಳ ಕೊಲೆಗೆ ಹಾರೈಸಿದ್ದನ್ನು ತಿಳಿದು ಶಿಖರಸೂರ್ಯನ ನೆನಪಾದರೆ ಸಾಕು ದೆವ್ವ ಬೂತ ಕಂಡಂತೆ ಚಳಿ ಹತ್ತಿ ನಡುಗುತ್ತಿದ್ದ. ಇನ್ನು ಈ ಕೂಸಿನ ಗತಿಯೋ ಶಿವಾಪುರದಮ್ಮನೇ ಕಾಪಾಡಬೇಕೆಂದು, ಆ ಕಾಳಜಿಯನ್ನ ಅಮ್ಮನಿಗೆ ವಹಿಸಿ ತಾನು ಮಾತ್ರ ಇನ್ನು ಮೇಲೆ ಕನಕಪುರಿಗೆ ಬರಲೇಬಾರದೆಂದೂ ಗೌರಿ ಹಿಂದಿರುಗಿ ಬಂದರೂ ತಾನು ಶಿವಾಪುರದಲ್ಲೇ ಉಳಿಯಬೇಕೆಂದೂ ತೀರ್ಮಾನಿಸಿಕೊಂಡ

ಗೌರಿಯ ಉದರಶೂಲೆ ಎಂದಿಗಿಂತ ಈ ದಿನ ಹೆಚ್ಚು ಹರಿತವಾಗಿತ್ತು. ಆಗಾಗ ನಿಂತು ಜೊತೆ ಯಾತ್ರಿಕರ ಕಣ್ಣು ತಪ್ಪಿಸಿ ಹೊಟ್ಟೆ ಹಿಂಡಿಕೊಳ್ಳುತ್ತಿದ್ದಳು. ಯಾರ  ಕಣ್ಣ ತಪ್ಪಿಸಿದರೂ ಬೊಂತೆಯನಿಂದ  ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಇವಳು ಹೊಟ್ಟೆ ನೋವಿನಿಂದ ನೋಂದರೆ ಆತ ತಾನೇನು ಮಾಡಲಾಗುತ್ತಿಲ್ಲವಲ್ಲ ಎಂದು ನೋಯುತ್ತದ್ದ, ಮರುಗುತ್ತಿದ್ದ, ತನ್ನ ಅಸಹಾಯಕತೆಯ ಬಗ್ಗೆ ತಲೆಗೂದಲು ಕಿತ್ತುಕೊಳ್ಳುತ್ತಿದ್ದ. ಒಮ್ಮೊಮ್ಮೆ ಕೆನ್ನೆಗೆ ಹೊಡೆದುಕೊಳ್ಳುತ್ತಿದ್ದ. ಗೌರಿ ಸಾಧ್ಯವಾದಾಗಲೆಲ್ಲ ಅವನಿಗಾಗಿ ನಗುತ್ತ ಸಮಾಧಾನಿಯಾಗಿ ಸಹಿಸಿಕೊಳ್ಳುತ್ತ ದಾರಿ ಸವೆಸುತ್ತಿದ್ದಳು.

ಮುಂದಿನ ಗುಂಪಿನಲ್ಲಿ ಕನಕಪುರಿಯ ಒಬ್ಬ ಯಾತ್ರಿಕನಲ್ಲದೆ ಸುತ್ತಲಿನ ಊರಿನ ಮೂರು ಜನರೂ ಇದ್ದರು. ಸಹಜವಾಗಿಯೇ ಅವರ ಚರ್ಚೆ ತಮ್ಮ ಸ್ಥಿತಿಗತಿಯ ಕಡೆಗೇ ಕೇಂದ್ರೀಕೃತವಾಗಿತ್ತು. ಅವರ ಕೋಪತಾಪಗಳು ರಾಜಕಾರಣದ ಸುತ್ತಲೇ ತಿರುಗುತ್ತಿದ್ದವು.

