ಒಂದು ಮುಗಿದು ಎರಡಾಗಿ, ಎರಡನೆಯದೂ ಮುಗಿದು ಮೂರನೆಯ ದಿನ ಯಾತ್ರಿಕರು ಮೂಡಲ ಬೆಳ್ಳಿ ಬೆಳಿಗ್ಗೇ ಬೊಂತೆಯ ಸಮೇತ ತಾವರೆಕೆರೆ ಬಿಟ್ಟು ಅತ್ತ ಶಿರಹಟ್ಟಿಗೆ ಪಯಣವಾದರು.

ಗೌರಿ ಈ ದಿನ ಹೆಚ್ಚು ದಣಿದಿದ್ದಳು. ಮಧ್ಯಾಹ್ನ ಉದರಶೂಲೆ ನಿನ್ನೆಗಿಂತ ತೀಕ್ಷ್ಣವಾಗಿತ್ತು. ಆದರೆ ಅದನ್ನಾಕೆ ಸಹಯಾತ್ರಿಕರಿಗೆ ಹೇಳಲಿಲ್ಲ. ತೋರಿಸಲೂ ಇಲ್ಲ. ಅವಳ ಬಾಡಿದ ಮುಖ ನೋಡಿ ದಣಿದಿರಬೇಕೆಂದು ಇತರ ಯಾತ್ರಿಕರು ಭಾವಿಸಿ, ಬಿಸಿಲಿದ್ದಾಗ ನೆರಳಿದ್ದ ಮರದ ಕೆಳಗೆ ತಂಗಿ, ಸಾಕಷ್ಟು ವಿಶ್ರಾಂತಿ ತಗೊಂಡು ಗೌರಿ ತಾನಾಗಿ ಎದ್ದಾಗ ಜೊತೆ ಹೊರಟರು. ಗೌರಿಯ ಗಂಟನ್ನು ಬೊಂತೆಯನೇ ತಗೊಂಡು ಅವಳಿಗೆ ನೋವಾಗದಂತೆ ಏನು ಮಾಡಬೇಕೆಂದು ಚಿಂತಿಸುತ್ತ ಆಕೆ ಹೇಳಿದ್ದನ್ನು ಮಾಡಲು ಸಿದ್ದನಾಗಿ ಆಕೆಯ ಹಿಂದಿನಿಂದಲೇ ಬರುತ್ತಿದ್ದ. ಗಂಗ ಅವಳಿಗೆ ಆಸಕ್ತಿ ಉಂಟಾಗುವ ಕತೆ, ಚೇಷ್ಟೆ, ಹಾಡುಗಳನ್ನು ಹೇಳುತ್ತ ಅವಳನ್ನು ಸಂತೋಷಪಡಿಸಲು ಪ್ರಯತ್ನಿಸುತ್ತ ದಾರಿ ಸವೆಸುತ್ತಿದ್ದ. ಗೌರಿಗಿದು ಗೊತ್ತಾಗಿ ಅವರಿಗೋಸ್ಕರವಾದರೂ ನಗಲೇಬೇಕೆಂದು ಅವರ ಮಾತುಗಳನ್ನು ಕೇಳಿ ನೋವು ಮರೆಯಲು ಹಾಗೂ ನಗಲು ಪ್ರಯತ್ನಿಸುತ್ತ ಆನಂದವಾಗಿರುವಂತೆ ಅಭಿನಯಿಸುತ್ತಿದ್ದಳು. ಆದರೂ ಉದರಶೂಲೆ ಮುಷ್ಟಿಗಾತ್ರದ ಸೀಸದ ಗುಂಡಿನಂತೆ ಭಾರವಾಗಿಹೊಟ್ಟೆಯಲ್ಲಿ ಕೂತು ಬಿಟ್ಟಂತೆನಿಸಿ ಒಮ್ಮೆ ‘ಅಮ್ಮಾ’ ಎಂದು ಕೂತಳು. ತಕ್ಷಣ “ಹೋಯಿತು ಬನ್ನಿ” ಎಂದು ಎದ್ದು ಹೊರಟಳು, ಗುಣದಮ್ಮ, ಅಮ್ಮನಿಗೆ ಪ್ರಾರ್ಥಿಸಿದ್ದಲ್ಲದೆ “ಗೌರಿ ನಗುನಗುತ್ತ ನಿನ್ನ ಬೆಟ್ಟ ಏರಿದರೆ ನಿನಗೆ ಬೆಳ್ಳಿಯ ಕಣ್ಣು ಮಾಡಿಸಿ ಕೊಡುವುದಾಗಿ ಹರಕೆ ಹೊತ್ತಳು.