ತಾನು ಮಹಾರಾಜನಾದ ಮೇಲೆ ಶಿಖರಸೂರ್ಯ ತೆರಿಗೆಯನ್ನ, ಕಪ್ಪಕಾಣಿಕೆಯನ್ನ ಕೂಡಾ ಧಾನ್ಯರೂಪದಲ್ಲಿ ಕೊಡಬಹುದೆಂದು ಕಾನೂನು ಮಾಡಿದ್ದನಷ್ಟೇ. ಅದು ರೈತರಿಗೆ, ಮಾಂಡಳಿಕ ರಾಜರಿಗೆ ಸುಲಭವಾದ್ದರಿಂದ ಉತ್ಸಾಹ ಮೀರಿ ಉದಾರವಾಗಿ ಸ್ಪಂದಿಸಿದ್ದರು. ಶಿಖರಸೂರ್ಯನೂ ವರ್ತಕ ಮಂಡಳಿಯೊಂದಿಗೆ ಧಾನ್ಯದ ಚಿನ್ನದಿಂದಲೇ ಲೇನಾದೇನಾ ವ್ಯವಹರಿಸಿದ್ದ. ಅಲ್ಲದೆ ಪೊಗದಿ ರೂಪದಲ್ಲಿ ಧಾನ್ಯ ಪಡೆದದ್ದಲ್ಲದೆ ವರ್ತಕರನ್ನೂ ಧಾನ್ಯ ಸಂಗ್ರಹಕ್ಕೆ ಪ್ರಚೋದಿಸಿ ಅವರಿಗೆ ಚಿನ್ನ ಕೊಟ್ಟು ಧಾನ್ಯ ಪಡೆದಿದ್ದ. ರೈತರು ಸಾಮಾನ್ಯವಾಗಿ ವರ್ಷವಿಡೀ ತಮಗಾಗುವಷ್ಟು ಧಾನ್ಯ ಇಟ್ಟುಕೊಂಡು ಉಳಿದ ಧಾನ್ಯದಿಂದ ಬಟ್ಟೆ, ಚಿನ್ನ ಕೊಳ್ಳುತ್ತಿದ್ದರು. ಆದರೆ ಈ ಬಾರಿ ಚಿನ್ನ ಅಗ್ಗವಾಗಿದ್ದುದರಿಂದ ಮಿತಿ ಮೀರಿದ ಅಮಿಷದಿಂದ ಧಾನ್ಯ ಕೊಟ್ಟು ಚಿನ್ನ ಪಡೆದಿದ್ದರು.

ಈ ಕಡೆಗೆ ಲೆಕ್ಕಿಗರು ಧಾನ್ಯ ಕೊಂಡಿಡುವ ಸೂಚನೆಯನ್ನು ವರ್ತಕರಿಗೆ ಹಿಂದೆಯೇ ಕೊಟ್ಟಿದ್ದರು. ಆ ಕಡೆ ಮಹಾರಾಜನೂ ವರ್ತಕರಿಗೆ ಅಮಿಷ ತೋರಿಸಿ ಚಿನ್ನ ಕೊಟ್ಟು ಅವರಿಂದ ಧಾನ್ಯ ಪಡೆದಿದ್ದ. ಕೊಂಡ ವರ್ತಕರಿಗೆ ಆಗಿನ್ನೂ ಸಂದೇಹ ಬಂದಿರಲಿಲ್ಲವಾದ್ದರಿಂದ ನಿರೀಕ್ಷೆಗಿಂತ ಹೆಚ್ಚಾಗಿಯೇ ಸಿಕ್ಕುವ ಚಿನ್ನಕ್ಕೆ ತಾವು ರೈತರಿಂದ ಕೊಂಡ ಧಾನ್ಯವನ್ನೆಲ್ಲಾ ಅರಮನೆಗೆ ಮಾರಿ ಬಿಟ್ಟಿದ್ದರು. ಈಗ ಧಾನ್ಯವಿಲ್ಲದೆ ಜನ ಪರದಾಡುವ ಸ್ಥಿತಿ ಬಂದಕೂಡಲೇ ಕೊಟ್ಟ ಧಾನ್ಯವೆಲ್ಲವೂ ಚಿನ್ನವಾಗಿರುವ ವಿಷಯ ತಿಳಿದು ವರ್ತಕರಿಗೆ ಸಂದೇಹ ಬಂತು. ಸಾಲದ್ದಕ್ಕೆ ಮಹಾರಾಜ ಲೇನಾದೇನಾ ವ್ಯವಹಾರದಲ್ಲಿ ಕೊಟ್ಟ ಚಿನ್ನವೆಲ್ಲ ಧಾನ್ಯದ ಯಥಾವತ್ ಆಕಾರದಲ್ಲಿತ್ತು. ಆದ್ದರಿಂದ ಧಾನ್ಯದಿಂದ ಚಿನ್ನ ಮಾಡುವ ವಾಮವಿದ್ಯೆ ಇವನಿಗೆ ತಿಳಿದಿದೆಯೆಂದು ವರ್ತಕರು ಊಹಿಸಿ ತಮ್ಮ ಬಳಿ ಇದ್ದುದೆಲ್ಲ ನಕಲಿ ಚಿನ್ನವೆಂಬ ತೀರ್ಮಾನಕ್ಕೆ ಬಂದರು. ಚಿನ್ನವೆಂದರೆ ಅದೊಂದು ಸರ್ವೇಸಾಮಾನ್ಯವಾದ ಲೋಹ ಅದಕ್ಕೆ ಬೆಲೆ ಬರೋದು ಮನುಷ್ಯ ಅದನ್ನು ನಂಬಿದರೆ ಮಾತ್ರ. ಚಿನ್ನ ಈಗ ಆ ನಂಬಿಕೆಯನ್ನು ಕಳೆದುಕೊಂಡು ಲೋಹ ಮಾತ್ರವಾಗಿತ್ತು. ತಾವು ಮೋಸ ಹೋದೆವೆಂದು ಎಲ್ಲರೂ ಹತಾಶರಾಗಿ ತಲೆ ಮೇಲೆ ಕೈ ಹೊತ್ತು ಕೂತರು. ಈಗ ಧಾನ್ಯದ ಬೇಡಿಕೆ ಹೆಚ್ಚಾಗಿ ಕೇಳಿದ ಬೆಲೆ ಕೊಟ್ಟರೂ ಸಿಗಲಾರದಷ್ಟು ಅಪರೂಪವಾಯಿತು. ಕನಕಪುರಿಯ ಜೀವಾಳವೇ ವ್ಯಾಪಾರ. ಇಡೀ ಕನಕಪುರಿ ಗರಬಡಿದಂತೆ ಸ್ತಬ್ಧವಾಯಿತು.

ಧಾನ್ಯದಿಂದ ಮಾಡಿದ ಚಿನ್ನ ಎಂದಿದ್ದರೂ ನಕಲಿ ಎಂದು ಶಿಖರಸೂರ್ಯನಿಗೆ ಗೊತ್ತಿತ್ತು. ಧಾನ್ಯದಿಂದ ಚಿನ್ನ ಮಾಡಿದ ಹಾಗೆ – ಚಿನ್ನದಿಂದ ಧಾನ್ಯ ಮಾಡುವಾತನೊಬ್ಬ ಬಂದು ತಿರುಮಂತ್ರ ಹಾಕಿದರೆ ತನ್ನ ಗಳಿಕೆಯೆಲ್ಲ ವ್ಯರ್ಥವಾಗುವುದಲ್ಲದೆ ಪ್ರಜೆಗಳ ನಂಬಿಕೆ ಹೋಗಿ ಜನ ದಂಗೆಯೇಳಬಹುದೆಂದು ಕೂಡ ಊಹಿಸಿದ್ದ. ಈಗ ಆ ಊಹೆ ನಿಜವಾಗುವ ಸಂದರ್ಭ ಬಂದಿತ್ತು. ಇದೆಲ್ಲದರಿಂದ ಪಾರಾಗುವ ಒಂದೇ ಉಪಾಯವೆಂದರೆ ಅಂಗೈಯಗಲ ಜಾಗ ಬಿಡದೆ ಅರಮನೆಯ ಅಷ್ಟೂ ಸ್ಥಳವನ್ನು ತುಂಬಿದ ಚಿನ್ನವನ್ನು ಧಾನ್ಯವಾಗಿ ಪರಿವರ್ತಿಸುವುದು. ಆದರೆ ಆ ವಿದ್ಯೆ ಅವನಿಗೆ ಗೊತ್ತಿರಲಿಲ್ಲವಾದ್ದರಿಂದ ಕೈ ಕೈ ಹೊಸೆಯುತ್ತಾ ಕೂತಿದ್ದ. ಬಡವರು ಕಂಗಾಲಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗತೊಡಗಿದರು. ನಿರ್ಗತಿಕರು ಶಿವಾಪುರದ ಹಾದಿ ಹಿಡಿದಿದ್ದರು. ಯಾಕೆಂದರೆ ಬಂದವರನ್ನು ಬರಬ್ಯಾಡಿರೆಂದು ಹೇಳದ ಊರು ಅದೊಂದೇ. ವಿಶಾಲವಾದ ರಾಜ್ಯದಲ್ಲಿ ಧಾನ್ಯದ ಪರದಾಟ ನೋಡಿ ಲೆಕ್ಕಿಗರು ವರ್ತಕರನ್ನೂ, ವರ್ತಕರು ಸಾಮಾನ್ಯರನ್ನೂ ಪರೋಕ್ಷವಾಗಿ ಪ್ರಚೋದಿಸುತ್ತ ಮೈಮರೆತವರನ್ನು ಸುಲಿಯುತ್ತಿದ್ದರು.