ಇತ್ತ ಅದೇ ದಿನ ಶಿಖರಸೂರ್ಯನಟ್ಟಿದ ಮೇವಿನ ಸೈನಿಕರು ನಡು ಮಧ್ಯಾಹ್ನ ಗಿಲ್ಲರ ಹಟ್ಟಿಗೆ ಬಂದು ನಡುಹಟ್ಟಿಯಲ್ಲಿ ನಿಂದು ಹಟ್ಟಿಯ ಹಿರಿಯನ ಕೂಗಿದರು. ಸೈನಿಕರು, ರಾಜಭಟರ ಬಳಕೆಯಿರದ ಹಟ್ಟಿಯ ಜನ ಅವರನ್ನು ನೋಡಿ ಬೆಕ್ಕಸ ಬೆರಗಾದರು. ಹಟ್ಟಿಯ ಹಿರಿಯ ಬಂದ. ಅವನ ಹಿಂದಿನಿಂದ ಹಟ್ಟಿಯ ಹಿರಿಕಿರಿಯರು, ಗಂಡು ಹೆಣ್ಣು ಬಂದು ಸುತ್ತುಗಟ್ಟಿ ನಿಂತರು. ಭಂಟರ ನಾಯಕ ಹಿರಿಯನನ್ನ ಕೇಳಿದ:

“ಎಲ್ಲಿ ರಾಜಕುಮಾರಿ”?

“ಯಾವ ರಾಜಕುಮಾರಿ ಸ್ವಾಮಿ?”

“ಇಲ್ಲಿಗೆ ಶಿವಾಪುರದ ಯಾತ್ರಿಕರ್ಯಾರೂ ಬಂದಿಲ್ಲವೋ?”

“ದಿನಾ ಬಂದು ಹೋಗುತ್ತಾರೆ ಸ್ವಾಮಿ”

“ಅದರಲ್ಲಿ ರಾಜಕುಮಾರಿ ಇರಲಿಲ್ಲವ”

“ಇಲ್ಲ ಸ್ವಾಮಿ”

“ಇಂದು ಬಂದಿಲ್ಲವಾದರೆ ನಾಳೆ ಬರುತ್ತಾಳೆ. ನಾವಿಲ್ಲೇ ಕಾಯುತ್ತೇವೆ.”

ಎಂದರು. ಹಿರಿಯ ಅವರನ್ನು ಮಂಟಪದಲ್ಲಿ ಬಿಟ್ಟು “ಊಟದ ವ್ಯವಸ್ಥೆ ಏನಾದೀತು?” ಅಂದ. ಅವರು ಉತ್ತರಿಸಲಿಲ್ಲ. ಇವನೂ ಸುಮ್ಮನಾದ.

ಮೊದಲೇ ಬಂಟರನ್ನು ನೋಡಿ ಹೆದರುವ ಜನ ಇವರನ್ನು ನೋಡಿ ಇನ್ನೂ ಗಾಬರಿಯಾದರು. ಭಂಟರು ಮಂಟಪದತ್ತ ಹೋದುದೇ ತಡ ಇವರು ತಂತಮ್ಮ ಗೂಡುಗಳಲ್ಲಿ ಬಾಗಿಲಿಕ್ಕಿಕೊಂಡು ಕಿಂಡಿಯೊಳಗಿನಿಂದ ಕದ್ದು ನೋಡುತ್ತ ನಿಂತರು. ಒಬ್ಬ ಭಂಟನ ಮುಖದಲ್ಲೂ ಭಾವನೆಗಳಿರಲಿಲ್ಲ. ಹಿರಿಯನ ಉತ್ತರಗಳಿಂದ ಅವರ ಮುಖದಲ್ಲಿ ಬದಲಾವಣೆಗಳಾಗಲೇ ಇಲ್ಲ. ನೋಟದಲ್ಲಿ ಕೂಡ ಕಿಂಚಿತ್ ಚಂಚಲತೆಯೂ ಕಾಣಲಿಲ್ಲ. ಮೂರು ಜನ ಮಂಟಪಕ್ಕೆ ಬಂದು ಯಂತ್ರಗಳ ಹಾಗೆ ಆಯುಧಗಳ ಮ್ಯಾಲೆ ಕೈಯಿಟ್ಟುಕೊಂಡು ಕೊಲ್ಲುವುದಕ್ಕೆ ಸಿದ್ಧವಾದ ಭಂಗಿಯಲ್ಲಿ ನಿಂತರು. ಮಂಟಪದ ಸ್ಥಳೀಯ ಶೃಂಗಾರವಾಗಲಿ, ಅಲ್ಲಿದ್ದ ಕಲೆಯ ಸಾಮಾನುಗಳಾಗಲಿ ಅವರ ಮೇಲೆ ಎಳ್ಳಷ್ಟು ಪ್ರಭಾವ ಬೀರಲಿಲ್ಲ. ಎಲ್ಲರಿಗಿಂತ ಅವರ ನಾಯಕ ಕೊಂಚ ಭಿನ್ನವಾಗಿದ್ದ. ಬಾಗಿಲ ಕಡೆಗೆ ಆಗಾಗ ಏನಾದರೂ ಸಂದೇಶ ಬಂದಿತೇಂದು ನೀರಿಕ್ಷಿಸುತ್ತ ಕಾಯುತ್ತ ಕೂತಿದ್ದ. ಅಲ್ಲದೆ ಆಗಾಗ ಎರಡೂ ಬಾಗಿಲುಗಳಲ್ಲಿ ಹಣಕಿ ಹಾಕಿಯೂ ಬರುತ್ತಿದ್ದ.

ಈ ಕಡೆ ಜನಗಳ ಭಾವನೆಗಳನ್ನು ಹೇಳಬರದು, ಒಬ್ಬೊಬ್ಬರು ಸದರಿ ಭಂಟರ ಬಗ್ಗೆ ತಂತಮ್ಮ ಭಯಕ್ಕೆ ತಕ್ಕಂತೆ ಒಂದೊಂದು ಕತೆ ಕಟ್ಟಿ ಆಡಿಕೊಳ್ಳುತ್ತಿದ್ದರು. ಎಲ್ಲರ ಕತೆಗಳನ್ನ ಸಾರಾಂಶವಾಗಿ ಹೇಳಬೇಕೆಂದರೆ ಸದರಿ ಭಂಟರು ಸ್ಮಶಾನದಿಂದ ಎದ್ದು ಬಂದ ಹೆಣಗಳಂತೆ ಕಾಣುತ್ತಿದ್ದರು.

ರಾತ್ರಿ ಪುನಃ ಹಿರಿಯ ಹೆದರಿಕೊಂಡೇ ಮಂಟಪಕ್ಕೆ ಹೋದ. ಬಾಗಿಲಿಗೇ ಅವರ ನಾಯಕ ಬಂದು – “ರಾಜಕುಮಾರಿ ಬಂದಳೇ?” ಅಂದ.

“ಇಲ್ಲ ಸ್ವಾಮೀ”

“ಸಮಯ ಎಷ್ಟಾದರೂ ಆಗಲಿ, ಅವಳು ಬಂದಕೂಡಲೇ ಇಲ್ಲಿಗೇ ಕರೆತರಬೇಕು. ಲೆಕ್ಕ ಚುಕ್ತಾ ಮಾಡುವವರು ನಾವು, ನೀವಲ್ಲ. ತಿಳಿಯಿತೊ?”