ಯಾತ್ರಿಕರು ಅವನನ್ನ ಮಲೆಯಾಳ ಮಾಂತ್ರಿಕ ಎಂದರು. ನವತಂತ್ರಿ ನಾರಾಯಣ ಎಂದರು. ತಲೆಗೊಂದೊಂದು ಶಾಪ ಹಾಕುತ್ತ ಯೋಗಿಕೊಳ್ಳ ತಲುಪಿದರು. ಆ ದಿವಸ ಹಿರಿಯನ ಮನೆಯಲ್ಲಿ ಯಾತ್ರಿಕರ ಊಟದ ಏರ್ಪಾಡಾಗಿತ್ತು. ಊಟ ಮಾಡಿ ಎಲ್ಲರೂ ಪಡಸಾಲೆಯಲ್ಲಿ ಕೂತಿದ್ದಾಗ ಮೂಲೆಯಲ್ಲಿ ಮೊರದ ತುಂಬ ಚಿನ್ನದ ಧಾನ್ಯ ತುಂಬಿ ಇಟ್ಟದ್ದನ್ನ ನೋಡಿ ಬೆರಗಾದರು. ಜನರು ಬರಹೋಗುವ ಪಡಸಾಲೆಯ ಒಂದು ಮೂಲೆಯಲ್ಲಿಡುವಷ್ಟು ಚಿನ್ನ ಅಗ್ಗವಾಯಿತೇ! ಎಂದು ಚಕಿತರಾದರು. ಹಿರಿಯನನ್ನ ಕೇಳಿದಾಗ ತಿಳಿಯಿತು; ಚೀಲ ಬತ್ತಕ್ಕೆ ಸಿಕ್ಕ ಚಿನ್ನವಂತೆ.

ಆ ದಿನ ಗುಣದಮ್ಮ ಒಂದು ಕಥೆ ಹೇಳಿದಳು:

ತಿಗಳರ ದೇಶದಲ್ಲಿ ಭಕ್ತಿಯೆಂಬ ದೇವತೆ ಅವತಾರವಾದಳು. ಅವಳಿಗೆ ಜ್ಞಾನ ಮತ್ತು ಕರ್ಮ ಎಂಬವರು ಅಣ್ಣ ತಮ್ಮಂದಿರು. ಮೂವರೂ ಅಮ್ಮನ ದರ್ಶನಕ್ಕೆ ಶಿವಾಪುರಕ್ಕೆ ಹೊರಟರು.

ಮಲೆಯಾಳ ಮಹಾರಾಷ್ಟ್ರಾದಿ ದೇಶಗಳ ಸುತ್ತಿ ಶಿವಾಪುರಕ್ಕೆ ಬರುವಾಗ ದಾರಿಯಲ್ಲಿ ಭಕ್ತಿದೇವಿ ಭಕ್ತಿ ಮಾಡುತ್ತ ಬಂದಳು. ಅಣ್ಣ ತಮ್ಮಂದಿರಿಬ್ಬರೂ ನಾ ಹೆಚ್ಚು ನೀ ಕಡಿಮೆಯೆಂದು ವಾದ, ಸಂವಾದ ವಾಕ್ಯಾರ್ಥಂಗಳ ಮಾಡುತ್ತ ಬಂದರು.