“ತಿಳಿಯಿತು ಸ್ವಾಮಿ”

“ಇನ್ನು ತೊಲಗು”

“ಊಟದ ವ್ಯವಸ್ಥೆ?”

“ತೊಲಗು”

ಆದರೆ ಇಡೀ ಹಟ್ಟಿಯ ಜನ ಆ ರಾತ್ರಿ ಬೆಳ್ಳಂ ಬೆಳಗು ಗುಜು ಗುಜು ಮಾತಾಡಿಕೊಂಡರು. ಯಾತ್ರಿಕರಲ್ಲಿ ಹೂವಿನಷ್ಟು ಕೋಮಲ ಹುಡುಗಿಯೊಬ್ಬಳಿದ್ದುದು ನಿಜ. ಆದರೆ ಆಕೆ ರಾಜಕುಮಾರಿಯೇ ಆಗಿರಬೇಕೆಂದು ಯಾರಿಗೂ ಅನುಮಾನ ಬರಲಿಲ್ಲ. ರಾಜಕುಮಾರಿಯಾಗಿದ್ದರೆ ಹೀಗೆ ಊರಾಡುವ ಭಿಕ್ಷುಕರೊಂದಿಗೆ ನಡೆದುಕೊಂಡು ಬರುತ್ತಿದ್ದಳೆ? ಶಕ್ಯವಿಲ್ಲ ಅಂದುಕೊಂಡರು. ಆದರೆ ಅವಳ ಮುಖದಲ್ಲಿನ ಕಳೆ ಮಾತ್ರ ಈ ಕೂಸು ಯಾವುದೋ ದೊಡ್ಡ ಮನೆತನಕ್ಕೆ ಸೇರಿದವಳೆಂದು ಸಾರಿ ಹೇಳುತ್ತಿದ್ದಿತಲ್ಲ? ಇದಕ್ಕೇನೆನ್ನೋಣ? ಇರಲಿ, ಭಂಟರು ರಾಜಕುಮಾರಿಯನ್ನು ಹುಡುಕುತ್ತಿರುವ ಬಗ್ಗೆ ಗುಣದಮ್ಮನಿಗೆ ತಿಳುವಳಿಕೆ ಕೊಡುವುದು ಅಗತ್ಯವೆನ್ನಿಸಿತು ಹಿರಿಯನಿಗೆ. ಮಾರನೆಯ ಬೆಳಿಗ್ಗೆಯೇ ಒಂದು ಆಳನ್ನಟ್ಟಿದ.

* * *

ಗೌರಿಯ ಸಮಾಚಾರ ತಿಳಿದು ಬರಲು ಹೋದ ಬಂಟರು ಎರಡು ದಿನಗಳಾದರು ಬಾರದ್ದಕ್ಕೆ ಶಿಖರಸೂರ್ಯ ಸಂತಾಪದಿಂದ ಉರಿದುರಿದು ಬಿದ್ದ, ಹಿಂದೆ ಕೈಕಟ್ಟಿಕೊಂಡು ಮೂಲೆಯಿಂದ ಮೂಲೆಗೆ ಅಲೆದಾಡಿದ ಹಸ್ತಕ್ಕೆ ಹಸ್ತ ಹೊಸೆದು ಒಂದನ್ನ ಮುಷ್ಟಿ ಮಾಡಿ ಇನ್ನೊಂದರಲ್ಲಿ ಗುದ್ದಿಕೊಂಡ.

* * *

ಇತ್ತ ಶಿರಹಟ್ಟಿಯಲ್ಲಿ ಗುಣದಮ್ಮ ಮೂರನೆಯ ಕತೆ ಹೇಳಿದಳು:

ರೇಣುಕೆಯ ಅವತಾರದಲ್ಲಿ ತಾಯಿ ಭಾರ್ಗವ ವಂಶದ ಜಮದಗ್ನಿಯೊಂದಿಗೆ ಲಗ್ನವಾಗಿ ಏಳು ಕೊಳ್ಳದಲ್ಲಿ ಸುಖವಿದ್ದಳು. ಐದು ಜನ ಮಕ್ಕಳು, ಹಿರಿಯವನು ಪರಶುರಾಮ.

ತಾಯಿಯ ಮಹಿಮೆ ದೊಡ್ಡದು. ದಿನಾಲು ಮಳಲ ಕೊಡಮಾಡಿ, ಹಾವಿನ ಸಿಂಬೆಯ ಮ್ಯಾಲಿಟ್ಟುಕೊಂಡು ಜಮದಗ್ನಿಯ ಪೂಜೆಗೆ ನೀರು ತರುತ್ತಿದ್ದಳು. ಒಂದು ದಿನ ನೀರು ತರಲು ಮಾತಂಗಿಯೊಂದಿಗೆ ನದಿಗೆ ಹೋದಳು. ಅಲ್ಲಿ ಕಾರ್ತವೀರ್ಯಾರ್ಜುನ ಸ್ತ್ರೀಯರೊಂದಿಗೆ ಜಲಕ್ರೀಡೆಯಾಡುತ್ತಿದ್ದ. ನೀರು ಮೈಲಿಗೆಯಾಗಿ ತಾಯಿಯ ಚಿತ್ತ ಚಂಚಲವಾಯಿತು. ತಕ್ಷಣವೆ ಮಳಲ ಕೊಡ ಒಡೆದು ಹಾವು ಹರಿದು ಹೋಯಿತು. ನೀರಿಲ್ಲದೆ ಇಬ್ಬರೂ ಬರಿಗೈಯಲ್ಲಿ ಆಶ್ರಮಕ್ಕೆ ಬಂದರು.

ಭಾರ್ಗವರಿಗೆ ಮೂಗಿನ ತುದಿಯಲ್ಲೇ ಕೋಪ. ಬರಿಗೈಯಲ್ಲಿ ಬಂದ ಮಡದಿಯ ನೋಡಿದ. ತಾಯಿ ತಪ್ಪಾಯಿತೆಂದಳು.

“ಎಲಾ ಅಪವಿತ್ರ ಹೆಣ್ಣೇ, ನಿನ್ನಿಂದಾಗಿ ಆಶ್ರಮ ಮೈಲಿಗೆಯಾಯಿತು. ಎಲ್ಲಿ ಹೋದರು ಮಕ್ಕಳು? ರುಮಣ್ವಾs ಸುಹೋತ್ರಾs”

ಎಂದು ಕರೆದ. ಏನಾಯಿತೋ ಎಂದು ಕಾಡಿನಲ್ಲಿದ್ದ ಮಕ್ಕಳು ಓಡಿ ಬಂದರು.

“ನಿಮ್ಮ ತಾಯಿ ತಪ್ಪಿ ನಡೆದಳು. ಚಿತ್ತ ಚಂಚಲವಾಗಿ ಮಳಲ ಕೊಡ ಒಡೆದು ಹಾವು ಹರಿದು ಹೊಗಿದೆ. ನೀರಿಲ್ಲದೆ ಕೊಡ ಇಲ್ಲ. ಅಪವಿತ್ರಳಾದವಳಿಗೆ ಆಶ್ರಮದಲ್ಲಿ ಪ್ರವೇಶವಿಲ್ಲ. ಸಂಹರಿಸಿರಯ್ಯಾ ಇವಳನ್ನು.”

ಎಂದು ಮಕ್ಕಳಿಗೆ ಆಜ್ಞೆ ಮಾಡಿದ.

“ಶಿವಾ ಶಿವಾ, ತಾಯ ಸಂಹಾರ ಮಾಡಲುಂಟೆ? ಪಾತಕ, ಮಹಾಪಾತಕ! ಕ್ಷಮಿಸು ತಂದೆ, ಇಂಥ ಆಜ್ಞೆ ಅಧರ್ಮ.”