ಶಿವಾಪುರಕ್ಕೆ ಬಂದಾಗ ಸಹೋದರರಿಬ್ಬರೂ ವೃದ್ಧರಾಗಿದ್ದರಿಂದ ಬೆಟ್ಟವನ್ನು ಹತ್ತಲಾಗಲಿಲ್ಲ. ಭಕ್ತೀದೇವಿ ಅಮ್ಮನನ್ನು ಸ್ಮರಿಸುತ್ತ ಬೆಟ್ಟ ಹತ್ತಿದಳು.

ಗವಿಗೆ ಹೋಗಿ ಭಕ್ತೀದೇವಿ ಶಾಂತ ದಾಸ್ಯ, ವಾತ್ಸಲ್ಯ ಮತ್ತು ಮಧುರ ಇತ್ಯಾದಿ ಪಂಚಭಾವಗಳಲ್ಲಿ ವ್ಯಕ್ತವಾದ ಶ್ರವಣ, ಕೀರ್ತನ, ಸ್ಮರಣ ಪಾದಸೇವನ, ಅರ್ಚನ, ವಂದನ, ಆತ್ಮನಿವೇದನ ಎಂಬ ನವವಿಧ ಭಕ್ತಿಯ ಮಾಡಿದಳು.

ಅಮ್ಮ ಅವಳಿಗೆ ದರ್ಶನ ನೀಡಿ,

“ನನ್ನ ಸನ್ನಿಧಿ ಇರುವಲೆಲ್ಲ ಭಕ್ತಿಯ ಪ್ರಸಾರ ಮಾಡುತ್ತ ಚಿರಂತನ ಕನ್ಯಾಕುಮಾರಿಯಾಗಿ ಬಾಳು ಮಗಳೇ” –

– ಎಂದು ಆಶೀರ್ವಾದ ಮಾಡಿಕಳಿಸಿದಳು.

ಅಲ್ಲಿ ಕುಂತಿದ್ದ ಹನುಮಂತಪ್ಪ ಕೇಳಿದ:

“ಪ್ರಶ್ನೆ ಇದೆ, ಹೆದರಿಕೊಂಡು ಕೇಳಲೊ?”

“ಹೆದರದೆ ಕೇಳಲೊ”

“ಹೆದರದೆ ಕೇಳಪ್ಪ”

“ಹಾಂಗಿದ್ದರೆ ಜ್ಞಾನ ಮತ್ತು ಕರ್ಮರು ಯಾಕೆ ವೃಧ್ಧರಾದರು?

ಭಕ್ತಿದೇವಿ ಯಾಕೆ ಚಿರಂತನ ಕನ್ಯಾಕುಮಾರಿಯಾದಳು?

ಗುಣದಮ್ಮ ಹೇಳಿದಳು.

“ಯೋಚನೆ ತರ್ಕಗಳಿಂದ ಅಮ್ಮನನ್ನ ನೋಡೇನಂತೀಯಾ?

ನಿನ್ನಾಯುಷ್ಯ ಒಂದು ದಿನ ಕಡಿಮೆ.

ಭಕ್ತಿ ಮಾಡಿ ಅನುಭವಿಸ್ತೀಯಾ? ಒಂದು ದಿನ ಹೆಚ್ಚು!

ಭಕ್ತಿಯೆಂಬುದು ದಿವ್ಯಾನುಭವ.

ಅದರ ಆಯುಷ್ಯವೂ ದೊಡ್ಡದು.

ಭಕ್ತಿ ದೇವಿಗೆ ಅಮ್ಮ ಕಂಡಳು,

ಉಳಿದಿಬ್ಬರು ಬೆಟ್ಟ ಹತ್ತದೆ ಹಿಂದಿರುಗಿದರು. !

-ಎಂಬಲ್ಲಿಗೆ

ಇಲ್ಲೀಗಿ ಹರಹರ
ಇಲ್ಲೀಗಿ ಶಿವ ಶಿವ
ಇಲ್ಲಿಂದ ಶಿವಪಾದ ಶರಣೆನ್ನಿರೆ