-ಎಂದು ಹೇಳಿ ನಾಲ್ಕೂ ಮಕ್ಕಳು ಮುಖ ತಿರುಗಿಸಿದರು.

“ತಂದೆಯ ಆಜ್ಞೆಯನ್ನು ನಿರ್ಲಕ್ಷಿಸಿದಿರಾ ಪಾಪಿಗಳೆ?”

ಎಂದು ಕಲ್ಲಾಗುವಂತೆ ಮಕ್ಕಳನ್ನೇ ಶಪಿಸಿದ! ಕೊನೆಗೆ ತಪಸ್ಸಿನಲ್ಲಿದ್ದ ಪರಶುರಾಮನನ್ನ ನೆನೆದ. ಪರಶುರಾಮ ಕೂಡಲೇ ಪರಶು ಹಿಡಿದುಕೊಂಡೇ ಬಂದ. ಜಮದಗ್ನಿ ಆಜ್ಞೆ ಮಾಡಿದ.

“ಈ ಮತಿಹೀನ ಅಪವಿತ್ರ ಹೆಣ್ಣಿನ ರುಂಡವನ್ನ ಮರ ಕಡಿದ ಹಾಗೆ ಕಡಿದು ಬಿಡು.”

ಪರಶುರಾಮ ‘ಅಪ್ಪಣೆ ತಂದೇ!’ ಅಂದ. ಮರು ಮಾತಾಡದೆ ತಂದೆಯ ಆಜ್ಞೆಯಂತೆ ತಾಯಿಯ ಮೇಲೆ ಕೊಡಲಿಯ ಪ್ರಯೋಗ ಮಾಡಿಬಿಟ್ಟ. ರೇಣುಕೆಯ ಜೊತೆಗೆ ಪಕ್ಕದಲ್ಲಿ ನಿಂತಿದ್ದ ಮಾತಂಗಿಯ ರುಂಡವೂ ಬಿತ್ತು. ಮರುಮಾತಾಡದೆ ತಂದೆಯ ಆಜ್ಞೆ ಪಾಲಿಸಿದ ಮಗನ ಬಗ್ಗೆ ಪ್ರೀತಿ ಅಭಿಮಾನಗಳು ಉಕ್ಕಿದವು. “ನಿನಗೆ ಬೇಕೆನಿಸಿದ ವರ ಕೇಳು ಮಗನೇ” ಎಂದ. ಪರಶುರಾಮ ಹೇಳಿದ:

“ನನಗೆ ನನ್ನ ತಾಯಿ ಬೇಕು. ಅವಳಿಲ್ಲದೆ ನಾನು ಬದುಕಲಾರೆ. ತಾಯಿಯ ಜೊತೆಗೆ ಮಾತಂಗಿಯ ರುಂಡವೂ ಹಾರಿ ಹೋಗಿದೆ. ಬದುಕಿದರೆ ತಾಯಿ ಮತ್ತು ಮಾತಂಗಿ ಇಬ್ಬರೂ ಬದುಕುವಂತೆ ವರ ಕೊಡು.”

“ವರ ಕೊಟ್ಟಿದ್ದೇನೆ ಮಗನೆ. ಹೋಗು. ಎರಡೂ ತಲೆಗಳನ್ನು ಅವರವರ ದೇಹಗಳಿಗೆ ಅಂಟಿಸಿ ಈ ಮಂತ್ರಜಲ ಸಿಂಪಡಿಸಿಲೆಂದು ಕಮಂಡಲು ಕೊಟ್ಟ. ಪರಶುರಾಮ ಸಡಗರದಿಂದ ಇಬ್ಬರ ತಲೆ ತಗೊಂಡು ಜೋಡಿಸಿ ಮಂತ್ರಜಲ ಸಿಂಪಡಿಸಿದ. ಇಬ್ಬರಿಗೂ ಜೀವ ಬಂತು. ನೋಡಿದರೆ ಅವಸರದಲ್ಲಿ ತಲೆ ಅದಲು ಬದಲಾಗಿ ಮಾತಂಗಿಯ ತಲೆ ರೇಣುಕೆಗೂ, ರೇಣುಕೆಯ ತಲೆ ಮಾತಂಗಿಗೂ ಅಂಟಿಕೊಂಡಿದ್ದವು! ಪರಶುರಾಮ –

“ಇಬ್ಬರೂ ತಾಯಂದಿರೆ. ಒಬ್ಬಳು ಹೆಚ್ಚಲ್ಲ,, ಇನ್ನೊಬ್ಬಳು ಕಡಿಮೆಯಲ್ಲ. ಮಾತೃಹತ್ಯೆಯ ಪಾಪ ತೊಳೆದುಕೊಳ್ಳಲಿಕ್ಕೆ ನಾನು ತಪಸ್ಸಿಗೆ ಹೋಗುತ್ತೇನೆಂದು” ಹೇಳಿ ಹೋದ. ಸಿಟ್ಟು ಕಳೆದುಕೊಂಡ ಋಷಿ ರೇಣುಕೆಯ ಪ್ರಾರ್ಥನೆ ಕೇಳಿ ಉಳಿದ ಮಕ್ಕಳಿಗೂ ಜೀವ ಕೊಟ್ಟ.

ಕತೆ ಹೇಳಿ ತಾಯಿ ದೋಹರ ಕಕ್ಕಯ್ಯನ ಕೇಳಿದಳು:

“ಬರೋಬ್ಬರಿ ಹೇಳಿದರ ನೀನು ನನ್ನ ಮಗ. ತಪ್ಪ ಹೇಳಿದರೆ ನಿನ್ನ ತಲಿ ಸಾವಿರ ಹೋಳಾಗತೈತಿ! ಹುಷಾರ!

“ಮಾತಂಗಿಯ ಜೀವ ಪಡೆದದ್ದು ಬರೋಬ್ಬರೀನೋ? ತಪ್ಪೋ?”

“ಹೇಳು ಮಗನೇ ಪರಶುರಾಮ ಹೆಚ್ಚೋ? ಮಕ್ಕಳು ಹೆಚ್ಚೊ?”

ಡೋಹರ ಕಕ್ಕಯ್ಯ ಹೇಳಿದ:

“ನನಗೆ ಹೊಳೆದ ಉತ್ತರಾ ಹೇಳತೀನಿ? ತಪ್ಪಿದ್ದರ ತಿದ್ದತೀನಿ ಅನ್ನೋಹಾಂಗಿದ್ದರ ಹೇಳತೀನಿ.”

“ತಿದ್ದತೀನಿ ಹೇಳು”.

“ಪರಶುರಾಮ ವೀರಾತಿವೀರನಾಗಿರಬಹುದು. ಆದರೆ ವಿವೇಕಿ ಅಲ್ಲ. ಅವನಿಗೆ ತಂದೆಯ ಮರ್ಜಿಯೂ ಬೇಕು. ತಾಯಿಯ ಜೀವವೂ ಬೇಕು. ತಂದೆಯ ಮಾತು ಪಾಲಿಸಿದರೆ ಮಾತೃಹತ್ಯೆಯಾಗುವುದೆಂದು ಆತ ಯೋಚಿಸಲಿಲ್ಲ. ಅವನ ಸಹೋದರರು ಮಾತೃ ಹತ್ಯೆ ಮಹಾಪಾತಕ ಅಂದರು. ಅಧರ್ಮ ಅಂದರು. ಸ್ಪಷ್ಟವಾಗಿ ಕೊಲ್ಲುವುದಿಲ್ಲ ಅಂದರು. ಪರಶುರಾಮನಿಗೆ ಆ ವಿವೇಕ ಇಲ್ಲವಾಗಿ ಸಹೋದರರು ಹೆಚ್ಚಿನವರು.

ಪರಶುರಾಮ ತಂದೆಯ ಆಜ್ಞೆ ಪಾಲಿಸಿ ಜೀವ ಪಡೆದದ್ದೂ ಜಾಣತನವೇ ಶಿವಾಯಿ ಸತ್ಯವಂತಿಕೆ ಅಲ್ಲ. ಜಮದಗ್ನಿ ಮಾತಂಗಿಯ ಸಂಹಾರ ಕೇಳಿರಲಿಲ್ಲ. ಇವನು ಅತಿ ಬಲ ಬಳಸಿ ಮಾಡಿದ ಪಾಪವಾದ್ದರಿಂದ ಅವಳ ಜೀವ ಪಡೆಯಬೇಕಾದ್ದು ಅವನ ಜವಾಬ್ದಾರಿ.”

“ತಾಯಿ ಹೆಚ್ಚೊ? ತಂದೆ ಹೆಚ್ಚೊ?”

“ಖಂಡಿತ ತಾಯಿ ಹೆಚ್ಚು. ಕಾರ್ತವೀರ್ಯಾಜುನನ ಜಲಕ್ರೀಡೆ ನೋಡಿ ತಾಯಿಯ ಚಿತ್ತ ಚಂಚಲವಾಗಿರಬಹುದು. ಆದರೆ ಆ ಕ್ಷಣವೇ ಅವಳಿಗೆ ಪಶ್ಚಾತ್ತಾಪವಾಯಿತು. ಕ್ಷಮೆ ಕೇಳಿದಳು. ಅಲ್ಲಿಗದು ಮುಗಿಯಿತು. ಆದರೆ ಅದನ್ನೇ ನೆಪ ಮಾಡಿಕೊಂಡು “ಆಹಾ ನನ್ನ ಅಹಂಕಾರ ಕೊಂಕಿತಲ್ಲಾ!” ಎಂದು ಶಾಪ ಕೊಡಹೋದದ್ದು ತಪ್ಪು. ಇದು ಪುರುಷ ಪ್ರಧಾನ ಕುಟುಂಬದ ಅಹಂಕಾರ. ತಾಯಿಗೆ ಅಹಂಕಾರವಿಲ್ಲ. ಜೀವ ಬಂದಮೇಲೂ ಅವಳು ಕೋಪಗೊಳ್ಳಲಿಲ್ಲ. ಯಾರನ್ನೂ ಶಪಿಸಲಿಲ್ಲ. ಆದ್ದರಿಂದ ತಂದೆ ಮಗ ಬದುಕಿದರು. ಇಲ್ಲದಿದ್ದರೇ ಇವರ ಗತಿ ಏನಾಗುತ್ತಿತ್ತು? ಯೋಚಿಸು. ರೇಣುಕೆಗೆ ಜೀವ ಬಂದ ಮೇಲೆ ಉಳಿದ ಮಕ್ಕಳನ್ನು ಬದುಕಿಸುವಷ್ಟು ಅಂಹಃಕರಣವೂ ತಂದೆಗಿರಲಿಲ್ಲ. ಅದಕ್ಕೂ ತಾಯಿಯೇ ಬೇಕಾಯಿತು. ಆದ್ದರಿಂದ ನಿಸ್ಸಂಶಯವಾಗಿ ತಾಯಿಯೇ ಹೆಚ್ಚು.”

“ಸರಿಯಾಗಿ ಹೇಳಿದೆ ಮಗನೆ. ತಾಯಿ ಆ ದಿನ ಎಲ್ಲರನ್ನೂ ಕ್ಷಮಿಸಿದ್ದರಿಂದಲೇ ನಿಮ್ಮ ಮುಂದೆ ನಾನಿದ್ದೀನೆ. ನನ್ನ ಮುಂದೆ ನೀವಿದ್ದೀರಿ. ಎಂಬಲ್ಲಿಗೆ

ಇಲ್ಲಿಗೆ ಹರಹರ
ಇಲ್ಲಿಗೆ ಶಿವಶಿವ
ಇಲ್ಲಿಂದ ಶಿವಪಾದ ಶರಣೆನ್ನಿರೇ”